ಸೌಜನ್ಯ: ಪ್ರಜಾವಾಣಿ
ಕರ್ನಾಟಕ ಸರ್ಕಾರಕ್ಕಾಗಿ ಕನ್ನಡ ಗಣಕ ಪರಿಷತ್ತು `ನುಡಿ' ಎಂಬ ಕನ್ನಡ ತಂತ್ರಾಂಶವನ್ನು ರೂಪಿಸಿದ ದಿನಗಳಲ್ಲಿ ಪೂರ್ಣಚಂದ್ರ ತೇಜಸ್ವಿ ಸಾಂಸ್ಕೃತಿಕವಾಗಿ ಬಹುಮುಖ್ಯವಾಗುವ ಪ್ರಶ್ನೆಯೊಂದನ್ನು ಎತ್ತಿದ್ದರು. ಅವರು ಈ ತಂತ್ರಾಂಶದ ಗ್ರಾಫಿಕ್ ಯೂಸರ್ ಇಂಟರ್‌ಫೇಸ್ ಅನ್ನು ಕನ್ನಡಕ್ಕೆ ಅನುವಾದಿಸುವ ಅಗತ್ಯವೇನು ಎಂದಿದ್ದರು. ಗ್ರಾಫಿಕ್ ಯೂಸರ್ ಇಂಟರ್ ಫೇಸ್ ಅಥವಾ ಜಿಯುಐ ಎಂದರೆ ಏನು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದು.
ಇದು ಕಂಪ್ಯೂಟರ್ ಮತ್ತು ಮನುಷ್ಯನ ನಡುವಣ ಸಂವಹನಕ್ಕೆ ಅನುವು ಮಾಡಿಕೊಡುವ ಸವಲತ್ತು. ಇದರಲ್ಲಿ ನಿಮ್ಮ ಕಂಪ್ಯೂಟರಿನ ಡೆಸ್ಕ್‌ಟಾಪ್‌ನ ಮೇಲೆ ಕಾಣಿಸುವ ಐಕಾನ್‌ಗಳಿಂದ ಆರಂಭಿಸಿ ತಂತ್ರಾಂಶವೊಂದನ್ನು ತೆರೆದಾಗ ಕಾಣಿಸುವ ಫೈಲ್, ಎಡಿಟ್ ಇತ್ಯಾದಿ `ಮೆನು' ತನಕದ ಎಲ್ಲವೂ ಒಳಗೊಂಡಿದೆ. ನುಡಿ ತಂತ್ರಾಂಶದಲ್ಲಿ ಇವನ್ನೆಲ್ಲಾ ಅನುವಾದಿಸಲಾಗಿತ್ತು. ಉದಾಹರಣೆಗೆ ಇಂಗ್ಲಿಷ್‌ನ `ಫೈಲ್' ಇಲ್ಲಿ `ಕಡತ'ವಾಗಿತ್ತು. `ಎಡಿಟ್' ಎಂಬುದು `ಸಂಪಾದಿಸು' ಎಂದಾಗಿತ್ತು. ಹಾಗೆಯೇ `ಕಟ್' ಎಂಬುದು ಕತ್ತರಿಸು ಎಂದೂ `ಪೇಸ್ಟ್' ಎಂಬುದು `ಅಂಟಿಸು' ಎಂದೂ ಅನುವಾದಗೊಂಡಿತ್ತು. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಸಂದರ್ಭದಲ್ಲಿ ಕನ್ನಡವನ್ನು ಪ್ರಸ್ತುತವಾಗಿಸುವುದಕ್ಕಾಗಿ ಅಗತ್ಯವಿರುವ ನೀತಿಯೊಂದಕ್ಕಾಗಿ ವಾದಿಸುತ್ತಿದ್ದ ತೇಜಸ್ವಿಯಂಥ ಲೇಖಕ ಈ ಅನುವಾದಗಳನ್ನು ಏಕೆ ಪ್ರಶ್ನಿಸಿದರು?
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇತರ ತಂತ್ರಜ್ಞಾನಗಳಿಗಿಂತ ಹೇಗೆ ಭಿನ್ನ ಎಂಬುದನ್ನು ಅರಿಯಬೇಕಾಗುತ್ತದೆ. ಉಳಿದೆಲ್ಲಾ ತಂತ್ರಜ್ಞಾನಗಳು ಭೌತಿಕವಾದುವು. ಆದರೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಭೌತಿಕವಾಗಿರುವಷ್ಟೇ ಬೌದ್ಧಿಕವೂ ಹೌದು. ಪರಿಣಾಮವಾಗಿ ಇತರ ತಂತ್ರಜ್ಞಾನಗಳ ಸಂದರ್ಭದಲ್ಲಿ ಎದುರಾಗದ ವಿಶಿಷ್ಟ ಸಾಂಸ್ಕೃತಿಕ ಪ್ರಶ್ನೆಗಳು ಇಲ್ಲಿ ಎದುರಾಗುತ್ತದೆ. ತೇಜಸ್ವಿ ಈ ಪ್ರಶ್ನೆಯನ್ನು ಎತ್ತಿದ್ದ ಹೊತ್ತಿನಲ್ಲಿ ಜಾಗತಿಕ ಸಾಫ್ಟ್‌ವೇರ್ ದೈತ್ಯರಾರೂ ತಮ್ಮ ತಂತ್ರಾಂಶಗಳನ್ನು ಲೋಕಲೈಜ್ ಮಾಡುವ ಅಥವಾ ಸ್ಥಳೀಯ ಭಾಷೆಗಳಿಗೆ ಅನುವಾದಿಸುವ ಕೆಲಸವನ್ನಿನ್ನೂ ಆರಂಭಿಸಿರಲಿಲ್ಲ. ಆದರೆ ಈಗ ಬಹುತೇಕ ತಂತ್ರಾಂಶ ಕಂಪೆನಿಗಳು ತಮ್ಮ ಸಾಫ್ಟ್‌ವೇರ್‌ಗಳ ಲೋಕಲೈಜೇಶನ್ ಪ್ರಕ್ರಿಯೆಯನ್ನು ಆರಂಭಿಸಿವೆ. ಈಗ ಗೂಗಲ್ ಕೂಡಾ ಕನ್ನಡ ಭಾಷೆಯ ಇಂಟರ್‌ಫೇಸ್‌ನಲ್ಲಿ ಲಭ್ಯ. ಮೈಕ್ರೋಸಾಫ್ಟ್‌ನ `ವಿಂಡೋಸ್'ಗೆ ಈಗ ಕನ್ನಡದ ಹೊದಿಕೆ ಇದೆ. ಈ ಕನ್ನಡದ ಹೊದಿಕೆ ಕನ್ನಡ ಮಾತ್ರ ಬಲ್ಲವನಿಗೂ ಕಂಪ್ಯೂಟರನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಎಂಬುದು ಪೂರ್ವಪಕ್ಷ. ಇದು ಮೇಲ್ನೋಟಕ್ಕೆ ಸರಿ ಎನ್ನಿಸುತ್ತದೆ. ಹಾಗಿದ್ದರೆ ತೇಜಸ್ವಿ ಇದನ್ನೇಕ್ಕೆ ಪ್ರಶ್ನಿಸಿದರು?
ತೇಜಸ್ವಿಯವರ ಮಾತುಗಳನ್ನೇ ಉಲ್ಲೇಖಿಸುವುದಾದರೆ `ಕಂಪ್ಯೂಟರ್‌ನಲ್ಲಿ ಕನ್ನಡ ಇರಬೇಕು. ಕನ್ನಡದಲ್ಲಿ ಕಂಪ್ಯೂಟರನ್ನೂ ಬಳಸಬೇಕು. ಇದನ್ನು ಮಾಡುವಾಗ ಕಂಪ್ಯೂಟರ್ ತಂತ್ರಜ್ಞಾನವೆಂಬುದು ಜಾಗತಿಕ ತಂತ್ರಜ್ಞಾನ ಎಂಬುದನ್ನು ನಾವು ಮರೆಯಬಾರದು. ಜಾಗತಿಕವಾಗಿ ಶಿಷ್ಟಗೊಂಡಿರುವ ಯೂಸರ್ ಇಂಟರ್ ಫೇಸ್‌ನ ಪಾರಿಭಾಷಿಕಗಳನ್ನು ಕನ್ನಡಕ್ಕೆ ಅನುವಾದಿಸುವುದರಿಂದ ಕನ್ನಡದಲ್ಲಷ್ಟೇ ಕಂಪ್ಯೂಟರ್ ಬಳಸುವ ಒಬ್ಬ ಕೇವಲ ಪಾರಿಭಾಷಿಕಗಳ ಕಾರಣಕ್ಕೆ ಈ ತಂತ್ರಜ್ಞಾನದ ಜಾಗತಿಕ ಸಾಧ್ಯತೆಗಳಿಂದ ವಂಚಿತನಾಗಬಾರದು'.
ಕನ್ನಡ ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿಯ ತನಕ ಓದಿ ಪದವಿ ಪೂರ್ವ ಶಿಕ್ಷಣದಲ್ಲಿ ವಿಜ್ಞಾನವನ್ನು ಆರಿಸಿಕೊಂಡು ಇಂಗ್ಲಿಷ್‌ನಿಂದಾಗಿ ತೊಂದರೆ ಅನುಭವಿಸಿದ ಯಾರಿಗೇ ಆದರೂ ತೇಜಸ್ವಿ ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ. ಗಣಿತ ಮತ್ತು ವಿಜ್ಞಾನಗಳಲ್ಲಿ ಕನ್ನಡ ಪಠ್ಯ ಪುಸ್ತಕಗಳು ತಮ್ಮದೇ ಆದ ಕನ್ನಡ/ಸಂಸ್ಕೃತ ಪಾರಿಭಾಷಿಕಗಳನ್ನು ಬಳಸುತ್ತವೆ. ಅವುಗಳೆಲ್ಲವೂ ಪದವಿ ಪೂರ್ವ ಹಂತದಲ್ಲಿ ಇಂಗ್ಲಿಷ್‌ನಲ್ಲಿರುತ್ತವೆ. ತಾನು ಹಿಂದೆ ಕಲಿತಿದ್ದನ್ನೇ ಮತ್ತೆ ಇಂಗ್ಲಿಷ್‌ನ ಪಾರಿಭಾಷಿಕಗಳಲ್ಲಿ ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಆರು ತಿಂಗಳು ಮುಗಿದು ಹೋಗಿರುತ್ತದೆ. ಅನೇಕ ವಿದ್ಯಾರ್ಥಿಗಳು ಇದೊಂದು ಕಾರಣದಿಂದಲೇ ಮೊದಲ ವರ್ಷದಲ್ಲಿ ಬಹಳ ಕಡಿಮೆ ಅಂಕಗಳನ್ನು ಪಡೆದೋ ಇಲ್ಲವೇ ಅನುತ್ತೀರ್ಣರಾಗಿಯೋ ತಮ್ಮ ಶಿಕ್ಷಣದ ಹಾದಿಯನ್ನೇ ಬದಲಾಯಿಸಿಕೊಂಡು ಬಿಡುತ್ತಾರೆ. ಹಾಗಿದ್ದರೆ ಗಣಿತ, ವಿಜ್ಞಾನಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದು ಸಮಸ್ಯೆಗೆ ಪರಿಹಾರವೇ? ಖಂಡಿತವಾಗಿಯೂ ಇದು ಪರಿಹಾರವಾಗಲಾರದು. ಆದರೆ ಗಣಿತ ಮತ್ತು ವಿಜ್ಞಾನಗಳನ್ನು ಕನ್ನಡದಲ್ಲಿ ಕಲಿಯುತ್ತಲೇ ಅದರ ಅಂತರರಾಷ್ಟ್ರೀಯ ಸಾಧ್ಯತೆಗಳಿಗೆ ತೆರೆದುಕೊಂಡಿರುವ ಮಧ್ಯಮ ಮಾರ್ಗವನ್ನು ಅನುಸರಿಸಬೇಕು. ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಅನೇಕರು ಈ ಮಧ್ಯಮ ಮಾರ್ಗವನ್ನು ನಮಗೆ ತೋರಿಸಿಕೊಟ್ಟಿದ್ದಾರೆ. ಕಂಪ್ಯೂಟರ್‌ನ ವಿಷಯದಲ್ಲಿ ಇಂಥದ್ದೊಂದು ಮಧ್ಯಮ ಮಾರ್ಗದ ಅಗತ್ಯವಿದೆ ಎಂಬುದು ತೇಜಸ್ವಿಯವರ ನಿಲುವಾಗಿತ್ತು.
ಕಂಪ್ಯೂಟರನ್ನು ಎಲ್ಲರ ಬಳಕೆಗೆ ಸಿದ್ಧಪಡಿಸಬೇಕೆಂಬ ಧಾವಂತದಲ್ಲಿ ಕನ್ನಡ ಸಂದರ್ಭಕ್ಕೆ ಬಂದ ತಂತ್ರಜ್ಞಾನಗಳಲ್ಲಿ ಕಂಪ್ಯೂಟರ್ ಮೊದಲನೆಯದ್ದೇನೂ ಅಲ್ಲ, ಹಾಗೆಯೇ ಇದು ಕೊನೆಯದೂ ಆಗುವುದಿಲ್ಲ ಎಂಬ ವಾಸ್ತವಕ್ಕೆ ಕುರುಡಾಗುತ್ತಿದ್ದೇವೆಯೇ ಎಂಬ ಅನುಮಾನ ಬರುವಂಥ ಬೆಳವಣಿಗೆಗಳು ನಡೆದಿವೆ. ತೇಜಸ್ವಿಯವರ ಪ್ರಶ್ನೆಯ ಹಿಂದಿನ ಧ್ವನಿಯೂ ಇದೇ ಆಗಿತ್ತು. ದಿನ ನಿತ್ಯದ ಬಳಕೆಯಲ್ಲಿರುವ ಅನೇಕ ತಂತ್ರಜ್ಞಾನಗಳು ಕನ್ನಡದ ಸಾಂಸ್ಕೃತಿಕ ಅನುಭವದಲ್ಲಿ ಹುಟ್ಟಿಕೊಂಡವಲ್ಲ. ಸಹಜವಾಗಿಯೇ ಇವುಗಳಿಗೆ ಸಂಬಂಧಿಸಿದ ಪಾರಿಭಾಷಿಕಗಳು ಕನ್ನಡದಲ್ಲಿ ಇಲ್ಲ. ಅನುವಾದಿಸಬೇಕೆಂದರೂ ಸಾಂಸ್ಕೃತಿಕ ಅನುಭವದಲ್ಲಿ ಇದಕ್ಕೆ ಅಗತ್ಯವಿರುವ ಪರಿಕಲ್ಪನೆಗಳೇ ಇಲ್ಲದೇ ಇದ್ದುದರಿಂದ ಅತ್ಯಂತ ಕೃತಕವಾದ ಅನುವಾದವಷ್ಟೇ ಸಾಧ್ಯವಾಗಿತ್ತು.
ರೈಲು, ಬಸ್ಸು, ಮೊಟಾರ್ ಸೈಕಲ್, ರೇಡಿಯೋ, ಟಿ.ವಿ.ಗಳೆಲ್ಲವಕ್ಕೂ ಕನ್ನಡದ್ದೇ ಆಗ ಪದಗಳನ್ನು ಸೃಷ್ಟಿಸಿ ಕೊನೆಗೆ ಅವು ಬಳಕೆಯೇ ಆಗದೇ ಉಳಿದು ಹೋಗಿರುವ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ. ಕಂಪ್ಯೂಟರ್ ಎಂಬುದಕ್ಕೆ ಈ ಪದದ ಅಕ್ಷರಾರ್ಥವನ್ನು ಧ್ವನಿಸುವ `ಗಣಕ' ಎಂಬ ಪದ ಬಹುಕಾಲ ಬಳಕೆಯಲ್ಲಿತ್ತು. ಈಗಲೂ ಕೆಲವರು ಪ್ರಜ್ಞಾಪೂರ್ವಕವಾಗಿ ಈ ಪದವನ್ನು ಬಳಸುವುದುಂಟು. ಆದರೆ ಒಮ್ಮೆ ಕಂಪ್ಯೂಟರ್ ಬಳಸಿ ಅದರ ನಿಜ ಸ್ವರೂಪವನ್ನು ಅರಿತ ಕನ್ನಡಿಗನಿಗೆ `ಗಣಕ' ಎಂಬ ಪದಕ್ಕಿಂತ ಕಂಪ್ಯೂಟರ್ ಎಂಬ ಪದವೇ ಹೆಚ್ಚು ಸೂಕ್ತ ಎನಿಸತೊಡಗುತ್ತದೆ. ಕಂಪ್ಯೂಟರ್ ಎಂಬ ಇಂಗ್ಲಿಷ್ ಪದದ ಅರ್ಥವೂ `ಗಣಕ' ಎಂದೇ ಅಲ್ಲವೇ. ಬಳಕೆಯಲ್ಲಷ್ಟೇ ಅದಕ್ಕೆ ನಾವು ಈಗ ಬಳಸುತ್ತಿರುವ ಕಂಪ್ಯೂಟರ್ ಎಂಬ ಅರ್ಥ ದೊರೆಯಿತಲ್ಲವೇ ಎಂದೆಲ್ಲಾ ಹೇಳುವುದು ಕೇವಲ ವಾದದ ಮಾತು. ಆದರೆ ನಮಗೆ ಕಂಪ್ಯೂಟರ್ ಎಂಬ ಪದ ದೊರೆಯುವ ಹೊತ್ತಿಗೆ ಅದಕ್ಕೆ ವಿಶೇಷಾರ್ಥ ಪ್ರಾಪ್ತವಾಗಿತ್ತು ಎಂಬ ವಾಸ್ತವವನ್ನು ಮರೆಯಲು ಸಾಧ್ಯವೇ?
ಹಾಗಿದ್ದರೆ ಕಂಪ್ಯೂಟರನ್ನು ಕನ್ನಡ ಮಾತ್ರ ಬಲ್ಲವರೂ ಬಳಸುವಂತೆ ಮಾಡುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇತರ ತಂತ್ರಜ್ಞಾನಗಳು ಕನ್ನಡದ ಸಂದರ್ಭದಲ್ಲಿ ತಮಗೆ ಬೇಕಾದ ಪಾರಿಭಾಷಿಕಗಳನ್ನು ಹೇಗೆ ಸೃಷ್ಟಿಸಿಕೊಂಡವು ಎಂಬುದನ್ನು ನೋಡಬೇಕಾಗುತ್ತದೆ. ನಿರಕ್ಷರರಾದ ರೈತರೂ ನೀರಾವರಿಗೆ ವಿದ್ಯುತ್ ಚಾಲಿತ ಪಂಪ್‌ಸೆಟ್ ಬಳಸುತ್ತಾರೆ. ಇಂಗ್ಲಿಷ್‌ನ ಅರಿವೇ ಇಲ್ಲದ ಬಡಗಿಗಳು `ಲೇತ್' ಬಳಸುತ್ತಾರೆ. ವಾಹನ ದುರಸ್ತಿಯ ವೃತ್ತಿಯಲ್ಲಿರುವವರು ಬಿಡಿ ಭಾಗಗಳಿಗೆ ಬಳಸುವ ಹೆಸರುಗಳು ಯಾವ ಭಾಷೆಯವು? ಅವುಗಳು ಇಂಗ್ಲಿಷ್ ಮೂಲದ ಪದಗಳೇ ಆಗಿದ್ದರೂ ಕನ್ನಡ ಮಾತ್ರ ಬಲ್ಲ ಈ ತಂತ್ರಜ್ಞರಿಂದಾಗಿ ಅವು ಕನ್ನಡದ ಪದಗಳೇ ಆಗಿಬಿಡುತ್ತವೆ. ಬೆಂಗಳೂರಿನ ಎಸ್.ಪಿ. ರಸ್ತೆಯಲ್ಲಿ ಕಂಪ್ಯೂಟರ್ ಅಸೆಂಬ್ಲ್ ಮಾಡುವ, ಸಾಫ್ಟ್‌ವೇರ್‌ಗಳನ್ನು ಅನುಸ್ಥಾಪಿಸಿಕೊಡುವ ಕೆಲಸಗಾರರಿಗೂ ಗೊತ್ತಿರುವ ಇಂಗ್ಲಿಷ್ ಎಂಬುದು ಪಾರಿಭಾಷಿಕಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅಂದರೆ ಅವರು ಆಡುವ ದೈನಂದಿನ ನುಡಿಯೊಳಗೇ ಈ ಇಂಗ್ಲಿಷ್ ಪದಗಳು ಬೆರೆತು ಹೋಗಿಬಿಟ್ಟಿರುತ್ತವೆ.
ಇವೆಲ್ಲವೂ ಕಂಪ್ಯೂಟರನ್ನು ಕನ್ನಡಕ್ಕೆ ಹೇಗೆ ಹತ್ತಿರವಾಗಿಸಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಲ್ಲಿ ಸಹಕಾರಿಯಾಗಬಹುದು. ಇನ್ನು ತಂತ್ರಾಂಶಗಳನ್ನು ಸೃಷ್ಟಿಸುವ `ಪ್ರೊಗ್ರಾಮಿಂಗ್ ಭಾಷೆ'ಯಂತೂ ಇಂಗ್ಲಿಷ್‌ನಲ್ಲಿ ಇಲ್ಲ. ಅಲ್ಲಿ ರೋಮನ್ ಲಿಪಿಯಷ್ಟೇ ಇದೆ. ಈ ಲಿಪಿಯಲ್ಲಿ ಯಂತ್ರಕ್ಕೆ ಅರ್ಥವಾಗುವಂಥ ಸಂಜ್ಞೆಗಳನ್ನು ಸೃಷ್ಟಿಸಬೇಕು. ಇದನ್ನು ಭಾಷೆ ಎನ್ನುವುದಕ್ಕಿಂತ ಸಂಜ್ಞೆ ಎಂದು ಭಾವಿಸಿದಾಗ ಕನ್ನಡವಷ್ಟೇ ಗೊತ್ತಿರುವವರಿಗೆ ಇದನ್ನು ಹೇಗೆ ಕಲಿಸಬೇಕು ಎಂಬುದು ಅರ್ಥವಾಗುತ್ತದೆ. ಕನ್ನಡವನ್ನಷ್ಟೇ ಬಲ್ಲವರಿಗೆ ಕಂಪ್ಯೂಟರ್ ತಂತ್ರಜ್ಞಾನವನ್ನು ಪರಿಣಿತ ಮಟ್ಟದಲ್ಲಿ ಬಳಸುವುದಕ್ಕೆ ಅಡ್ಡಿಯಾಗಿರುವುದು ಇಂಗ್ಲಿಷ್‌ನಲ್ಲಿರುವ ಪಾರಿಭಾಷಿಕಗಳಲ್ಲ. ಈ ತಂತ್ರಜ್ಞಾನವನ್ನು ಕನ್ನಡ ಬಲ್ಲವರಷ್ಟೇ ಅರ್ಥಮಾಡಿಕೊಳ್ಳದಂತೆ ನಾವೇ ಸೃಷ್ಟಿಸಿರುವ `ಬೌದ್ಧಿಕ ಅಡೆ-ತಡೆ'ಗಳಲ್ಲಿ. ಕಂಪ್ಯೂಟರಿಗಿರುವ ಬೌದ್ಧಿಕ ಆಯಾಮ ಅದರ ಮೊದಲ ತಲೆಮಾರಿನ ಬಳಕೆದಾರರನ್ನು `ಉನ್ನತ ವರ್ಗ'ವನ್ನಾಗಿಸಿಬಿಟ್ಟಿತು. ಈ `ಉನ್ನತ ವರ್ಗ'ಕ್ಕೆ ಇಂಗ್ಲಿಷ್ ಗೊತ್ತಿದ್ದರಿಂದ ಕಂಪ್ಯೂಟರ್ ಬಳಕೆಗೆ ಇಂಗ್ಲಿಷ್‌ನ ಅರಿವು ಬೇಕೆಂಬ ಪೂರ್ವಗ್ರಹ ಬಲವಾಗುತ್ತಾ ಹೋಯಿತು.
ಕಂಪ್ಯೂಟರನ್ನು ಕನ್ನಡಕ್ಕೆ ಹತ್ತಿರವಾಗಿಸಬೇಕು ಎಂದು ಹೊರಟವರು ನಿಜ ಅರ್ಥದಲ್ಲಿ ಕಂಪ್ಯೂಟರ್ ಬಳಕೆಯನ್ನು ಹೆಚ್ಚಿಸುವುದಕ್ಕೆ ಅಗತ್ಯವಿರುವುದನ್ನು ಮಾಡದೆ ತಂತ್ರಾಂಶಗಳನ್ನು, ಯಂತ್ರಾಂಶಗಳನ್ನು ಮತ್ತು ಪಾರಿಭಾಷಿಕಗಳನ್ನು ಅನುವಾದಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಲು ಹೊರಟರು. ಹೀಗಾಗಿ ಕಂಪ್ಯೂಟರನ್ನು ಅನುವಾದಿಸಿ ಅರ್ಥ ಮಾಡಿಕೊಳ್ಳಬೇಕೆಂಬ ಮನಸ್ಥಿತಿ ನಮ್ಮಲ್ಲಿನ್ನೂ ಉಳಿದುಕೊಂಡಿದೆ. ಕನ್ನಡವಷ್ಟೇ ಬಲ್ಲವರಿಗೆ ಬೇಕಿರುವುದು ಪಾರಿಭಾಷಿಕಗಳು ಮತ್ತು ಯೂಸರ್ ಇಂಟರ್ ಫೇಸ್‌ಗಳ ಅನುವಾದವಲ್ಲ ಕಂಪ್ಯೂಟರ್ ಬಳಸಿ ಕಲಿಯುವ ಅವಕಾಶ ಮಾತ್ರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ