ಬುಧವಾರ, ಆಗಸ್ಟ್ 17, 2011

ಏಕತಾರಿ ತತ್ವಪದಕಾರ ಜೋಗೇರ ಗೋಣೆಪ್ಪ

(ಗೋಣೆಪ್ಪ ತಮ್ಮ ಏಕತಾರಿಯೊಂದಿಗೆ)


-ಸಿದ್ದರಾಮ ಹಿರೇಮಠ, ಕೂಡ್ಲಿಗಿ.


ದಾಸರು ನಾಡಿನಾದ್ಯಂತ ಸಂಚರಿಸಿ ಕೀರ್ತನೆಗಳನ್ನು ಮನೆಮನೆಗೆ ತಲುಪಿಸಿದರು. ಶಿಶುನಾಳ ಶರೀಫರು ತತ್ವಪದಗಳನ್ನು ಹಾಡಿ ನಾಡಿನ ಜನತೆಯ್ಲಲಿ ಆಧ್ಯಾತ್ಮದ ಹೊಳಹನ್ನು ತುಂಬಿದರು. ಅದೇ ಪರಂಪರೆಯಲ್ಲಿ ಹಲವಾರು ಜನ ಜಾನಪದ ಕಲಾವಿದರು ತತ್ವಪದಗಳನ್ನು ನಾಡಿನಾದ್ಯಂತ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಅಪರೂಪದ ಕಲಾವಿದರಲ್ಲಿ ತಾಲೂಕಿನ ಹರಾಳು ಗ್ರಾಮದ ೭೫ರ ಹರೆಯದ ಜೋಗೇರ ಗೋಣೆಪ್ಪನೂ ಒಬ್ಬರು. ಏಕತಾರಿ ವಾದ್ಯವನ್ನು ಹಿಡಿದು ತತ್ವಪದಗಳನ್ನು ಹಾಡತೊಡಗಿದರೆ ಎಂತಹವರೂ ತಲೆದೂಗಲೇಬೇಕು. ತಾಲೂಕಿನಲ್ಲಿ ಏಕತಾರಿ ವಾದ್ಯದ ಮೂಲಕ ಹಾಡುವವರು ಇವರೊಬ್ಬರೇ ಎಂಬುದೂ ಗಮನಿಸಬೇಕಾದ ಅಂಶವಾಗಿದೆ.

ಹರಾಳು ಗ್ರಾಮ ತಾಲೂಕಿನ ಗಡಿಗ್ರಾಮಗಳಲ್ಲೊಂದು. ಅಲ್ಲಿನ ಅಡವಿಸ್ವಾಮಿ ಗೋಣೆಪ್ಪನವರ ತಂದೆಗೆ ಗುರುಗಳು. ಗೋಣೆಪ್ಪನವರಿಗೆ ತಂದೆಯೇ ಗುರುಗಳು. ೧೫ನೇ ವಯಸ್ಸಿನಿಂದಲೇ ತಂದೆಯೊಂದಿಗೆ ಬರಗಾಲದ ಸಂದರ್ಭದಲ್ಲಿ ಮನೆಗಳಿಗೆ ಭಿಕ್ಷೆಗೆ ಹೋಗಿ ಹಾಡಿಬರುತ್ತಿದ್ದರು. ತಂದೆ ಏಕತಾರಿ ಹಿಡಿದು ಹಾಡುತ್ತ ಹೊರಟರೆ ಮಗ ಗೋಣೆಪ್ಪ ಹಿಂದೆ ದಮ್ಮಡಿ ಬಾರಿಸುತ್ತ ಹೆಜ್ಜೆ ಹಾಕುತ್ತಿದ್ದರು. ಖಾಲಿ ಕುಂಬಳಕಾಯಿಗೆ ಬಿದಿರನ್ನು ಹೊಂದಿಸಿ, ತಂತಿಯನ್ನು ಬಿಗಿಮಾಡಿ, ನಾದದ ಜೊತೆಗೆ ಹಾಡತೊಡಗಿದರೆ ಕೇಳುವವರು ಮೈಮರೆಯಬೇಕು. ತಂದೆಯಿಂದಲೇ ತಾನು ಹಾಡುವುದನ್ನು ಕಲಿತೆ ಎನ್ನುವ ಗೋಣೆಪ್ಪನವರಿಗೆ ತಾನೊಬ್ಬ ಅತ್ಯುತ್ತಮ ಹಾಡುಗಾರನೆಂಬ ಗರ್ವ ಎಳ್ಳಷ್ಟೂ ಇಲ್ಲ.

(ಏಕತಾರಿ ನುಡಿಸಿ ತತ್ವಪದ ಹೇಳುವ ಕಲಾವಿದ ಹರಾಳು ಗೋಣೆಪ್ಪ)


ಕೇಳುಗರಿದ್ದರೆ ಸಾಕು ಎಲ್ಲಿ ಬೇಕಾದಲ್ಲಿ ಹಾಡಲು ತೊಡಗುತ್ತಾರೆ. ಮಡಿವಾಳಜ್ಜನವರು ರಚಿಸಿದ ‘ಅಗಸರೋ ನಾವು ಅಗಸರು’, ಶಿಶುನಾಳ ಶರೀಫರ ‘ಮುತ್ತಿನಂಥ ಮಾತಿದು ಕೇಳು ಗೆಳತಿ’, ಪುರಂದರದಾಸರ ‘ಆರೇನು ಮಾಡುವರು, ಆರಿಂದಲೇನಹುದು’, ಚಳ್ಳಗುರ್ಕಿ ಎರಿತಾತನವರ ‘ಎಂತಥ ಗುರುನಾಥನು ಭಾಳ ಅಂತ:ಕರಣುಳ್ಳಾತನು’, ಹೀಗೆ ಆದಿಮೂರ್ತಿ ಗುರುನಾಥ, ಗಂಗಾಧರಶಾಸ್ತ್ರಿಗಳು, ನಾಗಲಿಂಗಜ್ಜ, ಗುರು ಗೋವಿಂದಭಟ್ಟರು ರಚಿಸಿದ ತತ್ವಪದಗಳನ್ನು ಹಾಡುತ್ತಾರೆ. ವಚನಗಳನ್ನೂ ಹಾಡುವರಾದರೂ ಇವರಿಗೆ ಅತ್ಯಂತ ಇಷ್ಟವಾದವೆಂದರೆ ಶಿಶುನಾಳ ಶರೀಫರ, ದಾಸರ ಪದಗಳೇ.

ಗೋಣೆಪ್ಪ ತಾಲೂಕಿನಾದ್ಯಂತ ಸಂಚರಿಸಿ ಹಲವಾರು ಕಾರ್ಯಕ್ರಮಗಳನ್ನೂ ನೀಡಿದ್ದಾರೆ. ಹೂವಿನ ಹಡಗಲಿಯಲ್ಲಿ ದಿ.ಎಂ.ಪಿ.ಪ್ರಕಾಶ್ ಅವರು ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಗೋಣೆಪ್ಪನವರ ಹಾಡುಗಾರಿಕೆ ಕೇಳಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚೋರನೂರು ಕೊಟ್ರಪ್ಪ ಇವರಿಗೆ ವೇದಿಕೆಯ ಅವಕಾಶ ಒದಗಿಸಿಕೊಟ್ಟರು. ಮುಂದೆ ಹಂಪಿ ಉತ್ಸವದವರೆಗೆ ಇವರ ಕಲೆಯ ಪ್ರದರ್ಶನ ಜರುಗಿತು. ಇಲಾಖೆಯ ವತಿಯಿಂದಲೇ ಏಕತಾರಿಯನ್ನು ಕೊಡಿಸಲಾಗಿದೆ ಎಂದು ಗೋಣೆಪ್ಪ ಹೇಳುತ್ತಾರೆ. ೨೦೦೫ರಲ್ಲಿ ಹೊಸಪೇಟೆಯಲ್ಲಿ ಜರುಗಿದ ಗುರುವಂದನಾ ಮಹೋತ್ಸವ, ೨೦೦೬ರಲ್ಲಿ ಸುವರ್ಣ ಸಂಸ್ಕೃತಿ ದಿಬ್ಬಣ, ದಾವಣಗೆರೆಯ ಜಿಲ್ಲಾ ಅಕ್ಷರದಾನ ಸಮಿತಿ, ಕೂಡ್ಲಿಗಿ ಪೊಲೀಸ್ ಉಪವಿಭಾಗ, ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘ, ೨೦೦೭ರಲ್ಲಿ ಬಳ್ಳಾರಿಯ ನೆಹರು ಯುವಕೇಂದ್ರ, ಕೊಟ್ಟೂರು ಕಲಾಕೇಂದ್ರಗಳ ವತಿಯಿಂದ ಏರ್ಪಡಿಸಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸನ್ಮಾನಿತರಾಗಿದ್ದಾರೆ. ೨೦೧೧ರಲ್ಲಿ ಇವರಿಗೆ ಹಂಪಿ ಉತ್ಸವದಲ್ಲೂ ಅವಕಾಶ ದೊರೆತಿದೆ. ತಮ್ಮ ಕಲೆಗೆ ಅವಕಾಶ ದೊರೆಯಲಿಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚೋರನೂರು ಕೊಟ್ರಪ್ಪ ಹಾಗೂ ಕೂಡ್ಲಿಗಿ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬ್ಯಾಳಿ ವಿಜಯಕುಮಾರಗೌಡರೆಂದು ಗೋಣೆಪ್ಪ ಸ್ಮರಿಸುತ್ತಾರೆ.


ಒಂದನೇ ತರಗತಿಯನ್ನೂ ಪೂರ್ಣಗೊಳಿಸಲಾಗದ ಗೋಣೆಪ್ಪ ಅಕ್ಷರಗಳನ್ನು ಗುರುತಿಸುತ್ತಾರಷ್ಟೇ, ಆದರೆ ಕೇಳಿ ಕಲಿತದ್ದೇ ಬಹಳ. ಜೋಗೇರ ಜನಾಂಗದಲ್ಲಿಯೇ ಕೆಲವರು ಕಿನ್ನುರಿ ನುಡಿಸುತ್ತಾರೆ, ಇವರದು ಏಕತಾರಿ. ಒಂದೇ ತಂತಿಯನ್ನೇ ತಮ್ಮ ಸ್ವರಕ್ಕನುಗುಣವಾಗಿ ನಾದ ಹೊಂದಿಸಿಕೊಂಡು ಹಾಡುವುದು ಕಷ್ಟ ಎಂಬುದು ಗೋಣೆಪ್ಪನವರ ಹೇಳಿಕೆ. ಇದನ್ನು ಮುಂದುವರೆಸಿಕೊಂಡು ಹೋಗುವವರು ಅಥವಾ ಕಲಿಯುವವರು ಯಾರೂ ಇಲ್ಲವೆಂಬುದೇ ಇವರ ವ್ಯಥೆ. ಜಾನಪದ ಕಲೆಗಾರರ ಕಲೆ ಅಳಿವಿನಂಚಿನಲ್ಲಿದೆ, ಅದನ್ನು ಉಳಿಸುವ, ಅದರ ಬಗ್ಗೆ ಕಾಳಜಿ ವಹಿಸುವವರು ಯಾರೂ ಇಲ್ಲ ಎಂದು ಗೋಣೆಪ್ಪ ದು:ಖಿಸುತ್ತಾರೆ. ಗೋಣೆಪ್ಪನವರಿಗೆ ಇನ್ನೂ ಕಲಾವಿದರ ಮಾಸಾಶನ ದೊರೆತಿಲ್ಲ.

ತಾಲೂಕಿನ ಏಕಮಾತ್ರ ಏಕತಾರಿ ಕಲಾವಿದರಾದ ಗೋಣೆಪ್ಪನವರ ತತ್ವಪದಗಳನ್ನು ಕೇಳಬೇಕೆಂದರೆ ಮೊಬೈಲ್ ಸಂಖ್ಯೆ: ೮೯೭೦೨೧೫೪೧೦ಗೆ ಸಂಪರ್ಕಿಸಿ ಕಾರ್ಯಕ್ರಮ ಏರ್ಪಡಿಸಿದರೆ, ಹಿರಿಯ ಜೀವಕ್ಕೆ ಸಂತೋಷವೂ, ಸಹಾಯವೂ ಆಗುತ್ತದೆ.3 ಕಾಮೆಂಟ್‌ಗಳು:

ಪತ್ರೇಶ್ ಹಿರೇಮಠ್ ಹೇಳಿದರು...

ಸಿದ್ದರಾಮ ಹಿರೇಮಠರ ಏಕತಾರಿ ತತ್ವಪದಕಾರ ಗೋಣೆಪ್ಪನ ಲೇಖನ ತುಂಬಾ ಚೆನ್ನಾಗಿದೆ

ಸಚಿನ್ ಕುಮಾರ ಬಿ.ಹಿರೇಮಠ ಹೇಳಿದರು...

ನಿಮ್ಮ ಲೇಖನಗಳು ತುಂಬಾ ಮಾಹಿತಿ ಪೂರ್ಣವಾಗಿವೆ.. ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು.
-ಸಚಿನ್ ಕುಮಾರ ಬಿ.ಹಿರೇಮಠ
www.madhuramanase.blogspot.com

siddha ಹೇಳಿದರು...

ಪತ್ರೇಶ್ ಹಾಗೂ ಸಚಿನ್ ಕುಮಾರ್ ಅವರಿಗೆ ಧನ್ಯವಾದಗಳು