ಮಂಗಳವಾರ, ಜೂನ್ 4, 2013

`ಕಣ' ಅನ್ನೋದು ದೊಡ್ಡದು ಕನಾ!

ಸುಗ್ಗಿ ಸಂಭ್ರಮ ಸವಿಯುವ ಹೊತ್ತು. ಬಿತ್ತಿದ ಕಾಳೊಂದು ಸಾವಿರವಾಗಿ ಇಡೀ ವರ್ಷದ ತುತ್ತಾಗುವ ಹೊತ್ತು. ಬಳೆಯ ನಾದದಲಿ ಸರಸರನೆ ಕುಯ್ದ ಹುಲ್ಲು ಜಾನುವಾರಿಗೆ, ಮನುಷ್ಯರಿಗೆ ದವಸ ಬೇರ್ಪಡುವ ಕಾರ್ಯ ಶುರುವಾಗುವುದು ಇಲ್ಲಿಂದಲೇ. ಹೀಗೆ ಫಸಲು ತೂರಿ, ಬಿಡಿ ಕಾಳಾಗಿ ಪರಿವರ್ತಿಸುವ ಜಾಗಕ್ಕೆ ಕಣ ಎನ್ನುತ್ತಾರೆ. ಹತ್ತಾರು ಕುಟುಂಬಗಳು ಕುಯ್ದ ಫಸಲನ್ನೆಲ್ಲ ಒಟ್ಟಾರೆ ತಂದು ತಮ್ಮ ತಮ್ಮ ಮೆದೆ ಅಥವಾ ಬಣವೆಗಳನ್ನು ಒಂದು ನಿಗದಿತ ಸ್ಥಳದಲ್ಲಿ ಹಾಕುತ್ತಾರೆ.

ಕಣ ಮಾಡುವುದು
ಕೆಲ ದಿನಗಳ ನಂತರ ಕಣ ನಿರ್ಮಾಣದ ತಯಾರಿ. ವೃತ್ತಾಕಾರದ ಕಣದ ಮಧ್ಯದಲ್ಲಿ ನೆಡುವ ಒಂದಾಳುದ್ದದ ಬಿದಿರು. ಆಲ, ಸುರಗಿ ಅಥವಾ ಬನ್ನಿ ಮರದ ಕಂಬ ಮೊದಲು ನೆಡುತ್ತಾರೆ. ಜನಪದರಲ್ಲಿ ಇದಕ್ಕೆ ಲಕ್ಷ್ಮೀ ಎಂಬ ಭಾವನೆ ಇದೆ. ಶುಭದಿನ ಕುಣಿ ತೆಗೆದು ನೆಡುವರು. ಸಗಣಿ ಉಂಡೆಯ ಬೆನಕನ ನೆತ್ತಿ ಮೇಲೆ ಹಸಿ ಗರಿಕೆ ಸಿಕ್ಕಿಸಿ, ಮೇಟಿ ಮೇಲೆ ಇಟ್ಟು ಕಡಲೆಪುರಿ ಪ್ರಸಾದ ಹಂಚುವರು. ವಿಘ್ನ ಬಾರದಿರಲು ಈ ಪೂಜೆ ಕಡ್ಡಾಯ. ಇದಕ್ಕೆ ಮೇಟಿ ಎನ್ನುವರು. ಮೇಟಿ ಕಣದ ಕೇಂದ್ರ ಬಿಂದು. ಇಲ್ಲಿ ಪೈರಿನ ಹುಲ್ಲು, ಗರಿಕೆ, ಕಲ್ಲು ಮುಂತಾದ ಕಸವನ್ನು ಕೋಲು ಗುದ್ದಲಿಯಿಂದ ತೆಗೆದು ನೀರು ಚಿಮುಕಿಸಿ, ತಗ್ಗು ದಿಣ್ಣೆ ಸಮ ಮಾಡಿ, ದನಗಳಿಂದ ತುಳಿಸಿ, ಗಾರೆಯಿಂದ ನೆಲವನ್ನು ನಯಗೊಳಿಸುತ್ತಾರೆ.

ಆಮೇಲೆ ತೆಂಗು ಅಥವಾ ಅಡಿಕೆ ಗರಿಯಿಂದ ಮೇಟಿಯ ಸುತ್ತಲೂ ಸಗಣಿ ಬಗ್ಗಡ ಹಾಕಿ ಸುತ್ತುತ್ತಾ ಬಿರುಕು ಮುಚ್ಚುವಂತೆ ಸಾರಿಸುವರು. ಮೆದೆ ಹಾಕಿದವರೆಲ್ಲರೂ ಒಗ್ಗೂಡಿ ಕೆಲಸ ಮಾಡುವುದು ಕಡ್ಡಾಯ. ಒಟ್ಟಾರೆ ತಮ್ಮ ಸ್ಥಿತಿಗತಿಗೆ ಅನುಗುಣವಾಗಿ ನಾಲ್ಕೆತ್ತಿನ ಕಣ, ಎಂಟೆತ್ತಿನ ಕಣ ಮಾಡುವುದು ರೂಢಿ. ಹಿಂದೆ ಕಣದ ವಿಸ್ತಾರ ಆಧರಿಸಿ ಶ್ರೀಮಂತಿಕೆ ಅಳೆಯುವುದು ರೂಢಿಯಲ್ಲಿತ್ತು.

ಮೆದೆ ಹರಡುವುದು
ಒಂದು ದಿನ ಕಳೆದ ಮೇಲೆ ಮೆದೆ ಕಿತ್ತು ಕಣದಲ್ಲಿ ಹರಡಿ ಗುಂಡು, ರೋಣಗಲ್ಲು ಅಥವಾ ಕಲ್ಲಿನ ರೋಲರ್ ಕಟ್ಟುತ್ತಾರೆ. ಕೆಲ ಕಡೆ ಕಣದ ವಿಸ್ತೀರ್ಣದ ಆಧಾರದ ಮೇಲೆ ನಾಲ್ಕು ಅಥವಾ ಎಂಟು ಎತ್ತುಗಳಿಂದ ಸುತ್ತಿಸುತ್ತಾರೆ. ಗುಂಡು ಹೊಡೆದ ಹಾಗೆ ಮೆರೆಗೋಲಿನ ಸಹಾಯದಿಂದ ತಿರುವಿ ತೆನೆ ಒದರುತ್ತಾರೆ. ಹೀಗೆ ಬೇರ್ಪಟ್ಟ ಧಾನ್ಯವನ್ನು ಮಿದಿ ಮಾಡುತ್ತಾರೆ. ಮೆದೆ ಕಂಕಿಗಳನ್ನು ವಿಂಗಡಿಸುವುದು, ತೂರಿ ರಾಶಿ ಮಾಡುತ್ತಾರೆ. ರಾಶಿ ವೇಳೆ ಮೇಟಿಯ ರಾಶಿ, ಬುದ್ದಿವಂತನ ರಾಶಿ, ಕರಿಬಂಟನರಾಶಿ, ಬಿಳಿಬಂಟನ ರಾಶಿ ಮಾಡುತ್ತಾರೆ. ಹೀಗೆ ಹಸನು ಮಾಡಿದ ಧಾನ್ಯದ ರಾಶಿ, ರಾಗಿಯಾದರೆ ಜರಡಿ ಮಾಡುತ್ತಾರೆ. ನಂತರ ಎತ್ತರದ ಅಟ್ಟಣಿಗೆ ಹತ್ತಿ ಗಾಳಿಯಲ್ಲಿ ತೂರಿ ರಾಗಿ ಬೇರ್ಪಡಿಸುತ್ತಾರೆ. ಹೀಗೆ ರಾಗಿ ತೂರುವಾಗ ಗಾಳಿ ಬೀಸದಿದ್ದರೆ ಕೂಗಾಕುತ್ತಿದ್ದರು. ಕಣ ಮಾಡುವಾಗ ಹಾಡುಗಳ ಸುಗ್ಗಿ ನಡೆದರೆ ರಾತ್ರಿ ಕಣ ಕಾಯುವಾಗ ನಿದ್ರೆ ದೂರವಿರಿಸಲು ಹೂಂಗುಡುವ ಕಥೆ ಹೇಳಲಾಗುತ್ತಿತ್ತು.

ನಿಯಮ
ತಲೆ ಮೇಲೆ ಎಲ್ಲರೂ ಬಟ್ಟೆ ಸುತ್ತಿಕೊಂಡಿರಬೇಕು. ಕಣದಲ್ಲಿರುವವರು ಹೊರಗಿನವರನ್ನು ಕೂಗಿ ಕರೆಯಬಾರದು. ಕೈ ಕಟ್ಟಿ ನಿಲ್ಲಬಾರದು. ಬೀಡಿ ಹಾಗೂ ಅಡಿಕೆ ಎಲೆ ಹಾಕುವ ಹಾಗಿಲ್ಲ. ಚಪ್ಪಲಿ ಧರಿಸುವಂತಿಲ್ಲ.

ರಾಶಿ ಪೂಜೆ:
ರಾಶಿ ತುಂಬುವ ಮುಂಚೆ ಹೂ ಪೂಜೆ ನಡೆಯುತ್ತದೆ. ರಾಶಿಯನ್ನು ಎರಡು ಅಥವಾ ಮೂರು ಗುಡ್ಡೆ ಮಾಡುತ್ತಾರೆ. ರಾಶಿಯ ಪಕ್ಕದಲ್ಲಿ ಮೂರು ಮೊರ, ಎರಡು ಬರಲು ಇಡುತ್ತಾರೆ. ಸೆಗಣಿಯಲ್ಲಿ ಬೆನಕನನ್ನು ಮಾಡಿ, ಹೂ ಸಿಕ್ಕಿಸುತ್ತಾರೆ. ರಾಶಿಗೆ ಮಾವಿನ ಎಲೆ ಸಿಕ್ಕಿಸಿ, ಕಾಯಿ ಒಡೆದು, ನೀರು ಚಿಮುಕಿಸಿ, ನಂತರ ಪ್ರಸಾದ ಹಂಚುತ್ತಾರೆ. ಇದಕ್ಕೆ ರಾಶಿ ಪಲ್ಲಾರ ಎನ್ನುತ್ತಾರೆ.

ಕಡೆ ಕಣ
ಈಚೆಗೆ ಕಡೆಕಣ ಎನ್ನುವುದು ಕಣ್ಮರೆಯಾಗುತ್ತಿದೆ. ಕಾಳು ರಾಶಿ, ಕಣ ಕಟ್ಟಲು ಸಹಾಯ ಮಾಡಿದವರಿಗೆ ಊಟ ಹಾಕುವ ಸಂಪ್ರದಾಯವಿತ್ತು. ಆ ನಂತರ ದಾನ ಕಡ್ಡಾಯವಾಗಿತ್ತು.

*******

ಮೇಟಿ ಎದ್ದಾಡಿದ ಕಣವೇ ಓಲಗ..
--ತುರುವೇಕೆರೆ ಪ್ರಸಾದ್

ಸುಗ್ಗಿ ಬರೆ, ಹಿಗ್ಗಿ ತಿರೆ, ಸಗ್ಗ ಸುಖವ ತರುತಿದೆ... ಎಂಬುದೊಂದು ಕವಿವಾಣಿ. ಸುಗ್ಗಿ ಬರಲು, ಭೂಮಿ ಹಿಗ್ಗಿ ಹೋಗಿ ಇಲ್ಲಿಯೇ ಸ್ವರ್ಗದ ಆನಂದ ಕಾಣುವಂತಾಗಿದೆ ಎನ್ನುವ ಭಾವನೆಯಿತ್ತು. ಆದರೆ ಇದೀಗ ಸುಗ್ಗಿ ಬರೆ, ತಲೆ ಬಾಗಿ ತಿರಿ (ಸುಗ್ಗಿ ಬಂದರೂ ಬೇಡುವ ಪರಿಸ್ಥಿತಿ ಹೋಗಿಲ್ಲ).

ಸುಗ್ಗಿ ಕಾಲ ಬಂತೆಂದರೆ ಕೃಷಿಕರು ಹುದ್ದಿಗೆ ಎದ್ದಾಡಿದ ಕಣವೇ ಓಲಗ... . ಸ್ವಾರಕ್ಕಿ ಸುಳಿದಾಡಿದ ಕಣವೇ ಓಲಗ... ಎಂದು ಸಂಭ್ರಮದಿಂದ ಹಾಡುತ್ತಿದ್ದರು. ಆಳೆತ್ತರಕ್ಕೆ ಜೋಡಿಸಿದ ಮೆದೆಗಳ ನಡುವೆ ಮುದಗೊಂಡ ಜೀವಗಳು ಕಣದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನಾಂದಿ ಹಾಡುತ್ತಿದ್ದರು. ಭಕ್ತಿ ಭಾವಗಳಿಂದ ಕೃತಜ್ಞತೆಯೇ ಮೂರ್ತಿವೆತ್ತಂತೆ ರೋಣಗಲ್ಲು ಪೂಜೆ, ರಾಶಿಪೂಜೆ ಮಾಡುತ್ತಿದ್ದರು.

ಈಗ ನೀರು ಚಿಮುಕಿಸಿ, ಧಮಸ್ ಮಾಡಿ, ಮೇಟಿ ಕಲ್ಲುನೆಟ್ಟು, ಬಗ್ಗಡ ಕದರಿ ಕಣ ಮಾಡುವ ಕಣ ಸಂಸ್ಕೃತಿಯೇ ಮರೆಯಾಗಿದೆ. ಮೊರಗೋಲು, ವಂದರಿ, ಮುಳ್ಳುಕಡ್ಡಿ, ಉದ್ದಗೆ, ಗಟಾಡೆ ಮೊದಲಾದ ಶಬ್ಧಗಳನ್ನು ಈ ಕಾಲದ ಜನ ಕೇಳಿರಲೇ ಸಾಧ್ಯವಿಲ್ಲ. ರಥ ಓಗಾಯ್ತು, ಕುದುರೆ ಸವಾರಿ ಮುಗೀತು... ಎತ್ಲಾಗೋದ ನಮ್ ಬುದ್ವಂಥ ? ಅಂತ ಒಬ್ಬರು ಕೇಳುದ್ರೇ, ಅಗೋ ನೋಡಲ್ಲಿ ಕೊಂಗನ ಜತೆ ಕುಂತವ್ನೇ... ಅಂತ ಇನ್ನೊಬ್ಬರು ಚಟಾಕಿ ಹಾರುಸ್ತಿದ್ರು... (ರೋಣಗಲ್ ಓಡಿಸಿ ಉದ್ದುಗೆಲಿ ತೂರಿದ್ದಾಯ್ತು. ಪೊರಕೆ ಎಲ್ಲಿ ಅಂದ್ರೆ ಕೊಂಗ (ಮೊರದ)ನ ಜತೆ ಕೂತಿದಾನೆ. ಕಣದಲ್ಲಿ ಮೂಲ ಹೆಸರಿಡಿದು ಏನನ್ನೂ ಕರೆಯದ ಕೃಷಿಕರು ರಾಗಿಗೆ `ಕೃಷ್ಣಸ್ವಾಮಿ' ಎನ್ನುವುದು ವಾಡಿಕೆ.

ತಾಲ್ಲೂಕಿನಲ್ಲಿ ಈ ಬಾರಿ ಎಲ್ಲ ಸಂಭ್ರಮ ಸಡಗರ ಮರೆಯಾಗಿವೆ. 19 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗಿದೆ. ಹೆಕ್ಟೇರ್‌ಗೆ ಕನಿಷ್ಠ 20 ಕ್ವಿಂಟಲ್ ಬರುತ್ತಿದ್ದ ಇಳುವರಿ ಈ ಬಾರಿ ಕೇವಲ 825 ಕೆಜಿಗೆ ಕುಸಿದಿದೆ. ಕೃಷಿಕರ ಮುಖ ಕಳೆಗುಂದಿದೆ. ಎಷ್ಟೋ ಜನ ರಾಗಿ ಕುಯಿಲು ಮಾಡದೆ ಹೊಲದಲ್ಲೇ ದನ ಕಟ್ಟಿ ಮೇಯಿಸಿಬಿಟ್ಟಿದ್ದಾರೆ. ಕೊಟ್ಟೂರನಕೊಟ್ಟಿಗೆಯ ಗೋವಿಂದಯ್ಯನವರ ಹೊಲದಲ್ಲಿ ಮುಕ್ಕಾಲು ಎಕರೆಗೆ 20 ಸೇರು ರಾಗಿ ಆಗಿದೆ.

ದೊಡ್ಡ ರಾಶಿ, ದೇವರ ರಾಶಿ, ಬುದ್ದಿವಂತ ರಾಶಿ, ಗೌರಮ್ಮನ ಗುಡ್ಡೆ, ಕಡ್ಡಿರಾಶಿ ಎಂದೆಲ್ಲ ಬಗೆಬಗೆ ರಾಶಿ ಮಾಡುತ್ತಿದ್ದುದನ್ನು ನೆನಪಿಸಿಕೊಳ್ಳುವ ಗೋವಿಂದಯ್ಯ ಕಣದಲ್ಲಿ ಕೊಳಗಗಟ್ಟಲೆ ದಾನ ಮಾಡುತ್ತಿದ್ದೆವು. ಈಗ ಎಂಜಲ ಕೈಲಿ ಕಾಗೆ ಓಡಿಸೋ ಪರಿಸ್ಥಿತಿ ಬಂದಿದೆ ಎಂದು ಹನಿಗಣ್ಣಾದರು.

ಮತ್ತೊಬ್ಬ ಕೃಷಿಕ ಮಹೇಶ್ ಕಣದಲ್ಲಾದ 30 ಸೇರನ್ನೂ ಬಡವರಿಗೆ ಹಂಚಿ ಕೈ ಮುಗಿದು ಬಂದು ಬಿಟ್ಟರು. ವೆಂಕಟೇಶ್, ನಂಜಯ್ಯ ಮೊದಲಾದ ಎಲ್ಲರ ಹೊಲದಲ್ಲೂ ಇದೇ ಕತೆ...ಇದೇ ವ್ಯಥೆ. ಎಕರೆಗೆ ಒಂದೂವರೆ ಚೀಲ ಬೆಳೆದವರೇ ಪುಣ್ಯವಂತರು! ಇಡೀ ವರ್ಷ ಗಂಜಿಗೇನು ಗತಿ ಎಂಬ ಚಿಂತೆ. ಗಾಯದ ಮೇಲೆ ಬರೆ ಹಾಕಿದಂತೆ ರಾಗಿ ಬೆಲೆ ದಿನದಿಂದ ದಿನಕ್ಕೆ ಆಗಸಕ್ಕೇರುತ್ತಿದೆ.

ಅಕ್ಕಿ ಬೆಲೆ ಕೆಜಿಗೆ 45 ರೂಪಾಯಿ ಆಗಿದೆ. ಹೊಲವಿದ್ದೂ ಮನೆಯಲ್ಲಿ ಕಾಳು ರಾಗಿಯಿಲ್ಲ. ರಾಗಿ ಕೊಂಡು ತಿನ್ನದಷ್ಟು ದುಬಾರಿಯಾಗಿದೆ. ಪಡಿತರದಲ್ಲಿ ಕೊಡುವ 4 ಕೆಜಿ ಅಕ್ಕಿಯಲ್ಲಿ ತಿಂಗಳು ಪೂರಾ ಜೀವನ ಮಾಡಲು ಹೇಗೆ ಸಾಧ್ಯ? ಭೂಮಿ ಬೀಳು ಬಿದ್ದಿದೆ. ಕಂತೆ ಹುಲ್ಲಿಗೆ 200 ರೂಪಾಯಿ ಆಗಿದೆ...ನಮ್ಮ ಗತಿ ಏನು? ಎಂದು ರೈತರು ಆಕಾಶ ನೋಡುವಾಗ ಮುಂದಿನ ವರ್ಷವಾದರೂ ವರ್ಷಧಾರೆಯಾಗಿ ರಾಗಳ್ಳಿ ಬೆಟ್ಟ ಬೆಳ್ದಂಗೆ ಬೆಳೆಯೋ ಓಲಗ... ಎಂದು ಮನಸ್ಸು ಚೀರುತ್ತದೆ.


ಕಾಮೆಂಟ್‌ಗಳಿಲ್ಲ: