ಸೋಮವಾರ, ಜುಲೈ 25, 2011

ಡಾ.ಟಿ.ಆರ್. ಚಂದ್ರಶೇಖರ್ ಅವರೊಂದಿಗೆ ಮಾತುಕತೆಡಾ.ಟಿ.ಆರ್. ಚಂದ್ರಶೇಖರ್ ಅವರು ಅಭಿವೃದ್ಧಿ ಅಧ್ಯಯನಗಳನ್ನು ಕರ್ನಾಟಕದ ಪ್ರಾದೇಶಿಕ ಅಭಿವೃದ್ಧಿಯ ನೆಲೆಯಲ್ಲಿ ನಿರ್ವಚಿಸುತ್ತಿರುವವರಲ್ಲಿ ಪ್ರಮುಖರು. ಇವರು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಈ ನಾಡಿನ ಎಲ್ಲ ಬಗೆಯ ಆತಂಕಕಾರಿ ಬೆಳವಣಿಗೆಗೆ ಭಿನ್ನವಾಗಿ ದ್ವನಿಯಾಗುತ್ತಿರುವವರು. ನಮ್ಮಂಥಹ ಯುವ ಸಮುದಾಯವನ್ನು ನಾಚಿಸುವಂತೆ ದಣಿವರಿಯದೆ ನಿರಂತರ ದುಡಿಮೆಯಲ್ಲಿ ತೊಡಗಿಸಿಕೊಂಡ ವಿದ್ವಾಂಸರು. ವಚನ ಚಳವಳಿಯನ್ನು, ಪ್ರಾದೇಶಿಕ ಅಸಮಾನತೆಯನ್ನು, ಬಡಜನರ ಶೋಚನೀಯ ಸ್ಥಿತಿಗಳನ್ನು ಅಭಿವೃದ್ಧಿ ಅಧ್ಯಯನದ ವಿಧಾನಗಳಲ್ಲಿ ಭಿನ್ನವಾಗಿ ಎದುರುಗೊಳ್ಳುತ್ತಿರುವವರು. ಕನ್ನಡ ವಿಶ್ವವಿದ್ಯಾಲಯದ ದೇಸಿ ಆಲೋಚನ ಕ್ರಮವನ್ನು ಅಭಿವೃದ್ಧಿ ಅಧ್ಯಯನಗಳ ಮೂಲಕ ಹೊಸ ನೆಲೆಗಟ್ಟನ್ನು ಕೊಡಲು ಶ್ರಮಿಸುತ್ತಿರುವವರು. ಅವರ ಬರಹಗಳಲ್ಲಿರುವ ಪ್ರಭುತ್ವದ ವಿರುದ್ಧದ ಕಿಡಿಗಳು ನನ್ನಂಥವರಿಗೆ ಹೊಸ ಬೆಳಕಾಗುತ್ತಿವೆ. ಅವರು ಜಾನಪದ ಅಧ್ಯಯನ, ಅನ್ವಯ, ಮತ್ತು ಸದ್ಯದ ಮುಖಾಮುಖಿ ಕುರಿತಂತೆ ಒಳನೋಟಗಳಿರುವ ಮಾತುಕತೆ ಇಲ್ಲಿದೆ. ಈ ಮಾತುಕತೆಯಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡ ಅವರಿಗೆ ಕನ್ನಡ ಜಾನಪದ ಬ್ಲಾಗ್ ಪರವಾಗಿ ಧನ್ಯವಾದಗಳುಅರುಣ್: ಸಾರ್ ಇಂದು ಅಭಿವೃದ್ಧಿ ಎನ್ನುವ ಪದವೇ ಬಂಡವಾಳಶಾಹಿಗಳ ಪರವಾದ ಪದ ಎನ್ನುವಂತಿರುವ ಈ ಹೊತ್ತಲ್ಲಿ ಅದೇ ಪದವನ್ನು ಜನಸಾಮಾನ್ಯರ ಒಳಿತಿನ ಅಭಿವೃದ್ಧಿಯ ನೆಲೆಯಲ್ಲಿ ಹೊಸ ಅರ್ಥವನ್ನು ಕೊಡುತ್ತಿದ್ದೀರಿ. ಈ ನೆಲೆಯಲ್ಲಿ ನೀವು ಜಾನಪದವನ್ನು ಹೇಗೆ ಅರ್ಥೈಸಲು ಪ್ರಯತ್ನಿಸುತ್ತೀರಿ?

ಡಾ.ಟಿ.ಆರ್.ಸಿ: ನಿಜ, ಅಭಿವೃದ್ಧಿ ಎಂಬ ನುಡಿಯು ಬಂಡವಾಳಶಾಹಿ-ಪರವಾದುದು. ಅದರಿಂದ ಅದನ್ನು ರಕ್ಷಿಸುವುದು ಹೇಗೆ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ. ಹೊಸ ಅರ್ಥ ಮಾತ್ರವಲ್ಲ. ಅದಕ್ಕೆ ಹೊಸ ಸಿದ್ಧಾಂತವನ್ನೇ ರೂಪಿಸಬೇಕಾಗಿದೆ. ಬಹಳ ಮುಖ್ಯವಾದ ಸಂಗತಿಯೆಂದರೆ ಅಭಿವೃದ್ಧಿಯನ್ನು ಸ್ಥಳೀಯತೆಗೆ ನಿಷ್ಠವನ್ನಾಗಿ ಮಾಡಬೇಕು. ಅದು ಪ್ರಧಾನವಾಗಿ ಪ್ರದೇಶ-ನಿರ್ದಿಷ್ಟವಾಗಿರಬೇಕು. ಆಗ ಸಹಜವಾಗಿ ಅದು ಸ್ಥಳಿಯ ಕಲೆ, ಕಾಯಕ, ದುಡಿಮೆ, ಸಂಪನ್ಮೂಲ, ಕಸುಬುದಾರಿಕೆ, ವಾಸ್ತು, ಸಂಸ್ಕೃತಿ ಹೀಗೆ ಎಲ್ಲವನ್ನೂ ಒಳಗೊಳ್ಳುವಂತಾಗುತ್ತದೆ. ಜಾನಪದವೆಂಬುದು ನನಗೆ ತೋರಿದಂತೆ ಸ್ಥಳಿಯ ಬದುಕನ್ನು ಕುರಿತ ಅಧ್ಯಯನ. ಸ್ಥಳೀಯ ತಂತ್ರಜ್ಞಾನ, ಸ್ಥಳೀಯ ಸಂಪನ್ಮೂಲ, ಸ್ಥಳೀಯ ಬಂಡವಾಳ, ಸ್ಥಳೀಯ ಕುಶಲತೆ, ಸ್ಥಳೀಯ ಶಿಕ್ಷಣ, ಸ್ಥಳೀಯ ಮನೆ ಕಟ್ಟುವ ತಂತ್ರ, ಜಾನುವಾರುಗಳನ್ನು ಸಾಕುವ ಕ್ರಮ ಮುಂತಾದವುಗಳನ್ನು ಕುರಿತ ಅಧ್ಯಯನವನ್ನು ನಾನು ಜಾನಪದ ಅಧ್ಯಯನವೆಂದು ಕರೆಯಲು ಇಷ್ಟಪಡುತ್ತೇನೆ. ಇಲ್ಲಿ ಒಂದು ಎಚ್ಚರ: ಸ್ಥಳಿಯತೆ ಎಂದಾಗ ಅದು ಬಾಹ್ಯದಿಂದ ಸಂಪೂರ್ಣವಾಗಿ ಪ್ರತ್ಯೇಕಗೊಂಡಿರಬೇಕಿಲ್ಲ. ವಿಶ್ವಾತ್ಮಕತೆ(ಅಖಂಡತೆ) ಮತ್ತು ವಿಶಿಷ್ಟತೆಗಳನ್ನು(ಖಂಡ ನೆಲೆಗಟ್ಟು) ಹೇಗೆ ಸಂಯೋಜಿಸಿಕೊಳ್ಳಲಾಗುತ್ತದೆ ಎಂಬುದು ಇಲ್ಲಿ ಮುಖ್ಯ. ಮತ್ತೊಂದು ಎಚ್ಚರವನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು: ಅದೇನೆಂದರೆ ನಮ್ಮ ಜಾನಪದ ಎಂಬುದು ಅನೇಕ ಅಮಾನವೀಯ ಸಂಗತಿಗಳನ್ನು ಕಾಲಕ್ರಮೇಣ ಬೆಳೆಸಿಕೊಂಡು ಬಿಟ್ಟಿದೆ. ಅವುಗಳ ಬಗ್ಗೆ ನಾವು ಜಾಗೃತರಾಗಿರಬೇಕು. ಸ್ವ-ವಿಮರ್ಶೆ/ಆತ್ಮ-ನಿರೀಕ್ಷಣೆ ಎಂಬುದು ಇಂದಿನ ಅಧ್ಯಯನಗಳ ಮೂಲದಲ್ಲಿರಬೇಕಾದ ಒಂದು ಸಂಗತಿ. ಪರಂಪರೆಯ ವೈಭವೀಕರಣವಾಗಲಿ ಅಥವಾ ಆಧುನಿಕತೆ ಬಗ್ಗೆ ವಿಮರ್ಶಾ-ರಹಿತ ಸ್ವೀಕರಣೆಯಾಗಲಿ ಅಪೇಕ್ಷಣೀಯವಲ್ಲ.


ಅರುಣ್: ಸಾರ್, ನೀವು ನಿಮ್ಮ ಬರಹಗಳು ಬಹುಪಾಲು ಕ್ಷೇತ್ರ ಕಾರ್ಯ ಮತ್ತು ಸರಕಾರದ ಯೋಜನೆಯ ವಾಸ್ತವದ ಅನುಷ್ಠಾನದ ನೆಲೆಯಲ್ಲಿ ಆಲೋಚಿಸುತ್ತಿದ್ದೀರಿ. ಹಾಗಾಗಿ ಜಾನಪದ ವೃತ್ತಿ ಮತ್ತು ನಂಬಿಕೆಯ ಜಗತ್ತನ್ನು ಆಧರಿಸಿ ಅಭಿವೃದ್ದಿ ಯೋಜನೆಗಳನ್ನು ರೂಪಿಸಲು ಸಾದ್ಯವೆ?

ಡಾ..ಟಿ.ಆರ್.ಸಿ: ಜಾನಪದ ಅಧ್ಯಯನ ಎಂದರೆ ಅದು ಇನ್ವೆರಿಯಬಲಿ ಕ್ಷೇತ್ರ ಅಧ್ಯಯನವೇ ಆಗಿರುತ್ತದೆ. ಅದಕ್ಕೆ ಬೇರೆ ಬದಾರಿಯೇ ಇಲ್ಲ. ಜಾನಪದ ವೈದ್ಯ, ಜಾನಪದ ಆಟಗಳು, ಜಾನುವಾರುಗಳ ಸಾಕಣಿಕೆ, ಜಾನಪದ ಕರಕುಶಕಕಲೆ, ಮಹಿಳೆಯರ ಜಾನಪದ ಹಸೆಯ ಕಲೆ, ಸ್ಥಳಿಯ ತಿನುಸುಗಳನ್ನು ಸಿದ್ದಪಡಿಸುವುದು, ಕೃಷಿ, ಮೀನುಗಾರಿಕೆ, ಕೋಳಿ ಸಾಕಣಿಕೆ, ಹಂದಿ ಸಾಕಣಿಕೆ ಇತ್ಯಾದಿ ಇತ್ಯಾದಿ ಸಂಗತಿಗಳನ್ನು ಒಳಗು ಮಾಡಿಕೊಂಡು ಜಾನಪದ ಅಧ್ಯಯನಗಳನ್ನು ನಡೆಸಬಹುದು. ನನ್ನನ್ನು ಹೀಗೆ ಒಂದೇ ಸಾರಿ ಜಾನಪದವನ್ನು ಆದರಿಸಿಕೊಂಡು ಅಭಿವೃದ್ಧಿ ಯೋಜನೆಗಳನ್ನು ತಿಳಿಸಿ ಎಂದರೆ ಸಾಧ್ಯವಾಗುವುದಿಲ್ಲ. ಅದನ್ನು ನಾನು ಕೂಡ ಅಧ್ಯಯನ ಮಾಡಬೇಕು.

ಈಗ ಏನಾಗಿದೆಯೆಂದರೆ ಜಾನಪದವನ್ನು ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಹಾಗೂ ಅವುಗಳ ಕೃಪಾಪೋಷಿತ ಸಂಸ್ಥೆಗಳು ವಸ್ತು ಸಂಗ್ರಹಾಲಯದ ಸಂಗತಿಗಳನ್ನಾಗಿ ನೋಡುವ ಕ್ರಮವನ್ನು ಬೆಳೆಸಿಬಿಟ್ಟಿದ್ದಾರೆ. ಜಾನಪದ ಕಲಾವಿದರನ್ನು ಒಂದು ವಿಧದಲ್ಲಿ ‘ನಮ್ಮಿಂದ ಬದುಕುವವರು’ ಎನ್ನುವಂತೆ ಕಾಣಲಾಗುತ್ತಿದೆ. ಅಲ್ಲಿ ‘ಘನತೆ’ ಎಂಬುದು ಗೈರುಹಾಜರಾಗಿ ಬಿಟ್ಟಿದೆ. ಇದನ್ನು ಅಮರ್ತ್ಯ, ಚಟರ್ಜಿ `Patient Approach' ಅಂತಾ ಕರೆಯುತ್ತಾನೆ. ಇಲ್ಲಿ ಅಗತ್ಯವಾಗಿರುವುದು`Agency Approach'. ಜನಪದರು ತಮ್ಮನ್ನು ತಾವು ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಂಡು ಬದುಕುವಂತೆ ಮಾಡಬೇಕು. ಅವರನ್ನು ಈಗ ಪರಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಅವರು ಸದಾ ನಮ್ಮ ಕೃಪೆಯಲ್ಲಿರಬೇಕು ಎಂದು ತಿಳಿಯುವುದಿದೆಯ್ಲಾ ಅದು ಅತ್ಯಂತ ಅಪಾಯಕಾರಿ. ಅದು ಅಭಿವೃದ್ಧಿಯಲ್ಲ.


ಅರುಣ್: ಜಾನಪದ ಅಧ್ಯಯನಗಳನ್ನು ಅಭಿವೃದ್ಧಿ ಅಧ್ಯಯನ ವಿಧಾನಗಳ ಮೂಲಕ ಅಂತರ್ ಶಿಸ್ತೀಯ ಅಧ್ಯಯನ ಮಾಡಲು ಸಾದ್ಯವೆ? ಹಾಗಿದ್ದಲ್ಲಿ ಒಂದೆರಡು ಸಲಹೆಗಳನ್ನು ಕೊಡಿ.

ಡಾ..ಟಿ.ಆರ್.ಸಿ: ಇದಕ್ಕೆ Anthropology ಯ ತರಬೇತಿ, ಸೈದ್ಧಾಂತಿಕ ತಿಳುವಳಿಕೆ, ವ್ಯಾಪಕ ಅಧ್ಯಯನ ಬೇಕು. ನಮಗೆ ಇಷ್ಟವಿರಲಿ ಇಲ್ಲದಿರಲಿ ಇಂಗ್ಲೀಷ್ ಭಾಷೆಯ ಅಗತ್ಯವಿದೆ. ಈಗ ನಮ್ಮಲ್ಲಿ ಅಭಿವೃದ್ಧಿ ಅಧ್ಯಯನ ಎಂದರೆ ಉತ್ಪಾದನೆ, ಹಣ, ಬ್ಯಾಂಕು ಮುಂತಾದ ಸಂಗತಿಗಳಿಗೆ ಮೀಸಲಾದುದು ಮತ್ತು ಜಾನಪದವು ಭಾವುಕವಾದ ಸಂಗತಿಗಳಿಗೆ ಸಂಬಂಧಿಸಿದುದು ಎಂಬ ನಂಬಿಕೆ ಹಬ್ಬಿ ಬಿಟ್ಟಿದೆ. ಇದು ಹೋಗಬೇಕು. ಈ ಬಗೆಯ ರಿಸ್ಕಿಗೆ, ಸಾಹಸಕ್ಕೆ ನಾವು ಸಿದ್ದವಿದ್ದೇವೆಯೇ? ಇದು ಮಿಲಿಯನ್ ಡಾಲರ್ ಪ್ರಶ್ನೆ.

ಅರುಣ್: ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಅಭಿವೃದ್ದಿ ಅಧ್ಯಯನ ವಿಭಾಗದ ಚಿಂತಕರಾದ ನೀವು ಜಾನಪದ ವಿವಿಯ ಮೊದಲ ಆದ್ಯತೆಯ ಕೆಲಸಗಳು ಏನಾಗಿರಬೇಕು, ನಿಮ್ಮ ಕನಸಿನ ಜಾನಪದ ವಿವಿ ಹೇಗಿರುತ್ತೆ?

ಡಾ.ಟಿ.ಆರ್.ಸಿ:
೧. ಅಲ್ಲಿ ಮೊದಲು Anthropology ವಿಭಾಗವನ್ನು ಆರಂಭಿಸಬೇಕು. ಪ್ರತಿ ವಿಭಾಗದಲ್ಲಿ ಸಮಾಜಶಾಸ್ತ್ರದ ತಜ್ಞರು ಇರಬೇಕು. ಅಧ್ಯಯನ ವಿಧಾನದ ಬಗ್ಗೆ ಹೆಚ್ಚು ಮಹತ್ವ ನೀಡಬೇಕು.
೨. ಅಲ್ಲಿ ಸೇರುವವರೆಲ್ಲರಿಗೂ ಇಂಗ್ಲೀಷನ ಜ್ಞಾನ ಇರಲೆಬೇಕೆಂದೇನಿಲ್ಲ. ಆದರೆ ಜಾನಪದ ವಿವಿಯು ತನ್ನಲ್ಲಿ ಒಂದು ಪೂರ್ಣ ಪ್ರಮಾಣದ ಇಂಗ್ಲೀಷ್ ವಿಭಗವನ್ನು ಆರಂಭಿಸಬೇಕು. ಅಲ್ಲಿ ಅಧ್ಯಯನ ನಡೆಯಬೇಕಾಗಿಲ್ಲ. ಅಲ್ಲಿ ವಿದ್ವಾಂಸರಿಗೆ Functional English ತರಬೇತಿ ನೀಡಬೇಕು.
೩. ಒಂದು ತಿಂಗಳ, ಒಂದು ವರ್ಷದ ಅಧ್ಯಯನಗಳಿಗೆ ಪ್ರತಿಯಾಗಿ ದೀರ್ಘಕಾಲೀನ ಅಧ್ಯಯನಗಳನ್ನು ಅದು ಪ್ರೋತ್ಸಾಹಿಸಬೇಕು.
೪. ಮಹಿಳಾ ಜಾನಪದ ಅಧ್ಯಯನ ವಿಭಾಗವನ್ನು ಅದು ಅರಂಭಿಸಬೇಕು.
೫. ಜನಪದ ಆಚರಣೆಗಳನ್ನು ಗಣ್ಯರನ್ನು ಬರಮಾಡಿಕೊಳ್ಳುವುದಕ್ಕೆ, ವೈಭವೀಕರಣಕ್ಕೆ, ಬಳಸಿಕೊಳ್ಳಬಾರದು.

3 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಟಿ.ಆರ್.ಸಿ ಅವರ ಜಾನಪದ ಕುರಿತ ಮಾತುಗಳು ತುಂಬಾ ಉಪಯುಕ್ತವಾಗಿವೆ. ಹೀಗೆ ಜಾನಪದವನ್ನು ಬೇರೆ ಬೇರೆ ಶಿಸ್ತಿನ ಅಧ್ಯಾಪಕರು, ಚಿಂತಕರು ಬೇರೆ ಬೇರೆ ನೆಲೆಗಳಲ್ಲಿ ಗುರುತಿಸಲು ಪ್ರಯತ್ನಿಸಿದರೆ, ಜಾನಪದ ಅಧ್ಯಯನಕ್ಕೆ ಹೊಸ ತಿರುವು ಸಿಗಬಹುದು. ಟಿ.ಆರ್.ಸಿ ಅವರು ಜಾನಪದ ಕಲಾವಿದರನ್ನು ಸ್ವಾವಲಂಬಿಗಳನ್ನಾಗಿಸಬೇಕು, ಪರಾವಲಂಬಿಗಳನ್ನಾಗಿಸಬಾರದು ಎನ್ನುವ ಮಾತು ಇಷ್ಟವಾಯಿತು.
-ಸಿದ್ಧಾರ್ಥ, ಸಂಶೋಧನ ವಿದ್ಯಾರ್ಥಿ, ಮೈಸೂರು ವಿವಿ.

ಅನಾಮಧೇಯ ಹೇಳಿದರು...

TRC sir maatugaLu jaanapada kuritu rethink maaduvantive.Heege TRC anthaha vidvaamsara matugaLannu keLuva stitiyalli jaanapada vidvamsaru iddaareyeennuvudu '?'Prasne...

Somashekhar,tumakuru

ಅನಾಮಧೇಯ ಹೇಳಿದರು...

ಜಾನಪದವನ್ನು ಪಳೆಯುಳಿಕೆಯ ವ್ಯಾಖ್ಯಾನದಿಂದ ಬಿಡಿಸುವುದೇ ಕನ್ನಡದ ಮಟ್ಟಿಗೆ ದೊಡ್ಡ ಸವಾಲು.ಹಾಗಾಗಿ ಟಿ.ಆರ್.ಸಿ ಅವರ ಮಾತಿನ ತಾತ್ವಿಕತೆ ಜಾನಪದ ವಿದ್ವಾಂಸರಿಗೆ ಅರ್ಥವಾಗಲು ಇನ್ನೆಷ್ಟು ದಿನ ಹಿಡಿಯುವುದೊ? ಸ್ವತಃ ಜಾನಪದ ವಿವಿಯ ವಿಶೇಷಾಧಿಕಾರಿಗಳಾದ ಅಂಬಳಿಕೆಯವರು ಕೂಡ ಪಶ್ಷಿಮದ ಜಾನಪದ ಸಿದ್ದಾಂತಗಳಿಗೆ ಜೋತು ಬಿದ್ದವರು. ಇಂತವರಿಂದ ಜಾನಪದವಿವಿ ಅದೇಗೆ ದೇಸಿ ಚಿಂತನೆ ಹೇಗೆ ರೂಪುಗೊಳ್ಳುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.
-ಮಾದೇಶ್ ಹೊಸಮನೆ, ಮೈಸೂರು