ಶನಿವಾರ, ಏಪ್ರಿಲ್ 23, 2011
ಅಖಿಲ ಭಾರತ ಜಾನಪದ ಸಮ್ಮೇಳನದ ಎರಡನೇ ದಿನ
ಜಾನಪದ ಸಮ್ಮೇಳನದ ಎರಡನೇ ದಿನ ಸಹಜವಾಗಿ ಆರಂಭವಾಯಿತು. ನಿನ್ನೆಯ ಜಾನಪದ ಕಲೆಗಳ ಮೆರವಣಿಗೆಯ ಗುಂಗಿನಿಂದ ಹೊರಬಂದ ಜಾನಪದ ವಿದ್ವಾಂಸರು ಈಗ ವಿದ್ವತ್ ಚಿಂತನೆಗೆ ಅಣಿಯಾದಂತಿತ್ತು. ಜಾನಪದ ಕಲಾವಿದರನ್ನು ಕೇಳುಗರನ್ನಾಗಿ ಕರೆತರಲಾಗಿತ್ತು. ಕಾರಣ ದೊಡ್ಡ ಸಭಾಂಗಣ ಖಾಲಿ ಖಾಲಿ ಹೊಡೆಯುವ ಭಯ ಆಯೋಜಕರನ್ನು ಕಾಡಿದ್ದಿರಬೇಕು. ಅಂತು ಇಂತು ಸೆಮಿನಾರುಗಳು ಪ್ರಾರಂಭವಾದವು. ರಂಗಮಂದಿರದ ವೇದಿಕೆ ಜಾನಪದ ಶೈಲಿಯಲ್ಲಿ ಸಿದ್ದಪಡಿಸಿದ್ದು ಆಕರ್ಷಕವಾಗಿತ್ತು.
ಕರ್ನಾಟಕದ ಬಹುಪಾಲು ಜಾನಪದ ವಿದ್ವಾಂಸರು ಈ ಸಮ್ಮೇಳನಕ್ಕೆ ಬಂದಿದ್ದರು. ಎಲ್ಲರೂ ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಕುಶಲೋಪರಿ ಮಾತನಾಡುತ್ತಾ ಒಂದು ಬಗೆಯ ಸಂಭ್ರಮವನ್ನು ಅನುಭವಿಸುತ್ತಿದ್ದರು. ಸಮ್ಮೇಳನದ ಈ ದಿನ ಒಟ್ಟು ನಾಲ್ಕು ಚಿಂತನಾ ಗೋಷ್ಠಿಗಳು ನಡೆದವು. ಒಂದು: ಪ್ರಾದೇಶಿಕ ಜಾನಪದ ಅಧ್ಯಯನ ಕುರಿತ ಮೊದಲ ಗೋಷ್ಠಿಯಲ್ಲಿ ಶ್ರೀರಾಮ ಇಟ್ಟಣ್ಣನವರ್, ಸೋಮನಾಥ ನುಚ್ಚಾ, ಪ್ರೇಮಾ ಸಿರ್ಸೆ, ರಾಜೇಂದ್ರ ಯರನಾಳೆ, ಸೋಮನಾಥ ಯಾಳವಾರ ಮಾತನಾಡಿದರು. ಎರಡು: ಪ್ರಾದೇಶಿಕ ಜಾನಪದ ಅಧ್ಯಯನದ ಎರಡನೇ ಗೋಷ್ಠಿಯಲ್ಲಿ ಪಿ.ಕೆ.ಖಂಡೋಬಾ, ಶಂಭು ಬಳಿಗಾರ, ಮಹೇಶ ತಿಪ್ಪಶೆಟ್ಟಿ, ಹೆಚ್. ಕಾಶೀನಾಥ ರೆಡ್ಡಿ ಮಾತನಾಡಿದರು. ಮೂರು: ಭಾರತದ ಜಾನಪದ ಅಧ್ಯಯನದ ಗೋಷ್ಠಿ ಒಂದರಲ್ಲಿ ಆರ‍್ವಿಯಸ್ ಸುಂದರಂ, ಎಸ್.ಎ ಕೃಷ್ಣ, ಸರಸ್ವತಿ ವೇಣುಗೋಪಾಲ್, ಕೃಷ್ಣಭಟ್ ಅರ್ತಿಕಜೆ, ಕೆ.ಎಮ್. ಭರತನ್ ಮಾತನಾಡಿದರು. ನಾಲ್ಕು: ಬದಲಾಗುತ್ತಿರುವ ಜಗತ್ತು ಮತ್ತು ಜಾನಪದ ಕುರಿತ ಗೋಷ್ಠಿಯಲ್ಲಿ ಹೆಚ್.ಜೆ.ಲಕ್ಕಪ್ಪಗೌಡ, ಟಿ.ಎನ್.ಶಂಕರನಾರಾಯಣ, ಟಿ.ಗೋವಿಂದರಾಜ, ಚಕ್ಕರೆ ಶಿವಶಂಕರ್, ರಂಗಾರೆಡ್ಡಿ ಕೋಡಿರಾಂಪುರ, ಪಿ.ಸುಬ್ಬಾಚಾರಿ ಮಾತನಾಡಿದರು.
(ಬಿದರಿ ಕಲೆಯ ಪ್ರತಿಮೆಗಳು)
ತಮಿಳು ಜಾನಪದವನ್ನು ಕುರಿತಂತೆ ತುಳಸಿ ವೇಣುಗೋಪಾಲ ಅವರು ಮಹಿಳಾ ನೆಲೆಯಲ್ಲಿ ಕೆಲವು ಹೊಸ ಸಂಗತಿಗಳನ್ನು ಹೇಳಿದರು. ಶಂಭು ಬಳಿಗಾರ ಅವರು ಜಾನಪದವನ್ನು ತಮ್ಮ ಅನುಭವದ ನೆಲೆಯಲ್ಲಿ ಮಾತನಾಡಿ ಸರಕಾರದ ಅಮಾನವೀಯ ಅಭಿವೃದ್ಧಿಯ ಮಾದರಿಗಳನ್ನು ವಿರೋಧಿಸುವ ಎದೆಗಾರಿಗೆ ಜಾನಪದ ವಿದ್ವಾಂಸರಿಗೆ ಬರದ ಹೊರತು ಜಾನಪದವನ್ನು ಉಳಿಸುವ ಮಾತು ಕೇವಲ ಬೂಟಾಟಿಕೆ ಎನ್ನುವ ಅರ್ಥದಲ್ಲಿ ಮಾತನಾಡಿದರು. ಚಕ್ಕರೆ ಶಿವಶಂಕರ್ ಸಾಮಾಜಿಕ ನ್ಯಾಯದ ನೆಲೆಯಲ್ಲಿ ತಳಸಮುದಾಯಗಳು ಪ್ರತಿರೋಧಕ ಶಕ್ತಿಯನ್ನು ಪಡೆಯಬೇಕಾಗಿದೆ, ಅಂತಹ ಶಕ್ತಿಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಜಾನಪದ ಅಧ್ಯಯನಗಳು ಚಲಿಸಬೇಕು ಎಂದರು. ರಂಗಾರೆಡ್ಡಿ ಕೋಡಿರಾಂಪುರ ಅವರು ಹೊಸ ವಿದ್ಯಮಾನಗಳ ಜತೆ ಜಾನಪದ ಹೇಗೆ ಹೊಸದಾಗಿ ಹುಟ್ಟುತ್ತದೆ ಎನ್ನುವ ಬಗ್ಗೆ ಕೆಲವು ಉದಾಹರಣೆಗಳನ್ನು ನೀಡಿ ನಗರಗಳಲ್ಲಿ ಜಾನಪದ ವರ್ಗದ ನೆಲೆಯಲ್ಲಿ ಹುಟ್ಟುತ್ತಿದೆ ಎಂದರು. ಎಸ್.ಎ.ಕೃಷ್ಣಯ್ಯ ಕರ್ನಾಟಕ ಜಾನಪದ ಅಧ್ಯಯನದಲ್ಲಿ ಹೆಚ್ಚು ಚರ್ಚೆಯಾಗದ ಕೆಲವು ಸಂಗತಿಗಳ ಬಗ್ಗೆ ಗಮನಸೆಳೆದರು.
ಉಳಿದಂತೆ ಇಲ್ಲಿ ಮಾತನಾಡಿದ ಬಹುಪಾಲು ಜಾನಪದ ವಿದ್ವಾಂಸರ ಮಾತುಗಳಲ್ಲಿ ಜಾನಪದ ನಶಿಸುತ್ತಿರುವ ಬಗ್ಗೆ ಆತಂಕ ಬೇರೆ ಬೇರೆ ನೆಲೆಯಲ್ಲಿ ಮಂಡನೆಯಾಯಿತು. ಇಲ್ಲಿನ ಮಾತುಗಳಲ್ಲಿ ಜಾನಪದ ವಿಶ್ವವಿದ್ಯಾಲಯಕ್ಕೆ ಸಲಹೆ ಕೊಡುವ ಆಯಾಮವೂ ಕಾಣುತ್ತಿತ್ತು. ಈಗಾಗಲೇ ಜಾನಪದ ಪುಸ್ತಕಗಳಲ್ಲಿ ದಾಖಲಾದ ಮಾಹಿತಿಗಳನ್ನು ಆಧರಿಸಿ ಕೆಲವು ವಿದ್ವಾಂಸರು ತಮ್ಮ ಚಿಂತನೆಯನ್ನು ಮಂಡಿಸುತ್ತಿದ್ದರು. ಉಳಿದಂತೆ ಜಾನಪದವನ್ನು ಹೇಗೆ ಉಳಿಸಬೇಕು ಎನ್ನುವ ತರಾವರಿ ಅಭಿಪ್ರಾಯಗಳು ವ್ಯಕ್ತವಾದವು. ಅವುಗಳಲ್ಲಿ ಹೊಸತನವೇನೂ ಇರಲಿಲ್ಲ. ಈ ಮಾತುಗಳಿಂದ ಈಗಾಗಲೇ ಕೇಳಿದಂತಹವುಗಳು ಎನ್ನುವ ಅನುಭವ ಬಿಟ್ಟರೆ ಜಾನಪದ ಕುರಿತಂತೆ ಹೊಸ ಮಾತುಗಳು ಎನ್ನುವಂತಿರಲಿಲ್ಲ.
ಈ ಸೆಮಿನಾರಿನಲ್ಲಿ ಸಮಯದ ಅಭಾವವಿತ್ತು. ಮಾತನಾಡುವವರಿಗೆ ಕೇವಲ ಹತ್ತು ನಿಮಿಷಗಳನ್ನು ಮಾತ್ರ ನೀಡಲಾಗಿತ್ತು. ಹಾಗಾಗಿ ಕೆಲವರು ತಾವು ಏನು ಹೇಳಬೇಕು ಎನ್ನುವುದರಲ್ಲಿ ಗೊಂದಲಗೊಂಡಂತ್ತಿತ್ತು. ಉಳಿದಂತೆ ಚರ್ಚೆಗೆ ಹೆಚ್ಚು ಅವಕಾಶವಿರಲಿಲ್ಲ. ಇನ್ನು ಜಾನಪದ ಕಲಾವಿದರು ಕಷ್ಟಪಟ್ಟು ಆಯೋಜಕರ ಒತ್ತಾಯಕ್ಕೆ ಕುಳಿತ್ತಿದ್ದರು. ಕಾರಣ ಅವರನ್ನು ನೀವು ಕೂತು ಮಾತುಗಳನ್ನು ಕೇಳಿ ಎನ್ನುವುದು ಅಷ್ಟು ಸರಿಯಾಗಲಾರದು. ಅಷ್ಟಕ್ಕೂ ಅವರು ತಮಗೆ ನಿಲುಕದ ಸಂಗತಿಗಳ ಬಗ್ಗೆ ಕೂತು ಕೇಳುವುದಾದರೂ ಹೇಗೆ? ಅಥವಾ ಅವರಿಗೆ ಹೀಗೆ ಸಭೆಯೊಂದರಲ್ಲಿ ಕೂತು ಮಾತು ಕೇಳುವುದು ಕೂಡ ಅವರ ಬದುಕಿನ ಕ್ರಮದಲ್ಲಿ ಬಂದದ್ದಲ್ಲ.
ಸಂಜೆಯಾಗುತ್ತಿದ್ದಂತೆ ಮುಖ್ಯ ವೇದಿಕೆಯಲ್ಲಿ ಜನಪದ ಕಲೆಗಳಿಗೆ ಜೀವ ಬರತೊಡಗಿತು. ಅನೇಕರು ಜಾನಪದ ಕಲೆಯ ಸವಿಯನ್ನು ಸವಿಯಲೆಂದು ಬಂದಿದ್ದರು. ಕರ್ನಾಟಕದ ಪ್ರದರ್ಶನಾತ್ಮಕ ಕಲೆಗಳಲ್ಲಿ ಮಹಿಳೆಯರ ಅದರಲ್ಲೂ ಹರೆಯದ ಹುಡುಗಿಯರ ಭಾಗವಹಿಸುವಿಕೆ ಕಡಿಮೆ. ಈ ಕಲೆಗಳು ಕಲೆಯ ಕಾರಣಕ್ಕೇ ಗಮನಸೆಳೆಯಬೇಕು. ಆದರೆ ಜಮ್ಮು ಕಾಶ್ಮೀರಿ, ಒರಿಸ್ಸಾ, ಕೇರಳದ ಜನಪದ ಕಲೆಗಳಲ್ಲಿ ಹರೆಯದ ಹುಡುಗಿಯರು ಭಾಗವಹಿಸಿದ್ದರಿಂದ ಈ ಕಲಾ ಪ್ರದರ್ಶನಗಳು ಹೆಚ್ಚು ರೋಮಾಂಚನಗೊಳಿಸಿದವು. ಕಾಶ್ಮೀರಿ ಕನ್ಯೆಯರು ಯುವ ಸಮುದಾಯ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಸಹಜವಾಗಿ ಜಾನಪದದ ಚಿಂತನೆಯನ್ನು ಕೇಳಿದ ಜನರ ಪ್ರಮಾಣಕ್ಕಿಂತ, ಜನಪದ ಕಲೆಗಳನ್ನು ನೋಡಿ ಸಂಭ್ರಮಿಸಿದ ಜನರ ಸಂಖ್ಯೆ ಹೆಚ್ಚಿನದಾಗಿತ್ತು.
ಸಾಮಾನ್ಯ ಜನರಿಗೆ ಚಿಂತನೆ ಒಂದು ಗೊಡ್ಡು ಪುರಾಣದಂತೆ ಕಾಣುತ್ತದೆ. ಅಥವಾ ಸಾಮಾನ್ಯ ಜನರು ಕೂತು ಕೇಳುವಂತಹ, ಅವರ ತಿಳುವಳಿಕೆಗೆ ದಕ್ಕುವಂತಹ ವಾತಾವರಣವನ್ನು ಅಕಾಡೆಮಿಕ್ ಚಿಂತನಾ ಮಾದರಿ ಸೃಷ್ಠಿಸುವಲ್ಲಿ ವಿದ್ವತ್ ವಲಯ ಎಡವಿದೆ ಎಂದು ನನಗನ್ನಿಸಿತು. ಆ ಕಾರಣಕ್ಕೇ ಪ್ರಗತಿಪರ ಆಲೋಚನೆಗಳು ಜನರ ತಿಳುವಳಿಕೆಯ ಭಾಗವಾಗುವುದಿಲ್ಲ. ಹೀಗಾಗದ ಹೊರತು ಜನಸಾಮಾನ್ಯರಲ್ಲಿ ಎಚ್ಚರ ಮೂಡುವುದಾದರೂ ಹೇಗೆ ಎನ್ನುವ ಪ್ರಶ್ನೆಯೊಂದು ನನ್ನನ್ನು ಕೊರೆಯತೊಡಗಿತು.
(ಬಿದರಿ ಕಲೆಯ ಪ್ರತಿಮೆಗಳ ಅಂಗಡಿ)
(ಹೊನ್ನಾವರದ ಸುಗ್ಗಿ ಕುಣಿತದ ಯುವ ಜಾನಪದ ಕಲಾವಿದರು)
(ಪ್ರದರ್ಶನ ನೀಡಿ ದಣಿವಾರಿಸಿಕೊಳ್ಳುತ್ತಿರುವ ಕಾಶ್ಮೀರಿ ಕನ್ಯೆಯರು)
(ಕಾಶ್ಮೀರಿ ಕನ್ಯೆಯರ ಸೆಳೆಯುವ ಹರೆಯದ ಹುಡುಗ)
(ಪ್ರದರ್ಶನ ನೀಡುತ್ತಿರುವ ಕಾಶ್ಮೀರಿ ಕನ್ಯೆಯರು)
(ಪೇಪರ್ ಓದುತ್ತಾ, ಮೊಬೈಲಿನಲ್ಲಿ ಮಾತನಾಡುತ್ತಾ ತಮ್ಮ ಸರತಿ ಕಾಯುತ್ತಿರುವ ಜನಪದ ಕಲಾವಿದರು)
(ದೂರದೃಷ್ಟಿ)
(ರಾಮನಗರದ ಜಾನಪದ ಲೋಕ ಬೀದರಿಗೂ ಬಂತು)
(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ನಿರ್ಮಾತೃ ಹೆಚ್.ಎಲ್. ನಾಗೇಗೌಡ ಅವರು)
(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ಸಂಗ್ರಹ)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
ಶಿಕ್ಷಣ! ಸಂಘಟನೆ!! ಹೋರಾಟ!!! ಎಂದು ಡಾ.ಅಂಬೇಡ್ಕರರು ಹೇಳಿದ್ದಾರೆಯೇ ??? -ಡಾ.ಶಿವಕುಮಾರ್ ಇಂದು ಬಹುತೇಕ ದಲಿತರು ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶಿಕ್ಷಣ...
2 ಕಾಮೆಂಟ್‌ಗಳು:
nice report
ensaar eradane dinakke sustu hodediri. anda hage alli iruv murthygalu bidari alla. chidri.
ಕಾಮೆಂಟ್ ಪೋಸ್ಟ್ ಮಾಡಿ