ಸೋಮವಾರ, ಆಗಸ್ಟ್ 12, 2013

ಸಮುದಾಯ ಕಾಲೇಜುಗಳಲ್ಲಿ ಗ್ರಾಮೀಣ ಕಸಬುಗಳಿಗೆ ಜೀವ ಬರಲಿ



- ಅರುಣ್ ಜೋಳದಕೂಡ್ಲಿಗಿ
 
ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗೆ ವಿದಾಯ ಹೇಳಿ ಪರ್ಯಾಯ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ (ಎಂ.ಎಚ್.ಆರ್.ಡಿ) ಮುಂದಾಗಿರುವುದು ಸ್ವಾಗತಾರ್ಹ. ಇನ್ನು ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಹೇರ್‌ಕಟಿಂಗ್ ಮುಂತಾದ ಕೋರ್ಸುಗಳು ಶುರುವಾಗುವುದಾಗಿಯೂ ವರದಿಯಾಗಿದೆ. ಈ ಯೋಜನೆಯನ್ನು ಕರ್ನಾಟಕದಲ್ಲಿ ಅಳವಡಿಸುವ ಬಗ್ಗೆ ಪೂರ್ವಭಾವಿಯಾಗಿ ಕೆಲವು ಚರ್ಚೆಗಳು ನಡೆಯಬೇಕಾಗಿದೆ. ಇದನ್ನು ರಾಜ್ಯದ ಆಯಾ ಪ್ರಾದೇಶಿಕ ನೆಲೆಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ.
naaru-udyama 

ಸಮುದಾಯ ಕಾಲೇಜುಗಳಲ್ಲಿ ಜನಪದ ಕಸಬುಗಳಿಗೆ ಮರುಜೀವ ನೀಡುವಂತಾಗಬೇಕು. ಹಾಗೆಯೇ ಒಂದು ಕಸಬು ಪಾರಂಪರಿಕವಾಗಿ ಮುಂದುವರೆಸಿಕೊಂಡು ಬಂದ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸದಿರುವಲ್ಲಿಯೂ ಎಚ್ಚರ ವಹಿಸಬೇಕಿದೆ. ಇಲ್ಲವೆಂದರೆ ಆಯಾ ಕಸುಬುಗಳ ನೆಲೆಯಲ್ಲಿ ಜಾತಿ ಪ್ರಜ್ಞೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತಾಗುತ್ತದೆ. ಇದು ಸರಕಾರವೇ ಜಾತಿ ತರತಮವನ್ನು ಬಲಪಡಿಸಲು ಮುಂದಾದಂತಾಗುತ್ತದೆ. ಅಥವಾ ಆಯಾ ಸಮುದಾಯವನ್ನು ಒಂದೇ ಕಸುಬಿಗೆ ಕಟ್ಟಿಹಾಕಿದಂತೆಯೂ ಆಗುತ್ತದೆ. ಹಾಗಾಗಿ ಸಮುದಾಯ ಕಾಲೇಜುಗಳನ್ನು ರಾಜ್ಯ ಸರಕಾರ ತುಂಬಾ ಎಚ್ಚರದಿಂದ ಕರ್ನಾಟಕದ ಸಂದರ್ಭಕ್ಕೆ ಅಗತ್ಯ ಬದಲಾವಣೆಯೊಂದಿಗೆ ಮರು ರೂಪಿಸಬೇಕಾಗಿದೆ.

ಮುಖ್ಯವಾಗಿ ಸಮುದಾಯ ಕಾಲೇಜುಗಳನ್ನು ಪ್ರಾದೇಶಿಕ ವೈಶಿಷ್ಟ್ಯ ಮತ್ತು ಅಗತ್ಯಗಳನ್ನು ಆಧರಿಸಿ ಅಭಿವೃದ್ಧಿಪಡಿಸಬೇಕಿದೆ. ಕಾರಣ ಪ್ರಾದೇಶಿಕವಾಗಿ ಆಯಾ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸಲು ವಿಫುಲ ಅವಕಾಶಗಳಿವೆ. ಕಿನ್ನಾಳ ಮತ್ತು ಚನ್ನಪಟ್ಟಣದ ಗೊಂಬೆಗಳಿಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಯಾಗಿದೆ, ಹಾಗಾಗಿ ಕೊಪ್ಪಳ ಮತ್ತು ಚನ್ನಪಟ್ಟಣಗಳಲ್ಲಿ ಈ ಕಲೆಯನ್ನು 
ಆಧರಿಸಿಯೇ ಸಮುದಾಯ ಕಾಲೇಜನ್ನು ಸ್ಥಾಪಿಸಬಹುದು.

 channapatna-toys 

   ಚಳ್ಳಕೆರೆ, ಬಳ್ಳಾರಿ, ಹಿರಿಯೂರು ಮುಂತಾದ ಕಡೆ ಕಂಬಳಿ ನೇಯುವಿಕೆ ಇದೆ. ಉತ್ತರ ಭಾರತದಿಂದ ಕಂಬಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಚಳ್ಳಕೆರೆಯಲ್ಲಿ ನಡೆಯುವ ಕಂಬಳಿ ಸಂತೆಯಲ್ಲಿ ಪ್ರತಿವಾರವೂ ಲಕ್ಷಾಂತರ ರೂಗಳ ವಹಿವಾಟು ಇದೆ. ಹೀಗಾಗಿ ಈ ಭಾಗದಲ್ಲಿ ಕಂಬಳಿ ನೇಯ್ಗೆಯ ತರಬೇತಿಯನ್ನು ಕೊಡುವ ಸಮುದಾಯ ಕಾಲೇಜುಗಳನ್ನು ನಿರ್ಮಿಸಬಹುದಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕತ್ತಾಳೆಯನ್ನು ಬಳಸಿ ನಾರು ಮಾಡುವಲ್ಲಿ ಲಂಬಾಣಿ ತಾಂಡಗಳು ಕ್ರಿಯಾಶೀಲವಾಗಿದೆ. ಈ ಉದ್ದಿಮೆಯನ್ನು ಆಧರಿಸಿ ಈ ಭಾಗದ ಹೊಲದ ಬದುವುಗಳಲ್ಲಿ ದೊಡ್ಡಮಟ್ಟದಲ್ಲಿ ಕತ್ತಾಳೆ ಬೆಳೆಯುತ್ತಾರೆ. ಇಂತಹ ಕಡೆ ಕತ್ತಾಳೆ ನಾರನ್ನು ಮಾಡುವ ಕಲೆಯನ್ನು ಆಧರಿಸಿ ಕೋರ್ಸುಗಳನ್ನು ತೆರೆಯುವ ಅಗತ್ಯವಿದೆ. ಅಂತೆಯೇ ತುಮಕೂರು, ತಿಪಟೂರು ಮುಂತಾದ ಕಡೆ ತೆಂಗು ಬೆಳೆ ಹೆಚ್ಚಾಗಿದೆ. ಇಂತಹ ಕಡೆಗಳಲ್ಲಿ ತೆಂಗನ್ನು ಆಧರಿಸಿದ ಉಪ ಉತ್ಪನ್ನಗಳನ್ನು ತಯಾರಿಸುವ ತರಬೇತಿ ಕೋರ್ಸನ್ನು ಈ ಭಾಗದ ಸಮುದಾಯ ಕಾಲೇಜುಗಳಲ್ಲಿ ಅಭಿವೃದ್ಧಿ ಪಡಿಸಬಹುದಾಗಿದೆ. ಹೀಗೆ ಕರ್ನಾಟಕದ ಆಯಾ ಪ್ರಾದೇಶಿಕ ಉತ್ಪನ್ನಗಳನ್ನು ಆಧರಿಸಿ ಕೋರ್ಸಗಳನ್ನು ಆರಂಭಿಸುವುದು ಸೂಕ್ತವಾಗಿದೆ.

ಇನ್ನು ಸಿವಿಲ್ ಎಂಜಿನೀಯರಿಂಗ್ ಪದವೀಧರರನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಲಕ್ಷಾಂತರ ಜನ ಮನೆಕಟ್ಟುವ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಅನಕ್ಷರಸ್ತರ ಸಂಖ್ಯೆಯೇ ಹೆಚ್ಚಿದೆ. ಇದನ್ನು ಆಧರಿಸಿ ಕಟ್ಟಡ ನಿರ್ಮಾಣದ ಕೋರ್ಸನ್ನು ತೆರೆಯುವ ಅಗತ್ಯವಿದೆ. ಅಂತೆಯೇ ಪ್ರಾದೇಶಿಕವಾಗಿ ಕೃಷಿಯ ಭಿನ್ನ ಪ್ರಯೋಗಗಳು ಆಯಾ ಭಾಗದಲ್ಲಿವೆ. ಈ ವೈಶಿಷ್ಟಗಳೂ ಕೂಡ ಕೋರ್ಸಗಳನ್ನು ರೂಪಿಸುವಂತಾಗಬೇಕು. ಇಂದು ಸಾಂಪ್ರಾದಾಯಿಕ ಕೃಷಿಯ ಜತೆ ಆಧುನಿಕ ಕೃಷಿಯ ಪ್ರಯೋಗಗಳು ನಡೆಯುತ್ತಿವೆ. ಹಾಗಾಗಿ ಇಂತಹ ಆಧುನಿಕ ಕೃಷಿಗೆ ಸಂಬಂಧಿಸಿದಂತೆ ಗ್ರಾಮೀಣ ಯುವಕರಿಗೆ ಅನುಕೂಲವಾಗುವ ಕೋರ್ಸುಗಳನ್ನು ಆರಂಭಿಸಬೇಕಿದೆ. ಅದರಲ್ಲಿ ಮುಖ್ಯವಾಗಿ ಕೋಳಿ, ಕುರಿ, ಹಂದಿ, ಜಾನುವಾರು ಸಾಕಣೆಯನ್ನು ಆಧರಿಸಿದ ತರಬೇತಿಗಳನ್ನು ಆರಂಭಿಸಬಹುದು.

ಕೃಷಿಯ ಬೆಳೆಗಳನ್ನು ಬಳಸಿಕೊಂಡು ಉಪ ಉತ್ಪನ್ನಗಳನ್ನು ಮಾಡುವ ನೆಲೆಯಲ್ಲಿ ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ತರಬೇತಿ ನೀಡುವಂತಹ ಕೋರ್ಸಗಳನ್ನು ಮಾಡಬಹುದಾಗಿದೆ. ಉದಾ: ಉತ್ತರ ಕರ್ನಾಟಕ ಮತ್ತು ಹೈದರಬಾದ್ ಕರ್ನಾಟಕದಲ್ಲಿ ಮುಸುಕಿನ ಜೋಳದ ಬೆಳೆ ಪ್ರಮಾಣ ಹೆಚ್ಚಾಗಿದೆ. ಈ ಮುಸುಕಿನ ಜೋಳವನ್ನು ಬಳಸಿಕೊಂಡಿ ಹಳ್ಳಿಗಳಲ್ಲಿಯೇ ಉಪ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಆರಂಭಿಸುವ ಅಗತ್ಯವಿದೆ. ಹತ್ತಿ, ಸೂರ್ಯಕಾಂತಿ, ಶೇಂಗ ಮುಂತಾದ ಬೆಳೆಗಳ ಉಪ ಉತ್ಪನ್ನಗಳನ್ನು ತಯಾರಿಸುವ ಕೋರ್ಸುಗಳನ್ನು ಆರಂಭಿಸಬಹುದು. ಇದರಿಂದಾಗಿ ಗ್ರಾಮೀಣ ಯುವ ಜನತೆಗೆ ದೊಡ್ಡಮಟ್ಟದಲ್ಲಿ ಉದ್ಯೋಗ ನಿರ್ಮಿಸಿದಂತಾಗುತ್ತದೆ.
 construction-workers 

ಹಳ್ಳಿಗಳು ಇಂದು ವೃದ್ಧರ ತಾಣಗಳಾಗಿವೆ. ಅದೇ ಹೊತ್ತಿಗೆ ನಗರಗಳು ಯುವಕ ಯುವತಿಯರ ಆಕರ್ಷಕ ಕೇಂದ್ರಗಳಾಗಿವೆ. ಇದಕ್ಕೆ ಕಾರಣ ಯುವ ಜನಾಂಗ ಹಳ್ಳಿಗಳಲ್ಲಿ ತಮ್ಮನ್ನು ತಾವು ತೆರೆದುಕೊಳ್ಳಲು ಬೇಕಾದ ಉದ್ಯೋಗಗಳ ಕೊರತೆ ಇರುವುದು. ಸಮುದಾಯ ಕಾಲೇಜುಗಳ ಮೂಲಕ ಹಳ್ಳಿಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಸಾದ್ಯವಾದರೆ ಗ್ರಾಮೀಣ ಭಾಗದಲ್ಲಿ ಯುವ ಸಮುದಾಯವನ್ನು ಉಳಿಸಿಕೊಳ್ಳುವ ಆಕರ್ಷಣೆಯನ್ನು ಹೆಚ್ಚಿಸಬಹುದಾಗಿದೆ. ಈ ಕೋರ್ಸುಗಳಿಗೆ ವಿದ್ಯಾರ್ಹತೆಯ ವಿಷಯದಲ್ಲಿ ಕೆಲವು ವಿನಾಯಿತಿಗಳು ಬೇಕಾಗುತ್ತದೆ. ಅರೆ ವಿದ್ಯಾವ0ತ ಮತ್ತು ಅನಕ್ಷರಸ್ತ ಯುವ ಸಮುದಾಯವನ್ನು ಒಳಗೊಳ್ಳುವ ಹಾಗೆ ವಿದ್ಯಾರ್ಹತೆಗಳಲ್ಲಿ ಸಡಿಲ ನಿಲುವಿರಬೇಕು. ಕೌಶಲ್ಯವನ್ನು ಆಧರಿಸಿಯೂ ವಿದ್ಯಾರ್ಹತೆಯನ್ನು ನಿಗದಿಪಡಿಸುವಂತಾಗಬೇಕು. ಇನ್ನು ಇಂತಹ ಎಲ್ಲಾ ಕೋರ್ಸುಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಬೇಕು. ಅಂತೆಯೇ ಲೈಂಗಿಕ ಅಲ್ಪಸಂಖ್ಯಾತರನ್ನೂ, ದೇವದಾಸಿಯರನ್ನೂ ಒಳಗೊಂಡಂತೆ ಧ್ವನಿ ಇಲ್ಲದ ಅಂಚಿನ ಸಮುದಾಯಗಳಿಗೆ ಆಧ್ಯತೆ ಕೊಡಬೇಕಿದೆ.

ಮುಖ್ಯವಾಗಿ ಈ ಕೋರ್ಸಗಳನ್ನು ಮುಗಿಸಿಕೊಂಡು ಹೊರ ಹೋದಾಗ ಸ್ವತಃ ಉದ್ಯೋಗ ಸೃಷ್ಟಿಸಿಕೊಳ್ಳಲು ಸಮರ್ಪಕವಾದ ಯೋಜನೆಗಳನ್ನು ರೂಪಿಸಬೇಕಿದೆ. ಇಂತಹ ಸಮರ್ಪಕ ಯೋಜನೆಗಳಿರದೆ ಈ ಕೋರ್ಸುಗಳಿಗೆ ಯುವ ಸಮುದಾಯವನ್ನು ಸೆಳೆಯುವುದು ಸರಿಯಾಗಲಾರದು. ಕಾರಣ ಹೊಸ ನಿರುದ್ಯೋಗಿಗಳನ್ನು ಸೃಷ್ಟಿಸಿದಂತಾಗುತ್ತದೆ. ಈ ನೆಲೆಯಲ್ಲಿ ಸಮುದಾಯ ಕಾಲೇಜುಗಳಲ್ಲಿ ಆರಂಭಿಸುವ ಯಾವುದೇ ಕೋರ್ಸುಗಳಲ್ಲಿ ತರಬೇತಿ ಪಡೆದವರು ಮುಂದೆ ಜೀವನ ನಿರ್ವಹಣೆಗೆ ಇದು ಹೇಗೆ ನೆರವಾಗಬಹುದು ಎನ್ನುವ ಬಗ್ಗೆ ಖಚಿತತೆ ಮತ್ತು ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕಿದೆ.

ಕಾಮೆಂಟ್‌ಗಳಿಲ್ಲ: