ಅನು: ಶಿವಸುಂದರ್
ಇಂದಿನ ಸಂದರ್ಭದಲ್ಲಿ ದ್ವೇಷ ರಾಜಕಾರಣದ ವಿರುದ್ಧ ನಡೆಯುವ ಪ್ರತಿಯೊಂದು ಪ್ರತಿಭಟನೆಗಳನ್ನೂ ಸ್ವಾಗತಿಸಬೇಕು.
ಈ ವರ್ಷದ ಮೊದಲಾರ್ಧದಲ್ಲಿ ೨೦ ಕ್ಕೂ ಹೆಚ್ಚು ಅಮಾಯಕರನ್ನು ಗುಂಪುಗೂಡಿ ಹೊಡೆದು-ಬಡಿದು ಕೊಂದುಹಾಕಿರುವ ಘಟನೆಗಳು ನಡೆದುಹೋಗಿವೆ. ಆದರೆ ಕಳೆದ ಜೂನ್ ೨೨ರಂದು ದೆಹಲಿ-ಮಥುರಾ ನಡುವೆ ಹಾದುಹೋಗುತ್ತಿದ್ದ ರೈಲಿನಲ್ಲಿ ೧೫ ವರ್ಷದ ಜುನೈದ್ ಖಾನ್ ಎಂಬ ಬಾಲಕನನ್ನು ಹಾಡು ಹಗಲೇ ಗುಂಪೊಂದು ಹೊಡೆದು ಹೊಡೆದು ಕೊಂದು ಹಾಕಿದ ಘಟನೆ ಮಾತ್ರ ಇಡೀ ದೇಶದ ಅಂತಃಕರಣವನ್ನು ಕಲಕಿಬಿಟ್ಟಿದೆ. ಅದಕ್ಕೆ ಕಾರಣ ಅವನಿನ್ನೂ ಹದಿಹರೆಯದ ಯುವಕನಾಗಿದ್ದ, ಮತ್ತು ಹಬ್ಬಕ್ಕಾಗಿ ಇಡೀ ದಿನ ಖರೀದಿಯನ್ನು ನಡೆಸಿ ಖುಷಿಯಿಂದ ಮನೆಗೆ ಮರಳುತ್ತಿದ್ದ ಅಮಾಯಕನಾಗಿದ್ದ ಎಂಬುದಷ್ಟೇ ಅಲ್ಲ.
ಯಾರಿಗೂ ಉಪದ್ರವ ಕೊಡದ ಅಮಾಯಕ ಯುವಕನೊಬ್ಬನನ್ನು ಆತ ಮುಸ್ಲಿಮನಾಗಿದ್ದ ಹಾಗೂ ಮುಸ್ಲಿಂ ಎಂದು ಸುಲಭವಾಗಿ ಗುರುತಿಸುವಂತಿದ್ದನೆಂಬ ಏಕೈಕ ಕಾರಣಕ್ಕೆ ಕೊಲ್ಲಲ್ಪಟ್ಟನೆಂಬುದು ಎಲ್ಲರ ಅಂತಃಸಾಕ್ಷಿಯನ್ನು ಕಲಕಿದೆ. ಜುನೈದನ ಕೊಲೆಯ ಸಾರಭೂತ ಪರಿಣಾಮಗಳು ಇದೇ ಆಗಿದೆ- ಈ ಭಾರತವೆಂಬ ದೇಶದಲ್ಲಿ ಮುಸ್ಲಿಂ ಎಂದು ಗುರುತಿಸಬಹುದಾದ ಯಾರ ಮೇಲೆ ಆದರೂ ದಾಳಿ ನಡೆಸಬಹುದಾಗಿದೆ ಮತು ಆ ದಾಳಿಗಳು ಪವಿತ್ರ ಗೋವಿನ ಮೇಲಿರುವ ಪ್ರೀತಿಗೆ ದ್ಯೋತಕವಾಗುತ್ತವೆ. ಇವು ಈ ಜುನೈದನ ಕೊಲೆಯು ಸಾರುತ್ತಿರುವ ಕಳವಳಕಾರಿ ಸಂದೇಶಗಳಾಗಿವೆ. ಹಸುವಿನ ಹೆಸರಲ್ಲಿ ಈ ರೀತಿ ಗುಂಪುದಾಳಿಗಳು ಪ್ರಾರಂಭವಾದಾಗಲೇ, ಈ ವಿದ್ಯಮಾನವು ಹಸುವಿನ ಹೆಸರಲ್ಲಿ ಅಥವಾ ದನದ ಮಾಂಸವನ್ನು ತಿನ್ನುವ ಹೆಸರಲ್ಲಿ ಯಾವುದೇ ಸಾಕ್ಷ್ಯ ಪುರಾವೆಗಳಿಲ್ಲದೆ ಯಾರನ್ನು ಬೇಕಾದರೂ ಗುರಿಯಾಗಿಸಿ, ಕಣಕಿ, ಕೆರಳಿಸಿ ಕೊನೆಗೆ ಕೊಂದೂ ಬಿಡುವಂಥ ತಾರ್ಕಿಕ ಅಂತ್ಯಕಾಣುತ್ತದೆಂಬುದನ್ನು ಯಾರು ಬೇಕಾದರೂ ಊಹಿಸಬಹುದಿತ್ತು.
ಜುನೈದನ ಕಗ್ಗೊಲೆಯಲ್ಲಿ ಹಲವು ಪಾಠಗಳಿವೆ. ತನ್ನ ಸಹೋದರರೊಂದಿಗೆ ಆತನೂ ಕೂಡ ಅಂದು ಯಾವುದೇ ಭಾರತೀಯ ಮಾಡುವಂತೆ ಹಬ್ಬಕ್ಕಾಗಿ ವಸ್ತುಗಳನ್ನು ಖರೀದಿಸಿ, ಲೋಕಲ್ ಟ್ರೈನ್ ಹತ್ತಿ ತನ್ನ ಪಾಡಿಗೆ ತಾನು ಮನೆಗೆ ಮರಳುತ್ತಿದ್ದ. ಆದರೆ ಅಷ್ಟು ಮಾಡಲು ಕೂಡ ಅವನಿಗೆ ಅನುಮತಿಯನ್ನು ನಿರಾಕರಿಸಲಾಯಿತು. ತುಂಬಿದ್ದ ಟ್ರೈನು ಗಾಡಿಯಲ್ಲಿ ಸೀಟಿಗಾಗಿ ನಡೆದ ಸಣ್ಣ ವಾಗ್ವಾದವೊಂದು ಕೂಡಲೇ ಒಂದು ದ್ವೇಷ ಪೂರಿತ ಅಪರಾಧವಾಗಿ ಬದಲಾಯಿತು. ಗುಂಪಾದ ಜನ ಜುನೈದ್ ಮತ್ತು ಆತನ ಸಹೋದರರನ್ನು ದನ ತಿನ್ನುವವರೆಂದು ಹೀಯಾಳಿಸಿದರು, ಪಾಕಿಸ್ತಾನಿಗಳೆಂದು ಜರೆದರು, ಅವರು ತಲೆಯ ಮೇಲೆ ಹಾಕಿಕೊಂಡಿದ್ದ ಟೊಪಿಗಳನ್ನು ಕಿತ್ತೆಸೆದರು, ಒಬ್ಬನ ಗಡ್ಡವನ್ನು ಹಿಡಿದು ಎಳೆದಾಡಿದರು. ಕೊನೆಗೆ ಆ ಗುಂಪು ಅವರ ಮೇಲೆ ದಾಳಿ ಮಾಡುತ್ತಾ ಹೊಡೆದು-ಬಡಿಯಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ಚೂರಿಯಿಂದ ತಿವಿದು ಕೊಂದೂ ಬಿಟ್ಟರು.
ಈ ಹಿಂದೆ ಇದೇ ರೀತಿಯ ಗುಂಪುದಾಳಿಗಳನ್ನು ನಡೆಸಿದ್ದ ತಥಾಕಥಿತ ಗೋ ರಕ್ಷಕರಂತೆ, ಈ ಅಪರಾಧದಲ್ಲಿ ಭಾಗವಹಿಸಿದವರು ಯಾವುದೇ ಗುಂಪಿಗೆ ಸೇರಿದ ಸಮಾನ ಮನಸ್ಕರೋ, ಯೋಜಿತ ಉದ್ದೇಶದ ಭಾಗಸ್ಥರೋ ಆಗಿರಲಿಲ್ಲ; ಆವೆರಲ್ಲರೂ ಅಲ್ಲಿಯವರೆಗೆ ಪರಸ್ಪರ ಸಂಬಂಧವಿಲ್ಲದ ಬಿಡಿಬಿಡಿ ವ್ಯಕ್ತಿಗಳಾಗಿದ್ದರು. ಮುಸ್ಲಿಮರ ಬಗ್ಗೆ ಅವರುಗಳು ಪ್ರತ್ಯೇಕ ಪ್ರತ್ಯೇಕವಾಗಿ ಬೆಳೆಸಿಕೊಂಡಿದ್ದ ದ್ವೇಷವೇ ಅವರನ್ನೆಲ್ಲಾ ದಿಢೀರನೇ ಒಂದು ಮಾಡಿತು. ಅದೇರೀತಿ ಆ ಬೋಗಿ ತುಂಬಾ ತುಂಬಿಕೊಂಡಿದ್ದ ಜನರಲ್ಲಿ ಯಾರೊಬ್ಬರೂ ದಾಳಿಕೋರರನ್ನು ತಡೆಯಲು ಅಥವಾ ದಾಳಿಗೊಳಗಾಗುತ್ತಿದ್ದವರನ್ನು ರಕ್ಷಿಸಲು ಮುಂದಾಗಲಿಲ್ಲವೆಂಬುದೂ ಸಹ ಕಣ್ಣಿಗೆ ರಾಚುವಂತೆ ಎದ್ದುಕಾಣುತ್ತದೆ. ಇದಕ್ಕಿಂತ ಹೀನಾಯವಾದ ಸಂಗತಿಯೆಂದರೆ ಜುನೈದ್ ಮತ್ತು ಅವನ ಸಹೋದರರನ್ನು ಟ್ರೈನಿನಿಂದ ಪ್ಲಾಟ್ಫಾರ್ಮಿನ ಮೇಲೆ ದೂಡಿದ ನಂತರ ಜುನೈದ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ, ೨೦೦ ಕ್ಕೂ ಹೆಚ್ಚು ಜನರಿದ್ದ ಆ ಬೋಗಿಯಲ್ಲಿ ಯಾರೊಬ್ಬರಿಗೂ ಸಹಾಯಕ್ಕೆ ಮುಂದೆ ಬರಬೇಕೆಂದೆನಿಸಲಿಲ್ಲ. ಅಂಬುಲೆನ್ಸ್ಗಾಗಲೀ, ಪೊಲೀಸರಿಗಾಗಲೀ ಕರೆ ಮಾಡಿ ತಿಳಿಸಬೇಕೆಂದೆನಿಸಲಿಲ್ಲ.
ಮತ್ತಷ್ಟು ಜುನೈದ್ ಗಳು ಬಲಿಯಾಗಬಾರದೆಂದಿದ್ದರೆ ಜನತೆಯಲ್ಲಿ ಬೆಳೆದಿರುವ ಈ ಮೌನಸಮ್ಮತಿ, ಅಪರಾಧದೊಡನೆ ಮೌನ ಸಹಭಾಗಿತ್ವ ಮತ್ತು ಆಳವಾಗಿ ಬಲಿಯುತ್ತಿರುವ ದ್ವೇಷವನ್ನು ಆದಷ್ಟು ಬೇಗ ಹೊಡೆದುರುಳಿಸಬೇಕಿದೆ.
ಇದೇ ಜೂನ್ ೨೮ರಂದು ನಾಟ್ ಇನ್ ಮೈ ನೇಮ್ (ನನ್ನ ಹೆಸರಲ್ಲಿ ನಾನಿದನ್ನು ಮಾಡಗೊಡುವುದಿಲ್ಲ) ಎಂಬ ಶೀರ್ಷಿಕೆಯಲ್ಲಿ ದೇಶದ ಅಂದಾಜು ೧೨ ಕ್ಕೂ ಹೆಚ್ಚು ಪ್ರದೇಶಗಳಲ್ಲಿ ನಡೆದ ಪ್ರತಿಭಟನೆಗಳು ಈ ಮೌನವನ್ನು ಮುರಿದು ಹಾಕುವ ಉದ್ದೇಶವನ್ನು ಹೊಂದಿತ್ತು. ಊಹಿಸಿದಂತೆ ಇದನ್ನು ನಗರ ಕೇಂದ್ರಿತ, ಉಚ್ಚ ವರ್ಗದ ಮತ್ತು ಪರಿಣಾಮವನ್ನೇನು ಮಾಡದ ಪ್ರತಿಭಟನೆಗಳೆಂದು ಕಡೆಗಣಿಸಲಾಗುತ್ತಿದೆ. ಆದರೆ ಇದರಲ್ಲಿ ಮುಖ್ಯವಾದ ವಿಷಯ ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದವರು ಯಾರು ಎಂಬುದಾಗಲೀ, ಅದರಲ್ಲಿ ಎಷ್ಟು ಜನರಿದ್ದರೆಂಬುದಾಗಲೀ ಅಲ್ಲ. ಬದಲಿಗೆ ಒಂದು ಪ್ರಜಾತಂತ್ರದಲ್ಲಿ ನಾಗರಿಕರು ಯಾವುದೇ ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ಪ್ರತಿಭಟನೆ ಸೂಚಿಸುವಂಥ ಅವಕಾಶಗಳನ್ನು ಸ್ವಪ್ರೇರಣೆಯಿಂದ ನಡೆಸಿದ ಪ್ರತಿಭಟನೆಗಳ ಮೂಲಕ ಮರಳಿ ಗಳಿಸಿಕೊಂಡಿದ್ದಾರೆ ಎಂಬುದೇ ಇಲ್ಲಿ ಗಮನಾರ್ಹವಾದ ಸಂಗತಿಯಾಗಿದೆ. ಈ ಜನರು ಕೇವಲ ಮುಸ್ಲಿಮರನ್ನು ಕೊಂದಾಗ ಮಾತ್ರ ಏಕೆ ಪ್ರತಿಭಟಿಸುತ್ತಾರೆ, ರೈತರನ್ನು ಕೊಂದಾಗ ಇವರೆಲ್ಲಾ ಎಲ್ಲಿದ್ದರು, ಅಥವಾ ಕಾಶ್ಮೀರದಲ್ಲಿ ಪೊಲೀಸನೊಬ್ಬನನ್ನು ಇದೇರೀತಿ ಗುಂಪೊಂದು ಕೊಂದುಹಾಕಿದಾಗ ಇವರೆಲ್ಲಾ ಏಕೆ ಪ್ರತಿಭಟಿಸುವುದಿಲ್ಲ ಅಥವಾ ದಲಿತರನ್ನು ಕೊಂದಾಗ ಇವರೇಕೆ ಬರುವುದಿಲ್ಲವೆಂಬ ಪ್ರಶ್ನೆಗಳನ್ನೂ ಕೇಳಲಾಗುತ್ತಿದೆ. ಇಂದಿನ ಸಂದರ್ಭದಲ್ಲಿ ಇಂಥಾ ಎಲ್ಲಾ ಪ್ರಶ್ನೆಗಳೂ ಸರಿಯಾದದ್ದೇ ಆದರೂ, ಇದುವರೆಗೆ ಯಾವ ವಿಷಯಗಳಿಗೂ ತಲೆ ಕೆಡೆಸಿಕೊಳ್ಳದ ವರ್ಗವೊಂದು ಹೊರಬಂದು ಹೋರಾಟಗಳಿಗೆ ಧ್ವನಿಗೂಡಿಸುತ್ತಿದ್ದಾರೆ ಎಂಬುದೂ ಸಹ ಮುಖ್ಯವಾಗಬೇಕು.
ಇದು ಪ್ರತಿರೋಧಗಳ ಪ್ರಾಮುಖ್ಯತೆಯನ್ನೂ, ಭಿನ್ನಾಭಿಪ್ರಾಯಗಳ ಅವಶ್ಯಕತೆಯನ್ನೂ, ಸೌಹಾರ್ದತೆಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕಾದ ತುರ್ತನ್ನೂ ಸಾರಿ ಹೇಳುತ್ತಿದೆ.
ನಗರ ಭಾರತದಲ್ಲಿ ಬಾವುಟ-ಭಿತ್ತಿಪತ್ರ ಹಿಡಿದ ಇಂಥಾ ಕೆಲವರು, ಹಿಂದೂ ರಾಷ್ಟ್ರದ ಗುರಿಯನ್ನು ಸಾಧಿಸಲು ದೈತ್ಯ ಬದ್ಧತೆಯಿಂದ ಮುನ್ನುಗ್ಗುತ್ತಿರುವ ಭಾರತೀಯ ಜನತಾ ಪಕ್ಷದ ಮತ್ತು ಸಂಘಪರಿವಾರದ ಮುನ್ನೆಡೆಯ ಮೇಲೆ ಕಿಂಚಿತ್ತೂ ಪರಿಣಾಮ ಬೀರದಿರುವ ಸಾಧ್ಯತೆಯೇ ಹೆಚ್ಚು. ಆ ನಡೆ ನಿಲ್ಲಬೇಕೆಂದರೆ ಅದಕ್ಕೆ ರಾಜಕೀಯ ಪ್ರತಿರೋಧ ಎದುರಾಗಬೇಕು. ಆದರೆ ಛಿದ್ರಗೊಂಡು ಹತಾಷ ಸ್ಥಿತಿಯಲ್ಲಿರುವ ರಾಜಕೀಯ ಪ್ರತಿರೋಧಿಗಳನ್ನು ನೋಡಿದಾಗ ಅಂಥ ಒಂದು ಪ್ರಬಲ ರಾಜಕೀಯ ಪ್ರತಿರೋಧ ರೂಪುಗೊಳ್ಳುವ ಸಾಧ್ಯತೆ ಸದ್ಯಕ್ಕಂತೂ ಕಾಣುತ್ತಿಲ್ಲ. ಇಂಥಾ ಸಂದರ್ಭದಲ್ಲಿ ದಲಿತ, ರೈತ ಮತ್ತು ಇತರ ಹಕ್ಕುಗಳು ಹರಣಗೊಂಡ ಸಮುದಾಯಗಳ ಹೋರಾಟಗಳು ಅತ್ಯಂತ ಮಹತ್ವದ್ದಾಗಿದ್ದು ಅವುಗಳು ಇನ್ನೂ ಪರಿಣಾಮಕಾರಿಯಾಗಬೇಕೆಂದರೆ ಇಂಥಾ ಪ್ರತಿರೋಧಗಳೆಲ್ಲಾ ಇನ್ನೂ ಹತ್ತಿರವಾಗುವ ಅಗತ್ಯವಿದೆ.
ಅದೇನೇ ಇದ್ದರೂ ಪ್ರತಿರೋಧ ಮತ್ತು ಭಿನ್ನಮತಗಳ ಪ್ರಸ್ತುತತೆಯು ಅದರ ಯಶಸ್ವೀ ರಾಜಕೀಯ ಪರಿಣಾಮಗಳನ್ನೇ ಅವಲಂಬಿಸಿಕೊಂಡಿರಬೇಕಿಲ್ಲ. ಪ್ರಜಾತಂತ್ರವಿರಲಿ ಅಥವಾ ಸರ್ವಾಧಿಕಾರವಿರಲಿ ತಮ್ಮ ಧ್ವನಿಯನ್ನು ಸರ್ಕಾರಗಳಿಗೆ ಕೇಳಿಸಲೇಬೇಕೆಂಬ ತಿಳವಳಿಕೆಗೆ ಬದ್ಧರಾಗಿ ಜನರು ದಮನಗಳಿಗೂ ಅಂಜದೆ ತಮ್ಮ ಧ್ವನಿಯನ್ನು ಎತ್ತುತ್ತಾರೆ.
ಭಾರತದ ಇಂದಿನ ಸಂದರ್ಭದಲ್ಲಿ ತಾವು ಒಪ್ಪದ ಹಿಂದೂ ಭಾರತದ ಪರಿಕಲ್ಪನೆಯನ್ನು ತಮ್ಮ ಮೇಲೆ ಬಲವಂತವಾಗಿ ಹೇರುವುದರ ವಿರುದ್ಧ ಧ್ವನಿ ಎತ್ತಲು ನಾಗರಿಕರಿಗೆ ಸಾಕಷ್ಟು ಕಾರಣಗಳಿವೆ. ಈ ದೀರ್ಘಕಾಲೀನ ಯೋಜನೆಯನ್ನು ಎಷ್ಟು ವ್ಯವಸ್ಥಿತವಾಗಿ ಜಾರಿ ಮಾಡಲಾಗುತ್ತಿದೆಯೆಂದರೆ ಸಂಘಪರಿವಾರದ ಸದಸ್ಯರಲ್ಲದ ಸಾಮಾನ್ಯ ಹಿಂದೂಗಳೂ ಸಹ ಇತರ ಸಮುದಾಯಗಳ ಅದರಲ್ಲೂ ಮುಸ್ಲಿಮರ ಮೇಲಿನ ದ್ವೇಷಕ್ಕೆ ಸಮ್ಮತಿ ಸೂಚಿಸುವಂತೆ ಮಾಡಲಾಗಿಬಿಡುತ್ತಿದೆ. ಜುನೈದನ ಕೊಲೆಯಲ್ಲಿರುವ ಕಂಗೆಡಿಸುವಂಥ ಅಂಶವು ಇದೇ ಆಗಿದೆ. ಶತ್ರುಗಳೆಂದು ಬಿತ್ತರಿಸಲಾಗಿರುವ ಸಮುದಾಯದ ವಿರುದ್ಧ ಪರಸ್ಪರ ಸಂಬಂಧವೇ ಇಲ್ಲದ ಬಿಡಿವ್ಯಕ್ತಿಗಳು ಸಹ ಒಂದಾಗಿ ದಾಳಿ ನಡೆಸಲು ಯಾವುದೇ ಕ್ಷುಲ್ಲಕ ಕಾರಣಗಳೂ ನೆಪವಾಗಬಹುದು. ಪ್ರತಿನಿತ್ಯ ಉತ್ತೇಜಿಸಲಾಗುತ್ತಿರುವ ಈ ದ್ವೇಷದ ರಾಜಕೀಯವು ಭಾರತವನ್ನು ಸ್ಫೋಟಕ ಸ್ಥಿತಿಗೆ ದೂಡುತ್ತಿದ್ದು ಕಾನುನನ್ನು ಪಾಲಿಸುವ ಜನಸಾಮಾನ್ಯರು ತಮ್ಮ ಹಾಗೂ ತಮ್ಮ ಮಕ್ಕಳ ಜೀವದ ಬಗ್ಗೆ ಸದಾ ಆತಂಕ ಪಡುವಂತಾಗಿದೆ. ಈ ಹಿಂದೆ ಸಿಖರನ್ನು ಇದೇ ರೀತಿ ಗುರಿಮಾಡಿಕೊಳ್ಳಲಾಗಿತ್ತು. ದಲಿತರನ್ನಂತೂ ಸದಾ ಬಲಿಪಶುಗಳನ್ನಾಗಿಸಲಾಗಿದೆ. ಈಶಾನ್ಯ ಭಾರತೀಯರಂತೂ ತಮ್ಮ ಭಾರತೀಯತೆಯನ್ನು ಸಾಬೀತು ಪಡಿಸುತ್ತಾ ದಣಿದು ಹೋಗಿದ್ದಾರೆ. ಕಾಶ್ಮೀರದ ಹೊರಗಿರುವ ಕಾಶ್ಮೀರಿಗಳಂತೂ ತಾವು ಭಯೋತ್ಪಾದಕರಲ್ಲವೆಂದು ಕಡ್ಡಾಯವಾಗಿ ಸಾಬೀತುಪಡಿಸಬೇಕಿದೆ. ಇದೀಗ ಮುಸ್ಲಿಮರನ್ನು ದನದ ಮಾಂಸ ತಿನ್ನುವವರೆಂದು ಗುರಿಮಾಡಿಕೊಳ್ಳಲಾಗಿದೆ.
ಇವೆಲ್ಲವನ್ನು ಪ್ರತಿಭಟಿಸಲೇಬೇಕು. ಮತ್ತು ಈ ನಿಟ್ಟಿನಲ್ಲಿ ನಡೆಯುವ ಎಲ್ಲಾ ಬಗೆಯ ಪ್ರತಿಭಟನೆಗಳನ್ನೂ ಸ್ವಾಗತಿಸಲೇ ಬೇಕು. ಸಾರ್ವಜನಿಕರ ಭಾವಶೂನ್ಯತೆ ಮತ್ತು ಅಮಾನವೀಯತೆಯನ್ನು ಆಧರಿಸಿಕೊಂಡೇ ನಿರಂಕುಶತೆಯು ಬೆಳೆಯುತ್ತದೆ. ಹಿಂದೂ ರಾಷ್ಟ್ರವನ್ನು ಒಪ್ಪದವರು ಅದನ್ನು ತಡೆಗಟ್ಟಲು ಏನನ್ನೂ ಮಾಡದಿದ್ದರೆ ಹಿಂದೂ ರಾಷ್ಟ್ರ ಅನಿವಾರ್ಯ ಸತ್ಯವಾಗಿಬಿಡುತ್ತದೆ.
ಕೃಪೆ: Economic and Political Weekly
June 24, 2017. Vol. 52. No. 25 & 26
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ