ಬುಧವಾರ, ಏಪ್ರಿಲ್ 6, 2011

ಮಂಗಳೂರಿನಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ' ತೆರೆ ಪೊರಪ್ಪಾಟ್ '

ಪ್ರೊ.ಬಿ.ಎ.ವಿವೇಕ ರೈ

ಹೊಸತಾಗಿ ಸ್ಥಾಪನೆ ಆಗುತ್ತಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯವನ್ನು ಪ್ರಾದೇಶಿಕ ಮಟ್ಟದಲ್ಲಿ ಕಟ್ಟುವ ಕಾಳಜಿ ಮತ್ತು ಪ್ರಾಮಾಣಿಕ ಪ್ರಯತ್ನ ಉಳ್ಳ ,ಜಾನಪದ ವಿವಿಯ ವಿಶೇಷಾಧಿಕಾರಿ ಡಾ.ಅಂಬಳಿಕೆ ಹಿರಿಯಣ್ಣ ಈದಿನ ಮಂಗಳೂರಿನಲ್ಲಿ ದಕ್ಷಿಣ ಕನ್ನಡ,ಉಡುಪಿ,ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಜಾನಪದ ವಿದ್ವಾಂಸರ ಸಭೆ ಕರೆದಿದ್ದರು.ಬಲ್ಮಟ್ಟದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆದ ಈ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಲು ನನಗೆ ಒಪ್ಪಿಸಿದ ಕಾರಣ,ಬಹಳ ಮಂದಿ ಹಿರಿಯರನ್ನು,ಸ್ನೇಹಿತರನ್ನು,ಶಿಷ್ಯರನ್ನು ಆಪ್ತವಾಗಿ ಕಾಣಲು ,ಅವರ ಮಾತು ಕೇಳಲು ಒಳ್ಳೆಯ ಅವಕಾಶ ಒಮ್ಮೆಲೇ ದೊರೆಯಿತು.ಸಾರ್ವಜನಿಕ ಕಾರ್ಯಕ್ರಮದಲ್ಲಿ ಒಬ್ಬೊಬ್ಬರೂ ಗಣ್ಯ ಅತಿಥಿಗಳು ಆಗಬಹುದಾಗಿದ್ದ ಸನ್ನಿವೇಶದ ಬದಲು ,ಸಭೆಯಲ್ಲಿ ಎಲ್ಲರೂ ಸಾಮಾನ್ಯ ಕೇಳುಗರಂತೆ ಕುಳಿತು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಆತ್ಮೀಯ ಮುಕ್ತ ಆವರಣ ನಿರ್ಮಾಣ ಆದದ್ದು ನನಗೆ ಸಂತಸ ಸಂಭ್ರಮದ ಸಂಗತಿ.

ಹಿರಿಯ ಜಾನಪದ ಜೀವಿ ಏರ್ಯ ಲಕ್ಷ್ಮೀನಾರಾಯಣ ಆಳ್ವ,ಹಿರಿಯ ಜಾನಪದ-ಯಕ್ಷಗಾನ ಸಾಹಿತಿ-ಸಂಶೋಧಕ ಡಾ.ಅಮೃತ ಸೋಮೇಶ್ವರ ,ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ -ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್,ಮಂಗಳೂರು ವಿವಿ ಜಾನಪದ ವಿದ್ವಾಂಸರು ಡಾ.ಚಿನ್ನಪ್ಪ ಗೌಡ ,ಡಾ.ಅಭಯಕುಮಾರ್,ಡಾ.ಶಿವರಾಮ ಶೆಟ್ಟಿ,ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ-ಡಾ.ವಾಮನ ನಂದಾವರ.ಹಿರಿಯ ಜಾನಪದ ತಜ್ಞ ಡಾ.ಎ.ವಿ.ನಾವಡ,ಡಾ.ಗಾಯತ್ರಿ ನಾವಡ, ಯಕ್ಷಗಾನ ಕಲಾವಿದ -ಸಂಶೋಧಕ ಡಾ.ಪ್ರಭಾಕರ ಜೋಷಿ,,ಡಾ.ಗಣನಾಥ ಎಕ್ಕಾರು,ಉಡುಪಿಯ ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕ ಎಚ್.ಕೃಷ್ಣ ಭಟ್,ಡಾ.ತಿರುಮಲೇಶ್ವರ ಭಟ್, ಹಿರಿಯ ಸಂಶೋಧಕ ಎಸ.ಎ.ಕೃಷ್ಣಯ್ಯ,ಡಾ.ಅಶೋಕ ಆಳ್ವ,ಬಲ್ಮ ತ ಕೆಟಿಸಿಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರತ್ನಾಕರ ಸದಾನಂದ -ಇವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರತಿನಿಧಿಗಳು.

ಹಿರಿಯ ಜಾನಪದ ವಿದ್ವಾಂಸರಾದ ಹೊನ್ನಾವರದ ಡಾ ಏನ್.ಆರ್ .ನಾಯಕ ಮತ್ತು ಡಾ.ಶಾಂತಿ ನಾಯಕ ದಂಪತಿಗಳು,ಕರ್ನಾಟಕ ವಿವಿ ಧಾರವಾಡದ ಜಾನಪದ ವಿಭಾಗದ ಮುಖ್ಯಸ್ಥೆ ಡಾ.ಶಾಲಿನಿ ರಘುನಾಥ್,ಡಾ.ವಿಜಯನಲಿನಿ ರಮೇಶ್, ರಂಗಭೂಮಿ-ಜಾನಪದ -ಪ್ರಗತಿಪರ ತರುಣ ಅಧ್ಯಾಪಕ ಡಾ.ವಿಠಲ ಭಂಡಾರಿ -ಉತ್ತರಕನ್ನಡವನ್ನು ಪ್ರತಿನಿಧಿಸಿದರು.ಕೊಡಗಿನ ತರುಣ ಪೀಳಿಗೆಯ ಕೆಲವರು ಬಂದಿರಲಿಲ್ಲ.ಡಾ.ನಾಗೇಶ್ ಹೆಬ್ಬಾಲೆ,ಇಬ್ಬರು ಸೋಮಣ್ಣ ರು,,ಡಾ.ಸರಸ್ವತಿ, ಸುಬ್ರಹ್ಮಣ್ಯ,ಕೆಲವು ಕಾಲೇಜು ಅಧ್ಯಾಪಕರು.

ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳಲು ಕೊಟ್ಟ ಕಾಲ ಮೂರರಿಂದ ಐದು ನಿಮಿಷಗಳು.ಮೂರು ಗಂಟೆ ಮಾತಾಡುವ ಯಕ್ಷಗಾನದವರೂ ಮೂರೇ ನಿಮಿಷದಲ್ಲಿ ಅಭಿಪ್ರಾಯ ಮಂಡಿಸಿದರು.ಕರಾವಳಿ ಕರ್ನಾಟಕ ಮತ್ತು ಕೊಡಗು ಪ್ರದೇಶಗಳು ತಮ್ಮ ಭಾಷಾ ವೈವಿಧ್ಯ,ಜಾನಪದ ಪ್ರಕಾರಗಳ ವೈಶಿಷ್ಟ್ಯ,ಸಂಗ್ರಹಾಲಯಗಳ ಅನನ್ಯತೆ -ಈ ಕಾರಣಗಳಿಗಾಗಿ ಮುಖ್ಯವಾಗುತ್ತವೆ.ಈದಿನದ ತಜ್ಞರ ಅನುಭವದ ನುಡಿಗಳು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯವನ್ನು ಮಲೆನಾಡು ಮತ್ತು ಮಳೆ ನಾಡುಗಳ ಜನರ ಪದಗಳ ವಿಶ್ವವಿದ್ಯಾಲಯ ಮಾಡುವ ' ತೆರೆ ಪೊರಪ್ಪಾಟ್' ನ ಧ್ವನಿಗಳು. .



.

ಕಾಮೆಂಟ್‌ಗಳಿಲ್ಲ: