ಭಾನುವಾರ, ಜೂನ್ 16, 2013

ಸುಡುಗಾಡು ಸಿದ್ದರು: ಕಥೆ ಮತ್ತು ಸಿನೆಮಾ


-ಅರುಣ್ ಜೋಳದಕೂಡ್ಲಿಗಿ





  ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ‘ಕನಸೆಂಬೋ ಕುದುರೆಯನೇರಿ’ ಹಲವು ಕಾರಣಗಳಿಗೆ ಮುಖ್ಯವೆನಿಸುವ  ಸಿನಿಮಾ. ಇದು ಕನ್ನಡದ ಸತ್ವಯುತ ಕಥೆಗಾರ ಅಮರೇಶ ನುಗಡೋಣಿ ಅವರ ಸವಾರಿ ಕಥೆಯನ್ನಾಧರಿಸಿದ ಸಿನಿಮಾ. ಇಲ್ಲಿ ಸಾಮಾಜಿಕ ಸಂಗತಿಯೊಂದು ಕಥೆ ಮತ್ತು ಸಿನಿಮಾ ಮಾದ್ಯಮದಲ್ಲಿ ತೆರೆದುಕೊಳ್ಳುವ ಭಿನ್ನ ಆಯಾಮಗಳನ್ನು ನೋಡಬಹುದು.
 ಬ್ಯಾಗಾರ ಕುಲದ ಈರ‍್ಯನದು ಹೆಣ ಊಣಲು ಕುಣಿ ತೋಡುವ ಕಾಯಕ. ಈತ ಸಾವಿನ ಕನಸು ಕಾಣುವಾತ. ಕನಸು ಕಂಡೊಡನೆ ಕುಣಿ ತೋಡಲು ಹೊರಡುತ್ತಿದ್ದ. ಹೀಗೆ ಕನಸು ಕಂಡದ್ದು ಹುಸಿಯಾದದ್ದೆ ಇಲ್ಲ. ಈತನ ಹೆಂಡತಿ ರುದ್ರಿ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುವ ಗಟ್ಟಿಗಿತ್ತಿ. ಹೀಗೆ ಒಂದು ದಿನ ಊರ ಗೌಡ ಸತ್ತ ಕನಸು ಕಾಣುತ್ತಾನೆ. ಹೆಚ್ಚು ಕುಸಿ ಸಿಗುವ ಕಾರಣಕ್ಕೆ ಗೌಡರ ಸಾವಿನ ಕನಸು ಈರ‍್ಯನಲ್ಲಿ ಹೊಸ ಹುಮ್ಮಸ್ಸು ಮೂಡಿಸುತ್ತದೆ. ಆದರೆ ಮಠದಯ್ಯ ಗೌಡರ ಸಾವನ್ನು ಮುಚ್ಚಿಟ್ಟು ಈರ‍್ಯನ ಕನಸನ್ನು ಅಲ್ಲಗಳೆಯುತ್ತಾನೆ. ಈರ‍್ಯನ ಹೆಂಡತಿ ಸಿದ್ಧ ಬರುವುದಾಗಿ ಕನಸು ಕಾಣುತ್ತಾಳೆ, ಸಿದ್ಧನನ್ನು ಬಚ್ಚಿಟ್ಟು ಆ ಕನಸನ್ನು ಹುಸಿಗೊಳಿಸುವ ಒಳಸಂಚು ನಡೆಯುತ್ತದೆ.


  ಊರ ವಾಡೆಯ ಹಿರಿ ಗೌಡನ ಮಗ ಶಿವಣ್ಣ, ಹೊಲ ಮಾರಿ ಇಂಗ್ಲೀಷ್ ಶಾಲೆ ತೆರೆಯುವ ಕನಸಿನಾತ. ಈ ಶಿವಣ್ಣ ಊರವರ ಜಮೀನನ್ನು ಕೈಗಾರಿಕೆಗೆ ಮಾರಲು ರೈತರನ್ನು ಒಪ್ಪಿಸಿ ನಗರಕ್ಕೆ ಹೊರಡುವ ದಿನ ಹಿರೇಗೌಡ ಸಾವನ್ನಪ್ಪುತ್ತಾನೆ. ಹೀಗಾಗಿ ಅಪ್ಪನ ಅಂತ್ಯಸಂಸ್ಕಾರಕ್ಕಿಂತ ಜಮೀನಿನ ಮಾರಾಟವೇ ಮುಖ್ಯವೆಂದು ಬಾವಿಸಿದ ಆತ ಸಾವನ್ನು ಮುಚ್ಚಿಡಲು ಹೇಳುತ್ತಾನೆ. ಇನ್ನು ಸಿದ್ಧ ಊರಿಗೆ ಬಂದ ದಿನ ಯಾರು ಸಾವನ್ನಪ್ಪುತ್ತಾರೆಯೋ ಅವರದು ಪುಣ್ಯದ ಸಾವು, ಅವರು ನೇರ ಸ್ವರ್ಗಕ್ಕೆ ಹೋಗುತ್ತರೆ ಎನ್ನುವ ನಂಬಿಕೆಯಿದೆ. ಈ ಕಾರಣಕ್ಕೆ, ಒಂದು ದಿನ ಮುಂಚೆಯೇ ಬಂದ ಸಿದ್ಧನನ್ನು ಹಿಡಿದಿಟ್ಟು ಹಿರೇಗೌಡರು ಸಾವಿನ ಸುದ್ಧಿ ಬಯಲು ಮಾಡಿದ ದಿನವೇ ಸಿದ್ಧ ಬಂದ ಎಂದು ಹೇಳಿ ಗೌಡರ ಸಾವು ಪುಣ್ಯದ ಸಾವೆಂದು ಸಮೀಕರಿಸುವ ಪ್ರಯತ್ನ ನಡೆಯುತ್ತದೆ.




 ಇಲ್ಲಿ ಈರ‍್ಯನ ಕನಸಿನ ಬಗೆಗಿನ ನಂಬಿಕೆ ಏಕಕಾಲದಲ್ಲಿ ಬದುಕಿನ ಬಗೆಗಿನ ನಂಬಿಕೆಯೂ ಆಗಿದೆ. ಸವಾರಿ ಕಥೆಯಲ್ಲಿ ವಜ್ರಪ್ಪ ಗೌಡರ ಶವ ಮೆರವಣಿಗೆಯಲ್ಲಿಯೇ ಕಾಲ್ತುಳಿತಕ್ಕೆ ಸಿಕ್ಕು ಸಾವನ್ನಪ್ಪಿ ವ್ಯವಸ್ಥೆಯ ಕ್ರೂರ ಮುಖವನ್ನು ತೋರುತ್ತದೆ. ಆದರೆ ಇದೇ ವಜ್ರಪ್ಪ ಸಿನೆಮಾದಲ್ಲಿ, ಶವ ಊಣುವ ಕುಣಿಯಲ್ಲಿ ಸಸಿ ನೆಟ್ಟು ಒಂದು ಜೀವವನ್ನು ಪೊರೆಯುತ್ತಾ ಬದುಕಿನ ಹೊಸ ತಿರುವಿಗೆ ತೆರೆದುಕೊಳ್ಳುತ್ತಾನೆ. ಜನಸಮುದಾಯದ ನಂಬಿಕೆಯ ಲೋಕವನ್ನು ಸಿನಿಕವಾಗಿ ನೋಡದ, ಅದನ್ನೊಂದು ಚೈತನ್ಯವನ್ನಾಗಿ ಕಥೆ ಮತ್ತು ಸಿನೆಮಾದಲ್ಲಿ ನೋಡಲಾಗಿದೆ. ಶಿವಣ್ಣನ ಮಗಳು ಪಿಂಕಿಯ ನಿರಾಳವಾದ ಆಟದ ಮೈದಾನವಾದ ವಾಡೆ, ಶಿವಣ್ಣನ ಹೆಂಡತಿಯ ಪಾಲಿಗೆ ಹಾಳುಕೊಂಪೆಯಾಗುವುದೂ, ಅದೇ ವಾಡೆ ಊರವರ ಪಾಲಿಗೆ ಗೌಡರ ದೊಡ್ಡಮನೆಯಾಗುವುದು ಇಂತವ ವೈರುದ್ಯಗಳನ್ನು ಸಿನೆಮಾ ಪರಿಣಾಮಕಾರಿಯಾಗಿ ಚಿತ್ರಿಸಿದೆ.

 ಸಿನೆಮಾ ಕಟ್ಟಿಕೊಡುವ ಈರ‍್ಯ, ಕತೆ ಕಟ್ಟಿಕೊಡುವ ವಜ್ರಪ್ಪ ನಿಜಕ್ಕೂ ಕಾಡುವ ಗಟ್ಟಿ ಪಾತ್ರಗಳು. ಇಲ್ಲಿ ಹಳ್ಳಿಗಳು ಹೊಸ ರಾಜಕೀಯ ವ್ಯವಸ್ಥೆಗೆ ಹೊಂದಿಕೊಳ್ಳುವ, ಹೊಸ ಬಗೆಯ ಯಜಮಾನಿಕೆಯ ಗತ್ತುಗಳನ್ನು ರಾಜಕೀಯದ ಮೂಲಕ ಪಡೆದ ಬದಲಾವಣೆಯನ್ನು ಗೌಡರ ಮಗ ಶಿವಪ್ಪ ಗೌಡನ ತಾಕಲಾಟದಿಂದ ಚೆನ್ನಾಗಿ ಚಿತ್ರಿಸಿದ್ದಾನೆ. ಇಡೀ ಊರಿಗೇ ಉರೇ ಕೆಟ್ಟ ಶನಿ ಎಂದು ಗೌಡರನ್ನು ತೆಗುಳುವಾಗ, ಆತನ ಸಾವಿನಲ್ಲಾದರೂ ಒಳ್ಳೆಯತನವನ್ನು ಕಾಣಿಸುವುದು, ಆ ಒಳ್ಳೆತನದ ಭಾವನೆಯನ್ನು ರಾಜಕೀಯ ಓಟನ್ನಾಗಿ ರೂಪಿಸಿಕೊಳ್ಳುವುದು ಇವು ಗ್ರಾಮೀಣ ಬದುಕಿನ ಸ್ಥಿತ್ಯಂತರವನ್ನು ಸೂಕ್ಮವಾಗಿ ಕಾಣಿಸುತ್ತವೆ.



  ಒಂದು ಸಮುದಾಯದ ನಂಬಿಕೆಯ ಲೋಕದ ಮೂಲಕ ಗ್ರಾಮೀಣ ಸಮುದಾಯದ ಭಿನ್ನ ಮುಖಗಳನ್ನು, ಬದಲಾಗುತ್ತಿರುವ ಜೀವನ ಗ್ರಹಿಕೆಯನ್ನು ಸಿನೆಮಾ ತುಂಬಾ ಉತ್ತಮವಾಗಿ ಕಟ್ಟಿಕೊಟ್ಟಿದೆ. ಇಲ್ಲಿ ಮೂಲ ಕಥೆಗಾರ ಅಮೆರೇಶ ನುಗಡೋಣಿ ಅವರ ಗಟ್ಟಿ ಕಥೆಯೇ ಈ ಸಿನಿಮಾಕ್ಕೆ ಒಂದು ಭಿನ್ನ ಹರವನ್ನು ಕಲ್ಪಿಸಿದೆ. ಇದನ್ನು ಸಿನಿಮಾ ಆಗಿಸುವಲ್ಲಿಯೂ ಕಾಸರವಳ್ಳಿ ಅವರ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಮುಖ್ಯವಾಗಿ ಒಂದೇ ಘಟನೆಯನ್ನು ಎರಡು ಭಿನ್ನ ಕೋನಗಳಲ್ಲಿ ತೋರಿಸುವ ಪ್ಲಾಶ್ ಬ್ಯಾಕ್ ತಂತ್ರ ತುಂಬಾ ಪರಿಣಾಮಕಾರಿಯಾಗಿ ಮೂಡಿದೆ. ಕೇರಿಯ ಜನರೊಂದಿಗೆ ಕೂಡು ಬಾಳುವೆ ನಡೆಸುವ ಬ್ಯಾಗ್ಯಾರ ಕುಲವನ್ನು ಬಟ್ಟಂಬಯಲಲ್ಲಿ ಒಂದೇ ಮನೆಯನ್ನು ತೋರಿಸುವುದು ಅಷ್ಟು ಪರಿಣಾಮಕಾರಿಯಾಗಿಲ್ಲ.

 ಇಲ್ಲಿ ಸುಡುಗಾಡು ಸಿದ್ಧರ ಸಮುದಾಯದ ನಂಬಿಕೆ, ಆಚರಣೆ, ಮತ್ತು ವರ್ತಮಾನವನ್ನು ಒಂದು ಕತೆ ಮತ್ತು ಸಿನೆಮಾ ಬೇರೆ ಬೇರೆ ಮಾದ್ಯಮಗಳ ಸಾದ್ಯತೆಯನ್ನು ತೆರೆದಿಟ್ಟಿವೆ. ಅಂತೆಯೇ ಇದೇ ಸಮುದಾಯದ ಜಾನಪದ ಅಧ್ಯಯನಗಳನ್ನು ಗಮನಿಸಿದರೆ, ಇಂತಹ ಸಂಕೀರ್ಣತೆಯನ್ನು ಗಮನಿಸಲು ಆಗಿರಲಿಲ್ಲವೇನೋ. ಸುಡುಗಾಡು ಸಿದ್ಧರ ಬದುಕಿನ ಕ್ರಮವನ್ನು ಒಂದು ಆಚರಣೆಯಾಗಿ ರಮ್ಯವಾಗಿ ಕಟ್ಟಿಕೊಡುವ ಮಾದರಿ ಜಾನಪದ ಅಧ್ಯಯನಗಳಲ್ಲಿ ಕಾಣುತ್ತದೆ. ಆದರೆ ಅದೇ ಸಮುದಾಯವನ್ನು ಒಬ್ಬ ಕಥೆಗಾರ ಸೂಕ್ಷ್ಮವಾಗಿ ನೋಡುವಾಗ ಕಾಣುವ ಮುಖವೊಂದರ ಅನಾವರಣ ನುಗಡೋಣಿ ಅವರ ಕತೆಯಲ್ಲಿ ಕಾಣುತ್ತದೆ. ಇದು ಇನ್ನೊಂದು ಭಿನ್ನ ಸಾದ್ಯತೆಯನ್ನು ಸಿನೆಮಾ ತೋರುತ್ತದೆ. ಇದನ್ನು ನೋಡಿದರೆ ಸಮುದಾಯಗಳ ಅಧ್ಯಯನಗಳಲ್ಲಿ  ಆಯಾ ಸಮುದಾಯದ ಬದುಕಿನ ಸಂಕೀರ್ಣತೆಯನ್ನು ಅದರೆಲ್ಲಾ ಸಾದ್ಯತೆಗಳ ನಡುವೆ ಹಿಡಿಯಲು ಜಾನಪದ ಅಧ್ಯಯನಗಳಲ್ಲಿ ಆಗುವುದಿಲ್ಲವೇನೋ ಅನ್ನಿಸುತ್ತದೆ.

 ಈರ‍್ಯನಾಗಿ ಬಿರಾದಾರ್ ಅವರ ಅಭಿನಯ ನಿಜಕ್ಕೂ ಅದ್ಭುತವಾದ್ದು. ಇದಕ್ಕೆ ಸಮಾನವಾಗಿ ರುದ್ರಿಯಾಗಿ ಉಮಾಶ್ರೀ ಅಭಿನಯವೂ ಪ್ರಬುದ್ಧವಾಗಿದೆ. ವಿ.ಮನೋಹರ್ ಅವರ ಸಂಗೀತ, ಹೆಚ್. ಎಂ.ರಾಮಚಂದ್ರ ಅವರ ಛಾಯಾಗ್ರಹಣ ಚಿತ್ರದ ಪರಿಣಾಮವನ್ನು ಹೆಚ್ಚಿಸಿದೆ. ಗೋಪಾಲಕೃಷ್ಣ ಅವರ ಚಿತ್ರಕಥೆ ಮೂಲಕಥೆಯನ್ನು ಮುಕ್ಕಾಗಿಸದಂತಿದೆ. ಒಟ್ಟಾರೆ ಸಿನೆಮಾ ಈ ನೆಲದ ಜೀವಗಳ ಮಿಡಿತವನ್ನು ಹಿಡಿಯುವಲ್ಲಿ ಶಕ್ತವಾಗಿದೆ. ಈ ಕಾರಣಕ್ಕೆ ನೆಲದ ಕಥೆಯಾಗಿ ಮನಮುಟ್ಟುತ್ತದೆ.

ಕಾಮೆಂಟ್‌ಗಳಿಲ್ಲ: