ಶನಿವಾರ, ಆಗಸ್ಟ್ 3, 2013

ಮೌಖಿಕ ನಿರೂಪಣೆಗಳಿಗೆ ಬೇಕು ಮನ್ನಣೆ

-ಪುರುಷೋತ್ತಮ ಬಿಳಿಮಲೆ

 

 ಸೌಜನ್ಯ: ವಿಜಯ ಕರ್ನಾಟಕ


ಪುರುಷೋತ್ತಮ ಬಿಳಿಮಲೆ: ಮೌಖಿಕ ನಿರೂಪಣೆಗಳಿಗೆ ಬೇಕು ಮನ್ನಣೆ
 
 
 
 
 
 
 
 
 
 
 
 
 
 
    ಜಗತ್ತಿನ ಎಲ್ಲ ದೇಶಗಳಲ್ಲೂ ಜನಪ್ರಿಯವಾದ ಮೌಖಿಕ ನಿರೂಪಣೆಗಳಿವೆ. ಅತ್ಯಾಧುನಿಕ ನಗರವಾದ ಟೋಕಿಯೊದಿಂದ 600 ಕಿ.ಮೀ ದೂರದ ತಾಕೆ ಎಂಬ ಬೆಟ್ಟದ ಬುಡದಲ್ಲಿ ತರುಣನೊಬ್ಬ ಇಡೀ ರಾತ್ರಿ ಕತೆ ಹೇಳಿದ್ದನ್ನು ನಾನು ಕೇಳಿದ್ದೇನೆ. ಆಕರ್ಷಕವಾದ ಹವಾಯಿ ದ್ವೀಪದ ಹದಯಭಾಗದ ಹೊನುಲುಲುವಿನಲ್ಲಿ ಕುಣಿಯತ್ತಾ ಸುದೀರ್ಘವಾದ ಕಥನಗಳನ್ನು ನಿರೂಪಿಸುವವರನ್ನೂ ನಾನು ಕಂಡಿದ್ದೇನೆ. ಆದರೆ, ಯಾವ ದೇಶದಲ್ಲಿಯೂ ಇವು ಲಿಖಿತ ನಿರೂಪಣೆಗಳ ಜತೆಗೆ ಸಮಸ್ಥಾನದಲ್ಲಿ ನಿಂತಿಲ್ಲ. ಆಳುವ ವರ್ಗ ತನ್ನ ಆಳ್ವಿಕೆ ಮತ್ತು ರಾಜಕೀಯ ಧೋರಣೆಗಳಿಗೆ ಅನುಗುಣವಾದ ಲಿಖಿತ ನಿರೂಪಣೆಗಳನ್ನು ತನ್ನದೆಂದು ಹೇಳುತ್ತಾ, ಅವುಗಳನ್ನು ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಚುರಪಡಿಸುತ್ತಾ ಕಾನೂನುಬದ್ಧಗೊಳಿಸುತ್ತವೆ. ಆಳುವ ವರ್ಗದ ಬೆಂಬಲ ಪಡೆದ ನಿರೂಪಣೆಗಳೇ ರಾಷ್ಟ್ರೀಯ ಮನ್ನಣೆ ಪಡೆಯುತ್ತವೆ. ಈ ಕಾಲದಲ್ಲಿ ಅಂಥವುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯೂ ಲಭಿಸುತ್ತದೆ. ಇಂಥ ಸಂದರ್ಭದಲ್ಲಿ ಮೌಖಿಕ ನಿರೂಪಣೆಗಳು ಮೂಲೆಗೆ ತಳ್ಳಲ್ಪಡುತ್ತವೆ. ಅಕ್ಷರ ರಾಜಕೀಯವೂ ಮೌಖಿಕ ಸಾಮಗ್ರಿಗಳನ್ನು ಅಷ್ಟಾಗಿ ಮನ್ನಿಸುವುದಿಲ್ಲ. ಹೀಗಾಗಿ, ಮೌಖಿಕವಾಗಿ ನಿರೂಪಿತವಾಗುವ ಅಭಿಪ್ರಾಯಗಳು, ಪುರಾಣಗಳು, ಐತಿಹ್ಯಗಳು, ಚರಿತ್ರೆಗಳು ಮತ್ತು ಕಲೆಗಳು ಮತ್ತೆ ಮತ್ತೆ ನಿರಾಕರಣೆಗೆ ಒಳಗಾಗುತ್ತಲೇ ಬಂದಿವೆ.

   ಜಗತ್ತಿನ ಎಲ್ಲ ದೇಶಗಳ ಆಳುವ ವರ್ಗಕ್ಕೆ ವರ್ತಮಾನ, ಚರಿತ್ರೆ ಮತ್ತು ಪುರಾಣಗಳ ಬಗ್ಗೆ ತನ್ನದೇ ಆದ ಖಚಿತ ನಿಲುವುಗಳಿರುತ್ತದೆ. ಆ ನಿಲುವುಗಳನ್ನು ಒಮ್ಮೊಮ್ಮೆ ನೇರವಾಗಿ, ಮತ್ತೆ ಕೆಲವು ಬಾರಿ ಪರೋಕ್ಷವಾಗಿ ಇತರರ ಮೇಲೆ ಹೇರಲಾಗುತ್ತದೆ. ಇಂಥ ಹೇರಿಕೆಯ ವಿರುದ್ಧ ಮೌಖಿಕ ನಿರೂಪಣೆಗಳು ಒಂದು ಬಗೆಯ ಜಾಗತ ಸ್ಥಿತಿಯನ್ನು ಸದಾ ಕಾದಿಟ್ಟುಕೊಂಡಿರುತ್ತವೆ. ಆಳುವ ವರ್ಗ ಯಾವುದನ್ನು ಅಕ್ಷರ ಮಾಧ್ಯಮದ ಮೂಲಕ ಮಾನ್ಯ ಮಾಡಲೆತ್ನಿಸುವುದೋ, ಅದನ್ನು ಮೌಖಿಕ ಮಾಧ್ಯಮದ ಮೂಲಕ ಜನರು ವಿಮರ್ಶೆಗೆ ಒಳಪಡಿಸುತ್ತಾರೆ. ಎಷ್ಟೋ ಬಾರಿ ಈ ಎರಡೂ ಪ್ರವತ್ತಿಗಳು ಪರಸ್ಪರ ವಿರೋಧಿ ನೆಲೆಗಳಲ್ಲಿರುತ್ತವೆ. ಒಂದು ಅಕ್ಷರ ರೂಪದಲ್ಲಿರುವುದನ್ನು 'ಶಾಶ್ವತ' ಎಂದೂ, ಇನ್ನೊಂದು ಅನಕ್ಷರ ರೂಪದಲ್ಲಿರುವುದನ್ನು 'ಅಶಾಶ್ವತ' ಎಂದೂ ನಂಬುತ್ತದೆ. ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ, ಇದು ಅಕ್ಷರದ ಪರವಾಗಿರುವಂಥವರ ತರ್ಕ. ಆದರೆ, ಸೂಕ್ಷ್ಮವಾಗಿ ನೋಡಿದರೆ, ಮೌಖಿಕ ರೂಪದಲ್ಲಿರುವಂಥದ್ದು ಅಶಾಶ್ವತ ಏನೂ ಅಲ್ಲ. ಅದು ಕಂಠಸ್ಥ ಪರಂಪರೆಯಲ್ಲಿ ನವೀನಗೊಳ್ಳುತ್ತಾ ಉಳಿಯುತ್ತಿರುತ್ತದೆ. ಜಗತ್ತಿನ ಜಾನಪದ ಉಳಿದದ್ದೇ ಹೀಗೆ. ಅಕ್ಷರದ ಬಂಧನ ಇಲ್ಲದ್ದರಿಂದ ಅದು ಹೆಚ್ಚು ಲವಲವಿಕೆಯಿಂದ ಬೆಳೆಯುತ್ತದೆ. ಬದಲಾಗುತ್ತಿರುವ ಸಮಾಜದೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತಾ, ಸಮಕಾಲೀನವಾಗುತ್ತಾ ಕ್ರಿಯಾಶೀಲವಾಗುತ್ತಿರುತ್ತದೆ.

    ಆದರೆ, ಯಾಕೋ ನಮ್ಮ ಮಾನವಿಕಗಳಲ್ಲಿ ಮೌಖಿಕ ನಿರೂಪಣೆಗಳಿಗೆ ಅಂಥ ಮನ್ನಣೆ ದೊರಕಿಲ್ಲ. ಕಾರಣ, ಮೌಖಿಕ ನಿರೂಪಣೆಗಳು ಸಾಮಾನ್ಯ ಜನರ ಜ್ಞಾನವಾಗಿದ್ದು ಅದಕ್ಕೆ ಅಂಥ ಮನ್ನಣೆ ನೀಡಬೇಕಾಗಿಲ್ಲ ಎಂಬ ಪಾರಂಪರಿಕ ನಿಲುವು. ಇದು ಬಹಳ ಅಪಾಯಕಾರಿಯಾದ ಧೋರಣೆ. ಎಸ್ ಎಲ್ ಭೈರಪ್ಪನವರ 'ಪರ್ವ' ಕಾದಂಬರಿಯನ್ನು ನಾನು 80ರ ದಶಕದಲ್ಲಿ ಸರ್ವ ಶ್ರೇಷ್ಠ ಯಕ್ಷಗಾನ ಕಲಾವಿದರಾದ ಶೇಣಿ ಗೋಪಾಲಕಷ್ಣ ಭಟ್ಟರಿಗೆ ಓದಲು ಕೊಟ್ಟಿದ್ದೆ. ಆರೇಳು ದಿನಗಳಲ್ಲಿ ಅದನ್ನು ಧ್ಯಾನಿಸಿ ಓದಿದ ಅವರು ಪುಸ್ತಕವನ್ನು ಹಿಂದಿರುಗಿಸುವಾಗ ಅವರದೇ ಶೈಲಿಯಲ್ಲಿ ನಗುತ್ತಾ, ''ಅಂಥ ವಿಶೇಷ ಏನೂ ಇಲ್ಲ, ಇದರಲ್ಲಿ ಇರುವುದೆಲ್ಲ ನಾವು 60ರ ದಶಕದಲ್ಲಿ ಹೇಳಿದ ತಾಳಮದ್ದಳೆಯ ಅರ್ಥವೇ ಅಲ್ಲವೇ,'' ಎಂದರು. ಆದರೆ, ನಾವು ಎಸ್ ಎಲ್ ಭೈರಪ್ಪ ಅವರಿಗೆ ನೀಡಿದ ಮನ್ನಣೆ ಏನು ಮತ್ತು ಶೇಣಿಯವರಿಗೆ ನೀಡಿದ ಗೌರವವೇನು ಎಂದು ನಾನು ವಿವರಿಸಬೇಕಾಗಿಲ್ಲ. ಅಂದರೆ, ಮೌಖಿಕ ನಿರೂಪಕರು ಎಷ್ಟೋ ಬಾರಿ ಲಿಖಿತ ಪರಂಪರೆಗಿಂತ ಸಾಕಷ್ಟು ಮುಂದೆ ಇದ್ದರೂ ಅವರಿಗೆ ಸಿಗಬೇಕಾದಂಥ ಮನ್ನಣೆ ಸಿಗುತ್ತಿಲ್ಲ. 
 
   20ನೇ ಶತಮಾನದ ಪ್ರಮುಖ ಚಿಂತನೆಗಳೆಲ್ಲ ತಾಳಮದ್ದಳೆ ಕಲಾವಿದರ ಅರ್ಥಗಾರಿಕೆಯಲ್ಲಿ ಹುದುಗಿದ್ದನ್ನು ನಾನು ಕೇಳಿದ್ದೇನೆ. ಆದರೆ, ಪುಸ್ತಕ ಬರೆದವರಿಗೆ ಸಿಕ್ಕ ಮನ್ನಣೆ ಈ ಕಲಾವಿದರಿಗಿಲ್ಲ. ಹೀಗಾಗಿ, ನಾವು ನಮ್ಮ ಪೂರ್ವಾಗ್ರಹಗಳನ್ನು ಬಿಟ್ಟು ಮೌಖಿಕ ಪರಂಪರೆಯ ನಿರೂಪಣೆಗಳಿಗೆ ಇನ್ನಾದರೂ ಗಂಭೀರವಾಗಿ ಕಿವಿಕೊಡಬೇಕಾಗಿದೆ. ಭಾರತದ ನೈಜ ಸತ್ವ ಅದರ ಕಂಠಸ್ಥ ಪರಂಪರೆಯಲ್ಲಿದೆ. ಇಲ್ಲಿ ಇಂದಿಗೂ ಅಕ್ಷರ ಬಲ್ಲವರು ಅಲ್ಪ ಸಂಖ್ಯಾತರು. ಆದರೆ, ಅಕ್ಷರಕ್ಕೆ ರಾಜಕೀಯ ಶಕ್ತಿಯೂ ಇರುವುದರಿಂದ ಬಹುಸಂಖ್ಯಾಕರ ನಿರೂಪಣೆಗಳು ಹಿಂದೆ ಉಳಿಯಬೇಕಾಯಿತು. ಅವರ ಸಾಂಸ್ಕೃತಿಕ ಮೌಲ್ಯಗಳು ಮತ್ತು ಮೌಖಿಕ ಸಾಮಗ್ರಿಗಳು ಈ ದೇಶದ ಚರಿತ್ರೆಯಲ್ಲಾಗಲೀ, ಸಂಸ್ಕೃತಿಯ ಭಾಷ್ಯದಲ್ಲಾಗಲೀ ಮುಖ್ಯ ಸ್ಥಾನ ಪಡೆಯಲೇ ಇಲ್ಲ.

ಮೌಖಿಕ ನಿರೂಪಣೆಗಳು ಒಂದು ನಿರ್ದಿಷ್ಟ ಸಮುದಾಯದ ಜನರಿಗೆ ತಿಳಿವಳಿಕೆ ನೀಡುತ್ತಾ, ಸಾಂಪ್ರದಾಯಿಕ ಶಿಕ್ಷಣದ ಭಾಗವಾಗಿ ಕಾರ್ಯನಿರ್ವಹಿಸುತ್ತವೆ. ಸಂಸ್ಕೃತಿಯ ಕೇಂದ್ರ ಉದ್ದೇಶಕ್ಕೆ ಅನುಗುಣವಾಗಿ ಜನರನ್ನು ಅವು ತಯಾರು ಮಾಡುತ್ತವೆ. ಉದಾಹರಣೆಗೆ, ಕೋಟಿ-ಚೆನ್ನಯರ ನಿರೂಪಣೆಯು ಸೂಕ್ಷ್ಮವಾಗಿ ಬಿಲ್ಲವ ಸಮುದಾಯದಲ್ಲಿ, ಸ್ಥೂಲವಾಗಿ ಹಿಂದುಳಿದ ವರ್ಗದ ಜನರಲ್ಲಿ ಸ್ವಾಭಿಮಾನ ಮೂಡಿಸುತ್ತದೆ. ಕಾಣದ-ಕಾಟದರು ಮೇರ ಸಮುದಾಯದ ಸ್ವಾಭಿಮಾನಿ ವೀರರು. ಈ ಅರ್ಥದಲ್ಲಿ ಇಂಥ ನಿರೂಪಣೆಗಳು ಸಂಸ್ಕೃತಿ ಪ್ರಸಾರದ ಪ್ರಬಲ ಸಾಧನಗಳೂ ಹೌದು. ಅವು ಜನರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಯಾವುದು ಔಚಿತ್ಯ ಪೂರ್ಣವಾದದ್ದು, ಯಾವುದು ಅನೌಚಿತ್ಯದ್ದು ಎಂಬ ಬಗೆಗೆ ಅರಿವು ಮೂಡಿಸುತ್ತವೆ. ಈ ಅರಿವಿನ ಮೂಲಕ ಪರೋಕ್ಷವಾಗಿ ಅವು ಸಮುದಾಯಗಳ ಒಳಗಿನ ಸಂಘರ್ಷಗಳನ್ನು ನಿವಾರಿಸಲು ಪ್ರಯತ್ನಿಸುತ್ತವೆ.

ಕರಾವಳಿಯಲ್ಲಿ ಜನಪ್ರಿಯವಾಗಿರುವ ಸಿರಿ ಜಾತ್ರೆಯನ್ನು ಗಮನಿಸಬೇಕು. ಅಲ್ಲಿ ಹೆಂಗಸರೆಲ್ಲ ಸಿರಿಯ ಪಾಡ್ದನವನ್ನು ನಿರೂಪಿಸುತ್ತಲೇ ನಿಧಾನವಾಗಿ ಆವೇಶಕ್ಕೊಳಗಾಗುತ್ತಾರೆ. ನಿರೂಪಣೆ ಸಾಗುತ್ತಿದ್ದಂತೆ, ಅವರ ವೈಯಕ್ತಿಕ ಭಿನ್ನತೆಗಳೆಲ್ಲ ಕರಗಿ ಎಲ್ಲ ಒಂದಾಗುತ್ತಾರೆ. ಎಲ್ಲರೂ ಪರಸ್ಪರ ಬಂಧುಗಳೆಂಬಂತೆ ಸಂಬೋಧಿಸಿಕೊಳ್ಳುತ್ತಾರೆ. ಆ ಮೂಲಕ ಒಂದು ಬಗೆಯ ಅನುಭಾವಿಕ ರಕ್ತ ಬಾಂಧವ್ಯವನ್ನು ಸಜಿಸಿಕೊಳ್ಳುತ್ತಾರೆ. ಜತೆಗೆ, ಆವೇಶಕ್ಕೊಳಗಾದ ಹೆಂಗಸರ ಕೌಟುಂಬಿಕ ಯಾತನೆಗಳಿಗೆ ನಿರೂಪಣೆಯ ಭಾಗ ಸಮಸ್ಪಂದಿಯಾದಾಗ, ಹೆಂಗಸರು ತೀವ್ರತರವಾದ ಭಾವಾವೇಶಕ್ಕೆ ಒಳಗಾಗುತ್ತಾರೆ. ನಾನು ಅಂಥ ನಾಲ್ಕು ಜನ ಹೆಂಗಸರನ್ನು ಖಾಸಗಿಯಾಗಿ ಭೇಟಿಯಾಗಿ ಅವರ ಬದುಕಿನ ವಿವರಗಳನ್ನು ಸಂಗ್ರಹಿಸಿದ್ದೆ. ಆ ನಾಲ್ಕು ಜನರಲ್ಲಿ ಒಬ್ಬಳನ್ನು ಅವಳ ಗಂಡ ತ್ಯಜಿಸಿದ್ದಾನೆ, ಇನ್ನೊಬ್ಬಳಿಗೆ ಗಂಡನ ಮನೆಯಲ್ಲಿ ಅತೀವ ಕಾಟ, ಮೂರನೆಯವಳ ಆರೂ ಮಕ್ಕಳು ಹುಟ್ಟುತ್ತಲೇ ಸತ್ತಿದ್ದಾರೆ. ನಾಲ್ಕನೆಯವಳಿಗೆ 34 ವರ್ಷ ತುಂಬಿದರೂ ಮದುವೆಯಾಗಿರಲಿಲ್ಲ. ಇವರುಗಳು ಸಿರಿ ಜಾತ್ರೆಯ ಭಾಗಿಗಳೂ ಹೌದು, ಸಿರಿ ಪಾಡ್ದನದ ಪಾತ್ರಗಳೂ ಹೌದು. 
 
   ಕಾರಣ, ಅವರ ವಾಸ್ತವದ ಬಿಕ್ಕಟ್ಟುಗಳು ಜಾತ್ರೆಯಲ್ಲಿ ತಾತ್ಕಾಲಿಕವಾಗಿ ಪರಿಹಾರ ಹೊಂದುತ್ತದೆ. ಅಸ್ಪೃಶ್ಯನೊಬ್ಬ ಸವರ್ಣೀಯನ ಮೇಲೆ ಸೇಡು ತೀರಿಸಿಕೊಳ್ಳುವ ಘಟನೆ, ಬ್ರಾಹ್ಮಣ ಕನ್ಯೆಯನ್ನು ದಲಿತ ಮದುವೆ ಆಗುವ ಸಂದರ್ಭ, ಜಾತಿಯ ಶ್ರೇಣೀಕರಣದ ಪಾರಂಪರಿಕ ಮೌಲ್ಯಗಳು ತಲೆಕೆಳಗಾಗುವುದು, ಇವೆಲ್ಲ ನಮ್ಮ ಮೌಖಿಕ ನಿರೂಪಣೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂಗತಿಗಳು. ಇವುಗಳನ್ನು ನಾವು ಹೊಸದಾಗಿ ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ, ಈ ನಿರೂಪಣೆಗಳು ಕೇವಲ 'ನಿಶ್ಚಲ ಗತ'ವನ್ನು ಹೇಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲು, ಭೂತ-ವರ್ತಮಾನಗಳ ಚಲನಶೀಲ ಸಂಬಂಧವನ್ನು ಪ್ರತಿನಿಧಿಸುತ್ತವೆ. ಹಾಗಾಗಿ ಕನಿಷ್ಠ ಪಕ್ಷ ನಮ್ಮ ಮಾನವಿಕಗಳಲ್ಲಿ ಮೌಖಿಕ ನಿರೂಪಣೆಗಳಿಗೆ ಸಾಕಷ್ಟು ಅವಕಾಶಗಳಿರಬೇಕು, ಪಠ್ಯಪುಸ್ತಕಗಳಲ್ಲಿ ಇವು ಸೇರ್ಪಡೆಯಾಗಬೇಕು, ಆಗ ಹೊಸ ಲೋಕವೊಂದು ತೆರೆದುಕೊಳ್ಳುತ್ತದೆ.

 

ಕಾಮೆಂಟ್‌ಗಳಿಲ್ಲ: