ಮಂಗಳವಾರ, ಜೂನ್ 25, 2013

ಟಂ ಟಂ ಗಾಡಿಗಳ ಕರ್ನಾಟಕ

-ಅರುಣ್ ಜೋಳದಕೂಡ್ಲಿಗಿ


Photo: ಕರ್ನಾಟಕದ ತುಂಬಾ ಇಂಥಹ ಪುಟ್ಟ ಪುಟ್ಟ ಟೆಂಪೋ..ಆಟೋಗಳು ಹಳ್ಳಿ ಹಳ್ಳಿಗಳನ್ನು ಸಂಪರ್ಕಿಸಲು ತುಂಬಾ ಸಹಕಾರಿಯಾಗಿದೆ. ಇವುಗಳನ್ನು ನಿಮ್ಮ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯಬಹುದು. ಹಾಗೆ ಭಿನ್ನ ಹೆಸರುಗಳಿದ್ದರೆ ತಿಳಿಸಿ. ಉದಾ: ಹಾವೇರಿ ಜಿಲ್ಲೆಯಲ್ಲಿ `ಖಾಟುಮಾ’ ಎಂದು ಕರೆಯುತ್ತಾರೆ.









ಬೆಟ್ಟಗುಡ್ಡ, ಕಾಡಿನ ದಾರಿಯಲ್ಲಿ ಒಂದು ಟೆಂಪೋ. ಅದರಲ್ಲಿ ಒಂದಿಬ್ಬರು ಕುಳಿತು ಎಂಟ್ಹತ್ತು ಜನ ನಿಂತಿದ್ದಾರೆ, ಜತೆಗೆ ಒಂದೆರಡು ನಾಯಿಗಳನ್ನು ಹಿಡಿದಿದ್ದಾರೆ. ಅವರ ಜೊತೆ ಇರುವ ಈಟಿ, ಕತ್ತಿ, ಬಲೆಗಳನ್ನು ನೋಡಿದರೆ, ಅದು ಬೇಟೆಗೆ ಹೊರಟ ತಂಡದಂತೆ ಕಾಣುತ್ತದೆ. ಈ ಗಾಡಿಯನ್ನು ಚಿಕ್ಕ ಹುಡುಗಿಯರು ಕುತೂಹಲದಿಂದ ನೋಡುತ್ತಿದ್ದಾರೆ...
ಮೇಲಿನದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ `ಮಾಯಾಲೋಕ' ಕಾದಂಬರಿಯ ಮುಖಪುಟ. ಅದರೊಳಗಿನಿಂದ ಜೀವ ತಳೆದ ಟಂ ಟಂ ಗಾಡಿಗಳು ನಾಡಿನುದ್ದಕ್ಕೂ ಗ್ರಾಮೀಣ ಪ್ರದೇಶಗಳಲ್ಲಿ ಇದೀಗ ಸಂಚರಿಸುತ್ತಿವೆ ಅನ್ನಿಸುತ್ತದೆ. `ಮಾಯಾಲೋಕ'ದ ದಿನಗಳಲ್ಲೇ ಮುಂದೊಂದು ದಿನ ಗ್ರಾಮೀಣ ಭಾಗಗಳಲ್ಲಿ ಇಂಥ ಟಂ ಟಂ ಗಾಡಿಗಳೇ ತುಂಬಿರುತ್ತವೆ ಎಂದು ತೇಜಸ್ವಿ ಊಹಿಸಿದ್ದರೆ ಅನ್ನಿಸುತ್ತದೆ.
ಇಂದು ಕರ್ನಾಟಕದ ಯಾವುದೇ ಮೂಲೆಯ ಒಂದು ಸಣ್ಣ ಹಳ್ಳಿಯನ್ನೂ ನಾವು ಹೆಚ್ಚು ತ್ರಾಸಿಲ್ಲದೆ ತಲುಪಬಹುದು. ಹಾಗೆ ತಲುಪಿಸಲು ಹಳ್ಳಿ ಸಮೀಪದ ನಗರದಿಂದಲೋ, ಸಣ್ಣ ಪಟ್ಟಣದಿಂದಲೋ ಮಿನಿ ಟೆಂಪೋ, ಟ್ರಕ್ಕು, ಟಂ ಟಂ ಗಾಡಿಗಳು ಕಾದಿರುತ್ತವೆ. ಹತ್ತು ವರ್ಷದಷ್ಟು ಹಿಂದೆ ಸರಿದರೆ, ಈ ಸುಲಭ ಸಂಪರ್ಕ ಸಾಧ್ಯವಿರಲಿಲ್ಲ. ಬೆಳಗಿನ ಒಂದೋ ಎರಡೋ ಬಸ್ಸುಗಳು ತಪ್ಪಿದರೆ ಆ ದಿನ ಮುಗಿದುಹೋದಂತೆಯೇ!
ಇರುವ ಒಂದೆರಡು ಬಸ್ಸುಗಳಲ್ಲೋ ಜೇನುಗೂಡಿನಂತೆ ಮುಕರಿಕೊಂಡ ಜನ. ಉಸಿರುಗಟ್ಟಿಸುವ ಪಯಣ. ಮುಖ್ಯರಸ್ತೆಗೆ ಹೊಂದಿಕೊಂಡ ಐದಾರು ಮೈಲಿ ದೂರದ ಊರುಗಳನ್ನು ಕಾಲುನಡಿಗೆಯಲ್ಲಿ ತಲುಪಬೇಕಾಗಿತ್ತು. ಈ ಸಂಚಾರದ ಚಿತ್ರಗಳು ಹತ್ತು ವರ್ಷದ ಅಂತರದಲ್ಲಿ ಸಾಕಷ್ಟು ಬದಲಾಗಿವೆ. ಕಡಿಮೆ ಬಂಡವಾಳದಲ್ಲಿ ಸಣ್ಣ ವಾಹನಗಳನ್ನು ಕೊಳ್ಳಲು ಸಾಧ್ಯವಾದ ಮೇಲೆ, ರಾಜ್ಯದಾದ್ಯಂತ ಗ್ರಾಮೀಣ ಸಾರಿಗೆಯಲ್ಲಿ ಬದಲಾವಣೆಯ ಬಿರುಗಾಳಿ ಬೀಸಿದೆ.
ಗ್ರಾಮೀಣ ಸಮಾಜದಲ್ಲಿ ಟಂ ಟಂ ಗಾಡಿ ಉಂಟು ಮಾಡಿರುವ ಕೆಲವು ಚಿತ್ರಗಳನ್ನು ಗಮನಿಸಿ: ಮಧ್ಯರಾತ್ರಿಯಲ್ಲಿ ದಿನ ತುಂಬಿದ ಗರ್ಭಿಣಿಗೆ ಹೆರಿಗೆ ನೋವು. ತಕ್ಷಣ ನೆನಪಾಗುವುದು ಟಂ ಟಂ ಗಾಡಿಯ ಬಸಣ್ಣ. ಆತ ಕಣ್ಣುಜ್ಜಿಕೊಳ್ಳುತ್ತ ತನ್ನ ಗಾಡಿಯನ್ನು ಸ್ಟಾರ್ಟ್ ಮಾಡುತ್ತಾನೆ. ಇರುಳಿನಲ್ಲೇ ಪಟ್ಟಣದ ಆಸ್ಪತ್ರೆಗೆ ಟಂ ಟಂ ಗಾಡಿಯ ಮೂಲಕ ಜೀವಯಾನ. ಹೆರಿಗೆ ಸುಸೂತ್ರ. ಮತ್ತದೇ ಟಂ ಟಂ ಗಾಡಿ, ಮರುದಿನ ಸಂಜೆ ತಾಯಿ ಮಗುವನ್ನು ಮನೆ ಸೇರಿಸುತ್ತದೆ. ಮನೆಯವರು ಬಸಣ್ಣನಿಗೆ `ನಿಂಗೆ ಒಳ್ಳೇದಾಗ್ಲಪ್ಪಾ, ಒಳ್ಳೆ ಟೈಮಿಗೆ ದೇವ್ರ ಬಂದಂಗೆ ಬಂದೆ' ಎನ್ನುತ್ತಾರೆ.
ದುರುಗಪ್ಪ ಎಂಟು ಚೀಲ ಮೆಕ್ಕೆಜೋಳ ಬೆಳೆದಿದ್ದಾನೆ. ಟೆಂಪೋ ಸಿದ್ದಣ್ಣನಿಗೆ ಮೊಬೈಲು ಹಚ್ಚುವ ಆತ, ಗಾಡಿಯನ್ನು ಹೊಲಕ್ಕೆ ತರಲು ಹೇಳುತ್ತಾನೆ. ಬೆಳಗ್ಗೆಯೇ ಮಾರ್ಕೆಟ್ಟಿಗೆ ಹೋದ ಕಾರಣ ಒಳ್ಳೆಯ ರೇಟೂ ಸಿಕ್ಕು ಸಿದ್ದಣ್ಣ ಖುಷಿಯಾಗುತ್ತಾನೆ.
ಎತ್ತುಗಳನ್ನು ಎರಡು ಮೂರು ದಿನ ನಡೆಸಿಕೊಂಡು ಸಂತೆಗೆ ಹೋಗುತ್ತಿದ್ದ ದನದ ವ್ಯಾಪಾರಿ ಮೂಗಜ್ಜನಿಗೆ ಟಂ ಟಂ ಗಾಡಿ ವರದಾನವಾಗಿದೆ. ಈಗ ಟೆಂಪೋ ಗಾಡಿಗಳಲ್ಲಿ ಎತ್ತುಗಳನ್ನು ನಿಲ್ಲಿಸಿಕೊಂಡು ದಣಿವಿಲ್ಲದೆ ಸಂತೆ ತಲುಪುತ್ತಾನೆ. ಹತ್ತಾರು ಜನ ಕೂಲಿಗಳು ಟೆಂಪೋ ಹತ್ತಿ ದೂರದ ಹೊಲ ತಲುಪಿ ಕಬ್ಬು ಕಟಾವಿಗೆ ಸಜ್ಜಾಗುತ್ತಾರೆ.
ಟಂ ಟಂ ಗಾಡಿಗಳೊಂದಿಗೆ ಬೆಸೆದುಕೊಂಡ ಚಿತ್ರಗಳು ಒಂದೇ ಎರಡೇ... ಈ ಗಾಡಿಗಳು ನಾಡಿನ ದೈನಿಕದ ಒಂದು ಭಾಗವೇ ಆಗಿವೆ.
ಗ್ರಾಮೀಣರ ಪುಷ್ಪಕ
ಪಟ್ಟಣ ನಗರಗಳಿಂದ ಹಳ್ಳಿಗಳಿಗೆ ತಲುಪುವ ಪ್ರಾಥಮಿಕ ಶಾಲೆ ಮತ್ತು ಹೈಸ್ಕೂಲು ಟೀಚರಮ್ಮಂದಿರು, ಮೇಷ್ಟ್ರುಗಳು, ಅಂಗನವಾಡಿ ಕಾರ್ಯಕರ್ತೆ, ದಾದಿ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಮಿನಿ ಗಾಡಿಗಳೇ ಪುಷ್ಪಕಗಳು. ಗ್ರಾಮೀಣ ಭಾಗದಿಂದ ನಗರಕ್ಕೆ ಓದಲು ಹೋಗುವ ವಿದ್ಯಾರ್ಥಿಗಳ ಸಂಖ್ಯೆಯ ಹೆಚ್ಚಳಕ್ಕೂ ಮಿನಿಗಾಡಿಗಳ ಸಾರಿಗೆ ಸಂಪರ್ಕಕ್ಕೂ ಸಂಬಂಧವಿದೆ.
ಕಾಡು ಬೆಟ್ಟಗುಡ್ಡಗಳ ದುರ್ಗಮ ಪ್ರದೇಶಗಳಲ್ಲಿರುವ ಹಳ್ಳಿ ಹುಡುಗಿಯರು ಹೈಸ್ಕೂಲು ಕಾಲೇಜಿಗೆ ಹೋಗುವಲ್ಲಿ ಈ ಟೆಂಪೋಗಳ ಪಾಲು ದೊಡ್ಡದಿದೆ. `ಮಗಳು ತಮ್ಮ ಹಳ್ಳಿಯಿಂದ ನೇರ ನಗರಕ್ಕೆ ಟೆಂಪೋದಲ್ಲಿ ಹೋಗಿ ಬರುತ್ತಾಳೆ, ಟೆಂಪೋ ನಮ್ಮೂರಿನವರದೆ' ಎನ್ನುವ ನಂಬಿಕೆ ಇವರನ್ನು ಶಾಲೆಗೆ ಕಳಿಸಲು ಪ್ರೇರೇಪಿಸಿದಂತಿದೆ.
ಹಳ್ಳಿಗಳಿಂದ ನಗರಕ್ಕೆ ಹೋಗುವ ಮಿನಿಗಾಡಿಗಳಲ್ಲಿ ರಸ್ತೆಪಕ್ಕ ಹೊಲವಿರುವ ರೈತರು ಹತ್ತುತ್ತಾರೆ. ಸಂಜೆ ವೇಳೆ ನಗರದಿಂದ ಮರಳುವ ಮಿನಿಗಾಡಿಗಳು ಆಯಾ ಹೊಲದ ರೈತರನ್ನೂ ಹತ್ತಿಸಿಕೊಂಡು ಬರುತ್ತದೆ. ಆಗ ಸಣ್ಣ ಹುಲ್ಲಿನ ಕಟ್ಟೋ, ಕಟ್ಟಿಗೆ ಹೊರೆಯೋ, ಖಾಲಿಕೊಡ, ಬುತ್ತಿಗಂಟುಗಳೋ ಗಾಡಿಯ ಬೆನ್ನೇರುತ್ತವೆ. ರೈತರೊಟ್ಟಿಗಿನ ಸಣ್ಣ ಆಡೋ, ಕುರಿಯೋ ಟೆಂಪೋ ಏರುತ್ತದೆ. ಆಗೆಲ್ಲಾ ಎತ್ತಿನ ಗಾಡಿಯೇ ಟೆಂಪೋ ಅವತಾರದಲ್ಲಿ ಬರುತ್ತದೆಯೇನೋ ಎನ್ನುವಂತೆ ಭಾಸವಾಗುತ್ತದೆ.
ಕಿರುದಾರಿಗಳಿದ್ದು ಡಾಂಬರಿಲ್ಲದ ಮಣ್ಣು ದಾರಿಗಳಿರುವಲ್ಲಿ ದೊಡ್ಡ ವಾಹನಗಳ ಓಡಾಟವು ಕಷ್ಟ. ಕಾಡಿನ ನಡುವಣ ಕಿರುದಾರಿಗಳು, ಬೆಟ್ಟವನ್ನು ಹತ್ತಬಲ್ಲ ದಾರಿಗಳಲ್ಲಿ ಮಿನಿಗಾಡಿಗಳೇ ಅನಿವಾರ್ಯ. ಕರ್ನಾಟಕದ ಕೊಡಚಾದ್ರಿ, ಆಗುಂಬೆ, ಕೋಲಾರದ ಗಂಗೆಬೆಟ್ಟ, ಮಲೆನಾಡು ಮುಂತಾದ ಕಡೆ ಜೀಪುಗಳಿರುವುದನ್ನು ನೋಡಬಹುದು. ಮಣ್ಣದಾರಿ, ಬೆಟ್ಟದಂತಹ ಕಿರುದಾರಿಗಳಲ್ಲಿ ಈ ಮಿನಿವಾಹನಗಳು ಸಾಹಸದ ರೀತಿಯಲ್ಲಿ ಜನರನ್ನು ಹೊತ್ತು ಸಾಗುತ್ತವೆ.
ಚಲನಶೀಲ ಬದುಕು!
ಗ್ರಾಮೀಣ ಭಾಗದ ಯುವ ಜನತೆಯ ನಿರುದ್ಯೋಗ ಸಮಸ್ಯೆಗೂ ಈ ಮಿನಿಗಾಡಿಗಳು ಮದ್ದಾಗಿವೆ. ಓದನ್ನು ಅರ್ಧಕ್ಕೆ ನಿಲ್ಲಿಸಿದ ಅನೇಕ ಯುವಕರನ್ನು ಈ ಗಾಡಿಗಳು ಕೈ ಹಿಡಿದು ಕೆಲಸಕೊಟ್ಟಿವೆ. ಮುಂದೆ ಓದಲಾಗದ್ದಕ್ಕೂ ಟೆಂಪೋ ಓಡಿಸುವ ನೆಪ ಕಾರಣವಾಗಿದೆ.
ಗ್ರಾಮೀಣ ಯುವಕ ಯುವತಿಯರು ನಗರ ಕೇಂದ್ರಿತ ದಿನಗೂಲಿ ಕೆಲಸಕ್ಕೆ ದೊಡ್ಡ ಪ್ರಮಾಣದಲ್ಲಿ ಹೋಗುವುದಕ್ಕೂ ಈ ಮಿನಿಗಾಡಿಗಳ ಹೆಚ್ಚಳಕ್ಕೂ ಸಂಬಂಧವಿದ್ದಂತಿದೆ. ಇದರಿಂದಾಗಿ ಹಳ್ಳಿಯ ಹೊಲಗಳಲ್ಲಿ ಕೆಲಸ ಮಾಡುವ ಅನೇಕ ಕೂಲಿಗಳು ನಗರಕೇಂದ್ರಿತ ಕೂಲಿಗಳಾಗಿ ಬದಲಾಗಿದ್ದಾರೆ. ಬಟ್ಟೆ ಅಂಗಡಿ, ಗಾರ್ಮೆಂಟ್, ಮುಂತಾದ ಕಡೆಗಳಲ್ಲಿ ಹಳ್ಳಿಯ ಹೆಣ್ಣುಮಕ್ಕಳು ಕೆಲಸ ಹುಡುಕಿಕೊಂಡು ನಗರಕ್ಕೆ ಬರಲು ಧೈರ್ಯ ತುಂಬಿದ ಹಲವು ಸಂಗತಿಗಳಲ್ಲಿ ಈ ಮಿನಿಗಾಡಿಗಳ ಪಾಲೂ ಇದೆ.
ರಾಜ್ಯದ ಗಡಿ ಭಾಗಗಳಲ್ಲಿ ಪರ್ಮಿಟ್ಟಿನ ಮಿತಿಯ ಕಾರಣಕ್ಕೆ ಹೆಚ್ಚು ಬಸ್ಸುಗಳ ಸೌಲಭ್ಯ ಇರುವುದಿಲ್ಲ.
ಇಂತಹ ಕಡೆಗಳಲ್ಲಿ ಮಿನಿಗಾಡಿಗಳು ಆಯಾ ಭಾಗದ ಜನರ ಸಂಚಾರಕ್ಕೆ ಹೆಚ್ಚು ಉಪಯುಕ್ತ. `ಆಟೋ ಟೆಂಪೋಗಳಿಂದ ಕರ್ನಾಟಕಾಂಧ್ರದ ಗಡಿಭಾಗವಾದ ಸಿರುಗುಪ್ಪದ ಜನರಿಗೆ ಹೆಚ್ಚು ಅನುಕೂಲವಾಗಿದೆ' ಎನ್ನುವುದು ಉಪನ್ಯಾಸಕರಾದ ಡಿ. ಯರ್ರಪ್ಪನವರ ಅನಿಸಿಕೆ.
ಅಪರೂಪಕ್ಕೆ ಈ ಗಾಡಿಗಳು ಹಳ್ಳಿಗಳ ಕೋಮು ಸಂಘರ್ಷಗಳಿಗೂ ಸಾಕ್ಷಿಯಾಗಿವೆ. ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿದಾಗ, ದಲಿತರನ್ನು ಗಾಡಿಗಳಲ್ಲಿ ಹತ್ತಿಸಿಕೊಂಡವರಿಗೆ ದಂಡ ವಿಧಿಸುವ ಠರಾವು ಇತ್ತು. ದಕ್ಷಿಣ ಕನ್ನಡದ ಒಂದು ಹಳ್ಳಿಯಲ್ಲಿ ಸಾಬರ ಮಿನಿಗಾಡಿಗಳಿಗೆ ಹಿಂದೂಗಳು ಹತ್ತಬಾರದು ಎಂಬ ನಿಷೇಧಾಜ್ಞೆ ಹೊರಡಿಸಿದ್ದು ವರದಿಯಾಗಿತ್ತು.
ಹಳ್ಳಿಗಳನ್ನು ಆಧರಿಸಿ ಅಧ್ಯಯನ ಮಾಡುವ ಸಂಶೋಧಕರಿಗೆ, ವಿವಿಧ ಸರಕಾರಿ ಕಚೇರಿ ಸಹಾಯಕರುಗಳಿಗೆ ಕ್ಷೇತ್ರಕಾರ್ಯಕ್ಕೆ ಈ ಗಾಡಿಗಳು ಹೆಚ್ಚು ಉಪಯುಕ್ತ. ನಗರದ ಫುಟ್‌ಪಾತ್‌ಗಳಲ್ಲೋ, ರಸ್ತೆ ಪಕ್ಕದ ಖಾಲಿ ಜಾಗದಲ್ಲೋ ಈ ಟೆಂಪೋಗಳು ನಿಂತು ಜನರನ್ನು ಹತ್ತಿಸಿಕೊಂಡು ಚಲಿಸುತ್ತವೆ. ಯಾವುದೇ ಜಾತ್ರೆ, ಉರುಸು, ಹಬ್ಬ, ಮದುವೆಗೆ ಹೋದರೂ ಹಿಂದೆ ಎತ್ತಿನ ಬಂಡಿಗಳು ನಿರ್ವಹಿಸುತ್ತಿದ್ದ ಕೆಲಸವನ್ನು ಈ ಟೆಂಪೋಗಳೇ ನಿರ್ವಹಿಸುತ್ತಿರುವುದು ಕಾಣುತ್ತದೆ. ಹೀಗೆ ಈ ಮಿನಿಗಾಡಿಗಳು ಸಾಂಸ್ಕೃತಿಕವಾಗಿಯೂ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿವೆ.
ದೂರವಿಲ್ಲ ಊರದಾರಿ ಇದೇರಿ ನಮ್ಮ ಮಜಬೂತು ಕುದುರಿ!
ದೇಸಿ, ಜಾನಪದ ಮತ್ತು ಅಭಿರುಚಿ
ಆಯಾ ಭಾಗದ ಗಾಡಿಗಳಿಗೆ ಜನರು ಪ್ರಾದೇಶಿಕತೆಯ ನಂಟನ್ನು ಅಂಟಿಸಿಬಿಡುತ್ತಾರೆ. ಹೂವಿನ ಹಡಗಲಿ ಭಾಗದ ಗಾಡಿಗಳ ಮೇಲೆ `ಮೈಲಾರ', `ಏಳುಕೋಟಿ' ಎಂದಿದ್ದರೆ, ಮೈಸೂರು, ಚಾಮರಾಜನಗರ ಭಾಗದಲ್ಲಿ `ಚಾಮುಂಡಿ', `ಮಾದೇಶ್ವರ', `ಮಂಟೇದಲಿಂಗ' ಎಂದಿರುತ್ತದೆ. ಹೀಗೆ ಅವರವರ ಇಷ್ಟದೈವಗಳ ಹೆಸರನ್ನು ಗಾಡಿಗಳಿಟ್ಟು ತಮ್ಮ ಭಕ್ತಿಯನ್ನೋ ಅಭಿಮಾನವನ್ನೋ ಮೆರೆಯುತ್ತಾ ತಮ್ಮದೇ ಆದ ಸ್ಥಳೀಯ ಗುರುತುಗಳನ್ನು ತೋರುತ್ತಾರೆ.
ಕೆಲವೊಮ್ಮೆ ಗಾಡಿ ಹೊಂದಿದವರ ಜಾತಿ ಸೂಚಕವಾಗಿಯೂ ಹೆಸರುಗಳು ಬಳಕೆಯಾಗುತ್ತವೆ. `ನಾಯಕ', `ವೀರಮದಕರಿ', `ವಾಲ್ಮೀಕಿ', `ಬೀರಪ್ಪ', `ಕನಕ', `ಗೌಡ್ರು', `ಜೈ ಭೀಮ್', `ಜಗಜ್ಯೋತಿ ಬಸವೇಶ್ವರ'- ಈ ಬರಹಗಳ ಹಿಂದಿನ ಜಾತಿ ಗುರುತುಗಳು ವಾಹನಗಳ ಮೂಲಕ ಬಿಂಬಿತಗೊಳ್ಳುತ್ತವೆ.
ಇಷ್ಟದ ಸಿನಿಮಾ ನಟನಟಿಯರ ಹೆಸರುಗಳೂ ಚಿತ್ರಗಳೂ ಗಾಡಿಗಳ ಮೇಲೆ ಪ್ರಕಾಶಿಸುತ್ತವೆ. ಶಂಕರ್‌ನಾಗ್, ದರ್ಶನ್, ಸುದೀಪ್, ವಿಜಯ್, ಪುನೀತ್, ಮುಂತಾದವರೆಲ್ಲ ಗಾಡಿಗಳ ಮೇಲೆ ವಿರಾಜಮಾನರು! ನಟಿಯರಲ್ಲಿ ಅಮೂಲ್ಯ ಚಿತ್ರ ಹೆಚ್ಚು ಕಾಣುತ್ತದೆ. ಬಳ್ಳಾರಿ - ಹೊಸಪೇಟೆ ಭಾಗದಲ್ಲಿ ತೆಲುಗು ನಟನಟಿಯರ ಚಿತ್ರಗಳೂ ಹೆಚ್ಚಿವೆ. ಕೆಲವರು ಗಾಡಿಗಳಲ್ಲಿ ತಮ್ಮ ಮಕ್ಕಳ ಅಥವಾ ತಂದೆ ತಾಯಿಯರ ಹೆಸರನ್ನು ಬರೆಸಿಕೊಂಡಿರುವುದೂ ಇದೆ. ಕಲಾತ್ಮಕ ಚಿತ್ರಗಳೂ ಗಾಡಿಗಳ ಮೇಲೆ ಕಾಣುತ್ತವೆ.
ಈ ಮಿನಿ ಗಾಡಿಗಳು ಒಂದು ಬಗೆಯ ಜಾನಪದವನ್ನೂ ಹುಟ್ಟಿಸುತ್ತಿವೆ. `ತುತ್ತು ಕೊಡೋಳು ಬಂದಾಗ, ಮುತ್ತು ಕೊಟ್ಟೋಳ ಮರಿಬೇಡ', `ಮಾತೃದೇವೋ ಭವ', `ತಂದೆ ತಾಯಿ ಆಶೀರ್ವಾದ'- ಹೀಗೆ ನುಡಿಗಟ್ಟಿಗಳು ಟಾಂ ಟಾಂ ಆಗುತ್ತವೆ. `ಛೀ ಕಳ್ಳಿ', `ಛೀ ತುಂಟಿ' ಎಂದು ಗಾಡಿ ಓಡಿಸುವವ ಯಾರಿಗೋ ಕಚಗುಳಿಯಿಡುವ ಪ್ರಯತ್ನ ನಡೆಸುವುದೂ ಇದೆ. `ರೈತನ ನಗು ದೇಶಕ್ಕೆ ಸೊಬಗು', `ರೈತರೇ ದೇಶದ ಬೆನ್ನೆಲುಬು' ರೀತಿಯ ರೈತಪ್ರೀತಿಯ ವಾಕ್ಯಗಳೂ ಕಾಣುತ್ತವೆ. ತನ್ನ ಗಾಡಿಗೆ ಒಬ್ಬ `ನಗದು ಪ್ರೇಮ ಸಂಗ, ಉದ್ರಿ ಮಾನಭಂಗ' ಎಂದು ಬರೆಸಿದ್ದ.
ಯಾಕೆಂದು ಕೇಳಿದರೆ- `ಗಾಡಿ ಚಾರ್ಜು ಕೊಡದೆ ಉದ್ರಿ ಹೇಳೋ ಜನ ಜಾಸ್ತಿ ಸಾರ್, ಅದಕ್ಕೆ ಹಂಗೆ ಬರೆಸೀನಿ' ಎನ್ನುವ ದೇಶಾವರಿ ನಗೆ. ಅನೇಕ ಮಿನಿ ಗಾಡಿಗಳಲ್ಲಿ ಹನುಮಂತ ದೇವರ ಚಿತ್ರವಿದೆ. ಹನುಮಂತನ ಚಿತ್ರವಿದ್ದರೆ ಗಾಡಿ ಬೀಳುವುದಿಲ್ಲ ಎನ್ನುವ ನಂಬಿಕೆ ಅವರದು.
ಗ್ರಾಮೀಣ ಭಾಗದ ಜನರು ಅದರಲ್ಲೂ ಹೆಚ್ಚಾಗಿ ಯುವಕರು ಮಿನಿಗಾಡಿಗಳನ್ನು ಪ್ರವಾಸದ ವಾಹನಗಳನ್ನಾಗಿಯೂ ಬಳಸುವುದಿದೆ. ಕೆಲವೊಮ್ಮೆ ನಗರದ ಹತ್ತಿರದ ಹಳ್ಳಿಗಳಿಂದ ರಿಲೀಜ್ ಸಿನೆಮಾ ನೋಡಲು ಹುಡುಗರು ಗುಂಪಾಗಿ ಟೆಂಪೋ ಹತ್ತಿ ಹೋಗುವುದೂ ಇದೆ.
ಓಟದ ಹಿಂದೆ...
ಮಿನಿಗಾಡಿಗಳ ಸಂಚಾರದಲ್ಲಿ ವಿಷಾದದ ಕಥೆಗಳೂ ಸಾಕಷ್ಟಿವೆ. ದೊಡ್ಡಗಾಡಿಗಳ ಹೊಡೆತಕ್ಕೆ ಸಿಕ್ಕರೆ ಸಣ್ಣ ವಾಹನ ಅಪ್ಪಚ್ಚಿ, ಜೀವಹಾನಿ. ಮೂರುಗಾಲಿ ವಾಹನಗಳು ಅತಿ ವೇಗಕ್ಕೆ, ಏರಿಳಿತದ ಕಚ್ಚಾ ರಸ್ತೆಗಳಿಗೆ ಮಗುಚಿಬೀಳುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಅಪಘಾತ ವಿಮೆಯೂ ಈ ವಾಹನಗಳಿಗಿರುವುದಿಲ್ಲ.
ಈ ಗಾಡಿಗಳಿಗೆ ಆಯಾ ಗ್ರಾಮ, ಪಟ್ಟಣ ಪಂಚಾಯತಿ, ಓಬಳಿ ಮಟ್ಟದಲ್ಲಿ ಹತ್ತು ಕಿ.ಮೀ ವ್ಯಾಪ್ತಿಯೊಳಗೆ ಸಾರಿಗೆ ಪರ್ಮಿಟ್ಟು ಇರುತ್ತದೆ. ಸಾಮಾನ್ಯವಾಗಿ ಮಿನಿಗಾಡಿಗಳಿಗೆ ನಾಲ್ಕು ಜನರ ಪರ್ಮಿಟ್ಟಿರುತ್ತದೆ. ಆದರೆ ಹದಿನೈದರಿಂದ ಇಪ್ಪತ್ತು ಜನರನ್ನು ತುಂಬುತ್ತಾರೆ. ಇನ್‌ಶೂರೆನ್ಸ್, ಡ್ರೈವಿಂಗ್ ಲೈಸೆನ್ಸ್ ಮುಂತಾದ ನಿಯಮಗಳನ್ನು ಸರಿಯಾಗಿ ಪಾಲಿಸದಿರುವವರೇ ಹೆಚ್ಚು. ಗೂಡ್ಸ್ ಪರ್ಮಿಟ್ ಇರೋ ಗಾಡಿಗಳಲ್ಲೂ ಪ್ಯಾಸೆಂಜರ್ ಹಾಕುತ್ತಾರೆ ಎಂದು ಆರ್.ಟಿ.ಓ ಕಚೇರಿಯ ಸೂಪರಿಡೆಂಟ್ ಒಬ್ಬರು ಬೇಸರದಿಂದ ಮಾತನಾಡಿದರು.
ಕರ್ನಾಟಕದ ಗ್ರಾಮೀಣ ಸಾರಿಗೆಯಲ್ಲಿ ಟಂ ಟಂ ಗಾಡಿಗಳು ತಂದಿರುವ ಬದಲಾವಣೆ ಬಹುವೆಚ್ಚದ ಬಸ್ಸಿನ ಸಾರಿಗೆ ವ್ಯವಸ್ಥೆಗೆ ಪರ್ಯಾಯದಂತಿದೆ. ಖಾಸಗಿ ಬಸ್ಸುಗಳನ್ನು ಹಳ್ಳಿಗರು `ಸಾಹುಕಾರ ಬಸ್ಸು' ಎನ್ನುವುದು ರೂಢಿ. ಆದರೆ ಮಿನಿ ಗಾಡಿಗಳಿಗೆ ಈ ನಾಮಕರಣ ಒಗ್ಗುವುದಿಲ್ಲ. ಈ ಗಾಡಿಗಳನ್ನು ಸಾಮಾನ್ಯ ವರ್ಗದವರು, ಕೆಳ ಜಾತಿಗಳು ಹೊಂದಿದ್ದಾರೆ.
ಕರ್ನಾಟಕದ ಗ್ರಾಮೀಣ ಸಾರಿಗೆಯ ಈ ವಿದ್ಯಮಾನ  ನಗರ-ಹಳ್ಳಿಗಳ ಸಂಬಂಧವನ್ನು ಬಹುವಾಗಿ ಬದಲಾಯಿಸಿದೆ. ಕೃಷಿವಲಯವನ್ನೂ ಪ್ರಭಾವಿಸಿದೆ. ಇದರ ಬಹುನೆಲೆಗಳ ಕುರಿತು ಶಾಸ್ತ್ರೀಯ ಸಂಶೋಧನೆಗಳು ನಡೆಯಬೇಕಿದೆ. ಈ ಗಾಡಿಗಳ ಅನುಭವಲೋಕವೊಂದು ಸಾಹಿತ್ಯಕ್ಕೂ ಬರಬೇಕಿದೆ.
ಜಾಗತೀಕರಣದಿಂದ ಜಗತ್ತು ಒಂದು ಹಳ್ಳಿಯಂತಾಗಿದೆ ಎನ್ನುವ ಮಾತಿದೆ. ಸಂಪರ್ಕ ಮತ್ತು ಸಂವಹನದ ಅಪಾರ ಸಾಧ್ಯತೆಯನ್ನು ಹೇಳುವ ಈ ಪರಿಕಲ್ಪನೆ ಗ್ರಾಮೀಣರ ಪಾಲಿಗೆ ಸಾಕಾರಗೊಂಡಿರುವುದು ಟಂ ಟಂ ಗಾಡಿಗಳಿಂದಾಗಿ!
ಬದಲಾಯಿತು ಕರ್ನಾಟಕ!
ಜನರನ್ನು ಮತ್ತು ವಸ್ತುಗಳನ್ನು ಸಾಗಿಸುವ ಸಣ್ಣ ಸಣ್ಣ ವಾಹನಗಳು ಹಳ್ಳಿಗಳನ್ನು ಪ್ರವೇಶಿಸಿದ ಮೇಲೆ ಗ್ರಾಮೀಣ ಸಾರಿಗೆಯ ಕಲ್ಪನೆಯೇ ಬದಲಾಗಿದೆ. ಮುಖ್ಯವಾಗಿ ಈ ಗಾಡಿಗಳಿಗೆ ಒಂದು ನಿರ್ದಿಷ್ಟ ವೇಳಾಪಟ್ಟಿ ಇರುವುದಿಲ್ಲ. ಬಾಗಿಲಿನಿಂದ ಬಾಗಿಲಿಗೆ ನಿಲುಗಡೆ ಇರುತ್ತದೆ. ಹತ್ತು ಹನ್ನೆರಡು ಜನ ಸೇರಿದರೆ ಗಾಡಿ ಒಂದೆಡೆಯಿಂದ ಇನ್ನೊಂದೆಡೆಗೆ ಹೊರಡುತ್ತದೆ. ಗೆರೆ ಕೊಯ್ದಂತೆ ಪ್ರಯಾಣದ ದರವೂ ಇರುವುದಿಲ್ಲ.
ದಿನದ ಆರಂಭಕ್ಕೆ ನಗರ ಪಟ್ಟಣಗಳನ್ನು ಜೀವಂತಗೊಳಿಸುವ ಹಲವು ಸಂಗತಿಗಳಲ್ಲಿ ಮಿನಿ ಟೆಂಪೋ ಆಟೋಗಳದ್ದು ದೊಡ್ಡಪಾಲಿದೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆಗಳಲ್ಲಿ ಬೆಳಗಿನ ಜಾವ ಹೂಗಳ ರಾಶಿ ಬೀಳುವುದೇ ಈ ಗಾಡಿಗಳು ಬಂದಮೇಲೆ. ಪ್ರತಿ ಪಟ್ಟಣದಲ್ಲಿ ಮುಂಜಾವಿನ ರೈತರ ತಾಜಾ ತರಕಾರಿಯ ಪುಟ್ಟ ಮಾರ್ಕೆಟೊಂದು ಜೀವ ತಳೆಯುವುದು ಕೂಡ ಇವುಗಳಿಂದಲೇ.
ಕೊಟ್ಟೂರಿನ ಸಂತೆಯಲ್ಲಿ ಒಣಮೀನು ಮಾರುವ ಗೌಸ್ ಸಾಹೇಬರು ಈಚೆಗೆ ತಮ್ಮ ಒಣ ಮೀನಿನ ವ್ಯಾಪಾರ ಕುದುರಿರುವುದಕ್ಕೂ ಟಂ ಟಂ ಗಾಡಿಗಳು ಹೆಚ್ಚಾಗುತ್ತಿರುವುದಕ್ಕೂ ತಾಳೆ ಹಾಕಿದರು. ಬಸ್ಸುಗಳಲ್ಲಿ ಒಣ ಮೀನು ಒಯ್ಯುವುದು ಕಷ್ಟವಾಗಿತ್ತು. ಕೆಲವೊಮ್ಮೆ ಒಣ ಮೀನಿನ ವಾಸನೆಗೆ ಬಸ್ಸು ನಿಲ್ಲಿಸಿ ಟಾಪ್ ಮೇಲೆ ಹತ್ತಿಸಿದ ಅಥವಾ ಕೆಳಗಿಳಿಸಿದ ಪ್ರಸಂಗಗಳು ನಡೆಯುತ್ತಿದ್ದವು. ಆಗ ಬಸ್ಸಿನ ಎಲ್ಲರೂ ಇವರನ್ನೇ ದುರುಗುಟ್ಟಿ ನೋಡಿ ಅವಮಾನವಾಗುತ್ತಿತ್ತು.
ಈಗ ಹಳ್ಳಿ ಸಂಚಾರಕ್ಕೆ ಮಿನಿಗಾಡಿಗಳು ಬಂದಂದಿನಿಂದ, ನಿರಾಯಾಸವಾಗಿ ಒಣಮೀನು ವ್ಯಾಪಾರ ಸಾಧ್ಯವಾಗಿದೆ. ಕರಾವಳಿ ಭಾಗದಲ್ಲಂತೂ ಬಸ್ಸಿನವರು ಮೀನನ್ನು ಹಾಕುವುದಿಲ್ಲ, ಹಾಗಾಗಿ ಮೀನು ಮಾರುವ ಹೆಣ್ಣುಮಕ್ಕಳು ಮಿನಿಗಾಡಿಗಳನ್ನೇ ಆಶ್ರಯಿಸುತ್ತಾರೆ ಎಂದು ಕುಂದಾಪುರದ ಉದಯ ಗಾಂವಕರ್ ಹೇಳುತ್ತಾರೆ.

ಕಾಮೆಂಟ್‌ಗಳಿಲ್ಲ: