ಸೋಮವಾರ, ಆಗಸ್ಟ್ 5, 2013

ಸಾಂಸ್ಕೃತಿಕ ಯಜಮಾನಿಕೆಗೆ ತಡೆ ಹೇಗೆ ?


ಸೌಜನ್ಯ: ಪ್ರಜಾವಾಣಿ

    ಕೆಲವು ವರ್ಷಗಳ ಹಿಂದೆ ಇತಿಹಾಸ ವಿಭಾಗದ ಪ್ರವೇಶ ಪರೀಕ್ಷೆಯಲ್ಲಿ ಸರಳವಾದ ಪ್ರಶ್ನೆಯೊಂದನ್ನು ಕೇಳಲಾಗಿತ್ತು. `ಭಾರತೀಯ ಸಂಸ್ಕೃತಿಗೆ ಮುಸಲ್ಮಾನರ ಕೊಡುಗೆಯೇನು?' ಐದು ಸಾಲುಗಳಲ್ಲಿ ಉತ್ತರವನ್ನು ಬರೆಯಲು ಸೂಚಿಸಲಾಗಿತ್ತು. ಸುಮಾರು ಮುನ್ನೂರು ವಿದ್ಯಾರ್ಥಿಗಳು ಉತ್ತರಿಸಿದ್ದರು. ಮೊದಲ ಸಾಲಿನಲ್ಲಿ ಎಲ್ಲರೂ ಒಂದೇ ಉತ್ತರವನ್ನು ನೀಡಿದ್ದರು. ಮುಸ್ಲಿಂ ಆಕ್ರಮಣಕಾರರು ದೇವಾಲಯಗಳನ್ನು ನಾಶಮಾಡಿದರು. ಎರಡು ಮೂರನೆಯ ಸಾಲಿನ ಉತ್ತರಗಳು ಬಹುತೇಕ ಒಂದೇ ಆಗಿದ್ದವು.

ಭಾರತದಲ್ಲಿ ಸತಿ ಸಹಗಮನ ಪದ್ಧತಿ ಮತ್ತು ಬುರ್ಖಾ ಪದ್ಧತಿಗಳು ಆರಂಭವಾದವು. ಉಳಿದೆರಡು ಉತ್ತರಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳಿದ್ದವಷ್ಟೆ. ಮುಸ್ಲಿಂ ಕೊಡುಗೆಯಾಗಿ ಒಳ್ಳೆಯದೇನನ್ನೂ ಬರೆದಿರಲಿಲ್ಲ. ಹದಿನೇಳು ವರ್ಷಗಳ ಚರಿತ್ರೆಯ ಓದಿನ ನಂತರ ಭಾರತದಲ್ಲಿ ವಿದ್ಯಾರ್ಥಿಯೊಬ್ಬ ಇಂತಹ ಉತ್ತರವನ್ನು ಬರೆಯಬಲ್ಲನಾದರೆ ನಮ್ಮ ಶಿಕ್ಷಣ ನೀತಿ ಹಾಗೂ ಆ ಮೂಲಕ ನಾವು ಕಲಿಸಲು ಹೊರಟ ಸಂಸ್ಕೃತಿಯ ಬಗ್ಗೆ ಪ್ರಶ್ನಿಸಿಕೊಳ್ಳಬೇಕೆನಿಸಿತು.

ಮುಸಲ್ಮಾನರ ಆಳ್ವಿಕೆಯಿಂದಾಗಿ ಭಾರತದಲ್ಲಿ ವಾಸ್ತುಶಿಲ್ಪದ ಕ್ರಾಂತಿಯೇ ಸಂಭವಿಸಿತ್ತು. ಭಾರತದಲ್ಲಿ ಆರಂಭವಾದ ಸಿತಾರ್ ವಾದನವನ್ನಾಗಲೀ, ಸೂಫೀ ಸಾಹಿತ್ಯವನ್ನಾಗಲೀ, ಕಡೆಗೆ ಬಿರ್ಯಾನಿಯಂತಹ ಅಡುಗೆಯನ್ನಾಗಲೀ ಮೆಚ್ಚುವುದನ್ನು ಕಲಿಸಿಲ್ಲ. ಇದನ್ನೆಲ್ಲಾ ಗಮನಿಸುವಾಗ ಕರ್ನಾಟಕ ಸರ್ಕಾರ `ಸಾಂಸ್ಕೃತಿಕ ನೀತಿ'ಯೊಂದನ್ನು ನಿರೂಪಿಸಿಲು ಹೊರಟ ವಿಚಾರ ಗಾಬರಿಯನ್ನು ಹುಟ್ಟಿಸಿತು. ಕಳೆದೆರಡು ಶತಮಾನಗಳಲ್ಲಿ `ಸಂಸ್ಕೃತಿ'ಯ ಕಲ್ಪನೆಯೇ ಅರಿವಳಿಕೆಯಾಗಿ ಕೆಲಸಮಾಡಿದೆ.

ಹೊರನೋಟಕ್ಕೆ `ಸಾಂಸ್ಕೃತಿಕ ನೀತಿ'ಯ ಹರಹು ಅಕಾಡೆಮಿಗಳಿಗೆ ಹಣ ಮಂಜೂರು ಮಾಡುವುದು, ಸಮರ್ಥರಾದವರಿಗೆ ಜವಾಬ್ದಾರಿಯನ್ನು ನೀಡುವುದು ಅದರಲ್ಲೂ ಎಲ್ಲಾ ಸಮುದಾಯಗಳಿಗೆ ಅವಕಾಶವಿರುವಂತೆ ನೋಡಿಕೊಳ್ಳುವುದು. ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಶಿಲ್ಪ ಇವುಗಳ ಪ್ರೋತ್ಸಾಹಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸುವುದು, ಸಾಹಿತ್ಯ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸುವುದು- ಇವು ಸಂಸ್ಕೃತಿ ನೀತಿಯ ರೂಪುರೇಷೆಗಳಾಗಿ ಕಾಣಿಸುತ್ತವೆ.

ಇದು `ಸಂಸ್ಕೃತಿ ನೀತಿ'ಯ ಒಂದು ಭಾಗ ಮಾತ್ರ. ಇದರಲ್ಲೂ ಗುರುತರವಾದ ಜವಾಬ್ದಾರಿಗಳಿವೆ. ಯಾವ ಸಾಹಿತ್ಯಕ್ಕೆ ಮನ್ನಣೆ ಸಿಗುತ್ತದೆಂಬುದಾಗಲೀ, ಜನಪದ ಹಾಡುಗಾರರನ್ನು ಗುರುತಿಸಿ ಮನ್ನಿಸುವುದಾಗಲೀ ಸರ್ಕಾರದ ನಿಲುವುಗಳಾಗಬಲ್ಲವು. ಭಾಷಾ ನೀತಿಗಳು ಕನ್ನಡವಲ್ಲದೆ ಉರ್ದು, ತುಳು, ಕೊಡವ ಭಾಷೆಗಳಿಗೆ ಅಕಾಡೆಮಿಗಳನ್ನು ತೆರೆದು ತನ್ನ ಉದಾರನೀತಿಯನ್ನು ಈವರೆಗೆ ತೋರಿಸುತ್ತಾ ಬಂದಿವೆ. ಸಂಸ್ಕೃತಿ ನೀತಿಯ ಆಳ ಅಗಲವನ್ನು ಸ್ವಲ್ಪಮಟ್ಟಿಗಾದರೂ ಪರಿಶೀಲಿಸುವುದು ಇಲ್ಲಿ ನನ್ನ ಪ್ರಯತ್ನ.
  ಭಾರತದ ರಾಷ್ಟ್ರೀಯ ಹೋರಾಟದ ಹೊತ್ತಿನಲ್ಲಿ `ಸಾಂಸ್ಕೃತಿಕ ಏಕತೆ'ಯ ಹೆಸರಿನಲ್ಲಿ ಕಂಡ ಕಲ್ಪನೆ ಮತ್ತು ಅದಕ್ಕಾಗಿ ತೆತ್ತ ಬೆಲೆ ಬಹಳ ದೊಡ್ಡದು.  ಸಂಸ್ಕೃತಿ ವಿಚಾರವನ್ನು ಮುಟ್ಟುವುದು ಎರಡು  ಅಲಗಿನ ಕತ್ತಿಯನ್ನು ಹಿಡಿದಂತೆ. ಭಾರತವನ್ನಾಳಿದ ಬ್ರಿಟಿಷರಿಗೂ ಇದರ ಅನುಭವವಾಗಿತ್ತು.

ಅವರು ಭಾರತದಲ್ಲಿ ಜಾರಿಗೆ ತಂದ ಸತಿ ವಿರೋಧಿ ಕಾಯಿದೆ, ವಿವಾಹ ಕಾಯಿದೆ, ಮತಾಂತರಕ್ಕೆ ಪರವಾದ ಕಾಯಿದೆಗಳು 1857ರ ದಂಗೆಗೆ ಕಾರಣವಾಯಿತೆಂದು ಅವರು ಗ್ರಹಿಸಿದ್ದರು. ಹಾಗಾಗಿ 1858ರಲ್ಲಿ ಭಾರತೀಯ ರಾಜರನ್ನು ಸೋಲಿಸಿದ ಬ್ರಿಟಿಷರು ಭಾರತವನ್ನು ಬ್ರಿಟಿಷ್ ಸಾಮ್ರೋಜ್ಯದ ಭಾಗವೆಂದರು.

ಇನ್ನು ಮುಂದೆ ಭಾರತದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಚಾರಗಳಲ್ಲಿ ಬ್ರಿಟಿಷರು ತಲೆ ಹಾಕುವುದಿಲ್ಲವೆಂದು ರಾಣಿಯ ಘೋಷಣೆಯಲ್ಲಿ ತಿಳಿಸಿದರು. ಭಾಷೆಗಳನ್ನು ಆಳವಾಗಿ ಅಧ್ಯಯನ ಮಾಡಿದರು, ಜಾತಿ ಉಪಜಾತಿಗಳ ಪಟ್ಟಿ ಮಾಡಿದರು. ವಾಸ್ತವದಲ್ಲಿ ಭಾರತದ ಧರ್ಮ, ಸಂಸ್ಕೃತಿಯ ವಿಚಾರಗಳನ್ನು ಸೊಗಸಾಗಿ ಆಡಳಿತದ ಅನುಕೂಲಕ್ಕೆ ಬಳಸಿಕೊಂಡರು. ಒಡೆದು ಆಳುವ ನೀತಿಗೆ ಅಡಿಪಾಯ ಮಾಡಿಕೊಂಡರು.

ಇಂದು `ಸಂಸ್ಕೃತಿ' ಎಂಬ ಪದ ವಿಪರೀತ ಅರ್ಥವನ್ನು ಪಡೆದುಕೊಂಡಿದೆ. ಸೀರೆ ಉಡುವುದು ಭಾರತೀಯ ಸಂಸ್ಕೃತಿ, ಪಾಪ್ ಸಂಗೀತ ಪಾಶ್ಚಿಮಾತ್ಯ ಸಂಸ್ಕೃತಿ, ಭಾರತೀಯ ಸಂಸ್ಕೃತಿಯಲ್ಲಿ ಗಂಡ ಸತ್ತಾಗ ಹೆಂಡತಿಯನ್ನು ಚಿತೆಗೇರಿಸುತ್ತಿದ್ದರು, ಇಸ್ಲಾಂ ಸಂಸ್ಕೃತಿ ಮೂರ್ತಿ ಪೂಜೆಯನ್ನು ವಿರೋಧಿಸುತ್ತದೆ. ಹೀಗೆ ರೂಢಿ, ಆಚರಣೆ, ಕಲೆ, ಸಾಹಿತ್ಯ, ಸಂಗೀತ ಒಟ್ಟಾರೆ ಬದುಕನ್ನೇ ಸಂಸ್ಕೃತಿ ಪದದಲ್ಲಿ ಹಿಡಿದಿಡಲಾಗುತ್ತಿದೆ.

ವಿಶ್ವವಿದ್ಯಾಲಯದ ಸಂಶೋಧನೆಗಳು ಸಂಸ್ಕೃತಿ ಪದದ ಸುತ್ತ ಗಿರಕಿ ಹೊಡೆಯುತ್ತಿವೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಶಾಸನ ಸಂಸ್ಕೃತಿ, ಮಳೆ ಸಂಸ್ಕೃತಿ, ಕೃಷಿ ಸಂಸ್ಕೃತಿ, ಬೇಟೆ ಸಂಸ್ಕೃತಿ, ಜಲ ಸಂಸ್ಕೃತಿ, ಮಾಲ್ ಸಂಸ್ಕೃತಿ... ಪಟ್ಟಿ ಬೆಳೆಯುತ್ತದೆ. ರಾಜಕಾರಣಿಗಳು ಭಾಷಣ ಮಾಡುವಾಗ ಪದಗಳ ಕೊರತೆಯಾದರೆ `ಸಂಸ್ಕೃತಿ' ಪದವನ್ನು ಧಾರಾಳವಾಗಿ ಬಳಸುತ್ತಿರುತ್ತಾರೆ.

  `ಸಂಸ್ಕೃತಿ' ಪದವನ್ನು ಇಂಗ್ಲಿಷ್‌ನ `ಕಲ್ಚರ್' ಪದಕ್ಕೆ ಸಂವಾದಿಯಾಗಿ ಬಳಸುತ್ತಿದ್ದೇವೆ. ಕಲ್ಚರ್ ಪದವೂ ಹದಿನೆಂಟನೇ ಶತಮಾನದಷ್ಟು ಈಚಿನದೇ; ಅಗ್ರಿಕಲ್ಚರ್ ಪದದ ಭಾಗವಾಗಿದ್ದು ಆ ನಂತರ ಸ್ವತಂತ್ರವಾಗಿ ಬಳಕೆಯಾಗತೊಡಗಿತು. ಒಂದು ಬಾರಿ ಚಲಾವಣೆಗೆ ಬಂದ ನಂತರ ಇಂಗ್ಲಿಷ್‌ನ್ಲ್ಲಲೂ ಅರ್ಥ ಹಿಗ್ಗುತ್ತಲೇ ಹೋಯಿತು. ಮಹಾಯುದ್ಧಗಳ ಕಾಲದಲ್ಲಿ ಬಂದ ಹೊಸ ಸರ್ಕಾರಗಳು ಜನರ ಆಲೋಚನಾ ಕ್ರಮವನ್ನೇ ಬದಲಿಸಹೊರಟವು.

ಹಿಂದೆಂದಿಗಿಂತ ಭಿನ್ನವಾಗಿ ಬದುಕಬೇಕೆಂಬುದು ಅವರ ಉದ್ದೇಶವಾಗಿದ್ದರಿಂದ ಮೂಲಭೂತ ನಂಬಿಕೆಗಳನ್ನೇ ಬದಲಿಸುವ ನಿಟ್ಟಿನಲ್ಲಿ ಅಡಿಯಿಟ್ಟರು. ಬಹಿರಂಗವಾಗಿ ಸಾಂಸ್ಕೃತಿಕ ನೀತಿಯೆಂದು ಕರೆದುಕೊಳ್ಳದಿದ್ದರೂ ಕಾನೂನುಗಳ ಮೂಲಕ ತಾವು ಬಯಸಿದ ವಿಚಾರಗಳನ್ನು ಆಚರಣೆಗೆ ತರಲು ಹಿಂದೆ ಬೀಳಲಿಲ್ಲ. ಆವರೆಗೆ ಕಲ್ಪನೆಯಲ್ಲೇ ಇಲ್ಲದ ಹೊಸ ರಾಷ್ಟ್ರೀಯ ಸಂಕೇತಗಳನ್ನು ರಾಷ್ಟ್ರಧ್ವಜ, ರಾಷ್ಟ್ರಗೀತೆ ಇತ್ಯಾದಿಗಳನ್ನು ಅಳವಡಿಸಿದರು.

ಇದು ಮಾರಕಾಸ್ತ್ರವಾಗಿ ಬಳಕೆಯಾಗಿದ್ದು ಜರ್ಮನಿಯಲ್ಲಿ, ಅದು ಹಿಟ್ಲರ್‌ನ ಕಾಲಕ್ಕೆ. ಜರ್ಮನಿ, ಇಟಲಿ, ಕಡೆಗೆ ಜಪಾನ್ ಕೂಡ ತನ್ನ ಸರ್ವಾಧಿಕಾರಿ ನೀತಿಗೆ ತಕ್ಕ ಪಠ್ಯಕ್ರಮವನ್ನೇ ರೂಪಿಸಿಕೊಂಡಿದ್ದವು. ಯುದ್ಧಾ ನಂತರದಲ್ಲಿ ಯುದ್ಧ ವಿರೋಧಿ ನೀತಿಯನ್ನು ತನ್ನ ಸಂಸ್ಕೃತಿಯಾಗಿ ರೂಪಿಸಿಕೊಳ್ಳಲು ಪಠ್ಯ ಕ್ರಮವನ್ನು ಬದಲಾಯಿಸಿಕೊಂಡ ಮೊದಲ ದೇಶ ಜಪಾನ್.

ಭಾರತ ಮಾತ್ರವಲ್ಲದೆ ಜಗತ್ತಿನ ಯಾವುದೇ ದೇಶದಲ್ಲಿ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು ತಾವು ನಂಬಿದ ಸಿದ್ಧಾಂತಕ್ಕೆ ತಕ್ಕ ನೀತಿಗಳನ್ನೇ ಜಾರಿಗೆ ತರುತ್ತವೆ. ಆರ್ಥಿಕ ನಿರ್ಣಯಗಳಾಗಲೀ ಶೈಕ್ಷಣಿಕ ನೀತಿಗಳಾಗಲೀ ಎಲ್ಲವೂ ಅಂತಿಮವಾಗಿ ಬದುಕನ್ನು ರೂಪಿಸುವುದೇ ಆಗಿರುವುದರಿಂದ `ಸಾಂಸ್ಕತಿಕ ನೀತಿ' ಆ ಎಲ್ಲದರಲ್ಲೂ ಅಂತರ್ಗತವಾಗಿರುತ್ತದೆ.

ಹಾಗಾಗಿಯೇ ಸರ್ಕಾರಗಳು ಬದಲಾದ ಕೂಡಲೇ ಪಠ್ಯಕ್ರಮಗಳು ಬದಲಾಗುತ್ತವೆ. ಅದರಲ್ಲೂ ಚರಿತ್ರೆ ಪಾಠಗಳ ಮೇಲೆ ಯಾವಾಗಲೂ ಕಣ್ಣು ಬೀಳುತ್ತದೆ. ಹತ್ತು ವರ್ಷಗಳ ಹಿಂದೆ ಭಾರತ ಸರ್ಕಾರ ಎನ್.ಸಿ.ಇ.ಆರ್.ಟಿ ಪಠ್ಯಗಳನ್ನು ಬದಲಾಯಿಸಿದ್ದಕ್ಕೆ ಜನರ ತೀವ್ರ ವಿರೋಧ ಎದುರಾಗಿದ್ದನ್ನು ನಾವಿಲ್ಲಿ ನೆನೆಯಬಹುದು.

ಯಾವುದೇ ರಾಜಕೀಯ ಪಕ್ಷದ ಪ್ರಣಾಳಿಕೆಯನ್ನು ಮೀರಿ ಭಾರತದ ಸಂಸ್ಕೃತಿ ನೀತಿಯನ್ನು ರೂಪಿಸುವುದು ಸಂವಿಧಾನ. ನೇರವಾಗಿ ಯಾವುದನ್ನೂ `ಸಂಸ್ಕೃತಿ ನೀತಿ' ಎಂದು ಸಂಬೋಧಿಸದಿದ್ದರೂ ಸಂವಿಧಾನದ ಮೊದಲ ಮಾತುಗಳಲ್ಲಿ ಹೇಳಿರುವ ಆದರ್ಶಗಳೇ ಅಡಿಪಾಯಗಳಾಗುತ್ತವೆ. ಪ್ರಜಾಪ್ರಭುತ್ವ, ಸಮಾಜವಾದಿ, ಜಾತ್ಯತೀತ ಈ ನೆಲೆಗಟ್ಟಿನ ಮೇಲೆ ನೀತಿಯನ್ನು ನಿರೂಪಿಸಿದಲ್ಲಿ ಯಾರೂ ಹೆದರಬೇಕಾದ ಅಗತ್ಯವಿರುವುದಿಲ್ಲ. ರಾಜ್ಯ ನಿರ್ದೇಶಕ ತತ್ವಗಳು ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ.

ಇಷ್ಟೆಲ್ಲಾ ಇದ್ದೂ ಎಲ್ಲವನ್ನೂ ತಮ್ಮ ಹಿತಕ್ಕೆ ಬಳಸಿಕೊಳ್ಳಬಲ್ಲ ಶಕ್ತಿಗಳು ನಮ್ಮ ನಡುವೆ ಕೆಲಸ ಮಾಡುತ್ತಿರುವುದರಿಂದ ಗುಮಾನಿಯಿಂದ ನೋಡುವಂತಾಗಿದೆ. ಧಾರ್ಮಿಕ ಸಂಸ್ಥೆಗಳು, ರಾಜಕೀಯ ಶಕ್ತಿಗಳು, ಮಾರುಕಟ್ಟೆ ಒಡೆಯರು, ಬಹುರಾಷ್ಟ್ರೀಯ ಕಂಪೆನಿಗಳು, ಬಲಿಷ್ಠ ದೇಶಗಳು ತಮ್ಮ ಸ್ವಾರ್ಥಕ್ಕಾಗಿ ಜನರ ಬದುಕುಗಳನ್ನು ಅಲುಗಾಡಿಸಬಲ್ಲವರಾಗಿರುತ್ತಾರೆ. ಯಾವಾಗ ಬೇಕಾದರೂ ಜನರನ್ನು ಮೂಢರನ್ನಾಗಿಸುತ್ತಾರೆ, ಮೂಢನಂಬಿಕೆಗಳನ್ನು ಹುಟ್ಟುಹಾಕುತ್ತಾರೆ. `ಸಂಸ್ಕೃತಿ'ಯನ್ನು ರಾಮರಸವಾಗಿ ಕುಡಿಸುತ್ತಾ ಬಂದಿದ್ದಾರೆ.

ಧರ್ಮಗಳು ಆಚರಣೆ, ನಂಬಿಕೆಗಳನ್ನು ರೂಪಿಸುತ್ತಾ ಅಥವಾ ನಿರ್ಬಂಧಿಸುತ್ತಾ ಬಂದಿವೆ. ಮಾನವನ ಬದುಕಿನಲ್ಲಿ ಹಿರಿದಾದ ಪಾತ್ರವನ್ನು ಹೊಂದಿವೆ. ಅದರ ಸುತ್ತಾ ಕಲೆ ವಾಸ್ತುಶಿಲ್ಪಗಳು ಬೆಳೆದಿವೆ. ಭಾರತದಂತಹ ಬಹು ಸಂಸ್ಕೃತಿಗಳನ್ನು ಹೊಂದಿರುವ ನಾಡಿನಲ್ಲಿ ಯಾವುದೇ ಒಂದು ಧರ್ಮಕ್ಕೆ ಹೆಚ್ಚಿನ ಮಹತ್ವವನ್ನು ಕೊಡಲು ಸಾಧ್ಯವಿಲ್ಲ. ಶಿಷ್ಟ ಧರ್ಮಗಳ ಮುಂದೆ ಜನಪದ ಧರ್ಮಗಳು ಸಂಕೋಚದಲ್ಲಿ ಮುದುಡಿಕೊಳ್ಳುತ್ತವೆ. ಸಣ್ಣ ಪುಟ್ಟ ನಿರ್ಣಯಗಳಲ್ಲೂ ಧರ್ಮದ ಧ್ವನಿಗಳು ಬುಸುಗುಟ್ಟುತ್ತವೆ.

ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ಯೋಜನೆಯನ್ನು ರೂಪಿಸುವಾಗ ಕೋಳಿಮೊಟ್ಟೆ ಕೊಡುವುದನ್ನು ವಿರೋಧಿಸಲು ಮಠಗಳು ಬೀದಿಗಿಳಿದವು. ಮೊಟ್ಟೆ ಬಯಸುವ ಬಹುಸಂಖ್ಯಾತ ಮಕ್ಕಳ ಬಾಯಿ ಮುಚ್ಚಿತು. ಮಕ್ಕಳ ಆಯ್ಕೆಯನ್ನೂ ಕೇಳಲಿಲ್ಲ. ಇಂತಹ ಕಡೆ ಪ್ರಜಾಪ್ರಭುತ್ವಕ್ಕಿಂತ ಸಾಂಸ್ಕೃತಿಕ ಯಜಮಾನಿಕೆ ವಹಿಸುವವರು, ನೀತಿ ನಿರೂಪಕರು ಧರ್ಮಾಧಿಕಾರಿಗಳಾಗುತ್ತಾರೆ.

ಸಂಸ್ಕೃತಿ ಹೆಸರಿನಲ್ಲಿ ದಿಗ್ಬಂಧನಗಳಿದ್ದರೆ ಅದರ ಹೇರಿಕೆ ಹೆಣ್ಣುಮಕ್ಕಳ ಮೇಲೆ ಹೆಚ್ಚಾಗಿರುತ್ತದೆ. ಅವರ ಉಡುಗೆ ತೊಡುಗೆ, ನಡೆನುಡಿ ಎಲ್ಲದರ ಮೇಲೆ ನಿಗಾ ಇಡಲಾಗುತ್ತದೆ. ಇದು ಮನೆಯ ಹಂತದಿಂದಲೇ ಆರಂಭವಾಗುತ್ತದೆ. ಅದರಲ್ಲೂ ಮಧ್ಯಮವರ್ಗದಲ್ಲಿ ಹೆಚ್ಚಾಗಿರುತ್ತದೆ. ಸೀರೆ ಉಟ್ಟು, ಹಣೆಗೆ ಕುಂಕುಮ ಹಚ್ಚಿ, ಉದ್ದವಾಗಿ ಜಡೆ ಹಾಕಿ...ಇಂತಹ ಮಾತುಗಳು ನಿರಂತರವಾಗಿ ನಮ್ಮ ಕಿವಿಯ ಮೇಲೆ ಬೀಳುತ್ತಲೇ ಇರುತ್ತವೆ.

ಸಾಂಪ್ರದಾಯಿಕ ಉಡುಗೆಗಳು ನೋಡಲು ಹಿತವಾಗಿದ್ದರೂ ಕೆಲಸಕ್ಕೆ ತೊಡಕಾಗುತ್ತದೆ. ಅದರಲ್ಲೂ ಹೊಸ ಬದುಕಿನ ಕ್ರಮಕ್ಕೆ ಹೊಸ ಸವಾಲುಗಳಿಗೆ ಎದುರಾಗುತ್ತಿರುವ ಹೆಣ್ಣುಮಕ್ಕಳು ಅದಕ್ಕೆ ತಕ್ಕ ಉಡುಗೆಯನ್ನು ಬಯಸುತ್ತಾರೆ. ಜಗತ್ತಿನಾದ್ಯಂತ ಈ ಬದಲಾವಣೆ ಸಹಜವಾಗಿ ನಡೆದಿದೆ. ಪಾಶ್ಚಿಮಾತ್ಯರೂ ಇದರಿಂದ ಹೊರಗಿಲ್ಲ.

ಅವರ ಸಾಂಪ್ರದಾಯಿಕ ಉಡುಗೆಗಳಾದ ಉದ್ದನೆಯ ಗೌನ್‌ಗಳನ್ನು ಬಿಟ್ಟು ಹಗುರವಾದ ಬಟ್ಟೆಗಳನ್ನು ತೊಟ್ಟರು. ಹೊರ ಪ್ರಪಂಚದ ಬದಲಾವಣೆಯ ಜೊತೆಯೇ ಬದುಕುವ ಗಂಡಸರಲ್ಲಿ ಈ ಬದಲಾವಣೆ ಬೇಗನೆ ಸಾಧ್ಯವಾಗುತ್ತದೆ. ಅಂತಹ ತಿರುವುಗಳು ಹೆಣ್ಣಿನಲ್ಲಿ ಕಾಣಬೇಕಾದರೆ ಒಂದೆರಡು ಶತಮಾನವೇ ಬೇಕಾಗುತ್ತದೆ.

  ಎರಡು ವರ್ಷಗಳಿಂದ ಹೆಣ್ಣುಮಕ್ಕಳ `ವಸ್ತ್ರ ಸಂಹಿತೆ'ಯ ಚರ್ಚೆ ಆರಂಭವಾದುದರಿಂದ, ಕೆಲವು ಕಾಲೇಜುಗಳಲ್ಲಿ ದುಪ್ಪಟ ಹೊದ್ದುಬರುವುದನ್ನು ಕಡ್ಡಾಯಗೊಳಿಸಿರುವ ಈ ಹೊತ್ತಿನಲ್ಲಿ ಅನುಮಾನಗಳು ಕಾಡುತ್ತವೆ. ಟಿಸಿಎಚ್ ಹಾಗೂ ಬಿಎಡ್ ಓದುವ ಹೆಣ್ಣುಮಕ್ಕಳು ಸೀರೆಯನ್ನು ತೊಡುವುದು ಕಡ್ಡಾಯವಾಗುವುದು ಅಗತ್ಯವಾಗಿತ್ತೆ? ಪ್ರಶ್ನೆಗಳು ಎದ್ದಾಗ ಬರುವ ಉತ್ತರ ಮಾತ್ರ `ಅದು ನಮ್ಮ ಸಂಸ್ಕೃತಿ'. ಗಂಡು ಮಕ್ಕಳು ಪ್ಯಾಂಟ್‌ಷರ್ಟ್ ತೊಡುವುದನ್ನು ಭಾರತೀಯ ಸಂಸ್ಕೃತಿ ಎಂದು ಒಪ್ಪಿಕೊಂಡಿದ್ದೇವೆ.
ಮುಸ್ಲಿಂ ಹೆಣ್ಣುಮಕ್ಕಳು ಕಳೆದ ದಶಕಗಳಿಗಿಂತ ಈ ದಶಕದಲ್ಲಿ ಹೆಚ್ಚಾಗಿ ಬುರ್ಖಾ ತೊಡುತ್ತಿದ್ದಾರೆ. ಹೊರ ನೋಟಕ್ಕೆ ಧಾರ್ಮಿಕ ಮೂಲಭೂತವಾದ ಬಿಗಿಯಾದಂತೆ ಕಂಡುಬಂದರೂ ವಾಸ್ತವದಲ್ಲಿ ಅಂತಹ ಪರಿಸ್ಥಿತಿಯನ್ನು ಹುಟ್ಟುಹಾಕಿದವರು ಯಾರು ಎಂದೂ ಕೇಳಿಕೊಳ್ಳಬೇಕಾಗಿದೆ. ಇದರ ಹಿಂದೆ ನಿಂತ ಭಾರತದ `ಸಾಂಸ್ಕೃತಿಕ ನೀತಿ' ಜವಾಬು ನೀಡಬಲ್ಲದೆ? ರಸ್ತೆಗಳನ್ನು ವಿಸ್ತರಿಸುವಾಗ ಮೂವತ್ತು ನಲವತ್ತು ವರ್ಷಗಳ ಕಾಲ ಬೆಳೆದು ನಿಂತ ದೊಡ್ಡ ಮರಗಳನ್ನು ಮುಲಾಜಿಲ್ಲದೆ ಕಡಿದುಹಾಕುತ್ತೇವೆ.

ವರ್ಷ ಒಂದರಲ್ಲಿ ಕಟ್ಟಬಹುದಾದ ದೇಗುಲಗಳನ್ನು ಜೋಪಾನವಾಗಿ ಕಾಪಾಡುತ್ತೇವೆ. ಚಿಲಿಪಿಲಿಗುಟ್ಟುವ ಹಕ್ಕಿಗಳಿಗೆ ನೆಲೆಯಾಗಿ, ದಾರಿ ಹೋಕರಿಗೆ ನೆರಳು ನೀಡಿ ಕಾಪಾಡಿದ ಮರ ದೇವರಲ್ಲ ಅದನ್ನು ಉಳಿಸುವುದು ಇಂದು ನಮ್ಮ ಸಂಸ್ಕೃತಿಯಲ್ಲ. ಮರಗಳು ಕಾಡಿನಲ್ಲಿ ಇರಬೇಕಾದವು, ಕೆರೆಗಳು ಹಳ್ಳಿಯಲ್ಲಿ ಇರುವಂತಹವು, ಅಗಲವಾದ ರಸ್ತೆಗಳು, ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು ಇವು ನಗರ ಸಂಸ್ಕೃತಿ ಎಂದು ಅರ್ಥಮಾಡಿಕೊಳ್ಳುವಂತಾಗಿದೆ.

ಸೌಂದರ್ಯ ವರ್ಧಕಗಳನ್ನು ತಯಾರಿಸುವ ಕಂಪೆನಿಗಳು ನಮ್ಮ ಕಪ್ಪು ಚರ್ಮದ ದುರ್ಬಳಕೆ ಮಾಡಿಕೊಂಡು ಲಾಭ ಮಾಡುತ್ತವೆ. ಕಪ್ಪು ಚರ್ಮವನ್ನು ಹೀಗಳೆದು ಸದಾ ಕಾಲಕ್ಕೂ ಕೀಳು ಭಾವನೆಯಲ್ಲಿ ನರಳುವಂತೆ ಮಾಡಿವೆ. ಸೋಪ್, ಮುಖಕ್ಕೆ ಹಚ್ಚುವ ಕ್ರೀಮ್, ಪೇಸ್ಟ್, ತುಟಿಗೆ, ಕಣ್ಣಿಗೆ, ಕೆನ್ನೆಗೆ ಹಚ್ಚುವ ಬಣ್ಣಗಳು, ಬ್ರಷ್ ಇವೆಲ್ಲವನ್ನೂ ನಮ್ಮ ಬದುಕಿನ ಭಾಗವಾಗಿಸಲು ಹರಸಾಹಸ ಮಾಡಿ ಯಶಸ್ವಿಯಾಗಿವೆ.

ಇನ್ನು ಗಿಫ್ಟ್ ವಸ್ತುಗಳ ಮಾರಾಟಗಾರರು `ಫ್ರೆಂಡ್‌ಶಿಪ್ ಡೇ', `ಲವರ್ಸ್‌ ಡೇ', `ಮದರ್ಸ್‌ ಡೇ' ಹೀಗೆ ಹಲವು ಆಚರಣೆಗಳನ್ನು ಹುಟ್ಟು ಹಾಕುತ್ತವೆ. ದಿನಕ್ಕೊಂದು `ಡೇ' ಆಚರಿಸಿ ಮಾರುಕಟ್ಟೆಗಳು ಬೆಳೆಯಲು ಸಹಕರಿಸುತ್ತಿದ್ದೇವೆ. ಮಾಲ್ ಸಂಸ್ಕೃತಿಯಂತೂ ಮಾಲ್ ಎಂಬ ಸಂತೆಯನ್ನೇ ಬದುಕಾಗಿಸಿಕೊಳ್ಳುವಂತೆ ಯೋಜನೆಯನ್ನು ರೂಪಿಸುತ್ತಿದೆ. ಈ ಎಲ್ಲದಕ್ಕೆ ಪೂರಕವಾಗಿ ಕೆಲಸ ಮಾಡುವ ಪ್ರಬಲ ಮಾಧ್ಯಮ ಟಿ.ವಿ. ಜನರ ಮುಗ್ಧತೆಯನ್ನೇ ಬಂಡವಾಳವಾಗಿಸಿಕೊಂಡಿದೆ.

ಈ ಎಲ್ಲದರ ನಡುವೆ ಪ್ರಗತಿಪರವಾಗಿ ಆಲೋಚಿಸುವ ಬೌದ್ಧಿಕವರ್ಗ, ಜನರ ಭಾವನೆಗಳಿಗೆ ದನಿಯಾಗುವ ಚಳವಳಿಗಳು, ಅಸಹಾಯಕ ಸ್ಥಿತಿಯಲ್ಲಿ ಎದ್ದ ಜನರ ಪ್ರತಿಭಟನಾ ಧ್ವನಿಗಳು ಸಮಾಜದ ಏರುಪೇರುಗಳನ್ನು ಅಲ್ಲಲ್ಲಿ ನೇರ್ಪಡಿಸಲು ಯತ್ನಿಸುತ್ತವೆ.

ಗಮನಿಸದೇ ಉಳಿದ ಬುಡಕಟ್ಟು ಸಮುದಾಯಗಳು, ಮುಟ್ಟದೆ ಹೋದ ಭಾಷೆಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವ ಅರಿವೇ ಇನ್ನೂ ಮೂಡಿಲ್ಲ. ಜೀವಂತ ಸಮುದಾಯಗಳೇ ಹೀಗಿರುವಾಗ, ಗತದ ಕುರುಹುಗಳಾದ ಶಿಲಾಯುಗದ ಸಮಾಧಿಗಳು, ಬೌದ್ಧ ಸ್ತೂಪಗಳು ಇವುಗಳಿಗೆ ಮತ್ತೆ ಜೀವ ಬರಬಹುದೆ? ಈ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಸಂಸ್ಕೃತಿ ನೀತಿಯನ್ನು ರೂಪಿಸಲು ಸಾಧ್ಯವಾದೀತೆ? ಕಾದು ನೋಡೋಣ.

1 ಕಾಮೆಂಟ್‌:

shiva prasd ಹೇಳಿದರು...

ಅರ್ಥ ಪೂರ್ಣವಾದ ಲೇಖನ