ಸೋಮವಾರ, ಜುಲೈ 31, 2017

ಸಾವನ್ನೇ ಉಸಿರಾಡುವವರು..


 ಅನುಶಿವಸುಂದರ್
silicosis disease ಗೆ ಚಿತ್ರದ ಫಲಿತಾಂಶ
ಕಾರ್ಮಿಕರು ಕೆಲಸ ಮಾಡುವ ಜಾಗದಿಂದಲೇ ಬರುವ ಸಿಲಿಕಾಸಿಸ್ ರೋಗವನ್ನು ದೀರ್ಘಕಾಲದಿಂದ ನಿರ್ಲಕ್ಷಿಸುತ್ತಲೇ ಬರಲಾಗಿದೆ.

ಸಿಲಿಕೋಸಿಸ್ ಖಾಯಿಲೆಯು ಒಂದು ಬಗೆಯಲ್ಲಿ ಸದ್ದಿಲ್ಲದೆ ಸಾಯಿಸುವ ಕೊಲೆಗಾರನಿದ್ದಂತೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ೩೦ ಲಕ್ಷದಿಂದ ಒಂದು ಕೋಟಿ ಕಾರ್ಮಿಕರು ಖಾಯಿಲೆಯಿಂದ ನರಳುತ್ತಿದ್ದಾರೆ. ಆದರೂ ರೋಗದ ಬಗ್ಗೆ ಕೊಡಬೇಕಾದಷ್ಟು ಗಮನವನ್ನು ಕೊಡುತ್ತಿಲ್ಲ. ಇತ್ತೀಚೆಗೆ ಒಡಿಷಾದ ಕಾರ್ಮಿಕ ನ್ಯಾಯಾಲಯವೊಂದು ಕಾಯಿಲೆಯಿಂದಾಗಿ ಸತ್ತ ೧೬ ಕಾರ್ಮಿಕರ ಕುಟುಂಬಗಳಿಗೆ ಪರಿಹಾರವನ್ನು ನೀಡಲು ಆದೇಶಿಸಿತು. ಏಕೆಂದರೆ ಖಾಯಿಲೆಯು ಕುಟುಂಬಗಳ ಏಕೈಕ ದುಡಿಯುವ ವ್ಯಕ್ತಿಯನ್ನು ಸಾವಿಗೆ ದೂಡಿತ್ತು. ಇದು ಯಾವುದೇ ನಿಯಂತ್ರಣಕ್ಕೆ ಒಳಪಡದ ಅಪಾಯಕಾರಿ ಗಣಿಗಾರಿಕೆ ಮತ್ತಿತರ ಉದ್ದಿಮೆಗಳ ಕರಾಳ ಮುಖವನ್ನು ಅನಾವರಣ ಮಾಡಿದೆ. ಸಿಲಿಕೋಸಿಸ್ಗೆ ಬಲಿಯಾದ ೧೬ ಜನ ಕಾರ್ಮಿಕರು ಕಿಯೋಂಜಾರ್ ಜಿಲ್ಲೆಯ ಮಜ್ರಾಂಗೋಡಿ ಹಳ್ಳಿಗೆ ಸೇರಿದವರಾಗಿದ್ದು ಪೈರೋಪಿಲೈಟ್ ಹರಳನ್ನು ಪುಡಿ ಮಾಡುವ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಅವರುಗಳು ಕೆಲಸ ಮಾಡುವ ಸಮಯದಲ್ಲಿ ಅನಿವಾರ್ಯವಾಗಿ ತಮ್ಮ ಉಸಿರಿನ ಜೊತೆಗೆ  ಸಿಲಿಕಾ ಧೂಳನ್ನೂ ಒಳಗೆಳೆದುಕೊಳ್ಳುತ್ತಿದ್ದರು. ಕೆಲ ಸಮಯದ ನಂತರ ಅವರ ಶ್ವಾಸಕೋಶವು ಕೆಲಸ ಮಾಡುವುದನ್ನೇ ನಿಲ್ಲಿಸಿದ್ದರಿಂದ ಅವರೆಲ್ಲಾ ಸಾವನ್ನಪ್ಪಿದರು. ಏಕೆಂದರೆ ಸಿಲಿಕೋಸಿಸ್ ಖಾಯಿಲೆ ವಾಸಿಯಾಗುವ ಖಾಯಿಲೆಯಲ್ಲ. ಹೀಗಾಗಿಯೇ ಮೃತ ಕಾರ್ಮಿಕರ ಹಳ್ಳಿಯನ್ನು "ವಿಧವೆಯರ ಹಳ್ಳಿ"ಯೆಂದು ಕರೆಯುತ್ತಾರೆ. ಆದರೆ ಸ್ಥಳೀಯ ಸಂಘಟನೆಯೊಂದು ರಾಷ್ಟ್ರೀಯ ಮಾನವ ಹಕ್ಕು ಅಯೋಗ (ಎನ್ಎಚ್ಆರ್ಸಿ)ಕ್ಕೆ ದೂರು ನೀಡಿದ್ದರಿಂದ ಪ್ರಕರಣದ ತನಿಖೆಯು ನಡೆಯಿತು. ಕಾರ್ಮಿಕರು ಸಿಲಿಕೋಸಿಸ್ ಖಾಯಿಲೆಯಿಂದಾಗಿಯೇ ಸತ್ತಿದ್ದಾರೆಂದು ಸಾಬೀತಾಯಿತು. ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯು ಕೆಲಸಗಾರರಿಗೆ ಸುರಕ್ಷತಾ ಕವಚಗಳನ್ನು ಕೊಟ್ಟು, ಉತ್ಪಾದನಾ ಪ್ರಕ್ರಿಯೆಯಲ್ಲಿ ಸಿಲಿಕಾ ಧೂಳಿನ ಪ್ರಮಾಣವನ್ನು ತಗ್ಗಿಸುವ ವಿಧಾನವನ್ನು ಬಳಸಿದ್ದರೆ ಕಾರ್ಮಿಕರು ಖಂಡಿತಾ ಸಾಯುತ್ತಿರಲಿಲ್ಲ. ಕಾರ್ಮಿಕ ನ್ಯಾಯಾಲಯವು ಕಾರ್ಮಿಕರ ಕುಟುಂಬಗಳಿಗೆ ೪೬ ಲಕ್ಷ ರೂ. ಪರಿಹಾರ ನೀಡುವಂತೆ ಒಡಿಷಾ ಸರ್ಕಾರಕ್ಕೆ ಆದೇಶಿಸಿದೆ.

ಇದೇ ರೀತಿ ಗುಜರಾತಿನ ಬಲಸಿನೋರ್ ಮತ್ತು ಗೋಧ್ರಾ ಜಿಲ್ಲೆಗಳಲ್ಲಿ ಬೆಣಚುಕಲ್ಲನ್ನು ಕತ್ತರಿಸುವ ಕಾರ್ಖಾನೆಗಳಲ್ಲಿ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ ೨೩೮ ಕಾರ್ಮಿಕರು ಸಿಲಿಕೋಸಿಸ್ ಖಾಯಿಲೆಗೆ ಬಲಿಯಾಗಿದ್ದರು. ೨೦೧೬ರಲ್ಲಿ ಪ್ರಕರಣ ಸುಪ್ರಿಂ ಕೋರ್ಟಿನ ಮುಂದೆ ಬಂದಾಗ ದೇಶದ ವರಿಷ್ಠ ನ್ಯಾಯಾಲಯವು ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಆದೇಶ ನೀಡಿತ್ತು. ಆದೇಶದ ಬಲದಿಂದಾಗಿಯೇ ಒಡಿಷಾ ಕೋರ್ಟು ಸಹ ಪರಿಹಾರ ನೀಡಬೇಕೆಂಬ ಆದೇಶವನ್ನು ನೀಡಲು ಸಾಧ್ಯವಾಯಿತು. ಗುಜರಾತಿನಲ್ಲಿ ಸಿಲಿಕೋಸಿಸ್ ಖಾಯಿಲೆಗೆ ಬಲಿಯಾದ ಕಾರ್ಮಿಕರು ಮಧ್ಯಪ್ರದೇಶದ ಅಲಿರಾಜ್ಪುರ್, ಜಾಬುವಾ ಮತ್ತು ಧರ್ ಜಿಲ್ಲೆಗಳಿಗೆ ಸೇರಿದ ಗಿರಿಜನರಾಗಿದ್ದರು. ಒಡಿಷಾದ ಕಾರ್ಮಿಕರಂತೆ ಇವರೂ ಸಹ ಮೊದಮೊದಲು ಕಾರಣವೇನೆಂದು ತಿಳಿಯದೆ ಅಸ್ವಸ್ಥರಾದರು. ಏಕೆಂದರೆ ಸಿಲಿಕೋಸಿಸ್ ಖಾಯಿಲೆಗೆ ನಿರ್ದಿಷ್ಟ ಲಕ್ಷಣಗಳಿಲ್ಲ. ಸಿಲಿಕಾ ಧೂಳಿನ ಕಣಗಳಿಗೆ ವಾಸನೆಯಿರುವುದಿಲ್ಲ. ಹೀಗಾಗಿ ನಿಧಾನವಾಗಿ ತಮ್ಮನ್ನು ಕೊಂದುಹಾಕುವ ವಿಷಕಾರಿ ಧೂಳನ್ನು ಉಸಿರಾಡುತ್ತಿದ್ದೇವೆಂದು ಕಾರ್ಮಿಕರಿಗೆ ಗೊತ್ತಾಗುವುದೇ ಇಲ್ಲ. ಅಲ್ಲೂ ಕೂಡಾ  ಸರ್ಕಾರೇತರ ಸಂಸ್ಥೆಯೊಂದು ಪ್ರಕರಣವನ್ನು ದೇಶದ ಅತ್ಯುನ್ನತ ನ್ಯಾಯಾಲಯದ ಗಮನಕ್ಕೆ ಕೊಂಡೊಯ್ಯಿತು. ಉನ್ನತ ನ್ಯಾಯಾಲಯದ ತೀರ್ಪು ಕಟುವಾಗಿತ್ತು ಮತ್ತು ನಿಸ್ಸಂದಿಗ್ಧವಾಗಿತ್ತು. ನ್ಯಾಯಾಲಯವು ಸಿಲಿಕೋಸಿಸ್ ಖಾಯಿಲೆಯಿಂದಾಗಿ ಸಾವನ್ನಪ್ಪಿದ ೨೩೮ ಕಾರ್ಮಿಕರ ಕುಟುಂಬಗಳಿಗೆ .೧೪ ಕೋಟಿ ರೂ. ಪರಿಹಾರ ನೀಡಬೇಕೆಂದು ಗುಜರಾತ್ ಸರ್ಕಾರಕ್ಕೆ ಆದೇಶ ನೀಡಿದ್ದಲ್ಲದೆ, ಬದುಕುಳಿದು ಖಾಯಿಲೆಯಿಂದ ನರಳುತ್ತಿದ್ದ  ಉಳಿದ ೩೦೪ ಕಾರ್ಮಿಕರಿಗೆ ಪುನರ್ವಸತಿ ಒದಗಿಸಬೇಕೆಂದು ಮಧ್ಯಪ್ರದೇಶ ಸರ್ಕಾರಕ್ಕೂ ಆದೇಶ ನೀಡಿತು.

ಎರಡು ಪ್ರಕರಣಗಳಲ್ಲು ಸಮಾನವಾದ ಒಂದು ವಿಷಯವಿದೆ. ಎರಡು ಕಡೆ ಕಾರ್ಮಿಕರನ್ನು ಕಡಿಮೆ ಕಾಲಾವಧಿಗೆ ಗುತ್ತಿಗೆ ಕಾರ್ಮಿಕರನ್ನಾಗಿ ಸೇರಿಸಿಕೊಳ್ಳಲಾಗಿತ್ತು. ಹೀಗಾಗಿ ಅವರಿಗೆ ಕಾನೂನು ಪ್ರಕಾರ ಸಿಗಬೇಕಿದ್ದ ಯಾವ ಸೌಲಭ್ಯಗಳೂ ದಕ್ಕುತ್ತಿರಲಿಲ್ಲ. ಇಂಥಾ ಕಡುಕಷ್ಟದ ಮತ್ತು ಅಪಾಯಕಾರಿ ಕೆಲಸ ಮಾಡುವವರು ಹೆಚ್ಚಾಗಿ ನೆರೆಹೊರೆ ರಾಜ್ಯಗಳ ಬಡಪ್ರದೇಶಗಳಿಂದ ವಲಸೆ ಬಂದವರೇ ಆಗಿರುತ್ತಾರೆ. ಮತ್ತು ಅವರು ಕೆಲಸ ಮಾಡುತ್ತಿದ್ದ ಕಾರ್ಖಾನೆಗಳು ಕಾರ್ಮಿಕರಿಗೆ ಸುರಕ್ಷತೆಯನ್ನು ಒದಗಿಸುವ ಕ್ರಮಗಳಿಗೆ ಯಾವುದೇ ಹೂಡಿಕೆಯನ್ನು ಮಾಡಿರಲಿಲ್ಲ. ಹಾಗೆಯೇ ಉಸಿರಾಟದ ಸಮಸ್ಯೆಯು ತಲೆದೋರಿದಾಗ ಅವರಿಗೆ ಯಾವುದೇ ವೈದ್ಯಕೀಯ ಉಪಚಾರಗಳೂ ಲಭ್ಯವಿರಲಿಲ್ಲ. ಅವರ ಆರೋಗ್ಯದ ಪರಿಸ್ಥಿತಿಯ ಮೇಲೆ ನಿಗಾ ಇರಿಸುವಂಥ ಯಾವುದೇ ವ್ಯವಸ್ಥೆ ಇರಲಿಲ್ಲವಾದ್ದರಿಂದ ಅವರ ದೈಹಿಕ ಪರಿಸ್ಥಿತಿಗೂ ಮತ್ತು  ಅವರು ಕೆಲಸ ಮಾಡುತ್ತಿದ್ದ ಜಾಗಕ್ಕೂ ಇರುವ ನೇರ ಸಂಬಂಧವನ್ನು ಸಾಬೀತು ಮಾಡಬಲ್ಲ ಯಾವುದೇ ಪುರಾವೆಗಳು ಇರಲಿಲ್ಲ. ಕೊನೆಯಲ್ಲಿ ಕೆಲಸ ಮಾಡಲು ಸಾಧ್ಯವೇ ಆಗದಷ್ಟು ಖಾಯಿಲೆಗ್ರಸ್ಥರಾಗಿ ನಿತ್ರಾಣರಾದಾಗ ಅವರು ತಮ್ಮ ಬಡ ಹಾಡಿಗಳಿಗೆ ಹಿಂತಿರುಗುತ್ತಿದ್ದರು. ಮತ್ತು ನಿಧಾನವಾಗಿ ಆದರೆ ಅತ್ಯಂತ ಯಾತನಾಮಯವಾದ ನೋವು ಅನುಭವಿಸುತ್ತಾ ಸಾಯುತ್ತಿದ್ದರು.

ವಿಪರ್ಯಾಸವೆಂದರೆ ೧೯೪೮ರ ಕಾರ್ಮಿಕರ ವಿಮಾ ಕಾಯಿದೆ ಮತ್ತು ೧೯೨೩ರ ಕಾರ್ಮಿಕರ ಪರಿಹಾರ ಕಾಯಿದೆಗಳಲ್ಲಿ ಕಾರ್ಮಿಕರು ಮಾಡುವ ಕೆಲಸದ ಜಾಗಗಳಿಂದ ಬರುವ ಖಾಯಿಲೆಗಳ ಪಟ್ಟಿಯಲ್ಲಿ ಸಿಲಿಕೋಸಿಸ್ ಅನ್ನು ಸೇರಿಸಲಾಗಿದೆ. ಆದರೆ ಕಾಯಿದೆಯನ್ನೂ ಒಳಗೊಂಡಂತೆ೧೯೪೮ರ ಕಾರ್ಖಾನೆಗಳ ಕಾಯಿದೆ, ೧೯೫೨ರ ಗಣಿಗಾರಿಕೆ ಕಾಯಿದೆಗಳಂಥ ಕಾಯಿದೆಗಳ ಲಾಭವು ಕೇವಲ ಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಮಾತ್ರ ದಕ್ಕುತ್ತಿದೆ. ಆದರೆ ಇಂಥಾ ಅಪಾಯಗಳಿಗೆ ತುತ್ತಾಗುವ ಬಹುಪಾಲು ಕಾರ್ಮಿಕರು ಅಸಂಘಟಿತ ಕ್ಷೇತ್ರಗಳಲ್ಲಿದ್ದಾರೆ. ಅಲ್ಲಿ ಅವರು ಕೂಲಿ ಹೆಚ್ಚಳಕ್ಕಾಗಲೀ, ಸುರಕ್ಷಾ ವ್ಯವಸ್ಥೆಗಾಗಲೀ ಹೋರಾಡುವುದು ಅಶಕ್ಯ. ಬಹಳಷ್ಟು ಸಾರಿ ಸಿಲಿಕೋಸಿಸ್ ಖಾಯಿಲೆಯನ್ನು ಕ್ಷಯ ರೋಗವೆಂದು ಭಾವಿಸಲಾಗುತ್ತದೆ. ಆದರೆ ಕ್ಷಯವು ಔಷಧೋಪಾಚಾರದಿಂದ ಗುಣವಾಗಬಲ್ಲ ಖಾಯಿಲೆಯಾಗಿದೆ. ಆದರೆ ಕಾರ್ಮಿಕರೊಬ್ಬರು ಸಿಲಿಕೋಸಿಸ್ನಿಂದ ಸತ್ತರೆ ಸಾವಿಗೆ ಸಿಲಿಕೋಸಿಸ್ಸೇ ಕಾರಣವೆಂದು ದಾಖಲಾಗುವುದೇ ಇಲ್ಲ. ಇದೇ ಪರಿಸ್ಥಿತಿ ಇತರ ಅಪಾಯಕಾರಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರದ್ದೂ ಆಗಿದೆ. ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಗುಲುವ,  "ಕಪ್ಪು ಶ್ವಾಸಕೋಶ" ಖಾಯಿಲೆಯೆಂದು ಕರೆಯಲ್ಪಡುವ ನ್ಯೂಮೋಕೊನಿಯೋಸಿಸ್, ಹಾಗೂ ಕಾರ್ಖಾನೆಗಳ ಕಾಯಿದೆಯಲ್ಲಿ ಸಾವಿಗೆ ಕಾರಣವಾಗುವ ಖಾಯಿಲೆಯೆಂದು ವರ್ಗೀಕರಿಸಲ್ಪಟ್ಟಿರುವ ಆಸ್ಬೆಸ್ಟಾಸಿಸ್ ಮತ್ತು ಜವಳಿ ಕಾರ್ಖಾನೆಗಳಲ್ಲಿ ಹತ್ತಿಯ ಧೂಳಿನ ಸೇವನೆಯಿಂದಾಗಿ  ಹತ್ತಿ ಗಿರಣಿ ಕಾರ್ಮಿಕರನ್ನು ಬಲಿತೆಗೆದುಕೊಳ್ಳುವ ಬಿಸ್ಸಿನೋಸಿಸ್ ಮತ್ತು ಸಿಲಿಕೋಸಿಸ್ ಗಳೆಲ್ಲವೂ ಕೆಲಸದ ಜಾಗಗಳಿಂದ ಕಾರ್ಮಿಕರಿಗೆ ಅಂಟಿಕೊಂಡು ಅಂತಿಮವಾಗಿ ಅವರನ್ನು ಕೊಲ್ಲುವ ಖಾಯಿಲೆಯಾಗಿವೆ. ಆದರೆ ಸಾವಿಗೆ ಖಾಯಿಲೆಯೇ ಕಾರಣವೆಂದು ದಾಖಲಾಗುವುದು ಕಡಿಮೆಯಾಗಿರುವುದರಿಂದ ಖಾಯಿಲೆಗಳ ಬಗೆಗಿನ ಅಧಿಕೃತ ಅಂಕಿಅಂಶಗಳು ಸತ್ಯಕ್ಕೆ ದೂರವಾದ ಲೆಕ್ಕಾಚಾರವನ್ನೇ ಒದಗಿಸುತ್ತವೆ.

ಕೆಲಸ ಸಂಬಂಧೀ ಖಾಯಿಲೆಗಳು ಬರುವುದು ಭಾರತದಲ್ಲಿ ಮಾತ್ರವೇನಲ್ಲ. ಉದಾಹರಣೆಗೆ, ಬ್ರಿಟನ್ನಿನಂಥ ದೇಶಗಳಲ್ಲಿ ಸಿಲಿಕೋಸಿಸ್ ಅಥವಾ ನ್ಯೂಮೋಕೊನೋಸಿಸ್ನಂಥ ಕೆಲಸದ ಜಾಗಗಳಿಂದ ಬರುವ ಖಾಯಿಲೆಗಳನ್ನು ನಿಭಾಯಿಸಲು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂಥಾ ಖಾಯಿಲೆಗಳನ್ನು ತರುವಂಥ ವಾತಾವರಣದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಡ್ಡಾಯವಾಗಿ ಸುರಕ್ಷತಾ ಸೌಲಭ್ಯಗಳನ್ನು ಒದಗಿಸುತ್ತಾರೆ. ಪ್ರತಿಯೊಬ್ಬ ಕಾರ್ಮಿಕನಿಗೂ ಸಕಲ ಸುರಕ್ಷಾ ಕವಚಗಳನ್ನು ಒದಗಿಸುವುದಲ್ಲದೆ ದೇಶಗಳಲ್ಲಿ ಸಾಧ್ಯವಾದಷ್ಟು ಕಡಿಮೆ ಧೂಳನ್ನು ಹುಟ್ಟಿಹಾಕುವ ವಿಧಾನಗಳನ್ನು ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ. ಸಿಲಿಕಾಸಿಸ್ ಖಾಯಿಲೆಗೆ ನಿರ್ದಿಷ್ಟ ಗುಣಲಕ್ಷಣವಿಲ್ಲದಿರು ಮತ್ತು  ದೀರ್ಘಕಾಲದವರೆಗೆ ಅಸ್ತಿತ್ವದಲ್ಲಿರುವ ಲಕ್ಷಣಗಳನ್ನು ಅಲ್ಲಿನ ಕಾನೂನು ಗುರುತಿಸಿದೆ. ಹೀಗಾಗಿ ಅಲ್ಲಿನ  ಪ್ರತಿಯೊಬ್ಬ ಕಾರ್ಮಿಕರ ನಿಯಮಿತವಾದ ಆರೋಗ್ಯ ತಪಾಸಣೆ ಮತ್ತು ಉಸ್ತುವಾರಿಯನ್ನು ಕಡ್ಡಾಯಗೊಳಿಸಿದೆ. ವ್ಯಕ್ತಿಯ ಆರೋಗ್ಯ ಮಾನಕಗಳ ಮೇಲೆ ಸದಾ ನಿಗಾ ಇರಿಸುವ ಮೂಲಕ ಮಾತ್ರ ಸಿಲಿಕಾಸಿಸ್ ಅನ್ನು ಪತ್ತೆಹಚ್ಚಲು ಸಾಧ್ಯ. ಹಾಗೂ ಖಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲವಾದ್ದರಿಂದ ಅದನ್ನು ತಡೆಗಟ್ಟುವ ಏಕೈಕ ಮಾರ್ಗವೆಂದರೆ ವಿಷಯುಕ್ತ ವಸ್ತುಗಳು ದೇಹಕ್ಕೆ ಸೇರಿಕೊಳ್ಳದಂತೆ ನೋಡಿಕೊಳ್ಳುವುದೇ ಆಗಿದೆ.

ಸುಪ್ರೀಂ ಕೋರ್ಟಿನ ಮತ್ತು ಒಡಿಷಾ ನ್ಯಾಯಾಲಯಗಳ ಆದೇಶಗಳು ಬಡಜನರನ್ನೇ ಕಿತ್ತು ತಿನ್ನುವ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ಕೂಡಲೇ ಗಮನಹರಿಸುವತ್ತ ರಾಜ್ಯ ಸರ್ಕಾರಗಳನ್ನು ದೂಡುವಂತಾಗಬೇಕು. ೧೯೮೪ರ ಭೂಪಾಲ್ ದುರಂತದ ನಂತರ ೧೯೮೭ರಲ್ಲಿ ಕಾರ್ಖಾನೆಗಳ ಕಾಯಿದೆಗೆ ತಿದ್ದುಪಡಿ ತರಲಾಯಿತು. ಇದರಿಂದಾಗಿ ಈಗ ಕಾನೂನು ಅಪಾಯಕಾರಿ ಉತ್ಪಾದನಾ ಪ್ರಕ್ರಿಯೆಗಳನ್ನು ವರ್ಗೀಕರಿಸುತ್ತದೆ ಮತ್ತು ಕೆಲಸದ ಜಾಗದಲ್ಲಿ ಇರಲೇಬೇಕಾದ ಕೆಲಸಕ್ಕೆ ಸಬಂಧಪಟ್ಟ ಆರೋಗ್ಯ ಸೌಲಭ್ಯಗಳನ್ನು ನಿರ್ದಿಷ್ಟೀಕರಿಸಿ ಪಟ್ಟಿ ಮಾಡಿದೆ. ಆದರೆ ದುರದೃಷ್ಟಕರವಾಗಿ ಇಂಥಾ ಎಲ್ಲಾ ಕ್ರಮಗಳು ಬಡಜನರ ಕಲ್ಯಾಣಕ್ಕೆ ಸಂಬಂಧಪಟ್ಟ ಇತರ ಎಲ್ಲಾ ಕ್ರಮಗಳಂತೆ ಕಾಗದದ ಮೇಲಿರುತ್ತದೆಯೇ ವಿನಃ ಅನುಷ್ಠಾನಕ್ಕೆ ಬರುವುದೇ ಇಲ್ಲ. ಮತ್ತೊಂದು ಕಡೆ ಗಣಿಗಳಲ್ಲಿ, ಕಲ್ಲು ಕ್ವಾರಿಗಳಲ್ಲಿ ಮತ್ತು ಅಪಾಯಕಾರಿ ಕಾರ್ಖಾನೆಗಳಲ್ಲಿ ನರಕದ ಪಾತಳಿಗಳಲ್ಲಿ ಕೆಲಸ ಮಾಡುತ್ತಲೇ ಇರುವ ಕಾರ್ಮಿಕರ ಇರುವಿಕೆಯನ್ನೇ ನಾಗರಿಕ ಸಮಾಜ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ.

     ಕೃಪೆ: : Economic and Political Weekly
      July 29, 2017. Vol. 52. No. 30

                                                                                               

















ಕಾಮೆಂಟ್‌ಗಳಿಲ್ಲ: