ಶುಕ್ರವಾರ, ಫೆಬ್ರವರಿ 4, 2011
ಇವರದು 56 ವರ್ಷಗಳಿಗೊಮ್ಮೆ ಗಂಗೆಪೂಜೆ : ಕಾಲ್ನಡಿಗೆಯಲ್ಲಿ ಹಂಪೆಗೆ ಯಾತ್ರೆ
-ಸಿದ್ದರಾಮ ಹಿರೇಮಠ, ಕೂಡ್ಲಿಗಿ
ಬುಡಕಟ್ಟು ಜನಾಂಗಗಳ್ಲಲಿ ಇನ್ನೂ ಕೆಲವು ಸಾಂಪ್ರದಾಯಿಕ ಆಚರಣೆಗಳು ಜೀವಂತವಾಗಿವೆ ಎಂಬುದಕ್ಕೆ ತಾಲೂಕಿನ ಪೂಜಾರಹಳ್ಳಿ ಗ್ರಾಮದ ಜನಾಂಗವೇ
ಸಾಕ್ಷಿಯಾಗಿದೆ. ಇಲ್ಲಿನ ನಾಯಕ ಜನಾಂಗದವರು 56 ವರ್ಷಗಳಿಗೊಮ್ಮೆ ಗಂಗೆಪೂಜೆ ಮಾಡುತ್ತಾರೆ. ಮತ್ತೂ ವಿಶೇಷವೆಂದರೆ, ಗಂಗೆಪೂಜೆ ಮಾಡಲು ಇವರು ತಮ್ಮ ದೇವರನ್ನು ಹೊತ್ತುಕೊಂಡು 60 ಕಿ.ಮೀ ದೂರದ ಹಂಪೆಯವರೆಗೂ ಕಾಲ್ನಡಿಗೆಯಲ್ಲಿ ಹೋಗಿಬರುತ್ತಾರೆ. ಈ ಉತ್ಸವದಲ್ಲಿ ಸಾವಿರಾರು ಜನ ಪಾಲ್ಗೊಂಡಿರುತ್ತಾರೆ. ಗುರುವಾರ ಈ ಯಾತ್ರಾಥರ್ಿಗಳು ಗಂಗೆಪೂಜೆ ಪೂರ್ಣಗೊಳಿಸಿ ಶಿವಪುರ, ಕೂಡ್ಲಿಗಿ ಮಾರ್ಗವಾಗಿ ಪೂಜಾರಹಳ್ಳಿಗೆ ತೆರಳಿದರು.
ಈ ರೀತಿಯ ವಿಶಿಷ್ಟವಾದ ಆಚರಣೆ ತಾಲೂಕಿನ ಪೂಜಾರಹಳ್ಳಿಯಲ್ಲಿ ಭಾನುವಾರ ಆರಂಭಗೊಂಡಿತು. ಅಲ್ಲಿನ ಓಬಳೇಶ್ವರ ಸ್ವಾಮಿ ಹಾಗೂ ಕೆ.ಬಿ.ಹಟ್ಟಿಯ ಬಸವೇಶ್ವರ ಸ್ವಾಮಿಯನ್ನು ಹೊತ್ತು 56 ವರ್ಷಗಳ ನಂತರ ಇಲ್ಲಿನ ಸಾವಿರಾರು ಜನ ಪ್ರವಾಹದೋಪಾದಿಯಲ್ಲಿ ಹಂಪೆಗೆ ಕಾಲ್ನಡಿಗೆಯಲ್ಲಿ ಹೊರಟೇಬಿಟ್ಟರು.ಇವರೊಂದಿಗೆ ದೇವರಿಗಾಗಿ ಛತ್ರ, ಚಾಮರ, ಡೊಳ್ಳು, ವಿವಿಧ ವಾದ್ಯಗಳ ವೈಭವ. ಅಲ್ಲದೆ ಸುಮಾರು 40 ದೇವರ ಎತ್ತುಗಳೂ ಯಾತ್ರೆಯಲ್ಲಿ ಪಾಲ್ಗೊಂಡಿದ್ದವು.ಬುಧವಾರ ಹಂಪೆಯ ವಿರುಪಾಕ್ಷನ ಸನ್ನಿಧಿಯಲ್ಲಿ ತುಂಗಭದ್ರಾ ನದಿಯ ಚಕ್ರತೀರ್ಥದಲ್ಲಿ ಗಂಗೆಪೂಜೆಯನ್ನು ಸಾಂಪ್ರದಾಯಿಕವಾಗಿ ನೆರವೇರಿಸಿ, ಗುರುವಾರ ಮರಳಿ ವಾದ್ಯ ವೈಭವಗಳೊಂದಿಗೆ ತಮ್ಮ ಗ್ರಾಮಕ್ಕೆ ಹೊರಡಿದ್ದಾರೆ. ಇವರು ಪೂಜಾರಹಳ್ಳಿಯನ್ನು ತಲುಪುವುದು ಫೆಬ್ರವರಿ 5ರಂದು. ನಂತರ ಫೆಬ್ರವರಿ 12,13ಕ್ಕೆ ಗ್ರಾಮದಲ್ಲಿ ಗುಗ್ಗರಿ ಹಬ್ಬ, 14, 15ಕ್ಕೆ ಕೆ.ಬಿ.ಹಟ್ಟಿಯ ಬಸವೇಶ್ವರ ಗುಗ್ಗರಿ ಹಬ್ಬವನ್ನು ಆಚರಿಸಲಾಗುವುದು ಎಂದು ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಸವರಾಜ್ ಗೊಂಚಿಗಾರ ತಿಳಿಸಿದರು.
ಗ್ರಾಮದ ಜನಾಂಗದವರ ಮನೆತನಗಳ ದೈವ ಹಂಪೆಯ ವಿರುಪಾಕ್ಷನಾಗಿದ್ದು, ವಿಜಯನಗರ ಸಾಮ್ರಾಜ್ಯದ ಸಂದರ್ಭದಲ್ಲಿ ಈ ರೀತಿ ಗ್ರಾಮಸ್ಥರು ಭೇಟಿ ನೀಡಿ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿತ್ತು. ಅದೇ ಇಲ್ಲಿನವರೆಗೆ ಮುಂದುವರೆದುಕೊಂಡು ಬಂದಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧಕ ಡಾ.ವಿರುಪಾಕ್ಷಿ ಪೂಜಾರಹಳ್ಳಿ ಹೇಳುತ್ತಾರೆ. ಈ ರೀತಿ ಉತ್ಸವ ಆಚರಣೆಯಿಂದ ಗ್ರಾಮಕ್ಕೆ ಒಳಿತಾಗುವುದೆಂಬ ನಂಬಿಕೆಯೂ ಇದೆ ಎಂದು ಅವರು ತಿಳಿಸಿದರು.
`ನಮ್ಮ ಅಜ್ಜ 1950ರೊಳಗ ಬಂಡಿ ಹೂಡ್ಕೊಂಡು ಗ್ರಾಮಸ್ಥರೆಲ್ಲ ಸೇರಿ ಹಂಪಿಗೆ ಗಂಗಿ ಪೂಜೆಗೆ ಹೋಗಿದ್ರಂತ ನಾನು ಸಣ್ಣವನಿದ್ದಾಗ ಕೇಳ್ತಿದ್ದೆ, ಈಗ ನಮ್ ಪುಣ್ಯಾ ನಾವು ಹೋಗಿ ಬಂದೀವಿ' ಎಂದು ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಗೊಂಚಿಗಾರ ಬೋರಯ್ಯ ತಿಳಿಸಿದರು. ಇವರು ಹಂಪೆಗೆ ಹೋಗುವ ಮಾರ್ಗದಲ್ಲಿ ಸಂಬಂಧಿಕರಿರುವ ಊರುಗಳಲ್ಲಿ ಇವರಿಗೆ ಊಟ, ವಸತಿ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಉತ್ಸವದಲ್ಲಿ ಪೂಜಾರಿ ಓಬಣ್ಣ, ಕೆ.ಬಿ.ಹಟ್ಟಿ ಪೂಜಾರಿ ಬಸಯ್ಯ, ಮುಷ್ಟಲಗುಮ್ಮಿ ತಿಪ್ಪೇಸ್ವಾಮಿ, ಗೌಡರ ಓಬಯ್ಯ, ನಡುವಲಮನಿ ಓಬಯ್ಯ ಮುಂತಾದ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
ಶಿಕ್ಷಣ! ಸಂಘಟನೆ!! ಹೋರಾಟ!!! ಎಂದು ಡಾ.ಅಂಬೇಡ್ಕರರು ಹೇಳಿದ್ದಾರೆಯೇ ??? -ಡಾ.ಶಿವಕುಮಾರ್ ಇಂದು ಬಹುತೇಕ ದಲಿತರು ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶಿಕ್ಷಣ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ