ಭಾನುವಾರ, ಜೂನ್ 16, 2013

ಕನ್ನಡದಲ್ಲೊಂದು ಅಪೂರ್ವ ಆತ್ಮಕಥನ ಗೊಂದಲಿಗ್ಯಾ

-ಸಿದ್ಧರಾಮ ಹಿರೇಮಠ, ಕೂಡ್ಲಿಗಿ.

-
       ಮರಾಠಿ ದಲಿತ ಆತ್ಮಕಥನಗಳ ಧಾಟಿಯಲ್ಲಿಯೇ ಕನ್ನಡದಲ್ಲಿ ಕಳೆದ ವರ್ಷ ಮೂಡಿಬಂದ ಎ.ಎಂ.ಮದರಿಯವರ ಅಪೂರ್ವ ಆತ್ಮಕಥನ ಗೊಂದಲಿಗ್ಯಾ. ಹೆಸರೇ ಸೂಚಿಸುವಂತೆ ಗೊಂದಲಿಗರ ಜನಾಂಗದ ನೋವು, ಸಂಕಟ, ತಲ್ಲಣಗಳನ್ನು ಗರ್ಭೀಕರಿಸಿಕೊಂಡಿರುವ ಗೊಂದಲಿಗ್ಯಾ ಕನ್ನಡ ಸಾಹಿತ್ಯದ ದಲಿತ ಆತ್ಮಕಥನಗಳಲ್ಲಿ ಪ್ರಮುಖ ಸ್ಥಾನ ಪಡೆಯುವಂತಹದ್ದಾಗಿದೆ. 
 
ಗೊಂದಲಿಗರು ಎಂಬ ಹೆಸರಿನ ಬದಲಾಗಿ, ಬಯ್ಗುಳದಂತಿರುವ ಗೊಂದಲಿಗ್ಯಾ ಎಂಬ ಹೆಸರನೇ ಯಾಕೆ ಕೃತಿಗಿರಿಸಿದರು ಎಂದು ತಿಳಿಯಬೇಕಾದಲ್ಲಿ ಇಡೀ ಪುಸ್ತಕವನ್ನು ಓದಲೇಬೇಕು. ಗೊಂದಲಿಗ್ಯಾ ಇಲ್ಲಿ ಸಮಾಜ ತುಚ್ಛೀಕರಿಸಿ ಬಯ್ಯುತ್ತಿದ್ದ ಬೈಗುಳದ ಪದದ ರೂಪದಲ್ಲಿ ಬಂದಿದೆ. ಆ ಎಲ್ಲ ತಲ್ಲಣಗಳನ್ನು ತೋರಿಸಲೆಂದೇ ಮದರಿಯವರು ತಮ್ಮ ಕೃತಿಗೆ ಗೊಂದಲಿಗ್ಯಾ ಎಂದೆ ಹೆಸರಿಸಿದ್ದಾರೆ. 
 
ಅಲೆಮಾರಿಗಳಾಗಿರುವ ಗೊಂದಲಿಗರ ಬದುಕು, ಬವಣೆ, ಅವಮಾನ, ಕೀಳರಿಮೆ, ಹತಾಶೆ, ವ್ಯವಸ್ಥೆಯ ಬಗ್ಗೆ ಕಿಚ್ಚಿದ್ದರೂ ಅದನ್ನು ಎದುರಿಸಲಾಗದೆ ಅವಡುಗಚ್ಚಿ ಸಹಿಸುವ ತಾಳ್ಮೆ, ಎಲ್ಲವೂ ಆತ್ಮಕಥೆಯಲ್ಲಿ ಮುಪ್ಪುರಿಯಾಗಿ ಮೂಡಿಬಂದಿವೆ. 
 
ಮದರಿಯವರು ಮೂಲತ: ಮೃದು ಹಾಗೂ ಸಂಕೋಚ ಸ್ವಭಾವದವರಾಗಿದ್ದುದರಿಂದಲೋ ಅಥವಾ ಗೊಂದಲಿಗರ ಜನಾಂಗದ ಶೋಷಣೆಯ ವ್ಯವಸ್ಥೆಯಲ್ಲಿ ಸಿಲುಕಿಕೊಂಡಿದ್ದರಿಂದಲೋ ಆತ್ಮಕಥನದಲ್ಲಿ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಆಕ್ರೋಶದ ಗುಣ ಎಲ್ಲಿಯೂ ಕಂಡುಬರುವುದಿಲ್ಲ. ಅಲ್ಲಲ್ಲಿ ಮಾತಿನ ಚಾಟಿಯೇಟನ್ನು ಶೋಷಣೆ ಮಾಡುವವರ ವಿರುದ್ಧ ಬೀಸುವರಾದರೂ ಇಡೀ ಆತ್ಮಕಥೆಯಲ್ಲಿ ಅದು ಗೌಣವಾಗಿದೆ. ಮದರಿಯವರು ಬಾಲ್ಯದಿಂದಲೂ ಮೇಲ್ವರ್ಗದ, ಮೇಲ್ಜಾತಿಯ ಜನರ ತುಳಿತಕ್ಕೊಳಗಾಗುವುದೇ ಅಲ್ಲದೆ ಕ್ರೂರ ವ್ಯವಸ್ಥೆಯ ಕಬಂಧ ಬಾಹುಗಳಲ್ಲಿಯೂ ನಲುಗುವುದರಿಂದಲೂ ಆತ್ಮಕಥನದುದ್ದಕ್ಕೂ ಅಂತರ್ಮುಖಿಯಾಗಿಯೇ ತೋರುತ್ತಾರೆ. ಅಲ್ಲದೆ ಅವರ ಕುಟುಂಬದ ಸಮಸ್ಯೆಗಳೂ ಅವರನ್ನು ಹಣ್ಣು ಮಾಡಿದ್ದುದರಿಂದಲೂ ಮದರಿಯವರು ಆತ್ಮಕಥನದಲ್ಲಿ ಶೋಷಣೆಯ ಮತ್ತಷ್ಟು ನೋವನ್ನು ಸಹಿಸಿಕೊಳ್ಳುವವರಾಗಿ ಕಾಣುತ್ತಾರೆ.
 
ಮದರಿಯವರು ಕೃತಿಯಲ್ಲಿ ತಮ್ಮ ಜನಾಂಗ ಗುಡಿಗುಂಡಾರಗಳಲ್ಲಿ ಬೀಡು ಬಿಡುವ, ಊರೂರು ತಿರುಗುವ, ಅವಮಾನಗಳಿಗೆ ಗುರಿಯಾಗುವ ಘಟನೆಗಳನ್ನು ಕಣ್ಮುಂದೆ ಕಟ್ಟುವಂತೆ ಚಿತ್ರಿಸಿದ್ದಾರೆ. ಹೀಗಾಗಿ ಇದು ಎ.ಎಂ.ಮದರಿ ಎಂಬ ಒಬ್ಬ ವ್ಯಕ್ತಿಯ ಆತ್ಮಕಥನವಾಗಿರದೇ ಅವರ ಹಿಂದಿರುವ ಇಡೀ ಗೊಂದಲಿಗರ ಜನಾಂಗದ ಆತ್ಮಕಥನವಾಗಿಯೇ ನಮಗೆ ಕಾಣಸಿಗುತ್ತದೆ. ಪ್ರತಿ ಊರುಗಳಿಗೆ ಹೋದಾಗ ನಡೆಯುವ ಘಟನೆಗಳು ಗೊಂದಲಿಗರ ಜೀವನ ಚಿತ್ರಣವನ್ನೇ ನೀಡುತ್ತವೆ. ಕತೆ, ತತ್ವಪದಗಳನ್ನು, ಗೀಗೀ ಪದಗಳನ್ನು ಹೇಳುತ್ತ ಅಥವಾ ಪಾತ್ರೆಗಳನ್ನು ಮಾರುತ್ತ ಅಲೆಯುವ ಗೊಂದಲಿಗರ ಬದುಕು ಸಾಮಾಜಿಕವಾಗಿ ಕೆಳಸ್ತರದಲ್ಲಿಯೇ ನಲುಗುತ್ತಿರುವವರ ಬದುಕಾಗಿದೆ. ಅದಕ್ಕೆಂದೇ ಮದರಿಯವರು ತಮ್ಮ ಜನಾಂಗವೂ ಎಂದೋ ಪರಿಶಿಷ್ಟ ಜಾತಿ, ಜನಾಂಗದಲ್ಲಿ ಗುರುತಿಸಬೇಕಾದುದು ಆದರೆ ಅಸಂಘಟನೆಯಿಂದಾಗಿ ಇನ್ನೂ ಜನಾಂಗದ ಬದುಕು ಕತ್ತಲಲ್ಲಿಯೇ ಉಳಿದಿದೆ ಎಂದು ವ್ಯಥೆಪಡುತ್ತಾರೆ. ಅಂತೆಯೇ ಮದರಿಯವರು ಹೇಳುವಂತೆ, ಗೊಂದಲಿಗರ ಜನಾಂಗದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದವರು ಇಡೀ ರಾಜ್ಯದಲ್ಲಿ ಸಿಗುವುದು ವಿರಳ. ಇದಕ್ಕೆ ಕಾರಣ ಜನಾಂಗದಲ್ಲಿ ಇಂದಿಗೂ ಮುಂದುವರೆದುಕೊಂಡು ಬಂದಿರುವ ಕಂದಾಚಾರ, ಮೂಢನಂಬಿಕೆಗಳು ಎನ್ನುತ್ತಾರೆ. ಕುಟುಂಬದ ಹೆಣ್ಣುಮಕ್ಕಳು ದುಡಿಯಬೇಕು, ಗಂಡಂದಿರು ಆ ದುಡಿಮೆಯಿಂದಲೇ ಬದುಕಬೇಕೆಂಬ ಅಸಹಜ ಆಚರಣೆಗಳು ಜನಾಂಗದಲ್ಲಿರುವುದರಿಂದ, ಹೆಣ್ಣುಮಕ್ಕಳು ಇಂದಿಗೂ ಎಲ್ಲ ನೋವುಗಳನ್ನೂ ಮೌನವಾಗಿಯೇ ಸಹಿಸಿಕೊಂಡು ಆ ವ್ಯವಸ್ಥೆಗೆ ಹೊಂದಿಕೊಂಡುಬಿಟ್ಟಿದ್ದಾರೆಂದು ಮದರಿ ವಿವರಿಸುತ್ತಾರೆ. ಅಸಂಘಟಿತರಾಗಿರುವ ಗೊಂದಲಿಗರ ಜನಾಂಗವನ್ನು ಒಂದೆಡೆ ಸೇರಿಸಿ, ಸಂಘಟಿತರನ್ನಾಗಿ ಮಾಡಿ ಸಾಮಾಜಿಕವಾಗಿ ಅವರನ್ನು ಮುಂಚೂಣಿಯಲ್ಲಿ ತರುವುದು ಕಷ್ಟಸಾಧ್ಯ ಎಂದು ಹೇಳುತ್ತಾರೆ. ತಾವೆಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ ಎಂಬ ನೋವೂ ಅವರಿಗಿದೆ. 
 
ನನ್ನ ಹೆಸರು ಅಪ್ಪಣ್ಣ, ಹಿರಿಯರು ಅಪ್ಪಣ್ಣ, ಅಪ್ಪಾಸಾಹೇಬ ಎಂದು ಕರೆದರೆ, ಗೆಳೆಯರು ಅಪ್ಪಯ್ಯ ಎಂದೂ ಕರೆಯುತ್ತಿದ್ದರು ಇಲ್ಲಿಂದ ಆರಂಭಗೊಳ್ಳುವ ಮದರಿಯವರ ಆತ್ಮಕಥನವು ಬಾಲ್ಯ, ಯೌವ್ವನ, ಅಲೆದಾಟ, ನೋವು, ಅವಮಾನ, ಹತಾಶೆ, ಸಹನೆ, ಛಲ ಎಲ್ಲವುಗಳ ಸುಳಿಯಲ್ಲಿ ಸಿಲುಕಿ ಕೊನೆಗೆ ನಿವೃತ್ತಿ ಅಂಚಿನಲ್ಲಿದ್ದಾಗ, ಬ್ಯಾಂಕಿನಲ್ಲಿ ಸಾಲ ಕೇಳಲು ಹೋದಾಗ, ಮೆನೇಜರ್ ಕೇಳುತ್ತಾರೆ ನಿಮ್ಮ ಊರು ಯಾವುದು?. ಈ ಪ್ರಶ್ನೆಗೆ ಉತ್ತರಿಸುವುದರ ಜೊತೆಯಲ್ಲಿಯೇ ಓದುಗರನ್ನು ಚಿಂತನೆಗೆ ಹಚ್ಚುವಲ್ಲಿ ಕಥನ ಪೂರ್ಣಗೊಳ್ಳುತ್ತದೆ. 
 
ಇಡೀ ಆತ್ಮಕಥನದ ಭಾಷೆ ಸುಲಲಿತವೂ, ಸರಳವೂ ಆಗಿರುವುದರಿಂದ ಎಲ್ಲಿಯೂ ಹಿಡಿತ ತಪ್ಪದಂತೆ ಓದಿಸಿಕೊಂಡು ಹೋಗುವಲ್ಲಿ ಕಥನ ಯಶಸ್ವಿಯಾಗಿದೆ. ಅಲ್ಲಲ್ಲಿ ಬರುವ ಆಡುಭಾಷೆ ಆತ್ಮಕಥನದ ಉದ್ದೇಶಕ್ಕೆ ಪೂರಕವಾಗಿಯೇ ಬಂದಿದೆ. ಗೊಂದಲಿಗರು ಊರನ್ನು ಪ್ರವೇಶಿಸಿದರೆ, ಊರಿನವರು ತಮಾಷೆಗೆ ಕುರಸಾಲ್ಯಾ ಸೂಳಿಮಕ್ಳು ಗೊಂದಲಿಗೇರ ಬಂದ್ರ ಇಡೀ ಊರ ಗದ್ದಲ ಹಿಡಿಸ್ತಾರು ಎನ್ನುವಲ್ಲಿ ಆಡುಭಾಷೆಯ ಗ್ರಾಮೀಣ ಸೊಗಡು ಕಾಣುತ್ತದೆ. ಮೇಲ್ವರ್ಗದವರ ದೌರ್ಜನ್ಯಕ್ಕೆ ಉದಾಹರಣೆಯಾಗಿ, ಬಾಲ್ಯದಲ್ಲಿ ಗೆಳೆಯರೊಂದಿಗೆ ನಡೆದ ತುಂಟಾಟದ ಸಂದರ್ಭದಲ್ಲಿ ವಿನಾಕಾರಣ (ಗೊಂದಲಿಗರು ಎಂಬ ಒಂದೇ ಕಾರಣಕ್ಕಾಗಿ) ಮದರಿಯವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಹೊಡೆಯಲಾಗುತ್ತದೆ. ಇದೆಲ್ಲ ದೋಸಗೇರ(ಗೊಂದಲಿಗರು) ಹುಡಗನದ ಹಲ್ಕಟಗಿರಿ. ತಿರಕೊಂಡ ತಿನ್ನ ಸೂಳೆಮಗ ಇವನ ಕಳುಮಾಡಾಕ ಹಚ್ಯಾನ, ಮದಲ ಅವನ ಕಂಬಕ್ಕಟ್ರಿ ಎಂದು ಕೂಡಿದ ಜನ ಬಯ್ಯುತ್ತಾರೆ, ಹೊಡೆಯುತ್ತಾರೆ. ಇಂಥ ಅನೇಕ ಅವಮಾನಕರ ಪ್ರಸಂಗಗಳನ್ನು ಮದರಿಯವರು ಬದುಕಿನುದ್ದಕ್ಕೂ ಅನುಭವಿಸುತ್ತ ಬಂದಿರುವುದನ್ನು ಓದುಗರೆದುರು ತೆರೆದಿಡುತ್ತಾರೆ. ಸರ್ಕಾರಿ ಉದ್ಯೋಗಿಯಾದ ಸಂದರ್ಭದಲ್ಲಿಯೂ ಸಹೋದ್ಯೋಗಿಗಳಲ್ಲಿ ಕಂಡುಬರುವ ತಿರಸ್ಕಾರ, ವ್ಯಂಗ್ಯ, ತುಚ್ಛೀಕರಿಸುವ ಸಂದರ್ಭಗಳನ್ನು ವಿವರಿಸಿದ್ದಾರೆ.
 
ತಮ್ಮ ಬದುಕಿನುದ್ದಕ್ಕೂ ಸಾಮಾಜಿಕವಾಗಿ, ಆರ್ಥಿಕವಾಗಿ ತಾವು ಅನುಭವಿಸಿದ ನೋವುಗಳು, ಕುಟುಂಬದ ಅವಿರತ ಕಷ್ಟಗಳನ್ನು ಮದರಿಯವರು ಚಾಚೂತಪ್ಪದೆ ವಿವರಿಸುತ್ತ ಹೋಗುತ್ತಾರೆ. ಓದುಗನಿಗೆ ಅಲ್ಲಲ್ಲಿ ಸಿಗುವ ಸಂತಸದ ಹೊಳಹುಗಳೆಂದರೆ, ಮದರಿಯವರು ಗೆಳೆಯರೊಂದಿಗೆ ಹಾಸ್ಯ ಮಾಡುವ ಪ್ರಸಂಗಗಳು, ಸಾಹಿತಿಗಳ ಗೆಳೆತನದಲ್ಲಿ ಅವರಿಗೆ ದೊರೆಯುವ ಅಲ್ಪ ನೆಮ್ಮದಿಗಳು ಮಾತ್ರ. ಆತ್ಮಕಥನದ ಕೊನೆಯವರೆಗೂ ಜನಾಂಗದ ನೋವುಗಳ ಪ್ರತಿನಿಧಿಯಾಗಿಯೇ ಮದರಿಯವರು ಕಾಣುತ್ತಾರೆ. ಹೀಗಾಗಿ ಗೊಂದಲಿಗ್ಯಾ ಮದರಿಯವರ ಆತ್ಮಕಥನದ ಜೊತೆಯಲ್ಲಿಯೇ ಗೊಂದಲಿಗರ ನೋವುಗಳ ಕಥನವೂ ಆಗಿದೆ. 
 
ಒಟ್ಟಾರೆ ಕನ್ನಡ ಸಾಹಿತ್ಯ ಲೋಕದಲ್ಲಿ ಇದೊಂದು ಅಪೂರ್ವವಾದ ಕೃತಿಯೆಂದೇ ನನ್ನ ಅನಿಸಿಕೆ.

ಕೃತಿ : ಗೊಂದಲಿಗ್ಯಾ
ಲೇಖಕರು: ಎ.ಎಂ.ಮದರಿ
ಪ್ರಕಾಶನ : ಲೋಹಿಯಾ ಪ್ರಕಾಶನ, ಬಳ್ಳಾರಿ.
ಬೆಲೆ : ೧೨೫

ಕಾಮೆಂಟ್‌ಗಳಿಲ್ಲ: