ಶನಿವಾರ, ಆಗಸ್ಟ್ 17, 2013

ದೈವಗಳನ್ನು ಸೋಲಿಸುವ ಕಥನಗಳ ಸುತ್ತ

ಬಹುರೂಪ: ದೈವಗಳನ್ನು ಸೋಲಿಸುವ ಕಥನಗಳ ಸುತ್ತ
 
 
 
 
 

 
 
 
 
 ಸೌಜನ್ಯ: ವಿಜಯ ಕರ್ನಾಟಕ
 
 
 
 
 
 
 
 
 
 
 
 
 
 ಒಂದರೊಳಗೊಂದು ಹೆಣೆದುಕೊಂಡಿರುವ ರಚನೆಯುಳ್ಳ ದೈವಗಳ ಕುರಿತಾದ ಕಥನಗಳು ಎಲ್ಲ ಪ್ರದೇಶದಲ್ಲೂ ಸಿಗುತ್ತವೆ. ಇಂಥ ಕಥನಗಳು ಸಾಮಾಜಿಕವಾಗಿ ಹಲವು ಸಂಗತಿಗಳನ್ನು ಪಿಸುಗುಡುತ್ತವೆ. ಎರಡು ಉದಾಹರಣೆಗಳ ಮೂಲಕ ಆ ರೀತಿಯ ಕಥನಗಳ ರಚನೆ ಮತ್ತು ಮಹತ್ವವನ್ನು ಅರಿಯಬಹುದು.

ಬಳ್ಳಾರಿ ಜಿಲ್ಲೆಯ ಹೂವಿನ ಹಡಲಿ ಸಮೀಪದಲ್ಲಿ ವಾಸವಾಗಿರುವ ಮೈಲಾರದೇವನಿಗೆ ಮದುವೆ ಆಗಬೇಕೆಂಬ ಆಸೆ ಹುಟ್ಟುತ್ತದೆ. ಹೆಣ್ಣು ಹುಡುಕುತ್ತಾ ಊರೂರು ಅಲೆಯುತ್ತಾನೆ. ಜನರು 'ತಿರುಪತಿ ತಿಮ್ಮ ಶೆಟ್ಟಿ'ಯ ಕಡೆಗೆ ಬೆರಳು ತೋರಿಸುತ್ತಾರೆ. ಮೈಲಾರನು ತಿರುಪತಿ ತಲುಪಿದಾಗ ತಿಮ್ಮ ಶೆಟ್ಟಿಯು ಮಲಗಿದ್ದ. ಮೈಲಾರನು ಢಮರುಗವನ್ನು ಬಾರಿಸಿ ಶೆಟ್ಟಿಯನ್ನು ಎಬ್ಬಿಸುತ್ತಾನೆ. ಏಳು ಉಪ್ಪರಿಗೆಯ ಕಿಟಕಿಯಿಂದ ಶೆಟ್ಟಿ ಇಣುಕುತ್ತಾನೆ, ''ಭಿಕ್ಷೆಕೊಟ್ಟು ಕಳಿಸಿ,'' ಎಂದು ಹೇಳಿ ಮತ್ತೆ ಮಲಗುತ್ತಾನೆ. ಆಗ ಶೆಟ್ಟಿಯ ದೊಡ್ಡ ಮಗಳು ಗಂಗಮ್ಮಳು ಮೈಲಾರನೆಂಬ ಗೊರವನಿಗೆ ಭಿಕ್ಷೆ ನೀಡಲು ಉಪ್ಪರಿಗೆ ಮೆಟ್ಟಿಲಿಳಿದು ಅಂಗಳಕ್ಕೆ ಬರುತ್ತಾಳೆ. ಗೊರವನ ಜೋಳಿಗೆಗೆ ಭಿಕ್ಷೆ ಸುರಿಯುವಾಗ ಅವಳ ಚೆಲುವಿಗೆ ಮನಸೋತ ಮೈಲಾರನು ಆಕೆಯ ಕೈ ಹಿಡಿದುಕೊಳ್ಳುತ್ತಾನೆ. ಗಂಗಮ್ಮ ಏಳು ಉಪ್ಪರಿಗೆಯ ಜನರಿಗೂ ಕೇಳುವಂತೆ ಚೀರುತ್ತಾಳೆ. ಗಾಬರಿಯಾದ ತಿಮ್ಮ ಶೆಟ್ಟಿಯು ಮಗಳ ಕೈ ಹಿಡಿದ ಗೊರವನ ಕಂಡು ದಂಗಾಗುತ್ತಾನೆ. 
 
    ಮೆಟ್ಟಿಲಿಳಿದು ಬಂದು, ''ಏಳು ಕೋಟಿ ಹೊನ್ನುಕೊಟ್ಟು ಮಗಳನ್ನು ಮದುವೆಯಾಗು,'' ಎನ್ನುತ್ತಾನೆ. ಶೆಟ್ಟಿಯ ಹಣದಾಸೆ ಕಂಡು ಮೈಲಾರನಿಗೆ ನಗು ಬರುತ್ತದೆ. ''ಮದುವೆ ಮಾಡಿಕೊಡು, ಊರಿಗೆ ಹೋದ ಮೇಲೆ ಏಳುಕೋಟಿ ಕಳಿಸಿಕೊಡುತ್ತೇನೆ,'' ಎನ್ನುತ್ತಾನೆ. ತಿಮ್ಮ ಶೆಟ್ಟಿಯು, ''ಮದುವೆ ಖರ್ಚು ನಿನ್ನದೇ,'' ಎಂದಾಗ, ಅದಕ್ಕೆ ಒಪ್ಪದ ಗೊರವನು, ''ದುಡ್ಡು ತಂದಿಲ್ಲ. ಈಗ ಖರ್ಚು ನೀನೇ ಮಾಡಬೇಕು. ಅದಕ್ಕೆ ಒಳ್ಳೆಯ ಬಡ್ಡಿ ಸೇರಿಸಿ ಆನಂತರ ಹ
ಿಂದೆ ಕೊಡುತ್ತೇನೆ,'' ಎನ್ನುತ್ತಾನೆ. ಈ ಸಲ ಬಡ್ಡಿಯಾಸೆಗೆ ಬಲಿ ಬಿದ್ದ ತಿಮ್ಮನು ಅದಕ್ಕೂ ಒಪ್ಪುತ್ತಾನೆ. ಮಗಳನ್ನು ಮೈಲಾರನಿಗೆ ಮದುವೆ ಮಾಡಿಕೊಡುತ್ತಾನೆ. ಮದುವೆಗೆ ಬಂದವರ ಮುಯ್ಯಿ ಹಣ ತಿಮ್ಮನಿಗೆ ಸೇರದಂತೆ ಮೈಲಾರ ಮಾಡುತ್ತಾನೆ. ದಿಬ್ಬಣ ಸಹಿತ ಮೈಲಾರ ಹಿಂದಿರುವಾಗ, ತಗುಲಿದ ಹಾದಿ ಖರ್ಚನ್ನೂ ತಿಮ್ಮನೇ ವಹಿಸಿಕೊಳ್ಳುತ್ತಾನೆ. ಹೀಗೆ ಪೈಸೆ ಖರ್ಚಿಲ್ಲದೆ ಮೈಲಾರನು ಗಂಗಮ್ಮನನ್ನು ಮದುವೆ ಮಾಡಿಕೊಳ್ಳುತ್ತಾನೆ.

   ಮದುವೆ ಕಳೆದು ಬಹಳ ಕಾಲವಾದರೂ, ಮೈಲಾರನು ಯಾವ ಹಣವನ್ನೂ ತಿಮ್ಮಪ್ಪನಿಗೆ ಹಿಂದಿರುಗಿಸುವುದಿಲ್ಲ. ತಿಮ್ಮ ಶೆಟ್ಟಿ ಸಾಲ ವಸೂಲಿಗೆ ಜನ ಕಳಿಸಿದಾಗ, ''ಭಾರತ ಹುಣ್ಣಿಮೆಯಲ್ಲಿ ಕಾರಣಿಕ ನಡೆಯುತ್ತದೆ. ಆಗ ಬೀಳುವ ಕಾಣಿಕೆ ಹಣದಿಂದ ಸಾಲ ಮುರಿದುಕೋ,'' ಎಂದು ಹೇಳಿ ಕಳಿಸುತ್ತಾನೆ. ಆ ಪ್ರಕಾರ, ತಿಮ್ಮನು ಕಾರಣಿಕಕ್ಕೆ ಬರುತ್ತಾನೆ. ಆದರೆ, ಈ ಸಲ ಮೈಲಾರನು ಮಾಯದ ಭಂಡಾರ ತೂರಿ ಕಾಣಿಕೆ ಹಣವನ್ನು ಮಾಯ ಮಾಡುತ್ತಾನೆ. 'ಅಸಲೂ ಇಲ್ಲ, ಬಡ್ಡಿಯೂ ಇಲ್ಲ' ಎಂದು ತಿಮ್ಮ ಗೋಳಾಡುತ್ತಾನೆ. ಜನರು ನ್ಯಾಯ ಮಾಡುತ್ತಾರೆ. 'ತಪ್ಪು ಮೈಲಾರನದಲ್ಲ' ಎಂದು ತೀರ್ಮಾನಿಸುತ್ತಾರೆ. ಆದರೂ, ಮೈಲಾರನಿಗೆ ಸೇರಿದ ಹುಣಿಸೆ ತೋಪನ್ನು ಒಂದು ವರುಷದ ಮಟ್ಟಿಗೆ ತಿಮ್ಮನಿಗೆ ಒಪ್ಪಿಸುವುದೆಂದೂ, ಅದರಿಂದ ಬಂದ ಉತ್ಪತ್ತಿಯಿಂದ ತಿಮ್ಮ ಶೆಟ್ಟಿಯು ತನ್ನ ಸಾಲವನ್ನು ತೀರಿಸಿಕೊಳ್ಳಬೇಕೆಂದೂ ನ್ಯಾಯದ ಜನರು ಆದೇಶಿಸುತ್ತಾರೆ. ಆ ಪ್ರಕಾರ, ಹುಣಿಸೆ ತೋಪಿನ ಮೇಲ್ವಿಚಾರಣೆಯ ಅಧಿಕಾರವನ್ನು ತಿಮ್ಮ ವಹಿಸಿಕೊಳ್ಳುತ್ತಾನೆ. ತೋಪಿನಲ್ಲಿ ಚೆನ್ನಾಗಿ ಹಣ್ಣು ಬೆಳೆಯುತ್ತದೆ. ತಿಮ್ಮ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾನೆ. ಹಣ್ಣು ಕೊಯ್ಯುವ ದಿವಸ ಗಂಗಮ್ಮ ಅಪ್ಪನಿಗೆ ಬಿಸಿ ನೀರಿನ ಸ್ನಾನ ಮಾಡಿಸುತ್ತಾಳೆ. ಒಳ್ಳೆಯ ಊಟ ಹಾಕುತ್ತಾಳೆ. ಶೆಟ್ಟಿಯ ಹೊಟ್ಟೆ ತಣ್ಣಗಾಗುತ್ತದೆ. ಚೆನ್ನಾಗಿ ನಿದ್ದೆ ಮಾಡುತ್ತಾನೆ. ಕಾಯುತ್ತಾ ಕುಳಿತಿದ್ದ ಮೈಲಾರ, ಹುಣಿಸೆ ಹಣ್ಣನ್ನೆಲ್ಲ ಹೊಡೆದುಕೊಳ್ಳುತ್ತಾನೆ. ತಿಮ್ಮನಿಗೆ ಎಚ್ಚರವಾಗಿ ನೋಡಿದಾಗ ತೋಪೆಲ್ಲಾ ಖಾಲಿ.

  ಆಕಾಶ-ಭೂಮಿ ಒಂದು ಮಾಡುವಂತೆ ಆತ ಗೋಳಾಡುತ್ತಾನೆ. ಮತ್ತೆ ಊರಿನ ಜನ ಸೇರಿ ನ್ಯಾಯ ಮಾಡುತ್ತಾರೆ. ಈ ಸಲವೂ ಅವರು 'ಮೈಲಾರನದು ತಪ್ಪಿಲ್ಲ' ಎನ್ನುತ್ತಾರೆ. ಕೋಪಗೊಂಡ ತಿಮ್ಮನು, ''ಇನ್ನು ಮುಂದೆ ನಿನ್ನ ಸಹವಾಸ ಬೇಡ, ನಿನ್ನ ಜನರು ಏಳು ಕೋಟಿ, ಏಳು ಕೋಟಿ ಎಂದು ಹೇಳುತ್ತಾ ತಿರುಗುತ್ತಿರಲಿ, ಅವರಿಗೆ ಬಡತನ ತಪ್ಪದಿರಲಿ,'' ಎಂದು ಶಾಪ ಕೊಡುತ್ತಾನೆ. ಮೈಲಾರ ನಕ್ಕು ಸುಮ್ಮನಾಗುತ್ತಾನೆ. ಹೀಗೆ ಜನಪ್ರಿಯ ದೈವವಾದ ತಿರುಪತಿ ತಿಮ್ಮಪ್ಪನನ್ನು, ಅವನಷ್ಟು ಜನಪ್ರಿಯವೂ-ಶಕ್ತಿಶಾಲಿಯೂ ಅಲ್ಲದ, ಕೆಳ ವರ್ಗಕ್ಕೆ ಸೇರಿದ ಮೈಲಾರನು ಮತ್ತೆ ಮತ್ತೆ ವಂಚಿಸಿ ಸೋಲಿಸುತ್ತಾನೆ.

ಮಧ್ಯ ಕರ್ನಾಟಕದಿಂದ ಕರಾವಳಿ ಕಡೆಗೆ ಬಂದರೆ, ಅಲ್ಲಿ ನೂರಾರು ದೈವಗಳು ಕಣ್ಣಿಗೆ ಬೀಳುತ್ತವೆ. ಈ ದೈವಗಳಲ್ಲಿ ಕೋಟಿ-ಚೆನ್ನಯರೆಂಬ ಅವಳಿ ದೈವಗಳು ತುಂಬ ಪ್ರಭಾವಶಾಲಿಯಾಗಿವೆ. ಇದೀಗ ಬಿಲ್ಲವ ಸಮುದಾಯದ ಅಧಿದೈವಗಳಾಗಿ ಕಾಣಿಸಿಕೊಳ್ಳುತ್ತಿರುವ ಕೋಟಿ-ಚೆನ್ನಯರು ಮೂಲತಃ ಅನ್ಯಾಯದ ವಿರುದ್ಧ ಹೋರಾಡಿದ ಯಮಳ ವೀರರು. ''ಸತ್ಯದಲ್ಲಿ ಬಂದವರಿಗೆ ಎದೆಯಲ್ಲಿ ಹಾದಿ ನೀಡುತ್ತೇವೆ; ಅನ್ಯಾಯದಲ್ಲಿ ಬಂದವರಿಗೆ ಖಡ್ಗದಲ್ಲಿ ದಾರಿ ತೋರಿಸುತ್ತೇವೆ,'' ಎನ್ನುವ ಅವರು ಭೂ ಮಾಲೀಕರು ಮತ್ತು ಜಾತಿ ಪದ್ಧತಿ ವಿರುದ್ಧ ಅಸಹನೆಯನ್ನು ಪ್ರಕಟಿಸಿದ್ದಾರೆ. ಈ ಪ್ರಸಿದ್ಧ ಅವಳಿಗಳು ಒಮ್ಮೆ ಮುದ್ದ ಮತ್ತು ಕಳಲ ಎಂಬ ಮುಗ್ಗೆರ‌್ಲು ದೈವಗಳ ಜತೆ ಯಾತ್ರೆ ಹೋಗುತ್ತಾರೆ. ಮೇರ ಎಂಬ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ ಮುದ್ದ-ಕಳಲರೂ ಅಪ್ರತಿಮ ವೀರರೇ. (ಮಂಗಳೂರಿನ ಡಾ.ಅಭಯಕುಮಾರ ಅವರು ಈ ಯಮಳ ವೀರರ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ.) ಯಾತ್ರೆಯ ಹಾದಿಯಲ್ಲಿ ಮನ್ಸ ಎಂಬ ಅತ್ಯಂತ ಕೆಳ ಹಂತದ ದಲಿತ ಸಮುದಾಯಕ್ಕೆ ಸೇರಿದ, ಕಾಣದ ಮತ್ತು ಕಾಟದ ಎಂಬ ಹೆಸರಿನ ಮತ್ತೆರಡು ಅವಳಿ ದೈವಗಳೂ ಸೇರಿಕೊಳ್ಳುತ್ತವೆ. 
 
  ಹಾದಿಯಲ್ಲಿ ಈ ವೀರರಿಗೆ ಬಾಯಾರಿಕೆಯಾಗುತ್ತದೆ. ಅವರು ನೆಲದಿಂದ ನೀರು ತೆಗೆಯಲು ಯೋಚಿಸುತ್ತಾರೆ. ಕಾಣಿಸುವ ಬಂಡೆಯೊಂದಕ್ಕೆ ಕೋಟಿ-ಚೆನ್ನಯರು ತಮ್ಮ ಖಡ್ಗದಿಂದ ಅಪ್ಪಳಿಸುತ್ತಾರೆ. ಆದರೆ, ಕಬ್ಬಿಣದ ಖಡ್ಗ ಮೊಂಡಾಗುತ್ತದೆ. ಆನಂತರ, ಮುಗೇರರ ದೈವಗಳಾದ ಮುದ್ದ-ಕಳಲರು ಮರದಿಂದ ಮಾಡಿದ ತಮ್ಮ ಬಾಣದಿಂದ ಬಂಡೆಗೆ ಗುರಿಯಿಟ್ಟು ಹೊಡೆಯುತ್ತಾರೆ. ಬಾಣ ತುಂಡಾಗುತ್ತದೆ. ಕೊನೆಗೆ, ಮನ್ಸರ ದೈವಗಳಾದ ಕಾಣದ-ಕಾಟದರು ತುಂಬಾ ಮದುವಾದ ಆಲ್‌ಂಬುಡ ಎಂಬ ಗಿಡದ ದಂಡಿನಿಂದ ಬಂಡೆಗೆ ಹೊಡೆದಾಗ ಬಂಡೆ ಒಡೆದು ನೀರು ಚಿಮ್ಮುತ್ತದೆ. ಸಾಮಾಜಿಕ ಶ್ರೇಣೀಕರಣದ ಅತ್ಯಂತ ಕೆಳಗಿರುವ ಅವಳಿ ವೀರರು, ಅವರಿಗಿಂತ ಮೇಲಿರುವವರನ್ನು ಸುಲಭವಾಗಿ ಸೋಲಿಸಿದ ಕತೆಯಿದು. ಕೋಟಿ-ಚೆನ್ನಯರನ್ನು ನಂಬುವ ಬಿಲ್ಲವರು ಅಸ್ಪೃಶ್ಯರಲ್ಲ. ಅದರೆ, ನಿರೂಪಣೆಯಲ್ಲಿ ಕಾಣಬರುವ ಮೂರು ಸಮುದಾಯಗಳಲ್ಲಿ ಎಲ್ಲರಿಗಿಂತ ಮೇಲೆ ಇರುವವರು. ಮುಗೇರು ದಲಿತರಾಗಿದ್ದು ಕೆಳಗಿನ ಹಂತದಲ್ಲಿದ್ದರೆ, ಅವರಿಗಿಂತಲೂ ಕೆಳಗಿರುವ ಮನ್ಸರು ಅಸ್ಪೃಶ್ಯರು ಮಾತ್ರವಲ್ಲ, ಅದಶ್ಯರೂ ಹೌದು. ಆದರೆ, ಕಥನಗಳಲ್ಲಿ ಗೆಲ್ಲುವವರು ಅತ್ಯಂತ ಕೆಳಗಿನವರು.

    ಈ ಬಗೆಯ ನಿರೂಪಣೆಗಳು ದೇಶಾದ್ಯಂತ ಕಾಣಸಿಗುತ್ತವೆ. ಮಧ್ಯ ಪ್ರದೇಶದ ಬುಡಕಟ್ಟು ಜನರ ನಿರೂಪಣೆಗಳಲ್ಲಿ ಯಾವಾಗಲೂ ಕಷ್ಣನಿಗೆ ಸೋಲು. ಗಡವಾಲದ ಕಥನ ಕಾವ್ಯಗಳಲ್ಲಿ ನಳ ಮಹಾರಾಜ ಸದಾ ಸೋಲುವ ಅರಸ. ಈ ಬಗೆಯ ಕಥನಗಳು ಜಾತಿ ಸಮಾಜದಲ್ಲಿ ನಿರ್ವಹಿಸುವ ಕಾರ್ಯಗಳೇನು ಎಂಬ ಕುರಿತು ನಮ್ಮಲ್ಲಿ ಸರಿಯಾದ ಅಧ್ಯಯನಗಳು ನಡೆದಿಲ್ಲ. ಜತೆಗೆ, ಇವು ಒಂದರೊಡನೊಂದು ಹೆಣೆದುಕೊಂಡು, ಒಂದರ ಅಸ್ತಿತ್ವ ಇನ್ನೊಂದರೊಳಗೆ ಕಾಣಿಸಿಕೊಂಡಾಗ ಉಂಟಾಗುವ ಸಂಕೀರ್ಣ ಸನ್ನಿವೇಶದ ಬಗ್ಗೆಯೂ ನಮ್ಮ ಅಧ್ಯಯನಗಳು ಬೆಳಕು ಚೆಲ್ಲಿಲ್ಲ. ವಂಚಿಸಲು ಮೈಲಾರನಿಗೆ ತಿರುಪತಿ ತಿಮ್ಮ ಶೆಟ್ಟಿಯೇ ಬೇಕು, ಸೋತುಹೋಗಲು ಕೋಟಿ-ಚೆನ್ನಯರಿಗೆ ಕಾಣದ-ಕಾಟದರೂ ಬೇಕು, ಮುದ್ದ ಕಳಲರೂ ಬೇಕು.

1 ಕಾಮೆಂಟ್‌:

girijashastry ಹೇಳಿದರು...

ಸರ್, ಮರಾಠಿ ಭಕ್ತಿಗೀತೆಗಳಲ್ಲಿ 'ಏಳ್ ಕೋಟ್ ಏಳ್ ಕೋಟ್' ಸಾಲುಗಳಿರುವ ಬಹಳ ಜನಪ್ರಿಯವಾದ ಹಾಡುಗಳಿವೆ.ಇದು ಆ ಖಂಡೋಬನ ಕುರಿತಾದ ಹಾಡೇ ಇರಬೇಕು. ಯಾಕೆಂದರೆ ಕರ್ನಾಟಕದ ಮೈಲಾರಲಿಂಗನೇ ಮಹಾರಾಷ್ಟ್ರದ ಖಂಡೋಬ ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿರುವ ವಿಷಯ.
ಅಲ್ಲದೇ ಮುದುಕಿಯರೂ ಕುಂಟರೂ ಮೂಕರೂ ಪೆದ್ದರೂ ಜಾನಪದ ಕಥೆಗಳಲ್ಲಿ ಗೆಲ್ಲುತ್ತಾರೆ, ಅಲ್ಲಿ ಅವರೇ ನಾಯಕರು. ಒಬ್ಬ ಪೆದ್ದನಿಗೆ ರಾಜಕುಮಾರಿಯನ್ನು ವರಿಸಲು ಸಾಧ್ಯವಾಗುತ್ತದೆ. ನೀವು ಹೇಳಿದಂತೆ ಈ ವಿಷಯದ ಕುರಿತಾದ ವ್ಯಾಪಕ ಅಧ್ಯಯನ ಬಹಳ ಕುತೂಹಲಕಾರಿಯಾದದ್ದು.
ಗಿರಿಜಾಶಾಸ್ತ್ರಿ