ಸೋಮವಾರ, ಆಗಸ್ಟ್ 22, 2011

ಇದು ಸಿದ್ಧ ವೈಚಾರಿಕ ಚೌಕಟ್ಟುಗಳನ್ನು ಮೀರುವ ಕಾಲ : ಸಿಎನ್ನಾರ್

ಮಾತುಕತೆ ನಡೆಸಿದವರು: ಹರ್ಷಕುಮಾರ್ ಕುಗ್ವೆ


ಡಾ. ಸಿ.ಎನ್.ರಾಮಚಂದ್ರನ್ ಅವರು ನಾಡಿನ ಪ್ರಮುಖ ಸಂಸ್ಕೃತಿ ಚಿಂತಕರು. ಇವರ ಅಧ್ಯಯನದ ಕ್ಷೇತ್ರಗಳು ಬಹು ವಿಸ್ತಾರವಾದಂತವು. ಸೃಜನ ಸಾಹಿತ್ಯ, ವಿಮರ್ಷಾ ಸಾಹಿತ್ಯ, ಜಾನಪದ ಅಧ್ಯಯನ, ಅನುವಾದ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಕೊಡುಗೆ ಸಲ್ಲಿಸಿರುವ ಸಿಎನ್ನಾರ್ ಹರ್ಷಕುಮಾರ್ ಕುಗ್ವೆಯೊಂದಿಗೆ ಸಂಸ್ಕ್ಕೃತಿ ವಿಮರ್ಷೆ, ಜಾನಪದ ಅಧ್ಯಯನ, ಮುಂತಾದುವುಗಳ ಕುರಿತಾಗಿ ಹಲವಾರು ಒಳನೋಟಗಳನ್ನು ಹಂಚಿಕೊಂಡಿದ್ದಾರೆ.

'ಸಂಸ್ಕೃತಿ’ಯನ್ನು ನೀವು ಹೇಗೆ ಪರಿಭಾವಿಸುತ್ತೀರಿ?

ಸಂಸ್ಕೃತಿ ಎಂಬ ಪದವನ್ನು ನಾವು ಅನೇಕ ನೆಲೆಗಳಲ್ಲಿ ಅರ್ಥೈಸಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ನೋಡಿದರೆ ಡಿವಿಜಿ, ಅನಕೃ ಮುಂತಾದವರೆಲ್ಲಾ ಸಂಸ್ಕೃತಿಯನ್ನು ಒಂದು ರೀತಿಯಲ್ಲಿ ಅರ್ಥೈಸುತ್ತಿದ್ದರು. ಸಾಹಿತ್ಯ, ಸಂಗೀತ, ಶಿಲ್ಪಕಲೆ, ಚಿತ್ರಕಲೆ, ಇತ್ಯಾದಿ ಲಲಿತ ಕಲೆಗಳೇನಿವೆ ಅವುಗಳಲ್ಲಿರುವ ಪ್ರೌಢಿಮೆಯನ್ನು ಸಂಸ್ಕೃತಿ ಎಂದು ಅರ್ಥೈಸುತ್ತಿದ್ದರು. ಅದು ಎಷ್ಟು ಹೆಚ್ಚಿದಷ್ಟೂ ಅಷ್ಟು ನಮ್ಮ ಸಂಸ್ಕೃತಿ ಶ್ರೇಷ್ಠವಾಗಿದೆ ಎನ್ನುವ ನಿಲುವು ಅದು. ಅದೇ ಕಾಲಘಟ್ಟದಲ್ಲಿ ಇನ್ನೊಂದು ನೆಲೆಯಲ್ಲಿ ಆಧ್ಯಾತ್ಮಿಕತೆಯೊಂದಿಗೆ ಸಂಸ್ಕೃತಿಯನ್ನು ಸಮೀಕರಿಸಿ ನೋಡುವ ಪರಂಪರೆಯೂ ಇತ್ತು. ಈ ಎರಡು ನೆಲೆಯಲ್ಲಿ ಮಾತ್ರ ಸಂಸ್ಕೃತಿಯ ವ್ಯಾಖ್ಯಾನ ನಡೆಯುತ್ತಿತ್ತು. ಆದರೆ ಸುಮಾರು ೭೦ - ೮೦ರ ದಶಕದ ನಂತರ ಭಾರತದಲ್ಲಿ; ಅದಕ್ಕಿಂತ ಎರಡು ಮೂರು ದಶಕಗಳ ಹಿಂದೆ ಅಮೆರಿಕ, ಬ್ರಿಟನ್‌ಗಳಲ್ಲಿ, ಸಂಸ್ಕೃತಿ ವ್ಯಾಖ್ಯಾನ ಬೇರೆ ನೆಲೆಯಲ್ಲಿ ಆರಂಭವಾಯ್ತು. ಅವರ ಪ್ರಕಾರ ಸಂಸ್ಕೃತಿ ಎಂದರೆ ಒಂದು ಜೀವನ ಕ್ರಮ. ಒಂದು ಸಮುದಾಯದ ನಂಬಿಕೆ, ಭಾಷೆ, ಉಡುಗೆ ತೊಡುಗೆ, ಆಹಾರ, ವೃತ್ತಿ, ನಂಬಿಕೆಗಳು, ದೇವರು, ಇವೆಲ್ಲವೂ ಸಂಸ್ಕೃತಿಯನ್ನು ಸೂಚಿಸುತ್ತದೆ ಎನ್ನುವುದು. ನಾವು ಸಾಮಾನ್ಯವಾಗಿ ಯಾವುದನ್ನು ಎಡಪಂಥೀಯ ಚಿಂತನೆ ಎಂದು ಗುರುತಿಸುತ್ತೀವೋ ಆ ನೆಲೆಯಲ್ಲಿ ಸಂಸ್ಕ್ಕೃತಿಯನ್ನು ಗುರುತಿಸಲು ಆರಂಭಿಸಿದರು. ಈ ನೆಲೆಯಲ್ಲಿ ಬಹಳ ಪ್ರಭಾವಿ ಹಾಗೂ ಪಥಪ್ರವರ್ತಕ ವ್ಯಾಖ್ಯಾನ ನೀಡಿದವರು ರೇಮಂಡ್ ವಿಲಿಯಮ್ಸ್ ಎಂಬ ಬ್ರಿಟಿಷ್ ಎಡಪಂಥೀಯ ಚಿಂತಕ. ಸಂಸ್ಕೃತಿ ಚಿಂತನೆ ಎನ್ನುವ ಸಾಮಾಜಿಕ ಸಾಹಿತ್ಯಕ ಚಿಂತನಾ ಮಾರ್ಗ ಪ್ರಾರಂಭವಾದದ್ದೆ ಆತನ ಪ್ರಭಾವದಿಂದ. ಆತನು ರೂಢಿಗತ ಚಿಂತನೆಗಳಿಗೆ ವಿರುದ್ಧವಾಗಿ ನಿಂತಂತವನು. ಎಲ್ಲಾ ಬಗೆಯ ಬಂಡಾಯ ಚಿಂತನೆಗಳ ಹಿಂದೆ ಆತ ಇದ್ದಾನೆ ಎನ್ನಬಹುದು.


ಸಂಸ್ಕೃತಿ ಚಿಂತನೆಯ ಆರಂಭಿಕ ವ್ಯಾಖ್ಯಾನಗಳ ಸಮಸ್ಯೆಯೇನು?


ನಾವು ಸಂಸ್ಕೃತಿ ಎನ್ನುವುದನ್ನು ಬರೀ ಲಲಿತ ಕಲೆ, ಆಧ್ಯಾತ್ಮಿಕ ಚಿಂತನೆಗಳಿಗೆ ಸೀಮಿತಗೊಳಿಸಿ ನೋಡಿದಾಗ ಅದು ಸಮಾಜದ ಮೇಲುವರ್ಗದ ಜನರ ಸಂಸ್ಕ್ಕೃತಿಯನ್ನು ಮಾತ್ರ ಪ್ರತಿನಿಧಿಸುತ್ತದೆ. ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿ ಎಂದರೇನು ಎಂದಾಕ್ಷಣ ಕಾಳಿದಾಸನನ್ನು ಹೇಳುತ್ತೇವೆಯೇ ಹೊರತು ಜನಪದ ಸಾಹಿತ್ಯವನ್ನು ಹೇಳುವುದಿಲ್ಲ. ಪಂಪನನ್ನು ಉದಾಹರಿಸುತ್ತೇವೆಯೇ ಹೊರತು ಮಲೆಮಾದೇಶ್ವರರನ್ನು ಉದಾಹರಿಸುವುದಿಲ್ಲ.

ಕನ್ನಡದಲ್ಲಿ ಸಂಸ್ಕೃತಿ ಚಿಂತನೆಯ ವ್ಯಾಖ್ಯಾನ ಯಾವ ಬಗೆಯದು? ಅದರ ಇತ್ತೀಚಿನ ಒಲವುಗಳೇನು?


ಅದು ಡಿ.ಆರ್. ನಾಗರಾಜ್ ಇರಬಹುದು, ಬರಗೂರು ರಾಮಚಂದ್ರಪ್ಪ, ರಹಮತ್ ತರೀಕೆರೆ ಮುಂತಾದವರೆಲ್ಲರೂ ಹೇಳುವ ಸಂಸ್ಕೃತಿ ಚಿಂತನೆ ಏನೆಂದರೆ ಅದು ಎಲ್ಲಾ ವರ್ಗಗಳಿಗೂ ಅನ್ವಯಿಸುವಂತಿರಬೇಕು ಅನ್ನುವುದು. ಎಲ್ಲರ ಅಪೇಕ್ಷೆ ನಿರೀಕ್ಷೆಗಳನ್ನೂ ಅದು ಒಳಗೊಳ್ಳುವುದಾಗಿರಬೇಕು. ಕೇವಲ ಒಂದು ವರ್ಗವನ್ನಲ್ಲ. ಹಾಗೆಯೇ ನಾವು ಲಿಖಿತ - ಮೌಖಿಕ, ಗ್ರಾಮೀಣ - ನಗರೀಕೃತ, ಲಿಪಿ ಸಹಿತ ಭಾಷೆ - ಲಿಪಿರಹಿತ ಭಾಷೆ, ಮುಂತಗಿ ನಾವು ಒಪ್ಪಿಕೊಂಡಿರುವ ಎಲ್ಲ ದ್ವಿಮಾನ ವೈರುಧ್ಯಗಳನ್ನು ಒಡೆಯುವಂತಹ ಚಿಂತನೆ ನಮಗೆ ಬೇಕು ಎನ್ನುವುದು. ಇದನ್ನು ನಾವು ಸಂಸ್ಕೃತಿ ಚಿಂತನೆ ಎನ್ನಬಹುದು. ಸಂಸ್ಕೃತಿ ಚಿಂತನೆಯೆಂದರೆ, ಒಂದು ಕಾಲಘಟ್ಟದ ಸಮಾಜದ ಪ್ರತಿಯೊಂದು ವರ್ಗವೂ ಬದುಕುವ ರೀತಿ, ಅದು ಇತರ ವರ್ಗಗಳೊಡನೆ ಹೊಂದಿರುವ ಸಂಬಂಧದ ಸ್ವರೂಪ, ಮತ್ತು ಆ ವರ್ಗ ದೇವರು-ಮಾನವ, ಮಾನವ ಸಂಬಂಧಗಳು, ಮಾನವ-ನಿಸರ್ಗ ಸಂಬಂಧ ಇತ್ಯಾದಿಗಳ ವಿಶ್ಲೇಷಣೆ ಹಾಗೂ ವ್ಯಾಖ್ಯಾನ. ಈ ದಿಕ್ಕಿನಲ್ಲಿ, ಇತ್ತೀಚೆಗೆ ಸಮಾಜದಂಚಿನಲ್ಲಿ ಬದುಕುತ್ತಿರುವವರ, ಬುಡಕಟ್ಟು ಜನಾಂಗಗಳ, ಇತ್ಯಾದಿ ಜನಾಂಗಗಳ ಹಾಗೂ ಅವರ ಸಾಹಿತ್ಯ-ಕಲೆ ಇತ್ಯಾದಿಗಳ ಅಧ್ಯಯನವನ್ನು ಕನ್ನಡ ಸಂಸ್ಕೃತಿಯ ಇತ್ತೀಚಿನ ಒಲವು ಎಂದು ಹೇಳಬಹುದು.



ಈ ಬಗೆಯ ವ್ಯಾಖ್ಯಾನಗಳಿಗೆ ನಮ್ಮ ಬಲಪಂಥೀಯ ಸಾಹಿತಿಗಳು ಹೇಗೆ ಸ್ಪಂದಿಸಿದ್ದಾರೆ?


ರೇಮಂಡ್ ವಿಲಿಯಮ್ಸ್ನ ಹೆಸರನ್ನು ಅವರು ಕೇಳಿದ್ದಾರೋ ಇಲ್ಲವೋ ನನಗೆ ತಿಳಿದಿಲ್ಲ. ಪ್ರಾಯಶಃ ಕೇಳಿದ್ದರೂ ಇರಬಹುದು. ಓದಿದ್ದರೂ ಇರಬಹುದು. ಒಂದೊಮ್ಮೆ ಓದಿದ್ದರೂ ಅದಕ್ಕೆ ಅವರು ಮಹತ್ವ ಕೊಡುವುದಿಲ್ಲ. ಇವನೂ ಒಬ್ಬ ಕಮ್ಯೂನಿಷ್ಟು ಎಂದು ಮೂಲೆಗೆಸೆದಿರುತ್ತಾರೆ ಅಷ್ಟೆ. ಅದರ ಮಹತ್ವ ಗೊತ್ತಿದ್ದರೂ ಅದನ್ನು ತಿಳಿದುಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಉದಾಹರಣೆಗೆ ಭೈರಪ್ಪನವರು ಆವರಣದ ಕೊನೆಯಲ್ಲಿ ಆಕರ ಕೃತಿಗಳ ಪಟ್ಟಿ ಕೊಟ್ಟಿದ್ದಾರಲ್ಲ ಅದರಲ್ಲಿರುವ ಎಲ್ಲವೂ ಬಲಪಂಥೀಯರದ್ದೇ ವಿನಃ ಒಂದೂ ಎಡಪಂಥೀಯ ಚಿಂತಕರು ಎನ್ನುವವರ ಪುಸ್ತಕವೇ ಇಲ್ಲ. ಅದನ್ನು ಗಮನಕ್ಕೇ ತರುವುದಿಲ್ಲ. ರೋಮಿಲಾ ಥಾಪರ್, ಬಿಪಿನ್ ಚಂದ್ರರಂತವರ ಹೆಸರುಗಳೇ ಇಲ್ಲ. ರೇಮಂಡ್ ವಿಲಿಯಮ್ಸ್ ಹೆಸರಿಲ್ಲ. ಇವರುಗಳನ್ನೇ ಬಿಟ್ಟು ಭಾರತೀಯ ಇತಿಹಾಸ, ಸಂಸ್ಕ್ಕೃತಿಯ ಬಗ್ಗೆ ಏನು ಮಾತಾಡಲು ಸಾಧ್ಯ? ಭೈರಪ್ಪನವರಿರಲೀ, ಚಿದಾನಂದ ಮೂರ್ತಿಯವರಿರಲೀ ತಂತಮ್ಮ ಕ್ಷೇತ್ರಗಳಲ್ಲಿ ಬಹಳಷ್ಟು ಕೆಲಸ ಮಾಡಿರುವವರೇ ಎಂಬುದನ್ನು ಒಪ್ಪಿಕೊಂಡೂ, ಅವರ ಬಗ್ಗೆ ಗೌರವದ ಜೊತೆಗೇ ಹೇಳುವುದಾದರೆ, ಇಬ್ಬರೂ ಸಹ ತಮ್ಮ ಐಡಿಯಾಲಜಿಯ ಕುರಿತು ಹೊಂದಿರುವ ಬದ್ಧತೆಯಿಂದಾಗಿ, ತಾವು ನಂಬಿದ್ದೇ ಸತ್ಯ, ಹಾಗಾಗಿ ಅದರ ಬಗ್ಗೆ ಚರ್ಚೆ ಬೇಕಿಲ್ಲ, ಅದು ವಾದ ಮಾಡುವ ವಿಷಯ ಅಲ್ಲ, ಅದು ಪರಮ ಸತ್ಯ ಎಂಬ ನಿಲುವಿನವರು. ’ನಾನು ಹೇಳುವುದು ಸತ್ಯ’ ಎಂಬ ಧೋರಣೆ ಹೊಂದಿರುವುದರಿಂದಾಗಿ ಅವರಿಗೆ ವೈಚಾರಿಕ ಸ್ವಾತಂತ್ರ್ಯ ಕಡಿಮೆಯಾಗುತ್ತದೆ. ಇದು ಎಡಪಂಥೀಯರ ವಿಷಯದಲ್ಲೂ ಅಷ್ಟೇ ಸತ್ಯ. ಒಂದು ವೈಚಾರಿಕತೆಗೆ ಸಂಪೂರ್ಣ ತಮ್ಮನ್ನು ಒಪ್ಪಿಸಿಕೊಂಡವರು ಸಮತೋಲನವನ್ನು ಸಂಪೂರ್ಣ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಬಲಪಂಥೀಯರು, ಎಡಪಂಥೀಯರು, ಜಾತ್ಯಾತೀತವಾದಿಗಳು, ಜಾತ್ಯಾತೀತರಲ್ಲದವರು, ಯಾರಿಗೆ ಬೇಕಾದರೂ ಅನ್ವಯವಾಗಬಹುದು. ಅಂತಿಮವಾಗಿ ಅದು ಕುರುಡು ನಂಬಿಕೆಯೆಡೆ ವಾಲುವುದು ಶತಃಸಿದ್ಧ.

ವೈಚಾರಿಕ ಸ್ವಾತಂತ್ರ್ಯ ಕಳೆದುಕೊಳ್ಳುವುದರ ಪರಿಣಾಮವೇನು?


ನಮ್ಮ ಚರಿತ್ರೆಯಲ್ಲೂ ಇಂತಹವು ಆಗಿವೆ. ಅದು ಶೈವ - ವೈಷ್ಣವರ ನಡುವಿನ ಸಂಘರ್ಷವೇ ಇರಬಹುದು. ಶಿವ, ವಿಷ್ಣು, ಕ್ರಿಸ್ತ, ಅಥವಾ ಅಲ್ಲಾ ಹೀಗೆ ನನ್ನ ದೇವರು ಬಿಟ್ಟು ಬೇರೆ ದೇವರಿಲ್ಲ, ನನ್ನ ದೇವರನ್ನು ಯಾರು ಮನ್ನಿಸೋಲ್ಲ ಅವರೆಲ್ಲರೂ ಪಾಖಂಡಿಗಳು, ಎನ್ನುವ ನಿಲುವೂ ಈ ಚೌಕಟ್ಟಿನೊಳಗೇ ಬರುತ್ತದೆ. ಅಂದರೆ ನಮ್ಮ ವೈಚಾರಿಕ ಸ್ವಾತಂತ್ರ್ಯವನ್ನು ನಾವು ಧರ್ಮದ ಹೆಸರಿನಲ್ಲಿ ಅಥವಾ ಸಂಸ್ಕ್ಕೃತಿಯ ಹೆಸರಿನಲ್ಲಿ ಅಥವಾ ದೇಶದ ಹೆಸರಿನಲ್ಲಿ ನಾವೇ ಕುಂಠಿತಗೊಳಿಸಿಕೊಂಡಿರುತ್ತೇವೆ. ಅದರಿಂದಾಗಿ ಕಣ್ಣಿಗೆ ಕಟ್ಟಿದ ಕುದುರೆಯಂತೆ ಒಂದೇ ದಿಕ್ಕಿನಲ್ಲಿ ಓಡುತ್ತಿರುತ್ತೇವೆ. ಅದಕ್ಕೆ ಬದಲು ಭಿನ್ನ ಭಿನ್ನ ದೃಷ್ಟಿಕೋನಗಳನ್ನೂ ಇಟ್ಟುಕೊಂಡು ಅದೂ ತಪ್ಪಿರಬಹುದು ಎಂಬ ಸಂದೇಹಾತ್ಮಕ ಧೋರಣೆಯನ್ನು (ಸ್ಕೆಪ್ಟಿಕಲ್ ಆಟಿಟ್ಯೂಡ್) ಹೊಂದಿರಬೇಕು. ಎಲ್ಲವನ್ನೂ ಪ್ರಶ್ನಿಸುವ ಗುಣ ಏನಿರುತ್ತದಲ್ಲ ಅದೊಂದೇ ಆಧುನಿಕ ಕಾಲದಲ್ಲಿ ಆರೋಗ್ಯಪೂರ್ಣವಾದುದು. ಯಾವುದನ್ನೇ ಪೂರ್ಣವಾಗಿ ನಂಬಿದರೂ ಅದು ಒಂದಲ್ಲಾ ಒಂದು ಕುರುಡು ಓಣಿಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ.


ಕನ್ನಡ ಸಾಹಿತ್ಯದ ಸಮಕಾಲೀನ ನೆಲೆಗಳೇನು?


ಈ ಪ್ರಶ್ನೆಯ ವ್ಯಾಪ್ತಿ ಅಗಾಧವಾಗಿದೆ. ತುಂಬಾ ಸಂಕ್ಷಿಪ್ತವಾಗಿ ಹೇಳಬೇಕಾದರೆ: ಕಾವ್ಯದಲ್ಲಿ: ಆದರ್ಶ ಸಮಾಜದ ಸಾಧ್ಯತೆ ಹಾಗೂ ಸ್ವರೂಪಗಳನ್ನು ಕುರಿತ ಚಿಂತನೆ (ವೀರಪ್ಪ ಮೊಯಿಲಿ ಅವರ ಶ್ರೀ ರಾಮಾಯಣ ಮಹಾನ್ವೇಷಣಂ; ಕಂಬಾರರ ಎಲ್ಲಿದೆ ಶಿವಾಪುರ; ಎಚ್. ಎಸ್. ಶಿವಪ್ರಕಾಶ್ ಅವರ ಮತ್ತೆ ಮತ್ತೆ; ಇತ್ಯಾದಿ); ಜಾನಾಂಗಿಕ ಚರಿತ್ರೆ (ಕಾದಂಬರಿ: ಮಲ್ಲಿಕಾರ್ಜುನ ಹಿರೇಮಠ್, ಹವನ; ವಿಷ್ಣು ನಾಯ್ಕ, ಜಂಗುಂ ಜಕ್ಕುಂ; ಕೆ. ಗೋಪಾಲಕೃಷ್ಣ, ಸ್ವಪ್ನ ಸಾರಸ್ವತ; ಇತ್ಯಾದಿ); ನಾಟಕ: ಸ್ಥಳೀಯ ದೃಷ್ಟಿಕೊನದ ಚರಿತ್ರೆ (ಕಂಬಾರರ ಶಿವರಾತ್ರಿ; ಇತ್ಯಾದಿ). ಒಟ್ಟಾರೆಯಾಗಿ ಹೇಳಬೇಕಾದರೆ, ಕಳೆದ ಒಂದು-ಒಂದೂವರೆ ದಶಕಗಳ ಕಾಲವನ್ನು ’ನೂತನ ಪ್ರಯೋಗಗಳ ಕಾಲ; ನೂತನ ವೈಚಾರಿಕತೆಯ ಕಾಲ, ಮತ್ತು ಸಿದ್ಧ ವೈಚಾರಿಕ ಚೌಕಟ್ಟುಗಳನ್ನು ಮೀರುವ ಕಾಲ ಎಂದು ಹೇಳಬಹುದು.

ಜಾನಪದ ಅಧ್ಯಯನ ಇತ್ತೀಚೆಗೆ ಪ್ರಾಮುಖ್ಯತೆ ಪಡೆದಿದೆ. ಸಂಸ್ಕೃತಿ ಚಿಂತನೆಯಲ್ಲಿ ಜಾನಪದ ಅಧ್ಯಯನ ಪಡೆದುಕೊಳ್ಳುತ್ತಿರುವ ಪಾತ್ರವೇನು?

ಜಾನಪದ ಅಧ್ಯಯನ ಶಿಷ್ಟ ವರ್ಗಗಳ ವೈಚಾರಿಕತೆ ಹಾಗೂ ಲೋಕದೃಷ್ಟಿ ಇವುಗಳನ್ನು ಮೀರುವ ಹಾಗೂ ಭಿನ್ನ ವೈಚಾರಿಕತೆ ಮತ್ತು ಲೋಕದೃಷ್ಟಿಗಳನ್ನು ಅರಿಯುವ ಪರ್ಯಾಯ ಮಾರ್ಗಗಳನ್ನು ನಮಗೆ ತೆರೆಯುತ್ತದೆ; ಇದೇ ಹಾದಿಯನ್ನು ಸಂಸ್ಕೃತಿ ಚಿಂತನೆಯೂ ತುಳಿಯುವುದರಿಂದ ಎರಡೂ ಪರಸ್ಪರ ಪೂರಕವಾಗಬಹುದು.

ಜಾಗತಿಕ ಜಾನಪದ ಮಹಾಕಾವ್ಯಗಳ ಅಧ್ಯಯನ ನಡೆಸಿದ್ದೀರಿ. ಕನ್ನಡ ಜಾನಪದಕ್ಕೂ ಇತರೆ ಜಾನಪದಗಳಿಗೂ ತುಲನಾತ್ಮವಾಗಿ ಕಾಣುವ ಸಾಮ್ಯತೆ ಭಿನ್ನತೆಗಳೇನು?


ತುಂಬಾ ಸ್ಥೂಲವಾಗಿ ಹೇಳಬೇಕಾದರೆ, ಕನ್ನಡೇತರ ಜಾನಪದ ಮಹಾಕಾವ್ಯಗಳು ನಾಯಕನ ದೈಹಿಕ ಸಾಹಸ-ಧೈರ್ಯ-ಶೌರ್ಯಗಳಿಗೆ ಒತ್ತು ಕೊಟ್ಟರೆ ಕನ್ನಡದ ಪ್ರಮುಖ ಜಾನಪದ ಮಹಾಕಾವ್ಯಗಳು (ಮಲೆ ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರಲಿಂಗ, ಇತ್ಯಾದಿ) ನಾಯಕನ ಸಾಮೂಹಿಕ ಕಾರ್ಯಗಳಿಗೆ, ಅವನ ಆಧ್ಯಾತ್ಮಿಕ ಸಾಧನೆಗಳಿಗೆ, ಮತ್ತು ವಿಶ್ವಸೃಷ್ಟಿಯ ಎಲ್ಲಾ ಜೀವಜಂತುಗಳೂ ಸಮಾನ ಜೀವಸೂತ್ರದಿಂದ ಬಂಧಿಸಲ್ಪಟ್ಟಿವೆ ಎಂಬಂತಹ ಪೂರ್ಣ ದೃಷ್ಟಿಗೆ ಒತ್ತು ಕೊಡುತ್ತವೆ. ಮಾದೇಶ್ವರ, ಮಂಟೇಸ್ವಾಮಿ ಇವರುಗಳಂತಹ ’ಯೋಗಿ’ಗಳನ್ನು ನಾಯಕರಾಗುಳ್ಳ ಮೌಖಿಕ ಮಹಾಕಾವ್ಯಗಳು, ಮತ್ತು ಬುಡಕಟ್ಟು ಜನಾಂಗಗಳ ’ರಾಮಾಯಣ-ಮಹಾಭಾರತ’ಗಳು ಭಾರತೀಯೇತರ ಮೌಖಿಕ ಪರಂಪರೆಯಲ್ಲಿ (ನನಗೆ ತಿಳಿದಂತೆ ) ಇಲ್ಲ.

ಜಾನಪದ ಸಾಹಿತ್ಯದಲ್ಲಿ ಬರುವ ಪ್ರತಿರೋಧದ ನೆಲೆಗೆ ಕೆಲ ನಿದರ್ಶನ ನೀಡಬಹುದೇ?


ಮೊದಲಿಗೆ ಮಲೆ ಮಾದೇಶ್ವರನ ಮೌಖಿಕ ಕಾವ್ಯದಲ್ಲಿ ನೋಡುವುದಾದರೆ ಒಂದು ನೆಲೆಯಲ್ಲಿ ಈ ಮಹಾಕಾವ್ಯ ಕಾಲಾಂತರದಲ್ಲಿ ಜೈನ ಧರ್ಮವೂ ಜಾತಿಯಂತಹ ಶ್ರೇಣೀಕೃತ ವ್ಯವಸ್ಥೆಯನ್ನು ಒಪ್ಪಿಕೊಂಡುದನ್ನು ಪ್ರತಿಭಟಿಸುತ್ತದೆ: ರಾಜನು ಮಾದೇಶ್ವರನು ಮಾದಿಗನೆಂದು ತಿರಸ್ಕಾರದಿಂದ ಕಂಡು, ಅವನಿಗೆ ತನಗೋಸ್ಕರ ಒಂದು ಜೊತೆ ಪಾದರಕ್ಷೆಗಳನ್ನು ಹೊಲಿದು ಕೊಡುವಂತೆ ಆದೇಶಿಸುತ್ತಾನೆ. ಮಾದೇಶ್ವರನಾದರೋ ಮಹಾ ಶರಣ ಹರಳಯ್ಯನ ’ಉರಿ ಚಮ್ಮಾಳಿಗೆ’ಗಳನ್ನೇ ತಂದು, ಅವುಗಳಲ್ಲಿ ಕಾಲಿಡಲು ಶ್ರವಣಾಸುರನನಿಗೆ ಹೇಳುತ್ತಾನೆ; ಅದರಂತೆಯೇ, ದರ್ಪದಿಂದ ಆ ಉರಿ ಚಮ್ಮಾಳಿಗೆಗಳನ್ನು ಮೆಟ್ಟಿದ ಕೂಡಲೇ ಶ್ರವಣಾಸುರನು ಉರಿದು ಭಸ್ಮವಾಗುತ್ತಾನೆ. ಇನ್ನೊಂದು ನೆಲೆಯಲ್ಲಿ ಈ ಕಾವ್ಯ ಸಂಸ್ಥೀಕರಣಗೊಂಡ ಮಠ-ಮಾನ್ಯಗಳನ್ನು ತಿರಸ್ಕರಿಸುತ್ತದೆ: ಇನ್ನೊಂದು ನೆಲೆಯಲ್ಲಿ, ಮಾನವಕೇಂದ್ರಿತ ಲೋಕದೃಷ್ಟಿಯನ್ನು ತಿರಸ್ಕರಿಸಿ, ಹಾವು-ಚೇಳುಗಳನ್ನೂ ಮನುಷ್ಯರ ಕೈಗೆ ಸಿಗದಂತೆ ದೂರವಿಟ್ಟು, ಹುಲಿವಾಹನನಾಗಿ, ತನ್ನ ಸಾಧನೆಯನ್ನು ಮುಂದುವರೆಸುತ್ತಾನೆ. ಮಂಟೇಸ್ವಾಮಿ ಕಾವ್ಯವು ಸಂಸ್ಥೀಕರಣಗೊಂಡ ವೀರಶೈವ ಧರ್ಮವನ್ನು ವಿಡಂಬಿಸುತ್ತದೆ: ಕಲ್ಯಾಣದ ಶರಣರ ಹಾಗೂ ಬಸವಣ್ಣನವರ ಭಕ್ತಿ-ನಿಷ್ಠೆಗಳನ್ನು ಪರೀಕ್ಷಿಸಲು, ಮಂಟೇಸ್ವಾಮಿ ತನ್ನ ದೇಹವನ್ನೆಲ್ಲ ಕಜ್ಜಿಯಿಂದ ತುಂಬಿಕೊಂಡು, ಒಂದು ತಿಪ್ಪೆಯಲ್ಲಿ ಕುಳಿತಿದ್ದು ಬಸವಣ್ಣನವರನ್ನು ಕಾಣುತ್ತಾನೆ; ಅನಂತರ, ಶರಣರು ಸ್ನಾನಕ್ಕೆ ಹೋದಾಗ, ಅವರ ಲಿಂಗಗಳನ್ನೆಲ್ಲಾ ಮಾಯ ಮಾಡಿ, ಅವುಗಳನ್ನು ಮತ್ತೆ ಪಡೆಯುವಂತೆ ಶರಣರನ್ನು ಆಹ್ವಾನಿಸುತ್ತಾನೆ; ಅವರೆಲ್ಲರೂ ಸೋತು ಓಡಿ ಹೋಗುತ್ತಾರೆ. ಎಂದರೆ, ಶರಣರಲ್ಲಿ ಎಲ್ಲರಿಗೂ --ದಲಿತರಿಗೆ, ರೋಗಿಗಳಿಗೆ, ದರಿದ್ರರಿಗೆ ಕೂಡಾ -- ಸಮಾನ ಸ್ಥಾನವಿರಬೇಕು ಎಂಬುದನ್ನು; ಮತ್ತು, ಲಿಂಗಧಾರಣೆ, ಪೂಜೆ, ಇತ್ಯಾದಿ ಬಾಹ್ಯಾಚರಣೆಗಳಿಂದ ವ್ಯಕ್ತಿಯೋರ್ವನು ನಿಜ ಶರಣನಾಗಲು ಸಾಧ್ಯವಿಲ್ಲ ಎಂದು ಈ ಕಾವ್ಯದ ಪ್ರಮುಖ ಭಾಗಗಳು ನಿರೂಪಿಸುತ್ತವೆ. ಹಾಗೆಯೇ, ಮುಂದೆ, ತಾವೇ ಶ್ರೇಷ್ಠರೆಂದು ಕೊಬ್ಬಿದ್ದ ಪಾಂಚಾಳರನ್ನೂ ಮಂಟೇಸ್ವಾಮಿ ಗೆದ್ದು ತನ್ನ ಒಕ್ಕಲಾಗಿ ಮಾಡಿಕೊಳ್ಳುತ್ತಾನೆ.



ಅನುವಾದ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ನಡೆಸಿದ್ದಿರಿ. ಕನ್ನಡದಲ್ಲಿ ಅನುವಾದ ಕ್ಷೇತ್ರದ ಸವಾಲುಗಳೇನು?


ಅನುವಾದ ಎನ್ನುವ ಕಾರ್ಯ ಎರಡು ಭಾಷಿಕ ಜನಾಂಗಗಳನ್ನು ಹಾಗೂ ಅವರ ಸಂಸ್ಕೃತಿ-ವೈಚಾರಿಕತೆಗಳನ್ನು ಬೆಸೆಯುವ ಕಾರ್ಯ. ಈ ಕಾರ್ಯದಲ್ಲಿ ಇಂಗ್ಲೀಷ್-ಫ್ರೆಂಚ್ ಇತ್ಯಾದಿ ’ಅಂತಾರಾಷ್ಟ್ರೀಯ’ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸುವಾಗ ತುಂಬಾ ಸ್ವಾತಂತ್ರ್ಯ ವಹಿಸುವುದು; ಮತ್ತು ಕನ್ನಡ-ಹಿಂದಿ ಇತ್ಯಾದಿ ’ನಮ್ಮ’ ಭಾಷೆಗಳಿಂದ ಇಂಗ್ಲೀಷ್-ಫ್ರೆಂಚ್ ಭಾಷೆಗಳಿಗೆ ಅನುವಾದಿಸುವಾಗ ಮೂಲಕ್ಕೆ ತುಂಬಾ ವಿಧೇಯವಾಗಿರುವುದು ಇತ್ತೀಚಿನ ’ವಸಾಹತೋತ್ತರ ಅನುವಾದಗಳ’ ಸ್ವರೂಪವಾಗುತ್ತಿದೆ. ಇದಕ್ಕೆ ಬದಲಾಗಿ, ಅನುವಾದದ ನಿರೀಕ್ಷಿತ ಓದುಗ ಹಾಗೂ ಮೂಲಕೃತಿಯ ಸಂಸ್ಕೃತಿ ಇವೆರಡಕ್ಕೂ ಬದ್ಧನಾಗಿರುವುದು ಹೇಗೆ ಎಂಬುದು ಎಲ್ಲಾ ಅನುವಾದಕರೂ ಎದುರಿಸುವ ಸವಾಲು; ಇದು ಕನ್ನಡ ಅನುವಾದಕರೂ ಎದುರಿಸುವ ಸವಾಲು.

ಇತ್ತೀಚೆಗೆ ನೊಬೆಲ್ ಪುರಸ್ಕೃತ ವಿ.ಎಸ್.ನೈಪಾಲ್ ಮಹಿಳಾ ಸಾಹಿತ್ಯವನ್ನು, ಮಹಿಳೆಯರನ್ನು ಅವಮಾನಿಸುವ ಹೇಳಿಕೆ ನೀಡಿದರು. ಒಬ್ಬ ಸಾಹಿತಿಯಾಗಿ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೀರಿ?


ಇದು ಸಂಪೂರ್ಣವಾಗಿ ಅಲಕ್ಷಿಸಬೇಕಾದ ಸಂಗತಿ; ಈ ಬಗೆಯ ಹೇಳಿಕೆ ಸಲ್ಮಾನ್ ರಶ್ದಿಯಿಂದಲೂ ಒಮ್ಮೆ ಬಂದಿತ್ತು (’ಶ್ರೇಷ್ಠ ಭಾರತೀಯ ಸಾಹಿತ್ಯವೆಂದರೆ ಭಾರತೀಯರಿಂದ ಇಂಗ್ಲೀಷ್‌ನಲ್ಲಿ ಬರೆದ ಸಾಹಿತ್ಯ’); ಇಂತಹ ಹೇಳಿಕೆಗಳನ್ನು ನಿರ್ಲಕ್ಷ್ಯದಿಂದ ಕಾಣುವುದೇ ಅವುಗಳಿಗೆ ನಾವು ಕೊಡಬಹುದಾದ ಉತ್ತರ.
ಕನ್ನಡ ವಿಮರ್ಷಾ ಲೋಕದಲ್ಲಿ ಸ್ತ್ರೀಸಂವೇದನೆಯ ಕೊರತೆ ಎಂಬ ಅಭಿಪ್ರಾಯವಿದೆ. ವಿಮರ್ಷಕರಾಗಿ ನಿಮ್ಮ ಅಭಿಮತವೇನು?
ಈ ಪ್ರಶ್ನೆಯ ಅರ್ಥ ’ವಿಮರ್ಶೆಯಲ್ಲಿ ಪುರುಷರ ಹೋಲಿಕೆಯಲ್ಲಿ ಸ್ತ್ರೀಯರ ಸಂಖ್ಯೆ ಕಮ್ಮಿ ಇದೆ’ ಎಂದಾದರೆ, ಆ ಅಭಿಪ್ರಾಯ ಸರಿ. ಆದರೆ, ಈ ಸಂದರ್ಭದಲ್ಲಿ ಕ್ರಿಯಾಶೀಲರಾಗಿರುವ ಸುಮಿತ್ರಾ ಬಾಯಿ, ಆಶಾದೇವಿ, ಪ್ರಭಾವತಿ, ವಿಜಯಾ ಸುಬ್ಬರಾಜ್, ಇತ್ಯಾದಿ ಅನೇಕರ ಅರ್ಥಪೂರ್ಣ ವಿಮರ್ಶೆಯನ್ನು ಮರೆಯುವಂತಿಲ್ಲ.


ಸಾಹಿತ್ಯ ವಿಮರ್ಷೆ ಎನ್ನುವುದು ಸಾಮಾನ್ಯ ಓದುಗರಿಗೆ ಕಬ್ಬಿಣದ ಕಡಲೆಯಂತಾಗಿದೆ. ಇದು ಹೀಗೇ ಇರಬೇಕಾ?


ಸಾಮಾನ್ಯ ಓದುಗರು ಎಂದರೆ ಸಾಹಿತ್ಯಾನುಭವ ಅಷ್ಟಾಗಿ ಇಲ್ಲದವರು ಎಂದಾದರೆ ನೀವು ಹೇಳುವ ’ಕಬ್ಬಿಣದ ಕಡಲೆ’ಯ ಉಪಮೆ ಸರಿ. ಆದರೆ, ಆ ಕ್ಷೇತ್ರದ ಸಾಕಷ್ಟು ಅನುಭವವಿಲ್ಲದೆ ನೀವು ಶಾಸ್ತ್ರೀಯ ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ, ಇತ್ಯಾದಿಗಳನ್ನು ಗ್ರಹಿಸುವುದು ಸಾಧ್ಯವೆ? ಈ ಕಾರಣಕ್ಕಾಗಿಯೇ, ವಿಮರ್ಶಕನನ್ನು (ಎಂದರೆ ಸಹೃದಯನನ್ನು) ವರ್ಣಿಸುವಾಗ ಅಭಿನವಗುಪ್ತರು ಅವನ ವ್ಯುತ್ಪತ್ತಿ ಹಾಗೂ ಅನುಭವಕ್ಕೆ ಒತ್ತು ಕೊಡುತ್ತಾರೆ: ಏಷಾಂ ಕಾವ್ಯಾನುಶೀಲಾನಾಂ, ಅಭ್ಯಾಸವಶಾತ್ . . . ಸ್ವಲ್ಪವೂ ತಯಾರಿಯಿಲ್ಲದೆ, ನಾವು ಯಾವ ಕ್ಷೇತ್ರಕ್ಕೆ ಹೋದರೂ ಅದು ’ಕಬ್ಬಿಣದ ಕಡಲೆ’ಯಂತೆಯೇ

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಮಾತು ಕತೆ ಚೆನ್ನಾಗಿದೆ. ಸಿ.ಎನ್. ಆರ್ ಅವರ ಹೊಸಮಡಿಯ ಮೇಲೆ ಚದುರಂಗ ಜಾನಪದ ಅಧ್ಯಯನಕಾರರು ಓದಲೇಬೇಕಾದ ಪುಸ್ತಕ. –ಚಂದ್ರು,ಹಂಪಿ