ಶುಕ್ರವಾರ, ಜುಲೈ 22, 2011

ಮಣ್ಣಿನ ಬಸವನ ಹೊತ್ತವರು..

-ಅರುಣ್




ಮೊನ್ನೆ ಕಮಲಾಪುರದ ಓಣಿಯಲ್ಲಿ ಆರೇಳು ಹುಡುಗುರು, ತಲೆಯ ಮೇಲೆ ಮಣ್ಣಿನಿಂದ ಮಾಡಿದ ಬಸವಣ್ಣನನ್ನು ಮಾಡಿಕೊಂಡು ಹಾಡೇಳುತ್ತಾ, ನೀರು ಹಾಕಿಸಿಕೊಳ್ಳುತ್ತಾ, ಬಸವ ಬಸವ ಬಂದಾನ ಎನ್ನುವ ಹಾಡು ಹೇಳುತ್ತಾ ಬರುತ್ತಿದ್ದರು. ಅವರನ್ನು ನೋಡಿದಾಕ್ಷಣ ನಾವು ಬಾಲ್ಯದಲ್ಲಿ ಮಾಡುತ್ತಿದ್ದ ಗುರ್ಜವ್ವನ ನೆನಪಾಯಿತು.

ನಮಗಾಗ ಗುರ್ಜವ್ವನನ್ನು ಮಾಡುವ ಸಂಭ್ರಮ. ಸೆಗಣಿಯಿಂದ ಐದು ಗುರ್ಜವ್ವನ ಮೂರ್ತಿ ಮಾಡಿಕೊಂಡು, ಅದಕ್ಕೆ ಗರಿಕೆ, ತಂಗಡಕಿ ಹೂ ಸಿಕ್ಕಿಸಿಕೊಂಡು, ಹರಿಷಿಣ ಕುಂಕುಮ ಹಚ್ಚಿಕೊಂಡು ಮಣೆ ಮೇಲೆ ಇಟ್ಟುಕೊಂಡು ಗುರ್ಜವ್ವನನ್ನು ಮಾಡುತ್ತಿದ್ದೆವು. ಗುರ್ಜಿ ಹೋರುವವರೊಬ್ಬರನ್ನು ಆಯ್ಕೆ ಮಾಡುತ್ತಿದ್ದೆವು. ಹಾಗೆ ಹೊತ್ತವನ ಹಿಂದೆ ಸುಮಾರು ಮುವತ್ತಕ್ಕಿಂತ ಹೆಚ್ಚು ಹುಡುಗರು ಹುಯ್ಯೋ ಎನ್ನುವ ಕೇಕೆ ಹಾಕಿಕೊಂಡು ಮನೆಮನೆಗೆ ಹೋಗುತ್ತಿದ್ದೆವು. ಹಾಗೆ ಮನೆ ಮನೆಗೆ ಹೋದಾಗ ಮನೆಯವರು ಗುರ್ಜಿ ಹೊತ್ತವನ ಮೇಲೆ ನೀರು ಹಾಕುತ್ತಿದ್ದರು, ಹೊತ್ತವ ನೀರು ಹಾಕಿದಂತೆ ತಿರುಗುತ್ತಿದ್ದನು. ಆಗ ನೀರು ಚೆಲ್ಲನೆ ಸುತ್ತಲೂ ಚೆಲ್ಲಿ ಮಳೆಯ ನೆನಪನ್ನು ತರುತ್ತಿತ್ತು. ಒಂಬತ್ತು ದಿನಗಳ ಕಾಲ ಹೀಗೆ ಮನೆ ಮನೆಗೆ ಹೋಗಿ ನೀರು ಹಾಕಿಸಿಕೊಂಡು, ಗುರ್ಜಿಯ ಹಾಡನ್ನು ರಾಗಬದ್ದವಾಗಿ ಹಾಡುತ್ತಿದ್ದೆವು.

ಗುರ್ಜವ್ವ ಗುರ್ಜವ್ವಾ ಎಲ್ಯಾಡಿಬಂದೆ
ನೀರಿಲ್ಲತ್ತಾಗ ನಿಂತಾಡಿ ಬಂದೆ
ಸುರಿಯೋ ಸುರಿಯೋ ಮಳ್ರಾಯೋ.. ಮಳ್ರಾಯಾ..||

ಮಳೆರಾಯ್ನ ಹೆಂಡ್ತಿ ಏನ್ ಹಡದ್ಲು, ಗಂಡು ಹಡದ್ಲು..
ಗಂಡಿನ್ ತೆಲಿಗೆ ಎಣ್ಣಿಲ್ಲ ಬೆಣ್ಣಿಲ್ಲ
ಸುರಿಯೋ ಸುರಿಯೋ ಮಳ್ರಾಯೋ.. ಮಳ್ರಾಯಾ..||


ಬೆತ್ತಲೆಯಾಗಿದ್ದ ಗುರ್ಜಿ ಹೊತ್ತವನನ್ನು ಉಳಿದ ಹುಡುಗರು ಕಿಚಾಯಿಸುವುದು ನಡೆಯುತ್ತಿತ್ತು. ಹೀಗೆ ಮನೆಮನೆಯಲ್ಲಿ ಜೋಳ,ರಾಗಿ,ನವಣಕ್ಕಿ, ನೆಲ್ಲಕ್ಕಿ, ಬೇಳೆ, ಉಣಸೆ ಹಣ್ಣು, ಬೆಲ್ಲ, ಉಳ್ಳಿ, ಅಲಸಂದಿ,ಮಡಕಿಕಾಳು, ಹಿಟ್ಟು ಮುಂತಾದವುಗಳನ್ನು ಸಂಗ್ರಹಿಸಿ, ಕೊನೆ ದಿನ ಕಡುಬು ಅನ್ನ ಸಾಂಬಾರು ಮಾಡಿಕೊಂಡು, ಹಳ್ಳಕ್ಕೆ ಹೋಗಿ ಗುರ್ಜಿಯನ್ನು ಬಿಟ್ಟು ಕಡುಬು ತಿಂದು ನಾವುಗಳೆಲ್ಲಾ ಓಡೋಡಿ ಬರುತ್ತಿದ್ದೆವು. ಆಗ ಗುರ್ಜಿ ಹೊತ್ತವ ಕೋಲು ಹಿಡಿದು ನಮ್ಮನ್ನು ಹೊಡೆಯಲು ಬೆನ್ನಟ್ಟಿ ಬರುತ್ತಿದ್ದನು. ಒಮ್ಮೆಮ್ಮೆ ಹೀಗೆ ನಾವುಗಳೆಲ್ಲಾ ಓಡಿ ಮನೆ ಮುಟ್ಟುವ ಹೊತ್ತಿಗೆ ಕಾಕತಾಳೀಯವೆನ್ನುವಂತೆ ಮಳೆ ಬರುವ ಪ್ರಸಂಗಗಳು ನಡೆಯುತ್ತಿದ್ದವು. ಆಗ ಹಳ್ಳಿಗರು ಗುರ್ಜಿ ಮಾಡಿದ್ರಿಂದ ಮಳೆ ಬಂತು ಎಂದು ಸಂಭ್ರಮಿಸುತ್ತಿದ್ದರು. ‘ಮಕ್ಲು ಗುರ್ಜಿ ಹೊತ್ರ ಮಳಿರಾಯ ಬರದಂಗ ಇರತಾನ’ ಎಂದು ಪ್ರೀತಿಯಿಂದಲೇ ಮಳೆರಾಯನನ್ನು ಕೊಂಡಾಡುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಗುರ್ಜಿ ಹೋರುವ ಪದ್ದತಿ ಇದೆ. ಮೊದಲಿನ ಲವಲವಿಕೆ, ಆಪ್ತತೆ ಸ್ವಲ್ಪಮಟ್ಟಿಗೆ ಕಡಿಮೆಯಾದಂತಿದೆ.

ಕಮಲಾಪುರದ ಹುಡುಗರ ಆಚರಣೆಯು ಗುರ್ಜವ್ವನಂತೆಯೇ ಇದ್ದರೂ, ಅವರು ಬಸವಣ್ಣನನ್ನು ಹೊತ್ತಿದ್ದರು. ಇದು ಮಣೆಣೆತ್ತಿನ ಅಮವಾಸ್ಯೆಯಲ್ಲಿ ಮಾಡುವ ಒಂದು ಆಚರಣೆ. ಮಣ್ಣಿನ ಬಸವನನ್ನು ಮಾಡಿಕೊಂಡು, ಮಣೆಯ ಮೇಲೆ ಕೂರಿಸಿಕೊಂಡು ‘ಬಸವ ಬಸವ ಬಂದಾನೆ’ ಎನ್ನುವ ಪದವನ್ನು ಹಾಡಿಕೊಂಡು ಮನೆ ಮನೆಗೆ ಹೋಗಿ ದವಸ ಧಾನ್ಯವನ್ನು ನೀಡಿಸಿಕೊಂಡು ಬರುತ್ತಾರೆ. ಈ ಬಸವ ಕೂಡ ಮಳೆಯನ್ನು ಕರೆಯುವವನೆ. ಹಾಗಾಗಿ ಈ ಆಚರಣೆ ಗುರ್ಜಿಯ ಆಚರಣೆಯನ್ನೇ ಹೋಲುವಂತಹದ್ದು. ಕಮಲಾಪುರದ ಈ ಹುಡುಗರನ್ನು ಮಾತಿಗೆಳೆದೆ. ಜಗದೀಶ, ಗಜೇಂದ್ರ, ಅಕ್ಷಯ ಕುಮಾರ, ಪ್ರವೀಣ್, ಕಾಳಿದಾಸ ಇವರುಗಳೆಲ್ಲಾ ನಾಲ್ಕರಿಂದ ಹತ್ತನೆ ತರಗತಿಯಲಿ ಓದುವ, ಸರಕಾರಿ ಶಾಲೆಯ ಹುಡುಗರು. ವಿಶೇಷ ಅಂದರೆ ಇವರೆಲ್ಲಾ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಮಕ್ಕಳು. ಗುರ್ಜಿಯನ್ನು ಮಾಡುವಾಗ ಎಲ್ಲಾ ಜಾತಿಯ ಹುಡುಗರು ಇರುತ್ತಿದ್ದರು. ಆದರೆ ಬಸವಣ್ಣನನ್ನು ಹೋರಲು ಒಂದೇ ಜಾತಿಯ ಹುಡುಗರು ಹೋರುತ್ತಿದ್ದುದ ಕಂಡು ಯಾಕೆ ಹೀಗೆ ಎಂದು ಅರ್ಥವಾಗಲಿಲ್ಲ. ಮಕ್ಕಳಲ್ಲೂ ಜಾತಿಯ ವಿಂಗಡಣೆಯಾಯಿತೆ ಎಂದು ಒಂದು ಕ್ಷಣ ಭಯವಾಯಿತು.



‘ಊರಲ್ಲಿ ಎಲ್ಲರ ಮನೆಗಳಿಗೂ ಹೋಗುತ್ತೀರಾ ?’ ಎಂದು ಕೇಳಿದೆ. ಅದರಲ್ಲಿ ಬಸವನನ್ನು ಹೊತ್ತ ಕಾಳಿದಾಸ ಎನ್ನುವ ಹುಡುಗ ‘ಸಾಬರ ಮನೆಗೆ ಮಾತ್ರ ಹೋಗಲ್ರಿ’ ಎಂದನು. ‘ಮೊದಲಿಂದಲೂ ಹೋಗೋದಿಲ್ವಾ ಈಗ ಮಾತ್ರ ಹೋಗಲ್ವಾ’ ಎಂದೆ. ಆಗ ‘ಇಲ್ರಿ ಮೊದ್ಲು ಹೋಗ್ತಿದ್ವಿ ಈಗ ಹೋಗಲ್ಲ’ ಎಂದನು. ‘ಯಾಕೆ ಹೋಗಲ’ ಎಂದೆ, ಆಗ ಆ ಹುಡುಗ ‘ಒಮ್ಮೆ ಸಾಬರ ಮನೆಗೆ ಹೋದಾಗ ಸಾಬರ ಹೆಣ್ಮಗಳು ಬೈದಿದ್ರು..ರಿ ಅದಕ್ಕ ಹೋಗಲ್ಲ’ ಎಂದ. ತಕ್ಷಣ ಹತ್ತನೆ ತರಗತಿಯಲ್ಲಿ ಓದುತ್ತಿದ್ದ ಗಜೇಂದ್ರ ನನ್ನ ಜತೆ ಮಾತಾಡುತ್ತಿದ್ದ ಹುಡುಗನಿಗೆ ಚಿವುಟಿ..‘ಇಲ್ರಿ ನಾವು ಎಲ್ರು ಮನೆಗೂ ಹೋಗ್ತೀವಿ.. ಯಾರ ಮನಿನೂ ಬಿಡಲ್ಲ’ ಅಂದ. ಆಗ ಅವನು ಆ ಹುಡುಗರಿಗೆ ಕಿವಿ ಮಾತಿನಂತೆ ‘ಆ ಅಣ್ಣರು ಪೇಪರಿನ್ಯಾಗ ಬರೀತಾರ ಅವರಿಗೆ ನಾವು ಸಾಬರ ಮನೆಗೆ ಹೋಗಲ್ಲ ಅಂತ ಹೇಳಬಾರ‍್ದಲೆ’ ಎಂದನು. ಇದನ್ನು ನೋಡಿ ನಾನು ಆ ವಿಷಯವನ್ನು ಮಟುಕುಗೊಳಿಸಿದೆ. ಮಾತು ಬದಲಿಸಿ ‘ಈಗ ಮನೆಯಲ್ಲಿ ಏನೇನಿ ನೀಡಿಸಿಕೊಳ್ಳುತ್ತೀರಿ’ ಎಂದೆ. ಆಗ ಅವರಲ್ಲೊಬ್ಬ ‘ಬರೀ ಅಕ್ಕಿ, ರೊಕ್ಕ ಎರಡಾರೀ’ ಅಂದ. ನಾನು ಜೋಳ ರಾಗಿ ಬೇಳೆ ಇವ್ಯಾವನ್ನೂ ನೀಡಿಸ್ಕೊಳ್ಳಲ್ವಾ ? ಎಂದೆ . ಪ್ರವೀಣ್ ಎನ್ನುವ ಹುಡುಗ ‘ಸಾರ್..ಈಗ ಜೋಳ ರಾಗಿ ಯಾರು ಉಣ್ತಾರ ಸಾ..ಮೊದ್ಲು ನೀಡಿಸ್ಕಳ್ತಿದ್ವಿ ಈಗ ಆವ್ಯಾವನ್ನು ನೀಡಿಸ್ಕೊಳ್ಳಲ್ಲ’ ಎಂದು ಮುಗ್ದವಾಗಿಯೇ ಹೇಳಿದ.

ಇದು ಬದಲಾದ ಆಹಾರ ಕ್ರಮದ ಬಗ್ಗೆ ಮಕ್ಕಳು ತುಂಬಾ ಸೂಕ್ಷ್ಮವಾಗಿ ನೀಡಿದ ಪ್ರತಿಕ್ರಿಯೆಯಂತಿತ್ತು. ನಂತರ ನೀವ್ಯಾಕೆ ಬರಿ ಸರಕಾರಿ ಸಾಲಿ ಹುಡುಗ್ರಾ ಬಂದೀರಿ? ಕಾನ್ವೆಂಟ್‌ಗೆ ಹೋಗೋ ಇಂಗ್ಲೀಷ್ ಮೀಡಿಯಂ ಹುಡುಗ್ರು ನಿಮ್ಮ ಜತೆ ಬರಲ್ವಾ ಎಂದೆ. ‘ಇಲ್ರಿ..ಇಂಗ್ಲೀಸ್ ಮೀಡಿಯಂ ಹುಡುಗ್ರಿಗೆ ಜಾಸ್ತಿ ಹೋಮ್ ವರ್ಕ ಕೊಡ್ತಾರಲ್ಲ, ಅದುಕಾ ಅವರು ಬರೋದಿಲ್ಲ. ಅವರು ಬಂದರು ಮನಿಯವರು ಕಳಸಲ್ಲ’ ಎಂದ. ನನಗೆ ಜನಪದ ಆಚರಣೆ ಕೇವಲ ಸರ್ಕಾರಿ ಶಾಲಾ ಮಕ್ಕಳಿಂದ ಮಾತ್ರ ಉಳಿತಿರೋ ಹಾಗನ್ನಿಸಿತು. ಕೊನೆಗೆ ಆ ಹುಡುಗರು ಬಸವ ಬಸವ ಬಂದಾನ ಎನ್ನುವ ಹಾಡು ಹೇಳಿದರು.




ಬಸವ ಬಸವ ಬಂದಾನ
ಜ್ವಾಳ ಫಲವ ಹಾಕ್ಯಾನ
ಸಜ್ಜಿ ಫಲವ ಹಾಕ್ಯಾನ
ರಾಗಿ ಫಲವ ಹಾಕ್ಯಾನ
ಜ್ವಾಳ ಫಲವ ಹಾಕ್ಯಾನ
ಗೋದಿ ಫಲವ ಹಾಕ್ಯಾನ
ತೊಗರಿ ಫಲವ ಹಾಕ್ಯಾನ॒
ಬಸವೇನಂದ..ಮಳಿ ಬರಲೆಂದ ||



ಎಂದು ಹಾಡು ಹೇಳಿದ ಹುಡುಗರು ಸಾರ್..ಪೇಪರಿನಾಗ ನನ್ನ ಫೋಟೋ ಹಾಕ್ರಿ ಎಂದ. ಇನ್ನೊಬ್ಬ ರೀ ಇಷ್ಡೆಲ್ಲಾ ಕೇಳೀರಿ ಹತ್ರುಪಾಯದ್ರು ಕೊಡ್ರಿ..ಅಂದ. ಸರಿನಪ್ಪ ಅಂತೇಳಿ ಹತ್ತು ರುಪಾಯಿ ಕೊಟ್ಟು, ಕಡುಬು ಮಾಡೋ ದಿನ ಮರಿಬ್ಯಾಡ್ರೋ ನನ್ನು ಕರೀರಿ ನಾನು ಬರ್ತೀನಿ ಅಂದೆ. ಆಗ್ಲಿ ರೀ ಕರೀತಿವಿ ಬರಾಕು ನೋಡ್ರಿ ಅಂತೇಳಿ ಮಣ್ಣಿನ ಬಸವನ ಹೊತ್ತ ಹುಡುಗರು ಮುಂದಿನ ಮನೆಗೆ ಹೋದರು..

ಕಾಮೆಂಟ್‌ಗಳಿಲ್ಲ: