ಅನು: ಶಿವಸುಂದರ್
ರಾಜ್ಯಪಾಲರ ಸಕ್ರಿಯ ಮಧ್ಯಪ್ರವೇಶದ ನಡುವೆಯೂ ನಾಗಾಲ್ಯಾಂಡಿನಲ್ಲಿ ನಡೆಯುತ್ತಿರುವ ರಾಜಕೀಯ ನಾಟಕ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.
ಪ್ರದೀಪ್ ಫಂಜೋಬಾಮ್ ಬರೆಯುತ್ತಾರೆ:
ಹಲವು ಅಸಾಧಾರಣ ರಾಜಕೀಯ ಬೆಳವಣಿಗೆಗಳ ನಂತರ ಜುಲೈ ೧೭ರಂದು ನಾಗಾಲ್ಯಾಂಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದ ಟಿ.ಆರ್. ಜೆಲಿಯಾಂಗ್ ಅವರು ತನ್ನ ಬೆಂಬಲಿಗರನ್ನು ಸಂತೋಷಪಡಿಸಲು ಹೊಸ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಿದ ನಂತರ ಅವರು ೧೧ ಶಾಸಕರನ್ನು ತನ್ನ ಸಚಿವ ಸಂಪುಟಕ್ಕೆ ಆಯ್ಕೆ ಮಾಡಿಕೊಂಡರು. ಅದರಲ್ಲಿ ನಾಲ್ವರು ಶಾಸನ ಸಭಾ ಸದಸ್ಯರನ್ನು ಹೊಂದಿರುವ ಬಿಜೆಪಿ ಪಕ್ಷದ ಇಬ್ಬರಿದ್ದರು. ಅದಾದ ಬಳಿಕ ಅವರು ಆಳ್ವಿಕೆಯಲ್ಲಿದ್ದ ನಾಗಾ ಪೀಫಲ್ಸ್ ಫ್ರಂಟ್ (ಎನ್ಪಿಎಫ್) ನಿಂದ ಬಂಡೆದ್ದು ತನ್ನನ್ನು ಬೆಂಬಲಿಸಿದ ೪೭ ಬಂಡುಕೋರ ಶಾಸಕರಲ್ಲಿ ಇನ್ನೂ ೩೫ ಜನರನ್ನು ಸಂತುಷ್ಟಗೊಳಿಸಬೇಕಾಯಿತು. ಹೀಗಾಗಿ ಅವರಲ್ಲಿ ೨೬ ಜನರಿಗೆ ಕ್ಯಾಬಿನೆಟ್ ಸಚಿವರ ಸ್ಥಾನಮಾನ ನೀಡಿ ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಿಕೊಂಡರು. ಉಳಿದ ೯ ಜನರಿಗೂ ಸಚಿವ ಸಂಪುಟದ ಸ್ಥಾನಮಾನ ಕೊಟ್ಟು ಸಲಹೆಗಾರರನ್ನಾಗಿ ನೇಮಿಸಿಕೊಂಡರು. ಇದರಿಂದಾಗಿ ೬೦ ಸದಸ್ಯ ಬಲದ ನಾಗಾಲ್ಯಾಂಡಿನ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಜೆಲಿಯಾಂಗ್ ಅವರು ವಿಶ್ವಾಸ ಮತ ಯಾಚನೆ ಮಾಡಿದಾಗ ಅವರ ಪರವಾಗಿ ಮತಚಲಾಯಿಸಿದ ಎಲ್ಲಾ ನಲವತ್ತೇಳು ಬಂಡಾಯ ಸದಸ್ಯರಿಗೂ ಈಗ ಕ್ಯಾಬಿನೆಟ್ ಸಚಿವರ ಸ್ಥಾನಮಾನ ಸಿಕ್ಕಂತಾಗಿದೆ.
ಆದರೆ ಜೆಲಿಯಾಂಗರ ದುರದೃಷ್ಟ. ಅದರ ಮರುದಿನವೇ, ಅಂದರೆ ಜುಲೈ ೨೬ರಂದು, ಸುಪ್ರೀಂ ಕೋರ್ಟು ಮತ್ತೊಂದು ಪ್ರಕರಣದಲ್ಲಿ (ಅಸ್ಸಾಂ ಸಂಸದೀಯ ಕಾರ್ಯದರ್ಶಿ (ನೇಮಕಾತಿ, ಸಂಬಳ-ಭತ್ಯೆ ಮತ್ತಿತರ ಸಂಬಂಧೀ) ಕಾಯಿದೆ-೨೦೦೪ ಅನ್ನು ಅಸಿಂಧು ಎಂದು ಘೋಷಿಸುತ್ತಾ) ರಾಜ್ಯಗಳ ವಿಧಾನಸಭೆಗಳಲ್ಲಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಳ್ಳುವುದು ಸಂವಿಧಾನ ಬಾಹಿರವೆಂದು ತೀರ್ಪನ್ನು ನೀಡಿದೆ. ಇದು ನೇರವಾಗಿ ಜೆಲಿಯಾಂಗರ ತುಷ್ಟೀಕರಣ ತಂತ್ರದ ಮೇಲೆ ಪರಿಣಾಮ ಬೀರಲಿದೆ. ಆದರೆ ಚಾಣಾಕ್ಷರಾದ ಜೆಲಿಯಾಂಗರು ಬೇರೆ ಯಾವುದಾದರೂ ಸೃಜನಶೀಲ ಮಾರ್ಗವನ್ನು ಖಂಡಿತಾ ಹುಡುಕಿಕೊಳ್ಳುತ್ತಾರೆ.
ಅಧಿಕಾರದೆಡೆಗಿನ ಜೆಲಿಯಾಂಗರ ಪ್ರಯಾಣ ನಾಟಕೀಯವಾಗಿ ಕಂಡರೂ ಹಲವು ವಿವಾದಗಳಿಂದ ಕೂಡಿದೆ. ಜೆಲಿಯಾಂಗರು ದೇಶದೆಲ್ಲೆಡೆ ಇರುವಂತೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.೩೩ ರಷ್ಟು ಮೀಸಲಾತಿಯನ್ನು ಕಲ್ಪಿಸುತ್ತಾ ನಾಗಾಲ್ಯಾಂಡಿನ ನಗರ ಸ್ಥಳಿಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸಲು ಉದ್ದೇಶಿಸಿದ್ದರು. ಈ ತೀರ್ಮಾನದ ಕುರಿತು ರಾಜ್ಯಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದದ್ದರಿಂದ ಅವರು ರಾಜೀನಾಮೆ ಕೊಡಬೇಕಾಗಿ ಬಂದಿತು. ಆಗ ಎನ್ಪಿಎಫ್ ಪಕ್ಷವು ತಮ್ಮ ಪಕ್ಷದ ಗಣ್ಯ ಸದಸ್ಯರಾದ ೮೧ ವರ್ಷದ ಶ್ರುಹೋಜೆಲಿ ಲಿಯ್ಜೆಯ್ತ್ಸು ಅವರನ್ನು ಸರ್ವಸಮ್ಮತ ಮುಖ್ಯಮಂತ್ರಿಯನ್ನಾಗಿ ಮಾಡಿತು. ಆದರೆ ಅವರು ವಿಧಾನ ಸಭಾ ಸದಸ್ಯರಾಗಿರಲಿಲ್ಲ. ಹೀಗಾಗಿ ಅವರ ಮಗ ತೆರೆವು ಮಾಡಿಕೊಟ್ಟ ಕ್ಷೇತ್ರದಲ್ಲಿ ಇದೇ ಜುಲೈ ೨೯ರಂದು ನಡೆಯಲಿದ್ದ ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸಬೇಕಿತ್ತು. ಆದರೆ ಆ ಉಪಚುನಾವಣೆಗೆ ಒಂದು ತಿಂಗಳು ಬಾಕಿ ಇರುವಾಗಲೇ ಜೆಲಿಯಾಂಗರು ಈ ಬಾಂಬ್ ಸ್ಪೋಟ ಮಾಡಿಬಿಟ್ಟರು.
ಈಗ ನಾಗಾಲ್ಯಾಂಡಿನ ರಾಜ್ಯಪಾಲರಾಗಿರುವುದು ಬಿಜೆಪಿ ಪಕ್ಷದ ಈಶಾನ್ಯ ರಾಜ್ಯಗಳ ಉಸ್ತುವಾರಿಯಾಗಿದ್ದ ಪಿ.ಬಿ. ಆಚಾರ್ಯ ಅವರೇ. ಈ ಬೆಳವಣಿಗೆಗಳಲ್ಲಿ ಅವರ ನಡೆಯೂ ಅತ್ಯಂತ ವಿವಾದಾಸ್ಪದವಾಗಿದೆ. ಬಹುಮತವನ್ನು ಸಾಬೀತುಪಡಿಸಲು ನಿಗದಿಯಾದ ಸಮಯಕ್ಕೆ ಲಿಯ್ಜೆಯ್ತ್ಸು ಅವರು ವಿಧಾನಸಭೆಗೆ ಹಾಜರಾಗಲಿಲ್ಲವೆಂಬ ನೆಪವೊಡ್ಡಿ ರಾಜ್ಯಪಾಲರು ಜುಲೈ ೧೯ ರಂದು ಜೆಲಿಯಾಂಗರನ್ನು ಆತುರಾತುರವಾಗಿ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿಬಿಟ್ಟರು. ಎನ್ಪಿಎಫ್ ಒಳಗಿನ ಭಿನ್ನಮತವು ಪಕ್ಷದೊಳಗಿನ ವ್ಯವಹಾರವಾಗಿದ್ದು ಅದನ್ನು ಬಗೆಹರಿಸುವ ವೇದಿಕೆ ಪಕ್ಷವೇ ವಿನಃ ವಿಧಾನಸಭೆಯಲ್ಲವೆಂದು ಲಿಯ್ಜೆಯ್ತ್ಸು ಅವರು ಪ್ರತಿಪಾದಿಸಿದರು. ಸಾಧಾರಣವಾಗಿ ಒಂದು ಆಳುವ ಪಕ್ಷದಲ್ಲಿ ಬಿಕ್ಕಟ್ಟು ಉಂಟಾದಾಗ ಅದು ಔಪಚಾರಿಕವಾಗಿ ವಿಭಜನೆಗೊಂಡು ಒಂದು ಸಾಂವಿಧಾನಿಕ ಬಿಕ್ಕಟ್ಟು ಉಂಟಾಗದ ಹೊರತು ಇಂಥಾ ಒಳಜಗಳಗಳನ್ನು ಬಗೆಹರಿಸಿಕೊಳ್ಳುವ ಜವಾಬ್ದಾರಿಗಳನ್ನು ಆಯಾ ಪಕ್ಷಗಳ ಸಂಬಂಧಪಟ್ಟಗಳ ವೇದಿಕೆಗಳಿಗೆ ಬಿಟ್ಟುಕೊಡಬೇಕು. ಕುತೂಹಲಕಾರಿ ವಿಷಯವೆಂದರೆ ಮೇಲಿನ ಸ್ಥರದಲ್ಲಿ ಬದಲಾವಣೆಗಳಾಗಿ ಪಕ್ಷದ ವಿಪ್ ಅನ್ನು ಉಲ್ಲಂಘಿಸಿ ಸಾಮೂಹಿಕ ಅಡ್ಡಮತದಾನ ನಡೆದಿದ್ದರೂ ಎನ್ಪಿಎಫ್ ವಿಭಜನೆಯಾಗಿದೆಯೆಂದು ಈವರೆಗೂ ಅಧಿಕೃತವಾಗಿ ಪರಿಗಣಿಸಲಾಗಿಲ್ಲ.
ಜೆಲಿಯಾಂಗರ ಈ ಕ್ಷಿಪ್ರದಂಗೆಯ ನಂತರವೂ ಲಿಯ್ಜೆಯ್ತ್ಸು ಅವರು ಪದವಿಯನ್ನು ಬಿಟ್ಟುಕೊಡಲು ನಿರಾಕರಿಸಿದ್ದರು. ಆಗ ರಾಜ್ಯಪಾಲರು ಅವರಿಗೆ ತಮ್ಮ ಬಹುಮತವನ್ನು ಸದನದೊಳಗೆ ಸಾಬೀತು ಪಡಿಸಲು ಹೇಳಿದರು. ಆದರೆ ಅದನ್ನು ಒಪ್ಪದ ಅವರು ಎನ್ಪಿಎಫ್ ಪಕ್ಷದ ಬಿಕ್ಕಟ್ಟು ಪಕ್ಷದೊಳಗಿನ ಅಂತರಿಕ ವಿಷಯವೆಂದು ಪ್ರತಿಪಾದಿಸುತ್ತಾ ಗೌಹಾಟಿ ಉಚ್ಚ ನ್ಯಾಯಾಲಯದ ಕೊಹಿಮಾ ಪೀಠದೆದುರು ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿದರು. ಆದರೆ ಕೋರ್ಟು ಲಿಯ್ಜೆಯ್ತ್ಸು ಅವರ ವಾದವನ್ನು ಮತ್ತವರ ಅಹವಾಲನ್ನು ತಿರಸ್ಕರಿಸಿತು. ಅಷ್ಟು ಮಾತ್ರವಲ್ಲದೆ, "ರಾಜ್ಯಪಾಲರು ತಮ್ಮ ವಿವೇಚನೆಯನ್ನು ಬಳಸಿ ಈ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕೆಂಬ ಆಶ್ಚರ್ಯಕರ ತೀರ್ಪನ್ನು ನೀಡಿತು. ರಾಜ್ಯಪಾಲರು ತಮ್ಮ ವಿವೇಚನೆಯನ್ನು ಬಳಸಲೇ ಇಲ್ಲವೆಂದು ನಂತರ ಲಿಯ್ಜೆಯ್ತ್ಸು ಅವರು ವ್ಯಂಗ್ಯವಾಡಿದರು.
ಈ ಬೆಳವಣಿಗೆಗಳಿಂದ ಕ್ರುದ್ಧರಾಗಿರುವ ಲಿಯ್ಜೆಯ್ತ್ಸು ಅವರು ತನ್ನ ಬದ್ಧ ಶತ್ರುವಾಗಿ ಪರಿಣಮಿಸಿರುವ ಜೆಲಿಯಾಂಗರು ರಾಜ್ಯಪಾಲರ ಜೊತೆ ಸೇರಿ ನಾಗಾಲ್ಯಾಂಡಿನಲ್ಲಿ ಬೆಜೆಪಿಯನ್ನು ಅಧಿಕಾರಕ್ಕೆ ತರುವ ದುರುದ್ದೇಶವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ.
ಹಾಗೂ ಜೆಲಿಯಾಂಗರನ್ನು ಹೆರಾಕ ಪುಂಡನೆಂದು ನಿಂದಿಸಿದ್ದಾರೆ.
ಜೆಲಿಯಾಂಗ್ ಅವರು ನಾಗಾಲ್ಯಾಂಡ್, ಅಸ್ಸಾಮ್ ಮತ್ತು ಮಣಿಪುರಗಳಲ್ಲಿ ಹರಡಿಕೊಂಡಿರುವ ನಾಗಾ ಬುಡಕಟ್ಟಿನ ಜೆಲಿಯಾಂಗ್ರಾಂಗ್ ಗುಂಪಿಗೆ ಸೇರಿದವರು. ಈ ಗುಂಪು ಉಳಿದವರಿಗಿಂತ ತಡವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿಕೊಂಡಿತು. ಈಗಲೂ ಅವರಲ್ಲಿ ಹಲವರು ಕ್ರಿಶ್ಚಿಯನ್ ಧರ್ಮಕ್ಕೆ ಮುನ್ನ ಅನುಸರಿಸುತ್ತಿದ್ದ ಹೆರಾಕ ಎಂಬ ಪಂಥವನ್ನು ಅನುಸರಿಸುತ್ತಾರೆ. ಈ ಪಂಥದ ಬಂಡುಕೋರ ನಾಯಕಿಯಾದ ರಾಣಿ ಗೈಡಿನ್ಲಿಯು ಅವರ ಮೂಲಕ ಹೆರಾಕ ಪಂಥವು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಸಿದ್ಧಿಗೆ ಬಂದಿತು. ಗೈಡಿನ್ಲಿಯು ಅವರು ಬ್ರಿಟಿಷ ಆಡಳಿತದ ವಿರುದ್ಧ ಬಂಡೆದ್ದದ್ದು ಮಾತ್ರವಲ್ಲದೆ, ನಾಗಾ ಸಾರ್ವಭೌಮತೆಗಾಗಿ ಹೋರಾಡುತ್ತಿದ್ದ ಎ.ಜೆಡ್. ಫಿಜೋ ಅವರ ನಾಗಾ ನ್ಯಾಷನಲ್ ಕೌನ್ಸಿಲ್ ಅನ್ನೂ ವಿರೋಧಿಸುತ್ತಿದ್ದರು. ಸ್ವಾತಂತ್ರ್ಯಾನಂತರದಲ್ಲಿ ಬ್ರಿಟಿಷ ಸೆರೆಮನೆಯೊಂದರಲ್ಲಿ ಅವರನ್ನು ಪತ್ತೆಹಚ್ಚಿದ ನೆಹರೂ ಅವರು ಆಕೆಯ ಪ್ರತಿರೋಧದ ಕಥೆಯನ್ನು ಕೇಳಿ ಮೆಚ್ಚಿಕೊಂಡು ರಾಣಿ ಎಂಬ ಬಿರುದನ್ನು ನೀಡಿದರು. ಮತ್ತು ನಂತರ ಪದ್ಮ ಭೂಷಣ ಪ್ರಶಸ್ತಿಯನ್ನೂ ನೀಡಿದರು. ಗೈಡಿನ್ಲಿಯನ್ನು ಮಣಿಪುರದ ಜನರು ಆದರಾಭಿಮಾನಗಳಿಂದ ಕಾಣುತ್ತಾರೆ. ಆದರೆ ನಾಗಾಲ್ಯಾಂಡಿನಲ್ಲಿ ಮಾತ್ರ ಅವರ ಪ್ರತಿಮೆಯನ್ನು ಕಟ್ಟುವ ಯೋಜನೆಗೆ ದೊಡ್ಡ ಪ್ರತಿರೋಧವೇ ಎದುರಾಯಿತು. ಈ ಮಧ್ಯೆ ಬಿಜೆಪಿಯು ಹೆರಾಕ ಪಂಥೀಯರನ್ನು ತನ್ನ ಪಕ್ಷಕೆ ಸೇರಿಸಿಕೊಳ್ಳುತ್ತಿದೆಯೆಂಬ ವದಂತಿಯೂ ಇದೆ.
ಜೆಲಿಯಾಂಗರು ಅಧಿಕಾರಕ್ಕೆ ಹಿಂದಿರುಗುವ ಮೂಲಕ ಹುಟ್ಟಿಕೊಂಡಿರುವ ವಿವಾದ ಇನ್ನೂ ತಣ್ಣಗಾಗಿಲ್ಲ. ಪಕ್ಷದ ವಿಪ್ ಅನ್ನು ಮೀರಿ ಮತಚಲಾಯಿಸಿದ ಎನ್ಪಿಎಫ್ ಶಾಸಕರ ವಿಧಾನಸಭಾ ಸದಸ್ಯತ್ವವನ್ನು ಅನೂರ್ಜಿತಗೊಳಿಸಬೇಕೆಂದು ದೂರು ದಾಖಲಿಸಲು ಲಿಯ್ಜೆಯ್ತ್ಸು ಮತ್ತವರ ಬೆಂಬಲಿಗರು ಸಿದ್ಧರಾಗುತ್ತಿದ್ದಾರೆ. ಅದರಲ್ಲಿ ಅವರೇನಾದರೂ ಯಶಸ್ವಿಯಾದಲ್ಲಿ ಬಂಡುಕೋರ ಶಾಸಕರು ತಮ್ಮ ಶಾಸಕತ್ವವನ್ನು ಉಳಿಸಿಕೊಳ್ಳಲು ವಿಧಾನಸಭೆಯಲ್ಲಿರುವ ಮತ್ಯಾವುದಾದರೂ ಪಕ್ಷದೊಂದಿಗೆ ವಿಲೀನಗೊಳ್ಳಬೇಕಾಗುತ್ತದೆ. ಆಗ ಅವರು ಸಹಜವಾಗಿ ಆಯ್ಕೆ ಮಾಡಿಕೊಳ್ಳುವ ಪಕ್ಷ ಬಂಡಾಯದಲ್ಲಿ ತಮ್ಮ ಸಹವರ್ತಿಗಳಾಗಿದ್ದ ಬಿಜೆಪಿಯೇ ಆಗಿರುವ ಸಾಧ್ಯತೆಯೇ ಹೆಚ್ಚು. ಅಂಥ ಬೆಳವಣಿಗೆ ಸಂಭವಿಸುವುದೇ ಆದರೆ ಎನ್ಪಿಎಫ್ ತನ್ನ ನೆಲೆಯನ್ನು ಕಳೆದುಕೊಳ್ಳಲಿದೆ. ಆಗ ಸಂದರ್ಭದ ಲಾಭವಾಗುವುದು ಮತ್ತೆ ಬಿಜೆಪಿಗೇ.
(ಪ್ರದೀಪ್ ಫಂಜುಬಾಮ್ ಅವರು ಇಂಫಾಲಾ ಫ್ರೀ ಪ್ರೆಸ್ ಪತ್ರಿಕೆಯ ಸಂಪಾದಕರಾಗಿದ್ದಾರೆ)
ಕೃಪೆ: Economic and Political Weekly
July 29, 2017. Vol. 52. No. 30
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ