|
|
(ಗಿರಿಜಾ ಕಲ್ಯಾಣದ ಒಂದು ದೃಶ್ಯ) |
|
ನಾನು ಬಳ್ಳಾರಿ ಜಿಲ್ಲೆಗೆ ಹೊಸ
ಬದುಕನ್ನರಸಿ ಬಂದು ನೆಲೆಸಿದೆ. ತರುವಾಯ ಈ ಭಾಗದ ಕಲಾಪ್ರಕಾರಗಳನ್ನು ಆಸಕ್ತಿಯಿಂದ
ಗಮನಿಸತೊಡಗಿದೆ. ಹಳೇಮೈಸೂರು ಸೀಮೆಯವನಾದ ನನ್ನನ್ನು ಇಲ್ಲಿನ ಬುರ್ರಕಥಾ, ತೊಗಲುಗೊಂಬೆ,
ಚೌಡಿಕೆ ಪದ, ಸವಾಲ್-ಜವಾಬ್ ಪದಗಳು, ಬಯಲಾಟಗಳು ಸೆಳೆದುಕೊಂಡವು.
ನಾನು
ವಾಸವಾಗಿರುವ ಹೊಸಪೇಟೆ ಪಟ್ಟಣದ ಆಸುಪಾಸು ಅನಂತಶಯನಗುಡಿ, ನಾಗೇನಹಳ್ಳಿ,
ಕೊಂಡನಾಯಕನಹಳ್ಳಿ, ಸಂಕಲಾಪುರ, ಇಂಗಳಗಿ, ಮಲಪನಗುಡಿ, ಗಾಳೆಮ್ಮನಗುಡಿ, ಕಾರಿಗನೂರು
ಮುಂತಾದ ಹಳ್ಳಿಗಳಿವೆ. ಹೆಚ್ಚಿನವು ಶಾಸನೋಕ್ತ ಪ್ರಾಚೀನ ಹಳ್ಳಿಗಳು. ಕುರುಬರು ಬೇಡರು
ಮುಸ್ಲಿಮರು ದಲಿತರು ಲಿಂಗಾಯತರು ವಾಸಿಸುವ ಇಲ್ಲಿನ ಜನ ಹೆಚ್ಚಾನ್ಹೆಚ್ಚು ರೈತರು ಮತ್ತು
ಕೂಲಿಕಾರ್ಮಿಕರು. ನಸುಕಿಗೇ ಎದ್ದು ಮಾಗಾಣಿ ಕೆಲಸಕ್ಕೆ ಹೋಗಿ ಸಂಜೆ ನಾಲ್ಕೈದಕ್ಕೆ
ಮರಳುವವರು. ಉಳಿದ ಸಮಯವನ್ನು ಕೊರಳುಬಿಟ್ಟು ನಿಂತಿರುವ ಬಂಡಿಯ ಮೂಕಿಯ ಮೇಲೊ, ರಸ್ತೆಬದಿಯ
ಕಟ್ಟೆಯ ಮೇಲೊ ಕುಳಿತು ಬೀಡಿಕುಡಿಯುತ್ತ, ಮಂಡಾಳು ಮಿರ್ಚಿ ತಿನ್ನುತ್ತ, ಊರವಿಷಯಗಳ
ಮೇಲೆ ಹರಟೆ ಕೊಚ್ಚುತ್ತ ಕೂರುವವರು. ಬ್ಯಾಸರಾದರೆ ಹೊಸಪೇಟೆಗೆ ಬಸ್ಸೇರಿ ಹೋಗಿ
ಮಸಾಲೆದೋಸೆ ತಿಂದು ತೆಲುಗು ಸಿನಿಮಾ ನೋಡುವರು; ಕಬ್ಬಿನರೊಕ್ಕ ಕೈಗೆ ಹತ್ತಿದಾಗ ತುಸು
ಎಣ್ಣೆ ಹಾಕುವರು. ವರ್ಷಕ್ಕೊಮ್ಮೆ ಬಯಲಾಟ ಆಡುವರು. ಇಲ್ಲಿನ ಜನರ ದುಡಿಮೆ, ವಿಶ್ರಾಂತಿ,
ಕಲಾಸಕ್ತಿ, ಚಟಗಳ ಲಯದ ಪರಿಯೇ ಬೇರೆ.
ಈ ಹಳ್ಳಿಗಳಲ್ಲಿ ಹಬ್ಬಕ್ಕೊ ಜಾತ್ರೆಗೊ
ತಪ್ಪದೆ ನಾಟಕ ಅಥವಾ ಬಯಲಾಟ ಏರ್ಪಡುತ್ತದೆ. ‘ಕೀಚಕವಧೆ ‘ರತಿಕಲ್ಯಾಣ ‘ದ್ರೌಪದಿ
ವಸ್ತ್ರಾಪಹರಣ ‘ಲಂಕಾದಹನ ಮುಂತಾದ ಆಟಗಳನ್ನು, ಕಂದಗಲ್ ಹನುಮಂತರಾಯರ ಪ್ರಸಿದ್ಧ ನಾಟಕ
‘ರಕ್ತರಾತ್ರಿ'ಯನ್ನ ನಾನು ಇಲ್ಲೇ ನೋಡಿದ್ದು. ಬಯಲಾಟಗಳಲ್ಲಿ ಹೆಚ್ಚಿನವು ಮಹಾಭಾರತದ
ಪ್ರಸಂಗವನ್ನು ಆಧರಿಸಿದವು. ಇವು ವಧೆ, ದಹನ, ಅಪಹರಣ ಮತ್ತು ಕಲ್ಯಾಣ ಎಂಬ ವಿಶೇಷಣಗಳಿಂದ
ಕೂಡಿರುವುದೊಂದು ವಿಶೇಷ. ವಿಜಯನಗರ ಸಾಮ್ರಾಜ್ಯದ ಇಲ್ಲಿ ಮಾಜಿ ಪ್ರಜೆಗಳಿಗೆ ಈ ಥೀಮುಗಳು
ಇಷ್ಟವೆಂದು ಕಾಣುತ್ತದೆ. ಈ ಭಾಗದ ಕವಿ ಹರಿಹರನ ‘ಗಿರಿಜಾಕಲ್ಯಾಣ'ದಲ್ಲೂ ಇವೇ ಅಂಶಗಳು ಪ್ರಧಾನವಾಗಿವೆಯಷ್ಟೆ. ಅದರಲ್ಲಿ ಕಾಮನದಹನ ಅಥವಾ ವಧೆಯಾದ ಬಳಿಕ ಗಿರಿಜೆಯ ಕಲ್ಯಾಣವಾಗುತ್ತದೆ.
ಬಯಲಾಟಗಳಲ್ಲಿ
ಜನರಿಗಿರುವ ತನ್ಮಯತೆ ಸಂಭ್ರಮ ನೋಡುವಾಗ ಖುಶಿಯಾಗುತ್ತದೆ. ಆದರೆ ಈ ಆಟಗಳನ್ನು ಆಡುವ
ಅವಸ್ಥೆಯನ್ನು ನೋಡುವಾಗ, ಹಿಂದೊಂದು ಕಾಲಕ್ಕೆ ಸಂಪನ್ನವಾಗಿ ಬಾಳಿದ ಮನೆತನವೊಂದು, ಬದಲಾದ
ಕಾಲಕ್ಕೆ ತನ್ನ ಬದುಕಿನ ಚಾಲನ್ನು ಬದಲಿಸಿಕೊಳ್ಳದೆ ಬಡತನಕ್ಕಿಳಿದಂತೆ ವಿಷಾದ
ಕವಿಯುತ್ತದೆ.
ಕೆಲವು ವರ್ಷಗಳ ಹಿಂದೆ, ಒಂದು ಬಯಲಾಟ ನೋಡಲು ಹೋದೆ.
ಊರಮಧ್ಯದಲ್ಲಿ ಚಪ್ಪರ ಕಟ್ಟಿ ಬಾಳೆತರಗು ಮಾವಿನಸೊಪ್ಪು ಹರಡಿ ಮಾಡಿದ ವೇದಿಕೆ
ನಿರ್ಮಿಸಿದ್ದರು. ರಂಗಸ್ಥಳಕ್ಕೆ ಹಿನ್ನೆಲೆಯಾಗಿ ತಿರುಪತಿ ತಿಮ್ಮಪ್ಪನ ಚಿತ್ರವಿರುವ
ದೊಡ್ಡ ಅಂಕಪರದೆ. ಕೆಳಗೆ ದಪ್ಪಹಲಗೆಯಿಂದ ಮಾಡಿದ ರಂಗಮಂಚ. ಅದರ ನಾಲ್ಕೂ ಕಡೆ ಬೆಳಕಿನ
ಫ್ರೇಮು ಹಾಕಿದಂತೆ ಟೂಬ್‌ಲೈಟುಗಳನ್ನು ಕಟ್ಟಲಾಗಿತ್ತು. ಜನ ಉಂಡು, ಗೋಣಿಚೀಲ
ಪ್ಲಾಸ್ಟಿಕ್ ಹಾಳೆ, ಈಚಲು ಚಾಪೆ, ತಲೆದಿಂಬು ಹೊದಿಕೆ ಸಮೇತ ತಂದು, ನಡುಬೀದಿಯಲ್ಲೆ
ಸೀಟುಹಿಡಿದು, ಎಲೆ ಅಡಿಕೆ ಜಗಿಯುತ್ತ ಗುಜುಗುಜು ಎಬ್ಬಿಸಿದ್ದರು. ಮಂಡಾಳು ಮಿರ್ಚಿ
ವಗ್ಗಾಣಿ ಚಹದ ಅಂಗಡಿಗಳು ಸುತ್ತಮುತ್ತು ಬೀಡುಬಿಟ್ಟು ಆಟಕ್ಕಿಂತಲೂ ಹೆಚ್ಚಿನ
ಕಲೆಕ್ಷನ್ನು ಮಾಡತೊಡಗಿದ್ದವು. ಪಾತ್ರಧಾರಿಗಳ ನಂಟರು ದೂರದ ಊರುಗಳಿಂದ ಬಂದು
ಸೇರಿದ್ದರಿಂದ, ಊರಿನ ವಾಸ್ತವಿಕ ಜನಸಂಖ್ಯೆ ದಿಢೀರನೆ ಏರಿದಂತಿತ್ತು. ಅತೀವವಾದ
ಸಂತೋಷದಲ್ಲೊ ಅರ್ಥವಾಗದ ದುಗುಡದಲ್ಲೊ ಕೆಲವರು ಟೈಟಾಗಿದ್ದು, ನಾಟಕ ಶುರುವಾಗುವ ಮೊದಲೇ
ಸ್ವಯಂಘೋಷಿತ ಮಧ್ಯಂತರ ವಿರಾಮ ತೆಗೆದುಕೊಂಡು ಜಗಲಿಗಳಲ್ಲಿ ಶಯನಿಸಿದ್ದರು. ವೇದಿಕೆಗೆ
ಸಮೀಪ, ಕೆಲವು ಗಣ್ಯರನ್ನು ಕುರ್ಚಿ ಹಾಕಿ ಕೂರಿಸಲಾಗಿತ್ತು. ಗಲಭೆಪೀಡಿತವಾಗಿದ್ದ ಸದರಿ
ಸಭೆಯಲ್ಲಿ ಸ್ಥಳೀಯ ಶಾಸಕರು ಆಗಮಿಸಿದ್ದರು. ಶಾಸಕರು ಬಹುಶಃ ನಾಟಕದ ಖರ್ಚನ್ನು
ವಹಿಸಿಕೊಂಡಿದ್ದರೆಂದು ಕಾಣುತ್ತದೆ, ಅವರ ದಾನಗುಣದ ಬಗ್ಗೆ ಅಭಿಮಾನಿಗಳಿಂದ ಕೊಂಡಾಟ
ನಡೆಯಿತು. ಅವರಿಗೆ ಹಾರಹಾಕಿ ತುರಾಯಿ ಕೊಟ್ಟು ಗೌರವಿಸಲಾಯಿತು. ಶಾಸಕರಾದರೂ ನಾಳೆ
ಉಪಯೋಗಕ್ಕೆ ಬರುವ ಸರ್ವಜನಾಂಗದ ಯಜಮಾನರನ್ನು ಒಬ್ಬೊಬ್ಬರಾಗಿ ವೇದಿಕೆ ಮೇಲೆ ಕರೆದು
ಹಾರಹಾಕಿದರು. ಈ ಕಾರ್ಯಕ್ರಮ ಎರಡು ತಾಸು ಎಳೆಯಿತು. ಇದು ಬಯಲಾಟ ನೋಡಲು ಬಂದ ನನಗಿದು
ಕಿರಿಕಿರಿ. ಆದರೆ ಜನರ ಮುಖದಲ್ಲಿ ಯಾವ ಚಡಪಡಿಕೆ ಇದ್ದಂತಿರಲಿಲ್ಲ. ಅವರು ಇದನ್ನೆಲ್ಲ
ಬಯಲಾಟದ ಮೊದಲ ಅಂಕಗಳ ಹಾಗೆ ಭಾವಿಸಿ ನಿರಾಳವಾಗಿ ನೋಡುತ್ತಿದ್ದರು.
ಬಯಲಾಟ
ರಾತ್ರಿ ೧೧ಕ್ಕೆ ಶುರುವಾಯಿತು. ರಂಗಮಂಚಕ್ಕೆ ಹಿಂದೆ ಪಾತ್ರಧಾರಿಗಳು ಸಿದ್ಧವಾಗುವ
ಗ್ರೀನ್‌ರೂಂ ಇರಲಿಲ್ಲ. ನೂರು ಮೀಟರ್ ದೂರದಲ್ಲಿದ್ದ ಗುಡಿಯ ಪಡಸಾಲೆಯಲ್ಲಿ ಅವರಿಗೆ
ಬಣ್ಣಬಳಿಯುವ ವೇಷತೊಡಿಸುವ
ಕೆಲಸ ನಡೆಯುತ್ತಿತ್ತು. ಈ ದೂರದ ಸದುಪಯೋಗವೂ ಆಗುತ್ತಿತ್ತು. ಅಲಂಕಾರ ಮುಗಿದ ಬಳಿಕ
ಪಾತ್ರಧಾರಿಗಳು ರಂಗಸ್ಥಳದವರೆಗೆ ಹಲಗೆ ಬಾರಿಸಿಕೊಂಡು ಮೆರವಣಿಗೆಯಲ್ಲಿ ಬರುತ್ತಿದ್ದರು.
ಕೆಲವರು ನೇರ ವೇದಿಕಗೆ ಬರದೆ ಪ್ರೇಕ್ಷಕ ಸಾಗರವನ್ನು ಸೀಳಿಕೊಂಡು ಪ್ರವೇಶಿಸುತ್ತಿದ್ದರು.
ಅವರು ರಂಗಪ್ರವೇಶ ಮಾಡುವ ಹೊತ್ತಿಗೆ ‘ಪಟಾಕ್ಷಿ ಹಾರಿಸಲಾಗುತ್ತಿತ್ತು. ತಮ್ಮಟೆ
ಸದ್ದಿಗೆ ಮೊದಲೇ ಥೋಡೆ ಗಾಬರಿಯಾಗಿದ್ದ ಊರನಾಯಿಗಳು, ಲಕ್ಷ್ಮಿಪಟಾಕಿ ಸದ್ದಿಗೆ
ಕಿತ್ತುಹರಿದುಕೊಂಡು ದಿಕ್ಕಾಪಾಲಾದವು.
ಪಾತ್ರಧಾರಿಗಳು ವೇದಿಕೆ ಏರಿದರು.
ಏರಿದೊಡನೆ ಅವರಿಗೆ ಆಹೇರಿ ಶುರುವಾಯಿತು. ಪಾತ್ರಧಾರಿಯ ಬಂಧುಗಳು (ಬಹುಶಃ ಹೆಂಡತಿ
ಕಡೆಯವರೇ ಇರಬೇಕು,) ವಾಚು ಉಂಗುರ ಮುಯ್ಯಿ ಮಾಡಲಾರಂಭಿಸಿದರು. ಗೆಳೆಯರು ಹೂವಿನ ಹಾರ
ಹಾಕಿದರು. ಒಂದು ಹಾರವಂತೂ ಆನೆಸೊಂಡಿಲಿನಷ್ಟು ದಪ್ಪವಾಗಿತ್ತು. (ಅದರ ವ್ಯವಸ್ಥೆಯನ್ನು
ಪಾತ್ರಧಾರಿಯೇ ಮಾಡಿದ್ದನೆಂದು ಪುಕಾರಿತ್ತು.) ಮೊದಲೇ ಭುಜಕೀರ್ತಿ ಕಿರೀಟದ ವಜನದಿಂದ
ಜಾತ್ರೆಯ ಗೊಂಬೆಅಂಗಡಿಯಂತೆ ಕಾಣುತ್ತಿದ್ದ ದೇಹವು, ಈ ಹಾರದ ಭಾರಕ್ಕೆ ಮತ್ತಷ್ಟು
ಕುಸಿದು, ಕುತ್ತಿಗೆಗೆ ಉರುಳುಹಾಕಿದಂತಾಯಿತು. ಈ ಹಾರಕ್ಕೂ, ಬಳಿಸಿಕೊಂಡ ಬಣ್ಣಕ್ಕೂ,
ಪ್ರಖರ ಲೈಟಿನ ಬೆಳಕಿಗೂ ರೇಷ್ಮೆಸೀರೆಯನ್ನು ಕಚ್ಚೆಹಾಕಿ ಉಟ್ಟುಕೊಂಡಿದ್ದಕ್ಕೂ, ನೆರೆದ
ಸಂದಣಿಗೂ, ಪಾತ್ರಧಾರಿಗಳ ದೇಹದಿಂದ ಬೆವರು ಕೆರೆಕೆಳಗಿನ ಗದ್ದೆಯಲ್ಲಿ ಬಸಿನೀರು
ಉಕ್ಕುವಂತೆ ಉಕ್ಕುತ್ತಿತ್ತು. ಆಹೇರಿ ಹಾರತುರಾಯಿ ಕಾರ್ಯಕ್ರಮ ಕೊನೆಗೊಳ್ಳುವ ಸೂಚನೆ
ಕಾಣಲಿಲ್ಲ. ಭಾಗವತನು ಕಂದಪದ್ಯ ಹಾಡಲು ಶುರುಮಾಡಿದನು. ಆಗ ನಟರು ಬೇರೆದಾರಿಯಿಲ್ಲದೆ
ಕುಣಿಯತೊಡಗಿದರು. ಕುಣಿಯುವುದಕ್ಕೆ ಹಾರಗಳು ತೊಡಕಾಗುತ್ತಿದ್ದವು. ಆನೆಕಿವಿಗಳಂತಿದ್ದ
ಭುಜಕೀರ್ತಿ, ಗುಡಿಯ ಕಳಸವನ್ನೇ ತಂದಿಟ್ಟಂತಹ ಕಿರೀಟ ಬೇರೆಯಿದ್ದವು. ಈ ಶೃಂಗಾರ
ಪರಿಕರಗಳನ್ನೆಲ್ಲ ಕುಣಿವಾಗ ಬೀಳದಂತೆ ದೇಹದ ಬೇರೆಬೇರೆ ಭಾಗಕ್ಕೆ ಸೆಣಬಿನ
ಸುತ್ತಲಿಗಳಲ್ಲಿ ಕಟ್ಟಲಾಗಿತ್ತು. ಕರಾವಳಿಯ ಯಕ್ಷಗಾನದಲ್ಲೂ ಕೇರಳದ ಕಥಕ್ಕಳಿಯಲ್ಲೂ ಭೂತದ
ಕೋಲಗಳಲ್ಲೂ ಬಣ್ಣದ ವೇಷಗಾರಿಕೆ ಉಂಟು.
ಆದರೆ ಕುಣಿತಕ್ಕೆ ಅವು ತೊಂದರೆಯಾಗದಂತೆ ಹಗುರವಾಗಿವೆ. ಇಲ್ಲಿ ಕುಣಿತವಿರಲಿ
ನಡೆದಾಡುವುದಕ್ಕೂ ಕಷ್ಟವಾಗುತ್ತಿತ್ತು. ಯಾವ ವೇಷ ಪಾತ್ರಕ್ಕೆ ಜೀವ ತುಂಬಬೇಕಿತ್ತೊ, ಅದೇ
ಪಾತ್ರಗಳ ಚಲನಶೀಲತೆಯನ್ನು ನಿಯಂತ್ರಿಸುತ್ತಿತ್ತು.
ನಟರು ಕುಣಿವಾಗ, ಅವರ
ಬಂಧುಗಳೆಲ್ಲ ಆದಷ್ಟೂ ವೇದಿಕೆಯಲ್ಲೆ ಜಾಗಮಾಡಿಕೊಂಡು ನಿಂತಿದ್ದರು. ಅವರೆಲ್ಲ ತಮ್ಮ
ಕಡೆಯವರು ಕುಣಿದು ಸುಸ್ತಾಗಿ ಫೈಬರ್ ಚೇರಿನಲ್ಲಿ ಕುಳಿತೊಡನೆ, ವಿಂಬಲ್ಡನ್ನಿನಲ್ಲಿ
ಟೆನಿಸ್ ಆಟಗಾರರಿಗೆ ಸೇವೆ ಮಾಡುವ ಮೈದಾನದ ಹುಡುಗರಂತೆ, ಮಾಂಜಾ ಸಿಟ್ರಾ ಕುಡಿಸುವುದು,
ಗಾಳಿ ಹಾಕುವುದು, ನಿಂಬೆಹಣ್ಣು ಮೂಗಿಗೆ ಹಿಡಿಯುವುದು, ಎದೆಗೆ ಪಿನ್ನಿನ ನೆರವಿನಿಂದ
ಲಗತ್ತಿಸಿದ ನೋಟುಗಳನ್ನು ಸರಿಮಾಡುವುದು ಮುಂತಾದ ಶೈತ್ಯೋಪಚಾರ ಮಾಡುತ್ತಿದ್ದರು. ಈ
ಶೈತ್ಯೋಪಚಾರಿಗಳ ಸಂಖ್ಯೆ ಪಾತ್ರಧಾರಿಗಳಿಗೆ ಕುಣಿಯಲು ಜಾಗಬಿಡದಷ್ಟು ನಿಬಿಡವಾಗಿತ್ತು.
ಕೀಚಕ-ಭೀಮರಿಗೆ ಯುದ್ಧ ಮಾಡಲು ತೊಂದರೆಯಾದಾಗ, ಯಾರೊ ಒಬ್ಬ ರಸಿಕ-ಮಾಜಿ ಪೈಲವಾನರಂತೆ-
ಕೆರಳಿ, ರಂಗಮಂಚದ ಮೇಲೆ ಜಮಾಯಿಸಿದ್ದ ಸದರಿ ಅಭಿಮಾನಿಗಳನ್ನೆಲ್ಲ ಕೆಳೆಗೆಳೆದು ಹಾಕಿದರು.
ಈಗ ಕೊಂಚ ಯುದ್ಧಕಣಕ್ಕೆ ತುಸು ಎಡೆಯಾಯಿತು.
ನಾಟಕದ ಹಸ್ತಪ್ರತಿ
ಹಿಡಿದುಕೊಂಡಿದ್ದ ಕಾಲೇಜು ತರುಣನೊಬ್ಬ, ಪಾತ್ರಧಾರಿಗಳ ಹಿಂದಿದೆಯೇ ಸುಳಿಯುತ್ತ,
ಡೈಲಾಗಿನ ಮೊದಲ ಪದ ನೆನಪಿಸಿಕೊಡುತ್ತಿದ್ದನು. ಹಾಡಿನ ಅಥವಾ ಸಂಭಾಷಣೆಯ ಸಾಹಿತ್ಯವು
ಪ್ರೇಕ್ಷಕರಿಗೆ ತಿಲಮಾತ್ರವೂ ಕೇಳಿಸದಂತೆ ಮಾಡುವ ವ್ಯವಸ್ಥೆ ಅಲ್ಲಿತ್ತು. ನಾಟಕದ ಕಥೆಯ
ಬಗ್ಗೆ ಪ್ರೇಕ್ಷಕರಲ್ಲಿ ಯಾರಿಗೂ ಆಸಕ್ತಿ ಇದ್ದಂತೆ ತೋರಲಿಲ್ಲ. ನಟನೆಯ ಗುಣಮಟ್ಟದ ಬಗ್ಗೆ
ನಟರಿಗೂ ಕಾಳಜಿಯಿರಲಿಲ್ಲ. ಮೊಳಕಾಲನ್ನು ಗಲ್ಲದವರೆಗೆ ಎತ್ತಿತಂದು, ರಂಗದ ಹಲಗೆಗೆ
ಕಾಲನ್ನು ಜೋರಾಗಿ ಅಪ್ಪಳಿಸುತ್ತ ಎಲೆಲೆಲೆಲೆಲೆಲೆಲೆಲೆಲೆ ಭೀಮಾ, ಎಲೆಲೆಲೆಲೆಲೆ
ದುಶ್ಯಾಸನಾ ಕುರುಕುಲ ಅಪಮಾನಾ.. ಎಂಬುದನ್ನು ಮಾತ್ರ ಚೆನ್ನಾಗಿ ಹೇಳುತ್ತಿದ್ದರು.
ಕೆಲವೊಮ್ಮೆ ಪ್ರೇಕ್ಷಕರೂ ನಿರ್ದೇಶನದ ಕೆಲಸ ಮಾಡುತ್ತಿದ್ದರು. ಭಾಗವತನು ಸರಿಯಾಗಿ
ಪಾತ್ರಧಾರಿಗಳಿಗೆ ನಾಟಕ ಕಲಿಸಿಲ್ಲವೆಂದೂ ಮೂರು ತಿಂಗಳ ಖರ್ಚು ಕೊಟ್ಟಿದ್ದು
ವ್ಯರ್ಥವಾಯಿತೆಂದೂ ಒಬ್ಬ ಪ್ರೇಕ್ಷಕ ಎದ್ದುನಿಂತು ಸಾರ್ವಜನಿಕವಾಗಿ ಆಪಾದಿಸಿದನು.
ಇದೊಂದು ಸಲ ಸುಧಾರಿಸಿಕೊಳ್ಳಬೇಕೆಂದೂ, ಶಾಂತರೀತಿಯಿಂದ ವರ್ತಿಸಬೇಕೆಂದೂ ಭಾಗವತನು
ಪರಿಪರಿಯಾಗಿ ವಿನಂತಿಸಿದನು. ಟಿವಿ ಸೀರಿಯಲ್ಲುಗಳಲ್ಲಿ ಕಥೆ ಕಮ್ಮಿ ಜಾಹಿರಾತು ಜಾಸ್ತಿ
ಇರುವಂತೆ, ಆಟಕ್ಕಿಂತ ಅದರ ಆಜುಬಾಜು ಜರುಗುತ್ತಿದ್ದ ಘಟನೆಗಳೇ ಮುಖ್ಯವಾಗಿದ್ದವು.
ಈ
ಬಯಲಾಟಗಳು ಸೂಕ್ತ ಆಹಾರವಿಲ್ಲದೆ ಬೆಳವಣಿಗೆ ಸ್ಥಗಿತಗೊಂಡಿರುವ ವ್ಯಕ್ತಿಯಂತೆ
ನಿಂತುಬಿಟ್ಟಿವೆ ಅನಿಸಿತು. ಮಾತ್ರವಲ್ಲ, ಕರಾವಳಿಯ ಯಕ್ಷಗಾನಗಳಿಗೆ ಹೋಲಿಸಿದರೆ ಒಂದು
ಶತಮಾನದಷ್ಟು ಹಿಂದುಳಿದಿವೆ ಅನಿಸಿತು. ಯಾವುದೇ ಪರಂಪರೆಯ ಜತೆ ಹೊಸಕಾಲದ ಪ್ರತಿಭೆಗಳು
ಅನುಸಂಧಾನ ಮಾಡಿ ಅದನ್ನು ಸಮಕಾಲೀನಗೊಳಿಸದಿದ್ದರೆ, ಚೈತನ್ಯವೆಲ್ಲ ಸೋರಿಹೋಗಿ, ಬಡಕಲು
ದೇಹಕಂಕಾಲ ಮಾತ್ರ ಉಳಿಯುತ್ತದೆ. ಯಕ್ಷಗಾನಗಳು ಹೊಸ ಪ್ರಯೋಗಗಳನ್ನು ಮಾಡುತ್ತ, ದೇಶವಿದೇಶ
ತಿರುಗುತ್ತ ವೃತ್ತಿಪರತೆ ಮೈಗೂಡಿಸಿಕೊಂಡಿವೆ. ಅಲ್ಲಿ ಕೆಲವು ಮೇಳಗಳಿಗೆ ಈಗ ಬುಕಿಂಗ್
ಮಾಡಿದರೆ, ೧೫ ವರ್ಷದ ತನಕ ಕಾಯಬೇಕೆಂದು ಕೇಳಿರುವೆ. ವ್ಯವಹಾರ ಪ್ರಜ್ಞೆ ಜಾಗೃತವಾಗಿರುವ
ಕರಾವಳಿಯಲ್ಲಿ, ಯಕ್ಷಗಾನ ಒಂದು ‘ಕಲೋದ್ಯಮವೂ ಆಗಿದೆ. ಈ ಬಗೆಯ ಶಿಸ್ತನ್ನು ರೈತಾಪಿಗಳೂ
ಕೂಲಿಕಾರರೂ ಆದ ಜನ, ನಾಟಕದ ಮೇಷ್ಟರನ್ನು ನೇಮಿಸಿಕೊಂಡು, ದುಡಿತದ ನಡುವಿನ ಬಿಡುವಿನಲ್ಲಿ
ತಾಲೀಮುಮಾಡಿ ಹವ್ಯಾಸಿ ನಟರಾಗಿ ಆಡುವ ಈ ಬಯಲಾಟಗಳಲ್ಲಿ ಕಾಣುವುದು ಕಷ್ಟ. ಆದರೆ ಒಂದು
ಕಾಲಕ್ಕೆ ಸಿರಿವಂತವಾಗಿದ್ದ ಈ ಬಯಲಾಟ ಪರಂಪರೆ ಅಳವಿನಂಚಿಗೆ ನಿಂತಂತೆ, ರೈತಾಪಿತನ
ವಾಣಿಜ್ಯಯುಗದ ಭರಾಟೆಯಲ್ಲಿ ಹಿಂದುಳಿದು ಸ್ವಹತ್ಯೆಯ ಹಾದಿ ಹಿಡಿದಿರುವಂತೆ, ಕಾಣುವುದು.
ಅಥವಾ ದುಡಿಮೆಗಾರರ ಬಾಳಿನಲ್ಲಿ ಕಲೆಗಳ ಪಾತ್ರ ಕುರಿತಂತೆ, ನಮ್ಮ ದೃಷ್ಟಿಕೋನದಲ್ಲಿಯೇ
ದೋಷವಿರುವುದರಿಂದ ಅಳಿವು, ಅವನತಿ ಎಂದೆಲ್ಲ ಅನಿಸುತ್ತಿದೆಯೊ? ಕರ್ಣನ ತೊಡೆಯನ್ನು
ಕೊರೆದು ಅವನ ಶಾಪಕ್ಕೂ ಕಾರಣವಾದ ಗುಂಗೆಹುಳದಂತೆ ಪ್ರಶ್ನೆಗಳು ಕೊರೆಯತೊಡಗಿದವು.
ಬಳ್ಳಾರಿ
ಜಿಲ್ಲೆಯ ವೃತ್ತಿರಂಗಭೂಮಿಯು ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡ,
ಡಿ.ದುರ್ಗಾದಾಸ್, ಸುಭದ್ರಮ್ಮ ಮನ್ಸೂರ, ಸಿಡಗಿನಮೆಳೆ ಚಂದ್ರಶೇಖರಯ್ಯ, ಬೆಳಗಲ್ ವೀರಣ್ಣ
ಮುಂತಾದ ಪ್ರತಿಭಾವಂತ ಕಲಾವಿದರ ಕಾರಣದಿಂದ, ಹೆಸರು ಪಡೆದಿದೆ. ಆದರೆ ಬಯಲಾಟಗಳಿಗೂ ಈ
ವೃತ್ತಿರಂಗಭೂಮಿಗೂ ಅರ್ಥಪೂರ್ಣ ಕೊಡುಕೊಳೆ ನಡೆದಂತಿಲ್ಲ. ದುಡಿಮೆಯ ಏಕತಾನತೆ
ಮುರಿಯಲೆಂದು ನಾಟಕಕಲೆಯನ್ನು ಯಾಂತ್ರಿಕವಾಗಿ ಮುಂದುವರೆಸುತ್ತಿರುವ ಹಳ್ಳಿ ಜನರಿಂದ
ವೃತ್ತಿರಂಗಭೂಮಿಯ ಅಥವಾ ರಂಗಾಯಣ ನೀನಾಸಂಗಳ ಕಲಾತ್ಮಕ ಶಿಸ್ತನ್ನು ನಿರೀಕ್ಷಿಸಲಾಗದು,
ನಿಜ. ಆದರೆ ಶಿವರಾಮ ಕಾರಂತರಂತಹ ಆಧುನಿಕ ಪ್ರಜ್ಞೆಯ ಪ್ರಯೋಗಶೀಲ ಕಲಾವಿದನ ಸಹವಾಸ
ಸಿಕ್ಕರೆ, ಇವುಗಳ ದೇಹದಲ್ಲೂ ಹೊಸ ಜೀವ ಆಡಬಹುದು. ಯಾಕೆಂದರೆ, ವೃತ್ತಿರಂಗಭೂಮಿಯ ತಮ್ಮ
ಜ್ಞಾನ ಮತ್ತು ಅನುಭವವನ್ನು ಧಾರೆಹೊಯ್ದು, ನಷ್ಟಾವಸ್ಥೆಯಲ್ಲಿದ್ದ ತೊಗಲುಬೊಂಬೆ ಆಟವನ್ನು
ಜಗತ್ತಿನಾದ್ಯಂತ ಒಯ್ದು ತೋರಿಸುವಂತೆ ಬೆಳೆಸಿದ ಬೆಳಗಲ್ ವೀರಣ್ಣನವರ ನಿದರ್ಶನ,
ಕಣ್ಮುಂದೆಯೇ ಇದೆ. |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ