ಡಾ.ಅರುಣ್ ಜೋಳದಕೂಡ್ಲಿಗಿ, ಪ್ರಜಾವಾಣಿ April 17, 2011
ಶಾರದಮ್ಮ ಎದ್ದು ಕೂತಾಗ ಬೆಳಗಿನ ಜಾವ ಐದು ಗಂಟೆ. ಮನೆ ಒಳಗೆ ಕೊರೆವ ಥಂಡಿ. ಕೊಟ್ರಜ್ಜ ದುಪ್ಪಡಿಯನ್ನು ಮತ್ತಷ್ಟು ಅವುಚಿ ಗೂಡ್ರಿಸಿಕೊಂಡ. ಹೊರಗೆ ಮಸಕು ಮಸಕಾದ ಬೆಳಕಿತ್ತು. ಹೆಣ್ಮಕ್ಕಳು ಚೆಂಬಿಗೆ ಹಿಡಿದು ನೀರಕಡಿಗೆ ಹೋಗುವ ಸಪ್ಪಳ ಕೇಳುತ್ತಿತ್ತು.
ಪಕ್ಕದ ಮನೆ ಭೀಮಜ್ಜನ ಹುಂಜ ಕೆಳಗೇರಿಯ ಕೋಳಿಗಳ ಜತೆ ಸ್ಪರ್ಧೆಗೆ ಬಿದ್ದಂತೆ ಕೂಗುತ್ತಿತ್ತು. ತಾನೂ ನೀರ ಕಡಿಗೆ ಹೋಗಲು ಚೊಂಬಿಗಾಗಿ ಹುಡುಕಾಡಿದಳು. ಈಚೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪೀಕ್‌ಜಾಲಿ ಪೊದೆಗಳನ್ನು ಬುಳ್ಡೋಜರ್ನಿಂದ ಕೀಳಿಸಿದ್ದರಿಂದ ಹಳ್ಳ ಬಟಾಬಯಲಾಗಿತ್ತು. ಹೆಣ್ಮಕ್ಕಳು ಸಲೀಸಾಗಿ ಹಳ್ಳಕ್ಕಿಳಿದು ನೀರಕಡಿಗೆ ಹೋಗುತ್ತಿದ್ದವರು ಈಗ ಮರ್ಚು ಸಿಗೋವರ್ಗು ಮಾರು ದೂರ ನಡೆಯಬೇಕಿತ್ತು. ಹಾಗಾಗಿ ಅಷ್ಟು ದೂರ ಹೋಗೊ ಬದ್ಲು, ಬೆಳಗಿನ ಜಾವದಾಗೆ ಕತ್ಲಲ್ಲಿ ಹೋಗಿಬರೋದು ವಾಸಿಯಾಗಿತ್ತು.
ಈ ಜಾಲಿ ಪೊದೆ ಕೀಳುವಾಗ ಶಾರದಮ್ಮ ಗ್ರಾಮ ಪಂಚಾಯ್ತಿಯವರ ಜತೆ ಜಗಳ ಮಾಡಿದ್ದಳು, ‘ಇವನ್ನೆಲ್ಲಾ ಕಿತ್ತಾಕಿದ್ರ ಹೆಣ್ಮಕ್ಳು ಚೆಂಬ್ಗಿ ತಗಂಡು ಎಲ್ಗೋಗ್ಬಕು? ನಿಲ್ಸರಪ್ಪೋ ಮಾಡಾಕ ಊರಾಗ ಮನಾರ ಕೆಲ್ಸ ಐದಾವ’ ಎಂದಿದ್ದಳು, ಶಾರದಮ್ಮನ ಜತೆ ಕೆಲ ಹೆಣ್ಣುಮಕ್ಕಳು ಧ್ವನಿಗೂಡಿಸಿದ್ದರು. ಆದರೂ ನಿಲ್ಲಿಸಿರಲಿಲ್ಲ. ಕೊಟ್ರಜ್ಜ ಮಗ್ಗಲು ತಿರುಗಿದ್ದು ನೋಡಿ ಸುಖಪುರುಸ ಅನ್ಕೊಂಡು ಚೆಂಬು ಹಿಡಿದು ಹೊರ ಬಂದಳು. ದಾರಿಯಲ್ಲಿ ಮಲಗಿದ್ದ ಪಂಪಣ್ಣನ ಮಕ್ಳಿಗೆ ನೀರು ಚಿಮಿಕ್ಸಿ, ‘ಏಲ್ರೋ ಕಳ್ಳ ಬಾಡ್ಯಾರಾ.. ಹೊತ್ತು ಉಟ್ಟಿತು’ ಎಂದಿದ್ದಳು. ಅವರು ಮಿಸುಕಾಡಿದಂತೆ ಮಾಡಿ ಮತ್ತೆ ಮಗ್ಗಲು ತಿರುವಿದ್ದರು.
***
ಶಾರದಮ್ಮ ಒಂದು ರೀತಿ ವಿಚಿತ್ರ ಹೆಣ್ಣುಮಗಳು. ಐದು ವರ್ಷದ ಹಿಂದೆ ಶಾರದಮ್ಮನಿಗೆ ದೇವಿಯ ಜಡೆ ಹೆಣೆದಿತ್ತು. ಯಲ್ಲಮ್ಮನ ಕಾಟ ಹೆಚ್ಚಾಗಿ ಹುಚ್ಚಿಯಂತೆ ಅಲೆಯತೊಡಗಿದಾಗ, ದೇವಿಯ ಮುತ್ತು ಕಟ್ಟಿಸಿ ದೇವರು ಹೊರಿಸಿದ್ದರು. ಶಾರದಮ್ಮನಂತ ಮೇಲ್ಜಾತಿಯ ಹೆಣ್ಣು ಮಗಳು ದೇವರು ಹೊತ್ತದ್ದು ಅವರ ಜಾತಿಯ ಯಾರಿಗೂ ಸರಿ ಕಂಡಿರಲಿಲ್ಲ. ಕಾರಣ ಊರಲ್ಲಿ ದೇವರು ಹೊತ್ತವರು ದಲಿತರು ಮಾತ್ರ. ಹಾಗಾಗಿ ಯಾರೂ ಆಯಮ್ಮನ ಎದುರು ನೇರವಾಗಿ ಹೇಳದಿದ್ದರೂ, ಒಳೊಗೊಳಗೇ ಸಿಡಿಮಿಡಿಗೊಂಡಿದ್ದರು.
ದೇವರು ಹೊತ್ತ ದಲಿತ ಹೆಣ್ಣುಮಕ್ಕಳೊಂದಿಗೆ ಶಾರದಮ್ಮ ಜಾತಿ ಮರೆತು ಬೆರೆಯುತ್ತಿದ್ದುದೂ ಇದಕ್ಕೆ ಇನ್ನೊಂದು ಕಾರಣ. ಆಯಮ್ಮನ ಮಾತು ತುಂಬಾ ಬಿಗುವು. ಮಾತು ಮಾತಿಗೂ ಗಾದೆ ಒಗಟು ಹಾಕಿ ಎದುರಿಗಿದ್ದವರ ಮಾತು ನಿಲ್ಲಿಸಿಬಿಡುತ್ತಿದ್ದಳು. ಆ ಮಾತಿನ ಚಮತ್ಕಾರಕ್ಕೆ ಎಂತವರೂ ಬೆರಗಾಗಿದ್ದರು. ಯಾವ ಮುಚ್ಚು ಮರೆ ಇಲ್ಲದೆ ನಿರ್ಬಿಡೆಯಿಂದ ಮಾತನಾಡುವುದು ಶಾರದಮ್ಮನ ಶಕ್ತಿಯಾಗಿತ್ತು. ಮಗ ಬಸವರಾಜ ಹೆಂಡತಿ ಮನೆಯಲ್ಲಿಯೇ ತಿಕಾಣಿ ಹೂಡಿದ್ದ. ಗಂಡ ಕೊಟ್ರಜ್ಜ ಸದಾ ಇಸ್ತ್ರಿ ಗೀರುಗಳು ಮುಕ್ಕಾಗದಂತೆ ಬಟ್ಟೆ ತೊಟ್ಟು ಕೊಟ್ಟೂರು ಕೂಡ್ಲಿಗಿ ಅಂತ ತಿರುಗುವ ಹೈಲಿನ ಮನುಷ್ಯನಾಗಿದ್ದ. ಶಾರದಮ್ಮ ಸಣ್ಣದೊಂದು ಬೀಡಂಗಡಿ ಇಟ್ಟುಕೊಂಡು ಮನೆ ತೂಗಿಸುತ್ತಿದ್ದಳು.
***
ಸಂಡೂರು ಪಂಪಣ್ಣ ಮೀಸಿ ಮೇಲೆ ಕೈಯಾಡಿಸುತ್ತಾ ಶಾರದಮ್ಮನ ಮನೆ ಕಟ್ಟೆಗೆ ಬಂದು ಕೂತ. ನೆನ್ನೆಯಿಂದ ಬಾಯಿ ಒಣಗಿಸಿಕೊಂಡಿದ್ದ ನಲ್ಲಿ ರಭಸವಾಗಿ ಬರುವ ನೀರಿನಿಂದಾಗಿ ಉಸಿರು ಕಟ್ಟಿದಂತೆ ಚಡಪಡಿಸುತ್ತಿತ್ತು. ಓಣಿಯವರೆಲ್ಲಾ ನೀರು ಹಿಡಿಯುವುದರಲ್ಲಿ ಮುಳುಗಿದ್ದರು. ಬಣ್ಣ ಬಣ್ಣದ ಪ್ಲಾಸ್ಟಿಕ್ ಕೊಡಗಳು ಆಗಲೇ ತಮ್ಮ ತಮ್ಮ ಒಡೆಯ ಒಡತಿಯರ ಕೈ ಸ್ಪರ್ಶಕ್ಕೆ ಪುಳಕಗೊಂಡು ಎಚ್ಚರಾಗಿದ್ದವು. ಚಿತ್ರದುರ್ಗ ಆಕಾಶವಾಣಿ ಕೇಂದ್ರದ ಭಕ್ತಿಗೀತೆಗಳು ಜೋರಾಗಿ ಕೇಳುತ್ತಿದ್ದವು. ಚೌಡಮ್ಮ ಸೆಗಣಿಗಾಗಿ ಊರೆಲ್ಲಾ ಸುತ್ತಿ ಕೊನೆಗೆ ಡೊಂಬರ ರಂಗಪ್ಪನ ಮನೆ ಮುಂದಿನ ಆಕಳ ಸೆಗಣಿಯನ್ನು ಯಾರಿಗೂ ಕಾಣದಂತೆ ಕದ್ದು ತಂದು ನೆಲ ಬಳಿಯುವುದರಲ್ಲಿ ತಲ್ಲೆನವಾಗಿದ್ದಳು. ಪಕ್ಕೀರಜ್ಜನ ಮಕ್ಕಳು ಅಂಜಿ, ಗಂಗಿ, ಕೊಟ್ರಿ ಕಸ ಮುಸುರಿ ಅಂತೆಲ್ಲಾ ಲವಲವಿಕೆಯಿಂದ ಓಡಾಡಿಕೊಂಡಿದ್ದರು.
ಗವಿಯಮ್ಮರ ಹನುಮಂತಪ್ಪ ಅಂಗಳ ಕಸ ಗುಡಿಸುವ ರಭಸಕ್ಕೆ ಓಣಿಯೆಲ್ಲಾ ದೂಳು ಅಡರಿತ್ತು. ಪಂಪಣ್ಣ ‘ಏ ಮರಾಯ ಇಲ್ಲಿ ಮನ್ಶಾರು ಕುಂತಿವಿ ಸ್ವಲ್ಪ ನೋಡಿ ಉಡುಗು ನಿನಾ ಸೀಮೆಗಿಲ್ದ ಕಸ ಗುಡುಸಲ್ಲ’ ಎಂದದ್ದಕ್ಕೆ, ಹನುಮಂತಪ್ಪ ‘ನಿನ್ನ ಇಲ್ಲಿ ಬೆಳಕರತ್ಗೆ ಬಂದು ಕುಂತ್ಕ ಅಂದರ್ಯಾರಪ್ಪಾ, ನಿನೇನಪ್ಪಾ ಬಾಳ್ವಿ ಅನ್ನಂಗಿಲ್ಲ, ಬದ್ಕು ಅನ್ನಂಗಿಲ್ಲ ತೊಳ್ದೆತ್ತು ಇದ್ದಂಗದಿ’ ಎಂದ. ಈ ಮಾತು ಕಿವಿಗೆ ಬೀಳುತ್ತಲೂ ಶಾರದಮ್ಮ ಮನೆಯ ಒಳಗಿಂದಲೇ ‘ಹನುಮಂತಣ ಬೇಸಿ ಅಂದೆ ನೋಡು’ ಎಂದಿದ್ದಳು. ಪಂಪಣ್ಣ ಮನೆ ಒಳಕ್ಕೆ ಬಗ್ಗಿ ನೋಡಿ ಶಾರದಮ್ಮ ಚಾ ಆತಾ? ಎಂದ. ಒಳಗಿಂದಲೇ ‘ಹೂಂ..ನಾವೇನು ಹಾಲು ಕರಿಯಾ ಎಮ್ಮಿ ಕಟ್ಟಿಲ್ಲಪ್ಪ... ಎಂದು ಗೊಣಗುತ್ತಲೆ, ಎಲ್ಲೆ ಚಾ..ಡಿಕಾಕ್ಷನ್ ಮಾಡೀನಿ..ಅದ್ನ ಚೂರು ಕೊಡ್ಲೇನು? ಎಂದಾಗ ಪಂಪಣ್ಣ ನಿರಾಯಾಸವಾಗಿ ‘ಯಾವ್ದಾದ್ರೇನು ತಾರವ್ವ..’ ಎಂದು ನಸು ನಕ್ಕು ಡಿಕಾಕ್ಷನ್ ಕುಡಿದನು.
ಪಂಪಣ್ಣ ಹನುಮಂತಣ್ಣನಿಗೆ ಸನ್ನೆ ಮಾಡಿ ಶಾರದಮ್ಮನನ್ನು ಕೆರಳಿಸಲೆಂದು ‘ಶಾರದಮ್ಮ ನಿನ್ಗೆ ಗೊತ್ತಿದ್ದಂಗಿಲ್ಲ ಬಿಡವಾ... ಇವತ್ತು ಎಮ್ಮೆಲ್ಲಿ ಮಳ್ಳಪ್ಪ ಓಟು ಕೇಳಾಕ ಬರ್ತಾನ, ನಮ್ಮೂರಿಗೆ ಏನು ಮಾಡಿ ಅಂತ ನೀನು ಕೇಳಕು ನೋಡು... ಎಂದಾಗ ಶಾರದಮ್ಮನ ಕಿವಿ ನಿಮಿರಿತು. ಹೊರ ಬಂದ ಶಾರದಮ್ಮ ‘ಅಲಲಾ... ಐದು ವರುಸ ಆದ್ಮೇಲೆ ಈಗ ಬರ್ತಾನೇನು ಮಳ್ಳಪ್ಪ, ಬರ್ಲಿ ಅದ್ಯಾ ಮಕಾ ಇಟಕಂಡು ಓಟು ಕೇಳ್ತಾನ ಕೇಳಲಿ, ನಾನು ನೋಡ್ತನಿ’ ಅಂದಿದ್ದಳು. ಅದಕ್ಕೆ ಇನ್ನಷ್ಟು ರಂಗು ಬರುವಂತೆ ಹನುಮಂತಪ್ಪ ‘ಶಾರದಮ್ಮಾ... ಮಳ್ಳಪ್ಪ ಮಕ್ಳು ಮೊಮ್ಮಕ್ಳು ಮರಿ ಮಮ್ಮಕ್ಳು ಕುಂತು ತಿಂದ್ರೂ ಸವಿಬಾರ್ದು ಅಷ್ಟು ರೊಕ್ಕ ಮಾಡ್ಯಾನ... ಮಂಗಳೂರಾಗ ಒಂದು ಕಾಫಿ ಎಷ್ಟೇಟು ಕೊಂಡುಕಂಡನಂತೆ, ಬೆಂಗಳೂರಾಗ ಮೂರು ದೆವ್ವನಂಥ ಮನಿ ಕಟ್ಸ್ಯಾನಂತೆ.. ಒಂದಾ ಎರಡಾ ? ಆದ್ರ ನಮ್ಮ ಕ್ಷೇತ್ರಕ್ಕ ನಯಾಪೈಸ ಕೆಲ್ಸ ಮಾಡ್ಸಿಲ್ಲ, ಮಂದಿ ದುಡ್ಡು ತಿಂದು ಜನ್ರನ್ನ ನುಣ್ಣಗ ತೆಲಿ ಬೊಳ್ಸ್ಯಾನ ನೋಡು’ ಎಂದಿದ್ದ.
ಈ ಮಾತು ಶಾರದಮ್ಮನ್ನ ಇನ್ನಷ್ಟು ಕೆರಳಿಸಿತ್ತು. ‘ಆತ ಬರ್ಲಿ ಇವತ್ತು ಕೊಳಪಟ್ಟಿ ಹಿಡ್ದು ಕೇಳ್ತನಿ ನಮ್ಮ ಊರಿಗೆ ಏನು ಮಾಡಿಯೋ ಗೆಣಿಕಾರ ಅಂತ’ ಎನ್ನುತ್ತಲೇ ಒಳಗೊಳಗೆ ಶಾರದಮ್ಮ ಕುದಿಯತೊಡಗಿದಳು. ಇದನ್ನೆಲ್ಲಾ ಕೇಳುತ್ತಾ ಮಲಗಿದ್ದ ಕೊಟ್ರಜ್ಜ ಎದ್ದಾತನೆ ‘ಏನ್ರಪಾ ನಮ್ಮಾಕಿನ ತೆಲಿ ಕೆಡ್ಸಿ ಚಾಡ ಇಕ್ಕಿ ನಮ್ಮನ್ನೇನು ಹಾಳು ಮಾಡಾಕಂತ ಮಾಡೀರೇನು? ಅಂತ ಸೂರ್ರರು ನೀವಾ ಹೋಗಿ ಕೇಳ್ರಿ, ಸುಮ್ಮನಿರ್ರೋ ಮಾರಾಯರ್ರ ಈಕೇನು ಆ ಎಮ್ಮೆಲ್ಲೆ ಕೊಳಪಟ್ಟಿ ಹಿಡಿದ್ರು ಹಿಡಿದ್ಲಾ..ಸುಮ್ನಿರ್ರಪ್ಪಾ...’ ಎಂದನು. ಪಂಪಣ್ಣ ನಗುತ್ತಾ ‘ಓ ಕೊಟ್ರಜ್ಜಗ ಈಗ ಬೆಳಕರಿತು ನೋಡ್ರಪಾ..’ ಎಂದ. ಪಂಪಣ್ಣ ಮತ್ತು ಹನುಮಂತಪ್ಪನಿಗೂ ಎಮ್ಮೆಲ್ಲೆ ಮೇಲೆ ಅಸಹನೆ ಇದ್ದರೂ ಊರವರ ಎದುರು ಆತನನ್ನು ಬೈಯುವುದಾಗಲಿ, ಪ್ರಶ್ನಿಸುವುದಾಗಲಿ ಸಾಧ್ಯವಿರಲಿಲ್ಲ. ಅದರಲ್ಲೂ ಮೇಲ್ಜಾತಿಯವರೇ ಹೆಚ್ಚಿರುವ ಊರಲ್ಲಿ ಅದೇ ಜಾತಿಯ ಎಮ್ಮೆಲ್ಲೆಯನ್ನು ಪ್ರಶ್ನಿಸುವುದು ಕೆಳಜಾತಿಗೆ ಸೇರಿದ ಇವರಿಗೆ ಸಾಧ್ಯವಿರಲಿಲ್ಲ. ಕಾರಣ ತಮ್ಮ ಈ ಅಸಹನೆಯನ್ನು ಶಾರದಮ್ಮನ ಮೂಲಕ ತೀರಿಸಿಕೊಳ್ಳಲು ಈ ಉಪಾಯ ಹೂಡಿ ಬೆಳಿಗ್ಗೇ ಬೆಳಿಗ್ಗೆಯೇ ಈ ಮಾತು ಕತೆ ನಡೆಸಿದ್ದರು. ಇನ್ನೇನು ನಮ್ಮ ಮಾತು ಫಲಿಸೆತೆಂದೇ ಇಬ್ಬರೂ ಒಳಗೊಳಗೇ ಖುಷಿಪಟ್ಟಿದ್ದರು.
***
ಶಾರದಮ್ಮ ಓದಿದ್ದು ಏಳನೆ ಕ್ಲಾಸು. ತನ್ನ ಶಾಲಾ ದಿನಗಳಲ್ಲಿ ಕರಿಯಪ್ಪ ಮೇಷ್ಟ್ರು ಶಾರದಮ್ಮನಿಗೆ ತುಂಬಾ ಪ್ರಭಾವ ಬೀರಿದ್ದರು. ಕರಿಯಪ್ಪ ಮೇಷ್ಟ್ರು ಗಾಂಧೀವಾದಿಗಳಾಗಿದ್ದರು. ಸದಾ ಗಾಂಧಿಯ ಸರಳತೆ, ಅವರ ಅಹಿಂಸಾ ಮಾರ್ಗವನ್ನು ಮಕ್ಕಳಿಗೆ ಬೋಧಿಸುತ್ತಿದ್ದರು. ಹಾಗಾಗಿ ಮಕ್ಕಳು ಅವರನ್ನು ಗಾಂಧಿ ಮೇಷ್ಟ್ರು ಎಂದೇ ಕರೆಯುತ್ತಿದ್ದರು. ಅವರು ಸಮಾಜ ವಿಜ್ಞಾನ ಪಾಠ ಮಾಡುವಾಗ ಪ್ರಜಾಪ್ರಭುತ್ವದ ಬಗ್ಗೆ ಮೈದುಂಬಿ ಹೇಳುತ್ತಿದ್ದರು. ಅಬ್ರಾಂ ಲಿಂಕನ್ ಹೇಳಿದ ಪ್ರಜೆಗಳೇ ಪ್ರಜೆಗಳಿಗಾಗಿ ಪ್ರಜೆಗಳಿಂದಲೇ ಆಳುವ ವ್ಯವಸ್ಥೆಯೇ ಪ್ರಜಾಪ್ರಭುತ್ವ ಎನ್ನುವುದನ್ನು ಮಕ್ಕಳಲ್ಲಿ ಬಾಯಿಪಾಠ ಮಾಡಿಸಿದ್ದರು.
ಮತದಾನದ ಪಾವಿತ್ರ್ಯದ ಬಗ್ಗೆ ಹೇಳುತ್ತಿದ್ದರು. ಕೆಟ್ಟು ಹೋಗುತ್ತಿದ್ದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತುಂಬಾ ದುಃಖಿತರಾಗಿ ಮಾತನಾಡುತ್ತಿದ್ದರು. ನಮ್ಮನ್ನು ಆಳುವವರು ತಪ್ಪು ಮಾಡಿದರೆ ಅವರ ಕೊರಳಪಟ್ಟಿ ಹಿಡಿದು ಕೇಳುವ ಹಕ್ಕು ನಮಗಿದೆ. ನೀವೆಲ್ಲರೂ ಹಾಗಾಗಬೇಕು. ಇಲ್ಲವೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಲೆ ಇರುವುದಿಲ್ಲ ಎಂದೆಲ್ಲಾ ಹೇಳುತ್ತಿದ್ದರು. ಈ ಮಾತುಗಳು ನಿನ್ನೆ ಮೊನ್ನೆ ಕೇಳಿದಂತೆ ಶಾರದಮ್ಮನ ಮನದಲ್ಲಿ ರಿಂಗಣಿಸುತ್ತಿದ್ದವು. ಅದನ್ನೆಲ್ಲಾ ತನ್ನ ಓಣಿಯ ಹೆಣ್ಣುಮಕ್ಕಳಿಗೆ ಹೇಳುತ್ತಿದ್ದರೆ, ಅವರೆಲ್ಲಾ ಟೀವಿ ಧಾರಾವಾಹಿಯಲ್ಲಿ ಅವಳಿಗೆ ಹೀಗಾಗಬಾರದಿತ್ತು, ಇವಳಿಗೆ ಹೀಗಾದದ್ದು ಒಳ್ಳೆಯದೇ ಆಯಿತು ಎಂಬಂತಹ ಮಾತುಗಳಲ್ಲಿ ಮುಳುಗಿ ಹೋಗಿರುತ್ತಿದ್ದರು.
ಊರಿಗೆ ಚುನಾಯಿತ ಪ್ರತಿನಿಧಿಗಳು ಬಂದಾಗ, ಚುನಾವಣೆ ಬಂದಾಗ ಶಾರದಮ್ಮನಿಗೆ ಈ ತಿಳಿವಳಿಕೆ ಜಾಗೃತವಾಗುತ್ತಿತ್ತು. ಶಾರದಮ್ಮ ಓಟು ಹಾಕಲು ಎಂದೂ ಹಣ ಪಡೆದಿರಲಿಲ್ಲ. ಹಾಗೆ ಹಣ ಕೊಡಲು ಬಂದವರೊಂದಿಗೆ ಜಗಳ ಕಾದು ರಂಪಾಟ ಮಾಡುತ್ತಿದ್ದಳು. ಆದರೆ ಕೊಟ್ರಜ್ಜ ಗೊತ್ತಾಗದಂತೆ ಆಕೆಯ ಪಾಲಿನ ಓಟಿನ ಬಾಬತ್ತನ್ನು ವಸೂಲಿ ಮಾಡುತ್ತಿದ್ದನು. ಈ ಸುದ್ದಿ ತಿಳಿದು ಒಮ್ಮೆ ಕೊಟ್ರಜ್ಜನ ಹತ್ತಿರವೂ ಜಗಳ ಮಾಡಿ, ತಿಂಗಳುಗಟ್ಟಲೆ ಮಾತು ಬಿಟ್ಟಿದ್ದಳು. ಹಾಗಾಗಿ ಗ್ರಾಮ ಪಂಚಾಯ್ತಿ ಸದಸ್ಯರು ಕೊಟ್ರಜ್ಜನ ಮನೆ ಮುಂದೆ ತಪ್ಪಿಯೂ ಸುಳಿಯುತ್ತಿರಲಿಲ್ಲ.
ಊರಿಗೆ ಯಾವುದೇ ರಾಜಕಾರಣಿಗಳು ಬಂದರೆ ಶಾರದಮ್ಮನಿಗೆ ಈ ಸುದ್ದಿ ಗೊತ್ತಾಗದಂತೆ ಗೌಪ್ಯ ಕಾಪಾಡುತ್ತಿದ್ದರು. ಅಥವಾ ಕೊಟ್ರಜ್ಜನಿಗೆ ಹಣ ಕೊಟ್ಟು ಹೇಗಾದರೂ ಆಯಮ್ಮನನ್ನು ನೆಂಟರ ಊರಿಗೆ ಹೋಗುವಂತೆ ವ್ಯವಸ್ಥೆ ಮಾಡುತ್ತಿದ್ದರು. ಇಂತಹ ಜಗಳದಿಂದಾಗಿ ಶಾರದಮ್ಮ ಊರವರ ನಿಷ್ಠುರವನ್ನು ಕಟ್ಟಿಕೊಂಡಿದ್ದಳು. ಅಷ್ಟಕ್ಕೂ ಶಾರದಮ್ಮ ಊರಲ್ಲಿ ಹೆಚ್ಚಾಗಿರುವ ಮೇಲ್ಜಾತಿಗೇ ಸೇರಿದ್ದರಿಂದ ಅವಳ ಬಗೆಗಿನ ವಿರೋಧವೂ ಸೌಮ್ಯವಾಗಿತ್ತು. ಆದರೆ ಈ ಬಾರಿ ಚುನಾವಣಾ ಪ್ರಚಾರಕ್ಕೆ ಎಮ್ಮೆಲ್ಲೆ ದಿಢೀರನೆ ಬರುತ್ತಾರೆನ್ನುವ ಸುದ್ದಿ ಒಂದು ದಿನ ಮುಂಚೆ ತಿಳಿದಿದ್ದರಿಂದಾಗಿ ಯಾರೂ ಶಾರದಮ್ಮನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
***
ಎಮ್ಮೆಲ್ಲೆ ಮಳ್ಳಪ್ಪ ಬಿಳಿ ಪಂಚೆತೊಟ್ಟು ಹಣೆಗೆ ಕುಂಕುಮ ಇಟ್ಟು ನಗು ಮೊಗದಲ್ಲಿ ಕೈ ಮುಗಿದಿರುವ ದೊಡ್ಡ ಕಟೌಟಿನ ಮುಂದೆ ನಿಂತ ಜನರು ಎಮ್ಮೆಲ್ಲೆಗಾಗಿ ಕಾಯುತ್ತಿದ್ದರು. ಬೆಳಗ್ಗೆ ಹತ್ತಕ್ಕೆ ಬರಬೇಕಾಗಿದ್ದ ಎಮ್ಮೆಲ್ಲೆ ಮಳ್ಳಪ್ಪ ಮಧ್ಯಾನದ ಎರಡು ಗಂಟೆಯಾದರೂ ಬಂದಿರಲಿಲ್ಲ. ಕೆಲವರು ಕಾದು ಕಾದು ತಮ್ಮ ತಮ್ಮ ಕೆಲಸಕ್ಕೆ ಹೋಗಿದ್ದರು. ಮತ್ತೆ ಕೆಲವರು ಮಧ್ಯಾನದ ಊಟ ಮುಗಿಸಿಕೊಂಡು ಬಂದು ನಿರುತ್ಸಾಹದಿಂದ ಕಾಯತೊಡಗಿದ್ದರು. ಗೌಡರ ಕಾಳಪ್ಪ, ಮೆಂಬರ್ ಕೊಟ್ರೇಶಪ್ಪ ಮುಂತಾದವರು ಎಮ್ಮೆಲ್ಲೆಗೆ ಹಾಕಲು ತಂದಿಟ್ಟುಕೊಂಡಿರುವ ಹೂವಿನ ಹಾರಗಳು ಒಣಗುತ್ತಿರುವ ಬಗ್ಗೆ ತಲೆ ಕೆಡಿಸಿಕೊಂಡಿದ್ದರು.
ಮೊಬೈಲಿನಲ್ಲಿ ಜೋರು ಮಾತಾಡುತ್ತಾ... ಯಾವುದೋ ಗುಟ್ಟು ತಿಳಿದವರಂತೆ ತಳವಾರ ಪೆಟಿಗಿ, ಜಾಕೀರಪ್ಪ ‘ಎಮ್ಮೆಲ್ಲೆ ಸಾಹೇಬ್ರು.. ಇನ್ನೇನು ಬಂದೇ ಬಿಡ್ತಾರ.. ಇಲ್ಲೇ ಇದಾರ..’ಎನ್ನುತ್ತಾ ಕ್ಷಣ ಕ್ಷಣದ ವರದಿ ಬಿತ್ತರಿಸುತ್ತಾ ಜನರ ಕುತೂಹಲ ಕಡಿಮೆಯಾಗದಂತೆ ಕಾಪಾಡುತ್ತಿದ್ದರು. ಶ್ರಿ ಮೈಲಾರಲಿಂಗೇಶ್ವರ ಸಮಾಳ ಸಂಘದ ಹುಡುಗರು ಸಮಾಳ ಬಡಿದು ಸುಸ್ತಾಗಿ ಮನೆಯಲ್ಲಿ ಮೂಲೆಗೆ ನೇತು ಹಾಕಿ ಬಂದಿದ್ದರು. ಕಪ್ಪಿ ಕೊಟ್ರೇಶ್ ಮತ್ತು ಬಾರಿಕರ ಪರಸಪ್ಪನ ಓಟಲಿನ ಟೀ, ಕಾರಮಂಡಕ್ಕಿ, ಮೆಣಸಿನ ಕಾಯಿಗೆ ಬೆಳಗ್ಗೆಗಿಂತ ಈಗ ಗಿರಾಕಿಗಳು ಕಡಿಮೆಯಾಗತೊಡಗಿದ್ದರು. ವೃದ್ಧಾಪ್ಯ ವೇತನದ ಸೌಲಭ್ಯ ಕೊಡಿಸಿ ಸ್ವಾಮಿ ಎಂದು ಅವಲತ್ತುಕೊಳ್ಳಲೆಂದು ಬಂದಿದ್ದ ಕೆಲ ಮುದುಕ ಮುದುಕಿಯರು ತೀರಾ ಸುಸ್ತಾದಂತೆ ಎಲೆಅಡಿಕೆ ಜಗಿದು ಜೋರಾಗಿ ಉಗಿದು ತಮ್ಮ ಸಿಟ್ಟನ್ನು ಹೊರ ಹಾಕಿದ್ದರು.
ಯಾವುದೋ ಕಾರು ಸದ್ದಾದದ್ದು ಕೇಳಿ ಎಲ್ಲರ ಕಿವಿ ನಿಮಿರಿತು. ರಸ್ತೆಯ ಕಡೆ ನೋಡತೊಡಗಿದರು, ದೂಳು ಅಡರಿಸಿಕೊಳ್ಳುತ್ತಾ ನಾಲ್ಕೈದು ಕಾರುಗಳು ನೋಡು ನೋಡುತ್ತಿದ್ದಂತೆಯೇ ಊರ ಮುಂದೆ ಬಂದು ನಿಂತವು. ಊರ ಮುಖಂಡ ತಾತಣ್ಣ... ಕಾರಲ್ಲಿ ಇಳಿಯುತ್ತಿದ್ದ ಎಮ್ಮೆಲ್ಲೆ ಕೊರಳಿಗೆ ದೊಡ್ಡದೊಂದು ಹಾರ ಹಾಕಿ ಸ್ವಾಗತ ಕೋರಿದ. ದಡೂತಿಯಂಥ ಎತ್ತರದ ಕಟ್ಟುಮಸ್ತಾದ ಎಮ್ಮೆಲ್ಲೆ ಮಳ್ಳಪ್ಪ ಒಂದು ಕೈಯಲ್ಲಿ ಮೊಬೈಲ್ ಹಿಡಿದು ಮಾತನಾಡುತ್ತಾ ಮತ್ತೊಂದು ಕೈ ಎತ್ತಿ ಅಲ್ಲಾಡಿಸುತ್ತಾ ನಡೆಯತೊಡಗಿದ. ಆತನ ಸುತ್ತ ಹಿಂಬಾಲಕರು ಅಡರಿಕೊಂಡು... ತಾವು ತಂದಿದ್ದ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಹಿಡಿದು, ಜನಪ್ರಿಯ ಶಾಸಕ ಮಳ್ಳಪ್ಪನಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.
ಕೆಲವರು ಮೊಬೈಲ್‌ನಲ್ಲಿ ಫೋಟೋ ತೆಗೆಯಲು ತಡಬಡಿಸುತ್ತಿದ್ದರೆ, ಇನ್ನು ಕೆಲವರು ಜೋರಾಗಿ ಜೈಕಾರ ಹಾಕತೊಡಗಿದರು. ಮಾದಿರ ಚೌಡಪ್ಪ ಎಗರಿ ಎಗರಿ ಹಲಗೆ ಬಾರಿಸುತ್ತಿದ್ದರೆ ಹುಡುಗರು ಕೇಕೆ ಹಾಕಿ ಕುಣಿಯುತ್ತಿದ್ದರು. ಮೈಲಾರಲಿಂಗೇಶ್ವರ ಸಮಾಳ ಸಂಘದ ಹುಡುಗರು ಎದ್ದೆವೋ ಬಿದ್ದೆವೋ ಅಂತ ತಮ್ಮ ತಮ್ಮ ಮನೆಗಳಿಗೆ ಓಡಿ ಸಮಾಳಗಳನ್ನು ತಂದು ಬಾರಿಸತೊಡಗಿದರು. ನೋಡು ನೋಡುತ್ತಿದ್ದಂತೆಯೇ ಜನ ಸಾಗರವೇ ಸೇರಿ ಎಲ್ಲರೂ ಆಂಜನೇಯನ ಗುಡಿ ಮುಂದಕ್ಕೆ ಧಾವಿಸಿದರು. ಸ್ವಲ್ಪ ದೂರದಲ್ಲಿ ಗುಂಪು ಗುಂಪಾಗಿ ನಿಂತ ಹೆಣ್ಣುಮಕ್ಕಳು ನೋಡ್ರೆ ಎಮ್ಮೆಲ್ಲೆ ಸಾಬ್ರು... ಅಂತ ಪಿಸು ಪಿಸು ಮಾತಾಡಿಕೊಳ್ಳುತ್ತಿದ್ದರು. ಶಾರದಮ್ಮ ಮಾತ್ರ ಕಾಟನ್ ಸೀರೆ ತೊಟ್ಟು ಹಣೆಗೆ ದೊಡ್ಡ ಕುಂಕುಮಬೊಟ್ಟು ಇಟ್ಟು ತುಂಬಾ ಗಾಂಭೀರ್ಯದಿಂದ ಆಂಜನೇಯನ ಗುಡಿಯ ಮುಂದೆ ಕೂತಿದ್ದಳು.
ಜನ ಜಂಗುಳಿ ಜಾಸ್ತಿಯಾದಂತೆ, ಕೆಲವರು ಎಲ್ಲರನ್ನು ಕೂರಿಸುವುದರಲ್ಲಿ ಮಗ್ನರಾಗಿದ್ದರು. ಎಮ್ಮೆಲ್ಲೆಯವರು ಗುಡಿಯ ಕಟ್ಟೆಯ ಮೇಲೆ ಹಾಕಿದ್ದ ಕಂಬಳಿ ಮೇಲೆ ಕೂತರು. ತಾತಣ್ಣ ಎದ್ದು ನಿಂತು, ‘ಎಲ್ರು ಸುಮ್ನಾಗ್ರಪ್ಪಾ..ಗದ್ಲ ಮಾಡಬೇಡ್ರಿ... ಎಮ್ಮೆಲ್ಲೆ ಸಾಹೇಬ್ರು ಇವತ್ತು ನಮ್ಮೂರಿಗೆ ಬಂದಾರ, ಇದು ನಮ್ಮೂರಿನ ಭಾಗ್ಯ, ಜನಪ್ರಿಯ ಶಾಸಕರಾದ ಶ್ರಿಮಾನ್ ಮಳ್ಳಪ್ಪ ಅವರನ್ನು ನೀವು ಹಿಂದೆ ಪ್ರಚಂಡ ಬಹುಮತದಿಂದ ಗೆಲ್ಲಿಸಿದ್ದೀರಿ, ಈಗಲೂ ಅವರಿಗೆ ನಿಮ್ಮ ಆಶೀರ್ವಾದ ಬೇಕು... ಎಂದು ಹೇಳುತ್ತಿದ್ದಂತೆಯೇ ಮಳ್ಳಪ್ಪನವರಿಗೆ ಜಯವಾಗಲಿ ಎಂಬ ಜಯ ಘೋಷ ಮೊಳಗಿತು.
ನಂತರ ಮಳ್ಳಪ್ಪನವರು ಎದ್ದು ಒಮ್ಮೆ ಎರಡೂ ಕೈ ಮೇಲೆತ್ತಿ ಎಲ್ಲರಿಗೂ ನಮಸ್ಕಾರ ಮಾಡಿದರು, ದೂರದಲ್ಲಿದ್ದ ಹೆಣ್ಣುಮಕ್ಕಳಿಗೂ ನಮಸ್ಕಾರ ಎನ್ನುವಂತೆ ಕೈಯನ್ನು ಇನ್ನಷ್ಟು ಮೇಲೆತ್ತಿ ಹೆಣ್ಣುಮಕ್ಕಳ ಗುಂಪನ್ನು ನೋಡಿ ಕೈ ಮುಗಿದರು. ನಂತರ ಮಾತನಾಡಿ, ಮತದಾರ ದೇವ್ರಗಳಿಗೆ ನಮಸ್ಕಾರ, ಮಾನ್ಯ ಮತ ಬಾಂಧವರೆ ಈ ಊರು ನನ್ನ ತವರು ಮನೆ ಇದ್ದಂಗ, ನೀವೆಲ್ಲಾ ನನ್ನ ಬಂಧುಗಳು. ಹಿಂದಿನ ಎಲೆಕ್ಷನ್ಯಾಗ ಬರ್ಜರಿ ಓಟು ಕೊಟ್ಟು ಗೆಲ್ಸಿದಿರಿ, ಆ ನಿಮ್ಮ ಋಣದಲ್ಲೇ ನಾನು ಇಲ್ಲಿಗೆ ಬಂದಿದಿನಿ, ಈ ಬಾರಿನೂ ನೀವು ನನ್ನ ಗೆಲ್ಲಿಸ್ತಿರಿ ಅನ್ನೋ ವಿಶ್ವಾಸ ಐತಿ, ಈ ಬಾರಿ ನಿಮ್ಮೂರಿಗೆ ನೀರಿನ ಟ್ಯಾಂಕ್, ರಸ್ತೆ, ನಿಮಗೆ ಏನೇನು ಬೇಕಾಗ್ಯಾವ ಎಲ್ಲನೂ ಮಾಡ್ಸಾಮು... ನಾನು ನಿಮ್ಮ ಹತ್ರ ಕೇಳೊದು ಒಂದಾ ಮಾತು... ನಿಮ್ಮ ಓಟು ನನಗೆ ಕೊಟ್ಟು ಗೆಲ್ಸರಪ್ಪಾ... ಎಂದು ಮತ್ತೊಮ್ಮೆ ಎಲ್ಲರಿಗೂ ಕೈ ಮುಗಿದು ಕೂತರು. ಜನರು ಚಪ್ಪಾಳೆ ಬಾರಿಸಿ ಮತ್ತೊಮ್ಮೆ ಜೈಕಾರ ಹಾಕಿ ಕೂಗಿದರು.
ಶಾರದಮ್ಮ ದಿಢೀರನೆ ಎದ್ದು ನಿಂತು... ‘ಎಮ್ಮೆಲ್ಲೆ ಸಾಬ್ರೆ ನೀವು ನಮ್ಮೂರಿಗೆ ಮಾಡಿದ ಕೆಲ್ಸಾ ಒಂದಾ ಎರಡಾ... ಎಂಗೇಳಕ ಗೊತ್ತಾಗ್ವಲ್ದು ನೋಡ್ರಿ... ಎನ್ನುತ್ತಲೂ ಇಡೀ ಸಭೆ ಸ್ತಬ್ದವಾದಂತೆ, ಜನರೆಲ್ಲಾ ಶಾರದಮ್ಮನ ಕಡೆ ನೋಡತೊಡಗಿದರು. ತಾತಣ್ಣ ದಾವಿಸಿ ಬಂದು... ಶಾರದಮ್ಮ ಈಗ ಕೂತ್ಕಂಡು ಬಿಡು ನಮ್ಮ ಎದುರು ಹೇಳುವಂತೆ, ಸಾಹೇಬ್ರಿಗೆ ಟೈಮಿಲ್ಲ... ಅವ್ರ ಇನ್ನು ಬಾಳ ಊರಿಗೆ ಹೋಗಾದು ಇದೆ, ಎಂದು ಸುಮ್ಮನಿರಿಸಲು ನೋಡಿದರು. ಶಾರದಮ್ಮ ಸಿಟ್ಟಿನಿಂದ, ‘ತಾತಣ್ಣ ನೀ ಸುಮ್ನಿರಪ್ಪಾ, ನಾನು ಓಟು ಹಾಕಿನಿ, ಮಾತಾಡ್ತೀನಿ... ಈಗ ನಾನು ಯಾರ ಮಾತು ಕೇಳಲ್ಲ..’ ಎಂದಾಗ ಗೌಜು ಗದ್ದಲವಾದಂತಾಗಿ ಎಮ್ಮೆಲ್ಲೆ ಮಳ್ಳಪ್ಪನೇ ನಡುವೆ ಪ್ರವೇಶಿಸಿ ತಾತಣ್ಣವ್ರೆ ಆಯಮ್ಮ ಮಾತಾಡ್ಲಿ ಬಿಡ್ರಿ... ಅವ್ರಿಗೂ ಮಾತಾಡಕ ಹಕ್ಕೈತಿ... ಮಾತಡಮ್ಮಾ ನೀ ಮಾತಾಡು... ಎಂದನು. ಜನ ‘ಇನ್ನು ಎಮ್ಮೆಲ್ಲೆ ಕಥೆ ಮುಗೀತು’ ಎನ್ನುವಂತೆ ಶಾರದಮ್ಮನ ಮಾತುಗಳನ್ನು ಕೇಳಲು ಉತ್ಸುಕರಾದರು.
ಶಾರದಮ್ಮ ಸಾವರಿಸಿಕೊಂಡು ಸೀರಿ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು, ‘ನೋಡ್ರಿ ಎಮ್ಮೆಲ್ಯಾರಾ ನಮ್ಮೂರವ್ರ..ದಿನ ನಿಮ್ಮನ್ನ ನೆನೆಸೆ ಉಣ್ಣಾದು , ನಮ್ಮೂರಿಗೆ ಅದೇನು ಮಾಡಿರೋ ನೀವು... ನಮ್ಮೂರಿಗೆ ಒಂದ್ ಬಸ್ ಬಿಡಿಸಿದ್ರ ಸಾಕಿತ್ತು... ಏಳೆಂಟು ಬಸ್ಸು ಬಿಡ್ಸೀರಿ. ಹತ್ತಾರ ದಿಕ್ಕಿಲ್ಲ. ಓಣಿಗೆ ಒಂದ್ ಬಲ್ಪು ಹಾಕ್ಸಂದ್ರ ನಾಕು ನಾಕು ಬಲ್ಪು ಹಾಕ್ಸೀರಿ... ಆ ಬೆಳ್ಕಿಗೆ ಕಣ್ ಮಂಜಾಗಿ ಕೆಲವ್ರ ಕಣ್ಣ ಕುಳ್ಡಾಗ್ಯಾವ, ಓಣಿಗೆ ಬಂಡೆಕಲ್ಲು ಹಾಕ್ಸೋದ್ ಬಿಟ್ಟು ಟೈಲ್ಸ್ ಕಲ್ಲು ಹಾಕ್ಸೀರಿ, ನಮ್ಮೋಣ್ಯಾಗ ಅದ್ರ ಮ್ಯಾಲ ಜಾರಿ ಬಿದ್ದು ಏಸೋ ಮಂದಿ ಕಾಲ್ಮುರ್ಕಂಡು ಆಸ್ಪತ್ರಿ ಸೇರ್ಯಾರ... ಎಂದು ಮಾತು ನಿಲ್ಲಿಸಿದಳು. ಆಗ ಗುಂಪಿನಲ್ಲೊಬ್ಬ ಕಿಸಕ್ಕನೆ ನಕ್ಕನು. ಶಾರದಮ್ಮ ನಕ್ಕ ಕಡೆಗೊಮ್ಮೆ ಸಿಟ್ಟಿನಿಂದ ಗುರಾಯಿಸಿದಳು. ಮತ್ತೆ ಸಭೆ ಮೌನವಾಯಿತು.
ಶಾರದಮ್ಮ ಮಾತು ಮುಂದುವರೆಸಿದಳು... ‘ಎಮ್ಮೆಲ್ಯಾರಾ ಓಣಿಗೊಂದು ನಲ್ಲಿ ಹಾಕ್ಸಿದ್ರ ಸಾಕಾಗ್ತಿತ್ತು, ಆದ್ರ ಮನಿಗೆರಡೆರಡು ನಲ್ಲಿ ಹಾಕ್ಸೀರಿ. ಜನ ಯಾವ ನಲ್ಯಾಗ ನೀರು ಹಿಡಿಯಾಕು? ಒಂದರಲ್ಲಿ ಹಿಡಿದ್ರ ಒಂದರ ನೀರು ಸುಮ್ನ ಹರಿತಾತಿ. ಸಾಹೇಬರಾ ನಿಮ್ಮ ಗುಣಾನ ಎಷ್ಟು ಏಳಿದ್ರೂ ತೀರದು ಬಿಡ್ರಿ, ಇಷ್ಟು ಸಾಕು ಬಿಡ್ರಿ, ನಮ್ ಸೇವೆನಾ ನೀವಾದ್ರೂ ಎಷ್ಟಂತ ಮಾಡ್ತೀರಿ, ಇನ್ಮ್ಯಾಲೆ ಹರಾಮು ಇರ್ರಿ ಸುಮ್ನ ಯಾಕ ಯೆಲಕ್ಷನ್ ಇಡ್ತೀರಿ, ಬೇರೆರು ಯಾರಾದ್ರು ನಿಲ್ಲಲಿ. ಅವ್ರ ನಿಮ್ಮಂಗ ದಣಕಳ್ಳಿ...’ ಎನ್ನುತ್ತಾ ಶಾರದಮ್ಮ ಗಂಭೀರವಾಗತೊಡಗಿದಳು.
ಸಿಟ್ಟು ನೆತ್ತಿಗೇರಿದವಳಂತೆ... ‘ಅಲ್ರಿ ಎಮ್ಮೆಲ್ಲೆ ಸಾಹೇಬ್ರೆ ನಮ್ಮೂರಿಗೆ ಏನು ಮಾಡಿ ಅಂತ ಓಟು ಕೇಳಾಕ ಬಂದೀಯಪ್ಪಾ... ಓದ ಸಲ ಗೆದ್ದು ಓದಾತ ಈಗ ಬಂದಿ... ಮತ್ತೆ ಯಾವ ನಂಬಿಕಿ ಮ್ಯಾಲ ನಿನಿಗೆ ಓಟು ಆಕಾಕು... ನೀನೊಬ್ಬಾತ ಮಕ್ಳು ಮಮ್ಮೊಕ್ಳು ಕುಂತು ತಿಂದ್ರೂ ಸಾಲದಂಗ ದುಡ್ಡು ಗಳಿಸಿದ್ರ ಆತೇನು? ಜನ್ರ ದುಡ್ಡು ತಿನ್ನಾಕ ಮನಸ್ಸಾದ್ರೂ ಹೆಂಗ ಬಂತಪ್ಪ ನಿನ್ಗೆ... ದುಡ್ಡು ತಿನ್ನು ಬ್ಯಾಡನ್ನಲ್ಲ ಆದ್ರ ಚೂರಾದ್ರು ಕೆಲ್ಸ ಮಾಡ್ಸಿದ್ದು?’ ಎಂದು ಒಂದೇ ಉಸಿರಿಗೆ ಶಾರದಮ್ಮ ಹೇಳಿದಾಗ, ಮುಸಿಮುಸಿ ನಗತೊಡಗಿದ್ದ ಜನರು ಗಂಭೀರವಾಗತೊಡಗಿದರು. ಕೆಲವರು ಶಾರದಮ್ಮಂಗೆ ಜಯವಾಗ್ಲಿ ಎಂದು ಜೋರಾಗಿ ಕೂಗಿದರು. ಇಡೀ ವಾತಾವರಣ ಬಿಗುವಾಯಿತು. ತಾತಣ್ಣನ ಮುಖ ಜಿವುಟಿದರೂ ರಕ್ತ ಬರದಂತೆ ಮರಗಟ್ಟಿತ್ತು. ಎಮ್ಮೆಲ್ಲೆ ಹಿಂಬಾಲಕರು ಶಾರದಮ್ಮನನ್ನು ತರಾಟೆಗೆ ತೆಗೆದುಕೊಳ್ಳಲು ಅವರ ಅನುಮತಿಗಾಗಿ ಕಾಯತೊಡಗಿದರು.
ಎಮ್ಮೆಲ್ಲೆ ಮಳ್ಳಪ್ಪನಿಗೆ ಅವಮಾನವಾದಂತಾಯಿತು. ಆದರೆ ಜನರೆದುರು ಶಾರದಮ್ಮನನ್ನು ನಿಂದಿಸುವುದಾಗಲಿ, ಬೈಯುವುದಾಗಲಿ ಮಾಡುವಂತಿರಲಿಲ್ಲ. ತಾತಣ್ಣ ತಾನಿದ್ದೂ ಎಮ್ಮೆಲ್ಲೆ ಮಾನ ಹರಾಜು ಹಾಕಿದೆನೆಲ್ಲಾ ಎಂದು ತಾನೆ ಮಾತು ಆರಂಭಿಸಿದನು... ‘ಶಾರದಮ್ಮನಿಗೆ ಇನ್ನೂ ರಾಜಕೀಯ ಗೊತ್ತಿಲ್ಲ, ಎಲ್ಲನೂ ಎಮ್ಮೆಲ್ಲೆ ಸಾಹೇಬ್ರಾ ಮಾಡಕಂದ್ರ ಆಗಲ್ಲ, ಅವರಿಗೆ ಎಷ್ಟು ಸಾದ್ಯನೋ ಅಷ್ಟ ಮಾಡ್ತಾರ..ಅದುನ್ನ ಅವ್ರ ಆಪೀಸಿಗೆ ಹೋಗಿ ಕೇಳ್ಬಕು, ಸಭೇಲಿ ಜನ್ರ ಎದ್ರು ಕೇಳದು ತಪ್ಪು...’ ಎಂದಾಗ ಸಿದ್ದಪ್ಪ ಮೇಷ್ಟ್ರ ಮಗ ಧನಂಜಯ, ‘ತಾತಣ್ಣರಾ ಶಾರದಮ್ಮಂದು ತಪ್ಪು ಎಂಗ ಅಕ್ಕಾತಿ ಆಯಮ್ಮ ಬೇಸಿ ಕೇಳ್ಯಾಳ ಬಿಡು’ ಎಂದಾಗ ಕೆಲವರು ಹೌದೌದು... ಎನ್ನುವಂತೆ ಧ್ವನಿ ಸೇರಿಸಿದರು.
ಎಮ್ಮೆಲ್ಲೆ ಮಳ್ಳಪ್ಪನಿಗೆ ಇಕ್ಕಳದಲ್ಲಿ ಸಿಕ್ಕ ಅಡಕೆಯ ಪರಿಸ್ಥಿತಿ. ಏನು ಮಾತಾಡುವುದು ಎಂದು ಪೇಚಿಗೆ ಸಿಕ್ಕಿಕೊಂಡನು. ತಕ್ಷಣವೇ ಏನೋ ಹೊಳೆದವನಂತೆ ‘ಶಾರದಮ್ಮ ಹೇಳೋ ಮಾತು ನಿಜ ಐತಿ, ಜನರು ನಮ್ಮನ್ನು ಎಚ್ಚರಿಸದೇ ಇದ್ರೆ ನಾವು ಪಾಠ ಕಲಿಯೋದಿಲ್ಲ. ಇದು ಪ್ರಜಾಪ್ರಭುತ್ವ. ಇಲ್ಲಿ ಎಲ್ಲರಿಗೂ ಪ್ರಜಾ ಪ್ರತಿನಿಧಿಗಳ ಕೊಳಪಟ್ಟಿ ಹಿಡಿದು ಕೇಳೋ ಹಕ್ಕು ಐತಿ. ಶಾರದಮ್ಮ ನನಗೆ ತಾಯಿ ಇದ್ದಂಗ ಆಯಮ್ಮನ ಪಾದದ ಮೇಲೆ ಆಣೆ ಮಾಡಿ ಹೇಳ್ತೀನಿ, ಈ ಊರಿಗೆ ಆಯಮ್ಮ ಏನೇನು ಕೇಳಿದಳೋ ಅದನ್ನೆಲ್ಲಾ ಮಾಡಿಸ್ತಿನಿ.
ಶಾರದಮ್ಮನಂತವರ ಆಶಿರ್ವಾದ ಇಲ್ಲದೆ ಇದ್ರೆ ನಾವು ಬದುಕೋದಾದ್ರು ಹೇಗೆ?’ ಎಂದು ಭಾವುಕನಾದನು. ಜನ ಮಳ್ಳಪ್ಪನಿಗೆ ಜಯವಾಗಲಿ ಎಂದು ಕೂಗಿದರು. ಶಾರದಮ್ಮ ತಾನು ಮಾತನಾಡಿದ್ದು ತಪ್ಪಾಯಿತೇನೋ ಎನ್ನುವಂತೆ ಕಸಿವಿಸಿಗೊಂಡಳು. ಈತ ಒಳ್ಳೆ ಮನುಷ್ಯ ಇದ್ದಂಗ ಐದಾನ ಪಾಪ ನಾನು ಹಂಗೆ ಮಾತಾಡ್ಬಾರದಿತ್ತೇನೋ ಎಂದು ನೊಂದುಕೊಂಡಳು. ಮಳ್ಳಪ್ಪ ಜನ್ರಿಗೆ ಚೆನ್ನಾಗಿ ಮಂಕು ಬೂದಿ ಎರಚಿದೆ, ಎಂದು ಒಳಗೊಳಗೇ ಖುಷಿಗೊಂಡನು.
ಮತ್ತೆ ಮಾತಾಡಿ ‘ಮಹಾಜನಗಳೇ... ನಿಮ್ಮ ಶ್ರಿರಕ್ಷೆ ನನ್ನ ಮೇಲೆ ಇದೆ ಅಂತ ನಂಬೀನಿ. ಇನ್ನು ಬಹಳ ಊರುಗಳಿಗೆ ಹೋಗ್ಬೇಕಾಗಿದೆ, ಈಗ ಹೊರಡ್ತೀನಿ’ ಎಂದವನೇ ದಿಡೀರನೆ ಶಾರದಮ್ಮನ ಎದುರು ಬಂದು ‘ಆಶೀರ್ವಾದ ಮಾಡಮ್ಮ ನೀನು ನನ್ನ ತಾಯಿ ಇದ್ದಂತೆ’ ಎಂದು ಕಾಲಿಗೆ ಬೀಳಲು ಹೋದಾಗ, ಶಾರದಮ್ಮ ಗಲಿಬಿಲಿಗೊಂಡು ಆತನನ್ನು ಗಟ್ಟಿಯಾಗಿ ಹಿಡಿದು ‘ಅಯ್ಯೋ ನೀವು ದೊಡ್ಡಾರಪ್ಪಾ ನಮ್ಮಂತವರ ಕಾಲಿಗೆ ಬೀಳಬಾರದು...’ಎನ್ನುತ್ತಾ ಭಾವುಕಳಾದಳು. ಇದನ್ನೆಲ್ಲಾ ಒಂದು ಪ್ರಹಸನ ಎನ್ನುವಂತೆ ಜನ ಮೂಕವಿಸ್ಮಿತರಾಗಿ ನೋಡತೊಡಗಿದರು. ಮಳ್ಳಪ್ಪ ‘ನೋಡಮ್ಮ ದೇವರು ಹೊತ್ತ ಹೆಣ್ಮಗಳು ನೀನು, ಸೀರೆ ಬಳೆ ತೊಗೊಳಮ್ಮಾ...’ ಎಂದು ನೂರರ ಐದಾರು ನೋಟುಗಳನ್ನು ಕೈಲಿಟ್ಟು ಮಳ್ಳಪ್ಪ ಹೊರಟೇ ಬಿಟ್ಟ. ಜನಸಂದಣಿಯೇ ಕಾರಿನ ಕಡೆ ಬಂದು ಎಮ್ಮೆಲ್ಲೆ ಮಳ್ಳಪ್ಪನನ್ನು ಬೀಳ್ಕೊಟ್ಟರು.
‘ಶಾರದಮ್ಮ ಒಳ್ಳೆ ಚಾನ್ಸ ಒಡದ್ಲು ಬಿಡು’ ಎಂದು ಗುಂಪಿನಲ್ಲೊಬ್ಬ ಕಿಚಾಯಿಸಿದ. ಈ ಅನಿರೀಕ್ಷಿತ ತಿರುವಿನಿಂದಾಗಿ ಶಾರದಮ್ಮ ವಿಚಿತ್ರ ರೀತಿಯಲ್ಲಿ ತಳಮಳಕ್ಕೊಳಗಾದಳು. ಮೈ ನಡುಗತೊಡಗಿತ್ತು. ತುಟಿಗಳು ಅದುರುತ್ತಿದ್ದವು. ನೂರರ ನೋಟಿನೊಳಗಿನ ಗಾಂಧಿ ಶಾರದಮ್ಮನ ಸ್ಥಿತಿ ಕಂಡು ಮರುಗತೊಡಗಿದ. ಮನೆಗೆ ಬಂದಾಗ ದೇವಿ ಯಲ್ಲಮ್ಮನ ಮುಂದೆ ಪೂಜೆ ಮಾಡಿ ಗಂಟೆಗಟ್ಟಲೆ ಸುಮ್ಮನೆ ಕೂತಳು. ಊರವರು ಶಾರದಮ್ಮನ ಬಗ್ಗೆ ತರಾವರಿ ಮಾತನಾಡಿದರು. ಕೊಟ್ರಜ್ಜ ಬಂದಾತನೇ, ‘ನಿನಿಗೆ ಎಲ್ಲಿ ಏನು ಮಾತಾಡ್ಬೇಕು ಅನ್ನೊ ಖಬರಿಲ್ಲ, ಊರಿಗೆ ಊರೆ ಸುಮ್ನಿರಕಾರ ನೀನೊಬ್ಬಾಕಿ ಸುಮ್ನಿದ್ರ ಗಂಟೇನು ಹೂಗ್ತಿತ್ತು? ಮುಂಜಾನೆ ಆ ಹನುಮಂತಣ್ಣ, ಪಂಪಣ್ಣ ಚಾಡಿ ಇಟ್ರು. ನೀನು ಗನಂಧಾರಿ, ಒದರಿಬಿಟ್ಟೆ... ಅವರ ಗಂಟೇನು ಹೊಕ್ಕಾತಿ ಬಿಡು...’ ಎಂದು ಗುನುಗಿ ಹೆಗಲ ಮೇಲಿನ ಟವಲ್ ಕೊಡವುತ್ತಾ ಶಾರದಮ್ಮ ದೇವರ ಜಗಲಿ ಮೇಲೆ ಇಟ್ಟ ನೂರರ ನೋಟಲ್ಲಿ ಒಂದನ್ನು ಎತ್ತಿಕೊಂಡು, ಹೊಲದ ಕಡೆ ಹೂರಟ.
***
ಈ ಘಟನೆಯ ನಂತರ ಶಾರದಮ್ಮ ಮೌನಿಯೇ ಆದಳು. ಬರಬರುತ್ತಾ ಶಾರದಮ್ಮನನ್ನು ಜನರು ಮೂಕಮ್ಮ ಎನ್ನತೊಡಗಿದರು. ಶಾರದಮ್ಮ ಮಾತುಗಳನ್ನು ತನ್ನೊಳಗೇ ಅಡಗಿಸಿಕೊಂಡು ಕೊಲ್ಲುವುದನ್ನು ಅಭ್ಯಾಸ ಮಾಡಿಕೊಳ್ಳತೊಡಗಿದಳು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
ಶಿಕ್ಷಣ! ಸಂಘಟನೆ!! ಹೋರಾಟ!!! ಎಂದು ಡಾ.ಅಂಬೇಡ್ಕರರು ಹೇಳಿದ್ದಾರೆಯೇ ??? -ಡಾ.ಶಿವಕುಮಾರ್ ಇಂದು ಬಹುತೇಕ ದಲಿತರು ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶಿಕ್ಷಣ...
2 ಕಾಮೆಂಟ್‌ಗಳು:
ಪ್ರಿಯ ಅರುಣ್,
ಪ್ರಜಾವಾಣಿ ಕತೆ ಓದಿದೆ. ನನಗೆ ಅದು ಪ್ರಿಯವಾಗಲಿಲ್ಲ. ಅದರ ಅಂತ್ಯದ ಭಾಗ ಧ್ವನಿಯಿಂದ ಕೂಡಿರುವಂತೆ ತೋರುತ್ತದೆ. ಅದೂ ಹುಸಿ ಅಂತ್ಯ. ಕತೆ ಯಶಸ್ಸು ಸಾಧಿಸಿದೆ ಅನಿಸುವುದಿಲ್ಲ. ಕಾರಣ ಕತೆಯ ವಸ್ತು ಸರಳವಾಗಿದೆ. ಅದನ್ನು ನಿರ್ವಹಿಸಿರುವ ಬಗೆಯೂ ಸರಳವಾಗಿದೆ. ಕತೆಯಲ್ಲಿ ಕೊಂಚ ಮೆಲೊಡ್ರಮ್ಯಾಟಿಕ್ ಭಾವುಕತೆ ಕೆಲಸ ಮಾಡಿದೆ. ಕಥಾನಾಯಕಿಯ ಮೌನವು ಸಾಂಕೇತಿಕವಾಗಿ ಗ್ರಹಿಸಲು ನೋಡಿದರೂ, ಅದರ ಹಿಂದಿನ ಕತೆಯ ಭಾಗವು ಅದಕ್ಕೆ ತಕ್ಕ ತೂಕವನ್ನು ಪಡೆದಿಲ್ಲ. ಕವಿಯಾಗಿ ಅದ್ಭುತ ಭಾಷೆ ಬಳಸುವ ನೀವು ಕತೆಗೆ ಗದ್ಯಕ್ಕೆ ಬಂದೊಡನೆ ಯಾಕಷ್ಟು ಜಾಳಾಗುತ್ತೀರಿ ತಿಳಿಯುವುದಿಲ್ಲ. ಕವಿತೆಯನ್ನು ಕತೆಯಲ್ಲಿಯೂ ಸೃಷ್ಟಿಸುವ ತಾಳ್ಮೆವಹಿಸದಿದ್ದರೆ,ನಮ್ಮ ಬದುಕಿನ ಸಂಕೀರ್ಣತೆಗಳನ್ನು ಅದರಲ್ಲಿ ಆವಾಹಿಸದಿದ್ದರೆ, ಉತ್ತಮ ಬರೆಹ ಸಂಭವಿಸುವುದಿಲ್ಲ.
,ಈ ಕತೆಎಗ ಹೋಲಿಸಿದರೆ, ಓಸಿ ಕುರಿತ ನಿಮ್ಮ ಬರೆಹಗಳು ನನಗೆ ಬಹಳ ಇಷ್ಟವಾದವು. ಅವು ನಮ್ಮ ಗ್ರಾಮೀಣ ಜಗತ್ತಿನ ಬಗ್ಗೆ ನಾಗರಿಕರಲ್ಲಿ ಇರುವ ರೊಮ್ಯಾಂಟಿಕ್ ಕಲ್ಪನೆಯನ್ನು ಭಗ್ನಗೊಳಿಸುವ ಅದ್ಭುತ ಬರೆಹಗಳು. ಅಲ್ಲಿ ವಿಚಿತ್ರವಾದ ವಸ್ತುನಿಷ್ಠತೆಯಿದೆ.ದುರಂತವನ್ನು ವಿಷಾದದಲ್ಲಿ ಹಾಸ್ಯದಲ್ಲಿ ಹಿಡಿಯುವ ಗುಣವಿದೆ.
ಸ್ನೇಹದ
ತರೀಕೆರೆ
ಅರುಣ್, ನಿಮ್ಮ ಕತೆಯ ಉದ್ದೇಶ ಚನ್ನಾಗಿದೆ. ಆದರೆ ಕತೆಯನ್ನು ಹೆಣೆಯುವ ಶೈಲಿ ಇನ್ನೂ ಸುಧಾರಿಸಬೇಕೆಂದೆನಿಸಿತು. ಕತೆ ಅತ್ಯಂತ ಸರಳವಾಗಿಯೇ ಸಾಗುತ್ತದೆ. ಗ್ರಾಮೀಣ ಭಾಷೆಯನ್ನು ನೀವು ಇನ್ನೂ ದುಡಿಸಿಕೊಳ್ಳಬೇಕಾಗಿತ್ತು. ಯಾಕೆಂದರೆ ಗ್ರಾಮ್ಯ ಭಾಷೆ ನಿಮಗೆ ಚೆನ್ನಾಗಿಯೇ ಗೊತ್ತಿದೆ. ಶಾರದಮ್ಮ ಎಮ್ಮೆಲ್ಲೆಯವರೊಂದಿಗೆ ಮಾತನಾಡುವ ರೀತಿಯೇ ನಾಟಕೀಯ ಎನಿಸಿತು. ಕತೆ ಒಮ್ಮೆಲೆ ಆ ರೀತಿ ತಿರುವು ಪಡೆಯಲು ಸಾಧ್ಯವೇ ಎಂದು ಯೋಚಿಸುವಂತಿದೆ. ಕತೆಯ ಓಟಕ್ಕೆ ಬಹುಶ: ಅದು ತಡೆಯೊಡ್ಡಿತೇನೋ.ಕತೆಯ ಅಂತ್ಯವೂ ವಿಶಾದಪೂರ್ಣವಾಗಿದೆ. ವ್ಯವಸ್ಥೆಯ ವಿರುದ್ಧ ಶಾರದಮ್ಮ ಸೋಲೊಪ್ಪಿಕೊಳ್ಳುತ್ತಾಳೆ. ಅಷ್ಟೊಂದು ನಿರಾಶಾಭಾವನೆ ಯಾಕೆ? ನನಗನ್ನಿಸಿದ್ದಿಷ್ಟೇ. ಕತೆಯ ಹಂದರ ಚೆನ್ನಾಗಿದೆ. ಇನ್ನೂ ಚೆನ್ನಾಗಿ ಬರೆಯಿರಿ.-ಸಿದ್ಧರಾಮ ಹಿರೇಮಠ.
ಕಾಮೆಂಟ್ ಪೋಸ್ಟ್ ಮಾಡಿ