ಶನಿವಾರ, ಏಪ್ರಿಲ್ 2, 2011

ಸಂಗ್ರಹಯೋಗ್ಯ: ದಕ್ಷಿಣ ಭಾರತೀಯ ಜಾನಪದ ಕೋಶ


-ಅರುಣ್

ಈಚೆಗಷ್ಟೆ ಬಿಡುಗಡೆಯಾದ ದಕ್ಷಿಣ ಭಾರತೀಯ ಜಾನಪದ ಕೋಶ ಒಂದು ಸಂಗ್ರಹಯೋಗ್ಯ ಕೃತಿ. ೯೪೭ ಪುಟಗಳ ೭೧೦ ದಾಖಲುಗಳನ್ನು ಒಳಗೊಂಡ ಎರಡು ಸಂಪುಟಗಳು ಮಾಹಿತಿಯ ಕಣಜದಂತಿವೆ. ಈ ಎರಡೂ ಸಂಪುಟಗಳ ಬೆಲೆ ಎಂಟುನೂರು ರೂಪಾಯಿಗಳು. ಕರ್ನಾಟಕ, ಕೇರಳ, ಆಂದ್ರ, ತಮಿಳುನಾಡು ಒಳಗೊಂಡ ನಾಲ್ಕು ರಾಜ್ಯಗಳ ಜಾನಪದದ ಪ್ರಾತಿನಿಧಿಕ ಕೋಶ ಇದಾಗಿದೆ. ಇಲ್ಲಿ ಆಯಾ ರಾಜ್ಯದ ಸಮೀಕ್ಷಾ ಲೇಖನಗಳು, ಮೌಖಿಕ ಜಾನಪದ, ಆಚಾರ ಸಂಪ್ರದಾಯ, ಜನ ಸಮುದಾಯ, ವಸ್ತು ಸಂಸ್ಕೃತಿ, ಕಲೆಗಳ ವಿಭಾಗದಲ್ಲಿ ಬರಹಗಳನ್ನು ಜೋಡಿಸಲಾಗಿದೆ. ಇವುಗಳ ಅಕಾರಾದಿ ಪಟ್ಟಿಯನ್ನು ಸಂಪುಟದ ಕೊನೆಯಲ್ಲಿ ಕೊಡಲಾಗಿದೆ. ಇಂತಹದ್ದೊಂದು ಕೆಲಸ ಕನ್ನಡ ಜಾನಪದದಲ್ಲಿ ಮೊದಲನೆಯದು ಇರಬೇಕು.

ಕನ್ನಡ ಶಾಸ್ತ್ರೀಯ ಭಾಷೆಯ ಸಂಶೋಧನೆಗಾಗಿ ಕರ್ನಾಟಕ ಸರಕಾರದಿಂದ ನೀಡಿದ ನೆರವು ಮತ್ತು ದ್ರಾವಿಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಶಾಸ್ತ್ರೀಯ ಭಾಷೆಯ ಯೋಜನೆಯಲ್ಲಿ ಇದು ಒಳ್ಳೆಯ ಕೆಲಸ. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಬಂದ ವಿಶ್ವಕೋಶಗಳಿಗೆ ಇದು ಒಳ್ಳೆಯ ಸೇರ್ಪಡೆ. ದ್ರಾವಿಡ ಅಧ್ಯಯನ ಕೈಗೊಳ್ಳುವವರಿಗೆ, ಜಾನಪದ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶಿಸುವವರಿಗೆ ಈ ಸಂಪುಟಗಳು ಉತ್ತಮ ಮಾಹಿತಿಗಳನ್ನು ಒದಗಿಸುತ್ತವೆ. ನಾಲ್ಕು ರಾಜ್ಯಗಳ ಜನಪದ ಪರಂಪರೆಯನ್ನು ತೌಲನಿಕವಾಗಿ ಅಭ್ಯಸಿಸುವ ಆಸಕ್ತಿ ಇರುವವರಿಗೆ ಈ ಕೋಶ ಹೆಚ್ಚು ಉಪಯುಕ್ತ. ಈ ಎಲ್ಲಾ ಕಾರಣದಿಂದಾಗಿ ಇದೊಂದು ಜಾನಪದ ಅಭ್ಯಾಸಿಗಳು ಸಂಗ್ರಹಿಸಬಹುದಾದ ಸಂಪುಟಗಳು.




ಇಂತಹ ಕೋಶಗಳಿಗೆ ಇರಬಹುದಾದ ಮಿತಿಗಳು ಇಲ್ಲಿಯೂ ಇವೆ. ಪ್ರೊ. ಅರ‍್ವಿಯಸ್ ಸುಂದರಂ ಅವರು ಹೇಳಿಕೊಳ್ಳುವಂತೆ ‘ಇದು ಪ್ರಾತಿನಿಧಿಕ ಪ್ರಯತ್ನವಷ್ಟೆ, ಇದನ್ನು ಬಹುಮುಖವಾಗಿ ವಿಸ್ತರಿಸಲು ಮತ್ತು ಉತ್ತಮಪಡಿಸಲು ಸಾಧ್ಯವಿದೆ’ ಎಂದಿರುವುದು ನಿಜ. ಈ ಸಂಪುಟ ಈ ತನಕದ ಜಾನಪದದ ತಿಳುವಳಿಕೆಯನ್ನು ವಿಸ್ತರಿಸುವಂತಿಲ್ಲ, ಬದಲಾಗಿ ನಮ್ಮ ಜಾನಪದದ ಮಾಹಿತಿಯ ನೆನಪಿನ ಪಟ್ಟಿಗೆಗೆ ಹೊಸ ಮಾಹಿತಿಗಳನ್ನು ಸೇರ್ಪಡೆಗೊಳಿಸುತ್ತದೆ. ಇನ್ನು ಈ ಸಂಪುಟದ ಕಾರ್ಯನಿರ್ವಾಹಕ ಸಂಪಾದಕರು, ಸಂಪಾದಕರು ಸಮಗ್ರವಾಗಿ ಈ ಸಂಪುಟದ ಅಷ್ಟೂ ಮಾಹಿತಿಯನ್ನು ಅಭ್ಯಸಿಸಿ ಒಂದು ಉಪಯುಕ್ತ ಪ್ರಸ್ತಾವನೆಯನ್ನು ಬರೆಯುವ ಅಗತ್ಯವಿತು. ಅದು ಇಲ್ಲಿ ಸಾಧ್ಯವಾಗಿಲ್ಲ. ಹಾಗಾಗಿ ಗಂಭೀರ ಪ್ರಸ್ತಾವನೆಯ ಕೊರತೆ ಈ ಸಂಪುಟಕ್ಕೆ ಇದೆ.

ಇಂತಹ ಕೆಲವು ಮಿತಿಗಳ ನಡುವೆ ಇದೊಂದು ಒಳ್ಳೆಯ ಪ್ರಯತ್ನ. ಇದು ಸಾಮೂಹಿಕ ಪ್ರಯತ್ನದ ಫಲ. ಇಲ್ಲಿ ಯೋಜನಾ ಸಹಾಯಕರಾಗಿ ದುಡಿದ ಡಾ. ಚಂದ್ರಪ್ಪ ಸೊಬಟಿ, ಮಣಿ, ಕೊಟ್ರೇಶ್ ಅವರಿಗೂ, ಈ ಸಂಪುಟಕ್ಕೆ ಬರೆದ ಕರ್ನಾಟಕ, ಕೇರಳ, ಆಂದ್ರ, ತಮಿಳುನಾಡು ಈ ಎಲ್ಲಾ ರಾಜ್ಯಗಳ ವಿದ್ವಾಂಸರಿಗೂ ಕನ್ನಡ ಜಾನಪದ ಬ್ಲಾಗ್ ಪರವಾಗಿ ಅಭಿನಂದನೆಗಳು. ಪ್ರಧಾನ ಸಂಪಾದಕರಾದ ಪ್ರೊ. ಎ. ಮುರಿಗೆಪ್ಪ, ಕಾರ್ಯನಿರ್ವಾಹಕ ಸಂಪಾದಕರಾದ ಪ್ರೊ. ಅರ‍್ವಿಯಸ್ ಸುಂದರಂ, ಸಂಪಾದಕರಾದ ಡಾ. ಸ.ಚಿ. ರಮೇಶ್ ಇವರ ಶ್ರಮವನ್ನು ಗೌರವಿಸಬಹುದು.


ಕೊನೆಗೊಂದು ಮಾತು: ಇಂದು ಈ ಓದುಗರು, ಕಂಪ್ಯೂಟರ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದಾಗಿ ಈ ಸಂಪುಟಗಳನ್ನು ಅಡಗು ತಟ್ಟೆಗಳಲ್ಲಿ ಅಡಗಿಸಿ (ಡಿ.ವಿ.ಡಿ ವರ್ಷನ್) ಪುಸ್ತಕದ ಜತೆ ಕೊಡುವುದು ಅವಶ್ಯವಿತ್ತು. ಇದಕ್ಕೆ ಇನ್ನೂ ಕಾಲ ಮಿಂಚಿಲ್ಲ ಈಗಲೂ ಇಡೀ ಸಂಪುಟದ ಡಿ.ವಿ.ಡಿ ವರ್ಷನ್ ಸಿದ್ದಪಡಿಸಲು ಸಾಧ್ಯವಿದೆ.

ಕಾಮೆಂಟ್‌ಗಳಿಲ್ಲ: