ಶುಕ್ರವಾರ, ಜುಲೈ 14, 2017

ಹಣಕಾಸು ನೀತಿಯೆಂಬ ಕಂಟಕ

ಅನುಶಿವಸುಂದರ್
financial policy ಗೆ ಚಿತ್ರದ ಫಲಿತಾಂಶ

ಹಣದುಬ್ಬರದ ಕುರಿತು ಭಾರತೀಯ ರಿಸರ್ವ್ ಬ್ಯಾಂಕು (ಆರ್ಬಿಐ) ತೋರುತ್ತಿರುವ ಹಠಮಾರಿ ನಿಲುವಿನ ಮೂಲ ಸರ್ಕಾರದ ಆರ್ಥಿಕ ನೀತಿಗಳಲ್ಲೇ ಇದೆ

೨೦೧೭ರ ಜೂನ್ ರಂದು ನಡೆದ ರಿಸರ್ವ್ ಬ್ಯಾಂಕಿನ ಎರಡನೇ ದ್ವೈಮಾಸಿಕ ಹಣಕಾಸು ಪರಾಮರ್ಶನಾ ಸಭೆಯು ಮತ್ತೊಮ್ಮೆ ಬಡ್ಡಿ ದರವನ್ನು ಇಳಿಸಲು ನಿರಾಕರಿಸಿದೆ. ಬಡ್ಡಿ ದರ ಇಳಿಸಿದ್ದರೆ ಬ್ಯಾಂಕುಗಳು ನೀಡುತ್ತಿದ್ದ ಸಾಲದ ಮೇಲಿನ ಬಡ್ಡಿ ದರವೂ ಇಳಿಕೆಯಾಗಿ ಅಭಿವೃದ್ಧಿಗೆ ಪೂರಕವಾಗುತ್ತಿತ್ತು ಎಂಬುದು ಸರ್ಕಾರದ ನಿರೀಕ್ಷೆಯಾಗಿತ್ತು. ಹೀಗಾಗಿ ರಿಸರ್ವ್ ಬ್ಯಾಂಕಿನ ನೀತಿಗೆ ಸರ್ಕಾರವು ಬಹಿರಂಗವಾಗಿಯೇ ತನ್ನ ಅಸಮಧಾನವನ್ನು ಸೂಚಿಸಿದೆಆದರೆ ಸರ್ಕಾರದ ಪ್ರತಿಕ್ರಿಯೆ ಗೊಂದಲ ಮೂಡಿಸುವಂತಿದೆ. ಸರ್ಕಾರವು ಬಹಿರಂಗವಾಗಿ ವ್ಯಕ್ತಪಡಿಸುವ ಅಪೇಕ್ಷೆಗಳ ವಿರುದ್ಧವಾಗಿ ರಿಸರ್ವ್ ಬ್ಯಾಂಕು ಹಣದುಬ್ಬರ ನಿಯಂತ್ರಣವನ್ನು ಮಾತ್ರ ಏಕಮಾತ್ರ ಗುರಿಯಾಗಿಟ್ಟುಕೊಂಡಿರುವ ನೀತಿಗಳನ್ನು ಅನುಸರಿಸುತ್ತಿರುವುದಕ್ಕೆ ಅದಕ್ಕಿರುವ ಸ್ವಾಯತ್ತತೆಯೇ ಕಾರಣವೆಂಬುದನ್ನು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಿಗೆ ಅರ್ಥವಾಗಬೇಕು. ಏಕೆಂದರೆ ಹಣಕಾಸು ನಿರ್ವಹಣೆ ವಿಷಯದಲ್ಲಿ ಅಸ್ಥಿರತೆ ಉದ್ಭವಿಸದಂತೆ  ಸ್ಥಿರೀಕರಣವನ್ನು ಕಾದುಕೊಳ್ಳುವ ಸರ್ಕಾರದ ಆರ್ಥಿಕ ನೀತಿಯೇ ರಿಸರ್ವ್ ಬ್ಯಾಂಕಿನ ತೀರ್ಮಾನಕ್ಕೂ ಕಾರಣವಾಗಿದೆ. ಸರ್ಕಾರದ ಹಣಕಾಸು ಸ್ಥಿರೀಕರಣ ನೀತಿಯ ಹಿಂದೆ ವಿಶ್ವಬ್ಯಾಂಕು ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಗಳ ಮಾರ್ಗದರ್ಶನವಿದೆ. ಆದರೆ ನೋಟು ನಿಷೇಧ ಮತ್ತು ಇನ್ನಿತರ ಆಡಳಿತಾತ್ಮಕ ವಿಷಯಗಳಲ್ಲಿ ಸರ್ಕಾರವು  ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಯ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದಾಗ ಮಾತ್ರ ರಿಸರ್ವ್ ಬ್ಯಾಂಕು ಇದೇ ರೀತಿಯ ಸ್ವಾತಂತ್ರ್ಯವನ್ನು ಪ್ರದರ್ಶನ ಮಾಡಲಿಲ್ಲ ಎಂಬುದು ಕೂಡ ಸ್ಪಷ್ಟವಾಗಿದೆ.

ಅಷ್ಟು ಮಾತ್ರವಲ್ಲ, ಕೇಂದ್ರೀಯ ಬ್ಯಾಂಕು ಕಳೆದ ಎರಡು-ಮೂರು ದಶಕಗಳಿಂದ ಐಎಂಎಫ್ ಹಣಕಾಸು ಸ್ಥಿರೀಕರಣ ನೀತಿಗಳನ್ನು ಚಾಚೂ ತಪ್ಪದೆ ಅನುಸರಿಸುತ್ತಿದೆ ಎಂಬ ಖ್ಯಾತಿಯನ್ನು ಪಡೆದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆರ್ಬಿಐ ಮತ್ತು ಐಎಂಎಫ್ ಗಳೆರಡರ ತಾಂತ್ರಿಕ ಒಡಂಬಡಿಕೆಯ ಭಾಗವಾಗಿ ತಯಾರಾದ ಮಾರ್ಗದರ್ಶಿ ಪ್ರಬಂಧವು ಹಣದುಬ್ಬರ ನಿಯಂತ್ರಣವನ್ನು ಹೇಗೆ ಗುರಿಮಾಡುವುದು ಎಂಬ ನೀತಿಗೆ ಬೇಕಾದ ವಿಶ್ಲೇಷಣಾ ಚೌಕಟ್ಟಿನ ಸ್ಥೂಲರೂಪವನ್ನು ಒದಗಿಸುತ್ತದೆ. ಇದು ಹಿಂದೆ ಪರಿಣಿತರ ಸಮಿತಿಯೊಂದು ಶಿಫಾರಸ್ಸು ಮಾಡಿದ ಹೊಂದಾಣಿಕೆ ಮಾಡಿಕೊಳ್ಳಬಲ್ಲ ಹಣದುಬ್ಬರ ನಿಯಂತ್ರಣಾ ನೀತಿ ಯನ್ನು ನಿಖರವಾಗಿ ನಿರ್ದಿಷ್ಟೀಕರಿಸುತ್ತದೆ. ಪರಿಣಿತ ಸಮಿತಿಗೆ ಇಂದು ಆರ್ಬಿಐ ಗವರ್ನರ್ ಆಗಿರುವ ಊರ್ಜಿತ್ ಪಟೇಲ್ ಅವರೇ ಅಧ್ಯಕ್ಷರಾಗಿದ್ದರು. ಸಮಿತಿಯು ಒಂದು ವಿಶಿಷ್ಟವಾದ ಬಡ್ಡಿ ದರ ನಿರ್ವಹಣೆಯ ಪದ್ಧತಿಯ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವ ಕುರಿತು ಮಾತ್ರ ತನ್ನ ಏಕಮಾತ್ರ ಬದ್ಧತೆಯನ್ನು ಪ್ರದರ್ಶಿಸಿತ್ತು. ಅದರಂತೆ ಅದು ಗ್ರಾಹಕರ ಬೆಲೆ ಸೂಚ್ಯಂಕ (ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್- ಸಿಪಿಐ)ವನ್ನು ಆಧರಿಸಿ ಶೇ. ರಷ್ಟು ಸಾಮಾನ್ಯ ಹಣದುಬ್ಬರ ದರವನ್ನು ಕಾಯ್ದುಕೊಳ್ಳಲು ಶಿಫಾರಸ್ಸು ಮಾಡಿತು. ಶೇ.೪ರ ಹಣದುಬ್ಬರ ದರವು ಹೆಚ್ಚೆಂದರೆ ಶೇ.೨ರಷ್ಟು ಕಡಿಮೆಯಾಗುವ ಅಥವಾ ಶೇ.೨ರಷ್ಟು ಹೆಚ್ಚಾಗುವ ಸಡಿಲತೆಯನ್ನು ಮಾತ್ರ ಇಟ್ಟುಕೊಳ್ಳಬೇಕೆಂದು ಹೇಳಿತ್ತು. ೨೦೧೫ರಲ್ಲಿ ಕೇಂದ್ರ ಸರ್ಕಾರವು ಆರ್ಬಿಐ ಜೊತೆ ಹಣಕಾಸು ನೀತಿ ಚೌಕಟ್ಟು ಒಪ್ಪಂದ (ಮಾನಿಟರಿ ಪಾಲಿಸಿ ಫ್ರೇಮ್ವರ್ಕ್ ಅಗ್ರೀಮೆಂಟ್- ಎಮ್ಪಿಎಫ್) ವನ್ನು ಮಾಡಿಕೊಂಡ ನಂತರದಲ್ಲಿ ಹಣದುಬ್ಬರದ ಮಿತಿಯನ್ನು ದೇಶದ ಹಣಕಾಸು ವ್ಯವಸ್ಥೆಯ ಮೇಲೆ ಶಾಸನಾತ್ಮಕವಾಗಿಯೇ ಹೇರಿದಂತಾಗಿದೆ.
rbi logo ಗೆ ಚಿತ್ರದ ಫಲಿತಾಂಶ

ಹೀಗಾಗಿ ಹಣಕಾಸು ನೀತಿಯ ಪ್ರಾಥಮಿಕ ಉದ್ದೇಶವು ಬೆಲೆ ಸ್ಥಿರೀಕರಣವನ್ನು ಸಾಧಿಸುವುದೆಂಬುದು ಅದರೊಳಗಿನ ಅಂತರ್ಗತವಾದ ಗ್ರಹಿಕೆಯೇ ಆಗಿದೆ. ಹೀಗಾಗಿ ಇದನ್ನು ಸಾಧಿಸಲು ಆರ್ಬಿಐ ಒಂದು ಅನುಷ್ಠಾನದ ಗುರಿ ಮತ್ತು ಅನುಷ್ಠಾನದ ಪ್ರಕ್ರಿಯೆಯನ್ನು ರೂಪಿಸಬೇಕಾಗುತ್ತದಷ್ಟೆ. ಆರ್ಬಿಐ ಕಾಯಿದೆಗೆ ತಿದ್ದುಪಡಿಯನ್ನು ತಂದ ನಂತರದಲ್ಲಿ ಕೇಂದ್ರ ಸರ್ಕಾರವು ಆರ್ಬಿಐ ಜೊತೆ ಸಮಾಲೋಚನೆ ನಡೆಸಿ, ಮಾರ್ಚ್ ೨೦೨೧ರ ವರೆಗೆ ಹಣದುಬ್ಬರದ ನಿಯಂತ್ರಣದ ಗುರಿ ಏನಿರಬೇಕೆಂಬ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ. ನಿಯಂತ್ರಣವನ್ನು ಸಾಧಿಸುವಲ್ಲಿ ವಿಫಲವಾದರೆ ಆರ್ಬಿಐ ವೈಫಲ್ಯತೆಗೆ ವಿವರಣೆಗಳನ್ನು ನೀಡಬೇಕು ಮತ್ತು ಅದನ್ನು  ನಿಗದಿಯಾದ ಮಟ್ಟಕ್ಕೆ ಹಿಂತಿರುಗುವಂತೆ ಸರಿತಿದ್ದುವ ಪ್ರಕ್ರಿಯೆ ಮತ್ತು ಅದನ್ನು ಸರಿತಿದ್ದಲು ಬೇಕಾದ ಸಮಯ ಮಿತಿಯನ್ನು ಘೋಷಿಸಬೇಕಾಗುತ್ತದೆ. ಇದರ ಹಿಂದೆ ಹಣಕಾಸು ನೀತಿಯೊಂದೇ ಹಣದುಬ್ಬರವನ್ನು ನಿಯಂತ್ರಿಸಬಲ್ಲದು ಎಂಬ ತಪ್ಪು ಕಲ್ಪನೆಯಿದೆ.

ಹೀಗೆ ಹಣದುಬ್ಬರದ ನಿಯಂತ್ರಣವನ್ನು ಘೋಷಿಸಲಾದ ಮಟ್ಟದಲ್ಲಿ ಹಿಡಿದಿಡಲೇಬೇಕಾದ  ತೂಗುಕತ್ತಿಯೊಂದು ಆರ್ಬಿಐನ ತಲೆಯ ಮೇಲೆ ಸದಾ ತೂಗುತ್ತಿರುತ್ತದೆ. ವಿಪರ್ಯಾಸವೆಂದರೆ ಆರ್ಬಿಐ ಇಕ್ಕಟ್ಟನ್ನು ತಾನೇ ಸ್ವಯಂ ತಂದುಕೊಂಡಿದ್ದು. ಅದಕ್ಕೆ ಕಾರಣ ಆರ್ಥಿಕತೆಯ ಸ್ಥೂಲ ನಿರ್ವಹಣೆಯ ಬಗ್ಗೆ ಅದಕ್ಕಿರುವ ಸಂಕುಚಿತ ದೃಷ್ಟಿಕೋನ. ಹೊಂದಾಣಿಕೆ ಮಾಡಿಕೊಳ್ಳಬಲ್ಲ ಹಣದುಬ್ಬರ ನಿಯಂತ್ರಣಾ ನೀತಿಯ ಅನುಷ್ಠಾನದಲ್ಲಿ ನಮ್ಮ ದೇಶ ಪಡೆದಿರುವ ಅನುಭವಗಳ ಬಗ್ಗೆ ಪೂರ್ವ ನಿರ್ಧಾರಿತ ಮತ್ತು ಪೂರ್ವಗ್ರಹ ಪೀಡಿತ ನಿಲುವನ್ನು ಹೊಂದಲಾಗಿದೆ. ಕೆಲವೊಮ್ಮೆ ನೀತಿಯು ಸರಕುಗಳ ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರೂ ಮತ್ತೊಂದು ಕಡೆ ಉತ್ಪಾದನೆ, ಉದ್ಯೋಗಗಳ ಸೃಷ್ಟಿ, ಮತ್ತು ಸಮಾಜ ಕಲ್ಯಾಣಗಳ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ. ನಿಲುವಿಗೆ ಗ್ರಾಹಕರ ವಿವೇಚನಾಯುತ ನಿರೀಕ್ಷೆಗಳ ಸಿದ್ಧಾಂತದ (ವಿವೇಚನಾಯುತ ನಿರೀಕ್ಷೆಯ ಸಿದ್ಧಾಂತ- ರ್ಯಾಷನಲ್ ಎಕ್ಸ್ಪೆಕ್ಟೇಷನ್ ಥಿಯರಿ- ಸಿದ್ಧಾಂತದ ಪ್ರಕಾರ ಗ್ರಾಹಕರು ತಮಗಿರುವ ಮಾಹಿತಿ ಮತ್ತು ತಮ್ಮ ಹಿಂದಿನ ಅನುಭವಗಳನ್ನು ಆಧರಿಸಿ ತಮ್ಮ ಆಯ್ಕೆಗಳನ್ನು ಮಾಡಿಕೊಳ್ಳುತ್ತಾರೆ ಮತ್ತು ಇಂದಿನ ಆರ್ಥಿಕತೆಯ ನಿರೀಕ್ಷೆಗಳು ಭವಿಷ್ಯದಲ್ಲಿ ಆರ್ಥಿಕತೆಯ ಪರಿಸ್ಥಿತಿ ಹೇಗಿರುತ್ತದೆಂಬ ಜನರ ಚಿಂತನೆಗೆ ಸರಿಸಮವಾಗಿರುತ್ತದೆ.) ಬೆಂಬಲವನ್ನು ಪಡೆದುಕೊಳ್ಳಲಾಗುತ್ತಿದೆ. ಆದರೆ ಸಿದ್ಧಾಂತವನ್ನು ಅರ್ಥಶಾಸ್ತ್ರಜ್ನರು ಕೈಬಿಟ್ಟು ಸಾಕಷ್ಟು ಕಾಲವಾಗಿದೆ. ಏಕೆಂದರೆ ವ್ಯಕ್ತಿಯೊಬ್ಬರ ಗ್ರಹಿಕೆಯ ಮಿತಿಗಳು ಅವರ ಆಯ್ಕೆಯ ಸಾಮರ್ಥ್ಯದ ಮೇಲೂ ಯಾವ ರೀತಿಯ ಮಿತಿಗಳನ್ನು ಹೇರಬಲ್ಲದು ಎಂಬುದನ್ನು ಸಿದ್ಧಾಂತವು ಪರಿಗಣಿಸುವುದಿಲ್ಲ.

ಹಲವಾರು ನಿವೃತ್ತ ಆರ್ಬಿಐ ಗವರ್ನರುಗಳ ವಿರೋಧದ ನಡುವೆಯೂ ಭಾರತವು ಹೊಂದಾಣಿಕೆ ಮಾಡಿಕೊಳ್ಳಬಲ್ಲ ಹಣದುಬ್ಬರ ನಿಯಂತ್ರಣಾ ನೀತಿಯನ್ನು ಅಳವಡಿಸಿಕೊಂಡಿತು. ವಿಸ್ತೃತವಾದ ಅಭಿವೃದ್ಧಿ ಸಂಬಂಧಿತ ಸಂಗತಿಗಳನ್ನು ಪರಿಗಣಿಸದೆ ಕೇವಲ ಹಣದುಬ್ಬರವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದು ಸೂಕ್ತವಲ್ಲವೆಂದೂ, ಭಾರತದ ಹಣದುಬ್ಬರದ ವಿದ್ಯಮಾನವು ಬೇಡಿಕೆಯ ನೆಲೆಯಿಂದಲ್ಲದೆ ಸರಬರಾಜು ನೆಲೆಯಿಂದ ಆರ್ಥಾತ್ ಉತ್ಪಾದಕ ಸಂಬಂಧೀ ವಿದ್ಯಮಾನಗಳಿಂದಲೇ ಹೆಚ್ಚು ಪ್ರಭಾವಕ್ಕೊಳಗಾಗುತ್ತದೆಂದೂ ಮತ್ತು ಉತ್ಪಾದಕ ಸಂಬಂಧೀ ವಿದ್ಯಮಾನಗಳನ್ನು ಹಣಕಾಸು ನೀತಿಗಳು ನಿಯಂತ್ರಿಸಲಾರವೆಂದೂ ನೀತಿಯ ವಿರೋಧಿಗಳು ಸೂಕ್ತವಾಗಿಯೇ  ವಾದಿಸಿದ್ದರು. ಭಾರತದಲ್ಲಿ ಹಣಕಾಸು ಸಂವಹನಾ ಪ್ರಕ್ರಿಯೆಯು (ಮಾನಿಟರಿ ಟ್ರಾನ್ಸ್ಮಿಷನ್ ಮೆಕಾನಿಸಂ- ಹಣಕಾಸು ಸಂವಹನಾ ಪ್ರಕ್ರಿಯೆ- ಎಂದರೆ ಒಂದು ದೇಶದಲ್ಲಿ ಹಣಕಾಸು ನೀತಿಯ ಬದಲಾವಣೆಗಳಿಂದ ಆಸ್ತಿಪಾಸ್ತ್ತಿ ಮೌಲ್ಯಗಳನ್ನು ಒಳಗೊಂಡಂತೆ ಒಟ್ಟಾರೆ ಆರ್ಥಿಕ ವ್ಯವಸ್ಥೆಯಲ್ಲಿ ಆಗಬಹುದಾದ ಬದಲಾವಣೆಗಳ ಪ್ರಕ್ರಿಯೆ) ಹಲವಾರು ಅಡೆತಡೆಗಳನ್ನು ಎದುರಿಸುತ್ತವೆ. ಇದರ ಜೊತೆಗೆ ಭಾರತದ ಸಂಕೀರ್ಣ ಆರ್ಥಿಕ ರಚನೆಯು ಹಣಕಾಸು ನೀತಿ ಬದಲಾವಣೆಗಳ ಸಂಕೇತಗಳು ಸುಗಮವಾಗಿ ಹರಡುವುದನ್ನೂ ತಡೆಗಟ್ಟುತ್ತದೆ.

ಹಣದುಬ್ಬರದ ವಿಷಯದಲ್ಲಿ ಭಾರತದಲ್ಲಿ ಬೇಡಿಕೆಗಿಂತ ಸರಬರಾಜು ವಲಯದ ವಿದ್ಯಮಾನ ಎಷ್ಟು ಮುಖ್ಯವೆಂಬುದನ್ನು ಒಂದು ಉದಾಹರಣೆಯೊಂದಿಗೆ ಗಮನಿಸಬಹುದು. ೨೦೦೭ರ ಮಾರ್ಚ್ ಮತ್ತು ೨೦೧೭ರ ಮಾರ್ಚ್ ನಡುವಿನ ಒಂದು ದಶಕದಲ್ಲಿ ಗ್ರಾಹಕ ಸೂಚ್ಯಂಕದಲ್ಲಿ (ಸಿಪಿಐ) ಶೇ.೧೧೭ರಷ್ಟು ಏರಿಕೆಯಾಗಿದೆ. ಏರಿಕೆಯಲ್ಲಿ ಶೇ.೫೩ರಷ್ಟು ಏರಿಕೆಯಾಗಿರುವುದು ಆಹಾರ ಸೂಚ್ಯಂಕದಲ್ಲಿ. ದಶಕದಲ್ಲಿ ಆಹಾರ ಸೂಚ್ಯಂಕವು ಒಟ್ಟಾರೆಯಾಗಿ ಶೇ.೧೩೧ ರಷ್ಟು ಏರಿಕೆಯಾಗಿದ್ದರೆ ಆಹಾರೇತರ ಸೂಚ್ಯಂಕದಲ್ಲಿ ಶೇ.೧೦೪ ರಷ್ಟು ಮಾತ್ರ ಏರಿಕೆಯಾಗಿದೆ. ಆಸಕ್ತಿದಾಯಕ ಅಂಶವೆಂದರೆ ಸಗಟು ದರ ಸೂಚ್ಯಂಕ (ಹೋಲ್ಸೇಲ್ ಪ್ರೈಸ್ ಇಂಡೆಸ್ಕ್- ಡಬ್ಲ್ಯೂಪಿಐ)ದಲ್ಲೂ ಆಹಾರ ಬೆಲೆ ಸೂಚ್ಯಂಕವು ಶೇ.೧೦೮ರಷ್ಟು ಏರಿಕೆ ಕಂಡಿದ್ದರೆ ಆಹಾರೇತರವಾದ ಇನ್ನಿತರ ಎಲ್ಲಾ ಸರಕುಗಳ ಸೂಚ್ಯಂಕ ಅದರ ಅರ್ಧದಷ್ಟು ಮಾತ್ರ ಏರಿಕೆಯಾಗಿದೆ. ಆಹಾರ ಬುಟ್ಟಿಯಲ್ಲಿ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳ ಪ್ರಮಾಣ ಹಿಂದಿಗಿಂತ ಹೆಚ್ಚಿರುವುದು ವಾಸ್ತವ. ಅವುಗಳ ಬೆಲೆ ಏರಿಕೆಯು ಆಹಾರೇತರ ಸರಕುಗಳ ಬೆಲೆ ಏರಿಕೆಯಾಗಿಯೂ ಕಾಣಿಸಿಕೊಳ್ಳುತ್ತದೆ. ಮತ್ತು ಸಾರ್ವತ್ರಿಕವಾದ ಹಣದುಬ್ಬರದ ಏರಿಕೆಗೂ ಕೊಡುಗೆ ನೀಡುತ್ತದೆ. ಆದರೆ ಅದು ಸಾಧ್ಯವಾಗುವುದು ಎರಡನೇ ಹಂತದಲ್ಲಿ. ಆರ್ಥಿಕ ಸನ್ನಿವೇಶದಲ್ಲಿ ವಿಭಿನ್ನ ಬಗೆಯ ಶಕ್ತಿಗಳು ಕಾರ್ಯಾಚರಣೆ ನಡೆಸುವ ಅವಕಾಶವಿರುವಲ್ಲಿ. ಆದರೆ ಅವು ಯಾವುವೂ ನಿರ್ಭಂಧಕಾರಿ ಹಣದುಬ್ಬರ ವಿರೋಧಿ ನೀತಿಗಳನ್ನು ಅನುಸರಿಸುವ ಮೂಲಕ ಅಭಿವೃದ್ಧಿಯ ಕತ್ತು ಹಿಸುಕುವ ಕ್ರಮಗಳನ್ನು ಸಮರ್ಥಿಸುವುದಿಲ್ಲ.

ಹಣಕಾಸು ನೀತಿ ತಂತ್ರಗಳೆಂಬ ಅಂತರ್ಗತವಾಗಿಯೇ ಬಹು ಸಂಕೀರ್ಣವಾದ ಸಂಗತಿಯೊಂದನ್ನು ಹೊಂದಾಣಿಕೆ ಮಾಡಿಕೊಳ್ಳಬಲ್ಲ ಹಣದುಬ್ಬರ ನಿಯಂತ್ರಣಾ ನೀತಿಯೆಂಬ ಏಕಮಾತ್ರ ಮತ್ತು ಸರಳೀಕೃತವಾದ ಸಂಗತಿಗೆ ಮಾತ್ರ ಕುಬ್ಜಗೊಳಿಸಲಾಗದು. ಅಂಥ ಸರಳೀಕರಣವು ವಿಷಯದ ಬಗ್ಗೆ ಆಳವಾದ ತಿಳವಳಿಕೆಯಿಲ್ಲದಿರುವುದನ್ನು ಮಾತ್ರವಲ್ಲವಿದ್ಯಮಾನವನ್ನು ಪಠ್ಯಗಳಲ್ಲಿರುವ ಸೂತ್ರಗಳಂತೆ ಅರ್ಥಮಾಡಿಕೊಳ್ಳುತ್ತಿರುವುದನ್ನು ಮಾತ್ರ ಸೂಚಿಸುತ್ತದೆ. ಮತ್ತೊಂದು ಕುತೂಹಲಕಾರಿ ವಿಷಯವೆಂದರೆ, ೨೦೧೦ರಲ್ಲಿ  ಸ್ವತಃ ಆರ್ಬಿಐ ನಡೆಸಿದ ಅಧ್ಯಯನವೇ (೨೦೧೦ರ ಬುಲೆಟಿನ್) ಹೇಗೆ ಬಹು ಸೂಚ್ಯಂಕ ಪದ್ಧತಿಯು ಒಟ್ಟಾರೆ ಅಂತರಿಕ ಉತ್ಪಾದನೆಯ ಸರಿಯಾದ ಅಂದಾಜು ಮಾಡುವಲ್ಲಿ, ಹಣದುಬ್ಬರದ ನಿಯಂತ್ರಣ ಮತ್ತು ಸಗಟು ದರ ಸೂಚ್ಯಂಕದ ತೀವ್ರ ಏರುಪೇರುಗಳನ್ನು ತಡೆಗಟ್ಟುಲ್ಲಿ ಯಶಸ್ವಿಯಾದ ಪ್ರಯತ್ನವಾಗಿತ್ತೆಂದು ತಿಳಿಸುತ್ತದೆ. ಇದಕ್ಕೆ ಅಪವಾದವಾಗಿ ಉಳಿದದ್ದು ಗ್ರಾಹಕ ಸೂಚ್ಯಂಕದ ಏರುಪೇರುಗಳು ಮಾತ್ರ. ಅದೂ ಕೂಡ ಆಹಾರ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ. ಹಾಗೆ ನೋಡಿದರೆ ಇದೂ ಸಹ ಹಣದುಬ್ಬರ ನಿಯಂತ್ರಣದಲ್ಲಿ ಬೇಡಿಕೆಯ ವಲಯದ ನಿಯಂತ್ರಣ ಮಾತ್ರವಲ್ಲದೆ ಸರಬರಾಜು ವಲಯದ ನಿಯಂತ್ರಣವು ಎಷ್ಟು ಮುಖ್ಯ ಎಂಬುದನ್ನಷ್ಟೇ ಸೂಚಿಸುತ್ತದೆ.

ಭಾರತವು ಸಂಕೀರ್ಣ ಆರ್ಥಿಕ ರಚನೆಯನ್ನು ಹೊಂದಿದೆ. ಮತ್ತು ವಿಧವಿಧವಾದ ಸಾಮಾಜಿಕ, ವಿತ್ತೀಯ ಮತ್ತು ಹಣಕಾಸು ಅಗತ್ಯಗಳೂ ಭಾರತಕ್ಕಿದೆ. ಹಿಂದೆ ಅನುಸರಿಸುತ್ತಿದ್ದ ಬಹುಸೂಚ್ಯಂಕ ಪದ್ಧತಿಯಲ್ಲಿ ವಿವಿಧ ಹಣಕಾಸು ಮತ್ತು ಇನ್ನಿತರ ಕ್ಷೇತ್ರಗಳ ಏರುಪೇರುಗಳು ಪ್ರತಿಫಲಿತವಾಗುತ್ತವೆ. ಆದ್ದರಿಂದ ಹಣಕಾಸು ನೀತಿಯನ್ನು ನಿರ್ಧರಿಸುವಲ್ಲಿ ಬಹುಪಕ್ಷೀಯ ಸೂಚ್ಯಂಕ ನೀತಿಯನ್ನು ಅನುಸರಿಸುವುದು ಅತ್ಯಂತ ಸೂಕ್ತವಾಗಿದೆ.
  
ಕೃಪೆ: Economic and Political Weekly
         June 17, 2017. Vol. 52. No. 24


               
ಕಾಮೆಂಟ್‌ಗಳಿಲ್ಲ: