ಗುರುವಾರ, ಆಗಸ್ಟ್ 15, 2013

ಮಳೆಯ ಮೊಳಕೆ ಅಣಬೆ

-ಅರುಣ್ ಜೋಳದಕೂಡ್ಲಿಗಿ

ಸಾಮಾನ್ಯವಾಗಿ ಜುಲೈ-ಆಗಸ್ಟ್ ತಿಂಗಳಲ್ಲಿ ಸಹಜವಾಗಿ ಬೆಳೆಯುವ ಒಂದು ನೈಸಗರ್ಿಕ ಫಲ ಈ ಅಣಬೆ. ಹೊಲದ ಬದುವುಗಳಲ್ಲಿ, ಬೆಟ್ಟಗುಡ್ಡಗಳ ಬಯಲಲ್ಲಿ, ನೆಲದಲ್ಲಿ ಮಲ್ಲಿಗೆ ಚೆಲ್ಲಿದಂತಹ ಪುಟಾಣಿ ಗುಂಪೊಂದು ಕಾಣುತ್ತದೆ, ಯಾರೋ ಮಲ್ಲಿಗೆ ಹೂ ಚೆಲ್ಲಿದ್ದಾರೆಂದು ಆ ಗುಂಪಿನ ಹತ್ತಿರ ಹೋದಾಗಲೇ ತಿಳಿಯುವುದು ಅದು ಅಣಬೆ ಎನ್ನುವುದು. ಅಣಬೆ ನೈಸಗರ್ಿಕವಾಗಿ ವಾತಾವರಣದ ಬದಲಾವಣೆಯ ಕಾರಣಕ್ಕೆ ಮಳೆ ಬಿದ್ದ ನಂತರ ಗುಡುಗಿನ ಅಬ್ಬರಕ್ಕೆ ತಾನಾಗಿಯೇ ಹುಟ್ಟುತ್ತದೆ.
ಅಣಬೆ ಬೇಟೆ
ಅಚ್ಚರಿಯಾಗಬಹುದು ಈಗಲೂ ನಮ್ಮ ಭಾಗದಲ್ಲಿ ಅಣಬೆ ಎಂದರೆ ಮಾಂಸಾಹಾರ ಎನ್ನುವ ನಂಬಿಕೆ ಇದೆ. ಹಾಗಾಗಿ ಮಾಂಸಾಹಾರ ಸೇವನೆ ಮಾಡುವ ಕೆಳಜಾತಿಗಳು ಮಾತ್ರ ಅಣಬೆಯನ್ನು ಆಹಾರವಾಗಿ ಬಳಸುತ್ತಾರೆ. ಮೇಲು ಜಾತಿಗಳವರಿಗೆ ಅಣಬೆ ಸಿಕ್ಕರೆ ಅವರಿಗೆ ಆಪ್ತರಿರುವ ಕೆಳಜಾತಿಗಳ ಕುಟುಂಬಗಳಿಗೆ ಕೊಡುತ್ತಾರೆ. ಅರೆ ! ಅಪ್ಪಟ ಸಸ್ಯಹಾರಕ್ಕೆ ಮಾಂಸಾಹಾರ ಎನ್ನುವ ನಂಬಿಕೆಯಾದರೂ ಯಾಕೆ ಹುಟ್ಟಿರಬಹುದು ಎನ್ನುವ ಸಹಜ ಕುತೂಹಲದಿಂದ ಜನರನ್ನು ಕೇಳಿದಾಗ ಕುತೂಹಲಕಾರಿ ಸಂಗತಿಯೊಂದು ಹೊರಬಿತ್ತು.
ಅದೇನೆಂದರೆ ಕೆಲವು ಕೆಳಜಾತಿಗಳು ಓಣಿಯೊಂದರಲ್ಲಿ ನಾಲ್ಕಾರು ಜನ ಸೇರಿ ಒನ್ರೋ ಅಣಬೆ ಬೇಟೆಗೆ ಹೋಗೋಣ ಅಂದರಂತೆ. ಈ ಮಾತು ಕೇಳಿಸಿಕೊಂಡ ಮಾಂಸಾಹಾರ ಸೇವಿಸದ ಸಮುದಾಯಗಳು `ಅರೆ ಅಣಬೆ ಬೇಟೆ ಅನ್ನಿಸಿಕೊಳ್ಳುತ್ತದೆ, ಬೇಟೆ ಎನ್ನಿಸಿಕೊಂಡರೆ ಅದು ಮಾಂಸಾಹಾರವಾಗುತ್ತದೆ’ ಎನ್ನುವುದು ಅವರ ಮನದಲ್ಲಿ ಬಂತಂತೆ. ಅಂದಿನಿಂದ ಸಸ್ಯಾಹಾರವನ್ನು ಸೇವಿಸುವ ಸಮುದಾಯಗಳು ಅಣಬೆಯನ್ನು ಸೇವಿಸುವುದಿಲ್ಲ ಎನ್ನುವ ಕಥೆಯೊಂದಿದೆ. ಇಂತಹ ಪೌಷ್ಟಿಕಾಂಶವಿರುವ ಆಹಾರವನ್ನು ಮೇಲು ಜಾತಿಗಳು ತಿನ್ನದಂತೆ ಕತೆ ಕಟ್ಟಿರುವ ಕೆಳಜಾತಿಯ ಮಂದಿ ಚಾಲಾಕಿಗಳೇ ಇರಬೇಕು. ವೈಜಾನಿಕವಾಗಿ ನೋಡುವುದಾದರೆ, ಅಣಬೆ ಸಸ್ಯಹಾರಿಯಾದರೂ ಅದು ಶಿಲಿಂಧ್ರವಾಹಕವಾಗಿರುದರಿಂದ ಶಾಖಹಾರಿಗಳು ಇದನ್ನು ಸೇವಿಸದಿರುವ ಸಾದ್ಯತೆ ಇದೆ.

ಅಣಬೆ ನಂಬಿಕೆ
ಅಣಬೆಯೂ ಕೆಲವು ನಂಬಿಕೆಗಳನ್ನು ಹುಟ್ಟಿಸಿದೆ. ವರ್ಷಕ್ಕೆ ಒಂದು ಬಾರಿಯಾದರೂ ಅಣಬೆ ತಿನ್ನಬೇಕು ಎನ್ನುವ ಲೋಕ ರೂಢಿ ಹಳ್ಳಿಗಳಲ್ಲಿದೆ. ಒಂದು ಗುಂಪು ಅಣಬೆ ಕಾಣಿಸಿಕೊಂಡರೆ ಅದು ಸುತ್ತಮುತ್ತಲ ಮೂರು ಗುಂಪುಗಳನ್ನು ಹೊಂದಿರುತ್ತದೆ. ಎನ್ನುವ ನಂಬಿಕೆ ಇದೆ. ಕಾರಣ ಅಣಬೆ ಒಂಟಿಯಲ್ಲ ಎನ್ನುವುದು ಜನರ ನಂಬಿಕೆ. ಹಾಗಾಗಿ ಕೆಲವು ಕೂಡು ಕುಟುಂಬಗಳಿಗೆ ಅಣಬೆ ಮನೆ ಎನ್ನುವುದೂ ಇದೆ. ಆಗ ಒಂದು ಗುಂಪು ಕಾಣಿಸಿಕೊಳ್ಳುತ್ತಲೂ ಮತ್ತೆರಡು ಕಡೆ ಇರುವುದನ್ನು ಶೋಧಿಸುತ್ತಾರೆ.

ಅಣಬೆಯನ್ನು ಕೀಳುವಾಗ ಕುಳಿತು ಕೀಳಬಾರದು, ಕುಳಿತು ಕಿತ್ತರೆ ಮರು ವರ್ಷ ಮತ್ತೆ ಈ ಜಾಗದಲ್ಲಿ ಅಣಬೆ ಹುಟ್ಟುವುದಿಲ್ಲ ಎನ್ನುವುದು ನಂಬಿಕೆ. ಅಂತೆಯೇ ಒಂದು ಜಾಗದಲ್ಲಿ ಅಣಬೆ ಇದ್ದರೆ ಅದೇ ಜಾಗದಲ್ಲಿ ಮರು ವರ್ಷವೂ ಅಣಬೆ ಏಳುತ್ತವೆ ಎಂದು ಜನ ನಂಬುತ್ತಾರೆ. ಹಳ್ಳಿಗಳಲ್ಲಿ ಮೊಗ್ಗಿನಂತಿರುವ ಮಿಡಿ ಅಣಬೆಗೆ ಕಾಮೋತ್ತೇಜಕ ಗುಣವಿದೆ ಎನ್ನುವುದಿದೆ.
ಅಣಬೆ ಸಾರು
ಅಣಬೆ ಸಾರಿಗೆ ತನ್ನದೇ ಆದ ವಿಶಿಷ್ಟವಾದ ರುಚಿಯೊಂದಿರುತ್ತದೆ. `ಸಾರು ಅಂದ್ರೆ ಅಣಬೆ ಸಾರು’ ಎನ್ನುವ ನುಡಿಗಟ್ಟೊಂದು ಜನಪದರಲ್ಲಿ ಬಳಕೆಯಲ್ಲಿದೆ. ಅಣಬೆ ಸಾರಿಗೆ ಉಳಿ ಮುಂದು ಮಾಡಿ, ಒಂದಷ್ಟು ಜೋಳದ ಹಿಟ್ಟು ಕಲಸಿ ಹಾಕಿದರೆ ಅದರ ರುಚಿಯನ್ನು ಹಿಡಿಯಬಹುದು ಎನ್ನುವುದು ಅನುಭವಿಗಳ ಮಾತು. ಹಾಗಾಗಿ ಅಣಬೆ ಸಾರಿನ ರುಚಿಯನ್ನು ಪದಗಳಲ್ಲಿ ಹಿಡಿದು ರುಚಿ ತೋರಿಸುವಷ್ಟು ಸುಲಭವಲ್ಲ. ಸಾರಿನಲ್ಲಿ ಸಿಗುವ ಅಣಬೆಯನ್ನು ತಿನ್ನುವಾಗ ಒಂದು ರೀತಿಯ ಮೋಜಿರುತ್ತದೆ. ಕಾರಣ ಅಣಬೆ ಸಾರಿನಲ್ಲಿ ಕೈಗೆ ಸಿಗದಂತೆ ಜಾರುತ್ತದೆ. ಅಷ್ಟು ನಯವಾಗಿರುತ್ತದೆ. ಈ ನಯವಾದ ಅಣಬೆಯನ್ನು ಬಾಯಿಗೆ ಹಾಕಿಕೊಂಡಾಗ ಚಂಗನೆ ಜಿಗಿಯುವ ಪ್ರಸಂಗಗಳೂ ನಡೆಯುತ್ತವೆ. ಆಗ ಅಣಬೆ ಅತಿ ನಾಜೂಕಿನದು ಎನ್ನಿಸದೆ ಇರುವುದಿಲ್ಲ.

ಸಾಮಾನ್ಯವಾಗಿ ದನ, ಆಡು, ಕುರಿ ಕಾಯುವವರಿಗೆ, ಕಟ್ಟಿಗೆ ತರಲೆಂದು ಕಾಡಿಗೆ ಹೋದವರಿಗೆ, ಹೊಲಗಳಿಗೆ ಕೆಲಸಕ್ಕೆ ಹೋದವರಿಗೆ ಅಣಬೆ ಹೆಚ್ಚು ಕಾಣಿಸಿಕೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ಕಾಡಿನಲ್ಲಿ ತೊಳೆದುಕೊಂಡು ಹಸಿ ಹಣಬೆಯನ್ನೇ ಬ್ರೆಡ್ಡಿನಂತೆ ತಿನ್ನುತ್ತಾರೆ. ಇನ್ನು ಕೆಲವರು ಬೆಳಗಿನ ಜಾವ ಎದ್ದು ಅಣಬೆಯನ್ನು ಹುಡುಕಿಕೊಂಡೇ ಒಂದು ಗುಂಪು ಹೊಲ ಬದುವು, ಕಾಡು ಮೇಡು ಸುತ್ತುವುದಿದೆ. ಹೀಗೆ ಸುತ್ತಿ ಸುತ್ತಿ ಅಣಬೆ ಹುಡುಕುವ ಕಾರಣಕ್ಕೂ ಅಣಬೆ ಬೇಟೆ ಎನ್ನುವ ನುಡಿಗಟ್ಟು ಹುಟ್ಟಿರುವ ಸಾದ್ಯತೆಯೂ ಇದೆ.

ಈಗೀಗ ಹಣಬೆ ಸುಗ್ಗಿಯಲ್ಲಿ ಹಣಬೆಗಳನ್ನು ಸಂಗ್ರಹಿಸಿ ಪೇಟೆಗೆ ಹೋಗಿ ಮಾರುವುದೂ ಇದೆ. ಹೀಗೆ ಮಾರುವವರು ಆಯಾ ಭಾಗದಲ್ಲಿ ಬೇರೆ ಬೇರೆ ಬೆಲೆಗಳಲ್ಲಿ ಮಾರುತ್ತಾರೆ. ನಮ್ಮ ಕೂಡ್ಲಿಗಿ ಭಾಗದಲ್ಲಿ ಒಂದು ಗುಂಪಿನ ಹಣಬೆಗೆ ನೂರರಿಂದ ಇನ್ನೂರು ರೂಗಳವರೆಗೆ ಬೆಲೆ ಇರುತ್ತದೆ. ನಗರದಲ್ಲಿ ಮಾರಲು ಹೋದಾಗ ಗಬದಾಡಿ ಕೊಳ್ಳುತ್ತಾರೆ ಎನ್ನುವುದು ಅಣಬೆ ಮಾರುವವರ ಅಂಬೋಣ. ಅಣಬೆ ಅರಳಿದ್ದರೆ ಕಡಿಮೆ ಹಣಕ್ಕೆ ಕೊಳ್ಳುತ್ತಾರೆ, ಅಣಬೆ ಮಿಡಿಯಾಗಿದ್ದರೆ ಹೆಚ್ಚು ಬೆಲೆಕೊಟ್ಟು ಕೊಳ್ಳುವುದಿದೆ.
ಅಣಬೆಯನ್ನು ಗೆದ್ದಲು ಹುಳುಗಳು ಸಾಕುತ್ತವೆ ಎನ್ನುವ ಪ್ರತೀತಿಯೂ ಇದೆ. ಕೆಲವು ಜಾತಿಯ ಕೀಟಗಳು ಅಣಬೆಯನ್ನು ತಿಂದರೆ ಸಂತಾನೋತ್ಪತ್ತಿಯಾಗುತ್ತದೆ ಎಂದೂ ಕೀಟ ತಜ್ಞರು ಹೇಳುತ್ತಾರೆ. ಮಲೆನಾಡಿನಲ್ಲಿ 550 ಕ್ಕೂ ಹೆಚ್ಚಿನ ವಿಧದ ಹಣಬೆಗಳಿರುವ ಬಗ್ಗೆ ಮಾಹಿತಿ ಇದೆ.

ಅಣಬೆ ಔಷಧಿ
ಅಣಬೆ ಶಿಲಿಂಧ್ರ ಜಾತಿಗೆ ಸೇರಿದ ಸಸ್ಯ. ಹಾಗಾಗಿ ದೇಹಕ್ಕೆ ಅಗತ್ಯವಿರುವ ಪ್ರೋಟಿನ್, ವಿಟಮಿನ್ ,ಮಿನರಲ್, ಅಮಿನೋ ಆಸಿಡ್ ಎಂಬ ಅಂಶವಿರುವ ಕಾರಣ ರೋಗ ನಿರೋಧಕ ಶಕ್ತಿ ಹೊಂದಲು   ಸಹಕರಿಸುವ ಪೂರಕವಾದ ಆಹಾರವಾಗಿದೆ. ಜನಪದ ವೈಧ್ಯದಲ್ಲಿ ಹಲವಾರು ಖಾಯಲೆಗಳಿಗೆ ಔಷಧಿಯಾಗಿ ಬಳಸುವುದೂ ಇದೆ. 

ಆಯುರ್ವೇದ ಗ್ರಂಥಗಳಲ್ಲಿ ಅಣಬೆಯನ್ನು ಸಸ್ಯಗಳ ರಾಜನೆಂದೂ, ಮಗುವಿನಿಂದ ಮುಪ್ಪಿನವರೆಗೆ ಮಾನಸಿಕ, ದೈಹಿಕ, ಶಾರೀರಿಕವಲ್ಲದೇ ಅಧ್ಯಾತ್ಮಿಕವಾಗಿಯೂ ಸಮತೋಲನ ಆಹಾರವಾಗಿತ್ತು ಎಂಬ ಉಲ್ಲೇಖಗಳಿವೆ. ಅಣಬೆ ಬಗ್ಗೆ ಭಾರತಕ್ಕಿಂತ ಚೈನಾದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆದ ಬಗ್ಗೆ ವಿವರಗಳಿವೆ. ಅಲ್ಲಿನ ಪಂಡಿತರು ಆಯುರ್ವೇದ ತಜ್ಞರು ಅನೇಕ ವಿಧದ ಪ್ರಯೋಗಗಳನ್ನು ನಡೆಸಿದ್ದಾರೆ. ಔಷಧ ಸಂಯೋಜಕರು ಪ್ರಯೋಗ ಮಾಡಿ ಅಣಬೆಯ ಔಷಧೀಯ ಗುಣಗಳನ್ನು ಗುರುತಿಸಿದ್ದಾರೆ.

ಸಸ್ಯಶಾಸ್ತ್ರದ ಪ್ರಕಾರ ಗ್ಯಾನೋಡರ್ಮ (ಅಣಬೆ) ವಾತ ಪಿತ್ತ ಕಫ ಶಮನಕಾರಿಯಾಗಿದೆ. ಅಣಬೆಯ ಬೇರು, ಕಾಂಡ, ತೊಗಟೆಗಳನ್ನು ಸಂಸ್ಕರಿಸಿ ಅವುಗಳ ಜೊತೆೆ ಆಯುವರ್ೇದಿಕ್ ಸಸ್ಯಗಳಾದ ತಾಳರಸ, ಪುದಿನಾ, ಪಾಚಿಗಳ ಸೇರಿಸಿ ಮಾತ್ರೆ, ಚಹಾ, ಪೇಸ್ಟ್, ಸೋಪು, ಜ್ಯೂಸ್ ಶ್ಯಾಂಪು ಮಸಾಜ್ ಎಣ್ಣೆಗಳಾಗಿ ವಿಂಗಡಿಸಿ ಉಪಯೋಗಿಸುವುದು ಚೈನಾ ಜಪಾನ್ ಮೊದಲಾದ ದೇಶದಲ್ಲಿದೆಯಂತೆ.

ಅಣಬೆ ಕಾಣೆಯಾಗುತ್ತಿವೆ
ಈಚೆಗೆ ಅಣಬೆಗಳು ಮೊದಲಿನಷ್ಟು ಸಿಗುವುದಿಲ್ಲ ಎನ್ನುವುದು ಹಳ್ಳಿಗರ ಕೊರಗು. ಕಾರಣ ಅಣಬೆಗೆ ಮಳೆಯೊಂದೇ ಅಲ್ಲ, ವಾತಾವರಣವೂ ತಂಪಾಗಿರಬೇಕಾಗುತ್ತದೆ, ನೆಲವೂ ಮಿದುವಾಗಿರಬೇಕು. ಅಲ್ಲದೆ ಹೊಲಗಳಿಗೆ ರಾಸಾಯಿನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಬಳಸುವುದರಿಂದ ಹೊಲಗಳಲ್ಲಿ ನೈಸಗರ್ಿಕವಾಗಿ ಬೆಳೆವ ಕ್ರಿಯೆ ನಾಶವಾಗಿರುತ್ತದೆ ಎಂದು ಕೃಷಿ ತಜ್ಞರು ಹೇಳುತ್ತಾರೆ. ಹಾಗಾಗಿ ಸಾಗುವಳಿ ಹೊಲ ಮತ್ತು ಹೊಲದ ಬದುವುಗಳಲ್ಲಿ ಅಣಬೆ ಏಳುವ ಪ್ರಮಾಣ ತುಂಬಾ ಕಡಿಮೆಯಾಗಿದೆ. ಇನ್ನು ಕಾಡಿನ ಪ್ರಮಾಣವೂ ಕಡಿಮೆಯಾಗಿರುವುದರಿಂದ ಅಣಬೆ ಏಳುವುದು ಕಡಿಮೆಯೇ. ಹತ್ತು ವರ್ಷದ ಹಿಂದೆ ಏಳುತ್ತಿದ್ದ ಅಣಬೆಗಳ ಪ್ರಮಾಣಕ್ಕೂ ಈಗ ಏಳುವ ಪ್ರಮಾಣಕ್ಕೂ ಗಣನೀಯ ಬದಲಾವಣೆಯಾಗಿದೆ. ಇದು ವಾತಾವರಣದಲ್ಲಿ ಹೆಚ್ಚುತ್ತಿರುವ ಶಾಖದ ಪ್ರಮಾಣವನ್ನು ಗ್ರಹಿಸಲೂ, ಪರಿಸರದಲ್ಲಿ ಆಗಿರುವ ಬದಲಾವಣೆಯನ್ನು ತಿಳಿಯುವ ಸೂಚಕವೂ ಹೌದು.

ಅಣಬೆ ಬೇಸಾಯ
ಅಣಬೆಯನ್ನು ಕೃತಕವಾಗಿ ಬೆಳೆಯಬಹುದು ಎಂಬ ಶೋಧ ಆರಂಭವಾಗಿ ಎರಡು ದಶಕಗಳೇ ಕಳೆದಿವೆ. ಆದರೆ ಇದು ಗ್ರಾಮೀಣ ಭಾಗದ ರೈತರನ್ನು ಅಷ್ಟಾಗಿ ತಲುಪಿದಂತಿಲ್ಲ. ಸಾಮಾನ್ಯವಾಗಿ ಆಧುನಿಕ ಕೃಷಿಕರು, ಕೃಷಿ ವಿವಿಗಳಲ್ಲಿ ಕಲಿತವರು ನಗರ ಪ್ರದೇಶಗಳಲ್ಲಿ ಈ ಬೇಸಾಯದ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇಂತಹ ಕೃತಕ ಅಣಬೆಗೆ ದೊಡ್ಡ ಬೇಡಿಕೆಯೂ ಇದೆ. ಇನ್ನು ಸಸ್ಯಹಾರಿಗಳು ಮಾಂಸಹಾರದ ರುಚಿಯನ್ನು ಈ ಮಶ್ರೂಮ್ ಮಸಾಲಾ, ಮಶ್ರೂಮ್ ಮಂಚುರಿ, ಮಶ್ರೂಮ್ ಬಿರಿಯಾನಿ ತಿನ್ನುವುದರ ಮೂಲಕ ತೀರಿಸಿಕೊಳ್ಳುತ್ತಾರೆ ಎನ್ನುವುದು ಮಾಂಸಹಾರಿಗಳ ಲೇವಡಿ.

ಅಣಬೆ ನೆನಪು
ನನ್ನ ಹೈಸ್ಕೂಲ್ ದಿನಗಳಲ್ಲಿ ಸ್ಕೂಲ್ಗೆ ರಜೆ ಸಿಕ್ಕಾಗಲೆಲ್ಲಾ ಮತ್ತು ಶನಿವಾರ, ಭಾನುವಾರ ನಮ್ಮ ಎಂಟತ್ತು ಆಡುಗಳನ್ನು ಕಾಯಲೆಂದು ಅಡವಿ ಹೊಲ ಗದ್ದೆಗಳಿಗೆ ಹೋಗುತ್ತಿದ್ದೆ. ಆಗೆಲ್ಲಾ ಅಣಬೆ ಸಿಕ್ಕಾಗ ಅದನ್ನು ತೊಳೆದುಕೊಂಡು ಹಸಿ ಹಣಬೆಯನ್ನು ತಿನ್ನುತ್ತಿದ್ದೆವು. ಹೀಗೆ ಹಣಬೆ ಸಿಕ್ಕಾಗ ಆಡು ಕಾಯುವ ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಿದ್ದೆವು. ಹಂಚಿಕೆಯಲ್ಲಿ ಮೋಸವಾದಾಗ ಜಗಳವಾಗುವುದೂ ಇತ್ತು. ಆಗ ಅಣಬೆ ಹೆಚ್ಚೆಚ್ಚು ಸಿಕ್ಕರೆ ಟವಲ್ಲಿನಲ್ಲಿ ಕಟ್ಟಿಕೊಂಡು ಮನೆಗೆ ತರುತ್ತಿದ್ದೆವು.

ಬಾಲ್ಯದಲ್ಲಿ ಅತಿಹೆಚ್ಚು ಅಣಬೆ ತಿನ್ನಲು ನನಗೆ ಸಾದ್ಯವಾಯಿತು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅವ್ವ ಅಂಗನವಾಡಿ ಟೀಚರ್ ಆಗಿದ್ದರಿಂದ ಊರಿನ ಮೇಲು ಜಾತಿಯ ಯಾರಿಗೇ ಅಣಬೆ ಸಿಕ್ಕರೂ ನಮ್ಮ ಮನೆಗೆ ತಂದು ಕೊಡುತ್ತಿದ್ದರು. ಅದಕ್ಕೆ ಪಯರ್ಾಯವಾಗಿ ಅವ್ವ ಸೋಯಾಬೀನ್ ಹಿಟ್ಟು, ಒಂದಷ್ಟು ಬೆಲ್ಲ, ಚೂರು ಎಣ್ಣೆ, ಕಡಲೆ ಕಾಳು ಇಂತಹವುಗಳನ್ನು ಅಣಬೆ ಕೊಟ್ಟವರಿಗೆ ಕೊಡುತ್ತಿತ್ತು. ಈ ಕಾರಣ ಯಾರೇ ಅಣಬೆ ಸಿಕ್ಕರೂ ನಮ್ಮ ಮನೆಗೆ ತಂದು ಕೊಡುತ್ತಿದ್ದರು. ಹಾಗಾಗಿ ಅಣಬೆ ಸುಗ್ಗಿ ಮುಗಿವ ಹೊತ್ತಿಗೆ ಕನಿಷ್ಟ ಇಪ್ಪತ್ತು ಬಾರಿಯಾದರೂ ಅಣಬೆ ಸಾರು ಉಣ್ಣುವ ಭಾಗ್ಯ ಸಿಗುತ್ತಿತ್ತು. ಹಾಗಾಗಿ ಹಣಬೆ ಜತೆಗಿನ ನಂಟು ಒಂದಷ್ಟು ಗಟ್ಟಿಯಾದ್ದೂ ಕೂಡ ಆ ಸಮಯದಲ್ಲೆ.

ಈಗಲೂ ಬೆಳಗಿನ ವಾಕ್ ಹೋಗುವಾಗ ಅಣಬೆಗಾಗಿ ಕಣ್ಣುಗಳು ಹುಡುಕಾಡುತ್ತವೆ, ಆದರೆ ಮಲ್ಲಿಗೆ ಹೂ ಚೆಲ್ಲಿದಂತಹ ಗುಂಪು ಅಣಬೆ ಸದ್ಯಕ್ಕಂತೂ ಸಿಕ್ಕಿಲ್ಲ. ಇದು ಅಣಬೆ ಏಳುವ ಸಮಯ, ನೀವೂ ಅಣಬೆಗಾಗಿ ಹುಡುಕಾಡಿ, ಅಣಬೆ ಸಾಂಬರ್ ರುಚಿ ಹೇಳಿ.

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

"ಅಣಬೆ ಶಿಲಿಂಧ್ರ ಜಾತಿಗೆ ಸೇರಿದ ಸಸ್ಯ."

ಅವಾರ್ಡ್ ಕೊಡಬೇಕು ನಿಮ್ಮ ಈ ಹೇಳಿಕೆಗೆ!

ಅಣಬೆಯನ್ನೇ ಆಗಲೀ, ಇನ್ಯಾವ ಶಿಲೀಂಧ್ರವನ್ನೇ ಆಗಲೀ, ಸಸ್ಯವೆಂದು ವಿಭಾಗಿಸಲು ಬರುವುದಿಲ್ಲ. ಸಸ್ಯಗಳು ತಮ್ಮ ಆಹಾರವನ್ನು ತಾವೇ (ದ್ಯುತಿ ಸಂಶ್ಲೇಷಣೆಯ ಮುಖಾಂತರ) ತಯಾರಿಸಿಕೊಳ್ಳುತ್ತವೆ. ಶಿಲೀಂಧ್ರಗಳಾದರೋ ಕೊಳೆಯುತ್ತಿರುವ ಜೀವರಾಶಿಯಿಂದ ಆಹಾರ ಹೀರುವ ಪರಾವಲಂಬಿಗಳು. ಶಾಲೆಯಲ್ಲಿ ಕಲಿತಿದ್ದು ಮರೆತುಹೋಯಿತೇ?

Ragu Kattinakere ಹೇಳಿದರು...

ದಿನಬಳಕೆಯಲ್ಲಿ ಅಣಬೆ ಸಸ್ಯವೇ. ವೈಜ್ನಾನಿಕವಾಗಿ ಅದು ಏನೆಂದು ಹೆಳಲು ಸಾಧ್ಯವಿಲ್ಲ ಅವಶ್ಯಕತೆಯೂ ಇಲ್ಲ. ಅಣಬೆಯನ್ನು ತರಕಾರಿಯಾಗಿ ಜನ ಬಳಸುತ್ತಾರೆ. ಇದು ಕೆಲವೊಮ್ಮೆ ವಿಷಕಾರಿಯಾಗಬಹುದಾದ್ದರಿಂದ ಕೆಲವು ಜಾತಿಗಳಲ್ಲಿ ನಿಷಿದ್ಧ ಅಷ್ಟೆ. ಜನಮನದಲ್ಲಿ ಅಣಬೆ ಸಸ್ಯ. ನಾವು ಮಾಡುವ ಅಧ್ಯಯನವನ್ನು ಜನರಮೇಲೆ ಹೇರಬಾರದು. ಹಾಗೆ ಮಾಡಿದರೆ ನೀರಿಗೆ ಎಚ್ ಟು ಓ ಎಂದಹಾಗಗುತ್ತದೆ ಅಷ್ಟೆ.