-ಈರಯ್ಯ ಕಿಲ್ಲೇದಾರ
ಒಕ್ಕಲು ಮಕ್ಕಳ ಸುಗ್ಗಿಯ ಸಂಭ್ರಮದ ಕಾಲ. ಮಕರ ಸಂಕ್ರಾಂತಿ. ಹಿಂಗಾರಿ ಬೆಳೆಗಳು ಕೊಯ್ಲಿಗೆ ಬಂದಿವೆ. ಕಣ ಕ್ಕಲಿಗರ ಸಂಸ್ಕೃತಿ. ಮೇಟಿ ಒಕ್ಕಲತನದ ಹಿರಿಮೆ. ಮೇಟಿ ಅದೊಂದು ವಿದ್ಯೆ. ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು’. ಸರ್ವಜ್ಞ ಕವಿ ಹೇಳಿದಂತೆ, ಮೇಟಿ ವಿದ್ಯೆ ಅಥವಾ ಒಕ್ಕಲುತನದ ವೃತ್ತಿ ಶ್ರೇಷ್ಟ ಎನಿಸಿದೆ. ಬೆವರ ಬದುಕಿನ ಹಬ್ಬ ಸುಗ್ಗಿ. ಸುಗ್ಗಿಯ ಹಿಗ್ಗು ಕಣದಲ್ಲಿ ಹಂತಿಯ ಪದವಾಗಿ ಹೊರಹೊಮ್ಮುತ್ತಿತ್ತು. ಅವರವರ ಹೊಲದ ವಿಸ್ತೀರ್ಣಕ್ಕೆ ತಕ್ಕಂತೆ ಕಣಗಳನ್ನು ನಿರ್ಮಿಸುತ್ತಿದ್ದರು. ಕಣ ಮಾಡುವ ಜಾಗೆಯಲ್ಲಿ ಕಂಟಿಗಳು ದಾಗಡಿ ಬೇರುಗಳು ಇರಬಾರದು. ಕಸಕಡ್ಡಿ, ಹುಲ್ಲುಕೆತ್ತಿ, ಹರಗಿ ಸ್ವಚ್ಛಮಾಡಬೇಕು. ತಗ್ಗುದಿಣ್ಣೆಗಳನ್ನು ಸಮತಟ್ಟಾಗಿಸಬೇಕು. ಕಣ ಮಾಡುವ ಹಿಂದಿನ ದಿನ ಕೊಡದಿಂದ ನೀರನ್ನು ಸಿಂಪಡಿಸಬೇಕು. ಕಣದ ನಟ್ಟನಡುವೆ ವರ್ತುಳದ ಕೇಂದ್ರಬಿಂದು ಗುರುತಿಸಿ, ಮೇಟಿ ನಡೆಸಬೇಕು. ಮೇಟಿಗೆ ಬಲಿತ ಬೇವು ಇಲ್ಲವೇ ಜಾಲಿಯ ಗಿಡಗಳ ಕವಲು ಇರುವ ಐದರಿಂದ ಆರು ಅಡಿ ಎತ್ತರದ ಕಟ್ಟಿಗೆಯನ್ನು ಉಪಯೋಗಿಸುವರು. ನೀರು ಹೊಡೆದ ಮರುದಿವಸ ನೀರು ಹೀರಿಕೊಂಡು ನೆಲೆ ಮೆತ್ತಗಾಗಿರುತ್ತದೆ. ಮೇಟಿಗೆ ಒಂದರ ಪಕ್ಕದಲ್ಲಿ ಇನ್ನೊಂದರಂತೆ ಎತ್ತುಗಳನ್ನು ಕಟ್ಟಿ ಮೇಟಿಯ ಸುತ್ತಲೂ ನೆಲ ಗಟ್ಟಿಯಾಗುವ ತನಕ ಹಂತಿ ಹೊಡೆಯುತ್ತಾರೆ. ಸೆಗಣಿಯನ್ನು ತೆಳ್ಳಗೆ ಮಾಡಿ ಕಣದ ತುಂಬ ಸಿಂಪಡಿಸಬೇಕು, ನೆಲ ನುಣುಪಾಗುವುದು. ನಂತರ ಸೆಗಣಿಯಲ್ಲಿ ನೀರಿನಿಂದ ಸಾರಿಸಬೇಕು, ಕಣದ ಸುತ್ತಲೂ ಬೂದಿಯನ್ನು ಗೆರೆ ಆಕಾರದಲ್ಲಿ ಹಾಕಿ ಸುತ್ತುಗಟ್ಟಬೇಕು. ಆಗ ಕಣ ತಯ್ಯಾರ!
ಕಣ ಮಾಡಿದ ಸ್ಥಳ ಪವಿತ್ರವಾದದ್ದು ಎಂಬ ಭಾವನೆ ಇದೆ. ಬರಿ ತಲೆಯಿಂದ ಕಣದಲ್ಲಿ ಪ್ರವೇಶಿಸುವಂತಿಲ್ಲ. ತಲೆಗೆ ವಸ್ತ್ರ ಇಲ್ಲವೇ ಪಟಗೆ ಸುತ್ತಿಕೊಂಡೇ ಕಣದಲ್ಲಿ ಹೋಗಬೇಕು. ಚಪ್ಪಲಿ ಮಟ್ಟಿಕೊಂಡು ಕಣದಲ್ಲಿ ಕಾಲಿಡುವಂತಿಲ್ಲ. ಕಣದಲ್ಲಿ ಸೀನಬಾರದು. ಒಂದು ವೇಳೆ ಸೀನು ಬಂದರೆ, ‘ಹುಲ್ಲುಲ್ಲೋ ಹುಲ್ಲಿ’ಎನ್ನಬೇಕು. ಖಾಲಿ ಬುಟ್ಟಿಗಳನ್ನು ಕಣದಲ್ಲಿ ಅಂಗಾತ ಇಡಬಾರದು. ಕಾಳನ್ನು ಬುಟ್ಟಿಯಿಂದ ಕೆರೆದು ತುಂಬಬಾರದು. ಯಾವುದೇ ರಾಶಿಯನ್ನು ತೂರುವಾಗ ಅರ್ಧಕ್ಕೆ ನಿಲ್ಲಿಸುವುದಾದರೆ, ಅದನ್ನು ಗ್ವಾರಿಯಿಂದ ಸುತ್ತುಗಟ್ಟಬೇಕು. ಇಂಥ ಹಲವಾರು ನಿಯಮಗಳಿದ್ದವು. ಉತ್ತರ ಕರ್ನಾಟಕದಲ್ಲಿ ಜೋಳ ಪ್ರಮುಖ ಬೆಳೆ. ಜೋಳದ ತೆನೆಗಳನ್ನು ಕೊಯ್ದು ಚಕ್ಕಡಿಯಲ್ಲಿ ಹೇರಿಕೊಂಡು ಬಂದು ಕಣದಲ್ಲಿ ಹರಡಬೇಕು, ಮೇಟಿಯ ಮುಂದೆ ಸಣ್ಣ ಕುಡಿಕೆಯಲ್ಲಿ ಯಾವಾಗಲೂ ನೀರು ತುಂಬಿಸಿಟ್ಟಿರಬೇಕು. ಕಣದ ಸುತ್ತಲೂ ತೆನೆಯ ಕಾಳು ಹೊರಗಡೆ ಚೆಲ್ಲಾಪಿಲ್ಲಿಯಾಗಿ ಬೀಳದಂತೆ ತಡೆಯಲು ಸಣ್ಣ ಸಣ್ಣ ಕಣಿಕೆಯ ಸಿವುಡು ಇಡಬೇಕು. ಬೆಳಸಿಯ ತಿನ್ನುತ್ತ ಮಜ್ಜಿಗೆ ಕುಡಿಯುತ ಹಂತಿಯ ಪದ ಹಾಡುತ್ತ ಹಂತಿ ಹೊಡೆಉವ ಸಂಭ್ರಮ ಇತ್ತೀಚೆಗೆ ಕಾಣಿಸುತ್ತಿಲ್ಲ.
ಜೋಳದಿಂದ ಆರಂಭವಾಗುವ ಸುಗ್ಗಿ ಪುಂಡಿಯನ್ನು ಬಡಿಯುವುದರೊಂದಿಗೆ ಮುಗಿಯುತ್ತದೆ. ಉಗಾದಿಯ ಪಾಢ್ಯದಂದು ಪೂಜೆ ಮಾಡಿ ಮೇಟಿ ಕೀಳುತ್ತಾರೆ. ಅದೇ ದಿವಸ ಹೊಸ ವರುಷದ ಉಳುಮೆ ಕೆಲಸ ಪ್ರಾರಂಭಿಸುವರು.ಪ್ರತಿ ಕಾಳನ್ನು ಒಕ್ಕುವ ಮೊದಲು ಸೆಗಣಿಯಿಂದ ಕಣ ಸಾರಿಸಬೇಕಾಗುತ್ತದೆ. ರಾಶಿ ಒಯ್ಯುವಾಗ ಆಯಗಾರರಿಗೆ ಕಾಳನ್ನು ಕೊಡುತ್ತಾರೆ. ಜೋಳ, ತೊಗರಿ, ಕಡಲೆ, ಹುರುಳಿ ಮತ್ತು ಗೋಧಿಯನ್ನು ಕಣದಲ್ಲೇ ಒಕ್ಕರಾಶಿ ಮಾಡುತ್ತಾರೆ. ಕುಸುಬೆಯನ್ನು ಮಾತ್ರ ಕಣದಲ್ಲಿ ಒಕ್ಕಣೆ ಮಾಡುವುದಿಲ್ಲ. ಅದರಲ್ಲಿ ಮುಳ್ಳು ಇರುವುದರಿಂದ ಹಾಗೆ ಮಾಡುತ್ತಾರೆ. ಕುಸುಬೆಯನ್ನು ಹೊಲದಲ್ಲೇ ತಾಡಪತ್ರಿ, ಗುಡಾರಗಳನ್ನು ಹಾಸಿ ಬಿಸಿಲಿನಲ್ಲಿ ಬಡಿದು, ಕಾಳು ಮಾಡಿ, ತೂರಿ ಸ್ವಚ್ಛ ಮಾಡಲಾಗುತ್ತದೆ.
ಕಣಹಬ್ಬ: ಜೋಳದ ರಾಶಿ ಮಾಡಿದಾಗ ಕಣ ಹಬ್ಬ ಮಾಡುವುದು ಉತ್ತರ ಕರ್ನಾಟಕದ ವೈಶಿಷ್ಟ್ಯವಾಗಿದೆ. ಕಾಳು ಸುಂಕಗಳನ್ನು ಮತ್ತು ಕಂಕಿಯನ್ನು ಜೋಳದ ತೆನೆಯಿಂದ ಮೊದಲು ಹಂತಿ ರೂಲುಗಲ್ಲಿನಿಂದ ಹೊಡೆದು ಬೇರ್ಪಡಿಸಬೇಕು. ಕಂಕಿಯನ್ನು ಜಂತಿಕಂಟಿಯಿಂದ ಬೇರ್ಪಡಿಸಿ ಹೊಟ್ಟನ್ನು ಸಂಗ್ರಹಿಸುವ ಜಾಗೆಯಲ್ಲಿ ಇಡಬೇಕು. ಕಾಳು ಸುಂಕಗಳನ್ನು ಗ್ವಾರಿಯಿಂದ ದಪುಡಿ ಎಳೆದು ಮೇಟಿಗೆ ಕೂಡಿ ಹಾಕುವರು. ಅದಕ್ಕೆ ಸುಂಕರಾಶಿ ಎನ್ನುವರು. ಕೆಳಗಡೆ ಮೂರು ಕಾಲುಗಳುಳ್ಳ, ಮೇಲೆ ತ್ರಿಕೋಣಾಕಾರದ ಮ್ಯಾಟದ ಮೇಲೆ ಒಬ್ಬ ನಿಂತು ತೂರುತ್ತಾನೆ.ಒಬ್ಬ ಸುಂಕ ಹಾಗೂ ಕಾಳನ್ನು ಬುಟ್ಟಿಯಲ್ಲಿ ತುಂಬಿಕೊಡುವನು. ಇನ್ನೊಬ್ಬ ಸೆಳ್ಳು ಹೊಡೆಯುತ್ತ ಗೊಂಡಿಯ ಕಾಳು ಮತ್ತು ಕಂಕಿಯ ತುಕಡಿಗಳನ್ನು ಬೇರ್ಪಡಿಸುವನು. ಆಗ ರಾಶಿ ಹಸನಾಗುವದು. ತೂರಿದ ಕಾಳನ್ನು ಮತ್ತೆ ಮೇಟಿಗೆ ಎಳೆದು ಪಿರಾಮಿಡ್ ಆಕಾರದಲ್ಲಿ ಕೂಡಿ ಹಾಕುವರು. ಮೇಟಿಗೆ ಕಾಳು(ಮದ) ಎಳೆದು ಸುತ್ತುಗಟ್ಟುವರು. ಕಂಕಿಯನ್ನು ಸುಟ್ಟು ಬೂದಿ ಮಾಡಿ ಬುಟ್ಟಿಯಲ್ಲಿ ತರುವರು. ರಾಶಿಯ ಮೇಲೆ ಈ ಬೂದಿಯಿಂದ ಸೂರ್ಯನಿಗೆದುರಾಗಿ ಕರಿಕಂಬಳಿಯನ್ನು ಮೂಲೆಗುಂಪಿಗೆ ಮಾಡಿ ರಾಶಿಯನ್ನು ಅಸ್ತವ್ಯಸ್ತ ಮಾಡದೆ ಮೊದಲೇ ಮೇಟಿಯ ಕವಲಿಗೆ ಹಾಕುತ್ತಾರೆ. ಗ್ವಾರಿ, ಜಂತಿಕುಂಟೆಗಳನ್ನು ರಾಶಿಯಲ್ಲಿ ತುರುಕಿರುತ್ತಾರೆ. ಎಕ್ಕೆಯ ಹೂವು ಹೊನ್ನಾರಿ ಹೂವುಗಳ ಮೂಲಕ ಪೂಜಿಸುವರು. ಗೋಧಿ ಹುಗ್ಗಿ, ಕರಿಗಡುಬು, ಅನ್ನ ಅಂಬಲಿ ಮೊದಲಾದವುಗಳನ್ನು ನೈವೇದ್ಯೆ ಮಾಡಿ ಅರ್ಪಿಸುವರು. ಸುಮಂಗಲೆಯರು ಆರತಿ ಎತ್ತಿ ಬೆಳಗುವರು. ನಂತರ ರಾಶಿಯನ್ನು ಚಕ್ಕಡಿಯಲ್ಲಿ ತುಂಬಿಸಿಕೊಂಡು, ಎತ್ತುಗಳನ್ನು ಶೃಂಗರಿಸಿ ಹುರಿಗೆಜ್ಜೆಯ ಸರಹಾಕಿ ಮನೆಯ ಮುಂದಿನ ಹಗೇವಿಗೆ ತಂದು ಹಾಕುವ ಸಂಭ್ರಮ ಸುಗ್ಗಿಯ ಹಿಗ್ಗನ್ನು ಹೆಚ್ಚಿಸುವುದು. ಇದೇ ರೀತಿ ಮಲೆನಾಡಿನಲ್ಲಿ ಭತ್ತದ ಬೆಳೆ ಮುಖ್ಯ ಆಗಿರುವ ಕಡೆ ಕಣ ಹಬ್ಬ ಮಾಡುವ ಸಂಪ್ರದಾಯವಿದೆ.
ತೂರುವುದು ಒಂದುಕಲೆ: ‘ಗಾಳಿ ಬಿಟ್ಟಾಗ ತೂರಿಕೊಳ್ಳು’ಎಂಬ ಗಾದೆ ಮಾತಿನಂತೆ ಗಾಳಿಗೆದುರಾಗಿ ತೂರಲೆಂದೇ ಮಾಡಿದ ಸಣ್ಣ ತೂರು ಬುಟ್ಟಿಯಲ್ಲಿ ಕಾಳು ತುಂಬಿ ತೂರಬೇಕು. ತೂರುವಾಗ ಒಮ್ಮೆಲೆ ಕಾಳು ಚೆಲ್ಲಬಾರದು. ಗಲ್ಲಿಸಿ ಗಲ್ಲಿಸಿ ಅಷ್ಟಕ್ಕಷ್ಟೇ ಕೆಳಗಡೆ ಕೆಳಗಡೆ ಚೆಲ್ಲಬೇಕು. ಗಾಳಿ ಜೋರಾಗಿ ಬೀಸಿದರೆ ಬೇಗ ಬೇಗ ಗಲ್ಲಿಸಿ ತೂರಬೇಕು. ಸಣ್ಣಗೆ ಬೀಸುತ್ತಿದ್ದರೆ ನಿಧಾನವಾಗಿ ತೂರಬೇಕು. ದೊಡ್ಡ ರಾಶಿ ಇದ್ದರೆ ಎರಡು ಮ್ಯಾಟಗಳ ಮೂಲಕ ತೂರುವರು. ಒಮ್ಮೊಮ್ಮೆ ಗಾಳಿಗಾಗಿ ದಿನಗಟ್ಟಲೇ ಕಾಯಬೇಕಾಗುತ್ತದೆ.
ಕಣ ಮಾಡಿ ಒಕ್ಕುವುದು ಉತ್ತಮ: ರಸ್ತೆಯಲ್ಲಿ ಕಾಳುಗಳನ್ನು ಒಕ್ಕುವುದು ಒಳ್ಳೆಯದಲ್ಲ. ವಾಹನಗಳ ಗಾಲಿಗೆ ತಗುಲಿದ ಸಣ್ಣ ಹರಳುಗಳು, ಸೆಗಣಿ, ಕಸಕಡ್ಡಿಗಳು ಕಾಳಿನಲ್ಲಿ ಸೇರುತ್ತವೆ. ಹೊಟ್ಟು ಸಹಿತ ದನ ತಿನ್ನಲು ಯೋಗ್ಯ ಆಗುವುದಿಲ್ಲ. ಯಂತ್ರಗಳು ಬಂದಿರುವುದರಿಂದ ರೈತರು ಕಣ ಮಾಡಿ ಒಕ್ಕುವ ತೊಂದರೆ ತೆಗೆದುಕೊಳ್ಳುತ್ತಿಲ್ಲ. ಕಣ ಮಾಡಿ ಒಕ್ಕುವುದರಿಂದ ಯಂತ್ರದ ಖರ್ಚು ಉಳಿತಾಯವಾಗುವುದು. ಹೊಟ್ಟು ಕೆಡಲಾರದು. ದನಗಳಿಗೆ ಹೊಟ್ಟು ಮಳೆಗಾಲದಲ್ಲಿ ಆಹಾರವಾಗಿದೆ. ಮುಂಗಾರಿಯಲ್ಲಿ ಮಳೆಗಾಲ ಇರುವುದರಿಂದ, ಗಾಳಿ ಬಿಡದೇ ಇರುವುದರಿಂದ ಹಾಗೂ ಕಣ ಮಾಡಿ ಒಕ್ಕಲು ಅನುಕೂಲವಾಗದು. ಆದರೆ ಹಿಂಗಾರಿಯಲ್ಲಿ ಕಣ ಮಾಡಿ ಒಕ್ಕುವುದರಿಂದ ಹಲವಾರು ಪ್ರಯೋಜನಗಳಿವೆ. ರೈತರಿಗೆ ತಾಳ್ಮೆ ಬೇಕಷ್ಟೇ.
ಮುಂಗಾರು ಮಳೆಯಿಂದ ಆರಂಭವಾದ ಉಳುಮೆ,ಬಿತ್ತನೆ, ಎಡೆಕುಂಟೆ ಹೊಡೆಯುವುದು, ಕಳೆಗಳ ನಿರ್ವಹಣೆ, ಕೊಯ್ಲು ಮಾಡುವ, ಮೆದೆ ಮಾಡಿ, ತೆನೆ ಕೊಯ್ದು ಚಕ್ಕಡಿಯಲ್ಲಿ ಹೇರಿ, ಕಣ ಮಾಡಿ, ಕಣದಲ್ಲಿ ಒಕ್ಕಿ ತೂರಿ, ರಾಶಿ ಮಾಡಿ, ಹಗೇವಿಗೆ ತಂದು ಹಾಕುವತನಕ ರೈತರ ಬದುಕಿನ ಚಕ್ರ ತಿರುಗುತ್ತಲೇ ಇರುತ್ತದೆ. ಹಂತಿಯ ಪದಗಳು ಹರುಷದ ಪದಗಳು, ದುಡಿಮೆಯ ಆಯಾಸವನ್ನು ಮರೆಸುವ ಹಾಡುಗಳು.ಅದ್ಯಾಕೋ ಈ ಪದ ಹಾಡುವ ನಾಲಿಗೆ ಮುದುಡಿದೆ. ಹಾಡುವ ಬಾಯಿ ಮೂಕವಾಗಿದೆ. ಯಂತ್ರದ ಚಕ್ರದಂತೆ ರೈತನ ಬದುಕಿನ ಚಕ್ರವೂ ವೇಗ ಪಡೆದುಕೊಂಡ ಹಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ