ಸಿದ್ಧರಾಮ ಹಿರೇಮಠ, ಕೂಡ್ಲಿಗಿ
ಈಚೆಗೆ ಅಮರೇಶ ನುಗಡೋಣಿ ಅವರ ಸವಾರಿ ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ‘ಕನಸೆಂಬೋ ಕುದುರೆಯನೇರಿ’ ಸಿನೆಮಾ ಮಾಡಿ ಗಮನಸೆಳೆದರು. ಅದು ಕಾಡುಸಿದ್ಧನೊಬ್ಬನ ಬದುಕಿನ ಮೂಲಕ ಈ ಕಾಲದ ವರ್ತಮಾನವನ್ನೂ, ಜನಪದ ಕಲೆಗಳನ್ನು ನಂಬಿ ಬದುಕುತ್ತಿರುವವರ ಬವಣೆಯನ್ನೂ ತುಂಬಾ ಶಕ್ತಿಯುತವಾಗಿ ಬಿಂಬಿಸಿತು. ಈ ಸಿನೆಮಾದ ಕೊನೆಗೆ ಕಾಡುಸಿದ್ದರವ ಕೃಷಿ ಮಾಡುವ ಮೂಲಕ ಬದುಕಿಗೆ ಇನ್ನೊಂದು ಸ್ಥಿತ್ಯಂತರ ಪಡೆಯುತ್ತಾನೆ. ಆದರೆ ಸಿದ್ದರಾಮ ಹಿರೇಮಠರು ಕಟ್ಟಿಕೊಡುವ ಕಾಡುಸಿದ್ಧರ ನಿಜ ಬದುಕಿನ ಚಿತ್ರದಲ್ಲಿ ವ್ಯವಸಾಯವನ್ನೂ ತಮ್ಮ ಸಿದ್ಧರ ವೇಷವನ್ನೂ ಜೊತೆ ಜೊತೆಗೆ ಒಯ್ಯುತ್ತಿದ್ದಾರೆ. ಕಾಡುಸಿದ್ಧರ ಮಕ್ಕಳು ಶಿಕ್ಷಣ ಕಲಿವ ಮೂಲಕ ಹೊಸ ಸ್ಥಿತ್ಯಂತರಕ್ಕೆ ಸಿದ್ದವಾಗುತ್ತಿದ್ದಾರೆ. ಕನ್ನಡ ಜಾನಪದ ಬ್ಲಾಗ್ ಗಾಗಿ ಈ ಬರೆಹ ಬರೆದ ಸಿದ್ಧರಾಮ ಹಿರೇಮಠರಿಗೆ ಧನ್ಯವಾದಗಳು-ಅರುಣ್
(ಗ್ರಾಮದ್ಲಲಿ ಸಂಚರಿಸುತ್ತಿರುವ ಸುಡುಗಾಡು ಸಿದ್ಧರು)
‘ಅಜ್ಜೆಜೆಜೆಜೆ ಎಲ್ಲಿ ಹೋತೋಗೊಂಬಿ?’ ‘ಅಲ್ಲೇ ನಿನ್ ಚೀಲದಾಗ ಇರಬೇಕ ನೋಡ’, ಅಜ್ಜೆಜ್ಜೆಜೆಜೆಜೆಜೆಜೆ... ಆ ಇಲ್ಲಲ್ಲೋ’ ’ಅದೇನ್ ಕೊಟ್ಟೂರಿಗೆ ಹೋತೇನ್ ನೋಡು’ ’ಅಜ್ಜೆಜ್ಜೆಜೆಜೆಜೆಜ್ ಇಲ್ಲೈತೆ ನೋಡು’ ಎಂದು ಚೀಲವನ್ನು ಅದುಮಿದಾಗ ‘ಕುಂಯ್’ ಎಂಬ ಶಬ್ದ ಬರುವುದು. ಮತ್ತೊಂದೆಡೆ ಅದುಮಿದಾಗಿ ಮತ್ತದೇ ’ಕುಂಯ್’ ಎಂಬ ಶಬ್ದ. ಇದು ಸುಡುಗಾಡು ಸಿದ್ಧರ ಕೈಚಳಕ ಆಟದ ಒಂದು ಭಾಗ. ಕೆಂಪು ವರ್ಣದ ವೇಷಭೂಷಣ ತೊಟ್ಟ ಇವರು ಹಳ್ಳಿಗಳಿಗೆ ಸಂಚರಿಸಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಇದೇ ಇವರಿಗೆ ಹೊಟ್ಟೆಪಾಡಿನ ವೃತ್ತಿ.
ಕೂಡ್ಲಿಗಿ ತಾಲೂಕಿನ ಬಡೆಲಡುಕು ಗ್ರಾಮದ್ಲಲಿರುವ ೬೩ರ ಹರೆಯದ ಮಹೇಶಪ್ಪ ಹಾಗೂ ೩೫ರ ಹರೆಯದ ಶಿವಣ್ಣ ತಲೆತಲಾಂತರದಿಂದಲೂ ಉಳಿಸಿಕೊಂಡು ಬಂದಿರುವ ಈ ಕಲೆಯನ್ನು ಇಂದಿಗೂ ಆಶ್ರಯಿಸಿದ್ದಾರೆ. ಇವರು ಸುಡುಗಾಡು ಸಿದ್ಧರು ಹೇಗಾದರೆಂಬುದೇ ಒಂದು ಐತಿಹ್ಯವಿದೆ. ಸತ್ಯಹರಿಶ್ಚಂದ್ರನು ಹಿಂದೊಮ್ಮೆ ಸ್ಮಶಾನವನ್ನು ಕಾಯುತ್ತಿದ್ದಾಗ, ಶಿವನು ಶನಿಯ ಬಾಧೆ ತಡೆಯಲಾರದೆ, ಸ್ಮಶಾನದಲ್ಲಿ ಕುಣಿಯನ್ನು ತೋಡಿಕೊಂಡು ಅವಿತನು. ಬೆನ್ನುಹತ್ತಿದ ಶನಿಯು ಶಿವನಿಗೆ ಅಡಗಿ ಕುಳಿತದ್ದಕ್ಕಾಗಿ ಹೀಯಾಳಿಸುತ್ತಾನೆ. ಆಗ ಶಿವನು ಕುಣಿಯಿಂದ ಸುಡುಗಾಡು ಸಿದ್ಧನ ರೂಪದಲ್ಲಿ ಮೇಲೆದ್ದು ನಿಂತನು. ಅಂದಿನಿಂದ ಸುಡುಗಾಡು ಸಿದ್ಧ ಜನಾಂಗದವರು ಗ್ರಾಮದ ಸ್ಮಶಾನವನ್ನು ಮಧ್ಯರಾತ್ರಿ ಕಾಯ್ದು, ಹಗಲಿನಲ್ಲಿ ಶಂಖ, ಗಂಟೆಯ ಧ್ವನಿ ಮಾಡುತ್ತ, ತಮ್ಮ ಕಾಣಿಕೆಯನ್ನು ಪಡೆಯುವ ಪರಂಪರೆ ಆರಂಭಗೊಂಡಿತು ಎಂದು ಹೇಳುತ್ತಾರೆ. ಹಿಂದಿನ ಸಂಪ್ರದಾಯದ ಪ್ರಕಾರ ಗ್ರಾಮದಲ್ಲಿ ಯಾರಾದರೂ ಸತ್ತಲ್ಲಿ ೩೦೧ ರೂ., ಕುರಿ, ಆಕಳನ್ನು ಕೊಡಬೇಕೆಂಬ ನಿಯಮವಿದೆ. ನಂತರ ಇವರು ೧೦೧ ದೇವರ ಧ್ಯಾನ ಮಾಡಿ ಹಾರೈಸಿ ಹೋಗುವರು.
(ತಮ್ಮ ಕಲೆಯನ್ನು ಪ್ರದರ್ಶಿಸುತ್ತಿರುವ ಸುಡುಗಾಡು ಸಿದ್ಧರು)
ಇಂದಿಗೂ ಈ ಸಿದ್ಧರು ತಮಗೆ ನಿಗದಿಪಡಿಸಿದ ಗ್ರಾಮಗಳಿಗೆ ಹೋಗಿ ರಾತ್ರಿ ಸ್ಮಶಾನದಲ್ಲಿ ಬಾವುಟ ಕಟ್ಟಿ, ವಸ್ತಿ ಮಾಡಿ, ಹಗಲು ಗ್ರಾಮದಲ್ಲಿ ಹಾಲಕ್ಕಿ ಶಕುನ ಹೇಳುತ್ತಾರೆ. ಒಂದು ಗ್ರಾಮದಲ್ಲಿ ೧೫ ದಿನವಿದ್ದು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಸಾಮಾನ್ಯವಾಗಿ ಇವರು ಜನವರಿಯಿಂದ ಮೇ ತಿಂಗಳಿನವರೆಗೆ ಸಂಚಾರ ಮಾಡುತ್ತಾರೆ. ಉಳಿದ ದಿನಗಳು ಹೊಲಗಳಲ್ಲಿ ಕೂಲಿ ಮಾಡುತ್ತಾರೆ. ಮೈಮೇಲೆ ಕಾವಿಯನ್ನು ಹೋಲುವ ಪಂಚೆ, ಶಾಲು, ಕೊರಳಲ್ಲಿ ಹಲವಾರು ರುದ್ರಾಕ್ಷಿ ಹಾರಗಳು, ಮಣಿಸರಗಳು, ಲಿಂಗು ತಲೆಯ ಮೇಲೆ ರುಮಾಲು ಅದಕ್ಕೆ ಅಲಂಕಾರಿಕವಾಗಿ ಸಿಕ್ಕಿಸಿದ ನವಿಲುಗರಿ, ಕೈಯಲ್ಲಿ ಶಂಖ, ಗಂಟೆ, ಹಣೆಯಲ್ಲಿ ವೀಭೂತಿ, ಇದು ಇವರ ವೇಷಭೂಷಣ. ಇವರು ತೋರುವ ಆಟವೂ ಆಕರ್ಷಣೀಯವಾಗಿರುತ್ತದೆ. ಗ್ರಾಮದ ಮಧ್ಯದಲ್ಲಿ ತಮ್ಮ ಜೋಳಿಗೆಯೊಳಗಿನಿಂದ ವಿವಿಧ ವಸ್ತುಗಳನ್ನು ಮಾಯ ಮಾಡುವುದು, ಗೊಂಬೆಯನ್ನು ಕುಂಯ್ ಎನ್ನಿಸುವುದು. ವಿವಿಧ ಗಾತ್ರದ ನುಣುಪಾದ ಕಲ್ಲುಗಳನ್ನು ನುಂಗಿ ಮತ್ತೆ ಹೊರತರುವುದು, ಲಿಂಗು, ಬಸವಣ್ಣನ ಮೂರ್ತಿಯನ್ನು ಸೃಷ್ಟಿಸುವುದು ಹೀಗೆ ವಿವಿಧ ಆಟಗಳನ್ನು ತೋರುತ್ತಾರೆ. ಮಕ್ಕಳಿಗೆ ಹಾಗೂ ಹಿರಿಯರಿಗೂ ಆಕರ್ಷಣೀಯವೆನಿಸುವ ಇವರ ವೇಷ ಹಾಗೂ ಕೈಚಳಕದ ಆಟಗಳು ಇವರ ವೃತ್ತಿಗೆ ಗಾಂಭೀರ್ಯವನ್ನು ತಂದುಕೊಟ್ಟಿವೆ. ಆದರೆ ಪಾರಂಪರಿಕವಾಗಿ ಬಂದ ಈ ಕಲೆಯ ಬಗ್ಗೆ ಈಗ ಯಾರಲ್ಲೂ ಆಸಕ್ತಿ ಉಳಿದಿಲ್ಲ. ಮುಖ್ಯವಾಗಿ ಆ ಜನಾಂಗದಲ್ಲಿಯೇ ಉಳಿದಿಲ್ಲವಾದ್ದರಿಂದ ಈ ಕಲೆ ನಶಿಸುತ್ತಿದೆ ಎಂಬುದು ಜನಾಂಗದ ಮಹೇಶಪ್ಪನ ವ್ಯಥೆ.
(ಶಂಖ, ಗಂಟೆಗಳೊಡನೆ ಸಿದ್ಧಗೊಂಡಿರುವ ಸುಡುಗಾಡು ಸಿದ್ಧರು)
ಬಡೆಲಡುಕಿನಲ್ಲಿ ಈ ಜನಾಂಗದ ಸುಮಾರು ೨೦೦ ಮನೆಗಳಿವೆ. ಆದರೆ ಈ ಕಲೆಯನ್ನು ಆಶ್ರಯಿಸಿರುವುದು ಬೆರಳೆಣಿಕೆಯಷ್ಟು ಮಾತ್ರ. ಈ ಜನಾಂಗದಲ್ಲಿ ಕಡುಬಡವರಿದ್ದಾರೆ. ಗುಡಿಸಲುವಾಸಿಗಳಿದ್ದಾರೆ. ಈ ವೃತ್ತಿ ಇವರ ಬದುಕಿನ ಅವಿಭಾಜ್ಯ ಅಂಗವೇ ಆಗಿದ್ದರೂ ಇಂದಿನ ಯುವಕರು ಈ ಕಲೆಗೆ ವಿಮುಖರಾಗುತ್ತಿದ್ದಾರೆ. ಈ ಜನಾಂಗದವರು ಹೇಗೋ ಭಿಕ್ಷಾಟನೆ ಮಾಡಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ. ತಮ್ಮ ಕಲೆ ಮುಂದುವರಿಯಬೇಕೆಂಬ ಆಸೆ ಇವರಲ್ಲೂ ಇದೆ. ಆದರೆ ಕಲಿಯುವವರಿಲ್ಲ. ‘ಟಿವಿ, ಸಿನಿಮಾ ಬಂದಮ್ಯಾಲೆ ನಮ್ ಆಟ ಯಾರು ನೋಡ್ತಾರ?’ ಎಂದು ಜನಾಂಗದ ಜೆ.ಚಂದ್ರಪ್ಪ ಕೇಳುತ್ತಾರೆ. ‘ನಮ್ ಕಲೆ ಮುಂದುವರಕೊಂಡು ಹೋಗಬೇಕ್ರಿ, ಅದಕ್ಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಅವಕಾಶ ಮಾಡಿಕೊಡ್ಬೇಕು’ ಎಂದು ಗ್ರಾ.ಪಂ ಸದಸ್ಯ ಜೆ.ಹೊನ್ನೂರಪ್ಪ ಕಾಳಜಿ ವ್ಯಕ್ತಪಡಿಸುತ್ತಾರೆ. ‘ಹುಡುಗ್ರು ಕಲ್ಯಾಕ ಒಲ್ಲೆಂತಾವ, ಸರ್ಕಾರ ಇದನ್ನೂ ಒಂದು ಕಲೆ ಅಂತ ತಿಳ್ದು, ಪ್ರೋತ್ಸಾಹ ಕೊಡ್ಬೇಕ್ರಿ’ ಎಂದು ಕೆ.ನಾರಾಯಣಪ್ಪ ಹೇಳುತ್ತಾರೆ. ಸರ್ಕಾರದ ವಿವಿಧ ಇಲಾಖೆಗಳು ಇತ್ತ ಗಮನಹರಿಸಬೇಕಾಗಿದೆ.
4 ಕಾಮೆಂಟ್‌ಗಳು:
ನಾನು ಕನಸೆಂಬೋ ಕುದುರೆಯನೇರಿ ಸಿನೆಮಾವನ್ನು ನೋಡಿದ್ದೆ. ಆದರೆ ನನಗೆ ಒಂದು ಅಕ್ಷೇಪವಿತ್ತು.ಕಾರಣ ಅಮರೇಶ ನುಗಡೋಣಿ ಅವರ ಮೂಲ ಕಥೆ ಓದಿಯಾದ ಮೇಲೆ, ಕತೆಗಾರನ ನಂಬಿಕೆಯನ್ನು ಸಿನೆಮಾ ನಿರ್ದೇಶಕ ಭಗ್ನಗೊಳಿಸಿದ್ದಾನೆ ಅನ್ನಿಸಿತು. ಸುಡುಗಾಡು ಸಿದ್ದರ ವರ್ತಮಾನದ ಬದುಕಿನ ಬಗ್ಗೆ ತಿಳಿಯುವಂತೆ ಮಾಡಿದ ಸಿದ್ದರಾಮ ಹಿರೇಮಠರಿಗೂ ಕನ್ನಡ ಜಾನಪದ ಬ್ಲಾಗ್ ಗೂ ಧನ್ಯವಾದಗಳು.
ಸುಡುಗಾಡು ಸಿದ್ಧರನ್ನು ಪರಿಚಯಿಸಿದ ಸಿದ್ಧರಾಮರಿಗೆ ಧನ್ಯವಾದ.
ಮೊದಲನೆ ಭಾವಚಿತ್ರ 'ಭಯಂಕರ ಇಷ್ಟ' ಆಯ್ತು!
artical super agide.
-m.adiga,udupi
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ವಿಶೇಷವಾಗಿ ಬ್ಲಾಗ್ ನಲ್ಲಿ ಪ್ರಕಟಿಸಿ ಸಹಕರಿಸಿದ ಡಾ.ಅರುಣ್ ಜೋಳದಕೂಡ್ಲಿಗಿಯವರಿಗೆ ಕೃತಜ್ಞತೆಗಳು.-ಸಿದ್ಧರಾಮ ಹಿರೇಮಠ.
ಕಾಮೆಂಟ್ ಪೋಸ್ಟ್ ಮಾಡಿ