ದಿನಾಂಕ ೧೭.೦೮.೨೦೧೩ ರಂದು, ಆದಿಮದ ಅಂಗಳದಲ್ಲಿ ರಾತ್ರಿ ೭ ಗಂಟೆಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಜಪಾನಿನ ರ‍್ಯಾನ್ ಬಿಯೋಷಿ ತಂಡದ ಸದಸ್ಯರು ಪ್ರದರ್ಶಿಸಿದ ಡೊಳ್ಳು ಕುಣಿತ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿತು.
ಎಲ್ಲ ದೇಶಗಳ ಜನಪದ ಸಂಸ್ಕೃತಿಯೂ ಪ್ರಕೃತಿಯೊಂದಿಗೆ ಮಿಳಿತವಾಗಿದ್ದದ್ದು ಎಂಬುದನ್ನು ಈ ಪ್ರದರ್ಶನ ನೆರೆದಿದ್ದವರಲ್ಲಿ ಮೂಡಿಸಿತು. ತಂಡದ ಸದಸ್ಯರ ತಲ್ಲೀನತೆ ಮತ್ತು ತೊಡಗಿಸಿಕೊಳ್ಳುವಿಕೆ ಜನಪದ ಕಲಾಸಕ್ತರಿಗೆ ಹಾಗು ಕಲಿಕಾಸಕ್ತರಿಗೆ ಮಾದರಿಯಂತಿತ್ತು.
ಇದಕ್ಕೂ ಮುಂಚೆ ಆದಿಮದ ’ಆಜೀವಕ’ ಗುರುಕುಲ ತಂಡದವರು ಡೊಳ್ಳು ಕುಣಿತವನ್ನು ಮತ್ತು ಕೋಳಿಪಂದ್ಯ ನೃತ್ಯ ಪ್ರದರ್ಶಿಸಿ ಜಪಾನಿಯರ ತಂಡದವರಿಗೆ ನಮ್ಮ ನೆಲದ ಜನಪದ ಕಲೆಯನ್ನು ಪರಿಚಯಿಸಿದರು. ’ಆಜೀವಕ’ ಗುರುಕುಲ ತಂಡದ ನಾರಾಯಣಸ್ವಾಮಿಯ ಹಾಡುಗಾರಿಕೆ ಜಪಾನಿಯರನ್ನು ಒಳಗೊಂಡಂತೆ ನೆರೆದಿದ್ದವರೆಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಜಪಾನ್ ತಂಡದ ದುಬಾಷಿಯಾದ ಉಪನ್ಯಾಸಕಿ ’ಮಿಚಿಯೋ ಯೋಷಿಡಾ’ ಕಾರ್ಯಕ್ರಮದ ಕುರಿತು ಮಾತನಾಡುತ್ತಾ ’ತಮ್ಮ ತಂಡವು ಕರ್ನಾಟಕದಲ್ಲಿ ನೀಡಿರುವ ಎಲ್ಲಾ ಪ್ರದರ್ಶನಗಳಿಗಿಂತಲೂ ಇಂದಿನ ಪ್ರದರ್ಶನ ಅತ್ಯುತ್ತಮವಾದದ್ದು, ಅದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆಗಳು’ ಎಂದು ಹೇಳಿದರು.
ದೇಶದ ವಿವಿಧ ಸಂಘ ಸಂಸ್ಥೆಗಳಲ್ಲಿ ಮಕ್ಕಳ ಶಿಕ್ಷಣದ ಕುರಿತು ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನ ಅನುಪಮರವರು ಕಾರ್ಯಕ್ರಮವನ್ನು ಉತ್ತಮವಾಗಿ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಜಪಾನ್ ದೇಶದ ರ‍್ಯಾನ್‌ಬಿಯೋಷಿ ತಂಡದವರಿಗೆ ’ಆಜೀವಕ’ ಗುರುಕುಲ, ಆದಿಮದಿಂದ ಡೊಳ್ಳು ಕಾಣಿಕೆ ನೀಡುವ ಮೂಲಕ ಕಾರ್ಯಕ್ರಮವು ’ಜಪಾನ್ - ಆದಿಮ’ ನೆಲ ಸಂಸ್ಕೃತಿಯ ಸಮಾಗಮವಾದಂತಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ