ಬುಧವಾರ, ಮಾರ್ಚ್ 4, 2015

ದುರಗಮುರಗಿ ಸಂಸ್ಕೃತಿಯಲ್ಲಿ ಮಹಿಳೆ


ಕೃಪೆ: ಕಣಜ


ಬದುಕಿಗಾಗಿ ಸಂಘರ್ಷ ಬಹಳ ಅನಿವಾರ್ಯವಾಯಿತು. ಹೀಗೆ ಬದುಕನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಿದರು. ಕಲೆ ಕಲೆಗಾಗಿ ಅಲ್ಲದೇ, ಕಲೆ ಹೊಟ್ಟೆಪಾಡಿಗಾಗಿ ಎಂಬ ಸತ್ಯವನ್ನು ಮನಗಂಡು ಬದುಕಲು ಆರಂಭಿಸುವರು. ಸದ್ಯದಲ್ಲಿಯಂತೂ ಇದರಿಂದ ಹೊಟ್ಟೆ ತುಂಬಿಸಲು ಕೂಡ ಸಾಲದಾಯಿತು.
ಆಧುನಿಕ ಯುಗದಲ್ಲಿ ದುರಗಮುರಗಿಯರು ಹೊಸದಿಕ್ಕಿನತ್ತ ಪಯಣ ಮಾಡಿದ್ದಾರೆ. ಶಿಕ್ಷಣವನ್ನು ಪಡೆಯುವುದರೊಂದಿಗೆ ತೀವ್ರ ಬದಲಾವಣೆಗೆ ಒಳಗಾಗಿದ್ದಾರೆ. ಈ ಜನಾಂಗವು ಇಂದು ಎಲ್ಲರಂತೆ ಸುಂದರವಾದ ಕನಸನ್ನು ಕಟ್ಟಿಕೊಂಡು ಒಂದೆಡೆ ತಮ್ಮ ತಮ್ಮ ಕುಟುಂಬದವರೊಂದಿಗೆ ವಾಸಿಸಲು ಆಸಕ್ತವಾಗಿದೆ. ತಮ್ಮದೇ ಆದ ಸ್ವಂತ ಸೂರು ನಿವೇಶನ ಇಲ್ಲದೇ ಕಂಗಾಲಾದರೂ, ಯುವಕರು ದೇವಿ ಆಟ ಬಿಟ್ಟು ಮೂಲ ಕಸುಬಾದ ಮೀನು ಬೇಟೆಗೆ ಹಿಂತಿರುಗಿದ್ದು ಇದೆ.
ಸರಕಾರವೂ ಇಂಥ ಜನತೆಗೆ ಹಂಚಿಕೆ ಮಾಡಿದ ನಿವೇಶನಗಳು ದೊರಕಿವೆ. ಇನ್ನೂ ಅದೆಷ್ಟೋ ಕುಟುಂಬಗಳಿಗೆ ಒಂದು ನೆಲೆಯೂ ಇಲ್ಲ. ಇವರ ಸಂಖ್ಯೆ ಕಡಿಮೆಯಾಗಿದೆ. ಅಲ್ಲಲ್ಲಿ ಈ ಜನಾಂಗ ಚದುರಿ ಹೋಗಿರುವರು. ಶಿಕ್ಷಣ ಪಡೆದವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದು, ಒಳ್ಳೆಯ ವೃತ್ತಿಯಲ್ಲಿದ್ದಾರೆ. ಇನ್ನು ಕೆಲವರು ಕಾರ್ಖಾನೆಗಳಲ್ಲಿ, ಕಟ್ಟಡದ ಕೆಲಸದಲ್ಲಿ, ಕೂಲಿ, ಕಾರ್ಮಿಕರಾಗಿ ಸಣ್ಣ ಸಣ್ಣ ಸ್ವಂತ ವ್ಯಾಪಾರದಲ್ಲಿ ಕೂಲಿ ಹಮಾಲಿ ಕೆಲಸದಲ್ಲಿ ಅಥವಾ ಹೋಟೆಲಿನಲ್ಲಿ ಸೇವಕರಾಗಿ ಹೀಗೆ ಹಲವಾರು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೊಸತನವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ.
ಅಲೆಮಾರಿ ಜನಾಂಗದಲ್ಲಿ ಅಕ್ಷರಸ್ತರಿಗಿಂತ ಅನಕ್ಷರಸ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗೀಗ ಸ್ತ್ರೀ ಪುರುಷರೀರ್ವರೂ ವಿದ್ಯಾವಂತರಾಗಿ, ಉನ್ನತ ಸ್ಥಿತಿಯಲ್ಲಿರುವುದನ್ನು ನೋಡಬಹುದು. ಈ ಜನಾಂಗ ಹಲವಾರು ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿದ್ದು ಖ್ಯಾತಿಗಳಿಸಿವೆ. ಆಧುನಿಕತೆಯಲ್ಲಿ ಹೊಸದನ್ನು ಮೈಗೂಡಿಸಿಕೊಂಡು ಮುಂದೆ ಸಾಗುತ್ತಿದೆ. ಹಿಂದುಳಿದ ಅಲ್ಪ ಸಂಖ್ಯಾತರೆಂಬುದನ್ನು ಮರೆಯಲಾಗದು.
ಸಾಮಾನ್ಯವಾಗಿ ಎಲ್ಲ ಬುಡಕಟ್ಟಿನ ಜನಾಂಗ ತಮ್ಮ ಮೂಲ ವೃತ್ತಿಗಳಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಅವರು ಪರಂಪರಾನುಗತವಾಗಿ ಪಾಲಿಸಿಕೊಂಡು ಬಂದಿದ್ದ ಕಲೆಗಳೆಲ್ಲ ಈಗ ನಶಿಸಿ ಹೋಗುತ್ತಿವೆ. ಜನರ ಆದರ ಗೌರವ ಇಂಥ ದೇಸೀಯ ಕಲೆಗಳತ್ತ ಕಡಿಮೆಯಾಗುತ್ತಿದೆ. ಆಧುನಿಕತೆಯಲ್ಲಿ ಈ ತ್ರಿಕರಣಗಳ ಪ್ರಭಾವದಿಂದ ದೇಸಿ, ಕಲೆಗಳೆಲ್ಲ ನೆಲಕಚ್ಚಿವೆ ಎನ್ನಬಹುದು. ತಮ್ಮ ಮೂಲ ಕಸುಬನ್ನು ನೆಚ್ಚಿಕೊಂಡು ಬದುಕುವ ಜನ ಈಗ ಹತಾಶರಾಗಿದ್ದಾರೆ. ಆಧುನಿಕತೆಗೆ ಒಗ್ಗಿಕೊಂಡು ಹೋಗುವುದು ಅವರಿಗೆ ಅನಿವಾರ್ಯ. ತಮ್ಮ ಉಪಜೀವನಕ್ಕಾಗಿ ಬುಡಕಟ್ಟಿನ ಜನ ಬೇರೆ ಬೇರೆ ಉದ್ಯೋಗಗಳನ್ನು ಹುಡುಕಿಕೊಂಡಿರುವರು. ಕೂಲಿ, ಕಾರ್ಖಾನೆ, ಹೋಟೆಲ್ಲು ವ್ಯಾಪಾರ,, ಹಣ್ಣು ತರಕಾರಿ ಮಾರಾಟ ಮೊದಲಾದವುಗಳಲ್ಲಿ ತೊಡಗಿದ್ದಾರೆ. ಇನ್ನು ಕೆಲವರು ಮಾತ್ರ ಶಿಕ್ಷಣ ಪಡೆದು ಶಾಲಾ ಕಾಲೇಜು ಕೋರ್ಟು ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವರು.
ಇಂಥ ಬುಡಕಟ್ಟಿನ ಜನಾಂಗಗಳಲ್ಲಿ ಡೊಂಬರು, ದಾಸರು, ಕೊರವರು, ಕಾಡಸಿದ್ದರು, ಸುಡುಗಾಡುಸಿದ್ದರು, ಬಾಳಸಂತರು, ವಡ್ಡರು ಮೊದಲಾದವರು ಕೂಡ ಆಧುನಿಕ ಬದಲಾವಣೆಗೆ ಹೊಂದಿಕೊಂಡು ಬಾಳಲಾರಂಭಿಸಿದ್ದಾರೆ.
ಉಪಸಂಸ್ಕೃತಿಗಳಲ್ಲಿ ಮಹಿಳೆಯರ ಸ್ಥಿತಿಗತಿ ಸಾಮಾನ್ಯವಾಗಿ ಒಂದೇ ರೀತಿಯಲ್ಲಿರುತ್ತದೆ.
ಮೇಲ್ವರ್ಗದ ಸ್ತ್ರೀಯರೊಂದಿಗೆ ಈ ಬುಡಕಟ್ಟಿನ ಸ್ತ್ರೀಯರನ್ನು ಹೋಲಿಸಿ ನೋಡಿದಾಗ ಬಹಳಷ್ಟು ವ್ಯತ್ಯಾಸ – ಸಾಮ್ಯತೆಗಳು ಕಂಡು ಬರುತ್ತವೆ.
ಬುಡಕಟ್ಟು ಸಂಸ್ಕೃತಿಯ ಸ್ತ್ರೀಯರು ಹೆಚ್ಚಾಗಿ ಅನಕ್ಷರಸ್ತರೇ ಹೌದು. ಇವರಿಗೆ ಪುರುಷರೊಂದಿಗೆ ಸರಿಯಾದ, ಸಮಾನವಾದ ಸ್ವಾತಂತ್ರ‍್ಯ ಅಲ್ಪ ಮಟ್ಟಿಗಾದರೂ ಇದೆ ಎನ್ನಬಹುದು.
ಈ ಉಪಸಂಸ್ಕೃತಿಯ ಮಹಿಳೆಯರು ಶ್ರಮಿಕರು, ಕಷ್ಟಪಟ್ಟು ದುಡಿಯುವವರು. ತಮ್ಮ ತಮ್ಮ ಗಂಡಸರೊಂದಿಗೆ ಹೊರಗೆ ಹೋಗಿ ಅವರಂತೆ ದುಡಿದು ಸಂಪಾದಿಸುತ್ತಾರೆ ಇವರಿಗೆ ಆರ್ಥಿಕ ಸ್ವಾತಂತ್ರ‍್ಯವಿದೆ.
ಕೂಲಿ, ನಾಲಿ, ಮನೆ ಕೆಲಸ, ಸಣ್ಣಪುಟ್ಟ ವ್ಯಾಪಾರ, ಹೊಲಿಗೆ ಹೀಗೆ ಮೊದಲಾದವುಗಳನ್ನು ಮಾಡಿ ದುರಗಮುರಗಿ ಜನಾಂಗವದ ಹೆಂಗಸರು ಸ್ವಾವಲಂಬಿಗಳಾಗಿರುತ್ತಾರೆ. ಈ ಕಾರಣಕ್ಕಾಗಿ ಇವರಲ್ಲಿ ಆತ್ಮವಿಶ್ವಾಸವಿರುತ್ತದೆ. ಗಂಡಿನ ಆಸರೆಯಿಲ್ಲದೆ ಹೋದರೂ ತಾವು ಬದುಕುತ್ತೇವೆಂಬ ಧೈರ್ಯವಿರುತ್ತದೆ. ಹೀಗಾಗಿ ಇವರಲ್ಲಿ ಹಟ, ಛಲ, ಸ್ವಾಭಿಮಾನಗಳು ಹೆಚ್ಚಾಗಿರುತ್ತವೆ. ಇವರು ಗಂಡನೊಂದಿಗೆ ಸಮಾನ ಬಾಳ್ವೆ ನಡೆಸುತ್ತಾರೆ.
ಸಾಧಾರಣವಾಗಿ ಉಪ ಸಂಸ್ಕೃತಿಗಳೆಲ್ಲವುಗಳಲ್ಲಿ ಸಾಮಾಜಿಕ ವ್ಯವಸ್ಥೆ ಸ್ವಲ್ಪ ಸಡಿಲವಾಗಿರುತ್ತದೆ. ಆಯಾ ಸಂಸ್ಕೃತಿಗಳು ಅವಲಂಬಿಸಿದ ಕುಲಕಸುಬುಗಳಲ್ಲಿ ಸ್ತ್ರೀಯೂ ಸದಾ ತೊಡಗಿರುತ್ತಾಳೆ. ಅವಳು ಕೆಲಸವನ್ನು ಅತ್ಯಂತ ಆಸಕ್ತಿಯಿಂದ ಮಾಡಿಕೊಂಡಿರುತ್ತಾಳೆ. ವೈವಾಹಿಕ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಮಹಿಳೆಗೆ ಸಡಿಲಿಕೆಯಿರುವುದನ್ನು ಗಮನಿಸಬಹುದು. ಅಂದರೆ ಪುನರ‍್ ವಿವಾಹ ಅಥವಾ ವಿವಾಹ ವಿಚ್ಛೇದನ ಪದ್ಧತಿ (ಸೋಡಚೀಟಿ) ಮೊದಲಾದವುಗಳು ಇಲ್ಲಿ ಸಹಜವಾಗಿ ನಡೆಯುತ್ತದೆ. ಯಾವುದೇ ತೆರನಾದ ದಬ್ಬಾಳಿಕೆ ಈ ವಿಷಯಗಳಲ್ಲಿ ಅಷ್ಟಾಗಿ ಕಂಡು ಬರುವುದಿಲ್ಲ. ಒಲ್ಲದ ಗಂಡನೊಂದಿಗೆ ಸಂಸಾರ ಸಾಗಿಸುವ ಜೋರು ಜಬರ‍್ ದಸ್ತಿಯ ಅನಿವಾರ್ಯತೆಯ ಹಂಗು ಇವಳಿಗಿಲ್ಲ. ಗಂಡನ ಕಿರುಕುಳ, ದಬ್ಬಾಳಿಕೆ ಸಹಿಸಲು ಅಸಾಧ್ಯವೆಂದಾದರೆ ಈ ಮಹಿಳೆ ಅವನಿಂದ ಸೋಡಚೀಟಿ ಪಡೆದು ಅವನಿಂದ ಶಾಶ್ವತವಾಗಿ ದೂರ ಸರಿಯುವ ಸ್ವಾತಂತ್ರ‍್ಯ ಹೊಂದಿದ್ದಾಳೆ. ಹೆಣ್ಣು ತನ್ನಿಷ್ಟದಂತೆ ತಾನೇ ಆಯ್ಕೆ ಮಾಡಿಕೊಂಡು ಪ್ರೀತಿಸಿದವನೊಂದಿಗೆ (ಅದೇ ಕುಲದವನಾಗಿರಬೇಕು) ಮದುವೆ ಮಾಡಿಕೊಳ್ಳುವ ಸ್ವಾತಂತ್ರ‍್ಯವನ್ನು ಪಡೆದಿರುತ್ತಾಳೆ. ಹೀಗೆ ಗಂಡು ಹೆಣ್ಣುಗಳು ಪ್ರೀತಿಸಿ ಮದುವೆಯಾಗಲು ಸಿದ್ಧರಾದರೆ ದೈವದವರೂ ಯಾವ ತಕರಾರೂ ಮಾಡದೆ ಇವರ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ.
ಈ ಉಪಸಂಸ್ಕೃತಿಯ ಪುರುಷ ವರ್ಗವನ್ನು ಕುರಿತು ಅಲೋಚಿಸಿದಾಗ, ಇನ್ನೊಂದು ನಿಟ್ಟಿನಲ್ಲಿ ಇಲ್ಲಿಯ ಹೆಣ್ಣುಗಳು ತಮ್ಮದೇ ಜನಾಂಗದ ತಮ್ಮ ಕುಟುಂಬದ ಗಂಡುಗಳಿಂದ ಅಥವಾ ಮೇಲ್ವರ್ಗದ ಶ್ರೀಮಂತ ಗಂಡಸರಿಂದ ಶೋಷಣೆ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಬಹುದು.  ಕುಡಿಯುವ ಗಂಡನಿಂದ ಹೊಡೆತ, ಬೈಗುಳ ಹಿಂಸೆ ಇನ್ನೊಂದು ತೆರನಾದರೆ, ಹೊರ ಪರ ಪುರುಷರಿಂದ ಕೆಲವೊಮ್ಮೆ ಅತ್ಯಾಚಾರ ಮತ್ತು ಅವರ ಕಾಮುಕತನಕ್ಕೆ ಬಲಿಯಾಗುವುದು ಇವೆ.
ಗಂಡನಾದವನು ಅತಿಯಾಗಿ ದಬ್ಬಾಳಿಕೆ ಮಾಡುತ್ತಿದ್ದಾಗ, ಅವಳು ಅಂಥವನಿಂದ ಸೋಡಚೀಟಿ ಪಡೆದು ಬದುಕುವ ಹಕ್ಕು ಹೊಂದಿದ್ದಾಳೆ.
ಮರಗಮ್ಮ ದುರ್ಗಮ್ಮ ದೇವಿಗಳ ಮೇಲೆ ಅಪಾರವಾದ  ನಂಬಿಕೆಯಿಟ್ಟವರು, ಊರ ಜನರಿಗೆ ಬಹಳ ಬೇಕಾದವರು, ಹಗರಲಿರುಳು ಊರ ಗುಡಿಸಲುಗಳಲ್ಲಿಯೇ ವಾಸವಾಗಿದ್ದು, ತಮ್ಮ ದೇವತೆಯ ನೆರಳಿನಲ್ಲಿ ದಿನಗಳೆಯುವವರು. ಇವರಂತೆ ಬಾಳಸಂತರು, ವಡ್ಡರು, ಗಂಗೆತ್ತಿನವರು ಜನರ ಪ್ರೀತಿ ನಂಬಿಕೆಗಳಿಗೆ ಪಾತ್ರರಾದವರು. ಇವರಿಗೆ ಹಳ್ಳಿ ಜನ ಹರಕೆ ಕೊಡುತ್ತಾರೆ. ಇವರದು ಪರೋಪಕಾರಿ ಜೀವನ. ಇವರ ವೇಷ ಭೂಷಣ, ಆಹಾರ ಪಾನೀಯ, ಭಾಷೆ, ರೂಢಿ ಆಚರಣೆಗಳು ವಿಭಿನ್ನವಾಗಿರುತ್ತವೆ. ಒಟ್ಟಾರೆ ಇತ್ತೀಚೆಗಂತೂ ಬುಡಕಟ್ಟಿನ ಜನಾಂಗಗಳು ಆಧುನಿಕತೆಗೆ ಒಗ್ಗಿ ಕೊಳ್ಳಹತ್ತಿದ್ದಾರೆ. ತಮ್ಮ ಅಸ್ತಿತ್ವದ ರಕ್ಷಣೆಯ ಸಂಕ್ರಮಣಾವಸ್ಥೆಯ ಸ್ಥಿತಿಯಲ್ಲಿದ್ದಾರೆ. ಇವರಲ್ಲಿ ಮೆಚ್ಚುಗೆ ಅಂಶವೆಂದರೆ, ಇವರು ಅದೆಷ್ಟೋ ಹೊಸತನಕ್ಕೆ ಮಾರಿಹೋದರೂ ತಮ್ಮ ಮೂಲವನ್ನು ಮರೆಯುವುದಿಲ್ಲ. ಹಳ್ಳಿಗಳಲ್ಲಿ ಇವೆಲ್ಲ ಅಂಶಗಳು ಬಹಳವಾಗಿರುತ್ತವೆ. ಇಂಥ ಕೆಲ ಸಂಸ್ಕೃತಿಯ ಆಚರಣೆಗಳು ಅವರ ಅಸ್ತಿತ್ವದ ಮೂಲ ಕುರುಹು. ಆದರೆ ಅದರೊಂದಿಗೆ ಅವರಲ್ಲಿದ್ದ ಕಲೆಗಳನ್ನು ಜೀವಂತವಾಗಿರಿಸುವುದು ಬಹಳ ಮುಖ್ಯವಾಗಿದೆ. ಬುಡಕಟ್ಟು ಜನಾಂಗಗಳು ತಮ್ಮತನವನ್ನು ಉಳಿಸಿಕೊಂಡು ಹೋಗುವುದು ಕಷ್ಟದ ಕೆಲಸವಾಗುತ್ತದೆ.
ಸ್ತುತಿ ಪದಗಳು – ಮತ್ತು ಸೋಬಾನದ ಹಾಡುಗಳು
ಸ್ತುತಿ :ಸುರವೀಗಿ ನೆನಿಬೇಕ ಪಾರ್ವತಿಯನ್ನ
ಮಗರಾಮನಾದ ಗಣಪನ್ನ | ನೆನಿದಾರ
ಬರುವಂಥ ಸಿಡಿಲ ಬಟ ಬಯಲ
ತುಂಬಿದ ಹೊಳಿಯಾಗ ಕೊಂಬು ಕಾಣಿಸತಾವ
ಇಂಬುಳ್ಳ ಇಣಿಯಾ ಬಸವಬರುವಾಗ
ಗಂಗೆದ್ದು ಕಯ ಮುಗಿದಾಳ್ಯ
ತಾಯಿಯ ನೆನೆದರ ಬೇಗನ ಪದ ಬರಲಿ
ತಾಯವ್ವ ಗಂಗಿ ದಡದಲ್ಲಿ, ಸರಸೋತಿ
ಕಾಯಕೊಂಡ್ಯೋಗಿ ಕರದಲ್ಲಿ
ಹೊತ್ತು ಮುಳಗಿದರೇನು ಕತ್ಲಾದರೇನು
ಅವ್ವ ನಿನ ಗುಡಿಗೆ ಬರುವೇನು, ದುರ್ಗವ್ವ
ಮುತ್ತೀನೆ ಬಾಗೀಲು ತೆರೆದೀರೋ
ಎಂಟೆಲೆ ಬೇವಿನ ದಂಟಾಗೆ ಇತುಬೊಳರ
ದುರ್ಗವ್ವ ಗಂಟೆ ಗೆಜ್ಜಿಗೆ ಒದಗೋಳೆ
ಗಂಟಲ ತೊಡರ ಬಿಡಿಸವ್ವ
ಅಕ್ಕಿ ಬರಳಿಗೆ ಹುಯ್ದು ಯವ್ವ ನೆನೆದೆನು
ಅಕ್ಕ ಮರಗವ್ವನ ಮಕ್ಕಳೇಳರ
ನೆನದೇನು.
ಸೋಬಾನದ ಹಾಡುಗಳು 
ಹಣಿಯೆಂಬ ಆವುಕ ತಿದ್ದುವ ನನದಂಡಿ
ಹುವ್ವಾ ನೋಡಂದ ಮಲಕಿಲೆ ಸೋಬಾನವೇ
ಹುವ್ವಾ ನೋಡಂದ ಸಿವರಾಯ
ಮುಡಿಯಿಂದ ಮಡದಿಗೆ, ಸೋಬಾನವೇ
ಸೂತರದ ಗೊಂಬಿಗಿ ಒಪ್ಪುಲಾರೆನಾ ರಾಯಾ
ಪಡಸಾಲ್ಯಾಗ ನಿಲವ್ಯಾರೆ ಸೋಬಾನವೇ
ಪಡಸಾಲ್ಯಾಗ ಸಿವರಾಯನ
ಅತ್ತಿಗೆದುರು ಕಂಡು ನಗತಾರೆ ಸೋಬಾನವೇ
ಗಂಧೆಣ್ಣಿ ಹಚಗೊಂಡು ಗಂಗ್ಯಾಗ ನಿಂತಾರ
ಒಂದೊಂದ ಮಾತ ಹೇಳಿ ನಗದಾರ ಸೋಬಾನವೇ
ನಗತಾರ ರಾಯಗ ಸಿವನೇ
ಹೆಂತಾ ಸಿರಿಗಂಗಿ ಹಡದಾಳ ಸೋಬಾನವೇ
ಕಪ್ಪುರದ ಗೊಂಬಿಗಿ ಒಪ್ಪಲಾರೆನಾ ರಾಯಾ
ಓದೋ ಸಾಲ್ಯಾಗ ನಿಲವ್ಯಾರೆ ಸೋಬಾನವೇ
ಓದೋ ಸಾಲ್ಯಾಗ ಸಿವರಾಯ
ನಾದಿನಿದೇರು ನೋಡಿ ನಗುತಾರೆ ಸೋಬಾನವೇ
ಹೇಸಿ ಬದುಕಿಗಿ ಆಸಿ ನಾ ಮಾಡಿಲ್ಲ
ರೇಸಿಮಿ ಉಡುವ ದೋರಿ ರಾಯಗ ಸೋಬಾನವರೇ
ರೇಸಿಮಿ ಉಡುವ ರಾಯಗ
ಆಸಿ ಮಾಡಿನೀ ಅನುಗಾಲ ಸೋಬಾನ
ಸುಣ್ಣಾ ಕುಡ್ತಿನೆಂತ ಕನ್ನಿಗಿ ಒಳಿಯಾಕ ಕರದಾನ
ಕಣ್ಣಲೆ ಅಳದಾನ ಮನೋಹರ ಸೋಬಾನ
ಕಣ್ಣಲೆ ಅಳದಾನ ಮನೋಹರ
ಸಣ್ಣ ಮುತ್ತೆಲ್ಲಿ ದೊರತೆಂದ ಸೋಬಾನವರೇ
ಗಂಧಾ ಸೋಸುತ ಗಂಡಗೇನ್ಹೇಳ್ದಾಳ
ಪುಂಡ ನನ್ನಪ್ಪಗ ಬಯ್ಯಬಾಡ ಸೋಬಾನ
ಪೂಮಡ ಬಯ್ಯಬ್ಯಾಡ ಸೋಬಾನವೇ
ನಿನ್ನಪ್ಪಗ ನಾಯಾಕ ಬೈಯಾಲಿ
ನನ್ನವ್ವಗ  ನನ್ನಪ್ಪಗಂಜಿ ನಡೆದಾರ ಸೋಬಾನೆ
ನನ್ನವ್ವ ನನ್ನಪ್ಪಗಂಜಿ ನಡೆದಾರ
ಬಂಗಾರ ಬಾ ಎಂದ ಕರದೇನ ಸೋಬಾನ
ಬಾಲಿ ತಾ ಮೈ ನರೆದು ನಿಂತಾಳ
ಬಾಳಿ ಹೆಣ್ಣಿನ್ಹಂಗ ಬಾಡೇದ ಸೋಬಾನ
ಬಾಳಿ ಹೆಣ್ಣನ್ಹಂಗ ಬಾಡ್ಯಾದ ಸೋಬಾನ
ಅವರವ್ವ ಬಾಬಾಲಿ ಎಂದು ಕರೆದಾಳ
ಮಳ್ಳಿ ತಾ ಮೈ ನೆರೆದು ನಿಂತಾಳ
ಉತ್ತುತ್ತಿ ಹಣ್ಣಿನ್ಹಂಗ ಮಕ ಬಾಡೇ ಸೋಬಾನ
ಉತ್ತುತ್ತು ಹಣ್ಹಂಗ ಮಕ ಬಾಡೆ
ಅವರವ್ವ ಬಾ ಎಂದ ರಮಿಸ್ಯಾಳೆ ಸೋಬಾನ
ಗೆಳತಿ ಮೈನೆರೆದು ಬಾಗಿಲಾಗ ನಿಂತಾಳ
ತೆಂಗಿನ್ಹಣ್ಣಿನ್ಹಂಗ ಮಕ ಬಾಡೇದ ಸೋಬಾನ
ತೆಂಗಿನ್ಹರ್ಣಣಿನ್ಹಂಗ ಮಕ ಬಾಡೇತ ಗೆಳೆತೆವ್ವ
ಬಾ ಅಂತ ಕರದಾಳ ಸೋಬಾನ
ವಾಲೀಕಾರಗ ಕರಸರಿ ಕಾಗದ ಬರಸರಿ
ಕಾರ‍್ಯಾಣ ಚೀಟಿ ಕಳ್ಹುರೀ  ಸೋಬಾನ
ಊರದಾರಿ ನೋಡಿಲ್ಲ ಕೇರಿದಾರ ನೋಡಿಲ್ಲ.
ಯಾವ ದಾರಿಂದ ಹೋಗಬೇಕು ಸೋಬಾನ
ಬೇಸ್ತಾರ ಬರಬೇಕಿ ಬೇಗಾರೆ
ಸುಕಾರ ಸೌಭಾಗ್ಯ ಸೋಬಾನವೇ
ಇಷ್ಟೆಲ್ಲಾ ಆಯಿತು ಅಳಿಯಾಗ ತಂದ
ಆಯೆರಿ ತೋರಿಸಿ ಮಾಢರಿ ಸೋಬಾನವೇ
ನಿಂಬಿಯ ಬನದಾಗ ರಂಭಿ ಯಾರೇ
ಅತ್ತಿಗಿ ದೇವರು ಬರತಾರೈ
ಅತ್ತಿಗಿದೇವರು ಬರತಾರ ನಿಂಬೆವ್ವ
ಕುಂಕುಮದ ಭರಣಿ ಇಳಸ್ಯಾರೇ ಸೋಬಾನ
ಕಣ್ಣಿಯ ವನದಾಗ ಹ್ವಾದವರ‍್ಯಾರೆ
ಆ ಮಾವಂದಿರು ಬಂದಾರ
ಮಾವಂದಿರು ಬಂದಾರ ಸೋಬಾನ
ಕ್ಯಾದಗಿ ಬಣ್ಣ ತಂದಾರ ಸೋಬಾನವೇ
ಅರಿಶಿಣ ಸೋಸುತ ಅರಸಾಗೇನ್ಹೇಳ್ಯಾಳೇ
ಪುರುಷ ನಮ್ಮವ್ವಗ ಬಯ್ಯಬ್ಯಾಡ್ರೀ
ಪುರುಷ ನಮ್ಮವ್ವಗ ಬಯ್ಯಬ್ಯಾಡ್ರಿ ಸೋಬಾನವೇ.
ಸ್ಯಾಸಿ ಹಾಡುಗಳು
ಒಂದೆಳಿ ಸುತ್ತಟಗೆ ಗಗನಾಕ ಮುಟ್ಟ್ಯಾವೇ
ಒಂದೆಳಿ ಸುತ್ತಟಗೆ ಮುಟ್ಟ್ಯಾವ
ಗಗನ ಗದ್ದರಸಿ ಉದಯೆಂಬೋ ಯಾಳೆದಲಿ
ಬಿದ್ದಾವ ಸ್ಯಾಸೇ…
ಎಡ್ಡೆಳಿ ಸುತ್ತಟಗೆ ಗಗನಾಕ ಹರಿದಾವ
ಎಡ್ಡೆಳಿ ಸುತ್ತಟಗೆ ಹರಿದಾವ
ಗಗನ ಗದ್ದರಿಸಿ ಹರಿದಾವ ಉದಯೆಂಬೋ ಯಾಳೆದಲಿ
ಬಿದ್ಧಾವ ಸ್ಯಾಸೇ…
ಮೂರಳಿ ಸುತ್ತಟಗೆ ಮುಗಿಲಿಗಿ ಮುಟ್ಟ್ಯಾವೇ
ಮೂರೆಳಿ ಸುತ್ತಟಗೆ ಮುಗಿಲಿಗಿ ಮುಟ್ಟ್ಯಾವೇ
ಮುಗಿಲ ಗದ್ದರಿಸಿ ಮುಟ್ಟ್ಯಾವ
ಬಿದ್ದಾವ ಸ್ಯಾಸೇ..
ನಾಕೆಳಿ ಸುತ್ತಟಗೆ ಆಗಸಕ ಮುಟ್ಟ್ಯಾವೇ
ನಾಕೆಳಿ ಸುತ್ತಟಗೆ ಆಗಸಕ ಮುಟ್ಟ್ಯಾವೇ
ಆಗಸ ಗದ್ದರಿಸಿ ಮುಟ್ಟ್ಯಾವ
ಬಿದ್ದಾವ ಸ್ಯಾಸೀ…
ಐದೆಳಿ ಸುತ್ತಟಿಗೆ ಆಕಾಸಕ  ಮುಟ್ಟ್ಯಾವೇ
ಐದೆಳಿ ಸುತ್ತಟಿಗೆ ಆಕಾಸಕ ಮುಟ್ಟ್ಯಾವೇ
ಆಕಾಸ ಗ್ದರಿಸಿ, ಬಿದ್ದಾವ ಮುಟ್ಟ್ಯಾವ
ಬಿದ್ದಾವ ಸ್ಯಾಸೀ…
ಸಾಧಾರಣವಾಗಿ ’ದುರುಗಮರುಗಿ’ಯ ಜನಾಂಗದಲ್ಲಿ ಹಿಂದೆಲ್ಲ ಮದುವೆಗಳು ಸಂಜೆಯ ಸಮಯಕ್ಕೆ ನಡೆಯುತ್ತಿದ್ದುವು. ಹೊತ್ತು ಮುಳುಗಿ ತಾಸೊತ್ತಿನ ನಡುವೆ ಅಕ್ಕಿಕಾಳು (ಅಕ್ಷತೆ) ಬೀಳುತ್ತಿದ್ದುವು. ಅಕ್ಕಿಕಾಳಿಗೆ ಸ್ಯಾಸಿ ಅಂತ ಕರೆಯುತ್ತಿದ್ದರು. ಹಸೆ ಹೊಯ್ದುವುದಕ್ಕೆ ಸ್ಯಾಶಿ ಹೊಯ್ಯುವುದು ಅಂತಲೂ ಕರೆಯುತ್ತಿದ್ದರು. ಮುಹೂರ್ತಕ್ಕೆ ಮೊದಲು ಐನೋರು ಮುತ್ಯಾ ಅಂದರೆ ಜಂಗಮಯ್ಯ ಬಂದು ಮದುಮಕ್ಕಳು ಕೂಡುವ ಹಂದರದಲ್ಲಿ ಹೊಸ ಜಮಖಾನೆ ಹಾಸಿ ಅಕ್ಕಿಯಿಂದ ಹಸಿ ಹೊಯ್ಯುವುದು ವಾಡಿಕೆ. ನಾಲ್ಕು ಕಂಬ ನೆಟ್ಟು ಅವಕ್ಕೆ ಮಾವಿನ ತೋರಣ, ಬಾಳೆದಿಂಡುಗಳನ್ನು ಕಟ್ಟಿ ಶೃಂಗರಿಸುವುದು ಅಂದರೆ ಹಂದರ ಹಾಕುವುದು ಅಂತ ಅರ್ಥ. ಪೂರ್ವಾಭಿಮುಖವಾಗಿರುವ ಹಂದರದ ಮುಂದಿನ ಎರಡು ಕಂಬಗಳ ಮೇಲೆ ಮಣ್ಣಿನ ಹಣತೆಯನ್ನಿಟ್ಟು ಎಣ್ಣೆ ಬತ್ತಿಯಿಂದ ದೀಪ ಬೆಳಗಿಸುತ್ತಾರೆ. ಹಂದರಲ್ಲಿ ಮದುಮಕ್ಕಳ ಮುಂದೆ ಅಡ್ಡಣಿಗೆಯ ಮೇಲೆ ’ಖಂಚಿಕಳಸ’ ಇರುತ್ತದೆ ಅದನ್ನು ನೋಡಿಕೊಳ್ಳಲು ಮನೆಯ ಹೆಣ್ಣುಮಗಳನ್ನು ನೇಮಿಸಿರುತ್ತಾರೆ. ಯಾವಾಗಲೂ ಕಳಸದಲ್ಲಿಯ ದೀಪ ಆರದಂತೆ ಬಲು ಎಚ್ಚರಿಕೆಯಿಂದ ಅವಳು ಕಳಸವನ್ನು ಕಾಯುತ್ತಿರ ಬೇಕಾಗುತ್ತದೆ. ಗಂಡಿನ ಮನೆಯಲ್ಲಿಯೇ ಮದುವೆಯಾಗುವುದರಿಂದ ಕಳಸ ನೋಡಿಕೊಳ್ಳುವವಳು ಮದುಮಗನ ಅಕ್ಕ ಅಥವಾ ತಂಗಿಯೇ ಆಗಿರುತ್ತಾರೆ. ಕಳಸ ಹಿಡಿಯುವುದು ಒಂದು ಚಾಜ. ಕಳಸ ಹಿಡಿಯುವವಳನ್ನು ಕಳಸಗಿತ್ತಿ ಅಂತ ಕರೆಯುತ್ತಾರೆ. ಮದುಮಕ್ಕಳ ಜೊತೆಯೇ ಅವರು ಹೋದಲ್ಲೆಲ್ಲ ಅವರ‍ ಜೊತೆ ಕಳಸದ ತಟ್ಟೆ ಹಿಡಿದುಕೊಂಡು ಈ ಕಳಸಗಿತ್ತಿ ಹೋಗಲೇಬೇಕು. ಕಳಸ ಅಂದರೆ ಆರತಿ ತಟ್ಟೆ ಹಿಡಿದು ಅದರಲ್ಲಿ ಎರಡು ನಿರಾಂಜನ, ಒಂದು ಕಳಸ ತಂಬಿಗೆಯಿದ್ದು ಅದರಲ್ಲಿ ಜೋಲದ ತೆನೆ ಇಟ್ಟಿರುತ್ತಾರೆ. ಕುಂಕುಮದ ಭರಣಿಯೂ ತಟ್ಟೆಯಲ್ಲಿರುತ್ತದೆ. ಇದೇ ಕಳಸ, ಐದು ವೀಳೆಯದೆಲೆ, ಇಟ್ಟು ನಡುವೆ ಜೋಳದ ತೆನೆ ಇಡುವುದು ವಾಡಿಕೆ. ಜೋಳದ ತೆನೆಯಿಲ್ಲದಿದ್ದರೆ ಸಜ್ಜೆಯ ತೆನೆ, ಅದೂ ಇಲ್ಲದಿದ್ದರೆ ಒಮ್ಮೊಮ್ಮೆ ಕಸೂತಿಯಿಂದ ತಯಾರಿಸಿದ ಮುತ್ತಿನ ತೆನೆಯನ್ನೂ ಇಡುವುದು ರೂಢಿ. ಆದರೆ ಕಳಸವನ್ನು ಖಾಲಿ ಮಾತ್ರ ಇಡುವುದಿಲ್ಲ. ಏನೂ ಇಲ್ಲದಿದ್ದರೆ ಕೊನೆಗೆ ಒಂದು ಹೂವನ್ನಾದರೂ ಅದರಲ್ಲಿಡುವುದು ಸಂಪ್ರದಾಯ. ಖಾಲಿ ಕಳಸ ಅಪಶಕುನವೆಂದು ಭಾವಿಸಲಾಗುತ್ತದೆ.
ಜಂಗಮಯ್ಯ ಬಂದು ಹಸೆ ಹೊಯ್ದ ನಂತರ ಮದುಮಕ್ಕಳು ಬಂದು ಅದರ ಮೇಲೆ ಕೂಡುತ್ತಾರೆ. ಮದುಮಗಳಿಗೆ ಹಂದರಲ್ಲಿಯೇ ಅರಿಶಿಣ ಪತ್ತಲ ಬಿಚ್ಚಿಸಿ ಸ್ಯಾಸಿಯ ಸೀರೆ, ಕುಪ್ಪಸದ ಆಯೇರಿ ನಡೆಯುತ್ತದೆ. ಆದರೆ ಮದುಮಗನಿಗೆ ಪಂಚರು ಮತ್ತು ದೈವದವರ ನಡುವೆ ಜಮಖಾನ ಹಾಸಿ, ಹಸೆಹೊಯ್ದು ಸ್ಯಾಸಿ ಆಯೇರಿ ಮಾಡುತ್ತಾರೆ. ಮದುಮಗನಿಗೆ ಅವನ ಹೆಂಡತಿಯ ತವರವರು ತಂದಿದ್ದ ಭಾರಿ ಬಟ್ಟೆ ಆಯೇರಿ, ಅಂದರೆ ಧೋತರ, ಅಂಗಿ, ಜರತಾರಿಯ ಬಣ್ಣದ ರುಮಾಲು, ಹೆಗಲಿಗೊಂದು ಶಲ್ಯ (ಟವೆಲ್ಲು) ಕೈ ಬೆರಳಿಗೊಂದು ಬಂಗಾರದ ಉಂಗುರಗಳು ಮಾಮೂಲು. ಸಾಧಾರಣವಾಗಿ ಜರಿಯಂಚಿನ ಗುಲಾಬಿ ಅಥವಾ ಹಳದಿ ಬಣ್ಣದ ಬೆಲೆ ಜಾಸ್ತಿಯಿರುವ ರುಮಾಲುಗಳಿರುತ್ತವೆ. ಜರದ ಚೌಕಳಿಯ, ಬಣ್ಣದ ಸಂಗಾರೆಡ್ಡಿ ರುಮಾಲು ತಂದರೆ ಬೀಗರ ಪ್ರತಿಷ್ಠೆ ಹೆಚ್ಚುತ್ತದೆ. ದೊತರ, ಅಂಗಿ ಶಲ್ಯಗಳಿಗಿಂತ ತಲೆ ಸುತ್ತುವ ರುಮಾಲು ಬಹಳ ಕಿಮ್ಮತ್ತಿನದ್ದಾಗಿರುತ್ತದೆ. ಹಾಗೆಯೇ ಮದುಮಗಳಿಗೆ ಗಂಡಿನ ಮನೆಯವರು ಭಾರಿ ಸೀರೆ ಅಂದರೆ ಸ್ಯಾಸಿ ಸೀರೆಯೇ ಸ್ಯಾಸಿ ಸೀರೆ ಎಂದೇ ಹೆಸರು. ಇದು ಹೆಚ್ಚಾಗಿ ಜರತಾರಿ ಮಡಿ, ಗುಲಾಬಿ ಬಣ್ಣದ ಬನಾರಸಿ ಸೀರೆ. ರೇಷಿಮೆಯ ಟೋಪಿನ ಸೆಗಿನ ಇಲಕಲ್ ಸೀರೆಗಳಾಗಿರುತ್ತವೆ. ಮದುಮಗಳ ತಲೆಗೆ ’ಮೊಗ್ಗಿನದಂಡೆ’ ಕಡ್ಡಾಯ. ದೊಡ್ಡ ದೊಡ್ಡ ತೊಂಡಿಲುಗಳ ಮಲ್ಲಿಗೆ ಮೊಗ್ಗಿನ ಜಾಳಿಗೆಗೆ  ’ನನೆದಂಡೆ’ ಯನ್ನು ಅವಳ ತಲೆಗೆ ಕಟ್ಟಿ ಮೇಲೆ ಸೀರೆಯ ಸೆರಗು ಹೊಚ್ಚುತ್ತಾರೆ ಮಿರಿಮಿರಿ ಮಿಂಚುವ ಬಣ್ಣದ ಕಾಗದಗಳಿಂದ ತಯಾರಾದ ಬಾಸಿಂಗಗಳನ್ನು ಮದುಮಕ್ಕಳ ಹಣೆಗೆ ಕಟ್ಟುತ್ತಾರೆ. ಜಂಗಮಯ್ಯನೇ ಮಣ ಮಣ ಮಂತ್ರ ಹೇಳುತ್ತಾ ತಾಳಿ ಚಾಜಾಗಳನ್ನು ಮಾಡಿಸುತ್ತಾನೆ. ಆಯೇರಿಯ ನಂತರ ಮದುಮಗಳಿಗೆ ವರನಿಂದ ತಾಳಿ ಕಟ್ಟಿಸಿ ಬೆಳ್ಳಿಯ ಕಾಲುಂಗುರ ಇಡುತ್ತಾರೆ. ಜಂಗಮಯ್ಯರೇ ಮದುವೆಯ ಪುರೋಹಿತ. ಮದುವೆಗೆ ಬಂದ ಎಲ್ಲರಿಂದ ಮದುಮಕ್ಕಳ ತಲೆಯ ಮೇಲೆ ಅಕ್ಕಿಕಾಳು, ಕುಂಕುಮ ಸೇರಿಸಿ ಸ್ಯಾಸಿ ತಯಾರಿಸುತ್ತಾರೆ. ಹಿಂದೆಲ್ಲ ನೀರಲ್ಲಿ ನೆನೆಸಿದ ಜೋಳದ ಕಾಳುಗಳಿಗೆ ಅರಿಶಿಣ ಸವರಿ ಸ್ಯಾಸಿ ತಯಾರಿಸುತ್ತಿದ್ದರು. ಅವನ್ನೇ ಅಕ್ಷತೆಯನ್ನಾಗಿ ಉಪಯೋಗಿಸುತ್ತಿದ್ದರು.
ಅಕ್ಷತೆ ಬಿದ್ದ ನಂತರ ಹೆಂಗಸರು ಸ್ಯಾಸಿ ಹಾಡನ್ನು ಹಾಡುತ್ತಾರೆ. ಯಾವುದೇ ಚಾಜವಾದರೂ ಸರಿ. ಅದಕ್ಕೊಂದು ಹಾಡು ನಮ್ಮ ಜನಪದರಲ್ಲಿ ಇದ್ದೇ ಇರುತ್ತದೆ. ಆಯಾ ಚಾಜಗಳ ಹಾಡನ್ನು ಹಾಡುತ್ತಾರೆ. ಚಾಜದ ಹಾಡಿನ ನಂತರ ಕೊನೆಗೊಂದು ಮಂಗಳಾರತಿ ಹಾಡು ಹಾಡಲೇಬೇಕಾಗುತ್ತದೆ. ಎಲ್ಲ ಚಾಜಗಳಿಗೂ ’ಮಂಗಳಾರತಿ’ ಯ ಹಾಡು ಕಡ್ಡಾಯವಾಗುತ್ತದೆ. ಈ ಕೆಳಗಿನ ಮಂಗಳಾರತಿಯ ಹಾಡನ್ನು ನಿದರ್ಶನವಾಗಿ ಪರಿಶೀಲಿಸಬಹುದು.
ಮುತ್ತೈದೆರೈದು ಮಂದಿ
ಬೆಳಗಿರಾರುತೀ…
ಕಲಬುರಗಿ ಶರಣ ಬಸವ
ಹಾರರ ಕೇರ‍್ಯಾಗೇ ನೆನದಾನೇ
ಕನ್ನೆ ಮುತ್ತೈದೇರೈದು ಮಂದಿ
ಬೆಳಗಿರಾರುತೀ..
ಯಾತಗಿರಿ ಮಲ್ಲಯ್ಯ
ಗುಡ್ಡದಾಗೇ ನೆನದಾನೇ
ರಂಬಿ ಮುತ್ತೈದೇರೈದು ಮಂದಿ
ಬೆಳಗಿರಾರುತೀ…
ಶರಣ ನಮ್ಮ ಬಸವಣ್ಣ
ಕಲ್ಯಾಣದಾಗ ನೆನದಾನೇ
ಬಾಲಿ ಮುತ್ತೈದೇರೈದು ಮಂದಿ
ಬೆಳಗಿರಾರೂತೀ…
ರಟಗಲ್ಲ ರೇವಣಸಿದ್ದ
ಬೆಟ್ಟದಾಗೆ ನೆನದಾನೇ
ಅಚ್ಚ ಮುತ್ತೈದೇರೈದು ಮಂದಿ
ಬೆಳಗಿರಾರೂತೀ…
ಶ್ರೀಶೈಲದ ಮಲ್ಲಿನಾಥ
ಬೆಟ್ಟದಾಗೆ ನೆನದಾನೇ
ಕಳಸಗೀತೇರೈದು ಮಂದಿ
ಬೆಳಗಿರಾರುತೀ…
ಹಿಂಗೆ ಆರತಿಯ ಹಾಡು ಮುಗಿದ ನಂತರ ಮದುಮಕ್ಕಳಿಗೆ ಆರತಿ ಬೆಳಗುತ್ತಾರೆ. ಒಗಟಾ ಹಾಕಿ ನಿನ್ ಗಂಡನ ಹೆಸರ ಹೇಳೇ ಗೆಳತೀ’ ಅಂತ ಆರತಿ ಬೆಳಗಿನ  ಮದುಮಗಳ ಗೆಳತಿಯರು ಅವಳಿಗೆ ಗಂಡನ ಹೆಸರು ಕೇಳುತ್ತಾರೆ. ಅವಳು ಒಗಟ ಹಾಕಿ ನಾಚಿಕೊಳ್ಳುತ್ತ ಗಂಡನ ಹೆಸರನ್ನು ಹೇಳುತ್ತಾಳೆ. ನಂತರ ಮದುಮಗನಿಗೂ  ಹೆಂಡತಿಯ ಹೆಸರು ಹೇಳೆಂದು ಕೇಳುತ್ತಾರೆ. ಅವನು ಮುಗುಳ್ನಗುತ್ತ ಹಗ್ಗದಲೆ ಹೊಡದರ ಮಗ್ಗಲಕ್ಕ ಬರ‍್ತಾಳ ನನ್ನೆಂಡ್ತಿ ಪಾರಿ ಅಂತ ಹೆಂಡತಿಯ ಪಾರ್ವತಿ ಅನ್ನೋ ಹೆಸರನ್ನು ಅಧಕ್ಕೆ ಮೊಟಕುಗೊಳಿಸಿ ಪಾರಿ ಅಂತ ಹೇಳುತ್ತಾನೆ. ಹೀಗೆ ಗಂಡು ಒಗಟು ಹೇಳುವಲ್ಲಿ ಕೂಡ ಪುರುಷ ಪ್ರಧಾನ ವ್ಯವಸ್ಥೆಯ ಛಾಪು ಕಾಣಿಸುತ್ತದೆ. ಹೆಂಡತಿ ಅಂದರೆ ಅವಳಿಗೆ, ಹೊಡೆಯುವ, ಬಡಿಯುವ, ಹಕ್ಕು ಗಂಡನಿಗಿದೆ ಎನ್ನುವ ಭಾವ ಆ ಒಗಟಿನಲ್ಲಿ ಅಡಗಿದ್ದಿರಬಹುದೇ ಅನ್ನುವ ಗುಮಾನಿ ಬರುತ್ತದೆ.
ಅದೇನೇ ಇರಲಿ, ಹೆಂಡತಿಯ ಹೆಸರನ್ನು ಗಂಡ ಪೂರ್ತಿಯಾಗಿ ಹೇಳುವುದಿಲ್ಲ. ಇಷ್ಟೆಲ್ಲ ಮುಗಿದಾಗ ರಾತ್ರಿ ತುಂಬ ಏರಿರುತ್ತದೆ. ಸ್ಯಾಸಿ ಬಿದ್ದ ನಂತರ ಮೆವಣಿಗೆ. ಹಿಂದೆಲ್ಲ ಸಿಗರಿಸಿದ ಜೋಡು ಕುದುರೆಗಳ ಮೇಲೆ ಮೆರವಣಿಗೆ ಮಾಡುತ್ತಿದ್ದರು. ಮದುಮಕ್ಕಳನ್ನು ಕುದುರೆಯ ಮೇಲೆ ಕೂಡಿಸಿ ಊರ ಮುಖ್ಯ ಬೀದಿಗಳಲ್ಲಿ ಸುತ್ತಿಸಿ ಮನೆಗೆ ಕರೆತರುತ್ತಿದ್ದರು.  ಮುಂದೆ ಹಲಗೆ ಬಾಜಿಯವರು, ಹಿಂದೆ ಕಳಸ ಹೊತ್ತ ಕಳಸಗಿತ್ತಿ, ನಡುವೆ ಕುದುರೆಗಳ ಮೇಲೆ ಮದುಮಕ್ಕಳೂ. ಹಿಂದೆಲ್ಲ ಹೆಂಗಸರು ಹಾಡುತ್ತ ನಿಧಾನವಾಗಿ ಮೆರವಣಿಗೆಯೊಂದಿಗೆ ನಡೆದು ಬರುತ್ತಿರುತ್ತಾರೆ.

ಕಾಮೆಂಟ್‌ಗಳಿಲ್ಲ: