ಯೋಗೀಶ ಪಿ.
ಸರ್ಕಾರ ಪದವಿ ಕಾಲೇಜು ಅಧ್ಯಾಪಕರ ಹುದ್ದೆಗಳ ಭರ್ತಿಗೆ ಅಧಿ ಸೂಚನೆ ಹೊರಡಿಸಿ, ಪ್ರವೇಶ ಪರೀಕ್ಷೆಯ ಮೂಲಕ ನೇಮಕ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸಿದೆ. ಅದರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಸ್ವೀಕರಿಸಿ, ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮ ನಿಗದಿ ಪಡಿಸಿದೆ. ಈ ಹಿಂದೆ ೨೦೦೯ರಲ್ಲಿ ನಡೆದ ನೇಮಕ ಪ್ರಕ್ರಿಯೆಯಲ್ಲಿ ನಡೆದ ಭ್ರಷ್ಟಾಚಾರವನ್ನು ಮಾಧ್ಯಮಗಳು ಬಯಲಿಗೆಳೆದು, ಅದರ ವಿರುದ್ಧ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಈ ಬಾರಿ ಪ್ರವೇಶ ಪರೀಕ್ಷೆಯ ಮೂಲಕ ನಿಷ್ಪಕ್ಷಪಾತವಾಗಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ನಿರ್ಧರಿಸಿ, ಹೊರಡಿಸಿದ ಅಧಿಸೂಚನೆ ಎಲ್ಲರಲ್ಲು ಆಶಾಭಾವನೆ ಮೂಡಿಸಿದೆ. ’ಲಂಚವಿಲ್ಲದೆ ಸರ್ಕಾರಿ ನೌಕರಿಯಿಲ್ಲ’ ಎಂಬ ದುಃಸ್ಥಿತಿ ಯನ್ನು ದೂರಮಾಡಿದ ಸರ್ಕಾರ ನೇಮಕ ಪ್ರಕ್ರಿಯೆಯನ್ನು ಕೆ.ಪಿ. ಎಸ್.ಸಿ.ಗೆ ನೀಡದೆ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸುವ ಮೂಲಕ ಭ್ರಷ್ಟಾ ಚಾರ ಮುಕ್ತ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿ ದಿಟ್ಟಹೆಜ್ಜೆಯಿಟ್ಟಿದೆ.
ಆದರೆ ಹತ್ತಾರು ವರ್ಷಗಳಿಂದ ಸರ್ಕಾರಿ ಉದ್ಯೋಗದ ಅಪೇಕ್ಷೆ ಯೊಂದಿಗೆ ಕಾದುಕುಳಿತಿದ್ದ ಉದ್ಯೋಗಾಕಾಂಕ್ಷಿಗಳಿಗೆ ಈ ಬಾರಿಯ ಸರ್ಕಾರಿ ಪದವಿ ಕಾಲೇಜುಗಳ ಅಧ್ಯಾಪಕ ಹುದ್ದೆಯನ್ನು ಭರ್ತಿ ಮಾಡುವ ಪ್ರಕ್ರಿಯೆಯ ನಿಯಮಾವಳಿಗಳು ಮತ್ತು ಪರೀಕ್ಷೆಗಳು ನಿದ್ದೆ ಕೆಡಿಸಿವೆ. ಏಕೆಂದರೆ ಪರೀಕ್ಷಾ ಪ್ರಾಧಿಕಾರವು ಫೆಬ್ರವರಿಯಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಎನ್.ಇ.ಟಿ/ಎಸ್.ಎಲ್.ಇ.ಟಿ/ ಪಿಎಚ್.ಡಿ (ಕೋರ್ಸ್‌ವರ್ಕ್ ಸಹಿತ) ಪಡೆದವರಿಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ.
ಇದರಿಂದ ಯುಜಿಸಿ ನಿಯಮಾವಳಿಯಲ್ಲಿ ಕೋರ್ಸ್‌ವರ್ಕ್ ಇಲ್ಲದಿ ದ್ದಾಗ ಪಿಎಚ್.ಡಿ., ಮಾಡಿದ ಬಹುತೇಕರಿಗೆ ಅರ್ಜಿ ಸಲ್ಲಿಸುವ ಅರ್ಹ ತೆಯೇ ಇಲ್ಲದಂತಾಗಿದೆ. ಅದಕ್ಕೆ ಸಂಬಂಧಿಸಿದಂತೆ ಕೋರ್ಸ್‌ವರ್ಕ್ ಇಲ್ಲದೆ ಪಿಎಚ್.ಡಿ., ಪಡೆದವರು ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ. ಅದನ್ನು ಪರೀಕ್ಷಾ ಪ್ರಾಧಿಕಾರ ಪರಿಗಣಿಸದೆ ಇದ್ದಾಗ ಏನಾದರೂ ಆಗಲೆಂದು ಅರ್ಜಿ ಸಲ್ಲಿಸಿ ಹೋರಾಟ ನಡೆಸಿದ್ದಾರೆ. ಈ ನಡುವೆ ಅತಿಥಿ ಉಪ ನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದವರು ತಮ್ಮನ್ನು ಖಾಯಂಗೊ ಳಿಸುವಂತೆ ಅಥವಾ ಅಧಿಸೂಚನೆಯಲ್ಲಿ ತಮಗೆ ಮೀಸಲಾತಿ ಒದಗಿ ಸುವಂತೆ ಮನವಿ ಮಾಡಿದ್ದಾರೆ.
ಈ ನೇಮಕದಲ್ಲಿ ಎಂ.ಫಿಲ್., ಪದವಿ ಪಡೆದವರಿಗೆ ಅರ್ಜಿ ಸಲ್ಲಿಸುವ ಅವಕಾಶ ಇಲ್ಲದಿದ್ದರೂ ೨೦೦೯ರ ಹಿಂದೆ ಎಂ.ಫಿಲ್., ಪಡೆದಿರುವ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿ ಅರ್ಜಿ ಸಲ್ಲಿಸುವ ಅವಕಾಶ ಸಂಪಾದಿಸಿದ್ದಾರೆ. ಒಟ್ಟಾರೆ ಅರ್ಜಿ ಸಲ್ಲಿಸುವುದಕ್ಕೇ ಹಲವು ಹೋರಾ ಟಗಳನ್ನು ಮಾಡಬೇಕಾದ ಸ್ಥಿತಿ ಉಂಟಾಗಿರುವುದು ಶೋಚನೀಯ.
ಅರ್ಜಿ ಸಲ್ಲಿಸುವುದಕ್ಕೆ ನಾನಾ ಸಮಸ್ಯೆಗಳನ್ನು ಅನುಭವಿಸಿದ ಅಭ್ಯ ರ್ಥಿಗಳಿಗೆ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಯ ಸ್ವರೂಪವನ್ನು ಬದಲಾ ಯಿಸುವ ಮೂಲಕ ಪೆಡಂಭೂತವಾಗಿ ಕಾಡುತ್ತಿದೆ. ಈ ಹಿಂದೆ ಪರೀಕ್ಷಾ ಪ್ರಾಧಿಕಾರ ಪದವಿಪೂರ್ವ ಉಪನ್ಯಾಸಕರ ನೇಮಕ ಪ್ರಕ್ರಿಯೆಯ ಪ್ರವೇಶ ಪರೀಕ್ಷೆ ಮತ್ತು ಪಠ್ಯಕ್ರಮ ನಿಗದಿಯಲ್ಲಿ ಅಚ್ಚುಕಟ್ಟುತನ ತೋರಿತ್ತು. ಆದರೆ ಈಗ ಪರೀಕ್ಷಾ ಪ್ರಾಧಿಕಾರ ಪರೀಕ್ಷಾ ಪದ್ಧತಿಯಲ್ಲಿ ಹೊಸತನ ಹುಡುಕುತ್ತಾ ಹೊಸಪ್ರಯೋಗಗಳಿಂದ ಅಭ್ಯರ್ಥಿಗಳನ್ನು ಗೊಂದಲಕ್ಕೀಡುಮಾಡಿ, ಬಲಿ ಪಶು ಮಾಡಲು ಹೊರಟಿದೆ.
ಈ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಐಚ್ಛಿಕ ವಿಷಯ ಜ್ಞಾನವನ್ನು ಪರೀಕ್ಷಿಸುವುದಕ್ಕಿಂತ ಅವರ ಭಾಷಾಜ್ಞಾನಗಳನ್ನು ಮತ್ತು ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಲು ಹೆಚ್ಚಿನ ಮಹತ್ವ ನೀಡಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಧಾನ್ಯ ನೀಡಲು ಸಾಮಾನ್ಯ ಕನ್ನಡ ಪತ್ರಿಕೆಯನ್ನು ಎಲ್ಲ ಅಭ್ಯರ್ಥಿಗಳಿಗೂ ಅನ್ವಯಿಸಿರುವುದು ಸ್ವಾಗತಾರ್ಹ. ಅದರ ಜತೆಗೆ ಆಂಗ್ಲ ಭಾಷೆಯನ್ನು ಒಂದು ಪತ್ರಿಕೆಯಾಗಿ ಅನ್ವಯಿಸಿ ಕಡ್ಡಾಯಗೊಳಿಸಿರುವುದು ಸಮರ್ಪಕವಾಗಿದೆ. ಆದರೆ ಮೊದಲ ಭಾಷೆಯಾಗಿ ಆಂಗ್ಲಭಾಷೆ ಓದಿ ಲ್ಲದ ಅಭ್ಯರ್ಥಿಗಳಿಗೆ ಉನ್ನತಮಟ್ಟದ ಆಂಗ್ಲ ಪದಾವಳಿಗಳಿಗೆ ಉತ್ತರಿ ಸುವುದು ಕಷ್ಟಕರವಾಗುತ್ತದೆ ಎಂಬುದನ್ನೂ ಪರಿಗಣಿಸಬೇಕು.
ಎರಡು ಭಾಷಾ ಪತ್ರಿಕೆಗಳ ಜತೆಗೆ ಸಾಮಾನ್ಯಜ್ಞಾನ ಪತ್ರಿಕೆಯನ್ನೂ ನಿಗದಿ ಮಾಡಿದ್ದು, ಪಠ್ಯಕ್ರಮದ ಸ್ವರೂಪವನ್ನೂ ನೀಡಿಲ್ಲ. ಮೊದಲೆರಡು ಪತ್ರಿಕೆಗಳನ್ನು ಭಾಷಾಜ್ಞಾನದ ಮೂಲಕ ಪರಿಹರಿಸಿಕೊಳ್ಳಬಹುದು. ಈ ಎರಡು ಪತ್ರಿಕೆಗಳಲ್ಲಿ ಉತ್ತೀರ್ಣವಾದರೆ ಸಾಕು, ಈ ಅಂಕಗಳನ್ನು ಮೆರಿಟ್ ಲಿಸ್ಟ್‌ಗೆ ಪರಿಗಣಿಸುವುದಿಲ್ಲ ಎಂದು ಹೇಳಲಾಗಿದೆ. ಆದರೆ ಸಾಮಾನ್ಯಜ್ಞಾನ ಪತ್ರಿಕೆಯಲ್ಲಿ ಅಂಕಗಳಿಸುವುದು ಮೆರಿಟ್ ಲಿಸ್ಟ್‌ಗೆ ಪರಿ ಗಣನೆಯಾಗುವುದರಿಂದ ಅಭ್ಯರ್ಥಿಗಳಿಗೆ ಈ ಪತ್ರಿಕೆಯಲ್ಲಿ ಹೆಚ್ಚಿನ ಅಂಕ ಗಳಿಸುವುದು ಅನಿವಾರ‍್ಯವಾಗಿರುತ್ತದೆ. ತನ್ನ ಐಚ್ಛಿಕ ವಿಷಯದಲ್ಲಿ ಪೂರ್ಣ ಅಂಕಗಳಿಸಿಯೂ ಈ ಸಾಮಾನ್ಯಜ್ಞಾನ ಪತ್ರಿಕೆಯಲ್ಲಿ ಅಂಕ ಗಳಿಕೆಯಲ್ಲಿ ಹಿಂದುಳಿದರೆ ಅಂಥ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ತಪ್ಪುತ್ತದೆ. ಯಾವುದೇ ಅಭ್ಯರ್ಥಿ ನಾಲ್ಕು ಪತ್ರಿಕೆಗಳನ್ನು ಓದಿಕೊಂಡು ಅದರಲ್ಲೂ ಮಿತಿಗೊಳಪಡಿಸದ ಸಾಮಾನ್ಯಜ್ಞಾನವನ್ನು ತಿಳಿದುಕೊಂಡು ಉತ್ತರಿಸಿ, ಅಂಕ ಪಡೆಯುವುದು ಅಸಾಧ್ಯದ ಮಾತು. ಬಹುಜ್ಞತೆಯಿರ ಬೇಕೆಂಬುದು ಸರಿ.
ಆದರೆ ಬಹುಜ್ಞತೆಯನ್ನು ಅಂಕ ಗಳಿಸಿ ತೋರಿಸು ವುದು ಕಷ್ಟ. ಸಾಮಾನ್ಯಜ್ಞಾನದ ಪರೀಕ್ಷೆಯಲ್ಲಿ ಯಾವ ಕ್ಷೇತ್ರದ ಮೇಲಿನ ಪ್ರಶ್ನೆಗಳು ಬರುತ್ತವೆ? ಎಂಬ ಕಲ್ಪನೆಯಿಲ್ಲದೆ ಓದುವುದು ಹೇಗೆ ಮತ್ತು ಏನೆಲ್ಲ ಓದಬೇಕು. ಸಾಮಾನ್ಯಜ್ಞಾನ ಎಂದರೆ ಯಾವುದರ ಸಾಮಾನ್ಯಜ್ಞಾನ? ಸಮಾಜದ್ದೋ, ಭೂಗೋಳದ್ದೋ, ರಾಜಕೀಯದ್ದೋ. ಏನೊಂದೂ ತಿಳಿಯದೆ ಅಭ್ಯರ್ಥಿಗಳು ದಿಕ್ಕೆಟ್ಟಿದ್ದಾರೆ. ಆದ್ದರಿಂದ ಸಾಮಾನ್ಯಜ್ಞಾನ ಪತ್ರಿಕೆಗೆ ಪಠ್ಯಕ್ರಮ ನೀಡಬೇಕೆಂದು ಎಲ್ಲ ಅಭ್ಯರ್ಥಿಗಳ ಕೋರಿಕೆಯಿದೆ.
ಅಧ್ಯಾಪನಕ್ಕೆ ಐಚ್ಛಿಕ ವಿಷಯದ ಜ್ಞಾನವನ್ನು ಪರೀಕ್ಷಿಸುವುದು ಮುಖ್ಯವಾಗಬೇಕು. ನೇಮಕ ಮಾಡುವಾಗ ಐಚ್ಛಿಕ ವಿಷಯದ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಮಾಡುವುದು ಹಿಂದಿನಿಂದಲೂ ಬಂದಿರುವ ವೈಜ್ಞಾನಿಕ ಕ್ರಮ. ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ಕನಸು ಹೊತ್ತು ಸಾವಿರಾರು ಮಂದಿ ಕಾಯುತ್ತಿದ್ದ ವೇಳೆಯಲ್ಲಿ ಪರೀಕ್ಷಾ ಪ್ರಾಧಿ ಕಾರದ ಇಂತಹ ಹೊಸ ಪ್ರಯೋಗಗಳು ಅವರೆಲ್ಲರ ಉತ್ಸುಕತೆಯನ್ನು ಹಾಳುಮಾಡಿವೆ. ಪದವಿ ಕಾಲೇಜಿನ ಅಧ್ಯಾಪಕರ ಹುದ್ದೆಗಳ ಸಂಖ್ಯೆಯಲ್ಲಿ ಅದೃಷ್ಟವೆಂಬಂತೆ ಈ ಬಾರಿ ಕನ್ನಡ ಭಾಷಾ ಅಧ್ಯಾಪಕ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅದರಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಈ ಬಾರಿಯ ನೇಮಕ ಪ್ರಕ್ರಿಯೆ ಒಂದು ಸುವರ್ಣಾವಕಾಶ. ಸದ್ಯದ ಒಂದೇ ಒಂದು ಅವಕಾಶ. ಈ ಬಾರಿ ಉದ್ಯೋಗ ಪಡೆಯದಿದ್ದರೆ ಸರ್ಕಾರಿ ಕೆಲಸ ಮರೀಚಿಕೆಯಾಗುತ್ತದೆ. ಇದೆಲ್ಲವನ್ನು ತಿಳಿದಿರುವ ಪ್ರಾಧಿ ಕಾರ ಐಚ್ಛಿಕ ಕನ್ನಡದ ಪಠ್ಯಕ್ರಮವನ್ನು ’ಯಾವನೂ ಓದಲಾರದಷ್ಟು’ ಹಿಗ್ಗಿಸಿದೆ.
ಕನ್ನಡದ ಚರಿತ್ರೆಯಿಂದ ವ್ಯಕ್ತಿಗಳ ಚಾರಿತ್ರ್ಯದವರೆಗೆ ಎಲ್ಲವನ್ನೂ ಪಠ್ಯ ದಲ್ಲಿ ಪೇರಿಸಿಟ್ಟಿದೆ. ಐಚ್ಛಿಕ ಕನ್ನಡದ ನಿಗದಿತ ಪಠ್ಯಕ್ರಮವನ್ನು ಓದಿ ಕೊಳ್ಳುವುದಕ್ಕೇ ಒಂದು ಗಂಟೆ ಬೇಕು. ಆ ಪಠ್ಯಕ್ರಮದಲ್ಲಿರುವ ಎಲ್ಲವನ್ನು ಅಭ್ಯಾಸ ಮಾಡುವುದಕ್ಕೆ ಒಂದು ಜನ್ಮ ಸಾಲದು. ಎರಡು ಸಾವಿರ ವರ್ಷ ಗಳ ಸಾಹಿತ್ಯದಲ್ಲಿ ಸಾವಿರಾರು ಬರಹಗಳು ಬಂದು ಹೋಗಿವೆ. ಅವೆ ಲ್ಲವನ್ನೂ ತಿಳಿದಿರಬೇಕೆನ್ನುವಷ್ಟು ಪಠ್ಯಕ್ರಮವನ್ನು ನಿಗದಿಪಡಿಸಿರುವ ಪರೀಕ್ಷಾ ಪ್ರಾಧಿಕಾರದ ಕ್ರಮ ಅಸಮರ್ಪಕವಾದುದು. ಐಚ್ಛಿಕ ಕನ್ನಡದ ಪಠ್ಯಕ್ರಮದಲ್ಲಿ ಕುವೆಂಪು, ಬೇಂದ್ರೆ, ಪು.ತಿ.ನ ಎಂದು ನೂರಾರು ಸಾಹಿತಿಗಳ ಹೆಸರುಗಳನ್ನು ನೀಡಲಾಗಿದೆ. ಒಬ್ಬೊಬ್ಬರೂ ಬರೆದಿರುವ ಕೃತಿಗಳ ಸಂಖ್ಯೆ ನೋಡಿದರೆ, ’ಯಾವ ಕಾಲಕ್ಕೆ ನಾವು ಇವನ್ನೆಲ್ಲ ಓದಿ ಮುಗಿಸುತ್ತೇವೆ?’ ಎಂಬ ಪ್ರಶ್ನೆ ಕಾಡುತ್ತದೆ. ಸಮುದ್ರದಲ್ಲಿ ಬಿದ್ದಂತಾಗುತ್ತದೆ. ಈ ಪಠ್ಯಕ್ರಮಕ್ಕೆ ಆದಿ ಅಂತ್ಯಗಳೇ ಇಲ್ಲವಾಗಿದೆ. ಆದ್ದರಿಂದ ದಯವಿಟ್ಟು ಐಚ್ಛಿಕ ಕನ್ನಡದ ಪಠ್ಯಕ್ರಮವನ್ನು ನಿರ್ದಿಷ್ಟಗೊಳಿಸಬೇಕಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಧೋರಣೆ ಹೇಗಿದೆಯೆಂದರೆ ಕತ್ತ ಲಲ್ಲಿ ಕಣ್ಣುಕಟ್ಟಿ ಬಿಟ್ಟು, ಕತ್ತಿ ವರಸೆ ಆಡಿ ಎಂದಂತೆ. ದುರಾದೃಷ್ಟಕರ ಸಂಗತಿ ಎಂದರೆ ಇದು ಕನ್ನಡಕ್ಕೆ ಮಾತ್ರ ಸೀಮಿತವಾಗಿರುವುದು. ಕರ್ನಾ ಟಕದಲ್ಲಿ ಕನ್ನಡದಲ್ಲಿ ಉನ್ನತ ವ್ಯಾಸಂಗ ಮಾಡಿರುವ ಕನ್ನಡಿಗರಿಗೆ ಉದ್ಯೋಗ ದೊರಕುವ ಅವಕಾಶದಿಂದ ವಂಚಿತವಾಗುವಂತಹ ನಿಯ ಮಗಳನ್ನು ಜಾರಿಗೆ ತಂದಿರುವ ಪ್ರಾಧಿಕಾರ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಯಾವುದೇ ಪರೀಕ್ಷೆಗೆ ವಿಷಯದ ನಿರ್ದಿಷ್ಟ ಗುರಿ ನಿಗದಿಪಡಿಸದೇ ಸಾರಾಸಗಟಾಗಿ ಓದಿಕೊಳ್ಳಿ ಎಂದರೆ ಯಾವ ಅಭ್ಯರ್ಥಿಯೂ ಪೂರ್ಣ ಪಠ್ಯಗಳನ್ನು ಓದುವುದು ಸಾಧ್ಯವಿಲ್ಲ. ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಸಿದ್ಧ ತೆಗೆ ಸಿಗುವ ಅವಧಿಯನ್ನು ಲೆಕ್ಕ ಹಾಕಿ ಪಠ್ಯ ನಿಗದಿಯಾಗಬೇಕು. ಆದರೆ ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ವಿವೇಕವಿಲ್ಲದಂತೆ ವರ್ತಿ ಸುತ್ತಿದೆ. ಇದನ್ನು ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇ ಶಕಿ ಸುಷಮಾ ಗೋಡಬೋಲೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಶೀಘ್ರ ತಿದ್ದುಪಡಿಮಾಡಬೇಕಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ