-ಹಿಪ್ಪರಗಿ ಸಿದ್ದರಾಮ್, ಧಾರವಾಡ.
ಅಯಂ ನಿಜಃ ಪರೋವೇತಿ
ಲಘು ಚೇತಸಾಂ |
ಉದಾರಚರಿತಾನಾಂ ತು ವಸುಧೈವ ಕುಟುಂಬಕಂ
||
ಧಾರವಾಡದಲ್ಲಿ ಕಳೆದ
(ಎಪ್ರೀಲ್-೨೦೧೩) ತಿಂಗಳು ರಂಗಭೂಮಿಯ
ಅಶ್ವತ್ಥಾಮನೆಂದು ಖ್ಯಾತರಾಗಿದ್ದ ದಿ.ಎಲಿವಾಳ ಸಿದ್ದಯ್ಯಸ್ವಾಮಿ
ಸ್ಮರಣಾರ್ಥ ನಾಟಕೋತ್ಸವವೊಂದನ್ನು ರಂಗಪರಿಸರದ ಗೆಳೆಯರು ಹಮ್ಮಿಕೊಂಡಿದ್ದರು. ಇದರ
ಅಂಗವಾಗಿ ಪ್ರತಿದಿನ ಹಿರಿಯ ರಂಗಕರ್ಮಿಗಳನ್ನು ರಂಗಸನ್ಮಾನ
ಮಾಡಿ ಗೌರವಿಸುವ ಕಾರ್ಯಕ್ರಮದಲ್ಲಿ ರಂಗಸನ್ಮಾನ ಸ್ವೀಕರಿಸಿ ತಮಗೆ ಖುಷಿಗೆ ಕಾರಣಾದವರಿಗೆ
ಧನ್ಯವಾದಗಳನ್ನು ತಿಳಿಸುವುದು ಸಾಮಾನ್ಯ ಸಂಗತಿಯಾಗಿತ್ತು. ಹೀಗೆ
ಸನ್ಮಾನ ಸ್ವೀಕರಿಸಿ, ಕೇವಲ ಧನ್ಯವಾದಗಳನ್ನು ಹೇಳುವುದಕ್ಕೆ
ಮಾತ್ರ ಸೀಮಿತಗೊಳ್ಳದ ಹಿರಿಯ ರಂಗಕರ್ಮಿಯೊಬ್ಬರು ಮೇಲಿನಂತೆ
ಅಂದರೆ ಇಡೀ ’ರಂಗಭೂಮಿಯ ಪರಿವಾರವೆಲ್ಲವೂ
ತನ್ನದು ಅದು ವಸುಧೈವ ಕುಟುಂಬವಿದ್ದಂತೆ’
ಎಂಬ ವಿಶಾಲಾರ್ಥದಲ್ಲಿ ರಂಗದಲ್ಲಿ ಹಾಡುವಂತೆ ವೇಧಿಕೆಯ ಮೇಲೆ ಎದೆ
ತುಂಬಿ ಹಾಡುತ್ತಿದ್ದರೆ ಸಭಾಂಗಣದಲ್ಲಿದ್ದ ಪ್ರತಿಯೊಬ್ಬರೂ ಚಪ್ಪಾಳೆಯ ಸುರಿಮಳೆಯೊಂದಿಗೆ ಆ ಕಲಾವಿದರಿಗೆ ಗೌರವ
ಸಲ್ಲಿಸಿದರು.
ಅಂತಹ
ಕಲಾವಿದರು ಬೇರೆ ಯಾರೂ ಅಲ್ಲ
; ಅವರು ರಂಗಭೂಮಿಯ ಎಲ್ಲರಿಗೂ ಕಾಳೆ ಸರ್ ಎಂದು,
ಕಿರುತೆರೆ/ಹಿರಿತೆರೆಯ ಸಹಕಲಾವಿದರಿಗೆ ’ಅಪ್ಪಾಜಿ’
ಎಂದು ಆತ್ಮೀಯವಾಗಿ ಕರೆಸಿಕೊಳ್ಳುವ ಶ್ರೀಯುತ ಚನ್ನಬಸಪ್ಪ ಶಿವಪ್ಪ
ಕಾಳೆಯವರು (ಜನನ:೦೧-೦೬-೧೯೬೨) ಮೂಲತಃ ಹುಬ್ಬಳ್ಳಿ
ತಾಲೂಕಿನ ಬೊಮ್ಮಸಮುದ್ರ ಎಂಬ ಊರಿನವರಾದ ಇವರಿಗೆ
ತಂದೆಯವರು (ಶಿವಪ್ಪ ಕಾಳೆ) ಸಹ
ಬಯಲಾಟ, ಮೂಡಲಪಾಯ, ಪಾರಿಜಾತದ ಕಲಾವಿದರು. ರಾತ್ರಿಯಿಡೀ ಪ್ರದರ್ಶನದಲ್ಲಿ ಪಾತ್ರಧಾರಿಗಳಾಗಿ, ಮಾಸ್ತರ ಆಗಿ ಮಿಂಚಿದವರು.
ಅಂತಹ ಕಲಾವಿದರ ಸುಪುತ್ರರಾದ ಇವರಿಗೆ
ತಂದೆಯವರು ಕಲಾವಿದರಾಗಿ ಊರೂರು ತಿರುಗಾಡಿ ಕಲಾಪ್ರದರ್ಶನದಲ್ಲಿ
ಭಾಗವಹಿಸುತ್ತಿದ್ದರೆ ಮನೆಯಲ್ಲಿ ಕಡು ಬಡತನ. ಹಿರಿಯ
ಮಗನಾದ ಚನ್ನಬಸಪ್ಪನವರಿಗೆ ತಾಯಿ ಮತ್ತು ಸೋದರ-ಸೋದರಿಯರನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆಯೊಂದಿಗೆ ಗ್ರಾಮದಲ್ಲಿ ಇವರದು ಒಂಟಿ ಮನೆತನ.
ತೊಂದರೆ-ತಾಪತ್ರಯಗಳಿಗೆ ಆಗಲು ತಮ್ಮವರು ಎನ್ನುವವರು
ಯಾರೂ ಇಲ್ಲದ ದುರ್ದರ ದಿನಗಳಲ್ಲಿಯೇ
ತಾವು ಶಿಕ್ಷಣ ಪಡೆಯುತ್ತಲೇ ಸೋದರ-ಸೋದರಿಯರಿಗೆ ಅಕ್ಷರಲೋಕಕ್ಕೆ ಪರಿಚಯಿಸಿದವರು.
ಬೆಳಗಿನ ಹೊತ್ತು ಶಾಲೆಯಲ್ಲಿ
ವಿದ್ಯಾಭ್ಯಾಸ, ಮದ್ಯಾಹ್ನದ ನಂತರ ಕೂಲಿ ಕೆಲಸ,
ರಜೆಯ ದಿನಗಳಲ್ಲಿ ಮೈಮುರಿಯೇ ದುಡಿಮೆ, ಅದರಿಂದ ಬರುವ
ಕೂಲಿಯಲ್ಲಿಯೇ ಕುಟುಂಬದ ನಿರ್ವಹಣೆ. ಹೀಗೆಯೇ
ಪ್ರಾಥಮಿಕ ಶಿಕ್ಷಣವನ್ನು ಸ್ವಂತ ಊರಾದ ಬೊಮ್ಮಸಮುದ್ರದಲ್ಲಿ
ಮುಗಿಸಿ, ಮುಂದಿನ ಶಿಕ್ಷಣವನ್ನು ತಾಯಿಯ
(ಶಿವಕ್ಕ ಕಾಳೆ) ತವರೂರಿನಲ್ಲಿ ಕಲಿಯುತ್ತಿದ್ದಾಗ
ಸಿದ್ದೇಶ್ವರ ಹಿರೇಮಠ ಗುರುಗಳ ಅಪೇಕ್ಷೆಯ
ಮೇರೆಗೆ ನಾಟಕವೊಂದರಲ್ಲಿ ಪಾತ್ರ ನಿರ್ವಹಿಸಿ ಗ್ರಾಮಸ್ಥರ
ಮೆಚ್ಚಿಗೆಗೆ ಪಾತ್ರಾಗುತ್ತಾರೆ. ಮುಂದೆ ಕಾಲೇಜು ಶಿಕ್ಷಣಕ್ಕಾಗಿ
ಹುಬ್ಬಳ್ಳಿಗೆ ಬಂದಾಗ ಅಲ್ಲಿಯೂ ಎಲ್ಲಾ
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರಂತರ ಕಾಲೇಜಿಗೆ ಚಾಂಪಿಯನ್
ಆಗುತ್ತಾರೆ. ಮುಂದೆ ಹಾಗೆಯೇ ಶಿಕ್ಷಣಪ್ರೇಮಿಯೊಬ್ಬರ
ಸಹಕಾರ ಮತ್ತು ಪ್ರೋತ್ಸಾಹದಿಂದ ಧಾರವಾಡದ
ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಎಂ.ಎ.ಇತಿಹಾಸವನ್ನು
ಕಲಿಯಲು ಹೋದಾಗ ಅಲ್ಲಿಯೂ ಎಲ್ಲಾ
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿವಲಯದಲ್ಲಿ ಅಭಿಮಾನಿ ಗೆಳೆಯರನ್ನು ಸಂಪಾದಿಸುತ್ತಾರೆ.
ಇತ್ತ
ಮನೆಯಲ್ಲಿಯ ತಾಪತ್ರಯಕ್ಕೆ ಮಣಿದು ರಾಜ್ಯ ಸರಕಾರದ
ರೇಷ್ಮೆ ಇಲಾಖೆಯಲ್ಲಿ ನೌಕರಿಗೆ ಸೇರುತ್ತಾರೆ. ಅಲ್ಲಿಗೂ
ಅವರ ಮನಸ್ಸು ಏನೋ ಕಳೆದುಕೊಂಡಂತೆ
ಚಡಪಡಿಸುತ್ತಿರುವಾಗಲೇ, ಕೋಲಾರ ಜಿಲ್ಲೆಯಲ್ಲಿ ಸೇವೆಯಲ್ಲಿರುವಾಗ
ಮಾಸ್ತಿ ಕದಂಬ ರಂಗ ತಂಡವನ್ನು
ಸಂಘಟಿಸುತ್ತಾ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಪ್ರಮುಖ
ಪಾತ್ರದಲ್ಲಿ ಮಿಂಚುತ್ತಾರೆ. ನೌಕರಿಯ ದೆಸೆಯಿಂದ ಹಲವಾರು
ಕಡೆ ವರ್ಗಾವಣೆಯಾದಾಗ ಕೆಲವರು ಬೇಸರ ಮಾಡಿಕೊಳ್ಳುತ್ತಾರೆ
ಆದರೆ ಕಾಳೆಯವರು ಸಂತೋಷದಿಂದ ಹೊಸ ಊರಿನಲ್ಲಿ ಇನ್ನೊಂದು
ತಂಡ ಕಟ್ಟುವುದರೊಂದಿಗೆ ಅಲ್ಲಿ ಸಾಂಸ್ಕೃತಿಕ ಮನಸ್ಸುಗಳು
ಅರಳುವಂತೆ ಮಾಡಲು ವರ್ಗಾವಣೆಯಾದ ಸ್ಥಳಕ್ಕೆ
ತಕ್ಷಣವೇ ಹೋಗಿ ವರಧಿ ಮಾಡಿಕೊಳ್ಳುತ್ತಾರೆ.
ಹೀಗೆ ವರ್ಗಾವಣೆಯಾದಲ್ಲೆಲ್ಲ ಕಟ್ಟಿದ ತಂಡಗಳು, ರಂಗಸ್ನೇಹಿತರು
ಇಡೀ ರಾಜ್ಯದ ತುಂಬೆಲ್ಲಾ ಇವರಿಗಿದ್ದಾರೆಂದರೆ
ಅತಿಶಯೋಕ್ತಿಯೇನಲ್ಲ.
ಹಾಗೆ
ಹೋದಲ್ಲೆಲ್ಲ ಕಟ್ಟಿದ ಸಂಘ-ಸಂಸ್ಥೆಗಳಲ್ಲಿ
ಪ್ರಮುಖವಾದವುಗಳೆಂದರೆ ಭುವನೇಶ್ವರಿ ನಾಟ್ಯ ಸಂಘ, ಗಜಾನನ
ಮಿತ್ರ ಮಂಡಳಿ, ಕರುನಾಡ ಕಲಿಗಳು
ರಂಗ ತಂಡ ಹೀಗೆ ಹಲವಾರು.
ಅದರಂತೆ ಮಹಿಳಾ ಮಂಡಳಗಳನ್ನು ಸಹ
ಪ್ರೋತ್ಸಾಹಿಸುತ್ತಾ, ನಾಟಕಗಳನ್ನು ಕಲಿಸುತ್ತಾ, ರಂಗಪ್ರಯೋಗಳನ್ನು ಆಡಿಸುತ್ತಾ, ಬಡಮಕ್ಕಳಿಗೆ ಉಚಿತವಾಗಿ ಬಟ್ಟೆ-ಪುಸ್ತಕಗಳನ್ನು ವಿತರಣೆ,
ಸಾಮೂಹಿಕ ವಿವಾಹ ಸಂಘಟನೆ, ಉಚಿತ
ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ
ಶಿಬಿರ, ಉಚಿತ ನೇತ್ರ ತಪಾಸಣೆ
ಶಿಬಿರ ಮುಂದಾ ಸಮಾಜಮುಖಿ ಕೆಲಸಗಳಲ್ಲಿ
ತೊಡಗಿಸಿಕೊಂಡಿರುವುದು ಅವರಲ್ಲಿರುವ ಮಾನವೀಯ ಅಂತಃಕರಣವನ್ನು ತೋರಿಸುತ್ತದೆ.
ಇಲ್ಲಿಯವರೆಗೆ ಸುಮಾರು
ಲೆಕ್ಕವಿಲ್ಲದಷ್ಟು ಅಂದರೆ ಸರಿ ಸುಮಾರು
ನೂರು ನಾಟಕಗಳ ಹಲವಾರು ಪ್ರಯೋಗಗಳಲ್ಲಿ
ಅಭಿನಯಿಸುವುದರೊಂದಿಗೆ, ವಿವಿಧ ಭಾಷೆಯ ೩೭
ಧಾರಾವಾಹಿಗಳಲ್ಲಿ, ಹತ್ತಾರು ಕನ್ನಡ ಚಲನಚಿತ್ರಗಳು
ಮತ್ತು ಟೆಲಿಪಿಲಮ್ಗಳಲ್ಲಿ, ದಶಕಗಳಿಂದಲೂ ಮಿಕ್ಕಿ
ಆಕಾಶವಾಣಿ ನಾಟಕಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.
ಕೆಲವೊಂದು ವಿಶಿಷ್ಟವಾದ ಸಾಕ್ಷ್ಯ ಚಿತ್ರಗಳಿಗೆ ಧ್ವನಿ
ನೀಡಿದ್ದಾರೆ. ಹೀಗೆ ಕೇವಲ ಅಭಿನಯಿಸುತ್ತಾ
ತಾನೊಬ್ಬ ನಟನಾಗಿ ಮತ್ತು ಸಂಘಟಿಸುತ್ತಾ
ಸಂಘಟಕಾರನಾಗಿ ಉಳಿಯದೇ ಈಗಾಗಲೇ ಸುಮಾರು
ಹತ್ತು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಹಲವಾರು ಕಡೆಗಳಲ್ಲಿ ಇವರ
ಕಲಾಸೇವೆಗೆ ಮೆಚ್ಚಿ ಗೌರವ ಸನ್ಮಾನಗಳು
ಸಂದಿವೆ.
ಕೆಲವೆಡೆ
ರಂಗರತ್ನ, ರಂಗಸ್ನೇಹಿ ಮುಂತಾದ ಬಿರುದುಗಳನ್ನು ನೀಡಿ
ಗೌರವಿಸಿದ್ದಾರೆ ಎಂದು ವಿನಮ್ರವಾಗಿ ಹೇಳಿಕೊಳ್ಳುವ
ಚನಬಸಪ್ಪ ಕಾಳೆಯವರು ಈಗ್ಗೆ ನಾಲ್ಕು ವರ್ಷಗಳ
ಹಿಂದೆ ಸರಕಾರಿ ನೌಕರಿಗೆ ರಾಜೀನಾಮೆ
ನೀಡಿ ಸಂಪೂರ್ಣವಾಗಿ ಕಲಾಸೇವೆ ತಮ್ಮನ್ನು ತಾವು
ತೊಡಗಿಸಿಕೊಂಡಿದ್ದು ನಿರಂತರವಾಗಿ ಸಿನೇಮಾ-ಸಿರಿಯಲ್ಲು-ನಾಟಕ
ಎಂದು ಬಿಡುವಿಲ್ಲದೇ ತಿರುಗಾಡುತ್ತಿರುವುದು ಅವರ ಕಲಾಸಕ್ತಿಯನ್ನು ಸೂಚಿಸುತ್ತದೆ.
ಇಂತಹ ಕಲಾವಿದರು ಇತ್ತೀಚೆಗೆ ಧಾರವಾಡದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ
ಕಲಾಜೀವನದ ತಮ್ಮ ಅನುಭವಗಳನ್ನು ಹಂಚಿಕೊಂಡರು.
ನೌಕರಿಯಲ್ಲಿ ತಮಗೆ ಬಂದ ಪ್ರೋಮೊಷನ್
ಅನ್ನು ತಿರಸ್ಕರಿಸಿದ್ದು ಕಲಾಸೇವೆಗಾಗಿ ಎಂದು ನಿರ್ಬಾವುಕರಾಗಿ ಹೇಳಿಕೊಳ್ಳುವ
ಇವರು ಅದಕ್ಕೆ ಕಾರಣವನ್ನು ನೀಡುವುದು
ಹೀಗೆ : ಪ್ರೊಮೊಷನ್ ತಗೊಂಡ್ರ ಮ್ಯಾಲಿನ ಹುದ್ದೆಗೆ
ಹೋಗಬೇಕಾಗ್ತದ. ಆವಾಗ ಜವಾಬ್ದಾರಿ ಹೆಚ್ಚಾಗ್ತದ,
ಅಟೋಮೇಟಿಕ್ಕಾಗಿ ರಂಗಕಲಾಸಕ್ತಿ ಖಲಾಸ್ ಆಗ್ತದ, ಅದಕ್ಕ
ಮೊದಲಿಗೆ ಪ್ರೊಮೊಷನ್ ವಲ್ಲೆ ಅಂದ್ನಿ, ನಂತರ
ಪ್ರೊಮೊಷನ್ ತಗೊಳ್ಳಬೇಕು ಅಂದ್ರು, ಯೇ ನಾ
ನೌಕ್ರಿಗೆ ರಾಜೀನಾಮೆ ಕೊಡ್ತೇನ್ರಿ, ಊರ ಉಸಾಬರಿ ಮೈಮ್ಯಾಲ
ಹಾಕ್ಕೊಳ್ಳಾಕ ನಾ ಒಲ್ರೆಪಾ ಅಂದವನ
ರಾಜೀನಾಮೆ ಕೊಟ್ಟು ಈಗ ನಿರಮ್ಮಳ
ಆಗೀನಿ ನೋಡ್ರೀ’
ಎಂದು ಸರಕಾರದ ಹೆಚ್ಚಿನ ಸಂಬಳದ
ನೌಕರಿಗೆ ಶರಣು ಹೊಡೆದ ಮಹಾನುಭಾವರಿವರು.
ಕೋಟೆ,
ಮುತ್ತಿನಹನಿ, ತಿಂತಿಣಿ ಮೌನೇಶ್ವರ ಮುಂತಾದ
ಚಲನಚಿತ್ರಗಳಲ್ಲಿ ತಮ್ಮ ಪ್ರತಿಭೆ ತೋರಿದ್ದಾರೆ.
ಗೌಡ್ರಗದ್ಲ, ಕರಿಯಾ, ಜಗಜ್ಯೋತಿ ಬಸವೇಶ್ವರ
ನಾಟಕದಲ್ಲಿ ಎಲ್ಲಾ ಪ್ರಮುಖ ಪಾತ್ರ
ನಿರ್ವಹಣೆ, ರಕ್ತರಾತ್ರಿ ಮುಂತಾದ ನಾಟಕಗಳಲ್ಲಿ ತಮ್ಮ
ಕಂಚಿನ ಕಂಠದಿಂದ ಸದಾಕಾಲ ನೆನಪಿನಲ್ಲಿ
ಉಳಿಯುವಂತೆ ಛಾಪನ್ನೊತ್ತಿದ್ದಾರೆ. ಹಿರಿಯ ನಟ, ರಂಗಭೂಮಿಯ
ನಟಸಾಮ್ರಾಟನೆಂದು ಖ್ಯಾತನಾಮರಾಗಿದ್ದ ದಿವಂಗತ ಏಣಗಿ ನಟರಾಜ
ಅವರೊಂದಿಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿ,
ಅವರ ಪ್ರಭಾವಕ್ಕೊಳಗಾದ ಇವರು ಇತ್ತೀಚೆಗೆ ಅವರ
ಸ್ಮರಣಾರ್ಥ ನಟರಾಜ ಕಲಾ ಬಳಗ
ಎಂಬ ರಂಗತಂಡವನ್ನು ಹುಬ್ಬಳ್ಳಿಯಲ್ಲಿ ಕಟ್ಟಿದ್ದಾರೆ. ಅದರ ಮೂಲಕ ಹೊಸ
ತಲೆಮಾರಿನ ಯುವಕರಿಗೆ ರಂಗಭೂಮಿಯ ಕುರಿತು ಆಸಕ್ತಿ ಮೂಡುವಂತೆ
ಪ್ರಯತ್ನಿಸುತ್ತಿದ್ದಾರೆ.
ಹಲವಾರು
ರಂಗಕರ್ಮಿಗಳು, ರಂಗಾಸಕ್ತರು, ರಂಗಶಾಲೆಗಳು, ವೃತ್ತಿರಂಗಭೂಮಿಯ ಹಲವಾರು ಕಂಪನಿಗಳು, ಆ
ಕಂಪನಿಯ ಕಲಾವಿದರು ಮತ್ತು ನಾಡಿನ ಹವ್ಯಾಸಿ
ತಂಡಗಳೊಂದಿಗೆ ಸ್ನೇಹಜೀವಿಯಾಗಿರುವ ಇವರು ರಾಜ್ಯದ ಯಾವುದೇ
ಭಾಗದಿಂದಲೂ ನಾಟಕಕ್ಕೆ ಸಂಬಂಧಿಸಿದಂತೆ ಸಹಾಯ-ಸಹಕಾರ-ಅಭಿನಯ-ಸಂಘಟನೆ-ಕಲಾವಿದರ ಸರಬರಾಜು
ಮುಂತಾದ ಕೆಲಸಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸಂತಸದಿಂದಲೇ ನಿರ್ವಹಿಸುತ್ತಾರೆ.
ಇಂತಹ ಪ್ರತಿಭಾನ್ವಿತ ರಂಗಕರ್ಮಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ
ಸಿಕ್ಕರೆ ಖಂಡಿತ ಮುಂದಿನ ದಿನಗಳಲ್ಲಿ
ಅವರಿಂದ ಇನ್ನೂ ಹೆಚ್ಚಿನ ಸೇವೆ
ರಂಗಭೂಮಿಗೆ ಸಲ್ಲಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಅವರಿಗೆ ದೇವರು
ಹೆಚ್ಚಿನ ಆಯುರಾರೋಗ್ಯ-ಭಾಗ್ಯ-ಸಂಪತ್ತನ್ನು ಆ
ಕಲಾದೇವಿ ನೀಡಲಿ ಎಂದು ಹಾರೈಸುವುದು
ನಮ್ಮೆಲ್ಲರ ಮನದಾಳದ ಆಸೆಯೆಂದರೆ ತಪ್ಪೆನಲ್ಲ!.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ