ಸೌಜನ್ಯ: ಪ್ರಜಾವಾಣಿ
ಕೇಳಬಾರದ ಕಥೆಯ ಕಟ್ಟಬಾರದು
Tue, 4th
Mar, 2014
‘ಶತ್ರುಗಳು ಹೇಳುತ್ತಾ
ಬಂದಿರುವ ಸುಳ್ಳು ಭರವಸೆಗಳಿಂದ ಜನ ಕುರುಡರಾಗಿದ್ದಾರೆ. ಆ ಘಟನೆಯಿಂದ ನಮ್ಮ ಸ್ವಾತಂತ್ರ್ಯ
ಮತ್ತು ಸ್ವಾಭಿಮಾನ ನಾಶವಾಗಿದೆ. ರಾಷ್ಟ್ರದ ಏಕತೆಗೇ ಇಂದು ಭಂಗ ಬಂದಿದೆ. ಜನರ ಬಡತನದ
ವೇದನೆಯನ್ನು ನುಂಗುವುದು ಬಲು ಹಿಂಸೆ. ಒಂದು ಕಡೆ ಕಾರ್ಮಿಕರು ನಿರುದ್ಯೋಗದಿಂದ ನರಳುತ್ತಿದ್ದರೆ,
ಮತ್ತೊಂದು ಕಡೆ ಮಧ್ಯಮ ವರ್ಗ ಮತ್ತು ಕುಶಲಕರ್ಮಿಗಳು ನಲುಗಿಹೋಗಿದ್ದಾರೆ.
ಇದರಿಂದ ಈ ರಾಷ್ಟ್ರ
ನಾಶವಾಗಿದೆ. ಅಷ್ಟೇ ಅಲ್ಲ, 2,000 ವರ್ಷಗಳ ಪರಂಪರೆಯುಳ್ಳ ಮಾನವ ಸಂಸ್ಕೃತಿ ಮತ್ತು ನಾಗರಿಕತೆ
ಕುಸಿದುಬೀಳುತ್ತಿದೆ. ಇದಕ್ಕೆಲ್ಲಾ ಈ ರಾಷ್ಟ್ರವನ್ನಾಳಿದ ನಮ್ಮ ಹಿಂದಿನ ಸರ್ಕಾರವೇ ಕಾರಣ.
ಅವರಿಂದಾಗಿ ಕುಟುಂಬದ ಮೌಲ್ಯಗಳು ಮತ್ತು ನೈತಿಕತೆಯ ಅಡಿಪಾಯವೇ ಅಲುಗಾಡುತ್ತಿದೆ’.
ಈ ಭಾಷಣವನ್ನು ಆವೇಶಭರಿತ ಎನ್ನುವುದಕ್ಕಿಂತ ಆರ್ಭಟದ ಭಾಷಣ
ಎನ್ನುವುದೇ ಸರಿ. ಇಂದೋ ನೆನ್ನೆಯೋ ಕಿವಿಯಲ್ಲಿ ಭೋರ್ಗರೆದಂತೆ ಭಾಸವಾಗುತ್ತದೆ. ಆದರೆ,
ಇದು ೮೦ ವರ್ಷಗಳ ಹಿಂದೆ ಆಕ್ರೋಶದಿಂದ ಕಿರುಚಿಕೊಂಡು ಮಾಡುತ್ತಿದ್ದ ಭಾಷಣವಾಗಿತ್ತು. ಕೇಳುತ್ತಿದ್ದ
ಜನ ಮುಗಿಲು ಮುಟ್ಟುವಂತೆ ಭಾವಾವೇಶದಿಂದ ಕೂಗುತ್ತಿದ್ದರು. ಎಲ್ಲೆಲ್ಲೂ
ಸ್ವಾಸ್ತಿಕದ ಸಂಕೇತವನ್ನು ಹೊತ್ತ ಬಾವುಟಗಳು ಹಾರಾಡುತ್ತಿದ್ದವು. ರಕ್ಷಕನಂತೆ ಕಂಡ ಆ ವ್ಯಕ್ತಿ;
ಜಗತ್ತು ಹಿಂದೆಂದೂ ಕಾಣದ ಕ್ರೌರ್ಯವನ್ನು ಎಸಗಬಲ್ಲನೆಂದು ಯಾರೂ ಭಾವಿಸಿರಲಿಲ್ಲ. ಜರ್ಮನ್‌ರು
ತಮ್ಮ ಕಷ್ಟಗಳನ್ನು ಪರಿಹರಿಸಲು ಬಂದ ದೇವರೆಂದೇ ಭಾವಿಸಿದ್ದ ವ್ಯಕ್ತಿ ಬೇರೆ ಯಾರೂ ಅಲ್ಲ,
ಅಡಾಲ್ಫ್ ಹಿಟ್ಲರ್.
ಇವತ್ತಿಗೂ ಅವನ ಹೆಸರು ಜನರನ್ನು ಬೆಚ್ಚಿಬೀಳಿಸುತ್ತದೆ. ಅಷ್ಟೇ ಏಕೆ,
ಇಂದು ಜರ್ಮನ್‌ರು ಅವನ ಹೆಸರನ್ನು ಹೇಳುವುದಿಲ್ಲ. ಯಾರಾದರೂ ಜರ್ಮನಿಗೆ ಹೋದಾಗ
ಕುತೂಹಲದಿಂದ ಹಿಟ್ಲರನ ಬದುಕಿಗೆ ಸಂಬಂಧಪಟ್ಟ ನೆಲೆಗಳನ್ನೇನಾದರೂ ನೋಡಬಯಸಿದರೆ ಜರ್ಮನ್‌ರು ನಾವು
ಯಾವುದೋ ವಿಚಿತ್ರವಾದ ಪ್ರಶ್ನೆ ಕೇಳುತ್ತಿರುವಂತೆ ಮುಖ ಮಾಡುತ್ತಾರೆ. ಅವರ ಚರಿತ್ರೆಯ
ಪಠ್ಯಗಳಲ್ಲೂ ಹಿಟ್ಲರ್‌ನ ಗೈರುಹಾಜರಿ ಎದ್ದುಕಾಣುತ್ತದೆ. ಇಂದು ಅವರಿಗೆ ಅದು ಯಾರೂ ಕೇಳಬಾರದ
ಕಥೆಯಾಗಿದೆ. ನೆನಪುಗಳನ್ನು ಅಳಿಸಿಹಾಕುವ ಪ್ರಯತ್ನ ನಡೆದಿದೆ.
ಅಳಿಸಿಹಾಕಲಾರದ ಮನುಕುಲದ ದುರಂತಗಳನ್ನು ಮೊದಲೇ ತಡೆಯಬೇಕಾದ
ಜವಾಬ್ದಾರಿ ಸಮಾಜಕ್ಕೆ ಇರುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇರಿಸಿ
ಹೋಗಬೇಕಾಗಿರುವ ಈ ಹೊತ್ತಿನಲ್ಲಿ ನಾವೇನಾದರೂ ಮತ್ತೊಮ್ಮೆ ಸರ್ವಾಧಿಕಾರಿಗಳ ಸುಳಿಗೆ
ಸಿಕ್ಕಿಕೊಳ್ಳಬಹುದೇ ಎಂಬ ಆತಂಕ ರಾಜಕೀಯವಾಗಿ ಎಚ್ಚರವಾಗಿರುವ ಯಾವುದೇ ಸಮಾಜವನ್ನು ಕಾಡುತ್ತದೆ.
ಇದು ಚರಿತ್ರೆಯಿಂದ ಕಲಿಯಲೇಬೇಕಾದ ಪಾಠವೂ ಆಗಿದೆ.
ಎರಡನೇ ಮಹಾಯುದ್ಧಕ್ಕೆ ಎಡೆಮಾಡಿದ ಹಿಟ್ಲರ್ ಮತ್ತು ಮುಸಲೋನಿಯ ನಂತರವೂ
ಸರ್ವಾಧಿಕಾರಿಗಳು ಉದಯಿಸುತ್ತಲೇ ಇದ್ದಾರೆ. ೧೯೭೦ರ ದಶಕದಲ್ಲಿ ಬಂದ ಫಿಲಿಪ್ಪೀನ್ಸ್‌ನ ಫರ್ಡಿನೆಂಡ್
ಮಾರ್ಕೋಸ್ ದೇಶದ ಸಂವಿಧಾನಕ್ಕೆ ತಿಲಾಂಜಲಿಯನ್ನು ಹಾಡಿ ಸರ್ವಾಧಿಕಾರಿಯಾದ. ಕಾಂಬೋಡಿಯಾದ
ಡಿಕ್ಟೇಟರ್ ಪೋಲ್ಪಾಟ್ ನಡೆಸಿದ ನರಮೇಧ ಹಿಟ್ಲರ್‌ನ ಸಂತಾನ ಕೊನೆಗೊಂಡಿಲ್ಲವೆಂದು
ಸಾಬೀತು ಮಾಡಿತು. ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಲ್ಲಿ ಅಧಿಕಾರಕ್ಕೆ ಬಂದ ರಾಜಕೀಯ ನಾಯಕರು
ಸಂವಿಧಾನವನ್ನು ಹತ್ತಿಕ್ಕಿ ಸರ್ವಾಧಿಕಾರಿಗಳಾಗಿದ್ದಾರೆ. ಧರ್ಮ, ಭಾಷೆ, ಜನಾಂಗ, ಜಾತಿ,
ಬುಡಕಟ್ಟು ಯಾವುದೋ ನೆಪ ಹೂಡಿ ಜನರಲ್ಲಿ ದ್ವೇಷವನ್ನು ಹುಟ್ಟುಹಾಕಿದ್ದಾರೆ.
ಅಸಹಾಯಕರ ಕಗ್ಗೊಲೆ ಮಾಡಿ ರುದ್ರನರ್ತನ ಮಾಡಿದ್ದಾರೆ. ಆದ್ದರಿಂದ ಸಮಕಾಲೀನ
ಸಂದರ್ಭದಲ್ಲಿ ಫ್ಯಾಸಿಸಂ ತಲೆ ಎತ್ತುವುದಿಲ್ಲವೆಂದೂ, ಎಲ್ಲರ ಒಳಿತನ್ನು ಬಯಸುವ
ಪ್ರಜಾಪ್ರಭುತ್ವದ ದೇಶದಲ್ಲಿದ್ದೇವೆಂದು ಮುಗ್ಧವಾಗಿ ಕೈಕಟ್ಟಿ ಕೂರಲು ಸಾಧ್ಯವಿಲ್ಲ.
ನಮ್ಮ ಸುತ್ತಲ ರಾಜಕೀಯ ಶಕ್ತಿಗಳಲ್ಲಿ ಫ್ಯಾಸಿಸಂನ ಸ್ವರೂಪಗಳೇನಾದರೂ ಇವೆಯೇ ಎಂದೂ ಗಮನಿಸುತ್ತಲೇ ಇರಬೇಕಾಗುತ್ತದೆ. ಸರ್ವಾಧಿಕಾರಿಯಾಗಬಲ್ಲ ವ್ಯಕ್ತಿಯನ್ನು ಧೀರೋದಾತ್ತ ನಾಯಕನಾಗಿ ಮೆರೆಸಲಾಗುತ್ತದೆ.
ನಮ್ಮ ಸುತ್ತಲ ರಾಜಕೀಯ ಶಕ್ತಿಗಳಲ್ಲಿ ಫ್ಯಾಸಿಸಂನ ಸ್ವರೂಪಗಳೇನಾದರೂ ಇವೆಯೇ ಎಂದೂ ಗಮನಿಸುತ್ತಲೇ ಇರಬೇಕಾಗುತ್ತದೆ. ಸರ್ವಾಧಿಕಾರಿಯಾಗಬಲ್ಲ ವ್ಯಕ್ತಿಯನ್ನು ಧೀರೋದಾತ್ತ ನಾಯಕನಾಗಿ ಮೆರೆಸಲಾಗುತ್ತದೆ.
ಎಲ್ಲೆಲ್ಲೂ ಕಟೌಟ್, ಬ್ಯಾನರ್‌ಗಳನ್ನು
ಹಚ್ಚಿ ಜನರ ಮನದಾಳಕ್ಕೆ ಅಂತಹ ವ್ಯಕ್ತಿಯ ವ್ಯಕ್ತಿತ್ವವನ್ನು ಹೆಪ್ಪುಗಟ್ಟಿಸಲಾಗುತ್ತದೆ.
ಪ್ರಚಾರ ಮೊದಲ ಮಂತ್ರ. ಅದರಲ್ಲಿ ಮಾಧ್ಯಮಗಳ ಪಾತ್ರ ಹಿರಿದಾಗಿರುತ್ತದೆ. ಟಿ.ವಿ. ಚಾನೆಲ್‌ಗಳಲ್ಲಿ
ನಿರಂತರವಾಗಿ ಆ ವ್ಯಕ್ತಿಯನ್ನು ಬಿಂಬಿಸಲಾಗುತ್ತದೆ. ಮಾಧ್ಯಮಗಳನ್ನು ತಮ್ಮ ಕೈಯಲ್ಲಿ ಇರಿಸಿಕೊಳ್ಳಲಾಗುತ್ತದೆ.
ಹಿಟ್ಲರನ ಕಾಲಕ್ಕೆ ರೇಡಿಯೊ ಭಾಷಣಗಳು ಹಾಗೂ ಸಾರ್ವಜನಿಕ ಭಾಷಣಗಳು ಜನರನ್ನು ತಲುಪಲು
ಇದ್ದ ಪ್ರಮುಖ ಮಾರ್ಗವಾಗಿತ್ತು.
ಮಾಧ್ಯಮಗಳೇ ಮುಂದಾಗಿ ಮೊಳೆಯುವ ನಾಯಕನಿಗೆ ನೀರೆರೆಯುತ್ತವೆಂದು
ಹೇಳಲಾಗುವುದಿಲ್ಲ. ಅವು ಒತ್ತಡಕ್ಕೆ ಇಲ್ಲವೇ ಆಮಿಷಕ್ಕೂ ಬಲಿಯಾಗುತ್ತವೆ. ಇಂದು ಟಿ.ವಿ.
ಮಾಧ್ಯಮಗಳಲ್ಲದೆ ಕಂಪ್ಯೂಟರ್ ಜಾಲಗಳ ಮೂಲಕ ಅಭಿಪ್ರಾಯವನ್ನು ರೂಪಿಸಲಾಗುತ್ತಿದೆ. ತಾವೇ
ಪ್ರತಿಕ್ರಿಯೆಗಳನ್ನೂ ನೀಡಿ ಜನಾಭಿಪ್ರಾಯವೆಂದು ನಂಬಿಸಲಾಗುತ್ತದೆ. ಇದನ್ನೆಲ್ಲಾ ರೂಪಿಸುವ
ಉದ್ಯೋಗಗಳು ಹುಟ್ಟಿಕೊಂಡಿರುವುದು ಹೊಸ ತಂತ್ರಜ್ಞಾನದ ಕೊಡುಗೆಯೇ ಸರಿ.
ಫ್ಯಾಸಿಸ್ಟ್ ನಾಯಕರ
ವಿಶೇಷವೆಂದರೆ ಆರಂಭದಲ್ಲಿ ಅವರ ವ್ಯಕ್ತಿತ್ವ ಎಲ್ಲರನ್ನೂ ಸೆಳೆಯುವಂತಿರುತ್ತದೆ.
ಅನುಯಾಯಿಗಳು ಪ್ರಶ್ನಾತೀತವಾಗಿ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆ. ದೋಷ ಗುರುತಿಸುವ
ಹೊತ್ತಿಗೆ ಕಾಲ ಮಿಂಚಿರುತ್ತದೆ. ಕಣ್ಣ ಮುಂದೆಯೇ ಸರ್ವಾಧಿಕಾರಿಯೊಬ್ಬ ಭೂತಾಕಾರವಾಗಿ
ಬೆಳೆದಾಗ ಕೈ ಹೊಸೆದುಕೊಳ್ಳಬೇಕಾಗುತ್ತದೆ.
ಸರ್ವಾಧಿಕಾರಿಗಳು ಬಿರುದು, ಬಾವಲಿಗಳನ್ನು ಹಚ್ಚಿಕೊಳ್ಳಲು ಸದಾ ಬಯಸುತ್ತಾರೆ.
ಸ್ವಯಂಘೋಷಿತ ವಿಶೇಷಣಗಳಿಂದ ಹೊಗಳಿಸಿಕೊಳ್ಳುತ್ತಾರೆ. ನಾಜಿ ಪಕ್ಷದ ನಾಯನಾಗಿದ್ದ
ಹಿಟ್ಲರ್‌ನನ್ನು ಜನ ‘ಫ್ಯೂರರ್’ ಎಂದು ಕರೆಯುತ್ತಿದ್ದರು. ಅದೂ ಸ್ವಯಂಘೋಷಿತ ಬಿರುದೇ
ಆಗಿತ್ತು. ತಾನು ಸರ್ವೋಚ್ಚ ಮಿಲಿಟರಿ ನಾಯಕನೂ, ಸರ್ವಶ್ರೇಷ್ಠ ನ್ಯಾಯಾಧೀಶನೂ ಎಂದು
ಕರೆದುಕೊಂಡಿದ್ದನು. ಅವನು ಬಳಸುತ್ತಿದ್ದ ಘೋಷಣೆಗಳಲ್ಲಿ ‘ಒಂದು ಜನ, ಒಂದು ಸಾಮ್ರಾಜ್ಯ, ಒಬ್ಬ
ನಾಯಕ’ ಎಲ್ಲೆಲ್ಲೂ ರಾರಾಜಿಸುತ್ತಿತ್ತು.
ಸಂವಿಧಾನ ಬದ್ಧವಾದ ಚುನಾವಣೆ
ಮೂಲಕವೇ ಗೆದ್ದು ಬಂದರೂ ನಿಧಾನವಾಗಿ ತನ್ನ ಅಧಿಕಾರವನ್ನು ಹೆಚ್ಚಿಸಿಕೊಳ್ಳುತ್ತಾ ಮುನ್ನಡೆದನು.
ಪಕ್ಷವಿದ್ದರೂ ಚುನಾವಣೆಗಳಲ್ಲಿ ಅದು ಮರೆಮಾಚಿರುತ್ತಿತ್ತು. ಅವನೊಬ್ಬನನ್ನೇ ಫೋಕಸ್
ಮಾಡಲಾಗುತ್ತಿತ್ತು. ‘ಈ ಗಳಿಗೆ ಬರಬೇಕಾದರೆ ನಾನು ಸತತವಾಗಿ ಹದಿನಾಲ್ಕು ವರ್ಷ ದುಡಿದಿದ್ದೇನೆ,
ಅದೂ ನಿಮಗಾಗಿ’ ಎಂದು ಹೇಳುತ್ತಿದ್ದನು. ಏಳು ಜನರಿಂದ ಆರಂಭವಾದ ಪಕ್ಷ ದೇಶವನ್ನೇ ಆವರಿಸಿತ್ತು.
‘ಮುಂದಿನ ಭವಿಷ್ಯವೆಲ್ಲಾ ನಿಮ್ಮದೇ’ ಎಂದಾಗ ಜನ ಅವನನ್ನು ಬಲವಾಗಿ ನಂಬಿದ್ದರು.
ಫ್ಯಾಸಿಸ್ಟರು ರಾಷ್ಟ್ರೀಯತೆಯನ್ನು ಮುಂದಿಟ್ಟು, ಅದರ ಏಕತೆಗಾಗಿ ಆರ್ಥಿಕಾಭಿವೃದ್ಧಿಯನ್ನು
ಬಯಸುವುದಾಗಿ ಹೇಳುತ್ತಾರೆ. ರಾಷ್ಟ್ರೀಯತೆಯ ಸಮರ್ಥನೆಗೆ ಚರಿತ್ರೆ, ಧರ್ಮ, ಪುರಾಣಗಳನ್ನು
ಬೆಸೆಯುತ್ತಾರೆ. ಜನಾಂಗ ಶ್ರೇಷ್ಠತೆಯ ಮಾತು ಸ್ವಾಭಿಮಾನವನ್ನೂ ಮೀರಿ ದುರಭಿಮಾನವನ್ನು
ತುಂಬುತ್ತದೆ. ಈ ಎಲ್ಲಾ ವಿಚಾರಗಳೂ ಅತಾರ್ಕಿಕವಾದರೂ ಅದರಲ್ಲೊಂದು ತರ್ಕವನ್ನು ಕಟ್ಟುತ್ತಾರೆ.
ಜನರ
ಮನದಲ್ಲಿ ಅತೃಪ್ತ, ಅಶಾಂತ ಪರಿಸ್ಥಿತಿಯಲ್ಲಿ ಬದುಕುತ್ತಿರುವಂತೆ ಭಾಸವಾಗುತ್ತದೆ.
ಮನದಲ್ಲಿ ಅತೃಪ್ತ, ಅಶಾಂತ ಪರಿಸ್ಥಿತಿಯಲ್ಲಿ ಬದುಕುತ್ತಿರುವಂತೆ ಭಾಸವಾಗುತ್ತದೆ.
ಆ ಗಳಿಗೆಯಲ್ಲಿ ಬಿಡುಗಡೆ ನೀಡುವ ಮಾಂತ್ರಿಕನಾಗಿ ಆ ನಾಯಕ ಕಾಣಿಸಿಕೊಳ್ಳುತ್ತಾನೆ.
ಅರಾಜಕ ಪರಿಸ್ಥಿತಿಯನ್ನು ಹುಟ್ಟುಹಾಕುವುದೂ ಯೋಜನೆಯ ಭಾಗವಾಗಿರುತ್ತದೆ. ರಾಷ್ಟ್ರೀಯತೆಯ
ಭಾಗವಾಗಿ ಸ್ವದೇಶಿ ಪರಿಕಲ್ಪನೆಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ವಾಸ್ತವದಲ್ಲಿ ವಿದೇಶಿ
ಬಂಡವಾಳವೇ ಅವರ ಬಂಡವಾಳವಾಗಿರುತ್ತದೆ. ಇದು ಮಹಾ ಯುದ್ಧದ ನಂತರ ತಲೆ ಎತ್ತಿದ ಸರ್ವಾಧಿಕಾರಿಗಳೆಲ್ಲರಲ್ಲೂ
ಕಾಣುವ ಸಾಮಾನ್ಯ ಗುಣ. ವಿದೇಶಿ ಬಂಡವಾಳದ ಪುಂಗಿಯ ನಾದಕ್ಕೆ ಈ ಸರ್ವಾಧಿಕಾರಿಗಳು
ತಲೆತೂಗುತ್ತಾರೆ. ಇದನ್ನು ನವ ಫ್ಯಾಸಿಸಂ ಎನ್ನಬಹುದು.
ಇದೊಂದು ವಿಚಿತ್ರವಾದ
ಪರಿಸ್ಥಿತಿ. ಅಮೆರಿಕದ ಸರ್ವಾಧಿಕಾರವನ್ನು ವಿರೋಧಿಸಿ ಸರ್ವಾ-ಧಿಕಾರಿಗಳಾದವರೂ ಇದ್ದಾರೆ. ಹಾಗೆ
ಬಂದ ಸದ್ದಾಂ ಹುಸೇನನನ್ನು ಅಮೆರಿಕವೇ ಮುಗಿಸಿತು. ಮೂರನೇ ವಿಶ್ವದ ಆರ್ಥಿಕ ರಾಜಕೀಯದಲ್ಲಿ ಸದಾ
ಕೈ ಹಾಕುವ ಅಮೆರಿಕ ತನಗೆ ಅನುಕೂಲವಾಗುವವರೆಗೆ ಯಾವುದೇ ಸರ್ಕಾರವನ್ನು ಬೆಂಬಲಿಸುತ್ತದೆ.
ತಾನು ಹಾಕಿದ ಗೆರೆಯನ್ನು ಮೀರಿದೆ ಎನಿಸಿದಾಗ ಆ ಸರ್ಕಾರ ಇಲ್ಲವೇ ಅದನ್ನು ಮುನ್ನಡೆಸುವ ವ್ಯಕ್ತಿ
ಮೇಲೆ ಗೂಬೆ ಕೂರಿಸತೊಡಗುತ್ತದೆ.
ಸರ್ವಾಧಿಕಾರಿಯಾಗಿದ್ದನೆಂದೂ ಪ್ರಜಾಪ್ರಭುತ್ವ ವಿರೋಧಿ ಎಂದೂ
ಬಿಂಬಿಸಿ ಮಿಲಿಟರಿ ಕಾರ್ಯಾಚರಣೆಯ ಮೂಲಕ ಪರಿಸ್ಥಿತಿಯನ್ನು ತನ್ನ ಹತೋಟಿಗೆ ತೆಗೆದುಕೊಳ್ಳುತ್ತಾ
ಬಂದಿದೆ. ಹಾಗಾಗಿ ಯಾವುದೇ ದೇಶದ ಚುನಾವಣೆಯಲ್ಲಿ ಅದರ ಲೆಕ್ಕಾಚಾರಗಳೂ ಕೆಲಸ ಮಾಡುತ್ತವೆ. ದೇಶದ
ಒಳಗೆ ಫ್ಯಾಸಿಸ್ಟರಂತೆ ಕಾಣಿಸಿಕೊಂಡು ಹೊರಗಿನ ಶಕ್ತಿಗೆ ಅಡಿಯಾಳಾಗಿರುವುದು ಸಮಕಾಲೀನ ರಾಜಕೀಯ
ಸ್ವರೂಪವಾಗಿದೆ.
ಸರ್ವಾಧಿಕಾರಿಯನ್ನು ಹುಟ್ಟು
ಹಾಕುವ, ಮಟ್ಟ ಹಾಕುವ ದೊಡ್ಡ ಡಿಕ್ಟೇಟರ್ ಮೂಲದಲ್ಲಿ ಧರ್ಮದ ನೆಲೆಯಲ್ಲಿ ಜನರ ಮನಸ್ಸಿಗೆ
ಲಗ್ಗೆ ಹಾಕುತ್ತಾನೆ. ಹಿಟ್ಲರ್‌ನ ಜನಾಂಗ ದ್ವೇಷಕ್ಕೆ ಧರ್ಮದ ಲೇಪನವೂ ಬೆರೆತು ಹದಗೊಂಡಿತ್ತು.
ಮೂಲಭೂತವಾದವೇ ಫ್ಯಾಸಿಸಂಗೆ ಅಡಿಪಾಯ. ಹಾಗಾಗಿ ಸಂಪ್ರದಾಯ, ಸನಾತನ ಸಂಸ್ಕೃತಿಯ ಹೆಸರಿನಲ್ಲಿ
ಸಾಮಾಜಿಕ ಬೆಳವಣಿಗೆಗೆ ಮಾರಕವಾಗುತ್ತದೆ. ಪುರುಷ ಪ್ರಾಧಾನ್ಯವನ್ನು ಎತ್ತಿಹಿಡಿಯುತ್ತದೆ.
ಹೆಣ್ಣೆಂದರೆ ತಾಯಿ, ಅಕ್ಕ ಇತ್ಯಾದಿಯಾಗಿ ಹೇಳುತ್ತಾ ಬದುಕಿನ ಮೌಲ್ಯಗಳನ್ನು ಕುಟುಂಬದ ಜೊತೆಗೆ
ನೋಡಲು ಬಯಸುತ್ತದೆ. ಇದ್ದರೂ ಆಕೆ ಕೆಳಗಿನ ಕೆಲಸಗಳಿಗೇ ಹೊರತು ಉನ್ನತ ಹುದ್ದೆಗಳಿಗಲ್ಲ.
ವೇದಿಕೆಗಳಲ್ಲಿ ಕಾರ್ಮಿಕರು
ಮತ್ತು ಬಡವರ ಪರವಾಗಿ ಮಾತನಾಡಿದರೂ ವಾಸ್ತವದಲ್ಲ್ಲಿ ಬಂಡವಾಳಶಾಹಿ ಪರವಾದ ನಿಲುವೇ ಇರುತ್ತದೆ.
ರಾಷ್ಟ್ರ ಕಟ್ಟುವ ಹೆಸರಿನಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತದೆ. ತಮ್ಮ ನಾಯಕನಿಗಾಗಿ,
ದೇಶಕ್ಕಾಗಿ ದುಡಿಯುತ್ತಿದ್ದೇವೆಂದು ನಂಬುವ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸದೇ
ಹೋಗುತ್ತಾರೆ. ದುಡಿಮೆ ಹೆಚ್ಚುತ್ತದೆ, ಬಂಡವಾಳಗಾರ ಮತ್ತಷ್ಟು ಕೊಬ್ಬುತ್ತಾನೆ.
ಬಂಡವಾಳಶಾಹಿಗಳು ಪ್ರಜಾಪ್ರಭುತ್ವವಾದಕ್ಕಿಂತ ಸರ್ವಾಧಿಕಾರವನ್ನು ಬಯಸುತ್ತಾರೆ, ಅಲ್ಲಿ
ಕಾರ್ಮಿಕ ಹೋರಾಟಗಳು ಮಣ್ಣು ಪಾಲಾಗುತ್ತವೆ. ಅಧಿಕಾರದ ಚಾವಟಿ ಎಲ್ಲರನ್ನೂ ಹತೋಟಿಯಲ್ಲಿರಿಸುತ್ತದೆ.
ಊಳಿಗಮಾನ್ಯ ವ್ಯವಸ್ಥೆಯ ಹಳೆಯ ಮೌಲ್ಯಗಳು ಹುತ್ತವಾಗುತ್ತವೆ.
ಆಧುನಿಕ ಬಂಡವಾಳ ಪ್ರಭುಗಳಾದ
ಬಹುರಾಷ್ಟ್ರೀಯ ಕಂಪೆನಿಗಳು ಸರ್ವಾಧಿಕಾರಿಗಳ ಬೆಂಬಲಕ್ಕೆ ನಿಲ್ಲುತ್ತವೆ. ಬಡತನ ವಿರೋಧಿಸುತ್ತಾ
ಹುಟ್ಟುವ ಸರ್ವಾಧಿಕಾರ, ಆಳದಲ್ಲಿ ಬಡವನನ್ನು ದ್ವೇಷಿಸುತ್ತದೆ. ಸಮಾನತೆ, ಸಾಮಾಜಿಕ ನ್ಯಾಯ,
ವ್ಯಕ್ತಿ ಸ್ವಾತಂತ್ರ್ಯ, ಮಾನವ ಹಕ್ಕುಗಳು ಗಾಳಿಗೆ ತೂರಿದ ತರಗೆಲೆಯಾಗುತ್ತವೆ. ಇಟಲಿಯ
ಫ್ಯಾಸಿಸ್ಟ್ ನಾಯಕ ಮುಸಲೋನಿ ಮಾತುಗಳಲ್ಲಿ ಹೇಳುವುದಾದರೆ ‘ಜನರಿಗೆ ಬೇಕಾಗಿರುವುದು
ಸ್ವಾತಂತ್ರ್ಯವಲ್ಲ, ಶಿಸ್ತು ಮತ್ತು ಕಾನೂನು. ವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಸತ್ತ ಶವ,
ಅದನ್ನು ನಾನು ಒದ್ದು ಆಚೆಗೆ ಹಾಕಿದ್ದೇನೆ’.
ಸರ್ವಾಧಿಕಾರಿ ರೂಪಿಸುವ
ನಿಯಮಗಳೇ ಅಂತಿಮ. ಮೀರಿದವರ ತಲೆಗಳನ್ನು ಚೆಂಡಾಡುತ್ತಾರೆ. ಎಲ್ಲೆಲ್ಲೂ ಭಯದ ವಾತಾವರಣ ಆವರಿಸಿರುತ್ತದೆ.
ಅಭಿವ್ಯಕ್ತಿ ಸ್ವಾತಂತ್ರ್ಯ ನೆಲಕಚ್ಚುತ್ತದೆ. ಹಾಗಾಗಿ ಬೌದ್ಧಿಕ ವರ್ಗ ಭೂಗತವಾಗುತ್ತದೆ.
ಇಲ್ಲವೇ, ದೇಶ ಬಿಟ್ಟು ಪಲಾಯನ ಮಾಡುತ್ತದೆ.
ಫ್ಯಾಸಿಸ್ಟ್ ಬೆಂಬಲಿಗರು ಆರಂಭದಲ್ಲಿ ಪರಿಸ್ಥಿತಿಯ ಲಾಭ ಪಡೆದು ತಮ್ಮ ಹಗೆ
ತೀರಿಸಿಕೊಳ್ಳುತ್ತಾರೆ, ಸಂಭ್ರಮಿಸುತ್ತಾರೆ, ಆ ನಂತರದಲ್ಲಿ ಜನಾಂಗ ದ್ವೇಷದಿಂದ
ಕೊಲೆಯಾದ ಸಮುದಾಯವನ್ನು ಕಂಡು ಭಯಭೀತರಾಗುತ್ತಾರೆ. ತಮ್ಮ ಬಗೆಗೆ ತಾವೇ ಅಸಹ್ಯ ಪಡತೊಡಗುತ್ತಾರೆ.
ಭಾರತದಂತಹ ದೇಶದಲ್ಲಿ
ನೂರಕ್ಕೆ ನೂರು ಫ್ಯಾಸಿಸ್ಟ್‌ರಾಗಿ ಕಾಣದಿದ್ದರೂ ಮೆದುವಾದ ಫ್ಯಾಸಿಸಂ ತನ್ನ
ಅವಕಾಶಗಳಿಗಾಗಿ ಸದಾ
ಕಾಯುತ್ತಿರುತ್ತದೆ. ಮೆದುವಾದ ಫಾಸಿಸಂ ಬಣ್ಣ ಬದಲಿಸುವುದು ಸುಲಭ. ಹಾಗೆ ನೋಡಿದರೆ ಸರ್ವಾಧಿಕಾರಿ ಸ್ವಯಂಭುವಲ್ಲ, ಅವನನ್ನು ರೂಪಿಸುವಲ್ಲಿ ಪಕ್ಷದ ಯೋಜನೆಯೂ ಅಡಗಿರುತ್ತದೆ. ಸರ್ವಾಧಿಕಾರಿಗಳ ಗುರು ಅಮೆರಿಕ, ಭಾರತದ ಮಟ್ಟಿಗೆ ತನ್ನದೇ ಆದ ಲೆಕ್ಕಾಚಾರಗಳನ್ನೂ ಹೊಂದಿದೆ.
ಕಾಯುತ್ತಿರುತ್ತದೆ. ಮೆದುವಾದ ಫಾಸಿಸಂ ಬಣ್ಣ ಬದಲಿಸುವುದು ಸುಲಭ. ಹಾಗೆ ನೋಡಿದರೆ ಸರ್ವಾಧಿಕಾರಿ ಸ್ವಯಂಭುವಲ್ಲ, ಅವನನ್ನು ರೂಪಿಸುವಲ್ಲಿ ಪಕ್ಷದ ಯೋಜನೆಯೂ ಅಡಗಿರುತ್ತದೆ. ಸರ್ವಾಧಿಕಾರಿಗಳ ಗುರು ಅಮೆರಿಕ, ಭಾರತದ ಮಟ್ಟಿಗೆ ತನ್ನದೇ ಆದ ಲೆಕ್ಕಾಚಾರಗಳನ್ನೂ ಹೊಂದಿದೆ.
ಭಾರತದ ಮೂಲಭೂತವಾದ
ಮುಸ್ಲಿಂ ವಿರೋಧವಾಗುವುದನ್ನು ಅಮೆರಿಕ ಒಪ್ಪುತ್ತದೆ. ಆ ಮಟ್ಟಕ್ಕೆ ಅದು ಬೆಂಬಲಕ್ಕೂ ನಿಲ್ಲುತ್ತದೆ.
ತನ್ನ ಬಂಡವಾಳ ಹೂಡಿಕೆಗೆ ಕಾರ್ಮಿಕರನ್ನು ತಹಬಂದಿಯಲ್ಲಿ ಇರಿಸುವುದನ್ನು ಮತ್ತಷ್ಟು
ಬೆಂಬಲಿಸುತ್ತದೆ. ಕಮ್ಯುನಿಸ್ಟ್ ಬೆಂಬಲಿತ ಸರ್ಕಾರವನ್ನು ವಿರೋಧಿಸುತ್ತದೆ. ತಳ ಸಮುದಾಯಗಳನ್ನು
ಬೆಂಬಲಿಸುವ ಸಮಾಜವಾದಿ ಸರ್ಕಾರಕ್ಕಿಂತ ಬಂಡವಾಳಶಾಹಿ ಪರವಾದ ಧಾರ್ಮಿಕ ಮೂಲಭೂತವಾದವನ್ನು
ಒಂದು ಹಂತದವರೆಗೆ ಬೆಂಬಲಿಸುತ್ತದೆ.
ಭಾರತದ ಜಾತಿ ಪದ್ಧತಿಯಿಂದ
ಸಮಾಜದಲ್ಲಿ ನಿರಂತರವಾದ ಅಸಹನೆ, ಅತೃಪ್ತಿ ಸ್ಥಾಯಿಯಾಗಿರುತ್ತದೆ. ಒಳಗಿನ ಅಭದ್ರತೆ ಭಾರತವನ್ನು
ಎಂದೂ ಪ್ರಬಲವಾಗದಂತೆ ಕಾಯ್ದುಕೊಳ್ಳುತ್ತದೆ. ನಮ್ಮೊಳಗಿನ ಸಂಕಟವನ್ನು ಕಂಡು ‘ದೊಡ್ಡಣ್ಣ’
ಮಾತ್ರವಲ್ಲ, ನೆರೆಹೊರೆಯವರೂ ನಿರುಮ್ಮಳವಾಗುತ್ತಾರೆ
ದೇವ ಬೊಂಬೆ ಪೂಜೆ ಆಟ ಭಕ್ತಿ ಸೋಜಿಗ
Tue,
18th Feb, 2014
ದೇವ ಬೊಂಬೆ ಪೂಜೆ ಆಟ
ಭಕ್ತಿ ಸೋಜಿಗ.ಇದು, ಮೇಲುಕೋಟೆ ದೇವಾಲಯಕ್ಕೆ ನಿತ್ಯವೂ ಹತ್ತಿ ಬಂದು ಫಲಾಪೇಕ್ಷೆ ಇಲ್ಲದೆ ರಂಗವಲ್ಲಿ
ಬಿಡುವ ಮದುಕಿಯನ್ನು ಕುರಿತು ಪುತಿನ ಅವರು ಬರೆದ ಕವನದ (ರಂಗವಲ್ಲಿ) ಸಾಲು. ದೇವರ ಅಸ್ತಿತ್ವ
ಕುರಿತು ಹತ್ತು ಹಲವು ಚರ್ಚೆಗಳು ನಿರಂತರವಾಗಿ ನಡೆದೇ ಇವೆ. ಬಹುಶಃ ಅದು ಮನುಕುಲ ಇರುವವರೆಗೂ
ಮುಗಿಯದ ವಾದ. ನಾಸ್ತಿಕವಾದಿ ಪಂಥಗಳು ಭಾರತದಲ್ಲಿ ಹಲವು ಬಂದು ಹೋಗಿವೆ. ಲೌಕಿಕವಾದಿಗಳಾದ
ಚಾರ್ವಾಕರು ಭಾರತದಲ್ಲಿ ವೈದಿಕರಷ್ಟೇ ಪ್ರಾಚೀನರು. ವೈದಿಕವಾದಗಳನ್ನು ಖಂಡಿಸುತ್ತಾ ಪರ್ಯಾಯವಾದ
ಧಾರೆಯನ್ನು ಹುಟ್ಟುಹಾಕಿದವರು. ಅದರ ಪ್ರೇರಣೆಯಿಂದ ಹಲವು ಸಿದ್ಧಾಂತಗಳು ಭಾರತದಲ್ಲಿ
ಬಂದುಹೋಗಿವೆ.
ಆರನೇ ಶತಮಾನದಲ್ಲಿ ಬಂದ ಬುದ್ಧ ದೇವರನ್ನು ಕುರಿತಾಗಿ ಏನೂ ಚರ್ಚಿಸಲಿಲ್ಲ.
ಆದರೆ ಬಹುಬೇಗನೆ ಭಗವಾನ್ ಬುದ್ಧನಾಗಬೇಕಾಯಿತು. ಹಾಗೆ ನೋಡಿದರೆ ನಾಸ್ತಿಕತೆಯ ನೆಲೆಯಲ್ಲಿ
ಕರ್ಮಸಿದ್ಧಾಂತವನ್ನು ಬೋಧಿಸಿದ ಬುದ್ಧ ದೇವರಾದದ್ದು ಜನಸಾಮಾನ್ಯ ನೆಲೆ-ಯಲ್ಲಿ ನಿಂತು ಯೋಚಿಸಿದರೆ
ಸಹಜವಾದುದೇ ಎನಿಸುತ್ತದೆ. ಬದುಕಿಗೆ ದಾರಿ ತೋರಿದಾತ ನೀನೇ ಭಗವಂತ ಎಂದು ಕೈ ಮುಗಿವ ಮನೋಭಾವವೇ
ಭಕ್ತಿಯಾಗಿ ಮೆರೆಯಿತು. ಬುದ್ಧನಿಂದ ಮಾರ್ಕ್ಸ್ನವರೆಗೆ ಹಲವು ನಾಸ್ತಿಕವಾದಗಳು ಬಂದುಹೋಗಿವೆ.
ಆದರೂ ದೇವರನ್ನು ಹೊತ್ತು ಸಾಗುವುದು ಮಾತ್ರ ತಪ್ಪಲಿಲ್ಲ.
ರಷ್ಯಾ ಅಥವಾ ಚೀನಾ, ಧಾರ್ಮಿಕ ಹಕ್ಕಿನ ಮೇಲೆ ಹಿಡಿತ ಸಾಧಿಸುವ ಮೂಲಕ ದೇವಮಂದಿರಗಳ
ಬೆಳವಣಿಗೆಯನ್ನು ತಹಬಂದಿಗೆ ತಂದಿವೆ. ಅದನ್ನು ಹೊರತುಪಡಿಸಿ ಜಗತ್ತಿನಾದ್ಯಂತ
ದೇವರುಗಳಿದ್ದರೂ ಭಾರತದಂತೆ ಹೆಜ್ಜೆಹೆಜ್ಜೆಗೂ ದೇವಾಲಯಗಳನ್ನು ಕಟ್ಟುವ ಮನಸ್ಥಿತಿ ಬೇರೆಲ್ಲೂ
ಕಾಣಬರುವುದಿಲ್ಲ.
ವೈದಿಕರು ಮೂಲದಲ್ಲಿ ಪ್ರಕೃತಿ ಆರಾಧಕರು. ಯಜ್ಞಯಾಗಾದಿಗಳ ಮೂಲಕ, ವೇದಗಳನ್ನು
ಪಠಿಸುತ್ತಾ ದೇವರನ್ನು ತಲುಪುವ ಕಲ್ಪನೆಯನ್ನು ಕಟ್ಟಿಕೊಂಡವರು. ಹಾಗಿದ್ದ ದೇವರ ಕಲ್ಪನೆ
ದೇವಾಲಯಕ್ಕೆ ಬಂದು ನಿಲ್ಲಬೇಕಾದರೆ ಅದರ ಬೆಳವಣಿಗೆ ಸುದೀರ್ಘವಾಗಿಯೇ ಇರಬೇಕು. ಮೂರ್ತಿರೂಪದಲ್ಲಿ
ದೇವರನ್ನು ಕಲ್ಪಿಸಿಕೊಂಡವರು ಜನಪದರು. ಅರ್ಥವಾಗದ ಹುಟ್ಟು ಸಾವುಗಳು, ಅರಿವಿಗೆ ನಿಲುಕದ
ಪ್ರಕೃತಿಯ ಚೋದ್ಯಗಳಲ್ಲಿ ದೇವರನ್ನು ಕಾಣತೊಡಗಿದರು.
ಆಯುಧವಾಗಿ ಬಳಸಿದ ಕಲ್ಲು,
ಹಸಿವನ್ನು ತಣಿಸಿದ ಗಿಡ ಮರ, ಸುತ್ತಮುತ್ತ ಬದುಕಿಗೆ ಸಂಗಾತಿಗಳಾದ ಪ್ರಾಣಿ ಪಕ್ಷ, ಜೀವಜಾಲದಲ್ಲಿ
ದೇವರನ್ನು ಕಂಡುಕೊಂಡರು. ಸತ್ತವರ ನೆನಪಿಗೆ ಇಟ್ಟ ಕಲ್ಲುಗಳು, ನೆಟ್ಟ ಮರ ಒಂದು ಕಡೆ ಸಮಾಧಿಯ
ಕಲ್ಪನೆಯನ್ನು ಕಟ್ಟಿಕೊಟ್ಟಿತು. ಅದು ಅಶೋಕನ ಕಾಲದ ಬುದ್ಧನ ಬೃಹತ್ ಸ್ತೂಪಗಳವರೆಗೂ ಬಂದು ನಿಂತಿತು.
ಭಾರತದ ದೇವಾಲಯಗಳ ಹುಟ್ಟು, ಶಿಲ್ಪಗಳ ಬೆಳವಣಿಗೆ ಇದಕ್ಕೆಲ್ಲಾ ಒಂದು ರೀತಿಯಲ್ಲಿ ಬೌದ್ಧ ಹಾಗೂ
ಜೈನ ಧರ್ಮಗಳು ಅಡಿಪಾಯನ್ನು ಹಾಕಿವೆ.
ಶಿಲ್ಪದ ವಿಚಾರಕ್ಕೆ ಬಂದರೆ
ಅದರ ಚರಿತ್ರೆ 4000 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಹುಟ್ಟನ್ನು ನೀಡಿದ ತಾಯಿ, ಇಲ್ಲವೇ
ಹುಟ್ಟಿನ ಸಂಕೇತವಾದ ಲಿಂಗ, ಯೋನಿಯ ಶಿಲ್ಪಗಳನ್ನು ಆರಾಧಿಸತೊಡಗಿದ್ದು ಮುಂದೆ ಬೆಳೆದ ಶಿವ
ಶಕ್ತಿಯ ಕಲ್ಪನೆಗೆ ಕಾರಣವಾಯಿತು. ಹೀಗೆ ಜನಪದೀಯವಾಗಿದ್ದ ಮೂರ್ತಿ ಪೂಜೆಗೆ ಬುದ್ಧನ ಬಗೆಗಿನ
ಭಕ್ತಿಯು ಸೇರಿ ಬುದ್ಧನ ಸಂಕೇತಗಳನ್ನು ಶಿಲ್ಪವಾಗಿಸಿದರು. ಬೋಧಿ ವೃಕ್ಷ, ತೆರೆದ ಸಿಂಹಾಸನ,
ಛತ್ರಿ ಇವೆಲ್ಲವೂ ಬುದ್ಧನ ಸಂಕೇತದ ಶಿಲ್ಪಗಳಾದವು. ಬೌದ್ಧ ಧರ್ಮವಾಗಿ ಭಾರತದ ಮೇರೆಯನ್ನು ಮೀರಿ
ಹೋದಂತೆ ಆ ಬುದ್ಧನನ್ನು ಒಪ್ಪಿದ ಗ್ರೀಕರ ಕಲ್ಪನೆಯೂ ಸೇರಿ ಸುಂದರವಾದ ಬುದ್ಧನ ಶಿಲ್ಪ ಮೂಡಿ
ಬಂದಿತು. ಅದೇ ಜನಪ್ರಿಯವಾಗಿರುವ ಗಾಂಧಾರ ಶಿಲ್ಪ. ಭಾರತೀಯ ಶಿಲ್ಪಶಾಸ್ತ್ರದ ಬೆಳವಣಿಗೆಯಲ್ಲಿ
ಇದು ಮೈಲುಗಲ್ಲು.
ಇದೇ ಹೊತ್ತಿಗೆ ಜನಪದ
ದೇವತೆಗಳ ಪ್ರಭಾವ ಹಾಗೂ ಇತರ ಅವೈದಿಕವಾದ ಧಾರೆಗಳನ್ನು ಸ್ವೀಕರಿಸಿದ ವೈದಿಕರು ತಮ್ಮ
ನಂಬಿಕೆಗಳನ್ನೂ ಸೇರಿಸಿ ನೂರಾರು ದೈವಗಳ ಅಡಿಗೆರಗಿದರು. ಮೂಲದಲ್ಲಿ ಅವರು ಆರಾಧಿಸುತ್ತಿದ್ದ 33
ದೇವರುಗಳನ್ನು ಮೀರಿ ನೂರಾರು ದೇವರುಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಆ ಎಲ್ಲಾ
ದೇವತೆಗಳು ಯಾವ ಯಾವುದೋ ರೂಪದಲ್ಲಿ ವೈದಿಕ ಸಾಹಿತ್ಯದಲ್ಲಿ ಸ್ಥಾನವನ್ನು ಪಡೆದುಕೊಂಡವು.
ಜನಪದರ ಕಲ್ಪನೆಯಲ್ಲಿದ್ದ
ತಾಯಂದಿರು ಶಕ್ತಿ ದೇವತೆಗಳಾಗಿ ಅವೈದಿಕ ನೆಲೆಯ ಪಂಥಗಳೇ ಆಗಿ ಬೆಳೆದು ನಿಂತಿದ್ದವು. ಹುಟ್ಟಿನ
ಸಂಕೇತಗಳಲ್ಲಿ ಶಕ್ತಿಯನ್ನು ಅವಗಾಹನೆ ಮಾಡುವ ವಿಧಿವಿಧಾನಗಳಲ್ಲಿ ತಾಂತ್ರಿಕರು ಹುಟ್ಟಿಕೊಂಡರು.
ವೈದಿಕರು ಕೆಲವು ಹಂತಕ್ಕೆ ಅದನ್ನು ತಮ್ಮದಾಗಿಸಿಕೊಳ್ಳುತ್ತಾ ಪುರಾಣದ ರಚನೆಯಲ್ಲಿ ತೊಡಗಿದಾಗ ಒಂದಲ್ಲಾ
ಒಂದು ರೂಪದಲ್ಲಿ ದೇವರುಗಳು ಸಮೀಕರಣಗೊಳ್ಳತೊಡಗಿದರು. ವೈದಿಕ ದೇವರುಗಳ ಪಟ್ಟಿ
ಸಾವಿರಗಟ್ಟಲೆಯಾಯಿತು.
ಜನಪದ ದೇವರುಗಳಿಗೂ, ವೈದಿಕ
ದೇವರುಗಳಿಗೂ ಅಂತರ ಕಡಿಮೆಯಾಯಿತು. ಜನಪದರು ಮೂಲದಲ್ಲಿದ್ದ ತಮ್ಮ ಆಚರಣೆಗಳನ್ನು ಬಿಡುತ್ತ
ಬಂದರು. ಆ ಜಾಗವನ್ನು ವೈದಿಕ ಆಚರಣೆ ಕ್ರಮಗಳಿಗೆ ಬಿಟ್ಟುಕೊಟ್ಟರು. ಈ ಬೆಳವಣಿಗೆಯಲ್ಲಿ ವಿಷ್ಣು
ಪುರಾಣ, ಶೈವ ಪುರಾಣಗಳ ರಚನೆಯಾಯಿತು. ನೂರಾರು ಜನಪದ ದೇವತೆಗಳನ್ನು ವಿಷ್ಣು ಹಾಗೂ ಶಿವನ
ಅಂಶವೆಂದು ಪರಿಗಣಿಸಲಾಯಿತು. ಈ ಸಮೀಕರಣದಿಂದ ಜನಪದ ದೇವತೆಗಳು ತಮ್ಮತನವನ್ನು ಕಳೆದುಕೊಂಡವು.
ಆದಿವಾಸಿಗಳ, ಬುಡಕಟ್ಟಿನ ಹೆಣ್ಣು ದೈವಗಳು, ಕರಿಯಮ್ಮ, ಮಾರಿ, ಮಸಣಿಯರೆಲ್ಲಾ ಪಾರ್ವತಿಯ
ಅಂಶವೆನಿಸಿದರು. ರುದ್ರ, ಬೀರ, ಸೋಮ, ಭೂತ ಗಣಗಳೆಲ್ಲಾ ಶಿವನ ಅಂಶವಾದರು.
ತಮ್ಮ ದೇವರುಗಳ ಮೂಲ ಹುಟ್ಟು ಮರೆತ ಜನಪದರು ಕೆಲವುಮಟ್ಟಿಗೆ ತಮ್ಮದನ್ನು ಮನೆ
ಹಂತಕ್ಕೆ ಇಲ್ಲವೆ ಗೋಪ್ಯವಾಗಿ ಉಳಿಸಿಕೊಂಡು ಪ್ರಧಾನ ಧಾರೆಯ ದೇವರುಗಳಿಗೆ
ನಡೆದುಕೊಳ್ಳತೊಡಗಿದರು. ಹೀಗೆ ಹರಡಿದ ಭಾರತೀಯ ದೇವರುಗಳನ್ನು ಒಂದು ಸಂಸ್ಕೃತಿಯ
ಹಿನ್ನೆಲೆಯಲ್ಲಿ ಅದರ ಚರಿತ್ರೆ ಇಷ್ಟೇ ಎಂದು ಸರಳ ರೇಖೆಯಲ್ಲಿ ಹೇಳಲು ಸಾಧ್ಯವಿಲ್ಲ. ಈ ನಾಡಿಗೆ
ಬಂದ ಎಲ್ಲಾ ಪಂಥಾಚರಣೆಗಳೂ ಒಂದಲ್ಲಾ ಒಂದು ರೀತಿಯಲ್ಲಿ ಒಂದು ಮತ್ತೊಂದರಲ್ಲಿ ಬೆರೆತು ಹೋಗಿವೆ.
ಇದರ ಆಚೆಗೆ ಕಾಣುವ ಉಚ್ಚ ನೀಚದ ಕಲ್ಪನೆ ಸಾಮಾಜಿಕ ಸ್ತರದಿಂದ ಬರುವಂತಹದು.
ಸುಮಾರು 1700 ವರ್ಷಗಳ
ಹಿಂದೆ ಆರಂಭವಾದ ದೇಗುಲಗಳ ರಚನೆಯ ಹೊತ್ತಿಗಾಗಲೇ ಜನಪದರು ನಾಲ್ಕು ಚಪ್ಪಡಿಯನ್ನಿಟ್ಟು
ಸಣ್ಣಪುಟ್ಟ ಗುಡಿಗಳನ್ನು ಕಟ್ಟಿ ಗಾಳಿಮಳೆಯಿಂದ ತಮ್ಮ ದೇವರುಗಳನ್ನು ಕಾಪಾಡಿಕೊಳ್ಳುತ್ತಿದ್ದರು.
ಬುದ್ಧ ಮಹಾವೀರರ ಅನುಯಾಯಿಗಳಿಂದ ವಿಹಾರಗಳು, ಚೈತ್ಯಗಳು, ಬಸದಿಗಳು, ಸ್ತೂಪಗಳು ಹೀಗೆ
ನಾಡಿನಾದ್ಯಂತ ಬೆಳೆದುಬಂದಿದ್ದವು. ಅನುಕರಣೆಯಾಗಿ ಶಿವ ವಿಷ್ಣುವಿನ ಮೂರ್ತಿಯನ್ನಿಟ್ಟು
ಚಿಕ್ಕದಾದ ದೇಗುಲಗಳನ್ನು ಕಟ್ಟುವುದು ಬೆಳೆದು ಬಂತು. ಹೀಗೆ ಆರಂಭವಾದ ದೇಗುಲಗಳ ಕಲ್ಪನೆಯ ವೈದಿಕ
ಧರ್ಮ ಜನಪದ ಆಚರಣೆಗಳನ್ನೂ ಮೈಗೂಡಿಸಿಕೊಂಡು ಸಾಂಸ್ಥಿಕ ರೂಪವನ್ನು ಪಡೆಯಿತು. ಈ ಹೊತ್ತಿಗೆ ಸಮಾಜದಲ್ಲಿ
ಬೇರುಬಿಟ್ಟ ವರ್ಣ, ಜಾತಿಗಳು ದೇಗುಲಗಳ ರಚನೆಯಲ್ಲೂ ಪ್ರತಿಬಿಂಬಿತವಾದವು.
ಆರನೇ ಶತಮಾನದ ಹೊತ್ತಿಗೆ
ಬೌದ್ಧ ಧರ್ಮವನ್ನು ಬದಿಗೊತ್ತಿ ಬೆಳೆದ ಶೈವ ಹಾಗೂ ವೈಷ್ಣವ ಪಂಥಗಳು ಇದರ ಹೊಂದಾಣಿಕೆಯಲ್ಲಿ
ವಿಸ್ತರಿಸಿದ ಶಾಕ್ತ ಪಂಥಗಳು ಗುಡಿಗಳನ್ನು ಕಟ್ಟಿಕೊಳ್ಳತೊಡಗಿದವು. ದಕ್ಷಿಣದ ತಮಿಳುನಾಡಿನಲ್ಲಿ
ಪಲ್ಲವರ ಕಾಲಕ್ಕೂ ಕನ್ನಡನಾಡಿನಲ್ಲಿ ಬಾದಾಮಿ ಚಾಲುಕ್ಯರ ಕಾಲಕ್ಕೂ ರಾಜಮನೆತನಗಳು
ದೇವಾನುದೇವತೆಗಳಿಗೆ ಗುಡಿಗೋಪುರವನ್ನು ಕಟ್ಟಲು ಸಂಭ್ರಮಿಸಿದವು. ಬಾದಾಮಿ, ಐಹೊಳೆ,
ಪಟ್ಟದಕಲ್ಲಿನಲ್ಲಿ ದೇಗುಲಗಳ ನಿರ್ಮಾಣ ಕಾರ್ಯಾಗಾರಗಳೇ ನಡೆದುಹೋಯಿತು.
ಅಗತ್ಯಕ್ಕೆ ಅನುಗುಣವಾಗಿ
ಗರ್ಭಗುಡಿಯ ಜೊತೆಗೆ ಉಳಿದ ಅಂಗಗಳೂ ವಿಸ್ತರಿಸತೊಡಗಿದವು. ಸಾಮಾಜಿಕ ರಚನೆಯಾದ ಜಾತಿಗನುಗುಣವಾಗಿ
ದೇಗುಲಗಳು ಆಕಾರ ಪಡೆಯತೊಡಗಿದವು. ಮಂಟಪ, ಮುಖಮಂಟಪ, ಪ್ರಾಕಾರ, ಪೌಳಿ, ಕಲ್ಯಾಣಿಗಳಾಗಿ
ಚಾಚಿಕೊಂಡವು. ರಾಜಾಶ್ರಯದೊಂದಿಗೆ ಬಂದ ದೇಗುಲಗಳಂತೂ ಸಾಮಾಜಿಕ ಅಂತಸ್ತು ಅಂತರಗಳನ್ನು
ಇನ್ನೂ ವ್ಯವಸ್ಥಿತವಾಗಿ ಬಲಗೊಳಿಸಿದವು. ಸಮಾಜ, ದೇಗುಲಗಳ ಸಂಬಂಧದಲ್ಲಿ ಸ್ಪಷ್ಟತೆಯನ್ನು
ಅವರು ಕಂಡುಕೊಂಡಿದ್ದರು. ಗರ್ಭಗುಡಿಯ ಸಂಪೂರ್ಣ ಹಿಡಿತ ಪುರೋಹಿತರಿಗೆ ಬಿಟ್ಟುಕೊಡಲಾಯಿತು.
ವೇದ ಹಾಗೂ ವೇದ ಸಂಬಂಧಿ ಆಚರಣೆಗಳಾದ ಯಜ್ಞಯಾಗಾದಿಗಳಲ್ಲದೆ ವೈದಿಕಗೊಂಡ ಯಂತ್ರ, ಮಂತ್ರ,
ತಂತ್ರಗಳ ಮೇಲೂ ಹಿಡಿತವನ್ನು ಸಾಧಿಸಲು ಅವರಿಗೆ ಸಾಧ್ಯವಾಯಿತು. ಹಾಗೂ ಪ್ರಶ್ನಾತೀತವಾಯಿತು.
ರಾಜಧಾನಿಗಳಾದರೆ ರಾಜರು,
ಹಳ್ಳಿಯ ಮಟ್ಟಕ್ಕೆ ಊರ ಮುಖಂಡರು ಅಂತರಾಳದಲ್ಲಿ ಕುಳಿತು ದೇವರ ದರ್ಶನಕ್ಕೆ ಪಾತ್ರರಾದರು.
ಅಥವಾ ದೇವಾಲಯಗಳನ್ನೂ, ಪುರೋಹಿತರನ್ನೂ ಕಾಪಾಡುವವರನ್ನು ಗರ್ಭಗುಡಿಗೆ ಪಕ್ಕದಲ್ಲಿ ನಿಂತು ದೇವರ
ದರ್ಶನ ಪಡೆಯಲು ಅವಕಾಶ ಕಲ್ಪಿಸಿಕೊಡಲಾಯಿತು. ಮಂಟಪದಲ್ಲಿ ರಾಜ ನರ್ತಕಿಯರು, ಕನ್ನಡಿ
ಚಾಮರಗಳನ್ನು ಹಿಡಿಯುವ ವೇಶ್ಯೆಯರು, ವಾದ್ಯದವರು, ಶ್ರೀಮಂತರು ಜಾಗ ಪಡೆದರು. ಅದರಾಚೆಗೆ ಮುಖಮಂಟಪದಲ್ಲಿ
ಮುಟ್ಟುವ ಜಾತಿಗಳಿಗೆ ಜಾಗ ಸಿಕ್ಕರೆ, ಮುಟ್ಟದ ಜಾತಿಗಳು ಡೊಳ್ಳು ಬಾರಿಸಿ ದೇವರ ಕಿವಿ
ತಲುಪಬೇಕಾಯಿತು.
ಶಿವನ ಭಕ್ತಿಯನ್ನು ಮೆರೆಯಲು ಹೋದ ಚೋಳರು ಊರೂರಲ್ಲಿ ಶಿವಾಲಯಗಳನ್ನು
ಕಟ್ಟಿದರು. ದೇವಾಲಯದ ಒಳ ಹೋಗಲಾರದ ಆಂಡಾಳ್ ಅಂತಹ ತಳಸಮುದಾಯದ ಭಕ್ತರು ಬೀದಿಗಳಲ್ಲಿ ಹಾಡಿ ಆ
ದೇವರ ಹೆಸರನ್ನು ಮೆರೆಸಿದರು. ಬಡವನ ಮನೆಗೇ ದೇವರು ಬರುವ ಕಥೆಗಳು ಹುಟ್ಟಿಕೊಂಡವು-. ಭಕ್ತಿ
ಸಾಹಿತ್ಯ ಬೆಳೆಯಿತು. ಪುರಾಣಗಳನ್ನು ಬರೆದು, ಭಕ್ತಿಯಿಂದ ಹಾಡಿ ಹೊಗಳಿ, ಕಲ್ಲು ದೇವರಿಗೆ ವಿಧ
ವಿಧವಾಗಿ ಅಲಂಕರಿಸಿ, ಯಾವ ಯಾವುದೋ ರೂಪದಲ್ಲಿ ದೇವರ ಸೇವೆಯನ್ನು ಮಾಡಿದರು. ಜನ ತಮ್ಮ ದುಡಿಮೆಯ
ಭಾಗವನ್ನೆಲ್ಲಾ ಕೊಟ್ಟು ದೇವರನ್ನೂ, ದೇಗುಲಗಳನ್ನೂ ಬೆಳೆಸಿದರು.
ರಾಜರು ದೇವಾಲಯಗಳಿಗೆ,
ಪುರೋಹಿತರಿಗೆ ಭೂಮಿಯನ್ನು ದಾನ ಕೊಡತೊಡಗಿದರು. ಅಗ್ರಹಾರಗಳನ್ನು ಕಟ್ಟಿಕೊಟ್ಟರು. ದೇವಾಲಯಗಳ
ಪೋಷಣೆ ಪುರೋಹಿತ ವರ್ಗಕ್ಕೆ ಉದರನಿಮಿತ್ತವೂ ಆಯಿತು. ಹನ್ನೆರಡನೇ ಶತಮಾನದ ಹೊತ್ತಿಗೆ ಕಲ್ಲು
ದೇವರು, ಅದಕ್ಕಾಗಿ ಕಟ್ಟುವ ಕಲ್ಲು ಗುಡಿಗೋಪುರಗಳ ವೈಭವದಿಂದ ರೋಸಿ ಹೋದ ವಚನಕಾರರು ದೇಗುಲಗಳ
ಪ್ರತಿಭಟನೆಯನ್ನು ಆರಂಭಿಸಿದರು. ದೇವಾಲಯಗಳು ಹಲವು ರೀತಿಯಲ್ಲಿ ಜನರ ಶೋಷಣೆಗೆ ಕಾರಣವಾಗಿವೆ
ಎಂದು ಅರಿವಾಗಿತ್ತು. ನಿರಾಕಾರ ಸಿದ್ಧಾಂತ ಮೂಲಕ ಜನರನ್ನು ತಲುಪುವುದು ಸುಲಭವಲ್ಲ ಎಂಬುದನ್ನು
ಅರಿತ ಬಸವಣ್ಣ, ಆತ್ಮಲಿಂಗದ ಕಲ್ಪನೆಯನ್ನು ತಂದುಕೊಡಲು ಕಾರಣವಾಗಿರಬೇಕು.
ಸ್ಥಾಪಿತ ಧಾರ್ಮಿಕ ಮೌಲ್ಯಗಳೊಂದಿಗೆ ಬಂದ ಮುಸಲ್ಮಾನರೂ ದೇಗುಲ ಸಂಸ್ಕೃತಿಯನ್ನು
ಮತ್ತೊಂದು ರೀತಿಯಲ್ಲಿ ಪೋಷಿಸಿದರೆಂದೇ ಹೇಳಬೇಕು. ನಡೆದ ಆಕ್ರಮಣಗಳು ರಾಜಲಾಂಛನದ ದೇಗುಲಗಳೇ
ಹೊರತು ಅವು ಜನಸಾಮಾನ್ಯರ ಗುಡಿಗಳಾಗಿರಲಿಲ್ಲ. ವಾಸ್ತುಶಿಲ್ಪದ ದೃಷ್ಟಿಯಿಂದ ಇಸ್ಲಾಂನ ಹಲವು
ಅಂಶಗಳು ದೇಗುಲಗಳನ್ನು ಸೇರಿ ಹೋದವು. ಗೋಳ, ಗಾರೆ ಗುಡಿಗಳಿಗೂ ಹತ್ತಿದವು.
16ನೇ ಶತಮಾನದವರೆಗೂ
ಸಾಮ್ರಾಟರು ತಮ್ಮ ಸಾಮರ್ಥ್ಯವನ್ನು ದೇಗುಲದ ಗಮ್ಮತ್ತಿನಲ್ಲಿ ವ್ಯಕ್ತಪಡಿಸಿದರು. ಇದನ್ನು
ತಂಜಾವೂರು, ತಿರುವಣ್ಣಾ ಮಲೈ, ತಿರುಪತಿ, ಕಂಚಿ ಇಲ್ಲೆಲ್ಲಾ ಕಾಣಬಹುದು. ಇವೆಲ್ಲಾ ದೇಗುಲಗಳ
ನಗರಗಳೇ ಆಗಿ ಬೆಳೆದವು. ರಾಜರ ದಾನ ದತ್ತಿಗಳಿಂದ ದೇವಾಲಯಗಳು ಉಬ್ಬಿಹೋದವು. ದೇಗುಲಗಳಿಗೆ ಅಂಟಿಕೊಂಡಂತೆ
ಬೆಳೆದ ಮಠಗಳು ದೇವರ ಹೆಸರಿನ ಲಾಭ ಪಡೆಯುವಲ್ಲಿ ಹಿಂದೆ ಬೀಳಲಿಲ್ಲ. ಸಿಕ್ಕ ಸಿಕ್ಕ ದೇವರಿಗೆ ಕೈ ಮುಗಿದು,
ಬಂದ ಬಂದವರ ಕಾಲಿಗೆ ಬಿದ್ದು ಯಾವುದನ್ನೂ ತಮ್ಮದೆನ್ನದೆ ಜನಪದರು ಎಲ್ಲ ದೇವರ ರಥಗಳನ್ನು ಎಳೆದರು.
ಯಾವ ಧರ್ಮದ ಗೊಡವೆಯೂ ಇಲ್ಲದೆ ತಮಗೆ ಕಂಡಂತೆ ಬದುಕುವುದೇ ಧರ್ಮವಾಗಿ ಬಾಳು ಸವೆಸಿದ್ದಾರೆ.
ಆಧುನಿಕ ಕಾಲಕ್ಕೆ ಬಂದಾಗ
ಜಾತೀಯತೆಗೆ ಕಳಶವಿಟ್ಟಂತೆ ನಿಂತ ದೇವಾಲಯಗಳ ನಿರಾಕರಣೆಯ ಪ್ರಯತ್ನ ತಮಿಳುನಾಡಿನಲ್ಲಿ
ಪೆರಿಯಾರರಿಂದ ಆರಂಭವಾಯಿತು. ಭಾರತದ ಭೂಗರ್ಭದಲ್ಲಿರುವ ನಾಸ್ತಿಕವಾದ ಮತ್ತೆ ಹೊಗೆಯಾಡಿತು.
ಮಾರ್ಕ್ಸ್ ವಾದದ ಹೆಸರಿನಲ್ಲಿ ಮರು ಪ್ರವೇಶ ಪಡೆದುಕೊಂಡಿತು. ಆದರೆ ಅದಕ್ಕೂ ಪ್ರಬಲವಾದ ದೇವರನ್ನೂ
ದೇಗುಲವನ್ನು ಕ್ರೈಸ್ತ ಮಿಷನರಿಗಳು ಹೊತ್ತು ತಂದವು. ದಲಿತರು, ಆದಿವಾಸಿಗಳು ಆತುಕೊಳ್ಳಲು
ಮತ್ತೊಂದು ದೇವರು. ಬೇಸರವೇನಿಲ್ಲ. ಜಾತಿಯ ಜೊತೆಗೆ ಶಿಲುಬೆಯನ್ನು ಹೊರಲು ಹೊಸ ಜಾಗ ದೊರಕಿತು.
ಆಧುನಿಕತೆಯ ಭ್ರಮೆಯಲ್ಲಿ
21ನೇ ಶತಮಾನ ಗಿಜಿಗುಡುವ ನಗರಗಳನ್ನು ಕಟ್ಟಿಕೊಂಡಿದೆ. ರಸ್ತೆ ಬದಿಯಿಂದ ಮಾಲ್‌ಗಳವರೆಗೆ ಸರಕು
ಮಾರಾಟವಾಗುತ್ತದೆ. ಹಾಗೆಯೇ ಫುಟ್ಪಾತ್ನಿಂದ ಬೆಟ್ಟದ ತುದಿಯವರೆಗೆ ದೇವರುಗಳೂ
ಸಿಗುತ್ತಾರೆ. ಶಾಪಿಂಗ್ ಕಾಂಪ್ಲೆಕ್ಸ್ ನಂತೆ ಕಾಣುವ ದೇವಾಲಯಗಳು ಆಧುನಿಕತೆಯನ್ನು
ಮೈಗೂಡಿಸಿಕೊಂಡಿವೆ. ವಿದ್ಯುತ್ ಗಂಟೆ ನಾದ, ಕೇಶವಿನ್ಯಾಸಕ್ಕಾಗಿ ತಲೆ ಬೋಳಿಸಿದ ಕೂದಲ ಮಾರಾಟ.
ಹೀಗೆ ಒಂದೇ ಎರಡೇ, ಮೈಕ್ ಹಾಕಿ ಮಂತ್ರ ಪಠಣ- ಟ್ರಾಫಿಕ್ ನ ಗಲಾಟೆಗೆ ದೇವರಿಗೂ ಕಿವುಡಾಗಿದೆ.
ಪ್ರಸಾದದ ಹೆಸರಿನಲ್ಲಿ ಮತ ಯಾಚನೆ. ಸರ್ಕಾರ ಇವರ ಆದಾಯವನ್ನು ಕೇಳಬಾರದೆಂಬುದರಲ್ಲಿ ಮಾತ್ರ
ಇವರೆಲ್ಲರ ಏಕಮತ. ಜಾತಿ ಮತ ಧರ್ಮ ಯಾವ ತಾರತಮ್ಯವೂ ಇಲ್ಲದೆ ಉಳ್ಳವರು ದೇವಾಲಯವ ಮಾಡುವರು!
ಮೀನು ಹಿಡಿಯಲು ಬೆಸ್ತನಿಗೆ ಮೀಸಲಾತಿ?
Tue, 02/04/2014
ಡೈನೋಸಾರ್ ಎಂಬ ಅತಿ ದೊಡ್ಡ
ಪ್ರಾಣಿ ಸಂಕುಲ ಒಂದು ಕಾಲಕ್ಕೆ ಈ ಭೂಮಿಯನ್ನು ಆವರಿಸಿತ್ತು. ಅಷ್ಟು ಬೃಹತ್ ಗಾತ್ರದ ಪ್ರಾಣಿಗೆ
ಬಾಲ ಮುಟ್ಟಿದರೆ ಆ ಕೂಡಲೇ ಅರಿವಾಗುತ್ತಿರಲಿಲ್ಲ. ಆ ದೇಹದ ಗಾತ್ರಕ್ಕೆ ಹೋಲಿಸಿದರೆ
ಅದರ ಮಿದುಳು ಬಲು ಚಿಕ್ಕದು. ಹಾಗಾಗಿ ಬೇರೊಂದು ಪ್ರಾಣಿ ಅದನ್ನು ಕಚ್ಚಿದರೆ ಗೊತ್ತಾಗುವ
ಹೊತ್ತಿಗೆ ಆಪತ್ತು ಒದಗಿರುತ್ತಿತ್ತು. ಇಂದು ಭಾರತದ ಆರ್ಥಿಕತೆ ಡೈನೋಸಾರ್‌ನ ಹಾಗೆ ಬೃಹದಾಕಾರವಾಗಿ
ಬೆಳೆದು ನಿಂತಿದೆ. ಮಿದುಳು ಮಾತ್ರ ಹಿಡಿಗಾತ್ರ.
ಸ್ವಾಧೀನ ತಪ್ಪಿದ ತನ್ನ ಕಾಲುಗಳನ್ನು ತಾನೇ ಕಚ್ಚಿ ತಿನ್ನಲು ಹೊರಟಂತಿದೆ.
ಖಾಸಗಿ ಒಡೆತನದ ಕೈಗಾರಿಕಾ ವಲಯ ತಿನ್ನುವ ಕೈ ಬಾಯಿ ಮಾತ್ರವೇ ಅದರ ಅಂಗಾಂಗವೆಂದು ಭಾವಿಸಿದೆ.
ದೇಹದ ಉಳಿದ ಭಾಗಗಳು ತಮ್ಮ ಯೋಗಕ್ಷೇಮವನ್ನು ತಾವೇ ನೋಡಿಕೊಳ್ಳಬೇಕಾಗಿದೆ. ಯೋಗ್ಯವಾದ
ಹೃದಯವನ್ನೂ, ಮಿದುಳನ್ನೂ ರೂಪಿಸಬೇಕಾಗಿದೆ. ದೇಶದ ಆರ್ಥಿಕತೆಯಲ್ಲಿ ಹಿಂದುಳಿದ ಸಮುದಾಯಗಳೇ ಈ
ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಬೇಕಾಗಿದೆ.
ಯುಪಿಎ, ಸರ್ಕಾರ ರಚಿಸಿ ಅಧಿಕಾರಕ್ಕೆ ಬಂದಾಗ ಖಾಸಗಿ ವಲಯದಲ್ಲಿ ಮೀಸಲಾತಿಯನ್ನು
ತರಲು ಯೋಚಿಸುತ್ತಿದ್ದಂತೆಯೇ ಕಾರ್ಪೊರೇಟ್ ಜಗತ್ತು ಒಕ್ಕೊರಲಿನಿಂದ ಅದನ್ನು
ವಿರೋಧಿಸಿತು. ಚೇಂಬರ್ ಆಫ್ ಕಾಮರ್ಸ್, ‘ಮೀಸಲಾತಿಗೆ ಸಂಬಂಧಿಸಿದಂತೆ ಕಾಯ್ದೆ ಮಾಡಬೇಡಿ.
ನಾವೇ ಎಲ್ಲರಿಗೂ ಅವಕಾಶವಿರುವಂತೆ ನೋಡಿಕೊಳ್ಳುತ್ತೇವೆ’ ಎಂದು ಉತ್ತರಿಸಿತು.
ದಲಿತ ಮೀಸಲಾತಿಯನ್ನಾಗಲಿ, ಹಿಂದುಳಿದ ವರ್ಗಗಳಿಗೆ ಅವಕಾಶ ನೀಡುವುದನ್ನಾಗಲಿ,
ಮಹಿಳೆಯರೂ ದುಡಿಮೆಯ ಭಾಗವಾಗಿ ಇರಲೇಬೇಕೆಂಬ ಸಾಮಾಜಿಕ ಕಾಳಜಿಯನ್ನು ಅರ್ಥ
ಮಾಡಿಕೊಳ್ಳುವುದು ಖಾಸಗಿ ಬಂಡವಾಳಗಾರರಿಗೆ ಅಷ್ಟು ಸುಲಭ ಸಾಧ್ಯವೇ?
ಮೀಸಲಾತಿಯನ್ನು ‘ಚಾರಿಟಿ’ ಎಂದು ಭಾವಿಸಿದವರೇ ಹೆಚ್ಚು. ಮೀಸಲಾತಿಯಿಂದ ತಮ್ಮ
ಅವಕಾಶಗಳನ್ನು ಕಸಿದು ದಲಿತರಿಗೆ, ಹಿಂದುಳಿದ ವರ್ಗದವರಿಗೆ ಕೊಡುತ್ತಿದ್ದಾರೆಂದು
ತಿಳಿದಿರುವ ಮೇಲ್ವರ್ಗದ ಗೊಣಗಾಟ ಕಿವಿಯ ಮೇಲೆ ಬೀಳುತ್ತಲೇ ಇರುತ್ತದೆ.
ಖಾಸಗೀಕರಣವನ್ನು ಬೆಂಬಲಿಸುವ ಹಾಗೂ ಸ್ವಾಗತಿಸುವ ಮಂದಿಯ ಮನದಾಳದಲ್ಲಿ ಮೀಸಲಾತಿಗೆ
ಹೊಡೆತ ಕೊಡಬೇಕೆಂಬ ಹುನ್ನಾರ ಸದಾ ನಡೆದೇ ಇದೆ. ಆ ಮೂಲಕ ನಿಜವಾದ ಪ್ರತಿಭೆಯುಳ್ಳವರು ಮಾತ್ರ
ಉಳಿಯುತ್ತೇವೆ ಎಂಬ ಬಾಲಿಶವಾದ ನಂಬಿಕೆ ಈ ದೇಶದ ದುರಂತವಾಗಿದೆ. ಈ ಚರ್ಚೆ ಹೊಸದೇನೂ ಅಲ್ಲ.
ಹಾಗೆಂದು ಕೈ ಬಿಡಲು ಅದು ಕೊನೆಗೊಂಡಿಲ್ಲ. ಅದರೊಳಗಿನ ಸಣ್ಣತನ ಬಹಿರಂಗಗೊಳ್ಳುತ್ತಲೇ
ಇರುತ್ತದೆ.
ಹಿಂದುಳಿದ ವರ್ಗಗಳ ಚಳವಳಿಯ ನಾಯಕರೊಬ್ಬರು, ‘ನಾವೇನೂ ಅವರ ಆಸ್ತಿ ಕೇಳುತ್ತಿಲ್ಲ.
ನಾವು ದುಡಿಯುತ್ತೀವಿ. ಕೆಲಸ ಕೊಡಿ ಅಂತ ಮಾತ್ರ ಕೇಳುತ್ತಿದ್ದೇವೆ. ಅವರ ಆಸ್ತಿಯ ಪಾಲನ್ನೇನೂ
ಕೇಳುತ್ತಿಲ್ಲವಲ್ಲ’ ಎಂದು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು. ಖಾಸಗಿ ಕಂಪೆನಿಗಳನ್ನು
ಸ್ಥಾಪಿಸಲು ನೆಲ, ಜಲವನ್ನು ಬಳಸಿದ ಮೇಲೆ ಇಲ್ಲಿನ ಸಂವಿಧಾನಕ್ಕೆ ಬದ್ಧವಾಗಿರಬೇಕಾದುದು ಅವರ
ಕರ್ತವ್ಯವಲ್ಲವೇ ಎಂದು ದಲಿತರ ಹಕ್ಕುಗಳ ಪರ ಮಾತನಾಡುವ ಯುವಕರು ಕಂಪೆನಿಗಳ
ಮಾಲೀಕರನ್ನು ಕೇಳುತ್ತಾರೆ.
ಸಾಮಾಜಿಕ ನ್ಯಾಯದ ನೆಲೆಯಲ್ಲಿ ಮೀಸಲಾತಿಯನ್ನು ಕೇಳಲಾಗುತ್ತಿದೆ. ಅಂದರೆ
ಚಾರಿತ್ರಿಕವಾಗಿ ಸಮುದಾಯಗಳಿಗೆ ಆದ ಅನ್ಯಾಯವನ್ನು ಸರಿದೂಗಿಸಲು ಮೀಸಲಾತಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ
ಎಂಬ ಸಾಮಾನ್ಯವಾದ ತರ್ಕವಿದ್ದೇ ಇದೆ. ಹೀಗೆ ವಾದಿಸುವಾಗಲೂ ಆಳದಲ್ಲಿ ಅಸಹಾಯಕತೆ ಮನೆಮಾಡಿದೆ.
ಚರಿತ್ರೆಯುದ್ದಕ್ಕೂ ನಡೆದ ತಪ್ಪಿಗೆ ಅದನ್ನು ಸರಿದೂಗಿಸಲು ಅವಕಾಶವನ್ನು ಕೇಳಲಾಗುತ್ತಿದೆ.
‘ಅದಕ್ಕಾಗಿ ಇಷ್ಟೂ ವರ್ಷ ಶಿಕ್ಷಣದಲ್ಲಿ, ಸಾರ್ವಜನಿಕ ಕ್ಷೇತ್ರದಲ್ಲಿ
ಮೀಸಲಾತಿಯನ್ನು ಕೊಟ್ಟಿದ್ದೇವೆ. ಅವರನ್ನು ಇನ್ನೂ ಎಷ್ಟು ವರ್ಷ ಹೀಗೆ ಕಾಯಬೇಕು’ ಎಂಬ ಪ್ರತಿ ಉತ್ತರ
ಸದಾ ಸಿದ್ಧವಾಗಿರುತ್ತದೆ. ಇಲ್ಲಿ ಅವರು ಎಂಬ ದನಿಯಲ್ಲೂ ಮೈಲಿಗೆಯ ಭಾವ ಅಂಟಿರುವುದನ್ನು
ಕಾಣಬಹುದು. ‘ಅವರು ೩೫ ಅಂಕ ತೆಗೆದುಕೊಂಡರೂ ಕೆಲಸ ಸಿಗುತ್ತೆ, ನಾವು ೯೦ ಅಂಕ ತೆಗೆದುಕೊಂಡರೂ
ಸಿಗುವುದಿಲ್ಲ’. ಹೀಗೆ ಸಮಾಜವನ್ನು ಅರಿಯದ ಮಕ್ಕಳೂ ಮಾತಾಡುವಂತಾಗಿದೆ. ಇಲ್ಲಿ ಪ್ರತಿಭೆಗಿರುವ
ಅಳತೆಗೋಲು ಅಂಕಪಟ್ಟಿ. ಕಲಿಸಿದ್ದಾದರೂ ಏನು? ಜೀವಶಾಸ್ತ್ರ ಓದಿ ‘ಕೋಳಿ ಮರಿ, ಮೊಟ್ಟೆಯಿಂದ ಹೊರಬರಲು
ಎಷ್ಟು ದಿನ ಬೇಕು’ ಎಂದು ಕೇಳಿದರೆ ಪುಸ್ತಕದಲ್ಲಿ ಉತ್ತರ ಹುಡುಕುತ್ತಾರೆ.
ಹೀರೆಕಾಯಿ ಮರದಲ್ಲಿ ಬಿಡುತ್ತದೆ ಎಂದು ತಿಳಿದ ಸಸ್ಯಶಾಸ್ತ್ರ ಬೋಧಿಸುವ
ಪ್ರತಿಭಾವಂತ ಅಧ್ಯಾಪಕರಿದ್ದಾರೆ. ಇಂತಹ ಪ್ರತಿಭಾವಂತರ ಸಲಹೆಯ ಮೇರೆಗೆ ಶಾಲಾ ಮಕ್ಕಳಿಗೆ ಖನಿಜಾಂಶದ
ಕೊರತೆಯನ್ನು ನಿವಾರಿಸಲು ಹಾಲು, ಹಣ್ಣು, ಮೊಟ್ಟೆ, ತರಕಾರಿಗೆ ಬದಲಾಗಿ ಕಬ್ಬಿಣಾಂಶವಿರುವ
ಮಾತ್ರೆ ಕೊಡಲು ಸರ್ಕಾರ ಮುಂದಾಗುತ್ತದೆ. ಹೋಗಲಿ ಬಿಡಿ. ಪ್ರತಿಭಾವಂತರ ಖಾಸಗಿ
ಕಂಪೆನಿಗಳಲ್ಲಿ ಸಿದ್ಧವಾದ ಮಾತ್ರೆಗಳಲ್ಲವೆ? ಈವರೆಗಿನ ಸಾರ್ವಜನಿಕ ಕ್ಷೇತ್ರದಲ್ಲಾಗಲಿ,
ಶಿಕ್ಷಣ ಕ್ಷೇತ್ರದಲ್ಲಾಗಲಿ ವಾಸ್ತವದಲ್ಲಿ ಮೀಸಲಾತಿಯನ್ನು ಅನುಸರಿಸಲು ಸಾಧ್ಯವಾಗಿದೆಯೇ ಎಂದೂ
ಕೇಳಿಕೊಳ್ಳಬೇಕಾಗಿದೆ. ಜೀತವಿಮುಕ್ತರಾಗಿ, ಹುಟ್ಟಿಗಂಟಿದ ಮೈಲಿಗೆಯಿಂದ ಹೊರಬಂದು ಶಾಲೆ
ಮೆಟ್ಟಿಲು ಹತ್ತುವ ಹೊತ್ತಿಗೆ ಅರ್ಧ ಶತಮಾನವೇ ಕಳೆದು ಹೋಗಿತ್ತು. ಉದ್ಯೋಗದಲ್ಲಿ ಮೀಸಲಾತಿ ಕಾಗದದ
ಮೇಲಿತ್ತು.
ಆ ಎಲ್ಲಾ ಉದ್ಯೋಗಗಳಿಗೆ ಅರ್ಜಿಗಳೇ ಇರಲಿಲ್ಲ. ಆ ಹೊತ್ತಿಗೆ ಉಳಿದ ಸಮುದಾಯಗಳು
ಮುಂದೆ ಹೋಗಿ ಇಂದು ಬಂಡವಾಳಗಾರರಾಗಿದ್ದಾರೆ. ಉದ್ಯೋಗಪತಿಗಳಾಗಿದ್ದಾರೆ. ‘ನಮಗೂ ಅರ್ಹತೆ
ಬಂದಿದೆ’ ಎಂದು ಅರ್ಜಿ ಹಿಡಿದು ಹೋಗುವ ಹೊತ್ತಿಗೆ ಸಾರ್ವಜನಿಕ ವಲಯದ ಕೈಗಾರಿಕೆಗಳೇ ಮುಚ್ಚುತ್ತಾ
ಬಂದಿವೆ. ಸಾರ್ವಜನಿಕ ವಲಯದಲ್ಲಿ ಬಹುಪಾಲು ನೇಮಕಾತಿ ನಿಂತು ಹೋಗಿದೆ. ಹಾಗಾಗಿ ಬರುವ ಹೊಸ ಪೀಳಿಗೆಗೆ
ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಐವತ್ತು ಸಾವಿರ ರೂಪಾಯಿ ಸಂಬಳ
ಕೊಡಬೇಕಾದ ಕಡೆ ಹತ್ತು ಸಾವಿರಕ್ಕೆ ದುಡಿಸಿಕೊಳ್ಳಲಾಗುತ್ತದೆ. ಕಂಪೆನಿಗೇನಾದರೂ ಆರ್ಥಿಕ
ಮುಗ್ಗಟ್ಟು ಎದುರಾದಲ್ಲಿ ಮೊದಲು ಗೇಟ್ ಪಾಸ್ ತೆಗೆದುಕೊಳ್ಳುವವರು ಇವರೇ ಆಗಿರುತ್ತಾರೆ. ಯೂನಿಯನ್‌ಗಳು
ಸಹ ಕಾಯಂ ನೌಕರರ ಕ್ಷೇಮವನ್ನೇ ನೋಡುತ್ತವೆ.
ದಿನಗೂಲಿಯವರ ಹಿತ ಕಾಯುವವರಾರು? ಗುತ್ತಿಗೆ ನೌಕರರು ಎನ್ನುವುದಕ್ಕಿಂತ
ಅರೆಹೊಟ್ಟೆ ನೌಕರರೆನ್ನುವುದು ಹೆಚ್ಚು ಸಮಂಜಸ. ಈ ಸ್ಥಿತಿ ಬೃಹತ್ ಕಂಪೆನಿಗಳಾದ ಬಿಎಚ್‌ಇಎಲ್,
ಎಚ್‌ಎಎಲ್‌ನಿಂದ ಕೇಳಿಬರುವ ದಿನನಿತ್ಯದ ವೇದನೆಯಾಗಿದೆ.
ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಕೇಳುವುದು ಸಾಮಾಜಿಕ ನ್ಯಾಯದ ವಾದ
ಮಾತ್ರವಲ್ಲ, ಅದಕ್ಕೆ ಇನ್ನೂ ಹಲವು ಮುಖಗಳಿವೆ. ಅಮೆರಿಕದಲ್ಲಿ ನಡೆದ ಸಂಶೋಧನೆಗಳಲ್ಲಿ ಕಂಡುಬಂದ
ವಿಚಾರವೆಂದರೆ ಯಾವುದೇ ಕ್ಷೇತ್ರದಲ್ಲಿ ಮಿಶ್ರ ಸಮುದಾಯವನ್ನು ತೊಡಗಿಸಿಕೊಳ್ಳುವುದರಿಂದ ಸಿಗುವ
ಪ್ರತಿಫಲ ಒಂದೇ ಹಿನ್ನೆಲೆಯ ಜನರಿಂದ ದೊರೆಯಲಾರದು. ಇದು ಶಾಲಾ ಕಾಲೇಜುಗಳಾಗಿರಬಹುದು ಅಥವಾ
ಕಾರ್ಖಾನೆಗಳಾಗಿರಬಹುದು. ಎಲ್ಲದಕ್ಕೂ ಇದು ಅನ್ವಯಿಸುತ್ತದೆ. ಕರಿಯರಿಲ್ಲದ ತಂಡಗಳಿಗಿಂತ
ಆಫ್ರಿಕಾದ ಅಮೆರಿಕನ್ನರು, ಲ್ಯಾಟಿನ್ ಅಮೆರಿಕನ್ನರು, ಏಷ್ಯನ್ನರು ಇರುವ ಕಡೆ ಅದರ ಸೊಗಸು ಏನೆಂದು
ಅಮೆರಿಕನ್ನರಿಗೆ ಅರ್ಥವಾಗಿದೆ.
ಹಾಗಾಗಿಯೇ ಸರ್ಕಾರದ ಆಡಳಿತದಲ್ಲಿ ಜನಾಂಗಗಳ ಜನಸಂಖ್ಯೆಗೆ ಅನುಗುಣವಾಗಿ
ಮೀಸಲಾತಿಯನ್ನು ನೀಡಲಾಗಿದೆ. ಚಾರಿತ್ರಿಕ ದೋಷಗಳಿಗೆ ಕಂಡುಕೊಳ್ಳುತ್ತಿರುವ ಪರಿಹಾರವಾಗಿದೆ
ಇದು. ಇದೇ ಖಾಸಗಿ ಕ್ಷೇತ್ರಕ್ಕೆ ಬಂದಾಗ ಯಾವ ಕೈಗಾರಿಕೆಗಳು ಲಕ್ಷ ಡಾಲರ್‌ಗಿಂತ ಹೆಚ್ಚು
ಮೊತ್ತದ ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳುತ್ತವೆಯೋ ಆ ಎಲ್ಲಾ ಕಂಪೆನಿಗಳಲ್ಲೂ
ಆಫ್ರಿಕನ್ ಅಮೆರಿಕನ್ನರಿಗೆ ಮತ್ತಿತರ ಹಿಂದುಳಿದ ಸಮುದಾಯಗಳಿಗೆ ಉದ್ಯೋಗದಲ್ಲಿ ಮೀಸಲಾತಿ
ಕಡ್ಡಾಯವಾಗಿರುತ್ತದೆ. ಭಾರತದಲ್ಲಿರುವ ಮೀಸಲಾತಿ ಕುರಿತು ಕಿಡಿಕಾರುವ ಬಹುರಾಷ್ಟ್ರೀಯ
ಕಂಪೆನಿಗಳು ಅಮೆರಿಕದಲ್ಲಿ ತಮ್ಮ ಔದಾರ್ಯ ಮೆರೆಯುತ್ತವೆ. ಬಹುಶಃ ಭಾರತದಲ್ಲಿ ಅಂತಹ
ಒತ್ತಡವನ್ನು ಯಾರೂ ಹೇರಿರಲಾರರು.
ದೊಡ್ಡ ಖಾಸಗಿ ಕಂಪೆನಿಗಳು, ಖಾಸಗಿ ಶಾಲಾ ಕಾಲೇಜುಗಳು ತಳ ಸಮುದಾಯದಿಂದ ಬಂದವರಿಗೆ
ತೋರಿಕೆಗಾಗಿ ಕೆಲಸ ಕೊಡುವುದಿದೆ. ಹಾಗೆ ಕೊಡುವಾಗ ಕಸ ಗುಡಿಸುವ, ಇಲ್ಲ ಬಾಗಿಲು ಕಾಯುವ ನಾಲ್ಕನೇ
ದರ್ಜೆ ನೌಕರಿಯನ್ನು ಕೊಟ್ಟು ಸಮಜಾಯಿಷಿ ನೀಡುವುದಿತ್ತು. ‘ಔಟ್ ಸೋರ್ಸಿಂಗ್’ (ಹೊರ ಗುತ್ತಿಗೆ)
ಎಂಬ ಹೊಸ ನಾಮಧೇಯದಲ್ಲಿ ಈ ಕೆಲಸಗಳನ್ನು ಕಾಂಟ್ರ್ಯಾಕ್ಟ್ ಕೊಡಲಾಗುತ್ತಿದೆ. ಎಂದೂ ಕಾಯಂ ಆಗದ
ಕೆಲಸ. ನಾಲ್ಕನೇ ದರ್ಜೆ ಕೆಲಸಕ್ಕೂ ಕಲ್ಲು. ಕಸ ಗುಡಿಸುವವನ ಮೇಲೆ ಜುಟ್ಟು ಹಿಡಿಯುವ ನೂರಾರು
ಸಂಸ್ಥೆಗಳು ಇಂದು ಹುಟ್ಟಿಕೊಂಡಿವೆ. ಬಡವರನ್ನು ಮಟ್ಟ ಹಾಕಲು ಏನೆಲ್ಲಾ ಯೋಜನೆ! ಇದರಲ್ಲಿ
ಖಾಸಗಿ ವಲಯ ಮಾತ್ರವಲ್ಲ ಸರ್ಕಾರಿ ಸಂಸ್ಥೆಗಳೂ ಹಿಂದೆ ಬಿದ್ದಿಲ್ಲ.
ಕಾಲೇಜು, ವಿಶ್ವವಿದ್ಯಾಲಯದ ಹಂತದಲ್ಲಿ ಮೀಸಲಾತಿ ಅನ್ವಯ ಅರ್ಜಿ ಕರೆದರೆ
ಒಂದು ಕಾಲದಲ್ಲಿ ಅರ್ಜಿಗಳೇ ಬರುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಆ ಹುದ್ದೆಗಳನ್ನು ಸಾಮಾನ್ಯ
ವರ್ಗಕ್ಕೆ ಬದಲಾಯಿಸಲಾಗುತ್ತಿತ್ತು. ಆನಂತರದಲ್ಲಿ ಬದಲಾಯಿಸಲಾಗದಂತೆ ಕಾನೂನನ್ನು ತಂದಾಗ ಆ
ಹುದ್ದೆಗಳನ್ನು ಹಾಗೇ ಖಾಲಿ ಉಳಿಸಿಕೊಳ್ಳಲಾಗುತ್ತಿತ್ತು. ಆ ಮೂಲಕ ಅರೆಕಾಲಿಕ ಉದ್ಯೋಗಗಳನ್ನು
ನೀಡಿ ತಮ್ಮ ಕುಲಜರು ಮಾತ್ರವೇ ಸಂಸ್ಥೆಗಳಲ್ಲಿ ಉಳಿಯುವಂತೆ ನೋಡಿಕೊಳ್ಳಲಾಗುತ್ತಿತ್ತು.
ಅವೆಲ್ಲಾ ಜಾತಿ ಹಿತಾಸಕ್ತಿಯನ್ನು ಹೊಂದಿದ ಖಾಸಗಿ ಸಂಸ್ಥೆಗಳಾಗಿರುತ್ತವೆ,
ಇಲ್ಲವೇ ಮಠಮಾನ್ಯಗಳ ಅಡಿಯಲ್ಲಿ ಬೆಳೆದು ನಿಂತಿರುತ್ತವೆ. ಇಂತಹ ಧೋರಣೆಯ ವಿಶ್ವವಿದ್ಯಾಲಯದ
ಪ್ರಾಧ್ಯಾಪಕರುಗಳು ದಲಿತ ಅಥವಾ ಮತ್ತಾವುದೇ ಹಿಂದುಳಿದ ವಿದ್ಯಾರ್ಥಿ ತೇರ್ಗಡೆಯಾಗದಂತೆ
ನೋಡಿಕೊಳ್ಳುತ್ತಿದ್ದರು. ಇಲ್ಲವೇ ಅರ್ಜಿ ಸಲ್ಲಿಸಲು ಬೇಕಾದ ಕನಿಷ್ಠ ಅಂಕಗಳೂ ಬರದಂತೆ
ಕಾಯುತ್ತಿದ್ದರು. ಇಂತಹ ಪ್ರಾಧ್ಯಾಪಕರೊಬ್ಬರು ದಾಖಲೆ ಸೃಷ್ಟಿಸುವ ಸಂಖ್ಯೆಯ ವಿದ್ಯಾರ್ಥಿಗಳಿಗೆ
ಪಿಎಚ್.ಡಿ ಮಾರ್ಗದರ್ಶನ ನೀಡಿದ್ದರು.
ಅದರಲ್ಲಿ ನೂರಕ್ಕೆ ನೂರು ಮಂದಿಯೂ ಅವರ ಜಾತಿಯವರೇ ಇದ್ದರು. ಹಾಗಾಗಿ ಆ
ವಿಭಾಗಗಳಿಗೆ ಬೇರೆ ಜಾತಿಯ ಅಭ್ಯರ್ಥಿಗಳು ಅರ್ಜಿ ಹಾಕಲೂ ಸಾಧ್ಯವಾಗುತ್ತಿರಲಿಲ್ಲ. ಹಿಂದುಳಿದ
ವರ್ಗಗಳ ಮೀಸಲಾತಿಗೆ ನ್ಯಾಯ ಒದಗಿಸಲು, ಇಂದಿಗೂ ಅಭ್ಯರ್ಥಿಗಳಿಲ್ಲದ ಪರಿಸ್ಥಿತಿಯೇ ಇದೆ.
ಸಂವಿಧಾನ ರಚನಾ ಸಭೆಯಲ್ಲಿ ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿಯನ್ನು
ಕುರಿತು ಪ್ರಸ್ತಾವ ಮಂಡಿಸುವಾಗಲೂ ಅವರ ಉದ್ದೇಶ ಒಟ್ಟಾರೆ ಆಡಳಿತದಲ್ಲಿ ಎಲ್ಲರನ್ನೂ ಒಳಗೊಳ್ಳಬೇಕೆಂಬುದಾಗಿತ್ತು.
ಮತ್ತು ಅಲ್ಲಿ ಅವರು ಹಿಂದುಳಿದ ವರ್ಗದ ಪರಿಕಲ್ಪನೆಯನ್ನು ವಿವರಿಸುತ್ತಾರೆ. ಆ ವಾದದಲ್ಲೂ ಕೇವಲ
ದಲಿತ ಮೀಸಲಾತಿಯನ್ನು ಚರ್ಚಿಸದೆ ಉಳಿದವರಿಗೆ ಬೇಸರವೇ ಆದರೂ ಹೇಳಲೇಬೇಕಾದ ಸಮುದಾಯಗಳ
ಹಿಂದುಳಿಯುವಿಕೆಗೆ ಕಾರಣವನ್ನು ವಿವರಿಸುತ್ತಾರೆ. ಬಹುಶಃ ನಾವಿಂದು ಅರ್ಥ ಮಾಡಿಕೊಳ್ಳಬೇಕಾಗಿರುವುದು
ಎಲ್ಲರನ್ನೂ ಒಳಗೊಳ್ಳದ ಆಡಳಿತ ನೀತಿ ಪ್ರಜಾಪ್ರಭುತ್ವವಾಗಲಾರದು.
ಮೀಸಲಾತಿ, ಸಮಾಜವಾದಿ ನೆಲೆಯ ಆಲೋಚನೆಯಷ್ಟೇ ಅಲ್ಲ, ಪ್ರಜಾಪ್ರಭುತ್ವದ
ಅರ್ಥಪರಿಪೂರ್ಣತೆಗೂ ಇದು ಅನಿವಾರ್ಯ. ಸಮಾಜದ ಎಲ್ಲ ಜನರನ್ನೂ ಒಳಗೊಳ್ಳದ ಆಡಳಿತ ಪ್ರಜಾಪ್ರಭುತ್ವವಾಗಲು
ಹೇಗೆ ಸಾಧ್ಯ? ಇದೇ ವಾದ ಉತ್ಪಾದನಾ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಮಹಿಳೆಯರನ್ನು, ದಲಿತರನ್ನು,
ಹಿಂದುಳಿದವರನ್ನು ಹೊರಗಿಟ್ಟು ಹಿಡಿ ಮಂದಿ ದೇಶ ಕಟ್ಟಬಲ್ಲರೆ? ಪ್ರತಿಭೆ, ಜ್ಞಾನ ಹತ್ತು ಹಲವು
ನೆಲೆಗಳಿಂದ ಮೂಡಿಬರುತ್ತದೆ. ಅದನ್ನು ಅಳೆಯುವ ಅಳತೆಗೋಲು ಅಂಕಪಟ್ಟಿಯಾಗಲಾರದು.
ಕಾಡುಕುರುಬ, ಜೇನುಕುರುಬ, ಇರುಳಿಗರನ್ನು ಹೊರಗಿಟ್ಟು ಭಾರತದ
ಅರಣ್ಯನೀತಿಯನ್ನು ರೂಪಿಸುತ್ತೇವೆ. ರೈತರೇ ಇಲ್ಲದೆ ಬೆಳೆ ಬೆಳೆಯಲು ಬಂಡವಾಳಗಾರರು
ಮುಂದಾಗಿದ್ದಾರೆ. ಕರಾವಳಿಯ ಬೆಸ್ತರಿಲ್ಲದೆ ಕರಾವಳಿಯ ಯೋಜನೆಗಳು ರೂಪಿತವಾಗುತ್ತವೆ. ದೊಡ್ಡ
ಬಂಡವಾಳವನ್ನು ಹೂಡಿ ಭಾರತ ಸರ್ಕಾರ ಉಪಗ್ರಹವನ್ನು ಉಡಾಯಿಸುತ್ತದೆ. ಅಲ್ಲಿ ದೊರೆಯುವ ಸಾಗರದ
ಜೀವಗಳ ಮಾಹಿತಿ ಚಿತ್ರಗಳು ಸಂಗ್ರಹಾಲಯದಲ್ಲಿ ಶೇಖರಣೆಯಾಗಿವೆ. ಅದನ್ನು ಬಳಸುವವರೇ ಗತಿ ಇಲ್ಲ.
ಕರಾವಳಿಯಲ್ಲಿ ಅದರಲ್ಲೂ ಸಾಗರವೇ ಉಸಿರಾಗಿರುವ ಬೆಸ್ತರ ಅನುಭವದಿಂದ ಬಂದ
ಜ್ಞಾನವನ್ನು ಪರಿಗಣಿಸಲು ಪ್ರತಿಭಾವಂತ ವಿಜ್ಞಾನಿಗಳು ಸಿದ್ಧರಿಲ್ಲ. ಆ ಜ್ಞಾನವನ್ನು ಅಳೆದು
ಸರ್ಟಿಫಿಕೇಟ್ ಕೊಡಲು ವಿಶ್ವವಿದ್ಯಾಲಯಗಳಿಲ್ಲ. ಇಲ್ಲಿ ಮೀಸಲಾತಿಯ ಅಗತ್ಯವಿರುವುದು ಸಮಾಜದ
ಒಳಿತಿಗಾಗಿಯೇ ಹೊರತು ಬೆಸ್ತನಿಗಾಗಿಯಲ್ಲ. ಬಹುರಾಷ್ಟ್ರೀಯ ಕಂಪೆನಿಯ ದೊಡ್ಡ ಬಂಡವಾಳಗಾರ ಮೀಸಲಾತಿಯಿಂದ
ಬಂದ ಬೆಸ್ತನ ಸಹಜ ಪ್ರತಿಭೆಯಿಂದ ಕೋಟ್ಯಂತರ ರೂಪಾಯಿ ಲಾಭ ಗಳಿಸಬಹುದು.
ಅದಕ್ಕೆ ಪ್ರತಿಯಾಗಿ ಬೆಸ್ತನ ಕುಟುಂಬವೊಂದು ಸುಧಾರಿಸುತ್ತದೆ. ಅಲ್ಲಿಯೂ
ಮೀನುಗಾರಿಕೆಯನ್ನೇ ನಂಬಿ ಬದುಕಿದ್ದ ಜನರ ಸಾಗರದ ಮೇಲೆ ಲಗ್ಗೆ ಹಾಕಿದ್ದಕ್ಕೆ ಕೊಡಬಹುದಾದ ಸಣ್ಣ
ಪರಿಹಾರ. ಶತಮಾನಗಳ ಅನುಭವದ ಜ್ಞಾನ ಕಳೆದು ಹೋಗುವ ಮುನ್ನ ಸಮಾಜ ಅದರ ಲಾಭ ಪಡೆಯಲು
ಮೀಸಲಾತಿಯನ್ನು ನೀಡಬೇಕಾಗಿದೆ. ಜ್ಞಾನದ ವಿಸ್ತರಣೆಗಾಗಿ ಮೀಸಲಾತಿಯ ಅಗತ್ಯವಿದೆ. ಉತ್ಪಾದನಾ
ಲೋಕಕ್ಕೆ ಖಾಸಗಿ ಬಂಡವಾಳಗಾರರು ನುಗ್ಗಿ ಬರಲು ದಾರಿ ಮಾಡಿಕೊಂಡಿರುವ ಈ ಕಾಲದಲ್ಲಿ ಒತ್ತಾಯ
ಪೂರ್ವಕವಾಗಿಯಾದರೂ ಮೀಸಲಾತಿಯ ಮೂಲಕವಾದರೂ ಎಲ್ಲರೂ ದುಡಿಮೆಗೆ ಕೈಜೋಡಿಸುವಂತೆ ಮಾಡುವುದು
ಅನಿವಾರ್ಯ.
ಹೊಸ ಚಾಮರ ಹಳೆ ಚಾವಟಿ
·
Tue, 01/21/2014
ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ನಿವೇಶನ ಸಿಕ್ಕಿ, ಸಾಲ ಮಾಡಿ ಮನೆ
ಕಟ್ಟಿದಾಗ ಎಲ್ಲ ಮಧ್ಯಮ ವರ್ಗದವರಂತೆ ನನಗೂ ಸಂಭ್ರಮವಿತ್ತು. ಮಿತ್ರರ ಅಭಿನಂದನೆಗಳ ಸುರಿಮಳೆಗೆ
ಏನೋ ಸಾಧನೆ ಮಾಡಿದಂತೆ ಭಾಸವಾಗತೊಡಗಿತು. ಒಂದು ಸಂಜೆ ಮನೆ ಹೊರಗೆ ಬಡಾವಣೆಯ ಸೌಂದರ್ಯ
ನೋಡುತ್ತಾ ನಿಂತಾಗ ಕುರಿ ಮೇಯಿಸಿ ಮನೆ ಕಡೆಗೆ ಹೋಗುತ್ತಿದ್ದ ವ್ಯಕ್ತಿ ನಿಂತು ಮಾತನಾಡಿಸಿದರು.
‘ಇದೆಲ್ಲ ಹತ್ತು ವರ್ಷದ ಹಿಂದೆ ನಮ್ಮ ಹೊಲ ಆಗಿತ್ತು ತಾಯಿ, ನನ್ನದು, ಐದು
ಎಕರೆ ಇತ್ತು. ಸರ್ಕಾರ ಕೊಟ್ಟ ದುಡ್ಡಲ್ಲಿ ಮಗಳಿಗೆ ಮದುವೆ ಮಾಡಿದೆ. ಮೂರುಜನ ಗಂಡು ಮಕ್ಕಳು,
ನಮಗೆ ಬರಬೇಕಾದ ನಿವೇಶನ ಕುರಿತ ವಿಚಾರ ಇನ್ನೂ ಕೋರ್ಟಲ್ಲಿ ನಡೀತಾ ಇದೆ...’ ಎಂದರು.
ಇದು, ಪಕ್ಕದ ಗೊಲ್ಲರ ಹಟ್ಟಿಯಲ್ಲಿ ವಾಸ ಮಾಡುವ ಮರಿಯಪ್ಪನ ವ್ಯಥೆ.
ಬಹುಶಃ ಅವರು ಇಲ್ಲಿಯ ಮೂಲನಿವಾಸಿಗಳು. ಆ ಹಟ್ಟಿಯಲ್ಲಿ ಎಷ್ಟೋ ವರ್ಷಗಳಿಂದ ಸತ್ತವರ ನೆನಪಿಗೆ
ಇಡುವ ಕಲ್ಲಿನ ಸಾಲು ಹಳೆ ಶಿಲಾಯುಗದ ಸಂಸ್ಕೃತಿಯನ್ನು ನೆನಪಿಸುವಂತಿದೆ. ಬೆಳೆದು ಗಿಜಿಗುಡುವ
ನಗರದ ಒಳಗೂ ಅವರ ಮನೆಯಂಚಿನಲ್ಲಿ ಕುರಿರೊಪ್ಪಗಳನ್ನು ಹಾಗೇ ಉಳಿಸಿಕೊಂಡಿದ್ದಾರೆ.
ನೂರಾರು ವರ್ಷಗಳಿಂದ ಇಲ್ಲೇ ಬಾಳಿ ಬದುಕಿದ ಜನರ ಭೂಮಿಯನ್ನು ವಶಪಡಿಸಿಕೊಂಡು ಸರ್ಕಾರ
ನಿವೇಶನಗಳನ್ನು ಮಾಡಿ ಮಧ್ಯಮವರ್ಗ, ಇಲ್ಲವೇ ಮೇಲ್ವರ್ಗಕ್ಕೆ ಮಾರುತ್ತದೆ. ನಿವೇಶನದ
ಬೆಲೆ ವರ್ಷಕ್ಕೆ ಎರಡು–ಮೂರು ಪಟ್ಟು ಹೆಚ್ಚುತ್ತಾ ಹೋಗುತ್ತದೆ.ನನ್ನ ಅಥವಾ ನನ್ನಂತಹವರ
ಮನೆಗಳನ್ನು ಭೂಮಿ ಕಳೆದುಕೊಂಡವರ ಕಣ್ಣೀರು ಬೆಚ್ಚಗಾಗಿಸಿದೆಯೇ? ಮರಿಯಪ್ಪನ ಉಳುಮೆ ಮಾಡುವ
ಹಕ್ಕನ್ನು ಕಸಿದುಕೊಂಡವರು ಯಾರು?
ವಾಸ್ತವವಾಗಿ ರೈತನ ಭೂಮಿಯನ್ನು ವಶಪಡಿಸಿಕೊಳ್ಳುವ ಹಕ್ಕನ್ನು ಭಾರತ ೧೧೦
ವರ್ಷಗಳಷ್ಟು ಹಿಂದೆಯೇ ಪಡೆದುಕೊಂಡಿದೆ ಎಂದರೆ ಆಭಾಸ ಎನಿಸಬಹುದು. ಇದು ಉತ್ಪ್ರೇಕ್ಷೆಯಲ್ಲ.
೧೮೯೪ರ ಭೂ ಸ್ವಾಧೀನ ಕಾಯ್ದೆಯನ್ನೇ ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ಈವರೆಗೆ ಪಾಲಿಸುತ್ತಾ
ಬಂದಿದ್ದೇವೆ. ವಸಾಹತುಶಾಹಿ ನಮ್ಮನ್ನು ಬಿಟ್ಟರೂ ಅವರ ಬಳುವಳಿಗಳಿಗೆ ನಾವು ಸದಾ
ವಿಧೇಯರಾಗಿದ್ದೇವೆ. ಬ್ರಿಟಿಷರು ಈ ನೆಲವನ್ನು ನೋಡುತ್ತಿದ್ದ ರೀತಿಗೂ ನಮ್ಮದೇ ಸರ್ಕಾರ
ನಮ್ಮನ್ನು ನೋಡುವ ರೀತಿಗೂ ಯಾವ ವ್ಯತ್ಯಾಸವೂ ಇಲ್ಲವೇ? ‘ತೋಳ ಕುರಿ ನ್ಯಾಯ’ದ ವಸಾಹತು
ನೀತಿಯಲ್ಲಿ ಸರ್ಕಾರದ ಯಾವುದೇ ಯೋಜನೆಗೆ ಭೂಮಿಯನ್ನು ವಶಪಡಿಸಿಕೊಳ್ಳಲು ಕಾನೂನಿನ ಅಡಿಯಲ್ಲಿ
ಅವಕಾಶ ಇತ್ತು. ಇಂತಹ ಕಾನೂನುಗಳನ್ನೇ ಈ ಕಾಲಕ್ಕೂ ಶ್ರೇಷ್ಠವೆಂದು ಅನುಸರಿಸುತ್ತಿರುವುದಕ್ಕೆ
ಇದೊಂದು ಸಣ್ಣ ಉದಾಹರಣೆ
ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಗರಗಳು ಹಳ್ಳಿಗಳನ್ನು ನುಂಗಲು
ಅಭಿವೃದ್ಧಿ ಒಂದು ನೆಪವಾಯಿತು. ಜನಸಂಖ್ಯೆ ಬೆಳೆದಂತೆ ಭೂಮಿ ಬೇಡಿಕೆ ಹೆಚ್ಚಾದುದರಿಂದ ಪೈಪೋಟಿ
ಬೆಳೆದು ಅಸಹಾಯಕ ರೈತರ ಉಳುಮೆ ಭೂಮಿ ಕಬಳಿಕೆ ಮಿತಿಮೀರಿತು. ಭೂಮಿ ಕಳೆದುಕೊಂಡ ರೈತರು ನೆಪಮಾತ್ರದ
ಪರಿಹಾರವನ್ನು ಪಡೆದು ಬದಲಾವಣೆಯ ಚಕ್ರಕ್ಕೆ ಸಿಕ್ಕಿ ನಲುಗಿಹೋದರು. ಯಾವ ಭೂ ಸುಧಾರಣಾ ಕಾನೂನೂ
ಇದನ್ನು ಮುಟ್ಟಲಿಲ್ಲ. ಇದು ಅದರ ಚರ್ಚೆಯ ಭಾಗವೂ ಆಗಲಿಲ್ಲ.
೧೯೯೦ರ ನಂತರ ಜಾಗತೀಕರಣ ಪ್ರಕ್ರಿಯೆ ಕೈಗಾರಿಕಾ ಬೆಳವಣಿಗೆಯನ್ನು ಪವಿತ್ರವಾದುದೆಂದು
ಭಾವಿಸುವಂತೆ ಮಾಡಿದೆ. ಕೈಗಾರಿಕೆ ಸ್ಥಾಪನೆ ಎಂದಾದರೆ ಅದಕ್ಕಾಗಿ ಸರ್ಕಾರ ಏನೂ ಮಾಡಲು ಸಿದ್ಧ.
ಖಾಸಗಿ ಬಂಡವಾಳಗಾರರು ಎಲ್ಲೆಂದರಲ್ಲಿ ರೈತರಿಂದ ಭೂಮಿಯನ್ನು ಕೊಂಡು ಕೈಗಾರಿಕೆಗಳನ್ನು
ಸ್ಥಾಪಿಸುತ್ತಾ ಬಂದಿದ್ದಾರೆ. ಅದನ್ನೆಂದೂ ಸರ್ಕಾರ ಪ್ರಶ್ನಿಸುವುದಿಲ್ಲ. ಕಾಡಿನ ಬಗ್ಗೆ ಇರುವ
ಕಾಳಜಿ ಕೃಷಿಭೂಮಿ ಕುರಿತು ಇಲ್ಲ. ಅದರಲ್ಲೂ ವಿದೇಶಿ ಬಂಡವಾಳ ಬರುವುದಾದರೆ ನೀರು, ವಿದ್ಯುತ್,
ಭೂಮಿ ಎಲ್ಲವನ್ನೂ ಉದಾರವಾಗಿ ನೀಡಲು ಸರ್ಕಾರ ಮುಂದಾಗುತ್ತದೆ.
ನಗರದ ವಿಸ್ತರಣೆಯ ಹೆಸರಿನಲ್ಲಿ ಭೂಮಿಯ ವಶ, ರಿಯಲ್ ಎಸ್ಟೇಟೆಂಬ
ಶಿರೋನಾಮೆ ಅಡಿಯಲ್ಲಿ ಭೂಮಿ ಮಾರಾಟ ದಂಧೆಯಾಗಿದೆ. ಅತ್ಯಂತ ವೇಗವಾಗಿ ಲಾಭ ತರುವ ಮಾರ್ಗ
ಇದಾಗಿರುವುದರಿಂದ ಮಾಫಿಯಾ ಆಗಿ ಬೆಳೆಯಲು ಹೆಚ್ಚು ಸಮಯವನ್ನೇನೂ ತೆಗೆದುಕೊಳ್ಳಲಿಲ್ಲ.
ನಿವೇಶನಗಳನ್ನು ವಿಸ್ತರಿಸಲು ಹೇಳಿಮಾಡಿಸಿದ ಜಾಗವೆಂದರೆ ನಗರದ ಸುತ್ತಮುತ್ತಲ ಪ್ರದೇಶ.
ನಗರಕ್ಕೆ ಅಂಟಿಕೊಂಡಂತಿರುವ ಹಳ್ಳಿಗಳೇ ಇವರ ಮೊದಲ ಬೇಟೆ.
ಆ ಹಳ್ಳಿಗಳ ಜನರೂ ದಿಢೀರನೆ ಬರಬಹುದಾದ ಹಣದ ನಿರೀಕ್ಷೆಯಲ್ಲಿ ಅಸ್ಥಿರವಾದ
ಬದುಕನ್ನು ಸಾಗಿಸುತ್ತಾರೆ. ಕಡೆಗೂ ಒಂದು ದಿನ ಆ ಹಳ್ಳಿಯ ಹೊಲಗಳು ಒಂದೊಂದಾಗಿ ನಗರದ ಸ್ವಾಧೀನವಾಗುತ್ತವೆ.
ಜಮೀನು ಮಾರಾಟದಿಂದ ಬಂದ ಹಣ, ಆವರೆಗೆ ಮಾಡಿದ ಕೈಸಾಲ ತೀರಿಸುವಲ್ಲಿ ಮುಗಿದು ಹೋಗುತ್ತದೆ. ಇತ್ತ
ಹಳ್ಳಿಯವರೂ ಆಗದೆ ಅತ್ತ ನಗರ ವಾಸಿಗಳೂ ಆಗದೆ ಅತಂತ್ರ ಸ್ಥಿತಿಯಲ್ಲೇ ನಗರದ ಸುತ್ತಲ ಹಳ್ಳಿಗಳು
ಕರಗಿ ಹೋಗುತ್ತಿವೆ. ರಸ್ತೆ ನಿರ್ಮಾಣಕ್ಕಾಗಿ, ಕೈಗಾರಿಕೆಗಳನ್ನು ಕಟ್ಟಲು ಹೀಗೆ ಹತ್ತು ಹಲವು
ಕಾರಣಗಳನ್ನು ಹೇಳಿ ಹಳ್ಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದಕ್ಕೆ ಈವರೆಗೆ ಕೊಟ್ಟ ಬೆಲೆ ನೆಪ
ಮಾತ್ರ. ಬೆಲೆ ಎನ್ನುವುದಕ್ಕಿಂತ ಪರಿಹಾರ ಎನ್ನಬಹುದು.
ತಮ್ಮದಲ್ಲದ ತಪ್ಪಿಗೆ ಪರಿಹಾರ ಪಡೆಯಲು ಸಣ್ಣಪುಟ್ಟ ರೈತರು ಕಚೇರಿಗಳನ್ನು
ಸುತ್ತಿ ಲಂಚ ಕೊಟ್ಟು ಹಣ್ಣಾಗಿ ಹೋಗಿದ್ದಾರೆ. ಹಣದ ಆರ್ಥಿಕತೆಯಲ್ಲಿ ಬದುಕದ ರೈತರಿಗೆ
ಕೊಡುವ ಸಣ್ಣ ಪ್ರಮಾಣದ ಹಣವೂ ಆಪಾರವಾಗಿ ಕಾಣುತ್ತದೆ. ಭೂಮಿ ಕಳೆದುಕೊಂಡ ಎಲ್ಲಾ
ಸಂದರ್ಭಗಳಲ್ಲೂ ರೈತರು ಪ್ರತಿಭಟನೆ ಮಾಡದೆ ಹೋಗಲು ಇದೂ ಒಂದು ಕಾರಣ. ನ್ಯಾಯ ಸಿಗುವವರೆಗೆ
ವರ್ಷಾನುಗಟ್ಟಲೆ ಹೋರಾಡುವ ಶಕ್ತಿ ಜನಸಾಮಾನ್ಯರಿಗೆ ಇರುವುದಿಲ್ಲ. ಆದ್ದರಿಂದ ಇಂತಹ
ಹೋರಾಟಗಳೇನಿದ್ದರೂ ತಕ್ಷಣದ ಪ್ರತಿಕ್ರಿಯೆಯಾಗಿರುತ್ತವೆ.
ಆದರೂ ಈವರೆಗೆ ನಡೆದ ಚಳವಳಿಗಳು ಹಾಗೂ ಪ್ರತಿಭಟನೆಗಳ ಫಲವಾಗಿ, ಭೂಮಿ ವಶಪಡಿಸಿಕೊಳ್ಳಲು
ಮಾಡಿದ ೧೮೯೪ರ ಕಾಯ್ದೆಗೆ ಬದಲಾಗಿ ಹೊಸ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ
ತರುತ್ತಿದೆ. ೨೦೧೧ರ ಭೂಸ್ವಾಧೀನ, ಪುನರ್ವಸತಿ ಮತ್ತು ಪರಿಹಾರ ಮಸೂದೆ ಎಂದು ಅದನ್ನು ಕರೆದಿದೆ.
ಸದನದಲ್ಲಿ ನಡೆದ ಸರ್ವಪಕ್ಷಗಳ ಚರ್ಚೆ ಮತ್ತು ಒಪ್ಪಿಗೆಯ ನಂತರ ನೋಟಿಫಿಕೇಷನ್ ಆಗಿ
ಹೊರಬರುತ್ತಿದೆ.
ಎಲ್ಲಾ ಪಕ್ಷಗಳೂ ರೈತರ ಪರವಾಗಿಯೇ ವಾದಿಸುತ್ತಿವೆ. ಯಾರಿಗೂ ರೈತರಿಗೆ
ಅನ್ಯಾಯವಾಗುವುದು ಬೇಡ. ಹಾಗಾಗಿ ಹಳ್ಳಿ ಪ್ರದೇಶವಾದಲ್ಲಿ ಭೂಮಿಯ ಮಾರುಕಟ್ಟೆ ಬೆಲೆಯ ನಾಲ್ಕು
ಪಟ್ಟು ಪರಿಹಾರವಾಗಿ ಕೊಡಲು ಅವಕಾಶ ಕಲ್ಪಿಸಲಾಗಿದೆ. ನಗರ ವಲಯವಾದಲ್ಲಿ ಮಾರುಕಟ್ಟೆ
ಬೆಲೆಯ ಎರಡು ಪಟ್ಟನ್ನು ಭೂಮಿ ಕಳೆದುಕೊಂಡವರಿಗೆ ಕೊಡಲಾಗುವುದು. ಪರಿಹಾರದ
ಮೊತ್ತ ಹೊರನೋಟಕ್ಕೆ ಉದಾರವಾಗಿಯೇ ಕಾಣುತ್ತದೆ. ಆದರೆ ಯಾರೂ ವಿಶೇಷ ಆರ್ಥಿಕ ವಲಯಕ್ಕೆ
(SEZ) ಇದನ್ನು ಅನ್ವಯಿಸಲು ಒತ್ತಾಯಿಸಿಲ್ಲ. ಈ ವಲಯಗಳು ಅತ್ಯಾಧುನಿಕ ಪರಿಭಾಷೆಯಲ್ಲಿ
ವಿವರಿಸಿಕೊಂಡ ಬಹುರಾಷ್ಟ್ರೀಯ ಕಂಪೆನಿಯ ಕೋಠಿಗಳಾಗಿವೆ.
ಬೇಸಾಯದಲ್ಲಿ ಬೆವರು ಬಸಿಯ ಬೇಕು. ಬಸಿದರೂ ಎಣ್ಣೆ ಬರುವ ಹೊತ್ತಿಗೆ ಬೆಲೆ
ಬಿದ್ದು ಹೋಗುತ್ತದೆ. ಇದನ್ನೆಲ್ಲಾ ಕಂಡ ಹಳ್ಳಿಯ ಯುವಕರು ನಗರದ ಕಡೆ ಮುಖ ಮಾಡಿದ್ದಾರೆ. ನಗರದ
ಬಣ್ಣಗಳು ಎಳೆ ಮನಸ್ಸುಗಳನ್ನು ಕೂಗಿ ಕರೆಯುತ್ತವೆ. ನಗರದಲ್ಲಿ ಮಲಮೂತ್ರ ವಿಸರ್ಜನೆಗೂ ಬೆಲೆ
ತೆರಬೇಕಾಗುತ್ತದೆ ಎಂದು ಗೊತ್ತಾಗುವ ಹೊತ್ತಿಗೆ ನಗರದ ಗುಲಾಮಗಿರಿಯನ್ನು ಒಪ್ಪಿಕೊಂಡು
ಕೊಳೆಗೇರಿ
ವಾಸಿಗಳಾಗಿರುತ್ತೇವೆ.
ವಾಸಿಗಳಾಗಿರುತ್ತೇವೆ.
ಭೂ ಸ್ವಾಧೀನವಾದಾಗ ಅದರ ಮಾರುಕಟ್ಟೆ ಬೆಲೆಯನ್ನು ನಿರ್ಧರಿಸುವವರು ಸರ್ಕಾರಿ
ಅಧಿಕಾರಿಗಳೇ ಆಗಿರುತ್ತಾರೆ. ನಾವಿಂದು ಭೂ ಒಡೆತನದ ಪ್ರಶ್ನೆಯನ್ನು ಮೊದಲು ಅರ್ಥೈಸಿಕೊಳ್ಳಬೇಕಾಗಿದೆ.
ಈ ಪ್ರಶ್ನೆಯನ್ನು ಬ್ರಿಟಿಷರನ್ನು ಕೇಳಿದಷ್ಟು ನಮ್ಮನ್ನು ನಾವು ಕೇಳಿಕೊಳ್ಳುತ್ತಿಲ್ಲ.
ಭೂಮಿಯ ನಿಜವಾದ ಒಡೆತನ ಯಾರದು? ಸರ್ಕಾ-ರದ್ದೋ, ಖಾಸಗಿ ವ್ಯಕ್ತಿಯದೋ ಅಥವಾ ಸಮುದಾಯದ್ದೋ? ಭೂಮಿಯನ್ನು ಯಾರು ಬೇಕಾದರೂ ಕೊಳ್ಳಬಹುದು ಅಥವಾ ಮಾರಬಹುದು ಎಂದಾಗಲೇ ಸಮುದಾಯದ ಒಡೆತನ ಇಲ್ಲವೆಂದಂತಾಗುತ್ತದೆ. ಶತಮಾನಗಳಿಂದ ಒಂದು ಸಮುದಾಯ ಬದುಕಿದ ಜಾಗವನ್ನು ಸರ್ಕಾರದ ಯೋಜನೆಗಳಿಗಾಗಿ ತೆರವು ಮಾಡಬೇಕಾಗುತ್ತದೆ ಎನ್ನುವುದು ಮಾನವ ಹಕ್ಕಿಗೆ ವಿರುದ್ಧವಾದುದು. ಈ ಕೆಲಸವನ್ನು ಪರರು ಮಾಡಿದಾಗ ಖಂಡಿಸುತ್ತೇವೆ...
ಭೂಮಿಯ ನಿಜವಾದ ಒಡೆತನ ಯಾರದು? ಸರ್ಕಾ-ರದ್ದೋ, ಖಾಸಗಿ ವ್ಯಕ್ತಿಯದೋ ಅಥವಾ ಸಮುದಾಯದ್ದೋ? ಭೂಮಿಯನ್ನು ಯಾರು ಬೇಕಾದರೂ ಕೊಳ್ಳಬಹುದು ಅಥವಾ ಮಾರಬಹುದು ಎಂದಾಗಲೇ ಸಮುದಾಯದ ಒಡೆತನ ಇಲ್ಲವೆಂದಂತಾಗುತ್ತದೆ. ಶತಮಾನಗಳಿಂದ ಒಂದು ಸಮುದಾಯ ಬದುಕಿದ ಜಾಗವನ್ನು ಸರ್ಕಾರದ ಯೋಜನೆಗಳಿಗಾಗಿ ತೆರವು ಮಾಡಬೇಕಾಗುತ್ತದೆ ಎನ್ನುವುದು ಮಾನವ ಹಕ್ಕಿಗೆ ವಿರುದ್ಧವಾದುದು. ಈ ಕೆಲಸವನ್ನು ಪರರು ಮಾಡಿದಾಗ ಖಂಡಿಸುತ್ತೇವೆ...
ಬುಡಕಟ್ಟು ಜನರು ಭೂಮಿ ಕಳೆದುಕೊಂಡಾಗ ನರ್ಮದಾ ಬಚಾವ್ ಆಂದೋಲನದಂತಹ
ಹೋರಾಟಗಳು ನಿರಂತರವಾಗಿ ಈ ಪ್ರಶ್ನೆಗಳನ್ನು ಕೇಳಿವೆ. ವಿಶೇಷ ಆರ್ಥಿಕ ವಲಯ ಸ್ಥಾಪನೆ
ಸಂದರ್ಭದಲ್ಲೂ ಗುಂಪು ಗುಂಪು ಹಳ್ಳಿಗಳನ್ನೇ ವಶಪಡಿಸಿಕೊಳ್ಳಲಾಗಿದೆ. ಎಲ್ಲವೂ ಅಭಿವೃದ್ಧಿಯ
ಹೆಸರಿನಲ್ಲಿ ನಡೆಯುತ್ತದೆ. ಬಹುತೇಕ ಅದು ಕೈಗಾರಿಕಾ ಯೋಜನೆ ರೂಪಿಸುವವರ ಹಕ್ಕೇನೋ
ಎನ್ನುವಂತಾಗಿದೆ. ವಿಶೇಷ ಆರ್ಥಿಕ ವಲಯಗಳನ್ನು ರೂಪಿಸಿದ್ದೇ ಕೈಗಾರಿಕಾ ಬಂಡವಾಳಗಾರರನ್ನು
ಆಕರ್ಷಿಸುವುದಕ್ಕೆ. ಅದರಲ್ಲೂ ವಿದೇಶಿ ದುಡ್ಡಿಗಾಗಿ ಹಾಸಿದ ಕೆಂಪು ರತ್ನಗಂಬಳಿ. ಈ ಕೈಗಾರಿಕೆಗಳ
ಸ್ಥಾಪನೆಗೆ ಒಳ್ಳೆ ನೀರಿನ ಸೌಲಭ್ಯ ಮತ್ತು ಉತ್ತಮ ರಸ್ತೆ ಸಂಪರ್ಕ ಅಗತ್ಯ. ಜೊತೆಗೆ ಉತ್ತಮ
ಹವಾಮಾನ ಇರುವ ಪ್ರದೇಶಗಳ ಮೇಲೆ ಇವರ ಕಣ್ಣು. ಅಂತಹ ಜಾಗಗಳು ಸಹಜವಾಗಿ ಒಳ್ಳೆಯ ಬೇಸಾಯದ
ಭೂಮಿಯಾಗಿರುತ್ತವೆ.
ಪಾಳು ಬಿದ್ದ ನೆಲ, ಕೈಗಾರಿಕೆಗಳಿಗೂ ಬೇಡ. ಸುಂದರವಾದದ್ದು ಜಗತ್ತಿನಲ್ಲಿ
ಎಲ್ಲೇ ಇದ್ದರೂ ಅದನ್ನು ಪಡೆಯುವ ಹಕ್ಕನ್ನು ಬಹುರಾಷ್ಟ್ರೀಯ ಕಂಪೆನಿಗಳು ಪಡೆದುಕೊಂಡೇ
ಹುಟ್ಟಿವೆ- ಜಾಗತೀಕರಣದಲ್ಲಿ. ಭೂ ಸ್ವಾಧೀನದ ಹಕ್ಕು ಮಾರುವವನದಲ್ಲ ಅದು ಕೊಳ್ಳುವವನದ್ದಾಗಿದೆ.
ಬೆಂಗಳೂರಿನ ಸುತ್ತಮುತ್ತಲ ಹವಾಮಾನ ಹಣ್ಣು ತರಕಾರಿ ಬೆಳೆಗೆ ಹೇಳಿಮಾಡಿಸಿದಂತಿದೆ. ಆದ್ದರಿಂದ ಆ ಊರುಗಳನ್ನು ಬಿರುಸಿನಲ್ಲಿ ವಶಪಡಿಸಿಕೊಳ್ಳಲಾಗುತ್ತದೆ. ಹತ್ತು ವರ್ಷಗಳ ಹಿಂದೆ ಕಾಣುತ್ತಿದ್ದ ದ್ರಾಕ್ಷಿ ತೋಟಗಳು ಇಂದು ಕಣ್ಮರೆಯಾಗಿವೆ. ತಲೆ ತರಿದ ತೆಂಗಿನ ಮರಗಳ ಸಾಲು ಗೋಳು ಹೇಳಿಕೊಳ್ಳಲಾಗದೆ ಉರುಳಿ ಬೀಳುತ್ತಿವೆ. ಎಸ್‌ಇಜೆಡ್ ವಿರುದ್ಧದ ದನಿ, ಬುಡಮೇಲಾದ ಮರದ ಸುಯ್ಯುವ ಗಾಳಿಯಂತೆ ಕ್ಷೀಣವಾಗಿ ಕೇಳಿಸಿತು. ಬೆಂಗಳೂರು ಸಮೀಪದ ನಂದಗುಡಿ ಯೋಜನೆ, ವಿರೋಧಕ್ಕೆ ಮಣಿಯದಿದ್ದರೂ ಸಕಾಲಕ್ಕೆ ಯೋಜನೆಯನ್ನು ಆರಂಭಿಸಲಾಗದೆ ಕೈಬಿಡುವಂತಾಗಿದೆ.
ಬೆಂಗಳೂರಿನ ಸುತ್ತಮುತ್ತಲ ಹವಾಮಾನ ಹಣ್ಣು ತರಕಾರಿ ಬೆಳೆಗೆ ಹೇಳಿಮಾಡಿಸಿದಂತಿದೆ. ಆದ್ದರಿಂದ ಆ ಊರುಗಳನ್ನು ಬಿರುಸಿನಲ್ಲಿ ವಶಪಡಿಸಿಕೊಳ್ಳಲಾಗುತ್ತದೆ. ಹತ್ತು ವರ್ಷಗಳ ಹಿಂದೆ ಕಾಣುತ್ತಿದ್ದ ದ್ರಾಕ್ಷಿ ತೋಟಗಳು ಇಂದು ಕಣ್ಮರೆಯಾಗಿವೆ. ತಲೆ ತರಿದ ತೆಂಗಿನ ಮರಗಳ ಸಾಲು ಗೋಳು ಹೇಳಿಕೊಳ್ಳಲಾಗದೆ ಉರುಳಿ ಬೀಳುತ್ತಿವೆ. ಎಸ್‌ಇಜೆಡ್ ವಿರುದ್ಧದ ದನಿ, ಬುಡಮೇಲಾದ ಮರದ ಸುಯ್ಯುವ ಗಾಳಿಯಂತೆ ಕ್ಷೀಣವಾಗಿ ಕೇಳಿಸಿತು. ಬೆಂಗಳೂರು ಸಮೀಪದ ನಂದಗುಡಿ ಯೋಜನೆ, ವಿರೋಧಕ್ಕೆ ಮಣಿಯದಿದ್ದರೂ ಸಕಾಲಕ್ಕೆ ಯೋಜನೆಯನ್ನು ಆರಂಭಿಸಲಾಗದೆ ಕೈಬಿಡುವಂತಾಗಿದೆ.
ಇಲ್ಲೆಲ್ಲಾ ಪರಿಹಾರ ಪಡೆಯುವುದು ಸಾಹಸದ ವಿಚಾರವೇ ಆಗಿದೆ. ಕೋಟ್ಯಂತರ ರೂಪಾಯಿ
ಬಂಡವಾಳ ಹೂಡಿ, ಮುಂದೆ ಪಡೆಯುವ ಲಾಭದಲ್ಲಿ ರೈತನ ಪಾಲೇನು ಎಂದು ಕೇಳಬೇಕಾಗಿದೆ.ಅವರನ್ನು ಯೋಜನೆಯ
ಪಾಲುದಾರರನ್ನಾಗಿಸಿಕೊಳ್ಳಲು ಈವರೆಗೆ ಯಾರೂ ಅವಕಾಶವನ್ನು ಕಲ್ಪಿಸಿಲ್ಲ. ಹೊಸ ಕಾಯ್ದೆಯು ಆ
ವಿಚಾರವಾಗಿ ಮೌನವಾಗಿದೆ. ಈವರೆಗೆ ಕೃಷಿ ಭೂಮಿಯನ್ನು ಕೊಳ್ಳುವುದಾದರೆ ಆತ ರೈತನಾಗಿರಬೇಕಿತ್ತು.
ಹೊಸ ಕಾಯ್ದೆ ಅದನ್ನೆಲ್ಲೂ ಚರ್ಚಿಸದೆ, ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿಹಿಡಿಯುತ್ತದೆ.
ಭೂಮಿಯನ್ನು ವಶಪಡಿಸಿಕೊಳ್ಳಲು ಕೃಷಿಗೆ ಸಂಬಂಧಪಟ್ಟ ಕೈಗಾರಿಕೆ, ಸಾರ್ವಜನಿಕ
ಹಿತಾಸಕ್ತಿಯ ಚಟುವಟಿಕೆಗಳು ಉದಾಹರಣೆಗೆ ಶಾಲೆ, ಕಾಲೇಜು, ಆಸ್ಪತ್ರೆ, ನೀರು ಶುದ್ಧೀಕರಣ ಹೀಗೆ
ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದಲ್ಲದೆ ಹೆದ್ದಾರಿ, ರಕ್ಷಣೆ ಇಂತಹ ಕ್ಷೇತ್ರಗಳಿಗಂತೂ ಯಾರ
ಅನುಮತಿಯೂ ಬೇಕಾಗಿಲ್ಲ. ಉಳಿದಂತೆ ಸರ್ಕಾರದ ಯೋಜನೆಯಾದಲ್ಲಿ ಆ ಪ್ರದೇಶದಲ್ಲಿ ಭೂಮಿಯ ಒಡೆತನ
ಹೊಂದಿರುವವರಲ್ಲಿ ಶೇ 70ರಿಂದ ೮೦ರಷ್ಟು ಜನರು ತಮ್ಮ ಒಪ್ಪಿಗೆ ನೀಡಬೇಕಾಗುತ್ತದೆ. ನಮ್ಮ
ರೈತರಿಗಿರುವ ಅರಿವು ಎಚ್ಚರದಲ್ಲಿ ಇಷ್ಟೆಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲರೆ?
ಖಂಡಿತವಾಗಿ ಅವರ ಪರವಾಗಿ ಅವರೇ ನಿಲ್ಲಲಾರರು.
ಆ ಕ್ಷಣದ ಸಮಸ್ಯೆಗೆ ಪರಿಹಾರವಾಗಿ ಸಿಕ್ಕುವ ಹಣಕ್ಕೋ ಅಥವಾ ಬೆದರಿಕೆಗೋ
ಮಣಿಯಬಲ್ಲರು. ‘ನೈಸ್’ ರಸ್ತೆ ಯೋಜನೆಯಲ್ಲಿ ನಡೆದ ಕೃಷಿ ಭೂಮಿಯ ಹಗಲು ದರೋಡೆ ಒಳ್ಳೆ
ನಿದರ್ಶನ. ಅದು ಯಾರ ಅಭಿವೃದ್ಧಿಗೆ ದಾರಿಯಾಗಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ.
ನಿತ್ಯ ಅಭಿವೃದ್ಧಿಯ ಅಬ್ಬರದ ಭಾಷಣ ಮಾಡುತ್ತಾ ಭಾವಿ ಪ್ರಧಾನಿಯಾಗುವ ಕನಸು ಕಟ್ಟುತ್ತಿರುವ
ನರೇಂದ್ರ ಮೋದಿ ಅವರ ಯೋಜನೆಗಳಿಂದಾಗಿ ೩೫ ಹಳ್ಳಿಗಳು ಮುಳುಗುತ್ತಿವೆ. ಅವರ ಉಳಿವಿಗಾಗಿ
ಜನ ಬೀದಿಗಿಳಿದಿದ್ದಾರೆ. ಪರಿಹಾರ ಯೋಜನೆ ಅವರನ್ನು ಉಳಿಸಬಲ್ಲದೆ? ಬಂಗಾಳದ ನಂದಿಗ್ರಾಮದ
ಯೋಜನೆಯಿಂದ ರಾಜಕೀಯ ಪೈಪೋಟಿ ಹಲವು ತಿರುವುಗಳೊಂದಿಗೆ ಕಮ್ಯೂನಿಸ್ಟ್ ಪಕ್ಷ ಅಧಿಕಾರ
ಕಳೆದುಕೊಂಡಿತು.
ನೋಡುತ್ತಾ ಹೋದರೆ ಭಾರತದ ಹಳ್ಳಿಗಳು ತಮ್ಮ ಸ್ವರೂಪನ್ನು ಬದಲಾಯಿಸಿಕೊಳ್ಳಬೇಕಾದ
ಸಂದರ್ಭ ನಿಜ. ಆದರೆ ಹೀಗೆ ಅಸಹಾಯಕತೆಯಲ್ಲಿ ಕೊನೆಗೊಳ್ಳುವುದು ನೋವಿನ ಸಂಗತಿ. ತಾತ, ಮುತ್ತಾತನ
ಕಾಲದಿಂದ ನೆಲೆಸಿದ್ದ ಸ್ಥಳ, ಆ ಜಾಗದಲ್ಲಿ ಅವರು ಕಟ್ಟಿಕೊಂಡಿದ್ದ ಸಂಸ್ಕೃತಿ, ನೆಲದೊಂದಿಗಿನ
ಕಳ್ಳುಬಳ್ಳಿಯ ಸಂಬಂಧ ಇದಕ್ಕೆಲ್ಲಾ ಹಣದ ರೂಪದಲ್ಲಿ ಪರಿಹಾರ ಕೊಡಬಲ್ಲರೆ? ನೆಲದ
ನಂಟನ್ನು ಕಸಿದುಕೊಳ್ಳುವ ಅಭಿವೃದ್ಧಿ ಯೋಜನೆಗಳ ಹುನ್ನಾರವೇ ಪರಿಹಾರ, ಪುನರ್ವಸತಿ.
ಆಧುನಿಕ ಮಾನವ, ನಗರಗಳನ್ನು ನಿರ್ಮಿಸುವುದರಲ್ಲೇ ‘ಮೋಕ್ಷ’
ಕಂಡುಕೊಂಡಂತಿದೆ. ನಗರವಾಸಿಗಳ ಅನುಕೂಲಕ್ಕಾಗಿ ಶಾಲೆ, ಕಾಲೇಜು ವಿಶ್ವವಿದ್ಯಾಲಯ ಹೀಗೆ
ದೊಡ್ಡ ದೊಡ್ಡ ಹೆಸರಿನ ಸಂಸ್ಥೆಗಳನ್ನು ಕಟ್ಟಲು ಭೂಮಿ ವಶಪಡಿಸಿಕೊಳ್ಳುವುದು ಹೇಗೆಂದು ಕಾಯ್ದೆ
ರೂಪಿಸಲು ಸಾಧ್ಯವಾಗುತ್ತದೆ. ಆದರೆ ಅದೇ ಹಳ್ಳಿ ಅಭಿವೃದ್ಧಿ ಯೋಜನೆಗಳು ಕನಸೇ ಆಗಿ
ಉಳಿಯುತ್ತವೆ.
ಇಡೀ ಕಾನೂನಿನ ಅಂತರಾಳ ನಗರ ವಿಸ್ತರಿಸಬೇಕು, ಕೈಗಾರಿಕೆ ಹೆಚ್ಚಬೇಕು. ತ್ರಾಸವಿಲ್ಲದಂತೆ
ಹಳ್ಳಿಗಳನ್ನು ತೊಡೆದು ಹಾಕಬೇಕು. ರೈತನ ಸ್ವಾಭಿಮಾನವನ್ನು ಕಸಿದು ನಗರದ ಸೇವೆಗೆ ಹಚ್ಚಬೇಕು.
ಭೂಮಿ ಒಡೆತನ ಅದು ಬಂಡವಾಳಗಾರನ ಕಣ್ಣು ಬೀಳುವವರೆಗೆ ಮಾತ್ರ. ಬಹಳ ನಾಜೂಕಾಗಿ ರೂಪಿಸಿರುವ
ಕಾಯ್ದೆ. ವಸಾಹತು ನೀತಿಗಿಂತಲೂ ನಾಜೂಕಾದ ಭಾಷೆ ಬಳಸಿದ ಕಾಯ್ದೆ. ಒಟ್ಟಿನಲ್ಲಿ ಮನೆಯಂಗಳದಲ್ಲಿ
ಆಡುವ ಕೂಸಿನ ಕೈಗೆ ಮಿಠಾಯಿ ಕೊಟ್ಟು ಜೀತಕ್ಕೆ ಬಿಟ್ಟಂತಾಗಿದೆ.
86284807
ಆಮ್ ಆದ್ಮಿ- ಹೊಸ ಆವೇಶ
Tue, 01/07/2014
ತಲೆಗೆ ಬಿಳಿ ಟೋಪಿ, ಕೈಯಲ್ಲಿ ಪೊರಕೆ, ಭಾರತದ ರಾಜಕೀಯದಲ್ಲಿ ಒಂದು ಹೊಸ
ಅವತಾರ. ಎರಡು ವರ್ಷಗಳ ಹಿಂದೆ ಆರಂಭವಾದ ಭ್ರಷ್ಟಾಚಾರ ವಿರೋಧಿ ಚಳವಳಿ ಒಂದು ರಾಜಕೀಯ ಪಕ್ಷವನ್ನು
ಹುಟ್ಟುಹಾಕಿದೆ. ಅಣ್ಣಾ ಹಜಾರೆ ನೇತೃತ್ವದ ಈ ಹೋರಾಟ ಭಾರತದಾದ್ಯಂತ ಸಂಚಲನವನ್ನು ಹುಟ್ಟುಹಾಕಿತು.
ಕಡೆಕಡೆಗೆ ‘ದೇವತಾ ಮನುಷ್ಯರು’ ಹೋರಾಟಕ್ಕಿಳಿದು ಜನಲೋಕಪಾಲ ಮಸೂದೆಗಾಗಿ
ಆರ್ಭಟಿಸತೊಡಗಿದಾಗ ಅವರ ಹೋರಾಟದ ಬಗೆಗೆ ಅನುಮಾನ ಹುಟ್ಟುವಂತಾಯಿತು.
ರಾಜಕೀಯ ಪಕ್ಷವಾಗುವುದನ್ನು ವಿರೋಧಿಸಿದ ಅಣ್ಣಾ ಹಜಾರೆ ಅವರಿಂದ
ಬೇರ್ಪಟ್ಟು ಹೊಸತೊಂದು ಪಕ್ಷ ಕಟ್ಟಿ ದೆಹಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದು ಅರವಿಂದ
ಕೇಜ್ರಿವಾಲರ ತೀವ್ರಗತಿಯ ಚಲನೆಯಾಗಿತ್ತು. ದೆಹಲಿಯಲ್ಲಿ ಹೊಸ ಪಕ್ಷ ಆಡಳಿತ ನಡೆಸಬಹುದೆಂದು
ಯಾರೂ ನಿರೀಕ್ಷಿಸಿರಲಿಲ್ಲ.
ಕಳೆದ ಮೂರು ತಿಂಗಳಿಂದ ನರೇಂದ್ರ ಮೋದಿ ಭಾರತದ ಪ್ರಮುಖ ಆಕರ್ಷಣೆಯ
ವ್ಯಕ್ತಿಯಾಗಿ ಮೆರೆದಾಗ ಅದನ್ನು ಎದುರಿಸುವುದು ಕಾಂಗ್ರೆಸ್‌ಗೆ ದೊಡ್ಡ ಸವಾಲಿನ ವಿಚಾರವೇ
ಆಗಿತ್ತು. ಪರವಾಗಿ ಅಥವಾ ವಿರೋಧವಾಗಿ ಚರ್ಚೆಗೆ ಒಳಗಾದ ಮೋದಿ, ಮಾಧ್ಯಮಗಳ ವಿಸ್ತಾರವಾದ ಜಾಗವನ್ನು
ಆವರಿಸಿದ್ದು ಸಾಕಷ್ಟು ಜನರಿಗೆ ನುಂಗಲಾರದ ತುತ್ತಾಗಿತ್ತು. ಧರ್ಮವನ್ನು ಬಿಟ್ಟು ಚಾರಿತ್ರಿಕ
ವ್ಯಕ್ತಿ ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಚುನಾವಣೆಯ ಕೇಂದ್ರ ವಿಚಾರವಾಗಿಸಿದ್ದು ಬಿಜೆಪಿಯ ಹೊಸ
ರಾಜಕೀಯ ನಾಟಕ. ಬಹುಶಃ ಪಟೇಲರಂತೆ ಮೋದಿಯನ್ನು ಉಕ್ಕಿನ ಮನುಷ್ಯ ಎಂದು ಬಿಂಬಿಸುವುದು, ಅಲ್ಲದೇ
ಪಟೇಲರ ಇತರ ಗುಣಗಳನ್ನೂ ಮೌನದಲ್ಲಿ ಆರಾಧಿಸುವುದೂ ಇದರ ಉದ್ದೇಶವಾಗಿರಬೇಕು.
ಕಾಂಗ್ರೆಸ್‌ಗೆ ಹಲವು ಗೊಂದಲಗಳು. ಆಳುವ ಪಕ್ಷ ತನ್ನ ಸಾಧನೆಯ ಮೇಲೆ ಮತ ಯಾಚಿಸಬೇಕು.
ಇಲ್ಲವೇ ಹೊಸ ಭರವಸೆಗಳನ್ನು ಕಟ್ಟಬೇಕು. ಪ್ರಧಾನಿ ಮನಮೋಹನ್ ಸಿಂಗ್ ಎಂದೂ ಚುನಾವಣಾ ಪ್ರಚಾರದ
ಹೊಣೆಯನ್ನು ಇಡಿಯಾಗಿ ನಿಭಾಯಿಸಿದವರಲ್ಲ. ಕಾಂಗ್ರೆಸ್‌ನ ಚುನಾವಣಾ ಪ್ರಚಾರಾಂದೋಲನವನ್ನು
ಇಬ್ಬರು ಮೂವರು ಪಕ್ಷದ ಪ್ರತಿನಿಧಿಗಳು ವಹಿಸಿಕೊಂಡು ನಡೆಸುವುದು ಸಾಮಾನ್ಯ ಶೈಲಿ. ಆದರೆ ಈ ಬಾರಿ
ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಹೇಳದೆಯೂ ರಾಹುಲ್ ಗಾಂಧಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್‌ಗೆ ಬೀಳುವ ಅರ್ಧ ಭಾಗದ ಮತ ಸಾಂಪ್ರದಾಯಿಕವಾದುದು. ಕಾಂಗ್ರೆಸ್
ಪಕ್ಷಕ್ಕಾಗಿ ಮತ ನೀಡಲಾಗುತ್ತದೆ, ವ್ಯಕ್ತಿಯನ್ನು ನೋಡುವುದಿಲ್ಲ. ಅದರಲ್ಲೂ
ಸಂವಿಧಾನಾತ್ಮಕ ರಕ್ಷಣೆ ಬಯಸುವ ಸಮುದಾಯಗಳು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತವೆ. ಕಾಂಗ್ರೆಸ್
ತನ್ನ ಸಿದ್ಧಾಂತಕ್ಕೆ ಸದಾ ಬದ್ಧವಾಗಿದೆಯೆಂದೇನೂ ಅಲ್ಲ. ಅದರ ಆರ್ಥಿಕ ಸಿದ್ಧಾಂತ ಹೊರನೋಟಕ್ಕೆ
ಕಾಣುವಂತೆ ಸದಾ ಬಡವರ ಪರವಾಗಿಯೂ ಇಲ್ಲ. ರಾಜಕಾರಣಿಗಳೇ ಬಂಡವಾಳಗಾರರಾಗಿ ರೂಪಿತವಾಗಿರುವ ಈ
ಹೊತ್ತಿನಲ್ಲಿ ಬಂಡವಾಳಶಾಹಿಯ ವಿರುದ್ಧವಾಗಿ ಅವರು ನಿಲ್ಲುತ್ತಾರೆಂದು ನಿರೀಕ್ಷಿಸುವುದು ಅಸಂಬದ್ಧವಾಗಿದೆ.
ಆರ್ಥಿಕ ನೀತಿಯನ್ನಾಗಲೀ, ಸಾಮಾಜಿಕ ಸುಧಾರಣೆಯನ್ನಾಗಲೀ ಬೋಧಿಸದೆ ಭ್ರಷ್ಟತೆಯ
ವಿರೋಧವನ್ನೇ ಘೋಷಣಾ ವಾಕ್ಯವಾಗಿಸಿಕೊಂಡ ಅರವಿಂದ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ
ಗೆಲುವನ್ನು ಮಾತ್ರವಲ್ಲ, ಮುಂದಿನ ಸಾಧ್ಯತೆಗಳನ್ನು ಎಲ್ಲರೂ ಚರ್ಚಿಸುವಂತಾಗಿದೆ. ಸದ್ಯಕ್ಕೆ ಆಮ್
ಆದ್ಮಿ ಪಕ್ಷದ ಗೆಲುವು ದೆಹಲಿಗೆ ಸೀಮಿತವಾಗಿದೆ. ಈ ಚುನಾವಣೆಯ ಫಲಿತಾಂಶ ಮುಂದಿನ ರಾಜಕೀಯ
ಮುನ್ನೋಟವನ್ನು ಒದಗಿಸಿದೆ. ಭಾರತದ ರಾಜಕೀಯ ಲೆಕ್ಕಾಚಾರಗಳನ್ನು ಬದಲಾಯಿಸುವ
ಸಾಧ್ಯತೆಯಿದೆ. ಬಿಜೆಪಿ ಪ್ರಬಲ ರಾಷ್ಟ್ರೀಯ ಪಕ್ಷವಾಗಿ ರೂಪಿತವಾದ ಮೇಲೆ ಮೂರನೇ ಶಕ್ತಿಯಾಗಿ ಎಡ
ಪಕ್ಷಗಳು ಇಲ್ಲವೇ ಸಮಾಜವಾದಿ ಹಿನ್ನೆಲೆಯ ಪಕ್ಷಗಳು ಒಂದುಗೂಡುತ್ತಿದ್ದವು. ಈಗ ಮೂರನೇ ಶಕ್ತಿಯಾಗಿ
ಆಮ್ ಆದ್ಮಿ ತಲೆ ಎತ್ತುವ ಸಾಧ್ಯತೆಯಿದೆ. ಆಮ್ ಆದ್ಮಿ ಪಕ್ಷವಾಗಿ ಪೈಪೋಟಿ ಒಡ್ಡುವುದಕ್ಕಿಂತ
ಕೇಜ್ರಿವಾಲ್ ವ್ಯಕ್ತಿಯಾಗಿ ಮೋದಿ, ರಾಹುಲ್ ಅವರ ನಡುವಿನ ಪೈಪೋಟಿಗೆ ತ್ರಿಕೋನ ಸ್ಪರ್ಧೆಯ
ಸ್ವರೂಪ ನೀಡಬಹುದು. ಈಗಲೇ ಲೋಕಸಭಾ ಚುನಾವಣೆಯ ಪಕ್ಷದ ನಾಯಕನನ್ನು ಗುರುತಿಸಿಕೊಳ್ಳಲು
ಸಿದ್ಧವಾಗದಿದ್ದರೂ ಕೇಜ್ರಿವಾಲ್ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಂತಾಗಿದೆ.
ಈವರೆಗಿನ ಭಾರತದ ಎಲ್ಲಾ ರಾಜಕೀಯ ಪಕ್ಷಗಳೂ ಯಾವುದಾದರೊಂದು ಸಿದ್ಧಾಂತದ
ಹಿನ್ನೆಲೆಯಲ್ಲಿ ಬಂದವೇ ಆಗಿವೆ. ತನಗೆ ಯಾವುದೇ ಸಿದ್ಧಾಂತ ಮುಖ್ಯವಲ್ಲ ಎಂದು ಹೇಳುತ್ತಾ
ಭ್ರಷ್ಟಾಚಾರ ವಿರೋಧವನ್ನೇ ಸಿದ್ಧಾಂತವಾಗಿಸಿಕೊಂಡು ಕೇಜ್ರಿವಾಲ್ ನೇತೃತ್ವದಲ್ಲಿ ಆಮ್
ಆದ್ಮಿ ಮುನ್ನುಗ್ಗುತ್ತಿದೆ. ಬಿಳಿ ಟೋಪಿ ಸ್ವತಂತ್ರ ಪೂರ್ವದ ಚಿತ್ರಣವನ್ನು ಕಟ್ಟಿಕೊಡುತ್ತಿದೆ.
ಅದರಲ್ಲೂ ಅದು ರಾಷ್ಟ್ರೀಯ ಕಾಂಗ್ರೆಸ್ ಬಳಸಿದ ಸಂಕೇತವಾಗಿತ್ತು. 21ನೆಯ ಶತಮಾನದಲ್ಲಿ ಅದು
ಮತ್ತೆ ಮರುಕಳಿಸುವ ಉದ್ದೇಶವಾದರೂ ಏನು? ಸ್ವಾತಂತ್ರ್ಯಾನಂತರದಲ್ಲಿ ಬಿಳಿ ಟೋಪಿ ರಾಜಕಾರಣಿಗಳ
ಉಡುಗೆಯಾಗಿ ಬಳಕೆಯಾಗುತ್ತಿತ್ತು. ಆ ನಂತರದಲ್ಲಿ ಬಿಳಿ ಟೋಪಿ ಅರ್ಥ ಕಳೆದುಕೊಳ್ಳುತ್ತಾ
ಬಂದಿದ್ದು ಈಗ ಮತ್ತೊಮ್ಮೆ ಅದರ ಮೊರೆ ಹೋಗುವಂತಾಗಿದೆ.
ಚುನಾವಣೆಯ ಸಂಕೇತಗಳನ್ನು ಪಡೆಯುವಾಗ, ಬಾವುಟಕ್ಕೆ ಬಣ್ಣ ಬಳಸುವಾಗ ಅದಕ್ಕೊಂದು
ಅರ್ಥ ಕೊಟ್ಟುಕೊಳ್ಳುವ ಪ್ರಯತ್ನ ನಡೆದೇ ಇರುತ್ತದೆ. ಪೊರಕೆಯನ್ನು ಹಿಡಿಯುವಾಗ ಅದಕ್ಕೊಂದು
ಅರ್ಥವಿದೆ. ಸಾಮಾನ್ಯವಾಗಿ ಕರ್ಮಚಾರಿಗಳ ಕೈಯಲ್ಲಿ ಪೊರಕೆ ಕಾಣುವುದರಿಂದ ಆ ಸಮುದಾಯವನ್ನೋ
ಇಲ್ಲವೇ, ಅವರ ಉದ್ಯೋಗವನ್ನೋ ಪ್ರತಿನಿಧಿಸುವ ಉದ್ದೇಶವಿರುತ್ತದೆ. ಕರ್ಮಚಾರಿಗಳು ಅವರ
ಸಂಕೇತವಾಗುವುದಾದರೆ ವಿಸ್ತಾರದ ನೆಲೆಯಲ್ಲಿ ತಳ ಸ್ತರದ ಸಮಾಜವನ್ನು ಪ್ರತಿನಿಧಿಸುವುದು ಅವರ
ಯೋಜನೆಯಾಗಿರಬೇಕು.
ಮಾರ್ಕ್ಸ್ವಾದದ ಬೆನ್ನೆಲುಬಿನಲ್ಲಿ ಇಂತಹ ವಿಚಾರಗಳು ಹುಟ್ಟುತ್ತವೆ. ಇಲ್ಲವೇ
ಭಾರತದಲ್ಲಿ ದಲಿತ ಚಳವಳಿಯನ್ನು ಹುಟ್ಟುಹಾಕಿದ ಅಂಬೇಡ್ಕರ್ವಾದ ಇಂತಹ ಐಡೆಂಟಿಟಿಯನ್ನು
ತಂದುಕೊಡುತ್ತದೆ. ಆದರೆ ಅಂಬೇಡ್ಕರ್ ವಿಚಾರವನ್ನೇ ಮುಂದುಮಾಡಿಕೊಂಡ ಬಿಎಸ್‌ಪಿ ಸಹ ಸಮುದಾಯ
ಒಂದರ ಗುರುತನ್ನು ಇರಿಸಿಕೊಳ್ಳಲಿಲ್ಲ; ಆನೆಯನ್ನು ಪಕ್ಷದ ಚುನಾವಣೆಯ ಗುರುತಾಗಿಸಿಕೊಂಡಿತು.
ಆದರೆ ಸಮಾಜವಾದಿಯೆಂದು ನೇರವಾಗಿ ಹೆಸರಿನಲ್ಲೇ ಹೇಳಿಕೊಂಡಿತು. ಪಕ್ಷಗಳ ಹೆಸರುಗಳೇ
ಸಿದ್ಧಾಂತವನ್ನೂ ಸೂಚಿಸುತ್ತವೆ. ಬಿಎಸ್‌ಪಿಗೆ ದಲಿತ ಸಮುದಾಯದ ಹಿತ ಕಾಪಾಡುವುದು
ಬದ್ಧತೆಯಾಗಿರುತ್ತದೆ. ಆಮ್ ಆದ್ಮಿಗೆ ಅದರ ಸಂಕೇತಗಳು ಬೇಕಾಗಿವೆ. ಪೊರಕೆ ಏನಾದರೂ
ಕರ್ಮಚಾರಿಯನ್ನು ಬಿಂಬಿಸಿದ್ದರೆ ಅದು ಬದ್ಧತೆಯಲ್ಲ ಬಂಡವಾಳ.
ಕಾಂಗ್ರೆಸ್ ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ಬಹಳ ವಿಸ್ತಾರದ ನೆಲೆಯಲ್ಲಿ ಭವ್ಯ
ಭಾರತದ ಕನಸನ್ನೇ ಕಟ್ಟಿಕೊಂಡಿತ್ತು. ರಾಷ್ಟ್ರೀಯ ಹೋರಾಟದ ಬಹುದೊಡ್ಡ ಕನಸನ್ನು ನಿಭಾಯಿಸುವ ಜವಾಬ್ದಾರಿಯನ್ನು
ಹೊತ್ತಿತ್ತು. ಆದರೆ ಭ್ರಷ್ಟತೆಯೂ ನಿಧಾನವಾಗಿ ಸೇರಿ ಹೋಯಿತು. ದೊಡ್ಡ ಆಲದ ಮರದಲ್ಲಿ
ಕಾಣುವ ಪೊಟರೆಯ ಹಾಗೆ.
ಆಮ್ ಆದ್ಮಿ ಎಂದರೆ ಜನ ಸಾಮಾನ್ಯ; ಜನಸಾಮಾನ್ಯರ ಪಕ್ಷವೆಂದು ಹೇಳಿಕೊಂಡಿರುವುದರಿಂದ
ಯಾರೆಲ್ಲರು ಜನಸಾಮಾನ್ಯರು-? ಈ ಒಂದು ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಸಾಮಾಜಿಕ
ನಿಲುವುಗಳೇನೆಂದು ತಿಳಿಯುತ್ತದೆ. ಅಂಬೇಡ್ಕರ್ ದಲಿತ ಪದವೊಂದನ್ನು ವಿವರಿಸುತ್ತಾ ಶೋಷಿತರೆಲ್ಲರೂ
ದಲಿತರೆಂದು ಜಾತಿ ವರ್ಗವನ್ನು ಮೀರಿದ ವ್ಯಾಖ್ಯಾನವನ್ನು ಕಟ್ಟಿಕೊಟ್ಟರು. ಶ್ರೀಸಾಮಾನ್ಯನ
‘ದೀಕ್ಷಾ ಗೀತೆ’ ಕವನದಲ್ಲಿ ಕುವೆಂಪು ಪ್ರಜಾಪ್ರಭುತ್ವ ಬಂದಾಗ ‘ಇನ್ನಿದು ಶ್ರೀಸಾಮಾನ್ಯನ
ಕಾಲ’ವೆಂದು ಹೇಳುತ್ತಾ, ‘ಇನ್ನಾಯಿತು ಅಹಂಇಹಂಮಿಕೆಯ ಗರ್ವದ ಕಾಲ. ಇದು ಸರ್ವರ ಕಾಲ’ ಎಂದು
ಸರ್ವೋದಯವನ್ನು ಬಯಸುತ್ತಾರೆ. ಪ್ರಜಾಪ್ರಭುತ್ವ, ಶ್ರೀಸಾಮಾನ್ಯ, ಸರ್ವೋದಯ ಇದಾವುದೂ
ಹೊಸ ಪರಿಕಲ್ಪನೆಗಳಲ್ಲ.
ಆಮ್ ಆದ್ಮಿ ಪಕ್ಷದ ಹೆಸರು ಹಿಂದಿಯಲ್ಲಿರುವುದರಿಂದ ಅದು ಉತ್ತರ ಭಾರತದ
ಜನರಿಗೆ ಮಾತ್ರ ಸಲ್ಲುವಂತಹದೇ ಎಂದು ದಕ್ಷಿಣದವರಿಗೆ ಅನುಮಾನ ಹುಟ್ಟುತ್ತದೆ. ಬಿಜೆಪಿ ತನ್ನದೇ ಆದ
ಭಾಷಾ ಬಳಕೆಯನ್ನು ಹೊಂದಿದೆ. ಸಾಮಾನ್ಯವಾಗಿ ಅವರ ನಾಮಕರಣದಲ್ಲಿ ಸಂಸ್ಕೃತ ಬಳಕೆ ಇರುತ್ತದೆ.
ಪರಿಷತ್, ಸಂಘಟನ್, ರಾಷ್ಟ್ರೀಯ, ಸಂಸ್ಕೃತಿ, ಸನಾತನ್ ಇಂತಹ ಪದಪುಂಜಗಳಿಂದ ತುಂಬಿ ಹೋಗಿರುತ್ತದೆ.
ಮಾರ್ಕ್ಸ್ವಾದಿಗಳಾದಲ್ಲಿ ಊಳಿಗಮಾನ್ಯ, ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ಇವುಗಳ ವಿರೋಧ ಮೂಲಮಂತ್ರವಾಗಿರುತ್ತದೆ.
ಆಮ್ ಆದ್ಮಿ ಒಂದು ಹೊಸ ರಾಷ್ಟ್ರೀಯ ಪಕ್ಷವೇ ಆದಲ್ಲಿ ಅದು ಜನಸಾಮಾನ್ಯರ ಪ್ರತಿನಿಧಿಯಾಗಿ
ರೈತ ಹಾಗೂ ಕಾರ್ಮಿಕರ ಪರವಾಗಿ ನಿಲ್ಲಲು ಸಾಧ್ಯವೇ? ಇಂತಹ ವಿಚಾರಗಳಲ್ಲಿ ಸ್ಪಷ್ಟತೆ
ಬೇಕಾಗುತ್ತದೆ. ಸಾಮಾನ್ಯನ ಪಕ್ಷವೆಂದಾಗ ಬಂಡವಾಳಶಾಹಿಗಳ ಪರವಲ್ಲ ಎಂದು ಭಾವಿಸಬೇಕೆ? ಈ ಪಕ್ಷ
ನಂಬುವ ಆರ್ಥಿಕ ನೀತಿ ಏನು? ನೀರನ್ನು ಪೂರೈಸಿದಾಗ ಇಲ್ಲವೇ ವಿದ್ಯುತ್ ಕೊರತೆ ನೀಗಿಸಿದಾಗ
ಜನರಲ್ಲಿ ನಂಬಿಕೆ ಹುಟ್ಟುವುದು ನಿಜ. ಅದಕ್ಕೆ ದೀರ್ಘ ಕಾಲದ ಪರಿಹಾರವನ್ನು ಕಂಡುಕೊಳ್ಳಬೇಕು.
ಕಾಂಗ್ರೆಸ್ ಸರ್ಕಾರ ಭಾರತಕ್ಕಿರುವ ವಿದ್ಯುತ್ ಕೊರತೆಯನ್ನು ಮುಂದಿಟ್ಟುಕೊಂಡು ಅಮೆರಿಕದ ಜೊತೆ
ಅಣು ಒಪ್ಪಂದವನ್ನು ಮಾಡಿಕೊಂಡಿತು. ಅದನ್ನು ವಿರೋಧಿಸಿ ಕಮ್ಯುನಿಸ್ಟ್ ಪಕ್ಷ
ಕಾಂಗ್ರೆಸ್ ಮೈತ್ರಿಯಿಂದ ಹೊರಗುಳಿಯಿತು. ಇಲ್ಲಿ ಅಮೆರಿಕದ ಜೊತೆಗಿನ ಒಪ್ಪಂದ
ಅನಿವಾರ್ಯವಾಗಿತ್ತೆ? ಹೊರನೋಟಕ್ಕೆ ಹೌದೆಂದು ಕಾಣುತ್ತದೆ. ಕಡೆಗೂ ಅಮೆರಿಕದ ಹಿಡಿತಕ್ಕೆ ಭಾರತ
ಸಿಕ್ಕಿಹಾಕಿಕೊಳ್ಳಲಿಲ್ಲವೇ? ಇಲ್ಲಿ ಭ್ರಷ್ಟತೆಯ ನೆಲೆಗಳು ತಾತ್ವಿಕವಾಗಿರುತ್ತವೆ.
ಲಂಚ ತೆಗೆದುಕೊಳ್ಳುವುದನ್ನು ಭ್ರಷ್ಟತೆ ಎಂದು ಗುರುತಿಸಲಾಗುತ್ತದೆ.
ಪ್ರಯಾಣಿಕರಿಗೆ ಬಸ್ನಲ್ಲಿ ಕಂಡಕ್ಟರ್ ಉಳಿಕೆ ಚಿಲ್ಲರೆ ಕೊಡದೆ ಹೋದಾಗ ಅನ್ಯಾಯ ಎಂದು
ಕಾಣುತ್ತದೆ. ಶಾಲೆಯಲ್ಲಿ ಶುಲ್ಕ ಜಾಸ್ತಿಯಾದಾಗ ಶೋಷಣೆ ಎಂದು ಅನಿಸುತ್ತದೆ. ಆದರೆ ಬೌದ್ಧಿಕ
ಭ್ರಷ್ಟತೆಯ ವಿರುದ್ಧ ಹೋರಾಡುವುದು ಹೇಗೆ? ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಆಟೊರಿಕ್ಷಾ
ಚಾಲಕರು ಬೆಂಬಲ ನೀಡಿದರು. ದೆಹಲಿ ಕೊಳೆಗೇರಿವಾಸಿಗಳಿಗೆ ಯಾವುದರಲ್ಲಾದರೂ ರಿಯಾಯಿತಿ ಕೊಡಲು
ಸಾದ್ಯವೇ? ಹಾಗೆ ಕೊಟ್ಟ ರಿಯಾಯಿತಿ ಭ್ರಷ್ಟತೆಯಾಗುತ್ತದೆಯೇ?
ತಮ್ಮ ಪಕ್ಷದ ಆದರ್ಶಗಳನ್ನು ಬರೆದ ಕೇಜ್ರಿವಾಲ್ ಅದನ್ನು ‘ಸ್ವರಾಜ್’ ಎಂದು ಕರೆದುಕೊಂಡಿದ್ದಾರೆ. ಹಾಗೂ ಗಾಂಧಿ ಕಂಡ ಸ್ವರಾಜ್ಯ ಗುರಿಯಾಗಿಸಿಕೊಂಡಂತೆ ಹೇಳಿಕೊಳ್ಳುತ್ತಾರೆ. ಹಾಗಾದರೆ ಗಾಂಧಿವಾದ ಇವರು ನಂಬುವ ಸಿದ್ಧಾಂತವೇ? ಅದರ ಸಂಕೇತವಾಗಿಯೂ ಟೋಪಿಯನ್ನು ಧರಿಸಿರಬಹುದು. ಆಮ್ ಆದ್ಮಿಯ ಆದರ್ಶಗಳ ಪುಸ್ತಕ ಸ್ವರಾಜ್‌ನಲ್ಲಿ ಇಂದಿನ ರಾಜಕೀಯ ವಿಮರ್ಶೆಯನ್ನು ಸೊಗಸಾಗಿ ಮಾಡಲಾಗಿದೆ. ವ್ಯವಸ್ಥೆ ಬದಲಿಸಬೇಕೆಂಬ ಗುರಿ ಸೊಗಸಾಗಿಯೇ ಇದೆ. ಈವರೆಗಿನ ರಾಜಕೀಯ ಪಕ್ಷಗಳೂ ಅದನ್ನೇ ಹೇಳುತ್ತಾ ಬಂದಿವೆ.
ತಮ್ಮ ಪಕ್ಷದ ಆದರ್ಶಗಳನ್ನು ಬರೆದ ಕೇಜ್ರಿವಾಲ್ ಅದನ್ನು ‘ಸ್ವರಾಜ್’ ಎಂದು ಕರೆದುಕೊಂಡಿದ್ದಾರೆ. ಹಾಗೂ ಗಾಂಧಿ ಕಂಡ ಸ್ವರಾಜ್ಯ ಗುರಿಯಾಗಿಸಿಕೊಂಡಂತೆ ಹೇಳಿಕೊಳ್ಳುತ್ತಾರೆ. ಹಾಗಾದರೆ ಗಾಂಧಿವಾದ ಇವರು ನಂಬುವ ಸಿದ್ಧಾಂತವೇ? ಅದರ ಸಂಕೇತವಾಗಿಯೂ ಟೋಪಿಯನ್ನು ಧರಿಸಿರಬಹುದು. ಆಮ್ ಆದ್ಮಿಯ ಆದರ್ಶಗಳ ಪುಸ್ತಕ ಸ್ವರಾಜ್‌ನಲ್ಲಿ ಇಂದಿನ ರಾಜಕೀಯ ವಿಮರ್ಶೆಯನ್ನು ಸೊಗಸಾಗಿ ಮಾಡಲಾಗಿದೆ. ವ್ಯವಸ್ಥೆ ಬದಲಿಸಬೇಕೆಂಬ ಗುರಿ ಸೊಗಸಾಗಿಯೇ ಇದೆ. ಈವರೆಗಿನ ರಾಜಕೀಯ ಪಕ್ಷಗಳೂ ಅದನ್ನೇ ಹೇಳುತ್ತಾ ಬಂದಿವೆ.
ಕೇಜ್ರಿವಾಲ್ ಅವರು ತಿಲಕರ ಸ್ವರಾಜ್ ಮತ್ತು ಗಾಂಧಿ ಕಲ್ಪನೆಯ ಸ್ವರಾಜ್‌ಗಳ
ಉಲ್ಲೇಖ ಮಾಡುತ್ತಾರೆ. ಅವರಿಬ್ಬರ ಸ್ವರಾಜ್ ಕಲ್ಪನೆಗಳು ಬೇರೆಬೇರೆ. ಅವು ಸ್ವಾತಂತ್ರ್ಯ
ಪೂರ್ವದ ಕನಸುಗಳು. ಆರು ದಶಕಗಳ ಪ್ರಜಾಪ್ರಭುತ್ವದ ಅನುಭವ ಹೊಸ ಚಿಂತನೆಯನ್ನು
ಬೇಡುತ್ತದೆ.
ದೆಹಲಿ ಮುಖ್ಯಮಂತ್ರಿಯಾಗಿ ಬಂದು ಕೇಜ್ರಿವಾಲ್ ಜನರನ್ನು ಉದ್ದೇಶಿಸಿ ಮಾತನಾಡುವಾಗ ಮಾತಿನಲ್ಲಿ ಹೆಜ್ಜೆಹೆಜ್ಜೆಗೂ ಭಗವಂತನ ಆಶೀರ್ವಾದವೆಂದು ಹೇಳುವುದರ ಅರ್ಥವೇನು? ಜನತೆ ತಮ್ಮನ್ನು ಗೆಲ್ಲಿಸಿದರೆಂಬ ನಂಬಿಕೆಯೂ ಇಲ್ಲವೇ? ಆಮ್ ಆದ್ಮಿಯನ್ನು ನಂಬಿದವರು ಜನತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲಿಲ್ಲವೇಕೆ? ಮತದಾರನ ಬಗೆಗೆ ನಂಬಿಕೆ ಇಲ್ಲವೆಂದು ಸಂದೇಶವನ್ನು ಕೊಟ್ಟಂತಾಗಲಿಲ್ಲವೇ? ಮತದಾರನ ಜವಾಬ್ದಾರಿಯನ್ನು ವಿಶೇಷವಾಗಿ ಹೇಳುತ್ತಿರುವುದರಿಂದ ಇಂತಹ ಪ್ರಶ್ನೆಗಳು ಏಳುತ್ತವೆ.
ದೆಹಲಿ ಮುಖ್ಯಮಂತ್ರಿಯಾಗಿ ಬಂದು ಕೇಜ್ರಿವಾಲ್ ಜನರನ್ನು ಉದ್ದೇಶಿಸಿ ಮಾತನಾಡುವಾಗ ಮಾತಿನಲ್ಲಿ ಹೆಜ್ಜೆಹೆಜ್ಜೆಗೂ ಭಗವಂತನ ಆಶೀರ್ವಾದವೆಂದು ಹೇಳುವುದರ ಅರ್ಥವೇನು? ಜನತೆ ತಮ್ಮನ್ನು ಗೆಲ್ಲಿಸಿದರೆಂಬ ನಂಬಿಕೆಯೂ ಇಲ್ಲವೇ? ಆಮ್ ಆದ್ಮಿಯನ್ನು ನಂಬಿದವರು ಜನತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲಿಲ್ಲವೇಕೆ? ಮತದಾರನ ಬಗೆಗೆ ನಂಬಿಕೆ ಇಲ್ಲವೆಂದು ಸಂದೇಶವನ್ನು ಕೊಟ್ಟಂತಾಗಲಿಲ್ಲವೇ? ಮತದಾರನ ಜವಾಬ್ದಾರಿಯನ್ನು ವಿಶೇಷವಾಗಿ ಹೇಳುತ್ತಿರುವುದರಿಂದ ಇಂತಹ ಪ್ರಶ್ನೆಗಳು ಏಳುತ್ತವೆ.
ಕಾರ್ಮಿಕರು, ರೈತರು, ಮತದಾರರು, ಈ ಹೆಸರಿನಲ್ಲಿ ಪ್ರಮಾಣ ವಚನವನ್ನು
ಸ್ವೀಕರಿಸಿ ತಮ್ಮ ನಿಷ್ಠೆಯನ್ನು ಮೆರೆದ ರಾಜಕಾರಣಿಗಳಿದ್ದಾರೆ. ಕಡೇಪಕ್ಷ ಚುನಾವಣೆಯಲ್ಲಿ
ಗೆದ್ದ ಪ್ರಜಾ ಪ್ರತಿನಿಧಿಗಳು ಸಂವಿಧಾನದ ಹೆಸರಿನಲ್ಲಾದರೂ ಪ್ರಮಾಣವಚನ ಸ್ವೀಕರಿಸುವುದು ಉತ್ತಮವೆನಿಸುತ್ತದೆ.
ಇದು ಈ ಸಂದರ್ಭದಲ್ಲಿ ಎದ್ದ ಚರ್ಚೆಯಾದರೂ ಪ್ರಜಾಪ್ರಭುತ್ವದ ಅಡಿಯಲ್ಲಿ ಎಲ್ಲಾ ಪಕ್ಷಗಳ
ರಾಜಕಾರಣಿಗಳಿಗೂ ಅನ್ವಯಿಸುವ ವಿಚಾರವೇ ಆಗಿದೆ. ಸಮಾನ ಸಮಾಜದೆಡೆಗೆ ಸಾಗುವುದು ಭಾರತ ಸಂವಿಧಾನದ
ಮೂಲಗುರಿಯಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ