-ಅರುಣ್ ಜೋಳದಕೂಡ್ಲಿಗಿ
ಈ ತಲೆಬರಹವನ್ನು ನೋಡಿ ನಗು ಬರುವುದು ಸಹಜ. ನಗುವಿಗೆ ಕಾರಣಗಳು ಹೀಗಿರಬಹುದು.
ಒಂದು: ಮೊಬೈಲ್ನಂತಹ ಅತ್ಯಾಧುನಿಕ ಯಂತ್ರದಲ್ಲಿ ಇವರು ಜಾನಪದವನ್ನು ಹುಡುಕುವುದೇ
ಹುಚ್ಚುತನ ಎಂದು ನಕ್ಕಿರಬಹುದು, ಹೀಗೆ ನಕ್ಕವರ ಮನದಲ್ಲಿ ಜಾನಪದ ಎಂದರೆ ಇದು ಎಂಬ ಒಂದು
ನಿದರ್ಿಷ್ಟ ವ್ಯಾಖ್ಯಾನವಿದೆ. ಎರಡು: ಮೊಬೈಲ್ನಲ್ಲಿ ಜಾನಪದ ಇರುವುದಾದರೂ ಹೇಗೆ ಎಂಬ
ತುಂಟ ಪ್ರಶ್ನೆಯನ್ನು ತಾವೇ ಕೇಳಿಕೊಂಡು ನಕ್ಕಿರಬಹುದು. ಈ ನಗೆ ಎಲ್ಲವನ್ನೂ
ನಕಾರಾತ್ಮಕವಾಗಿ ನೋಡುವವರಲ್ಲಿ ಹುಟ್ಟಿರಲಿಕ್ಕೆ ಸಾದ್ಯವಿದೆ. ಹೀಗೆ ನಕ್ಕವರಲ್ಲಿ
ಮೊಬೈಲಿನಲ್ಲಿ ಜಾನಪದವನ್ನು ಹೇಗೆ ನಿರೂಪಿಸಿರಬಹುದು ಎಂಬ ಕುತೂಹಲವಂತೂ ಇದ್ದೇ ಇದೆ.
ಇಂದೂ ನಾವೆಲ್ಲರೂ ಒಪ್ಪಿಕೊಳ್ಳಬೇಕಾಗಿರುವ ಸಂಗತಿಯೆಂದರೆ ಮೊಬೈಲ್ ಅತ್ಯಂತ ಪ್ರಭಾವಿ
ಸಂವಹನ ಮಾಧ್ಯಮವಾಗಿ ಮಾರ್ಪಟ್ಟಿರುವುದು, ಮತ್ತು ಅದು ಎಲ್ಲಾ ವರ್ಗದ ಜನರನ್ನು
ಭಿನ್ನವಾಗಿ ಆಕ್ರಮಿಸಿರುವುದು. ಹಾಗಾಗಿ ಇಂದು ನಾವು ಒಟ್ಟು ಸಾಮಾಜಿಕ ವ್ಯವಸ್ಥೆಯನ್ನು
ವಿವರಿಸಿಕೊಳ್ಳುವಾಗ, ಮೊಬೈಲ್ ಉಂಟುಮಾಡಿರುವ ಸಾಮಾಜಿಕ ಸ್ಥಿತ್ಯಂತರವನ್ನು
ಗಮನಿಸಲೇಬೇಕು. ಅದರ ಆಥರ್ಿಕ ಪರಿಣಾಮವನ್ನು ವಿವರಿಸಿಕೊಳ್ಳುವ ಅಗತ್ಯವಿರುವಂತೆಯೇ ಅದರ
ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಣಾಮವನ್ನು ಕುರಿತೂ ಸಹ ಮಾತನಾಡಬೇಕಿದೆ. ಈ ಲೇಖನ
ಎರಡನೇ ಪರಿಣಾಮವನ್ನು ಗಮನದಲ್ಲಿರಿಸಿಕೊಂಡಿದೆ.
ಮೊಬೈಲ್ ಜಾನಪದ ಎನ್ನುವ ಪರಿಕಲ್ಪನೆಯನ್ನು ಮೊದಲು ವಿವರಿಸಿಕೊಳ್ಳಬೇಕು.
ಸಂವಹನಕ್ಕಾಗಿ ಮಾತುಗಳ ಧ್ವನಿ ತರಂಗಗಳನ್ನು ಕೇಳಿಸುವ ಮತ್ತು ತಲುಪಿಸುವ, ಅಂತೆಯೇ
ಸಂದೇಶವನ್ನು ರವಾನಿಸುವ ಒಂದು ಯಂತ್ರ ಎಂದು ಈ ಲೇಖನದಲ್ಲಿ ಮೊಬೈಲ್ನ್ನು
ಗುರುತಿಟ್ಟುಕೊಳ್ಳಲಾಗಿದೆ. ಮೊಬೈಲ್ನ ಕಾರ್ಯವೈಖರಿಯ ಕಾರಣಕ್ಕೆ ಮೊಬೈಲ್ ಬಗೆಗೆ
ಹುಟ್ಟಿಕೊಂಡಿರುವ ಸಂಗತಿಗಳ ಮೂಲಕ ಮೊಬೈಲ್ ಜಾನಪದವನ್ನು ಗುರುತಿಸಲು ಸಾದ್ಯವಿದೆ.
ಹಾಗೆಯೇ ಮೊಬೈಲ್ನಲ್ಲಿಯೇ ಮಾತನಾಡುವ ಮತ್ತು ಸಂದೇಶ ಕಳಿಸುವ ಕಾರ್ಯವೈಖರಿಯಲ್ಲಿ ಉಂಟಾಗುವ
ಜಾನಪದ ಪ್ರಭಾವಗಳನ್ನು ಗುರುತಿಸಲು ಸಾದ್ಯವಿದೆ. ಮೊಬೈಲ್ ಯಂತ್ರವು ಹೊಂದುವ ಬಹು
ಆಯ್ಕೆಯನ್ನು ಆಧರಿಸಿ ಅದರ ವ್ಯಾಖ್ಯಾನಗಳು ಬೇರೆಯೇ ಆಗುತ್ತವೆ. ಹಾಗಾಗಿ ಇಲ್ಲಿ ಅದರ ಬಹು
ಆಯ್ಕೆಯನ್ನು ಪ್ರಾಸಂಗಿಕವಾಗಿ ಚರ್ಚಿಸಬಹುದೇ ವಿನಹ ಅದನ್ನು ಒಳಗೊಂಡು ವಿವರಿಸುವುದು
ಕೊಂಚ ತೊಡಕಿನದು.
ಅದನ್ನು ಹೀಗೆ ನೋಡಬಹುದು, ಮೊಬೈಲಿನಲ್ಲಿ ರೇಡಿಯೋ ಇರುತ್ತದೆ ರೇಡಿಯೋದಲ್ಲಿ ಜಾನಪದದ
ಬಳಕೆಯ ಒಟ್ಟು ಚರ್ಚೆಯು ಮೊಬೈಲಿನ ಚರ್ಚೆಯಾಗಿ ಬಳಕೆಯಾಗಲು ಸಾದ್ಯವಿದೆ. ಅಂತೆಯೇ
ಮೊಬೈಲಿನಲ್ಲಿರುವ ಆಡಿಯೋ ವಿಡಿಯೋ ಆಯ್ಕೆ ಮತ್ತು ಕ್ಯಾಮರಾದ ಆಯ್ಕೆ ಮತ್ತು
ಇಂಟರ್ನೆಟ್ನ್ನು ಒಳಗೊಳ್ಳುವ ಸೌಲಭ್ಯ ಇವುಗಳ ನೆಲೆಯಲ್ಲಿ ಮಾಡಬಹುದಾದ ಒಟ್ಟು ಚರ್ಚೆಯೂ
ಮೊಬೈಲ್ ಜಾನಪದದ ಚರ್ಚೆಯಾಗಲು ಸಾದ್ಯವಿದೆ. ಹಾಗಾಗಿ ಈ ತೊಡಕನ್ನು ಬಿಡಿಸಿಕೊಳ್ಳಲು
ಇಲ್ಲಿ ಮೊಬೈಲನ್ನು ಮಾತನಾಡುವ ಮತ್ತು ಮಾತುಗಳನ್ನು ಕೇಳಿಸಿಕೊಳ್ಳುವ ಮತ್ತು
ಸಂದೇಶಗಳನ್ನು ಕಳಿಸುವ ಬಂದ ಸಂದೇಶಗಳನ್ನು ಓದುವ ಒಂದು ಯಂತ್ರ ಎನ್ನುವ ನೆಲೆಯ ಚರ್ಚೆಗೆ
ಹೆಚ್ಚು ಒತ್ತು ಕೊಡಲಾಗಿದೆ.
ಮೊಬೈಲ್ ಬಳಕೆಯ ಮೊದಲ ದಿನಗಳವು, ಕೂಡ್ಲಿಗಿ ತಾಲೂಕು ಕೊಟ್ಟೂರಿನಲ್ಲಿ ನಡೆದ
ಘಟನೆಯೊಂದು ನನಗೆ ನೆನಪಿದೆ. ಕೊಟ್ಟೂರಿನಲ್ಲಿ ಸಿದ್ದೂ ದೇವರಮನೆ ಎಂಬ ಗೆಳೆಯ ಮೊಬೈಲ್
ಬ್ಯುಸಿನೆಸ್ ಮಾಡುತ್ತಿದ್ದ. ಆತನ ಬಳಿ ಮೊದಲು ಮೊಬೈಲ್ ಕೊಂಡವರು ಮೊದಲ ಕರೆಯನ್ನು
ಅಲ್ಲಿನ ಕೊಟ್ಟೂರೇಶ್ವರನ ದೇವಾಲಯಕ್ಕೆ ಮಾಡುತ್ತಿದ್ದರು. ದೇವಾಲಯದ ಪುಜಾರಿ ಪೋನನ್ನು
ಎತ್ತಿ ಅಲ್ಲಿನ ಪೂಜೆಯ ಶಬ್ದವನ್ನು ಕೇಳಿಸುತ್ತಿದ್ದರು. ಅಂದರೆ ಮೊಬೈಲ್ ಕೊಳ್ಳುವವ ಮೊದಲ
ಕರೆಯನ್ನು ದೇವರಿಗೆ ಮಾಡಿದ ಸಂತೃಪ್ತಿಯಲ್ಲಿ ಮರಳುತ್ತಿದ್ದ.
ಹೊಸ ಮೊಬೈಲ್ ಕೊಂಡವರು ಹೊಸ ಕಾರು ಬೈಕನ್ನು ಪೂಜೆ ಮಾಡಿಸುವಂತೆಯೂ ಮೊಬೈಲನ್ನು ಪೂಜೆ
ಮಾಡಿಸುವ ಉದಾಹರಣೆಗಳೂ ಕೊಟ್ಟೂರಿನಲ್ಲಿಯೇ ಪ್ರಚಲಿತವಾಗಿದ್ದವು. ಅಂತೆಯೇ ದೀಪಾವಳಿ
ಹಬ್ಬದ ಆಯುಧ ಪೂಜೆಯಲ್ಲಿಯೂ, ಲಕ್ಷ್ಮಿ ಪೂಜೆಯಲ್ಲಿಯೂ ಮೊಬೈಲ್ ಇಟ್ಟು ಪೂಜೆ ಸಲ್ಲಿಸುವ
ಸಂಗತಿಗಳು ಬೆಳಕಿಗೆ ಬಂದವು. ಇದಕ್ಕೆ ಕಾರಣ ಮೊಬೈಲ್ ಸಾಕ್ಷತ್ ಲಕ್ಷ್ಮಿ ಇದ್ದಂತೆ
ಎನ್ನುವ ನಂಬಿಕೆಗಳು ಪ್ರಚಲಿತವಾದವು. ಅದು ಇನ್ನೂ ಮುಂದುವರೆದು ಜೋತಿಷಿಗಳಲ್ಲಿ ಅದೃಷ್ಠ
ಸಂಖ್ಯೆಯನ್ನು ಕೇಳಿಕೊಂಡು ಆ ಅದೃಷ್ಠ ಸಂಖ್ಯೆಗಳು ಬರುವ ಸಿಮ್ನ ನಂಬರನ್ನು ಆಯ್ಕೆ
ಮಾಡುವಿಕೆ0ುೂ ನಡೆಯಿತು. ಅಂದರೆ ನಗರ ಪ್ರದೇಶದಲ್ಲಿ ಇರುವ ನಂಬಿಕೆಗಳ ಜತೆ ಮೊಬೈಲ್ ಎಂಬ
ಹೊಸ ಯಂತ್ರವೂ ತನ್ನ ಸ್ಥಾನವನ್ನು ಆಕ್ರಮಿಸಿಕೊಳ್ಳತೊಡಗಿತು. ಈಚೆಗೆ ಅವರವರ ಮೊಬೈಲ್
ನಂಬರನ್ನು ಆಧರಿಸಿ ಭವಿಷ್ಯ ಹೇಳುವ ಜೋತಿಷಿಗಳೂ ಇದ್ದಾರಂತೆ.
ಇದು ಗ್ರಾಮೀಣ ಪ್ರದೇಶವನ್ನು ನಿಧಾನವಾಗಿ ಆಕ್ರಮಿಸತೊಡಗಿತು. ಒಮ್ಮೆ ಹಂಪಿ
ವಿಶ್ವವಿದ್ಯಾಲದ ಕ್ಯಾಂಪಸ್ಸಿನ ಸಮೀಪ ಬೆಳಗಾಂ ಕಡೆಯವರು ಕುರಿಯನ್ನು
ನಿಲ್ಲಿಸುತ್ತಿದ್ದರು, ನಾವು ಬೆಳಗ್ಗೆ ವಾಕ್ ಹೋದಾಗ ಆ ಕುರಿಗಾರರನ್ನು ಬೇಟಿಯಾಗಿ
ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆವು. ಅದಕ್ಕಿಂತ ಮುಖ್ಯವಾಗಿ ಅವರು ಮಾಡುವ ಕುರಿಹಾಲಿನ
ಗಟ್ಟಿಯಾದ ಟೀ ಕುಡಿಯಲು ನೆಪ ಮಾಡಿಕೊಂಡು ಹೋಗುತ್ತಿದ್ದೆವು. ಆಗ ಒಂದು ಘಟನೆ ನಡೆಯಿತು.
ಅದೇನೆಂದರೆ ಕುರಿಗಾರರು ಬೆಳಗ್ಗೆ ಅವರ ಮನೆ ದೇವರಾದ ಮೈಲಾರಲಿಂಗನನ್ನು ಪೂಜಿಸುವುದು
ವಾಡಿಕೆ. ಅಂತೆಯೇ ಅವರು ಅದರ ಜತೆ ಮೊಬೈಲ್ನ್ನು ಇಟ್ಟು ಮೈಲಾರಲಿಂಗನನ್ನು ಪೂಜಿಸಿದಷ್ಟೆ
ಭಯ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಆಗ ನಾವು ಮೊಬೈಲ್ ಪೂಜಿಸಿದ್ದು ಏಕೆಂದು ಕೇಳಿದರೆ,
ಅವರ ಉತ್ತರ ಕೂತೂಹಲಕಾರಿಯಾಗಿತ್ತು. ನಾವು ಎಲ್ಲೇ ಇದ್ದರೂ ಮೈಲಾರಲಿಂಗಪ್ಪ ನಮ್ಮನ್ನು
ಹೇಗೆ ಕಾಪಾಡುತ್ತಾನೋ ಹಾಗೇ ನಾವು ಎಲ್ಲಿಯೇ ಇದ್ದರು ನಮ್ಮವರನ್ನು ಮನೆಯಿಂದ
ಮಾತನಾಡಿಸುವುದು ಈ ಮೊಬೈಲ್. ಹಾಗಾಗಿ ಈ ಮೊಬೈಲೇ ನಮಗೆ ಮೈಲಾರಲಿಂಗನ ರೂಪದಲ್ಲಿ
ಬಂದಿದ್ದಾನೆ ಎಂದರು. ಅಂದರೆ ದೇವರ ಕುರಿತಾದ ಜನಪದ ನಂಬಿಕೆ ಆಚರಣೆಗಳು ಮೊಬೈಲ್ಗೂ
ಸಲ್ಲುವ ಮೂಲಕ ಮುಂದುವರೆಯುತ್ತಿರುವುದು ನಿಜಕ್ಕೂ ಅಚ್ಚರಿಯಾಯಿತು. ಇಂತಹದ್ದೇ ಅನೇಕ
ಉದಾಹರಣೆಗಳು ನಂತರದ ದಿನಗಳಲ್ಲಿ ಸಿಕ್ಕವು. ಇದರ ಅನೇಕ ಪಾಠಾಂತರಗಳು ಬೇರೆ ಬೇರೆ
ರೂಪದಲ್ಲಿ ಈಗಲೂ ಸಿಗುತ್ತವೆ.
ಇನ್ನು ಜಾನಪದ ಸಂಗತಿಗಳನ್ನು ಸಂವಹನ ಮಾಡುವ ಸಾಧನವಾಗಿಯೂ ಮೊಬೈಲ್ ಬಳಕೆಯಾಗುತ್ತಿದೆ.
ಬೆಳಗಾಂ ಜಿಲ್ಲೆಯ ಕುರಿಗಾರರು ಮೊಬೈಲ್ನಲ್ಲಿ ತಮ್ಮ ಭಾಗದ ಜಾನಪದ ಗೀತೆಗಳನ್ನು
ಕೇಳುತ್ತಿದ್ದರು. ಅದು ರಿಂಗ್ಟೋನ್ ಕೂಡ ಆಗಿತ್ತು. ಆತನನ್ನು ಕೇಳಿದರೆ, ನಮ್ಮ ಭಾಗದ
ಪದಗಳನ್ನು ಕೇಳಿದರೆ ನಮ್ಮೂರು ನೆಪ್ಪಾಗತೈತ್ರಿ ಎಂದ್ರು. ಅಂದರೆ ಅವರ ಪ್ರಾದೇಶಿಕ
ನೆನಪನ್ನು ತರುವಲ್ಲಿಯೂ ಮೊಬೈಲ್ ಬಳಕೆಯಾಗುತ್ತಿದೆ. ಮೊಹರಂ ಹಬ್ಬದ ಆಸುಪಾಸಿನಲ್ಲಿ
ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದ ಭಾಗದ ಮೊಬೈಲುಗಳಲ್ಲಿ ಮೊಹರಂ ಹಾಡುಗಳು
ಹರಿದಾಡುತ್ತವೆ. ಅಂತೆಯೇ ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಮೊಬೈಲುಗಳಲ್ಲಿ ಡೊಳ್ಳಿನ
ಗೀತೆಗಳು ಸದ್ದು ಮಾಡುತ್ತವೆ. ಯಾವ ಜಾನಪದ ಗೀತೆಗಳು ಆಡಿಯೋದಲ್ಲಿ ರೆಕಾರ್ಡಿಂಗ್ ಆಗಿ
ಡಿಜಿಟಲೈಜ್ ಆಗುತ್ತವೆಯೋ ಆ ಗೀತೆಗಳು ಆಯಾ ಸ್ಥಳೀಯ ಮೊಬೈಲ್ ಅಂಗಡಿಯವರಲ್ಲಿ ಸಿಗುತ್ತವೆ.
ಹಳ್ಳಿಗರು ತಮ್ಮ ಮೊಬೈಲುಗಳಿಗೆ ಆಯಾ ಹಾಡುಗಳನ್ನು ತುಂಬಿಸಿಕೊಂಡು ಕೇಳುತ್ತಾರೆ. ಜನಪದ
ಹಾಡು ಪರಂಪರೆಗೆ ಮೊಬೈಲ್ ಹೀಗೆ ನೆರವಾಗಿದೆ.
ಇನ್ನು ಕ್ಯಮಾರಾ, ಆಡಿಯೋ ವೀಡಿಯೋ ರೆಕಾರ್ಡಿಂಗ್ ಆಯ್ಕೆಯು ಜಾನಪದ ಕಲೆ ಆಚರಣೆಯನ್ನು
ಜನಪದರೇ ಸಂಗ್ರಹಿಸಿ ಮತ್ತೆ ಮತ್ತೆ ನೋಡುವ ಮೂಲಕ ಜಾನಪದ ಸಂದರ್ಭವನ್ನು ಹಿಡಿದಿಡುವ ಕೆಲಸ
ಮಾಡುತ್ತಿದ್ದಾರೆ. ಒಂದು ಕಾಲಕ್ಕೆ ಜಾನಪದ ಕಲೆ ಪರಂಪರೆಯನ್ನು ಸಂಗ್ರಹಿಸುವುದು,
ಅಧ್ಯಯನಕಾರರ ಕೆಲಸ ಮಾತ್ರವಾಗಿತ್ತು. ಆದರೆ ಸ್ವತಹಃ ಜನರೆ ತಮ್ಮ ಕಲೆಪರಂಪರೆಯನ್ನು
ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅದು ಅಧ್ಯಯನದ ಉದ್ದೇಶಕ್ಕಲ್ಲ, ಮತ್ತೆ
ಮತ್ತೆ ಮೆಲುಕು ಹಾಕಲು ಮೊಬೈಲ್ ಸಾಧನವಾಗಿದೆ.
ಮೊಬೈಲ್ ಮೆಸೇಜ್ ಹುಟ್ಟಿಸುವ ಜಾನಪದ ನಿಜಕ್ಕೂ ಕುತೂಹಲಕಾರಿಯಾಗಿದೆ. ಮೊಬೈಲ್ ಬಂದ
ಆರಂಭದ ದಿನಗಳಲ್ಲಿ ಮೆಸೇಜ್ ತುಂಬಾ ಪರಿಣಾಮಕಾರಿಯಾಗಿತ್ತು. ಈಗೀಗ ಅದರ ಬಳಕೆ ಪ್ರಮಾಣ
ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿದೆ. ಯುವ ಪ್ರೇಮಿಗಳಲ್ಲಿ ಮಾತ್ರ ಅದರ ಕಾವು ಆರಿಲ್ಲ.
ಯಾವುದೇ ಹಬ್ಬ ಬಂದರೆ, ಮೊಬೈಲ್ ಒಳಗೆ ಮೆಸೇಜುಗಳು ಸಂಭ್ರಮದಿಂದ ಹಬ್ಬ
ಆಚರಿಸುತ್ತಿರುತ್ತವೆ. ನಾಗರಪಂಚಮಿ ಹಬ್ಬದ ಶುಭಾಷಯ ಹೇಳಲು ನಮ್ಮ ಪೋನಿನಲ್ಲಿ ನಾಗರ
ಹಾವಿನ ಮೆಸೇಜ್ ಕಾಯುತ್ತಿರುತ್ತದೆ. ಗಣೇಶನ ಹಬ್ಬದಂದು ಗಣೇಶನ ಚಿತ್ರ, ದೀಪಾವಳಿ
ಹಬ್ಬದಲ್ಲಿ ದೀಪಗಳ ಚಿತ್ರ, ಸಂಕ್ರಾಂತಿಯಲ್ಲಿ ಕಬ್ಬು ಬೆಲ್ಲದಚ್ಚಿನ ಚಿತ್ರಗಳು
ಮೊಬೈಲಿನಿಂದ ಮೊಬೈಲಿಗೆ ಸಂವಹನಗೊಳ್ಳುತ್ತವೆ.
ಮೊಬೈಲ್ ಮೆಸೇಜುಗಳಿಗೂ ಜನಪದ ಸಾಹಿತ್ಯಕ್ಕೂ ಕೆಲವು ಸಾಮ್ಯತೆಗಳಿವೆ. ಒಂದು
ಮೆಸೇಜನ್ನು ಯಾರು ಸೃಷ್ಟಿಸುತ್ತಾರೋ ತಿಳಿಯದು. ಆದರೆ ಯಾರು ಕಳಿಸುತ್ತಾರೋ ಅವರ
ಹೆಸರನ್ನು ಹಾಕಿ ಕಳಿಸಿರುತ್ತಾರೆ. ಅದೇ ಮೆಸೇಜನ್ನು ಕಳಿಸಿದವನ ಹೆಸರನ್ನು ಡಿಲೀಟ್ ಮಾಡಿ
ಮತ್ತು ಇರುವ ಮೆಸೇಜಿಗೆ ತನ್ನದೇ ಆದ ಒಂದೆರಡು ಲೈನ್ ಸೇರಿಸಿ, ಅಥವಾ ಇರುವ ಮೆಸೇಜನ್ನು
ಎಡಿಟ್ ಮಾಡಿ ತನ್ನ ಹೆಸರನ್ನು ಸೇರಿಸಿ ಮತ್ತೊಬ್ಬರಿಗೆ ಕಳಿಸುತ್ತಾನೆ. ಆಗ ಒಂದು ಮೆಸೇಜು
ನೂರಾರು ಜನರಲ್ಲಿ ಸಂವಹನ ಗೊಳ್ಳುತ್ತದೆ. ಕೊನೆಗೂ ಆ ಮೆಸೇಜಿನ ಕತೃ ಯಾರೆಂದು
ತಿಳಿಯುವುದಿಲ್ಲ. ಈ ಮೆಸೇಜುಗಳನ್ನು ಕೆಲವೊಮ್ಮೆ ಮೊಬೈಲ್ ಕಂಪನಿಯೇ ಸೃಷ್ಟಿಸಿ
ಕಳಿಸಿಕೊಡುವುದೂ ಇದೆ.
ಈ ಮೆಸೇಜುಗಳಲ್ಲಿ ಬಹುಪಾಲು ಸ್ನೇಹಕ್ಕೆ ಸಂಬಂಧಿಸಿದವು, ಪ್ರೀತಿಗೆ ಸಂಬಂಧಿಸಿದವು,
ಬದುಕಿನ ನೀತಿ ನಿಯಮಕ್ಕೆ ಸಂಬಂದಿಸಿದವು, ನಕ್ಕು ನಗಿಸುವ ಹಾಸ್ಯ ಚಟಾಕಿಯಂಥವು, ಕೆಲವು
ಪುಟ್ಟ ಪುಟ್ಟ ಕಥೆಗಳು ಧ್ವನಿಪೂರ್ಣವಾಗಿರುತ್ತವೆ. ದ್ವಂದ್ವಾರ್ಥ ಬರುವಂತಹ ಲೈಂಗಿಕ
ಪರಿಭಾಷೆಯ ಮೆಸೇಜುಗಳೂ ಇವೆ. ಇನ್ನು ಗಾದೆಗಳು, ಶೇಕ್ಸಪಿಯರ್, ಶೆಲ್ಲಿ ಮುಂತಾದ ಕವಿಗಳ
ಸಾಲುಗಳು, ಲಂಕೇಶರ ನೀಲು ಪದ್ಯಗಳು, ಸಾಹಿತಿಗಳ ವೈಚಾರಿಕ ಹೇಳಿಕೆಗಳು, ಧಾಮರ್ಿಕ
ಭಾವನೆಯನ್ನು ಗಟ್ಟಿಗೊಳಿಸುವ ಸಾಲುಗಳು ಹೀಗೆ ತರಾವರಿ ಮೆಸೇಜುಗಳು ಒಂದು ಬಗೆಯ ಹೊಸ
ಜಾನಪದವನ್ನೇ ಹುಟ್ಟಿಸಿವೆ.
ಇನ್ನು ಕೆಲವು ದೇವರ ಹೆಸರಿನ ಮೆಸೇಜು ಬರುತ್ತವೆ. ಅವು ಒಂದು ಮೆಸೇಜನ್ನು ಹತ್ತು
ಜನರಿಗೆ ಕಳಿಸಿದರೆ ನಿಮಗೆ ಇಂತಿಂತ ಒಳ್ಳೆಯ ಕಾರ್ಯಗಳು ಆಗುತ್ತವೆ ಎಂದಿರುತ್ತವೆ. ಅಥವಾ ಈ
ಮೆಸೇಜನ್ನು ಡಿಲೀಟ್ ಮಾಡಿದರೆ ಏನೇನು ನಷ್ಟವಾಗುತ್ತದೆ ಎನ್ನುವ ಭಯ ಹುಟ್ಟಿಸುವಿಕೆಯೂ
ಇರುತ್ತದೆ. ಅಂತೆಯೇ ಸಹಾಯ ಕೋರಿಕೆಯ ಮೆಸೇಜುಗಳೂ ಇರುತ್ತವೆ. ಒಂದು ಮೆಸೇಜನ್ನು ಹತ್ತು
ಜನರಿಗೆ ಕಳಿಸಿದರೆ ನನಗೆ ಒಂದು ರೂಪಾಯಿ ನನ್ನ ಆಸ್ಪತ್ರೆ ಖಚರ್ಿಗೆ ಸಿಗುತ್ತದೆ
ಎಂದಿರುತ್ತವೆ. ಆಗ ಮೊಬೈಲ್ದಾರಿಣಿಯರು/ದಾರರು ಸಹಾಯ ಮಾಡುತ್ತಿದ್ದೇವೆಂದು ಭಾವಿಸುತ್ತಲೇ
ಇಂತಹ ಮೆಸೇಜುಗಳನ್ನು ಪಾರ್ವರ್ಡ ಮಾಡುತ್ತಾರೆ. ಇನ್ನು ಮದುವೆ, ಹಬ್ಬ, ಜಾತ್ರೆ,
ಹೊಸಮನೆ ಪ್ರವೇಶ, ಪುಸ್ತಕ ಬಿಡುಗಡೆ ಸಮಾರಂಭ ಮುಂತಾದವುಗಳಿಗೆ ಆಹ್ವಾನವನ್ನೂ ಈ
ಮೆಸೇಜುಗಳು ಹೊತ್ತು ತರುತ್ತವೆ.
ಮೊಬೈಲ್ ನಂಬರನ್ನು ಗ್ರಾಮೀಣ ಜನರು ಹೇಗೆ ನೆನಪಿಟ್ಟುಕೊಳ್ಳುತ್ತಾರೆ ಎನ್ನುವ ಬಗ್ಗೆ
ವಿವಿಧ ಕಥೆಗಳಿವೆ. ಕೆಲವರು ಇದ್ದಲಿನಿಂದ ಮನೆಯ ಬೇರೆ ಬೇರೆ ಕಡೆ ಸುಣ್ಣದ ಗೋಡೆಗೆ
ನಂಬರುಗಳನ್ನು ಬರೆದಿಟ್ಟಿರುತ್ತಾರೆ. ಒಲೆಯ ಮೇಲೆ ದೊಡ್ಡಪ್ಪನ ನಂಬರು, ಕಟ್ಟೆಯ ಮೇಲೆ
ದಲ್ಲಾಳಿ ಅಂಗಡಿ ನಂಬರು, ಗೂಣಿನ ಎಡಕ್ಕೆ ಮಾವನ ನಂಬರು ಹೀಗೆ ಮನೆಯ ಬೇರೆ ಬೇರೆ ಜಾಗಗಳೇ
ನಂಬರಿನ ವಾರಸುದಾರರ ನೆನಪನ್ನು ಕಾಯ್ದಿಟ್ಟಿರುತ್ತವೆ. ಅಂತೆಯೇ ಜನರು ಮೊಬೈಲಿನ ಕೊನೆಯ
ಒಂದು, ಎರಡು, ಮೂರು ನಂಬರ್ಗಳನ್ನು ನೆನಪಿಟ್ಟಿರುತ್ತಾರೆ. ಕಾಲ್ ಬಂದಾಗ ಆ ಕೊನೆ
ನಂಬರುಗಳನ್ನು ನೋಡಿಯೇ ಇಂತವರು ಕಾಲ್ ಮಾಡಿದ್ದಾರೆ ಎಂದು ತಿಳಿಯುತ್ತಾರೆ. ಕೆಲವರು
ಹತ್ತಾರು ಜನರ ನಂಬರುಗಳನ್ನು ನೆನಪಿಟ್ಟುಕೊಂಡೇ ಹೇಳುತ್ತಾರೆ. ಕಾರಣ ಅನೇಕರು ತಮ್ಮ
ಮೊಬೈಲುಗಳಲ್ಲಿ ಕಾಂಟೆಕ್ಟ್ನಲ್ಲಿ ಸೇವ್ ಮಾಡಿ ಬಳಸುವ ಬಗ್ಗೆ ತಿಳಿದಿರುವುದಿಲ್ಲ.
ಹಳ್ಳಿಗರು ಕಾಲ್ ಸೆಂಟರ್ಗೆ ಕಾಲ್ ಮಾಡಿ ಮಾತನಾಡುವ ಹುಡುಗಿಯರ ಜತೆ ಯಾರ್ಯಾರು ಹೇಗೆ
ಮಾತನಾಡುತ್ತಾರೆ ಎನ್ನುವ ಬಗ್ಗೆ ಭಿನ್ನ ಕಥೆಗಳಿವೆ. ಕೊಟ್ರೇಶ್ ಅನ್ನುವ ಹುಡುಗ ಸುಮ್ಮನೆ
ಕಾಲ್ ಸೆಂಟರ್ಗೆ ಪೋನ್ ಮಾಡುತ್ತಾನಂತೆ, ಏನಾಗಬೇಕಿತ್ತು ಎಂದಾಗ, ನಮ್ಮ ಮೊಬೈಲ್ಗೆ
ಚಳಿಜ್ವರ ಬಂದಿದೆ ಮೇಡಂ, ಸ್ವಲ್ಪ ಸೂಜಿ ಮಾಡ್ತೀರಾ? ಗುಳಿಗೆ ಕೊಡ್ತೀರಾ? ಎಂದು
ಕೇಳುವುದು, ಮೇಡಂ ನಮ್ಮ ಮೊಬೈಲಿಗೆ ಒಂಬತ್ತು ತಿಂಗಳು ತುಂಬಿದೆ ಹೆರಿಗೆ
ಮಾಡಿಸಿಕೊಳ್ಳೊದು ಹೇಗೆ ಅಂತ ಹೇಳ್ತೀರಾ ಎನ್ನುವ ತರಾವರಿ ಪ್ರಶ್ನೆಗಳನ್ನು ಕೇಳಿ ಕಾಲ್
ಸೆಂಟರ್ ಹುಡುಗಿಯರನ್ನು ಗೋಳು ಹೊಯ್ಯುಕೊಳ್ಳುವ ಕಥನಗಳಿವೆ. ಆಗ ದಯವಿಟ್ಟು ಸರ್ವೀಸ್
ಬಗ್ಗೆ ಏನಾದರೂ ಕೇಳಿ ಎಂದಾಗ. ಅಯ್ಯೋ ನಾನು ಸರ್ವೀಸ್ ಬಗ್ಗೆನೇ ಕೇಳ್ತಿರೋದು
ಎನ್ನುತ್ತಲೂ ಕಾಲ್ ಕಟ್ಟಾಗುತ್ತೆ.
ಕರಿಯಜ್ಜ ಎಂಬಾತ ದಿನವೂ ಕಾಲ್ ಸೆಂಟರ್ಗೆ ಪೋನ್ ಮಾಡುತ್ತಾನಂತೆ. ಒಮ್ಮೊಮ್ಮೆ
ಹುಡುಗರು ಕಾಲ್ ಅಟೆಂಡ್ ಮಾಡಿದರೆ, `ಸಾರ್ ನಿನ್ನೆ ಮಾಡಿದಾಗ ಒಂದು ಹುಡುಗಿ ಚೆಂದ
ಮಾತನಾಡಿದಳು ಆ ಹುಡುಗಿ ಕೈಲೆ ಪೋನ್ ಕೊಡಿ’ ಎಂದಿದ್ದಾನೆ. ಸಾರಿ ಸಾರ್ ಹಾಗೆ ಯಾರು
ಮಾತನಾಡಿದರು ಅನ್ನೋದು ಗೊತ್ತಗಲ್ಲ ಎಂದಾಗ, ಕರಿಯಜ್ಜ `ಅಯ್ಯೋ ಅಂಗ ಅಂದ್ರೆ ಎಂಗ್
ಸ್ವಾಮಿ ಆ ಹುಡುಗಿ ಮಾತಾಡ್ತಾಳೆ ಅಂತಾನೆ ನಿಮ್ಮ ಕಂಪನಿ ನಂಬರ ತಗಂಡೀನಿ, ಹಿಂಗ್
ಮಾಡಿದ್ರೆ ಬೇರೆ ಕಂಪನಿಗೋತಿವಿ ಬಿಡಿ’ ಎಂದಿದ್ದಾರೆ. ಹೀಗೆ ಕಾಲ್ ಸೆಂಟರ್ ಹುಡುಗ
ಹುಡುಗಿಯರ ಜತೆ ಮಾತಾಡುವ ವಿವಿಧ ರೀತಿಯ ಕಥನಗಳಿವೆ. ಇನ್ನು ಮೊಬೈಲ್ ಕಾಲ್ ಸೆಂಟರ್ನಲ್ಲಿ
ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಅನುಭವವನ್ನು ದಾಖಲಿಸಿದರೆ ಇದರ ಇನ್ನಷ್ಟು
ಕುತೂಹಲಕಾರಿ ಸಂಗತಿಗಳು ಬಯಲಿಗೆ ಬರಬಹುದು.
ಇನ್ನು ಟಿ.ವಿಗಳಲ್ಲಿ ಕಳ್ಳರನ್ನು ಹಿಡಿಯಲು, ಅಪರಾಧಿಗಳನ್ನು ಬೇಧಿಸಲು ಮೊಬೈಲ್
ನಂಬರ್ ಬಳಸುವುದನ್ನು ನೋಡಿ ಈ ಬಗ್ಗೆ ತರಾವರಿ ಕಥೆಗಳು ಹುಟ್ಟಿವೆ. ಮೊಬೈಲಿನಲ್ಲಿ
ಎಲ್ಲಿದ್ದರೂ ಪೋಲೀಸರು ಹಿಡಿಯುತ್ತಾರಂತೆ, ನಾವು ಎಲ್ಲೇ ಇದ್ದರೂ ಟವರಿನಿಂದ
ಗೊತ್ತಾಗುತ್ತಂತೆ ಮುಂತಾದ ಕಥೆಗಳು ಮೊಬೈಲ್ ಬಗ್ಗೆಯೇ ಹುಟ್ಟಿವೆ. ಹಾಗಾಗಿ `ಈ ನನ್ನ
ಮಗನ್ ಮೊಬೈಲು ಹೊಳ್ಳೇದಲ್ಲ ಮಾರಾಯ’ ಎನ್ನುವ ಭಯದ ಮಾತುಗಳೂ ಇವೆ. ಉತ್ತರ ಕನರ್ಾಟಕದಲ್ಲಿ
ಕ್ಷೇತ್ರಕಾರ್ಯ ಮಾಡಿದರೆ ಈ ಮೊಬೈಲ್ ಬಗ್ಗೆಯೂ ಜನಪದ ಗೀತೆಗಳು ಹುಟ್ಟಿದ್ದರೂ ಅಚ್ಚರಿ
ಪಡಬೇಕಿಲ್ಲ.
ಕೆಲವು ಮೊಬೈಲ್ ಕುರಿತ ಗಾದೆಗಳು ಹೀಗಿವೆ:
1. ಹೊಟ್ಟೆಗೆ ಹಿಟ್ಟಿಲ್ದಿದ್ರು ಕೈಲೊಂದು ಮೊಬೈಲು.
2. ಕಾಲ್ ಮಾಡೋನು ಕುರಿ, ಎಸ್.ಎಮ್.ಎಸ್ ಮಾಡೋನು ಸರಿ
3. ಅಪ್ಪನಿಗೆ ಕರೆನ್ಸಿ ಹಾಕ್ಸೋಕ್ಬೇಕು ವರ್ಷ, ಮಗಳೀಗೆ ಕರೆನ್ಸಿ ಮುಗ್ಸಾಕ್ಸಾಕು ನಿಮ್ಸ.
4. ಕೂತು ಮೊಬೈಲಲ್ಲಿ ಹರಟೆ ಹೊಡೆದ್ರೆ, ಕೋಟಿ ಕರೆನ್ಸಿ ಸಾಲ್ದು.
5. ಹುಡುಗೀಗೆ ಮೊಬೈಲಲ್ಲಿ ಚೆಲ್ಲಾಟ, ಹುಡುಗಂಗೆ ಪ್ರಾಣ ಸಂಕಟ.
6.ಮೊಬೈಲ್ ಇರುವವನ ಅರ್ಭಟ, ಕರೆನ್ಸಿ ಇರೋತನ್ಕ.
7. ಮೊಬೈಲ್ ಇಲ್ದವನಿಗೆ ಸಂತೆಯಲ್ಲೂ ನಿದ್ದೆ.
8. ಮಾತು ಮನೆ ಕೆಡಿಸ್ತು, ಎಸ್.ಎಮ್.ಎಸ್ ತಲೆ ಕೆಡಿಸ್ತು.
9. ಎಸ್.ಎಮ್.ಎಸ್ನಿಂದ ಹೋದ ಮಾನ, ಕಾಲ್ ಮಾಡಿದ್ರು ಬರಲ್ಲ.
10. ಬಣ್ಣ ಬಣ್ಣದ ನೆಂಟ ಕುಯ್ಗುಟ್ತಾ ಎಲ್ಲರ ಕೈಯಾಗ ಒಂಟ.
ಗಂಗಾವತಿ ಪ್ರಾಣೇಶ್ ತಮ್ಮ ಹಾಸ್ಯ ಕಾರ್ಯಕ್ರಮದಲ್ಲಿ ಮೋಬೈಲ್ ಕಥೆಗಳನ್ನು ಹೇಳುತ್ತಾ
ನಗೆ ಚಟಾಕಿಯನ್ನು ಹಾರಿಸುತ್ತಾರೆ. ಜೀವನವನ್ನು ಮೊಬೈಲ್ ಪರಿಭಾಷೆ ಬಳಸಿ ವಿವರಿಸುವ
ಒಗಟಿನ ರೂಪದ ರಚನೆಯೊಂದು ಹೀಗಿದೆ. `ಮೊಬೈಲ್ ಎಂಬ ಸಂಸಾರದಲ್ಲಿ ಗಂಡ ಸಿಮ್ ಕಾರ್ಡ,
ಹೆಂಡತಿ ಕರೆನ್ಸಿ, ಮಕ್ಕಳೇ ಕಾಲ್ಗಳು, ಗಂಡು ಮಕ್ಕಳಾದರೆ ಇನ್ ಕಮಿಂಗ್,
ಹೆಣ್ಣುಮಕ್ಕಳಾದರೆ ಔಟ್ ಗೋಯಿಂಗ್, ಮಕ್ಕಳೇ ಬೇಡವೆಂದರೆ, ಮಿಸ್ಡ್ ಕಾಲ್ಗಳು’. ಇನ್ನು
ಡಾಕ್ಟರ್ ಕಡೆ ಹೋದವನು `ಸರಾ ಹೊಟ್ಯಾಗ ತಳಮಳ ಆಗ್ತಾತಿ’ ಎಂದನಂತೆ, ಆಗ ಡಾಕ್ಟರ್
ಮೊಬೈಲ್ನಲ್ಲಿ ಮಾತಾಡ್ತಾನೆ, `ಹಾಗಂದ್ರೆ ಏನೋ ಸ್ವಲ್ಪ ಸರಿಯಾಗಿ ಹೇಳು’ ಎನ್ನುತ್ತಾರೆ.
ಆಗ ಪೇಶೆಂಟ್ ಡಾಕ್ಟರ್ ಮೊಬೈಲ್ ಹುಚ್ಚು ಜಾಸ್ತಿ ಇರೋದನ್ನು ನೋಡಿ, `ಹೊಟ್ಟೆಯೊಳಗೆ
ವೈಭ್ರೇಷನ್ ಆಗುತ್ತೆ ಸಾರ್, ಒಂದು ವಾದರಿಂದ ಇನ್ ಕಮಿಂಗ್ ಚಲೋ ಐತಿ, ಔಟ್ ಗೋಯಿಂಗ್
ಹೋಗ್ತಿಲ್ಲ. ಟಾಯಲೆಟ್ಟಲ್ಲಿ ಕೂತರೆ ಬಗೆ ಬಗೆಯ ರಿಂಗ್ ಟೋನ್ಸ್ ಬರುತ್ತೆ’ ಅಂದ್ನಂತೆ ಆಗ
ಡಾಕ್ಟರ್ಗೆ ಈ ಅರ್ಥವಾಗಿ ಈ ಪೇಷಂಟ್ಗೆ ಮೊಬೈಲ್ ಹುಚ್ಚು ಹೆಚ್ಚು ಇದ್ದಂಗಿದೆ ಅನ್ಕಂಡು
ನಿನಗೆ ಬಂದಿರೋದು ಮೊಬೈಲ್ ರೋಗ ಅಂತೇಳಿ ಎರಡು ಎಸ್.ಎಮ್.ಎಸ್ ಬರದು, ಮೊಬೈಲ್ ರೋಗಕ್ಕೆ
ಎಸ್.ಎಮ್.ಎಸ್ಸೇ ಮದ್ದು ಎಂದನಂತೆ. ಇಂತಹ ಘಟನೆಗಳು ನಗೆ ಹುಟ್ಟಿಸಬಹುದಾದರೂ, ಈ
ನೆಲೆಯಲ್ಲಿ ಮೊಬೈಲ್ ಜಾನಪದವೇ ಹುಟ್ಟಿದೆ. ಮೊಬೈಲ್ ಪರಿಭಾಷೆಗಳನ್ನು ದಿನ ನಿತ್ಯದ
ಒಡನಾಟದ ಕೆಲವು ಸಂಗತಿಗಳ ಲಕ್ಷಣಗಳ ಜತೆ ತಾಳೆ ಹಾಕಿ ಮಾತನಾಡುವುದೂ ಇದೆ.
ಹೀಗೆ ಜನರ ಒಡನಾಟಕ್ಕೆ ಬರುವ ಯಾವುದೇ ಸಂಗತಿಯೂ ತನ್ನದೇ ಆದ ಒಂದು ಬಗೆಯ ಜಾನಪದವನ್ನು
ಹುಟ್ಟಿಸುತ್ತದೆ. ಅದು ಆಯಾ ಸಂಗತಿಯ ಬಗ್ಗೆ ಜನರ ಅಭಿಪ್ರಾಯಗಳನ್ನೋ, ಅಚ್ಚರಿಯನ್ನೋ,
ಕುತೂಹಲವನ್ನೂ, ಭಯವನ್ನೊ ಒಡೆದು ತೋರುತ್ತಿರುತ್ತವೆ. ಇದು ಜಾನಪದ ಅಧ್ಯಯನ ಮಾಡುವವರು ಈ
ನೆಲೆಯಲ್ಲಿ ಅಭ್ಯಸಿಸುತ್ತಾ ಹೋದರೆ, ನಮಗೆ ಜಾನಪದದ ಹೊಸ ಹೊಸ ಸಾಧ್ಯತೆಗಳು ಹೊಳೆಯುತ್ತಾ
ಹೋಗುತ್ತವೆ. ಹೀಗೆ ಮೊಬೈಲ್ ಹುಟ್ಟಿಸಿದ ಕಥೆಗಳು ಪ್ರಾದೇಶಿಕವಾಗಿ ಭಿನ್ನವಾಗಿವೆ. ಇದು
ಅನೇಕ ಹಳ್ಳಿ ಹೆಣ್ಣುಮಕ್ಕಳಿಗೆ ಬಿಡುಗಡೆಯ ದಾರಿಯೂ, ಸಂಕಟದ ಸಂಗತಿಯೂ ಆಗಿದೆ. ಒಂದು
ಮಿಸ್ಸಡ್ ಕಾಲ್, ಒಂದು ಹೊಸ ನಂಬರ್ ಬಂದಿರುವುದು ಹೆಂಗಸರನ್ನು ಅನುಮಾನಿಸಿ ಜಗಳ ಕಾಯಲು
ಕಾರಣವಾಗಿವೆ. ಈ ಕಾರಣಕ್ಕೆ ಎಷ್ಟೋ ಸಂಸಾರಗಳು ಒಡೆದಿವೆ ಕೂಡ. ಮೊಬೈಲ್ ತಂತ್ರಜ್ಞಾನ
ತಿಳಿಯದ ಕಾರಣಕ್ಕೂ ಹಲ ಬಗೆಯ ತೊಡಕುಗಳಾಗಿವೆ.
ಹೀಗೆ ಜನರೊಂದಿಗೆ ಒಡನಾಟಕ್ಕೆ ಬಂದ ಮೊಬೈಲು ಜನರ ಆಥರ್ಿಕತೆಯನ್ನು ಸುಧಾರಿಸಿದಂತೆ,
ಅದೇ ಜನರ ಆಥರ್ಿಕತೆನ್ನು ದುರ್ಭಲಗೊಳಿಸಿದ್ದೂ ಇದೆ. ಸಂವಹನದಿಂದ ಕೆಲವು ಸಂಬಂಧಗಳನ್ನು
ಗಟ್ಟಿಗೊಳಿಸಿದಂತೆ, ಕೆಲವು ಸಂಬಂಧಗಳು ಕಡಿತಗೊಂಡದ್ದೂ ಇದೆ. ಅಂತೆಯೇ ಮೊಬೈಲ್
ಹುಟ್ಟಿಸಿದ ಜಾನಪದ ನಗೆಯನ್ನು ಹುಟ್ಟಿಸಿದಂತೆ, ದುಃಖವನ್ನು ತರುವಂತಿವೆ. ಹೀಗೆ ಮೊಬೈಲ್
ದೊಡ್ಡ ಮಟ್ಟದ ಜಾನಪದವನ್ನು ಹುಟ್ಟಿಸಿರುವುದು ಕಾಣುತ್ತದೆ. ಈ ಬಗ್ಗೆ ಇನ್ನಷ್ಟು
ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ