ಸೋಮವಾರ, ಜುಲೈ 31, 2017

ಪ್ರವಾಹ ನಿರ್ವಹಣೆಯ ಅವೈಜ್ಞಾನಿಕತೆ


ಅನು: ಶಿವಸುಂದರ್
ಪ್ರವಾಹ ಗೆ ಚಿತ್ರದ ಫಲಿತಾಂಶ
ಪದೇಪದೇ ಪ್ರವಾಹಕ್ಕೀಡಾಗುವ ಪ್ರದೇಶಗಳಲ್ಲಿನ ಪ್ರವಾಹ ನಿರ್ವಹಣಾ ವ್ಯವಸ್ಥೆಯು ಕೇವಲ ವಿಕೋಪದ ಸಂದರ್ಭದ ನಿರ್ವಹಣೆಗೆ ಮಾತ್ರ ಸೀಮಿತವಾಗಬಾರದು.

ಪ್ರಹಾವವೆಂಬುದು ಪ್ರತಿವರ್ಷ ಸಹಜವಾಗಿ ಸಂಭವಿಸುವ ನೈಸರ್ಗಿಕ ವಿದ್ಯಮಾನವೆಂಬುದು ನಿಜ. ಆದರೆ ಅಸ್ಸಾಮಿನ ಬ್ರಹ್ಮಪುತ್ರಾ ನದಿಯಲ್ಲಿ ಪ್ರತಿವರ್ಷ ಸಂಭವಿಸುವ ಪ್ರವಾಹದ ಬಗ್ಗೆ ಸರ್ಕಾರ ತೋರಿಸುವ ಪ್ರತಿಸ್ಪಂದನೆ ಮಾತ್ರ ಖಂಡಿತಾ ಸಹಜವಲ್ಲ. ಅಧಿಕೃತ  ಅಂಕಿಅಂಶಗಳ ಪ್ರಕಾರವೇ ಹೇಳುವಂತೆ ವರ್ಷ ಪ್ರವಾಹಕ್ಕೆ ಸಿಲುಕಿ ೭೨ ಜನ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ೧೨ ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಅಸ್ಸಾಂ ರಾಜ್ಯದ ನೈಸರ್ಗಿಕ ಪ್ರಕೋಪ ನಿರ್ವಹಣಾ ಪ್ರಾಧಿಕಾರವು ಜುಲೈ ೧೦ರಂದು ನೀಡಿರುವ ವರದಿಯ ಪ್ರಕಾರ ೨೦ ಜಿಲ್ಲೆಗಳ ೨೦೫೩ ಹಳ್ಳಿಗಳ ಅಂದಾಜು ಒಂದು ಲಕ್ಷ ಹೆಕ್ಟೇರ್ ಕೃಷಿಭೂಮಿಯು ಜಲಾವೃತವಾಗಿವೆ. ಮಾನವ ಮಧ್ಯಪ್ರವೇಶಗಳ ಕಾರಣದಿಂದಾಗಿ ಒಂದು ಪ್ರಕೃತಿ ವಿಕೋಪವು ಉಂಟುಮಾಡುತ್ತಿರುವ ಅನಾಹುತಗಳ ಪ್ರಮಾಣವನ್ನು ನೋಡಿದಾಗ ಈಗಲಾದರೂ ನಮ್ಮ ಗಮನವನ್ನು ಪ್ರವಾಹ ರಕ್ಷಣೆಯ ಕ್ರಮಗಳಿಂದ ಪ್ರವಾಹ ನಿರ್ವಹಣೆಯ ಕ್ರಮಗಳತ್ತ ಹರಿಸಬೇಕಿದೆಯೆಂಬುದು ಅರಿವಾಗುತ್ತದೆ.

 ಅಸ್ಸಾಂನಲ್ಲಿ, ವಿಷಯಕ್ಕೆ  ಬಂದರೆ ಬಿಹಾರದಲ್ಲಿ ಕೂಡಾ, ಸಂಭವಿಸುವ ಪ್ರವಾಹವು ಇದೀಗ ರಾಜಸ್ಥಾನ ಮತ್ತು ಗುಜರಾತುಗಳಲ್ಲಿ ಸಂಭವಿಸುತ್ತಿರುವ ಪ್ರವಾಹಕ್ಕಿಂತ ಸಂಪೂರ್ಣ ಭಿನ್ನವಾದ ಸ್ವರೂಪವನ್ನು ಹೊಂದಿದೆ. ರಾಜಸ್ಥಾನ ಮತ್ತು ಗುಜರಾತುಗಳಲ್ಲಿ ತೀವ್ರವಾದ ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಪ್ರವಾಹವು ಸಂಭವಿಸಿದೆ. ಅಲ್ಲಿ ಪ್ರಾಮಾಣಿಕವಾದ ಸುರಕ್ಷಾ ಮತ್ತು ಪರಿಹಾರ ಕ್ರಮಗಳು ಅತ್ಯಗತ್ಯವಾಗಿವೆ. ಆದರೆ ಅಸ್ಸಾಂ ಮತ್ತು ಬಿಹಾರಗಳಲ್ಲಿ ಪರಿಸ್ಥಿತಿಯ ನಿರ್ವಹಣೆಗೆ ವ್ಯವಸ್ಥಿತ ರಚನಾತ್ಮಕ ಮಧ್ಯಪ್ರವೇಶ, ಸಾಂಸ್ಥಿಕ ಸುಧಾರಣೆಗಳು ಮತ್ತು ನದಿ ತೀರದ ಜನತೆಯಲ್ಲಿ ಪ್ರವಾಹವನ್ನೆದುರಿಸಲು ಬೇಕಾದ ಸ್ಥೈರ್ಯವನ್ನು ಬೆಳೆಸಲು ಬೇಕಾದ ಸಮಗ್ರವಾದ ಕ್ರಮ, ಇತ್ಯಾದಿಗಳ ಅಗತ್ಯವಿದೆ. ಉತ್ತರಪ್ರದೇಶದ ಮಹಾರಾಜಗಂಜ್ನಿಂದ ಹಿಡಿದು ಅಸ್ಸಾಮಿನ ಬರಾಕ್ ಕಣಿವೆಯ ಕರೀಂಗಂಜ್ ನವರೆಗೆ ಹರಡಿಕೊಂಡಿರುವ ವಿಶಾಲ ಮೆಕ್ಕಲು ಮಣ್ಣಿನ ಬಯಲುಪ್ರದೇಶದವು ಪದೇಪದೇ ಹಲವಾರು ಬಗೆಯ ಜಲಗಂಡಗಳಿಗೆ ಗುರಿಯಾಗುತ್ತಾ ಬಂದಿವೆ. ಉತ್ತರಪ್ರದೇಶ, ಬಿಹಾರ, .ಬಂಗಾಳ ಮತ್ತು ಅಸ್ಸಾಮ್ ರಾಜ್ಯಗಳಲ್ಲಿ ಹರಡಿಕೊಂಡಿರುವ ಪ್ರದೇಶವು ಅತ್ಯಧಿಕ ಜನಸಾಂದ್ರತೆಯಿಂದಲೂ ಕೂಡಿದೆ. ಪ್ರದೇಶದ ಒಟ್ಟಾರೆ ವಿಸ್ತೀರ್ಣ ದೇಶದ ಒಟ್ಟಾರೆ ಭೌಗೋಳಿಕ ವಿಸ್ತೀರ್ಣದ  ಕೇವಲ ಶೇ.೧೭ರಷ್ಟು ಮಾತ್ರವಾಗುತ್ತದೆ. ಆದರೆ  ದೇಶದ ಪ್ರವಾಹ ಪೀಡಿತ ಪ್ರದೇಶಗಳ ಒಟ್ಟು ವಿಸ್ತೀರ್ಣದ ಶೇ.೪೩-೫೨ರಷ್ಟು ಭೂಭಾಗ ಪ್ರದೇಶವೊಂದರಲ್ಲೇ  ಇದೆ.

ಪ್ರವಾಹಗಳು ಒಂದು ನೈಸರ್ಗಿಕ ವಿದ್ಯಮಾನವೇ ಆಗಿದ್ದರೂ ನೈಸರ್ಗಿಕ ವಿದ್ಯಮಾನಗಳಲ್ಲಿ ಮಾನವರ ಮಧ್ಯಪ್ರವೇಶವೂ ಸಹ ಪ್ರವಾಹಗಳಿಗೆ ಒಂದು ಪ್ರಮುಖ ಕಾರಣವಾಗಿದೆಗಂಗಾ ಮತ್ತು ಬ್ರಹ್ಮಪುತ್ರಾ ನದಿಗಳ ಬಹುಪಾಲು ಉಪನದಿಗಳ ಜಲಾನಯನ ಪ್ರದೇಶವಾಗಿರುವ ಹಿಮಾಲಯ ಪರ್ವತಗಳ ತಪ್ಪಲಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ನಂತರದ ಅವುಗಳ ಹರಿವಿನಲ್ಲಿ ದಿಢೀರ್ ಪ್ರಪಾತಗಳು ತಗ್ಗು ಪ್ರದೇಶಗಳು ಸಿಗುವುದರಿಂದ ನದಿಯು ಧುಮ್ಮಿಕ್ಕುತ್ತದೆ. ಹೀಗಾಗಿ ಪೂರ್ವ ಹಿಮಾಲಯದಿಂದ ಪ್ರವಾಹಸಿಕ್ತ ಬಯಲುಪ್ರದೇಶಗಳೆಡೆ ಹರಿಯುವ ಇವುಗಳ ನದೀಪಾತ್ರದಲ್ಲಿ ದೊಡ್ಡ ಪ್ರಮಾಣದ ನೀರು ರಭಸದಿಂದ ಹರಿಯುವುದು ಸಹಜವೇ ಆಗಿದೆ. ಇದು ನದೀಪಾತ್ರದ ಜಲಧಾರಣಾ ಸಾಮರ್ಥ್ಯಕ್ಕಿಂತ ಅಧಿಕವಾಗಿದ್ದು ಅವು ಅಕ್ಕಪಕ್ಕದ ಪ್ರದೇಶಗಳಿಗೆ ಚಿಮ್ಮಿಕೊಳ್ಳುತ್ತವೆ. ಆದರೆ ಪೂರ್ವ ಹಿಮಾಲಯ ಪ್ರದೇಶಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಾಡು ಕಡಿತದಿಂದಾಗಿ ನದಿ ಹರಿವಿನಲ್ಲಿ ದೊಡ್ಡ ಪ್ರಮಾಣದ ಮೇಲ್ಮಣ್ಣು ಸಹ ಸೇರಿಕೊಳ್ಳುತ್ತಿದೆ. ಹಾಗೂ ನದಿಯು ಬಯಲು ಪ್ರದೇಶವನ್ನು ಸೇರಿಕೊಳ್ಳುವ ಹೊತ್ತಿಗೆ ಟನ್ಗಟ್ಟಲೇ ಮೇಲ್ಮಣ್ಣು ನದಿಬಯಲಿನಲ್ಲಿ ಹೂಳಾಗಿ ಸೇರಿಕೊಳ್ಳುತ್ತಿದೆ. ಇದು ನದಿಪಾತ್ರದ ಜಲಧಾರಣಾ ಸಾಮರ್ಥ್ಯವನ್ನು ಮತ್ತಷ್ಟು ಕಡಿತಗೊಳಿಸಿ ಪ್ರವಾಹದ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನದೇ ಹರಿವಿನ ಮೇಲ್ ಪ್ರದೇಶಗಳಲ್ಲಿ, ಅದರಲ್ಲೂ ಹೆಚ್ಚಾಗಿ ಅರುಣಾಚಲ್ ಪ್ರದೇಶದಲ್ಲಿ, ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸುವ ಪ್ರಸ್ತಾಪ ಪ್ರಕ್ರಿಯೆಯನ್ನು ಮತ್ತಷ್ಟು ಬಿಗಡಾಯಿಸುವ ಸಂಭವವು ಹೆಚ್ಚಾಗಿದೆ.

ನದಿಪಾತ್ರಕ್ಕೆ ತಡೆ ಒಡ್ಡುಗಳನ್ನು ಕಟ್ಟುವುದು ಪ್ರವಾವದಿಂದ ರಕ್ಷಿಸಿಕೊಳ್ಳಲು ಲಾಗಾಯ್ತಿನಿಂದ ಅನುಸರಿಸಿಕೊಂಡು ಬರುತ್ತಿರುವ ದೊಡ್ಡ ಸುರಕ್ಷಾ ಕ್ರಮವಾಗಿದೆ. ಅವು ನೀರಾವರಿ ಆಡಳಿತ ನಿರ್ವಹಣೆಯಲ್ಲಿ ಕಾಲುವೆಗಳಿದ್ದ ಹಾಗೆ.; ಎರಡೂ ಸಹ ದುಬಾರಿ ವೆಚ್ಚದ ವ್ಯವಸ್ಥಾಗತ ಮಧ್ಯಪ್ರವೇಶವಾಗಿದ್ದು ಒಂದು ಅಚ್ಚುಕಟ್ಟ್ಟು ಪ್ರದೇಶಗಳಿಗೆ ನೀರನ್ನು ಹಾಯಿಸಿದರೆ ಮತ್ತೊಂದು ಪ್ರವಾಹದ ನೀರನ್ನು ನಿಯಂತ್ರಿಸುತ್ತದೆ. ಎರಡೂ ಸಹ ತಮ್ಮ ಸಾಂಪೂರ್ಣ ಸಾಮರ್ಥ್ಯವನ್ನು ಬಳಕೆ ತರುವಲ್ಲಿ ವಿಫಲವಾಗಿವೆ. ಕಾಲುವೆ ನಿರ್ವಹಣೆಯ ಬಗ್ಗೆ ಅಪಾರವಾದ ಸಂಶೋಧನಾ ಸಾಹಿತ್ಯವು ಲಭ್ಯವಿದೆ. ಆದರೆ ಪ್ರಾವಾಹ ನಿಯಂತ್ರಣಕ್ಕೆಂದು ಕಟ್ಟುವ ಒಡ್ಡುಗಳ ಅಧ್ಯಯನವೇಕೋ ಹೆಚ್ಚು ಸಂಶೋಧನೆಗೆ ಒಳಗಾಗಿಲ್ಲ. ಒಡ್ಡುಗಳನ್ನು ವಸತಿ ಪ್ರದೇಶಗಳ ಸುರಕ್ಷತೆಗೆಂದು ನಿರ್ಮಿಸಲಾಗುತ್ತದೆ. ಆದ್ದರಿಂದ ಒಡ್ಡುಗಳನ್ನು ಹೆಚ್ಚಾಗಿ ಹೊಸ ವಸತಿಪ್ರದೇಶಗಳಲ್ಲಿ ಕಟ್ಟಲಾಗುತ್ತಿತ್ತು. ಆದರೆ ಇಂಥಾ ಒಡ್ಡುಗಳ ನಿರ್ಮಾಣಗಳ ದೊಡ್ಡ ಇತಿಹಾಸವನ್ನೇ ಹೊಂದಿರುವ ಉತ್ತರ ಬಿಹಾರ ಮತ್ತು ಅಸ್ಸಾಮಿನ ಕಥೆ ಇಷ್ಟು ಸರಳವಾಗಿಲ್ಲ. ಬಹುದೊಡ್ಡ ಸಂಖ್ಯೆಯ ಜನರು ಒಡ್ಡುಗಳ ಒಳಭಾಗದಲ್ಲಿ ಅಂದರೆ ಅಸುರಕ್ಷಿತ ಪ್ರದೇಶದಲ್ಲಿ ಪ್ರವಾಹದ ಭೀತಿಯಲ್ಲೇ ಬದುಕುತ್ತಾರೆ. ದುರದೃಷ್ಟಕರ ವಿಷಯವೆಂದರೆ ಒಡ್ಡುಗಳ ರಕ್ಷಣೆಯಲ್ಲಿ ಬದುಕುವ ಜನರೂ ಸಹ ಯಾವಾಗ ಒಡ್ಡುಗಳು ಒಡೆದುಹೋಗುತ್ತವೋ ಎಂಬ ಭೀತಿಯಲ್ಲೇ ಬದುಕುತ್ತಾರೆ. ಭೀತಿಯು ಕೂಡಾ ಸಕಾರಣವಾದದ್ದೇ ಆಗಿದೆ. ಒಡ್ಡುಗಳು ಒಡೆದುಹೋದದ್ದರಿಂದಲೇ ವರ್ಷದ ಅಸ್ಸಾಮ್ ಪ್ರವಾಹವೂ ಮತ್ತು ೨೦೦೮ರ ಬಿಹಾರದ ಕೋಸಿ ಪ್ರವಾಹಗಳು ಸಂಭವಿಸಿದೆ. ಇದರಜೊತೆಗೆ ಒಡ್ಡುಪ್ರದೇಶದ ಒಳಗೆ ವಾಸಿಸುವವರು ದಿಢೀರ್ ಪ್ರವಾಹ ಮತ್ತು ಸೈಲಾಬ್ ಪ್ರವಾಹದ ಅಪಾಯಗಳಿಗೂ ಸಿಲುಕಿಕೊಳ್ಳುತ್ತಾರೆ. ಸೈಲಾಬ್ ಪ್ರವಾಹವು ಕ್ರಮೇಣವಾಗಿ ನದಿ ಪಾತ್ರದಲ್ಲಿ ನೀರು ಹೆಚ್ಚಾಗುತ್ತಾ ಹೋಗುವುದರಿಂದ ಸಂಭವಿಸಿದರೆ ದಿಢೀರ್ ಪ್ರವಾಹವು ಇದ್ದಕ್ಕಿದ್ದಂತೆ ದೊಡ್ಡ ಪ್ರಮಾಣದ ನೀರನ್ನು ಅಣೆಕಟ್ಟಿನಿಂದ ನದಿಪಾತ್ರಕ್ಕೆ ಬಿಡುವುದರಿಂದ ಸಂಭವಿಸುತ್ತದೆ. ೨೦೧೩ರಲ್ಲಿ ಕಾರಣದಿಂದಾಗಿಯೇ ಉತ್ತರ್ಖಂಡ್ನಲ್ಲಿ ಪ್ರವಾಹವು ಸಂಭವಿಸಿತ್ತು.

ಸರ್ಕಾರವು ಅಣೆಕಟ್ಟು ನಿರ್ಮಾಣ, ಹೂಳೆತ್ತುವಿಕೆ ಮತ್ತು ಭೂಸವೆತವನ್ನು ತಡೆಗಟ್ಟುವ ಕಟ್ಟೋಣಗಳಂಥ ಬೃಹತ್ ಯೋಜನೆಗಳ ಮೂಲಕ ಮಾತ್ರ ಮಧ್ಯಪ್ರವೇಶ ಮಾಡುತ್ತದೆ. ಆದರೆ ದೊಡ್ಡ ಅಣೆಕಟ್ಟುಗಳಲ್ಲಿ ಅದರಲ್ಲೂ ಪೂರ್ವ ಹಿಮಾಲಯದ ಬಯಲು ಪ್ರದೇಶಗಳ ಅಣೆಕಟ್ಟುಗಳಲ್ಲಿ ಬಹಳ ಬೇಗನೇ ಹೂಳು ತುಂಬಿಕೊಳ್ಳುತ್ತದೆಂದು ವಾಸ್ತವ ಅನುಭವಗಳು ಹೇಳುತ್ತವೆ. ಅಣೆಕಟ್ಟನ್ನು ಉಳಿಸಬೇಕೆಂದರೆ ನೀರನ್ನು ಕೆಳಪ್ರದೇಶಗಳಿಗೆ ಹರಿಸಲೇಬೇಕು. ಇದು ಪ್ರವಾಹದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ವಿದ್ಯಮಾನವೇ ಕೆಳ ಮತ್ತು ಮೇಲ್ ಅಸ್ಸಾಮಿನ ಜಿಲ್ಲೆಗಳಲ್ಲಿ ವರ್ಷಂಪ್ರತಿಯೂ ಸಂಭವಿಸುತ್ತಾ ಬಂದಿದೆ. ಭೂಸವೆತವನ್ನು ತಡೆಗಟ್ಟಲು ಕಟ್ಟುತ್ತಿದ್ದ ಬಿದಿರುಮುಳ್ಳಿನ ಒಡ್ಡುಗಳು ಕಳಪೆ ಗುಣಮಟ್ಟದ್ದೇ ಆಗಿರುತ್ತಿದ್ದು ಪ್ರವಾದೊಡನೆ ಕೊಚ್ಚಿಹೋಗುತ್ತಿವೆ.
ಹೀಗಾಗಿ ಪ್ರವಾಹ ನಿಯಂತ್ರಣದ ಬಗ್ಗೆ ನಮ್ಮ ಗ್ರಹಿಕೆಯಲ್ಲೇ ಕೆಲವು ಮೂಲಭೂತ ಬದಲಾವಣೆಗಳು ಬರಬೇಕಿದೆ. ಪ್ರವಾಹವನ್ನು ಒಂದು ನಿಸರ್ಗ ಸಹಜ ವಿದ್ಯಮಾನವೆಂದು ಪರಿಗಣಿಸಿ ನಮ್ಮ ಮಧ್ಯಪ್ರವೇಶದ ಗಮನವನ್ನು ಪ್ರವಾಹ ಸುರಕ್ಷತೆಯಿಂದ ಪ್ರವಾಹ ನಿರ್ವಹಣೆ (ಗವರ್ನೆನ್ಸ್) ಕಡೆಗೆ ಬದಲಿಸಬೇಕಿದೆ. ಪ್ರವಾಹ ಸುರಕ್ಷೆಯ ಕ್ರಮಗಳು ಮೇಲೆ ಹೇಳಲಾದ ಕೆಲವು ದೊಡ್ಡ ಯೋಜನೆಗಳಲ್ಲಿ ಹುಟ್ಟಿ ಅಲ್ಲಿಯೇ ಕೊನೆಗೊಳ್ಳುತ್ತವೆ. ಇದರ ಜೊತೆಗೆ ಒಂದಷ್ಟು ಪರಿಹಾರದ ಕ್ರಮಗಳೂ ಸೇರಿಕೊಂಡಿರುತ್ತವೆ. ಆದರೆ ಪ್ರವಾಹ ನಿರ್ವಹಣೆಯು ವಿವಿಧ ಹಂತಗಳಲ್ಲಿ ತೆಗೆದುಕೊಳ್ಳಬೇಕಾದ  ಸೃಜನಶೀಲ ಮುಂದೊಡಗುಗಳ ಒಟ್ಟುಮೊತ್ತವಾಗಬೇಕಿದೆ. ಒಂದು ಹಂತದಲ್ಲಿ, ಪರಿಸರದ ದೃಷ್ಟಿಯಿಂದ ಸೂಕ್ಷವಾಗಿರುವ ಪೂರ್ವ ಹಿಮಾಲಯದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಎಲ್ಲಾ ಅಭಿವೃದ್ಧಿ ಯೋಜನೆಗಳ ವ್ಯೂಹಾತ್ಮಕ ಪರಿಸರ ಮೌಲ್ಯಮಾಪನ ಮಾಡಬೇಕುನದಿ ಬಯಲು ಪ್ರದೇಶದ ನಿರ್ವಹಣೆ  ಪರಿಸರ ಸಂವೇದಿಯಾಗಿರಬೇಕು. ದೃಷ್ಟಿಯಲ್ಲಿ  ಕೆಲವು ಮೂಲಭೂತವಾದ ರಚನಾತ್ಮಕ ಮಧ್ಯಪ್ರವೇಶಗಳನ್ನು ಮಾಡಬೇಕಾಗಬಹುದು. ಮತ್ತೊಂದು ಕಡೆ ಸಾಂಸ್ಥಿಕ ಹಂತದಲ್ಲಿ ನಿರ್ಜೀವಗೊಂಡಿರುವ ಅಸ್ಸಾಮಿನ ಬ್ರಹ್ಮಪುತ್ರಾ ನಿಗಮಕ್ಕೆ ಮತ್ತೆ ಜೀವ ಕೊಟ್ಟು ಅಗತ್ಯವಿರುವಷ್ಟು ವಿವಿಧ ಶಿಸ್ತುಗಳ ವಿಜ್ನಾನಿಗಳನ್ನು ಒದಗಿಸುವ ಅಗತ್ಯವಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಹಲವಾರು ಪರಸ್ಪರ ಪೂರಕವಾದ ಮಧ್ಯಪ್ರವೇಶಗಳ ಮೂಲಕ ನದಿ ಬಯಲಿನಲ್ಲಿ ವಾಸಮಾಡುತ್ತಿರುವ ಜನತೆಯ ಸ್ಥೈರ್ಯವನ್ನು ಹೆಚ್ಚಿಸುವಂಥ ಸಮಗ್ರ ಕ್ರಮಗಳ ಕಡೆಗೆ ನಮ್ಮ ಗಮನವುಬದಲಾಗಬೇಕಿದೆ. ಅಂಥಾ ಕ್ರಮಗಳು ಮೂರು ಮುಖ್ಯ ತಳಹದಿಗಳನ್ನು ಹೊಂದಿರಬೇಕು: ಜನತೆಯ ಅತಂತ್ರತೆಯನ್ನು ಕಡಿಮೆ ಮಾಡುವುದು;ಸಾಮಾನ್ಯವಾಗಿ ಪ್ರವಾಹ ಪೀಡಿತ ಜನಸಮುದಾಯಗಳಿಗೆ ದೊರೆಯದ ಅಭಿವೃದ್ಧಿ ಸೇವೆಗಳನ್ನು ಹೆಚ್ಚೆಚ್ಚು ದೊರೆಯುವಂತೆ ಮಾಡುವುದು ಮತ್ತು ಜನತೆಯ ಸಂಪನ್ಮೂಲಗಳು ಅತ್ಯಧಿಕವಾಗಿ ಬಳಕೆಯಾಗುವಂಥ ಪರಿಸ್ಥಿತಿಯನ್ನು ಸೃಷ್ಟಿಸುವುದು

       ಕೃಪೆ: Economic and Political Weekly
               July 29, 2017. Vol. 52. No. 30

                                                                                              




ಕಾಮೆಂಟ್‌ಗಳಿಲ್ಲ: