ಶನಿವಾರ, ಸೆಪ್ಟೆಂಬರ್ 28, 2013

‘ಗೊಂಡ್ವಾನ ಸಂಸ್ಕೃತಿ’ಯ ಹೊಸ ಹೊಳಹುಗಳು


–ಡಾ. ಎಚ್.ಎಸ್. ಗೋಪಾಲ ರಾವ್.
ಸೌಜನ್ಯ: ಪ್ರಜಾವಾಣಿ

ಸುಮಾರು ೫೦ ವರ್ಷಗಳಿಂದೀಚೆಗೆ ಸಂಸ್ಕೃತಿ ಕುರಿತಾದ ಸಂಶೋಧನೆಗೆ ಒತ್ತು ದೊರೆತಿರುವುದು ಹಾಗೂ ಇತ್ತೀಚಿನ ದಿನಗಳಲ್ಲಿ ಉಪಸಂಸ್ಕೃತಿಯನ್ನು ಕುರಿತಾಗಿ ಆಸಕ್ತಿ ಹೆಚ್ಚುತ್ತಿರುವುದು ಗಮನಾರ್ಹ ವಿಚಾರ. ಇಂತಹ ಕುತೂಹಲ, ಅಧ್ಯಯನ ಮತ್ತು ಸಂಶೋಧನೆಗಳಿಂದ ಸಮಸ್ಯೆಗಳಾಗಿಯೇ ಉಳಿದಿರುವ ಎಷ್ಟೋ ವಿಚಾರಗಳ ಪರಿಶೀಲನೆಗೆ ಅವಕಾಶವಾಗುತ್ತಿದೆ. ಇದು ವಿಳಂಬಕ್ಕೆಡೆಕೊಡದಂತೆ ಆಗಲೇಬೇಕಾಗಿರುವ ತುರ್ತು ಕೆಲಸ.
ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿ ಗೊಂಡೀ ಭಾಷೆಯ ಬಗೆಗೆ ಶಂ.ಬಾ. ಜೋಶಿ ಮತ್ತು ಇನ್ನೂ ಹಲವು ವಿದ್ವಾಂಸರು  ಗಂಭೀರ ಚಿಂತನೆ ನಡೆಸಿದ್ದಾರೆ. ಭಾರತದ ಕೆಲವು ಪ್ರದೇಶಗಳಲ್ಲಿ ಇನ್ನೂ ಉಳಿದಿರುವ ಗೊಂಡೀ ಭಾಷೆಯು ದ್ರಾವಿಡ ವರ್ಗಕ್ಕೆ ಸೇರಿದೆ ಎಂಬ ವಿಚಾರದಲ್ಲಿ ಚರ್ಚೆಗಳು ಮುಂದುವರಿಯಬೇಕಾದ ಅವಶ್ಯಕತೆ ಇದೆ. ಗೊಂಡರು ಈಗಲೂ ಇದ್ದಾರೆ ಮತ್ತು ಅವರು ತಮ್ಮ ಸಂಸ್ಕತಿಯನ್ನು ಇನ್ನೂ ಕಾಪಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯೇ ಕುತೂಹಲಕರ. ಅಂತಹ ಹಲವು ಕುತೂಹಲದ ವಿಚಾರಗಳನ್ನು
ಎಂ.ಆರ್. ಪಂಪನಗೌಡರು ಸಂಪಾದಿಸಿರುವ ‘ಗೊಂಡ್ವಾನ ಸಂಸ್ಕೃತಿ’ ಕೃತಿಯು ತೆರೆದಿಟ್ಟಿದೆ.
ಇಪ್ಪತ್ತಮೂರು ಕನ್ನಡ (ಇವುಗಳಲ್ಲಿ ಕೆಲವು ಅನುವಾದಗಳು) ಮತ್ತು ಆರು ಇಂಗ್ಲಿಷ್ ಲೇಖನಗಳ ಜೊತೆಗೆ ಉಪಯುಕ್ತ ಮತ್ತು ಕುತೂಹಲಕರ ವಿಚಾರಗಳ ಮೂವತ್ತೊಂದು ಅನುಬಂಧಗಳ ‘ಗೊಂಡ್ವಾನ ಸಂಸ್ಕೃತಿ’ಯ ಶೀರ್ಷಿಕೆಗೆ ‘ಅರ್ಥಾತ್ ಸಿಂಧೂ ಸಂಸ್ಕೃತಿ’ ಎಂಬ ಕೊಂಡಿಯೂ ಇದೆ. ಭಾರತೀಯ ಸಂಸ್ಕೃತಿಯ ಅಧ್ಯಯನದಲ್ಲಿ ಸಿಂಧೂ ಸಂಸ್ಕೃತಿಯ ಸ್ಥಾನ ವಿಶಿಷ್ಟವಾದುದು. ಅಲ್ಲಿ ಬಗೆಹರಿಯದ ಇನ್ನೂ ಹಲವು ಸಮಸ್ಯೆಗಳು ಉಳಿದಿವೆ. ಅವುಗಳ ಪೈಕಿ ಸಿಂಧೂ ಸಂಸ್ಕೃತಿಗೆ ಸಂಬಂಧಿಸಿದಂತೆ ದೊರೆತಿರುವ ಮುದ್ರೆಗಳ ಮೇಲಿನ ಬರಹವನ್ನು ಎಲ್ಲರೂ ಒಪ್ಪುವಂತೆ ಇನ್ನೂ ಓದಲಾಗಿಲ್ಲ ಎಂಬ ವಿಚಾರವು ಪ್ರಮುಖವಾದುದು.
ಹಲವು ದೇಶೀಯ ಮತ್ತು ವಿದೇಶೀಯ ವಿದ್ವಾಂಸರು ಹರಪ್ಪಾ ಮುದ್ರೆಗಳ ಮೇಲಿನ ಬರಹವನ್ನು ಓದಲು ಪ್ರಯತ್ನಿಸಿದ್ದಾರೆ. ಆದರೆ ಭಿನ್ನಾಭಿಪ್ರಾಯಗಳು ಮುಂದುವರಿದಿವೆ. ಈ ಕೃತಿಯ ಮೊದಲ ಲೇಖನವೇ ಸಿಂಧೂ ಲಿಪಿಯನ್ನು ಗೊಂಡಿ ಭಾಷೆಯಲ್ಲಿ ಓದಲಾಗಿದೆ ಎಂಬ ಆಸಕ್ತಿಯ ವಿಚಾರವನ್ನು ಅನಾವರಣಗೊಳಿಸಿದೆ. ಮಹಾರಾಷ್ಟ್ರದ ಡಾ. ಮೋತಿರಾವಣ ಛತೀರಾಮ ಕಂಗಾಲಿಯವರ ‘ಸೈಂಧವೀ ಲಿಪಿ ಕಾ ಗೊಂಡಿ ಮೇ ಉದ್ವಾಚನ್’ ಕೃತಿಯ ಬಗೆಗಿನ ಅಭಿಪ್ರಾಯವನ್ನು ಡಾ. ಕೆ.ಎಂ. ಮೇತ್ರಿ ದಾಖಲಿಸಿದ್ದಾರೆ.
ಈ ಕೃತಿಯನ್ನು ಕನ್ನಡಕ್ಕೆ ಡಾ. ಕೆ.ಬಿ. ಬ್ಯಾಳಿ ಅನುವಾದ ಮಾಡಿರುವ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ. ಡಾ. ಕಂಗಾಲಿಯವರ ಓದನ್ನು ಒಪ್ಪಲು ಗೊಂಡಿ ಭಾಷೆ ಮತ್ತು ಲಿಪಿ ತಿಳಿದಿರಬೇಕು. ಇಲ್ಲವಾದರೆ ಅದು ಸಿಂಧೂ ಲಿಪಿಯ ಸ್ಪಷ್ಟವಾಗದ ಮತ್ತೊಂದು ಅವತರಣಿಕೆಯಂತಾಗುತ್ತದೆ. ಆದರೆ, ಸಿಂಧೂ ಲಿಪಿಯನ್ನು ಗೊಂಡಿ ಭಾಷೆ ಮತ್ತು ಲಿಪಿಯಲ್ಲಿ ಓದಿರುವ
ಡಾ. ಕಂಗಾಲಿಯವರ ಸಾಹಸವನ್ನು ಅಭಿನಂದಿಸಲೇಬೇಕು. ಸಿಂಧೂ ಲಿಪಿಯ ಈವರೆಗಿನ ಓದುಗಳ ಜೊತೆಗೆ ಮತ್ತೊಂದು ಓದು ಸೇರಿದೆ ಎಂಬ ಸಂತೋಷವಂತೂ ಇರುತ್ತದೆ.
ಸಿಂಧೂ ಲಿಪಿಯ ಬಗ್ಗೆ ಶ್ರಮ ವಹಿಸುತ್ತಿರುವ ವಿದ್ವಾಂಸರ ಪೈಕಿ ಇರುವವರು ಮತ್ತು ಇಲ್ಲದವರ ತೀರ್ಮಾನಗಳನ್ನು ಎದುರಿಗಿಟ್ಟುಕೊಂಡು ಚರ್ಚೆ ಮಾಡಿದರೆ ಒಮ್ಮತ ಮೂಡಬಹುದು ಎಂಬ ಆಶಾಭಾವ ಮೂಡುತ್ತದೆ. ಗೊಂಡಿ ಜನ ಮತ್ತು ಗೊಂಡಿ ಭಾಷೆ ತಮ್ಮ ಅಸ್ತಿತ್ವವನ್ನು ಇನ್ನೂ ಉಳಿಸಿಕೊಂಡಿರುವುದು ಸಂತಸದ ವಿಚಾರ. ಭಾರತಕ್ಕೆ ಬಂದ ಆರ್ಯರು ಆಗ ಅಸ್ತಿತ್ವದಲ್ಲಿದ್ದ ಗೊಂಡಿ ಭಾಷೆಯ ಶಬ್ದಗಳನ್ನು ತಮ್ಮ ಸಂಸ್ಕೃತ ಭಾಷೆಗೆ ತೆಗೆದುಕೊಂಡರು ಎಂಬ ಅಭಿಪ್ರಾಯ ಬ್ಯಾಳಿ ಅವರದ್ದು.
ಈ ಬಗ್ಗೆ ಚರ್ಚಿಸಲು ಅವಕಾಶಗಳಿವೆ. ಸಿಂಧೂ ನದಿಯ ಬಯಲಿನಲ್ಲಿ ಸಂಸ್ಕೃತಿ ರೂಪುಗೊಳ್ಳುವ ಮೊದಲೇ ಗೊಂಡಿ ಭಾಷೆಯಿತ್ತು ಎನ್ನುವ ಮಾತು ಹೆಚ್ಚು ಮುಖ್ಯವಾಗುತ್ತದೆ. ಹಲವು ಲಕ್ಷ ವರ್ಷಗಳ ಹಿಂದೆ ಈಗಿನ ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕಾ, ಏಷ್ಯಾ ಖಂಡದ ದಕ್ಷಿಣ ಭಾಗ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಂಟಾರ್ಟಿಕಾಗಳು ಕೂಡಿದ್ದ ಭೂಭಾಗವಿತ್ತು. ಅದನ್ನು ಗೊಂಡ್ವಾನ ಎಂದು ಕರೆಯುತ್ತಿದ್ದರು. ಭಾರತದ ವಿಂಧ್ಯ ಪರ್ವತ ಶ್ರೇಣಿಯ ದಕ್ಷಿಣ ಭಾಗ ಅಂದರೆ ದಕ್ಷಿಣ ಭಾರತದ ಪ್ರಸ್ಥಭೂಮಿ ಗೊಂಡ್ವಾನ ಪ್ರದೇಶದ   ಭಾಗವಾಗಿತ್ತು.
ಅಲ್ಲಿ ವಾಸಿಸುತ್ತಿದ್ದ ಗೊಂಡರು ಸಿಂಧೂ ನದಿ ಬಯಲಿನ ನಾಗರಿಕತೆಯ ಜನರಿಗಿಂತ ಹಿಂದಿನವರು. ಅವರು ಆಡುತ್ತಿದ್ದ ಭಾಷೆ ದ್ರಾವಿಡ ವರ್ಗಕ್ಕೆ ಸೇರಿತ್ತು. ಅದು ಈಗಲೂ ಬಳಕೆಯಲ್ಲಿದೆ ಎಂಬುದು ಕುತೂಹಲದ ವಿಚಾರ. ಪ್ರಸ್ತುತ ಕೃತಿಯು ಗೊಂಡಿ ಭಾಷೆ, ಗೊಂಡ್ವಾನ ಸಂಸ್ಕೃತಿ ಇತ್ಯಾದಿ ವಿಷಯಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ನೀಡಿದೆ. ಪಂಪನಗೌಡರು ಮಾಡಿರುವ ಗೊಂಡ್ವಾನ ಸಂಸ್ಕೃತಿಯ ಪುನರ್‌ವ್ಯಾಖ್ಯಾನವು ಗೊಂಡರ ದೇವರು, ಗೋತ್ರಗಳು, ಪುರಾಣಗಳಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಪ್ರಸ್ತಾಪಿಸಿದೆ.
ಅವುಗಳನ್ನು ಪ್ರಶ್ನಿಸಲು ಅವಕಾಶಗಳಿವೆಯಾದರೂ, ಈವರೆಗೆ ವ್ಯಾಪಕವಾಗಿ ತಿಳಿಯದ ಒಂದು ಸಂಸ್ಕೃತಿಯ ಬಗ್ಗೆ ಸ್ಥೂಲವಾಗಿಯಾದರೂ ತಿಳಿವಳಿಕೆ ದೊರೆಯುತ್ತದೆ. ಪಂಪನಗೌಡರೇ ಮತ್ತೊಂದು ಲೇಖನದಲ್ಲಿ ಚರಿತ್ರೆಯ ಕೆಲವು ಮುಖ್ಯ ಘಟನೆಗಳ ಕಾಲಮಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಬುರುಡೆಕಟ್ಟೆ ಮಂಜಪ್ಪ ಅವರು ಗೊಂಡ್ವಾನದ ಸಾಂಸ್ಕೃತಿಕ ಇತಿಹಾಸದ ಸ್ಥೂಲ ಪರಿಚಯ ಮಾಡಿದರೆ, ಪಂಪನಗೌಡರು ಗೊಂಡರ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಈ ಮಾಹಿತಿಗಳನ್ನು ದಾಖಲಿಸುವ ಸಂದರ್ಭದಲ್ಲಿ ಗೊಂಡರ ಒಂದು ಕವಲಾದ ಲಾಳಗೊಂಡರನ್ನು ಲಾಕುಳರ ಪರಂಪರೆಯವರು ಎಂದು ಗುರುತಿಸುತ್ತಾರೆ. ಗೊಂಡರ ಧಾರ್ಮಿಕ ಸ್ಥಳವೆಂದು ಪರಿಗಣಿಸಿರುವ ಲಾಂಜಿಗಡ ಮತ್ತು ಗೋಂಡ್ವಾನ ರಾಜಚಿಹ್ನೆಯ ಬಗೆಗೆ ಮಾಹಿತಿ ಇವೆಯಾದರೂ, ರಾಜಚಿಹ್ನೆಯ ಬಗೆಗೆ ಇನ್ನೂ ಹೆಚ್ಚಿನ ಚರ್ಚೆಗೆ ಅವಕಾಶಗಳಿವೆ.
ಲಾಳಗೊಂಡರು ಶೈವ ಮತ್ತು ವೈಷ್ಣವ ಪ್ರಭಾವಕ್ಕೊಳಗಾಗಿದ್ದರೂ, ಹೆಚ್ಚಾಗಿ ಬಸವೇಶ್ವರರ  ಅನುಯಾಯಿಗಳು ಎಂಬ ವಿಚಾರವು ಗೊಂಡರ ಮೇಲೆ ಇತರ ಧರ್ಮಗಳ ಪ್ರಭಾವದ ಬಗ್ಗೆ ಸೂಚನೆ ನೀಡುತ್ತದೆ. ಜಾನಪದೀಯ ಮತ್ತು ಮೌಖಿಕ ಆಕರಗಳನ್ನೂ ಲೇಖಕರು ಬಳಸಿಕೊಂಡಿದ್ದಾರೆ.
ಗೊಂಡ್ವಾನ ಸಂಸ್ಕೃತಿ ಕೃತಿಯು ಹಲವು ಲೇಖಕರ ಲೇಖನಗಳ ಸಂಕಲನವಾಗಿರುವುದರಿಂದ ಹಲವು ವಿಷಯಗಳ ಪುನರಾವರ್ತನೆ ಅನಿವಾರ್ಯ. ಕೆಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾದ ಪರಿಚಯಾತ್ಮಕ ಮಾಹಿತಿಗಳಾದ್ದರಿಂದ ಅವುಗಳನ್ನು ಸಂಶೋಧನಾತ್ಮಕ ವಿಶ್ಲೇಷಣೆಗೆ ಮುಕ್ತವಾಗಿ ಬಳಸಿಕೊಳ್ಳುವುದು ಕಷ್ಟ. ಆದರೆ ಇಲ್ಲಿ ನಿರೂಪಿತವಾಗಿರುವ ಯಾವ ವಿಷಯವನ್ನೂ ಸಾರಾಸಗಟಾಗಿ ನಿರಾಕರಿಸಲು ಸಾಧ್ಯವಿಲ್ಲ. ಬೇರೆಬೇರೆ ಲೇಖಕರು ಸಂಗ್ರಹಿಸಿ ಒದಗಿಸಿರುವ ಮಾಹಿತಿಗಳನ್ನು ಜರಡಿಯಾಡಿ, ಗಟ್ಟಿ ಕಾಳುಗಳನ್ನು ಸಂಗ್ರಹಿಸಿ, ಗೊಂಡ್ವಾನ ಮತ್ತು ಗೊಂಡರ ಬಗ್ಗೆ ಮತ್ತಷ್ಟು ಸೂಕ್ಷ್ಮ ಅಧ್ಯಯನಕ್ಕೆ ಈ ಕೃತಿಯು ಪ್ರೇರಣೆ ನೀಡುವುದರಲ್ಲಿ ಅನುಮಾನವಿಲ್ಲ.
ಈಗ ಇಲ್ಲದ ಗೊಂಡ್ವಾನದ ಬಗ್ಗೆ ಭೂಗರ್ಭ ಶಾಸ್ತ್ರಜ್ಞರು, ಭೂಗೋಳ ತಜ್ಞರು ಮತ್ತು ಇತಿಹಾಸತಜ್ಞರು ತಿಳಿದಿದ್ದಾರೆ. ಗೊಂಡ್ವಾನ ಮೂಲದವರು ಎಂದು ಗುರುತಿಸಲಾಗಿರುವ ಗೊಂಡರು, ಅಲ್ಪ ಸಂಖ್ಯೆಯಲ್ಲಾದರೂ ಇನ್ನೂ ಇರುವುದರಿಂದ ಅವರಿಗೆ ಸಂಬಂಧಿಸಿದಂತೆ ಮತ್ತಷ್ಟು ಅಧ್ಯಯನದ ಅವಶ್ಯಕತೆ ಇದೆ. ಈ ಕೃತಿಗಾಗಿ ಶ್ರಮಿಸಿರುವ ಪಂಪನಗೌಡ,  ಬುರುಡೆಕಟ್ಟೆ ಮಂಜಪ್ಪ, ಕೆ.ಎಂ. ಮೇತ್ರಿ ಮತ್ತು ಕೆ.ಬಿ. ಬ್ಯಾಳಿ ಅವರುಗಳೇ ಎಂ.ಸಿ. ಕಂಗಾಲಿಯವರ ಮಾರ್ಗದರ್ಶನದಲ್ಲಿ ಈ ಕೆಲಸವನ್ನು ಮಾಡಿದರೆ ಒಳ್ಳೆಯ ಫಲ ದೊರೆಯಬಹುದೆಂದು ನಿರೀಕ್ಷಿಸಬಹುದು.
ಈ ಕೃತಿಯಿಂದ ದೊರೆತಿರುವ ಮತ್ತೊಂದು ಬಹು ಮುಖ್ಯ ಮಾಹಿತಿ ಎಂದರೆ ಸಿಂಧೂ ಲಿಪಿಯ ರಹಸ್ಯವನ್ನು ಗೊಂಡಿ ಭಾಷೆ ಮತ್ತು ಲಿಪಿಯ ಮೂಲಕ ಒಡೆಯುವ ಪ್ರಯತ್ನ. ಈ ಅಧ್ಯಯನ ಹೀಗೇ ಮುಂದುವರಿದರೆ ಸಿಂಧೂ ಲಿಪಿಯ ರಹಸ್ಯದ ಕೀಲಿಕೈ ದೊರೆಯಬಹುದು ಮತ್ತು ದ್ರಾವಿಡ ವರ್ಗದ ಗೊಂಡಿ ಭಾಷೆಯ ಬಗ್ಗೆ ಮತ್ತಷ್ಟು ಅರಿವು ಲಭ್ಯವಾಗುವ ಸಾಧ್ಯತೆಗಳಿವೆ.
ರಾಜಕೀಯ ಇತಿಹಾಸವನ್ನು ತಿಳಿಯುವ ಕೆಲಸ ಮುಗಿದಿದ್ದು, ಸಾಂಸ್ಕೃತಿಕ ಮತ್ತು ಸಾಮಾಜಿಕ ಇತಿಹಾಸವನ್ನು ತಿಳಿಯುವ ಸಾರ್ಥಕ ಪ್ರಯತ್ನಗಳು ಮುಂದುವರಿದಿರುವ ಹೊತ್ತಿನಲ್ಲಿ, ಒಂದು ಜನಾಂಗದ ಬಗ್ಗೆ ಮತ್ತು ಅದರ ಸಂಸ್ಕೃತಿಯ ಬಗ್ಗೆ ತಿಳಿಯುವುದು ಸದ್ಯದ ಸಂದರ್ಭದಲ್ಲಿ ಅಗತ್ಯ ಮತ್ತು ಅವಶ್ಯಕ. ಆದರೆ ಈ ಸಂದರ್ಭದಲ್ಲಿ ನಾವು ಪ್ರಾಚೀನ ಮತ್ತು ಪ್ರಾಚೀನವಾದುದೆಲ್ಲವೂ ನಮ್ಮದು ಎಂಬ ಭಾವವು ಸತ್ಯವನ್ನು ದೂರವಿಡುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಅಧ್ಯಯನ ನಡೆಸಬೇಕಾಗುತ್ತದೆ.

ಕಾಮೆಂಟ್‌ಗಳಿಲ್ಲ: