ಭಾನುವಾರ, ಜೂನ್ 11, 2017

ಎನ್‌ಡಿಟಿವಿಯ ಮೇಲೆ ಸಿಬಿಐ ದಾಳಿ: ಟೀಕೆಯನ್ನು ಸಹಿಸದ ಸರ್ಕಾರ

    ಅನುಶಿವಸುಂದರ್
ndtv logo ಗೆ ಚಿತ್ರದ ಫಲಿತಾಂಶ
ಎನ್ಡಿಟಿವಿ ಯಂಥ ವಿಮರ್ಶಾತ್ಮಕ ಧ್ವನಿಗಳ ಮೇಲೆ ದಾಳಿ ಮಾಡುವ ಮೂಲಕ ಸರ್ಕಾರವು ಯಾವ ಸಂದೇಶವನ್ನು ನೀಡುತ್ತಿದೆ?

ಎಲ್ಲಾ ಆಳುವ ದೊರೆಗಳಿಗೂ ತಮ್ಮ ಸುತ್ತಾ ತಮ್ಮನ್ನು ಹಾಡಿಹೊಗಳುವ ಭಟ್ಟಂಗಿಗಳಿರಬೇಕೆಂಬ ಬಯಕೆ ಇರುತ್ತದೆ. ಏಕೆಂದರೆ ಅದು  ಅವರ ಆಡಳಿತವನ್ನು ಸುಸೂತ್ರಗೊಳಿಸುತ್ತದೆ. ನೀವು ಮಾಡಬೇಕಾದದ್ದೆಲ್ಲಾ ಇಷ್ಟೆ. ಉಪ್ಪರಿಗೆಯ ಮೇಲೆ ನಿಂತು ಘೋಷಣೆಗಳನ್ನು ಮಾಡಿ. ನಿಮ್ಮ ಅನುಚರರು ಅದನ್ನು ಹಾಡಿಹೊಗಳುತ್ತಾರೆ. ಮುಠಾಳರು ಮಾತ್ರ ವಂದಿಮಾಗಧರ ಗುಂಪಿನಿಂದ ಹೊರಬಂದು ಪ್ರಶ್ನೆಗಳನ್ನು ಕೇಳುತ್ತಾರೆ ಅಥವಾ ವಿಮರ್ಶೆಗಳನ್ನು ಮಾಡಲು ಮುಂದಾಗುತ್ತಾರೆ. ಹಾಗೆ ಮಾಡಿದವರಿಗೆ ಅದರ ಪರಿಣಾಮಗಳ ಅಂದಾಜು ಇರುತ್ತದೆ. ಇವೆಲ್ಲಾ ಒಂದು ಕಲ್ಪನಾ ವಿಲಾಸವೆಂದು ತೋರಿದರೂ ಭಾರತದ ಪ್ರಜಾಪ್ರಭುತ್ವವು ನಿಧಾನಕ್ಕೆ ಕಲ್ಪನೆಯ ಲೋಕವನ್ನು ಸಾಕಾರಮಾಡುವೆಡೆ ಸಾಗುತ್ತಿದೆ. ಅಧಿಕಾರಕ್ಕೆ ಬಂದ ಮೂರೇ ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರವು ಒಂದು ಕಾಲದಲ್ಲಿ ಸ್ವತಂತ್ರವಾಗಿ ಸತ್ವಯುತವಾಗಿದ್ದ ದೃಶ್ಯ ಮಾಧ್ಯಮವನ್ನು ತಾನು ಮಾಡಿದ್ದೆಲ್ಲವನ್ನು ಸಮರ್ಥಿಸುವ ಮತ್ತು ಹಾಡಿಹೊಗಳುವ ಭಟ್ಟಂಗಿಯನ್ನಾಗಿಸಿಬಿಟ್ಟಿದೆ, ಮತ್ತೊಂದೆಡೆ ಅಳಿದುಳಿದಿರುವ ಸಣ್ಣಪುಟ್ಟ ಪ್ರತಿರೋಧವನ್ನೂ ಸಹ ಬೇಟೆಯಾಡಿ ಬಾಯಿಮುಚ್ಚಿಸಲು ಪ್ರಯತ್ನಿಸುತ್ತಿದೆ.

ತನ್ನೆಲ್ಲಾ ಲೋಪದೋಷಗಳ ನಡುವೆಯೂ ಎನ್ಡಿಟಿವಿಯಂಥ ಸುದ್ದಿ ಮಾಧ್ಯಮವು ಭಿನ್ನವಾಗಿ ನಿಲ್ಲುವುದು ಕಾರಣಕ್ಕೆ. ಜೂನ್ ರಂದು ಎನ್ಡಿಟಿವಿಯ ಸಂಸ್ಥಾಪಕರಾದ ಪ್ರಣೋಯ್ ರಾಯ್ ಮತ್ತು ರಾಧಿಕಾ ರಾಯ್ ಅವರಿಗೆ ಸಂಬಂಧಪಟ್ಟ ಸಂಸ್ಥೆಗಳ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ನಡೆಸಿತು. ದಾಳಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸಲಾದ ನೇರ ದಾಳಿಗಳೇ ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಎನ್ಡಿಟಿವಿಯ ಹಣಕಾಸು ನಿರ್ವಹಣೆಗಳು ೨೦೦೯ರಿಂದಲೂ ತನಿಖೆಗೆ ಒಳಪಟ್ಟಿವೆ. ಆದರೂ ಖಾಸಗಿ ವ್ಯಕ್ತಿಯೊಬ್ಬ ವಾಹಿನಿಯು ಖಾಸಗಿ ಬ್ಯಾಂಕ್ ಒಂದಕ್ಕೆ  ಮೋಸ ಮಾಡಿದೆ ಎಂದು ನೀಡಿದ ದೂರನ್ನೇ ಆಧರಿಸಿದ ಸಿಬಿಐ ಪ್ರಕರಣ ದಾಳಿ ನಡೆಸಲು ಯೋಗ್ಯವಾದದ್ದು ಎಂಬ ತೀರ್ಮಾನಕ್ಕೆ ಬಂದದ್ದು ಮಾತ್ರ ಸೋಜಿಗದ ಸಂಗತಿಯಾಗಿದೆ. ಸಹಜವಾಗಿಯೇ ದಾಳಿ ನಡೆದ ಸಮಯ ಮತ್ತು ದಾಳಿಯ ಗುರಿಗಳು  ದಾಳಿಯ ಉದ್ದೇಶದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತುತ್ತವೆ.

ಹಿಂದಿನ ಸರ್ಕಾರಗಳು ಸಹ ತಮ್ಮ ವಿರೋಧಿಗಳ ಮತ್ತು ಮಾಧ್ಯಮಗಳ ಬಾಯಿ ಮುಚ್ಚಿಸಲು ಸಿಬಿಐ ಅನ್ನು ಬಳಸಿಕೊಂಡಿದ್ದವೆಂಬುದು ನಿಜವಾದರೂ ಸರ್ಕಾರದ ಕ್ರಮಗಳಲ್ಲಿ ಒಂದು ನಿರ್ದಿಷ್ಟ ವಿನ್ಯಾಸವಿದೆ. ತನ್ನ ವಿರೋಧಿಗಳ ಮೇಲೆ ಹಣಕಾಸು ದುರ್ವ್ಯವಹಾರಗಳ ಆರೋಪವನ್ನು ಹೊರಿಸುವ ಮೂಲಕ ಸರ್ಕಾರವು ಒಂದೇ ಕಲ್ಲಿನಲ್ಲಿ ಎರದು ಹಕ್ಕಿಗಳನ್ನು ಹೊಡೆಯುತ್ತಿದೆ. ಆರೋಪಗಳ ಮೂಲಕ ಅದು ಒಂದೆಡೆ ತನ್ನ ವಿರೋಧಿಗಳ- ವಿರೋಧ ಪಕ್ಷಗಳ ನಾಯಕ, ಅಥವಾ ಮಾನವ ಹಕ್ಕು ಕಾರ್ಯಕರ್ತ, ಅಥವಾ ಒಂದು ಸರ್ಕಾರೇತರ ಸಂಸ್ಥೆ ಅಥವಾ ಒಂದು ಮಾಧ್ಯಮ ಸಂಸ್ಥೆಯ- ಮೇಲೆ  ಗೂಬೆ ಕೂರಿಸುತ್ತಿದೆ ಮತ್ತೊಂದೆಡೆ ಇಂಥ ಪ್ರತೀಕಾರದ ಕ್ರಮಗಳ ಬಗ್ಗೆ ಭೀತಿ ಹುಟ್ಟಿಸಿ ಇನ್ನಿತರರನ್ನೂ ಮೌನವಾಗಿಸುತ್ತಿದೆ. ಮಾಧ್ಯಮಗಳ ವಿಷಯದಲ್ಲಿ ತಂತ್ರ ಇನ್ನೂ ಸಲೀಸಾಗಿ ಕೆಲಸ ಮಾಡುತ್ತದೆ. ಏಕೆಂದರೆ ಸರ್ಕಾರಗಳು ತಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತೇವೆ ಎಂಬ ಮಂತ್ರ ಜಪಿಸುತ್ತಲೇ ಮಾಧ್ಯಮ ಸಂಸ್ಥೆಗಳ ಒಡೆಯರ ಮೇಲೆ ದಾಳಿ ಮಾಡುತ್ತಾ ಅದನ್ನು ಹಣಕಾಸು ವ್ಯವಹಾರಗಳಲ್ಲಿನ ಅಪಾರದರ್ಶಕತೆಯ ಕಾರಣಕ್ಕಾಗಿ ಮಾಡಲಾಯಿತೆಂದು ಸಮರ್ಥಿಸಿಕೊಳ್ಳಬಹುದು. ಸಮರ್ಥನೆಯನ್ನು ಸಾರ್ವಜನಿಕರು ಸಹ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಏಕೆಂದರೆ ಸರ್ಕಾರವನ್ನು ಟೀಕಿಸುವ ಮಾಧ್ಯಮಗಳು ಒಂದೋ ನಂಬಲರ್ಹವಲ್ಲವೆಂದೂ, ಅಥವಾ ಸುಳ್ಳುಗಳನ್ನು ಹೇಳುತ್ತವೆಂದೂ ಅಥವಾ ಅಂಥಾ ವಾಹಿನಿಗಳಿಗೆ ದುರುದ್ದೇಶಗಳಿರುತ್ತವೆಂಬ ಅಭಿಪ್ರಾಯಗಳನ್ನು ಸಾರ್ವಜನಿಕರ ತಲೆಗಳಲ್ಲಿ ಸತತವಾಗಿ ತುರುಕಲಾಗಿದೆ. ಕೆಲವು ದಿನಗಳ ಹಿಂದೆ ಭಾರತೀಯ ಜನತಾ ಪಕ್ಷದ ವಕ್ತಾರನೊಬ್ಬ ಎನ್ಡಿಟಿವಿಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು ಇದನ್ನೇ.

ಮಾಧ್ಯಮ ಸಂಸ್ಥೆಗಳ ಕಾರ್ಪೊರೇಟ್ ಒಡೆಯರ ಮೇಲೆ ಒತ್ತಡ ಸೃಷ್ಟಿಸುವುದರ ಜೊತೆಜೊತೆಗೆ ಸರ್ಕಾರವು ಪತ್ರಕರ್ತರನ್ನು ಬೆದರಿಸುವ ಕಲೆಯಲ್ಲೂ ಪರಿಣಿತಿ ಸಾಧಿಸಿದೆ. ಸಿಬಿಐ ದಾಳಿಯ ಮರುದಿನ ಎನ್ಡಿಟಿವಿ-ಇಂಡಿಯಾದ ರವೀಶ್ ಕುಮಾರ್ ಅವರು ತಾವು ನಡೆಸಿಕೊಟ್ಟ ಅದ್ಭುತ ಕಾರ್ಯಕ್ರಮದಲ್ಲಿ ಹೇಳಿದಂತೆ ದೇಶದ ರಾಜಧಾನಿಯಲ್ಲಿ ಮತ್ತು ಇತರೆಡೆಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ತಮ್ಮ ನಡಾವಳಿಗಳ ಮೇಲೆ ನಿಗಾ ಇಡಲಾಗಿದೆ ಎಂಬುದು ತಿಳಿದಿದೆ ಮತ್ತು ಅದು ಅವರನ್ನು ಭಯಭೀತಗೊಳಿಸಿದೆ. . ಅವರು ಸರ್ಕಾರವನ್ನು ಟೀಕಿಸುತ್ತಾರೆಂದು ತಿಳಿದೊಡನೆ ಸರ್ಕಾರದ ವಲಯದಲ್ಲಿ ಅವರಿಗೆ ಸುದ್ದಿಮೂಲಗಳು ಬಂದ್ ಆಗುತ್ತವೆ. ಸರ್ಕಾರದ ಸುದ್ದಿಗಳನ್ನು ಸಂಗ್ರಹಿಸುವಲ್ಲಿ ಇಂಥಾ ಸುದ್ದಿಮೂಲಗಳು ಪತ್ರಕರ್ತರಿಗೆ ತುಂಬಾ ಅವಶ್ಯಕವಾಗಿರುತ್ತದೆ. ಆದರೆ ದೆಹಲಿ ಮತ್ತು ಇತರ ರಾಜಧಾನಿಗಳ ಅಧಿಕಾರ ವರ್ತುಲಗಳಲ್ಲೂ ಭೀತಿಯು ತಾಂಡವವಾಡುತ್ತಿದೆ. ಮಾಧ್ಯಮಗಳ ಮೇಲೆ ನೇರ ನಿರ್ಬಂಧ ಹೇರುವುದು ಎಷ್ಟು ಪರಿಣಾಮಕಾರಿಯೋ ಪರೋಕ್ಷವಾಗಿ ಮಾಧ್ಯಮಗಳ ಬಾಯಿಮುಚ್ಚಿಸುವ ಕ್ರಮಗಳು ಅಷ್ಟೇ ಪರಿಣಾಮಕಾರಿಯಾಗಿರುತ್ತವೆ.

ಪರಿಸ್ಥಿತಿ ಹೀಗಿರುವಾಗ ಸರ್ಕಾರವು ಎನ್ಡಿಟಿವಿಯ ಮೇಲೆ ನಡೆಸಿದ ದಾಳಿಯ ವಿರುದ್ಧ ಇನ್ನೂ ತೀವ್ರವಾದ ಪ್ರತಿಕ್ರಿಯೆಗಳು ಬರಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಸರ್ಕಾರದ ದುರುದ್ದೇಶಗಳನ್ನು ಬಲ್ಲವರ ನಡುವೆಯೂ ಇರಬೇಕಾದಷ್ಟು ಸೌಹಾರ್ದತೆ ಇಲ್ಲವೆಂಬುದು ಕಂಡುಬರುತ್ತಿದೆ. ಕೆಲವು ಅಪವಾದಗಳನ್ನು ಹೊರತುಪಡಿಸಿ, ಬಹುಪಾಲು ಮಾಧ್ಯಮಗಳು ತಾವೂ ಕೂಡಾ ಮುಂದೆ ಇದೇ ರೀತಿಯ ಪ್ರತೀಕಾರದ ಕ್ರಮಗಳಿಗೆ ಗುರಿಯಾಗಬಹುದೆಂಬ ಭೀತಿಯಿಂದ ಎನ್ಡಿಟಿವಿಯ ಮೇಲಿನ ದಾಳಿಯನ್ನು ವಿರೋಧಿಸದೆ ದೂರ ಉಳಿದಿವೆ. ಎಡಿಟರ್ಸ್ ಗಿಲ್ಡ್ನಂಥಾ ವೃತ್ತಿಪರ ಸಂಘಟನೆಗಳು ವಾಹಿನಿಯ ಬೆಂಬಲಕ್ಕೆ ನಿಂತದ್ದು ಬಿಟ್ಟರೆ ಬೇರೆ ಯಾವ ಮೂಲಗಳಿಂದಲೂ ಬೆಂಬಲಗಳು ವ್ಯಕ್ತವಾಗಿಲ್ಲ್ಲ. ಎನ್ಡಿಟಿವಿಯ ಮೇಲೆ ಸರ್ಕಾರ ನಡೆಸಿರುವ ದಾಳಿಯ ಹಿಂದಿನ ದುರುದ್ದೇಶಗಳನ್ನು ಚೆನ್ನಾಗಿ ಬಲ್ಲ ಇತರರು ಸಹ ವಾಹಿನಿಗೆ ಬೇಷರತ್ ಬೆಂಬಲವನ್ನು ನೋಡಲು ಹಿಂದೆಮುಂದೆ ನೋಡುತ್ತಿದ್ದಾರೆ. ಏಕೆಂದರೆ ಇತರ ಮಾಧ್ಯಮ ಸಂಸ್ಥೆಗಳ ಮೇಲೆ ಹಿಂದೆ ಇದೇ ರೀತಿಯ ದಾಳಿಗಳು ನಡೆದಾಗ ವಾಹಿನಿಯು ಅವರ ಬೆಂಬಲಕ್ಕೆ ನಿಲ್ಲಲಿಲ್ಲ ಎನ್ನುವುದು ಅವರ ಮನಸ್ಸಿನಲ್ಲಿರುವ ಆಕ್ಷೇಪವಾಗಿದೆ. ರಾಜಧಾನಿಗಳಲ್ಲಿ ನೆಲೆಯೂರಿರುವ ದೊಡ್ಡದೊಡ್ಡ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ನಡೆದಾಗ ಹರಿಯುವಷ್ಟು ಗಮನ ಅಥವಾ ವ್ಯಕ್ತವಾಗುವಷ್ಟು ಆಕ್ರೋಶಗಳು ಮತ್ತು ಸೌಹಾರ್ದತೆಗಳು ಕಾಶ್ಮೀರ ಅಥವಾ ಈಶಾನ್ಯ ಭಾರತಗಳಲ್ಲಿ ಕೆಲಸ ಮಾಡುವ ಸಣ್ಣ ಪತ್ರಿಕೆ ಮತ್ತು ನಿಯತಕಾಲಿಕೆಗಳು ಸರ್ಕಾರದ ನೇರ ದಾಳಿಗೆ ಗುರಿಯಾದಾಗ ಅಥವಾ ಸರ್ಕಾರದ ಅಕ್ರಮಗಳನ್ನು ತನಿಖೆ ಮಾಡಿ ಬಯಲಿಗೆಳದ ಪತರ್ಕರ್ತರು ದೈಹಿಕ ದಾಳಿಗಳಿಗೆ ಗುರಿಯಾದಾಗ ಅಥವಾ ಕೊಲೆಯಾದಾಗ ಕಂಡುಬರುವುದಿಲ್ಲವೇಕೆ ಎಂಬ ವಿಮರ್ಶಾತ್ಮಕ ತಿಳವಳಿಕೆಯು ನಿಧಾನವಾಗಿ ಮೂಡುತ್ತಿದೆ. ಭಾರತದಲ್ಲಿನ ಮಾಧ್ಯಮ ಸಂಸ್ಥೆಗಳಲ್ಲಿ ಒಡಕಿದೆ. ಒಡಕಿನ ದುರ್ಬಳಕ್ಕೆ ಮಾಡಿಕೊಳ್ಳುತ್ತಲೇ ಅಧಿಕಾರಸ್ಥರು ಮಾಧ್ಯಮಗಳನ್ನು ಸರ್ಕಾರದ ತುತ್ತೂರಿಗಳನ್ನಾಗಿ ಮಾಡಿಕೊಳ್ಳುತ್ತಿವೆ. ವಿದ್ಯಮಾನವೇ ಮತ್ತೊಮ್ಮೆ ನಮ್ಮೆದುರು ಅನಾವರಣಗೊಳ್ಳುತ್ತಿದೆ.

ಎನ್ಡಿಟಿವಿ ಮೇಲೆ ಸಿಬಿಐ ನಡೆಸಿದ ದಾಳಿಯನ್ನು ಕೆಲವರು ಇಂದಿರಾಗಾಂಧಿಯವರು ೧೯೭೫ರಲ್ಲಿ ಹೇರಿದ ತುರ್ತುಪರಿಸ್ಥಿತಿ ಮತ್ತು ಮಾಧ್ಯಮಗಳ ಮೇಲೆ ಹೇರಿದ ಸಂಪೂರ್ಣ ನಿರ್ಭಂಧದ ಜೊತೆ ಹೋಲಿಕೆ ಮಾಡುತ್ತಿದ್ದಾರೆ. ಇಂದಿನ ಪರಿಸ್ಥಿತಿ ಅಂದಿಗಿಂತಾ ಭಿನ್ನವಾಗಿದ್ದರೂ ಕಾಲದ ಪಾಠಗಳನ್ನು ಬಿಜೆಪಿ ಕಲಿತರೆ ಒಳ್ಳೆಯದು. ಮಾಧ್ಯಮಗಳ ಮೇಲೆ ನಿರ್ಭಂಧ ವಿಧಿಸಿದ್ದಕ್ಕೆ ಇಂದಿರಾಗಾಂಧಿ ತಕ್ಕ ಪಾಠವನ್ನು ಕಲಿಯಬೇಕಾಯಿತು. ಸರ್ಕಾರ ಸೆನ್ಸಾರ್ ಮಾಡಿ ಬಿಡುಗಡೆ ಮಾಡುತ್ತಿದ್ದ ಸುದ್ದಿಯನ್ನೇ ಆಕೆ ನಿಜವೆಂದು ನಂಬಿದ್ದರು. ಆಕೆಯ ನೀತಿಗಳು ಬಡಜನತೆಯಲ್ಲಿ ಉಂಟುಮಾಡಿದ ಹತಾಷೆಯ ಬಗ್ಗೆ ಅವರು ಕುರುಡಾಗಿದ್ದರು. ಅಲ್ಲದೆ ಸಾಮಾನ್ಯ ಜನರು ಇಂದಿರಾಗಾಂಧಿಯವರ ನೀತಿಗಳ ಬೆಂಬಲಕ್ಕಿರುವುದರಿಂದ ೧೯೭೭ರ ಚುನಾವಣೆಯಲ್ಲಿ ಆಕೆಯೇ ಗೆಲ್ಲುತ್ತಾರೆಂದು ಬೇಹುಗಾರಿಕಾ ಸಂಸ್ಥೆಗಳು ನೀಡಿದ ವರದಿಯನ್ನುವರು ನಂಬಿಕೊಂಡಿದ್ದರು. ಆದರೆ ಚುನಾವಣೆಗಳಲ್ಲಿ ಇಂದಿರಾಗಾಂಧಿಯವರು ಹೀನಾಯವಾಗಿ ಸೋಲನ್ನಪ್ಪಿದರು. ಬಡಜನರು ಆಕೆಯ ವಿರುದ್ಧ ಮತ ಚಲಾಯಿಸಿದರು. ವಿಪರ್ಯಾಸವೆಂದರೆ ಅವರ ಸೋಲೇ ಜನತಾ ಪಕ್ಷದ ಭಾಗವಾಗಿದ್ದ ಭಾರತೀಯ ಜನತಾ ಪಕ್ಷಕ್ಕೆ ಕೇಂದ್ರದಲ್ಲಿ ಒಂದು ನೆಲೆಯನ್ನು ಕೂಡಾ ಒದಗಿಸಿತು.

ಇತಿಹಾಸವು ಈಗ ಸಂಪೂರ್ಣವಾಗಿ ಒಂದು ಸುತ್ತು ಸುತ್ತಿ ಬಂದಿದೆ. ಅಂದಿನ ಇಂದಿರಾಗಾಂಧಿಯಂತೆ ಇಂದಿನ ಬಿಜೆಪಿಯು ತನ್ನ ಸಾಕು ಮಾಧ್ಯಮಗಳ ಮಾತುಗಳನ್ನು ನಂಬುತ್ತಾ ತನ್ನನ್ನು ಟೀಕೆ ಮಾಡುವವರ ಬಾಯಿಮುಚ್ಚಿಸುವ ಯತ್ನ ನಡೆಸಿದೆ. ಇತಿಹಾಸವು ಸಾಬೀತುಪಡಿಸುವಂತೆ ಕುರುಡಿಗೆ ತಕ್ಕ ಬೆಲೆಯನ್ನು ತೆರಲೇ ಬೇಕಾಗುತ್ತದೆ. ಬಿಜೆಪಿ ಆಳ್ವಿಕೆಯಲ್ಲಿರುವ ರಾಜ್ಯಗಳಲ್ಲಿ ಹತ್ತಿ ಉರಿಯುತ್ತಿರುವ ರೈತ ಹೋರಾಟಗಳು ಮಾಧ್ಯಮಗಳು ಆಳುವವರಲ್ಲಿ ಉಂಟುಮಾಡುವ ಕುರುಡಿಗೆ ಒಂದು ಉದಾಹರಣೆಯಾಗಿರಬಹುದೇ?

                                                                 
ಕೃಪೆ: Economic and Political Weekly
     June 10, 2017. Vol.52. No.23
                                                                                            









1 ಕಾಮೆಂಟ್‌:

shankar malli ಹೇಳಿದರು...

ಮಾಧ್ಯಮಗಳ ದ್ವಿಮುಖ ನೀತಿ, ಯಾವುದೋ ಸಿದ್ಧಾಂತದ ಕುರುಡು ಅಭಿಮಾನದಿಂದ
ಅನ್ಯ ಸಿದ್ಧಾಂತದ ಸರ್ಕಾರದ ಎಲ್ಲಾ ಕಾರ್ಯಗಳಲ್ಲಿ ಹುಳುಕು ಹುಡುಕುವುದು,
ಚಿಲ್ಲರೆ ಜನವಿರೋಧಿ ವಿರೋಧಪಕ್ಷಗಳಂತೆ ಮೂರು ವರ್ಷಗಳ ಸಾಧನೆ ಶೂನ್ಯ ಎನ್ನುವಂತೆ
ಹಾಸ್ಯಾಸ್ಪದವಾಗಿ ವಿರೋಧ ಮಾಡುವುದು, ಇವೆಲ್ಲವೂ ಭಾರತದ ಮಾಧ್ಯಮಗಳಲ್ಲಿ ಸಾಮಾನ್ಯ
ಎನ್ನುವಂತಾಗಿದೆ. ಒಲ್ಲದ ಗಂಡನಿಗೆ ಮೊಸರನ್ನದಲ್ಲಿ ಕಲ್ಲು ಎಂಬಂತೆ ಅಕಾರಣ ಮೋದಿಯವರ
ಎಲ್ಲಾ ಉತ್ತಮ ಕಾರ್ಯಗಳನ್ನು ಟೀಕಿಸುವುದು ವಾಕರಿಕೆ ತರಿಸುವಂತಿರುತ್ತದೆ. ಪ್ರಸ್ತುತ
ನಮಗೆ ಬೇಕಾಗಿರುವುದು ಒಳ್ಳೆಯ ಕಾರ್ಯಗಳನ್ನು ಹೊಗಳುವ, ಕೆಟ್ಟದ್ದನ್ನು ಟೀಕಿಸುವ,
ಅಭಿವೃದ್ಧಿಗೆ ಪರ್ಯಾಯ ಮಾರ್ಗಗಳನ್ನು ತೋರಿಸುವ ವಸ್ತುನಿಷ್ಠ ಮಾದ್ಯಮಗಳೇ
ಹೊರತು ಯಾವುದೋ ಎಡ,ಬಲ ಸಿದ್ಧಾಂತಗಳಿಗೆ ತಮ್ಮ ಸ್ವಾತಂತ್ರ್ಯವನ್ನು ಮಾರಿಕೊಂಡ
ಮಾದ್ಮಮಗಳಲ್ಲ