ಸೋಮವಾರ, ಸೆಪ್ಟೆಂಬರ್ 2, 2013

ಕಾವಲಿಲ್ಲದ ಅಮೃತ ಮಹಲ್

 ಸೌಜನ್ಯ: ವಿಜಯ ಕರ್ನಾಟಕ

ಅಮೃತ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ? ಸಮುದ್ರಮಥನ ಹಾಗೂ ದೇವತೆಗಳ-ಅಸುರರ ನಡುವೆ ನಡೆದ ಯುದ್ದ ಈ ಅಮತವನ್ನು ಪಡೆಯುವುದಕ್ಕಾಗಿ. ಆದರೆ, ಇಂದು ರಾಜ್ಯದ ಬಯಲುಸೀಮೆಯ ಐತಿಹಾಸಿಕ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಅಮತ ಮಹಲ್ ಕಾವಲ್ ಅನ್ನು ಪಡೆಯಲು ಹೊಸ ಯುದ್ಧ ಪ್ರಾರಂಭವಾಗಿದೆ. ಇಲ್ಲಿ ದೇವತೆಗಳಾರು, ಅಸುರರು ಯಾರು ಎಂಬುದರ ಬಗ್ಗೆ ಖಚಿತವಾಗಿ ಹೇಳುವಂತಿಲ್ಲ. ಸರಕಾರದ ಕಪಾಪೋಷಿತ ಸಂಸ್ಥೆಗಳ ರಾಕ್ಷಸೀ ಪ್ರವತ್ತಿ ಪ್ರಬಲವಾಗಿ ಹೊರ ಹೊಮ್ಮುತ್ತಿದೆ. ಅವರ ವಿರುದ್ದ ದೇವತೆಗಳ ಬದಲು ದನಗಾಹಿಗಳು, ಜನಸಾಮಾನ್ಯರು, ಅಮತ್ ಮಹಲ್ ಕಾವಲ್‌ಗಳನ್ನು ಉಳಿಸಲು ಹೋರಾಟ ಮಾಡುತ್ತಿದ್ದಾರೆ.

ವಿಜಯನಗರ ಕಾಲದಿಂದಲೂ ಬಯಲುಸೀಮೆಯ ಬಿಸಿಲನ್ನೂ ಲೆಕ್ಕಿಸದೆ, ಗುಡ್ಡಗಾಡಿನ ಪ್ರದೇಶದಲ್ಲಿ ಸಂಚರಿಸಲು ಯೋಗ್ಯವಾದ ತಳಿಗಳೆಂದರೆ, ಅಮೃತ್ ಮಹಲ್ ಜಾತಿಗೆ ಸೇರಿದ ಎತ್ತುಗಳು. ಆಗ ಯುದ್ದದಲ್ಲಿ ಬಳಕೆಯಾಗುತ್ತಿದ್ದದ್ದು ಕುದುರೆಗಳು. ಆದರೆ, ಕುದುರೆಗಳಿಗಿಂತಲೂ ಉತ್ತಮವಾದ, ಸಶಕ್ತವಾದ ಈ ತಳಿಯನ್ನು ಬಳಸಿದ ಟಿಪ್ಪು ಸುಲ್ತಾನನಿಗೆ ಯುದ್ಧದಲ್ಲಿ ಗೆಲುವು ಸಾಧ್ಯವಾಯಿತು. ನಂತರ ಬಂದ ಬ್ರಿಟಿಷ್ ಅಧಿಕಾರಿಗಳೂ ಈ ತಳಿಗಳ ವಿಶಿಷ್ಟತೆಯನ್ನು ಅರಿತು ಅದರ ರಕ್ಷಣೆಗೆ ಮುಂದಾದರು. ಎರಡು ನೂರು ವರ್ಷಗಳ ಹಿಂದೆ ಅಂದರೆ, 1813ರಲ್ಲಿ ಬ್ರಿಟಿಷ್ ಅಧಿಕಾರಿ ಹಾರ್ವಿ ಅವರ ನೇತತ್ವದಲ್ಲಿ ಅಮತ್ ಮಹಲ್ ತಳಿಗಳ ರಕ್ಷಣೆಗಾಗಿ ಯೋಜನೆ ಜಾರಿಗೊಂಡು, ಅವುಗಳ ಸಂತತಿ ವದ್ಧಿಸಲು ಅನುಕೂಲ ಮಾಡಿಕೊಟ್ಟರು. ಈ ತಳಿಗಳನ್ನು ಅಭಿವೃದ್ಧಿ ಪಡಿಸಬೇಕಾದರೆ, ಅವುಗಳು ಮೇಯಲು ವಿಶಾಲವಾದ ಹುಲ್ಲುಗಾವಲು ಹಾಗೂ ಕೆರೆಗಳು ಅವಶ್ಯ. ಆ ಸ್ಥಳಗಳಲ್ಲಿ ಅಮೃತ ಮಹಲ್ ತಳಿಗಳ ಹಸು-ಕರುಗಳ ಮೇವಿಗೆ ಹೆಚ್ಚಿನ ಆದ್ಯತೆ. ನಂತರ ಇತರ ಜಾತಿಯ ತಳಿಗಳಿಗೆ ಅವಕಾಶ. ಹೀಗೆ, ಅಮೃತ ಮಹಲ್ ಹೆಸರಿನ ವಿಶಿಷ್ಟ ಜಾತಿಯ ಜಾನುವಾರು ತಳಿಗಾಗಿಯೇ ನೈಸರ್ಗಿಕ ಹುಲ್ಲುಗಾವಲನ್ನು ರಕ್ಷಿಸಿಟ್ಟ ಪ್ರದೇಶಗಳೇ 'ಅಮೃತ್ ಮಹಲ್ ಕಾವಲ್'. ಬಹುಶಃ, ಜಗತ್ತಿನ ಯಾವುದೇ ದೇಶದಲ್ಲಿ ಒಂದು ಜಾತಿಯ ಹಸುವಿನ ತಳಿಯ ರಕ್ಷಣೆಗಾಗಿ ಮೀಸಲಿಟ್ಟ ಬಹತ್ ಹುಲ್ಲುಗಾವಲು ಇದೊಂದೇ.

ಕರ್ನಾಟಕ ರಾಜ್ಯ ಸ್ಥಾಪನೆ ಆದಾಗ ಈ ಕಾವಲ್‌ಗಳ ಕ್ಷೇತ್ರ ನಾಲ್ಕು ಲಕ್ಷ ಎಕರೆ ಆಗಿತ್ತು. ಆದರೆ, ಅದು ಇಂದು ಕೇವಲ ಅರವತ್ತು ಸಾವಿರ ಎಕರೆಗೆ ಇಳಿದಿದೆ! ಆಂದರೆ, ಆರು ದಶಕಗಳಲ್ಲಿ ಮೂರು ಲಕ್ಷ ಎಕರೆ ಹುಲ್ಲುಗಾವಲನ್ನು ನಾಶ ಮಾಡಿದ ಖ್ಯಾತಿ ನಮ್ಮದು. ಅದರಲ್ಲೂ, ನಮ್ಮ ಹೆಮ್ಮೆಯ ತಳಿಯ ರಕ್ಷಣೆಯ ಬದಲಾಗಿ, ಮೂಕಪ್ರಾಣಿಯ ವಾಸಸ್ಥಾನವನ್ನು ಕಸಿದುಕೊಂಡು ಅವುಗಳಿಗೆ ಅನ್ಯಾಯ ಬಗೆದಿದ್ದೇವೆ. ಮೈಸೂರು, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ಹಾಸನ, ಮಂಡ್ಯ... ಹೀಗೆ ಹಲವಾರು ಜಿಲ್ಲೆಗಳಲ್ಲಿ ಹರಡಿದ್ದ ಕಾವಲ್‌ಗಳನ್ನು ನಾಶ ಮಾಡುವಲ್ಲಿ ನಾವು ಅಗಾಧ ಸಾಧನೆ ಮಾಡಿದ್ದೇವೆ. ಈ ವಿನಾಶಕ್ಕೆ ರಾಜ್ಯ ಸರಕಾರ ಅನುವು ಮಾಡಿಕೊಟ್ಟಿದೆ. ಅರಣ್ಯ ಇಲಾಖೆ ಈ ಹುಲ್ಲುಗಾವಲಿನ ಮಹತ್ವವನ್ನು ಅರಿಯದೆ, ಅಲ್ಲಿ ಒಂದೇ ಜಾತಿಯ ನೀಲಗಿರಿ ನಡುತೋಪಿನ ನಿರ್ಮಾಣ ಮಾಡುವ ಮೂಲಕ ಸಾವಿರಾರು ಎಕರೆ ಕಾವಲ್‌ಗಳ ನಾಶಕ್ಕೆ ನಾಂದಿ ಹಾಡಿತು. ಹೀಗೆ, ಒತ್ತಡದ ಮಧ್ಯೆಯೂ ಉಳಿದಿರುವ ಅರವತ್ತು ಸಾವಿರ ಎಕರೆ ಪ್ರದೇಶದ ಮೇಲೆ ಈಗ ಸರಕಾರ ಹಾಗೂ ಅಸುರರ ಕಣ್ಣು ಬಿದ್ದಿದೆ.

2007ರಲ್ಲಿ ಇಲ್ಲಿನ ಸಂಸತ್ ಸದಸ್ಯರು ರಕ್ಷಣಾ ಸಚಿವರಿಗೆ ಪತ್ರ ಬರೆದು, ಕಾವಲ್‌ಗಳು ಪಾಳುಬಿದ್ದ ಸ್ಥಳವಾಗಿದ್ದು, ಚಾಲಕರಹಿತ ವಿಮಾನ ಅಭಿವೃದ್ಧಿಪಡಿಸಲು ಸೂಕ್ತವಾದ ಸ್ಥಳವಿದು ಎಂದು ನಂಬಿಸಿದರು. ಜನರನ್ನು ಒಕ್ಕಲೆಬ್ಬಿಸುವ ಪ್ರಶ್ನೆ ಇಲ್ಲ, ಕಷಿಗೆ ಬಾರದ ಬಂಜರು ಭೂಮಿ ಆಗಿದ್ದು ಪರಿಹಾರ ನೀಡಬೇಕಾದ ಸಮಸ್ಯೆಯೂ ಉದ್ಭವಿಸದು. ಆದುದರಿಂದ ಇದನ್ನು ರಕ್ಷಣಾ ಇಲಾಖೆಯ ನೆಲೆಯಾಗಿ ಮಾಡಲು ಸೂಕ್ತ ಸ್ಥಳ ಎಂದು ಬಿಂಬಿಸಿದರು. ಆದರೆ, ಸ್ಥಳೀಯ ಜಿಲ್ಲಾಧಿಕಾರಿಗಳ ಹಾಗೂ ಸಂಸದರ ಸಹಾಯದಿಂದ ಹತ್ತು ಸಾವಿರ ಎಕರೆ ಪ್ರದೇಶವನ್ನು ನೀಡುವ ಯೋಜನೆ ಸಿದ್ಧಪಡಿಸಿ ಅದನ್ನು ರಾಜ್ಯ ಸರಕಾರಕ್ಕೆ ರವಾನಿಸಿ ಅನುಮತಿ ಪಡೆದರು. ದೇಶದ ಸುರಕ್ಷತೆಗಾಗಿ ಭೂಮಿ ಪಡೆಯುವುದು ಸುಲಭ. ಇದರ ಅಡಿಯಲ್ಲಿ ಇತರ ಸರಕಾರಿ ಹಾಗೂ ಭೂ ಮಾಫಿಯಾ ಲಾಬಿಯೂ ಕೈ ಜೋಡಿಸಿತು. ರಕ್ಷಣಾ ಇಲಾಖೆಯ ಜತೆಗೆ ಭಾರತೀಯ ವಿಜ್ಞಾನ ಸಂಸ್ಥೆ, ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಅಣು ವಿಜ್ಞಾನ ಸಂಸ್ಥೆ... ಹೀಗೆ ಸರಕಾರಿ ಸಂಸ್ಥೆಗಳು ಹಾಗೂ ಖಾಸಗಿ ಕಂಪನಿ 'ಸಾಗಿತಾರ'ಗೂ 1,250 ಎಕರೆಯನ್ನು ಸೌರಶಕ್ತಿ ಘಟಕಗಳನ್ನು ಸ್ಥಾಪಿಸಲು ನೀಡಲಾಗಿದೆ. ಸ್ಥಳಿಯ ಜನರ ಅರಿವಿಗೆ ಬರುವ ಮುಂಚೆಯೇ ಇದನ್ನು ಪರಭಾರೆ ಮಾಡಲಾಗಿತ್ತು. ಈಗಾಗಲೇ, ಶೇಕಡ 90ರಷ್ಟು ಕಾವಲ್ ಮಾಯವಾಗಿರುವಾಗ ಚಳ್ಳಕೆರೆಯಲ್ಲಿನ ಕಾವಲ್ ಬಗ್ಗೆ ನಾವ್ಯಾಕೆ ಚಿಂತಿಸಬೇಕು? ಇದರಿಂದ ಅಂತಹ ಗಂಭೀರ ಪರಿಣಾಮ ಉಂಟಾಗುವುದೇ? ಈ ಬರಡು ಹುಲ್ಲುಗಾವಲಿನ ಮೇಲೆ ಜನರಿಗೇಕೆ ವ್ಯಾಮೋಹ? ಚಳ್ಳಕೆರೆಯನ್ನು ಇಡೀ ಜಗತ್ತಿನಲ್ಲೇ ಹೆಸರುವಾಸಿ ತಾಣವನ್ನಾಗಿ ಮಾಡುವ ಈ ಸಂಸ್ಥೆಗಳ ಕನಸನ್ನು ಸ್ಥಳೀಯ ಜನರು ಏಕೆ ಭಗ್ನಗೊಳಿಸಲು ಪ್ರಯತ್ನಿಸುತ್ತಿದ್ದಾರೆ...ಮುಂತಾದ ಪ್ರಶ್ನೆಗಳನ್ನು ಕೇಳುವವರಿದ್ದಾರೆ.

ಈ ಕಾವಲ್‌ಗಳು ವಿಶಿಷ್ಟವಾದದ್ದು. ನಾವು ಹೇಗೆ ಮಲೆನಾಡಿನ ಕಾಡಿಗೆ ಮಹತ್ವ ನೀಡುತ್ತೇವೆಯೋ ಅದೇ ರೀತಿ ಬಯಲುಸೀಮೆಯ ಹುಲ್ಲುಗಾವಲುಗಳೂ ಅಷ್ಟೇ ಪ್ರಮಾಣದಲ್ಲಿ ವಿಶಿಷ್ಟ ಹಾಗೂ ಮಹತ್ವವಾದವು. ಆದರೆ, ಅಧಿಕಾರಿಗಳ, ರಾಜಕಾರಣಿಗಳ ಕಣ್ಣಿಗೆ ಈ ವಿಶಿಷ್ಟತೆ ಕಾಣುವುದಿಲ್ಲ. ಅವರಿಗೆ ಇಲ್ಲಿ 'ಭೂಮಿ ತಾಯಿಯ' ದರ್ಶನ ಆಗುವುದಿಲ್ಲ. ಹಾಗಾಗಿಯೇ, ಇದನ್ನು ನಾಶಪಡಿಸಿ ಹೊಸ ಸ್ಥಾವರಗಳನ್ನು ಕಟ್ಟಿ 'ಅಭಿವೃದ್ಧಿ' ತರುವ ಪ್ರಯತ್ನ ನಡೆಸಿದ್ದಾರೆ. ಎಕರೆಗೆ ಮೂವತ್ತರಿಂದ ಮೂವತ್ತೈದು ಸಾವಿರ ರೂಪಾಯಿಗೆ ಈ ಹುಲ್ಲುಗಾವಲನ್ನು ಮಾರಾಟ ಮಾಡಲಾಗಿದೆ. ದೇಶದ ಹೆಸರಾಂತ ವೈಜ್ಞಾನಿಕ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ವಿಜ್ಞಾನ ಸಂಸ್ಥೆಯು ಮಾಧವ ಗಾಡ್ಗೀಳ್‌ರಂತಹ ಪರಿಸರ ವಿಜ್ಞಾನಿಗಳ ಆಶ್ರಯ ತಾಣ. ಅಲ್ಲಿನ ಪರಿಸರ ಕೇಂದ್ರ ಜಾಗತಿಕ ಮಟ್ಟದಲ್ಲಿ ಹೆಸರುವಾಸಿ. ಹೀಗಿರುವಾಗ, ಅವರಿಗೂ ಅಮೃತ ಮಹಲ್ ಕಾವಲ್ ಹುಲ್ಲುಗಾವಲಿನ ಮಹತ್ವ ಅರಿವಾಗದೇ ಇರುವುದು ಅಚ್ಚರಿ ಹುಟ್ಟಿಸುತ್ತದೆ ಅಥವಾ ಇದರ ಅರಿವಿದ್ದೂ ಜಾಣ ಮೌನ ತಾಳಿರಬಹುದು.

ಈ ಹುಲ್ಲುಗಾವಲು ಹಸುಗಳ ತಳಿಗಳ ಜತೆಗೆ ಸಾವಿರಾರು ಪಶುಗಳಿಗೆ ಆಶ್ರಯತಾಣ. ಸಮಾಜದ ಹಿಂದುಳಿದ ಗುಂಪುಗಳಾದ ಕುರುಬ ಹಾಗೂ ದನಗಾಹಿಗಳಿಗೆ ಆಶ್ರಯ ನೀಡುವ ಸಾಮೂಹಿಕ ಸಂಪತ್ತು ಇದಾಗಿದೆ. ಬಯಲುಸೀಮೆಯ ಬರವನ್ನು ಹಿಮ್ಮೆಟ್ಟಿ ಬದುಕಬೇಕಾದರೆ ಇಂತಹ ವಿಶಾಲವಾದ ಹುಲ್ಲುಗಾವಲು ಅತಿ ಅವಶ್ಯ. ಬಯಲುಸೀಮೆಯಲ್ಲಿ ಮಾತ್ರ ಲಭ್ಯವಿರುವ ಅಪರೂಪದ ಔಷಧೀಯ ಗಿಡಗಳು ಇಲ್ಲಿ ಲಭ್ಯ. ಬಸ್ಪಡ್ ಹಕ್ಕಿ ಹಾಗೂ ಕಷ್ಣಮಗಗಳ ವಾಸಸ್ಥಾನ ಇದು. ಇಂತಹ ಅಪರೂಪದ ತಾಣದ ಬಗ್ಗೆ ರಾಜ್ಯದ ಪರಿಸರ ಇಲಾಖೆಗೆ ಯಾವ ರೀತಿಯ ಅರಿವೂ ಇಲ್ಲ. ರಕ್ಷಣಾ ಮತ್ತು ಅಣುಶಕ್ತಿ ಇಲಾಖೆ ಘಟಕಗಳು ಬಂದರೆ ಈ ಪ್ರದೇಶದ ಸೂಕ್ಷ್ಮ ಪರಿಸರ ಸಂಪೂರ್ಣ ನಾಶವಾಗುವುದು ಖಚಿತ.

ಇದನ್ನು ಕಾಪಾಡಲು ಸ್ಥಳೀಯ ಜನರ ಜತೆಗೂಡಿ ಹೋರಾಡುತ್ತಿರುವ ಬೆಂಗಳೂರಿನ ಪರಿಸರ ಬೆಂಬಲಿಗರ ಗುಂಪು, ಈ ಕುರಿತು ರಾಷ್ಟ್ರೀಯ ಹಸಿರು ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದೆ. ಪೀಠವು ತಜ್ಞರ ತಂಡ ಕಳುಹಿಸಿ ವರದಿ ತರಿಸಿಕೊಂಡಿದೆ. ಆದರೆ, ಈ ತಜ್ಞರಿಗೂ ಸಹ ಅಮತ ಮಹಲ್ ಕಾವಲ್‌ನ ಸೂಕ್ಷ್ಮ ಪರಿಸರದ ಅರಿವಾಗಲಿಲ್ಲ. ರಾಜ್ಯ ಹಾಗೂ ಕೇಂದ್ರ ಸರಕಾರದ ಪರಿಸರ ಕಾನೂನನ್ನು ಉಲ್ಲಂಘಿಸಿ, ಸರಕಾರದ ಅನುಮತಿ ಪಡೆಯದೆ ಈ ಪ್ರದೇಶದಲ್ಲಿ ತಂತಿ ಬೇಲಿ ಹಾಕಿ, ತಮ್ಮ ಹಕ್ಕನ್ನು ಸ್ಥಾಪಿಸಲು ಹೊರಟಿರುವುದನ್ನು ಹಸಿರು ಪೀಠ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಬರಗಾಲದ ಬೇಗೆಯನ್ನು ತಣಿಸಬಲ್ಲ ಅಮೃತವನ್ನೇ ಬಲಿಕೊಟ್ಟು ಈ ಕಾವಲ್‌ಗಳನ್ನು ನಾಶಪಡಿಸುವ ಯೋಜನೆಗಳು ಪರಿಸರ ವಿರೋಧಿ ಮಾತ್ರವಲ್ಲ; ಸ್ಥಳೀಯ ಜನ, ಜಾನುವಾರುಗಳ ಉಳಿವಿಗೆ ಕಂಟಕಪ್ರಾಯ. ಇವು ನಮ್ಮ ಪ್ರಾಕತಿಕ ಪರಂಪರೆಯ ತಾಣ ಎಂಬುದು ಸಿದ್ದರಾಮಯ್ಯನವರಿಗೆ ಅರ್ಥವಾಗಬೇಕಿತ್ತು ಅಥವಾ ಮುಖ್ಯಮಂತ್ರಿಗಳಾದ ನಂತರ ತಮ್ಮ ಸಂಸ್ಕೃತಿಯ ಮೂಲ ಬೇರನ್ನೆ ತುಂಡರಿಸಿ ಈ ಕಾವಲ್‌ನ ಅಮತವನ್ನು ವಿಷವಾಗಿಸುವ ವಿನಾಶಕಾರಿ ಯೋಜನೆಗಳನ್ನು ಅನುಮೊದಿಸುವರೇ?

ಕಾಮೆಂಟ್‌ಗಳಿಲ್ಲ: