ಗುರುವಾರ, ಡಿಸೆಂಬರ್ 1, 2011

ಕುವೆಂಪು ಮತ್ತು ಜಾನಪದ

ಡಾ. ಎಂ. ಬೈರೇಗೌಡ



ಡಾ.ಎಂ. ಬೈರೇಗೌಡರು ಮೂಲತಃ ಜಾನಪದ ವಿದ್ವಾಂಸರು. ಅವರ ಇರುಳಿಗರ ಬಗೆಗಿನ ಸಂಶೋಧನೆ ಬಹಳ ಮುಖ್ಯವಾದ ಸಮುದಾಯ ಸಂಶೋಧನೆಗಳಲ್ಲಿ ಒಂದು. ಸೋರೆ ಬುರುಡೆ ಎನ್ನುವ ಮಕ್ಕಳ ನಾಟಕದ ಮೂಲಕ ಕನ್ನಡ ಜಾನಪದದಲ್ಲಿ ಲೋಕದೃಷ್ಟಿ ಕುರಿತ ಆಲೋಚನೆಯನ್ನು ಮೊದಲ ಹಂತದಲ್ಲಿ ಗಮನಸೆಳೆದವರು. ಅವರ ಆಸಕ್ತಿ ಹಲವು. ಪ್ರಕಾಶನ, ನಾಟಕ, ಸಾಹಿತ್ಯ ಕಾರ್ಯಕ್ರಮ ಮುಂತಾದವುಗಳ ಮೂಲಕ ಸದಾ ಕ್ರಿಯಾಶೀಲವಾಗಿರುವವರು. ಬೈರೇಗೌಡರು ಕನ್ನಡ ಜಾನಪದ ಒಂದು ವರ್ಷ ಪೂರೈಸಿದ್ದಕ್ಕೆ ಹಾರೈಸಿ, ಕನ್ನಡ ಜಾನಪದಕ್ಕೆ ಕುವೆಂಪು ಮತ್ತು ಜಾನಪದ ಬರಹ ಕಳಿಸಿದ್ದಾರೆ. ಇದು ಕುವೆಂಪುವನ್ನು ಜಾನಪದದ ಮಗ್ಗಲಿಂದ ನೋಡುವ ಒಂದು ಭಿನ್ನ ಬರಹ. ಬರಹ ಕಳಿಸಿದ್ದಕ್ಕಾಗಿ ಬೈರೇಗೌಡರಿಗೆ ಧನ್ಯವಾದಗಳು.



ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ರಾತ್ರಿಪೂರ ರಂಗಪ್ರಯೋಗಕ್ಕೆ (ರಂಗರೂಪ: ಕೆ. ವೈ. ನಾರಾಯಣಸ್ವಾಮಿ ನಿರ್ದೇಶನ: ಸಿ. ಬಸವಲಿಂಗಯ್ಯ ರಂಗಾಯಣ. ಮೈಸೂರು. ಏಪ್ರಿಲ್. ೨೦೧೦) ಒಡ್ಡಿದ ತರುವಾಯ ಕೆಲವು ಪ್ರೇಕ್ಷಕ ವಿಮರ್ಶಕರು ಕುವೆಂಪು ಅವರಲ್ಲಿ ಜಾನಪದ ಪ್ರಜ್ಞೆ ಗೈರು ಹಾಜರಿಯನ್ನು ಕುರಿತು ಮಾತನಾಡುತ್ತಿರುವುದು ಕೇಳಿಬರುತ್ತಿದೆ. ಮೊದಲಿಗೆ ಡಾ. ರಹಮತ್ತರೀಕೆರೆ ಅವರ ಮಾತು: ಜಾನಪದವನ್ನು ಒಂದು ಬಗೆಯಲ್ಲಿ ನಿರಾಕರಿಸಿದ ಕುವೆಂಪು ಅವರ ಕಾದಂಬರಿ ಕುರಿತ ನಾಟಕಕ್ಕೆ ಜಾನಪದ ಪರಂಪರೆಯಿಂದ ಅರ್ಜುನ ಜೋಗಿಗಳು, ಸುಡುಗಾಡು ಸಿದ್ಧರು, ಹೆಳವರು ಇತ್ಯಾದಿ ಈ ನಿರೂಪಕ ಪಾತ್ರಗಳನ್ನು ಅಳವಡಿಸಿರುವುದು ಒಂದು ವಿಶೇಷ (ಸಂ|| ಸಿ. ಎಂ. ಸುರೇಶ ಸಂಸರಂಗ ಪತ್ರಿಕೆ, ಮದುಮಗಳು ವಿಶೇಷಾಂಕ ಸಂಪುಟ-೨ ಸಂಚಿಕೆ- ಮೇ-೧೦, ೨೦೧೦) ಎಂದಿದ್ದಾರೆ.

ಇದನ್ನೇ ಅನುಮೋದಿಸುವಂತಿರುವ ಹೊಸತಲೆಮಾರಿನ ಕಿರೋಶ ವಿಮರ್ಶಕ ಡಾ. ಅರುಣ್ ಜೋಳದಕೂಡ್ಲಿಗಿ ಅವರ ಮಾತು ಹೀಗಿದೆ:
ಮಲೆಗಳಲ್ಲಿ ಮದುವಗಳು - ನಾಟಕದಲ್ಲಿ ಸೂತ್ರಧಾರರಾಗಿ ಅರ್ಜುನ ಜೋಗಿಗಳು, ಸುಡುಗಾಡು ಸಿದ್ದರು ಹಾಗು ಹೆಳವರು ನಿರೂಪಿಸುತ್ತಾರೆ... ಯಾವ ಕುವೆಂಪು ತಮ್ಮ ಜೀವಿತಾವಧಿಯಲ್ಲಿ ಜಾನಪದವನ್ನು ಮೌಡ್ಯ ಎಂದು ಆ ಕಡೆಗೆ ಹೆಚ್ಚು ಒಲವು ತೋರಲಿಲ್ಲವೋ ಅದೇ ಜಾನಪದ ಕಣ್ಣೋಟದಿಂದ ಮಲೆಗಳಲ್ಲಿ ಮದುಮಗಳು ನಾಟಕವನ್ನು ನಿರೂಪೊಸಿದ್ದು ಹೆಚ್ಚು ಅರ್ಥ ಪೂರ್ಣ!

(ಮಲೆಗಳಲ್ಲಿ ಮದುಗಳು: ಸಾಂಸ್ಕೃತಿಕ ಮುಖಾಮುಖಿ, ಸಂಪಾದಕ. ರಹಮತ್ ತರೀಕೆರೆ. ಕನ್ನಡ ವಿಶ್ವವಿದ್ಯಾನಿಲಯ ಪ್ರಕಟಣೆ ಹಂಪಿ)
ಹರಮತ್ ಮತ್ತು ಅರುಣ್ ಇವರ ಮಾತುಗಳನ್ನು ವಿಶ್ಲೇಷಣೆಗೆ ಹಚ್ಚುವ ಮುನ್ನ ಸ್ವತಃ ಕುವೆಂಪು ಜಾನಪದವನ್ನು ಗ್ರಹಿಸಿರುವ ಬಗೆ ಹೇಗಿತ್ತು ಎಂಬುದನ್ನು ನೋಡಬಹುದು:
ಜಾನಪದ ಸಾಹಿತ್ಯ ಇದೆಯಲ್ಲಾ ಅದು ನಿಜವಾಗಿಯೂ ನಮ್ಮ ದೇಶ ಯಾವ ಮತ ಮೌಢ್ಯವನೆಲ್ಲಾ ಪ್ರಚಾರ ಮಾಡಿತೋ ಆ ಮೌಢ್ಯವನೆಲ್ಲಾ ಸಂಗ್ರಹಿಸಿದೆ. ಜಾನಪದ ಸಾಹಿತ್ಯ ಸಂಗ್ರಹ ಮಾಡುವ ನೀವು ಸಂಗ್ರಹಮಾಡಿ. ಅದನ್ನೊಂದು ಸಂಗ್ರಹ ಕಲೆ ಅಂತ ಹೇಳಿ. ಆದರೆ ಈ ಜನ ಯಾವ ಮೌಢ್ಯ ಹಾಗೂ ಅವಿಚಾರಕ್ಕೆ ವಶವಾಗಿ ಈ ಬಗೆಯ ಜೀವನವನ್ನು ನಡೆಸಿದರು ಎಂಬುದನ್ನು ಮಾತ್ರ ನೀವು ಹೇಳದೆ ಬಿಡಬೇಡಿ. ಜನಪದ ಸಾಹಿತ್ಯದಲ್ಲಿ ತಾಯಿ-ಮಗ, ತಾಯಿ-ಮಗಳು, ಗಂಡ-ಹೆಂಡತಿ ಇವರ ಸಂಬಂಧವನ್ನು ಕುರಿತು ವಿಷಯಗಳು ಸಾಹಿತ್ಯಕವಾಗಿ, ಕಲೆಯಾಗಿ ಚೆನ್ನಾಗಿರಬಹುದು. ಆದರೆ ಅವುಗಳಲ್ಲಿರುವುದೆಲ್ಲ ನಿಜ ಎಂದು ತಿಳಿಕೊಬೇಡಿ. ಮತ-ಮೌಢ್ಯ-ಮೂಢನಂಬಿಕೆ-ಇವುಗಳನ್ನು ಹೇಳೋದು ಎಷ್ಟೇ ಸುಂದರವಾಗಿದ್ದರೂ, ಆ ನಂದನವನ್ನು ಸಾಹಿತ್ಯ ಸಲೇ ಬಾರದು
(ಉದಯವಾಣಿ. ದೀಪಾವಳಿ ಸಂಚಿಕೆ, ೧೯೮೩) ಹೀಗೆ ಜನಪದವನ್ನು ಒಂದು ಮಾನವ ಧರ್ಮವನ್ನಾಗಿ ವೈಚಾರಕ ನೆಲೆಯಲ್ಲಿ ಸ್ವೀಕರಿಸುತ್ತಾರೆ ಕುವೆಂಪು. ಜನಪದ ಸಾಹಿತ್ಯವನ್ನು ಕುರಿತು ಕುವೆಂಪು ಅವರ ಗ್ರಹಿಕೆಯನ್ನು ಒಂದು ರೂಪಕದಲ್ಲಿ ಹೇಳಬಹುದಾದರೆ, ಅದು ಹಳ್ಳಿಗರು ಅದಕು ಇದಕು ಎದಕು ’ಬಳಸುವ’ ಗಂಗವ್ವ ಗಂಗಾಮಾಯಿ’ ಎಂಬ ಹೋಡದ ನೀರು ಇದ್ದಂತೆ. ಅನಿವಾರ್ಯವಾಗಿ ಅದೇ ನೀರನ್ನು ಬಳಸಬೇಕಾದ ಸಂದರ್ಭ ಒದಗಿ ಬಂದಲ್ಲಿ ಆ ನೀರನ್ನು ಹಾಗೇ ಉಪಯೋಗಿಸಬೇಡಿ ಏಕೆಂದರೆ ಅದು ಎಲ್ಲ ಸಾಂಕ್ರಾಮಿಕ ರೋಗಗಳ ಜನ್ಮ ಸ್ಥಾನ. ಆದ್ದರಿಂದ ಆ ನೀರನ್ನು ಹೊತ್ತು ತಂದು ಚೆನ್ನಾಗಿ ಕಾಯಿಸಿ, ಕುದಿಸಿ, ಆರಿಸಿ, ಶೋಧಿಸಿ ಉಪಯೋಗಿಸಿ’ ಎನ್ನುತ್ತಾರೆ ಕುವೆಂಪು. ಹೀಗೆ ಕುವೆಂಪು ಅವರದು ಶೋಧನ ಪ್ರತಿಭೆ.
ಈ ಹಿನ್ನೆಲೆಯಲ್ಲಿ ನೋಡಿದರೆ ರಹಮತ್ ತರೀಕರೆ ಅವರೆಂದಂತೆ ಕುವೆಂಪು ಜಾನಪದವನ್ನು ಸಂಪೂರ್ಣವಾಗಿ ನಿರಾಕರಿಸಿದವರಲ್ಲ, ಮತ್ತು ಅರುಣ್ ಜೋಳದ ಕೂಡ್ಲಿಗಿ ಅವರೆಂದಂತೆ ಅದು ಸಂಪೂರ್ಣ ಮೌಢ್ಯ ಎಂದು ಒಲವು ತೋರದೆಯೂ ಇದ್ದವರಲ್ಲ ಆದರೆ ಅದರಲ್ಲಿರುವ ಬದುಕಿಗೆ ವಿರೋಧವಾದ ಮತ-ಮೌಢ್ಯ-ಮೂಢನಂಬಿಕೆ ಸಂಬಂಧಿಸಿದ ಅಂಶಗಳನ್ನು ಸಾರಾಸಗಟಾಗಿ ಒಪ್ಪದೆ ವೈಚಾರಿಕ ಒರೆಗಲ್ಲಿನಲ್ಲಿಟ್ಟು ಉಜ್ಜಿನೋಡಿ ಸ್ವಾಗತಿಸಿ’ ಎಂದು ಅವರು ಸಾರಿ ಸಾರಿ ಹೇಳುತ್ತಿದ್ದಾರೆ.


ಈ ನೆಲೆಯಲ್ಲಿ ಕುವೆಂಪು ಸಾಹಿತ್ಯವೆಂಬ ಆ ಹುಲಿಕಲ್ ನೆತ್ತಿಯನ್ನು ಹತ್ತಿ (ಮದುಮಗಳು) ಆ ಹೆಬ್ಬುಲಿಯ ಗರ್ಜನೆಯನ್ನು ಆಲಿಸುವದಾದರೆ, ಆ ಹುಲಿ ಬೇಟೆಗೆ ಹೋಗಿ ಕತ್ತಲಗಿರಿಯ ಅಳುವಿಗಿಳಿದು (ಹೆಗ್ಗಡಿತಿ) ಅವರ ಗರ್ಭದಲ್ಲಿ ಮುಲುಗುಡುವ ಜೀವನ ಜಾಲವನ್ನು ಕಣ್ಣಿಟ್ಟು ನೋಡುವುದಾದರೆ, ಅಂಥ ರಸಿಕ ಧೀರಂಗೆ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ ಮಲೆನಾಡಿನ ಸಮಸ್ತ ಜಾನಪದ ಬದುಕಿನ ಸೂಕ್ಷ್ಮ ಹಾಗೂ ಸ್ಥೂಲ ಸ್ವರೂಪ ಅನಾವರಣಗೊಳ್ಳುವುದನ್ನು ಕಾಣಬಹುದು. ಕುವೆಂಪು ಸಾಹಿತ್ಯವೆಂದರೆ ಅದು ಮಲೆನಾಡಿನ ಮಲೆಯ ಮಕ್ಕಳ (ಡಾ. ಚಂದ್ರಶೇಖರ ನಂಗಲಿ ಅವರೆದಂತೆ ಫೋಕ್ಎಸ್ಡಿಮ್)ಜಾನಪದ ವಾಙ್ಮಯ ಎಂತೋ ಅಂತೆಯೇ ಅದು ವಿಶ್ವಾತ್ಮಕ ನೆಲೆಯ ಸಾಹಿತ್ಯ ಸನ್ನಿಧಿಯೂ ಕೂಡ. ಆದರೆ ಅವಿಚಾರ ರಮಣೀಯವಾದ ಆ ಸಾಹಿತ್ಯ ರಾಶಿಯಲ್ಲಿ ಕುವೆಂಪು ಎಲ್ಲಿಯೂ ಅಪ್ಪಿತಪ್ಪಿಯೂ ಮತ-ಮೌಢ್ಯ-ಮೂಢನಂಬಿಕೆಗಳಿಗೆ ಇಂಬು ಕೊಟ್ಟವರಲ್ಲಿ ಈ ಮಾತಿಗೆ ನೆನಪಾದ ಒಂದೆರಡು ಉದಾಹರಣೆಗಳನ್ನು ನೋಡಿ:
ಹೆಗ್ಗಡತಿ ಕಾಂದಬರಿಯಲ್ಲಿ ’ಕರುಣೆ ಮೂಕಪ್ರಾಣಿಯ ಬಲಿದಾನಕ್ಕಿಂತಲೂ ಹೆಚ್ಚಿನ ಪೂಜೆ’ ಎಂದು ಹೇಳಿ ಭೂತಕ್ಕೆ ಬಲಿಕೊಡುತ್ತಿದ್ದ ಬಲೀಂದ್ರನೆಂಬ ಹೋತವನ್ನು ಹೂವಯ್ಯನು ಉಳಿಸಿದ ಅಧ್ಯಾಯದ ದೆಸೆಯಿಂದ ಮದುಮಗಳು ಕಾದಂಬರಿಯಲ್ಲಿ ನಾಯಿಗುತ್ತಿತನ್ನು ತೋಳೆತ್ತಿ ಕಣ್ಣಾಪಂಡಿತ ಕೊಟ್ಟಿದ್ದ ತಾಯಿತವನ್ನು ತಿಮ್ಮಿಗೆ ತೋರಿಸುತ್ತ ಅಲ್ಲದಿದ್ರೆ ನನ್ನ ಸಂಗಡ ನೀ ಇಷ್ಟು ಸುಲಭಕ್ಕೆ ಓಡಿಬರ್ತಿದ್ಯಾ? ಚುಟುಗಿ ಹಾಕಿ ಕರೆದ್ರೆ ನಾಯಿಬರಾಹಂತೆ? (ಅಧ್ಯಾಯ - ೨೨) ಎಂದು ತೋಳು ತೋರಿಸಿ ಬೀಗುತ್ತಿರಲು ತಿಮ್ಮಿ ಒಮ್ಮೆಗೆ ಗುತ್ತಿ ತತ್ತರಿಸಿ ಹೋಗುವಂತೆ ಹ್ಞೂ ಮತ್ತೆ! ನಿನ್ನ್ಹಾಂಗೇ ಅವನೂ (ಬಚ್ಚ) ತೋರಿಸಿದ್ದ ನಂಗೆ ಎಂದು ಗುತ್ತಿಯ ನೀರಿಳಿಸುವಳು. ಹೀಗೆ ಕುವೆಂಪು ಅವಕಾಶ ಸಿಕ್ಕಾಗಲೆಲ್ಲಾ ಮತ-ಮೌಢ್ಯ-ಮೂಢನಂಬಿಕೆಗಳ ಫಳಕಗಳಾದ ಅಂತ್ರ-ಮಂತ್ರ-ತಂತ್ರ-ಕಾಯಿಲೆಗಳನ್ನೆಲ್ಲಾ ಕುಟ್ಟಿ-ಪುಡಿ ಮಾಡಿ ತೊರುವರು. ಮತ ಮೌಢ್ಯ ನಂಬಕೆಗಳೆಂಬ ಸೀಮೆ ಜಾಲಿಯ ಮುಳ್ಳುಗಳನ್ನು ಸವರಿ ಹಾಕಿ, ವಿಚಾರದ ಕಿಡಿ ಹಾರುವಂತೆ ಮಾಡುತ್ತಾರೆ. ಹೀಗದ್ದೂ ಜಾನಪದಲ್ಲಿ ಸೀಮಿತ ದೃಷ್ಟಿಯುಳ್ಳ ನಮ್ಮ ವಿಮರ್ಶಕರು ಕುವೆಂಪು ಜಾನಪದವನ್ನು ನಿರಾಕರಿಸಿದವರು ಅದರಲ್ಲಿ ಅವರಿಗೆ ಒಲವಿರಲಿಲ್ಲ, ಎಂಬಂತ ವಿವೇಕರಹಿತ ಮಾತನಾಡುವುದು ಪೂರ್ವಕಲ್ಪಿತ ದೃಷ್ಟಿಯದಲ್ಲದೆ ಬೇರೆಯಲ್ಲ. ಇಂಥವರಿಗೆ ಜಾನಪದವೆಂದರೆ ಮ್ಯೂಜಿಯಂಗಳಲ್ಲಿ ಸಂಗ್ರಹಿಸಿದ ವಸ್ತುಪರಿಕರಗಳು, ಜಾತ್ರೆ ಉತ್ಸವ ಸಭೆ ಸಮಾರಂಭಗಳಲ್ಲಿ ಬಂದು ಕುಣಿವುದು ಹಾಡುವುದು ವೇಷ ಕಟ್ಟುವುದು ಎಂದಷ್ಟೇ ಭಾವನೆ ಇರಬಹುದು. ಆದರೆ ಕುವೆಂಪು ವಾಙ್ಞಯವೊಂದು ಜಾನಪದ ಕಡಲು. ಆ ಕಡಲ ಗರ್ಭದ ತಿಮಿಂಗಿಲಾದಿ ಮತ್ಸ್ಯಲೋಕದ ಅನುಭವ ಪಡೆಯಬೇಕಾದರೆ ಮುತ್ತುಮುಳುಗ (Peಚಿಡಿಟ ಆiveಡಿ)ನ ಎದೆಗಾರಿಕೆಯೇ ಬೇಕು. ಅದರಲ್ಲಿ ವಿಹರಿಸುವುದೆಂದರೆ ಹೊಸದಿಗಂತದೆಡೆಗೆ ಸಾಗಿ ಹೋದಂತೆ. ಒಣಗು ವಿಮರ್ಶಕರಿಗಲ್ಲಿ ’ಪುಗಲು’ ಎಡೆಯಿಲ್ಲ; ರಸಿಕ ಧೀರಂಗೆ ಮಾತ್ರ ಕಡಲ ಶಂಕರ. ಆ ಒಟ್ಟಂದದ ಸಾಗರ ಸಾಹಿತ್ಯದಲ್ಲಿ ಇದು ಜಾನಪದ, ಇದು ಶಿಷ್ಟಪದ, ಇದು ಪರಿಶಿಷ್ಟಪದ, ಇದು ಪಂಚಮ ಎಂಬಂಥ ’ಪಂಚಪಾತ್ರೆಯ ವಿಮರ್ಶೆಗೆ ಅಲ್ಲಿ ಅವಕಾಶವಿಲ್ಲ ಆದ್ದರಿಂದಲೇ ಪೂರ್ವಕಲ್ಪಿತ ಸೀಮಿತ ದೃಷ್ಟಿಯ ಇಂಥ ಕೆಲವು ವಿಮರ್ಶಕರು ಕುವೆಂಪು ಅವರ ದಲಿತ ಜೀವನ ಚಿತ್ರಣದಲ್ಲಿ ಅಥೆಂಟಿಸಿಟಿ ಗೈರು ಹಾಜರು ಎಂದೂ ಚಡವಡಿಸಿದ್ದುಂಟು.


ಕುವೆಂಪು ಅವರಲ್ಲಿರುವ ಸಂಧಿಗ್ಧತೆಗಳು, ಮಿತಿಗಳು, ವರ್ಗಹಿತಾಸಕ್ತಿಗಳು ದಲಿತ ಜೀವನ ಚಿತ್ರಣಕ್ಕೆ ಅಥೆಂಟಿಸಿಟಿಯನ್ನು, ಸಮತೋಲನವನ್ನು ತಂದುಕೊಡದೆ ಹೋಗುತ್ತದೆ (ಬಿ. ಕೃಷ್ಣಪ್ಪ ಕುವೆಂಪು ಕಾದಂಬರಿಗಳಲ್ಲಿ ದಲಿತ ಜೀವನ ಚಿತ್ರಣ, ನೋಡಿ: ಸಂಪಾದಕ. ಎಚ್. ಎಸ್. ರಾಘವೇಂದ್ರರಾವ್, ಶತಮಾನ ಸಾಹಿತ್ಯ ವಿಮರ್ಶೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ೨೦೦೧ ಪುಟ ೫೬೮) ಪ್ರೋ. ಬಿ. ಕೃಷ್ಣಪ್ಪನವರು ಸುಮಾರು ಮೂವತ್ತು ವರ್ಷಗಳಷ್ಟು ಹಿಂದೆ ಕುವೆಂಪು ಬಗ್ಗೆ ಮಾಡಿದ ಈ ಕಾಮೆಂಟನ್ನೇ ಇವತ್ತಿಗೂ ಕೆಲವು ದಲಿತ ಪಂಡಿತ ವಿಮರ್ಶಕರು ತೆರೆಮೆರೆಯಲ್ಲಿ ಆಡುವುದು ಕೇಳಿಬರುತ್ತಿದೆ. ಆದರೆ ಕೃಷ್ಣಪ್ಪನವರು ಆಗ ಅವಸರದಲ್ಲಿ ಮಾಡಿದ ಆಕ್ಷೇಪಣೆ ಅನಿಸುತ್ತದೆ. ಅದಕ್ಕೆ ಕಾರಣವೂ ಇತ್ತು. ಏನೆಂದರೆ ಅದು ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿಗಳ ನಡುವೆ ಬಿರುಕು ಬಿಡುತ್ತಿದ್ದ ಕಾಲ. ದಲಿತರ ಎಲ್ಲ ಸಂಕಷ್ಟಗಳಿಗೆ ಈ ಭೂಮಾಲೀಕ ವರ್ಗವೇ ಕಾರಣವೆಂದು ದಲಿತರು ನಂಬಿದ್ದು, ಅದು ಸ್ವಲ್ಪಮಟ್ಟಿಗೆ ನಿಜವೂ ಆಗಿದ್ದು, ಕುವೆಂಪು ಆಕಸ್ಮಿಕವಾಗಿ ಅಂಥ ಒಂದು ಭೂಮಾಲೀಕ ವರ್ಗದಲ್ಲಿ ಹುಟ್ಟಿ ಬಂದದ್ದು, ಇತ್ಯಾದಿ ಈ ಎಲ್ಲ ಕಾರಣಗಳಿಂದಾಗಿ ಕೃಷ್ಣಪ್ಪನವರ ಇಂಥ ಒಂದು ಟೀಕೆಗೆ ಗುರಿಯಾಗಬೇಕಾಯಿತು. ಇದರಿಂದ ಹಾನಿಯಾದದ್ದು ಕುವೆಂಪು ಅವರಿಗಲ್ಲ-ದಲಿತವರ್ಗಕ್ಕೆ ಯಾಕೆಂದರೆ ಶೂದ್ರವರ್ಗವನ್ನು ಛಿದ್ರಿಸಿ ಪುರೋಹಿಶಾಹಿ ತನ್ನ ಬೇಳೆ ಬೇಯಿಸಿಕೊಳ್ಳಲು ಅನುಕೂಲವೇ ಆಯಿತು-ಎಂಬುದನ್ನು ಆ ಮೇಲಿನ ಕನ್ನಡ ವಿಮರ್ಶೆ ಮನಗಂಡಿದೆ. ಆದ್ದರಿಂದ ಕುವೆಂಪು ಅವರ ಕಥೆ, ಕಾದಂಬರಿ, ಭಾವಗೀತೆ, ಮಹಾಕಾವ್ಯ ಮುಂತಾಗಿ ಎಲ್ಲೆಡೆ ದಲಿತ ಜಗತ್ತು ಅನಾವರಣಗೊಂಡಿರುವ ಪ್ರಮಾಣದಲ್ಲಿ ಅಥೆಂಟಿಕ್ಕಾಗಿ ಉಳಿದ ಯಾವುದೇ ಕನ್ನಡ ಲೇಖಕರಲ್ಲಿ, ದಲಿತ ಲೇಖಕರನ್ನು ಒಳಗೊಂಡಂತೆ, ಅಭಿವ್ಯಕ್ತಿ ಪಡೆಯಲಿಲ್ಲ ಎಂಬುದು ನಿರ್ವಿವಾದ. ಈ ಸದಾಸದ್ವಿವೇಕ ಕುವೆಂಪು ಅಧ್ಯಯನ ಸಂದರ್ಭದಲ್ಲಿ ಅಗತ್ಯ ಇರಬೇಕಾದ್ದು ಇಲ್ಲವಾದರೆ ಇಂಥ ಅನರ್ಥಗಳು ಹುಟ್ಟಿಕೊಳ್ಳುತ್ತವೆ.
ವ್ಯವದಾನವಿದ್ದರೆ, ಅವರ ಕರಿಸಿದ್ದ, ಮರಸುಬೇಟೆ, ಡೂಲಿ, ನಾಗಿ, ಮಂಜಣ್ಣ ಹೇಳಿದ ಸ್ಥಳಗತೆ- ಮುಂತಾದ ಕಥನ ಕವನಗಳು; ಶ್ರೀಮನ್ಮೂಕವಾಗಿತ್ತು; ಸಾಲದ ಮಗು, ಯಾರೂ ಅರಿಯದವೀರ, ಧನ್ವಂತರಿ ಚಿಕಿತ್ಸೆ ಮುಂತಾದ ಕಥೆಗಳು; ಬೆರಳ್ಗೆ ಕೊರಳ್, ಜಲಗಾರ ಮುಂತಾದ ನಾಟಕಗಳು; ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಚಿತ್ರಿತವಾಗಿರುವ ವಾನರ, ಜಾಂಬವ ಬುಡಕಟ್ಟುಗಳು; ಈ ಎಲ್ಲಕ್ಕಿಂತ ಹೆಚ್ಚಾಗಿ ಹೆಗ್ಗಡತಿ ಮತ್ತು ಮದುಮಗಳು ಕಾದಂಬರಿಗಳಲ್ಲಿ ಚಿತ್ರಿತವಾಗಿರುವ ದಲಿತ ಜಗತ್ತ್ತು-ಇದನ್ನೆಲ್ಲ ಪರಾಂಬಂರಿಸಿ ನೋಡಬಹುದು. ದಲಿತರ ದಯನೀಯ ಬದುಕು ಮುಡುಗಟ್ಟಿ ನಿಂತಿರುವ ಕೆಲವು ಸನ್ನಿವೇಶಗಳನ್ನಿಲ್ಲ ಹೆಸರಿಸಬಹುದಾದರೆ; ಕೋಣೂರು ಬಿಡಾರದಲ್ಲಿ ಎತ್ತು ಹಾರಿದಂತೆ ಹಾರಿದ ಗಂಡ ಚೀಂಕ್ರನಿಂದ ಗರ್ಭಸ್ರಾವವಾಗಿ ಭಯಂಕರ ಸಾವು ಸಾಯುವ ಅವನ ಹೆಂಡತಿ ದೇಯಿ ಸನ್ನಿವೇಶ: ಹುಲಿಕಲ್ ನೆತ್ತಿ ಹತ್ತುವ ಸಂದರ್ಭದಲ್ಲಿ ಹುಲಿಯ ಆರ್ಭಟ ಕೇಳಿ ನಡುಗವ ತಿಮ್ಮಿ, ಎದೆ ಸೆಟೆದು ನಿಲ್ಲುವ ಗುತ್ತಿ; ಕೋಣೂರು ಬೀಡಾರದಲ್ಲಿ ಐತ-ಪೀಂಚಲು ಪರಸ್ಪರ ರಮಿಸಿ ಕೊಡುವ ಸನ್ನಿವೇಶ:
ಮಲೆನಾಡಿನ ದಟ್ಟಾರಣ್ಯದ ನಡುವೆ ಕಾರ್ಗತ್ತಲಲ್ಲಿ ಪೊಲೀಸರ ಕೈಯಿಂದ ತಪ್ಪಿಸಿ ಕತ್ತಲ ಕಾಡುಬಿದ್ದು ಹೊರಟ ನಾಯಿಗುತ್ತಿಯ ಘೋರ ವಿಸ್ಡಮ್ ಇತ್ಯಾದಿ ಮದುಮಗಳು ಕೃಯಿಯಲ್ಲಿ ಚಿತ್ರಿಕವಾಗಿರುವಂತೆ ಕನ್ನಡದ ಇನ್ನುಳಿದ ಸಾಹಿತ್ಯ ಕೃತಿಗಳಲ್ಲಿ ಈ ಪ್ರಮಾಣದ ದಲಿತ ಜೀವನ ಚಿತ್ರಣ ಉಂಟೇ ಎಂಬುದನ್ನು ಕನ್ನಡ ವಿಮರ್ಶೆ ಮರುಚಿಂತನೆಗೆ ಒಳಪಡಿಸಬೇಕು.
ಕುವೆಂಪು ಅವರಿಗೆ ಮಲೆನಾಡಿನ ಒಕ್ಕಲಿಗ ಭೂಮಾಲೀಕ ಸಮಾಜದ ಬಗ್ಗೆ ವರ್ಗ ಹಿತಾಸಕ್ತಿ ಇದೆ ಎಂಬ ಇನ್ನೊಂದು ಆರೋಪವಿದೆ. ಇದೂ ಕೂಡ ಸೀಮಿತ ದೃಷ್ಟಿಯ ಪೂರ್ವಕಲ್ಪಿತ ಟೀಕೆಯೆ ಹೊರತು ಬೇರೆಯಲ್ಲ ಏಕೆಂದರೆ ಹೆಣ್ಣು-ಹೊನ್ನು-ಮಣ್ಣು (ಆಸ್ತಿ) ಮುಂತಾದ ತಾರ್ಕಿಕ ಆಮಿಷಗಳಿಂದ, ಗುಹ್ಯಾತಿಗುಹ್ಯ ರೋಗರುಜಿನ, ಮತ-ಮೌಡ್ಯ-ಮೂಡನಂಬಿಕೆಗಳಿಂದ ಇಡಿಕಿರಿದ ಈ ಸಮಾಜದ ಚಾರಿತ್ರ್ಯವಧೆಗೆ ಕುವೆಂಪು ಅವರ ಹಾಗೆ ಕೊಡಲಿ ಎತ್ತಿದ ಇನ್ನೊಬ್ಬ ಲೇಖಕ ಸಿಕ್ಕುವುದು ದುರ್ಲಭ.
ಒಂದೆರಡು ನಿದರ್ಶನ ಹೇಳುವುದಾದರೆ; ಮನೆಮುರುಕು ಚಂದ್ರೇಗೌಡ ಜೀತದಾಳಿಗಿಂತ ಹೀನಾಯವಾಗಿ ಕಂಡು ಕೆಳಕಾನೂರಿನ ಬಡವ ಅಣ್ಣಯ್ಯಗೌಡನನ್ನು ಅವಮಾನಗೊಳಿಸಿ ಅಲ್ಲಿಂದ ಒಕ್ಕಲೆಬ್ಬಿಸುತ್ತಾನೆ. (ಹೆಗ್ಗಡತಿ). ಸಿಂಭಾವಿ ಭರಮೈ ಹೆಗ್ಗಡೆ ಕುಡುಕ, ಗುಹ್ಯರೋಗಪೀಡಿತ; ಹೂವಳ್ಳಿ ವೆಂಕಟಪ್ಪ ನಾಯಕವಿಧವೆ ನಾಗಕ್ಕನನ್ನು ಕೂಡಿಕೆ ಮಾಡಿಕೊಳ್ಳಲು ಹೆಣಗುವ ಸ್ತ್ರೀಲಂಪಟ; ಹಳೆಮನೆ ಸುಬ್ಬಣ್ಣ ಹೆಗ್ಗಡೆ ತನ್ನ ಹಂದಿ ವ್ಯಾರದಲ್ಲಿ ಒಂದು ಬಿಡಿಗಾಸೂ ಬಿಡದ ಲೊಭಿ; ಅವರ ಮಗ ತಿಮ್ಮಣ್ಣ ಹೆಗ್ಗಡೆ ಜೀತಕೇರಿ ಹೆಣ್ಣುಗಳ ಹಿಂದೆ ಬಿದ್ದ ಶ್ವಾನ ಸದೃಶಮನುಷ್ಯ; ಕೋಣೂರು ರಂಗಪ್ಪಗೌಡ ಜೀತಕೇರಿಯಲ್ಲೆ ಠಿಕಾಣಿ ಹೂಡುವ ಹಾದರಿಗ; ಬೆಟ್ಟಳ್ಳಿ ಕಲ್ಲೇಗೌಡರು ಜೀತದಾಳುಗಳನ್ನು ಕಂಬಕ್ಕೆ ಕಟ್ಟಿಸಿ ರಕ್ತ ವಸರುವಂತೆ ಸಾಬರಿಂದ ಹೊನ್ನಾಳಿ ವಡ್ತ ಕೊಡಿಸುವ ನಿರ್ಧಯಿ; ಅವರ ಮಗ ದೇವಯ್ಯ ಅಂತಕ್ಕನ ಮಗಳು ಕಾವೇರಿಯನ್ನು ಬಳಸಿಕೊಂಡ ವ್ಯಾಮೋಹಿ. ಹೀಗೆ ಕುವೆಂಪು ಪ್ರಜ್ಞಾಪೂರ್ವಕವಾಗಿಯೇ ಮಲೆನಾಡಿನ ಒಕ್ಕಲಿಗ ಸಮಾಜದ ಆಕ್ಷುದ್ರ ಜಗತ್ತಿನ ಒಳ-ಹೊರಗನ್ನು ಬಯಲಿಗೆಳೆಯುತ್ತಾರೆ. ಹೀಗಿರುವಾಗ ಅವರಲ್ಲಿ ಜಮೀನ್ದಾರರ ಬಗಗೆ ವರ್ಗ ಹಿತಾಸಕ್ತಿ ಉಂಟೆಂದು ಹೇಳುವುದು ಯಾವ ನ್ಯಾಯ.
ಕುವೆಂಪು ಅವರಿಗೆ ಮಹಿಳೆಯರ ಬಗ್ಗೆ ಎಣೆಯಿಲ್ಲದ ಗೌರವ, ಪೂಜ್ಯತಾಭಾವ. ’ನಾನು ಬಂದಿದ್ದೇನೆ ಹೇಮಿಯಗಂಡ’ ಎನ್ನುವವರೆಗೆ ಸ್ವರ್ಗದ ಬಾಗಿಲು ಅವರಿಗೆ ತೆರೆಯಲಿಲ್ಲವಂತೆ. (ನೋಡಿ ಅನುತ್ತರಾ-ಕವನ ಸಂಗ್ರಹದ ಯಕ್ಷಪ್ರಶ್ನೆ) ಲಂಪಟರೋ ಮನೆ ಮೂರುಕರೂ ಆದ ಈ ಮಲೆನಾಡಿನ ಒಕ್ಕಲಿಗ ಗೌಡರುಗಳೊಂದಿಗೆ ಒಗತನ ಮಾಡುವ ಮಹಿಳೆಯರಿಗೆ ನೆಮ್ಮದಿ ಎಂಬುದೇ ಇಲ್ಲ. ಉದಾ : ದಾಯಾದಿ ಪತ್ನಿ ನಾಗಮ್ಮನವರ ಆಸ್ತಿ-ಪಾಸ್ತಿಗೆ ಚಳ್ಳೆ ಹಣ್ಣು ತಿನ್ನಿಸಿ ಕಾನೂರಿನಿಂದ ಆಕೆಯನ್ನು ಹೊರಹಾಕುವ ಚಂದ್ರೇಗೌಡ, ನಡುವಯಸ್ಸು ಮೀರಿದ ಮೇಲೂ ಕೆಳಕಾನೂರಿನ ಬಡಕುಟುಂಬದ ತರುಣಿ ಸುಬ್ಬಮ್ಮನನ್ನು ಮದುವೆಯಾಗಿ, ಗಂಗೆಯಂತಹ ಗಯ್ಯಾಳಿ ಹೆಂಗಸಿನ ಸಹವಾಸ ಮಾಡಿ ಮರ್ಮರೋಗಕ್ಕೆ ತುತ್ತಾಗಿ ಮಡಿಯುತ್ತಾನೆ; ಸೇರೆಗಾರ ಶೆಟ್ಟಿ ತನ್ನ ನರಿಬುದ್ಧಿ ಬಳಸಿ ಸುಬ್ಬಮ್ಮನಲ್ಲಿ ಸುಖಪಟ್ಟು ಆಕೆ ಗರ್ಭಧರಿಸಿದ ಮೇಲೆ ಘಟ್ಟದ ಕೆಳಕ್ಕೆ ಹಾರಿ ಹೋಗುತ್ತಾನೆ; ಹೂವಯ್ಯನಿಗೆ ಒಲಿದ ಸೀತೆ, ಅನಿವಾರ್ಯವಾಗಿ ರಾಮಯ್ಯನನ್ನು ಮದುವೆಯಾಗಿ, ಅವನ ಆತ್ಮಹತ್ಯೆಯ ನಂತರ ಸಂನ್ಯಾಸಿನಿಯಾಗಿ ನಿಲ್ಲುತ್ತಾಳೆ. (ಹೆಗ್ಗಡತಿ) ಪುರುಷತ್ವವನ್ನು ಕಳೆದುಕೊಂಡ ಸಿಂಬಾವಿ ಭರಮೈ ಹೆಗ್ಗಡೆಯ ಹೆಂಡತಿ ಜಟ್ಟಮ್ಮ ಸಂತಾನಕ್ಕಾಗಿ ಪರಿತಪಿಸುತ್ತಾಳೆ; ಬದುಕು ಸಾಗಿಸಲು ದುರ್ಬರವಾದಾಗ ವಿಧವೆ ನಾಗತ್ತೆ ತನ್ನ ವಿಧವೆ ಸೊಸೆ ನಾಗಕ್ಕನನ್ನು ಹೂವಳ್ಳಿ ವೆಂಕಟಣ್ಣನಿಗೆ ಕೂಡಿಕೆ ಮಾಡಿಕೊಡುತ್ತಾಳೆ; ಬಲವಂತದ ಮದುವೆಗೆ ಒಪ್ಪದೆ ರಾತ್ರೋ ರಾತ್ರಿ ಮನೆ ಬಿಟ್ಟು ಮುಕುಂದಯ್ಯ ಮತ್ತು ಪೀಂಚಲು ಜೊತೆ ಹುಲಿಕಲ್ಲು ನೆತ್ತಿಗೆ ಹತ್ತುವ ಮದುವಗಳು ಚಿನ್ನಮ್ಮ ಆ ಮೊಮ್ಮಗಳ ಸ್ಥಿತಿಗೆ ಮಮ್ಮಲ ಮರುಗುವ ಇಳಿವಯಸ್ಸಿನ ಅವಳ ಅಜ್ಜಿ; ಬೆಟ್ಟಳ್ಳಿ ಕಲ್ಲೇಗೌಡರ ದರ್ಪದ ಎದುರು ನಿಲ್ಲಲಾರದ ಮಡದಿ ದೊಡ್ಡಮ್ಮ; ತನ್ನ ಸೊಸೆಯ ಕಾಲನ್ನೇ ತಿರಚಿಟ್ಟ ಮಂಜಪ್ಪ ಭಟ್ಟ; ಚಿಂಕ್ರ ಮತ್ತು ಲುಂಗಿಸಾಬಿ ಇವರ ಹತ್ಯಾಚಾರಕ್ಕೆ ಒಳಗಾಗಿ ಮಿಷನ್ ಸ್ನೂಲಿನ ಬಾವಿಗೆ ಹಾರಿಕೊಂಡು ಸತ್ತ ಅಮಾಯಕ ಹುಡುಗಿ ಕಾವೇರಿ-ಈ ಮುಂತಾದ ಪಾತ್ರಗಳು ಕುವೆಂಪು ಅವರ ಸ್ತ್ರೀ ಸಂವೇಧನೆಗೆ ಸಾಕ್ತಿ ನಿಲ್ಲುತ್ತವೆ.
ಬದುಕು ಮಾಯಾಗಾನ (ಒಚಿgieಚಿಟ ಒeಟoಜಥಿoಜಿ ಐiಜಿe)
ಪುಟ್ಟಪ್ಪನವರಿಗೆ ಪುನರ್ಜನ್ಮದಲ್ಲಿ, ಕರ್ಮಸಿದ್ದಾಂತದಲ್ಲಿ, ಅಘೋರಿಸಿದ್ಧರ ಪರಕಾಯ ಪ್ರವೇಶ ಮುಂತಾದ ವಿಚಾರದಲ್ಲಿ ನಂಬಿಕೆ ಇದೆ; ಅದು ಅವರ ವೈಚಾರಿಕ ನಿಲುವಿಗೆ ವ್ಯತಿರಿಕ್ತವಲ್ಲವೆ ಎಂಬ ಮಾತು ಬಹಳಕಾಲದಿಂದಲೂ ಕೇಳಿ ಬರುತ್ತಿದೆ. ಅದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸಬಹುದು. ’ನೆನಪಿನ ದೋಣಿಯಲ್ಲಿ’ ಎಂಬ ಅವರ ಆತ್ಮ ಕಥನದಲ್ಲಿ ’ನನ್ನ ತಂದೆ ವೆಂಕಟಪ್ಪನವರೇ ನನ್ನ ಮಗ ಚೈತ್ರನಾಗಿ ಹುಟ್ಟಿರುತ್ತಾನೆ’ ಎನ್ನುತ್ತಾರೆ. ಮದುವಗಳು ಕಾದಂಬರಿಯಲ್ಲಿಯೂ ಒಂದೆರಡು ನಿದರ್ಶನಗಳಿವೆ. ಬಾಲೆ ಚಿನ್ನಮ್ಮನು ತನ್ನ ಅಜ್ಜಿಯ ಜೊತೆ ನೆಂಟರ ಮನೆಗೆ ಹೋಗುತ್ತಿರುವಾಗ ’ನನಗೆ ಹಿಂದಿನ ಜನ್ಮದಲ್ಲಿ ಮುಕುಂದ ಭಾವನೇ ಗಂಡನಾಗಿದ್ದನು’ ಎಂದು ಹೇಳುತ್ತಾಳೆ; ಹಳೇ ಮನೆ ಸುಬ್ಬಣ್ಣ ಹೆಗ್ಗಡೆಯ ಮಗ ದೊಡ್ಡಣ್ಣ ತಿರುಪತಿ ಯಾತ್ರೆಗೆಂದು ಹೋದವನು ದಾರಿಯಲ್ಲಿಯೇ ದುರ್ಮರಕ್ಕೀಡಾಗಲು ಅವನ ಶರೀರಕ್ಕೆ ಇನ್ನೂ ಕರ್ಮ ಸವೆಯದೆ ಅಂತರ್ ಪಿಶಾಚಿಯಾಗಿ ಅಲೆಯುತ್ತಿದ್ದು ಗೋಸಾಯಿ ಒಬ್ಬನ ಜೀವಧಾರಣೆ ಮಾಡುತ್ತದೆ. ಹಾಗೆಯೇ ರಂಗಮ್ಮನ ಗಂಡ ಅದೇ ದೊಡ್ಡಣ್ಣ ಹೆಗ್ಗಡೆಯು ಮುಕುಂದಯ್ಯನ ಭಾವ ದೇವಯ್ಯನ ಮಗನಾಗಿ ಪುನರ್ಜನ್ಮ ತಾಳಿರುವನೆಂದು. ಗಡ್ಡದಯ್ಯನು ಮುಕುಂದಯ್ಯನಿಗೆ ಹೇಳುತ್ತಾನೆ. ಆದರೆ ಗಡ್ಡದಯ್ಯ ಮುಂದಿನದು ಏನಾಗುತ್ತದೆ ಎಂಬುದರ ಬಗ್ಗೆ ಮಾತ್ರ ಬಾಯಿತೆರೆಯಲಾರ. ಇದೇ ಜಾನಪದ ಜೀವನದ ಮಾಯಗಾನ; ಅದೊಂದು ನಿಗೂಢ ವಿಶ್ವ ರಹಸ್ಯ ೪+೪=೮ ಎಂಬುವ ಲೆಕ್ಕಾಚಾರ ಇಲ್ಲಿಗೆ ಸಲ್ಲದು. ಕುವೆಂಪು ಸಾಹಿತ್ಯದ ಮ್ಯಾಜಿಕಲ್ ಮೆಲೋಡಿ ಎಂದರೆ ಈ ಪರಿಯ ಸೊಬಗು! ಇಂಥ ಸಾಪೇಕ್ಷ ಜಾನಪದ ಶ್ರದ್ಧಾನಂಬಿಕೆಗಳನ್ನು ಕುವೆಂಪು ಕಾದಂಬರಿಗಳಿಂದ ಮೈನಸ್ ಮಾಡಿದರೆ ಅಲ್ಲಿ ಉಳಿಯುವದೇನು? ಹೆಜ್ಜೇನು ಕಟ್ಟಿ ಮರಿ ಮಾಡಿಕೊಂಡು, ಜೇನುಹೀರಿ ಹಾರಿಹೋದ ಮೇಲೆ ಆ ರೋಕ್ಷ ವೃಕ್ಷದಲ್ಲಿ ಇಳಿಬಿದ್ದ ಶುಷ್ಕ ಜೇನು ರೊಟ್ಟಿಯಂತಷ್ಟೆ. ಇಂಥವುಗಳಿಗೆಲ್ಲ ಸಮಜಾಯಿಷಿ ಕೊಡಲುಂಟೇ ಹಾಗೆ ಮಾಡುವುದೆಂದರೆ ಒಣವೇದಾಂತ, ಶುಷ್ಕ ವೈಚಾರಿಕತೆ ಮರಳು ಗಾಣಕ್ಕೆ ಹಾಕಿ ಎಣ್ಣೆ ತೆಗೆಯುತ್ತೇನೆಂಬ ಶುದ್ಧ ಮೂರ್ಖತನ. ಈ ಬಗ್ಗೆ ಇನ್ನಿಷ್ಟು ವಿಸ್ತಿರಿಸಿ ಹೇಳುವುದಾದರೆ. ದೇವಯ್ಯನ ತೊಟ್ಟಿಲು ಕಂದನನ್ನು ಕಂಡು ಸುಬ್ಬಣ್ಣ ಹೆಗ್ಗಡೆ ತನ್ನ ಮಗನ ನೆನಪು ತೆಗೆದರೆ, ಮತ್ತು ಅವರ ಸೊಸೆ ದೊಡ್ಡಣ್ಣನ ಹೆಂಡತಿ ರಂಗಮ್ಮ ಅದೇ ಮಗುವನ್ನು ಕಂಡು ತನ್ನ ಗಂಡನೇ ಇವನೆಂದು ಭಾವಿಸಿ ಮೈಮತೆತರೆ - ಇದೆಲ್ಲ ಜಾನಪದ ಪ್ರಪಂಚದಲ್ಲಿ ಸ್ವೀಕೃತವೆ ಅಲ್ಲವೇನು? ಹಾಗೆಂದು ಕುವೆಂಪು ಪುನರ್ಜನ್ಮದಲ್ಲಿ ಕರ್ಮಸಿದ್ಧಾಂತದಲ್ಲಿ, ಪರಕಾಯ ಪ್ರವೇಶ ಮುಂತಾದವುಗಳಲ್ಲಿ ನಂಬಿಕೆ ವುಳ್ಳವರಾಗಿದ್ದರು- ಎಂದು ’ಇಳಿಕೈದು’ ಮಾತಾಡಲುಂಟೆ? ವಾಸ್ತವವಾಗಿ ಇದೊಂದು ಮಾಯಲೋಕ. ಬದುಕಿನ ಭ್ರಮಣೆಗೆ ಕೊನೆ ಮೊದಲು ಎಂಬುದಿಲ್ಲವಲ್ಲ ಮದುಮಗಳು ಕಾದಂಬರಿಯ ಮೊದಲಿಗೆ ಸಾದರಪಡಿಸಿರುವಂತೆ ’ಇಲ್ಲಿ ಯಾವುದಕ್ಕೂ ಮೋದಲಿಲ್ಲ; ಯಾವುದಕ್ಕೂ ತುದಿಯಿಲ್ಲ; ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ; ಕೊನೆಮುಟ್ಟುವುದೂ ಇಲ್ಲ! ಆದ್ದರಿಂದ ಗಡ್ಡದಯ್ಯ ಹೇಳುವಂತೆ ನಾವು ಅರಿವಾಸೆಯ ಬಿಟ್ಟು ಇರುವಾಸೆಯ ತೊಡಬೇಕು. ಕುವೆಂಪು ಸಾಹಿತ್ಯ ಎಂದರೆ ಈ ಲೋಕದ ಬದುಕಿಗೆ ಹಿಡಿದ ಒಂದು ಸಾಗರೋಪಮ ಮಾಂತ್ರಿಕ ಪ್ರತಿಮೆ. ನೆಲಛಂದಸ್ಸಿನ ಈ ಮಾಂತ್ರಿಕತೆಯ ಇಲ್ಲವಾಗಿದ್ದರೆ, ಅವರ ಕಾದಂಬರಿಗಳು ರಕ್ತಮಾಂಸ ಇಲ್ಲದ ವೈದ್ಯವಿಜ್ಞಾನದ ಪ್ರಯೋಗಾಲಯದಲ್ಲಿರಿಸಿದ ಕಂಗಾಲ ಅಸ್ಥಿ ಪಂಜರಗಳ ತಾಗುತ್ತಿದ್ದವು ಕುವೆಂಪು ಕೂಗುವ ಕೂಗು ಕತ್ತಲಗಿರಿ ಕಣಿವೆಯಲ್ಲಿ ಮಾರ್ದನಿಸುತ್ತದೆ; ಹುಲಿಕಲ್ ನೆತ್ತಿಯಲ್ಲಿ ಅಬ್ಬರಿಸುತ್ತದೆ. ಅದನ್ನು ಆಲಿಸಿ ಆನಂದಿಸುವುದಕ್ಕೆ ಗುತ್ತಿ-ತಿಮ್ಮಿ, ಐಕ-ಪೀಂಚಲು ಇಂಥ ಅಡವಿ ಜೀವಿಗಳ ಎದೆಗಾರಿಕೆಯೇ ಬೇಕು. ಇಲ್ಲವಾದರೆ, ’ಕುವೆಂಪು ಒಂದು ಬಗೆಯಲ್ಲಿ ಜಾನಪದವನ್ನು ನಿರಾಕರಿಸಿದವರು; ಅದು ಮೌಢ್ಯವೆಂದು ಅವರು ಆ ಕಡೆಗೆ ಹೆಚ್ಚು ಒಲವು ತೋರಲಿಲ್ಲ’ ಎಂಬಂಥ ಅವಸರಿವೂ, ಅಸಂಬದ್ಧವೂ, ಅಪ್ರಭುದ್ಧವೂ ಆದ ಪ್ರತಿಕ್ರಿಯೆಗಳು ಹುಟ್ಟಿಕೊಳ್ಳುತ್ತವೆ ಒಕ್ಕಲು ಕಣದ ಮೇಟಿಗೆ ಕಟ್ಟಿದ ’ಬಡಿಹೋರ’ ಗಳಂತೆ ಸುತ್ತುವ ಇಂಥ ವಿಮರ್ಶಕರನ್ನು ಕಂಡು, ಕುವೆಂಪು ಮೈಮೇಳೆ ಬಂದವರಂತೆ ವರ್ತಿಸುವ ಆ ಕಾಡು ಕವಿಯ ಈಕಾಡು ವಿಮರ್ಶಕ ವಿ. ಚಂದ್ರಶೇಖರ ನಂಗಲಿಯವರು ’ಕುವೆಂಪು ಕಾದಂಬರಿಗಳಲ್ಲಿ ’ಏಕೈಕ’ವೆನ್ನಬಹುದಾದ ಕ್ರಿಯೆ-ಕಾಲ-ದೇಶಗಳಲ್ಲಿ..... ಈ ಕಾದಂಬರಿಗಳಿಗೆ ಪ್ರಾದೇಶಿಕ ಎಂಬ ಹಣೆಪಟ್ಟಿ ಹಚ್ಚಿರುವ ವಿಮರ್ಶೆಯ ವಾಗ್ವಿಲಾಸಗಳಿಗೆ ದಿಕ್ಕಾರವಿರಲಿ (ಕುವೆಂಪು ಕಾದಂಬರಿಗಳುಃ ಹೊಸ ಓದುತತ್ವ. ಹೊಸತು ಅಕ್ಟೋಬರ್ ೨೦೧೧) ಎಂದು ದೆಹಲಿಯ ಕರ್ನಾಟಕ ಸಂಘ ಏಪ್ರಿಲ್ ೨೦೧೧ರಲ್ಲಿ ನಡೆದಿ ಕುವೆಂಪು ಕುರಿತು ವಿಚಾರ ಸಂಕೀರಣದಲ್ಲಿ ಗುಡುಗಿರುವುದು ಆ ಗುಡುಗಿಗೆ ಈವರೆಗೆ ಯಾರೂ ಮಾರುತ್ತರಿಸದೆ ಇರುವುದೇ ಅವರ ಮಾತಿನ ಗುರುತ್ವವನ್ನು ಸಾದರಪಡಿಸುತ್ತದೆ.
ಕ್ರಿಯಾ-ಕಾಲ-ದೇಳೈಕ್ಯಗಳೆಂಬ ಟ್ರಿನಿಟಿಗಳೆಲ್ಲೆಮೀರಿ
ಪ್ರೊ. ವಿ. ಚಂದ್ರಶೇಖರ ನಂಗಲಿಯುವರೆಂದತೆ ಕುವೆಂಪು ಕಾದಂಬರಿಗಳು ಯಾವ ಕ್ರಿಯಾ-ಕಾಲ- ದೇಶಗಳಿಗೂ ಬದ್ಧವಾದುವುಗಳಲ್ಲಿ ಅವು ಪ್ರಾಚಿನ ಗ್ರೀಕ್ನ ಕಾಲೈಕ್ಯ (Uಟಿiಣಥಿ oಜಿ ಣime) ಸ್ಥಳಕ್ಕೆ (Uಟಿiಣಥಿ oಜಿ ಠಿಟಚಿಛಿe ಹಾಗೂ ಕ್ರಿಯೈಕ್ಯ (Uಟಿiಣಥಿ oಜಿ ಣime) ಎಂಬ ಟ್ರಿನಿಟಿ ಕಾವ್ಯ ತತ್ವಸಿದ್ದಾಂತಗಳಿಗೆ ಒಗ್ಗುವ ಕೃತಿಗಳಲ್ಲಿ, ಇದನ್ನರಿಯದೆ, ಮೇಬಾಲೆಯ ಮಕ್ಕಳಾದ ಕೆಲವು ವಿಮರ್ಶಕರು ಕುವೆಂಪು ಕಾದಂಬರಿಗಳು ಪ್ರಾದೇಶಿಕವಾದವುಗಳು; ಇಲ್ಲಿ ಕೇಂದ್ರ ಪ್ರಜ್ಞೆ ಎಂಬುದಿಲ್ಲ; ಕೇಂದ್ರ ಘಟನೆಯೇ ಇಲ್ಲ; ನಾಯಕನಿಲ್ಲ, ನಾಯಕಿಯಿಲ್ಲ; ಹಾಗಿಲ್ಲ, ಹಾಗಿಲ್ಲ, ಅದಿಲ್ಲ, ಇದಿಲ್ಲ ಎಂದು ಮುಂತಾಗಿ ಬಡಬಡಿಸುವರು. ಆದರೆ ಈ ವಿಶ್ವ ವ್ಯಾಪಾರದಲ್ಲಿ ಕೇಂದ್ರ ಪ್ರಜ್ಞೆ ಕೇಂದ್ರ ಘಟನೆ ಎಂಬುದೊಂದಿದೆಯೇ? ಇಲ್ಲ, ರೂಪಕದಲ್ಲಿ ಹೇಳುವುದಾದರೆ, ಕವಿ ಬೇಂದ್ರೆಯವರು ನಿರ್ವಚಿಸಿರುವಂತೆ ವಿಶ್ವ ವ್ಯಾಪಾರವೆಂಬುದೊಂದು ಅನಂತ ಪ್ರಣಯ:
ಉತ್ತರ ಧ್ರುವದಿಂ ದಕ್ಷಿಣ ಧ್ರುವಕ್ಕೂ
ಚುಂಬಕ ಗಾಳಿಯು ಬೀಸುತ್ತಿದೆ
ಸೂರ್ಯನ ಬಿಂಬಕ್ಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.
ಹೀಗೆ ಭೂಮಿ ಮೊದಲು ಗೊಂಡು ಸೂರ್ಯ ಚಂದ್ರಾದಿಗ್ರಹತಾರಾ ನಕ್ಷತ್ರಗಳೆಲ್ಲ ತಂತಮ್ಮ ಪಥದಲ್ಲಿ ಚಲಿಸುತ್ತ ಅನಂತಾಕಾಶದಲ್ಲಿ, ಅನಂತಕಾಲದಲ್ಲಿ ಸುಮ್ಮನೆ ಪ್ರವಾಹದೋಪಾದಿಯಲ್ಲಿ ಸುತ್ತುತಿವೆಯಷ್ಟೆ, ಇಲ್ಲಿ ’ಏಕೈಕ’ ಕ್ರಿಯಾ-ಕಾಲ-ಘಟನೆಗಳೆಂಬುವೇ ಇಲ್ಲ. ಇದೇ ತಾತ್ವಿಕತೆ ಕುವೆಂಪು ಕಾದಂಬರಿಗಳ ಭೂಮಿಕ. ಇದು ಅವರ ಆರಂಭದ ಸಾಹಿತ್ಯದಲ್ಲಿಯೇ ಮೈದೋರಿದ. ಉದಾಹರಣೆಗೆ ೧೯೩೬ ರಲ್ಲಿ ರಚಿತವಾದ ’ಕರಿಸಿದ್ಧ’ ಎಂಬ ಕಥನ ಕವನದ ಮುಕ್ತಾಯವನ್ನು ಗಮನಿಸಬಹುದು.
ಯಮನ ಕರಣಿಕನಾಗ ಕಾಲದೋಲೆಯ ಮೇಲೆ,
ಚಿತ್ರಗುಪ್ತನು ಬರೆದು ಚಿತ್ರಿಸಿದ ನಿಂತೆಂದು;
ಪಾರ್ಲಿಮೆಂಟನ ಲೊಬ್ಬ ಭಾಷಣವ ಮಾಡಿದನು.....
ವಂಗದೇಳದ ಕವಿಯು ನಾಟಕವ ನಾಡಿದನು.....
ಹಿಮಗಿರಿಯ ಮೇಲೊಬ್ಬ ಸಾಧುವಾದನು ಸಿದ್ಧ.....
ಜರ್ಮನಿಯ ದೇಶದಲಿ ನಡೆದಿದೆ ಮಹಾಯುದ್ಧ.....
ಕುಪ್ಪಳಿಯಕೆರೆಯಲ್ಲಿ ಬೈರ ಹುಡುಗನುಬಿದ್ದ.....
ಮಡಿದವಗೆ ಮರುಗಿದರು ಗಿಡ್ಡಿ, ಕರಿಸಿದ್ದ.....
ಹಂಡನಾಯಿಯು ಮರುಗಿ ಕಣ್ಣೀರು ಕರೆದಿತ್ತು.....
ಆಫ್ರಿಕದಿ ಕಂಬಿ ತಪ್ಪಿದ ರೈಲು ಬಿದ್ದಿತ್ತು.....
ಕಾಶಿಯಲ್ಲಿ ಹಾರುವವರು ಹೇಳುತ್ತಿರುವರು ವೇದ.....
ಚಿತ್ರಗುಪ್ತನಿಗಿದೆಯೆ ಮೇಲುಕೀಲನ ಭೇದ ?
ಹೀಗೆ ಯಮನ ಕರಣಿಕ ಚಿತ್ರಗುಪ್ತನಿಗೆ ಲೋಕ ಘಟನೆಗಳೆಲ್ಲ ಒಂದೇ ಸಮಾನ.
ಅಲ್ಲಿ ಬಿಡ ಗಿಡ್ಡಿ, ಕರಿಸಿದ್ದರ ಮಗ ಬೈರ ಹುಡುಗ ಕುಪ್ಪಳಿ ಕರೆಯಲ್ಲಿ ಮುಳಿಗಿ ಸತ್ತದ್ದು ಎಂತೋ ಅಂತೆಯೇ ಉಳಿದ ಲೋಕ ಘಟನೆಗಳು ಸಹ ಆ ಪೂರ್ಣದೃಷ್ಟಿಗೆ ಯಾವುದು ಸಣ್ಣದಲ್ಲ, ಯಾವುದೂ ದೊಡ್ಡದಲ್ಲ; ಅಲ್ಲಿ ಮೇಲು ಕೀಳೆಂಬ ಭೇದವಿಲ್ಲ. ಹಾಗೆಯೇ ಮದುಮಗಳು ಕಾದಂಬರಿಯಲ್ಲಿ ಚಿತ್ರತವಾಗಿರುವ ಸಿಂಬಾವಿ, ಲಕ್ಕುಂದ ಹೂವಳ್ಳಿ, ಕಲ್ಲೂರು, ಬೆಟ್ಟಳ್ಳಿ, ಮೇಗರವಳ್ಳಿ, ಹಳೆಮನೆ ಮುಂತಾದ ಊರು ಕೇರಿಗಳಲ್ಲಿ ಏಕಕಾಲಕ್ಕೆ ನಡೆಯುವ ಕ್ರಿಯಾ ಪರಂಪರೆಯನ್ನು ಕುವೆಂಪು ಅವರ ಸಮ್ಯಕ್ ದೃಷ್ಟಿ ಇದ್ದಲ್ಲಿ ಯೇಕೆಂದೇ ಕಂಡರಿಸಬಲ್ಲದು.
ಸಂಜಯನ ಕರ್ಣ ದೃಷ್ಟಿ
ಸಂಜಯನು ಕುರುಕ್ಷೇತ್ರ ರಣಭೂಮಿಯಲ್ಲಿ ಯಾರು ಯಾರು ಗೆದ್ದರು, ಯಾರು ಯಾರು ಸೋತರು, ಸತ್ತರು ಮುಂತಾದನೆಲ್ಲ ಎದುರಿಗೆ ಕಂಡವನಂತೆ ಧೃತರಾಷ್ಟ್ರನಿಗೆ ಬಣ್ಣಿಸಿ ಹೇಳುತ್ತಿದ್ದನು. ಹೀಗೆ ಎದುರಿಗೆ ಕಾಣದಿದ್ದರೂ ಕಂಡಂತೆ ಸಾಕ್ಷಾತ್ಕಾರಿಸಿಕೊಂಡು ವರ್ಣಿಸುವುದನ್ನು ’ಟಿಲಿಪತಿ’ ದೃಷ್ಟಿಎನ್ನಲಾಗುತ್ತದೆ. ಮಹಾನ್ ಲೇಖಕರೆದು ಇಂಥಪರಿಭಾವನೆ. ಕಾಲ ಪ್ರವಾಹದಲ್ಲಿ ವಿಸ್ಮೃತಿಗೆ ಹೋದ ಎಷ್ಟೆಷ್ಟೋ ಘಟನೆಗಳು ಸಾಗರಮಧ್ಯೆ ತೇಲುವ ದ್ವೀಪ ಸ್ತೋಮಗಳಂತೆ ತಟ್ಟನೆ ಕಣ್ ಗೋಚರವಾಗಬಹುದು. ಮಲೆನಾಡಿನ ಕೊಂಪಯೊಂದರಲ್ಲಿ ಕ್ರೈಸ್ತಮತ ಪ್ರಚಾರ ನಿರತ ಪ್ರಾದಿ, ಜೀವರತ್ನಯ್ಯ ಮಾಡುವ ಮತಾಂತರ ಬೋಧೆ ಎಂತೋ ಅಂತೆಯೇ ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡುವ ಹಿಂದೂ ಧರ್ಮದ ರ್ಶನ ಸಾರವೂ ಸಹ. ಅವರ ಭಾಷಣ ಚಿಕಾಗೋದಿಂದ ವಿಂದ್ಯ-ಹಿಮಾಚಲ ಪರ್ವತಗಳಲ್ಲೂ ಪ್ರತಿಧ್ವನಿಸುತ್ತದೆ-ಕಾಲ ದೇಶ ಮೀರಿ, ದೇವಯ್ಯನ ತೊಟ್ಟಿಲ ಕಂದನಲ್ಲಿ ತನ್ನ ಹಿರಿಯಮಗ ದೊಡ್ಡಣ್ಣನನ್ನು ಕಾಣುವ ಹಳೆಮನೆ ಸುಬ್ಬಣ್ಣ ಹೆಗ್ಗಡೆ, ಹಾಗೂ ಆತೊಟ್ಟಿಲ ಕಂದನೇ ನನ್ನ ಗಂಡ ದೊಡ್ಡಣ್ಣನೆಮದು ಭ್ರಮಿಸುವ ರಂಗಮ್ಮ, ನೆಂಟರಮನೆ ದಾರಿಯಲ್ಲಿ ಹೋಗುತ್ತ ಮುಕುಂದ ಭಾವನೇ ತನ್ನ ಹಿಂದಿನ ಜನ್ಮದ ಗಂಡ ನೆಂದು ನೆನಪುತೆಗೆವ ಜಾತಿ ಚಿನ್ನಮ್ಮ-ಇವರೆಲ್ಲ ದೇಶಕಾಲಗಳನ್ನು ಒಂದೆಡೆಗೆ ಒಳಗೊಂಡು ಕಾಣುವವವರು. ಇಂಥ ಎಷ್ಟೋ ಸಂಗತಿಗಳು ಕುವೆಂಪು ಕಾದಂಬರಿಗಳಲ್ಲಿ ಚೆಲ್ಲುವರಿದು ತುಂಬಿವೆ ಆದಕಾರಣ ಅವರ ವಿಚಾರವಂತ ಶಿಷ್ಯಕೆ. ರಾಮದಾಸ್ ಒಮ್ಮೆ ಕುವೆಂಪು ಅವರನ್ನು ಕುರಿತು ’ನಿಮಗೆ ಪುನರ್ಜನಮ್ಮದಲ್ಲಿ ನಂಬಿಕೆ ಇದೆಯೇ? ಎಂದೇ ಕೇಳಿದರಂತೆ. ಅದಕ್ಕೆ ಕುವೆಂಪುನಕ್ಕು ’ಇದ್ದರೆ ಅದರಿಂದ ಲೋಕಕಲ್ಯಾಣಕ್ಕೆ ಯಾವಭಂಗವೂ ಇಲ್ಲ. ಅದು ಬದುಕಿನ ನಿಗೂಢತೆ, ಅದಿರಲಿ, ನೀವು ನನ್ನ ಮನುಜಮತ ವಿಶ್ವಾಸಥದ ಸಪ್ತ ಸೂತ್ರಗಳನ್ನು ಅನುಸರಿಸಿ ಶ್ರೇಯೋವಂತರಾಗಿರಿ’ ಎಂದರಂತೆ ಕೊನೆಯದಾಗಿ ಒಂದುಮಾತು ಶಿವಮೊಗ್ಗ ಜಿಲ್ಲೆ ಲಕ್ಕವಳ್ಳಿ ಡ್ಯಾಂಬಳಿ ಸ್ಥಾಪಿಸಲಾದ ವಿಶ್ವವಿದ್ಯಾನಿಲಯಕ್ಕೆ ಕುವೆಂಪು ಹೆಸರಿಡಬೇಕೆಂಬ ಪ್ರಸ್ತಾವ ಚರ್ಚೆಗೆ ಬಂದಾಗ ಕೆಲವರು ವ್ಯಕ್ತಿಯ ಹೆಸರು ಬೇಡ ಎಂದು ಆಕ್ಷೇಪ ಎತ್ತಿದ್ದಾರಂತೆ ಆವಿದಾದವೆದ್ದ ಸಂದರ್ಭದಲ್ಲಿಯೇ ಹಾಸನದ ವಿಚಾರವಾದಿ ಜ.ಹೋ. ನಾರಾಯನ ಸ್ವಾಮಿಯವರು ಕುವೆಂಪು ಅವರನ್ನು ಕಾಣಲು ಮೈಸೂರಿಗೆ ಹೋಗಿದ್ದರಂತೆ ಆ ದಿನ ಸಂಜೆ ವಾಕ್ ಹೋಗತ್ತಿದ್ದಾಗ ಜ.ಹೋ.ನಾ. ಅವರು ಹೀಗೇ ಮಾತಿನಮಧ್ಯೆ ಈ ವಿಚಾರವನ್ನೇತ್ತಿದರಂತೆ. ಅದಕ್ಕೆ ಕುವೆಂಪು ಕೊಂಚ ತಡೆದು ನಿಂತು ಧ್ಯಾನಿಸುತ್ತಾ, ಯಾವುದೋ ಶಕ್ತಿ ಆವಾಹನೆಗೊಂಡವರಂತೆ, ಬಲಗೈಯಿಂದ ತಮ್ಮ ಎದೆಯನ್ನು ತಟ್ಟಿಗೊಳ್ಳುತ್ತಾ, ಈತನ ಶಕ್ತಿ ಏನು ಎಂಬುದು ತಿಳಿಯಬೇಕಾದರೆ ಇನ್ನೂ ಐವತ್ತು ವರ್ಷಗಳು ಕಳೆಯಬೇಕು’ ಎಂದುಹೇಳಿ ಆಮೇಲೆ ಯಥಾ ಪ್ರಕಾರ ವಾಕಿಂಗ್ ಮುಂದುವರಿಸಿದರಂತೆ ಈ ಪ್ರಸಂಗವನ್ನು ಜ.ಹೋ. ನಾ ಅವರು ತಮ್ಮ ’ಚೈತನ್ಯರೂಪಿ ಕುವೆಂಪು’ ಎಂಬ ಕೃತಿಯಲ್ಲಿ ದಾಖಲಿಸುತ್ತಾರೆ. ಕುವೆಂಪು ಶತಮಾನೋತ್ಸವ (೨೦೦೪) ಆಚರಣೆ ಮೊದಲುಗೊಂಡು ಅವರು ಈ ಮಾತಿನ ಪ್ರತ್ಯಕ್ಷ ಅನುಭವ ನಮಗಾಗುತ್ತದೆ. ಈಗ ಕುವೆಂಪು ಮಲೆನಾಡಿನ ಒಂದು ಕಾಡು ಕಾಜಾಣ; ಅದರಗೂಡು ಹುಲಿಕಲ್ ನೆತ್ತಿಯಲಿ; ಅದರ ಹಾರಾಟ ಸಹ್ಯಾದ್ರಿ ಶ್ರೇಣಿಯಲಿ; ಅದರ ಕಣ್ಣೋಟ ಗಿರಿಕಂದರಿಗಳ ಚರಾಚರ ಜಾನಪದ ಬದುಕಿನತ್ತ ಕೀಲಿಸಿದೆ. ಅದರ ತಾರಸ್ವರದ ಕೂಗು ಅಲ್ಲಮ ನಿರ್ವಚಿಸಿರುವಂತೆ ಹಿಂದಣ ಅನಂತವನು ಮುಂದಣ ಅನಂತವನು ಒಂದುದಿನ ಒಳಗೊಂಡು ಕೇಳುತ್ತಿದೆ ನೋಡಾಗುಹೇಶ್ವರ!

ಕಾಮೆಂಟ್‌ಗಳಿಲ್ಲ: