ಬುಧವಾರ, ಸೆಪ್ಟೆಂಬರ್ 18, 2013

ಬೀಧಿ ನಾಟಕದ ಕಲಾವಿದ ವಿಲಾಸ ಶೇರಖಾನ ಜತೆ ಹಿಪ್ಪರಗಿ ಮಾತುಕತೆ

-ಸಿದ್ದರಾಮ ಹಿಪ್ಪರಗಿ,ಧಾರವಾಡ.

     ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣಮಹೋತ್ಸವದ (೧೯೯೯) ಸಂದರ್ಭದಲ್ಲಿ ಕಾರ್ನಾಡರ ’ತುಘಲಕ್’ ನಾಟಕದ ಪ್ರದರ್ಶನವನ್ನು ಗಾಂಧಿಭವನದಲ್ಲಿ ಧಾರವಾಡದ ರಂಗಕರ್ಮಿ ದಿ.ದೇವಪ್ಪ ನಾಯಕ ನಿರ್ದೇಶನದಲ್ಲಿ ಹೊಸ ಕಲಾವಿದರಿಂದ ಪ್ರಯೋಗ ನಡೆದಿರುವಾಗ ಪ್ರಮುಖ ಪಾತ್ರಧಾರಿಗೆ ಬೆಳಕು ಇರುವ ಕಡೆಗೆ ಅಭಿನಯಿಸಬೇಕೆನ್ನುವುದು ಗೊತ್ತಿರಲಿಲ್ಲವಾದ್ದರಿಂದ ಆ ಪಾತ್ರದ ಮೇಲೆ ಬೆಳಕು ಸರಿಯಾಗಿ ಬಿದ್ದಿರಲಿಲ್ಲ. ನೇಪಥ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವರಂಗಕರ್ಮಿಯೋರ್ವ ತನ್ನ ಸಮಯ ಪ್ರಜ್ಞೆಯಿಂದ ಬಿಸಿಯಾಗಿರುವ ದೊಡ್ಡಗಾತ್ರದ ಸ್ಪಾಟ್‌ಲೈಟ್‌ನ್ನು ದೃಶ್ಯ ಮುಗಿಯುವವರೆಗೂ ಸರಿಸುಮಾರು ಇಪ್ಪತೈದು ನಿಮಿಷಗಳ ಕಾಲ ಹಿಡಿದುಕೊಂಡು ಆ ಪಾತ್ರಕ್ಕೆ ಬೆಳಕು ಬೀಳುವಂತೆ ಮಾಡಿದ್ದು, ಅದರ ಶಾಖದ ತೀವ್ರತೆಯಿಂದ ಮರುದಿನ ಊಟಮಾಡಲಿಕ್ಕೆ ಬರದಂತೆ ಬೊಬ್ಬೆಗಳೆದ್ದು ಮನೆಯಲ್ಲಿ ಮಹಾ-ಮಂಗಳಾರತಿ ಮಾಡಿಸಿಕೊಂಡಿದ್ದನು.

   ಅದು ೨೦೦೩ರ ಕಾಲ, ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಗ್ರಾಮೀಣ ಭಾಗದ ಜನರಿಗೆ ಒದಗಿಸುವ ಸೌಕರ್ಯ-ಸವಲತ್ತುಗಳ ಕುರಿತು ರಾಜ್ಯಾದಾದ್ಯಂತ ಜನರಿಗೆ ತಿಳಿಸುವ ಸಲುವಾಗಿ ಮಾಧ್ಯಮವಾಗಿ ಬೀಧಿ ನಾಟಕ, ಭಿತ್ತಿ ಚಿತ್ರಗಳ ಮೂಲಕ ಪ್ರಚಾರ ಪಡಿಸುತ್ತಿತ್ತು. ಅದರಂತೆ ಆಯಾ ಜಿಲ್ಲೆಯ ಕಲಾವಿದರು ಇಂತಹ ಮಹತ್ವದ ಜನೋಪಯೋಗಿ, ಜನಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರೊಂದಿಗೆ, ಬೀದಿ ನಾಟಕ ಪ್ರದರ್ಶನಗಳ ಮೂಲಕ ಸರಕಾರದ ಯೋಜನೆಗಳ ಅನುಷ್ಟಾನದಲ್ಲಿ ಸಹಕರಿಸುತ್ತಿದ್ದರು. ಹೀಗಿರುವಾಗ ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ ಕಲಾವಿದರ ತಂಡವೊಂದು ಸರಕಾರದ ಯೋಜನೆಗಳ ಮಾಹಿತಿಯನ್ನು ಬೀದಿ ನಾಟಕದ ಮೂಲಕ ತಮ್ಮ ಗ್ರಾಮದಲ್ಲಿ ಪ್ರದರ್ಶಿಸುವ ಸುದ್ಧಿಯು ಆ ಊರಿನ ಕೆಲವರಿಗೆ ತಿಳಿಯುತ್ತದೆ. ತಪ್ಪಾಗಿ ಭಾವಿಸಿಕೊಂಡ ಆ ಊರಿನ ಕೆಲವರು ತಮ್ಮೂರಿನಲ್ಲಿಯ ದಲಿತರನ್ನು ತಮ್ಮ ವಿರುದ್ಧವೇ ಎತ್ತಿ ಕಟ್ಟುವ, ದಲಿತರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಕುರಿತು ತಿಳಿಹೇಳಿ, ತಮಗಿಂತಲೂ ದಲಿತರು ಬಲಾಢ್ಯರಾಗಲು ಪ್ರಚೋಧಿಸುವ ನಾಟಕದ ಪ್ರದರ್ಶನವಾಗಬಾರದೆಂದು ಗ್ರಾಮದಲ್ಲಿ ವಿದ್ಯುಚ್ಛಕ್ತಿ ತೆಗೆಸಿ, ಸೆಗಣಿ-ಹಸಿರಾಡಿ-ಕೊಳಚೆ ನೀರು-ಉಸುಕನ್ನು ಹಾಕಿ ನಾಟಕ ಪ್ರದರ್ಶನಕ್ಕೆ ತಡೆಯೊಡ್ಡುತ್ತಾರೆ. 

   ಜೆನರೆಟರ್ ಲಾಕ್ ಮಾಡಿಸಿ, ಕಲಾವಿದರಿಗೆ ಜೀವ ಬೆದರಿಕೆಯನ್ನು ಹಾಕುತ್ತಾರೆ. ತಂಡದಲ್ಲಿದ್ದ ಕಲಾವಿದನೋರ್ವನ ಸಮಯಪ್ರಜ್ಞೆಯಿಂದ ಗ್ರಾಮದ ಮುಖಂಡರು, ಸರಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ತಾವು ಹತ್ತಿ ಬಂದಿದ್ದ ವಾಹನದ ಹೆಡ್ ಲೈಟ್ ಬೆಳಕಿನಲ್ಲಿ ಗ್ರಾಮಸ್ಥರೆಲ್ಲರೂ ಬೆಕ್ಕಸ ಬೆರಗಾಗುವಂತಹ ಮಾಹಿತಿ ಪೂರ್ಣ ನಾಟಕವನ್ನು ನೋಡಿದ ನಂತರ ಕಲಾವಿದರೆಲ್ಲರಿಗೂ ರಾತ್ರಿ ಭೋಜನವನ್ನು ಅದೇ ಊರಿನ ಪಂಚಾಯಿತಿಯಲ್ಲಿ ಏರ್ಪಡಿಸುತ್ತಾರೆ. ಇದನ್ನೆಲ್ಲಾ ಅರಿತುಕೊಂಡ ನಂತರ ತಾವು ತಪ್ಪಾಗಿ ಭಾವಿಸಿಕೊಂಡು, ಪ್ರದರ್ಶನಕ್ಕೆ ತಡೆಯುಂಟು ಮಾಡಿದ ಆ ಗ್ರಾಮದವರು ಬಂದು ಆ ಕಾರ್ಯಕ್ರಮ ನಿರ್ವಹಿಸಿದ ಯುವಕಲಾವಿದನಿಗೆ ಕ್ಷಮೆಯಾಚಿಸುತ್ತಾರೆ.

  ಆತ್ಮೀಯರೇ, ಅಖಂಡ ಇಪ್ಪತ್ತಾರು ವರುಷಗಳ ರಂಗಭೂಮಿಯ ಅನುಭವದಲ್ಲಿ ಇಂತಹ ಹಲವಾರು ಘಟನೆಗಳಿಗೆ ಸಾಕ್ಷಿಯಾಗಿರುವ ಕಲಾವಿದ, ರಂಗಕರ್ಮಿ, ಶಿಬಿರಗಳ ಸಂಚಾಲಕ, ನಿರ್ವಾಹಕ, ನೇಪಥ್ಯದಲ್ಲಿ ತಂತ್ರಜ್ಞನಾಗಿ, ಪೋಸ್ಟರ್ ಹಚ್ಚುವ, ಪಾಂಪ್ಲೆಂಟ್ ಹಂಚುವ, ಪತ್ರಿಕಾ ಕಚೇರಿಗಳಿಗೆ ರಂಗಸುದ್ಧಿ ನೀಡುವ ಹೀಗೆ ಹಲವಾರು ಕೆಲಸಗಳನ್ನು ಪ್ರೀತಿಯಿಂದ ಒಟ್ಟೊಟ್ಟಿಗೆ ನಿರ್ವಹಿಸುವ, ಎಂದಿಗೂ ಬೇಸರಿಕೊಳ್ಳದ, ತಾಳ್ಮೆಯೇ ಮೈವೆತ್ತಂತಿರುವ ಹಾಗೆಯೇ ರಂಗಭೂಮಿಯಿಂದ ಯಾವುದನ್ನೂ ಅಪೇಕ್ಷಿಸದ, ನಿರ್ಲಿಪ್ತ ಜೀವಿಯೊಬ್ಬರು ಕರುನಾಡಿನ ಧಾರವಾಡದಲ್ಲಿದ್ದಾರೆ. ಹಂಗಂತ ಆ ರಂಗಾಸಕ್ತ, ರಂಗಕರ್ಮಿ ವಯೋವೃದ್ಧನು ಅಲ್ಲ ; ಬಾರೀ ಬುದ್ಧಿಜೀವಿಗಳಂತೆ (ಜೀನ್ಸ್+ಜುಬ್ಬಾ ಧರಿಸಿ) ಪೋಜು ಕೊಡುವವನು ಅಲ್ಲ ; ಅಂತಹ ಸುದ್ಧಿಜೀವಿಗಳ ಸಹವಾಸದಲ್ಲಿದ್ದೂ ತನ್ನತನವನ್ನು ಕಳೆದುಕೊಳ್ಳದೇ ಸದಾ ತನ್ಮಯತೆಯಲ್ಲಿಯೇ ಶಾಂತನಾಗಿ, ಇಂದಿಗೂ ಸೈಕಲ್‌ನ ಪೆಡಲ್ ತುಳಿಯುತ್ತಾ ರಂಗಸಂಘಟನೆ, ರಂಗಚಟುವಟಿಕೆ, ರಂಗಜಾಗೃತಿ ಹೀಗೆ ರಂಗಭೂಮಿಯ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಾರಿಗೂ ನೋವಾಗದಂತೆ ಎಚ್ಚರಿಕೆ ನಡೆಯ ಸೂಕ್ಷ್ಮ ಮತ್ತು ಮೃದು ಮಾತಿನ ಸ್ನೇಹ ಜೀವಿ. 

 ಇತ್ತೀಚೆಗೆ ಈ ಕಲಾವಿದ ಸಮುಧಾಯ, ಹುಬ್ಬಳ್ಳಿ-ಧಾರವಾಡ ಘಟಕದ ಅವಿಭಾಜ್ಯ ಅಂಗವೆನ್ನುವಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸುತ್ತಿರುವುದರಿಂದ ಅವಳಿ ನಗರದ ಅಷ್ಟೇ ಏಕೆ ರಾಜ್ಯಮಟ್ಟದ ಅಧ್ಯಕ್ಷರು  (ಪ್ರೊ.ಆರ್.ಕೆ.ಹುಡಗಿ) ಸಹ ಈ ಕಲಾವಿದನಿಗೆ ಆತ್ಮೀಯವಾಗಿದ್ದಾರೆ. ಇಂತಹ ಅಪರೂಪದ ಕಲಾವಿದ ಬೇರೆ ಯಾರೂ ಅಲ್ಲ, ಗಡಿನಾಡಿನ ಯಕ್ಷಂಭಾ ಮೂಲದಿಂದ ಬಂದು ಧಾರವಾಡದ ರಂಗಭೂಮಿಯಲ್ಲಿ ತನ್ನ ಛಾಪನ್ನು ಮೂಡಿಸಿರುವ ಶ್ರೀ ವಿಲಾಸ ಮಾರುತಿ ಶೇರಖಾನ.

ಶ್ರೀಯುತ ವಿಲಾಸ ಶೇರಖಾನ (ಜನನ: ೨೨-೦೭-೧೯೬೫) ಮೂಲತಃ ಗಡಿನಾಡಿನ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕನ್ನಡ ಕಲರವ ವಾತಾವರಣದ ಯಕ್ಷಂಭಾ ಊರಿನವರು. ಕಳೆದ ಶತಮಾನದ ೭೦ರ ದಶಕದಲ್ಲಿ ಧಾರವಾಡಕ್ಕೆ ಸ್ಥಳಾಂತರಗೊಳ್ಳುವ ಅವರ ಬಡ ಕುಟುಂಬವು (ತಂದೆ: ಮಾರುತಿ, ಕುಸ್ತಿಪಟು, ಸಮಾಜ ಸೇವಕ. ತಾಯಿ: ಯಮನವ್ವ, ಜಾನಪದ ಕಲಾವಿದೆ) ಧಾರವಾಡದ ಕೊಂಡವಾಡ ಓಣಿಯಲ್ಲಿ (ಈಗಿನ ಶಿವಾಜಿ ಸರ್ಕಲ್ ಹತ್ತಿರ) ವಾಸಿಸಲು ಆರಂಭಿಸುತ್ತದೆ. ಮುಂದೆ ರಂಗಭೂಮಿಯ ಆಕರ್ಷಣೆಯಿಂದ, ಆಸಕ್ತಿ ಬೆಳೆಸಿಕೊಳ್ಳುತ್ತಾ ಇಂದು ಶ್ರೀಯುತ ವಿಲಾಸ ಶೇರಖಾನ (ಮೊಬೈಲ್ : ೯೯೦೨೮ ೨೦೬೩೩) ಅವರು ರಾಜ್ಯಮಟ್ಟದ ಸಂಘಟನೆಯೊಂದರ ಪಧಾಧಿಕಾರಿಯಾಗುವ ಹಂತದವರೆಗೆ ಬೆಳೆಯುತ್ತಾರೆ. ಇವರ ರಂಗಸೇವೆಯನ್ನು ಗಮನಿಸಿ ರಾಜ್ಯದ ಹಲವಾರು ಸಂಘ-ಸಂಸ್ಥೆಗಳು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸುತ್ತವೆ. ಇಂತಹ ರಂಗಸಂಘಟಕರನ್ನು, ಅವರ ರಂಗಜೀವನದ ಹಲವಾರು ಘಟನೆಗಳನ್ನು ಅವರಿಂದಲೇ ಕೇಳೋಣ.

    ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಘಟಕಗಳನ್ನು ಹೊಂದಿರುವ ಸಮುಧಾಯ (ಕಲೆಗಾಗಿ ಕಲೆಯಲ್ಲ ; ಬದುಕಿಗಾಗಿ ಕಲೆ ಎಂಬ ಧ್ಯೇಯವಾಕ್ಯ ಹೊಂದಿರುವ ಸಂಘಟನೆ), ಇಪ್ಟಾದಂತಹ ಸಂಘಟನೆಗಳಲ್ಲಿ ಸುಮಾರು ಇಪ್ಪತ್ತೈದು ವರುಷಗಳಿಂದ ತೊಡಗಿಸಿಕೊಂಡಿದ್ದೀರಿ. ಅದರಂತೆ ಹುಬ್ಬಳ್ಳಿ-ಧಾರವಾಡದ ಎಲ್ಲಾ ರಂಗತಂಡಗಳೊಂದಿಗೆ ಸ್ನೇಹ-ಸಹಕಾರದೊಂದಿಗೆ ಇರುವ ನಿಮಗೆ ರಂಗಭೂಮಿಯೆಡೆಗೆ ಆಕರ್ಷಣೆ ಹೇಗಾಯಿತು ?

ವಿಲಾಸ ಶೇರಖಾನ : ಸರ್, ನನ್ನ ಬಾಲ್ಯದ ಆರಂಭದ ದಿನಗಳಲ್ಲಿ ಬಡತನದ ಕಾರಣದಿಂದ ನಮ್ಮ ಕುಟುಂಬ ೭೦ದಶಕದ ಆರಂಭದಲ್ಲಿ ಬೆಳಗಾವಿ ಜಿಲ್ಲೆಯ ಯಕ್ಷಂಭಾದಿಂದ ಧಾರವಾಡಕ್ಕೆ ಸ್ಥಳಾಂತರಗೊಂಡಾಗ, ಧಾರವಾಡದಲ್ಲಿ ಆಗ ಕಂಪನಿ ನಾಟಕಗಳ ಕ್ಯಾಂಪ್ ನಿರಂತರವಾಗಿ ಇರುತ್ತಿತ್ತು. ಅಂತಹ ಸಂದರ್ಭದಲ್ಲಿ ಧಾರವಾಡದಲ್ಲಿ ಈಗಿರುವ ಶಿವಾಜಿ ಸರ್ಕಲ್ ಹತ್ತಿರವಿರುವ ಭಾರತ ಹೈಸ್ಕೂಲಿನ ಮೈಧಾನದಲ್ಲಿ ಎಸ್.ಎಲ್.ಎನ್. ಡ್ರಾಮಾ ಥೇಟರ್‌ದಲ್ಲಿ ಹೆಸರಾಂತ ಕಂಪನಿಗಳಾದ ಗುಡಗೇರಿ ಎನ್.ಬಸವರಾಜ್ (ಸಂಗಮೇಶ್ವರ ನಾಟ್ಯ ಸಂಘ) ಕಂಪನಿ, ಗೋಕಾಕ (ಶಾರದಾ ನಾಟಕ ಮಂಡಳಿ) ಕಂಪನಿ, ಚಿಂದೋಡಿ ಲೀಲಮ್ಮನವರ ಕಂಪನಿ (ಕೆ.ಬಿ.ಆರ್.ಡ್ರಾಮಾ ಕಂಪನಿ) ಹೀಗೆ ಹಲವಾರು ಕಂಪನಿಯವರು ಕ್ಯಾಂಪ್ ಮಾಡುತ್ತಿದ್ದರು. ಇನ್ನೊಂದೆಡೆ ಬಾಲ್ಯದಲ್ಲಿ ಮನೆಯಲ್ಲಿ ಬಡತನವಿದ್ದುರಿಂದ, ಶಾಲಾ ಸಮಯದ ಬಿಡುವಿನ ವೇಳೆಯಲ್ಲಿ ನಾವು ವಾಸಿಸುತ್ತಿದ್ದ ಓಣಿಯಲ್ಲಿಯ ಎಮ್ಮೆ ಹಾಲನ್ನು ತೆಗೆದುಕೊಂಡು ಬೆಳಿಗ್ಗೆ ನಾಟಕ ಕಂಪನಿಯ ಬೋರ್ಡಿಂಗ್‌ಗೆ ಕೊಟ್ಟು ಬರುವ ಕೆಲಸ ಮಾಡಿದರೆ ನನಗೆ ಬಿಡಿಗಾಸಿನ ಕೂಲಿಯನ್ನು ಎಮ್ಮೆಗಳ ಮಾಲೀಕರು ಕೊಡುತ್ತಿದ್ದರು. 

ಹಾಗೆ ಎಮ್ಮೆ ಹಾಲನ್ನು ತೆಗೆದುಕೊಳ್ಳುತ್ತಿದ್ದವರಲ್ಲಿ ಗುಡಗೇರಿ ಎನ್ ಬಸವರಾಜರು ನನಗೆ ಬಹಳ ಆತ್ಮಿಯತೆಯಿಂದ ಮಾತನಾಡಿಸುತ್ತಿದ್ದರು. ಇನ್ನೊಂದೆಡೆ ಧಾರವಾಡದ ಆಕಾಶವಾಣಿಯಲ್ಲಿ ತಾಂತ್ರಿಕ ವಿಭಾಗದಲ್ಲಿ ನಮ್ಮ ಚಿಕ್ಕಪ್ಪ (ಅರ್ಜುನ ಶೇರಖಾನ) ಕೆಲಸದಲ್ಲಿದ್ದರು. ಆಗಾಗ ಅಲ್ಲಿಗೂ ಹೋಗಿ ಬರುತ್ತಿದ್ದೆ. ನಾಟಕ ಕಂಪನಿಯವರಿಗೆ ಹಾಲು (ಪೂರೈಸುವ) ಹಾಕುವ ಹುಡುಗನೆಂಬ ಕಾರಣಕ್ಕೆ ಸಂಜೆ ಪ್ರದರ್ಶನಗಳನ್ನು ಉಚಿತವಾಗಿ ನೋಡುತ್ತಿದ್ದೆ. ವಾರಕ್ಕೊಮ್ಮೆ ಎಮ್ಮೆ ಸೆಗಣಿಯಿಂದ ಥೇಟರ್ ಒಳಭಾಗದ ನೆಲವನ್ನು ಸಾರಿಸುತ್ತಿದ್ದರು. ಅದಕ್ಕೆ ಬೇಕಾಗುವ ಎಮ್ಮೆ ಸಗಣಿಯನ್ನು ಸಹ ನಾನು ಪೂರೈಸುತ್ತಿದ್ದೆ. ಹೀಗಾಗಿ ಕಂಪನಿ ಮಾಲೀಕರಿಂದ ಹಿಡಿದು ಹೆಚ್ಚು-ಕಡಿಮೆ ಎಲ್ಲರೂ ಪರಿಚಿತರಾಗಿರುತ್ತಿದ್ದರು. ವೃತ್ತಿನಾಟಕ ಕಂಪನಿಗಳಲ್ಲಿಯ ಕಲಾವಿದರು ರಾತ್ರಿಯೆಲ್ಲಾ ರಾಜ-ರಾಣಿಯರಾಗಿ ಕಣ್ಣು ಕುಕ್ಕುವ ರಾತ್ರಿ ಬೆಳಕಿನಲ್ಲಿ ಮಿಂಚುವ, ವೇಷಭೂಷಣದಲ್ಲಿ ರಾತ್ರಿಯ ನಾಟಕ ಪ್ರದರ್ಶನಗಳಲ್ಲಿ ಅರ್ಭಟಿಸಿದ್ದನ್ನು ನೋಡಿದ್ದ ನನಗೆ, ಬೆಳಗ್ಗೆ ಹಾಲು ತಲುಪಿಸಲು ಹೋದಾಗ ನಿದ್ದೆಗಣ್ಣಿನಲ್ಲಿರುತ್ತಿದ್ದ ಅವರ ಮುಖಗಳನ್ನು ಕುತೂಹಲದಿಂದ ನೋಡುತ್ತಿದ್ದೆ. ನನಗೂ ಅವರಂತೆಯೇ ಪಾತ್ರ ಮಾಡಬೇಕೆನಿಸುವ ಆಶೆಯು ನನಗರಿಯದಂತೆ ಮೊಳಕೆಯೊಡೆಯುತ್ತಿತ್ತು. 

 ಅದರಂತೆ ಆಕಾಶವಾಣಿಯ ಕಡೆಗೆ ಹೋದಾಗ ಅಲ್ಲಿಗೆ ಆಗಮಿಸುವ ಗ್ರಾಮೀಣ ಕಲಾವಿದರು, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದರು ಹೀಗೆ ನಾನಾ ನಮೂನೆಯ ಕಲಾವಿದರನ್ನು ನೋಡುತ್ತಿದ್ದ ನನಗೆ ನಾನು ಸಹ ಕಲಾವಿದನಾಗಬಹುದಲ್ಲವೆಂದು ಆಗಲೇ ನನ್ನಲ್ಲಿ ಕುತೂಹಲದೊಂದಿಗೆ ಆಸಕ್ತಿಯುಂಟಾಯಿತು. ಆಕಾಶವಾಣಿಯಲ್ಲಿ ತೇಲಿ ಬರುತ್ತಿದ್ದ ಕಲಾವಿದರ ಧ್ವನಿ, ಅವರನ್ನು ಮುಖತಃ ಬೇಟಿಯಾದಾಗ ಖುಷಿಯಾಗುವುದು ಮುಂತಾದ ಸಂಗತಿಗಳು ನನ್ನನ್ನು ಕಲಾಲೋಕಕ್ಕೆ ನನಗೆ ಗೊತ್ತಿಲ್ಲದಂತೆ ಸೆಳೆದವು ಅಂತ ಹೇಳಲು ಈಗ ನನಗೆ ಖುಷಿಯಾಗುತ್ತದೆ. ದಿನಾಲೂ ಶಾಲೆಗೆ ಹೋಗುತ್ತಿದ್ದೆನಾದರೂ ಜಾಣ ವಿದ್ಯಾರ್ಥಿಯಾಗಿರಲಿಲ್ಲ ಮತ್ತು ಫೇಲ್ ಆಗುವಂತಹ ವಿದ್ಯಾರ್ಥಿಯಂತೂ ಆಗಿರಲಿಲ್ಲ. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾತ್ರಿ ಕಂಪನಿ ನಾಟಕಗಳಲ್ಲಿಯ ಪಾತ್ರಗಳನ್ನು ಅಭಿನಯಿಸಿ ಚಪ್ಪಾಳೆ ಗಿಟ್ಟಿಸುತ್ತಿದ್ದೆ. ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣವನ್ನು ಪಡೆದೆ. 

  ಕಾಲೇಜು ಕಲಿಸುವಷ್ಟು ಶಕ್ತಿ ನಮ್ಮ ತಂದೆಗಿರಲಿಲ್ಲವಾದರೂ ಉತ್ತಮ ಪ್ರಜೆಯಾಗಿ ಹೇಗೆ ಬಾಳಬೇಕೆನ್ನುವ ಸಮೂಹ ಜೀವನ ಶಿಕ್ಷಣವನ್ನು ಕಲಿಸಿದರು. ಬದುಕಿಗೆ ದಾರಿಯನ್ನು ಕಂಡುಕೊಳ್ಳಬೇಕಾಗಿತ್ತು. ಹಾಗಾಗಿ ಬೀಡಿ ಅಂಗಡಿಯನ್ನು ಆರಂಭಿಸಿದೆನು. ನಾಟಕದ ಕುರಿತು ಆಸಕ್ತಿ ಮಾತ್ರ ಕಡಿಮೆಯಾಗಲಿಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕಲೋಕದಲ್ಲಿ ಚಳುವಳಿಗಳ ಕಾಲ. ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯವನ್ನು ಜನರಿಗೆ ತಿಳಿಸುತ್ತಾ, ಪ್ರಜಾಪ್ರಭುತ್ವ ಮತ್ತು ಮನುಜ ಕುಲದ ಬಂಧುತ್ವದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ, ಜನಪರ ಧ್ವನಿಯಾಗಿ ಮೂಡಿ ಬಂದ ಸಮುಧಾಯ ಸಂಘಟನೆಯು (೧೯೭೫) ಕಲೆಗಾಗಿ ಕಲೆಯಲ್ಲ ; ಬದುಕಿಗಾಗಿ ಕಲೆ ಎಂಬ ಧ್ಯೇಯವಾಕ್ಯದೊಂದಿಗೆ ರಾಜ್ಯವ್ಯಾಪಿ ಚಳುವಳಿಯನ್ನು ಆರಂಭಿಸಿ ಅದೇ ತಾನೆ ಕೆಲವು ವರ್ಷಗಳಾಗಿತ್ತು. 

 ಆ ಚಳುವಳಿಯ ಆಕರ್ಷಣೆಗೆ ಒಳಗಾಗಿ ನಾನು ಸಹ ಅದರಲ್ಲಿ ಸೇರಿಕೊಂಡೆನು ಅಂತ ಹೇಳುವುದಕ್ಕಿಂತ ನನ್ನಂತವನಿಗೆ ಅವಶ್ಯವಾಗಿದ್ದ ಬದುಕು-ಭವಣೆ, ಬಡತನ-ತೊಂದರೆ-ತಾಪತ್ರಯ-ಅಸಮಾನತೆ ಮುಂತಾದ ಸಾಮಾಜಿಕ ಜೀವನದ ವಾಸ್ತವ ಸಂಗತಿಗಳು ಆ ಸಂಘಟನೆಯಲ್ಲಿ ಚರ್ಚೆಯಾಗುತ್ತಿದ್ದವು ಮತ್ತು ಪರಿಹಾರವನ್ನು ಕಂಡುಕೊಳ್ಳಲು ಉತ್ತಮ ವೇಧಿಕೆಯೆಂದು ನನಗನಿಸಿದ್ದರಿಂದ ಆ ವಿಚಾರಗಲು ನನ್ನನ್ನಲ್ಲಿಗೆ ಕೈಚಾಚಿ ಬಿಗಿದಪ್ಪಿಕೊಂಡವು ಅಂತ ಹೇಳಬಹುದು. ಅಲ್ಲಿಂದ ಮುಂದೆ ಇಪ್ಟಾದ (ಇಂಡಿಯನ್ ಪೀಪಲ್ ಥೇಟರ್ ಅಸೋಸಿಯೇಶನ್) ಕಾರ್ಯಕರ್ತರು ವಿಶೇಷವಾಗಿ ಶ್ರೀ ಎಂ.ಎಂ.ಮಲ್ಲಾರಿಯವರು ಪರಿಚಯವಾದರು. ಅಲ್ಲಿಯೂ ಸಹ ಜನಜಾಗೃತಿ ಜಾಥಾದಲ್ಲಿಯ ಬೀಧಿ ನಾಟಕಗಳ ಮೂಲಕ ಮಾನವ ಸಮಾಜದಲ್ಲಿಯ ಬಡಜನರ ಹಲವಾರು ಮಗ್ಗಲುಗಳ, ವಿವಿಧ ಸ್ತರಗಳ ಸಮಸೆಗಳ ಕುರಿತು ನಾನು ಅರಿತುಕೊಳ್ಳಲು ಅನುವಾಯಿತು. 

ಇದರ ನಡುವೆ ಜನಪರವಾದ ವಿಷಯಗಳ ಕುರಿತು ಹೆಚ್ಚಿನ ಒತ್ತು ನೀಡುವ ಸಂಘಟನೆಯಾಗಿ ಸಮುಧಾಯ ಕಂಡು ಬಂದಿದ್ದರಿಂದ ನನ್ನ ಹೆಚ್ಚಿನ ಸಮಯವನ್ನು ’ಸಮುಧಾಯ’ ಹುಬ್ಬಳ್ಳಿ-ದಾರವಾಡ ಘಟಕದಲ್ಲಿ ನಾನು ವ್ಯಯಿಸಿದೆನು.  ಆಗಿನ ಸಂದರ್ಭದಲ್ಲಿ ಸಿ.ಆರ್.ಭಟ್, ಗಂಗಾಧರಸ್ವಾಮಿ, ಸಿ.ಬಸಲಿಂಗಯ್ಯ, ಸಂಪಿಗೆ ತೋಂಟದಾರ್ಯ, ಡಾ.ಮುರಿಗೆಪ್ಪ, ಶಿವಾನಂದ ಶೆಟ್ಟರ್, ಡಾ.ಎಚ್.ಎ.ಪಾರ್ಶ್ವನಾಥ, ಬಿ.ಆಯ್.ಈಳಿಗೇರ, ಸೊಲಬಕ್ಕನವರ್ ಮುಂತಾದ ದಿಗ್ಗಜರೊಂದಿಗೆ ನಾನು ಕೆಲಸ ಮಾಡಿದೆನು. ನಂತರದ ದಿನಗಳಲ್ಲಿ ಸಂಘಟನೆಯಲ್ಲಿ ಹಳಬರು ಹಿಂದಕ್ಕೆ ಸರಿದಂತೆ ಹೊಸಬರಿಗೆ ಅವಕಾಶಗಳು ದೊರಕಿದವು. ಅದರಂತೆ ನಾನು ಸಮುಧಾಯ, ಹು-ಧಾ ಘಟಕದ ಸಹಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಇಪ್ಟಾ ಸಂಘಟನೆಯಲ್ಲಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದೇನೆ.

    ನೀವು ಕೇವಲ ಸಮುಧಾಯ ಮತ್ತು ಇಪ್ಟಾ ಸಂಘಟನೆಗಳಲ್ಲಿ ಮಾತ್ರ ತೊಡಗಿಸಿಕೊಂಡ್ರಿ ಬೇರೆ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಲಿಲ್ಲವೇ ?

ವಿಲಾಸ ಶೇರಖಾನ : ಹಾಗೇನಿಲ್ಲ. ನಾನು ಚಳುವಳಿ, ಜನಜಾಗೃತಿಗಾಗಿ ಸಮುಧಾಯ ಮತ್ತು ಇಪ್ಟಾದಂತಹ ಸಂಘಟನೆಗಳಲ್ಲಿರುತ್ತಿದ್ದೆ. ಅನೇಕ ದಲಿತ ಸಂಘಟನೆಗಳೊಂದಿಗೂ ಸಂಪರ್ಕದಲ್ಲಿದ್ದೇನೆ. ರಂಗಭೂಮಿಯ ಚಟುವಟಿಕೆಗಳನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರವಲ್ಲದೇ ರಾಜ್ಯದ ಇತರ ಎಲ್ಲಾ ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯವರೊಂದಿಗೆ ಗುರುತಿಸಿಕೊಂಡಿದ್ದೇನೆ. ಧಾರವಾಡದ ದೇವಪ್ಪ ನಾಯಕರ ನೇತೃತ್ವದಲ್ಲಿದ್ದ ಅರುಣೋದಯ ಹವ್ಯಾಸಿ ಕಲಾ ಸಂಸ್ಥೆ, ಎಸ್.ಎನ್.ದೇಶಪಾಂಡೆಯವರ ಕರ್ನಾಟಕ ಕಲೋದ್ಧಾರಕ ಸಂಘ, ವಿಠ್ಠಲ ಕೊಪ್ಪದರವರ ರಂಗಪರಿಸರ, ವಿಜಯೀಂದ್ರ ಅರ್ಚಕ ಅವರ ಸ್ನೇಹಿತರು ಕಲಾತಂಡ, ಪ್ರಭು ಹಂಚಿನಾಳರ ಕಲಾಸಂಗಮ, ದೇವಾಂಗಮಠ ಅವರ ವಿನಾಯಕ ನಾಟಕ ಮಂಡಳಿ, ಹಾರೂಗೇರಿಯ ವೃತ್ತಿರಂಗಭೂಮಿ ಕಲಾವಿದರ ಸಂಘ, ಜಗುಚಂದ್ರ ಅವರ ರಂಗಗಂಗಾ, ಅಭಿನಯ ಭಾರತಿ ಮತ್ತು ಸವದತ್ತಿಯ ರಂಗಸಂಘಟನೆಗಳೊಂದಿಗೆ ಸಹ ನಿರಂತರ ಸಂಪರ್ಕದಲ್ಲಿದ್ದೇನೆ. ರಾಜ್ಯವ್ಯಾಪಿ ಜಾಥಾ ಹೋದಾಗ ಎಲ್ಲಾ ರಂಗಾಸ್ಕತರು/ರಂಗಕರ್ಮಿಗಳನ್ನು ಮುಖತಃ ಬೇಟಿಯಾಗಿದ್ದೇನೆ. ಹಲವಾರು ರಂಗಸ್ನೇಹಿತರು ತಮ್ಮ ತಂಡದಲ್ಲಿ, ನಿರ್ದೇಶನದಲ್ಲಿ ನನಗೆ ಪಾತ್ರ ನಿರ್ವಹಿಸಲು ಆಹ್ವಾನಿಸುತ್ತಾರೆ. ನಾನೂ ಸಹ ಅಷ್ಟೇ ಸ್ನೇಹಪೂರ್ವಕವಾಗಿ ಹೋಗಿ ಪಾತ್ರ ನಿರ್ವಹಿಸಿ ಬರುತ್ತೇನೆ.

    ಸರಿ, ಇಷ್ಟು ವರ್ಷಗಳ ನಿರಂತರ ರಂಗಸೇವೆಯಲ್ಲಿ ನಿಮಗೆ ಬಹಳ ಖುಷಿ ಕೊಟ್ಟ ನಾಟಕ ಅಥವಾ ಪಾತ್ರ ಯಾವುದು ?

ವಿಲಾಸ ಶೇರಖಾನ : ಹಾಗೇ ನೋಡಿದರೆ ಕಲಾವಿದನಿಗೆ ತಾನು ನಿರ್ವಹಿಸಿದ ಎಲ್ಲಾ ಪಾತ್ರಗಳನ್ನು (ನಾನು ಸುಮಾರು ನೂರಾರು ಪ್ರಕಾರದ ರಂಗನಾಟಕಗಳು, ರೇಡಿಯೋ, ಟಿವಿ, ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದೇನೆ, ನಿರ್ದೇಶಿಸಿದ್ದೇನೆ, ಬೀದಿ ನಾಟಕಗಳನ್ನು ತಿದ್ದುಪಡಿ, ಸ್ವಂತ ರಚನೆ, ವೇಷಭೂಷಣ, ಸಂಗೀತ, ಸೆಟ್‌ವರ್ಕ ನಿರ್ವಹಿಸಿದ್ದೇನೆ.) ಖುಷಿಯಿಂದಲೇ ಅಭಿನಯಿಸಿರುವುದರಿಂದಲೇ ಪ್ರೇಕ್ಷಕವರ್ಗವನ್ನು ತಲುಪಲು ಸಾಧ್ಯವಾಗುತ್ತದೆ. ತನ್ಮಯನಾಗಿ, ಪಾತ್ರವನ್ನು ಆಹ್ವಾನಿಸಿಕೊಂಡು ಅಭಿನಯಿಸದಿದ್ದರೇ ಆ ಕಲಾವಿದ ತನಗೆ ತಾನೇ ಮೋಸ ಮಾಡಿಕೊಂಡಂತೆ ಅಥವಾ ರಂಗಭೂಮಿಯೆಂಬ ಪವಿತ್ರ ಕ್ಷೇತ್ರಕ್ಕೆ ಆತನು ನಾಲಾಯಕ್ ಅಂತಲೇ ನಾನು ಭಾವಿಸಿಕೊಂಡಿರುವವನು. ಇಂತಹ ಸಂದರ್ಭದಲ್ಲಿ ನನ್ನಲ್ಲಿರುವ ಸಾಮರ್ಥ್ಯವನ್ನು ಗಮನಿಸಿ, ಪಾತ್ರವನ್ನು ನಿರ್ವಹಿಸುತ್ತಾನೆಂಬ ವಿಶ್ವಾಸದಿಂದ ನಿರ್ದೇಶಕರೆಂಬ ನಾಟಕದ ಹಡಗಿನ ಕಪ್ತಾನ ನೀಡಿರುವ ಕೆಲಸ ಅದು ಅಭಿನಯ/ನೇಪಥ್ಯ/ಸಂಘಟನೆ/ನಿರ್ವಹಣೆ/ಸಂಯೋಜನೆ ಹೀಗೆ ಯಾವುದೇ ಕೆಲಸವಾಗಿರಬಹುದು ಅದನ್ನು ನಾನು ಮನಸಾಪೂರ್ವಕವಾಗಿ ಪೂರೈಸಿದ್ದೇನೆಂಬ ಆತ್ಮವಿಶ್ವಾಸ ನನ್ನದು.

 ಮನಸ್ಸಿಗೆ ಖುಷಿ ಕೊಟ್ಟ ನಾಟಕಗಳು ಎರಡು, ಹಂಗದ್ರ ಮದುವಿ ಆಗೋದು ಯಾರನ್ನ ? ಮತ್ತೊಂದು ಬೇಲಿ ಮತ್ತು ಹೊಲ. ಇವೆರಡರಲ್ಲಿ ನನ್ನ ಮನಕಲಕಿರುವ ನಾಟಕವೆಂದರೆ ಕುಂ.ವೀರಭದ್ರಪ್ಪನವರ ಕಥೆಯಾಧಾರಿತ ’ಬೇಲಿ ಮತ್ತು ಹೊಲ’. ಈ ನಾಟಕದಲ್ಲಿ ಏನು ಅರಿಯದ ಒಬ್ಬ ನಿರ್ದೋಷಿ/ನಿರಪರಾಧಿ ಮನುಷ್ಯನನ್ನು ಅಪರಾಧಿಯನ್ನಾಗಿ ಬಿಂಬಿಸಲು ರಕ್ಷಣೆ ಮಾಡಬೇಕಾಗಿರುವ ಸರಕಾರಿ ಇಲಾಖೆಯೊಂದರ ಅಧಿಕಾರಿಗಳು ಎನೆಲ್ಲಾ ಕಸರತ್ತುಗಳೊಂದಿಗೆ, ಏನೆಲ್ಲಾ ಶೋಷಣೆ ಮಾಡುತ್ತಾ ಬಲಿಪಶುವನ್ನಾಗಿಸುತ್ತಾರೆ, ಅದಕ್ಕೆ ಮುಗ್ದ ಜನರು ಹೇಗೆ ಬಲಿಯಾಗುತ್ತಾರೆ ಎಂಬುದರ ಕುರಿತಾದ ವ್ಯವಸ್ಥೆಯ ಲೋಪ-ದೋಷಗಳನ್ನು ಎತ್ತಿ ತೋರಿಸುವ ನಾಟಕವದು. ಪ್ರಜೆಗಳಿಗೆ ರಕ್ಷಣೆ ಕೊಡಬೇಕಾದ ಸಂಬಂಧಪಟ್ಟ ಇಲಾಖೆಯೊಂದು ಮುಗ್ದರ ಮೇಲೆ ಮಾಡುವ ದೌರ್ಜನ್ಯ ಮತ್ತು ಆ ಪಾತ್ರದ ಮೂಲಕ ದೌರ್ಜನ್ಯದ ಇನ್ನೊಂದು ಮುಖವನ್ನು ಪ್ರೇಕ್ಷಕರಿಗೆ ತಲುಪಿಸಿದ್ದು, ಆ ಮೂಲಕ ಜಾಗೃತಿ ಮೂಡಿಸಿದುದರ ಸಾರ್ಥಕತೆ ನನ್ನಲ್ಲಿದೆ. ಅನೇಕ ಸಾಹಿತಿಗಳು, ರಂಗಾಸಕ್ತರು, ರಂಗತಜ್ಞರಿಂದಲೂ ಮೆಚ್ಚುಗೆ ಗಳಿಸಿದ್ದೇನೆ. 

    ಹಾಗೆ, ನಿಮ್ಮ ರಂಗಜೀವನ ಮತ್ತು ಸಾಮಾಜಿಕ ಜಾಗೃತಿ ಅಭಿಯಾನದ ಜೀವನದಲ್ಲಿ ಮರೆಯಲಾಗದ ಘಟನೆಗಳಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಬಹುದಾ?

ವಿಲಾಸ ಶೇರಖಾನ : ಖರೆವಂದ್ರೂ ಒಂದ ಮಾತ ಹೇಳಾಕ ಇಷ್ಟಪಡತೀನ್ರಿ. ಈ ಮಾನವ ಜನಾಂಗದಲ್ಲಿಯ ಕೆಲವು ಕಡಿಮೆ ವಿಚಾರಶಕ್ತಿಯಿರುವ ವ್ಯಕ್ತಿಗಳು ತಾನು ಶ್ರೇಷ್ಟ ಉಳಿದವರು ಕನಿಷ್ಟ ಅಂತ ಸುಕಾ-ಸುಮ್ಮನ ಹೊಡದಾಡಿ ಸಾಯ್ತಾವ್ರೀ. ಯಾಕಂದರೆ ಈಗ್ಗೆ ಕೆಲವು ವರ್ಷಗಳ ಹಿಂದೆ (ಬಹುಷಃ ೧೯೯೯ ಅಥವಾ ೨೦೦೦ನೇ ಇಸ್ವಿಯಲ್ಲಿ) ಕೇರಳ ರಾಜ್ಯದಲ್ಲಿ ಸಾಮಾಜಿಕ ಸಂಘಟನೆಗಳ ಕಲಾವಿದರ ವಿಶ್ವಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು. ಆ ಸಮ್ಮೇಳನದಲ್ಲಿ ವಿಶ್ವದ ನಾನಾ ಮೂಲೆಯಿಂದ ನಾನಾ ನಮೂನೆಯ ಕಲಾವಿದರು, ಸಾಹಿತಿಗಳು, ಚಿಂತಕರು ಭಾಗವಹಿಸಿದ್ದರು. ಕರ್ನಾಟಕದಿಂದ ನಾನು ಮತ್ತು ಕೆಲವು ಇಪ್ಟಾ ಸಂಸ್ಥೆಯ ಸ್ನೇಹಿತರು ಭಾಗವಹಿಸಿದ್ದೆವು. ಅಲ್ಲಿ ಯಾರಿಗೂ ಉಳಿದವರ ಭಾಷೆಯು ತಿಳಿಯದೇ ಹೋದರೂ, ತಮ್ಮ ಅಭಿನಯ/ವಿಚಾರಗಳನ್ನು ವ್ಯಕ್ತಪಡಿಸಲು ತಮ್ಮದೇ ಭಾಷೆಯನ್ನು ಬಳಸಿ ಹೇಳಿಕೊಂಡಾಗಲೂ ನಮಗೆಲ್ಲಾ ಅರ್ಥವಾಗುತ್ತಿತ್ತು. ಮಾನವನ ದೈಹಿಕ/ಆಂಗಿಕ ಭಾಷೆ (ಅಭಿನಯ), ಧ್ವನಿಯ ಏರಿಳಿತಗಳಿಂದಾದ ರಂಗಭಾಷೆಯು ವಿಶ್ವದ ಎಲ್ಲಾ ಮಾನವರು ಅರ್ಥೈಸಿಕೊಳ್ಳುವಂತಹ ದೇವರ ಭಾಷೆಯೆಂಬುದು ಎಂದು ತಿಳಿದ್ದದ್ದೇ ಅವತ್ತು.

ಇನ್ನೊಂದು ಸಲ ಮುಂಬೈಯಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರಿಯ (ಡಬ್ಲೂ.ಎಸ್.ಎಫ್. ವೇದಿಕೆ) ಸಮ್ಮೇಳನದಲ್ಲಿ ಅಹೋರಾತ್ರಿ ಕಲಾಪ್ರದರ್ಶನಕ್ಕೆ ಅವಕಾಶ ನೀಡಿದಾಗ ನಾನು ಆಸಕ್ತ ಸ್ನೇಹಿತರೊಂದಿಗೆ ಸಮುಧಾಯ ಸಂಘಟನೆಯ ಪರವಾಗಿ ಭಾಗವಹಿಸಿದ್ದಾಗ ನಾವು ಇಳಿದುಕೊಂಡಿದ್ದ ಬಿಡಾರದಲ್ಲಿ ಇಂಗ್ಲೆಂಡಿನ ನೃತ್ಯ ಕಲಾವಿದರು, ಪಾಕಿಸ್ತಾನದ ಗಜಲ್ ಕಲಾವಿದರು, ಶ್ರೀಲಂಕಾದ ಕಲಾವಿದರು, ಚೀನಾದ ಕಲಾವಿದರು, ಇಟಲಿ ಕಲಾವಿದರು, ಪಂಜಾಬ ರಾಜ್ಯದ ಕಲಾವಿದರು ಅವರ ಪಗೋಡಾ, ಕರ್ನಾಟಕ ರಾಜ್ಯದ ನಮ್ಮ ಟೊಪ್ಪಿಗೆ ಮತ್ತು ರುಮಾಲು ಹೀಗೆ ವಿಶ್ವದ ವೈರಿ ರಾಷ್ಟ್ರಗಳ ಕಲಾವಿದರೆಲ್ಲಾ ಒಂದೆಡೆ ಇದ್ದು, ಪರಸ್ಪರ ಪರಿಚಯಿಸಿಕೊಂಡಿದ್ದು ಬಹಳ ಆತ್ಮೀಯತೆಯನ್ನು ಸೃಷ್ಟಿಸಿದ್ದು. ನನ್ನ ಜೀವನದಲ್ಲಿಯೇ ಮರೆಯಲಾಗದ ಘಟನೆಯಾಗಿದೆ. ಆ ಕ್ಷಣಕ್ಕೆ ಇಡೀ ವಿಶ್ವವೇ ಒಂದು ಬಿಡಾರದಷ್ಟಿದೆಯೇನೋ ಎಂಬ ಪುಳಕ ಭಾವ ನನ್ನಲ್ಲಿ ಉಂಟಾಗಿತ್ತು.

    ಅಂದ ಹಾಗೇ ನೀವು ಇಲ್ಲಿಯವೆರೆಗೆ ಅಭಿನಯಿಸಿದ ನಾಟಕಗಳು, ಸ್ವೀಕರಿಸಿದ ಸನ್ಮಾನಗಳು ಮುಮತಾದ ಸಂಗತಿಗಳ ಕುರಿತು ಹೇಳಿರಿ.

ವಿಲಾಸ ಶೇರಖಾನ :
ಸರ್, ನೂರಾರು ಬೀದಿ ನಾಟಕಗಳಲ್ಲಿ ಅಭಿನಯಿಸಿ, ನಿರ್ದೇಶನ ಮಾಡಿರುವ ನನ್ನಂತಹ ಕಲಾವಿದ ಅಥವಾ ಸಾಮಾಜಿಕ ಕಾರ್ಯಕರ್ತನಾಗಿರುವವನಿಗೆ ಸಾಮಾಜಿಕ ಸಂಗತಿಗಳ ಕುರಿತು ನಡೆಸುವ ಆಂದೋಲನ, ಅಭಿಯಾನ ಮುಂತಾದ ಸಂದರ್ಭಗಳಲ್ಲಿ ನನಗೆ ಯಾವತ್ತೂ ಇತರರು ಗೌರವಿಸುತ್ತಾರೆ, ಸನ್ಮಾನಿಸುತ್ತಾರೆ ಎಂದುಕೊಂಡು ಈ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬಾರದು. ಅಂತಹ ಯಾವದೇ ಪ್ರತಿ-ಫಲಾಪೇಕ್ಷೆಗಳನ್ನು ಬಯಸದೇ ಮತ್ತು ಆಶೆ-ಆಮಿಷಗಳ ಬೆಂಬತ್ತಿ ನಾನೆಂದಿಗೂ ಹೋದವನಲ್ಲ. ಅನೇಕ ಸಮಾರಂಭಗಳಲ್ಲಿ ಸನ್ಮಾನಕ್ಕಾಗಿ ನನ್ನ ಹೆಸರನ್ನು ಮೈಕಿನಲ್ಲಿ ಅನೌನ್ಸ್ ಮಾಡಿದಾಗ ಅವರಿಗೆ ಗೊತ್ತಾಗದಂತೆ ಮರೆಯಾಗುವುದು ನನ್ನ ಸ್ವಭಾವ. (ಈಗ ನೀವು ಗಮನಿಸಿದಂತೆ, ನನ್ನ ಸಂದರ್ಶನಕ್ಕಾಗಿ ಎಷ್ಟು ಸಲ ನನ್ನನ್ನು ಕರೆದಿದ್ದೀರಿ, ನಾನು ಎಷ್ಟು ಸಲ ನಿಮ್ಮಿಂದ ಜಾರಿಕೊಂಡು ಹೋಗಿಲ್ಲ ನೆನಪಿಸಿಕೊಳ್ಳಿರಿ) ಅದರಂತೆ, ಒತ್ತಾಯ ಮಾಡಿದ ನಂತರವಷ್ಟೇ ಸನ್ಮಾನಕ್ಕೆ ನಾನು ಒಪ್ಪಿಕೊಳ್ಳುತ್ತೇನೆ. ಯಾಕಂದರೆ ಈ ದೇಶದ ಜಾಗೃತ ಪ್ರಜೆಯಾಗಿ ನನ್ನ ಸಹ-ಪ್ರಜೆಗಳಲ್ಲಿ ಜಾಗೃತಿ ಮೂಡಿಸುತ್ತಾ ಸಾಮಾಜಿಕವಾಗಿ ಅರಿವು ಮೂಡಿಸುವುದು, ತನ್ಮೂಲಕ ಈ ದೇಶದ ಪ್ರಜೆಗಳೆಲ್ಲರಿಗೂ ಸಮಾನತೆಯ ಸುಖದ ಜೀವನ ಸಿಗಲಿ ಎಂಬುದರ ಕುರಿತಾಗಿ ನಡೆಸುವ ಆಂಧೋಲನ, ಚಳುವಳಿ, ಜಾಥಾಗಳು ನನ್ನ ಕರ್ತವ್ಯವೆಂದು ಭಾವಿಸಿಕೊಂಡು ಮುನ್ನಡೆಯುತ್ತಿರುವ ನನಗೆ ಗೌರವ ಸನ್ಮಾನಗಳ ಹಂಗು ಬೇಡವೆಂದವನು. ಆದರೂ ಕೆಲವೆಡೆ ಸ್ನೇಹಬಂಧನದಿಂದ, ಅಭಿಮಾನದಿಂದ ಗೌರವಿಸುತ್ತೇವೆಂದಾಗ ಇಲ್ಲವೆನ್ನಲಾಗದೇ ಸನ್ಮಾನಕ್ಕೆ ಒಪ್ಪಿಕೊಂಡಾಗ, ನನ್ನ ನೆನಪಿನಲ್ಲಿರುವ ಕೆಲವು ಸನ್ಮಾನಗಳನ್ನು ಹೇಳುವುದಾದರೆ, ಕುವೆಂಪು ರಂಗನಮನ ಕಾರ್ಯಕ್ರಮದ ಸನ್ಮಾನ (೨೦೦೪), ಸಮುಧಾಯ ಸಂಘಟನೆಯ ಸನ್ಮಾನ (೨೦೦೮), ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರ ’ರಂಗಸನ್ಮಾನ’(೨೦೧೧) ಹೀಗೆ ಹಲವಾರು ಕಡೆಗಳಲ್ಲಿ ಗೌರವಿಸಿದ್ದಾರೆ.

    ಸರಿ, ಇಷ್ಟೇಲ್ಲಾ ರಗಳೆಗಳ ನಡುವೆ ನಿಮ್ಮ ಕುಟುಂಬದವರು ನಿಮ್ಮ ಎಲ್ಲಾ ಚಟುವಟಿಕೆಗಳಿಗೆ ಹೇಗೆ ಬೆಂಬಲಿಸುತ್ತಾರೆ ಅಥವಾ ಸ್ಪಂಧಿಸುತ್ತಾರೆ ?

ವಿಲಾಸ ಶೇರಖಾನ :
ಬಹಳ ಒಳ್ಳೆಯ ಪ್ರಶ್ನೆ ಕೇಳಿದಿರಿ. ನಿಮಗೆಲ್ಲಾ ಗೊತ್ತೈತಿ. ರಂಗಚಟುವಟಿಕೆ, ಸಾಮಾಜಿಕ ಸಂಘಟನೆಗಳ ಕಾರ್ಯಕರ್ತನಾಗಿ ತೊಡಗಿಸಿಕೊಂಡಿರುವವನ ಹಿನ್ನಲೆಯ ಕುರಿತು ಕೇಳಿದರೆ ಒಂದರೆ ಕ್ಷಣ ನಿಮಗೆ ನಗು ಬರುವಷ್ಟೇ ಕರುಣೆಯು ಉಕ್ಕುತ್ತದೆ. ಅಂತವುಗಳ ಹಂಗಿಲ್ಲದೇ ಜೀವನವನ್ನು ರೂಪಿಸಿಕೊಂಡವನೆಂಬ ಹೆಮ್ಮೆ ನನ್ನದು. ಮದುವೆಯಾದ ಹೊಸದರಲ್ಲಿ ಎಲ್ಲರೂ ನನಗೆ ’ನಾಟಕ-ಗೀಟಕ ಬಿಟ್ಟು ಬದುಕುವುದಕ್ಕಾಗಿ ಏನಾದರೂ ಸಂಪಾದನೆಯ ದಾರಿಯನ್ನು ಹುಡುಕು’ ಎಂದು. ಆದರೆ ಆ ಎಲ್ಲವೂಗಳೊಂದಿಗೆ ನಾನು ರಂಗಭೂಮಿಯನ್ನು ಬಿಡಲಿಲ್ಲ. ಹೀಗಾಗಿ ಇಷ್ಟು ವರುಷಗಳಲ್ಲಿ ಸುಮಾರು ಐದು ಸಾವಿರಗಳಷ್ಟು ಪಾತ್ರಗಳನ್ನು, ನೂರಾರು ನಾಟಕಗಳನ್ನು ರಚನೆ, ನಿರ್ದೇಶನ, ನಿರ್ವಹಣೆ, ಸಂಗೀತ ಮುಂತಾಗಿ ಕರುನಾಡಿನ ರಂಗಭೂಮಿಗೆ ಅರ್ಪಿಸಿದ್ದೇನೆ. ಹೀಗಿದ್ದರೂ ಬಡತನವೆಂಬುದು ನನಗೆ ಸಾಮಾನ್ಯ ಸಂಗತಿಯಾಗಿ ಬೆನ್ನಮೇಲೆ ಹಾಗೆ ಕುಳಿತಿದೆ. ನಾನು ನನ್ನ ಚಟುವಟಿಕೆಗಳನ್ನು ಮುಗಿಸಿಕೊಂಡು ಮನೆಗೆ ಬಂದಾಗ ಮದುವೆಯಾದ ಹೊಸದರಲ್ಲಿ ಮುನಿಸಿಕೊಳ್ಳುತ್ತಿದ್ದ ನನ್ನ ಪತ್ನಿ ಸುಜಾತಾ, ಕೆಲವೇ ಕ್ಷಣಗಳಲ್ಲಿ ಶಾಂತವಾಗಿ ನನ್ನ ಆಗಮನವನ್ನು ನಗುಮೊಗದಿಂದಲೇ ಸ್ವೀಕರಿಸುತ್ತಿದ್ದ ನನ್ನ ಮನೆಯ ನಂದಾದೀಪ. ಸರಕಾರ ನೀತಿ, ಧೋರಣೆಗಳ ವಿಷಯದಲ್ಲಿ ನಾವು ಚಳುವಳಿ ಹಮ್ಮಿಕೊಂಡಾಗ ಕೆಲವೊಮ್ಮೆ ಜೈಲು ಪಾಲಾಗುತ್ತಿದ್ದೇವು, ನಂತರ ಬಿಡುಗಡೆಯಾಗುತ್ತಿದ್ದೇವು. ಮನೆಗೆ ಬರುವುದು ಎರಡ್ಮೂರು ದಿನಗಳಾದರೂ ಬೇಸರಿಸಿಕೊಳ್ಳದೇ, ಸಹನೆಯಿಂದ ಮನೆಯನ್ನು ನಿರ್ವಹಿಸಿದ ಗಟ್ಟಿಗಿತ್ತಿ ಮಹಿಳೆ. ಆರಂಭ ಕಾಲದಲ್ಲಿ ನಾನು ಜೀವನೋಪಾಯಕ್ಕಾಗಿ ನಡೆಸುತ್ತಿದ್ದ ಬೀಡಿ ಅಂಗಡಿಯನ್ನು ನಾನು ಇಲ್ಲದ ಸಮಯದಲ್ಲಿ ತಾನು ನಿರ್ವಹಿಸಿ ಸೈ ಅನಿಸಿಕೊಂಡ ಬಲು ಜಾಣೆ ನನ್ನ ಸುಜಾತಾ. ಈಗ ನನಗೆ ಮೂರು ಗಂಡು ಮಕ್ಕಳು, ಒಬ್ಬಳು ಮಗಳು.
  ಗಂಡು ಮಕ್ಕಳಲ್ಲಿ ಮೊದಲನೆಯವನು ಆದರ್ಶ, ತಾಂತ್ರಿಕ ವಿಷಯದಲ್ಲಿ ಆಸಕ್ತನಾಗಿದ್ದರಿಂದ ಡಿಪ್ಲೊಮಾ ಇಲೆಕ್ಟ್ರಾನಿಕ್ಸ್ ಇಂಜನೀಯರಿಂಗ್ ಓದುತ್ತಿದ್ದಾನೆ. ಎರಡನೇಯವನು ಅಕ್ಷಯ್, ನನ್ನಂತೆ ಕಲಾವಿದನಾಗಬೇಕೆಂದು ಹಂಬಲಿಸಿದಾಗ ಅವನಿಗೆ ಪೈನ್ ಆರ್ಟ್ಸ್ ಕೋರ್ಸ್‌ನ್ನು ಓದುತ್ತಿದ್ದಾನೆ. ಮಗಳು ಕಾಲೇಜು ಶಿಕ್ಷಣ ಪಡೆಯುತ್ತಿದ್ದಾಳೆ. ಹಾಗೇ ನೋಡಿದರೆ ನನ್ನ ಕುಟುಂಬದ ಸದಸ್ಯರಿಂದ ನನಗೆ ರಂಗಭೂಮಿ ಇನ್ನಿತರ ಚಟುವಟಿಕೆಗಳಿಗೆ ಯಾವುದೇ ತೊಂದರೆಯುಂಟು ಮಾಡದೆ ಬೆಂಬಲಿಸುತ್ತಾರೆ. ಸಂಬಂಧಿಕರು-ಸ್ನೇಹಿತರು-ಹಿತೈಷಿಗಳು ತಮಗೆ ತಿಳಿದಂತೆ ಆಗಾಗ ಸಲಹೆ-ಸೂಚನೆ ಕೊಡುತ್ತಿರುತ್ತಾರೆ. ’ಬೆಂಗಳೂರಿಗೆ ಬಾ ಸಿನೇಮಾ-ಧಾರಾವಾಹಿಗಳಲ್ಲಿ ಸಾಕಷ್ಟು ಅವಕಾಶಗಳಿವೆ’ ಎಂದು ಕೆಲವರು ಹೇಳುತ್ತಾರೆ. ಆದರೆ ನನಗೆಕೋ ಭಯ. ಬೀಡಿ ಅಂಗಡಿಯಿಂದ ಥೇಟರ್‌ವರೆಗೆ ಬೆಳೆಸಿ ಸಮಾಜವು ಗುರುತಿಸುವಂತೆ ನನ್ನ ವ್ಯಕ್ತಿತ್ವ ನಿರ್ಮಾಣದಲ್ಲಿ ಅಂತರಿಕ ಪಾತ್ರವನ್ನು ಚೆನ್ನಾಗಿಯೇ ನಿಭಾಯಿಸಿದ ಕರುನಾಡಿನ ಧಾರಾನಗರಿ(ಧಾರವಾಡ)ಯನ್ನು ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ. ಧಾರಾನಗರಿಯ ಪ್ರೇಕ್ಷಕಪ್ರಭುಗಳ ಋಣ ಹೇಗೆ ತೀರಿಸಲಿ !

    ಒಳ್ಳೇಯದು, ಇಂದಿನ ತಲೆಮಾರಿನವರು ರಂಗಭೂಮಿ, ಸಾಮಾಜಿಕ ಚಟುವಟಿಕೆಗಳ ಸಂದರ್ಭದಲ್ಲಿ ಆಗಮಿಸುತ್ತಾರೆ, ಕೆಲವೆ ದಿನಗಳಲ್ಲಿ ಇಲ್ಲಿಂದ ನಿರ್ಗಮಿಸುತ್ತಾರೆ. ಈ ಸಂದರ್ಭದಲ್ಲಿ ನೀವು ಏನು ಹೇಳ ಬಯಸುತ್ತೀರಿ ?

ವಿಲಾಸ ಶೇರಖಾನ
: ರಂಗಭೂಮಿ ಮತ್ತು ಜೀವನ ಎರಡೂ ಒಂದಕ್ಕೊಂದು ಪೂರಕವಾಗಿರುವ ಅಂಶಗಳು. ಜೀವನದ ಕನ್ನಡಿಯೆಂದರೆ ರಂಗಭೂಮಿ ಅಥವಾ ನಾಟಕಕ್ಷೇತ್ರ. ನಮ್ಮ ಜೀವನದ ಘಟನಾವಳಿಗಳ ರಂಗರೂಪವೇ ನಾಟಕವಾಗಿರುತ್ತದೆ. ರಂಗಭೂಮಿ ಮತ್ತು ಸಾಮಾಜಿಕ ಹೋರಾಟದ ಚಳುವಳಿಗಳಿಂದ ವೈಯಕ್ತಿವಾಗಿ ಏನನ್ನೂ ಬಯಸದೇ ನಿಸ್ವಾರ್ಥ ಸೇವೆ ಸಲ್ಲಿಸಲು ಆಗಮಿಸುವವರಿಗೆ ಈ ಕ್ಷೇತ್ರಗಳು ಸಾಕಷ್ಟು ಅವಕಾಶಗಳ ಬಾಗಿಲನ್ನು ತೆರೆಯುತ್ತವೆ. ಈಗಿನ ಸಂದರ್ಭದಲ್ಲಿ ಆಗಮಿಸುವವರು ಒಂದೋ ಪರೀಕ್ಷೆಯಲ್ಲಿ ಪೇಲಾಗಿಯೋ, ಜೀವನದಲ್ಲಿ ನಿರಾಶೆಯಾಗಿರುವವರು, ಶೋಕಿಗಾಗಿ, ತಮಾಷೆಗಾಗಿ, ಸಮಯ ಕಳೆಯಲು ಬಂದಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತವರಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ಸಂಘಟನೆಗಳಿಗೆ ಯಾವುದೇ ತೊಂದರೆಯಿಲ್ಲ, ಅಂತವರು ತಮಗೆ ತಾವೇ ಹಾಳುಮಾಡಿಕೊಳ್ಳುತ್ತಾರೆ ಅಥವಾ ಮೋಸ ಮಾಡಿಕೊಳ್ಳುತ್ತಾರೆ. ರಂಗಭೂಮಿ ಅಥವಾ ಸಾಮಾಜಿಕ ಸಂಘಟನೆಗಳಲ್ಲಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬಹುದು, ವಿಶ್ವದ ಹಲವಾರು ಪ್ರಚಲಿತ ವಿಧ್ಯಮಾನಗಳನ್ನು ನಾವು ಗಮನಿಸಬಹುದು, ಪ್ರತಿಕ್ರಿಯಿಸಬಹುದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಧೈರ್ಯ, ಸ್ಥೈರ್ಯ, ಸಂವಹನ, ಅಭಿನಯ, ಸಂಘಟನೆ ಮುಂತಾದ ಹೀಗೆ ಹಲವಾರು ಸಂಗತಿಗಳ ಮೂಲಕ ನಾವು ಭವಿಷ್ಯದ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳುವಂತಹ ಅವಕಾಶಗಳು ಹೇರಳವಾಗಿ ಇಲ್ಲಿವೆ. ಈಗಿನ ತಲೆಮಾರಿನವರಿಗೆ ಬೇಗನೆ ಹೆಸರು ಮಾಡಬೇಕು, ಹಣ ಗಳಿಸಬೇಕು ಮುಂತಾದ ತರಾತುರಿಯ ಗುಣಗಳಿವೆ. ಇಂತಹ ಗುಣಗಳಿಂದ ಅವಸರದ ಪ್ರವೃತ್ತಿಯಿಂದ ಯಾವುದೇ ಪ್ರಯೋಜವಿಲ್ಲ. ಅಂತಹ ಕ್ಷಣಿಕಗಳಿಂದ ದೂರವಾಗಿಸಿ, ಪ್ರಭುದ್ಧತೆಯನ್ನು ಮೈಗೂಡಿಸಿಕೊಂಡು ಅವಕಾಶಗಳ ಸದೂಪಯೋಗ ಮಾಡಿಕೊಳ್ಳಲು ಆಗಮಿಸುವ ಎಲ್ಲಾ ಯುವಮಿತ್ರರಿಗೆ ನಮ್ಮ ಲೋಕಕ್ಕೆ ಸದಾ ಸ್ವಾಗತವಿದೆ.

    ಈಗಿನ ಆಧುನಿಕ ಕಾಲದ ಮನರಂಜನೆಯ ಮಾಧ್ಯಮಗಳ ನಡುವೆಯು ರಂಗಭೂಮಿಯ ಭವಿಷ್ಯದ ಕುರಿತು ನಿಮ್ಮ ಅಭಿಪ್ರಾಯ ?

ವಿಲಾಸ ಶೇರಖಾನ :
ನೋಡ್ರೀ, ಇಂದಿನ ಆಧುನಿಕ ಕಾಲದ ಮನರಂಜನೆಯ ವಿವಿಧ ಮಾಧ್ಯಮ ಪ್ರಕಾರಗಳಿಗೆ ಮೂಲ ರಂಗಭೂಮಿಯೆಂದು ದೃಢವಾಗಿ ಹೇಳಬಹುದು. ಆಯಾ ಕಾಲಕ್ಕೆ ಒಂದೊಂದು ಪ್ರಕಾರವು ಜನಪ್ರಿಯಗೊಳ್ಳುವುದು ಆಯಾ ಕಾಲಮಾನದ ಜನರ ಅಭಿರುಚಿಯನ್ನು ಅವಲಂಭಿಸಿರುತ್ತದೆ. ಅದರಂತೆ ಈಗಿನ ಕಾಲಚಕ್ರದಲ್ಲಿ ಜನರು ಎಲೆಕ್ಟ್ರಾನಿಕ್ ಮೇಡಿಯಾಗಳನ್ನು ಬಹಳವಾಗಿ ಅವಲಂಭಿಸಿರುವುದು ಎಲ್ಲರಿಗೂ ಗೊತ್ತಿರುವಂಥದ್ದೆ. ಕಾಲಚಕ್ರದ ಸುಳಿಯಲ್ಲಿ ಕೆಳಗಿದ್ದುದು  ಮೇಲೆ ಬರುತ್ತದೆ, ಮೇಲೆ ಬಂದುದು ಮುಂದೊಂದು ದಿನ ಕೆಳಗಿಳಿಯುತ್ತದೆ. ಅದರಂತೆ ಕಲಾಪ್ರಕಾರದ ಯಾವುದನ್ನೇ ತೆಗೆದುಕೊಳ್ಳಿ, ಕಲೆಯನ್ನು ಆರಂಭಿಸಬೇಕಾದರೆ ಮೂತತ್ವಗಳನ್ನು ಅರಿಕೊಂಡಾಗ ಮಾತ್ರ ಆ ಕಲೆ ನಮಗೆ ಒಲಿಯುವಂತೆ ಮನರಂಜನೆಯ ಹಲವಾರು ಪ್ರಕಾರಗಳು ವಿಕಾಸಗೊಳ್ಳುವುದು ಸಹ ರಂಗಭೂಮಿಯೆಂಬ ಬುನಾದಿಯ ಮೇಲೆ ಅಲ್ಲವೇ ? ಭದ್ರ ಬುನಾದಿಯಿಲ್ಲದ ಯಾವುದೇ ಕಲಾಪ್ರಕಾರದ ಕಟ್ಟಡವು ಬಹುಕಾಲ ನಿಲ್ಲಲಾರದು ಎಂಬುದು ಸೃಷ್ಟಿಯ ಚೆಲುವಿನಷ್ಟೇ ಸತ್ಯವಾಗಿದೆ. ಹೀಗಾಗಿ ರಂಗಭೂಮಿ ನಶಿಸುತ್ತಿದೆಯೆಂಬುದು ಡೋಂಗಿ ಜನರ ಅಭಿಪ್ರಾಯವಾಗಿದೆ. ಅದಕ್ಕೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

    ಬಹಳ ಸಂತೋಷ ವಿಲಾಸ ಶೇರಖಾನ, ನೀವು ಬಿಡುವಿಲ್ಲದ ನಿಮ್ಮ ಚಟುವಟಿಕೆಗಳ ಮದ್ಯೆದಲ್ಲಿ ಇಷ್ಟೋತ್ತು ನಿಮ್ಮ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ನಮ್ಮ ಸಂಸ ರಂಗಪತ್ರಿಕಾ ಬಳಗದ ಪರವಾಗಿ ನಿಮಗೆ ಧನ್ಯವಾದಗಳು. ಉತ್ತಮ ಭವಿಷ್ಯ ನಿಮ್ಮದಾಗಲಿ. ಹೆಚ್ಚಿನ ಸಾಧನೆಗಳು ನಿಮ್ಮಿಂದ ದಾಖಲಾಗಲಿ.

ವಿಲಾಸ ಶೇರಖಾನ : ತುಂಬಾ ಸಂತೋಷ ಸರ್, ನನ್ನ ಪಾಡಿಗೆ ಕೆಲಸ ಮಾಡುತ್ತಿದ್ದವನನ್ನು ಮಾತಾಡಿಸಿ ನನ್ನ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಿದ ಸಂಸ ಪತ್ರಿಕೆಯ ಎಲ್ಲಾ ಸ್ನೇಹಿತರಿಗೆ ನನ್ನ ಶುಭಾಶಯಗಳು ಮತ್ತು ಓದುಗರಿಗೂ ಸಹ. ನಿಮ್ಮ ಪತ್ರಿಕೆಯನ್ನು ಕುತೂಹಲದಿಂದ ಹಲವಾರು ವರುಷಗಳಿಂದ ಕಣ್ಣಾಡಿಸುತ್ತಿರುವೆನು. ಬಹಳ ಕುತೂಹಲಕರ ಮತ್ತು ಆಸಕ್ತಿಯ ವಿಷಯಗಳತ್ತ ಗಮನಹರಿಸಿರುತ್ತೀರಿ. ಹೀಗೆ ಮುಂದುವರಿಯಲಿ ನಿಮ್ಮ ದಣಿವರಿಯದ ರಂಗಕಾಯಕ. ಶುಭವಾಗಲಿ. ನಮಸ್ಕಾರಗಳು.

ಕಾಮೆಂಟ್‌ಗಳಿಲ್ಲ: