ಸೋಮವಾರ, ಜುಲೈ 11, 2016

ಬ್ರಾಹ್ಮಣ ವಿಮರ್ಶೆ ಮತ್ತು ದೇವನೂರು-ಮೊಗಳ್ಳಿ ಗಣೇಶ್ ಅವರ `ತಕರಾರು'

-ಮೊಗಳ್ಳಿ ಗಣೇಶ್



 ದೇವನೂರ ಮಹಾದೇವ ಅವರ ಬಗ್ಗೆ ಅತ್ಯುತ್ತಮವಾದ ಮೆಚ್ಚುಗೆಯ ಅಬಿsಪ್ರಾಯಗಳನ್ನು ಅನೇಕ ಬ್ರಾಹ್ಮಣ ವಿಮರ್ಶಕರು ದಾಖಲಿಸಿದ್ದಾರೆ. ಬಹುಪಾಲು ಎಲ್ಲ ನವ್ಯ ಲೇಖಕರಿಗೂ ಮಹಾದೇವ ಒಂದು ನಕ್ಷತ್ರದಂತೆ ಕಂಡಿದ್ದರಲ್ಲಿ ಸಹಜತೆಯಿತ್ತು. ಚಿತ್ತಾಲರಂತೂ ಮಹಾದೇವರ ಪರೋಕ್ಷ ಪ್ರಭಾವಕ್ಕೆ ಒಳಪಟ್ಟಂತೆ ತಮ್ಮ ಅಬಿsಪ್ರಾಯಗಳನ್ನು ಬರೆದುಕೊಂಡದ್ದಿದೆ. ಹಾಗೆಯೆ ಚದುರಂಗರು ನೇರವಾಗಿ ಮಹಾದೇವರ ಬರಹಗಳಿಂದ ಪ್ರೇರಣೆಗೆ ಒಳಗಾಗಿ ‘ವೈಶಾಖ’ ಕಾದಂಬರಿಯನ್ನು ಬರೆದದ್ದೂ ಉಂಟು. ಮಹಾದೇವ ಹತ್ತಾರು ಹಿರಿಕಿರಿಯ ಬರಹಗಾರರ ಮೇಲೆ ತಮ್ಮ ಬರಹದ ವಿಶಿಷ್ಟ ದೇಶಿ ಶೈಲಿಯಿಂದ, ರೂಪಕ ಪ್ರತಿಭೆಯಿಂದ, ಅತ್ಯಂತ ಸೂಕ್ಷ್ಮ ಒಳವಿವೇಕದ ಎಚ್ಚರದಿಂದ ಪ್ರಭಾವ ಬೀರಿದ್ದು ಸಾಧಾರಣವಾದ ಶಕ್ತಿಯಲ್ಲ. ಮಹಾದೇವರ ಪ್ರತಿಭೆ ಧುತ್ತೆಂದು ಒಂದೇ ಬೀಸಿಗೆ ವಿಜೃಂಬಿsಸುವಂತೆ ಅನಾವರಣಗೊಂಡದ್ದು ಚಾರಿತ್ರಿಕ ಅನಿವಾರ್ಯವಾಗಿದ್ದರೂ; ಹಾಗೆ ಮಹಾದೇವ ಬರೆದ ಪರಿಣಾಮವಾಗಿ ಅಂತಹ ದುಸ್ಸಾಧ್ಯ ಶಕ್ತಿಯನ್ನು ಮೀರಿಸುವಂತೆ ಬರೆಯುವವರು ಅಷ್ಟೇ ವೇಗದಲ್ಲಿ ಅದೇ ಕಾಲದಲ್ಲಿ ಬರಲು ಆಗದೇ ಹೋದದ್ದು ವಿಚಿತ್ರವಾಗಿದೆ. ಮಹಾದೇವ ತಮ್ಮ ಪ್ರತಿಭೆಯಿಂದಲೆ ತನ್ನ ವಾರಿಗೆಯ ಅನೇಕ ಲೇಖಕರನ್ನು ಮೀರುತ್ತಲೇ ಅವರ ಅಸೂಯೆಗೂ ಕಾರಣವಾಗಬೇಕಾದದ್ದು ವಿಪರ್ಯಾಸ.

ಮಹಾದೇವರ ‘ಒಡಲಾಳ’ ಒಂದೇ ಸಾಕು; ಇಡೀ ಭಾರತದ ದಲಿತರ ಅನಾದಿ ಕಾಲದ ಒಡಲನ್ನು ಪ್ರತಿನಿದಿsಸಲು. ಎಷ್ಟೋ ಬಾರಿ ಒಬ್ಬ ಪ್ರತಿಭಾವಂತ ಲೇಖಕ ತನ್ನ ವಿಶಿಷ್ಟ ಬರಹದಿಂದಲೆ ಅನೇಕರ ಬರಹಗಳನ್ನು ನುಂಗಿಬಿಟ್ಟಿರುತ್ತಾನೆ. ಆತನ ವಾರಿಗೆಯ ಲೇಖಕರ ಬರಹ ಅಷ್ಟರ ಮಟ್ಟಿಗೆ ಉಪೇಕ್ಷೆಯ ಮಾನದಂಡಗಳಿಗೆ ಒಳಪಡಬೇಕಾದ ಇಕ್ಕಟ್ಟು ಎದುರಾಗುತ್ತದೆ. ದಲಿತ ಸಮುದಾಯದಿಂದ ಬಂದು ಮಹಾದೇವರ ನಡುವೆ ಬರೆಯುವ ಅನೇಕ ಲೇಖಕರಿಗಂತೂ ಈ ಬಗೆಯ ಇಕ್ಕಟ್ಟು ಅನಿವಾರ್ಯ ಸವಾಲು. ಮಹಾದೇವರನ್ನು ಅನುಸರಿಸುವುದು ಯಾರಿಗಾದರೂ ತುಂಬ ಸುಲಭ. ಆದರೆ ಅವರ ಹಾದಿಯಲ್ಲಿ ಸೃಜನಶೀಲ ಪಯಣ ಮಾಡುವುದು ಅತ್ಯಂತ ಅಪಾಯಕಾರಿ. ಮಹಾದೇವರ ಪ್ರತಿಭೆಯು ಹಿಂಬಾಲಿಸಿದವರಿಗೆ ಬೆಳಕು ತೋರುತ್ತಲೆ ಕತ್ತಲೆಗೆ ನೂಕಿಬಿಡುತ್ತದೆ. ಹಾಗೆಯೇ ಸಿದ್ಧಲಿಂಗಯ್ಯನವರ ಕಾವ್ಯದ ಜೊತೆ ಪಯಣ ಮಾಡಿದವರು ಕೂಡ ಅಂತಹುದೇ ಅಪಾಯಕ್ಕೆ ಸಿಲುಕಿಕೊಂಡದ್ದಿದೆ. ಇವರಿಬ್ಬರು ಪದ್ಯ ಮತ್ತು ಗದ್ಯದಲ್ಲಿ ರೂಪಿಸಿದ ರೂಪಕ, ಪ್ರತಿಮೆ, ಸಂಕೇತಗಳನ್ನೆ ಪ್ರತಿಸೃಷ್ಟಿಸಬೇಕಾದದ್ದು ಸಾಮಾಜಿಕ ನ್ಯಾಯವನ್ನು ಕೇಳುವ ಸಲುವಾಗಿ. ಸಾಹಿತ್ಯದ ಅನನ್ಯತೆಯನ್ನೆ ಮುಖ್ಯವಾಗಿಟ್ಟುಕೊಂಡು ಬರೆದಿದ್ದರೆ ಉಳಿದ ದಲಿತ ಲೇಖಕರು ಬೇರೆಯಾಗಿಯೆ ಕಾಣುತ್ತಿದ್ದರು. ಮಹಾದೇವ ಮತ್ತು ಸಿದ್ಧಲಿಂಗಯ್ಯರಿಬ್ಬರನ್ನೂ ಹಿಂಬಾಲಿಸಿ ಬರೆದವರೆಲ್ಲ ತಮ್ಮ ಪ್ರತಿಭೆಯ ಪ್ರಾಣವನ್ನು ಪರೋಕ್ಷವಾಗಿ ಇವರಿಬ್ಬರಿಗೂ ಅರ್ಪಿಸಿದ್ದಾರೆಂಬುದನ್ನು ಗಮನಿಸಬೇಕು. ಸಿದ್ಧಲಿಂಗಯ್ಯನವರ ಪದ್ಯದ ಮಾದರಿಗೆ ಬಂದಿಯಾದ ಅನೇಕ ಕವಿಗಳು ತಮ್ಮ ಒಳದನಿಯ ಕವಿತೆಗಳನ್ನು ಬರೆದುಕೊಳ್ಳಲು ಆಗದೇ ಹೋದಂತೆಯೆ ಮಹಾದೇವರ ಕತೆಗಳನ್ನು ನಕಲು ಮಾಡಲು ಹೋದ ಕತೆಗಾರರು ಕೂಡ ವಿಫಲರಾದರು. ಮಹಾದೇವ ಮತ್ತು ಸಿದ್ಧಲಿಂಗಯ್ಯ ಏಕಕಾಲಕ್ಕೆ ಧುತ್ತೆಂದು ಸಹಜ ಪ್ರತಿಭೆಯಿಂದ ಅನಾವರಣಗೊಂಡವರು. ನಿಧಾನವಾಗಿ ಸಾಹಿತ್ಯದ ಮುಂಚೂಣಿಗೆ ಇವರು ಬಂದವರಲ್ಲ. ಇವರು ಬರೆಯುತ್ತಿದ್ದಂತೆಯೆ, ಪ್ರಕಟವಾಗುತ್ತಿದ್ದಂತೆಯೆ ಸಾಹಿತ್ಯದ ಸುಶಿಕ್ಷಿತ, ಸಜ್ಜನ ವಲಯವು ಕುತೂಹಲ ತೋರುತ್ತ ತನ್ನೊಳಗೇ ಎಚ್ಚರಗೊಳ್ಳುತ್ತಿತ್ತು. ನವ್ಯ ಸಾಹಿತ್ಯದ ಬ್ರಾಹ್ಮಣ ಬಂಡಾಯ ಲೇಖಕರು ಹಾಗೆಯೆ ಶೂದ್ರ ಬರಹಗಾರರು ಇವರಿಬ್ಬರನ್ನೂ ಒಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು.

ಜೊತೆಗೆ ಇವರಿಬ್ಬರ ಬೆನ್ನೆಲುಬಾಗಿ ದಲಿತ ಸಂಘರ್ಷ ಸಮಿತಿಯ ದೊಡ್ಡ ಹೋರಾಟವೂ ಇತ್ತು. ಇಡೀ ಕನ್ನಡ ಸಾಹಿತ್ಯ ಸಂವೇದನೆಯ ಏಕತಾನತೆಯನ್ನು ಕಳೆದುಕೊಳ್ಳಲು ಇವರಿಬ್ಬರನ್ನು ವಿಜೃಂಭಣೆಯಿಂದ ಸ್ವಾಗತಿಸಿದ್ದರಲ್ಲಿ ಪ್ರಾಮಾಣಿಕತೆಯೂ ಇತ್ತು. ಇದರಲ್ಲಿ ರಾಮಚಂದ್ರಶರ್ಮರಂತಹ ಕೆಲವು ಕವಿಗಳು ಮುನಿಸಿಕೊಂಡು ವಿದೇಶದಲ್ಲಿದ್ದೇ ಗೊಣಗಿದ್ದುಂಟು. ಆದರೆ ಯು.ಆರ್.ಅನಂತಮೂರ್ತಿಯವರಂತೂ ಉದ್ದೇಶ ಪೂರ್ವಕವಾಗಿಯೆ ಮಹಾದೇವರನ್ನು ಕೈ ಹಿಡಿದು ಸಾಹಿತ್ಯದ ಫಲವತ್ತಾದ ತೋಟದಲ್ಲಿ ಸುತ್ತಾಡಿಸಿದರು. ಹೀಗೆ ಸುತ್ತಾಡಿಸಿ ಕೈ ಹಿಡಿದು ಬೆಳೆಸಿದ ಮೇಲೆ ಮಹಾದೇವ ಅನಂತಮೂರ್ತಿಯವರ ಹಿಂದೆಯೇ ಮುದ್ದಾದ ಕಪ್ಪು ಆಕಳಿನಂತೆ ಈಗಲೂ ನಿಷ್ಠೆಯಿಂದ ಸುತ್ತಾಡುವುದಿದೆ. ಹೀಗೆ ಸುತ್ತಾಡಿದ್ದರಲ್ಲಿ ಅನೇಕ ತಪ್ಪು ಹೆಜ್ಜೆಗಳನ್ನು, ನಿರ್ಣಯಗಳನ್ನು ಮಹಾದೇವ ಕೈಗೊಂಡರೆಂಬ ಆರೋಪವಿದೆ.

ದೇವನೂರ ಮಹಾದೇವ ಅವರು ನಿಸ್ಸಂದೇಹವಾಗಿ ಶ್ರೇಷ್ಠ ಬರಹಗಾರ ಎಂದು ಒಪ್ಪಿದರೂ ಅವರ ಕತೆ ಮತ್ತು ಕಾದಂಬರಿಗಳ ಬಗ್ಗೆ ನಾವು ಪ್ರಶ್ನಿಸಬಹುದು. ಮಹಾದೇವರನ್ನು ಹೊಗಳಿರುವುದು ಬ್ರಾಹ್ಮಣ ವಿಮರ್ಶಕರಾದರೆ, ತೆಗಳಿರುವುದು ದಲಿತ ವಿಮರ್ಶಕರು. ಈ ಹೊಗಳಿಕೆ ಮತ್ತು ತೆಗಳಿಕೆ ಎರಡರಲ್ಲೂ ಲೋಪಗಳಿವೆ. ಮಹಾದೇವರನ್ನು ವೈಭವೀಕರಿಸಿ ವಿಮರ್ಶೆ ಮಾಡುವ ಬ್ರಾಹ್ಮಣ ಲೇಖಕರು ತಮ್ಮ ಬಹುಕಾಲದ ಪ್ರೀತಿ, ಮೆಚ್ಚಿಗೆ, ಹೊಗಳಿಕೆಯನ್ನೆಲ್ಲ ಒಂದೇ ಬಾರಿಗೆ ಮಹಾದೇವರಿಗೆ ಅರ್ಪಿಸಿಬಿಟ್ಟರು. ಇಂತಹ ಕೀಳು ಜಾತಿಯಿಂದ ಬಂದಾತ ಇಷ್ಟೊಂದು ಅದ್ಭುತವಾಗಿ ಬರೆಯಲು ಸಾಧ್ಯವಾಯಿತೇ ಎಂದು ನಿಬ್ಬೆರಗಾಗಿರುವ ಕ್ರಮದಲ್ಲೇ ಲೋಪವಿದೆ. ಸಿದ್ಧಲಿಂಗಯ್ಯ ಮತ್ತು ಮಹಾದೇವರಿಬ್ಬರನ್ನೂ ಆರಂಭದಲ್ಲಿ ಸಾಹಿತ್ಯ ವಲಯವು ಸ್ವಾಗತಿಸಿದ್ದರಲ್ಲಿ ಇಂತಹ ಒಂದು ಅಂಶ ಬೆರೆತಿದೆ. ಹಾಗಾಗಿಯೆ ಅಗತ್ಯಕ್ಕಿಂತ ವಿಪರೀತವಾಗಿ ಇವರಿಬ್ಬರನ್ನೂ ಓಲೈಸುವ, ಸಮರ್ಥಿಸುವ ಸಂದರ್ಭ ಉಂಟಾದದ್ದು. ದಲಿತ ಲೋಕದ ಯಾವ ಒಳ ವಿವರವೂ ನವ್ಯ ಲೇಖಕರಿಗೆ ಅಪರಿಚಿತವಾಗಿದ್ದಾಗ ಮತ್ತು ಪಶ್ಚಿಮವೆ ಅವರಿಗೆ ಪರಮ ವಿವೇಕದ ಕೇಂದ್ರವಾಗಿದ್ದಾಗ ಮಹಾದೇವರ ಬರಹಗಳು ಮೋಡಿ ಮಾಡಿದ್ದರಲ್ಲಿ ವಿಶೇಷವೇನಿಲ್ಲ. ಶತಮಾನಗಳಿಂದ ಥೂ, ¿sೀ ಎನಿಸಿಕೊಂಡವರನ್ನು ಬದಲಾದ ಕಾಲದಲ್ಲಿ ಹೊಗಳುವುದು ಸರಿಯಿದ್ದರೂ ಆ ಹೊಗಳಿಕೆ ಅತಿಯಾದಾಗ ಅದರಿಂದ ನಷ್ಟವೇ ಹೆಚ್ಚು. ಈ ನಷ್ಟದ ಹೊರೆ ಈ ಇಬ್ಬರು ಲೇಖಕರನ್ನು ಹಿಂಬಾಲಿಸಿದವರ ಮೇಲೆ ಬೀಳುತ್ತದೆ. ಒಂದೇ ಉಸಿರಿಗೆ ತಮ್ಮ ಪಾಪಪ್ರe್ಞÉ ಕಳೆದು ಹೋಗುವಂತೆ, ತಮ್ಮ ಪೂರ್ವಿಕರ ಅಪರಾಧಗಳು ಮುಚ್ಚಿ ಹೋಗುವಂತೆ ಮಹಾದೇವ ಮತ್ತು ಸಿದ್ಧಲಿಂಗಯ್ಯರ ಬಗ್ಗೆ ಶ್ರೀಮಾನ್ ಕುರ್ತಕೋಟಿ, ಅನಂತಮೂರ್ತಿ, ಗಿರಡ್ಡಿ ಗೋವಿಂದರಾಜು, ಜಿ.ಎಸ್.ಆಮೂರ, ಟಿ.ಪಿ.ಅಶೋಕ, ಜಿ.ಎಚ್.ನಾಯಕ, ಸಿ.ಎನ್.ರಾಮಚಂದ್ರನ್ ಮುಂತಾದವರು ಬರೆಯುತ್ತಾರೆ. ದಲಿತ ಸಾಹಿತ್ಯವನ್ನು ಇವರು ಹೊಗಳುತ್ತಾರೆ ಎನ್ನುವುದಕ್ಕಿಂತ ದೇವನೂರ ಮಹಾದೇವರÀನ್ನು ತುಂಬ ಪ್ರೀತಿಸುತ್ತಾರೆ ಎಂದು ಹೇಳುವುದೇ ಹೆಚ್ಚು ಸೂಕ್ತ. ಅದಕ್ಕೆ ಪೂರಕವಾಗಿ ಮಹಾದೇವರ ವ್ಯಕ್ತಿತ್ವವೂ ಇದೆ. ಹಸುವಿನಂತಹ ಗುಣ ಅವರದು ಎಂದು ಸ್ವತಃ ಈ ಮೇಲಿನ ವಿಮರ್ಶಕರೆ ಗುರುತಿಸಿದ್ದಾರೆ. ಹಾಗೆಯೆ ‘ದ್ಯಾವನೂರು’ ಕಥಾಸಂಕಲನದ ಮುಖಪುಟದಲ್ಲೇ ‘ಖಂಡವಿದೆ ಕೊ, ಮಾಂಸವಿದೆ ಕೊ’ ಎಂಬ ಸಾಲಿನ ಉದ್ಧರಣೆಯಿದೆ.

ಇಡೀ ಮಹಾದೇವರ ಕಥಾಕ್ರಂದನಕ್ಕೆ ರೂಪಕವಾಗಿ ಆ ಪುಣ್ಯಕೋಟಿಯ ದನಿ ಬಳಕೆಯಾಗಿರುವುದು ಕೂಡ ವೈದಿಕರ ಪವಿತ್ರ ಹಸುವಿನ ಮಮಕಾರಕ್ಕೆ ವಿಮರ್ಶಕರ ಅಂತಃಕರಣ ತಾಳಿಕೆಯಾಗಿರಬಹುದು. ಒಂದು ವೇಳೆ ‘ಕೊಪ್ಪಲಿನ ಗೌಡರಿಗೂ, ಕೃಷ್ಣಮೂರ್ತಿಪುರದ ಬ್ರಾಹ್ಮಣರಿಗೂ ಅಥವಾ ಅಶೋಕಪುರಂನ ಹರಿಜನರಿಗೂ ಲಕ್ಷ್ಮೀಪುರದ ಬ್ರಾಹ್ಮಣರಿಗೂ ಜಗಳವಾಗುತ್ತದೆ ಎನ್ನಿ, ಆಗ – ಶೂದ್ರರ ಹಕ್ಕುಗಳನ್ನು ಎತ್ತಿಹಿಡಿಯುತ್ತಲೇ ಹಿಂಸೆಯಿಂದ ಬ್ರಾಹ್ಮಣರ ರಕ್ಷಣೆಗೆ ಧಾವಿಸಲೂ ಮಹಾದೇವ ಹಿಂಜರಿಯುವುದಿಲ್ಲ’ – ಈ ಮಾತನ್ನು ಟಿ.ಪಿ.ಅಶೋಕ ಬರೆದಿದ್ದಾರೆ. ಮಹಾದೇವರನ್ನು ಹಸುವಾಗಿಸಿರುವುದು, ಸಂತನನ್ನಾಗಿಸಿರುವುದು ಇಂತಹ ಮಾತುಗಳೇ. ಜೊತೆಗೆ ಮಹಾದೇವರಲ್ಲೂ ಪ್ರe್ಞÁಪೂರ್ವಕವಾಗಿ – ಆದರೆ ಅಪ್ರe್ಞÁಪೂರ್ವಕ ರೀತಿಯಲ್ಲಿ – ಹಸುವಿನ ಗುಣವನ್ನು ಬಿಂಬಿಸುತ್ತಲೆ ಬ್ರಾಹ್ಮಣರನ್ನು ಮೆಚ್ಚಿಸುವ ಕಲೆಯೂ ಇದೆ. ‘ಕುಸುಮಬಾಲೆ’ ಕಾದಂಬರಿಯಲ್ಲಿ ಬ್ರಾಹ್ಮಣರನ್ನು ವಿಡಂಬಿಸುವ ಪ್ರಸಂಗವನ್ನು (‘ಸುದ್ದಿ ಸಂಗಾತಿ’ಯಲ್ಲಿ ಪ್ರಕಟವಾದಾಗ ಇದ್ದ ಭಾಗ) ನಂತರ ಕಿತ್ತುಹಾಕಿದ್ದು ಬ್ರಾಹ್ಮಣರ ಗುಪ್ತ ಪ್ರೀತಿಯಿಂದಲೇ. ಬ್ರಾಹ್ಮಣರೆಲ್ಲರೂ ಧೂರ್ತರಲ್ಲ ನಿಜ. ಬ್ರಾಹ್ಮಣ್ಯದ ವಿರುದ್ಧ ಮಹಾದೇವ ಅವರು ಹೋರಾಡಿದರೂ ಬ್ರಾಹ್ಮಣರನ್ನು ಅವರು ಆಳದಲ್ಲಿ ಇಷ್ಟಪಡುತ್ತಾರೆ.

ಅಂತೆಯೆ ಸಿದ್ಧಲಿಂಗಯ್ಯ ಕೂಡ ಯಾವ ಮೇಲು ಜಾತಿಯ ವಿರುದ್ಧವೂ ಕಠಿಣ ನಿಲುವು ತಳೆಯಲಾರರು. ಇದರಿಂದಾಗಿ ವ್ಯವಸ್ಥೆ ಇವರಿಬ್ಬರನ್ನೂ ಒಪ್ಪುತ್ತದೆಯೆ ವಿನಃ ದಲಿತ ಸಂಘರ್ಷ ಸಮಿತಿಯ ನಿಷ್ಠುರ ಕಾರ್ಯಕರ್ತರನ್ನಲ್ಲ. ಮಹಾದೇವ ಒಳಗೆ ವ್ಯಾವಹಾರಿಕವಾಗಿದ್ದರೂ ಹೊರಗೆ ಶುದ್ಧ ಅನಾರ್ಕಿಸ್ಟ್ ಥರ ಕಾಣಿಸಿಕೊಳ್ಳುತ್ತಾರೆ. ದಲಿತ ಸಂಘರ್ಷ ಸಮಿತಿಯ ಆರಂಭದ ಹೋರಾಟಗಳಿಗೆ ಅವರಿಂದ ಆನೆಯ ಬಲ ಬಂದಿತ್ತಾದರೂ ನಂತರಕ್ಕೆ ಅವರು ರಾಜಕೀಯವಾಗಿ ಆಯ್ಕೆ ಮಾಡಿಕೊಂಡ ನಿಲುವಿನ ಕಾರಣದಿಂದ ಸಂಘಟನೆಯ ಜಾಡೇ ಬದಲಾಯಿತೆಂಬ ಆರೋಪಗಳು ಸುಳ್ಳಲ್ಲ. ದಲಿತ ಸಂಘರ್ಷ ಸಮಿತಿಯ ಸಾವಿರಾರು ಕಾರ್ಯಕರ್ತರ ಪ್ರಬಲ ಶಕ್ತಿಯು ಇವರಿಬ್ಬರನ್ನೂ ಪರೋಕ್ಷವಾಗಿ ಬೆಳೆಸಿದೆ. ಜನತೆಯ ಹೋರಾಟದ ಪಯಣದಲ್ಲಿ ಪ್ರತಿಭಾವಂತ ಲೇಖಕರು ಅದನ್ನು ಮೀರುತ್ತಲೆ ಅದನ್ನು ತಮಗೆ ಬೇಕಾದ ಒಂದು ಶಕ್ತಿಯನ್ನಾಗಿಯೂ ಮಾರ್ಪಡಿಸಿಕೊಳ್ಳಬಲ್ಲರು. ಸಿದ್ಧಲಿಂಗಯ್ಯ ಮತ್ತು ಮಹಾದೇವ ಇಬ್ಬರೂ ತಮ್ಮ ಪದ್ಯ ಹಾಗೂ ಗದ್ಯದಿಂದ ಇಡೀ ಚಳುವಳಿಯ ದೊಡ್ಡ ದನಿಯನ್ನೆ ಪ್ರತಿರೋಧ ರೂಪಕವಾಗಿ ಬಳಸಿಕೊಂಡರು. ಸಾಹಿತ್ಯದ ಪಂಡಿತರು ಒಪ್ಪಲಿ-ಬಿಡಲಿ; ಇಡೀ ದಲಿತ ಸಮುದಾಯದ ಎಚ್ಚೆತ್ತ ಪ್ರe್ಞÉಯು ಇವರಿಬ್ಬರನ್ನೂ ಹೊತ್ತು ಮೆರೆಸಿದೆ. ಆ ಕಾಲಘಟ್ಟದ ಇಡೀ ಹೋರಾಟವೆ ಇವರಿಬ್ಬರನ್ನು ಎರಡು ಕಣ್ಣಿನಂತೆ ಇಟ್ಟುಕೊಂಡು ಸಮಾಜವನ್ನು, ಚರಿತ್ರೆಯನ್ನು, ಸಾಹಿತ್ಯವನ್ನು, ಸಮಾನತೆಯನ್ನು ಕನಸಿದ್ದಿದೆ. ಹೋರಾಟದ ಹಾದಿಯಲ್ಲಿ ಇವರಿಬ್ಬರನ್ನು ದಲಿತ ಸಂಘರ್ಷ ಸಮಿತಿಯು ಅಬಿsಮಾನದಿಂದ ಸಮರ್ಥಿಸಿಕೊಂಡದ್ದಷ್ಟೇ ಅಲ್ಲದೆ ಪ್ರತಿಷ್ಠಾಪಿಸಿದ್ದೂ ಇದೆ. ಆದರೆ ಅದೇ ದಲಿತ ಸಂಘರ್ಷ ಸಮಿತಿಯ ಒಳಗಿನಿಂದಲೇ ಮಹಾದೇವ ತೀವ್ರವಾದ ಆಕ್ಷೇಪಗಳಿಗೆ ಗುರಿಯಾಗಬೇಕಾದದ್ದು ಚರಿತ್ರೆಯ ವ್ಯಂಗ್ಯದಂತಿದೆ.

ದಲಿತ ಬಂಡಾಯದ ಕತೆ ಮತ್ತು ಕಾವ್ಯದ ಶ್ರೇಷ್ಠ ಮಾದರಿಗಳನ್ನು ಬ್ರಾಹ್ಮಣ ವಿಮರ್ಶಕರು ತೋರುವಾಗ ಮಹಾದೇವ ಮತ್ತು ಸಿದ್ಧಲಿಂಗಯ್ಯ ಇವರಿಬ್ಬರನ್ನೆ ಗುರುತಿಸುವುದರಲ್ಲಿ ಒಂದು ಮರ್ಮವಿದೆ. ಪರೋಕ್ಷವಾಗಿ ಶೂದ್ರರನ್ನು ಉಪೇಕ್ಷಿಸುವುದಕ್ಕೂ ಇವರನ್ನೆ ಆಯ್ಕೆ ಮಾಡುವ ಗುಪ್ತ ತಂತ್ರವಿದೆ. ಜೊತೆಗೆ ದಲಿತರ ವ್ಯಾಪ್ತಿಯಲ್ಲಿ ಹೇಳುವಾಗಲೂ ಇವರಿಬ್ಬರನ್ನೆ ಸೂಚಿಸಲಾಗುತ್ತದೆ. ನವ್ಯ ಸಾಹಿತ್ಯದ ನಂತರಕ್ಕೆ ಬ್ರಾಹ್ಮಣ ವಿಮರ್ಶಕರು ತೋರುವುದು ಈ ಎರಡು ಹೆಸರುಗಳನ್ನೆ. ಅದರಲ್ಲಿ ತೇಜಸ್ವಿಯವರನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಾರೆ. ದಲಿತ ಬಂಡಾಯ ಲೇಖಕರೆಲ್ಲ ಹೆಚ್ಚೂ ಕಡಿಮೆ ಒಂದೇ ಅನುಭವವನ್ನು ಒಂದೇ ರೀತಿಯಾಗಿ ಬರೆಯುವುದರಿಂದ ಅವರಲ್ಲಿ ಯಾರು ಸಮರ್ಥರೊ, ತಮಗೆ ಆಪ್ತವಾಗುವರೊ ಅಂಥವರನ್ನು ಇಡೀ ಆ ಸಾಹಿತ್ಯ ಪಂಥದ ಪ್ರತಿನಿದಿsಯಾಗಿ ಹೇಳಿಬಿಡಬಹುದೆಂದು ವಿಮರ್ಶಕರು ತಿಳಿದಂತಿದೆ.

ಹಾಗಾಗಿ ಯಾವಾಗಲೂ ಕೂಡ ಮಹಾದೇವ ಮತ್ತು ಸಿದ್ಧಲಿಂಗಯ್ಯನವರ ಬರಹಗಳ ಬಗ್ಗೆಯೆ ಚರ್ಚಿಸುವ ಪರಿಪಾಠವಿದೆ. ಮಹಾದೇವರಂತಹ ಒಬ್ಬ ಲೇಖಕನನ್ನೆ ಅಳೆಯುತ್ತ ಉಳಿದವರು ಎಷ್ಟೇ ದಲಿತ ಬದುಕನ್ನು ಗಾಢವಾಗಿ ಬರೆದಿದ್ದರೂ ಯಾಕೆ ಅನೇಕ ವಿಮರ್ಶಕರು ‘ಬೌದ್ಧಿಕ ಅಸ್ಪ್ನೃಶ್ಯತೆ’ಯನ್ನು, ತಾರತಮ್ಯವನ್ನು ಪಾಲಿಸುತ್ತಾರೆ ಎಂಬುದು ಚರ್ಚೆಗೆ ಒಳಪಡಬೇಕಾಗಿದೆ. ನನ್ನನ್ನು ಒಳಗೊಂಡಂತೆ ಕವಿಗಳಾದ ಕೆ.ಬಿ.ಸಿದ್ಧಯ್ಯ, ಮಾಲಗತ್ತಿ, ಮೂಡ್ನಾಕೂಡು ಚಿನ್ನಸ್ವಾಮಿಯವರನ್ನು ಹೊರತುಪಡಿಸಿದರೆ ಅನೇಕ ದಲಿತ ಬರಹಗಾರರನ್ನು ಎರಡನೆ ದರ್ಜೆಯ ಮಾನದಂಡಗಳಲ್ಲಿ ನೋಡಿದ್ದಿದೆ. ದಲಿತ ಕಾವ್ಯ ಮತ್ತು ಕತೆ, ಕಾದಂಬರಿಗಳಿಗೆ ಮಾದರಿಯಾಗಿ ಮಹಾದೇವ ಮತ್ತು ಸಿದ್ಧಲಿಂಗಯ್ಯನವರ ಬರಹಗಳನ್ನು ಗೌರವಿಸಬಹುದೇ ವಿನಃ ಅವೇ ಅಂತಿಮ ಅಬಿsವ್ಯಕ್ತಿಗಳಲ್ಲ. ಹಾಗೆ ನೋಡಿದರೆ ಇವರಿಬ್ಬರೂ ದಲಿತ ಸಾಹಿತ್ಯದ ಒಂದು ರೆಂಬೆಯ ಚೆಲುವನ್ನು ತೋರಿದ್ದಾರೆ. ವೈದಿಕ ವಿಮರ್ಶಕರು ಮಹಾದೇವ ಏನನ್ನೆ ಬರೆದರೂ ‘ಅಹೊ ಓಹೊ ಮಹಾ’ ಎಂದು ತುತ್ತೂರಿ ಊದುವುದನ್ನು ನಿಲ್ಲಿಸಿದರೆ ಸಾಹಿತ್ಯದ ಬೇರೆ ಬೇರೆ ಕಾರಣಗಳಿಂದ ಒಳ್ಳೆಯದಾಗುತ್ತದೆ. ಮಹಾದೇವ ಅವರು ದಲಿತ ಲೋಕದ ಮುಗ್ಧ ಮಾನವೀಯತೆಯನ್ನು ಮಾತ್ರವೆ ಅಬಿsವ್ಯಕ್ತಿಸಿರುವುದು. ಅದಷ್ಟೇ ಸತ್ಯವಲ್ಲ. ಮಹಾದೇವ ಅವರ ಧೋರಣೆಯು ಸಾಂಪ್ರದಾಯಿಕ ಸುಧಾರಣಾವಾದಿಯ ರೀತಿಗೆ ಹೊಂದುವಂತಿದೆ. ‘ಕುಸುಮಬಾಲೆ’ಯು ಮಾನವೀಯತೆಯ ಹಸಿವನ್ನು ದಟ್ಟವಾಗಿ ಬಿಂಬಿಸಿದರೂ ಅದರ ಪಾತ್ರಗಳು ಇರುವ ವ್ಯವಸ್ಥೆಯ ಜೊತೆ ಪಲಾಯನದ ರೀತಿಯಲ್ಲಿ ವರ್ತಿಸುತ್ತವೆ. ‘ಒಡಲಾಳ’ದ ಕಿಚ್ಚಿನಲ್ಲೂ ಮಹಾದೇವ ತೀವ್ರವಾದ ಕಲಾತ್ಮಕ ನೀತಿಗೇ ಬದ್ಧವಾಗುತ್ತಾರೆ. ಮಹಾದೇವ ತಮ್ಮ ಅತಿ ವಿಶಿಷ್ಟ ಸೃಜನಶೀಲ ಪ್ರತಿಭೆಯ ಕಾರಣವಾಗಿಯೆ ದಲಿತಾನುಭವಗಳನ್ನೆಲ್ಲ ಪುರಾಣವಾಗಿಸಿಬಿಡುತ್ತಾರೆ. ಇದು ಸಮಾನತೆಯ ಹಸಿವಿರುವ ಕಾಲದಲ್ಲಿ ಸ್ವತಃ ದಲಿತರಿಗೆ ತುಂಬ ಆಪ್ತವಾದ ಕಥನವಾಗದೆ ತದ್ವಿರುದ್ಧ ಭಾವನೆ ಮತ್ತು ಅಬಿsಪ್ರಾಯಗಳು ತಲೆದೋರುವಂತೆ ಮಾಡುತ್ತದೆ. ಹೀಗಾಗಿಯೆ ‘ಕುಸುಮಬಾಲೆ’ಯ ಬಗ್ಗೆ ಥರಾವರಿ ಚರ್ಚೆ ದಲಿತರ ಮೂಲಕ ಆದದ್ದು.

ತುಂಬ ಕಲಾತ್ಮಕವಾಗಿ ದಲಿತರ ಬದುಕನ್ನು ಚಿತ್ರಿಸುವಾಗಲೂ ಅಪಾಯವಿದೆ. ಹಾಗೆಯೆ ವಾಚ್ಯವಾಗಿಸಿದಾಗಲೂ ಅದು ಅಸಹ್ಯವಾಗಿ ಕಾಣುವ ಸಾಧ್ಯತೆಯಿದೆ. ಮಹಾದೇವ ಅವರು ತನ್ನ ಕೃತಿಗಳಿಂದ ಸವರ್ಣೀಯ ಓದುಗರ ಅಂತಃಕರಣವನ್ನು ಬಡಿದೆಬ್ಬಿಸುವುದು ನಿಜವಿದ್ದರೂ ಆ ಬಗೆಯ ಅನುಭವಗಳೆಲ್ಲ ಓದುಗ ಲೋಕಕ್ಕೆ ‘ಆನಂದ’ವನ್ನು ಉಂಟು ಮಾಡಬಲ್ಲವು. ಕಲಾತ್ಮಕವಾಗಿ ಅನುಭವಗಳನ್ನು ಮಹಾದೇವ ಕಟ್ಟಿಕೊಡುತ್ತಲೆ ಎಚ್ಚರವನ್ನು ಮೌನದಲ್ಲಿ ಧ್ವನಿಸುತ್ತಾರೆ. ಈ ಬಗೆಯ ಮೌನಧ್ಯಾನದ ಪ್ರತಿಭಟನೆ ಹಿತವಾಗಿರುವುದರಿಂದಲೆ ಬ್ರಾಹ್ಮಣ ವಿಮರ್ಶಕರಿಗೆ ಮಹಾದೇವ ಅವರು ರೂಪಿಸುವ ದಲಿತ ಲೋಕ ಸೌಂದರ್ಯದಿಂದ ಕಂಗೊಳಿಸುವುದು. ಹೀಗಾಗಿಯೆ ವಾಚ್ಯವಾಗಿ ಮಹಾದೇವ ಮತ್ತು ಸಿದ್ಧಲಿಂಗಯ್ಯನವರನ್ನು ಹಿಂಬಾಲಿಸಿದ ದಲಿತ ಲೇಖಕರು ಅಂತಹ ವಿಮರ್ಶಕರಿಗೆ ಮಖ್ಯವಾಗದೆ ಹೋದದ್ದು. ಕಾವ್ಯದಲ್ಲಿ ಬೇಕಾದರೆ ಹೇಗಾದರೂ ಬೈದರೂ ಓದಿಕೊಳ್ಳುವ ವಿಮರ್ಶಕರು ಅದೇ ದಲಿತರು ಹಕ್ಕೊತ್ತಾಯದ ದನಿಯಲ್ಲಿ, ಹೋರಾಟದ ಮಾರ್ಗದಲ್ಲಿ ನ್ಯಾಯ ಕೇಳಿ ವೈಚಾರಿಕವಾಗಿ ಪ್ರಶ್ನಿಸಿದರೆ ಮೂಗು ಮುರಿದುಕೊಳ್ಳುತ್ತಾರೆ.

ಮಹಾದೇವ ತಮ್ಮ ವಿವೇಕದ ಕಲಾತ್ಮಕ ಬೆಳಕಿನಿಂದಲೆ ತಮ್ಮನ್ನು ಹಿಂಬಾಲಿಸಿದ ಲೇಖಕರನ್ನು ದೀಪದ ಕೆಳಕ್ಕೆ ನಯವಾಗಿ ಸರಿಸಿದ್ದು ಕೂಡ ಈ ಬಗೆಯ ವೈರುಧ್ಯದ ವಾತಾವರಣದಿಂದಲೇ. ನವ್ಯ ಕತೆಗಾರರ ಕಾಲದಲ್ಲಿ ಒಂದೇ ಬಗೆಯಲ್ಲಿ ಕತೆ ಬರೆಯುತ್ತಿದ್ದವರು ತುಂಬ ಮಂದಿ ಇದ್ದರು. ಯು.ಆರ್.ಅನಂತಮೂರ್ತಿ, ರಾಮಚಂದ್ರಶರ್ಮ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ, ಟಿ.ಜಿ.ರಾಘವ, ಸದಾಶಿವ, ಸುಮತೀಂದ್ರ ನಾಡಿಗ, ಜಿ.ಕೆ.ಗೋವಿಂದರಾವ್ ಮುಂತಾದವರ ದೊಡ್ಡ ದಂಡೇ ಇದ್ದಾಗ ಇದೇ ವಿಮರ್ಶಕರು ಇವರನ್ನೆಲ್ಲ ಬಿsನ್ನ ಅನನ್ಯತೆಯಲ್ಲಿ ವ್ಯಾಖ್ಯಾನಿಸಿ ಅವರ ಸ್ಥಾನಗಳನ್ನು ಭದ್ರ ಮಾಡುತ್ತಿದ್ದರು. ಹೆಚ್ಚೂ ಕಡಿಮೆ ನವ್ಯ ಲೇಖಕರೆಲ್ಲ ಒಂದೇ ಬಗೆಯ ಕತೆಯನ್ನು ಬೇರೆ ಬೇರೆ ಹೆಸರಲ್ಲಿ ಆ ಹೊತ್ತಿನಲ್ಲಿ ಬರೆದದ್ದಿದೆ. ಅಗ್ರಹಾರದ ಒಟ್ಟು ಸಂವೇದನೆ ಅವರ ಕತೆಗಳಲ್ಲಿ ಏಕತಾನತೆಯ ಮಿತಿಯಲ್ಲಿ ವಿಸ್ತರಿಸಿದೆ. ಹಾಗಿದ್ದೂ ಅಂತಹವರಲ್ಲಿ ಯಾರೊ ಒಂದಿಬ್ಬರನ್ನು ಮಾತ್ರ ಅವರ ಪೈಕಿ ಗುರುತಿಸದೆ ಎಲ್ಲರನ್ನೂ ಸಮರ್ಥಿಸಿಕೊಂಡರು. ಆದರೆ ಅದೇ ದಲಿತ ಬಂಡಾಯದ ಕತೆಗಾರರ ಪೈಕಿ ಈಗಲೂ ಮಹಾದೇವರನ್ನೆ ಅಂತಿಮ ಕತೆಗಾರ ಎಂಬಂತೆ ನುಡಿಯಲಾಗುತ್ತದೆ. ಇದು ವಿಮರ್ಶೆಯ ಅಸ್ಪ್ನೃಶ್ಯತೆಯಲ್ಲವೆ?

ಮಹಾದೇವ ಮತ್ತು ಸಿದ್ಧಲಿಂಗಯ್ಯ ಇವತ್ತು ಹಳೆಯ ಆ ಎಲ್ಲ ಅಮಲನ್ನು ಕಳೆದುಕೊಂಡು ಇಷ್ಟು ಕಾಲದ ತಮ್ಮ ಬೆಲೆಯುಳ್ಳ ಅಪಾರ ಅನುಭವವನ್ನು ಇಡೀ ಸಮುದಾಯದ ಅಂತಃಸಾಕ್ಷಿಯ ಬೆಳಕಿನಲ್ಲಿ ಬೃಹತ್ ಕಥನಗಳಲ್ಲಿ ಆಧುನಿಕ ಜಗತ್ತಿನ ಎಲ್ಲ ರೂಪ-ವಿರೂಪಗಳ ಸಂಘರ್ಷದ ಒಳದನಿಯ ದುರಂತ ಖಿನ್ನತೆಯಲ್ಲಿ ಬರೆದರೆ ನಿಸ್ಸಂದೇಹವಾಗಿ ಈ ಕಾಲದ ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಸಂವೇದನೆಯನ್ನು ದಾಖಲಿಸಿದಂತಾಗುತ್ತದೆ. ಆ ಬಗೆಯ ದಿವ್ಯ ಸೃಜನಶೀಲ ಯಾನದಲ್ಲಿ ಎಲ್ಲರ ಕಥನವನ್ನೂ ಪ್ರತಿಧ್ವನಿಸುವಂತೆ ಅವರು ಬರೆದರೆ ನಿಜಕ್ಕೂ ಅವರನ್ನು ಹೊತ್ತು ಮೆರೆಸಿ ಬೆಳೆಸಿದ ಸಮುದಾಯಕ್ಕೆ ಘನತೆಯ ಕಿರೀಟ ತೊಡಿಸಿದಂತಾಗುತ್ತದೆ.

ದೇ.ಮ.ಗೊಂದು ಮರು ನುಡಿ

ಬೆಸಗರಹಳ್ಳಿ ರಾಮಣ್ಣನವರ ಕಥೆಗಳ ಹಿನ್ನೆಲೆಯಲ್ಲಿ ನಿಮ್ಮ ಬಗ್ಗೆ ನಾನು ಪ್ರಾಸಂಗಿಕವಾಗಿ ಬರೆದದ್ದಕ್ಕೆ ಪ್ರತಿಕ್ರಿಯಿಸಿದ್ದೀರಿ. ನಿಮ್ಮ ಪ್ರತಿಕ್ರಿಯೆಯನ್ನು ಗೌರವಿಸುವೆ. ಸಾಹಿತ್ಯ ಸಂವಾದ ಎಂದರೆ ಮೂಗು ಮುರಿಯುವ ನೀವು ನನ್ನ ಅಬಿsಪ್ರಾಯಗಳನ್ನು ಗಂಬಿsೀರವಾಗಿ ತೆಗೆದುಕೊಂಡಿರುವುದರಿಂದ ಸೂಕ್ತವಾಗಿಯೆ ತಮಗೆ ಉತ್ತರಿಸಬೇಕಾದದ್ದು ನನ್ನ ಜವಾಬ್ದಾರಿ. ನಿಮ್ಮನ್ನು ಆಳದಲ್ಲಿ ನಾನು ಉತ್ಕಟವಾಗಿ ಪ್ರೀತಿಸುವೆ. ಆದರೆ ಆರಾದಿsಸುವುದಿಲ್ಲ. ನಿಮ್ಮ ಸೃಜನಶೀಲ ಪ್ರತಿಭೆಗೆ ಹೆಮ್ಮೆಪಡುತ್ತೇನೆ. ಆದರೆ ಅದಷ್ಟೇ ಅನಂತವೆಂದು ಭಜಿಸುವುದಿಲ್ಲ. ನಿಮ್ಮ ಬಗ್ಗೆ ನನಗೆ ಯಾವ ಪೂರ್ವಗ್ರಹಗಳೂ ಇಲ್ಲ. ವೈಯಕ್ತಿಕವಾದ ಯಾವ ವ್ಯವಹಾರವೂ ನನಗಿಲ್ಲ. ನಾನು ಘನತೆಯ ನಿಷ್ಠುರ ಸಾಕ್ಷಿಪ್ರe್ಞÉಯಲ್ಲಿ ನನ್ನ ಒಳದನಿಯ ತಿಳುವಳಿಕೆಯ ಧ್ಯಾನದಲ್ಲಿ ನನಗನ್ನಿಸಿದ್ದನ್ನು ಮಾತ್ರವೇ ಬರೆಯುತ್ತಿದ್ದೇನೆಯೆ ಹೊರತು ಸಾಹಿತ್ಯ ವಿಮರ್ಶೆಯ ‘ಶುದ್ಧ’, ‘ಶ್ರೇಷ್ಠ’ ಮಾನದಂಡಗಳಿಂದಲ್ಲ. ನನ್ನ ನಿಷ್ಠುರ ಪ್ರೀತಿಯನ್ನು ನೀವು ಅರ್ಥಮಾಡಿಕೊಳ್ಳಬೇಕು. ನೀವು ನನ್ನಿಂದ ಹೊಗಳಿಕೆಯ ಹೊನ್ನಶೂಲದ ಸವಿಗೆ ಒಳಪಡಬೇಕಾದ್ದಿಲ್ಲ. ಒಬ್ಬ ‘ದಲಿತ’ ಲೇಖಕನನ್ನು ಮತ್ತೊಬ್ಬ ‘ದಲಿತ’ ಲೇಖಕ ಹೊಗಳುವುದು ತುಂಬ ಕೃತಕವಾಗಿ ಕಾಣುತ್ತದೆ. ಹಾಗೆ ಮಾಡುವುದು ಸಾರ್ವಜನಿಕವಾಗಿ ಲಜ್ಜೆ ಇಲ್ಲದವರು ಮಾತ್ರ. ಯಾವೊಬ್ಬ ದಲಿತ ಲೇಖಕನೂ ಸ್ವಜಾತಿನಿಷ್ಠೆಯ ವಿಮರ್ಶಾಪರಾಧವನ್ನು ಮಾಡದಿರುವುದನ್ನು ನೀವು ಒಂದು ಘನತೆ ಎಂದೇ ತಿಳಿಯಬೇಕು. ಆದರೆ, ನೋಡಿ; ನವ್ಯ ಲೇಖಕರಲ್ಲಿ ಪ್ರತಿಯೊಬ್ಬ ಸ್ವಜಾತಿ ಲೇಖಕನೂ ತಮ್ಮ ತಮ್ಮ ಬರಹಗಾರರನ್ನು ಎಷ್ಟೊಂದು ನಾಚಿಕೆ ಬಿಟ್ಟು ಕಲಾತ್ಮಕವಾಗಿ ಬುದ್ಧಿವಂತಿಕೆಯಿಂದ ಸಮರ್ಥಿಸಿಕೊಂಡಿದ್ದಾರೆ! ಅದಕ್ಕೂ ಹಿಂದಿನ ಕನ್ನಡ ಸಾಹಿತ್ಯವನ್ನು ನೆನೆಯಿರಿ; ಅಲ್ಲೂ ಕೂಡ ನವೋದಯದ ಹಿರಿಯ ದ್ವಿಜೋತ್ತಮ ಸಾಹಿತಿಗಳು ತಮ್ಮವರನ್ನು ಅಹಂನಿಷ್ಠತೆಯಲ್ಲಿ ಪ್ರತಿಷ್ಠಾಪಿಸಿಕೊಂಡದ್ದಿದೆ.

ಇದಕ್ಕೆ ತದ್ವಿರುದ್ಧವಾಗಿ ಬಂಡಾಯ ಸಾಹಿತ್ಯದಲ್ಲೂ ದಲಿತ ಸಾಹಿತ್ಯದಲ್ಲೂ ವಿಮರ್ಶೆಯ ನ್ಯಾಯ ಇಂದಿಗೂ ನಡೆಯುತ್ತಿದೆ. ದಲಿತ ಸಾಹಿತ್ಯದ ಹಿನ್ನೆಲೆಯಲ್ಲೇ ಹೇಳುವುದಾದರೆ; ಮಹಾದೇವರನ್ನು ಅಷ್ಟಾಗಿ ದಲಿತ ವಿಮರ್ಶಕರು ಒಪ್ಪಲೇ ಇಲ್ಲವಲ್ಲಾ; ಯಾಕೆ ಎಂಬ ಪ್ರಶ್ನೆಯನ್ನು ‘ಶ್ರೇಷ್ಠತೆಯ ವ್ಯಸನಿ’ಗಳು ಪರಿಹರಿಸಿಕೊಳ್ಳಬೇಕಾಗಿದೆ. ಇಂತಲ್ಲಿ ನಾನು ನಿಮ್ಮನ್ನು ಜಾತಿಯ ವಿನಾಯಿತಿಯಿಂದ ಅಳೆದು ತಪ್ಪು ಮಾಡಬೇಕಾದ್ದಿಲ್ಲ. ನೀವು ಬಂದ ನರಕದ ಕೇರಿಗಳಿಂದಲೆ ನಾನೂ ಬಂದಿದ್ದೇನೆ. ನಿಮ್ಮ ಬರಹದ ಆಳವನ್ನು ಕಲಾತ್ಮಕ ಜಾಣ್ಮೆ ಹಾಗೂ ಪ್ರಜ್ಞೆಯನ್ನು ಕುರಿತು ನೇರವಾಗಿ (ಮರೆಮೋಸದ ಬಾಣಗಳಿಂದಲ್ಲ) ಪ್ರಶ್ನಿಸಬೇಕಾದ ಜವಾಬ್ದಾರಿಯನ್ನು ನಾನು ನಿಮ್ಮ ಬೆನ್ನಹಿಂದೆ ಹುಟ್ಟಿಬಂದಿರುವ ಕಾರಣಕ್ಕಾಗಿ ಕೇಳಬೇಕಾಗುತ್ತದೆ. ಅದಕ್ಕೆ ನೀವು ಜವಾಬ್ದಾರಿಯುತವಾಗಿ ಉತ್ತರಿಸಬೇಕಾಗುತ್ತದೆ. ಅದು ಬಿಟ್ಟು; ನನ್ನ ಬರಹ ಮತ್ತು ವ್ಯಕ್ತಿತ್ವ ಇವೆರಡೂ ಮೋಸದ್ದು ಎಂಬಂತೆ ‘ಮೊಗಳ್ಳಿಯ ಕಣ್ಣು ನನ್ನ ಮೇಲೆ ಬಿದ್ದಿದ್ದು…. ಮರೆಮೋಸದ ಬಾಣ ಬಿಟ್ಟಿದ್ದಾರೆ’ ಎಂದು ಹುಸಿಯನಾಡುವುದು ನಿಮ್ಮ ಘನತೆಗೆ ತಕ್ಕುದಲ್ಲ.

ನಾನು ಎಂದೆಂದಿಗೂ ನಿಮಗೆ ಪ್ರತಿಸ್ಪದಿರ್sಯಲ್ಲ. ನೀವು ನಮ್ಮ ಮುಂದಿರುವ ಬೆಳಕಿನ ದೊಂದಿ. ನಿಮ್ಮಂತಹವರ ದೊಂದಿಯ ಮಬ್ಬು ಬೆಳಕಿನ ಹಿಂದಿನ ನೆರಳುಗಳ ದಂಡಿನ ಮರೆಯಲ್ಲಿ ನಾನು ನಿಮ್ಮನ್ನೆಲ್ಲ ಗಾಢವಾಗಿ ನೋಡುತ್ತ ಸದೂರದಲ್ಲಿ ಕಾಲದ ಅಲೆಯಲ್ಲಿ ಸಾಗುವವನಷ್ಟೆ. ಇಂಥಾದ್ದರಲ್ಲಿ ನೀವು ‘ಮರೆ ಮೋಸದ’ ಯೋಚನೆಯನ್ನೆ ಮಾಡಬೇಕಾದ ಅಗತ್ಯವಿರಲಿಲ್ಲ. ನೀವು ಬೆಳಕಿನ ದೊಂದಿ ಹಿಡಿದು ಈ ವ್ಯವಸ್ಥೆಯ ರಾಜಕಾರಣದ ಯಾವ ಯಾವ ದಾರಿಗಳಲ್ಲಿ ಕ್ರಮಿಸಿದ್ದೀರಿ ಎಂಬುದಕ್ಕೆ ದಸಂಸದ ಇತಿಹಾಸವೆ ಈಗಾಗಲೆ ಹೇಳಿಬಿಟ್ಟಿದೆ. ಅದರ ಪುರಾಣವನ್ನು ಬಿಚ್ಚಿ ನಿಮ್ಮ ಮನನೋಯಿಸಲಾರೆ.

ಇಲ್ಲೇ ಇನ್ನೊಂದು ಮರ್ಮವನ್ನು ಹೇಳಬೇಕಾಗಿದೆ. ‘ಮಹಾದೇವ ತಮ್ಮ ಪ್ರತಿಭೆಯ ಬೆಳಕಿನ ಮೂಲಕವೆ ಅನೇಕರನ್ನು ಕತ್ತಲೆಗೆ ನಯವಾಗಿ ಸರಿಸಿಬಿಡುತ್ತಾರೆ’ ಎಂಬುದಕ್ಕೆ ನಾನು ಅತಿ ಸೂಕ್ಷ್ಮವಾಗಿ ವಿವರ ಕೊಡುತ್ತಿದ್ದೇನೆ. ನಿಜ, ಬೆಳಕನ್ನು ಯಾರೂ ಬಚ್ಚಿಡಲಾರರು. ಅದು ಕತ್ತಲೆಯನ್ನು ಅಳಿಸುತ್ತದೆ ಎಂಬುದು ಕೂಡ ಸತ್ಯ. ಆದರೆ ಸತ್ಯಕ್ಕೆ ಒಂದೇ ಮುಖ ಇಲ್ಲ. ಸುಳ್ಳಿಗೆ ಇರುವಷ್ಟೆ ಅಸಂಖ್ಯ ಆಯಾಮಗಳು ಸತ್ಯಕ್ಕೂ ಇವೆ. ಸತ್ಯ ಯಾವತ್ತೂ ಒಂದೇ ಎಂಬ ಮಾತು ನಿಜವಲ್ಲ. ಬೆಳಕಿನ ತಳದಲ್ಲಿರುವ ಕತ್ತಲನ್ನು ಬೆಳಕಿನ ವೈಭವದಿಂದ ಮರೆಯುವುದು ಸಹಜವೆನಿಸಿಬಿಟ್ಟಿದೆ. ಸೂರ್ಯ ಬಂದಾಗ ಕತ್ತಲಳಿಯುವುದು ದಿಟ. ಆದರೆ ಈ ದಿಟದ ಮಾಯೆಯಲ್ಲಿ ನಕ್ಷತ್ರಗಳು ಕರಗಿ ಹೋಗುತ್ತವಲ್ಲಾ! ‘ನಾಳೆ’ಯ ಭವಿಷ್ಯ ಆ ತಾರೆಗಳಿಗಿದೆಯಾದರೂ ಹೀಗೆ ಬೆಳಕಿನ ನೈಸರ್ಗಿಕ ವಂಚನೆಯಿಂದ ಮುಕ್ತಿಯೇ ಇಲ್ಲವಲ್ಲಾ! ಬೆಳಕು ಕೂಡ ಅನೇಕವನ್ನು ಕತ್ತಲಿಗೆ ಸರಿಸಬಲ್ಲದು. ಪ್ರಖರವಾದ ಬೆಳಕಿನ ಆಚೀಚೆ ಏನಿದೆ ಎಂಬುದರ ಅಸ್ತಿತ್ವವೆ ಕರಗಿ ಹೋಗಿರುತ್ತದೆ. ದಟ್ಟವಾದ ಬೆಳಕು ತನ್ನ ಸುತ್ತಲಿನ ಎಲ್ಲವನ್ನು ಬೆಳಕಿನ ಬಾಯಿಗೆ ತುಂಬಿಕೊಂಡು ಬಿಟ್ಟಿರುತ್ತದೆ. ಹೀಗೆ ಹೇಳುವುದು ಪ್ರತಿಭೆಯ ರೂಪ-ವಿರೂಪ ಎರಡರ ದ್ವಂದ್ವವನ್ನು ನೆನಪಿಸಲು. ದೀಪದ ಕೆಳಗಿನ ಕತ್ತಲನ್ನೆ ನಾನು ಅಪ್ರ ಪೂರ್ವಕ ಜಾಣ್ಮೆ ಎಂದು ಹೇಳುತ್ತಿರುವುದು. ಮಹಾದೇವರ ಅನನುಕರಣೀಯ ಪ್ರತಿಭೆಯಿಂದ ಅವರಿಗಷ್ಟೆ ಉಪಯೋಗವಾದಂತೆ ಕಾಣುವುದು ನಿಜ. ದಲಿತರ ಆದಿಮ ಸೊಲ್ಲುಗಳ ರೂಪಕದಂತಿರುವ ನಂಜನಗೂಡಿನ ಸೀಮೆಯ ಆ ಭಾಷೆಯ ಸಾರವನ್ನು ಹೀರಿ ಬರೆದ ಮಹಾದೇವ ಪ್ರಖರವಾದ ಬೆಳಕಿನ ರುದ್ರ ಸೌಂದರ್ಯವನ್ನು ತಮ್ಮ ಸ್ವೋಪಜ್ಞ ಅನನ್ಯತೆಯಲ್ಲಿ ಪ್ರತಿಫಲಿಸಿದ್ದರಿಂದ ನಿಸ್ಸಂದೇಹವಾಗಿ ಕನ್ನಡ ಸಾಹಿತ್ಯ ವಿಸ್ತರಿಸಿತು. ಹಾಗೆಯೆ ಈ ವಿಸ್ತರಣೆಯ ಆಕರ್ಷಣೆಗೆ ಒಳಗಾಗಿ ಮಹಾದೇವರನ್ನು ಹಿಂಬಾಲಿಸಿದವರು ಜಾರಿಹೋದರು.

ಮನುಷ್ಯನ ಅಪ್ರಜ್ಞಾಪೂರ್ವಕ ಸುಪ್ತಪ್ರಜ್ಞೆಯಲ್ಲೂ ಜಾಣ್ಮೆಯ ಸಂಕೇತಗಳು ಇರುತ್ತವೆ ಎಂಬುದನ್ನು ನೀವು ಮರೆಯಬಾರದು. ಮನುಷ್ಯನ ವೈಚಾರಿಕ ಹಾಗೂ ಭಾಷೆಯ ಮತ್ತು ಸಂವೇದನೆಯ ತೀವ್ರತರ ವಿಕಾಸ ಆಗಿರುವುದು ನಮ್ಮ ಸುಪ್ತಪ್ರಜ್ಞೆಯ ತಳದಲ್ಲಿ ನಿರಂತರ ಎಚ್ಚರದಿಂದಿರುವ ಜಾಣ್ಮೆಯ ನೆನಪಿನ ಕೋಶಗಳಿಂದಲೇ. ಪ್ರಜ್ಞಾಪೂರ್ವ ಸ್ಥಿತಿಯು ನಿದ್ದೆಗೆ ಸರಿದಾಗಲೂ ಮನುಷ್ಯನ ಅಜ್ಞಾಪೂರ್ವಕ ‘ಎಚ್ಚರ’ವು ಜಾಗೃತವಾಗಿರುತ್ತದೆ. ಈ ಜಾಗೃತ ವ್ಯವಸ್ಥೆಯೆ ನಮಗೆ ಮನುಷ್ಯ ಲೋಕದ ಎಲ್ಲ ರೂಪಕ ಸಂಕೇತ ಪ್ರತಿಮೆ ಹಾಗೂ ಸ್ಮ್ನೃತಿಗಳನ್ನು ತಂದುಕೊಡುವುದು. ಇದರಲ್ಲಿ ‘ಮಹಾದೇವ ಅಪ್ರಜ್ಞಾಪೂರ್ವಕ ಜಾಣ್ಮೆಯಲ್ಲಿ’ ಎಂದರೆ; ಏನೋ ಅಪರಾಧ ಮಾಡುತ್ತಿದ್ದಾರೆ ಎಂದರ್ಥವಲ್ಲ. ಈ ಮೇಲಿನ ಅರ್ಥಗಳನ್ನೆ ಇಟ್ಟುಕೊಂಡು ಮಹಾದೇವರ ಕಲಾತ್ಮಕತೆಯನ್ನು ಕೊಂಚ ವ್ಯಂಗ್ಯ ಮಾಡಿ ಹೇಳಿದ್ದೆ. ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲಿರುವಂತೆ ತೋರಿಕೊಳ್ಳುವ ಮಹಾದೇವ ಜಾಣತನದಿಂದಲೂ ವರ್ತಿಸಬಲ್ಲರು ಎಂಬುದನ್ನು ಧ್ವನಿಸಲು ಹಾಗೆ ಧ್ವನಿಸಿದ್ದೆ. ಇಂತಹ ಅವರ ಗುಣವು ‘ಕುಸುಮಬಾಲೆ’ಯಲ್ಲಿ ನಾಟಕೀಯವಾಗಿ ಉದ್ದಕ್ಕೂ ಅನಾವರಣಗೊಳ್ಳುವುದಿದೆ. ಕುರಿಯಯ್ಯನ ‘ನನ್ನಿ’ಯ ಸಂದರ್ಭ ಹಾಗೂ ಜೋತಮ್ಮರ ಪ್ರಸಂಗ ಮತ್ತು ಕುಸುಮಾಳ ‘I want to be in my home’ ಎನ್ನುವ ಮಾತು ಹಾಗೆಯೆ ಯಾಡನ ಪಾತ್ರಗಳ ಜೊತೆಗೆ ಗಾರೆಸಿದ್ಮಾವನ ಜಾಣ್ಮೆ, ದಸಂಸದ ನೈಜ ಪಾತ್ರಗಳನ್ನು ಕೃತೀಕರಿಸಿ ಗೇಲಿಸುವ ಪ್ರಸಂಗ ಮುಂತಾದವು ಅಪ್ರಜ್ಞಾಪೂರ್ವಕವಾಗಿಯೆ ಜಾಣ್ಮೆಯ ಸೂಕ್ಷ್ಮಸಂವೇದನೆಯನ್ನು ಬಿತ್ತುತ್ತವೆ. ಜಾಣ್ಮೆಯು ವಾಚ್ಯದಲ್ಲಿ ಪ್ರಜ್ಞಾಪೂರ್ವಕ ಲೋಕಕ್ಕೆ ಸಂಬಂಧಪಟ್ಟಂತೆ ತೋರಿಕೊಂಡರೂ ಸೂಚ್ಯಾರ್ಥದಲ್ಲಿ ಅದು ಅಪ್ರಜ್ಞಾಪೂರ್ವಕ ಸಮಷ್ಟಿಲೋಕದ ನೀತಿಸಂಹಿತೆಗೇ ಹೆಚ್ಚು ಬದ್ಧವಾಗಿರುತ್ತದೆ. ಜಾಗೃತಲೋಕದ ದುರಂತಗಳನ್ನು ಅಪ್ರಜ್ಞಾಪೂರ್ವಕ ವ್ಯವಸ್ಥೆಯು ಪುರಾಣವಾಗಿಸುತ್ತ ಸಂಕೀರ್ಣ ರೂಪಕವಾಗಿಸಲು ಸದಾ ಯತ್ನಿಸುತ್ತಿರುತ್ತದೆ. ಸತ್ಯವನ್ನು ನಿಗೂಢಗೊಳಿಸುತ್ತ ಕಾಲದ ಬೇರೆ ಬೇರೆ ಪದರುಗಳನ್ನು ಒಂದೊಂದರ ಮೇಲೆ ಹೇರುವುದರಿಂದ ವಾಸ್ತವ ಇಲ್ಲಿ ಮುಚ್ಚಿಹೋಗುತ್ತದೆ. ಆದ್ದರಿಂದಲೆ ಭಾಷೆಯಾಗಲಿ ಅದರ ಪ್ರತಿಮೆಗಳಾಗಲಿ ಅಮೂರ್ತವಾಗಿಯೂ ಯಾದೃಚ್ಫಿಕವಾಗಿಯೂ ‘ನಾಳೆ’ಯ ಕಡೆಗೆ ಸಾಗುವುದು.

ಮಹಾದೇವ ಅವರು ಇದನ್ನೆ ‘ಕುಸುಮಬಾಲೆ’ಯ ಕೊನೆಯಲ್ಲಿ ‘ನಾಳೆ’ಯ ‘ಸಂಬಂಜ ಅನ್ನುದು ದೊಡ್ದುಕನಾ’ ಎನ್ನುವ ಉಕ್ತಿ ಮಂತ್ರದಲ್ಲಿ ವಾಸ್ತವದ ಹಿಂಸೆಯನ್ನು ಮರೆಯಲು ಯತ್ನಿಸುವುದು. ಇದು ಕಲೆಯ ಚೌಕಟ್ಟಿನಲ್ಲಿ ಅದ್ಭುತವಾಗಿ ಕಂಡರೂ ಸಮಕಾಲೀನ ಬದುಕಿನಲ್ಲಿ ತನ್ನ ದೀನಸ್ಥಿತಿಯ ಮರುಕದಲ್ಲೆ ಮರೆಗೆ ಸರಿದುಬಿಡುತ್ತದೆ. ‘ಕುಸುಮಬಾಲೆ’ಯು ಅಪ್ರಜ್ಞಾಪೂರ್ವಕ ಸುಪ್ತ ಮನಸ್ಸಿನ ದೃಶ್ಯಗಳನ್ನು ಆದಿಮ ಆಚರಣೆಯ ನಾದದಲ್ಲಿ ಚಿತ್ರಿಸಿಬಿಡುತ್ತದೆ. ಮಹಾದೇವ ಅವರು ತಮ್ಮ ಸುಪ್ತಪ್ರಜ್ಞೆಯಲ್ಲಿದ್ದ ಪೂರ್ವಿಕರ ಬಿಡಿ ಬಿಡಿಯಾದ ಚಿತ್ರಗಳನ್ನು ಪುನರ್ ಚಿತ್ರಿಸಿರುವುದು ಅದ್ಭುತವಾಗಿದೆ ಎಂದರೆ ಹೆಚ್ಚೇನನ್ನೂ ಹೇಳಿದಂತಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಮಹಾದೇವ ಸೌಂದರ್ಯದ ಮಾಯೆಯನ್ನು ಮಾತ್ರ ಉದ್ದೀಪಿಸಿ ‘ಹೊಲಾರಹಟ್ಟಿ’ಯ ದುರಂತವನ್ನು ಪ್ರಜ್ಞಾಪೂರ್ವಕವಾಗಿಯೆ ಮರೆತುಬಿಡುತ್ತಾರೆ. ಗಾರೆಸಿದ್ಮಾವನು ರಮ್ಯ ವಿಶ್ವಾಸದಲ್ಲಿ ಅದರ ಹಗಲುಗನಸಿನ ಮೋಡಿಯಲ್ಲಿ ಸತ್ತುಹೋಗಿರುವ ಚನ್ನನ ವೈಭವದ ‘ಪಟ್ಟ’ವನ್ನು ಕಲ್ಪಿಸಿಕೊಳ್ಳುವುದು ವಾಸ್ತವವನ್ನು ಮೀರಲು ಮಾದೇವ ಮರುಕದ ಕನಸಿನ ಮೊರೆಗೆ ಹೋದಂತೆ ಕಾಣುತ್ತದೆ. ದಲಿತರ ಇವತ್ತಿನ ಹೊಟ್ಟೆಪಾಡು ಇಂತಹ ಕಲಾತ್ಮಕತೆಯ ಬಗ್ಗೆ ಕನಸಿನಲ್ಲೂ ಯೋಚಿಸುವುದಿಲ್ಲ. ಮಹಾದೇವರ ಕಲಾಕೃತಿಯೆ ಬೇರೆ, ಬ್ರಾಹ್ಮಣರ ವಿಮರ್ಶೆಯ ಶಿಸ್ತೆ ಬೇರೆ, ಹಾಗೆಯೆ ದಲಿತರ ಸಮಕಾಲೀನ ಸಮಸ್ಯೆಗಳೇ ಬೇರೆ. ಕುಸುಮ ಬಾಲೆ ಕಾದಂಬರಿಯ ಕೊನೆಯಲ್ಲಿ ಸುಂದರ ಹಗಲುಗನಸಿನಂತೆಯೆ ಭಾಸವಾಗಿ ಕೇವಲ ಹುಸಿಯ ನಿರೀಕ್ಷೆಯಲ್ಲೇ ಚನ್ನನ ಮುಪ್ಪಾದ ತಂದೆತಾಯಿಗಳಿಬ್ಬರನ್ನು ಮಗನ ಕಾಯುವಿಕೆಯಲ್ಲಿ ಕೂರಿಸುವುದು ತುಂಬ ಕ್ರೂರವಾಗಿ ಕಾಣುತ್ತದೆ. ಈ ಹಗಲುಗನಸಿನ ಕ್ರೌರ್ಯ ತನ್ನ ಕತ್ತಿ ಮೊನೆಯಿಂದ ಓದುಗರನ್ನು ಚುಚ್ಚಿ ಘಾಸಿಗೊಳಿಸಿದರೂ ಅಂತಿಮವಾಗಿ ಎಲ್ಲ ಸಂಬಂಧಗಳು ನೆತ್ತರಲ್ಲಿ ಹರಿದು ಹೋಗಿರುವಾಗ ಮತ್ತದೇ ‘ಸಂಬಂಜ ಅನ್ನುದು ದೊಡ್ದುಕನಾ’ ಎಂಬ ಮಾತು ಹಗಲುಗನಸಿನಂತೆಯೆ ಕಾಣುತ್ತದೆ. ಇಂತಹ ಗುಣ; ಮುಗ್ಧವಾದ ಅನುಭಾವವನ್ನು ವೈಯಕ್ತಿಕ ದುರಂತಗಳ ಮೂಲಕ ಕಾಣುವುದರಿಂದ ಬರುವಂತಿದೆ. ಅದರಿಂದಲೆ ದೇವನೂರರ ಅರಿವಿಗೆ ಅಲ್ಲಮನ ಸಮುದ್ರದೊಳಗಣ ಉಪ್ಪಿನ ನೀತಿಯೂ ಮಲೆಮಾದೇಶ್ವರನ ಭಕ್ತಿಯೂ ಒಂದೇ ಆಗಿ ಭಾಷೆಯ ಆದಿಮ ನಾದದಿಂದ ಭಾವುಕ ಸತ್ಯಗಳಿಗೆ ಅಂಟಿಕೊಳ್ಳುವುದು. ಈ ಕಾರಣದಿಂದಲೆ ಹೊಲಾರ ಚನ್ನನ ದುರಂತವು ಒಂದು ಆಳವಾದ ಗಾಯದಂತೆ ಕಂಡರೂ ಅದು ಒಂದು ಸಮುದಾಯದ ಕೇವಲ ರಮ್ಯ ವಿಶ್ವಾಸವಾಗಿ ಕಲೆಯ ರಮ್ಯರೋದನವಾಗಿ ನಿಂತುಬಿಡುತ್ತದೆ. ಇದನ್ನು ಕಲೆಯ ಹೆಸರಲ್ಲಿ ಉನ್ನತ ಭಾವಸ್ಪಂದನವೆಂದು ಕರೆದು ಮಾನ್ಯ ಮಾಡಬಹುದಾದರೂ ಇಷ್ಟೆಲ್ಲದರ ನಡುವೆ ಹಿಡಿಯಾಗಿ ನಿಯಂತ್ರಿಸುವ ವ್ಯವಸ್ಥೆಯನ್ನಾಗಲಿ ವಾಸ್ತವದ ಕ್ರೂರ ಸತ್ಯಗಳ ಆಹುತಿಯನ್ನಾಗಲಿ ನಾವು ಅಥವಾ ಇಂತಹ ‘ಕೃತಿ ಸೌಂದರ್ಯ’ಕ್ಕೆ ಒಳಗಾದ ಸಮಾಜಗಳು ಏನೂ ಮಾಡಲಿಕ್ಕೆ ಆಗದಂತೆ ನಮ್ಮ ನಡುವೆ ಸಂಬಂಧಗಳು ಛಿದ್ರಗೊಂಡಿವೆ. ಕೃತಿನಿಷ್ಠವಾದ ಮಾನವೀಯತೆ ತುಂಬ ಸುಂದರವಾಗಿರುತ್ತದೆಯಷ್ಟೆ. ಸಮಾಜನಿಷ್ಠ ಮಾನವೀಯತೆಯ ವಾಸ್ತವ ಸಾಧ್ಯತೆಗೆ ನಮ್ಮ ನಿಲುವು ಹಾಗೂ ‘ಸಂಬಂಜ’ ಬೇರೆ ಬೇರೆಯಾಗಿಯೆ ಕರಗುತ್ತಿವೆ.

ಹೀಗಾಗಿ ಮಹಾದೇವರ ಬರಹವನ್ನು ಅಗತ್ಯವಾಗಿ ಕಲೆಯ ಬಲೆಯಿಂದ ಬಿಡಿಸಿ ನೋಡಬೇಕಾಗುತ್ತದೆ. ನನ್ನ ಬಗ್ಗೆ ಅವರು ತೀರ ಅಸಹನೆಯ ಒಂದು ಮಾತು ಬಳಸಿರುವುದನ್ನು ಕಂಡು ತುಂಬ ಜಿಗುಪ್ಸೆಯಾಯಿತು. ‘ಬರೆಯುವಾಗ ಬರೆಯುವ ವ್ಯವಹಾರ ಮಾತ್ರವಿರಲಿ, ಬರೆದಾದುದರ ನಂತರದ ವ್ಯವಹಾರಕ್ಕೆ ನನ್ನ ಅಭ್ಯಂತರವೇನೂ ಇಲ್ಲ’; ಆಹಾ! ಮಾದೇವಣ್ಣಾ ನಿನ್ನಂತಹವರು ಹೇಳುವ ಮಾತೆ ಇದೂ? ಇರಲಿ, ನನ್ನ ವ್ಯವಹಾರ, ನಿಮ್ಮ ವ್ಯವಹಾರ ಏನು ಎಂಬುದನ್ನು ನಾಳೆ ಜನರೇ ತೀರ್ಮಾನಿಸುವುದರಿಂದ ಈ ಬಗ್ಗೆ ಸದ್ಯಕ್ಕೆ ನಾನು ಮೌನವಹಿಸುತ್ತೇನೆ.

1 ಕಾಮೆಂಟ್‌:

parama ಹೇಳಿದರು...

ಲೇಖನ ಆಳ
ವಾಗಿ ಯೋಚಿಸುವಂತಿದೆ.