ಬುಧವಾರ, ಆಗಸ್ಟ್ 31, 2011

ಜೋಗತಿ ಕಲೆ ಕಲಿತವರ ಕಸರತ್ತುಗಳು

-ಅರುಣ್

ಚಿತ್ರಗಳು- ಸೋಮೇಶ್ ಉಪ್ಪಾರ್ ಮರಿಯಮ್ಮನಹಳ್ಳಿ



‘ಜೋಗತಿ’ ಪದ ನೆನಪುಗಳನ್ನು ಕೆದಕುತ್ತದೆ. ನಾವಿದ್ದ ಕೂಡ್ಲಿಗಿ ತಾಲೂಕು ಹಾರಕನಾಳಿನ ಊರ ಹೊರಗಿನ ಅಂಗನವಾಡಿ ಕಟ್ಟಡ ನಮ್ಮ ಮನೆಯೂ ಆಗಿತ್ತು. ಊರಿಗೆ ಬರುವ ದೊಂಬಿದಾಸರು, ಕಾಡುಸಿದ್ಧರು, ಗೊಂದಲಿಗರು, ಜೋಗತಿಯರು ವೇಷ ಬದಲಿಸುತ್ತಿದ್ದ ಸರಕಾರಿ ಪ್ರಾಥಮಿಕ ಶಾಲೆಯ ಆವರಣ ನಮ್ಮ ಮನೆ ಪಕ್ಕವೇ ಇತ್ತು. ಹಾಗಾಗಿ ಹಾಗೆ ಬಂದವರೆಲ್ಲಾ ನಮಗೆ ಆತ್ಮೀಯರಾಗಿ ಪರಿಚಿತರಾಗಿಬಿಡುತ್ತಿದ್ದರು. ಇದರಲ್ಲಿ ಗಂಡು ಜೋಗತಿಯರು (ಗಂಡಿನೊಳಗಿನ ಹೆಣ್ತನದ ಭಾವಗಳಿಂದಾಗಿ ಸೀರೆಯುಟ್ಟು ಯಲ್ಲಮ್ಮ ಅಥವಾ ರೇಣುಕೆಯ ಭಕ್ತರಾದವರು) ಬಂದಾಗ ಊರ ಯುವಕರೆಲ್ಲಾ ಶಾಲೆಯ ಸುತ್ತಮುತ್ತ ಸುಳಿದಾಡುತ್ತಿದ್ದರು. ಶಾಲಾ ಮಕ್ಕಳು ಅವರುಗಳನ್ನು ಕಾಡು ಪ್ರಾಣಿಗಳಂತೆ ವಿಚಿತ್ರವಾಗಿ ನೋಡುತ್ತಿದ್ದರು. ಆಗ ಅವರು ‘ ಏ ಮನ್ಸಾರ‍್ನ ಎಂದೂ ನೋಡಿರೋ ಇಲ್ಲೋ ಒಕ್ಕಿರೋ ಕಲ್ಲು ತಗಳ್ಳಲೋ’ ಎಂದು ಗಡಸು ದ್ವನಿಯಲ್ಲಿ ಮಾತಾಡಿದಾಗ ಮಕ್ಕಳೆಲ್ಲಾ ಕೇ,,ಕೇ ಎಂದು ಕೇಕೆ ಹಾಕುತ್ತಾ ಓಡುತ್ತಿದ್ದರು. ಆಗ ಮಕ್ಕಳಲ್ಲಿ ಗಂಡು ಜೋಗತಿಯರು ವಿಚಿತ್ರವಾದ ಕುತೂಹಲ ಮೂಡಿಸುತ್ತಿದ್ದುದಂತೂ ನಿಜ.

ಹಾಗೆ ಬರುತ್ತಿದ್ದ ಗಂಡು, ಹೆಣ್ಣು ಜೋಗತಿಯರ ಒಂದು ಜೋಡಿ ವಿಚಿತ್ರವಾಗಿತ್ತು. ಒಬ್ಬ ಹೆಣ್ಣು ಜೋಗತಿ,(ಜಡೆ ಹೆಣೆದು ದೇವಿ ಒಲಿದಿದ್ದಾಳೆಂದು ಜೋಗತಿಯರಾಗುವ ಹೆಣ್ಣು) ಇನ್ನೊಬ್ಬ ಗಂಡು ಜೋಗತಿ. ಇವರಿಬ್ಬರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುವಂತೆ ಕಾಣುತ್ತಿದ್ದರು. ರಾತ್ರಿಯಾಗುತ್ತಲೂ ಇಬ್ಬರೂ ಕಂಠಪೂರ್ತಿ ಕುಡಿದು ಶಾಲೆಯ ಆವರಣದಲ್ಲಿ ಮಲಗುತ್ತಿದ್ದರು, ರಾತ್ರಿಯೆಲ್ಲಾ ಪೇಚಾಡುತ್ತಿದ್ದರು.ಒಮ್ಮೊಮ್ಮೆ ಮಧ್ಯರಾತ್ರಿ ಹೆಣ್ಣು ಜೋಗತಿ ಜೋರಾಗಿ ಅಳತೊಡಗಿ, ಗದ್ದಲವಾಗುತ್ತಿತ್ತು. ಆಗ ರಾತ್ರಿ ಊರ ಕೆಲವರು ಎದ್ದು ಬಂದು ಗಂಡು ಜೋಗತಿಯನ್ನು ಬೈದು ಸುಮ್ಮನ ಮಲಗ್ರಿ ಎಂದು ಗದರು ಹಾಕಿ ಹೋಗುತ್ತಿದ್ದರು. ಬೆಳಕಾಗುತ್ತಲೂ ಇಬ್ಬರು ಅಮರ ಪ್ರೇಮಿಗಳಂತೆ ರಾತ್ರಿಯ ಗದ್ದಲಗಳನ್ನು ಮರೆತು ಒಂದಾಗಿರುತ್ತಿದ್ದರು. ಬೆಳಗ್ಗೆ ಮಿರ್ಚಿ ವಗ್ಗರಣೆ ಕಟ್ಟಿಸಿಕೊಂಡು ಬಂದು ಒಬ್ಬರಿಗೊಬ್ಬರು ತಿನ್ನಿಸಿಕೊಂಡು ತಾವು ಒಂದಾಗಿರುವುದನ್ನು ತೋರುತ್ತಿದ್ದರು.


ಎಂಟು ಗಂಟೆಯ ಹೊತ್ತಿಗೆ ಮತ್ತೆ ನಾಲ್ಕಾರು ಗಂಡು, ಹೆಣ್ಣು ಜೋಗತಿಯರು ಇವರ ಜತೆ ಸೇರುತ್ತಿದ್ದರು. ಆಗ ಊರೊಳಗೆ ಅವರ ಎಲ್ಲಮ್ಮನ ಕುರಿತ ಹಾಡುಗಳು, ನೃತ್ಯ ಆರಂಭವಾಗುತ್ತಿತ್ತು. ಒಬ್ಬರು ಕೊಡ ಹೊತ್ತು ಕುಣಿದರೆ ನಾಲ್ಕು ಜನ ಚೌಡಕಿ ಪದಗಳನ್ನು ಹಾಡುತ್ತಿದ್ದರು. ಕೆಲವೊಮ್ಮೆ ಊರ ಮುಂದಿನ ದುರುಗಮ್ಮನ ಗುಡಿ ಎದುರು ರೇಣುಕ ಎಲ್ಲಮ್ಮನ ಮಹಾತ್ಮೆಯ ನಾಟಕವನ್ನು ಅಭಿನಯಿಸುತ್ತಿದ್ದರು. ಆಗ ಜೋಗತಿ ನೃತ್ಯ ಹಗಲು ಮಾಡಿದ್ದಕ್ಕಿಂತ ಭಿನ್ನವಾಗಿರುತ್ತಿತ್ತು . ಅದಕ್ಕೆ ಭಕ್ತಿಯ ಆಯಾಮ ಬಂದಿರುತ್ತಿತ್ತು. ಜನರು ಜೋಗತಿ ನೃತ್ಯ ನಡೆವ ಹೊತ್ತಿಗೆ ಹಣ್ಣು ಕಾಯಿ ನೈವೇದ್ಯ ಮಾಡಿ ತಮ್ಮ ಭಕ್ತಿಯನ್ನು ತೋರುತ್ತಿದ್ದರು. ಕೆಲವೊಮ್ಮೆ ಇದರಲ್ಲಿ ನಡು ನಡುವೆ ಹಾಸ್ಯ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಅದರಲ್ಲಿ ಸೀರೆ ಉಟ್ಟ ಗಂಡು ಜೋಗತಿಯರು ಗಂಡಾಳುಗಳನ್ನು ಕಿಚಾಯಿಸುತ್ತಿದ್ದರು. ಆಗ ಹರೆಯದ ಹುಡುಗರು ಮಂಡಕ್ಕಿ ತೂರಿಯೋ ಕೇಕೆ ಹಾಕಿಯೋ ಖುಷಿ ಪಡುತ್ತಿದ್ದರು. ಈ ನಾಟಕವನ್ನು ನೋಡಲು ಕೆಳ ಸಮುದಾಯದ ಜನ ಹೆಚ್ಚು ಸೇರುತ್ತಿದ್ದರು. ರಾತ್ರಿಪೂರಾ ಇರುತ್ತಿದ್ದ ಈ ನಾಟಕದಲ್ಲಿ ನಡು ನಡುವೆ ಊರ ಜನರ ಸಂಗತಿಗಳನ್ನೂ ಸೇರಿಸಿ ಹಾಸ್ಯ ಮಾಡುತ್ತಿದ್ದರು. ಇದರಲ್ಲಿ ಜನರ ಪಾಲ್ಗೊಳ್ಳುವಿಕೆ ಅದ್ಭುತವಾಗಿರುತ್ತಿತ್ತು. ಇದೆಲ್ಲವೂ ಮೊನ್ನೆ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿಯಲ್ಲಿ ಮಂಜಮ್ಮ ಜೋಗತಿ(ಜೋಗತಿ ಕಲೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಲಾವಿದೆ) ನಡೆಸಿದ ಜೋಗತಿ ನೃತ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಹೋದಾಗ ನೆನಪಾಯಿತು.


****
ಕಾರ್ಯಕ್ರಮ ಮದ್ಹಾನ ಮೂರಕ್ಕಿತ್ತು. ಆದರೆ ನಾನು ಒಂದು ಗಂಟೆಗಾಗಲೇ ಅಲ್ಲಿಗೆ ಹೋಗಿದ್ದೆ. ಆಗ ಇಪ್ಪತ್ತಕ್ಕಿಂತ ಹೆಚ್ಚಿನ ಗಂಡು ಜೋಗತಿಯರು ಸೇರಿದ್ದರು. ಅವರಲ್ಲಿ ಕೆಲವರು ಕಾರ್ಯಕ್ರಮದ ಸಿದ್ದತೆಯಲ್ಲಿ ತೊಡಗಿದ್ದರು.ಇನ್ನು ಕೆಲವರು ಸಿದ್ದತೆ ಮಾಡುವವರನ್ನು ನೋಡುತ್ತಾ ಕೂತಿದ್ದರು. ಕೆಲವು ಗಂಡು ಜೋಗತಿಯರು ಹೊಸದಾಗಿ ಬಂದಂತಿತ್ತು. ಅವರುಗಳೆಲ್ಲಾ ಇದನ್ನು ಕುತೂಹಲದಿಂದಲೂ, ಮುಜುಗರದಿಂದಲೂ ನೋಡುತ್ತಿದ್ದರು. ಇದರಲ್ಲಿ ಕೆಲವರು ಲಿಂಗ ಬದಲಾವಣೆ ಮಾಡಿಸಿಕೊಂಡವರಿದ್ದರು. ಇವರು ಬೆಂಗಳೂರಿನಲ್ಲಿ ಹಿಜಿಡಗಳಾಗಿ ಭಿಕ್ಷೆ ಬೇಡುತ್ತಾ ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದವರು. ಇದರಲ್ಲಿ ಕೆಲವರು ಹೆಣ್ಣನ್ನು ನಾಚಿಸುವಂತಹ ವನಪು ವೈಯಾರವನ್ನು ಕಣ್ಣಂಚಿನಲ್ಲೇ ಮಿಂಚಿಸಿ ಮರೆಯಾಗಿಸುತ್ತಿದ್ದರು. ಮಂಜಮ್ಮನ ಜತೆಗಿದ್ದ ಹಳೆ ಜೋಗತಿಯರು ಈ ನಗರದ ಹಿಜಿಡಾಗಳನ್ನು ತುಂಬಾ ಕುತೂಹಲದಿಂದ ನೋಡುತ್ತಿದ್ದರು. ಬೆಂಗಳೂರಿನ ಅನುಭವವನ್ನು ಬಾಯಿತೆರೆದು ಕೇಳಿ ಅಚ್ಚರಿ ಪಡುತ್ತಿದ್ದರು. ಕಲೆ ಕಲಿತ ಶಿಷ್ಯೆಯರು ನೃತ್ಯ ಮಾಡಲು ವೇಷ ಧರಿಸುತ್ತಿದ್ದರು. ಇಡೀ ವೇದಿಕೆಯನ್ನು ಹಳದಿ ಸೀರೆ ಬಳಸಿ ಸಿದ್ದಪಡಿಸಿದ್ದರು. ಮಂಜಮ್ಮ ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಾ ಚಡಪಡಿಸುತ್ತಾ ಓಡಾಡಿಕೊಂಡಿದ್ದರು. ಸೋಮೇಶ ನಿರೂಪಣೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದರು.

***
ಜಾನಪದ ಕಲೆ ಕಲಿಸುವಿಕೆಗಾಗಿ ‘ಗುರು ಶಿಷ್ಯ ಪರಂಪರೆ’ಎನ್ನುವ ಯೋಜನೆಯಿದೆ. ಇದು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ. ಆಯಾ ಜನಪದ ಕಲೆಯ ಹಿರೀಕರನ್ನು ಗುರುತಿಸಿ, ಅವರನ್ನು ಗುರುವನ್ನಾಗಿಯೂ ಆಯಾ ಕಲೆಯನ್ನು ಆಸಕ್ತಿ ಇರುವ ಶಿಷ್ಯರನ್ನು ಒಳಗೊಂಡಂತೆ, ಆರು ತಿಂಗಳು ಕಾಲ ಕಲೆ ಕಲಿಯಲು ಗುರುಶಿಷ್ಯರಿಗೆ ಸಹಾಯಧನ ಇರುತ್ತದೆ. ಇದು ಜನಪದ ಕಲೆ ಉಳಿಸುವ ಮತ್ತು ಅದನ್ನು ಆಸಕ್ತಿ ಇರುವವರ ಮೂಲಕ ಮುಂದುವರೆಸುವ ಒಂದು ಯೋಜನೆ. ಆದರೆ ಈ ಯೋಜನೆ ಆಯಾ ಜನಪದ ಕಲೆಯನ್ನು ಆಯಾ ಸಮುದಾಯದಲ್ಲಿ ಮಾತ್ರ ಮುಂದುವರಿಯುವಂತೆ ಮಾಡಿ, ಒಂದು ಜಾತಿ ಸಮುದಾಯಕ್ಕೆ ಆಯಾ ಕಲೆಯನ್ನು ಗಂಟು ಹಾಕುತ್ತದೆಯೇ ಎನ್ನುವ ಭಯ ನನಗಿದೆ. ಈ ಯೋಜನೆ ಆಯಾ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಆಸಕ್ತಿ ಮತ್ತು ಕ್ರಿಯಾಶೀಲತೆಯನ್ನು ಆಧರಿಸಿ ಅದು ಅನುಷ್ಠಾನಕ್ಕೆ ಬಂದಂತೆ ಕಾಣುತ್ತದೆ. ಬಳ್ಳಾರಿ ಜಿಲ್ಲೆಯ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚೋರನೂರು ಕೊಟ್ರಪ್ಪ ಈ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡಂತೆ ಕಾಣುತ್ತದೆ.


ಈ ಬಾರಿ ಮಂಜಮ್ಮನಿಗೆ ಮಹಾರಾಷ್ಟ್ರದ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ, ನಾಗಪುರ ಇವರು ಗುರುಶಿಷ್ಯ ಪರಂಪರೆಯ ಯೋಜನೆಯಡಿ ಜೋಗತಿ ಕಲೆ ಕಲಿಸಲು ಅನುವುಮಾಡಿಕೊಟ್ಟಿದ್ದರು. ಹಾಗಾಗಿ ಮಂಜಮ್ಮ ನಾಲ್ಕು ಜನ ಶಿಷ್ಯರನ್ನು , ಒಬ್ಬ ಸಹಾಯಕರನ್ನು ತೆಗೆದುಕೊಂಡು ಜೋಗತಿ ಕಲೆಯನ್ನು ಮರಿಯಮ್ಮನಹಳ್ಳಿಯ ತಮ್ಮ ಮನೆ ಆವರಣದಲ್ಲಿ ಕಲಿಸಿದರು. ಈ ಆರು ತಿಂಗಳ ತರಬೇತಿ ಮುಗಿದು ಮೊನ್ನೆಯಷ್ಟೆ ಸಮಾರೋಪ ನಡೆಯಿತು. ಹಾಗೆ ಜೋಗತಿ ಕಲೆ ಕಲಿತ ಶಿಷ್ಯೆಯರು ದುರುಗಮ್ಮ, ಕೆ. ಮಂಜಮ್ಮ, ಎಲ್ಲಮ್ಮ, ಗೌರಮ್ಮ. ಸಹಾಯಕರಾಗಿ ಹಿರಿಯ ಜೋಗತಿ ರಾಮವ್ವ ಕಲೆ ಕಲಿಸಲು ನೆರವಾಗಿದ್ದಾರೆ.ಮಕ್ಕಳು ಶಾಲೆಯಲ್ಲಿ ಕಲಿತಿದ್ದನ್ನು ಅಮ್ಮನ ಎದುರು ಹೇಳಲು ತೋರುವ ಉತ್ಸಾಹದ ಚಿಲುಮೆಯಂತೆ ಕಲೆ ಕಲಿತ ಜೋಗತಿಯರು ವೇದಿಕೆಯಲ್ಲಿ ನೃತ್ಯ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದರು. ಮಂಜಮ್ಮನೂ ಅವರುಗಳಿಗೆ ನಿರ್ದೇಶನ ನೀಡುತ್ತಾ ಹೇಗೆ ಮಾಡುತ್ತಾರೋ ಎಂಬ ಆತಂಕದಲ್ಲಿದ್ದಂತಿತ್ತು. ಸಾಂಪ್ರದಾಯಿಕವಾಗಿ ಯಲ್ಲಮ್ಮನ ಪ್ರಾರ್ಥನ ಗೀತೆಯನ್ನು ರಾಮಕ್ಕ ಮತ್ತು ಸಂಗಡಿಗರು ಚೌಟಗಿ ಹಿಡಿದು ಹಾಡತೊಡಗಿದರು. ಆ ಹಾಡಿಗೆ ತಕ್ಕ ಹಾಗೆ ವೇದಿಕೆಯ ಮೇಲೆ ಒಬ್ಬೊಬ್ಬರಾಗಿ ಯಲ್ಲಮ್ಮನ ಕೊಡ ಹೊತ್ತು ಪ್ರವೇಶ ಮಾಡಿದರು. ಹಾಡು ಸಾಂಪ್ರದಾಯಿಕವಾಗಿದ್ದರೂ ನೃತ್ಯದಲ್ಲಿ ಮಾತ್ರ ಆಧುನಿಕ ವರಸೆಗಳ ಪ್ರಭಾವ ಇದ್ದಂತೆ ಕಾಣುತ್ತಿತ್ತು. ಇದರಲ್ಲಿ ಭರತನಾಟ್ಯದ ಭಂಗಿಗಳು, ಸಾಹಸಮಯ ಕಸರತ್ತುಗಳು ಕಾಣುತ್ತಿದ್ದವು . ಕೊಡ ಹೊತ್ತು ಅದನ್ನು ಬ್ಯಾಲನ್ಸ ಮಾಡುತ್ತಾ ಬಾಗುವ ಭಂಗಿಗಳು ನೋಡುಗರಲ್ಲಿ ಕೌತುಕ ಮತ್ತು ಅಚ್ಚರಿ ಮೂಡಿಸುವಂತಿತ್ತು. ಕುಣಿತದ ಲಯಗಳು ಕೂಡ ಆಧುನಿಕ ನೃತ್ಯದ ಪ್ರಭಾವಕ್ಕೆ ಒಳಗಾದಂತೆ ಕಾಣುತ್ತಿತ್ತು. ಇಡೀ ನೃತ್ಯ ಅತ್ಯಂತ ನಯ ನಾಜೂಕಿನಿಂದ ರೋಚಕಗೊಳಿಸಿ ನೋಡುಗರನ್ನು ರೋಮಾಂಚನಗೊಳಿಸುವಂತಿತ್ತು. ಇಲ್ಲಿ ಜೋಗತಿ ಕಲೆಯನ್ನು ಈ ಕಾಲದ ಜತೆ ಮರು ಹೊಂದಾಣಿಕೆ ಮಾಡಲು ಮಾಡಿದ ಪ್ರಯತ್ನ ಕಾಣುತ್ತಿತ್ತು. ಈ ನಿಟ್ಟಿನಲ್ಲಿ ನೃತ್ಯ ಯಶಸ್ವಿಯೂ ಆಯಿತು.

ದೇಹದಲ್ಲಿನ ಹಾರ್ಮೊನ್ಸ ವೈಪರೀತ್ಯದಿಂದಾಗಿ ಗಂಡಿನ ಒಳಗೆ ಹೆಣ್ಣೇ ಆಗಬೇಕೆಂಬ ತೀವ್ರತೆರನಾದ ಒತ್ತಡ ಶುರುವಾದಾಗ ಇವರುಗಳೆಲ್ಲಾ ಸೀರೆಯುಟ್ಟು ಜೋಗತಿಯಾದವರು. ಲಿಂಗ ಬದಲಾಯಿಸಿಕೊಂಡು ಹಿಜಿಡಾಗಳಾಗಿ ಭಿಕ್ಷೆ ಬೇಡುವ, ಲೈಂಗಿಕ ಕಾರ್ಯಕರ್ತರಾಗುವವರಿಗಿಂತ ಇವರು ಬೇರೆಯ ರೀತಿಯವರು. ಇವರುಗಳೆಲ್ಲಾ ಎಲ್ಲಮ್ಮ ಅಥವಾ ರೇಣುಕೆಯ ಭಕ್ತರು. ಗಂಡು ಹೆಣ್ಣಾಗುವುದು ಜೈವಿಕವಾಗಿ ಹಾರ್ಮೋನ್ಸ ಉತ್ಪತ್ತಿಯಲ್ಲಾಗುವ ಬದಲಾವಣೆಯಿಂದಾದರೂ, ಇವರುಗಳು ತಿಳಿಯುವುದು ಗಂಡಿನ ಅಹಂ ಮುರಿದು ಹೆಣ್ಣಾಗಿಸಿದ ರೇಣುಕೆಯ ಪ್ರಭಾವದಿಂದಾಗಿ ಎಂದು. ಹಾಗಾಗಿ ನಾವು ಸೀರೆ ಉಟ್ಟು ಜೋಗತಿಯರಾಗಿದ್ದೇವೆಂದು ಭಾವಿಸುತ್ತಾರೆ. ಹೀಗೆ ರೇಣುಕೆಯ ಭಕ್ತರಾಗಿ ಜೀವಮಾನವಿಡೀ ಜೋಗತಿ ಹಾಡು ನೃತ್ಯವನ್ನು ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಇವರದು ಭಿಕ್ಷೆಯೇ ಆದರೂ ಇವರುಗಳಿಗೆ ಜನರಲ್ಲಿರುವ ದೈವದ ನಂಬಿಕೆಯ ಕಾರಣಕ್ಕೆ ಗೌರವ ಸಿಗುತ್ತದೆ. ಆದರೆ ಇವರು ತಮ್ಮೊಳಗೆ ಇರುವ ಹೆಣ್ತನದ ತೀವ್ರತೆರನಾದ ಕಾಮನೆಗಳನ್ನು ದೈವದ ಕಾರಣಕ್ಕೆ ತಮ್ಮೊಳಗೇ ಅದುಮಿಡುತ್ತಾರೆ. ಈ ವಿಷಯದಲ್ಲಿ ಹಿಜಿಡಾಗಳು ತಮ್ಮೊಳಗಿನ ಹೆಣ್ತನದ ಕಾಮನೆಗಳಿಗೆ ತೆರೆದುಕೊಂಡು ತಮ್ಮಿಷ್ಟದಂತೆ ಬದುಕಿ ಹಗುರಾಗುತ್ತಾರೆ. ಆದರೆ ಅವರಿಗೆ ದೈವದ ನೆಲೆಯ ಗೌರವಾಧರಗಳು ಸಿಗುವುದಿಲ್ಲ, ಅದನ್ನವರು ಬಯಸುವುದೂ ಇಲ್ಲ. ಈ ಇಬ್ಬಂದಿತನ ಗಂಡು ಜೋಗತಿ ಮತ್ತು ಹಿಜಿಡಾಗಳಲ್ಲಿದೆ.

ಈ ತರಬೇತಿ, ಜೋಗತಿ ಕಲೆ ಕೇವಲ ಗಂಡುಜೋಗತಿಯರಲ್ಲಿ ಮಾತ್ರ ಮುಂದುವರೆಸಲು ಸಾದ್ಯ ಎಂಬ ನಂಬಿಕೆಯನ್ನು ಬಲಗೊಳಿಸಿತು. ಜೋಗತಿ ಕಲೆ ಒಂದು ಪ್ರದರ್ಶನಾತ್ಮಕ ಕಲೆ ಅದನ್ನು ಬೇರೆ ಬೇರೆ ಸಮುದಾಯಗಳ ಯುವಕ ಯುವತಿಯರೂ ಮಾಡಬಹುದು ಎಂಬ ಹೊಸ ನಂಬಿಕೆಯನ್ನು ಹುಟ್ಟಿಸಲು ಸಾದ್ಯವಾಗಲಿಲ್ಲ ಅನ್ನಿಸಿತು. ಈ ಕುರಿತು ಮಂಜಮ್ಮನನ್ನು ಕೇಳಿದರೆ, ‘ನಾವೇನೋ ಕಲಿಸ್ತಿವಿ ಆದರೆ ಸಮಾಜ ಒಪ್ಪಬೇಕಲ್ಲ, ಹಾಗ್ಮಾಡಿದ್ರೆ ನಮ್ಮ ಮಕ್ಕಳನ್ನು ಜೋಗತಿ ಮಾಡ್ತೀ ಅಂತ ನನ್ನ ಸುಮ್ನೆ ಬಿಡ್ತಾರೇನು? ಎಂದಾಗ ತಕ್ಷಣಕ್ಕೆ ಏನು ಉತ್ತರಿಸಬೇಕೋ ಗೊತ್ತಾಗಲಿಲ್ಲ.

ಮತ್ತೆ ನನ್ನ ಬಾಲ್ಯದ ನೆನಪುಗಳಿಗೆ ಮರಳುವುದಾದರೆ, ಬಾಲ್ಯದಲ್ಲಿ ನಾನು ನೋಡಿದ ಜೋಗತಿ ನೃತ್ಯಕ್ಕೂ ಈಗ ನಡೆದ ನೃತ್ಯಕ್ಕೂ ವ್ಯತ್ಯಾಸಗಳಿದ್ದವು. ಇದು ಬದಲಾದ ಕಾಲದಲ್ಲಿ ಸಹಜ ಕೂಡ. ಮಂಜಮ್ಮ ಕಾರ್ಯಕ್ರಮದ ಕೊನೆಗೆ ಮಾತನಾಡುತ್ತಾ ‘ನಮ್ಮನ್ನೂ ಮನುಷ್ಯರಂತೆ ನೋಡಿ, ನಾವು ಮನುಷ್ಯರೇ ಅಲ್ಲ, ನಾವೇನೋ ಘೋರ ಅಪರಾಧ ಮಾಡಿದ್ದೇವೆಂಬಂತೆ, ನಮ್ಮನ್ನು ನೋಡಬೇಡಿ, ನಮ್ಮ ಸಮುದಾಯ ನಿಮ್ಮಿಂದ ಬೇಡುವುದು ಒಂದಿಡಿ ಪ್ರೀತಿ ಮಮತೆಯನ್ನಷ್ಟೆ’ ಎಂದು ಬೇಡಿಕೊಂಡಳು. ಈ ಅಂತಃಕರಣದ ಮಾತು ನನ್ನೊಳಗೆ ಈಗಲೂ ಹಸಿಯಾಗಿದೆ.

ಕಾಮೆಂಟ್‌ಗಳಿಲ್ಲ: