ಭಾನುವಾರ, ಜೂನ್ 11, 2017

ಆನ್‌ಲೈನ್ ಮೂಲಕ ಔಷಧ ಮಾರಾಟ: ಕಹಿ ಗುಳಿಗೆ

ಅನುಶಿವಸುಂದರ್
online medicine ಗೆ ಚಿತ್ರದ ಫಲಿತಾಂಶ
ವೈದ್ಯಕೀಯ ಸಲಹೆಗಳನ್ನು ಮತ್ತು ಔಷಧಗಳ ಬಳಕೆಯನ್ನು ನಿಯಂತ್ರಿಸದೆ ಔಷಧಗಳ -ಪ್ಲಾಟ್ಫಾರ್ಮ್ (ಔಷಧ ಮಾರುಕಟ್ಟೆಗಳ ಅಂತರ್ಜಾಲ ಉಸ್ತುವಾರಿ) ಕೆಲಸ ಮಾಡುವುದಿಲ್ಲ.

ಆನ್ಲೈನ್ ಮೂಲಕ ಔಷಧ ಮಾರಾಟ ಮಾಡುವ ಮುಂಗಟ್ಟೆಗಳು ಮತ್ತು ಅಂತರ್ಜಾಲ ಔಷದ ಅಂಗಡಿ (-ಫಾರ್ಮಸಿ)ಗಳನ್ನೂ ಒಳಗೊಂಡಂತೆ ಎಲ್ಲಾ ಬಗೆಯ ಔಷಧಿ ಮಾರಾಟಗಳನ್ನು ನಿಯಂತ್ರಣ ಮಾಡಲು ಸರ್ಕಾರವು ಹೊಸ ನಿಯಮಾವಳಿಗಳ ಪ್ರಸ್ತಾಪವನ್ನು ಮಂಡಿಸಿದೆ. ದೇಶದ ಎಲ್ಲಾ ಚಿಲ್ಲರೆ ಔಷಧಿ ಮಾರಾಟಗಾರರು ಹೂಸ ನಿಯಮಗಳನ್ನು ವಿರೋಧಿಸಿದ್ದಾರೆ. ಮತ್ತು ಒಂದು ದಿನದ ಮುಷ್ಕರವನ್ನೂ ಕೂಡಾ ಮಾಡಿದ್ದಾರೆ. ಈಗಾಗಲೇ ಔಷಧಿಗಳು ಆನ್ಲೈನ್ನಲ್ಲಿ ಮಾರಾಟವಾಗುತ್ತಿದ್ದಲ್ಲಿ  ಅದನ್ನು ನಿಲ್ಲಿಸುವುದು ಒಳ್ಳೆಯದೋ ಅಥವಾ ನಿಯಂತ್ರಿಸುವುದು ಒಳ್ಳೆಯದೋ? ಎರಡನೆಯದ್ದನ್ನು ಒಪ್ಪಿಕೊಂಡರೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಸ್ತಾಪವಾದ -ಪ್ಲಾಟ್ಫಾರ್ಮ್ (ಮಾರುಕಟ್ಟೆಗಳ ಅಂತರ್ಜಾಲ ಉಸ್ತುವಾರಿ)ಒಳ್ಳೆಯದನ್ನು ಮಾಡುತ್ತದೋ? ಅಥವಾ ಹೊಸ ಬಗೆಯ ಸಮಸ್ಯೆಗಳನ್ನು ಸೃಷ್ಟಿಸುತ್ತದೋ?

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ೨೦೧೭ರ ಮಾರ್ಚ್ ೧೬ರಂದು ಪ್ರಕಟಿಸಿರುವ ಸಾರ್ವಜನಿಕ ಸೂಚನಾ ಪತ್ರದಲ್ಲಿ ದೇಶದಲ್ಲಿ ಔಷಧಿಗಳ ಮಾರಾಟವನ್ನು ನಿಯಂತ್ರಿಸುವ ಬಗ್ಗೆ ಸಾರ್ವಜನಿಕ ಸಮಾಲೋಚನೆಯನ್ನು ನಡೆಸಲು ಕರೆನೀಡಿದೆ. ಔಷಧಿ ಮತ್ತು ಸೌಂದರ್ಯ ವರ್ಧಕ ನಿಯಮಗಳಿಗೆ ತಿದ್ದುಪಡಿಯನ್ನು ತಂದು, ಔಷಧಿಗಳು ಔಷಧಿ ಉತ್ಪಾದಕರಿಂದ ಸ್ಟಾಕಿಸ್ಟ್/ಸಗಟು ಮಾರಾಟದಾರರಿಗೆ, ಅವರಿಂದ ಚಿಲ್ಲರೆ ಮಾರಾಟದಾರರಿಗೆ (ಕಟ್ಟಡದ ಅಂಗಡಿಯಲ್ಲಿ ಮತ್ತು ಅಂತರ್ಜಾಲ ಅಂಗಡಿಯಲ್ಲಿ ಮಾರುವರಿಬ್ಬರನ್ನು ಒಳಗೊಂಡಂತೆ)ಮತ್ತು  ಅಂತಿಮವಾಗಿ ಬಳಕೆದಾರರಿಗೆ ಮಾರಾಟವಾಗುವ ಪ್ರತಿಹಂತದ ಜಾಡನ್ನು ದಾಖಲಿಸುವ ಒಂದು -ಪ್ಲಾಟ್ಫಾರ್ಮ್ (ಮಾರುಕಟ್ಟೆಗಳ ಅಂತರ್ಜಾಲ ಉಸ್ತುವಾರಿ) ಅನ್ನು ರೂಪಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಪ್ರಸ್ತಾಪದ ಪ್ರಕಾರ ಎಲ್ಲಾ ಔಷಧಿ ಉತ್ಪಾದಕರು, ಸಗಟು ಮತ್ತು ಚಿಲ್ಲರೆ ಮಾರಾಟದಾರರು ಪ್ಲಾಟ್ಫಾರ್ಮಿನಲ್ಲಿ ನೊಂದಾಯಿಸಿಕೊಳ್ಳಬೇಕು. ಔಷಧ ಮಾರಾಟಗಾರರು ಇದರಲ್ಲಿ ನೊಂದಾಯಿಸಿಕೊಳ್ಳುವುದಲ್ಲದೆ, ತಾವು ಕೊಳ್ಳುವ ಮತ್ತು ಮಾರಾಟ ಮಾಡಿದ ಎಲ್ಲಾ ಔಷಧಗಳ ವಿವರಗಳನ್ನೂ, ವೈದ್ಯರು ನೀಡಿದ ಔಷಧಿಗಳ ಸೂಚನೆಗಳ ವಿವರಗಳನ್ನೂ ಹಾಗೂ ವೈದ್ಯರ ಮತ್ತು ರೋಗಿಯ ವಿವರಗಳನ್ನೂ ದಾಖಲಿಸಬೇಕು. ಇವನ್ನು ಮಾಡದೆ ಅವರು ಔಷಧಿಗಳನ್ನು ಮಾರುವಂತಿಲ್ಲ. ಇಷ್ಟು ಮಾತ್ರವಲ್ಲದೆ ಪ್ಲಾಟ್ಫಾರ್ಮನ್ನು ನಿರ್ವಹಣೆ ಮಾಡಲು ಬೇಕಾದ ಹಣಕಾಸಿಗೂ ಅವರು ತಮ್ಮ ಕೊಡುಗೆಯನ್ನು ನೀಡಬೇಕು.

ಯಾವುದೇ ನಿಯಂತ್ರಣವನ್ನು ರೂಪಿಸದೆ ಅಂತರ್ಜಾಲ ಔಷಧಿ ಮಾರಾಟಕ್ಕೆ ಅವಕಾಶ ಕೊಡುವುದನ್ನು ವಿರೋಧಿಸುತ್ತಿದ್ದ ಔಷಧಿ ವ್ಯಾಪಾರಿಗಳ ಸಂಘಟನೆಯು ಈಗ -ಪ್ಲಾಟ್ಫಾರ್ಮಿನ ರಚನೆಗೂ ವಿರೋಧ ವ್ಯಕ್ತಪಡಿಸುತ್ತಿದೆಇದು ಹೀಗೆಯೇ ಮುಂದುವರೆದರೆ ಭವಿಷ್ಯದಲ್ಲಿ ಅನಿರ್ದಿಷ್ಟ ಕಾಲ ಮುಷ್ಕರವನ್ನು ನಡೆಸುವುದಾಗಿಯೂ ಎಚ್ಚರಿಕೆಯನ್ನು ನೀಡಿದೆ. ಕಡ್ಡಾಯವಾಗಿ ಪ್ಲಾಟ್ಫಾರ್ಮಿನಲ್ಲಿ ನೊಂದಾವಣೆ ಮಾಡಿಕೊಳ್ಳಬೇಕಾದ ನಿಯಮಗಳು ಮತ್ತು ಅದರ ಪರಿಣಾಮವಾಗಿ ಹೆಚ್ಚುವರಿಯಾಗಿ ಹೊರಬೇಕಾಗಿ ಬರುವ ಮಾನವ ಮತ್ತು ಹಣಕಾಸು ಸಂಪನ್ಮೂಲಗಳ ಸಮಸ್ಯೆಗಳ ಜೊತೆಗೆ ಇವನ್ನೆಲ್ಲಾ ಜಾರಿಮಾಡಬೇಕೆಂದಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಕಣ್ಣಿಗೆ ರಾಚುವಂತಿರುವ ಮೂಲಭೂತ ಸೌಕರ್ಯಗಳ ಕೊರತೆಗಳೂ ಸಹ ತಿದ್ದುಪಡಿಗಳ ಬಗ್ಗೆ ಕೆಲವು ಆತಂಕಗಳನ್ನು ಹುಟ್ಟಿಸುತ್ತದೆ.

ಅಂತರ್ಜಾಲ ಔಷಧಿ ಅಂಗಡಿಗಳ ನಿಯಂತ್ರಣದ ಬಗ್ಗೆ ಇರುವ ವಿವಾದಗಳು ಹೊಸದೇನಲ್ಲ. ಔಷಧಿಗಳ ಆನ್ಲೈನ್ ಮಾರಾಟದ ನಿಯಂತ್ರಣದ ಬಗ್ಗೆ ಸಲಹೆ-ಸೂಚನೆಯನ್ನು ನೀಡಲು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ೨೦೧೫ರಲ್ಲಿ ಒಂದು ಉಪಸಮಿತಿಯನ್ನು ರಚಿಸಿತ್ತು. ಅದು ೨೦೧೬ರ ಸೆಪ್ಟೆಂಬರ್ನಲ್ಲಿ ಒಂದು ವಿವರವಾದ ವರದಿಯನ್ನು ನೀಡಿತ್ತು. ಔಷಧಿಗಳ ಬಗ್ಗೆ ವೈದ್ಯರು ನೀಡುವ ಸೂಚನೆಗಳನ್ನು ಒಂದು ರಾಷ್ಟ್ರೀಯ ಪೋರ್ಟಲ್ ಜಾಲದ ಮೂಲಕ ಹೆಣೆಯುವ ಒಂದು ಕಾರ್ಯಸಾಧು ಮಾದರಿಯನ್ನು ಅದು ಸಲಹೆ ಮಾಡಿತ್ತು. ವರದಿಯು ಆನ್ಲೈನ್ ಅಥವಾ ಆಫ್ ಲೈನ್ ಎರಡು ಸಂದರ್ಭಗಳಲ್ಲೂ ವೈದ್ಯರಿಗೂ ರೋಗಿಗೂ ಮತ್ತು ಔಷಧಿ ಅಂಗಡಿಗೂ ಸಂಪರ್ಕ ಏರ್ಪಡಿಸುವ ಒಂದು -ಪೋರ್ಟಲ್ ಅನ್ನು ಶಿಫಾರಸ್ಸು ಮಾಡಿತ್ತು. ಅಂಥಾ ಒಂದು ವ್ಯವಸ್ಥೆಯು ಸರ್ಕಾರದ ಗುರಿಗಳಾದ: ಸೂಚಿಸಲಾದ ಗುಣಮಟ್ಟದ ಮತ್ತು ಸರಿಯಾದ ಔಷಧಗಳು ದೊರೆಯುವಂತೆ ಮಾಡುವ, ಆಂಟಿ-ಮೈಕ್ರೋಬಿಅಲ್ ರೆಸಿಸ್ಟೆನ್ಸ್ (ಎಎಂಆರ್- ಆಂಟಿ-ಮೈಕ್ರೋಬಿಅಲ್ ರೆಸಿಸ್ಟೆನ್ಸ್- ಸೂಕ್ಷ್ಮಾಣು ಪ್ರೇರಿತ ರೋಗ ನಿಗ್ರಹಗಳ ನಿರೋಧಕ - ಎಂದರೆ ವೈರಸ್, ಬ್ಯಾಕ್ಟೀರಿಯಾಗಳಂಥ ಸೂಕ್ಷಾಣುಗಳಿಂದ ಉಂಟಾಗುವ ರೋಗಳನ್ನು ನಿಗ್ರಹಿಸಲು ಸೂಕ್ಷಾಣು ನಿಗ್ರಹ ಔಷಧಿಗಳನ್ನು ತೆಗೆದುಕೊಂಡಾಗ ಔಷಧಿಗಳು ತಮ್ಮ ಕಾರ್ಯ ನಿರ್ವಹಿಸದಂತೆ ಪ್ರತಿರೋಧಿಸಬಲ್ಲ ರೋಗಕಾರಕ ಸೂಕ್ಷ್ಮಾಣುಗಳ ಸಾಮರ್ಥ್ಯವನ್ನು ಆಂಟಿ-ಮೈಕ್ರೋಬಿಅಲ್ ರೆಸಿಸ್ಟೆನ್ಸ್ ಎಂದು ಕರೆಯುತ್ತಾರೆ- ಅನುವಾದಕನ ಟಿಪ್ಪಣಿ) ಅನ್ನು ತಡೆಗಟ್ಟುವಂಥ ಮತ್ತು ಅಂತರ್ಜಾಲದ ಮೂಲಕ ಸರಬರಾಜಾಗುವ ಔಷಧಿಗಳನ್ನು ನಿಯಂತ್ರಿಸುವ  ಎಲ್ಲಾ ಆಶಯಗಳನ್ನೂ ಈಡೇರಿಸುತ್ತಿತ್ತು.

ಆದರೆ, ವಾಸ್ತವದಲ್ಲಿ ಸರ್ಕಾರವು ನೀಡಿರುವ ಸಾರ್ವಜನಿಕ ಸೂಚನೆಯೇ ೨೦೧೫ರ ಉಪಸಮಿತಿಯು ನೀಡಿದ ವರದಿಯ ಶಿಫಾರಸ್ಸುಗಳ ದುರ್ಬಲ ರೂಪವಾಗಿದೆ. ಮತ್ತು  ಅದು ಮುಂದಿಟ್ಟಿರುವ -ಪ್ಲಾಟ್ಫಾರ್ಮ್ ಸಾರಾಂಶದಲ್ಲಿ ದೇಶದಲ್ಲಿ ಉತ್ಫಾದಕನಿಂದ ಬಳಕೆದಾರನಿಗೆ ನಡೆಯುವ ಔಷಧಗಳ ಮಾರಾಟದ ಜಾಡನ್ನು ದಾಖಲಿಟ್ಟುಕೊಳ್ಳಲು ಮಾತ್ರ ವಿನ್ಯಾಸಗೊಳಿಸಿದಂತಿದೆ.

ಇವಲ್ಲದೆ ಸಾರ್ವಜನಿಕ ಸೂಚನೆಯಲ್ಲಿ ಕೆಲವು ಅಸ್ಪಷ್ಟವಾದ ಅಂಶಗಳನ್ನೂ ಸೇರ್ಪಡೆ ಮಾಡಲಾಗಿದೆ. ಉದಾಹರಣೆಗೆ ಸಾರ್ವಜನಿಕ ಸೂಚನೆಯಲ್ಲಿ ಶೆಡ್ಯೂಲ್ ಎಚ್, ಎಚ್೧ ಮತ್ತು ಎಕ್ಸ್ಗಳಿಗೆ ಸೇರದ ಔಷಧಗಳನ್ನು ಒಬ್ಬ ನೊಂದಾಯಿತ ವೈದ್ಯರ ಸೂಚನೆಯಿಲ್ಲದೆ ಮಾರಾಟ ಮಾಡಬಾರದು ಎಂಬ ವಾಕ್ಯವಿದೆ. ಇದು ಲಿಖಿತ ಸೂಚನೆಯಿಲ್ಲದ ಔಷಧಿಗಳಿಗೂ ಅನ್ವಯಿಸುತ್ತದೆಯೇ? ಇದು ಭಾರತ ಔಷಧ ಮಾರಾಟ ಎದುರಿಸುತ್ತಿರುವ ಮೂಲಭೂತ ಸಮಸ್ಯೆಯನ್ನು ಎತ್ತಿತೋರಿಸುತ್ತದೆ. ಅದೆಂದರೆ ನಮ್ಮ ದೇಶದಲ್ಲಿ ವೈದ್ಯರ ಲಿಖಿತ ಸೂಚನೆಯಿಲ್ಲದ ಅರ್ಥಾತ್ ಓವರ್ ದಿ ಕೌಂಟರ್ (ಓಟಿಸಿ- ವೈದ್ಯರ ಸೂಚನೆಯಿಲ್ಲದೆ ಔಷದಿ ಅಂಗಡಿಯಲ್ಲೇ ಕೇಳಿ ಪಡೆದುಕೊಳ್ಳುವ) ಔಷಧಿಗಳ ಬಗ್ಗೆ ಸ್ಪಷ್ಟ ವರ್ಗೀಕರಣವಾಗಲೀ, ನಿಯಂತ್ರಣವಾಗಲೀ ಇಲದಿರುವುದು. ಇತ್ತೀಚೆಗೆ ಔಷಧ ಸಮಾಲೋಚನಾ ಸಮಿತಿಯು (ಡರ್ಗ್ ಕನ್ಸಲ್ಟೇಟೀವ್ ಕಮಿಟಿ) ೨೦೧೬ರ ನವಂಬರ್ನಲ್ಲಿ ಸಭೆ ಸೇರಿದ್ದಾಗ ಒಟಿಸಿ ಔಷಧಗಳ ಮಾರಾಟವನ್ನು ನಿಯಂತ್ರಿಸುವ ಬಗ್ಗೆ ಸಲಹೆ ಮಾಡಲು ಒಂದು ಉಪಸಮಿತಿಯನ್ನು ರಚಿಸಿದೆ

ಇಂಥಾ ಹಲವು ವಿಷಯಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದೆ ಬೇಕಾಬಿಟ್ಟಿಯಾಗಿ ರೂಪಿಸಲಾಗಿರುವ -ಪ್ಲಾಟ್ಫಾರ್ಮ್ ಬಗೆಗಿನ ನಿಯಮಾವಳಿಗಳನ್ನು ಮತ್ತೊಮೆ ಪುನರ್ಪರಿಶೀಲಿಸಲೇಬೇಕಿದೆ. ೨೦೧೫ರ ಉಪಸಮಿತಿಯ ಶಿಫಾರಸ್ಸುಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಆದರೆ ಈಗಿರುವ ಔಷಧ ಕಾಯಿದೆ., ಔಷಧ ಮಾರಾಟ ನಿಯಮಗಳು ಮತ್ತು ಔಷಧ ಮತ್ತು ಸೌದರ್ಯವರ್ಧಕ ಕಾಯಿದೆಗಳಲ್ಲಿರುವ ನಿಯಂತ್ರಣಗಳನ್ನೇ ಸರಿಯಾಗಿ ಮತ್ತು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲಾಗಿಲ್ಲ.

ದೇಶದಲ್ಲಿ ವೈದ್ಯರ ಲಿಖಿತ ಸೂಚನೆ ಇದ್ದರೆ ಮಾತ್ರ ಪಡೆಯಬಹುದಾದ ಔಷಧಿಗಳನ್ನು ಅದಿಲ್ಲದೆಯೂ ಪಡೆದುಕೊಳ್ಳಬಹುದೆಂಬುದು ದೊಡ್ಡ ರಹಸ್ಯವೇನಲ್ಲ. ಜನರು ತಮಗೆ ಬಂದಿರುವ ಬೇನೆಗೆ ವೈದ್ಯರ ಬದಲಿಗೆ ಔಷಧಿ ಅಂಗಡಿಗೆ ಹೋಗಿ ತಮಗೆ ತೋಚಿದ ಔಷಧಗಳನ್ನು ತೆಗೆದುಕೊಳ್ಳುವುದು ದೇಶದಲ್ಲಿ ದೊಡ್ಡ ರೀತಿಯಲ್ಲಿ ಚಾಲ್ತಿಯಲ್ಲಿದೆ. ಇದರ ಜೊತೆಗೆ ಯಾವುದೇ ತರ್ಕ-ಕಾರಣಗಳಿಲ್ಲದೆ ಔಷಧಿಗಳನ್ನು ಸಲಹೆ ಮಾಡುವ ವೈದ್ಯರುಗಳ ಅಭ್ಯಾಸಗಳ ಬಗ್ಗೆಯೂ ಗಂಭೀರವಾಗಿ ಗಮನಹರಿಸಬೇಕಿದೆ. ಅಂತರ್ಜಾಲ ಔಷಧಿ ಅಂಗಡಿಗಳನ್ನು ಯಾವುದೇ ನಿಯಂತ್ರಣಗಳಿಲ್ಲದೆ ವ್ಯವಹರಿಸಲು ಅವಕಾಶ ಕೊಡಬಾರದೆಂಬುದು ಸರಿಯಾದ ಒತ್ತಾಯವೇ ಆಗಿದ್ದರೂ ಔಷಧ ಮಾರಾಟ ಸಂಘಟನೆಗಳು ಈಗಿರುವ ನೀತಿ ಮತ್ತು ನಿಯಮಾವಳಿಗಳನ್ನಾದರೂ ಜಾರಿಗೊಳಿಸುವ ಬಗ್ಗೆ ಮತ್ತು ಒಂದು ಸ್ವಪ್ರೇರಿತ ಸ್ವಯಂ ಜಾರಿ ವ್ಯವಸ್ಥೆಯ ಬಗ್ಗೆ ಖಾತರಿ ನೀಡಬೇಕು.

ಪ್ಲಾಟ್ಫಾರ್ಮ್ ಎಂಬುದು ಸರಿಯಾದ ದಿಕ್ಕಿನಲ್ಲಿಟ್ಟಿರುವ ಹೆಜ್ಜೆಯೇ ಆಗಿರಬಹುದು. ಆದರೂ ಅದನ್ನು ಜಾರಿ ಮಾಡಲು ಬೇಕಾದ ಮೂಲಭೂತ ಸೌಕರ್ಯಗಳು ಇಲ್ಲ. ಪರಿಕಲ್ಪನಾತ್ಮಕ ಮತ್ತು ಕಾನೂನಾತ್ಮಕ ಸ್ಪಷ್ಟತೆಗಳಿಲ್ಲ. ಮತ್ತು ಇರುವ ಕಾನೂನುಗಳನ್ನೇ ಪರಿಣಾಮಾಕಾರಿಯಾಗಿ ಅನುಷ್ಠಾಕ್ಕೂ ತರಲಾಗುತ್ತಿಲ್ಲ. ಹೀಗಾಗಿ ಹೊಸ ನಿಯಮಾವಳಿಗಳನ್ನು ನಿರ್ವಾತದಲ್ಲಿ ಜಾರಿ ಮಾಡಬಾರದು. ಔಷಧಿ ವ್ಯಾಪಾರಿಗಳು ಹೇಳಿರುವಂತೆ ಔಷಧ ಮಾರಾಟವನ್ನು ಇತರೆ ಸರಕುಗಳ ಮಾರಾಟದಂತೆ ಪರಿಗಣಿಸಬಾರದು. ಏಕೆಂದರೆ ಔಷಧಿ ಮಾರಾಟವು ವೈದ್ಯರ ಮತ್ತು ಔಷಧ ಮಾರಾಟಗಾರರ ಮಧ್ಯಪ್ರವೇಶವನ್ನು ಒಳಗೊಂಡಿರುತ್ತದೆ ಮತ್ತು ಮಾರಾಟದಲ್ಲಿ ಅತಿಹೆಚ್ಚು ದುರ್ಬಳಕೆಯ ಅವಕಾಶವೂ ಇರುತ್ತದೆ. ಅಂತಿಮವಾಗಿ ಇಲ್ಲಿ ಪಣದಲ್ಲಿರುವುದು ಬಳಕೆದಾರನ ಜೀವ, ಸ್ವಾಸ್ಥ್ಯ ಮತ್ತು ಆರೋಗ್ಯ.

  ಕೃಪೆ: Economic and Political Weekly
          June 3, 2017. Vol. 52. No. 22

                                                                                                                  

ಕಾಮೆಂಟ್‌ಗಳಿಲ್ಲ: