ಶುಕ್ರವಾರ, ಜುಲೈ 14, 2017

ಭುಗಿಲೆದ್ದಿರುವ ಹೊಲಗದ್ದೆಗಳು

       ಅನುಶಿವಸುಂದರ್

ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸಲಾಗುವುದೆಂಬ ಚುನಾವಣಾ ಭರವಸೆಗಳಿಗೆ ಮಾಡಿದ ದ್ರೋಹದ ವಿರುದ್ಧ ಭಾರತದ ರೈತಾಪಿ ಬೀದಿಗಿಳಿದಿದ್ದಾರೆ.

೨೦೧೪ರ ಚುನಾವಣಾ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸುವ, ದೊಡ್ಡ ಮಟ್ಟದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಕಪ್ಪುಹಣವನ್ನು ವಿದೇಶದಿಂದ ವಾಪಸ್ ತರುವಂಥ ಹಲವಾರು ದುಬಾರಿ ಭರವಸೆಗಳನ್ನು ನೀಡಿತ್ತು. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಗಳ ಗತಿ ಏನಾಗುತ್ತದೆಂಬುದು ದೇಶದಲ್ಲಿ ರಹಸ್ಯವಾಗೇನೂ ಉಳಿದಿಲ್ಲ. ಆದರೆ ಸರ್ಕಾರದ ಭಿನ್ನತೆ ಏನೆಂದರೆ ಅದು ತಾನು ಕೊಟ್ಟ ಭರವಸೆಗಳನ್ನು ವಾಸ್ತವದಲ್ಲಿ ಈಡೇರಿಸುವಂಥಾ ಒಬ್ಬ ಪ್ರಧಾನಮಂತ್ರಿಯನ್ನು ಕೊಡುವ ಭರವಸೆಯನ್ನೂ ಸಹ ನೀಡಿತ್ತು. ಹೀಗಾಗಿ ಸಾಮಾನ್ಯವಾಗಿ ಭರವಸೆ ದ್ರೋಹಗಳನ್ನು ಮರೆತು ಮನ್ನಿಸುವ ಗುಣದ ಭಾರತೀಯ ನಾಗರಿಕರು,   ಅತ್ಯಂತ ಗಂಡೆದೆಯ ಮತ್ತು ಅತ್ಯಂತ ಸಮರ್ಥನೆಂದು ಬಿಂಬಿಸಲ್ಪಟ್ಟ ನಾಯಕನಿಗೆ ಆತನ ಸ್ವಘೋಷಿತ ಅಜೆಂಡಾಗಳನ್ನು ಮತ್ತೆ ನೆನಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಇದೇ ಇಂದು ಬಿಜೆಪಿ ಎದುರಿಸುತ್ತಿರುವ ಬಿಕ್ಕಟ್ಟಿಗೆ ಕಾರಣವಾಗಿದೆ. ಅದು ಕಟ್ಟಿಕೊಟ್ಟ ನೋಟುನಿಷೇಧದ ಭ್ರಾಂತಿಯ ಕನಸುಗಳ ಎಳೆಗಳು ಕಳಚಿ ಬೀಳುತ್ತಿದ್ದಂತೆ ದೇಶದೆಲ್ಲೆಡೆ ಕೃಷಿ ಮತ್ತು ಜೀವನೋಪಾಯಗಳ ಬಿಕ್ಕಟ್ಟಿನಿಂದ ಹುಟ್ಟಿರುವ ಆಕ್ರೋಶಗಳನ್ನು ಬಿಜೆಪಿಯು ಎದುರಾಗಲೇ ಬೇಕಾದ ಸಂದರ್ಭವು ಉದ್ಭವಿಸಿದೆ.

 ಮಹಾರಾಷ್ಟ್ರ ಮತ್ತು ಅದಕ್ಕೆ ಅಂಟಿಕೊಂಡಂತಿರುವ ಮಧ್ಯಪ್ರದೇಶಗಳಲ್ಲಿ ಹತ್ತುದಿನಗಳ ಕಾಲ ನಡೆದ ಐತಿಹಾಸಿಕ ರೈತ ಹೋರಾಟವು ದೇಶವನ್ನು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿಯನ್ನು ಆಶ್ಚರ್ಯಚಕಿತಗೊಳಿಸಿದೆ. ಇಲ್ಲಿಯವರೆಗೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲಾಗದ ಮತ್ತು ಅಸಂಘಟಿತವಾಗಿದ್ದ ರೈತ ಸಮೂಹವು ರಾತ್ರೋರಾತ್ರಿ ಒಂದು ಬಲಿಷ್ಠ ರಾಜಕೀಯ ಶಕ್ತಿಯಾಗಿ ಉದ್ಭವಿಸಿಬಿಟ್ಟಿದೆ. ಹೋರಾಟ ನಿರತ ರೈತಾಪಿಯು ಸ್ವಾಮಿನಾಥನ್ ವರದಿಯು ಶಿಫಾರಸ್ಸು ಮಾಡಿರುವಂತೆ ಕೃಷಿ ಆರ್ಥಿಕತೆಯಯ ಮೂಲಭೂತ ಬದಲಾವಣೆಗಳನ್ನು ಜಾರಿ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಹಾಗೆಯೇ ನೋಟು ನಿಷೇಧ ಮತ್ತು ಬಂಪರ್ ಬೆಳೆಯಿಂದಾಗಿ ತತ್ಕ್ಷಣಕ್ಕೆ ಎದುರಿಸುತ್ತಿರುವ ಬೆಲೆ ಕುಸಿತದ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕೆಂಬ ಹಕ್ಕೊತ್ತಾಯಗಳನ್ನು ಮುಂದಿಟ್ಟು ಹೋರಾಟಕ್ಕಿಳಿದಿದ್ದಾರೆ. ಸತತ ಎರಡು ವರ್ಷಗಳ ತೀವ್ರ ಬರಗಾಲವನ್ನು ಎದುರಿಸಿದ ನಂತರ ಈಗವರು ಹೆಚ್ಚುವರಿ ಬೆಳೆಯ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿದೆ. ಹೀಗಾಗಿಯೇ ರೈತ ಹೋರಾಟವು ಸಾಪೇಕ್ಷವಾಗಿ ಉತ್ತಮ ನೀರಾವರಿ ಸೌಲಭ್ಯ ಹೊಂದಿರುವ ಮತ್ತು ಸಂಪದ್ಭರಿತವಾದ ಮಹಾರಾಷ್ಟ್ರದ ಪುಣೆ ಮತ್ತು ನಾಸಿಕ್ ವಲಯದಲ್ಲಿ, ಮಧ್ಯಪ್ರದೇಶದ ಉಜ್ಜೈನ್ ವಲಯದಲ್ಲಿ ಭುಗಿಲೆದ್ದಿತೇ ಹೊರತು ಅತ್ಯಂತ ಹಿಂದುಳಿದ ಮಹಾರಾಷ್ಟ್ರದ ಮರಾಠವಾಡ ಮತ್ತು ವಿದರ್ಭ ಪ್ರದೇಶಗಳಲ್ಲಾಗಲೀ, ಮಧ್ಯಪ್ರದೇಶದ ಚಂಬಲ್ ಅಥವಾ ಬುಂದೇಲ್ಖಂಡ್ ಪ್ರದೇಶಗಳಲ್ಲಾಗಲೀ ಹುಟ್ಟಿಕೊಳ್ಳಲಿಲ್ಲ. ಪ್ರಾಕೃತಿಕ ವೈಪರೀತ್ಯಗಳನ್ನು ಬದಿಗಿಟ್ಟರೂ, ಭಾರತೀಯ ಕೃಷಿಯು ತೀವ್ರವಾದ ಬಿಕ್ಕಟ್ಟಿನಲ್ಲಿ ಸಿಲುಕಿರುವುದಂತೂ ವಾಸ್ತವ. ಹೆಚ್ಚುತ್ತಿರುವ ಒಳಸುರಿಗಳ ವೆಚ್ಚ, ಬೆಳೆದ ಬೆಳೆಗೆ ಕುಸಿಯುತ್ತಿರುವ ಧಾರಣೆ, ಕಡಿತವಾಗುತ್ತಿರುವ ಸರ್ಕಾರಿ ಬೆಂಬಲ, ಹೆಚ್ಚುತ್ತಿರುವ ಮಾರುಕಟ್ಟೆ ಅಸ್ಥಿರತೆ, ಕಡಿಮೆಯಾಗುತ್ತಿರುವ ಹಿಡುವಳಿಯ ಗಾತ್ರಗಳು ಮತ್ತು ಇಳಿಕೆಯಾಗುತ್ತಿರುವ ಭೂಮಿಯ ಉತ್ಪಾದಕತೆಗಳು ಕೃಷಿ ಆದಾಯವನ್ನು ಕಡಿಮೆಗೊಳಿಸುತ್ತಾ ಇಡೀ ಕೃಷಿ ಕ್ಷೇತ್ರವನ್ನೇ ನಿತ್ರಾಣಗೊಳಿಸುತ್ತಿದೆ. ಇದರಿಂದಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು, ಗೇಣಿದಾರರು, ಭೂ ರಹಿತ ಕೃಷಿ ಕಾರ್ಮಿಕರು ಮತ್ತು ಕೃಷಿ ಆರ್ಥಿಕತೆಯ ಅಂಚಿನಲ್ಲಿ ಬದುಕುತ್ತಿರುವ ವರ್ಗಗಳು ತೀವ್ರವಾದ ಸಂಕಷ್ಟಕ್ಕ್ಕೆ ಗುರಿಯಾಗುತ್ತಿದ್ದಾರೆ.

ಎರಡೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳು ರೈತ ಹೋರಾಟಗಳನ್ನು ಅರ್ಥಮಾಡಿಕೊಳ್ಳುವಲ್ಲೂ ಮತ್ತು ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲೂ ಘೋರವಾಗಿ ವಿಫಲವಾಗಿವೆ. ಮೊದಮೊದಲು ಇವೆಲ್ಲವೂ ವಿರೋಧ ಪಕ್ಷಗಳ ಚಿತಾವಣೆಯೆಂದು ಬಣ್ಣಿಸಿ ನೆಲಕಚ್ಚಿದ್ದ ವಿರೋಧ ಪಕ್ಷಕ್ಕೆ ಸರ್ಕಾರಗಳು ಅನಗತ್ಯವಾದ ಪ್ರಚಾರವನ್ನು ಕೊಟ್ಟವು. ನಂತರದಲ್ಲಿಬೀದಿಗಿಳಿದು ಹೋರಾಡುತ್ತಿರುವವರು ನಿಜವಾದ ರೈತರೇ ಅಲ್ಲವೆಂದು ದುಷ್ಪ್ರಚಾರ ಪ್ರಾರಂಭಿಸಿದರು. ಅದು ಅವರಿಗೆ ಹಿಂಪೆಟ್ಟು ನೀಡಿತು. ನಂತರದಲ್ಲಿ ಮಹಾರಾಷ್ಟ್ರ ಸರ್ಕಾರವು ರೈತ ಪ್ರತಿನಿಧಿಗಳ ಕೇಂದ್ರ ಸಮಿತಿಯನ್ನು ಒಡೆಯಲು ಪ್ರಯತ್ನಿಸಿತು. ಆದರೆ ಅಂತಿಮವಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರೈತರ ಹೋರಾಟಕ್ಕೆ ಮಣಿಯಲೇ ಬೇಕಾಯಿತು. ಅದರಂತೆ ಣ್ಣ ಮತ್ತು ಅತಿ ಸಣ್ಣ ರೈತರ ೩೦,೦೦೦ ಕೋಟಿ ರೂಪಾಯಿಗಳ ಸಾಲಮನ್ನ, ಮುಂದಿನ ಬೆಳೆಯನ್ನು ಬೆಳೆಯಲು ಕೂಡಲೇ ಹೊಸ ಸಾಲವನ್ನು ವಿತರಿಸುವ  ಮತ್ತು ಹಾಲಿನ ಬೆಲೆಯಲ್ಲಿ ಗಮನಾರ್ಹ ಏರಿಕೆಯನ್ನು ಮಾಡಿ ಅದರ ಶೇ.೭೦ರಷ್ಟು ಹಣವು ನೇರವಾಗಿ ರೈತರ ಕೈ ತಲುಪುವಂತೆ ಮಾಡುವ ಕ್ರಮಗಳನ್ನು ಘೋಷಿಸಲಾಯಿತು. ಅಷ್ಟು ಮಾತ್ರವಲ್ಲದೆ ರೈತ ಬೆಳೆದ ಬೆಳೆಗೆ ಉತ್ಪಾದನಾ ವೆಚ್ಚದ ಜೊತೆಗೆ ಶೇ. ೫೦ರಷ್ಟು ಲಾಭವನ್ನು ಸೇರಿಸಿ ಕನಿಷ್ಟ ಬೆಂಬಲ ಬೆಲೆಯನ್ನು (ಎಂಎಸ್ಪಿ) ಘೋಷಿಸುವಂತೆ ಮಾಡಲು ಕೇಂದ್ರ ಸರ್ಕಾರದ ಜೊತೆ ಮಾತುಕತೆಯಾಡುವುದಾಗಿಯೂ ಮಹಾರಾಷ್ಟ್ರ ಮುಖ್ಯಮಂತ್ರಿ ಭರವಸೆ ನೀಡಿದರು. ಭರವಸೆಗಳು ಅತ್ಯಂತ ಮಹತ್ವಾಕಾಂಕ್ಷೆಯಿಂದ ಕೂಡಿದ್ದರೂ ಆಚರಣೆಗೆ ತರುವುದು  (ಸಾಲಮನ್ನಾದ ಅಗತ್ಯವಿರುವ ನೈಜ ರೈತಾಪಿಯನ್ನು ಗುರುತಿಸುವ ಅಥವಾ ಉತ್ಪಾದನಾ ವೆಚ್ಚವನ್ನು ನಿಖರವಾಗಿ ಲೆಕ್ಕ ಹಾಕುವ ವಿಷಯಗಳು) ಅತ್ಯಂತ ಸವಾಲಿನ ವಿಷಯವಾಗಿದೆ. ವಿತ್ತೀಯವಾಗಿ ತ್ರಾಸದಾಯಕವಾದ ಮತ್ತು ಹೆಚ್ಚಿನ ಹಣಕಾಸು ಹೊರೆಯನ್ನು ಹೇರುವಂತ ಕ್ರಮಗಳಾಗಿವೆ. ಇದರಲ್ಲಿ ಗಮನಾರ್ಹವಾದ ಸಂಗತಿಯೆಂದರೆ ಕ್ರಮಗಳು ಸಾರಾಂಶದಲ್ಲಿ ಕೃಷಿಯಲ್ಲಿ ಸರ್ಕಾರದ ಮಧ್ಯಪ್ರವೇಶಕ್ಕೆ ಮರಳುವ ನೀತಿಯೇ ಆಗಿದೆ. ಇದು ಬಿಜೆಪಿ ಪ್ರತಿಪಾದಿಸುತ್ತಿರುವ ನೀತಿಗೆ ತದ್ವಿರುದ್ಧವಾದ ನೀತಿಯೇ ಆಗಿದೆ. ಮಧ್ಯಪ್ರದೇಶದಲ್ಲಿ ಗೋಲಿಬಾರ್ನಲ್ಲಿ ಸತ್ತ ರೈತರ ಸಂಖ್ಯೆ ಏಳಕ್ಕೆ ಏರಿದರೂ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಮಾತುಕತೆಗೆ ಕರೆಯುವ ಮತ್ತು ಸಾಲಮನ್ನಾದಂಥ ಸೀಮಿತ ಪರಿಹಾರಗಳನ್ನು ಮಾತ್ರ ಮುಂದಿಡುತ್ತಿದ್ದಾರೆ. ಅವರ ನಡೆಗಳು ಹೋರಾಟಗಾರರನ್ನು ತೃಪ್ತಗೊಳಿಸುವ ಬದಲಿಗೆ ವಿರೋಧ ಪಕ್ಷಗಳಿಗೆ ಕಸುವು ತುಂಬುತ್ತಿದೆ.

ವಿದ್ಯಮಾನಗಳ ಪಾಠವೇನೆಂದರೆ ಬಿಜೆಪಿಯು ಗ್ರಾಮೀಣ ಭಾರತದತ್ತ ಮತ್ತು ಕೃಷಿ ಆರ್ಥಿಕತೆಯತ್ತ ಚಿತ್ತವನ್ನು ಹರಿಸಬೇಕಿದೆ. ಪ್ರಧಾನವಾಗಿ ವ್ಯಾಪಾರಿಗಳ ಮತ್ತು ನಗರ ಕೇಂದ್ರಿತ ಪಕ್ಷವಾಗಿರುವ ಬಿಜೆಪಿ, ಚುನಾವಣೆಯಲ್ಲಿ ಅತ್ಯಂತ ಸೂಕ್ಷ್ಮ ಜಾತಿ ಲೆಕ್ಕಾಚಾರಗಳ ಮೂಲಕ ಮತ್ತು ಒಟ್ಟಾರೆ ಆರ್ಥಿಕತೆಗೆ ಅದರಲ್ಲೂ ನಿರ್ದಿಷ್ಟವಾಗಿ ಕೃಷಿ ಆರ್ಥಿಕತೆಗೆ ಹೆಚ್ಚಿನ ಕಸುವು ತುಂಬುವ ಭರವಸೆಯನ್ನು ನೀಡುವ ಮೂಲಕ ಗ್ರಾಮಿಣ ಪ್ರದೇಶದ ಓಟುಗಳನ್ನು ಪಡೆದುಕೊಂಡಿತು. ಈಗ ಭರವಸೆಗಳೇ ಬೇತಾಳದಂತೆ ಅದರ ಬೆನ್ನು ಹತ್ತಿದೆ. ಇಂದಿನ ಕೃಷಿ ಬಿಕ್ಕಟ್ಟು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ಕೃಷಿಯನ್ನು ಸತತವಾಗಿ ಕಡೆಗಣಿಸುತ್ತಾ ಬಂದಿದ್ದರ ಪರಿಣಾಮವೇ ಆಗಿದೆ. ಇವೆಲ್ಲಕ್ಕೂ ಬಿಜೆಪಿ ಮಾತ್ರ ಕಾರಣವೆಂದು ಹೇಳಲಾಗುವುದಿಲ್ಲ. ಆದರೂ ಅದೀಗ ಹಿಂದೆಂದು ಇಲ್ಲದ ರೀತಿಯಲ್ಲಿ ನ್ಯಾಯವನ್ನು ಆಗ್ರಹಿಸುತ್ತಿರುವ ಹತಾಷ ಮತ್ತು ಅಸಹಾಯಕ ರೈತಾಪಿಯ ಹೋರಾಟಗಳನ್ನು ಎದುರಿಸಬೇಕಾಗಿದೆ.

  ಹಿಂದೆ ಬಿಜೆಪಿಯು ಅಂದಿನ ಆಡಳಿತರೂಢ ಕಾಂಗ್ರೆಸ್ ಪಕ್ಷವು ಜಾರಿಗೆ ತಂದ ಮಹಾತ್ಮ ಗಾಂಧಿ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳಂಥ ಗ್ರಾಮೀಣ ಅಭಿವೃಧಿಪರ ಯೋಜನೆಗಳನ್ನು ಖಡಾಖಂಡಿತವಾಗಿ ವಿರೋಧಿಸಿತ್ತು. ಮತ್ತೊಂದು ಕಡೆ ಭೂ ಸ್ವಾಧೀನ ಕಾಯಿದೆ ಮತ್ತು ನೋಟು ನಿಷೇಧದಂಥ ಬಿಜೆಪಿಯ ಸ್ವಂತ ನೀತಿಗಳು ಗ್ರಾಮೀಣ ಆಥಿಕತೆ ಮತ್ತದರ ಕಾರ್ಯನಿರ್ವಹಣೆಯ ಬಗ್ಗೆ ಬಿಜೆಪಿಗಿರುವ ಅಜ್ನಾನ ಮತ್ತು ಅಸಡ್ದೆಗಳನ್ನು ಎತ್ತಿತೋರಿಸುವಂತಿವೆ. ೨೦೧೭ರ ಜೂನ್ ರಂದು ರಿಸರ್ವ್ ಬ್ಯಾಂಕ್ ಹೊರತಂದ ಹಣಕಾಸು ನೀತಿಗಳ ದ್ವೈಮಾಸಿಕ ಪರಾಮರ್ಶನ ವರದಿಯು ನೋಟು ನಿಷೇಧದ ಕಾರಣದಿಂದಾಗಿ ಎಲ್ಲೆಡೆ ಕೃಷಿ ಸರಕುಗಳ ಬೆಲೆಗಳು ಕುಸಿದಿದ್ದು ರೈತರು ಹತಾಷ ಮಾರಾಟದಲ್ಲಿ ತೊಡಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದೆ. ನೋಟು ನಿಷೇಧವು ಹುಟ್ಟುಹಾಕಿದ ನಗದು ಕೊರತೆಯು ಈಗಲೂ ಹಳ್ಳಿಗಾಡಿನಲ್ಲಿ, ಸಣ್ಣಪುಟ್ಟ ಪಟ್ಟಣಗಳಲ್ಲಿ ಮತ್ತು ರೈತ ಮಂಡಿಗಳಲ್ಲಿ ಮುಂದುವರೆದಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿದ್ದ ನಗದು ಬಂಡವಾಳವನ್ನು ಲೂಟಿಮಾಡಿದ ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಇಳಿಕೆಯುಬ್ಬರವನ್ನು (ಡಿಫ್ಲೇಷನ್-ಇಳಿಕೆಯುಬ್ಬರ- ಹಣದುಬ್ಬರ ಮತ್ತು ಬೆಲೆಗಳ ಇಳಿಕೆ ಎರಡೂ ಏಕಕಾಲದಲ್ಲಿ ಸಂಭವಿಸುವ ವಿದ್ಯಮಾನ- ಅನುವಾದಕನ ಟಿಪ್ಪಣಿ) ಹುಟ್ಟುಹಾಕಿದೆ. ಹರ್ಯಾಣ, ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ರೈತಾಪಿಯುಒಂದಾದ ನಂತರದಲ್ಲಿ ಒಂದು  ಹೋರಾಟದ ಹಾದಿಯನ್ನು ಹಿಡಿಯುತ್ತಿರುವುದು ವಿದ್ಯಮಾನಗಳ ಪರಿಣಾಮಗಳನ್ನು ಸ್ಪಷ್ಟಪಡಿಸುತ್ತಿವೆ.

ಇದರಲ್ಲಿ ಬಹಳಷ್ಟು ಜನರು ಕಾಣದೇ ಹೋದ ಒಂದು ಕಟು ವಾಸ್ತವವೆಂದರೆ ಮಹಾರಾಷ್ಟ್ರದ ಯಾವ ಪುಣೆ ವಿಭಾಗದ ಅಹಮದ್ನಗರದಲ್ಲಿ ಇತ್ತೀಚಿಗಷ್ಟೇ ಮರಾಠ ಮೋರ್ಚಾಗಳು ಪ್ರಾರಂಭವಾಗಿದ್ದವೋ ಅದೇ ಪ್ರದೇಶದಿಂದಲೇ ಇಂದಿನ ರೈತ ಹೋರಾಟಗಳು ಪ್ರಾರಂಭಗೊಂಡಿವೆ. ಎರಡೂ ಜನಹೋರಾಟಗಳ ಬೇಡಿಕೆಗಳು ಮತ್ತು ಉದ್ದೇಶಗಳು ಬೇರೆಬೇರೆಯಾದರೂ ಎರಡು ಹೋರಾಟಗಳು ಪಡೆದುಕೊಂಡ ದಿಢೀರ್ ಜನಬೆಂಬಲ, ಅವುಗಳ ಪ್ರಮಾಣ ಮತ್ತು ವ್ಯಾಪ್ತಿಗಳು ಯಾವುದೇ ಸರ್ಕಾರವನ್ನು ಕಂಗೆಡಿಸುವಂತಿವೆ. ಪ್ರಬಲವಾದ ವಿರೋಧ ಪಕ್ಷಗಳು ಇಲ್ಲದಿರುವ ಸನ್ನಿವೇಶದಲ್ಲಿ ಜನತೆಯ ಇಂಥಾ ವೀರೋಚಿತ ಹೋರಾಟಗಳೇ ಸರ್ಕಾರಗಳನ್ನು ಅವರು ನೀಡಿದ ಭರವಸೆಗಳಿಗೆ ಉತ್ತರದಾಯಿಗಳನ್ನಾಗಿ ಮಾಡುವ ನಿಜವಾದ ಪ್ರಜಾತಾಂತ್ರಿಕ ಉಸ್ತುವಾರಿಯನ್ನು ನಿಭಾಯಿಸುತ್ತಿವೆ.

  ಕೃಪೆ: Economic and Political Weekly
          June 17, 2017. Vol. 52. No. 24


                                                                                         

ಕಾಮೆಂಟ್‌ಗಳಿಲ್ಲ: