ಶುಕ್ರವಾರ, ಆಗಸ್ಟ್ 16, 2013

ಇಂದು ಆದಿಮದ ಅಂಗಳದಲ್ಲಿ ಜಪಾನ್ಆದಿಮದ ಅಂಗಳದಲ್ಲಿ ಮೊಳಗಲಿರುವ ಜಪಾನಿನ ಡೊಳ್ಳುಗಳು….

 

ಸೌಜನ್ಯ: ಅವಧಿ


   ರ್ಯಾನ್ಬಿಯೋಶಿ.. ಜಪಾನಿನ 10 ಜನ ಕಲಾವಿದರ ಡೊಳ್ಳು ಮತ್ತು ನೃತ್ಯ ತಂಡ. ಈ ತಂಡ 17.08.2013 ರ ಶನಿವಾರ ಸಂಜೆ 7 ಗಂಟೆಗೆ ತಮ್ಮ ಅಮೋಘ ಡೊಳ್ಳು ನೃತ್ಯವಾದ ‘ಹಜೀಜೋ – ಜಿಮಾ – ಡಾಯಕು’ ಹಾಗು ಇನ್ನಿತರ ಜನಪದ ಕಲಾ ಪ್ರಕಾರಗಳನ್ನು ಪರಿಚಯಿಸಲಿದೆ. ಹಾಲಿ ಭಾರತ ಪ್ರವಾಸದಲ್ಲಿರುವ ಈ ತಂಡದ ಕಲಾ ಪ್ರದರ್ಶನವನ್ನು ಆದಿಮ ಅಂಗಳದಲ್ಲಿ ಏರ್ಪಡಿಸಿರುವುದಕ್ಕೆ ನಮಗೆ ನಿಜಕ್ಕೂ ಹೆಮ್ಮೆ ಇದೆ. ಅಲ್ಲದೆ ಪ್ರದರ್ಶನಾನಂತರ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಸಂವಾದದಲ್ಲಿ ತಂಡ ಬಾತೃತ್ವ ಬೆಸುಗೆಗಾಗಿ ನಡೆಸುತ್ತಾ ಬಂದಿರುವ ತನ್ನ ಬಂಡಾಯಗಳಾಚೆಗಿನ ಪಯಣದ ಏಳುಬೀಳುಗಳನ್ನು ಹಂಚಿಕೊಳ್ಳಲಿದೆ. ಈಗಾಗಲೆ ಹಲವು ಖಂಡಗಳ ಹಲವು ದೇಶಗಳಲ್ಲಿ ಪ್ರದರ್ಶನ ನೀಡಿ ಬಂದಿರುವ ತಂಡ ಇದೀಗ ರಾಜ್ಯ ಪ್ರವಾಸದಲ್ಲಿದ್ದು ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ಪ್ರದರ್ಶನ ನೀಡಿ ಇದೀಗ ನಮ್ಮ ನೆಲಕ್ಕೆ ಕಾಲಿರಿಸಲಿದೆ.


ರ್ಯಾನ್ಬಿಯೋಶಿ.. ತಂಡದ ಕುರಿತು..
ರ್ಯಾನ್ಬಿಯೋಶಿ.. ಅಥವಾ ‘ಅನಿಯತ ಲಯ’ ವಿವಿಧ ವಯೋಮಾನದ ಹತ್ತು ಜನ ಗಂಡು ಮತ್ತು ಹೆಣ್ಣುಗಳ ಕಲಾ ತಂಡ. ತಮ್ಮನ್ನು ಒಂದೇ ಕುಟುಂಬದ ಸದಸ್ಯರೆಂದು ಭಾವಿಸಿರುವ ಇವರು ‘ರಕ್ತಸಂಬಂಧಕ್ಕಿಂತಲೂ ಮಿಗಿಲಾದದ್ದು ಸಿದ್ಧಾಂತ ಬದ್ಧತೆ ಮತ್ತು ಕಲಾ ಔನತ್ಯ’ವೆಂದು ಮನಗಂಡಿದ್ದು ಇಂತಹ ಕುಟುಂಬ ನೆಲೆಯೇ ತಮ್ಮ ಕಲಾಭಿವ್ಯಕ್ತಿಯ ಉಸಿರೆಂದೂ ಇದೇ ತಮ್ಮ ಶಕ್ತಿ ಮತ್ತು ವೈಶಿಷ್ಟ್ಯವೆಂದೂ ಸಾರಿದ್ದಾರೆ.

ಕಲಾ ಶ್ರೇಷ್ಠತೆ ಅಥವಾ ಕಲಾ ನೈಪುಣ್ಯ ಸಾಧನೆಗೆ ದೀರ್ಘಕಾಲ ಹಿಡಿಯಬಹದಾದರೂ ಅದೊಂದು ನಯನ ಮನೋಹರ ಲಾಸ್ಯ ಮತ್ತು ಲಯವೆಂದೂ ಅಂತೆಯೇ ಅದು ಭಾವಾಭಿವ್ಯಕ್ತಿಯ ಕನ್ನಡಿ ಎಂದೂ ಬಗೆದಿದ್ದಾರೆ. ಶಿಶುವೊಂದು ಕುಟುಂಬದ ರಕ್ಷಾ ಕವಚದಲ್ಲಿ ಸಂಭ್ರಮದ ಜೊತೆ ಬದುಕಿನ ಕಷ್ಟ ಕಾರ್ಪಣ್ಯಗಳನ್ನೂ ಉಂಡು ಬೆಳೆವಂತೆ ಮನುಕುಲದ ಚಿಗುರಾಗುವ ಹಂಬಲ ತಮ್ಮದೆಂದು ರ್ಯಾನ್ಬಿಯೋಶಿ ತಂಡ ಹೇಳಿಕೊಳ್ಳುತ್ತದೆ. ಹಾಗು ಕೇವಲ ಪರಂಪರಾನುಗತ ಸಾಂಪ್ರದಾಯಕತೆಗಷ್ಟೆ ಕಟ್ಟು ಬೀಳದೆ ಅದರಾಚೆ ಧ್ವನಿ ಮತ್ತು ಲಯಗಳಲ್ಲಿ ತನ್ನದೇ ಆದ ಪ್ರಯೋಗಗಳಿಂದ ನಾವೀನ್ಯತೆ ತುಂಬಿಕೊಂಡಿದೆ.

ಪ್ರಸ್ತುತ ಭಾರತ ಪ್ರವಾಸದ ವಿಶೇಷತೆ
ತಂಡ ಪ್ರಸ್ತುತ ಭಾರತ ಪ್ರವಾಸಕ್ಕೆಂದೇ ಜನಪದ ಕಲಾ ಪ್ರಕಾರಗಳಿಂದ ‘ಹಜೀಜೋ – ಜಿಮಾ – ಡಾಯಕೋ’ ಮತ್ತು ವರಬೆಹುತಾಗಳ ವಿಶೇಷ ಸಂಯೋಜನೆಯೊಂದಿಗೆ ಆಗಮಿಸಿದೆ. ಈ ಪ್ರದರ್ಶನಗಳ ಮೂಲಕ ಜಪಾನಿನ ಪುಕುಶಿಮಿಯಲ್ಲಾದ ಅಣು ದುರಂತದ ಅಗ್ನಿ ಸುನಾಮಿಯಲ್ಲಿ ಬೆಂದು ಕರಗಿದ ಜಪಾನಿಯರ ಅಂತೆಯೇ ಮನುಕುಲದ ಮುಂದಾದ ಬವಣೆಯ ಕಣ್ಣೀರ ಕಥನ ಕಟ್ಟಿಕೊಡಲಿದ್ದಾರೆ.

ಈ ಪ್ರವಾಸದ ನಡುವೆಯೇ ಬೆಂಗಳೂರಿನ ಮಾಗಡಿ ರಸ್ತೆಯ ಬಾಪುಗ್ರಾಮದ ಶಾಲಾ ಮಕ್ಕಳಿಗೆ ಲಯ ಮತ್ತು ಗೇಯ ಕುರಿತಂತೆ ಪ್ರಾತ್ಯಕ್ಷಿಕ ತರಬೇತಿಯನ್ನೂ ನೀಡಿ ಬಂದಿದ್ದಾರೆ.

ದೂರದ ಜಪಾನಿನಿಂದ ಬರಲಿರುವ ಈ ತಂಡದ ಮುಂದೆ ನಮ್ಮ ನೆಲದ ಕಲಾ ಪ್ರಕಾರಗಳಾದ ಡೊಳ್ಳು ಮತ್ತು ಜನಪದ ನೃತ್ಯವೊಂದನ್ನು ಪರಿಚಯಿಸುವ ಹಂಬಲ ‘ಆಜೀವಕ’ದ್ದು (ಆದಿಮ ಜೀವಕಲಾ ಗುರುಕುಲ – ಇದು ಆದಿಮದ ಗುರುಕುಲ). ಸದ್ಯಕ್ಕೆ ಆಜೀವಕದ ಮೊದಲ ಬ್ಯಾಚಿನ ಕಲಿಕಾಥರ್ಿಗಳಿಂದ ಅಂದಿನ ಪ್ರದರ್ಶನದ ಪೂರ್ವ ರಂಗ ಆರಂಭ ಆಗಲಿದೆ.

ಹಜೀಜೋ ಡೊಳ್ಳು ಕುರಿತಂತೆ
ಡೊಳ್ಳು ಬಾರಿಸೋಣ.. ನೆರೆದ ಗುಂಪಿನಲ್ಲಿ ನಮ್ಮ ಪ್ರೀತಿ ಪಾತ್ರರು ಕಾಣಿಸಬಹುದು
ಹಜೀಜೋ – ಜಪಾನಿನ ಶಾಂತಸಾಗರದ ಒಂದು ಪುಟ್ಟ ದ್ವೀಪ. ರಾಜಧಾನಿ ಟೋಕಿಯೋ ನಗರದ ದಕ್ಷಿಣಕ್ಕೆ 287ಕಿಮೀ.. ದೂರದಲ್ಲಿರುವ ಈ ದ್ವೀಪ ಖೈದಿಗಳ ಬಯಲ ಸೆರಮನೆ. ಮೊಟ್ಟ ಮೊದಲಿಗೆ 1606 ರಲ್ಲಿ ಉಕಿತ ಹೈದಿಯೋ ಎಂಬ ಖೈದಿಯನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು. ಆತ ತೋರುಗ್ವಾಗಳ ವಿರುದ್ಧ ಯುದ್ಧ ಮಾಡಿದನೆಂಬ ಚಾರಿತ್ರಿಕ ಉಲ್ಲೇಖ ಇದೆ. ಜಪಾನಿನ ಇತಿಹಾಸದಲ್ಲಿ ಈ ಯುದ್ಧವನ್ನು ‘ಸೇಕಿಗಹಾರ.. ಯುದ್ಧ’ ಎಂದೇ ಬಣ್ಣಿಸಲಾಗಿದೆ. ಅಲ್ಲಿಂದಾಚೆಗೆ ಹಲವು ಖೈದಿಗಳನ್ನು ಇಲ್ಲಿಗೆ ರವಾನಿಸಲಾಯಿತು. ಹುಟ್ಟು ನೆಲದಿಂದ ದೂರವಾದ ಇವರ ತಾಯ್ನಾಡಿನ ಹಂಬಲವೇ ಈ ಜನಪದ ಕಲಾ ಪ್ರಕಾರದ ಉಸಿರು. ಡೊಳ್ಳುಗಳ ಪ್ರಾಣ ಮತ್ತು ತ್ರಾಣ. ಇದು ಹಲವು ಪ್ರತ್ಯೇಕ ಕಾಂಡಗಳ ಗೇಯ ಮತ್ತು ಲಯಗಳ ಮಿಳಿತ. ಅಲ್ಲದೆ ಪ್ರದರ್ಶನದಿಂದ ಪ್ರದರ್ಶನಕ್ಕೆ ಕಲಾವಿದರೇ ಕೂಡಿ ಇಂಪ್ರೂವೈಸ್ ಮಾಡಿದ್ದರ ಫಲಿತವೂ ಹೌದು. ಒಟ್ಟಾರೆ
ಡೊಳ್ಳು ಬಾರಿಸೋಣ..

ನೆರೆದ ಗುಂಪಿನಲ್ಲಿ ನಮ್ಮ ಪ್ರೀತಿ ಪಾತ್ರರು
ಕಾಣಿಸಬಹುದು

.. ಇದು ಈ ಡೊಳ್ಳು ಪ್ರಕಾರದ ಆಶಯ. ಹೀಗಾಗಿ ಹಜೀಜೋ – ಜಿಮಾ – ಡಾಯಕು ಒಂದು ಪ್ರತಿಷ್ಟಿತ ಜಪಾನಿ ಜನಪದ ಪ್ರಕಾರ. ಈ ದ್ವೀಪವಾಸಿ ಜನರ ಮಣ್ಣು ಮತ್ತು ರಕ್ತದೊಳಗೆ ಬೆರೆತು ಹೋಗಿ ವಯೋಮಾನದ ಅಂತರವಿಲ್ಲದಂತೆ ಅಲ್ಲಿನ ಗಂಡು ಹೆಣ್ಣುಗಳ ನಾಡಿಮಿಡಿತಕ್ಕೆ ನೋವು ನಲಿವುಗಳಿಗೆ ‘ಪ್ರಾಣ ಮಿತ್ರ’ನೇ ಆಗಿ ಹೋಗಿದೆ.

ಆದ್ದರಿಂದಲೇ ಅಲ್ಲಿನ ಪ್ರತಿ ಹತ್ತು ಕುಟುಂಬದಲ್ಲಿ ಈ ಡೊಳ್ಳು ಇದ್ದೇ ಇರುವ ಸಂಭವವಿದೆ ಹಾಗು ಮದುವೆಗಳಲ್ಲಿ ನೀಡಬಹುದಾದ ಪ್ರೀತಿಯ ಉಡುಗೊರೆಯ ಪಟ್ಟಿಯಲ್ಲೂ ಸ್ಥಾನ ಪಡೆದಿದೆ. ಇಂತಹ ಪರಂಪರೆ ಮುಂದಿನ ಪೀಳಿಗೆಯ ಬದುಕಿನ ಭಾಗವಾಗುವಂತೆ ಯುವಜನರಿಗೆ ಈ ಪ್ರಕಾರದ ತರಬೇತಿ ನೀಡಲಾಗುತ್ತಿದೆ. ‘ಮುರಬಾ ಶೈಲಿ’ ತಮ್ಮದೆಂದು ಕರೆದುಕೊಳ್ಳುವ ಈ ಹಜೀಜೋ-ಡಾಯಕು ಪ್ರದರ್ಶನ ತಮ್ಮ ತವರು ದ್ವೀಪದ ಒಡಹುಟ್ಟುಗಳಿಗೆ ನೀಡಲಗುವ ಗೌರವ ಎನ್ನುತ್ತದೆ ರ್ಯಾನ್ಬಿಯಾಷಿ ತಂಡ.

ವಾರಬೇ – ಹುತಾ: (ಮಕ್ಕಳ ಹಾಡುಗಳು)
ವಾರಬೆ – ಹುತಾ.. ಜಪಾನಿನ ಸಾಂಪ್ರದಾಯಿಕ ಶಿಶು ಪ್ರಾಸಗಳು. ‘ನರ್ಸರಿ ರೈಮ್’ಗಳಿದ್ದಂತೆ. ಜಪಾನಿನ ಸಾಂಪ್ರದಾಯಕ ಕ್ರೀಡೆ ಮತ್ತು ಆಚರಣೆಗಳ ಗೇಯಭಾಗವಾಗಿ ಈ ಕಿರುಪ್ರಾಸಗಳನ್ನು ಹಾಡಲಗುತ್ತಿದೆ. ಶತಮಾನಗಳ ಹಿಂದಿನ ಈ ಪ್ರಾಸಗಳು ಈ ಹೊತ್ತಿನ ಆಧುನಿಕ ಜಪಾನಿನ ಕಣ್ಣಿಗೆ ಅಸಂಬದ್ಧವಾಗಿ ಕಂಡರೂ ಜನಪದರಿಗಿದ್ದ ಶ್ರೀಮಂತ ಭಾಷಾ ಪ್ರೌಢಿಮೆ ಕಾಲ ಕಾಲಕ್ಕೆ ವಿಕಸನವಾಗುತ್ತಾ ಬಂದ ಪರಿ ಅನನ್ಯ.

ಇದು
ಆದಿಮ ಜೀವ ಬಳಗ ಬಾಪಾ ಗ್ರಾಮ ಎಡ್ಯುಕೇಷನ್ ಸೆಂಟರ್
(ಆಜೀವಕ) ಮತ್ತು (ಠಕ್ಕಾರ್ ಬಾಪಾ ಸರ್ವೇಸ್ ಫೌಂಡೇಷನ್)
ಕೋಲಾರ ಬೆಂಗಳೂರು ಕೊಡುಗೆ

1 ಕಾಮೆಂಟ್‌:

gururaj Hosapete ಹೇಳಿದರು...

ಪ್ರದರ್ಶನ ತಪ್ಪಿಸಿಕೊಂಡೆನಲ್ಲ.....