ಶುಕ್ರವಾರ, ಜುಲೈ 29, 2011

ಜಾನಪದ ವಿಶ್ವವಿದ್ಯಾಲಯ ಪುಟ್ಟ ಸಂಶೋಧನ ಕೇಂದ್ರವಾಗಬೇಕು: ಪ್ರೊ.ರಹಮತ್ ತರೀಕೆರೆ ಅವರೊಂದಿಗೆ ಮಾತುಕತೆ.


ಅರುಣ್:ಇಂದು ಜಾನಪದ ಅಧ್ಯಯನಗಳನ್ನು ಸಂಸ್ಕೃತಿ ಚಿಂತನೆಯ ಭಾಗವಾಗಿ ಒಳಗು ಮಾಡಿಕೊಳ್ಳುವ ವಿಧಾನ ಯಾವುದು?

ರಹಮತ್ ತರೀಕೆರೆ: ಈಗ ಕನ್ನಡದಲ್ಲಿ ಸಂಸ್ಕೃತಿ ಚಿಂತನೆಯ ಹೊಸ ಹಾದಿಗಳು ಮೂಡುತ್ತಿವೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಈ ಚಿಂತನೆಯಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಆಕರ ಜಾನಪದದ್ದೇ ಆಗಿದೆ. ಆದರೆ ಈ ಚಿಂತನೆಯನ್ನು ನಮ್ಮ ಸಮುದಾಯಗಳ ಚಿಂತನಾಕ್ರಮದ ಭಾಗವಾಗಿ, ಮತ್ತಷ್ಟು ಸೃಜನಶೀಲವಾಗಿ ಜೀವಂತವಾಗಿ ಮಾಡಬೇಕಿದೆ. ಚರಿತ್ರೆ, ಭಾಷಾವಿಜ್ಞಾನ, ಸಮಾಜವಿಜ್ಞಾನ, ಸಾಹಿತ್ಯ, ಶಿಲ್ಪ, ಚಿತ್ರಕಲೆ ಸಿನಿಮಾ- ಹೀಗೆ ಹಲವು ಶಿಸ್ತು ಮತ್ತು ಮಾಧ್ಯಮಗಳ ಮೂಲಕ ಪ್ರವೇಶಿಸುವ ಹಾದಿಗಳನ್ನು ಹುಡುಕಬೇಕಿದೆ. ಇದು ಯಾರೊ ಒಬ್ಬಿಬ್ಬರು ಗಣ್ಯವಿದ್ವಾಂಸರು ಮಾಡುವ ಕೆಲಸವಲ್ಲ. ಇದೊಂದು ಟೀಂ ವರ್ಕ್ಸ್.


ಅರುಣ್: ಈತನಕದ ಕರ್ನಾಟಕದ ಜಾನಪದ ಅಧ್ಯಯನಗಳನ್ನು ನೀವು ಹೇಗೆ ಗ್ರಹಿಸುತ್ತೀರಿ? ಈಗ ಜಾನಪದ ಅಧ್ಯಯನಗಳು ಹೊರಳಿಕೊಳ್ಳಬೇಕಾದ ದಿಕ್ಕು ಯಾವುದು?

ರಹಮತ್ ತರೀಕೆರೆ: ಕರ್ನಾಟಕದ ಜಾನಪದ ಅಧ್ಯಯನಗಳಲ್ಲಿ ಅನೇಕರು ತೊಡಗಿದ್ದಾರೆ ಮತ್ತು ಅದ್ಭುತವಾದ ಹಾದಿಗಳನ್ನು ಸೋಸಿದ್ದಾರೆ. ಆದರೆ ಎರಡು ಸಮಸ್ಯೆಗಳಿವೆ. ೧. ಜಾನಪದವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ಕೆಲವರಲ್ಲಿ ಅದು ಪಶ್ಚಿಮದ ಸಿದ್ಧಾಂತ ನೆರಳಿನಲ್ಲಿ ನಡೆಯುತ್ತಿರುವುದು. ೨. ಮತ್ತೆ ಕೆಲವರಲ್ಲಿ ಅದು ಸ್ವವಿಮರ್ಶೆಯಿಲ್ಲದ ವೈಭವೀಕರಣದ ದೇಶೀಯ ಸ್ವಗತಗಳಲ್ಲಿ ನರಳುತ್ತಿರುವುದು. ನಮ್ಮಲ್ಲಿ ಕಳೆದ ಒಂದು ಶತಮಾನದಿಂದ ನಡೆದಿರುವ ಸಂಗ್ರಹ ಮತ್ತು ಸಂಪಾದನೆ ಅದ್ಭುತವಾಗಿದೆ. ಮೊದಲ ಸಲಕ್ಕೆ ಹಳ್ಳಿಗಳಿಗೆ ಹೋಗಿ ಜನರ ಜತೆ ಕುಳಿತು ಕೆಲಸ ಮಾಡಿದ ಆ ಮಹನೀಯರನ್ನು ಕೃತಜ್ಞತೆಯಿಂದ ನೆನೆಯಬೇಕು. ಆದರೆ ಸಂಗ್ರಹವಾಗಿ ಪ್ರಕಟವಾಗಿರುವ ಈ ಆಕರಗಳಲ್ಲಿ ಶೇಕಡ ೫ರಷ್ಟೂ ವಿಶ್ಲೇಷಣೆಗೆ ಒಳಗಾಗಿಲ್ಲ. ಜನಪದ ಕತೆಗಳ ವಿಶ್ಲೇಷಣೆಯಂತೂ ಬಹಳ ಕಡಿಮೆ ಆಗಿದೆ. ಈ ವಿಶ್ಲೇಷಣೆ ಮತ್ತು ವ್ಯಾಖ್ಯಾನವನ್ನು ವಿದ್ವತ್ ಸಾಧನೆಗಾಗಿ ಅಲ್ಲ, ನಮ್ಮ ದುಡಿವ ಜನ ಸಮುದಾಯಗಳ ಅನುಭವ ಮತ್ತು ಸೃಜನಶೀಲತೆಯನ್ನು ಮಥಿಸಿ ತಿಳಿವನ್ನು ಮತ್ತು ವಿವೇಕವನ್ನು ಪಡೆಯುವುದಕ್ಕಾಗಿ ಮಾಡಬೇಕಿದೆ. ಇದನ್ನು ಹೇಳುವಾಗ ಸಂಗ್ರಹ ಮಾಡುವವರೊಬ್ಬರು ವಿಶ್ಲೇಷಣೆ ಮತ್ತು ವ್ಯಾಖ್ಯಾನ ಮಾಡುವವರು ಮತ್ತೊಬ್ಬರು ಎಂಬ ಶ್ರೇಣೀಕೃತ ಬೌದ್ಧಿಕ ಶ್ರಮವಿಭಜನೆ ತೊಲಗಿ, ಅವೆರಡೂ ಏಕೀಭವಿಸುವುದು ಸಾಧ್ಯವಾಗಬೇಕು. ಜನರೊಟ್ಟಿಗೆ ಕುಳಿತು ಆಕರವನ್ನು ಪಡೆಯುವಾಗಲೇ ಅದನ್ನು ವಿಶ್ಲೇಷಿಸಲು ಬೇಕಾದ ಚೌಕಟ್ಟು ಮತ್ತು ಚಿಂತನೆ ಕೂಡ ಹುಟ್ಟುತ್ತಿರುತ್ತದೆ.




ಅರುಣ್:ಈಗ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಆರಂಭವಾಗಿದೆ ಸಂಸ್ಕೃತಿ ಚಿಂತಕರಾಗಿ ನೀವು ಜಾನಪದ ವಿಶ್ವವಿದ್ಯಾಲಯದ ಮೊದಲ ಆದ್ಯತೆ ಏನಾಗಬೇಕೆಂದು ಬಯಸುತ್ತೀರಿ? ನಿಮ್ಮ ಕನಸಿನ ಜಾನಪದ ವಿವಿ ಹೇಗಿರಬೇಕು?

ರಹಮತ್ ತರೀಕೆರೆ: ನನಗೆ ತಕ್ಷಣಕ್ಕೆ ಅನಿಸುವಂತೆ, ಅದೊಂದು ಪುಟ್ಟ ಸಂಶೋಧನ ಕೇಂದ್ರವಾಗಬೇಕು. ಅದರೊಳಗೆ ಕರ್ನಾಟಕದಲ್ಲಿ ಜೀವಚಿತವಾಗಿ ಚಿಂತನೆ ಮಾಡಬಲ್ಲ ಕರ್ನಾಟಕದ ಎಲ್ಲ ಭಾಗಗಳಿಂದ ಬಂದ ತರುಣ ಸಂಶೋಧಕರ ಪಡೆಯೊಂದು ಕೆಲಸ ಮಾಡುವಂತಿರಬೇಕು. ಸಂಶೋಧನೆಗೆ ಪೂರಕವಾಗಿ ಎಂಫಿಲ್ ಪಿಎಚ್‌ಡಿ ಡಿಲಿಟ್ ಕೋರ್ಸುಗಳನ್ನು ನಡೆಸಬಹುದು. ವಿಶ್ವವಿದ್ಯಾಲಯದಲ್ಲಿ ಉದ್ಯೋಗಿಗಳಾಗಿ ಕೆಲಸ ಮಾಡುವವರಿಗಿಂತ, ತಾವಿರುವ ಸ್ಥಳಗಳಿಂದಲೇ ವಿಶ್ವವಿದ್ಯಾಲಯಕ್ಕಾಗಿ ಸಂಶೋಧನೆ ಮಾಡುವವರು ಹೆಚ್ಚಾಗಬೇಕು. ವಿಶ್ವವಿದ್ಯಾಲಯ ಅದಕ್ಕೊಂದು ವೇದಿಕೆಯಾಗಬೇಕು. ಕನ್ನಡದಲ್ಲಿ ಕವಿತೆ ಕತೆ ಬರೆಯುವ ಬಹಳ ತರುಣರಿದ್ದಾರೆ. ಸಂಶೋಧನೆ ಮಾಡುವವರು ಕಡಿಮೆಯಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಬಂದಿರುವ ನೆಪದಲ್ಲಿ ಸಂಶೋಧನೆಗೆ ಹೆಚ್ಚು ಅವಕಾಶಗಳು ಕಲ್ಪಿತವಾಗುತ್ತಿವೆ. ಇಂತಹ ಹೊತ್ತಲ್ಲಿ ಈ ವಿದ್ವತ್ ಬರ ಬಂದಿದೆ. ಈ ಪರಿಸ್ಥಿತಿಯನ್ನು ನಾವೆಲ್ಲ ಸೇರಿ ಬದಲಾಯಿಸಬೇಕು. ಬದಲಾಯಿಸಬಹುದು ಕೂಡ. ಕರ್ನಾಟಕದ ಬೇರೆಬೇರೆ ಭಾಗದಲ್ಲಿರುವ ಹೊಸ ಪ್ರತಿಭೆಗಳನ್ನು ಆರಿಸಿ, ಅವಕ್ಕೆ ಹೊಸ ಅಧ್ಯಯನ ವಿಧಾನಗಳ, ಹೊಸ ಜನರೊಡನಾಟದ ತರಬೇತಿ ಕೊಡುವುದು ಸಾಧ್ಯವಿದೆ.

ಅರುಣ್:ಈಗ ಸಾಂಸ್ಕೃತಿಕ ಅಧ್ಯಯನಗಳಿಗೆ ಪ್ರವೇಶ ಪಡೆಯುವ ಯುವ ಚಿಂತಕರಿಗೆ ಯಾವ ಬಗೆಯ ಸಿದ್ದತೆಗಳ ಅಗತ್ಯವಿದೆ?

ರಹಮತ್ ತರೀಕೆರೆ: ಅಧ್ಯಯನ ಮತ್ತು ತಿರುಗಾಟ-ಇದೊಂದು ಜೋಡಿ ಪರಿಕಲ್ಪನೆ. ಅಧ್ಯಯನ ಮತ್ತು ಚಿಂತನೆಯಿಲ್ಲದ ತಿರುಗಾಟ ಗೊಡ್ಡಾಗುತ್ತದೆ. ತಿರುಗಾಟ ಮತ್ತು ಜನರ ಒಡನಾಟವಿಲ್ಲದ ಅಧ್ಯಯನಕ್ಕೆ ಬೇಗನೇ ಮಂಕುಹಿಡಿಯುತ್ತದೆ. ಕನ್ನಡದಲ್ಲಿ ಎಷ್ಟೊಂದು ಬಗೆಯ ತಿಳುವಳಿಕೆ ಸೃಷ್ಟಿಯಾಗುತ್ತ್ತಿದೆ? ಅದನ್ನು ವಶಪಡಿಸಿಕೊಳ್ಳುವುದು ಮತ್ತು ಅದರ ಜತೆಗೆ ವಾಗ್ವಾದ ಆರಂಭಿಸುವುದು ನಮ್ಮ ಯುವಕರಿಗೆ ಸಾಧ್ಯವಾಗಬೇಕು. ಬೌದ್ಧಿಕವಾದ ಆರೋಗ್ಯಕರವಾದ ಜಗಳವಿಲ್ಲದೆ, ಪಿತ್ರಾರ್ಜಿತ ಆಸ್ತಿಯಂತೆ ಪರಂಪರೆಯ ತಿಳುವಳಿಕೆಯನ್ನು ಪಡೆದುಕೊಂಡರೆ, ಅದು ಕಟ್ಟಿಕೊಟ್ಟ ಬುತ್ತಿಯಂತೆ. ಆದರೆ ಅದರ ಜತೆ ವಿಮರ್ಶಾತ್ಮಕ ಒಟನಾಟ ಮಾಡುತ್ತಿದ್ದಂತೆ, ತಿಳುವಳಿಕೆಗೆ ನಾವೂ ಸೇರಿಸುವುದಿದೆ ಎಂದು ಹೊಳೆಯತೊಡಗುತ್ತದೆ. ಇಂತಹ ಕಸುವನ್ನು ಕೆಲವಾದರೂ ಯುವಕರು ತೋರುತ್ತಿದ್ದಾರೆ ಎನ್ನುವುದು ನೆಮ್ಮದಿಯ ಸಂಗತಿ.

2 ಕಾಮೆಂಟ್‌ಗಳು:

Manik Bhure ಹೇಳಿದರು...

Janapada mattu samshodhane bagge arun avrige iruva tudita jotege
Rahamath sir avr sath..va..kya..baat..hai.
-Manik Bhure-9845429001

ಅನಾಮಧೇಯ ಹೇಳಿದರು...

Sandarshana chennagide. Rahamath sir avaru jaanapada university rupisuva bagge innastu bareyabekide. -siddarth,mysore