ಸೌಜನ್ಯ: ಪ್ರಜಾವಾಣಿ
ಸಾಂಸ್ಕೃತಿಕ ಯಜಮಾನಿಕೆಗೆ ತಡೆ ಹೇಗೆ ?
Tue, 08/06/2013
ಕೆಲವು ವರ್ಷಗಳ ಹಿಂದೆ
ಇತಿಹಾಸ ವಿಭಾಗದ ಪ್ರವೇಶ ಪರೀಕ್ಷೆಯಲ್ಲಿ ಸರಳವಾದ ಪ್ರಶ್ನೆಯೊಂದನ್ನು ಕೇಳಲಾಗಿತ್ತು. `ಭಾರತೀಯ
ಸಂಸ್ಕೃತಿಗೆ ಮುಸಲ್ಮಾನರ ಕೊಡುಗೆಯೇನು?' ಐದು ಸಾಲುಗಳಲ್ಲಿ ಉತ್ತರವನ್ನು ಬರೆಯಲು
ಸೂಚಿಸಲಾಗಿತ್ತು. ಸುಮಾರು ಮುನ್ನೂರು ವಿದ್ಯಾರ್ಥಿಗಳು ಉತ್ತರಿಸಿದ್ದರು. ಮೊದಲ ಸಾಲಿನಲ್ಲಿ
ಎಲ್ಲರೂ ಒಂದೇ ಉತ್ತರವನ್ನು ನೀಡಿದ್ದರು. ಮುಸ್ಲಿಂ ಆಕ್ರಮಣಕಾರರು ದೇವಾಲಯಗಳನ್ನು ನಾಶಮಾಡಿದರು.
ಎರಡು ಮೂರನೆಯ ಸಾಲಿನ ಉತ್ತರಗಳು ಬಹುತೇಕ ಒಂದೇ ಆಗಿದ್ದವು.
ಭಾರತದಲ್ಲಿ ಸತಿ ಸಹಗಮನ
ಪದ್ಧತಿ ಮತ್ತು ಬುರ್ಖಾ ಪದ್ಧತಿಗಳು ಆರಂಭವಾದವು. ಉಳಿದೆರಡು ಉತ್ತರಗಳಲ್ಲಿ ಸಣ್ಣ ಪುಟ್ಟ
ಬದಲಾವಣೆಗಳಿದ್ದವಷ್ಟೆ. ಮುಸ್ಲಿಂ ಕೊಡುಗೆಯಾಗಿ ಒಳ್ಳೆಯದೇನನ್ನೂ ಬರೆದಿರಲಿಲ್ಲ. ಹದಿನೇಳು
ವರ್ಷಗಳ ಚರಿತ್ರೆಯ ಓದಿನ ನಂತರ ಭಾರತದಲ್ಲಿ ವಿದ್ಯಾರ್ಥಿಯೊಬ್ಬ ಇಂತಹ ಉತ್ತರವನ್ನು
ಬರೆಯಬಲ್ಲನಾದರೆ ನಮ್ಮ ಶಿಕ್ಷಣ ನೀತಿ ಹಾಗೂ ಆ ಮೂಲಕ ನಾವು ಕಲಿಸಲು ಹೊರಟ ಸಂಸ್ಕೃತಿಯ ಬಗ್ಗೆ
ಪ್ರಶ್ನಿಸಿಕೊಳ್ಳಬೇಕೆನಿಸಿತು.
ಮುಸಲ್ಮಾನರ ಆಳ್ವಿಕೆಯಿಂದಾಗಿ
ಭಾರತದಲ್ಲಿ ವಾಸ್ತುಶಿಲ್ಪದ ಕ್ರಾಂತಿಯೇ ಸಂಭವಿಸಿತ್ತು. ಭಾರತದಲ್ಲಿ ಆರಂಭವಾದ ಸಿತಾರ್
ವಾದನವನ್ನಾಗಲೀ, ಸೂಫೀ ಸಾಹಿತ್ಯವನ್ನಾಗಲೀ, ಕಡೆಗೆ ಬಿರ್ಯಾನಿಯಂತಹ ಅಡುಗೆಯನ್ನಾಗಲೀ
ಮೆಚ್ಚುವುದನ್ನು ಕಲಿಸಿಲ್ಲ. ಇದನ್ನೆಲ್ಲಾ ಗಮನಿಸುವಾಗ ಕರ್ನಾಟಕ ಸರ್ಕಾರ `ಸಾಂಸ್ಕೃತಿಕ
ನೀತಿ'ಯೊಂದನ್ನು ನಿರೂಪಿಸಿಲು ಹೊರಟ ವಿಚಾರ ಗಾಬರಿಯನ್ನು ಹುಟ್ಟಿಸಿತು. ಕಳೆದೆರಡು ಶತಮಾನಗಳಲ್ಲಿ
`ಸಂಸ್ಕೃತಿ'ಯ ಕಲ್ಪನೆಯೇ ಅರಿವಳಿಕೆಯಾಗಿ ಕೆಲಸಮಾಡಿದೆ.
ಹೊರನೋಟಕ್ಕೆ `ಸಾಂಸ್ಕೃತಿಕ ನೀತಿ'ಯ ಹರಹು ಅಕಾಡೆಮಿಗಳಿಗೆ ಹಣ ಮಂಜೂರು
ಮಾಡುವುದು, ಸಮರ್ಥರಾದವರಿಗೆ ಜವಾಬ್ದಾರಿಯನ್ನು ನೀಡುವುದು ಅದರಲ್ಲೂ ಎಲ್ಲಾ ಸಮುದಾಯಗಳಿಗೆ
ಅವಕಾಶವಿರುವಂತೆ ನೋಡಿಕೊಳ್ಳುವುದು. ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಶಿಲ್ಪ ಇವುಗಳ ಪ್ರೋತ್ಸಾಹಕ್ಕಾಗಿ
ಕಾರ್ಯಕ್ರಮಗಳನ್ನು ರೂಪಿಸುವುದು, ಸಾಹಿತ್ಯ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸುವುದು- ಇವು
ಸಂಸ್ಕೃತಿ ನೀತಿಯ ರೂಪುರೇಷೆಗಳಾಗಿ ಕಾಣಿಸುತ್ತವೆ.
ಇದು `ಸಂಸ್ಕೃತಿ ನೀತಿ'ಯ
ಒಂದು ಭಾಗ ಮಾತ್ರ. ಇದರಲ್ಲೂ ಗುರುತರವಾದ ಜವಾಬ್ದಾರಿಗಳಿವೆ. ಯಾವ ಸಾಹಿತ್ಯಕ್ಕೆ ಮನ್ನಣೆ
ಸಿಗುತ್ತದೆಂಬುದಾಗಲೀ, ಜನಪದ ಹಾಡುಗಾರರನ್ನು ಗುರುತಿಸಿ ಮನ್ನಿಸುವುದಾಗಲೀ ಸರ್ಕಾರದ
ನಿಲುವುಗಳಾಗಬಲ್ಲವು. ಭಾಷಾ ನೀತಿಗಳು ಕನ್ನಡವಲ್ಲದೆ ಉರ್ದು, ತುಳು, ಕೊಡವ ಭಾಷೆಗಳಿಗೆ
ಅಕಾಡೆಮಿಗಳನ್ನು ತೆರೆದು ತನ್ನ ಉದಾರನೀತಿಯನ್ನು ಈವರೆಗೆ ತೋರಿಸುತ್ತಾ ಬಂದಿವೆ. ಸಂಸ್ಕೃತಿ
ನೀತಿಯ ಆಳ ಅಗಲವನ್ನು ಸ್ವಲ್ಪಮಟ್ಟಿಗಾದರೂ ಪರಿಶೀಲಿಸುವುದು ಇಲ್ಲಿ ನನ್ನ ಪ್ರಯತ್ನ.
ಭಾರತದ ರಾಷ್ಟ್ರೀಯ ಹೋರಾಟದ ಹೊತ್ತಿನಲ್ಲಿ `ಸಾಂಸ್ಕೃತಿಕ ಏಕತೆ'ಯ
ಹೆಸರಿನಲ್ಲಿ ಕಂಡ ಕಲ್ಪನೆ ಮತ್ತು ಅದಕ್ಕಾಗಿ ತೆತ್ತ ಬೆಲೆ ಬಹಳ ದೊಡ್ಡದು. ಸಂಸ್ಕೃತಿ
ವಿಚಾರವನ್ನು ಮುಟ್ಟುವುದು ಎರಡು ಅಲಗಿನ ಕತ್ತಿಯನ್ನು ಹಿಡಿದಂತೆ. ಭಾರತವನ್ನಾಳಿದ
ಬ್ರಿಟಿಷರಿಗೂ ಇದರ ಅನುಭವವಾಗಿತ್ತು.
ಅವರು ಭಾರತದಲ್ಲಿ ಜಾರಿಗೆ ತಂದ ಸತಿ ವಿರೋಧಿ ಕಾಯಿದೆ, ವಿವಾಹ ಕಾಯಿದೆ,
ಮತಾಂತರಕ್ಕೆ ಪರವಾದ ಕಾಯಿದೆಗಳು 1857ರ ದಂಗೆಗೆ ಕಾರಣವಾಯಿತೆಂದು ಅವರು ಗ್ರಹಿಸಿದ್ದರು. ಹಾಗಾಗಿ
1858ರಲ್ಲಿ ಭಾರತೀಯ ರಾಜರನ್ನು ಸೋಲಿಸಿದ ಬ್ರಿಟಿಷರು ಭಾರತವನ್ನು ಬ್ರಿಟಿಷ್ ಸಾಮ್ರೋಜ್ಯದ
ಭಾಗವೆಂದರು.
ಇನ್ನು ಮುಂದೆ ಭಾರತದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಚಾರಗಳಲ್ಲಿ ಬ್ರಿಟಿಷರು
ತಲೆ ಹಾಕುವುದಿಲ್ಲವೆಂದು ರಾಣಿಯ ಘೋಷಣೆಯಲ್ಲಿ ತಿಳಿಸಿದರು. ಭಾಷೆಗಳನ್ನು ಆಳವಾಗಿ ಅಧ್ಯಯನ
ಮಾಡಿದರು, ಜಾತಿ ಉಪಜಾತಿಗಳ ಪಟ್ಟಿ ಮಾಡಿದರು. ವಾಸ್ತವದಲ್ಲಿ ಭಾರತದ ಧರ್ಮ, ಸಂಸ್ಕೃತಿಯ
ವಿಚಾರಗಳನ್ನು ಸೊಗಸಾಗಿ ಆಡಳಿತದ ಅನುಕೂಲಕ್ಕೆ ಬಳಸಿಕೊಂಡರು. ಒಡೆದು ಆಳುವ ನೀತಿಗೆ ಅಡಿಪಾಯ
ಮಾಡಿಕೊಂಡರು.
ಇಂದು `ಸಂಸ್ಕೃತಿ' ಎಂಬ ಪದ
ವಿಪರೀತ ಅರ್ಥವನ್ನು ಪಡೆದುಕೊಂಡಿದೆ. ಸೀರೆ ಉಡುವುದು ಭಾರತೀಯ ಸಂಸ್ಕೃತಿ, ಪಾಪ್ ಸಂಗೀತ
ಪಾಶ್ಚಿಮಾತ್ಯ ಸಂಸ್ಕೃತಿ, ಭಾರತೀಯ ಸಂಸ್ಕೃತಿಯಲ್ಲಿ ಗಂಡ ಸತ್ತಾಗ ಹೆಂಡತಿಯನ್ನು
ಚಿತೆಗೇರಿಸುತ್ತಿದ್ದರು, ಇಸ್ಲಾಂ ಸಂಸ್ಕೃತಿ ಮೂರ್ತಿ ಪೂಜೆಯನ್ನು ವಿರೋಧಿಸುತ್ತದೆ. ಹೀಗೆ ರೂಢಿ,
ಆಚರಣೆ, ಕಲೆ, ಸಾಹಿತ್ಯ, ಸಂಗೀತ ಒಟ್ಟಾರೆ ಬದುಕನ್ನೇ ಸಂಸ್ಕೃತಿ ಪದದಲ್ಲಿ ಹಿಡಿದಿಡಲಾಗುತ್ತಿದೆ.
ವಿಶ್ವವಿದ್ಯಾಲಯದ ಸಂಶೋಧನೆಗಳು ಸಂಸ್ಕೃತಿ ಪದದ ಸುತ್ತ ಗಿರಕಿ ಹೊಡೆಯುತ್ತಿವೆ
ಎಂದರೆ ಉತ್ಪ್ರೇಕ್ಷೆಯಾಗಲಾರದು. ಶಾಸನ ಸಂಸ್ಕೃತಿ, ಮಳೆ ಸಂಸ್ಕೃತಿ, ಕೃಷಿ ಸಂಸ್ಕೃತಿ, ಬೇಟೆ
ಸಂಸ್ಕೃತಿ, ಜಲ ಸಂಸ್ಕೃತಿ, ಮಾಲ್ ಸಂಸ್ಕೃತಿ... ಪಟ್ಟಿ ಬೆಳೆಯುತ್ತದೆ. ರಾಜಕಾರಣಿಗಳು ಭಾಷಣ
ಮಾಡುವಾಗ ಪದಗಳ ಕೊರತೆಯಾದರೆ `ಸಂಸ್ಕೃತಿ' ಪದವನ್ನು ಧಾರಾಳವಾಗಿ ಬಳಸುತ್ತಿರುತ್ತಾರೆ.
`ಸಂಸ್ಕೃತಿ' ಪದವನ್ನು ಇಂಗ್ಲಿಷ್‌ನ `ಕಲ್ಚರ್' ಪದಕ್ಕೆ ಸಂವಾದಿಯಾಗಿ
ಬಳಸುತ್ತಿದ್ದೇವೆ. ಕಲ್ಚರ್ ಪದವೂ ಹದಿನೆಂಟನೇ ಶತಮಾನದಷ್ಟು ಈಚಿನದೇ; ಅಗ್ರಿಕಲ್ಚರ್ ಪದದ
ಭಾಗವಾಗಿದ್ದು ಆ ನಂತರ ಸ್ವತಂತ್ರವಾಗಿ ಬಳಕೆಯಾಗತೊಡಗಿತು. ಒಂದು ಬಾರಿ ಚಲಾವಣೆಗೆ ಬಂದ ನಂತರ
ಇಂಗ್ಲಿಷ್‌ನ್ಲ್ಲಲೂ ಅರ್ಥ ಹಿಗ್ಗುತ್ತಲೇ ಹೋಯಿತು. ಮಹಾಯುದ್ಧಗಳ ಕಾಲದಲ್ಲಿ ಬಂದ ಹೊಸ ಸರ್ಕಾರಗಳು
ಜನರ ಆಲೋಚನಾ ಕ್ರಮವನ್ನೇ ಬದಲಿಸಹೊರಟವು.
ಹಿಂದೆಂದಿಗಿಂತ ಭಿನ್ನವಾಗಿ ಬದುಕಬೇಕೆಂಬುದು ಅವರ ಉದ್ದೇಶವಾಗಿದ್ದರಿಂದ
ಮೂಲಭೂತ ನಂಬಿಕೆಗಳನ್ನೇ ಬದಲಿಸುವ ನಿಟ್ಟಿನಲ್ಲಿ ಅಡಿಯಿಟ್ಟರು. ಬಹಿರಂಗವಾಗಿ ಸಾಂಸ್ಕೃತಿಕ
ನೀತಿಯೆಂದು ಕರೆದುಕೊಳ್ಳದಿದ್ದರೂ ಕಾನೂನುಗಳ ಮೂಲಕ ತಾವು ಬಯಸಿದ ವಿಚಾರಗಳನ್ನು ಆಚರಣೆಗೆ ತರಲು
ಹಿಂದೆ ಬೀಳಲಿಲ್ಲ. ಆವರೆಗೆ ಕಲ್ಪನೆಯಲ್ಲೇ ಇಲ್ಲದ ಹೊಸ ರಾಷ್ಟ್ರೀಯ ಸಂಕೇತಗಳನ್ನು ರಾಷ್ಟ್ರಧ್ವಜ,
ರಾಷ್ಟ್ರಗೀತೆ ಇತ್ಯಾದಿಗಳನ್ನು ಅಳವಡಿಸಿದರು.
ಇದು ಮಾರಕಾಸ್ತ್ರವಾಗಿ
ಬಳಕೆಯಾಗಿದ್ದು ಜರ್ಮನಿಯಲ್ಲಿ, ಅದು ಹಿಟ್ಲರ್‌ನ ಕಾಲಕ್ಕೆ. ಜರ್ಮನಿ, ಇಟಲಿ, ಕಡೆಗೆ ಜಪಾನ್ ಕೂಡ
ತನ್ನ ಸರ್ವಾಧಿಕಾರಿ ನೀತಿಗೆ ತಕ್ಕ ಪಠ್ಯಕ್ರಮವನ್ನೇ ರೂಪಿಸಿಕೊಂಡಿದ್ದವು. ಯುದ್ಧಾ ನಂತರದಲ್ಲಿ
ಯುದ್ಧ ವಿರೋಧಿ ನೀತಿಯನ್ನು ತನ್ನ ಸಂಸ್ಕೃತಿಯಾಗಿ ರೂಪಿಸಿಕೊಳ್ಳಲು ಪಠ್ಯ ಕ್ರಮವನ್ನು
ಬದಲಾಯಿಸಿಕೊಂಡ ಮೊದಲ ದೇಶ ಜಪಾನ್.
ಭಾರತ ಮಾತ್ರವಲ್ಲದೆ ಜಗತ್ತಿನ
ಯಾವುದೇ ದೇಶದಲ್ಲಿ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು ತಾವು ನಂಬಿದ ಸಿದ್ಧಾಂತಕ್ಕೆ ತಕ್ಕ
ನೀತಿಗಳನ್ನೇ ಜಾರಿಗೆ ತರುತ್ತವೆ. ಆರ್ಥಿಕ ನಿರ್ಣಯಗಳಾಗಲೀ ಶೈಕ್ಷಣಿಕ ನೀತಿಗಳಾಗಲೀ ಎಲ್ಲವೂ
ಅಂತಿಮವಾಗಿ ಬದುಕನ್ನು ರೂಪಿಸುವುದೇ ಆಗಿರುವುದರಿಂದ `ಸಾಂಸ್ಕತಿಕ ನೀತಿ' ಆ ಎಲ್ಲದರಲ್ಲೂ
ಅಂತರ್ಗತವಾಗಿರುತ್ತದೆ.
ಹಾಗಾಗಿಯೇ ಸರ್ಕಾರಗಳು ಬದಲಾದ
ಕೂಡಲೇ ಪಠ್ಯಕ್ರಮಗಳು ಬದಲಾಗುತ್ತವೆ. ಅದರಲ್ಲೂ ಚರಿತ್ರೆ ಪಾಠಗಳ ಮೇಲೆ ಯಾವಾಗಲೂ ಕಣ್ಣು
ಬೀಳುತ್ತದೆ. ಹತ್ತು ವರ್ಷಗಳ ಹಿಂದೆ ಭಾರತ ಸರ್ಕಾರ ಎನ್.ಸಿ.ಇ.ಆರ್.ಟಿ ಪಠ್ಯಗಳನ್ನು
ಬದಲಾಯಿಸಿದ್ದಕ್ಕೆ ಜನರ ತೀವ್ರ ವಿರೋಧ ಎದುರಾಗಿದ್ದನ್ನು ನಾವಿಲ್ಲಿ ನೆನೆಯಬಹುದು.
ಯಾವುದೇ ರಾಜಕೀಯ ಪಕ್ಷದ ಪ್ರಣಾಳಿಕೆಯನ್ನು
ಮೀರಿ ಭಾರತದ ಸಂಸ್ಕೃತಿ ನೀತಿಯನ್ನು ರೂಪಿಸುವುದು ಸಂವಿಧಾನ. ನೇರವಾಗಿ ಯಾವುದನ್ನೂ `ಸಂಸ್ಕೃತಿ
ನೀತಿ' ಎಂದು ಸಂಬೋಧಿಸದಿದ್ದರೂ ಸಂವಿಧಾನದ ಮೊದಲ ಮಾತುಗಳಲ್ಲಿ ಹೇಳಿರುವ ಆದರ್ಶಗಳೇ
ಅಡಿಪಾಯಗಳಾಗುತ್ತವೆ. ಪ್ರಜಾಪ್ರಭುತ್ವ, ಸಮಾಜವಾದಿ, ಜಾತ್ಯತೀತ ಈ ನೆಲೆಗಟ್ಟಿನ ಮೇಲೆ ನೀತಿಯನ್ನು
ನಿರೂಪಿಸಿದಲ್ಲಿ ಯಾರೂ ಹೆದರಬೇಕಾದ ಅಗತ್ಯವಿರುವುದಿಲ್ಲ. ರಾಜ್ಯ ನಿರ್ದೇಶಕ ತತ್ವಗಳು ರಾಷ್ಟ್ರೀಯ
ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ.
ಇಷ್ಟೆಲ್ಲಾ ಇದ್ದೂ
ಎಲ್ಲವನ್ನೂ ತಮ್ಮ ಹಿತಕ್ಕೆ ಬಳಸಿಕೊಳ್ಳಬಲ್ಲ ಶಕ್ತಿಗಳು ನಮ್ಮ ನಡುವೆ ಕೆಲಸ ಮಾಡುತ್ತಿರುವುದರಿಂದ
ಗುಮಾನಿಯಿಂದ ನೋಡುವಂತಾಗಿದೆ. ಧಾರ್ಮಿಕ ಸಂಸ್ಥೆಗಳು, ರಾಜಕೀಯ ಶಕ್ತಿಗಳು, ಮಾರುಕಟ್ಟೆ ಒಡೆಯರು,
ಬಹುರಾಷ್ಟ್ರೀಯ ಕಂಪೆನಿಗಳು, ಬಲಿಷ್ಠ ದೇಶಗಳು ತಮ್ಮ ಸ್ವಾರ್ಥಕ್ಕಾಗಿ ಜನರ ಬದುಕುಗಳನ್ನು
ಅಲುಗಾಡಿಸಬಲ್ಲವರಾಗಿರುತ್ತಾರೆ. ಯಾವಾಗ ಬೇಕಾದರೂ ಜನರನ್ನು ಮೂಢರನ್ನಾಗಿಸುತ್ತಾರೆ,
ಮೂಢನಂಬಿಕೆಗಳನ್ನು ಹುಟ್ಟುಹಾಕುತ್ತಾರೆ. `ಸಂಸ್ಕೃತಿ'ಯನ್ನು ರಾಮರಸವಾಗಿ ಕುಡಿಸುತ್ತಾ
ಬಂದಿದ್ದಾರೆ.
ಧರ್ಮಗಳು ಆಚರಣೆ,
ನಂಬಿಕೆಗಳನ್ನು ರೂಪಿಸುತ್ತಾ ಅಥವಾ ನಿರ್ಬಂಧಿಸುತ್ತಾ ಬಂದಿವೆ. ಮಾನವನ ಬದುಕಿನಲ್ಲಿ ಹಿರಿದಾದ
ಪಾತ್ರವನ್ನು ಹೊಂದಿವೆ. ಅದರ ಸುತ್ತಾ ಕಲೆ ವಾಸ್ತುಶಿಲ್ಪಗಳು ಬೆಳೆದಿವೆ. ಭಾರತದಂತಹ ಬಹು
ಸಂಸ್ಕೃತಿಗಳನ್ನು ಹೊಂದಿರುವ ನಾಡಿನಲ್ಲಿ ಯಾವುದೇ ಒಂದು ಧರ್ಮಕ್ಕೆ ಹೆಚ್ಚಿನ ಮಹತ್ವವನ್ನು ಕೊಡಲು
ಸಾಧ್ಯವಿಲ್ಲ. ಶಿಷ್ಟ ಧರ್ಮಗಳ ಮುಂದೆ ಜನಪದ ಧರ್ಮಗಳು ಸಂಕೋಚದಲ್ಲಿ ಮುದುಡಿಕೊಳ್ಳುತ್ತವೆ. ಸಣ್ಣ
ಪುಟ್ಟ ನಿರ್ಣಯಗಳಲ್ಲೂ ಧರ್ಮದ ಧ್ವನಿಗಳು ಬುಸುಗುಟ್ಟುತ್ತವೆ.
ಕರ್ನಾಟಕದಲ್ಲಿ ಶಾಲಾ
ಮಕ್ಕಳಿಗೆ ಬಿಸಿಯೂಟದ ಯೋಜನೆಯನ್ನು ರೂಪಿಸುವಾಗ ಕೋಳಿಮೊಟ್ಟೆ ಕೊಡುವುದನ್ನು ವಿರೋಧಿಸಲು ಮಠಗಳು
ಬೀದಿಗಿಳಿದವು. ಮೊಟ್ಟೆ ಬಯಸುವ ಬಹುಸಂಖ್ಯಾತ ಮಕ್ಕಳ ಬಾಯಿ ಮುಚ್ಚಿತು. ಮಕ್ಕಳ ಆಯ್ಕೆಯನ್ನೂ
ಕೇಳಲಿಲ್ಲ. ಇಂತಹ ಕಡೆ ಪ್ರಜಾಪ್ರಭುತ್ವಕ್ಕಿಂತ ಸಾಂಸ್ಕೃತಿಕ ಯಜಮಾನಿಕೆ ವಹಿಸುವವರು, ನೀತಿ
ನಿರೂಪಕರು ಧರ್ಮಾಧಿಕಾರಿಗಳಾಗುತ್ತಾರೆ.
ಸಂಸ್ಕೃತಿ ಹೆಸರಿನಲ್ಲಿ
ದಿಗ್ಬಂಧನಗಳಿದ್ದರೆ ಅದರ ಹೇರಿಕೆ ಹೆಣ್ಣುಮಕ್ಕಳ ಮೇಲೆ ಹೆಚ್ಚಾಗಿರುತ್ತದೆ. ಅವರ ಉಡುಗೆ ತೊಡುಗೆ,
ನಡೆನುಡಿ ಎಲ್ಲದರ ಮೇಲೆ ನಿಗಾ ಇಡಲಾಗುತ್ತದೆ. ಇದು ಮನೆಯ ಹಂತದಿಂದಲೇ ಆರಂಭವಾಗುತ್ತದೆ. ಅದರಲ್ಲೂ
ಮಧ್ಯಮವರ್ಗದಲ್ಲಿ ಹೆಚ್ಚಾಗಿರುತ್ತದೆ. ಸೀರೆ ಉಟ್ಟು, ಹಣೆಗೆ ಕುಂಕುಮ ಹಚ್ಚಿ, ಉದ್ದವಾಗಿ ಜಡೆ
ಹಾಕಿ...ಇಂತಹ ಮಾತುಗಳು ನಿರಂತರವಾಗಿ ನಮ್ಮ ಕಿವಿಯ ಮೇಲೆ ಬೀಳುತ್ತಲೇ ಇರುತ್ತವೆ.
ಸಾಂಪ್ರದಾಯಿಕ ಉಡುಗೆಗಳು
ನೋಡಲು ಹಿತವಾಗಿದ್ದರೂ ಕೆಲಸಕ್ಕೆ ತೊಡಕಾಗುತ್ತದೆ. ಅದರಲ್ಲೂ ಹೊಸ ಬದುಕಿನ ಕ್ರಮಕ್ಕೆ ಹೊಸ
ಸವಾಲುಗಳಿಗೆ ಎದುರಾಗುತ್ತಿರುವ ಹೆಣ್ಣುಮಕ್ಕಳು ಅದಕ್ಕೆ ತಕ್ಕ ಉಡುಗೆಯನ್ನು ಬಯಸುತ್ತಾರೆ.
ಜಗತ್ತಿನಾದ್ಯಂತ ಈ ಬದಲಾವಣೆ ಸಹಜವಾಗಿ ನಡೆದಿದೆ. ಪಾಶ್ಚಿಮಾತ್ಯರೂ ಇದರಿಂದ ಹೊರಗಿಲ್ಲ.
ಅವರ ಸಾಂಪ್ರದಾಯಿಕ
ಉಡುಗೆಗಳಾದ ಉದ್ದನೆಯ ಗೌನ್‌ಗಳನ್ನು ಬಿಟ್ಟು ಹಗುರವಾದ ಬಟ್ಟೆಗಳನ್ನು ತೊಟ್ಟರು. ಹೊರ ಪ್ರಪಂಚದ
ಬದಲಾವಣೆಯ ಜೊತೆಯೇ ಬದುಕುವ ಗಂಡಸರಲ್ಲಿ ಈ ಬದಲಾವಣೆ ಬೇಗನೆ ಸಾಧ್ಯವಾಗುತ್ತದೆ. ಅಂತಹ ತಿರುವುಗಳು
ಹೆಣ್ಣಿನಲ್ಲಿ ಕಾಣಬೇಕಾದರೆ ಒಂದೆರಡು ಶತಮಾನವೇ ಬೇಕಾಗುತ್ತದೆ.
ಎರಡು ವರ್ಷಗಳಿಂದ ಹೆಣ್ಣುಮಕ್ಕಳ `ವಸ್ತ್ರ ಸಂಹಿತೆ'ಯ ಚರ್ಚೆ
ಆರಂಭವಾದುದರಿಂದ, ಕೆಲವು ಕಾಲೇಜುಗಳಲ್ಲಿ ದುಪ್ಪಟ ಹೊದ್ದುಬರುವುದನ್ನು ಕಡ್ಡಾಯಗೊಳಿಸಿರುವ ಈ
ಹೊತ್ತಿನಲ್ಲಿ ಅನುಮಾನಗಳು ಕಾಡುತ್ತವೆ. ಟಿಸಿಎಚ್ ಹಾಗೂ ಬಿಎಡ್ ಓದುವ ಹೆಣ್ಣುಮಕ್ಕಳು ಸೀರೆಯನ್ನು
ತೊಡುವುದು ಕಡ್ಡಾಯವಾಗುವುದು ಅಗತ್ಯವಾಗಿತ್ತೆ? ಪ್ರಶ್ನೆಗಳು ಎದ್ದಾಗ ಬರುವ ಉತ್ತರ ಮಾತ್ರ `ಅದು
ನಮ್ಮ ಸಂಸ್ಕೃತಿ'. ಗಂಡು ಮಕ್ಕಳು ಪ್ಯಾಂಟ್‌ಷರ್ಟ್ ತೊಡುವುದನ್ನು ಭಾರತೀಯ ಸಂಸ್ಕೃತಿ ಎಂದು
ಒಪ್ಪಿಕೊಂಡಿದ್ದೇವೆ.
ಮುಸ್ಲಿಂ ಹೆಣ್ಣುಮಕ್ಕಳು
ಕಳೆದ ದಶಕಗಳಿಗಿಂತ ಈ ದಶಕದಲ್ಲಿ ಹೆಚ್ಚಾಗಿ ಬುರ್ಖಾ ತೊಡುತ್ತಿದ್ದಾರೆ. ಹೊರ ನೋಟಕ್ಕೆ ಧಾರ್ಮಿಕ
ಮೂಲಭೂತವಾದ ಬಿಗಿಯಾದಂತೆ ಕಂಡುಬಂದರೂ ವಾಸ್ತವದಲ್ಲಿ ಅಂತಹ ಪರಿಸ್ಥಿತಿಯನ್ನು ಹುಟ್ಟುಹಾಕಿದವರು
ಯಾರು ಎಂದೂ ಕೇಳಿಕೊಳ್ಳಬೇಕಾಗಿದೆ. ಇದರ ಹಿಂದೆ ನಿಂತ ಭಾರತದ `ಸಾಂಸ್ಕೃತಿಕ ನೀತಿ' ಜವಾಬು
ನೀಡಬಲ್ಲದೆ?ರಸ್ತೆಗಳನ್ನು ವಿಸ್ತರಿಸುವಾಗ ಮೂವತ್ತು ನಲವತ್ತು ವರ್ಷಗಳ ಕಾಲ ಬೆಳೆದು ನಿಂತ ದೊಡ್ಡ
ಮರಗಳನ್ನು ಮುಲಾಜಿಲ್ಲದೆ ಕಡಿದುಹಾಕುತ್ತೇವೆ.
ವರ್ಷ ಒಂದರಲ್ಲಿ ಕಟ್ಟಬಹುದಾದ
ದೇಗುಲಗಳನ್ನು ಜೋಪಾನವಾಗಿ ಕಾಪಾಡುತ್ತೇವೆ. ಚಿಲಿಪಿಲಿಗುಟ್ಟುವ ಹಕ್ಕಿಗಳಿಗೆ ನೆಲೆಯಾಗಿ, ದಾರಿ
ಹೋಕರಿಗೆ ನೆರಳು ನೀಡಿ ಕಾಪಾಡಿದ ಮರ ದೇವರಲ್ಲ ಅದನ್ನು ಉಳಿಸುವುದು ಇಂದು ನಮ್ಮ ಸಂಸ್ಕೃತಿಯಲ್ಲ.
ಮರಗಳು ಕಾಡಿನಲ್ಲಿ ಇರಬೇಕಾದವು, ಕೆರೆಗಳು ಹಳ್ಳಿಯಲ್ಲಿ ಇರುವಂತಹವು, ಅಗಲವಾದ ರಸ್ತೆಗಳು, ಮಾಲ್‌ಗಳು,
ಅಪಾರ್ಟ್‌ಮೆಂಟ್‌ಗಳು ಇವು ನಗರ ಸಂಸ್ಕೃತಿ ಎಂದು ಅರ್ಥಮಾಡಿಕೊಳ್ಳುವಂತಾಗಿದೆ.
ಸೌಂದರ್ಯ ವರ್ಧಕಗಳನ್ನು
ತಯಾರಿಸುವ ಕಂಪೆನಿಗಳು ನಮ್ಮ ಕಪ್ಪು ಚರ್ಮದ ದುರ್ಬಳಕೆ ಮಾಡಿಕೊಂಡು ಲಾಭ ಮಾಡುತ್ತವೆ. ಕಪ್ಪು
ಚರ್ಮವನ್ನು ಹೀಗಳೆದು ಸದಾ ಕಾಲಕ್ಕೂ ಕೀಳು ಭಾವನೆಯಲ್ಲಿ ನರಳುವಂತೆ ಮಾಡಿವೆ. ಸೋಪ್, ಮುಖಕ್ಕೆ
ಹಚ್ಚುವ ಕ್ರೀಮ್, ಪೇಸ್ಟ್, ತುಟಿಗೆ, ಕಣ್ಣಿಗೆ, ಕೆನ್ನೆಗೆ ಹಚ್ಚುವ ಬಣ್ಣಗಳು, ಬ್ರಷ್
ಇವೆಲ್ಲವನ್ನೂ ನಮ್ಮ ಬದುಕಿನ ಭಾಗವಾಗಿಸಲು ಹರಸಾಹಸ ಮಾಡಿ ಯಶಸ್ವಿಯಾಗಿವೆ.
ಇನ್ನು ಗಿಫ್ಟ್ ವಸ್ತುಗಳ
ಮಾರಾಟಗಾರರು `ಫ್ರೆಂಡ್‌ಶಿಪ್ ಡೇ', `ಲವರ್ಸ್ ಡೇ', `ಮದರ್ಸ್ ಡೇ' ಹೀಗೆ ಹಲವು ಆಚರಣೆಗಳನ್ನು
ಹುಟ್ಟು ಹಾಕುತ್ತವೆ. ದಿನಕ್ಕೊಂದು `ಡೇ' ಆಚರಿಸಿ ಮಾರುಕಟ್ಟೆಗಳು ಬೆಳೆಯಲು
ಸಹಕರಿಸುತ್ತಿದ್ದೇವೆ. ಮಾಲ್ ಸಂಸ್ಕೃತಿಯಂತೂ ಮಾಲ್ ಎಂಬ ಸಂತೆಯನ್ನೇ ಬದುಕಾಗಿಸಿಕೊಳ್ಳುವಂತೆ
ಯೋಜನೆಯನ್ನು ರೂಪಿಸುತ್ತಿದೆ. ಈ ಎಲ್ಲದಕ್ಕೆ ಪೂರಕವಾಗಿ ಕೆಲಸ ಮಾಡುವ ಪ್ರಬಲ ಮಾಧ್ಯಮ ಟಿ.ವಿ.
ಜನರ ಮುಗ್ಧತೆಯನ್ನೇ ಬಂಡವಾಳವಾಗಿಸಿಕೊಂಡಿದೆ.
ಈ ಎಲ್ಲದರ ನಡುವೆ
ಪ್ರಗತಿಪರವಾಗಿ ಆಲೋಚಿಸುವ ಬೌದ್ಧಿಕವರ್ಗ, ಜನರ ಭಾವನೆಗಳಿಗೆ ದನಿಯಾಗುವ ಚಳವಳಿಗಳು, ಅಸಹಾಯಕ
ಸ್ಥಿತಿಯಲ್ಲಿ ಎದ್ದ ಜನರ ಪ್ರತಿಭಟನಾ ಧ್ವನಿಗಳು ಸಮಾಜದ ಏರುಪೇರುಗಳನ್ನು ಅಲ್ಲಲ್ಲಿ ನೇರ್ಪಡಿಸಲು
ಯತ್ನಿಸುತ್ತವೆ.
ಗಮನಿಸದೇ ಉಳಿದ ಬುಡಕಟ್ಟು
ಸಮುದಾಯಗಳು, ಮುಟ್ಟದೆ ಹೋದ ಭಾಷೆಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವ ಅರಿವೇ ಇನ್ನೂ ಮೂಡಿಲ್ಲ.
ಜೀವಂತ ಸಮುದಾಯಗಳೇ ಹೀಗಿರುವಾಗ, ಗತದ ಕುರುಹುಗಳಾದ ಶಿಲಾಯುಗದ ಸಮಾಧಿಗಳು, ಬೌದ್ಧ ಸ್ತೂಪಗಳು
ಇವುಗಳಿಗೆ ಮತ್ತೆ ಜೀವ ಬರಬಹುದೆ? ಈ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಸಂಸ್ಕೃತಿ ನೀತಿಯನ್ನು
ರೂಪಿಸಲು ಸಾಧ್ಯವಾದೀತೆ? ಕಾದು ನೋಡೋಣ.
ನಾವು ನಮ್ಮವರು... ಅರಸಬೇಕಿದೆ ಹೊಸ ಅಸ್ಮಿತೆ
Tue, 07/23/2013
`ನಮ್ಮವರೊಬ್ಬರನ್ನೂ ಈ ಸಾರಿ ಮಂತ್ರಿ ಮಾಡಿಲ್ಲ ನೋಡಿ'. ಚುನಾವಣೆಯ
ನಂತರ ಇಂತಹ ಗೊಣಗಾಟಗಳು ಕೇಳುತ್ತಲೇ ಇರುತ್ತವೆ. `ಈ ಸಾರಿ ಸಿ.ಎಂ. ನಮ್ಮವರೇ. ಹೇಗಾದರೂ ಮಾಡಿ ಲೇಔಟ್
ಸ್ಯಾಂಕ್ಷನ್ ಮಾಡಿಸಿಕೊಂಡುಬಿಡಬೇಕು, ನಮ್ಮವರದು ಅಂತ ಒಂದೂ ಎಂಜಿನಿಯರಿಂಗ್ ಅಥವಾ
ಮೆಡಿಕಲ್ ಕಾಲೇಜ್ ಆಗಿಲ್ಲ. ಇನ್ನೇನ್ ಹೂವಿನ ಸರ ಎತ್ತಿದ ಹಾಗೆ ಕೆಲಸ ಆಗತ್ತೆ ಬಿಡಿ'. ,
`ನಮ್ಮವರಿಗೇನಾದರು ತೊಂದರೆ ಆಗಬೇಕಲ್ಲ ಸುಮ್ಮನೆ ಮಾತ್ರ ಬಿಡಲ್ಲ' - ಇಂತಹ
ಮಾತುಗಳಲ್ಲಿ ಬರುವ ಈ `ನಮ್ಮವರು' ಯಾರು? ಸಮಯಕ್ಕೆ ತಕ್ಕಹಾಗೆ `ನಮ್ಮವರನ್ನು' ಗುರುತಿಸಿಕೊಳ್ಳುವ
ಬಗೆ ಬದಲಾಗುತ್ತಿರುತ್ತದೆ.
ಇತರೆ ಹಿಂದುಳಿದ ಜಾತಿಗೆ
ಸೇರಿದವರು (ಓಬಿಸಿ) ಉದಾಹರಣೆಗೆ ಕುರುಬ, ಕುಂಬಾರ, ಕಮ್ಮೋರ ಒಂದು ಕಡೆ ಸೇರಿದಾಗ `ನಾವೆಲ್ಲ
ಒಟ್ಟಾಗಿ ಹೋರಾಡಬೇಕು. ಹಾಗಾದರೆ ಮಾತ್ರವೇ ನಾವು ಮುಂದುವರೆಯಲು ಸಾಧ್ಯ' ಎಂದು ಯೋಜನೆಯನ್ನು
ರೂಪಿಸಿಕೊಳ್ಳುತ್ತಾರೆ. ಪ್ರಬಲ ಕೋಮಿನವರ ಶೋಷಣೆಯಿಂದ ಹೊರಬರಬೇಕು ಎಂಬುದು ಮುಖ್ಯ
ಉದ್ದೇಶವಾಗಿರುತ್ತದೆ. ಓಬಿಸಿ ಒಳಗಿನ ಯಾವುದಾದರೂ ಒಂದು ಜಾತಿಯವರು ಒಂದು ಕಡೆ ಕಲೆತಾಗ `ನಮ್ಮದು
ಅಂತ ಒಂದು ಮಠಾನು ಇಲ್ಲ ನಮ್ಮ ಮಕ್ಕಳಿಗೆ ಒಂದು ಹಾಸ್ಟೆಲ್ ಇಲ್ಲ' ಎಂದು ತಮ್ಮದೇ ಆದ
ಅಸಹಾಯಕತೆಯನ್ನು ತೋಡಿಕೊಂಡು ಅದರ ನಿವಾರಣೆಗೆ ಹೆಜ್ಜೆ ಹಾಕತೊಡಗುತ್ತಾರೆ. ಜಾತಿ ನಾಯಕರು ತಮ್ಮದೇ
ಆದ ಗುರುತುಗಳಿಗಾಗಿ ಹುಡುಕಾಡುತ್ತಾರೆ. ಓಬಿಸಿ ಎಂಬ ವಿಸ್ತಾರವಾದ ಚೌಕಟ್ಟಿನಿಂದ ಹೊರಬಂದು ಜಾತಿ
ಐಡೆಂಟಿಟಿಯ ಪ್ರಶ್ನೆಗಳನ್ನು ಮುಂದುಮಾಡಿಕೊಳ್ಳುತ್ತಾರೆ. ದೊಡ್ಡ ಗುಂಪಿನಲ್ಲಿ ತಮಗೆ ಪ್ರಾಮುಖ್ಯ
ದೊರೆಯುತ್ತದೊ ಇಲ್ಲವೋ ಎಂಬ ಆತಂಕ ಅವರನ್ನು ಕಾಡುತ್ತದೆ. ಇಂತಹ ಆಲೋಚನೆಗಳು ಇದ್ದಕ್ಕಿದ್ದಂತೆ
ಹುಟ್ಟಿ ಬರುವುದಿಲ್ಲ. ಇದರ ಹಿಂದಿನ ಇನ್ನೂರು ವರ್ಷಗಳ ಚರಿತ್ರೆಯನ್ನೇ
ಜಾಲಾಡಬೇಕಾಗುತ್ತದೆ.
ಜಾತಿ, ಒಳಜಾತಿ, ಧರ್ಮ,
ಭಾಷೆ, ಮೂಲ ನೆಲೆ, ಸಿದ್ಧಾಂತ, ಪಂಥ, ವರ್ಗ, ಉದ್ಯೋಗ ಇತ್ಯಾದಿ ಕಾರಣಗಳಿಗಾಗಿ ತಾವೆಲ್ಲ ಒಂದು
ಎಂದು ಜನ ಭಾವಿಸಿಕೊಳ್ಳುತ್ತಾರೆ. ಹೀಗೆ ತಾವು ಒಂದು ಎಂದು ಗುರುತಿಸಿಕೊಳ್ಳುವ ಸಮಾಜದ ನಡೆಯನ್ನು
ಐಡೆಂಟಿಟಿ, ಅನನ್ಯತೆ, ಅಸ್ಮಿತೆ ಎಂಬಿತ್ಯಾದಿ ಪದಗಳಿಂದ ವಿದ್ವಾಂಸರು ವಿವರಿಸುವ ಪ್ರಯತ್ನ
ಮಾಡುತ್ತಿದ್ದಾರೆ.
ಬ್ರಿಟಿಷರು ಭಾರತದಲ್ಲಿ ಮೊದಲ
ಜನಗಣತಿಯನ್ನು (ಸೆನ್ಸಸ್) 1861ರಲ್ಲಿ ಭಾಗಶಃ ಪ್ರಕಟಪಡಿಸಿದರು.ಆ ನಂತರ ನಿರಂತರವಾಗಿ ಪ್ರಕಟವಾದ
ವರದಿಗಳಲ್ಲಿ ಅವರ ಗ್ರಹಿಕೆಗೆ ದೊರೆತಂತೆ ಭಾರತೀಯರನ್ನು ಧರ್ಮದ ಆಧಾರದ ಮೇಲೆ ವರ್ಗೀಕರಿಸಿದರು.
ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಎಂದು ಬೇರ್ಪಡಿಸಿ ಮುಂದಿಟ್ಟಾಗ ಭಾರತದ ಮುಸಲ್ಮಾನರು
ಮೊದಲ ಬಾರಿಗೆ ತಾವು ಒಂದು ಎಂದು ಭಾವಿಸತೊಡಗಿದರು. ಉಳಿದ ಜಾತಿಗಳನ್ನೆಲ್ಲಾ ಸಾರಾಸಗಟಾಗಿ ಒಂದು
ಕಟ್ಟಿನಲ್ಲಿ ಕಟ್ಟಿ ಹಿಂದೂಗಳೆಂಬ ಶಿರೋನಾಮೆಯನ್ನು ಹಚ್ಚಲಾಗಿ ಅವರ ಮುಂದೆ ಮುಸಲ್ಮಾನರು
ಅಲ್ಪಸಂಖ್ಯಾತರಾದರು, ಭಾರತದ ಕೋಮು ದುರಂತಕ್ಕೆ ಅಡಿಪಾಯವಾಗಿತ್ತು. ಮುಸಲ್ಮಾನರ ಆವರೆಗಿನ
ಸಾಂಸ್ಕೃತಿಕ ಭವ್ಯತೆಯನ್ನೆಲ್ಲಾ ಮರೆತು ಅಲ್ಪಸಂಖ್ಯಾತರೆಂಬ ಸಂಕುಚಿತ ಪದ ಕಲ್ಪನೆಯಲ್ಲಿ
ನರಳುವಂತಾಯಿತು. ಏಳುನೂರಐವತ್ತು ವರ್ಷಗಳ ಕಾಲ ಈ ನಾಡಿನ ರಾಜಕೀಯ ಸೂತ್ರವನ್ನು ಹಿಡಿದವರೂ,
ಕಲೆ, ವಾಸ್ತುಶಿಲ್ಪ, ಸಾಹಿತ್ಯ ಹೀಗೆ ಬದುಕಿಗೆ ಹೊಸ ಭಾಷ್ಯವನ್ನು ಬರೆದ ಸಮುದಾಯ,
ಇದ್ದಕ್ಕಿದ್ದಂತೆ ಅತಾರ್ಕಿಕವಾದ ಸಂಖ್ಯಾಸೂಚಕ ಪದದಲ್ಲಿ ಗುರುತಿಸತೊಡಗಿದ್ದು, ಚಾರಿತ್ರಿಕ
ಹಲ್ಲೆಗೆ ತಲೆಬಾಗಿದಂತಾಗಿತ್ತು.
ದಕ್ಷಿಣ ಭಾರತದಲ್ಲಿ ಆರಂಭವಾದ ದ್ರಾವಿಡ ಹೋರಾಟಕ್ಕೂ ಹಲವು ಒತ್ತಾಸೆಗಳಿದ್ದವು.
ಭಾಷಾ ಮೂಲವನ್ನು ಆಧರಿಸಿ ಆರ್ಯ ಸಿದ್ಧಾಂತವನ್ನು ಮ್ಯಾಕ್ಸ್‌ಮುಲ್ಲರ್ ಮಂಡಿಸಿದ್ದು, ಆತನ ಉದ್ದೇಶ
ಮೀರಿ ಅದು ಒಂದು ಜನಾಂಗ ಸಿದ್ಧಾಂತವಾಗಿ ಬೆಳೆದು ಭೂತಾಕಾರವಾಯಿತು. ಕೆಲವರಿಗೆ `ಆರ್ಯ ಜನಾಂಗ ಶ್ರೇಷ್ಠತೆ'ಯ
ವ್ಯಸನಕ್ಕೆ ಸಿಕ್ಕಿ ನರಳುವಂತಾಯಿತು. ಕಾಲ್ಡವೆಲ್ ದ್ರಾವಿಡ ಭಾಷಾ ಅಧ್ಯಯನದ ಆಧಾರದ ಮೇಲೆ
ದ್ರಾವಿಡ ಜನಾಂಗ ವಾದವನ್ನು ಮಂಡಿಸಿದನು. ಆರ್ಯ ವೈದಿಕ ಶ್ರೇಷ್ಠತೆಯ ಕಲ್ಪನೆಗೆ
ವಿರೋಧವಾಗಿ ದ್ರಾವಿಡರು ತಮ್ಮನ್ನು ತಾವು ಗುರುತಿಸಿಕೊಳ್ಳತೊಡಗಿದರು. ಇದೇ ಸರಿಸುಮಾರಿಗೆ
ಮಹಾರಾಷ್ಟ್ರದಲ್ಲಿ ಫುಲೆ ಅವರು ತಳಸಮುದಾಯಗಳ ಸಂಘಟನೆಯನ್ನು ಆರಂಭಿಸಿದಾಗ ವೈದಿಕರ ವಿರೋಧ
ತೀವ್ರವಾಗಿತ್ತು. ಕೇರಳದಲ್ಲಿ ನಾರಾಯಣ ಗುರು ಸಂತನಾಗಿ ಕೇರಳದ ಶೋಷಿತ ಸಮುದಾಯಗಳಿಗೆ ಧಾರ್ಮಿಕ,
ಆಧ್ಯಾತ್ಮಿಕ ಬಲವನ್ನು ತಂದುಕೊಟ್ಟರು. ದಕ್ಷಿಣ ಭಾರತದಾದ್ಯಂತ ಹುಟ್ಟಿದ ಈ ಚಳವಳಿಗಳು
ಒಂದಕ್ಕೊಂದು ಪೂರಕವಾಗಿ ವಿಸ್ತರಿಸಿದವು. ಜನ ಸಂಘಟಿತರಾಗಿ ತಮ್ಮ ನೆಲೆಗಳನ್ನು ಕಂಡುಕೊಳ್ಳತೊಡಗಿದರು.
ಹತ್ತೊಂಬತ್ತನೆ ಶತಮಾನದ ಈ ಎಲ್ಲ ಬೆಳವಣಿಗೆಗಳು ಹೊಸ ಐಡೆಂಟಿಟಿಗಳನ್ನು ಹುಟ್ಟು ಹಾಕಿದವು.
ಸರ್ಕಾರಿ ಉದ್ಯೋಗಗಳಲ್ಲಿ ಬ್ರಾಹ್ಮಣರೇ ಹೆಚ್ಚಾಗಿ ಇದ್ದುದು ಮೈಸೂರಿನಲ್ಲಿ
1916 ರಲ್ಲಿ ಆರಂಭವಾದ ಬ್ರಾಹ್ಮಣ ವಿರೋಧಿ ಚಳವಳಿಗೆ ಕಾರಣವಾಯಿತು. ಮೈಸೂರು ಸರ್ಕಾರ ಮಿಲ್ಲರ್
ಆಯೋಗವನ್ನು ನೇಮಕ ಮಾಡಿತು. ಅದು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಎತ್ತಿ ಹಿಡಿಯಿತು.
ಹಿಂದುಳಿದ ವರ್ಗಗಳು ಎಂದಾಗ ಬ್ರಾಹ್ಮಣರು, ಕ್ರೈಸ್ತರು ಮತ್ತು ಆಂಗ್ಲೋ ಇಂಡಿಯನ್ನರನ್ನು
ಹೊರತುಪಡಿಸಿ ಉಳಿದವರನ್ನು ಪರಿಗಣಿಸಿತು. ಆಗ ಅದರ ಲಾಭವನ್ನು ಪಡೆದುಕೊಂಡವರು ಲಿಂಗಾಯಿತರು ಮತ್ತು
ಒಕ್ಕಲಿಗರೇ ಆಗಿದ್ದರು. ಆಡಳಿತದ ಉನ್ನತ ಸ್ಥಾನಗಳಿಗೆ ಮೀಸಲಾತಿಯನ್ನು ಕಲ್ಪಿಸಿತು.
ಸ್ವಾತಂತ್ರ್ಯಾ ನಂತರದ ಕರ್ನಾಟಕ ರಾಜಕೀಯದಲ್ಲಿ ಒಕ್ಕಲಿಗರು ಲಿಂಗಾಯತರು ಮುಂಚೂಣಿಯಲ್ಲಿ ಇರಲು
ಮುನ್ನುಡಿಯಾಯಿತು.
ಅಂಬೇಡ್ಕರರು ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ದಲಿತ ಸಮುದಾಯಗಳು ತಮ್ಮನ್ನು
ರಾಜಕೀಯವಾಗಿ ಗುರುತಿಸಿಕೊಳ್ಳಲು ಹೋರಾಡಿದರು. ವರ್ಣಾಶ್ರಮದ ಚೌಕಟ್ಟಿನಲ್ಲಿ ನರಳುವುದು ಅವರಿಗೆ
ಬೇಕಿರಲಿಲ್ಲ. ಅನುಕಂಪದ `ಹರಿಜನ ` ಸುಧಾರಣೆಗಿಂತ ರಾಜಕೀಯ ಮೀಸಲಾತಿಯನ್ನು ಬಯಸಿದರು.
ಅಸ್ಪೃಶ್ಯತೆಯ ಬಿಡುಗಡೆಗೆ ಬೌದ್ಧ ನೆಲೆಯನ್ನು ಕಂಡುಕೊಂಡರು. ದಲಿತರ ವಿಮೋಚನೆಗೆ ಹೊಸ ದಾರಿಯನ್ನು
ತೋರಿಸಿಕೊಟ್ಟರು.
ಒಂದಾದ ನಂತರ ಒಂದು ಹೊರ ಬಂದ
ಸರ್ಕಾರಿ ವರದಿಗಳು, ಜನಸಂಖ್ಯಾ ವರದಿಗಳು ಶಿಕ್ಷಣ, ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ಜಾತಿ ಬುಡಕಟ್ಟುಗಳನ್ನು
ವರ್ಗೀಕರಿಸತೊಡಗಿದವು. `ಹಿಂದುಳಿದ ವರ್ಗ', `ಪರಿಶಿಷ್ಟ ಜಾತಿ', `ಪರಿಶಿಷ್ಟ ಬುಡಕಟ್ಟು',
`ಇತರೇ ಹಿಂದುಳಿದ ವರ್ಗ' ಈ ಹೊಸ ಹೆಸರುಗಳನ್ನು ವಿರೋಧವಿಲ್ಲದೆ ಒಪ್ಪಿಕೊಂಡಿದ್ದು
ಆಶ್ಚರ್ಯಕರವಾಗಿದೆ. ಚಾರಿತ್ರಿಕವಾದ, ಸಾಂಸ್ಕೃತಿಕವಾದ ಗುರುತುಗಳಿಂದ ಹೊರಬಂದು ಹೊಸ
ವರ್ಗೀಕರಣದಲ್ಲಿ ಭಾರತದ ಜನಸ್ತೋಮವನ್ನು ಗುರುತಿಸಲಾಯಿತು. ಅದು ಶಿಕ್ಷಣ, ಉದ್ಯೋಗದ ಮೀಸಲಾತಿಯಿಂದ
ಆರಂಭಗೊಂಡು ರಾಜಕೀಯ ಮೀಸಲಾತಿಯವರೆಗೆ ಮುಂದುವರೆಯುತ್ತದೆ. `ಹಿಂದುಳಿದ' ಎಂದು ಕರೆಯುವಾಗ ಆಸ್ತಿ,
ಆದಾಯ, ಓದು ಇವು ಪ್ರಮುಖ ಅಳತೆಗೋಲುಗಳಾಗಿದ್ದವು. ವಿಪರ್ಯಾಸದ ಸಂಗತಿಯೆಂದರೆ ಆರ್ಥಿಕ ಕುಸಿತಕ್ಕೆ
ಕಾರಣವಾದ ಬ್ರಿಟಿಷರೇ ನಮ್ಮನ್ನು ಹಿಂದುಳಿದವರೆಂದು ಕರೆದುದು. ಅಂತಹ ಹೆಸರುಗಳಲ್ಲಿ
ಗುರುತಿಸಿಕೊಳ್ಳುವುದನ್ನು ಪ್ರಶ್ನಾತೀತವಾಗಿ ಒಪ್ಪಿದ್ದು ಮತ್ತೂ ಆಶ್ಚರ್ಯಕರವಾದ ಸಂಗತಿ.
ಹಿಂದುಳಿದ ವರ್ಗಗಳು ಎಂದು ಕರೆಸಿಕೊಂಡ ಜಾತಿಗಳು ಬೇಸಾಯ ಮೂಲದವರು, ಓಬಿಸಿ (ಇತರೆ ಹಿಂದುಳಿದ
ವರ್ಗಗಳು) ಪಟ್ಟಿಗೆ ಸೇರಿದವರು ಪಶುಪಾಲಕ ಇಲ್ಲವೆ ಕುಶಲಕರ್ಮಿಗಳು. ಕಲೆಯನ್ನು
ಬದುಕಾಗಿಸಿಕೊಂಡವರು ಹಿಂದುಳಿದವರೆಂದು ಗುರುತಿಸಿಕೊಳ್ಳಬೇಕೆ? ಪರಿಶಿಷ್ಟ ಜಾತಿ ಎಂಬ ಪಟ್ಟಿಯೇ
ನಮ್ಮ ಬದುಕಿನ ಹೆಸರಾಗಲು ಸಾಧ್ಯವೇ? ಆ ಪಟ್ಟಿಯ ಅಡಿಯಲ್ಲಿ ನಮ್ಮನ್ನು ಇತರರು ಗಮನಿಸಬೇಕೆ? ನಮ್ಮ
ಸಮುದಾಯಗಳಿಗೊಂದು ಗೌರವದ ಹೆಸರೂ ಬೇಡವೇ? ಹಿಂದುಳಿದ ದೇಶಗಳೆಂದು ಕರೆಯುವುದನ್ನು ಕೈ ಬಿಟ್ಟು
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೆಂದು ಕರೆದುದನ್ನು ಇಲ್ಲಿ ನೆನೆಯಬಹುದು.
`ಶೂದ್ರ'ನ ಸ್ಥಾನ ವರ್ಣವ್ಯವಸ್ಥೆಯಲ್ಲಿ ಕಡೆಯದಾಗಿದ್ದು ಉಳಿದವರು ಅವರನ್ನು
ಕೀಳಾಗಿ ಕಾಣುತ್ತಿದ್ದರೂ ತಮಿಳು ನಾಡಿನಲ್ಲಿ ಆರಂಭವಾದ ದ್ರಾವಿಡ ಹೋರಾಟ, ಶೂದ್ರ ಕಲ್ಪನೆಗೊಂದು
ಘನತೆಯನ್ನು ತಂದುಕೊಟ್ಟಿತು. ಪೆರಿಯಾರ್, ಲೋಹಿಯಾ ಅಂತಹವರಿಂದ ಪದದ ಮೈಲಿಗೆಯನ್ನು ಹೋಗಲಾಡಿಸಲು
ಸಾಧ್ಯವಾಯಿತು. ಕುವೆಂಪು ಅವರ `ಶೂದ್ರ ತಪಸ್ವಿ' ಈ ಭಾವವನ್ನು ಹೊತ್ತು ಮೂಡಿದ ಕೃತಿ.
ಕರ್ನಾಟಕದಲ್ಲಿ ಆರಂಭವಾದ ದಲಿತ ಚಳವಳಿ 1980ರ ದಶಕದಲ್ಲಿ ಹೊಸ ಐಡೆಂಟಿಟಿಗೆ ಚಾಲನೆ ನೀಡಿತು. ಕ್ರಾಂತಿಗೀತೆಗಳು, ತಮಟೆ ವಾದ್ಯ, ಅಂಬೇಡ್ಕರ್ ಭಾವಚಿತ್ರ ಇವೆಲ್ಲ ಸಾಂಸ್ಕೃತಿಕ ಹೆಗ್ಗುರುತುಗಳಾದವು.ದಲಿತ ಸಮುದಾಯದೊಳಗಿನ ಜಾತಿಗಳು ತಮ್ಮ ವೈವಿಧ್ಯತೆಯನ್ನು ಮೀರಿ ಒಕ್ಕೊರಲಿನಿಂದ ಘೋಷಣೆಗಳನ್ನು ಕೂಗಿದವು. ದಲಿತರಲ್ಲದವರು ದಲಿತರೊಳಗಿನ ಜಾತಿ ಅಂತರವನ್ನು ಗುರುತಿಸದಾದರು. ರಾಜಕೀಯ ಪ್ರಾಬಲ್ಯಕ್ಕೆ ಹೆದರಿ ದಲಿತ ಸಂಘಟನೆಯನ್ನು ಒಡೆಯುವ ಹೊರಗಿನ ಪ್ರಯತ್ನ ತೀವ್ರವಾಗಿತ್ತು. ಎಡಗೈ, ಬಲಗೈ ಗುರುತುಗಳು ವಿರಸಕ್ಕೆ ತಿರುಗಿದವು. ದಲಿತ ಚಳವಳಿ ನಿಧಾನವಾಗಿ ಕ್ಷೀಣಿಸತೊಡಗಿತು. ಸಂಖ್ಯಾ ಬಾಹುಳ್ಯವಿಲ್ಲದ ಜಾತಿಗಳು ಅಭದ್ರತೆಯಿಂದ ಮೌನವಾದರೆ, ತಮಗೆ ಸಿಗಬಹುದಾದ ಸವಲತ್ತುಗಳ ಅರಿವೂ ಇಲ್ಲದೆ ಮರೆಮಾಚಿದ ಬದುಕನ್ನು ಮುಂದುವರೆಸಿವೆ.
ಕರ್ನಾಟಕದಲ್ಲಿ ಆರಂಭವಾದ ದಲಿತ ಚಳವಳಿ 1980ರ ದಶಕದಲ್ಲಿ ಹೊಸ ಐಡೆಂಟಿಟಿಗೆ ಚಾಲನೆ ನೀಡಿತು. ಕ್ರಾಂತಿಗೀತೆಗಳು, ತಮಟೆ ವಾದ್ಯ, ಅಂಬೇಡ್ಕರ್ ಭಾವಚಿತ್ರ ಇವೆಲ್ಲ ಸಾಂಸ್ಕೃತಿಕ ಹೆಗ್ಗುರುತುಗಳಾದವು.ದಲಿತ ಸಮುದಾಯದೊಳಗಿನ ಜಾತಿಗಳು ತಮ್ಮ ವೈವಿಧ್ಯತೆಯನ್ನು ಮೀರಿ ಒಕ್ಕೊರಲಿನಿಂದ ಘೋಷಣೆಗಳನ್ನು ಕೂಗಿದವು. ದಲಿತರಲ್ಲದವರು ದಲಿತರೊಳಗಿನ ಜಾತಿ ಅಂತರವನ್ನು ಗುರುತಿಸದಾದರು. ರಾಜಕೀಯ ಪ್ರಾಬಲ್ಯಕ್ಕೆ ಹೆದರಿ ದಲಿತ ಸಂಘಟನೆಯನ್ನು ಒಡೆಯುವ ಹೊರಗಿನ ಪ್ರಯತ್ನ ತೀವ್ರವಾಗಿತ್ತು. ಎಡಗೈ, ಬಲಗೈ ಗುರುತುಗಳು ವಿರಸಕ್ಕೆ ತಿರುಗಿದವು. ದಲಿತ ಚಳವಳಿ ನಿಧಾನವಾಗಿ ಕ್ಷೀಣಿಸತೊಡಗಿತು. ಸಂಖ್ಯಾ ಬಾಹುಳ್ಯವಿಲ್ಲದ ಜಾತಿಗಳು ಅಭದ್ರತೆಯಿಂದ ಮೌನವಾದರೆ, ತಮಗೆ ಸಿಗಬಹುದಾದ ಸವಲತ್ತುಗಳ ಅರಿವೂ ಇಲ್ಲದೆ ಮರೆಮಾಚಿದ ಬದುಕನ್ನು ಮುಂದುವರೆಸಿವೆ.
ಕರ್ನಾಟಕದ ರಾಜಕೀಯ ಚುಕ್ಕಾಣಿಯನ್ನು ನಿರಂತರವಾಗಿ ಹಿಡಿದ ಲಿಂಗಾಯತ, ಒಕ್ಕಲಿಗ
ಹಾಗೂ ಬ್ರಾಹ್ಮಣರಿಗೆ ತಮ್ಮ ಐಡೆಂಟಿಟಿಗಾಗಿ ಹೋರಾಡಬೇಕಾದ ಅಗತ್ಯವಿರಲಿಲ್ಲ. ಇತರೆ ಹಿಂದುಳಿದ
ಜಾತಿಗಳೆಂದು ಕರೆಸಿಕೊಳ್ಳುವ ಕೈಕಸುಬುದಾರ ಸಮುದಾಯಗಳು ತಮ್ಮ ಸಾಂಸ್ಕೃತಿಕ
ಹೆಗ್ಗುರುತುಗಳಿಗಾಗಲೀ, ರಾಜಕೀಯ ಅವಕಾಶಗಳಿಗಾಗಲೀ ಹೋರಾಡುವುದು ದುಸ್ತರವೇ ಆಗಿತ್ತು. ಬಂಡಾಯ
ಚಳವಳಿ ಈ ದಿಕ್ಕಿನಲ್ಲಿ ನಡೆದ ಒಂದು ಪ್ರಯತ್ನವಾಗಿತ್ತು. ಮುಂದೆಯೂ ಹಿಂದುಳಿದ ವರ್ಗದ
ನಾಯಕತ್ವವನ್ನು ಕರ್ನಾಟಕದ ಮತ್ತೊಂದು ದೊಡ್ಡ ಜಾತಿಯಾದ ಕುರುಬರು ವಹಿಸಬೇಕಾಯಿತು.
ಶಿಕ್ಷಣ ಜನರನ್ನು ಹೆಚ್ಚೆಚ್ಚು ರಾಜಕೀಯವಾಗಿ ಪ್ರಾಜ್ಞರನ್ನಾಗಿಸಿದೆ. ತಮ್ಮ
ಜಾತಿ ಸಮುದಾಯಗಳ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸತೊಡಗಿವೆ. ಚರಿತ್ರೆ ಪುರಾಣಗಳಿಂದ,
ಮಹಾಕಾವ್ಯಗಳಿಂದ, ತಮ್ಮ ಜಾತಿಯನ್ನು ಪ್ರತಿನಿಧಿಸುವ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸಿವೆ. ಈ
ಸಮಸ್ಯೆ ವೈದಿಕರನ್ನು ಕಾಡಲಿಲ್ಲ, ಅವರಿಗೆ ಸ್ಥಾಪಿತ ಮಠಗಳೇ ಇದ್ದುದರಿಂದ ಶಂಕರ, ಮಧ್ವ,
ರಾಮಾನುಜ, ಇವರೇ ಹೆಗ್ಗುರುತುಗಳಾಗಿದ್ದರು. ವೀರಶೈವರಿಗೆ ಬಸವಣ್ಣನವರ ನಾಯಕತ್ವ
ಪ್ರಶ್ನಾತೀತವಾಗಿತ್ತು. ಅಲ್ಲದೆ ಅದರ ಒಳ ಪ್ರಭೇದಗಳಿಗೆ ಅನುಗುಣವಾಗಿ ಮಠಗಳೂ ಇರುವುದು
ಸಮಾಧಾನವನ್ನು ತರುತ್ತದೆ.
ಒಕ್ಕಲಿಗರು ಆದಿಚುಂಚನಗಿರಿ ಮಠವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲಾಗಿ ಆ
ಜನ ಅಲ್ಲಿಗೆ ನಡೆದುಕೊಳ್ಳತೊಡಗಿದರು. ಬಹುತೇಕ ಒಕ್ಕಲಿಗರು ಮಠಗಳ ಒಕ್ಕಲಾಗದಿದ್ದರೂ ಉಳಿದವರು
ಮಠದೊಂದಿಗೆ ಅವರನ್ನು ಬೆಸೆದು ನೋಡುವುದು ಸಹಜವೆನಿಸುತ್ತದೆ. ಏನಿಲ್ಲದಿದ್ದರೂ ಮಠಗಳು ನಡೆಸುವ
ಶಾಲಾಕಾಲೇಜುಗಳು ಆಯಾ ಸಮುದಾಯಗಳ ಹಿತವನ್ನು ಕಾದಿರುತ್ತವೆ. ಈ ಲಾಭವನ್ನು ಗಮನಿಸಿದ ಇತರ
ಸಮುದಾಯಗಳು ಮಠಗಳನ್ನು ಕಟ್ಟಿ ಅದರ ಅಡಿಯಲ್ಲಿ ಬಲಗೊಳ್ಳುವ ಪ್ರಯತ್ನ ಮಾಡಿವೆ. ಮಠಗಳು
ಸಮುದಾಯಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ದೊಡ್ಡ ಪಾತ್ರವನ್ನೇ ವಹಿಸುತ್ತವೆ.
ತಮ್ಮ ಸಮುದಾಯಗಳ ಸಾಂಸ್ಕೃತಿಕ ನಾಯಕರನ್ನು ಹುಡುಕಿಕೊಳ್ಳುವ ಪಡಿಪಾಟಲು
ಕಳೆದೆರಡು ದಶಕಗಳಿಂದ ಕಾಣಬರುತ್ತಿದೆ. ವಾಲ್ಮೀಕಿ, ಕನಕದಾಸ, ಮಂಟೇಸ್ವಾಮಿ, ಅಂಬಿಗರ ಚೌಡಯ್ಯ, ಮಡಿವಾಳ
ಮಾಚಿದೇವ, ಬೆಂಗಳೂರು ಕೆಂಪೇಗೌಡ, ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ,
ಟಿಪ್ಪು ಸುಲ್ತಾನ್ ಹೀಗೆ ಸಾಲುಸಾಲಾಗಿ ಮಹಾತ್ಮರ ಭಾವಚಿತ್ರಗಳು ಬ್ಯಾನರ್‌ಗಳಲ್ಲಿ
ಕಾಣತೊಡಗಿವೆ. ಜಾತಿ ಮೀರಿದ ಮಹಾತ್ಮರೆಲ್ಲಾ ಜಾತಿಯ ಐಕಾನ್‌ಗಳಾಗುವುದು ಚರಿತ್ರೆಯಲ್ಲಿ ಹೊಸದೇನೂ
ಅಲ್ಲ. ಊರು ಕೇರಿಗಳಿಗೆ, ಬಸ್ ನಿಲ್ದಾಣಗಳಿಗೆ, ರಸ್ತೆಗಳಿಗೆ, ವಿಶ್ವವಿದ್ಯಾಲಯಗಳಿಗೆ ಕಡೆಗೆ ಏರ್‌ಪೋರ್ಟ್‌ಗೆ
ಹೆಸರಿಡುವಾಗ ಎಲ್ಲಿಲ್ಲದ ಪೈಪೋಟಿ ಕಾಣುತ್ತದೆ. ಅಷ್ಟೇ ಅಲ್ಲದೆ ಪ್ರತಿ ಸಮುದಾಯ ತನ್ನ ಮೂಲ
ಸಂಸ್ಕೃತಿಯನ್ನು, ಚರಿತ್ರೆಯನ್ನು ಅರಿಯಲು ಬಯಸುತ್ತದೆ. ಹೀಗೆ ಎಲ್ಲದರಲ್ಲೂ ತಮ್ಮವರನ್ನು
ಹುಡುಕಿಕೊಳ್ಳುವಲ್ಲಿ ಆತ್ಮತೃಪ್ತಿಯನ್ನು ಪಡೆದುಕೊಳ್ಳುತ್ತಿವೆ.
ಹಳ್ಳಿಯಿಂದ ನಗರಗಳಿಗೆ ವಲಸೆ ಬಂದ ಸಮುದಾಯಗಳು ತಮ್ಮ ಜೊತೆಗೆ ತಮ್ಮ ಕುಲದ
ಲಾಂಛನಗಳನ್ನೂ ಹೊತ್ತುತರುತ್ತವೆ. ತಮ್ಮ ಕುಲ ದೈವಗಳನ್ನು ನಗರದಲ್ಲಿ ತಂದು ನೆಲೆಗೊಳಿಸುತ್ತವೆ.
ಮದ್ದೂರಮ್ಮ, ಕರುಮಾರಿಯಮ್ಮ, ಎಲ್ಲಮ್ಮ, ಕರಿಯಮ್ಮ, ಮಲೆ ಮಾದೇಶ್ವರ... ಇವರೆಲ್ಲಾ
ಬೆಂಗಳೂರಿನಲ್ಲಿ ನೆಲೆಯೂರಿರುವುದನ್ನು ನೋಡಿದರೆ ಕುಲ ಮೂಲದ ದೈವಗಳು ಸಮುದಾಯದ
ಚಹರೆಗಳಾಗಿರುತ್ತವೆಂದು ಸ್ಪಷ್ಟವಾಗುತ್ತದೆ. ದೈವಗಳು ಸೊಗಸಾಗಿ ಜನರನ್ನು ಒಂದುಗೂಡಿಸುವಂತೆ
ಉಳಿದವರನ್ನು ದೂರವಿಡುತ್ತವೆ. ಹೊರ ನಾಡಿನಿಂದ ಬಂದವರೂ ದೇವರನ್ನೂ ತಮ್ಮ ಜೊತೆ ತರುತ್ತಾರೆ. ಹಾಗೆ
ಹೆಚ್ಚು ಜನರನ್ನು ತನ್ನ ಕಡೆಗೆ ಸೆಳೆದುಕೊಂಡ ದೇವರು ಅಯ್ಯಪ್ಪಸ್ವಾಮಿ. ವಲಸೆ ಬಂದ ಮಲೆಯಾಳಿಗಳಿಗೆ
ಅಯ್ಯಪ್ಪ ಸ್ವಾಮಿ, ಮಾತಾ ಅಮೃತಾನಂದಮಯಿ ಭಾವುಕ ಸಂಕೇತಗಳಾಗಿದ್ದಾರೆ. ಇಲ್ಲಿ ಜಾತಿಗಿಂತ
ಹೆಚ್ಚಾಗಿ ಭಾಷೆ ಅವರನ್ನು ಒಂದುಗೂಡಿಸುತ್ತದೆ.
ಬಹುಸಂಸ್ಕೃತಿಯ ನಾಡಾದ ಭಾರತದಲ್ಲಿ ಪ್ರತಿ ಸಮುದಾಯವೂ ತನ್ನದೇ ಆದ
ವಿಶೇಷತೆಯನ್ನು ಹೊಂದಿದೆ. ಅದನ್ನು ಗೌರವಿಸುವುದು ಎಷ್ಟು ಮುಖ್ಯವೋ, ಅದನ್ನು ಮೀರಿ ಉಳಿದ
ಸಮುದಾಯಗಳ ಜೊತೆ ಕೈ ಜೋಡಿಸಿ ಮುನ್ನಡೆಯುವುದು ಇಂದು ಅಷ್ಟೇ ಮುಖ್ಯವಾಗಿದೆ. ಎಲ್ಲವನ್ನೂ ತನ್ನ
ತೆಕ್ಕೆಗೆ ಎಳೆದುಕೊಳ್ಳಲು ಹೊಂಚುಹಾಕುವ ಜಾಗತಿಕ ಮಾರುಕಟ್ಟೆಯನ್ನು ಎದುರಿಸಲು,
ನಮ್ಮವರನ್ನು ಉಳಿಸಿಕೊಳ್ಳಲು ಹೊಸ ಐಡೆಂಟಿಟಿಯನ್ನು ಹುಡುಕಿಕೊಳ್ಳಬೇಕಾಗಿದೆ. ನಮ್ಮ
ರೈತರು, ನಮ್ಮ ವ್ಯಾಪಾರಗಾರರು, ನಮ್ಮ ಕಾರ್ಮಿಕರು, ನಮ್ಮ ಕಲಾವಿದರು.. ....
ಫಲಭರಿತ ಮರವ ಕಡಿದವರು ಯಾರು...?
Tue, 07/09/2013
ಇಪ್ಪತ್ತೈದು ವರ್ಷಗಳ ಹಿಂದೆ ಯಾರಾದರೂ ಕೈಗೆ ವಾಚ್ ಕಟ್ಟಿದ್ದರೆ ಅದು ಯಾವ ವಾಚ್
ಅಂತ ಯಾರೂ ಕೇಳುತ್ತಿರಲಿಲ್ಲ. ಅದು ಎಚ್‌ಎಂಟಿ ಗಡಿಯಾರವೇ ಆಗಿರುತ್ತಿತ್ತು. ವರದಕ್ಷಿಣೆಯಾಗಿ ಕೈ
ಗಡಿಯಾರ ಕೊಡಲಿಲ್ಲವೆಂದು ಮುನಿಸಿಕೊಂಡ ಭೂಪರೂ ಇದ್ದರು. ಒಬ್ಬ ವ್ಯಕ್ತಿಯ ಬದುಕಿಗೆ ಒಂದು
ಕೈಗಡಿಯಾರ ಸಾಕಾಗುತ್ತಿತ್ತು. ರಿಪೇರಿಗೂ ಬರುತ್ತಿರಲಿಲ್ಲ.
ಯಾರೂ ಕೈಗಡಿಯಾರಗಳನ್ನಾಗಲಿ ವಾಹನಗಳನ್ನಾಗಲಿ ಆಗಾಗ್ಗೆ ಬದಲಾಯಿಸುತ್ತಿರಲಿಲ್ಲ.
ಜನರ ಬದುಕಲ್ಲಿ ಈ ವಾಚ್‌ಗೊಂದು ಆತ್ಮೀಯ ಜಾಗವಿರುತ್ತಿತ್ತು. ಹಿಂದೂಸ್ತಾನ್ ಮೆಷಿನ್ ಟೂಲ್ಸ್
(ಎಚ್‌ಎಂಟಿ), ಸಾರ್ವಜನಿಕ ಕ್ಷೇತ್ರದ ಕೈಗಾರಿಕೆ. ಇದರಲ್ಲಿ ಯಂತ್ರೋಪಕರಣಗಳು, ಟ್ರ್ಯಾಕ್ಟರ್
ಇತ್ಯಾದಿಗಳನ್ನು ತಯಾರಿಸಿದರೂ ಅದರ ಹೆಸರು ಬೆಸೆದದ್ದು ಮಾತ್ರ ಕೈಗಡಿಯಾರದೊಂದಿಗೆ.
ಜಪಾನಿನ ಸಿಟಿಜನ್ ವಾಚ್ ಕಂಪೆನಿಯ ಸಹಯೋಗದೊಂದಿಗೆ 1961ರಲ್ಲಿ ಎಚ್‌ಎಂಟಿ ವಾಚ್
ಕಂಪೆನಿಯನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಲಾಯಿತು. ಜಾಲಹಳ್ಳಿಯಲ್ಲಿ 630 ಎಕರೆ ಜಾಗದಲ್ಲಿ
ನಗರವೇ ಆಗಿ ಬೆಳೆಯಿತು. ಉದ್ಯೋಗಕ್ಕೆ ಬಂದ ನೌಕರರಿಗಾಗಿ ವಸತಿ, ಶಾಲೆ, ಆಸ್ಪತ್ರೆ, ಥಿಯೇಟರ್...
ಹೀಗೆ ಯೋಜಿತವಾದ ಆ ನಗರದಲ್ಲಿ ಬದುಕುವುದು ಅದೃಷ್ಟವಾಗಿತ್ತು. 80ರ ದಶಕದಲ್ಲಿ
ಕರ್ನಾಟಕದ ಒಳ್ಳೆಯ ಕ್ರೀಡಾ ತಂಡಗಳು ಎಚ್‌ಎಂಟಿ ಆಟಗಾರರಿಂದ ತುಂಬಿಹೋಗಿರುತ್ತಿತ್ತು. ಇದರ ಶಾಖೆ
ತುಮಕೂರಿನಲ್ಲಿ ಆರಂಭವಾದಾಗ ಎಚ್‌ಎಂಟಿ ಕಲಾವಿದರು ಕಟ್ಟಿದ ನಾಟಕ ತಂಡ ನೆನೆಯುವಂಥದ್ದು.
ಕಾರ್ಖಾನೆಗಳು ಯಾಂತ್ರಿಕವಾಗದೆ ಸಾಂಸ್ಕೃತಿಕವಾಗಿ ಪರಿಪೂರ್ಣತೆಯನ್ನು ಸಾಧಿಸಿತ್ತು.
ಬೆಂಗಳೂರಿನಲ್ಲಿ ಒಂದು ಮತ್ತು ಎರಡನೆಯ ಯೂನಿಟ್ ಬೆಳೆದಂತೆ; ಅಗತ್ಯವಿದ್ದ
ಎಲ್ಲಾ ಉಪಕರಣಗಳನ್ನು ತಯಾರಿಸಿಕೊಳ್ಳುವ ಸ್ವಾವಲಂಬಿ ಕಂಪೆನಿಯಾಯಿತು. ಮುಂದೆ ಎಚ್‌ಎಂಟಿ
ಆಟೋಮ್ಯೋಟಿಕ್ ವಾಚ್‌ಗಳನ್ನು ಇಲ್ಲಿ ತಯಾರಿಸತೊಡಗಿತು. ಮೂರನೆಯ ಯೂನಿಟ್ ಕಾಶ್ಮೀರದ
ಶ್ರೀನಗರದಲ್ಲೂ, ನಾಲ್ಕನೆಯದು ತುಮಕೂರಿನಲ್ಲಿ ಸ್ಥಾಪನೆಯಾಗಿ ಕ್ವಾರ್ಟ್ಸ್ ವಾಚ್‌ಗಳನ್ನು
ತಯಾರಿಸತೊಡಗಿತು.
ಮೆಕಾನಿಕಲ್ ವಾಚ್‌ಗಳನ್ನು ತಯಾರಿಸುವ ಐದನೇ ಯೂನಿಟ್ ಉತ್ತರ ಪ್ರದೇಶದ ರಾಯಭಾಗ್‌ನಲ್ಲಿ
ಆರಂಭವಾದಾಗ ವಾಚ್ ಕಂಪೆನಿ ತನ್ನ ಕೈಗಳನ್ನು ದೇಶದ ಉದ್ದಗಲಕ್ಕೂ ಚಾಚಿದಂತಾಗಿತ್ತು. 80ರ ದಶಕದ
ಕಡೆಯ ಹೊತ್ತಿಗೆ ಎಚ್.ಎಂ.ಟಿ. ಕಂಪೆನಿಯಲ್ಲಿ ಒಟ್ಟು 10 ರಿಂದ 15 ಸಾವಿರ ಕಾರ್ಮಿಕರು ಕೆಲಸ
ಮಾಡುತ್ತಿದ್ದರು. ಹೆಮ್ಮರವಾಗಿ ಬೆಳೆದಿದ್ದ ವಾಚ್ ಕಂಪೆನಿಯೊಂದು ಸಾವಿರಾರು ಜನರಿಗೆ ಬದುಕಲು
ಆಸರೆಯ ತಾಣವಾಗಿತ್ತು.
ಇದು ಇಂದು ಕಣ್ಮರೆಯಾಗಿದೆ. ಭಾರತದ ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಯೊಂದು
ನಷ್ಟವನ್ನು ಹೊಂದಲು ಹೇಗೆ ಸಾಧ್ಯ? ಅಭಿವೃದ್ಧಿ ಯೋಜನೆಗಳು ನಿರಂತರವಾಗಿ ಕೈಗಾರಿಕೆಗಳ
ಸ್ಥಾಪನೆಯನ್ನು ಬಯಸುತ್ತವೆ, ಯೋಜಿಸುತ್ತವೆ ಮತ್ತು ಬೆಂಬಲಿಸುತ್ತವೆ. ಹಾಗಾದರೆ ಅದರ ಸಾವನ್ನಾದರೂ
ನಿರ್ಧರಿಸಿದವರು ಯಾರು?
ಮೂವತ್ತು ನಲವತ್ತು ವರ್ಷಗಳ ಕಾಲ ಬೆಳೆದು ನಿಂತಿದ್ದ ರಸ್ತೆ ಬದಿಯ ಬೃಹತ್ ಮರಗಳ
ಚಿಗುರು ಇದ್ದಕ್ಕಿದ್ದಂತೆ ಒಣಗತೊಡಗುತ್ತದೆ. ಒಣಗಿದ ಮರದ ಕೊಂಬೆ ರೆಂಬೆಗಳನ್ನು ಜನ ಸೌದೆಗೆ
ಮುರಿದುಕೊಂಡು ಹೋಗುತ್ತಾರೆ. ಒಣಗಿದ ಮರ ರಸ್ತೆಬದಿಯಲ್ಲಿದ್ದರೆ ಅಪಾಯವೆಂದು ಬುಡ ಸಮೇತ
ಕಡಿದುರುಳಿಸಲಾಗುತ್ತದೆ.
ಒಣಗಿದ ಮರ ಉರುಳಿದರೆ ಅಪರಾಧವೇನಿಲ್ಲವಲ್ಲ. ಮರ ಸಾಯಲು ಮರದ ಬುಡಕ್ಕೆ
ಸೀಮೆಎಣ್ಣೆಯನ್ನೋ ಆ್ಯಸಿಡನ್ನೋ ಸುರಿದವರು ಯಾರೋ ಕಾಣಲೇ ಇಲ್ಲ. ಪಬ್ಲಿಕ್ ಸೆಕ್ಟರ್ ಕಂಪೆನಿ
ಉರುಳಿಸಲು ಯಾರ ಕೊಡಲಿ ಯಾರ ಕಾವು, ಬಲಿಯಾದದ್ದು ಮಾತ್ರ ನಮ್ಮ ಒಡನಾಡಿ. ಕೊಂಬೆ ರೆಂಬೆಗಳಾಗಿ
ಉರುಳಿ ಬಿದ್ದವರು ದುಡಿವ ಕಾರ್ಮಿಕರು. ಬುಡಮೇಲಾದದ್ದು ಭಾರತದ ಕನಸಿನ ಕೂಸು.
ಈ ಹೊತ್ತಿಗಾಗಲೇ ಹೈದರಾಬಾದಿನಿಂದ ಆಲ್ವಿನ್ ವಾಚ್‌ಗಳು ತಯಾರಾಗುತ್ತಿದ್ದರೂ
ಮಾರುಕಟ್ಟೆಯಲ್ಲಿ ಅದರ ಸ್ಥಾನ ಗೌಣವಾಗಿತ್ತು. ಖಾಸಗಿ ಒಡೆತನದಲ್ಲಿ ಟೈಟಾನ್ ಕಂಪೆನಿ 1987ರಲ್ಲಿ
ವಾಚ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿತು. ಸಂಪೂರ್ಣವಾಗಿ ಎಲ್ಲಾ ಬಿಡಿಭಾಗಗಳನ್ನು ತಾನೇ
ತಯಾರಿಸದಿದ್ದರೂ ಮಾರುಕಟ್ಟೆ ಹಿಡಿಯುವ ಪ್ರಯತ್ನ ತೀವ್ರವಾಗಿತ್ತು. ದುಬಾರಿ ಬೆಲೆ ತೆತ್ತು ವಾಚ್‌ಗಳನ್ನು
ಕಟ್ಟಿಕೊಂಡು ಶೋಕಿ ಹೊಡೆಯುವುದು ಭಾರತೀಯನ ಜಾಯಮಾನವಾಗಿರಲಿಲ್ಲ. ತನಗೆ ತಕ್ಕ ಸಮಾಜವನ್ನು
ರೂಪಿಸಿಕೊಳ್ಳುವಷ್ಟು ಚಾಲಾಕಿತನ ಇವತ್ತಿನ ಮಾರುಕಟ್ಟೆಗಿದೆ.
ಮೊದಲನೇ ಮಹಾಯುದ್ಧಾನಂತರ ಜಗತ್ತಿನಾದ್ಯಂತ ತಮ್ಮ ದೇಶಗಳ ಆರ್ಥಿಕತೆಯನ್ನು
ಕಾಪಾಡಿಕೊಳ್ಳಲು ರಕ್ಷಣಾತ್ಮಕ ಆರ್ಥಿಕ ನೀತಿಯನ್ನು ಅಳವಡಿಸಿಕೊಂಡರು. ಹೊರ ರಾಷ್ಟ್ರಗಳು ಬಂಡವಾಳ
ಹೂಡುವುದನ್ನಾಗಲಿ, ಹೊರ ದೇಶದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವುದನ್ನಾಗಲಿ
ತಡೆಹಿಡಿಯಲಾಯಿತು. ಸ್ವಾವಲಂಬಿ ಆರ್ಥಿಕತೆ ಅಂದಿನ ಮಂತ್ರ. ಭಾರತದ ಮಿಶ್ರ ಆರ್ಥಿಕತೆ ಸಾರ್ವಜನಿಕ
ಕ್ಷೇತ್ರದಲ್ಲಿ ಮೂಲ ಕೈಗಾರಿಕೆಗಳನ್ನು ಉಳಿಸಿಕೊಳ್ಳುವಂತೆ ಯೋಜಿಸಿತು. ಹಾಗೆಯೇ ಖಾಸಗಿ
ಬಂಡವಾಳಗಾರರಿಗೂ ಅವಕಾಶ ನೀಡಿತು. ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಖಾಸಗಿಯವರು ತೊಡಗುವುದನ್ನು
ಬಯಸಿತು.
ಬೆಳೆದು ಶ್ರೀಮಂತವಾದ ದೇಶಗಳು ಮಾರುಕಟ್ಟೆಯ ವಿಸ್ತರಣೆಗೆ ಮಾರ್ಗಗಳನ್ನು
ಹುಡುಕತೊಡಗಿದವು. ಅಂತರರಾಷ್ಟ್ರೀಯ ಮಾರುಕಟ್ಟೆ ಒಪ್ಪಂದಗಳು (ಗ್ಯಾಟ್) ವ್ಯಾಪಾರ ವಾಣಿಜ್ಯದ
ನೀತಿಗಳನ್ನೇ ಬದಲಿಸುವಂತೆ ಮಾಡಿದವು. ತಟ್ಟಿದ ಜಾಗತಿಕ ಮಾರುಕಟ್ಟೆಯ ಒತ್ತಡ, ಅದರ ಭಾಗವಾಗಿ
ನುಗ್ಗಿದ ಖಾಸಗೀಕರಣ ಮತ್ತು ಉದಾರೀಕರಣ ದೇಶದ ಆರ್ಥಿಕತೆಯನ್ನು ಅಲುಗಾಡಿಸಿತು. ಇದೆಲ್ಲವನ್ನೂ
ಸಂಭ್ರಮದಲ್ಲಿ ಸ್ವಾಗತಿಸಿದವರಿಗೇನು ಕೊರತೆಯಿಲ್ಲ.
ಇದನ್ನು ಸಮರ್ಥಿಸುವ ತಜ್ಞರ ಪಡೆಯೇ ಹುಟ್ಟಿಕೊಂಡಿತು. ಗ್ಯಾಟ್ ಒಪ್ಪಂದದ
ನಿಬಂಧನೆಗಳಲ್ಲಿ ಹಣದ ಅಪಮೌಲ್ಯ ಮೊದಲನೆಯದಾದರೆ, ಸಾರ್ವಜನಿಕ ಕ್ಷೇತ್ರದಿಂದ ಬಂಡವಾಳವನ್ನು
ಹಿಂತೆಗೆದುಕೊಳ್ಳುವುದು ಎರಡನೇ ಹೇರಿಕೆ. ಜಾಗತಿಕ ಮಾರುಕಟ್ಟೆಗೆ ತನ್ನ ಬಾಗಿಲುಗಳನ್ನು
ತೆರೆದ ಭಾರತ, ಜೊತೆಗೆ ಬದಲಾದ ಸರ್ಕಾರ 1991ರಲ್ಲಿ ತನ್ನ ಆರ್ಥಿಕ ನೀತಿಯನ್ನೇ ಬದಲಾಯಿಸಿತು.
ಎಲ್ಲಿ ಖಾಸಗಿ ಒಡೆತನ ಸಾಧ್ಯವೋ ಅಲ್ಲಿ ಸರ್ಕಾರ ಬಂಡವಾಳವನ್ನು ತೊಡಗಿಸಬಾರದೆಂಬ
ತೀರ್ಮಾನಕ್ಕೆ ಬಂದಿತು. 92ರಲ್ಲಿ ಬಂಡವಾಳವನ್ನು ಹಿಂತೆಗೆದುಕೊಳ್ಳುವುದಕ್ಕಾಗಿ ಡಿಸ್‌ಇನ್‌ವೆಸ್ಟ್
ಮೆಂಟ್ ಮಿನಿಸ್ಟರ್‌ನನ್ನೇ ನೇಮಕ ಮಾಡಿತು. ಮಂತ್ರಿಯಾಗಿ ಅರುಣ್‌ಶೌರಿ ಅಧಿಕಾರ ಸ್ವೀಕರಿಸಿದರು.
ಕೈಗಾರಿಕೆಗಳನ್ನು ಮುಚ್ಚುವುದಕ್ಕಾಗಿಯೇ ಒಬ್ಬ ಮಂತ್ರಿಯನ್ನು ನೇಮಕ ಮಾಡಿದ ಹೆಗ್ಗಳಿಕೆ ಅಂದಿನ
ಸರ್ಕಾರದ್ದು.
ಅಮೆರಿಕಾದ ಟೈಮೆಕ್ಸ್ ಕಂಪೆನಿಯ ಆಗಮನಕ್ಕೆ 1998ರಲ್ಲಿ ರೆಡ್ ಕಾರ್ಪೆಟ್
ಹಾಸಿದಂತಾಯಿತು. ಟೈಟಾನ್ ಕಂಪೆನಿ ಹಲವು ರೀತಿಯ ರಾಜಿಗಳೊಂದಿಗೆ ಟೈಮೆಕ್ಸ್‌ನ ಜೊತೆಗೂಡಿ
ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿತು. ಭಾರತವಲ್ಲದೇ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಟೈಮೆಕ್ಸ್‌ನ
ಬಾವುಟವನ್ನು ಹಾರಿಸುವಲ್ಲಿ ಟೈಟಾನ್ ಕಂಪೆನಿ ಯಶಸ್ವಿಯಾಗಿದೆ. ಈ ಬೆಳವಣಿಗೆಯನ್ನು ತೆರೆದ
ಕೈಗಳಿಂದ ಸ್ವಾಗತಿಸುವ ಜನರಿಗೆ ಸಾರ್ವಜನಿಕ ಕ್ಷೇತ್ರ ಖಾಸಗಿ ಒಡೆತನ ಇವೆಲ್ಲಕ್ಕಿಂತ ಆ ಹೊತ್ತಿನ
ಅನುಭೋಗವೇ ಮುಖ್ಯವಾಗಿರುತ್ತದೆ. ಗುಣಮಟ್ಟ, ಪ್ರತಿಭೆ, ಸ್ಪರ್ಧೆ ಇವು ಇಂದಿನ ಪರಿಭಾಷೆಯಾಗಿದೆ.
ಹಣ್ಣುಬಿಟ್ಟ ಮರಗಳನ್ನು ಹುಡುಕಿ ಬುಡಮೇಲು ಮಾಡಿದ ದುರಂತ ಕಥೆಗಳಲ್ಲಿ
ಎಚ್‌ಎಂಟಿ ಕೈಗಡಿಯಾರದ್ದು ಒಂದು. ಬಂಡವಾಳದ ಹಿಂತೆಗೆತ ಆರಂಭವಾದಂತೆ ಎಚ್‌ಎಂಟಿ
ಕಂಪೆನಿಯಲ್ಲಿ ಸಂಬಳವನ್ನು ಮೊಟಕು ಮಾಡಲು ಆರಂಭಿಸಿದರು. ಹೊಸ ನೇಮಕಾತಿಯನ್ನು ನಿಲ್ಲಿಸಿದರು.
ಕಾರ್ಮಿಕರ ಸಂಖ್ಯೆ ವರ್ಷವರ್ಷಕ್ಕೆ ಕಡಿಮೆಯಾಗತೊಡಗಿತು.
ಕೆಲಸದ ಹೊರೆ ಹೆಚ್ಚಾದಂತೆ ಗುಣಮಟ್ಟ ಕಡಿಮೆಯಾಗಿದೆ ಎಂದು ದೂರಲು ಅವಕಾಶ
ಸಿಕ್ಕಿತು. ರೋಗಗ್ರಸ್ಥ ಕೈಗಾರಿಕೆಗಳ ಪಟ್ಟಿಗೆ ಸೇರಿಸುವುದು ಸರ್ಕಾರದ ಉದ್ದೇಶವೂ ಆಗಿತ್ತು.
ಕಂಪೆನಿಯಲ್ಲಿ ಕಾರ್ಮಿಕರಿಗೆ ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸಿದರು. `ಗೋಲ್ಡನ್ ಹ್ಯಾಂಡ್
ಶೇಕ್'ನ ಹೆಸರಲ್ಲಿ ಆವರೆಗೆ ದುಡಿದಿದ್ದ ಹಣವನ್ನು ಕೊಟ್ಟು ಮನೆಗೆ ಕಳುಹಿಸಿದರು. ಕೊಟ್ಟ
ಐದಾರು ಲಕ್ಷ ಮನೆಗೆ ಖರ್ಚಾಯಿತು.
ನಿವೃತ್ತಿ ಹೊಂದಿ ಬೀದಿಗೆ ಬಿದ್ದ ಕುಟುಂಬಗಳ ಪಡಿಪಾಟಲಿಗೆ ಅನುಕಂಪ ತೋರುವವರು
ಯಾರೂ ಇರಲಿಲ್ಲ. ಯೂನಿಯನ್‌ಗಳು ತಮ್ಮ ಪರಿಸ್ಥಿತಿಯ ಅರಿವೇ ಆಗದೇ ಹಾಗೆ ಕರಗಿಹೋಗಿವೆ.
ನಿವೃತ್ತಿವೇತನ ನೂರು ಇನ್ನೂರರಿಂದ ಸಾವಿರ ರೂಪಾಯಿಗಳು ನಿಗದಿಯಾದರೆ ಬದುಕುವುದಾದರು ಹೇಗೆ? ಈ
ಹೊತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕರ ಹೆಸರು ಎಲ್ಲೂ ಪ್ರಕಟವಾಗಲೇ ಇಲ್ಲ. ಇಪ್ಪತ್ತು
ವರ್ಷದಲ್ಲಿ ಕರಗಿ ನೀರಾಗಿ ಹರಿದು ನೂರೈವತ್ತು ಇನ್ನೂರು ಜನರಿರುವ ಕೈಗಡಿಯಾರದ ಕಂಪೆನಿ ಅಂತಿಮ
ಗಳಿಗೆಗಾಗಿ ಕ್ಷಣಗಣನೆ ಮಾಡುತ್ತಿದೆ.
ಎಚ್‌ಎಂಟಿ ಕುಸಿಯುತಿದ್ದಂತೆ ಆ ನಗರದ 630 ಎಕರೆ ಜಾಗವನ್ನು
ಮಾರಿಕೊಂಡು ಗಗನಚುಂಬಿ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಖಾಸಗೀಕರಣ ಯಶಸ್ವಿಯಾಗಿ
ಮುಗಿಲು ಮುಟ್ಟುತ್ತಿದೆ. 1990ರಲ್ಲಿ ಭಾರತ ಉದಾರೀಕರಣವೆಂದು ದಾಪುಗಾಲು ಹಾಕತೊಡಗಿದಾಗ
ಸಂಭ್ರಮಿಸಿದವರು ಸಾಫ್ಟ್‌ವೇರ್ ತಂತ್ರಜ್ಞರು, ಮಾಹಿತಿ ತಂತ್ರಜ್ಞರು ಮತ್ತು ಮಾರುಕಟ್ಟೆ
ತಜ್ಞರುಗಳೇ ಆಗಿದ್ದರು. ಮುಂಬೈನ ಅರ್ಥಶಾಸ್ತ್ರಜ್ಞರ ಪಡೆಯೇ ಯೋಜನೆಗಳನ್ನು ರೂಪಿಸಲು ಕೆಲಸ
ಮಾಡಿತು.
ಹೊಸ ಪೀಳಿಗೆಯ ವಿದ್ಯಾವಂತ ವರ್ಗ ಅಮೆರಿಕಾಗೆ ಹೋಗಲು ತುದಿಗಾಲಲ್ಲಿ
ನಿಂತಿರುತ್ತಿದ್ದರು. ಭಾರತದ ಆರ್ಥಿಕತೆಯು ಅಂಕಿಸಂಖ್ಯೆಗಳಲ್ಲಿ ಜಿಗಿಯತೊಡಗಿತು. ಸಣ್ಣಪುಟ್ಟ
ಕೈಗಾರಿಕೆಗಳು ಉರುಳಿಬಿದ್ದಾಗ ಅದು ಯಾರ ಕಣ್ಣಿಗೂ ಕಾಣುವಂತಿರಲಿಲ್ಲ. ಹೊಸ ಕಾರುಗಳು
ರಸ್ತೆಗಿಳಿದವು. ಎಲ್ಲರ ಬಾಯಲ್ಲೂ ಅಭಿವೃದ್ಧಿಯ ಮಂತ್ರ.
ಯಾವ ರಾಜ್ಯ ವಿದೇಶಿ ಬಂಡವಾಳಗಾರರಿಗೆ ಕೆಂಪು ಜಖಾನವನ್ನು ಹಾಸ ತೊಡಗಿತ್ತೋ ಆ
ರಾಜ್ಯ ಆದರ್ಶವೆನಿಸಿತ್ತು. ವಿದೇಶಿ ಬಂಡವಾಳವನ್ನು ದೇಶಕ್ಕೆ ತರುವುದೇ ಇಂದಿನ ಅಭಿವೃದ್ಧಿಯ
ಮಾದರಿಯಾಗಿದೆ. ಈ ಮಾದರಿ ಅಮೆರಿಕಾದಂತಹ ಅತಿಯೋಜಿತ ಆರ್ಥಿಕತೆಯನ್ನೂ ಬಿಡಲಾರದೆಂಬ ಸುಳಿವು
ರಿಸೆಶನ್ (ಆರ್ಥಿಕ ಬಿಕ್ಕಟ್ಟು) 2008ರಲ್ಲಿ ಹೊಡೆದಾಗಿನಿಂದ ಅರ್ಥವಾಗಿದೆ.
ಜಾಗತೀಕರಣ ವಿಸ್ತರಿಸಿದಂತೆ ಅದರೊಳಗೂ ಸುಖದಲ್ಲಿ ತೇಲಬಹುದೆಂಬುವವರನ್ನು
ನೋಡುವಾಗ, ಆಫ್ರಿಕಾದಲ್ಲಿ ಮರಳುಗಾಡು ಹರಡಿದ ಚಿತ್ರಣವೇ ಕಣ್ಣಮುಂದೆ ಬಂದುನಿಲ್ಲುತ್ತದೆ.
ಮರಳಗಾಳಿ ಬೀಸತೊಡಗಿದಾಗ ಬೆಳೆದ ಹುಲ್ಲು ಒಣಗಿಹೋಗುತ್ತದೆ. ಹುಲ್ಲು ತಿಂದು ಬದುಕುವ ಮೊಲ, ಜಿಂಕೆ
ಮುಂತಾದ ಪ್ರಾಣಿಗಳು ಅಲ್ಲಲ್ಲೇ ಸತ್ತು ಬೀಳತೊಡಗುತ್ತವೆ. ಓಡಲು ಶಕ್ತಿಯಿಲ್ಲದೇ ಕೈಗೆ ಬಾಯಿಗೆ
ಸಿಕ್ಕ ಹುಲ್ಲೇಕರುಗಳನ್ನು ಹುಲಿ ಸಿಂಹಗಳು ತಿಂದು ತೇಗುತ್ತವೆ. ಕೆಲವೇ ದಿನಗಳಲ್ಲಿ ಸತ್ತ
ಹುಲ್ಲೇಕರುಗಳನ್ನು ತಿನ್ನಲಾರದೇ, ಕುಡಿಯಲು ನೀರಿಲ್ಲದೆ ಅಬ್ಬರಿಸಿದ ಹುಲಿ ಸಿಂಹಗಳು ಹಾಗೇ
ಕುಸಿಯತೊಡಗುತ್ತವೆ.
ಸಂದಿಗೊಂದಿಗಳಲ್ಲಿ ಸತ್ತ ಪ್ರಾಣಿಗಳನ್ನು ತಿನ್ನುವ ಗುಳ್ಳೆನರಿಗೂ ಹೆಚ್ಚು
ಉಳಿಗಾಲವಿಲ್ಲದೇ ಹೋಗುತ್ತದೆ. ಹೀಗೆ ಸತ್ತುಬಿದ್ದ ಕೊಳೆತುನಾರುವ ಮಾಂಸವನ್ನು ತಿನ್ನಲು
ಬಂದ ರಣಹದ್ದುಗಳು ದಿನ ದಿನಕ್ಕೆ ಹೆಚ್ಚತೊಡಗುತ್ತವೆ. ಎರಡು ಮೂರು ಪಟ್ಟು ಹೆಚ್ಚಿದ ರಣಹದ್ದುಗಳು
ಸತ್ತು ಕೊಳೆತ ಪ್ರಾಣಿಗಳ ಮೂಳೆಚಕ್ಕಳ ಮುಗಿದಂತೆ ಅವುಗಳ ತಲೆಯೂ ಜೋಲುಬೀಳತೊಡಗುತ್ತದೆ.
ಮರುಭೂಮಿಯಲ್ಲಿ ತಡೆಯಿಲ್ಲದೇ ಬೀಸುವ ಬಿರುಗಾಳಿ ಎಲ್ಲವನ್ನೂ ಮುಚ್ಚಿ ಮರುಳಾಗಿಸುತ್ತದೆ.
(ನ್ಯಾಷನಲ್ ಜಿಯಾಗ್ರಫಿ ಚಾನೆಲ್ ಬಿತ್ತರಿಸಿದ ಚಿತ್ರ).
ಜಾಗತೀಕರಣದ ಬಿಸಿ ಅಲೆ ಬೀಸತೊಡಗಿದಾಗ ಸತ್ತ ಸಣ್ಣಪುಟ್ಟ ಕೈಗಾರಿಕೆಗಳು, ಕೆಲಸ
ಕಳೆದುಕೊಂಡು ನಿರ್ಗತಿಕರಾದ ಕಾರ್ಮಿಕರು, ಆತ್ಮಹತ್ಯೆ ಮಾಡಿಕೊಂಡ ಬಡ ರೈತರು ಯಾರಿಗೂ ಕಾಣುವುದೇ
ಇಲ್ಲ. ವೈಟ್ ಕಾಲರ್ ಜಾಬ್‌ನ ಜನರ ಸಂಭ್ರಮದಲ್ಲಿ ಅಭಿವೃದ್ಧಿ, ಬೆಳವಣಿಗೆ, ರಫ್ತು, ತಂತ್ರಜ್ಞಾನ
ಬೆಳವಣಿಗೆ ಹೀಗೆ ಹೇಳುತ್ತಾ ಹೊಗುತ್ತೇವೆ. 2008ರಲ್ಲಿ ಇದ್ದಕ್ಕಿದ್ದಂತೆ ಟೆಕ್ನೋಕ್ರಾಟ್ಸ್‌ಗಳು
ಕೆಲಸ ಕಳೆದುಕೊಂಡು ಬೀದಿಗಿಳಿದಾಗ ಅಮೆರಿಕಾದಂತಹ ರಾಷ್ಟ್ರವೂ ತತ್ತರಿಸಿತು-ಹುಲಿಸಿಂಹದಂತೆ.
ಬೃಹತ್ ಕಂಪೆನಿಗಳು ಎಲ್ಲವನ್ನು ರಣಹದ್ದುಗಳಂತೆ ನುಂಗಿ ಹಾಕತೊಡಗಿವೆ. ನುಂಗಿ
ಹೊಸೆಯುವ ಈ ಲಕ್ಷಣ ಭಾರತದಲ್ಲೂ ಭರದಿಂದ ಸಾಗಿದೆ.. ಭಾರತದಲ್ಲಿಂದು ಮೆಟ್ರೊಗಳು, ಮಾಲ್‌ಗಳ
ಗಟಾರದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳು ಮುಳುಗುತಿದ್ದಾರೆ. ಜೈವಿಕ ನಿಯಮದಂತೆ ಪ್ರಾಥಮಿಕ
ಜೀವಿಗಳನ್ನು ಉಳಿಸಿಕೊಳ್ಳದೆ ರಣಹದ್ದುಗಳು ಉಳಿಯಲಾರವು.
ಈ ಸುಳಿಯಲ್ಲಿ ಕೊಚ್ಚಿ ಹೋಗದಂತೆ ಭಾರತವನ್ನು ಸ್ವಲ್ಪವಾದರೂ ಹಿಡಿದಿಡಲು
ಸಾಧ್ಯವಾಗಿದ್ದು ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಂದ. ರಿಸೆಶನ್‌ನಲ್ಲಿ ಜಗ್ಗದೇ ಸಂಭಾಳಿಸಲು
ಭಾರತಕ್ಕೆ ಸಾಧ್ಯವಾಗಿದ್ದೇ ಸಮಾಜವಾದಿ ನೆಲೆಯ ಆರ್ಥಿಕ ಸಾಮಾಜಿಕ ತಳಹದಿಯಿಂದಾಗಿ. ಬಂಡವಾಳಶಾಹಿ
ಆರ್ಥಿಕತೆಗೆ ಮಾನವೀಯ ಮೌಲ್ಯಗಳಾಗಲಿ, ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಲಿ ಇರಲು
ಸಾಧ್ಯವಿಲ್ಲ.
ಭಾರತದ ಇನ್ಸೂರೆನ್ಸ್ ಕಂಪೆನಿ ಸಾರ್ವಜನಿಕ ಕ್ಷೇತ್ರದಲ್ಲಿದ್ದು ಸದಾ ಲಾಭದಾಯಕವಾಗಿ ಮುಂದುವರೆಯುತ್ತಿದ್ದರೂ ಅದನ್ನು ಮುಚ್ಚಲು ಹಲವು ತಂತ್ರಗಾರಿಕೆಗಳೂ ನಡೆದಿವೆ.
ಭಾರತದ ಇನ್ಸೂರೆನ್ಸ್ ಕಂಪೆನಿ ಸಾರ್ವಜನಿಕ ಕ್ಷೇತ್ರದಲ್ಲಿದ್ದು ಸದಾ ಲಾಭದಾಯಕವಾಗಿ ಮುಂದುವರೆಯುತ್ತಿದ್ದರೂ ಅದನ್ನು ಮುಚ್ಚಲು ಹಲವು ತಂತ್ರಗಾರಿಕೆಗಳೂ ನಡೆದಿವೆ.
ವಿದೇಶಿ ಇನ್ಸೂರೆನ್ಸ್ ಕಂಪೆನಿಗಳು ಸರ್ಕಾರದ ಮೇಲೆ ಹಾಕುವ
ಒತ್ತಡದಿಂದಾಗಿ ಅದಕ್ಕೆ ಮಣಿಯಲೇ ಬೇಕಾದ ದುಃಸ್ಥಿತಿಯಲ್ಲಿ ಭಾರತ ಸರ್ಕಾರ ನಲುಗುತ್ತಿದೆ. ಇಂತಹ
ಅಭಿವೃದ್ಧಿ ಮಾದರಿಗಳನ್ನು ಮುಂದು ಮಾಡಿಕೊಂಡು ಕಾಣಿಸುತ್ತಿರುವ ರಾಷ್ಟ್ರ ನಾಯಕತ್ವದ ಪ್ರಶ್ನೆಗಳು
ದಿಗಿಲಾಗಿಸುತ್ತದೆ.
ಫಲಫಲನೇ ನಗುತ್ತಿದ್ದ ಹೆಚ್‌ಎಂಟಿ ಕೈಗಡಿಯಾರದ ಕಂಪೆನಿಯನ್ನು ಹೊಸಕಿ ಹಾಕಿದ
ಕಾಣದ ಕೈಗಳು, ಬಲಿತೆಗೆದುಕೊಂಡ ಮತ್ತು ತೆಗೆದುಕೊಳ್ಳಲಿರುವ ಸಂಸ್ಥೆಗಳಲ್ಲಿ ಕೈಗಾರಿಕೆಗಳು
ಮಾತ್ರವಲ್ಲ ಸರ್ಕಾರಿ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳೂ ಪಟ್ಟಿಯಲ್ಲಿ ಸೇರಲಿವೆ.
ನೆಲದವ್ವನ ಬೆಚ್ಚಗಿನ ಮಡಿಲ ಮಾರಲಾರೆ
Tue, 06/25/2013
ನಿಮ್ಮಂತೆ ಮಾತು ಕಲಿಸಿದಿರಿ
ನಮಗೆಟೇಬಲ್‌ನಲ್ಲಿ ಕುಳಿತು ನಾಜೂಕಾಗಿ ಉಣ್ಣೋದು ತೋರಿಸಿದಿರಿನಿಮ್ಮ ಹಾಗೆ ಬಟ್ಟೆ
ತೊಡಿಸಿದಿರಿಕೂದಲು ಕತ್ತರಿಸಿ ನಿಮ್ಮ ಚೆಂದಕ್ಕೆ ಮಾಡಿದಿರಿ ಆದರೆ ಆದರೆಅಕ್ಕತಂಗಿಯರ ಪ್ರೀತಿ
ಮತ್ತೆಲ್ಲಿ ಕಾಣಲಿ ತಾಯ ಬೆಚ್ಚನೆಯ ಮಡಿಲು ಮರಳಿ ಹೇಗೆ ಪಡೆಯಲಿ.
ಹೀಗೆ ಹಾಡಿದವನೊಬ್ಬ ಆಸ್ಟ್ರೇಲಿಯಾದ ವಿದ್ಯಾವಂತ ಮೂಲನಿವಾಸಿ
(ಆ್ಯಬಾರಿಜಿನಲ್). ಆತ ಹೀಗೆ ಹಾಡಿದಾಗ, ಸಿಡ್ನಿಯಲ್ಲಿ ನಡೆದ ಅಂತರರಾಷ್ಟ್ರೀಯ ಮೌಖಿಕ ಚರಿತ್ರೆ
ಸಮ್ಮೇಳನದಲ್ಲಿ (2006) ಪಾಲ್ಗೊಳ್ಳಲು ಜಗತ್ತಿನ ವಿವಿಧ ಭಾಗಗಳಿಂದ ಬಂದಿದ್ದ ವಿದ್ವಾಂಸರೆಲ್ಲ
ಎದ್ದುನಿಂತು ಚಪ್ಪಾಳೆ ತಟ್ಟಿ ಗೌರವಿಸಿದರು.
ಕ್ರಿ.ಶ. 1800ರಲ್ಲಿ ಥಾಮಸ್ ಕುಕ್ ಆಸ್ಟ್ರೇಲಿಯಾ ಖಂಡಕ್ಕೆ ಬ್ರಿಟಿಷ್
ಬಾವುಟದೊಂದಿಗೆ ಮೊದಲು ಕಾಲಿಟ್ಟಾಗ ಅಲ್ಲಿ ಐನೂರಕ್ಕೂ ಹೆಚ್ಚು ಬುಡಕಟ್ಟು ರಾಜ್ಯಗಳಿದ್ದವು.
ನೂರಾರು ಬುಡಕಟ್ಟುಗಳು ತಮ್ಮದೇ ಆದ ಆಚಾರ ವಿಚಾರಗಳೊಂದಿಗೆ ಬದುಕನ್ನು ಸಾಗಿಸಿದ್ದವು. ಬ್ರಿಟಿಷರು
ಬಂದ ಕೆಲವೇ ವರ್ಷಗಳಲ್ಲಿ ಅವರ ಜೊತೆ ಬಂದ ರೋಗರುಜಿನಗಳಿಗೆ ಬುಡಕಟ್ಟು ಜನರು ತುತ್ತಾದರು. ಅವರು
ಕೊಟ್ಟ ತಂಬಾಕಿನ ಚಟಕ್ಕೆ ದಾಸರಾದರು. ಕಡೆಗೆ ಅವರಿಗೇ ಗುಲಾಮರಾದರು.
ಅಡಿಯಾಳಾದವರ ಹೆಂಗಸರನ್ನು ಸಂಪೂರ್ಣವಾಗಿ ಬಳಸಿಕೊಂಡರು. ಪ್ರತಿರೋಧ
ಒಡ್ಡಿದವರನ್ನು ಬೇಟೆಯಾಡಿದರು. ವಸಾಹತು ಕಾಲದುದ್ದಕ್ಕೂ ಸ್ಥಳೀಯ ಜನರ ಬಗೆಗಾಗಲಿ ಅವರ ಸಂಸ್ಕೃತಿಯ
ಕುರಿತಾಗಲಿ ಕಿಂಚಿತ್ತೂ ಗೌರವ ಕೊಡಲಿಲ್ಲ.
ಆಸ್ಟ್ರೇಲಿಯಾ ಒಂದು ಸ್ವತಂತ್ರ ದೇಶವಾಗಿ ಬೆಳೆದಂತೆ ಜಗತ್ತಿನ ಮೂಲೆಮೂಲೆಗಳಿಂದ
ಜನರು ಬಂದು ಅಲ್ಲಿ ನೆಲೆಸತೊಡಗಿದರು. ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ಆರಂಭವಾಯಿತು. ಆಗ
ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ, ಆಸ್ಟ್ರೇಲಿಯಾದ ಬಿಳಿಯರು ಕರಿಯ ಮೂಲನಿವಾಸಿಗಳನ್ನು
ನಾಗರಿಕರಾಗಿಸಲು ಹೊರಟರು. ಅಂದರೆ ಅವರನ್ನು ಇಂಗ್ಲಿಷರನ್ನಾಗಿಸುವುದು. ಅದಕ್ಕಾಗಿ ಮೂಲನಿವಾಸಿಗಳ
ಮಕ್ಕಳಿಗಾಗಿ ಹಾಸ್ಟೆಲ್ ತೆರೆದು ಅವರನ್ನು ಶಾಲೆಗೆ ಸೇರಿಸಿದರು.
ಕಳುಹಿಸದ ಮಕ್ಕಳನ್ನು ಬೇಟೆಯಾಡಿ ಹಿಡಿದು ತಂದರು. ಅವರ ಹೆಸರುಗಳು ಜಾನ್,
ಜೋಸೆಫ್ ಆದವು. ಆ ಮಕ್ಕಳಿಗೆ ಮರಳಿ ಬುಡಕಟ್ಟು ಸೋಂಕು ತಗುಲದಂತೆ ಎಚ್ಚರ ವಹಿಸಿದರು. ಅವರ ಅಪ್ಪ,
ಅಮ್ಮ, ಅಕ್ಕ ತಂಗಿಯರಿಂದ ಬೇರ್ಪಟ್ಟರು. ಅವರ ಭಾಷೆ, ಊಟ, ದೇವರು ಎಲ್ಲವೂ ಅಪರಿಚಿತವಾಯಿತು.
ಕಳ್ಳುಬಳ್ಳಿ ಹರಿದುಬಿತ್ತು.
ಬಲವಂತದ ನಾಗರಿಕತೆಯನ್ನು ಜನ ಖಂಡಿಸತೊಡಗಿದರು. ಜಗತ್ತಿನ ಮೂಲೆ ಮೂಲೆಗಳಿಂದ
ಮೂಲನಿವಾಸಿಗಳ ಪರ ಎದ್ದ ವಾದಗಳು, ಮೂಲನಿವಾಸಿಗಳ ನಿರಂತರವಾದ ಪ್ರತಿಭಟನೆಗಳು ಆಸ್ಟ್ರೆಲಿಯನ್ನರ
ಮೇಲೆ ಪರಿಣಾಮ ಬೀರಿತು. ಇ
ದೆಲ್ಲಕ್ಕಿಂತ ಹೆಚ್ಚಿಗೆ ಅಳಿಸಲಾಗದ ಚಾರಿತ್ರಿಕ ಅಪರಾಧವನ್ನು ಮುಚ್ಚಿಕೊಳ್ಳಲು
ಆಸ್ಟ್ರೇಲಿಯಾ ಸರ್ಕಾರ ಮೂಲವಾಸಿಗಳಿಗೆ ನ್ಯಾಯ ಒದಗಿಸಲು ಇಂದು ಹೊರಟಿದೆ. ಇಂಗ್ಲಿಷ್
ಹೆಸರುಗಳನ್ನು ಬಿಟ್ಟು ಸಾಧ್ಯವಾದಷ್ಟು ಮೂಲವಾಸಿಗಳ ಸ್ಥಳನಾಮಗಳನ್ನು ಉಳಿಸುತ್ತಿದೆ. ಕ್ಯಾನ್‌ಬೆರ‌್ರಾ,
ಬೂಂಢಾ, ಕಾನ್‌ಜ್ರಾ, ನೆರಾಂಗ್, ಟುಂಗ್‌ಗುನ್, ಬಿಲ್ಲಿಂಗ್, ಹಿರ‌್ರಾ, ಟೂಲಾನ್‌ಗಟ್ರಾ...
ಶತಮಾನಗಳಿಂದ ಆ್ಯಬಾರಿಜಿನಲ್ಸ್ ಬರೆಯುತ್ತಿದ್ದ ಕಾಂಗರೂ ಕನಸಿನ ಚಿತ್ರಗಳು ಜನಪ್ರಿಯಗೊಂಡಿವೆ.
ಒಂದು ಕಾಲಕ್ಕೆ ಕಾಡಿನಲ್ಲಿ ಬೇಟೆಯಾಡುವಾಗ ಬಳಸುತ್ತಿದ್ದ ಬೂಮ್‌ರ‌್ಯಾಂಗ್ ಆಸ್ಟ್ರೇಲಿಯಾ
ಸಂಕೇತವೇನೋ ಎಂಬಂತೆ ಮಾರಾಟವಾಗುತ್ತಿದೆ. ಮೂಲನಿವಾಸಿಗಳ ವಸ್ತು ಸಂಗ್ರಹಾಲಯಗಳು ಸ್ಥಾಪನೆಯಾಗಿವೆ.
ಅಳಿದುಳಿದ ಬುಡಕಟ್ಟು ಜನರ ಭಾಷೆ, ಹಾಡುಗಳನ್ನು ಸಂಗ್ರಹಿಸಿ ಧ್ವನಿಸುರುಳಿಗಳನ್ನು
ಮಾಡಿ `ಕೋಲ್ಡ್‌ಸ್ಟೋರೇಜ್'ನಲ್ಲಿ ಇರಿಸಿದ್ದಾರೆ. ಆದರೆ, ಆ ನ್ಯಾಷನಲ್ ಓರಲ್ ಆರ್ಕೈವ್ಸ್‌ನಲ್ಲಿ
(ಧ್ವನಿಸುರುಳಿ ಸಂಗ್ರಹಾಲಯಗಳು) ಹೆಸರಿಗೂ ಒಬ್ಬ ಬುಡಕಟ್ಟಿನ ವ್ಯಕ್ತಿ ಕೆಲಸಕ್ಕೆ
ನೇಮಕಗೊಂಡಿಲ್ಲ. ಬಹುಶಃ ಇದಕ್ಕೆ ಹೆಚ್ಚಿನ ವಿವರಣೆ ಬೇಕಿಲ್ಲ.
ಸಮಾಜ ತನ್ನ ಉದಾರತೆಯನ್ನು ಹೇಗೆಹೇಗೋ ಮೆರೆಯುತ್ತಿದೆ. ಅಂತಹ ಒಂದು ಅವಕಾಶ
2000ದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ದೊರೆಯಿತು. ಒಲಿಂಪಿಕ್ಸ್ ಪಂಜನ್ನು ಮೊದಲು ಸ್ವೀಕರಿಸಿದವರು
ಮೂಲವಾಸಿಗಳು. ದಾರಿಯುದ್ದಕ್ಕೂ ಅಲ್ಲಲ್ಲಿ ಮೂಲವಾಸಿಗಳ ಹಾಡುಗಳು ಕೇಳಿಬಂದವು. ಕಡೆಯದಾಗಿ ಕ್ಯಾಥಿ
ಫ್ರೀಮನ್ ಒಲಿಂಪಿಕ್ ಪಂಜನ್ನು ಬೆಳಗಿದರು.
ಆಕೆ ಆಸ್ಟ್ರೆಲಿಯಾದ ಮೂಲನಿವಾಸಿ. ಅದು ಕೊರತೆಯಲ್ಲವೆಂಬಂತೆ 400 ಮೀಟರ್
ಓಟದಲ್ಲಿ ಚಿನ್ನದ ಪದಕವನ್ನು ಸ್ವೀಕರಿಸಿ ಆಸ್ಟ್ರೆಲಿಯಾದ ಘನತೆಯನ್ನು ಎತ್ತಿಹಿಡಿದರು. ಹಲವು
ಆ್ಯಬಾರಿಜಿನಲ್ ಹೋರಾಟಗಾರರು, ಒಲಿಂಪಿಕ್ ಕೂಟದಲ್ಲಿ ಮೂಲನಿವಾಸಿಗಳು ಭಾಗವಹಿಸಬಾರದೆಂದು ಕರೆ
ಕೊಟ್ಟರು. ಆದರೆ ಆಕೆಯ ನಿಲುವು ಸಾಧಿಸಿ ತೋರಿಸುವುದಾಗಿತ್ತು.
ಆಸ್ಟ್ರೆಲಿಯಾದ ಇಂದಿನ ಜನಸಂಖ್ಯೆಯಲ್ಲಿ ಬರಿ ಶೇ 2ರಷ್ಟು ಇರುವ ಈ
ಮೂಲನಿವಾಸಿಗಳಲ್ಲಿ 90 ಭಾಗ ಬಿಳಿಯರಿಗೆ ಹುಟ್ಟಿದವರೇ ಆಗಿದ್ದಾರೆ. ನಾಗರಿಕತೆಯ ಹೆಸರಿನಲ್ಲಿ
ನಡೆದ ಜನಾಂಗಹತ್ಯೆ ಅದರೊಳಗೂ ಕುಟುಕು ಜೀವ ತನ್ನ ಅಸ್ತಿತ್ವಕ್ಕಾಗಿ ಮಿಡಿಯುತ್ತಿದೆ.
ಭೂಮಿ ತಾಯಿ ಅಪ್ಪಿಕೋ
ನನ್ನಮಡಿಲ ಕಂದನ ಹಾಗೆನೀ ಕೊಟ್ಟ ಈ ಕರಿಯ ಬಣ್ಣ ಒಪ್ಪಲಾರ ಆ ಬಿಳಿಯ ಗಾಳಿಗೆ ಸಿಕ್ಕ ತರಗೆಲೆಯಂತೆ ಹಾರಿ
ಹೋಯಿತು ನಮ್ಮ ಬದುಕು ದಿನವೂ ಬೆಳಕು ಹರಿಯುತ್ತದೆ ಬಿಳಿಯರ ನಳಿಕೆಯಿಂದ ಹಾರಿದ ಗುಂಡಿಗೆ ಸೀಳಿದ
ಅಣ್ಣನ ರಕ್ತ ಕೆಂಪಾಗಿಸುತ್ತದೆ ಉಷಾಕಾಲ ರಂಗೇರುತ್ತದೆ.(ಭೂಮಿ ನನ್ನ ತಾಯಿ ಪದ್ಯದ ತುಣುಕು
ಕವಿಫಿಲ್ಮಾನ್ಕ್ರಿಯಫ್)
*
*
ಆಕಾಶವನ್ನಾಗಲಿ, ಬೀಸುವ
ಗಾಳಿಯ ತಂಪನ್ನಾಗಲಿ, ಹರಿಯುವ ನದಿಯ ಹೊಳಪನ್ನಾಗಲಿ ಯಾರು ತಾನೆ ಮಾರಲು ಸಾಧ್ಯ? ನೆಲದವ್ವನ
ಬೆಚ್ಚಗಿನ ಮಡಿಲ ಮಾರಲಾರೆ. ಬಿಳಿಯರೆಂದೂ ನಮ್ಮ ಬದುಕಿನ ಕ್ರಮವನ್ನು ಅರ್ಥ ಮಾಡಿಕೊಳ್ಳಲಾರರು.
ಭೂಮಿಯನ್ನು ಅವರು ಶತ್ರುವಿನ ಹಾಗೆ ಆಕ್ರಮಿಸಿ ಆಳುತ್ತಿದ್ದಾರೆ. ಆದ್ದರಿಂದ ಅವರಿಗೆ ಭೂಮಿಯ
ಬಗೆಗೆ ಸೋದರತ್ವದ ಭಾವವಿಲ್ಲ.
ಬಿಳಿಯರ ನಗರಗಳನ್ನು ನೋಡಿದರೆ ನಮ್ಮ ಮನಸ್ಸಿಗೆ ನೋವಾಗುತ್ತದೆ. ಅವರಿಗೆ ವಸಂತ
ಋತುವಿನ ಎಲೆಯ ಸದ್ದನ್ನಾಗಲಿ, ದುಂಬಿಗಳ ಝೇಂಕಾರವನ್ನಾಗಲಿ ಕೇಳಲು ತಾಣವೇ ಇಲ್ಲ. ಬಹುಶಃ ನಾವು
ಅನಾಗರಿಕರಾದುದರಿಂದ ತೊಯ್ದ ಮಳೆಗೆ ಬರುವ ಮಣ್ಣಿನ ವಾಸನೆ ನಮಗೆ ಆನಂದವನ್ನು ನೀಡುತ್ತದೆ.
ಒಂದು ಷರತ್ತಿನ ಮೇಲೆ ಈ ಭೂಮಿಯನ್ನು ನಿಮಗೆ ಬಿಟ್ಟುಕೊಡಬಹುದು. ಎಲ್ಲಾ
ಪ್ರಾಣಿಗಳನ್ನು ಸೋದರ ಭಾವದಿಂದ ನೀವು ನೋಡಲು ಸಾಧ್ಯವೆ? ಪ್ರೈರಿ ಹುಲ್ಲುಗಾವಲುಗಳಲ್ಲಿ ರೈಲಿನಿಂದ
ಕಾಡೆಮ್ಮೆಗಳನ್ನು ಹೊಡೆದುರುಳಿಸಿದಾಗ ಓಡುವ ಕಬ್ಬಿಣದ ಕುದುರೆ ಮುಖ್ಯವಾಗಿತ್ತೇ ಹೊರತು
ಕಾಡೆಮ್ಮೆಗಳಲ್ಲ.
ನಿಮ್ಮ ಶಕ್ತಿಯನ್ನೆಲ್ಲಾ ಬಳಸಿ ಈ ಭೂಮಿಯನ್ನು ನಮ್ಮಿಂದ ಕಸಿದುಕೊಂಡಾಗ ನಮ್ಮ
ಜನರ ಭೂಮಿ ಬಗೆಗಿನ ಪ್ರೀತಿಯಿಂದಾಗಿ ಅವರ ಚೈತನ್ಯ ಈ ಕಾಡಿನಲ್ಲಿ ಸಮುದ್ರ ತೀರದಲ್ಲಿ ಸದಾ
ಕಾಲಕ್ಕೂ ಉಳಿದಿರುತ್ತದೆ.
1851ರಲ್ಲಿ ಒಂದು ಲಕ್ಷದ ಐವತ್ತು ಸಾವಿರ ಡಾಲರ್‌ಗೆ ಎರಡು ದಶಲಕ್ಷ ಎಕರೆ ಭೂಮಿಯನ್ನು ಮಾರುವಂತೆ ವಾಷಿಂಗ್ಟನ್ ರಾಜ್ಯದ ಕಮಿಷನರ್ ಒತ್ತಾಯಿಸಿದಾಗ, ರೆಡ್ ಇಂಡಿಯನ್ ಬುಡಕಟ್ಟಿನ ಮುಖಂಡ ಅಮೆರಿಕದ ಅಧ್ಯಕ್ಷನಿಗೆ ಕೊಟ್ಟ ಉತ್ತರ ಇದಾಗಿತ್ತು.
1851ರಲ್ಲಿ ಒಂದು ಲಕ್ಷದ ಐವತ್ತು ಸಾವಿರ ಡಾಲರ್‌ಗೆ ಎರಡು ದಶಲಕ್ಷ ಎಕರೆ ಭೂಮಿಯನ್ನು ಮಾರುವಂತೆ ವಾಷಿಂಗ್ಟನ್ ರಾಜ್ಯದ ಕಮಿಷನರ್ ಒತ್ತಾಯಿಸಿದಾಗ, ರೆಡ್ ಇಂಡಿಯನ್ ಬುಡಕಟ್ಟಿನ ಮುಖಂಡ ಅಮೆರಿಕದ ಅಧ್ಯಕ್ಷನಿಗೆ ಕೊಟ್ಟ ಉತ್ತರ ಇದಾಗಿತ್ತು.
ಕೆಂಪು ಇಂಡಿಯನ್ನರು ಅಮೆರಿಕದ ಮೂಲ ನಿವಾಸಿಗಳು. ಭಾರತವನ್ನು ಹುಡುಕುತ್ತಾ
ಹೊರಟ ಯೂರೋಪಿಯನ್ನರು ಅಮೆರಿಕ ಖಂಡವನ್ನು ತಲುಪಿದಾಗ ಅಲ್ಲಿ ಕಾಣಿಸಿದ ಜನರನ್ನು ಇಂಡಿಯನ್ನರೆಂದೇ
ಕರೆದರು. ಭಾರತಕ್ಕೆ ದಾರಿ ಹುಡುಕಿದ ನಂತರ ಅಮೆರಿಕದ ಮೂಲನಿವಾಸಿಗಳನ್ನು `ರೆಡ್ ಇಂಡಿಯನ್' ಎಂದು
ಕರೆಯತೊಡಗಿದರು. ಉತ್ತರ ಅಮೆರಿಕ ಖಂಡಕ್ಕೆ ಹೋದ ಬ್ರಿಟಿಷರು ಈ ಕೆಂಪು ಇಂಡಿಯನ್ನರೊಂದಿಗೆ
ಹೊಂದಾಣಿಕೆ ಮಾಡಿಕೊಳ್ಳುವ ಬದಲು ಕ್ರೂರವಾಗಿ ಬೇಟೆಯಾಡಿ ಕೊಂದು ಅವರ ಜಾಗಗಳನ್ನೆಲ್ಲ
ಆಕ್ರಮಿಸಿಕೊಂಡರು.
ಸ್ವತಂತ್ರ ಮನೋಭಾವದ ಅಮೆರಿಕದ ಮೂಲನಿವಾಸಿ ಬುಡಕಟ್ಟಿನ ಜನರಿಗೆ ಬಿಳಿಯರ
ಕಲ್ಪನೆಯ ಗುಲಾಮರಾಗುವುದು ಸಾಧ್ಯವಿರಲಿಲ್ಲ. ಅಷ್ಟು ವಿಸ್ತಾರವಾದ ಖಂಡವನ್ನೇ ಹಿಡಿದಿದ್ದರೂ
ಅಲ್ಲಲ್ಲಿ ಕಾಡುಗಳಲ್ಲಿ ಹುಲ್ಲುಗಾವಲುಗಳಲ್ಲಿ ಪ್ರಕೃತಿ ಸಹಜವಾಗಿ ಬದುಕುತ್ತಿದ್ದ ಕೆಂಪು
ಇಂಡಿಯನ್ನರ ನೆಲವನ್ನು ವಶಪಡಿಸಿಕೊಳ್ಳುವ ಬಿಳಿಯರ ದುರಾಸೆಗೆ ಮಿತಿಯೇ ಇರಲಿಲ್ಲ. ಆ ಹೊತ್ತಿನಲ್ಲಿ
ನಾಗರಿಕತೆಯ ಅಹಂಗೆ ಬುಡಕಟ್ಟಿನ ನಾಯಕ ಕೊಟ್ಟ ಉತ್ತರ ಅದಾಗಿತ್ತು.
ಇದು 1830ರಲ್ಲಿ ಅಮೆರಿಕ ಸರ್ಕಾರ ಹೊರಡಿಸಿದ ಕಾಯ್ದೆ `ಇಂಡಿಯನ್ ರಿಮೋವಲ್
ಆ್ಯಕ್ಟ್'ನ ಪರಿಣಾಮ. ಈ ಮೂಲನಿವಾಸಿಗಳು ನಾಮಾವಶೇಷವಾಗುತ್ತಾರೆಂಬುದು ಅಮೆರಿಕ ಸರ್ಕಾರಕ್ಕೂ
ಅರಿವಿಗೆ ಬಂದಾಗ ಪ್ರಾಣಿಗಳ ರಿಸರ್ವ್ ಫಾರೆಸ್ಟ್‌ನಂತೆ ರೆಡ್ ಇಂಡಿಯನ್ನರಿಗೆ ಬೇಲಿ ಹಾಕಿ
ಅದರಲ್ಲಿ ಬಿಡಲು ನಿರ್ಧರಿಸಿದರು.
ಆಸ್ಟ್ರೇಲಿಯಾದಂತೆಯೇ ಅನಾಗರಿಕ ಮೂಲನಿವಾಸಿಗಳನ್ನು ನಾಗರಿಕರನ್ನಾಗಿಸುವ
ಗುರುತರ ಜವಾಬ್ದಾರಿಯಿಂದ ಅಲ್ಲಿನ ಮಕ್ಕಳನ್ನೆಲ್ಲ ಕರೆದೋ, ಎಳೆದೋ ತಂದು ಮಿಷನರಿ ಶಾಲೆಗಳಿಗೆ
ಸೇರಿಸಿದರು. ಈ ಶಾಲೆಗಳಲ್ಲೂ ಅವರು ಮಾಡಿದ ಮೊದಲ ಕೆಲಸವೆಂದರೆ ಸ್ಥಳೀಯರ ಭಾಷೆಯಲ್ಲಿದ್ದ ಹಕ್ಕಿ,
ಮರ, ಭೂಮಿ, ಆಕಾಶ ಮೊದಲಾದವುಗಳ ಹೆಸರುಗಳನ್ನು ಬದಲಿಸಿದ್ದು.
ಚೀಟಿ ಎತ್ತಿಸಿ ಅದರಲ್ಲಿ ಬಂದ ಹೊಸ ಹೆಸರುಗಳು ಜಾರ್ಜ್, ಜಾನ್, ಸೈಮನ್ ಎಂದು
ಕರೆದು ಕ್ರೈಸ್ತರನ್ನಾಗಿಸಿದರು. ಉದ್ದಕ್ಕೆ ಸುರುಳಿ ಸುರುಳಿಯಾಗಿ ಇಳಿಬಿದ್ದಿದ್ದ ಕೂದಲನ್ನು
ಕತ್ತರಿಸಿ ಹಾಕಿದರು. ಹೀಗೆ ನಾಗರಿಕ ಪ್ರಜೆಗಳನ್ನಾಗಿಸಲು ಕೆಂಪು ಇಂಡಿಯನ್ ಮಕ್ಕಳ ಬೋರ್ಡಿಂಗ್
ಶಾಲೆಗಳನ್ನು ತೆಗೆದು `ವೈಟ್‌ವಾಷ್' ಮಾಡಿದರು.
ಪತ್ರದ ಕಡೆಯ ಸಾಲಿನಲ್ಲಿ ಡೂವಾಮಿಶ್ ಬುಡಕಟ್ಟಿನ ನಾಯಕ ಹೇಳುವ ಮಾತು ಇಂದಿಗೂ
ಅರ್ಥಗರ್ಭಿತವಾಗಿದೆ. ನಮಗೂ ನಿಮಗೂ ಇರುವ ದೇವರು ಒಬ್ಬನೇ. ನೀವು ಭೂಮಿಯನ್ನು ಆಳುವಂತೆ
ದೇವರನ್ನು ಆಳುತ್ತಿದ್ದೀರಿ. ರೆಡ್ ಇಂಡಿಯನ್ನರ ಈ ನಿರಂತರ ಹೋರಾಟದ ನಂತರವೂ ಅವರ ಭೂಮಿಯನ್ನು
ಮರಳಿ ಪಡೆಯಲಾಗಲಿಲ್ಲ.
ಆದರೆ ಈ ನೆಲವನ್ನು ನಾಗರಿಕ ಜಗತ್ತು ಉಗುಳುತ್ತಿರುವ ವಿಷದಿಂದ
ಉಳಿಸಿಕೊಳ್ಳಬೇಕಾದರೆ ಮೂಲನಿವಾಸಿಗಳ ನಂಬಿಕೆಗಳಿಂದ ಮಾತ್ರ ಸಾಧ್ಯ. ನಾಗರಿಕ ನಶೆಯಲ್ಲಿರುವವರಿಗೆ
ಈ ಅರಿವು ಬರುವ ಕಾಲಕ್ಕೆ ಹೊತ್ತುಮೀರದಿರಲಿ.
*
*
ಆಫ್ರಿಕಾದ ಪ್ರಸಿದ್ಧ ಗಾಯಕ ಸೊಮಾಲಿಯಾ ದೇಶದ ಕ್ನಾನ್ ತನ್ನ ದೇಶವನ್ನು ಕುರಿತು
ಹಾಡುವಾಗ ಎಂತಹವರ ಮನಸ್ಸೂ ಕಲಕುತ್ತದೆ. ಈ ಪೀಳಿಗೆಯ ಯುವಕನನ್ನು ಪಾಶ್ಚಿಮಾತ್ಯ ಸಂಸ್ಕೃತಿಯ
ನಿರಂತರ ಆಕ್ರಮಣ ಉಸಿರುಕಟ್ಟಿಸಿದೆ.
ಪುಟಿದೇಳಿಸುವ
ರ‌್ಯಾಪ್ ಸಂಗೀತದೊಳಗೂ ಅಸಹಾಯಕತೆ, ಆಕ್ರೋಶ, ತೊಳಲಾಟವೇ ಉಕ್ಕಿಬರುತ್ತದೆ.
ಅವನ ಹಾಡಿನ ಸಾರಾಂಶ: ನಾನಿಲ್ಲಿ ಹುಟ್ಟಿದೆ, ಬೆಳೆದೆ, ಅದೇ ನನ್ನ ಹಾಡಿನ ಜೀವಾಳ. ಹೊಟ್ಟೆ ಕಟ್ಟಿದರೆ ತತ್ ನೋವೇ ನೀರಾಯಿತು. ಅವರು ಎಸೆದ್ರೆ ಹೈ ಮಿಕ್ಸಿಂಗ್ ಕೋಕ್ ಇಲ್ಲವಾದ್ರೆ ಗನ್ ಪೌಡರ್. ಮಾಡೆಲ್ ಆಗಬಹುದಾದ ಸ್ಟೆತಸ್ಕೋಪ್ ಹಿಡಿಯಬಲ್ಲ ಅವಳ ಕೈಗೆ ಇಟ್ಟವ್ರೆ ಗನ್.
ಅವನ ಹಾಡಿನ ಸಾರಾಂಶ: ನಾನಿಲ್ಲಿ ಹುಟ್ಟಿದೆ, ಬೆಳೆದೆ, ಅದೇ ನನ್ನ ಹಾಡಿನ ಜೀವಾಳ. ಹೊಟ್ಟೆ ಕಟ್ಟಿದರೆ ತತ್ ನೋವೇ ನೀರಾಯಿತು. ಅವರು ಎಸೆದ್ರೆ ಹೈ ಮಿಕ್ಸಿಂಗ್ ಕೋಕ್ ಇಲ್ಲವಾದ್ರೆ ಗನ್ ಪೌಡರ್. ಮಾಡೆಲ್ ಆಗಬಹುದಾದ ಸ್ಟೆತಸ್ಕೋಪ್ ಹಿಡಿಯಬಲ್ಲ ಅವಳ ಕೈಗೆ ಇಟ್ಟವ್ರೆ ಗನ್.
ಹಡಗುಗಳ್ಳರು ಸಾಗರಕ್ಕೆ ಬೆದರಿಕೆ ಹುಟ್ಟಿಸಿದ್ದಾರೆ, ರಾದ್ಧಾಂತವಾಗದ
ದಿನವಿಲ್ಲ. ಕಣ್ಣು ಮುಚ್ಚಿದರೆ ಶವ ಪೆಟ್ಟಿಗೆಗಳು ಮುಚ್ಚುತ್ತಿರುವುದು ಕಾಣುತ್ತದೆ.
ಈ ವೇದನೆ ಸೊಮಾಲಿಯಾದಿಂದ ಕೇಳಿ ಬಂದರೂ ಬಹುತೇಕ ಆಫ್ರಿಕಾ ದೇಶದ ಎಲ್ಲರ ನೋವು
ಇದೇ ಆಗಿದೆ.
*
*
ಇಂತಹ ಮಾಯದ ಸಂಸ್ಕೃತಿಯ ನಾಡಿನ ಮೂಲನಿವಾಸಿಗಳೇನಾದರು? ದಕ್ಷಿಣ ಅಮೆರಿಕ
ಖಂಡಕ್ಕೆ ವಲಸೆ ಹೋದ ಪೋರ್ಚುಗೀಸರು, ಸ್ಪ್ಯಾನಿಷರು ಆ ಖಂಡವನ್ನೇ ತುಂಡು ಮಾಡಿಕೊಂಡರು. ಭೂಮಿ
ಮೇಲೆ ವಾಸ ಮಾಡುವುದಕ್ಕೆ ಜಾಗ ಇದ್ದರೆ ಅದೆಲ್ಲಾ ಯೂರೋಪಿಯನ್ನರಿಗಾಗಿಯೇ ದೇವರು ಸೃಷ್ಟಿಸಿದ್ದು
ಅಂತ ನಂಬಿದರು. ಯಾಕೆಂದರೆ ಹೋದಲ್ಲೆಲ್ಲ ಕಾಣುವ ಅನಾಗರಿಕರನ್ನು ನಾಗರಿಕರನ್ನಾಗಿಸುವ ಹೊರೆ
ಹೊತ್ತಿದ್ದೇವೆಂದು ಸಾರಿದರು. ಅದು ಬಿಳಿಯನ ಹೆಗಲ ಮೇಲೆ ಬಿದ್ದ ಹೊರೆ. ಲ್ಯಾಟಿನ್ ಮೂಲದ
ಭಾಷೆಗಳನ್ನಾಡುವ ಜನ ಅಲ್ಲಿ ಹೋಗಿದ್ದರಿಂದ (ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್) ಲ್ಯಾಟಿನ್
ಅಮೆರಿಕ ಎಂದೇ ಕರೆದರು.
ಪ್ರಸಿದ್ಧ ಹಾಲಿವುಡ್ ನಿರ್ದೇಶಕ ಮೆಲ್ ಗಿಬ್ಸನ್, `ಅಪೊಕೊಲಿಪ್ಟೊ' ಎಂಬ ಸಿನಿಮಾ
ತೆಗೆದು ದೊಡ್ಡ ಹೆಸರು ಮಾಡಿದ. ಸಿನಿಮಾದ ಜನ ಫಿಲಂ ಮೇಕಿಂಗ್ ಕಲಿಯಲು ಅದನ್ನು ಪಠ್ಯವೆಂಬಂತೆ
ನೋಡಿದರು. ರಕ್ತ ಪ್ರಧಾನವಾದ ಆ ಚಿತ್ರದ ಬಗೆಗೂ ನೂರಾರು ಉತ್ತಮ ವಿಮರ್ಶೆಗಳು ಬಂದವು.
ಅದರ ಕಥೆ ಇಷ್ಟೇ: ದಕ್ಷಿಣ ಅಮೆರಿಕದ ಮೂಲಬುಡಕಟ್ಟಿನಲ್ಲಿ ನರಬಲಿ
ಆಚರಣೆಯಲ್ಲಿರುತ್ತದೆ. ಅದಕ್ಕಾಗಿ ಬೇರೆ ಬುಡಕಟ್ಟಿನ ಜನರನ್ನು ಬೇಟೆಯಾಡಿ ತಂದು ಎತ್ತರವಾದ
ಬಲಿಪೀಠದಿಂದ ತಲೆಯನ್ನು ಕತ್ತರಿಸಿ ಉರುಳಿಸುವುದು ರೂಢಿ. ಮೆಟ್ಟಿಲ ಉದ್ದಕ್ಕೂ ರಕ್ತ ಹರಿದು
ದೇವರನ್ನು ಸಂಪ್ರೀತಗೊಳಿಸುತ್ತದೆ. ಅಲ್ಲಿಂದ ತಪ್ಪಿಸಿಕೊಂಡ ನಾಯಕ ಹೇಗೋ ಜೀವ ಉಳಿಸಿಕೊಂಡಿದ್ದ
ತನ್ನ ಹೆಂಡತಿಯೊಂದಿಗೆ ಸಮುದ್ರತೀರಕ್ಕೆ ಬರುತ್ತಾನೆ. ದೂರದಲ್ಲಿ ಪೋರ್ಚುಗೀಸ್ ಹಡಗು ಕಾಣುತ್ತದೆ,
ಅದು ನಾಡಿಗೆ ಹೊಸ ಭರವಸೆಯನ್ನು ತರುತ್ತದೆ. ಇವರ ಮುಖದಲ್ಲಿ ಆಶಾಭಾವನೆ ಹೊರಹುಮ್ಮುತ್ತದೆ.
ಕೋಟ್ಯಂತರ ಹಣ ಸುರಿದು ತೆಗೆದ ಈ ಸಿನಿಮಾ, ಪ್ರಪಂಚಕ್ಕೆ ಹೇಳಿದ ಸಂದೇಶವಾದರೂ
ಏನು? ಯೂರೋಪಿಯನ್ನರಿಂದ ದಕ್ಷಿಣ ಅಮೆರಿಕದ ಜನ ನಾಶವಾಗಲಿಲ್ಲ. ಅವರು ಬರುವ ಹೊತ್ತಿಗೇ ನರಬಲಿಯಂತಹ
ದುಷ್ಟ ಆಚರಣೆಗಳಿಂದ ಆ ಸಮಾಜ ಅಳಿವಿನಂಚಿನಲ್ಲಿತ್ತು. ನಾಶ ಹೊಂದುವ ಗುಣ ಮೂಲನಿವಾಸಿಗಳ
ಸಂಸ್ಕೃತಿಯಲ್ಲಿ ಅಂತರ್ಗತವಾಗಿತ್ತು. ಆ ಹೊತ್ತಿಗೆ ಹೋದವರು ಬಿಳಿಯನಾಗರಿಕರು, ಉದ್ಧಾರಕರು.
ವಸಾಹತುಶಾಹಿ ಬೆನ್ನಿಗೆ ಅಂಟಿಬಂದ ನಾಗರಿಕತೆಯ ಕುರುಡು ಅಹಂ, ಕಾಡುಗಳನ್ನು,
ಪ್ರಾಣಿಪಕ್ಷಿಗಳನ್ನು ಮಾತ್ರವಲ್ಲ ಸಾವಿರಾರು ಮಾನವ ಸಂಸ್ಕೃತಿಗಳನ್ನು ಹೊಸಕಿಹಾಕಿತು.
ನವನಾಗರಿಕತೆ ನವವಸಾಹತುಶಾಹಿಯ ಹೊಸ ಮುಖಗಳಲ್ಲಿ ತನ್ನ ರುದ್ರನರ್ತನವನ್ನು ಮುಂದುವರೆಸಿದೆ.
ಜೀವಜಾಲವನ್ನೇ ಪ್ರೀತಿಸುವ ನೆಲಮೂಲದ ನಂಬಿಕೆಗಳನ್ನು ನಾವಿಂದು ಮತ್ತೆ ಅರಸಿಹೋಗಬೇಕಾಗಿದೆ.
ಒಡಲ ಬೆಂಕಿ ಆರದಿರಲಿ...
Tue, 06/11/2013
ಬೆಳ್ಳನೆಯ ಹಾಸಿಗೆಯ ಮೇಲೆ ತೆಳ್ಳನೆಯ ಹೊದಿಕೆಯನ್ನು ತನ್ನ ಎದೆಯವರೆಗೂ ಎಳೆದು
ಮಲಗಿದ್ದ ಭೂಮಿ ಬಾಗಿಲತ್ತ ಕಾತರದಿಂದ ನೋಡುತ್ತಿದ್ದಳು.
ನೋಡಿದರೆ ವಯಸ್ಸಿನ್ನೂ ಮೂವತ್ತೆನ್ನುವಂತೆ ಹರೆಯ ಉಕ್ಕಿತ್ತು, ಇಂದಿನ ಕಾತರ,
ಕಳೆದ ಹದಿನೈದು ವರ್ಷಗಳ ನಿರೀಕ್ಷೆಗಿಂತ ಭಿನ್ನವಾಗಿತ್ತು. ವೇಗವಾಗಿ ಆತುರಾತುರದಿಂದ ಬಂದ
ಡಾಕ್ಟರ್, ನೇರವಾಗಿ ಭೂಮಿಯ ಕಡೆ ನುಗ್ಗಿ, ಹೊದ್ದಿದ್ದ ಹೊದಿಕೆಯನ್ನು ಸರಿಸಿ ಹಾಗೇ ಅವಳ
ಎದೆಯನ್ನೇ ನೋಡುತ್ತಾ `ವ್ಹಾವ್ ಬ್ಯೂಟಿಫುಲ್' ಎಂದಾಗ ಅವರ ಮುಖದಲ್ಲಿ ತೃಪ್ತಿ ಸಮಾಧಾನವಿತ್ತು.
ಆದರೆ ಭೂಮಿಗೆ ಈ ಉದ್ಗಾರ, ಭರವಸೆಯನ್ನು ತಂದುಕೊಟ್ಟಿತ್ತು. ಅವಳ ಎದೆಯ
ಸೌಂದರ್ಯ ಹೊಗಳುವ ಪದಗಳನ್ನು ಬದುಕಿನಲ್ಲಿ ಸತತವಾಗಿ ಕೇಳುತ್ತಲೇ ಬಂದಿದ್ದಳು. ಅದು ಬದುಕಿನ
ಭಾಗವಾಗಿತ್ತು. ಆ ನುಡಿಯ ಹಿಂದೆ ಹೆಣ್ಣಿನ ಸೌಂದರ್ಯವನ್ನು ಆರಾಧಿಸುವ ನುಡಿಗಳೋ, ಕಾಮುಕ
ಭಾವನೆಗಳೋ, ಪ್ರೀತಿ, ಪ್ರೇಮ, ಹೀಗೆ ಎಲ್ಲವೂ ಸೇರಿದ್ದರೂ ಅದನ್ನು ಮುಖ್ಯವೆಂದು ಭೂಮಿ
ಭಾವಿಸಿರಲಿಲ್ಲ, ಹಾಗಂತ ಬದುಕಿನ ಬಗ್ಗೆ ಸದಾ ಉಕ್ಕುವ ಆಸಕ್ತಿಗೇನೂ ಕೊರತೆ ಇರಲಿಲ್ಲ.
ಹನ್ನೆರಡರ ಹದಿಹರೆಯದಲ್ಲಿ ದೇಹ ಹೆಣ್ಣಾಗಿ ರೂಪುಗೊಳ್ಳತೊಡಗಿದಾಗ ಎಲ್ಲ
ಹೆಣ್ಣುಮಕ್ಕಳಂತೆ ಸಂಕೋಚ, ಕೀಟಲೆಯ ನೋಟದಿಂದ ದೇಹವನ್ನು ಮುಚ್ಚಿಕೊಳ್ಳುವ ಪ್ರಯತ್ನ. ತೊಟ್ಟ
ಬಟ್ಟೆಯ ಮೇಲೆ ಸ್ವೆಟರ್ ತೊಟ್ಟು ಎರಡು ಜಡೆಗಳನ್ನು ಮುಂದೆ ಇಳಿಬಿಟ್ಟು ಶಾಲೆಗೆ ಹೋಗುವಾಗ
ಪುಸ್ತಕವನ್ನು ಎದೆಗೆ ಅಡ್ಡ ಹಿಡಿದು ಹೋಗುವುದು ಆರಂಭವಾಯಿತು. ಹೀಗೆ ಮುಚ್ಚಿಟ್ಟ, ಹಿಡಿದಿಟ್ಟ ಸುಪ್ತ
ಮಾನಸಿಕ ಸ್ಥಿತಿ, ವಿಕಾಸವಾಗುವ ದೇಹದ ಮೇಲೆ ಹಲವು ಬಗೆಯ ಒತ್ತಡಗಳನ್ನು ಹುಟ್ಟುಹಾಕತೊಡಗಿತ್ತು.
ಹೀಗೆ ಅರೆಗಳಿಗೆಯಲ್ಲಿ ಆ ಎದೆಯ ಕಥೆ ಹಾಡಾಗಿತ್ತು. ಭೂಮಿಯ ಕೋಣೆಗೆ
ಪ್ರವೇಶಿಸಿದ ಪ್ರಸಿದ್ಧ ಸ್ತನ ಕ್ಯಾನ್ಸರ್ ತಜ್ಞರ ಕಣ್ಣಿಗೆ ಮ್ಯೋಸೆಕ್ಟಮಿ (ಎಂದರೆ ಪೂರ್ಣ
ಸ್ತನವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು) ನಂತರ ಮೂರನೇ ದಿನದಲ್ಲಿ ಗಾಯ ಪೂರ್ಣ ಮಾಸಿದ್ದು
ಸಣ್ಣನೆಯ ಒಂದು ಎಳೆಯ ಹೊಲಿಗೆ ಬ್ಯೂಟಿಫುಲ್ ಆಗಿ ಕಾಣಿಸಿತ್ತು. ವೈದ್ಯರ ಕಣ್ಣಲ್ಲಿ ಸೌಂದರ್ಯದ
ಕಲ್ಪನೆ! ಗಾಯದ ಮೇಲೆ ಕೀವು ಕಾಣದ ಗಳಿಗೆ. ಇಲ್ಲಿ ಭೂಮಿ ಅಥವಾ ಮತ್ತಾವುದೇ ಹೆಸರಿನ ಹೆಣ್ಣು,
ಕ್ಯಾನ್ಸರ್ ತಗುಲಿದ್ದಕ್ಕಾಗಿ ಸ್ತನವನ್ನು ತೆಗೆಯಲು ಒಪ್ಪಿ ಆಂಗ್ಲ ವೈದ್ಯಕೀಯ ವಿಧಿಗೆ ಶರಣಾದಾಗ,
ಅಮೆರಿಕದ ಅತ್ಯಂತ ಹೆಚ್ಚು ಸಂಭಾವನೆಯನ್ನು ಪಡೆಯುವ ನಟಿ ಬಹಿರಂಗವಾಗಿ ನಿಂತಿದ್ದು ಧೈರ್ಯವನ್ನು
ನೀಡಲಿಲ್ಲ. ಒಡಲ ಬೆಂಕಿಯನ್ನು ಹೀಗೆ ಹೊರ ಹಾಕುತ್ತಿರುವವರು ಯಾರು?
ಏಂಜೆಲಿನಾ ಜೋಲಿ ಹಾಲಿವುಡ್‌ನ ಅತ್ಯಾಕರ್ಷಕ ನಟಿ. ಅದರಲ್ಲೂ ಆ್ಯಕ್ಷನ್
ಹೀರೊಯಿನ್ ಆಗಿ ಉತ್ಕರ್ಷದಲ್ಲಿ ಇದ್ದಾಕೆ, ಇದ್ದಕ್ಕಿದ್ದಂತೆ ತನ್ನೆರಡು ಮೊಲೆಗಳನ್ನು
ಕತ್ತರಿಸಿರುವುದಾಗಿ ಬಹಿರಂಗವಾಗಿ ಹೇಳಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಕ್ಯಾನ್ಸರ್
ತಗುಲಿರದಿದ್ದರೂ ಮುಂಜಾಗ್ರತಾ ಕ್ರಮವಾಗಿ ಮೊಲೆಗಳನ್ನು ಕತ್ತರಿಸಿಕೊಂಡರೇಕೆ? ಜೊತೆಗೆ ವೈದ್ಯಕೀಯ
ಆದರ್ಶವಾಗಿ ಇದನ್ನು ಜಗತ್ತಿನ ಮುಂದಿಡಲಾಯಿತು. ಅದರಲ್ಲೂ `ಬ್ರೆಸ್ಟ್ ಕ್ಯಾನ್ಸರ್' ಬಗ್ಗೆ
ಸರಿಯಾದ ಅರಿವಿಲ್ಲದ ಭಾರತದಲ್ಲಿ ಇದನ್ನು ಸಾರಬೇಕೆಂದು ಹೊರಟಿದ್ದು ಸರಳವಾದ ವಿಚಾರಗಳಲ್ಲ ಎಂಬುದು
ಮೇಲ್ನೋಟಕ್ಕೇ ಕಾಣಿಸುತ್ತದೆ.
ಹೆಣ್ತನದ ಅಂಗವಾಗಿ ತಾಯಿ-ಮಗುವಿನ ಸಂಬಂಧ ಸೇತುವಾದ ಸ್ತನಗಳನ್ನು ಕ್ಯಾನ್ಸರ್
ಬಿಡುತ್ತಿಲ್ಲ. ದೇಹದ ಯಾವ ಭಾಗಕ್ಕಾದರೂ ಕ್ಯಾನ್ಸರ್ ತಗಲುವ ಸಾಧ್ಯತೆಯಿರುವಾಗ ಸ್ತನ ಕ್ಯಾನ್ಸರ್
ಬಗ್ಗೆ ಯಾಕೆ ಇಂತಹ ಕಾಳಜಿ? ಸ್ತನ, ಗರ್ಭಕೋಶ, ಧ್ವನಿಪೆಟ್ಟಿಗೆ - ಹೀಗೆ ಕೆಲವು ಅಂಗಗಳನ್ನು
ಪೂರ್ಣ ತೆಗೆಯಬಹುದಾದ್ದರಿಂದ ಅವು ಸಂಪೂರ್ಣ ಗುಣವಾಗುತ್ತವೆ.
ಎಲ್ಲಾ ನಗರಗಳಿಗಿಂತ ಬೆಂಗಳೂರಿನಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಿದೆ ಎನ್ನುವುದು
ಭೀತಿ ಹುಟ್ಟಿಸಿದೆ. ಕ್ಯಾನ್ಸರ್‌ಗೂ ಬೆಂಗಳೂರು ರಾಜಧಾನಿಯಾಗುವುದು ಹೆಮ್ಮೆಯ ವಿಷಯವಲ್ಲ.
ಕ್ಯಾನ್ಸರ್ ಯಾವುದೇ ಭಾಗಕ್ಕೆ ತಗುಲಿದರೂ ಆರಂಭದಲ್ಲೇ ಗುರುತಿಸಿದಲ್ಲಿ
ಕ್ಷಕಿರಣ ಹರಿಯಬಿಟ್ಟು ಅಥವಾ ಕಿಮೋದಿಂದ ಬಗೆಹರಿಸುತ್ತಾರೆಂಬುದು ನಿಜ. ಸದಾ ಕಾಲಕ್ಕೂ
ಮುಚ್ಚಿಟ್ಟುಕೊಂಡು ಬದುಕಿದ್ದ ಸ್ತನಗಳನ್ನು ವೈದ್ಯರು ಪರೀಕ್ಷಿಸತೊಡಗಿದಾಗ ಗಾಬರಿಯಾಗಲು ಹಲವು
ಕಾರಣಗಳಿರುತ್ತವೆ. ನಮ್ಮ ಬದುಕು ಇಲ್ಲಿಗೇ ಮುಗಿದೇ ಹೋಗಿರಬೇಕೆಂದು. ಸಾಮಾನ್ಯವಾಗಿ ನಲವತ್ತು
ಮೀರಿದ ಮಹಿಳೆಯರಲ್ಲಿ ಈ ಸಮಸ್ಯೆ ಕಾಣುವುದರಿಂದ ಕೆಲವು ಸಾಮಾನ್ಯ ಕಾರಣಗಳಂತೂ ಇರುತ್ತವೆ.
ಗರ್ಭ ತಡೆಯಲು ಗುಳಿಗೆಗಳನ್ನು ನುಂಗಿರಬಹುದೆ; ಸೌಂದರ್ಯ ಹೆಚ್ಚಿಸಿಕೊಳ್ಳಲು
ಸ್ತನಗಳ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರಬಹುದೆ; ಹಾರ್ಮೋನ್ ಚುಚ್ಚುಮದ್ದನ್ನು ತೆಗೆದುಕೊಂಡು
ಸ್ತನಗಳನ್ನು ಸುಂದರಗೊಳಿಸಿಕೊಂಡಿರಬಹುದೆ; ಇಲ್ಲವಾದರೆ ಮನೆಯಲ್ಲಿ ತಾಯಿ ಅಥವಾ ಮತ್ತ್ಯಾರಿಗಾದರೂ
ಬಂದಿದ್ದಿರಬಹುದೆ?
ಹೀಗೆ ಪ್ರಶ್ನೆಗಳು ಮುಂದುವರಿದಂತೆ ಎದುರು ಕುಳಿತ ಹೆಣ್ಣಿಗೆ ದೈನ್ಯತೆಯ
ಮುಖಭಾವ ಮಾತ್ರ ಉಳಿದಿರುತ್ತದೆ. ಮಗುವಿಗೆ ಹಾಲುಣಿಸಿದ್ದೆನಲ್ಲಾ ಎಂಬುದು ಅವಳ ಮನದಲ್ಲಿ ಬಂದು
ಹೋಗುತ್ತದೆ.
ನಲವತ್ತು ವರ್ಷಗಳ ನಂತರ ಕಡ್ಡಾಯವಾಗಿ ಸ್ತನ ಪರೀಕ್ಷೆ ಮಾಡಿಸಬೇಕೆಂಬ
ಎಚ್ಚರಿಕೆಯ ಮಾತು ಆರಂಭವಾಗಿ ದಶಕಗಳೇ ಆಗಿವೆ. ಆದರೆ ಭಾರತೀಯ ಶೈಲಿಯ ಸಾಂಸಾರಿಕ ಬದುಕಿನಲ್ಲಿ
ನೋವು ನುಂಗುವುದನ್ನು ಹೆಣ್ಣುಮಕ್ಕಳು ಸೊಗಸಾಗಿ ಕಲಿತಿದ್ದಾರೆ. ದೇಹದ ನೋವಿಗಿಂತ ಸಂಸಾರದಲ್ಲಿ
ಮೂಡಬಹುದಾದ ಬಿರುಕಿಗೆ ಸದಾ ಹೆದರುತ್ತಾಳೆ. ಅಂಜಿ, ಅಳುಕಿ, ಮುಚ್ಚಿಟ್ಟುಕೊಳ್ಳುವ ಹೊತ್ತಿಗೆ
ಮೊದಲ ಹಂತಗಳು ದಾಟಿರುತ್ತವೆ. ಆದರೆ ಬದುಕು ಎಷ್ಟು ಒತ್ತಡಗಳಿಂದ ಕೂಡಿತ್ತು ಎಂದು ಯಾರೂ
ಕೇಳುವುದೇ ಇಲ್ಲ. ಹೊಸ ಭಾಷ್ಯವನ್ನೇ ಬರೆಯಬೇಕಾಗಿದೆ.
ಇದನ್ನು ಆಕೆ ಹೇಗೆ ಎದುರಿಸಬಲ್ಲಳು? ಎಲ್ಲರಿಗೂ ಒಂದೇ ಸೂತ್ರವಂತೂ
ಇಲ್ಲ. ಆಸ್ಪತ್ರೆ, ಓಡಾಟ ಮುಂತಾದವನ್ನೆಲ್ಲಾ ಹಣವಂತರು, ನಗರದ ಮಧ್ಯಮವರ್ಗ ಹೇಗೊ
ನಿಭಾಯಿಸಲು ಸಾಧ್ಯವಾದರೆ ಯಾವುದೇ ಕ್ಯಾನ್ಸರ್ ಗೆಲ್ಲಬಹುದು. ಅದರಲ್ಲೂ ಸ್ತನ ಕ್ಯಾನ್ಸರ್ ಆದಲ್ಲಿ
ಆರೇಳು ತಿಂಗಳಲ್ಲಿ ಮರಳಿ ತಮ್ಮ ದಿನನಿತ್ಯದ ಬದುಕನ್ನು ಖಂಡಿತ ನಿಭಾಯಿಸಬಹುದು. ವೈದ್ಯರು ಕೊಡುವ
ಔಷಧಿಯ ಆಚೆಗೆ ಕೆಲಸ ಮಾಡುವುದು ಮನೋಬಲ. ಆ ಮನೋಬಲವೂ ವ್ಯಕ್ತಿನೆಲೆಯಲ್ಲಿ ಹುಟ್ಟುವಂತಹುದಲ್ಲ.
ಅದಕ್ಕೂ ಬಲವಾದ ಸಾಮಾಜಿಕ ಹಿನ್ನೆಲೆ ಕಾರಣವಿರುತ್ತದೆ.
ಹಳ್ಳಿಯ ಹೆಣ್ಣುಮಕ್ಕಳಿಗಾಗಿ ಸರ್ಕಾರ ಮೊಬೈಲ್ ಮ್ಯೋಮೊಗ್ರಾಮ್ ವಾಹನವನ್ನು
ಆರಂಭಿಸಿದೆ. ಬಡತನದ ರೇಖೆಗಿಂತ ಕೆಳಗಿರುವವರಿಗೆ ಆರ್ಥಿಕ ಸಹಾಯವನ್ನು ಮಾಡುತ್ತಿದೆ.
ಯೋಜನೆಗಳನ್ನು ರೂಪಿಸಿದೆ. ಆದರೆ ಆಸ್ಪತ್ರೆವರೆಗೆ ಬರುವ ಚೈತನ್ಯ ಬರಿಸುವವರಾರು? ಮುಂಜಾಗ್ರತಾ
ಕ್ರಮವಾಗಿ ಮೆಡಿಕಲ್ ಇನ್ಷೂರೆನ್ಸ್ ಇರುವವರು ಸ್ವಲ್ಪಮಟ್ಟಿಗಾದರೂ ಹಣಕಾಸಿನ ಸಮಸ್ಯೆಯನ್ನು
ನಿಭಾಯಿಸಿಕೊಳ್ಳುತ್ತಿದ್ದಾರೆ.
ಏಂಜೆಲಿನಾ ಜೋಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ತಾಯಿ ಸ್ತನ
ಕ್ಯಾನ್ಸರ್‌ನಿಂದ ಸತ್ತರೆಂದು, ಚಿಕ್ಕಮ್ಮನೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆಂದು
ಮುಂಜಾಗ್ರತೆಯಾಗಿ ತನಗೆ ಸ್ತನ ಕ್ಯಾನ್ಸರ್ ಬರುವ ಎಲ್ಲಾ ಸಾಧ್ಯತೆಗಳನ್ನು ನಿರೀಕ್ಷಿಸಿ ತನ್ನ
38ನೇ ವಯಸ್ಸಿನಲ್ಲೇ ತನ್ನ ಎರಡೂ ಸ್ತನಗಳನ್ನು ತೆಗೆಸಿಕೊಳ್ಳುವಂತೆ ಮಾಡಿದ್ದು ಯಾವ ಮಟ್ಟದ
ವೈದ್ಯಕೀಯ ಸಾಧನೆ?
ಕ್ಯಾನ್ಸರ್ ಬಂದ ನಂತರ ಅದರ ಸಾಧಕ ಬಾಧಕಗಳ ಬಗ್ಗೆ ಗಮನ ಹರಿಸುತ್ತಿದ್ದೇವೆಯೇ ಹೊರತು ಬಾರದಂತೆ ತಡೆಯುವ ಯೋಜನೆಗಳೇಕೆ ಇಲ್ಲ? ಕ್ಯಾನ್ಸರ್ ಬಂದಷ್ಟೂ, ಮನುಷ್ಯ ನರಳಿದಷ್ಟೂ ಔಷಧಿ ಉದ್ದಿಮೆಗಳು ಸುಖಕರವಾಗಿ ಬೆಳೆಯುತ್ತವೆ.
ಕ್ಯಾನ್ಸರ್ ಬಂದ ನಂತರ ಅದರ ಸಾಧಕ ಬಾಧಕಗಳ ಬಗ್ಗೆ ಗಮನ ಹರಿಸುತ್ತಿದ್ದೇವೆಯೇ ಹೊರತು ಬಾರದಂತೆ ತಡೆಯುವ ಯೋಜನೆಗಳೇಕೆ ಇಲ್ಲ? ಕ್ಯಾನ್ಸರ್ ಬಂದಷ್ಟೂ, ಮನುಷ್ಯ ನರಳಿದಷ್ಟೂ ಔಷಧಿ ಉದ್ದಿಮೆಗಳು ಸುಖಕರವಾಗಿ ಬೆಳೆಯುತ್ತವೆ.
ಸಂಭ್ರಮಿಸುತ್ತವೆ. ಈ ವಿಷ ವರ್ತುಲದಲ್ಲಿ ಸಿಕ್ಕಿ ನರಳಲು ಎಲ್ಲರನ್ನೂ
ಸನ್ನದ್ಧಗೊಳಿಸಲಾಗುತ್ತಿದೆ. ಒತ್ತಡದ ಈ ಬದುಕನ್ನು ಒಪ್ಪಿಕೊಳ್ಳುತ್ತಾ ಕಡೆಗೂ ಕಾಣದ ಕೈವಾಡಕ್ಕೆ
ಸಿಕ್ಕಿಸುತ್ತಾ ಹೋಗುವ ಈ ತಂತ್ರಗಾರಿಕೆ ಕಳ್ಳುಬಳ್ಳಿಯ ತಂತುಗಳನ್ನು ಕೀಳುತ್ತಿದೆ.
ಭಾರತದಲ್ಲಿ 1970ರ ದಶಕದಲ್ಲಿ ಪರಿಚಯಿಸಿದ್ದು ಹಸಿರುಕ್ರಾಂತಿ, 60ರ ವರೆಗೆ ಭಾರತ ಎದುರಿಸಿದ ಆಹಾರ ಸಮಸ್ಯೆಗೆ ಕಂಡುಕೊಂಡ ಪರಿಹಾರ ಅದು. ಎಲ್ಲಾ ಅರ್ಥಶಾಸ್ತ್ರದ ಗ್ರಂಥಗಳಲ್ಲಿ, ಕೃಷಿ ಪಠ್ಯಗಳಲ್ಲಿ ಭಾರತದ ಕೃಷಿ ಹಿಂದುಳಿಯುವಿಕೆಗೆ ರೈತರ ಮೌಢ್ಯತೆಯೇ ಕಾರಣವೆಂದೂ, ಆ ಮೌಢ್ಯತೆಗೆ ಕಾರಣ ಅವರು ಆಧುನಿಕ ತಂತ್ರಜ್ಞಾನ ಬಳಸುತ್ತಿಲ್ಲ ಎಂದು ಹೇಳಲಾಯಿತು. ಈಗ, ಇಂದಿನ ಪರಿಸರದ ಪಾಠಗಳಲ್ಲಿ ಭಾರತದ ರೈತರು ಮೌಢ್ಯತೆಯಿಂದಾಗಿ ಅಗತ್ಯ ಮೀರಿ ಬಳಸುತ್ತಿರುವ ಕ್ರಿಮಿನಾಶಕದಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸದಾ ಕಾಲಕ್ಕೂ ಮುಗ್ಧ ರೈತರೇ ಅಪರಾಧಿಗಳು. ಹಸಿರು ಕ್ರಾಂತಿಗೂ ರೈತರಿಗೂ ಕ್ಯಾನ್ಸರ್‌ಗೂ ಎಲ್ಲಿಗೆಲ್ಲಿಯ ಸಂಬಂಧ!
ಭಾರತದಲ್ಲಿ 1970ರ ದಶಕದಲ್ಲಿ ಪರಿಚಯಿಸಿದ್ದು ಹಸಿರುಕ್ರಾಂತಿ, 60ರ ವರೆಗೆ ಭಾರತ ಎದುರಿಸಿದ ಆಹಾರ ಸಮಸ್ಯೆಗೆ ಕಂಡುಕೊಂಡ ಪರಿಹಾರ ಅದು. ಎಲ್ಲಾ ಅರ್ಥಶಾಸ್ತ್ರದ ಗ್ರಂಥಗಳಲ್ಲಿ, ಕೃಷಿ ಪಠ್ಯಗಳಲ್ಲಿ ಭಾರತದ ಕೃಷಿ ಹಿಂದುಳಿಯುವಿಕೆಗೆ ರೈತರ ಮೌಢ್ಯತೆಯೇ ಕಾರಣವೆಂದೂ, ಆ ಮೌಢ್ಯತೆಗೆ ಕಾರಣ ಅವರು ಆಧುನಿಕ ತಂತ್ರಜ್ಞಾನ ಬಳಸುತ್ತಿಲ್ಲ ಎಂದು ಹೇಳಲಾಯಿತು. ಈಗ, ಇಂದಿನ ಪರಿಸರದ ಪಾಠಗಳಲ್ಲಿ ಭಾರತದ ರೈತರು ಮೌಢ್ಯತೆಯಿಂದಾಗಿ ಅಗತ್ಯ ಮೀರಿ ಬಳಸುತ್ತಿರುವ ಕ್ರಿಮಿನಾಶಕದಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸದಾ ಕಾಲಕ್ಕೂ ಮುಗ್ಧ ರೈತರೇ ಅಪರಾಧಿಗಳು. ಹಸಿರು ಕ್ರಾಂತಿಗೂ ರೈತರಿಗೂ ಕ್ಯಾನ್ಸರ್‌ಗೂ ಎಲ್ಲಿಗೆಲ್ಲಿಯ ಸಂಬಂಧ!
ಒತ್ತಡದಿಂದಾಗಿ ಬರುವ ಬಿ.ಪಿ, ಶುಗರ್, ಕ್ಯಾನ್ಸರ್ ಇವೆಲ್ಲಾ ನಗರದವರಿಗೆ ಬರುವ
ಕಾಯಿಲೆಗಳು ಎಂದು ಈವರೆಗೆ ನಾವು ಭಾವಿಸ್ದ್ದಿದೆವು. `ಹಸಿರು ಕ್ರಾಂತಿ'ಯಲ್ಲಿ ಮಂಚೂಣಿಯಲ್ಲಿದ್ದ
ರಾಜ್ಯ ಪಂಜಾಬ್. ಅಲ್ಲಿಂದ `ಬಿಕನೇರ್'ಗೆ ಹೋಗುವ ರೈಲನ್ನು `ಕ್ಯಾನ್ಸರ್ ರೈಲು' ಎಂದೇ
ಕರೆಯಲಾಗುತ್ತಿದೆ. ಆ ಸಂಖ್ಯೆಯಲ್ಲಿ ಕ್ಯಾನ್ಸರ್ ರೋಗಿಗಳು ಆ ರೈಲಿನಲ್ಲಿ ಹೋಗುತ್ತಿದ್ದಾರೆ.
ನಾಲ್ಕು ದಶಕಗಳ ಕಾಲ ನಿರಂತರವಾಗಿ ಬಳಸಿದ ಕ್ರಿಮಿನಾಶಕ ಕ್ಯಾನ್ಸರ್‌ಗೆ ಕಾರಣವಾಗಿದೆ. ಬಡರೈತರು
ತಮ್ಮ ಮನೆಯಲ್ಲೇ ಇರುವ ಅಂಗೈ ಅಗಲ ಜಾಗದಲ್ಲಿ ಮಗುವಿನ ತೊಟ್ಟಿಲ ಕೆಳಗೆ ಕ್ರಿಮಿನಾಶಕಗಳನ್ನು
ಇಟ್ಟಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ರಸಗೊಬ್ಬರವನ್ನು ರೈತ ನೇರವಾಗಿ ಕೈಯಲ್ಲೇ ತೆಗೆದು ಗಿಡಕ್ಕೆ
ಹಾಕುತ್ತಾನೆ. ಹಿಂದೆ ಮುಂದೆ ನೋಡಿದರೆ ಇದೇನು `ಆರಂಭ ಮಾಡೋ ಹುಟ್ಟ' ಎಂದು ತಲೆಗೆ ಕುಕ್ಕುತ್ತಾರೆ
ಅಷ್ಟೆ. ದುಡಿಮೆಯೇ ದೇವರೆಂದು ನಂಬಿದ ಕಾಯಗಳಿಗೂ ಕ್ಯಾನ್ಸರ್ ತಗುಲಿದೆ. `ಜೀನ್ ಮ್ಯುಟೇಷನ್'
ಆಗಲು ಜೀವವೊಂದನ್ನು ರಸಗೊಬ್ಬರದಲ್ಲಿ, ಕೀಟನಾಶಕದಲ್ಲಿ ಅದ್ದಿ ಉರುಳಾಡಿಸಿದರೆ ನಾಲ್ಕು ದಶಕಗಳು
ಸಾಲದೇ? ಕ್ಯಾನ್ಸರ್ ವೈರಸ್ ಅ್ಲ್ಲಲ, ಬ್ಯಾಕ್ಟೀರಿಯಾ ಅಲ್ಲ. ನಮ್ಮದೇ ದೇಹದ ಕೋಶಗಳೂ ಸಹಜತೆಯನ್ನು
ಬಿಟ್ಟು ವರ್ತಿಸತೊಡಗುತ್ತವೆ. ಆಗ ಅವನ್ನು ಕ್ಯಾನ್ಸರ್ ಕಣಗಳು ಎಂದು ಕರೆಯುತ್ತಾರೆ - ಮ್ಯುಟೇಷನ್
ಆದ ಕಣಗಳು.
ಸುಂದರವಾದ ಬ್ಲೌಸ್ ಹೊಲೆಸುವಲ್ಲಿ, ಬ್ರಾ ಹುಡುಕಿಕೊಳ್ಳುವಾಗಲೂ ಆ
ಸ್ತನಗಳಿಗಿರುವ ಜವಾಬ್ದಾರಿ ಕೇವಲ ಆಕರ್ಷಣೆಯಲ್ಲ. ಲೈಂಗಿಕ ಆಕರ್ಷಣೆಯ ಆಚೆಗೆ ತಾಯಿ ಮಗುವಿನ
ಸಂಬಂಧವಿದೆ. ಎರಡು ಕೈಗಳ ಚಲನೆಗೆ ಅದು ಬೆಂಬಲ ನೀಡುವ ಸ್ನಾಯುವೂ ಹೌದು. ಹೊಟ್ಟೆಯೊಳಗಿನ ಕಂದ
ಗಂಡಲ್ಲ ಎಂದು ಕರುಳು ಹರಿದರೆ- ಇವೆಲ್ಲಾ ಮುಂದಿನ ತಲೆಮಾರನ್ನು ಉಳಿಸಬಲ್ಲದೆ?
ಮುನ್ನೆಚ್ಚರಿಕೆಯಾಗಿ ಬದಲಾಯಿಸಿಕೊಳ್ಳಬಹುದಾದ ಆಹಾರ ಕ್ರಮ, ಹೆಚ್ಚಿಸಿಕೊಳ್ಳಬಹುದಾದ ಪೌಷ್ಟಿಕತೆ,
ಬಿಟ್ಟೇಹೋಗಿರುವ ನಮ್ಮ ನೆಲಮೂಲದ ಹಣ್ಣುತರಕಾರಿಗಳು, ಮರೆತೇ ಹೋಗಿರುವ ಹನುಮ ಫಲ, ರಾಮ ಫಲ ಮುಂದಿನ
ಪೀಳಿಗೆಯನ್ನು ಮತ್ತೆ ಉಳಿಸಬಲ್ಲದೆ?
ಕ್ಯಾನ್ಸರ್ ಎದುರಿಸಲೇಬೇಕಾದಾಗ ಹೆಣ್ಣುಮಕ್ಕಳು ಧೈರ್ಯ ತೆಗೆದುಕೊಳ್ಳಬೇಕು.
ಆಸ್ಪತ್ರೆ ಎಂಬ ವ್ಯವಸ್ಥೆಯನ್ನು ಒಪ್ಪಿ ಅಲ್ಲಿಯ ವಿಜ್ಞಾನವನ್ನು ನಂಬಿ ಮ್ಯೋಸೆಕ್ಟಮಿ, ಕೀಮೊ
ಥೆರಪಿ, ರೇಡಿಯೊ ಥೆರಪಿ ಎಂದು ಔಷಧಿಗೆ ತಲೆ ಬಾಗಿದಾಗ ಬೆಳೆದು ನಿಂತ ಕಬ್ಬಿನಗದ್ದೆಗೆ ಬೆಂಕಿ
ಹಾಕಿದಂತಾಗಿರುತ್ತದೆ. ಎಲ್ಲವೂ ಸುಟ್ಟು ಕರುಕಲಾದಾಗ ಆ ಗದ್ದೆಗೆ ಮತ್ತೆ ನೀರುಕಟ್ಟಿದರೆ
ಭೂಗರ್ಭದಿಂದ ಹೊರ ಬರುವ ಕಬ್ಬಿನ ಚಿಗುರು ಮತ್ತೊಮ್ಮೆ ಹಸಿರಾಗಿ ಚಿಗುರಿ ಫಲಭರಿತವಾಗಿರುತ್ತದೆ.
ಸುಟ್ಟ ಹೊಲದ ಒಳಗೆ ಅಡಗಿರುವ ಆ ಚೈತನ್ಯವನ್ನು ಪ್ರತಿ ಕ್ಯಾನ್ಸರ್‌ಗೆ ಒಳಗಾದ ಜೀವ ತನ್ನ ಒಡಲೊಳಗೆ
ಹುದುಗಿಟ್ಟುಕೊಳ್ಳಬೇಕು.
ಕ್ಯಾನ್ಸರ್ ಬಂದವರನ್ನು ಉಳಿಸಿಕೊಳ್ಳಲು ಹೋರಾಡುವ ಆಸ್ಪತ್ರೆ ಎಂಬ ಬೃಹತ್
ವ್ಯವಸ್ಥೆಯ ಮುಂದೆ ಜನರ ದನಿ ಉಡುಗಿಹೋಗಿದೆ. ಆಸ್ಪತ್ರೆ ಬೆಂಬಲವಾಗಿ ನಿಲ್ಲುವ ಇನ್ಷೂರೆನ್ಸ್
ಕಂಪೆನಿ, ಅವರ ಬೆಂಬಲಕ್ಕೆ ನಿಲ್ಲುವ ಸರ್ಕಾರ, ಆರೋಗ್ಯದ ಹೆಸರಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳ
ಧನಸಹಾಯ- ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಲು ಸಿದ್ಧವಾಗಿವೆ. ಒಡಲ ಬೆಂಕಿ ಆರದಿರಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ