ಸೋಮವಾರ, ಫೆಬ್ರವರಿ 21, 2011

ಜಾನಪದ ವಿಶ್ವವಿದ್ಯಾಲಯ ಅಗತ್ಯ ಏಕೆ?

ಡಾ.ವೀರಣ್ಣ ದಂಡೆ




(ಡಾ.ವೀರಣ್ಣ ದಂಡೆ ಅವರದು ಕನ್ನಡ ಜಾನಪದ ಕ್ಷೇತ್ರದಲ್ಲಿ ಮರೆಯಲಾರದ ಹೆಸರು. ಅವರ ದೇಸಿ ಸಂಪುಟಗಳು ಜಾನಪದ ಅಧ್ಯಯನದ ಚಲನೆಯ ಹಲವು ಮಗ್ಗಲುಗಳ ಬಗ್ಗೆ ಗಮನ ಸೆಳೆಯುತ್ತವೆ. ಅದರಲ್ಲೂ ಹೈದರಾಬಾದ್ ಕರ್ನಾಟಕದ ಜಾನಪದ ಸಾಹಿತ್ಯದ ಸಂಗ್ರಹಣೆ ವಿಶ್ಲೇಷಣೆಯಲ್ಲಿ ವೀರಣ್ಣ ದಂಡೆ ಅವರು ದೊಡ್ಡ ಕೆಲಸ ಮಾಡಿದ್ದಾರೆ. ಅವರು ಹಾಲುಮತ ಮಹಾಕಾವ್ಯವನ್ನು ಸಂಗ್ರಹಿಸಿದ್ದಾರೆ, ಜಾನಪದ ಪ್ರಾಥಮಿಕ ವಿಮರ್ಶೆ ಕುರಿತ ಒಂದು ಪ್ರಯೋಗವನ್ನು ಮಾಡಿದ್ದಾರೆ. ಅವರ ಜಾನಪದ ವಿಶ್ಲೇಷಣೆಯಲ್ಲಿ ಜಾನಪದ ಅಧ್ಯಯನವನ್ನು ತುಂಬಾ ಮುಂದೆ ಕರೆದೊಯ್ಯುವ ಹೊಳನೋಟಗಳು ಇಲ್ಲವಾದರೂ, ಜಾನಪದದ ಕುರಿತು ಶ್ರದ್ಧೆಯಿಂದ ದುಡಿದಿದ್ದಾರೆ. ಆ ಕಾರಣಕ್ಕೆ ಅವರನ್ನು ಗೌರವಿಸಬೇಕು. ಅವರೀಗ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಜಾನಪದ ವಿಶ್ವವಿದ್ಯಾಲಯ ಹೇಗಿರಬೇಕು ಎನ್ನುವ ಬಗ್ಗೆ ತುಂಬಾ ವಿವರವಾಗಿ ಚರ್ಚಿಸಿದ್ದಾರೆ. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬಹುದಾದ ಹೊಳನೋಟಗಳು ಇಲ್ಲಿವೆ. ಕನ್ನಡ ಜಾನಪದ ಬ್ಲಾಗ್ ಗಾಗಿ ಕಿರುಪುಸ್ತಕ ರೂಪದಲ್ಲಿ ರಚಿಸಿದ್ದ ಜಾನಪದ ವಿಶ್ವವಿದ್ಯಾಲಯ ಅಗತ್ಯ ಏಕೆ? ಎನ್ನುವ ಬರಹವನ್ನು ಪ್ರಕಟಿಸಲು ಅನುಮತಿ ನೀಡಿದ್ದಾರೆ. ಅದಕ್ಕಾಗಿ ವೀರಣ್ಣ ದಂಡೆ ಅವರಿಗೆ ಕೃತಜ್ಞತೆಗಳನ್ನು ಹೇಳುವೆ.
-ಅರುಣ್ ಜೋಳದಕೂಡ್ಲಿಗಿ.)

ಜಾನಪದಶಾಸ್ತ್ರ ಅಭ್ಯಾಸದ ಕ್ರಮೇಣ ಬೆಳವಣಿಗೆ:

ಕರ್ನಾಟಕ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬಂದ (೧೯೪೯) ಹೊಸದರಲ್ಲಿಯೇ ಡಾ| ಬಿ.ಎಸ್.ಗದ್ದಗಿಮಠ ಅವರಿಗೆ ಪಿಎಚ್.ಡಿ.ಸಂಶೋಧನೆಗೆ ಜನಪದ ಸಾಹಿತ್ಯದ ವಿಷಯವೊಂದನ್ನು (ಜಾನಪದ ಗೀತೆಗಳು) ಆರಿಸಿಕೊಳ್ಳುವ ಅವಕಾಶ ಕೊಟ್ಟದ್ದೇ ವಿಶ್ವವಿದ್ಯಾಲಯದ ಮಟ್ಟದಲ್ಲಿ ಜಾನಪದಶಾಸ್ತ್ರದ ಅಭ್ಯಾಸಕ್ಕೆ ನಾಂದಿಹಾಡಿದಂತಾಗಿದೆ. ಇದು ನಡೆದದ್ದು ಬಹುಶಃ ೧೯೫೧-೫೨ ಇರಬೇಕು ಎಂದು ಅಂದಾಜಿಸಬಹುದು. ಏಕೆಂದರೆ ೧೯೫೪ರಲ್ಲಿಯೇ ಅವರಿಗೆ ಪಿಎಚ್.ಡಿ.ಪದವಿ ದೊರೆತಿದೆ. ನಂತರ ೧೯೬೬ರಲ್ಲಿ ಮೈಸೂರು ವಿಶ್ವವಿದ್ಯಾಲಯ, ೧೯೬೭ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಎಂ.ಎ. ಪಠ್ಯಗಳಲ್ಲಿ ಜಾನಪದದ ಒಂದು ಪತ್ರಿಕೆಯನ್ನು ಸೇರಿಸಿದ್ದೇ ಜಾನಪದ ಅಧ್ಯಯನಕ್ಕೆ ಅಧಿಕೃತ ನಾಂದಿಯಾಯಿತು. ಮುಂದೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಜಾನಪದ ವಿಭಾಗಗಳು ಪ್ರಾರಂಭವಾದವು.

೧೯೬೭ರಲ್ಲಿ ತರೀಕೆರೆಯಲ್ಲಿ ಗೊ. ರು. ಚನ್ನಬಸಪ್ಪ ಮತ್ತವರ ಸ್ನೇಹಿತರ ಪ್ರಯತ್ನದಿಂದ ಬಹುದೊಡ್ಡ ಪ್ರಮಾಣದಲ್ಲಿ ಜಾನಪದ ಸಮಾವೇಶ ನಡೆಯಿತು. ಅದರ ಅಂಗವಾಗಿ ಕಲಾಮೇಳಗಳು, ವಿಚಾರ ಸಂಕಿರಣಗಳು ನಡೆದವು. ಸಾವಿರ ಪುಟಕ್ಕೂ ಹೆಚ್ಚಿನ ಒಂದು ದೊಡ್ಡ ಸ್ಮರಣ ಗ್ರಂಥ ’ಹೊನ್ನ ಬಿತ್ತೇವು ಹೊಲಕ್ಕೆಲ್ಲ’ ಪ್ರಕಟವಾಯಿತು. ಜಿ. ನಾರಾಯಣ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ೧೯೭೬ರಲ್ಲಿ, ಇಡೀ ಕರ್ನಾಟದ ತುಂಬ ಇರುವ ಜನಪದ ಕಲೆಗಳನ್ನು ಗುರುತಿಸುವ, ಕಲಾಪ್ರದರ್ಶನಗಳನ್ನು ಏರ್ಪಡಿಸುವ ಪ್ರಯತ್ನಗಳು ನಡೆದವು. ಅದರ ಫಲವಾಗಿ ’ಕರ್ನಾಟಕ ಜನಪದ ಕಲೆಗಳು’ (೧೯೭೭) ಎಂಬ ಕೃತಿ ಹೊರಬಂದಿತು. ಈ ಎಲ್ಲ ಚಟುವಟಿಕೆಗಳ ಹಿಂದೆ ಇದ್ದ ಗೊರುಚ, ಎಚ್. ಎಲ್. ನಾಗೇಗೌಡ ಮತ್ತವರ ಸ್ನೇಹಿತರ ಕೆಲಸಗಳು ಸ್ಮರಣೀಯ.

ಮುಂದೆ ೧೯೮೦ರಲ್ಲಿ ಈ ಮೇಲೆ ಹೆಸರಿಸಿದ ಹಿರಿಯರ ಪ್ರಯತ್ನದಿಂದಾಗಿಯೇ ’ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ’ ಹುಟ್ಟಿಕೊಂಡಿತು. ಜಾನಪದಕ್ಕೆ ಮೀಸಲಾದ ಎಚ್. ಎಲ್. ನಾಗೇಗೌಡರ ’ಜಾನಪದ ಪರಿಷತ್ತು’ (೧೯೭೯), ಕು.ಶಿ.ಹರಿದಾಸ ಭಟ್ಟರ ’ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ’ (೧೯೮೩) ಇವು ಅಸ್ತಿತ್ವಕ್ಕೆ ಬಂದವು. ಈ ಎಲ್ಲ ಪ್ರಯತ್ನಗಳ ಫಲವಾಗಿ ಜಾನಪದಶಾಸ್ತ್ರದ ಹೆಚ್ಚಿನ ಅಭ್ಯಾಸಕ್ಕೆ ನಾಂದಿಯಾಯಿತು.
*
ಕನ್ನಡ ಸಾಹಿತ್ಯದಲ್ಲಿ ಹೊಸ ಬೆಳವಣಿಗೆಗಳಿಗೆ ನಾಂದಿ:

ಜಾನಪದಶಾಸ್ತ್ರದ ಅಭ್ಯಾಸದಿಂದಾಗಿ ಕನ್ನಡ ಸಾಹಿತ್ಯದ ಅಭ್ಯಾಸದ ನಿಟ್ಟಿನಲ್ಲಿ ಅನೇಕ ಹೊಸ ದಾರಿಗಳು ತೆರೆದುಕೊಂಡವು. ಸಾಮಾನ್ಯರ ಸಾಹಿತ್ಯದೆಡೆ ಶಿಷ್ಟಸಾಹಿತ್ಯದ ವಿದ್ವಾಂಸರು ಲಕ್ಷಹರಿಸಿದರು. ದೇಸೀ ಚಿಂತನೆಗಳು ಬೆಳೆದು ಬಂದವು. ಜನಾಂಗಿಕ ಅಧ್ಯಯನಗಳಿಗೆ ನಾಂದಿಯಾಯಿತು. ಬಹುಸಂಸ್ಕೃತಿಗಳ ಅಭ್ಯಾಸದ ಕಡೆ ಲಕ್ಷ ಹರಿಯಿತು. ವಿಶೇಷವಾಗಿ ಸಂಸ್ಕೃತಿಯ ಅಧ್ಯಯನದೆಡೆ ಕನ್ನಡ ಸಾಹಿತ್ಯ ಕಣ್ಣು ತೆರೆಯಿತು. ಸಂಶೋಧನೆಯಲ್ಲಿ ಮೌಖಿಕ ಆಕರಗಳ ಬಳಕೆ ವ್ಯಾಪಕವಾಗಿ ಪ್ರಾರಂಭವಾಯಿತು.

ಮೌಖಿಕ ಪಠ್ಯಗಳ ಶೋಧ:

ಅಗಾಧ ಪ್ರಮಾಣದಲ್ಲಿ ಮೌಖಿಕ ಸಾಹಿತ್ಯದ ಪಠ್ಯಗಳು ಶೋಧಿತವಾದವು. ಜನಪದ ಹಾಲುಮತ ಮಹಾಕಾವ್ಯ, ಮಂಟೇಸ್ವಾಮಿ, ಜುಂಜಪ್ಪ, ಮಲೆಯ ಮಾದೇಶ್ವರ ಮುಂತಾದ ಬೃಹತ್ ಪಠ್ಯಗಳು ದೊರೆತು ಇಂದು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಸಾಹಿತ್ಯವನ್ನು ನೋಡುವ ದೃಷ್ಟಿಯನ್ನೇ ಬದಲಾಯಿಸಿವೆ.೧೫ನೇ ಶತಮಾನದಲ್ಲಿ ಹುಟ್ಟಿದ ಕೊಡೇಕಲ್ಲ ಸಾಹಿತ್ಯ ಲಿಖಿತ ರೂಪದಲ್ಲಿದ್ದರೂ ಅದು ಹಾಡಿನ ಪ್ರಕಾರಕ್ಕೆ ಸೇರಿದ ಸ್ವರವಚನ ಸಾಹಿತ್ಯವೆಂಬುದು ವಿಶೇಷಸಂಗತಿ. ಇದೇ ದಾರಿಯಲ್ಲಿಯೇ ಮುಂದೆ ಪ್ರತಿಭಾವಂತ ತತ್ತ್ವಪದಕಾರರ ಶೋಧಗಳು ನಡೆದು ಕಡಕೋಳ ಮಡಿವಾಳಪ್ಪ, ಶಿಶುನಾಳ ಶರೀಫರಂಥವರ ಹಾಡುಗಳ ಶಕ್ತಿ ಕನ್ನಡಕ್ಕೆ ದೊರೆಯಿತು. ಇಷ್ಟೆಲ್ಲ ಆಗಿ ಈಗ ಜಾನಪದ ವಿಶ್ವವಿದ್ಯಾಲಯದ ಅವಶ್ಯಕತೆ ಅರಿಯುವಲ್ಲಿಗೆ ಬಂದು ನಿಂತಿದ್ದೇವೆ.

ಜಾನಪದ ವಿಶ್ವವಿದ್ಯಾಲಯದ ಬೇಡಿಕೆ :

ಈಗ ಇಪ್ಪತ್ತು ವರ್ಷಗಳ ಹಿಂದಿನ ಮಾತು. ಪಂಚಾಯತರಾಜಗಳ ಹೊಸ ಆಡಳಿತವನ್ನು ಜಾರಿಗೆ ತರಲು ಕಾರಣರಾದ ಆಗಿನ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದ ಶ್ರೀಮಾನ್ ನಜೀರ ಸಾಹೇಬರ ವಿನಂತಿಯ ಮೇರೆಗೆ, ಕನ್ನಡದ ಮೊದಲ ಜಾನಪದ ಪ್ರಾಧ್ಯಾಪಕರಾದ ಡಾ|ಜೀಶಂಪ ಅವರು ಜಾನಪದ ಸಂಗತಿಗಳ ಸಂವರ್ಧನೆ-ಸಂರಕ್ಷಣೆ ಹೇಗೆ ಎಂಬ ವಿಚಾರಗಳನ್ನು ಬರೆದು ೧೯೮೮ರಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತಾರೆ. ಆ ಬರಹದಲ್ಲಿ ಅವರು ಜಾನಪದ ವಿಶ್ವವಿದ್ಯಾಲಯದ ಅವಶ್ಯಕತೆಯನ್ನೂ ಮಂಡಿಸುತ್ತಾರೆ. ಆ ಸಾಲುಗಳು ಹೀಗಿವೆ: ಜಾನಪದ ಸಂರಕ್ಷಣೆಯ ದೃಷ್ಟಿಯಿಂದ, ಸಂವರ್ಧನೆಯ ದೃಷ್ಟಿಯಿಂದ ವ್ಯಾಪಕವಾದ ಯೋಜನೆಯನ್ನು ಹಾಕಿಕೊಂಡು ಕೆಲಸ ಮಾಡಬೇಕಾದ ಅಗತ್ಯ ಈಗ ತುಂಬ ಇದೆ. ಜಾನಪದದಂಥ ವ್ಯಾಪಕವಾದ ಕ್ಷೇತ್ರದಲ್ಲಿ ಸರಿಯಾದ ಸಂಶೋಧನೆ, ಅಧ್ಯಯನ ನಡೆಯಬೇಕಾದ ಬೇರೆ ಬೇರೆ ಇಲಾಖೆಗಳನ್ನೊಳಗೊಂಡ ಒಂದು ವಿಶ್ವವಿದ್ಯಾಲಯವನ್ನೇ ಸ್ಥಾಪಿಸಿ, ಪ್ರಾಚೀನ ಮೌಖಿಕ ಜ್ಞಾನದ ಪ್ರಯೋಜನವನ್ನು ಪಡೆಯಬಹುದು. (ಜೀಶಂಪ, ೧೯೮೮) ಇಪ್ಪತ್ತು ವರ್ಷಗಳ ಹಿಂದೆ ಕಂಡ ಜೀಶಂಪ ಅವರ ಕನಸು ಇಂದು ಗೊ. ರು. ಚನ್ನಬಸಪ್ಪ ಅವರ ಪ್ರಯತ್ನದಿಂದ ನನಸಾಗುವ ದಾರಿಯಲ್ಲಿದೆ ಎಂಬುದು ಸಂತೋಷದ ಸಂಗತಿ.

ಲಿಖಿತ ಮೂಲದ ಶಿಸ್ತುಗಳ ಅಧ್ಯಯನದ ವಿವಿಗಳು:

ಲಿಖಿತ ಮೂಲದ ಶಿಸ್ತುಗಳನ್ನೊಳಗೊಂಡ ಈಗಿನ ವಿಶ್ವವಿದ್ಯಾಲಯಗಳು ಕೊಡುವ ಶಿಕ್ಷಣವು- ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಸಶಕ್ತವಾಗಿರುವ ಸಮುದಾಯಗಳು ಶಿಕ್ಷಣ ಪಡೆಯಲು ಹೆಚ್ಚು ಅನುಕೂಲಗಳನ್ನು ಒದಗಿಸುತ್ತ ಬಂದಿದೆ. ಹಾಗೆ ಸಶಕ್ತವಾಗಿರುವ ಸಮೂಹದಲ್ಲೂ ವಿಶೇಷವಾಗಿ ಗಂಡುಮಕ್ಕಳಿಗೆ ಮಾತ್ರ ಅದು ಹೆಚ್ಚು ಅನುಕೂಲತೆಗಳನ್ನು ಒದಗಿಸಿದೆ. ಜಾನಪದ ವಿಶ್ವವಿದ್ಯಾಲಯವು ಈ ತಾರತಮ್ಯವನ್ನು ಮೊದಲು ಹೋಗಲಾಡಿಸಲು ಪ್ರಯತ್ನಿಸುತ್ತದೆ. ಗಂಡಸರಂತೆ ಹೆಣ್ಣುಮಕ್ಕಳೂ ಜಾನಪದ ಕ್ಷೇತ್ರದಲ್ಲಿ ಪ್ರತಿಭಾವಂತರಾಗಿ ಕಾಣುತ್ತಾರೆ. ಹೀಗಾಗಿ ಜಾನಪದ ವಿಶ್ವವಿದ್ಯಾಲಯವು ಸ್ತ್ರೀಯರ ಜ್ಞಾನವನ್ನೂ ಒಳಗೊಂಡ ಒಂದು ವಿಶೇಷ ವಿಶ್ವವಿದ್ಯಾಲಯ ಎನಿಸುತ್ತದೆ. ಇದು ಕರ್ನಾಟಕದಲ್ಲಿ ಅಷ್ಟೇ ಅಲ್ಲ ಭಾರತದಲ್ಲಿಯೇ ಪ್ರಥಮ ಜಾನಪದ ವಿಶ್ವವಿದ್ಯಾಲಯ ಎನಿಸುತ್ತದೆ. ಹಾಗೆ ನೋಡಿದರೆ ಪ್ರಪಂಚದಲ್ಲಿಯೂ ಇದು ಮೊದಲನೆಯದೇ ಆಗುತ್ತದೆ.

ಸಮಾಜದ ಕಟ್ಟಕೊನೆಯ ವ್ಯಕ್ತಿಯನ್ನು ಒಳಗೊಳ್ಳುವ ವಿಶ್ವವಿದ್ಯಾಲಯ:

ಜಾನಪದವೆಂದರೆ ಮನುಷ್ಯ ಬದುಕಿನ ಅಭ್ಯಾಸವಾಗಿರುವುದರಿಂದ ಅದಕ್ಕೆ ಒಂದು ಸೀಮಿತ ಪ್ರದೇಶ, ಸೀಮಿತ ಜನಾಂಗ ಇವುಗಳ ಮಿತಿ ಇಲ್ಲ. ಜಾನಪದಶಾಸ್ತ್ರವು ಎಲ್ಲ ಜನಾಂಗಗಳ ಬದುಕಿನ ರೀತಿಯಾಗಿದೆ. ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಶಕ್ತರಲ್ಲದ, ಈ ಎಲ್ಲ ಸಂಗತಿಗಳಲ್ಲಿ ಅವಕಾಶವಂಚಿತರಾದ ಎಲ್ಲ ಜನಸಮುದಾಯಗಳ ಬದುಕಿನ ಸಂಗತಿಗಳನ್ನು ಜಾನಪದ ಅಭ್ಯಾಸ ಹೆಚ್ಚಾಗಿ ಗಮನಿಸುವುದರಿಂದ, ’ಜಾನಪದ ವಿಶ್ವವಿದ್ಯಾಲಯ’ ಎಂದರೆ ಅದು ಸಮಾಜದ ಕಟ್ಟಕೊನೆಯಲ್ಲಿರುವ ಜನರನ್ನು ಒಳಗೊಂಡು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಬರುತ್ತದೆ.

ವಿಜ್ಞಾನದ ದವಡೆಗೆ ಸಿಕ್ಕು ನುಗ್ಗಾಗಿದೆ ಬದುಕು:

ನಮ್ಮ ಬದುಕು ವಿಜ್ಞಾನದ ದವಡೆಗೆ ಸಿಕ್ಕು ತೀವ್ರವಾಗಿ ಬದಲಾವಣೆಯಾಗುತ್ತಿದೆ. ಈ ಬದಲಾವಣೆ ಬದುಕಿಗೆ ಸೌಲಭ್ಯಗಳನ್ನು ಒದಗಿಸುತ್ತಿದೆ ನಿಜ, ಆದರೆ ಅದರಿಂದ ನಮ್ಮ ಬದುಕು ತೀವ್ರವಾಗಿ ಮೌಲ್ಯಹೀನವಾಗುತ್ತಿದೆ. ಭೂಮಿಯ ಪರಿಸರವೇ ಕಲುಷಿತಗೊಂಡು ಇಂದು ಬದುಕಿಗೆ ಮಾರಕವಾಗಿ ಪರಿಣಮಿಸಿದೆ. ಇದು ಇಂದು ವಿಶ್ವಮಟ್ಟದಲ್ಲಿ ಚರ್ಚೆಯ ಸಂಗತಿಯಾಗಿದೆ. ಮಾನವನ ಕೃತ್ಯಗಳಿಂದ ಇಂದು ಪರಿಸರ ಕಲುಷಿತಗೊಂಡಿರುವುದರಿಂದ ನಮ್ಮ ಪ್ರಾಣ ಉಳಿಯಲು ಬೇಕಾದ ಶುದ್ಧವಾದ ಗಾಳಿ, ನೀರು, ಆಹಾರ ಇವು ಕೆಟ್ಟುಹೋಗುತ್ತಿವೆ. ಇದರಿಂದ ಮಾನವ ಕುಲದ ಆರೋಗ್ಯವೇ ಹಾಳಾಗುತ್ತಿದೆ. ಇದು ಜೀವಿಗಳ ಸಂತತಿಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ.

ಬದುಕಿನ ಮೌಲ್ಯಗಳ ಸಂರಕ್ಷಣೆ:

ಇಂತಹ ಸಮಯದಲ್ಲಿ ನಮ್ಮ ಪೂರ್ವಜರ ಬದುಕಿನ ಮಾದರಿಗಳು, ಚಿಂತನೆಗಳು ನಮ್ಮ ಸಹಾಯಕ್ಕೆ ಬರುತ್ತವೆ. ಗ್ರಾಮಾಂತರ ಬದುಕಿನ ಪರಿಗಳನ್ನು ಅರಿಯುವ, ಆಯುವ ಮತ್ತು ಅಧ್ಯಯನಕ್ಕೆ ಅಳವಡಿಸುವ ಉದ್ದೇಶಗಳು ನಮಗೆ ಇಂದು ಮುಖ್ಯವೆನಿಸುತ್ತವೆ. ಭಾರತೀಯ ಸಂಸ್ಕೃತಿಯ ಅನನ್ಯತೆಯನ್ನು, ನಮ್ಮ ಪರಂಪರೆಯ ಜ್ಞಾನದ ಅರಿವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲು, ಅವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಜಾನಪದಶಾಸ್ತ್ರಾಭ್ಯಾಸ ಅವಶ್ಯವೆನಿಸುತ್ತದೆ. ’ಜಾನಪದ ವಿಶ್ವವಿದ್ಯಾಲಯ’ ದ ಸ್ಥಾಪನೆ ಅದಕ್ಕಾಗಿ ತುರ್ತೆನಿಸುತ್ತದೆ.

ಕೈಗಾರಿಕೆಯ ನೆಪದಲ್ಲಿ ದೇಸೀ ಉದ್ಯೋಗಗಳ ನಾಶ:

ನಾವೀಗ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣಗಳ ಗುಂಗಿನಲ್ಲಿದ್ದೇವೆ. ಇವು ನಮ್ಮ ಬದುಕನ್ನೆಲ್ಲ ಹಾಳುಮಾಡುತ್ತಿವೆ ಎಂದು ಹಲಬುತ್ತಿದ್ದೇವೆ. ಆದರೆ ಭಾರತ ಸ್ವಾತಂತ್ರ್ಯದ ಜೊತೆಗೆ ಸೌಲಭ್ಯ ಮತ್ತು ಸುಧಾರಣೆಗಳ ಹೆಸರಿನಲ್ಲಿ ನಮ್ಮ ದೇಶಕ್ಕೆ ಕಾಲಿಟ್ಟದ್ದು ಕೈಗಾರಿಕಾ ಕ್ರಾಂತಿಯ ಹೆಸರಿನಲ್ಲಿ ಯಾಂತ್ರೀಕರಣ. ಯಾಂತ್ರೀಕರಣ ಪ್ರವೇಶಿಸಿ ಗ್ರಾಮೀಣ ಬದುಕಿಗೆ ಆಸರೆಯಾದ ಸ್ವಾವಲಂಬಿ ಉದ್ಯೋಗಗಳನ್ನು ಹಾಳು ಮಾಡಿತು. ಪರಾವಲಂಬಿಗಳಾಗುವಂತೆ ಮಾಡಿತು. ಇದರಿಂದಾಗಿ ನಮ್ಮ ಗ್ರಾಮಾಂತರ ಪ್ರದೇಶದ ಕಸುಬುದಾರರ, ಕುಶಲಕರ್ಮಿಗಳ ಸಂಸಾರಗಳು ದಿವಾಳಿ ಎದ್ದವು.

ಜಾನಪದ ವಿಶ್ವವಿದ್ಯಲಾಯದ ಅಧ್ಯಯನ/ತರಬೇತಿ ವಿಬಾಗಗಳು ಹೇಗಿರಬೆಕು:

ಜಾನಪದ ವಿಶ್ವವಿದ್ಯಾಲಯದಲ್ಲಿ ಗ್ರಾಮೀಣ ಬದುಕಿನ ಬಹುಮುಖ್ಯ ಸಂಗತಿಗಳ ಅಧ್ಯಯನ, ತರಬೇತಿ, ಕಲಿಕೆ, ಪ್ರಸಾರಗಳು ನಡೆಯುವಂತೆ ವ್ಯವಸ್ಥೆಯಾಗಬೇಕು. ಅಲ್ಲಿ ಶಿಕ್ಷಣ ಕೊಡಲು ಗ್ರಾಮೀಣ ಪ್ರತಿಭಾವಂತರಿಗೆ ನೇರವಾಗಿ ಅವಕಾಶಗಳನ್ನು ಒದಗಿಸಿ ಕೊಡಬೇಕು. ಆ ನಿಟ್ಟಿನಲ್ಲಿ ಇಲ್ಲಿ ಒಂದು ಸಾಮಾನ್ಯ ನೋಟಕ್ಕೆ ೪ ಭಾಗಗಳಲ್ಲಿ ೩೧ ಅಧ್ಯಯನ/ತರಬೇತಿ ವಿಭಾಗಗಳನ್ನು ಗುರುತಿಸಿಕೊಂಡು, ಒಂದೊಂದು ವಿಭಾಗಗದಲ್ಲಿ ಏನೇನು ಸೇರಬೇಕು ಎಂದು ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ. ಇದರಿಂದ ಜಾನಪದ ವಿಶ್ವವಿದ್ಯಾಲಯದ ಒಂದು ಸಾಮಾನ್ಯ ಕಲ್ಪನೆ ಬರಲು ಸಾಧ್ಯವಾಗುತ್ತದೆ.
*
೧. ಕಸಬು/ಕರಕುಶಲ ಕಲಾ ವಿಭಾಗಗಳು:

’ಜಾನಪದ ವಿಶ್ವವಿದ್ಯಾಲಯ’ ವೊಂದು ಪ್ರಾರಂಭವಾದರೆ ಅಲ್ಲಿ ಮುಖ್ಯವಾದ ಕಲಿಕೆಯ ವಿಭಾಗಗಳು ನಮ್ಮ ಪರಂಪರೆಯ ದೇಸೀ ಕಸುಬುಗಳಿಗೆ, ಕರಕುಶಲ ಕಲೆಗಳಿಗೆ ಸಂಬಂಧಿಸಿರಬೇಕಾದುದು ಅವಶ್ಯ. ಆಗ ನೇರವಾಗಿ ಗ್ರಾಮಾಂತರ ಪ್ರದೇಶದ ದೇಸೀ ಕಸುಬುದಾರ ಮನೆತನದ ಪ್ರತಿಭಾವಂತರಿಗೆ ಅವಕಾಶಗಳು ದೊರೆಯುತ್ತವೆ. ಮತ್ತು ಈ ಕೈಸಬುಗಳನ್ನು ಕಲಿತ ಭಿನ್ನ ಸಮೂಹದ ಯುವಕರು ಕೂಡ ತಮ್ಮ ಬದುಕನ್ನು ತಾವೇ ನಿಭಾಯಿಸುವ ಸ್ವಾವಲಂಬಿ ಉದ್ಯೋಗಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ಇದರಿಂದ ಸ್ವಾವಲಂಬಿ ಭಾರತದ ನಿರ್ಮಾಣ ಗೈಯಲು ಅನುವಾಗುತ್ತದೆ.
ಈ ಹಿನ್ನೆಲೆಯಲ್ಲಿ ’ದೇಸೀ ತಾಂತ್ರಿಕ’ (ದೇಸೀ ಎಂಜಿನಿಯರಿಂಗ್) ವಿಷಯಗಳೆನಿಸುವ ಗ್ರಾಮೀಣ ಕಸುಬು ಮತ್ತು ಕರಕುಶಲ ಕಲೆಗಳಿಗೆ ಸಂಬಂಧಿಸಿದಂತೆ ಜಾನಪದ ವಿಶ್ವವಿದ್ಯಾಲಯದಲ್ಲಿ ವಿಭಾಗಗಳನ್ನು ತೆರೆದು- ತರಬೇತಿ, ಉತ್ಪನ್ನ, ಮಾರಾಟ ಮತ್ತು ಅಧ್ಯಯನಗಳು ನಡೆಯಬೇಕಾದ ಅಗತ್ಯವಿದೆ.




೧. ಶಿಲ್ಪಕಲಾ ವಿಭಾಗ : ಕಲ್ಲು ಇಲ್ಲಿಯ ಮೂಲ ವಸ್ತು. ಇವತ್ತಿಗೂ ಅಭಿಜಾತ ಶಿಲ್ಪಕಲೆ ಎಂದು ಹೇಳಿಕೊಳ್ಳುವಲ್ಲಿಯೂ ಸಾಮಾನ್ಯ ಕಲ್ಲಕುಟಿಗನೇ ನಮಗೆ ಕಾಣುತ್ತಾನೆ. ಅದಕ್ಕಾಗಿ ಇವತ್ತು ಶಿಲ್ಪಕಲೆಗಳು ಎಂದು ಹೇಳುವ ದೊಡ್ಡ ಪ್ರಸಿದ್ಧಿಯ ಶಿಲ್ಪಕಲೆಗಳೂ ಕೂಡ ಅವು ಮೂಲದಲ್ಲಿ ಗ್ರಾಮಾಂತರ ಕಲಾವಿದರಿಂದಲೇ ತಯಾರಿಸಲ್ಪಟ್ಟವಾಗಿವೆ. ಹೀಗಾಗಿ ಗೊಮ್ಮಟೇಶ್ವರನಂಥ ಶಿಲ್ಪವು ಕೂಡ ದೇಸೀ ಕಲೆಯೇ ಆಗುತ್ತದೆ. ಅದಕ್ಕಾಗಿ ಇಲ್ಲಿ ಮತ್ತೆ ಗ್ರಾಮಾಂತರ ಪ್ರದೇಶದ ಕಲ್ಲುಕುಟಿಗ ಕಲಾವಿದರನ್ನೇ ಶೋಧಿಸಿ ಬಳಸಿಕೊಂಡರೆ ಈ ಕಲೆ ಮತ್ತು ಉದ್ಯೋಗ ಎರಡೂ ಬೆಳೆಯುತ್ತವೆ.

೨. ವಾಸ್ತುಶಿಲ್ಪ ವಿಭಾಗ: ಕಲ್ಲು ಒಡೆಯುವ ಮತ್ತು ಕಟ್ಟಡ ನಿರ್ಮಿಸುವ ಕೆಲಸಗಳು ಇಲ್ಲಿ ಸೇರುತ್ತವೆ. ಒಡ್ಡರು ಮತ್ತು ಗೌಂಡಿ ಕೆಲಸಗಳು ಇಲ್ಲಿ ಸೇರಬೇಕು. ಇಂದು ಕಟ್ಟಡ ಕಾರ್ಮಿಕರ ಬೇಡಿಕೆ ವಿಪರೀತವಾಗಿ ಹೆಚ್ಚಿದೆ. ಉತ್ತಮ ಕಟ್ಟಡ ನಿರ್ಮಾಪಕರು, ಅದರಲ್ಲಿಯೇ ಪ್ರತಿಭೆವುಳ್ಳವರು ಉತ್ತಮ ವಾಸ್ತುಶಿಲ್ಪಿಗಳಾಗಿ ಬೆಳೆಯುವ ಸಾಧ್ಯತೆ ಇರುತ್ತದೆ.

೩. ಕಂಬಾರಿಕೆ ವಿಭಾಗ: ಕಬ್ಬಿಣದ ಕೆಲಸಗಳು ಇಲ್ಲಿ ಸೇರುತ್ತವೆ.

೪. ಕುಂಬಾರಿಕೆ ವಿಭಾಗ: ಮಣ್ಣನ್ನು ಬಳಸಿ ಮಾಡುವ ಕೆಲಸಗಳು ಇಲ್ಲಿ ಸೇರಬೇಕು. ಆಧುನಿಕ ಜೀವನ ಶೈಲಿಗೆ ಅನುಕೂಲಕರವಾದ ಮತ್ತು ಮನೆಯ ಅಲಂಕರಣಕ್ಕಾಗಿ ಮಣ್ಣಿನ ಪಾತ್ರೆಗಳನ್ನು ಬಳಸಬಹುದಾಗಿದೆ.

೫. ಬಡಿಗತನ ವಿಭಾಗ: ಕಟ್ಟಿಗೆ ಬಳಸಿ ಮಾಡುವ ಕೆಲಸಗಳು ಇಲ್ಲಿ ಸೇರಬೇಕು. ಈ ಉದ್ಯೋಗವಂತೂ ಇವತ್ತು ಭಾರೀ ಬೇಡಿಕೆಯಲ್ಲಿದೆ.

೬. ಅಕ್ಕಸಾಲಿ ವಿಭಾಗ: ಲೋಹದ ಕುಶಲಕರ್ಮ ಕೆಲಸಗಳು. ಇದು ಕೂಡ ಬೇಡಿಕೆಯ ಉದ್ಯೋಗವೇ ಆಗಿದೆ.

೭. ಮೇದಾರಿಕೆ ವಿಭಾಗ: ಬಿದಿರು ಮುಂತಾದ ಸಿಬಿಕೆಯಿಂದ ಬುಟ್ಟಿ, ಚಾಪೆ, ಮರ, ಬೀಸಣಿಕೆ ಇಂತಹ ಮನೆ ಬಳಕೆಯ ವಸ್ತುಗಳ ತಯಾರಿಕೆ ಮತ್ತು ಮಾರಾಟಗಳು ಇಲ್ಲಿ ಸೇರಬೇಕು. ಇವನ್ನು ಇವತ್ತಿಗೂ ಹೆಚ್ಚು ಪ್ರಚಾರಗೊಳಿಸಲು ಸಾಧ್ಯವಿದೆ.

೮. ಚಮ್ಮಾರಿಕೆ ವಿಭಾಗ: ಚರ್ಮದಿಂದ ವಸ್ತುಗಳ ತಯಾರಿಕೆ ಮತ್ತು ಮಾರಾಟ. ಇದೂ ಕೂಡ ಅಷ್ಟೇ ಬೇಡಿಕೆ ಇರುವ ವಿಭಾಗ.

೯. ನೇಕಾರಿಕೆ ವಿಭಾಗ: ಬಟ್ಟೆ, ಕಂಬಳಿಗಳನ್ನು ನೇಯುವ, ಬಣ್ಣ ಹಾಕುವ, ಮಾರಾಟದ ವ್ಯವಸ್ಥೆ ಇಲ್ಲಿ ಸೇರಬೇಕು.

೧೦. ವೇಷ-ಭೂಷಣ ವಿಭಾಗ: ಸಿಂಪಿಗನ ಕೆಲಸಗಳು ಇಲ್ಲಿ ಮುಖ್ಯ. ಫ್ಯಾಶನ್ ಡಿಸೈನ್ ಮತ್ತು ಹೊಲಿಗೆಗಳು- ವೇಷಭೂಷಣ, ಕೌದಿ, ಕುಂಚಿಗೆ-ಕುಲಾಯಿ ಮುಂತಾದವುಗಳ ತಯಾರಿಕೆ ಇಲ್ಲಿ ಸೇರಬೇಕು.
*
೨. ದೇಸೀ ವಿಜ್ಞಾನ ವಿಭಾಗಗಳು:

ದೇಸೀ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ವೈದ್ಯಕೀಯ, ಮತ್ತು ಆಹಾರ-ಪಾನೀಯ ಇವು ಜನಪದರ ವೈಜ್ಞಾನಿಕ ತಿಳುವಳಿಕೆಗಳೆನಿಸುತ್ತವೆ. ಗ್ರಾಮೀಣ ಬದುಕಿನ ಅನುಭವದ ವೈಜ್ಞಾನಿಕ ಚಿಂತನೆಗಳು ಈ ವಿಷಯಗಳಲ್ಲಿ ಹುದುಗಿರುತ್ತವೆ. ಅನಾರೋಗ್ಯದಿಂದ ಕಾಪಾಡುವ ವೈದ್ಯಕೀಯದ ಅರಿವು, ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಹೋಗಲು ಅವಶ್ಯವಾದ ಆಹಾರ-ಪಾನೀಯ ಇವುಗಳ ಅರಿವು ಅಧ್ಯಯನಕ್ಕೆ ಒಳಗಾಗಬೇಕಾದುದು ಅವಶ್ಯ. ಜೊತೆಗೆ ಇವುಗಳಿಗೆ ಸಂಬಂಧಿಸಿದಂತೆ ಉತ್ತಮ ಆಹಾರ ಬೆಳೆಗಳನ್ನು ಕೃಷಿಯಿಂದ ಮತ್ತು ಹೈನುಗಾರಿಕೆಯಿಂದ ಪಡೆಯುವುದು ಹೇಗೆ, ಕೃಷಿ ಮತ್ತು ಹೈನುಗಾರಿಕೆ ಗೈಯುವುದು ಹೇಗೆ ಮತ್ತು ಇವುಗಳಿಗೆ ಸಂಬಂಧಿಸಿದ ಇತರ ಸಂಗತಿಗಳೆಲ್ಲ ಇಲ್ಲಿ ಅಧ್ಯಯನಕ್ಕೆ ಅಳವಡುವುದು ಮುಖ್ಯ. ಅದಕ್ಕಾಗಿ ಇಲ್ಲಿಯ ವಿಭಾಗಗಳು ಹೀಗಿರಬಹುದಾಗಿದೆ:
೧. ದೇಸೀ ಕೃಷಿ ವಿಭಾಗ
೨. ದೇಸೀ ತೋಟಗಾರಿಕೆ ವಿಭಾಗ
೩. ಹೈನುಗಾರಿಕೆ ವಿಭಾಗ
೪. ದೇಸೀ ವೈದ್ಯ ವಿಭಾಗ
೫. ದೇಸೀ ಪಶುವೈದ್ಯ ವಿಭಾಗ
೬ ದೇಸೀ ಆಹಾರ-ಪಾನೀಯ ವಿಭಾಗ
*
೩. ಮನರಂಜನಾ ದೇಸೀಕಲಾ ವಿಭಾಗಗಳು:

ಬದುಕಿನ ವಿಧಿಕ್ರಿಯೆಗಳ ಅಂಗವಾಗಿ ಬಳಕೆಯಾಗುವ ಕಲೆಗಳು ಮನರಂಜನೆ ಯನ್ನೂ ಮುಖ್ಯವಾಗಿಸಿಕೊಂಡಿರುತ್ತವೆ. ಪ್ರತಿಭಾವಂತರ ಪ್ರದರ್ಶನಗಳಾಗಿರುವ ಇವುಗಳ ಮೇಲೆಯೇ ಬುದುಕು ಅವಲಂಬನೆಯಾಗಿರುತ್ತದೆ. ಕಣ್ಣು ಕಿವಿಗಳ ಮೂಲಕ ಒಳಹೊಕ್ಕು ಮನಸ್ಸನ್ನು ತಣಿಸುವ ಕಲೆಗಳು ಜಾನಪದದಲ್ಲಿ ಸಾಕಷ್ಟು ಇವೆ. ಹಾಡು, ಕುಣಿತ, ಅಭಿನಯ ಇವು ಮನುಷ್ಯನಿಗೆ ನೀರು ಗಾಳಿಗಳಷ್ಟೆ ಅವಶ್ಯ. ಅವು ನಮ್ಮ ಮನಸ್ಸನ್ನು ತಣಿಸುತ್ತವೆ, ಚೈತನ್ಯವನ್ನು ತುಂಬುತ್ತವೆ, ಬದುಕಿಗೆ ಆಸೆಯನ್ನು ಕೊಡುತ್ತವೆ. ಹೀಗಾಗಿ ಬದುಕಿನ ಮುಖ್ಯಸಂಗತಿಗಳಲ್ಲೆಲ್ಲ ಹಾಡು ಕುಣಿತಗಳು ಹುಟ್ಟಿಕೊಂಡಿವೆ.
ಇಂದು ಬುದುಕು ಬದಲಾದಂತೆ ಈ ಕಲೆಗಳು ಪ್ರಯೋಗವಾಗುವ ಸಂದರ್ಭಗಳೂ ಮರೆಯಾಗುತ್ತಿವೆ. ಮಾನವ ಬದುಕಿನ ಅಗಾಧ ಜ್ಞಾನವನ್ನು ತುಂಬಿಕೊಂಡ ಈ ಸಂದರ್ಭಗಳ ಕಲೆಗಳನ್ನು ಕಲಿಕೆ ಮತ್ತು ಅಧ್ಯಯನಕ್ಕೆ ಅಳವಡಿಸುವ ಅವಶ್ಯಕತೆ ಇದೆ. ಅವು ಮುಂದಿನ ಪೀಳಿಗೆಗೆ ದಾರಿದೀಪಗಳಾಗುವ ಸಾಧ್ಯತೆ ಇದೆ. ಪ್ರಮುಖವಾದ ಹಾಡಿನ ಮತ್ತು ಕುಣಿತದ ಪ್ರಕಾರಗಳನ್ನು ಗುರುತಿಸಿ ಅವನ್ನು ಕಲಿಸುವ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವೂ ಇದೆ.
ಹಾಗೆಯೇ ಪ್ರದರ್ಶನ ಕಲೆಗಳಲ್ಲಿ ಇರುವ ರಂಗ ಪ್ರಕಾರ ಮತ್ತು ಬೀದಿ ಪ್ರಕಾರಗಳನ್ನು ಇಂದು ಹೆಚ್ಚು ಪ್ರಚಾರಗೊಳಿಸಲಾಗುತ್ತಿದೆ. ಇದು ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ಒಂದು ದೊಡ್ಡ ಅವಕಾಶ. ರಂಗ ಪ್ರಕಾರದ ಬಯಲಾಟಗಳನ್ನು, ಗೊಂಬೆಯಾಟಗಳನ್ನು ಅಧುನಿಕ ಬದುಕಿನ ಸಂಗತಿಗೆ ಒಗ್ಗಿಸಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಮತ್ತೆ ಗ್ರಾಮೀಣ ಪ್ರತಿಭಾವಂತರಿಗೆ ಇಲ್ಲಿ ಅವಕಾಶಗಳು ದೊರೆಯುವಂತೆ ಆಗಬೇಕು.

೧. ಚಿತ್ರಕಲಾ ವಿಭಾಗ: ರಂಗೋಲಿ, ಹಚ್ಚೆ, ರೇಖಾಚಿತ್ರ ಕಲೆಗಳು, ಸಾಂಪ್ರದಾಯಿಕ ವಿಧಿಕ್ರಿಯಾಚರಣೆಗಳಲ್ಲಿ ಬಿಡಿಸುವ ಚಿತ್ರಗಳು-ಹೀಗೆ ಗ್ರಾಮೀಣ ಭಾಗದ ಬದುಕಿನಲ್ಲಿರುವ ಚಿತ್ರಕಲಾ ಮಾದರಿಗಳು ಇಲ್ಲಿ ಸೇರಬೇಕು.

೨. ಸಂಗೀತ ವಿಭಾಗ: ಹಾಡುಗಾರಿಕೆ ಮತ್ತು ವಾದ್ಯಗಾರಿಕೆಗಳು ಇಲ್ಲೆ ಸೇರಬೆಕು.

೩. ನೃತ್ಯ-ಕುಣಿತ ವಿಭಾಗ: ಗ್ರಾಮೀಣ ನೃತ್ಯ ಕಲೆಗಳನ್ನು ಗುರುತಿಸಿ, ಕಲಿಕೆ- ಬೋಧನೆಗಳು ಇಲ್ಲಿ ನಡೆಯಬೇಕು.

೪. ಬಯಲಾಟ ವಿಭಾಗ: ಉತ್ತರ ಕರ್ನಾಟಕದ ಬಯಲಾಟಗಳಾದ ದೊಡ್ಡಾಟ, ಸಣ್ಣಾಟ-ಪಾರಿಜಾತ, ಬೀದಿ ಬಯಲಾಟಗಳಲ್ಲದೆ, ದಕ್ಷಿಣ ಕರ್ನಾಟಕದ ಯಕ್ಷಗಾನ-ಬಯಲಾಟಗಳೂ ಇಲ್ಲಿ ಸೇರಬೇಕು. ಅಭಿನಯ, ನಿರ್ದೇಶನ, ರಂಗಪರಿಕರಗಳ ತಯಾರಿಕೆ ಇಲ್ಲಿ ಸೇರಬೇಕಾದುದು ಅವಶ್ಯ.

೫. ಯಕ್ಷಗಾನ ವಿಭಾಗ: ಕರಾವಳಿ ಭಾಗದ ಯಕ್ಷಗಾನ ಮತ್ತು ಯಕ್ಷಗಾನ-ತಾಳಮದ್ದಳೆಗಳು ಮಾತ್ರ ಈ ವಿಭಾಗಕ್ಕೆ ಸೇರಬೇಕು. ಅಭಿನಯ, ನಿರ್ದೇಶನ, ರಂಗಪರಿಕರಗಳ ತಯಾರಿಕೆ ಇಲ್ಲಿ ಸೇರಬೇಕಾದುದು ಅವಶ್ಯ.

೬. ಗೊಂಬೆಯಾಟಗಳ ವಿಭಾಗ: ಎಲ್ಲ ಪ್ರಕಾರದ ಗೊಂಬೆಯಾಟಗಳೂ ಇಲ್ಲಿ ಸೇರಬೇಕು. ಗೊಂಬೆಗಳ ತಯಾರಿಕೆ ಮತ್ತು ಕಲಾ ಪ್ರದರ್ಶನಗಳೂ ಈ ಪಠ್ಯದಲ್ಲಿ ಸೇರುತ್ತವೆ.

೭. ಪ್ರದರ್ಶನ ಕಲೆಗಳ ವಿಭಾಗ: ಬೀದಿಯ ಮೇಲೆ ಪ್ರದರ್ಶನಗೊಳ್ಳುವ ವೃತ್ತಿ ಮತ್ತು ಹವ್ಯಾಸಿ ಕಲೆಗಳು.

೪. ದೇಸೀ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ವಿಭಾಗಳು:

ಜಾನಪದ ಅಧ್ಯಯನ ವಿಭಾಗಗಳಲ್ಲಿ ಎಂಟು ವಿಷಯಗಳನ್ನು ಗುರುತಿಸಿಕೊಳ್ಳಲು ಸಾಧ್ಯವಿದೆ. ಸಾಹಿತ್ಯ, ಸಂಸ್ಕೃತಿ, ಜನಾಂಗೀಯ ಅಧ್ಯಯನ ಇಂತಹ ಗಂಭೀರ ಅಧ್ಯಯನಗಳು ಭಾರತದ ಗ್ರಾಮೀಣ ಪ್ರದೇಶಗಳ ಸಾಂಸ್ಕೃತಿಕ ಕೊಡುಗೆಳಾಗಿ, ಜ್ಞಾನದ ಶಾಖೆಗಳಾಗಿ ಮಹತ್ವದ ಅಭ್ಯಾಸಕ್ಕೆ ನಾಂದಿ ಹಾಡುತ್ತವೆ. ಅವುಗಳನ್ನು ಈ ಕೆಳಗಿನಂತೆ ಗುರುತಿಸಿಕೊಳ್ಳಬಹುದಾಗಿದೆ.

೧. ಜಾನಪದ ಸಾಹಿತ್ಯ ಅಧ್ಯಯನ
೨. ಜಾನಪದ ಸಾಮಾಜಿಕ ಅಧ್ಯಯನ
೩. ಬುಡಕಟ್ಟು ಅಧ್ಯಯನ
೪. ಜನಾಂಗೀಯ ಅಧ್ಯಯನ
೫. ಜಾನಪದ ಸಂಸ್ಕೃತಿ ಅಧ್ಯಯನ
೬. ಜಾನಪದ ನ್ಯಾಯ-ನೀತಿಶಾಸ್ತ್ರ ಅಧ್ಯಯನ
೭. ಜಾನಪದ ಅಂತರ್ ಶಿಸ್ತೀಯ ಅಧ್ಯಯನ
೮. ಜಾನಪದ ಆಟ-ಪಾಠಗಳ ಅಧ್ಯಯನ

*

ಶಾಲಾ ಪಠ್ಯಗಳಲ್ಲಿ ಜಾನಪದ ಜ್ಞಾನ ಕಲಿಕೆಯ ಸೇರ್ಪಡೆ:

ಈಗಿನ ಲಿಖಿತ ಮೂಲದ ಜ್ಞಾನ ಬೋಧನೆಯ ಅವಕಾಶವಿರುವ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವ, ಸಂಶೋಧಿಸುವ ವಿಷಯಗಳಿಗೆ ಸಹಾಯಕವಾಗಿ ಇಂದಿನ ಪ್ರಾಥಮಿಕ ಶಾಲೆಗಳಿಂದ ಕಾಲೇಜುಗಳವರೆಗೆ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತುದನ್ನು ನಾವು ಕಾಣುತ್ತೇವೆ. ಜಾನಪದದ ಅಭ್ಯಾಸ ಅನಾವರಣಗೊಂಡುದು ಉನ್ನತ ಶಿಕ್ಷಣವನ್ನು ಕೊಡುವ ವಿಶ್ವವಿದ್ಯಾಲಯಗಳ ಪ್ರಾಂಗಣಗಳಲ್ಲಿ. ಈಗ ಜಾನಪದದ ಅಭ್ಯಾಸವು ಪಿಎಚ್.ಡಿ. ಮತ್ತು ಎಂ.ಎ. ಪದವಿಗಳಿಗೆ ಸೀಮಿತವಾಗಿದೆ. ಅದನ್ನು ಪದವಿ, ಹೈಸ್ಕೂಲ್, ಮಾಧ್ಯಮಿಕ ಮತ್ತು ಪ್ರಾಥಮಿಕ ಮಟ್ಟದ ತರಗತಿಗಳ ಪಠ್ಯಗಳಲ್ಲಿ ಅಳವಡಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಸಮಾಜದ ತಳಸಮುದಾಯಗಳಲ್ಲಿ ಇರುವ ಜಾನಪದ ಪ್ರತಿಭಾವಂತರನ್ನು ಗುರುತಿಸಿ, ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಅವರ ಅನುಭವದ ಪ್ರಯೋಜನ ಪಡೆಯುವ ವ್ಯವಸ್ಥೆಯಾಗಬೇಕಾಗಿದೆ.

ಮಕ್ಕಳಿಗೆ ಮನೆಯಲ್ಲಿ ಶಿಶುಪ್ರಾಸಗಳನ್ನು, ಕಥೆಗಳನ್ನು ಹೇಳುತ್ತೇವೆ. ಶಾಲಾ ಪಠ್ಯಗಳಲ್ಲಿ ಬಹುಸುಲಭವಾಗಿ ಜನಪದ ಕತೆಗಳನ್ನು, ಉತ್ತಮ ಹಾಡುಗಳನ್ನು ಸೇರಿಸಬಹುದಾಗಿದೆ. ಕೆಲ ವರ್ಗಗಳ ಪಠ್ಯಗಳಲ್ಲಿ ಅಲ್ಲಲ್ಲಿ ಜನಪದ ಕಥೆ, ತ್ರಿಪದಿ ಮತ್ತು ಕಥನಕಾವ್ಯಗಳ ತುಣುಕುಗಳು ಕಾಣಸಿಗುತ್ತವೆ. ಅವುಗಳ ಪ್ರಮಾಣವನ್ನು ಹೆಚ್ಚಿಸಬಹುದು. ಜೊತೆಗೆ ಜನಪದ ಕಲೆಗಳ ಪರಿಚಯ, ಕಲಾವಿದರ ಪರಿಚಯ ಸೇರಿಸಬಹುದು. ಜನಪದ ಆಟಗಳನ್ನು ಮಕ್ಕಳಿಗೆ ಕಲಿಸಬಹುದು. ಪ್ರಾಯೋಗಿಕವಾಗಿ ಜನಪದ ಹಾಡುಗಳನ್ನು ಹೇಳಿಕೊಡುವ ವವಸ್ಥೆಯನ್ನೂ ಮಾಡಬಹದು.

ಪಂಚಾಯತಿಗಳ ಬಳಕೆ:

ಪ್ರತಿ ಹಳ್ಳಿಯ ಗ್ರಾಮಪಂಚಾಯಿತಿಗಳನ್ನು ಜಾನಪದ ಸಂಗತಿಗಳ ಸಂಗ್ರಹ, ಪ್ರಚಾರ, ಸಂರಕ್ಷಣೆ ಈ ಮುಂತಾದ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಗ್ರಾಮಪಂಚಾಯತಿಯ ಕೆಳಗಡೆ ಒಬ್ಬ ಜಾನಪದ ಕ್ಷೇತ್ರಕಾರ್ಯಸಹಾಯಕನನ್ನು ಸರ್ಕಾರ ನೇಮಿಸುವ ಯೋಜನೆ ಹಾಕುವುದು ಅವಶ್ಯವಿದೆ. ಆತ ಗ್ರಾಮಗಳಲ್ಲಿ ಮೌಖಿಕ ಪರಂಪರೆಯ ಜ್ಞಾನದ ಬಗ್ಗೆ ಪ್ರಚಾರ ಮಾಡುವುದು, ಪ್ರತಿಭಾವಂತರನ್ನು ಗುರುತಿಸಿ ಸರ್ಕಾರದ- ವಿಶ್ವವಿದ್ಯಾಲಯದ ಗಮನಕ್ಕೆ ತರುವುದು ಮತ್ತು ಗ್ರಾಮಪಂಚಾಯಿತಿಯ ಅಧೀನದಲ್ಲಿ ಒಂದು ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿ, ಅದನ್ನು ಬೆಳೆಸಿಕೊಂಡು, ಕಾಪಾಡಿಕೊಂಡು ಬರುವ ಕೆಲಸವನ್ನು ಮಾಡುವುದು ಅವನ ಕರ್ತವ್ಯಗಳಾಗಬೇಕು.

ಜಾನಪದ ವಸ್ತುಸಂಗ್ರಹಾಲಯಗಳು ಪ್ರತಿಗ್ರಾಮಪಂಚಾಯತಿ ಮಟ್ಟದಲ್ಲಿ ಇರಬೇಕು. ಇಲ್ಲಿ ಜನಪದ ಸಾಹಿತ್ಯ ಮತ್ತು ಮಾಹಿತಿಗಳ ಸಂಗ್ರಹ, ಗ್ರಾಮಗಳ ನಾನಾ ಕ್ಷೇತ್ರಗಳಲ್ಲಿ ಕಾಣುವ ಪ್ರತಿಭಾವಂತರನ್ನು ಗುರುತಿಸುವ, ಅವರ ಬಗೆಗೆ ಮಾಹಿತಿಗಳನ್ನು ಕಲೆಹಾಕುವ, ಅವುಗಳನ್ನು ಸಂಗ್ರಹಾಲಯಗಳಲ್ಲಿ ದಾಖಲಿಸಿ ಇಡುವ, ಅಗತ್ಯ ಬಿದ್ದಾಗ ಸರ್ಕಾರಕ್ಕೆ ಮತ್ತು ವಿಶ್ವವಿದ್ಯಾಲಯಕ್ಕೆ ಅಗತ್ಯ ಮಾಹಿತಿಗಳನ್ನು ದೊರಕಿಸುವ ಕೆಲಸವನ್ನು ಮಾಡಬೇಕು. ತಾಲೂಕಾ ಮತ್ತು ಜಿಲ್ಲಾಮಟ್ಟದ ಪಂಚಾಯತಿಗಳ ಅಧೀನದಲ್ಲೂ ಇಂತಹ ಸಂಗ್ರಹಾಲಯಗಳು ಪ್ರಾರಂಭವಾಗಬೇಕು. ಅಲ್ಲಿಯೂ ಸಿಬ್ಬಂದಿಯ ವ್ಯವಸ್ಥೆಯಾಗಬೇಕು. ಜಿಲ್ಲಾಮಟ್ಟದಲ್ಲಿ ಜಾನಪದಕ್ಕೆ ಸಂಬಂಧಿಸಿ ಎರಡು ಘಟಕಗಳು ಕೆಲಸ ಮಾಡಬೇಕು:

೧. ಸಂಗ್ರಹಾಲಯ: ವಸ್ತು ಸಂಗ್ರಹ ಮತ್ತು ಸಂರಕ್ಷಣೆ.

೨. ಪತ್ರಾಗಾರಗಳು: ಸಾಹಿತ್ಯ/ಮಾಹಿತಿ ಸಂಗ್ರಹ ಮತ್ತು ದಾಖಲಾತಿ.


ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಆಗುವ ಪ್ರಯೋಜನಗಳು:

೧. ದೇಸೀಸಂಸ್ಕೃತಿ ಮತ್ತು ಬದುಕಿನ ಮೌಲ್ಯಗಳ ಅರಿವು, ಪುನರುತ್ಥಾನ ಮತ್ತು ಪ್ರಸಾರ

೨. ಮೌಖಿಕ ಸಾಹಿತ್ಯ-ಗ್ರಾಮೀಣ ಕಲಾ-ಕ್ರೀಡಾ ಪ್ರಕಾರಗಳ ಕಲಿಕೆ ಪ್ರಸಾರ.

೩. ಪರಂಪರೆ ಜ್ಞಾನದ ಶೋಧ-ಸಂರಕ್ಷಣೆ, ಬದುಕಿನಲ್ಲಿ ಅಳವಡಿಕೆ.

೪. ಗ್ರಾಮೀಣ ಕಸಬು ಮತ್ತು ಕರಕುಶಲ ಕಲೆಗಳ ಪುನಃಶ್ಚೇತನ

೫. ದೇಸೀ ಕೃಷಿ ಮತ್ತು ವೈದ್ಯ ಪದ್ಧತಿಗಳ ಶೋಧ ಮತ್ತು ಅಳವಡಿಕೆ. ಇದರಿಂದ ದೇಶದ ಆಹಾರ, ಆರೋಗ್ಯಗಳ ಅಭಿವೃದ್ಧಿ, ಅರಿವುಗಳ ಹೆಚ್ಚಳ. ಇದರಿಂದ ಸಮೃದ್ಧ ಭಾರತದ ನಿರ್ಮಾಣಕ್ಕೆ ನಾಂದಿ.

೬. ಗ್ರಾಮಾಂತರ ಪ್ರದೇಶದ ಪ್ರತಿಭಾವಂತ ಕಸಬುದಾರರಿಗೆ/ ಕಲಾವಿದರಿಗೆ ಪ್ರೋತ್ಸಾಹ ಮತ್ತು ಆರ್ಥಿಕ ಭದ್ರತೆ.
೭. ಭಾರತದ ಯುವಕರಿಗೆ ಸ್ವಾವಲಂಬಿ ಉದ್ಯೋಗದ ಅವಕಾಶ, ಒಂದು ಹೊಸ ಬದುಕಿನ ದಾರಿಯ ಅನ್ವೇಷಣೆ. ಇದರಿಂದ ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ನಾಂದಿ.

೮. ದೇಸಿ ಸೌಲಭ್ಯಗಳ ಅರಿವು ಮತ್ತು ಅಳವಡಿಕೆ.

೯. ಆಧುನಿಕ ಪ್ರಪಂಚದ ಆತಂಕಗಳಿಂದ (ಕೈಗಾರಿಕೀಕರಣ, ಜಾಗತೀಕರಣಗಳ ದುಷ್ಪರಿಣಾಮಗಳಿಂದ) ರಕ್ಷಣೆ.

೧೦. ನೈಸರ್ಗಿಕ ಪರಿಸರದ ಸ್ಥಿತಿಯನ್ನು ಕಾಪಾಡಿಕೊಂಡು ಹೋಗಲು ಒಂದು ಪ್ರತಿ ಯೋಜನೆ.


-ಡಾ| ವೀರಣ್ಣ ದಂಡೆ
ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಸಂಸ್ಥೆ
ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ-೫೮೫ ೧೦೬
ಮೊಬಾಯಿಲ್: ೯೪೪೮೭೭೮೯೯೧

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಪ್ರೊ.ವೀರಣ್ಣ ದಂಡೆ ಅವರು ಜಾನಪದ ವಿಶ್ವವಿದ್ಯಾಲಯದ ಬಗ್ಗೆ ತುಂಬಾ ಗಂಭೀರವಾಗಿ ಯೋಚಿಸಿದ್ದಾರೆ. ಇದನ್ನು ಜಾನಪದ ವಿವಿಯ ವಿಶೇಷಾಧಿಕಾರಿಗಳಾದ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಗಮನಿಸಬೇಕಾಗಿ ವಿನಂತಿ. ಈ ವಿಚಾರಗಳಲ್ಲಿ ಕೆಲವನ್ನಾದರೂ ಜಾನಪದ ವಿವಿ ಸ್ಥಾಪನೆಯಲ್ಲಿ ಅಳವಡಿಸಿಕೊಂಡದ್ದಾದರೆ ಒಳ್ಳೆಯದು.
-ರಾಮಣ್ಣ,ಬಿಜಾಪುರ