ಶನಿವಾರ, ಆಗಸ್ಟ್ 24, 2013

ನಸಿಪುಡಿ ಮತ್ತು ಚಹಾದ ರಿವಾಯ್ತು

  
  -ಅರುಣ್-ಜೋಳದಕೂಡ್ಲಿಗಿ 

    ಕಳೆದ ವರ್ಷ ಮೊಹರಂ ಕ್ಷೇತ್ರ ಕಾರ್ಯಕ್ಕೆಂದು ರಹಮತ್ ಮೇಷ್ಟ್ರು ಜತೆ ರೋಣ, ಬಿಜಾಪುರ, ಇಂಡಿ ಭಾಗದ ಮೊಹರಂ ಆಚರಣೆಗಳನ್ನು ನೋಡಲೆಂದು ಮತ್ತು ರಿವಾಯ್ತು ಹಾಡುಗಾರರನ್ನು ಬೇಟಿಮಾಡಲೆಂದು ಪ್ರಯಾಣ ಬೆಳೆಸಿದ್ದೆವು. ಹೀಗೆ ಕ್ಷೇತ್ರ ಕಾರ್ಯಕ್ಕೆ ಹೋಗುವಾಗ ನಾವು ಬೇಟಿ ಮಾಡಬೇಕೆಂದ ಊರಿಗೆ ಮಾತ್ರ ಹೋಗುವುದಿಲ್ಲ. ಬದಲಾಗಿ ದಾರಿ ಮಧ್ಯೆ ನುಸುಳುವ ಹಳ್ಳಿಗಳ ಜನರನ್ನು ಮಾತಿಗೆಳೆದು, ಆಯಾ ಊರಿನ ಬಗ್ಗೆ ವಿಚಾರಿಸುತ್ತಾ ನಿಧಾನಕ್ಕೆ ಅಲ್ಲಿನ ಮೊಹರಂ ಹಬ್ಬದ ಬಗ್ಗೆ, ರಿವಾಯ್ತು ಹಾಡುಗಾರಿಕೆ ಬಗ್ಗೆ ಮಾತು ಬೆಳೆಯುತ್ತದೆ. ಇಂತಹ ಮಾತುಕತೆಯಲ್ಲಿ ಕೆಲವೊಮ್ಮೆ ಅಪರೂಪದ ಮಾಹಿತಿ ಸಿಗುವುದುಂಟು, ಹಾಡುಗಾರಿಕೆಯ ಪರಿಚಯ ಆಗುವುದುಂಟು.

ಹೀಗೆ ದಾರಿಯಲ್ಲಿ ಸಿಕ್ಕ ಊರುಗಳಲ್ಲಿ ಯಲಬುರ್ಗಾ ತಾಲೂಕಿನ ಪುಟ್ಟ ಹಳ್ಳಿ ನೆಲಜೇರಿಯೂ ಒಂದು. ಇದೊಂದು ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ರಾಜಪ್ಪಸ್ವಾಮಿಯ ಉರುಸು ನಡೆಯುತ್ತದೆ. ಆಗ ಯಲಬುರ್ಗ ರೋಣ ಕುಷ್ಟಗಿ ಕೊಪ್ಪಳ ಸೀಮೆಯ ಗಾಯಕರು ಸೇರಿ ರಾತ್ರಿ ಪೂರಾ ಹಾಡುವುದಿದೆಯಂತೆ, ಇಂತಹ ಹಾಡಿಕೆ ಪರಂಪರೆಯ ಊರಿದು.

ಈ ಗ್ರಾಮದವರ ಮಾಹಿತಿ ಆಧರಿಸಿ ರಿವಾಯ್ತು ಹಾಡುಗಾರ ಅಂದಾನಪ್ಪನನ್ನು ಬೇಟಿ ಮಾಡಿದೆವು. ಆತ ಒಂದು ಕೈಯಲ್ಲಿ ಕಚ್ಚೆಯ ಚುಂಗು ಸಿಕ್ಕಿಸಿಕೊಂಡು ಸೈಕಲ್ಲು ಹ್ಯಾಂಡಲ್ ಹಿಡಿದು ಬರುತ್ತಿರುವಾಗ ನಮ್ಮೆದುರಿಗೆ ಸಿಕ್ಕರು. ತಲೆಗೆ ಸೆಲ್ಲೇವು ಸುತ್ತಿದ ಅಂದಾನಪ್ಪ ಎತ್ತರದ ಮಾಜಿ ಪೈಲ್ವಾನನಂತಹ ಕಟ್ಟುಮಸ್ತಾದ ಆಳು. ಅವರನ್ನು ಮಾತನಾಡಿಸಿ ನಮ್ಮ ಕಿರುಪರಿಚಯ ಮಾಡಿಕೊಂಡು, ರಿವಾಯ್ತು ಹಾಡುಗಳ ಬಗ್ಗೆ ಕೇಳಿದಾಗ ಆತನ ಮುಖದಲ್ಲಿ ಸಂತಸದ ಗೆರೆಗಳು ಮೂಡಿದವು. ಆತ ತನ್ನ ಮನೆಗೆ ನಮ್ಮನ್ನು ಮಾತಿನ ಮಳೆಯಲ್ಲಿ ನೆನೆಸುತ್ತಾ ಕರೆದೊಯ್ದ.

ಜಂತಿ ಕಂಬದ ಹಳೆಮಾದರಿಯ ಕಟ್ಟುಮಸ್ತಾದ ಮನೆಯದು. ಹೊರಗೆ ಕಟ್ಟೆಯ ಮೇಲೆ ಕುಳಿತೆವು. ಬಾಗಿಲಿನ ಮೇಲೆ ದೇವರುಗಳ ಫೋಟೋ ನೆಲ ನೋಡುವಂತೆ ವಾಲಿದ್ದವು. ಪೂಜೆಗೊಳಪಟ್ಟು ವಿಭೂತಿ ಕುಂಕುಮ ಧರಿಸಿಕೊಂಡಿರುವ ತೀರಿದ ಮನೆಯ ಹಿರಿಯರ ಫೋಟೋಗಳು ಮನೆ ಕಾವಲಿಗಿದ್ದಂತೆ ಕಂಡರು. ಕಟ್ಟೆಯ ಆಬದಿ ಈಬದಿ ಕಾಳುಕಡಿಗಳ ಕೊರೆಗಳನ್ನು ಒಟ್ಟಲಾಗಿತ್ತು. ನೋಡು ನೋಡುತ್ತಲೇ ಇಬ್ಬರು ಮೂವರು ಸಹ ಹಾಡುಗಾರರನ್ನು ಅಂದಾನಪ್ಪ ಕಲೆಸಿಬಿಟ್ಟರು.

ಒಂದೆರಡು ಹಾಡನ್ನು ಹಾಡಿದರು. ಪೈಲ್ವಾನನಂಥಹ ದೊಡ್ಡ ದೇಹದಲ್ಲಿ ಒಂದು ಬಗೆಯ ಗಡುಸನ್ನು ಮಿದುವು ಮಾಡಿದಂತಹ ಧ್ವನಿ. ಏರು ಇಳಿವಿನಲ್ಲಿ ಧ್ವನಿಯನ್ನು ಎತ್ತರಿಸಿ, ಇಳಿಸಿ ಹಾಡುತ್ತಾ ರಿವಾಯ್ತಿನ ಲಯಕ್ಕೆ ಹಾಡುಗಳನ್ನು ಹೊಂದಿಸಿ ನಮಗೆ ಕೇಳಿಸಿದರು. ರಹಮತ್ ಮೇಷ್ಟ್ರು ಆ ಧ್ವನಿಯನ್ನು ಹೊಗಳಿದಾಗ ಅಂದಾನಪ್ಪ ಚೈತನ್ಯ ಪಡೆದವನಂತೆ ಒಳಗೊಳಗೆ ಹೆಮ್ಮೆ ಪಟ್ಟುಕೊಂಡರು.

ಹೀಗೆ ಹಾಡುತ್ತಿರುವುದನ್ನು ನಿಲ್ಲಿಸಿ ಮನೆಯ ಒಳ ಹೋಗಿ, ರಿವಾಯ್ತು ಬರೆದ ನೋಟ್ ಪುಸ್ತಕ ತಂದರು. ಅದು ಅಡುಗೆ ಮನೆ ಹೊಗೆಗೆ ಸಿಕ್ಕು ಗೋಲ್ಡನ್ ಬ್ರೌನ್ ತರಹದ ಕಂದು ಬಣ್ಣವನ್ನು ತಾಳಿತ್ತು. ಈ ಪುಸ್ತಕದ ಮುಖಪುಟದಲ್ಲಿ `ಯಲ್ಲಪ್ಪ ವಿರೂಪಾಕ್ಷಪ್ಪ ಹೊಸೂರ ಪುಸ್ತಕ ಕೊಡಿಸಿದವರು’ ಎನ್ನುವ ನೆನೆಕೆಯೂ ಇತ್ತು. ಈ ಪುಸ್ತಕದಲ್ಲಿ 50 ರಿವಾಯ್ತು ಪದಗಳಿದ್ದವು. ಈ ರಿವಾಯ್ತುಗಳಲ್ಲಿ ನಸಿಪುಡಿ ಮತ್ತು ಚಹಾದ ರಿವಾಯ್ತು ನನ್ನ ಗಮನ ಸೆಳೆದವು. ಆಧುನಿಕ ಸಂಗತಿಗಳು ಹಳ್ಳಿ ಪ್ರವೇಶ ಮಾಡಿದಾಗ ಅವುಗಳನ್ನು ಹಾಡಿಕೆ ಮಂದಿ ಹೇಗೆ ಕಂಡರು, ಮತ್ತು ಅವುಗಳ ಸ್ವೀಕಾರದಲ್ಲಿ ಜನರಲ್ಲಿ ಮೂಡಿದ ಅನುಮಾನಗಳು ಎಂಥವು ಎನ್ನುವುದನ್ನು ಈ ಹಾಡುಗಳಿಂದ ತಿಳಿಯಬಹುದು.




ನಸಿಪುಡಿ ರಿವಾಯ್ತು:
ನಸಿಪುಡಿ ಬಂದಿತು ನಮ ದೇಶಕ್ಕ| ಕುಸಿಲಿಂದ ಹೋಗುತಾವೋ ನಮ ಮನಿ ರೊಕ್ಕ||
|ಏ| ಬಸವ್ವ ತಿಕ್ಕುತಾಳೋ ನಸಿ ಪುಡಿ ವಳ್ಳೆ ಚೊಕ್ಕ| ಕಾಶವ್ವ ಬೇಡುತಾಳೋ ನನಗೀಟ ಹಾಕ||
ಗಸಗಸ ತಿಕ್ಕಿ ವುಗಿತಾರೋ ನೆಲಕ ||1||

||ಇ|| ಬೇಕಾಗಿ ಕೂಡಿಕೊಂಡು ಹೋಗುತಾರಾ ವಲಕಾ| ತಾಸಿಗೆ ವೊಮ್ಮೆ ತಿಕ್ಕುತಾರೋ ಗಿಡ ಬುಡಕ||
|ಏ| ನಸಿಪುಡಿ ಆದೀತೋ ಮದ್ಯಾನಕ್ಕ| ಬ್ಯಾಸರಾಗಿ ನೋಡುತಾರೋ ಹೊಳ್ಳಿ ಎಲ್ಲಾ ಕಡೆಕಾ||
ತ್ರಾಸಾಗಿ ಬರುತಾರೋ ಮನಿತನಕ ||2||

|ಇ| ವುದ್ರಿ ಕೇಳುತಾರೋ ನಸಿ ವೊಳ್ಳೆ ಖಡಕ| ವುದ್ರಿ ಕೊಡುದಿಲ್ಲೆಂದು ಹೊಡೆದ ಕಪಾಳಕ್ಕ|
|ಏ| ತಲಬು ಮಾಡಬಾರದಂಥ ಹೋದರು ಹಿಂದಕ|
ಅತ್ತಿ ವದಿತಾಳೋ ನಡು ಮುರಿಯೋ ತನಕ ||3||

|ಇ| ಬಿಸಿನೀರು ಕಾಶಿಕೊಂಡು ತೊಳಕೊಂಡೊ ಮನಕ| ಮುಸುಡೀಗೆ ತಿಕ್ಕುತಾರೋ ಪೌಡರ್ ಖಡಕ||
|ಏ| ಹೊಸ ಹೊಸ ಪದ್ದತಿ ಬಿಡರವ್ವ ಖಡಕ| ಖಾಸ ನಾನು ಹೇಳುತೀನಿ ನಿಮ್ಮ ದೇಹಕ್ಕ
ಬೇಸಾಗಿ ನೋಡಿಕೊಳ್ರಿ ನಿಮ್ಮ ಮನಕ ||4||

|ಇ| ದ್ಯಾಸ ಮಾಡಿ ನೊಡಿಕೊಳ್ಳೊ ಷಾಹೀರ ಮನಕ| ತ್ರಾಸ ಹಿಡಿದು ತೂಗಿ ನೋಡೋ ಅಕ್ಷಾರ ತೂಕ||
|ಏ| ದೇಶದೊಳು ಮಂಗಳೂರ ಇರುವುದ ಖಡಕಾ| ಪಾಸಾಗಿ ಶ್ಯಾಮಲಿಂಗ ಆಗ್ಯಾನೋ ಬೆಳಕ|
ಹೆಸರು ಆಗೈತಿ ನೋಡ್ರಿ ದಿಕ್ಕು ದೇಶಕ್ಕ ||5||


ಈ ರಿವಾಯ್ತು ಹಳ್ಳಿ ಹೆಣ್ಮಕ್ಕಳ ನಸಿಪುಡಿ ತಲಬು ಕುರಿತಾಗಿದೆ. ಹಳ್ಳಿ ಗಂಡ್ಮಕ್ಳು ಬೀಡಿ ಸೇದುವ ತಲಬಿನಂತೆ ಹೆಣ್ಮ್ಕಳು ನಸಿಪುಡಿ ತಿಕ್ಕುವ ತಲುಬಿಗೆ ಬೀಳುತ್ತಾರೆ. ಈ ನಸಿಪುಡಿಯನ್ನು ಹಿರಿಯ ಅಜ್ಜಿಯರು ತಿಕ್ಕಿದರೆ ಅದು ಮಾನ್ಯ. ಆದರೆ ಹರೆಯದ ಹುಡುಗಿಯರು ಈ ತಲುಬು ಕಲಿತರೆ ಅದು ಅಪರಾದ. ಹಾಗಾಗಿ ಹರೆಯದ ಹುಡುಗಿಯರು ತಂದೆ ತಾಯಿ ಅಣ್ಣ ತಮ್ಮಂದಿರಿಗೆ ತಿಳಿಯದಂತೆ, ಮದುವೆಯಾಗಿದ್ದರೆ ಗಂಡ, ಅತ್ತೆ ಮಾವಂದರಿಗೆ ತಿಳಿಯದಂತೆ ಕಳ್ಳತನದಿಂದ ನಸಿಪುಡಿ ತಿಕ್ಕುತ್ತಾರೆ. ಇದು ಗೊತ್ತಾದರೆ ನಸಿಪುಡಿ ತಿಕ್ಕುವ ತಲಬಿನ ಕಾರಣಕ್ಕೆ ಒದೆ ತಿನ್ನುವ ಪ್ರಸಂಗಗಳೂ ನಡೆಯುತ್ತವೆ.

ಇಂತಹ ನಸಿಪುಡಿ ಆಯಾ ಹಳ್ಳಿಗಳ ಚಿಕ್ಕ ಚಿಕ್ಕ ಗೂಡಂಗಡಿಗಳಲ್ಲಿ ದೊರೆಯುತ್ತದೆ. ನಸಿಪುಡಿ ಕೊಳ್ಳಲು ಹಣವಿಲ್ಲದಾಗ ಮನೆಯಲ್ಲಿನ ಕಾಳು ಕಡಿ ಅಂಗಡಿಗೆ ಮಾರಿ ನಸಿಪುಡಿ ಕೊಳ್ಳುತ್ತಾರೆ. ಪುಟಾಣಿ ಡಬ್ಬಿಯೊಂದನ್ನು ನಸಿಪುಡಿ ಡಬ್ಬಿ ಎಂದು ಕರೆಯುತ್ತಾರೆ. ಕೂದಲು ಕೊಂಡು ಏರುಪಿನ್ನ ಸೂಜಿ ಮಾರಲು ಬರುವ ಜೋಗೇರಲ್ಲಿ ಈ ನಸಿಪುಡಿಯ ಹೊಸ ಡಬ್ಬಿಗಳು ಸಿಗುತ್ತವೆ. ಇಂತಹ ನಸಿಪುಡಿ ಡಬ್ಬಿಯನ್ನು ಇಟ್ಟುಕೊಳ್ಳುವ ಚೀಲವನ್ನು ನಸಿಪುಡಿ ಚೀಲ ಎಂತಲೂ ಕರೆಯುತ್ತಾರೆ. ನಸಿಪುಡಿ ತಿಕ್ಕಲು ಹೆಸರುವಾಸಿಯಾದ ಕಾರಣ ಕೆಲವರಿಗೆ ನಸಿಪುಡಿ ಮಾರಜ್ಜಿ, ನಸಿಪುಡಿ ಕೆಂಪಮ್ಮ ಎನ್ನುವ ಅಡ್ಡ ಹೆಸರುಗಳೂ ಬಂದಿವೆ.
ಘಾಟು ಇರುವ ನಸಿಪುಡಿಯನ್ನು ತಂಬಾಕಿನ ಒಣ ಎಲೆ ಕಾಚು ಮುಂತಾವುಗಳ ಮಿಶ್ರಣದಿಂದ ಮಾಡಿರುತ್ತಾರೆ. ಅಜ್ಜಿಯರು ಚಳಿಯನ್ನು ಹೋಗಲಾಡಿಸಲು ಈ ನಸೆಯನ್ನು ತಿಕ್ಕುವುದಿದೆ. ಕೆಲ ಅಜ್ಜಂದಿರು ಈ ನಸೆಯನ್ನು ಮೂಗಿನಲ್ಲಿ ಏರಿಸಿಕೊಳ್ಳುವುದೂ ಇದೆ. ಇದು ಒಂದು ರೀತಿಯ ಮತ್ತನ್ನು ತರುತ್ತದೆಯೆಂದು, ಮೈಯನ್ನು ಬೆಚ್ಚಗಿಡುತ್ತದೆಯೆಂದು ಹಳ್ಳಿಯ ಅನುಭವಿ ಅಜ್ಜಿಯರು ಹೇಳುತ್ತಾರೆ. ಹೀಗೆ ನಸಿಪುಡಿ ಜತೆಗೆ ಕಡ್ಡಿಪುಡಿಯೂ ಜೋಡಿಯಾಗಿರುತ್ತೆ. ಈ ಕಡ್ಡಿಪುಡಿ ಅಡಕೆ ಎಲೆ ಜೊತೆ ಹಾಕಿದರೆ, ನಸಿಪುಡಿ ಒಂದನ್ನೆ ತಿಕ್ಕುತ್ತಾರೆ.

ನಸಿಪುಡಿ ತಿಕ್ಕಿದ ಕಾರಣಕ್ಕೆ ಕೆಲವು ಅಜ್ಜಿಯರ ಹಲ್ಲು ಕರ್ರಗೆ ಕರಿಕಟ್ಟಿರುತ್ತದೆ. ಬೆಳಗ್ಗೆ ಬಲಗೈಯ ತೋರು ಬೆರಳಿಂದ ಹಲ್ಲು ತಿಕ್ಕುವಂತೆ ನಸಿಪುಡಿಯನ್ನು ತಿಕ್ಕುತ್ತಾರೆ. ಹೀಗೆ ತಿಕ್ಕಿಯಾದ ಮೇಲೆ ಬೆರಳನ್ನು ಸೀರೆಯ ಸೆರಗಿಗೆ ಒರೆಸಿಕೊಂಡು ಕೆಲಸದಲ್ಲಿ ನಿರತರಾಗುತ್ತಾರೆ. ಸಿಮೆಂಟ್ ವರೆಸಿ ಗೋಡೆಯ ಬಿರುಕುಗಳನ್ನು ಪ್ಯಾಕ್ ಮಾಡಿದಂತೆ, ಹಲ್ಲಿನ ಸಂದಿಗೊಂದಿಗಳಲ್ಲಿ ನಸಿಪುಡಿಯನ್ನು ತಿಕ್ಕಿ ಪ್ಯಾಕ್ ಮಾಡಿ ಕನಿಷ್ಠ ಒಂದು ತಾಸಿನವರೆಗೂ ತುಟಿಗಳನ್ನು ಬಿಗಿ ಹಿಡಿದೇ ಮಾತನಾಡುತ್ತಾರೆ. ಆ ನಂತರ ಉಗುಳಲು ಶುರು ಮಾಡುತ್ತಾರೆ. ಅಂತವರೊಂದಿಗೆ ನಾವಾಗ ಮಾತಿಗೆ ಕೂತರೆ, ನಮ್ಮ ದೇಹಕ್ಕೆ ನಸಿಪುಡಿಯ ದ್ರವರೂಪದ ಸಿಂಚನವಾಗುತ್ತದೆ. ಕೆಲ ಅಜ್ಜಿಯರು ಹಲ್ಲು ನೋವಿಗೆ ನಸಿಪುಡಿ ತಿಕ್ಕುವುದಾಗಿಯೂ ಹೇಳುತ್ತಾರೆ.
ನಸಿಪುಡಿ ತಿಕ್ಕುವ ತಲುಬು ಹಳ್ಳಿಯನ್ನು ಪ್ರವೇಶಿಸಿದ ನಂತರ ಹೆಣ್ಣುಮಕ್ಕಳಲ್ಲಿ ಆದ ಬದಲಾವಣೆಯನ್ನು ಈ ಗೀತೆ ಹೇಳುತ್ತಿದೆ. ಅಂತೆಯೇ `ಮುಸುಡೀಗೆ ತಿಕ್ಕುತಾರೋ ಪೌಡರ್ ಖಡಕ|| ಹೊಸ ಹೊಸ ಪದ್ದತಿ ಬಿಡರವ್ವ ಖಡಕ|’ ಎನ್ನುವಾಗ ಹೊಸ ಪದ್ದತಿಗಳು ಹಳ್ಳಿಗಳನ್ನು ಪ್ರವೇಶಿಸುವಿಕೆ ಬಗ್ಗೆ ರಿವಾಯ್ತಿನಲ್ಲಿ ಸಣ್ಣ ಆತಂಕವೂ ಇದೆ. ಹೆಣ್ಣು ಆಧುನಿಕ ಸಂಗತಿಗಳಿಗೆ ತೆರೆದುಕೊಳ್ಳುವುದರ ಬಗೆಗಿನ ಪುರುಷಪ್ರಧಾನ ನಿರೂಪಣೆಗಳ ಪ್ರಭಾವದ ಎಳೆಯೂ ಈ ಹಾಡಿನಲ್ಲಿದೆ.
ಆಧುನಿಕ ವಿದ್ಯಾಬ್ಯಾಸವನ್ನು ಪಡೆಯುವ ಬಗ್ಗೆ ಈ ಹಾಡು ಗಮನ ಸೆಳೆಯುತ್ತದೆ.`ದ್ಯಾಸ ಮಾಡಿ ನೊಡಿಕೊಳ್ಳೊ ಷಾಹೀರ ಮನಕ| ತ್ರಾಸ ಹಿಡಿದು ತೂಗಿ ನೋಡೋ ಅಕ್ಷಾರ ತೂಕ||ದೇಶದೊಳು ಮಂಗಳೂರ ಇರುವುದ ಖಡಕಾ| ಪಾಸಾಗಿ ಶ್ಯಾಮಲಿಂಗ ಆಗ್ಯಾನೋ ಬೆಳಕ| ಹೆಸರು ಆಗೈತಿ ನೋಡ್ರಿ ದಿಕ್ಕು ದೇಶಕ್ಕ’ ಇಲ್ಲಿ ಆಧುನಿಕವಾಗಿ ಬಂದ ನಸಿಪುಡಿ, ಪೌಡರು ಮುಂತಾವುಗಳನ್ನು ಬಳಸುವುದು ಸರಿಯಲ್ಲ ಎಂದು ಹೇಳುತ್ತಲೇ ಅದೇ ಆಧುನಿಕತೆಯ ಭಾಗವಾದ ಶಿಕ್ಷಣವನ್ನು ಈ ಹಾಡು ಎತ್ತಿ ಹಿಡಿಯುತ್ತದೆ. ಅಂತೆಯೇ ಅದು ಹೆಣ್ಣು ಶಿಕ್ಷಣ ಪಡೆಯಬೇಕೆಂಬುದಕ್ಕಿಂತ ಗಂಡಿನ ಹೆಸರು ಸಹಜವೆಂಬಂತೆ ಉಲ್ಲೇಖವಾಗುತ್ತದೆ. ಇದು ಮೌಖಿಕ ಪರಂಪರೆ ಆಧುನಿಕತೆಯನ್ನು ಸ್ವೀಕರಿಸಿದ ಒಂದು ಮಾದರಿಯನ್ನು ತೋರುತ್ತಿದೆ.
**


ಚಹಾ ರಿವಾಯ್ತು:
ಚಹಾ ಕಾಫಿಯ ಚೌಲಾ| ನಾ ಹೇಳುವೆ ಘಳಿಲಾ ಕೇಳಾರಿ ದೈವೆಲ್ಲಾ||
|ಏ| ಚಹವೆಂಬ ತೊಪ್ಪಾಲಾ| ಚತುರ ದಿಕ್ಕಿನಲ್ಲಿ ಪೈಲಾ
ಚಹದಷ್ಟು ಮಯರ್ಾದಿ ಯಿಲ್ಲಾ| ಸುಳ್ಳಾ ಮಾಡಬೇಡ್ರಿ ಡೌಲಾ||
ರೊಕ್ಕದ ಮಾಮಲ| ಸರ್ವರಿಗೆ ಅನುಕೂಲ|| 1 ||

ಚಹಕ್ಕೆ ಮೊಸರು ಹಾಲಾ| ಬಡಬಗ್ಗರಿ ಮಾರಿ ಕೊಡುತಾರೋ ಸಾಲ||
|ಏ| ಪಾನ್ ಬೀಡಾ ಮಾರಿದ ಬಾಲಾ ಕಟ್ಟಿಸ್ಯಾನೋ ರಂಗ ಮಾಲಾ|
ಸಿಗರೇಟ ಸೈಕಲ್ಲ ಮಾರುವ ಭೂಪಾಲ||
ಚಹಾ ಮಾಲಾ ಕನಸಲ್ಲಿ ಮೀರುವುದಿಲ್ಲ|| ಸವುಕಾರ ಸದರ್ಾರರೆಲ್ಲಾ|| 2||

|ಇ| ಚಹಾದ್ದು ಎಂಥದ್ದು ಲೀಲಾ| ಒಂದು ಬಿಲ್ಲಿಯಲ್ಲಿ ಕೂಡ್ರಿಸುವರು ಖುಷರ್ಿದ್ ಮೇಲಾ ||
|ಏ| ಸೈರ್ ಬರುವುದು ಅಕ್ಸಾಲ| ಕೆಡದಿಲ್ಲೋ ಬಿಲ್ ಖುಲ್ಲಾ||
ಮದುವಿ ಮುಂಜಿಯಲ್ಲಿ ಮೊದಲಾ| ಚಹಾ ಕುಡುದು ಮಾತಾಡುವರಲ್ಲಾ|
ಹೇಳಿ ತುಪ್ಪಾದ ಮೇಲ ಯಾರಾಸೆ ಇಲ್ಲಾ|| ಬಿಡೊದಿಲ್ಲ ಅನ್ನ ಹಾಲ ||3||

|ಇ| ಚಹಾದಿಂದ ಮನಿ ಹೊಲ ಹೋಗುವವೆಂಬೋ| ನಾಲಿಗೆಗ ಚುಚ್ಚರಿ ಮುಳ್ಳ||
|ಏ| ಚಹಾ ಕುಡಿಯದಿದ್ದರೆ ಘಳಿಲಾ| ಚಹಾ ಕುಡಿದರೆ ಮನಸಾಗುವುದು ಚಂಚಲಾ|
ಚಹ ಕುಡಿದು ಪುರುಷನಾ ಚಪಲಾ| ಚತುಪರ್ಾಯ ತೋರುವುದಲ್ಲ||
ಕೂಡಿಸುವವರು ಸಕ್ಕರಿ ಹಾಲಾ| ಹಾಲು ಸಕ್ಕರೆಯಿಂದ ಪುಷ್ಠೀ ಹೋಗುವುದಿಲ್ಲ|| 4||

ಹೊಲಮನೆ ಹೋಗುವಾ ಕಾಲಾ| ಬಂದರೆ ಅವು ತಾವೇ ಹೋಗುವವಲ್ಲ||
||ಏ|| ಯಾವದೇನು ಸ್ಥಿರವಲ್ಲ ಅಂತ ಹಿಡಿಸೀರಿ ಮಿಗಿಲಾ|
ಬರುವಾಗ ಬೆತ್ತಲಾ ಹೋಗುವಾಗ ಬೆತ್ತಲಾ| ಯಾರಿಗೇ ಯಾರು ಯಾತಕ್ಕ ಛಲಾ||
ದಾರಿಗೆ ಜೋಡು ಇಲ್ಲಾ||

|ಇ| ಸಧ್ಯಕ್ಕೆ ಚಹಾ ಫೇಲಾ| ಮುಂದಿರುವದೆಂದು ಜಯಬೇರಿ ಹೊಡೆಯುವರೆಲ್ಲಾ||
|ಏ| ಚಹಾಕ್ಕೆ ಮಾಡುವ ರಂಗೀಲಾ| ಕುಡಿಯುವುದಾ ಬಿಡುವದೇ ಇಲ್ಲ||
ಚಹಕ್ಕೆ ಕುಸಿ ಹಾಲ ಅಂತಾನೋ|| ಬಾಲ ಹನುಮಂತ ಸುಗುಣ ಶೀಲ
ಬಲಗೈ ಎತ್ತಿ ಸಾರಿ ಹೇಳುವನಲ್ಲ||6||

|ಇ| ಭದ್ರ ಮೆಣಸಾಗಿ ಫೈಲಾ| ರಂಗಲಾಲ ಸುತ್ತು ದೇಶಕ್ಕ ಪ್ರಭಲ||
|ಏ| ರುದ್ರಗೌಡ್ರ ಮುದ್ರಿಯಾ ರೇಲಾ| ಭದ್ರ ಪಂಡಿತ ಬಲ್ಲವನೇ ಬಲ್ಲ||
ಸಧ್ಯ ಚಹಾ ಕುಡಿದಂಗ ಹಾಲಾ|ನಿದ್ರೆ ಕಣ್ಣಿಗೆ ಬರುವುದಲ್ಲಾ||

ಈ ರಿವಾಯ್ತು ಚಹಾದ ಬಗ್ಗೆ ಇದೆ. ಚಹಾ ಕೂಡ ಆಧುನಿಕತೆಯ ಫಲ. ಅದರಲ್ಲೂ ವಸಾಹತುಶಾಹಿಯ ಹೇರಿಕೆಯ ಬೆಳೆ. ಚೀನಾ


ಚಹಾದ ಏಕಸ್ವಾಮ್ಯ ಗಳಿಸಿದಾಗ ಬ್ರಿಟನ್ ಅದನ್ನು ಮುರಿಯಲು ಭಾರತದಾದ್ಯಾಂತ ಕಾಡು ಕಡಿದು ಕಾಫಿ ಮರಗಳನ್ನು ಬೆಳೆಸಿದರು. ಈ ಕೆಲಸಕ್ಕೆ ಲಕ್ಷಾಂತರ ಭಾರತೀಯ ಕೂಲಿಗಳ ಜೀತದಾಳುಗಳ ಶ್ರಮವನ್ನು ಬಳಸಿಕೊಳ್ಳಲಾಯಿತು. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಚಹಾ ಆಧುನಿಕತೆಯ ಪ್ರಭಾವದ ಭಾಗವಾಗಿ ಬಂದಿದೆ. `ಚಹಾದ ಜೋಡಿ ಚೂಡಾ ಹಾಂಗ’ ಎನ್ನುವ ಕವಿವಾಣಿಯೂ ಇದೆ. ಚಹಾ ಕುರಿತ ಅಭಿವ್ಯಕ್ತಿ ಆಧುನಿಕ ಕವಿಗಳಿಂದ ಹಿಡಿದು ಈಚಿನ ಯುವ ಬ್ಲಾಗಿಗರಲ್ಲೂ ಮುಂದುವರಿದಿದೆ. ಪ್ರಶಾಂತ್ ಎನ್ನುವ ಬ್ಲಾಗಿಗ ತಮ್ಮ ಬ್ಲಾಗ್ನಲ್ಲಿ ಚಹಾವನ್ನು ಹುಡುಗಿಯೊಂದಿಗೆ ಹೋಲಿಸಿ ಬರೆದ ಕಿರು ಪದ್ಯವೊಂದು ಹೀಗಿದೆ:

ಹುಡುಗಿಯರು ಚಹಾದಂತೆ
ಚಹ ಕುಡಿದರೆ ರಾತ್ರಿ ನಿದ್ದೆ ಬರೋದಿಲ್ಲ.
ಹುಡುಗಿಯರನ್ನು ನೋಡಿದಾಗಲೂ ರಾತ್ರಿ ನಿದ್ದೆ ಬರೋದಿಲ್ಲ.
ಬೆಳಗ್ಗೆ ಚಹ ಕುಡಿದರೆ ದಿನವೆಲ್ಲ ಚನ್ನಾಗಿರುತ್ತೆ.
ಬೆಳಗ್ಗೆ ಅವಳನ್ನೊಮ್ಮೆ ನೋಡಿದರೆ ದಿನವೆಲ್ಲ ಚನ್ನಾಗಿರುತ್ತೆ.
ದಿನಕ್ಕೆ ನಾಲ್ಕು ಬಾರಿಯಾದರೂ ಚಹ ಕುಡಿಯಬೇಕೆನಿಸುತ್ತದೆ .
ಹಾಗೆಯೆ ಅವಳನ್ನು ಮತ್ತೆ ಮತ್ತೆ ನೋಡ ಬೇಕನಿಸುತ್ತದೆ .

ಆದರೆ ಎಲ್ಲಾ ಚಹಾ ಕುಡಿದಾಗ ಹೀಗೆ ಅನಿಸುವುದಿಲ್ಲ .
ಹಳ್ಳಿಗಳಲ್ಲಿ ಟೀ ಚಹಾದ ಭಿನ್ನತೆಗಳು ಅಷ್ಟಾಗಿರಲಿಲ್ಲ. ಈ ಎರಡನ್ನೂ ಒಳಗೊಂಡಂತೆ ಚಾ ಎನ್ನುವ ಪದ ಬಳಕೆಯಾಗುತ್ತದೆ. ಚಹಾ ಹಳ್ಳಿಗಳಲ್ಲಿ ಮೊದ ಮೊದಲು ಎಲ್ಲರ ಮನೆಯಲ್ಲಿಯೂ ಮಾಡುವ ಸಾಮಾನ್ಯ ಪೇಯವಾಗಿರಲಿಲ್ಲ. ಬದಲಾಗಿ ಗೌಡರು, ಶಾಂಬರು ಮುಂತಾದ ದೊಡ್ಡವರ ಮನೆಯಲ್ಲಿ, ಆಥರ್ಿಕವಾಗಿ ಉತ್ತಮವಾಗಿರುವ ಮೇಲು ಜಾತಿಗಳ ಮನೆಗಳಲ್ಲಿ ಮಾಡುವ ಪೇಯವಾಗಿತ್ತು. ಹಾಗಾಗಿ ಚಹಾವನ್ನು ಶ್ರೀಮಂತಿಕೆ ಜತೆ, ಹಣದ ದಬರ್ಾರಿನ ಜತೆ, ದೌಲತ್ತಿನ ಜತೆ ಈ ರಿವಾಯ್ತು ಲಗತ್ತಿಸಿದೆ. ಅಂತೆಯೇ ಚಹಾ ಪುರುಷರು ಮಾತ್ರ ಸೇವಿಸುವ ಪೇಯದಂತೆಯೂ ಇಲ್ಲಿ ಉಲ್ಲೇಖಗೊಂಡಿದೆ.

ನಂತರದ ದಿನಗಳಲ್ಲಿ ಚಹಾ ಹೋಟೇಲಿನಲ್ಲಿ ಮಾಡುವ ಪೇಯವಾಗಿತ್ತು. ಹಾಗಾಗಿ ಹಳ್ಳಿಗಳ ಅಂಗಡಿಗಳಿಗೆ ಚಾದಂಗಡಿ ಎಂಬ ಹೆಸರು ಈಗಲೂ ಉಳಿದಿದೆ. ಆಗ ಮನೆಗಳಲ್ಲಿ ಚಹಾ ಮಾಡದೆ, ಅಂಗಡಿಗಳಲ್ಲಿ ಚಹಾವನ್ನು ಒಯ್ಯಿಸಿಕೊಂಡು ಬರುತ್ತಿದ್ದರು. ಹೀಗೆ ಚಹಾವನ್ನು ಒಯ್ಯಿಸಿಕೊಂಡು ಬರುವುದು ಸಾಮಾನ್ಯವಾಗಿ ಕೆಳಜಾತಿಗಳಲ್ಲಿ ಹೆಚ್ಚಿತ್ತು. ಕಾರಣ ಬೆಲ್ಲ, ಟೀ ಅಥವಾ ಚಾ ಪುಡಿ ಅದರ ಜತೆ ಹಾಲನ್ನು ಹೊಂದಿಸುವುದು ಕಷ್ಟದ ಸಂಗತಿಯಾಗಿತ್ತು.

ಹಳ್ಳಿ ಮನೆಗಳ ನೆರಕೆಯಲ್ಲಿ, ಗೋಡೆಯ ಬಿರುಕಿನಲ್ಲಿ, ತೆಂಗಿನ ಚಿಪ್ಪೊಂದು ಇರುತ್ತಿತ್ತು. ಈ ಚಿಪ್ಪು ದಲಿತರ ಚಾ ಕಪ್ಪಾಗಿರುತ್ತಿತ್ತು. ಸಾಮಾನ್ಯವಾಗಿ ದಲಿತರು ಮೇಲುಜಾತಿಗಳ ಮನೆಗೆ ಬಂದಾಗ ಈ ಚಿಪ್ಪನ್ನು ತೆಗೆದುಕೊಂಡು ತೊಳೆದು ಅದರಲ್ಲಿ ಟೀ/ಚಾ ಹಾಕಿಸಿಕೊಂಡು ಕುಡಿಯುತ್ತಿದ್ದರು. ಇದು ಹಳ್ಳಿಯ ಚಾದಂಗಡಿಯಲ್ಲಿಯೂ ಆಚರಣೆಯಲ್ಲಿತ್ತು. ಈಗೀಗ ಬಹುಪಾಲು ಹಳ್ಳಿಗಳ ಚಾದಂಗಡಿಯಲ್ಲಿ ಈ ಆಚರಣೆ ನಿಂತಿದೆ. ಆದರೆ ಮೇಲುಜಾತಿ ಮನೆಗಳಲ್ಲಿ ಚಿಪ್ಪಿನ ಜಾಗದಲ್ಲಿ ಸಿಲ್ವರ್ ಲೋಟ ಬಂತು, ಈಗೀಗ ಮನೆಯಲ್ಲಿ ಕುಡಿಯುವ ಒಂದು ಲೋಟವನ್ನೇ ಹೊರಗಿನ ಲೋಟವಾಗಿ ಹೊರಾಂಡದ ಯಾವುದೋ ಒಂದು ಮೂಲೆಯಲ್ಲಿ ಅಡಗಿಸಿಟ್ಟಿರುವುದು ಈಗಲೂ ಹಳ್ಳಿಗಳಲ್ಲಿದೆ.

ಈ ರಿವಾಯ್ತಿನಲ್ಲಿ ಚಹಾ ಕುಡಿಯುವುದರಿಂದ ಮನೆ ಹಾಳಾಗುತ್ತೆ, ಹೊಲ ಮನೆ ಮಾರಬೇಕಾಗುತ್ತೆ ಎಂಬಂತಹ ಆಥರ್ಿಕ ಕಾರಣಗಳಿದ್ದರೆ, ಮನಸ್ಸು ಚಂಚಲವಾಗುತ್ತೆ, ಚಪಲಾ ಹೆಚ್ಚಾಗುತ್ತೆ ಎನ್ನುವ ಗುಣಾವಗುಣದ ಹಿನ್ನಲೆಯೂ ಇದೆ. ಅಂತೆಯೇ ಇದು ಸಾಮಾನ್ಯ ಜನರದ್ದಲ್ಲ, ಉಳ್ಳವರು ದೌಲತ್ತು ತೋರಿಸಲು ಈ ಚಹಾ ಕುಡಿಯುತ್ತಾರೆ ಎನ್ನುವ ಚಹಾದ ಅಪಮೌಲ್ಯೀಕರಣವೂ ಇದರಲ್ಲಿದೆ. ಆದರೆ ಜಾತಿ ನೆಲೆಯಲ್ಲಿ ದಲಿತ ಕೆಳಜಾತಿಗಳು ಮನೆ ಹೊರಗಿನ ಚಿಪ್ಪಿನಲ್ಲಿ ಚಹಾ ಹೊಯ್ಯಿಸಿಕೊಂಡು ಕುಡಿವ ಬಗ್ಗೆ ಮೌನವಿದ್ದಂತಿದೆ.

ಹೀಗೆ ಜನಪದ ಸಾಹಿತ್ಯದಲ್ಲಿ ಆಧುನಿಕ ಸಂಗತಿಗಳ ಬಗ್ಗೆ ತನ್ನದೇ ಆದ ಅಭಿವ್ಯಕ್ತಿಯೊಂದು ಹುಟ್ಟಿದೆ. ಅಂತಹವುಗಳನ್ನು ಹೆಕ್ಕಿ ವಿವರಿಸಿಕೊಳ್ಳಬೇಕಿದೆ. ಹಾಗಾದಲ್ಲಿ ಜನಸಾಮಾನ್ಯರು ಆಧುನಿಕ ಸಂಗತಿಗಳನ್ನು ಹೇಗೆ ಬರಮಾಡಿಕೊಂಡರು, ಆಯಾ ಸಂಗತಿಗಳ ಬಗ್ಗೆ ಜನ ಪಠ್ಯದೊಳಗಡಗಿದ ನಿಲುವುಗಳೇನು? ನಗರವಾಸಿಗಳ, ಕಲಿತು ಹಳ್ಳಿ ಸಂಪರ್ಕದಿಂದ ದೂರ ಉಳಿದವರ, ಮಧ್ಯಮ ವರ್ಗದವರ ಆಧುನಿಕತೆಯ ಸ್ವೀಕಾರಕ್ಕೂ ಜನಸಾಮಾನ್ಯರ ಸ್ವೀಕಾರಕ್ಕೂ ಇರುವ ಫರಕುಗಳೇನು ಮುಂತಾಗಿ ಆಲೋಚಿಸಲು ಸಾಧ್ಯವಾಗುತ್ತದೆ. ಅಂತಹ ಮತ್ತೆ ಕೆಲವು ಪಠ್ಯಗಳನ್ನು ಸದರದ ಮುಂದಿನ ಅಂಕಣಗಳಲ್ಲಿ ನೋಡೋಣ.

ಕಾಮೆಂಟ್‌ಗಳಿಲ್ಲ: