ಗುರುವಾರ, ಫೆಬ್ರವರಿ 3, 2011

ಸರ್ಕಾರದ ಅವ್ಯವಸ್ಥೆ ವಿರುದ್ಧ ದ್ವನಿ ಎತ್ತಿದ ಮಂಜಮ್ಮ ಜೋಗತಿ

ಸಾಮಾನ್ಯವಾಗಿ ಜನಪದ ಕಲಾವಿದರು ಸರಕಾರದ ವಿರುದ್ಧ ದ್ವನಿ ಎತ್ತುವುದು ಅಪರೂಪ. ಇಂತಹ ಅಪರೂಪದ ಘಟನೆ ಹಂಪಿ ಉತ್ಸವದಲ್ಲಿ ನಡೆಯಿತು. ಮರಿಯಮ್ಮನಹಳ್ಳಿಯ ಮಂಜಮ್ಮ ಜೋಗತಿಯು ಶಿಕ್ಷಣ ಪಡೆದು, ದೈಹಿಕ ಬದಲಾವಣೆಯಿಂದಾಗಿ ಮಂಜು ಮಂಜಮ್ಮನಾಗಿ ಬದಲಾದವಳು. ಎಲ್ಲಮ್ಮನ ಪರಂಪರೆಯನ್ನು ಕಲೆಯನ್ನಾಗಿ ರೂಪಿಸುವಲ್ಲಿ ಶ್ರಮಿಸುತ್ತಿರುವವಳು. ಮಂಜಮ್ಮ ಖಡಕ್ಕಾಗಿ ಮಾತನಾಡುವುದಕ್ಕೆ ಹಿಂಜರಿಯದವಳು. ಜೋಗತಿಯರನ್ನು ಕೀಳಾಗಿ ಕಾಣುವವರನ್ನು ಕಡಾಖಂಡಿತವಾಗಿ ವಿರೋಧಿಸುವವ ಛಾತಿ ಇರುವಂಥವಳು. ಈಚೆಗಷ್ಟೆ ನಡೆದ ಹಂಪಿ ಉತ್ಸವದಲ್ಲಿ ಮಂಜಮ್ಮ ಜೋಗತಿ ತಮ್ಮ ಕಾರ್ಯಕ್ರಮವನ್ನು ನೀಡಿದ ನಂತರ, ಮಾತನಾಡಲು ಅವಕಾಶ ಕೋರಿ ಸರಕಾರದ ಅವ್ಯವಸ್ಥೆಯನ್ನು ಕುರಿತು ದ್ವನಿ ಎತ್ತಿದ್ದಾರೆ. ಕಾರಣವಿಷ್ಟೆ, ಜನಪದ ಕಲಾವಿದರಿಗೆ ಬಟ್ಟೆ ಬದಲಿಸಿ, ಮೇಕಪ್‍ ಮಾಡಿಕೊಳ್ಳಲು ಯಾವುದೇ ವ್ಯವಸ್ಥೆ ಇರಲಿಲ್ಲ. ವೇದಿಕೆಯ ಹಿಂಭಾಗ ಯಾರೂ ಬರದಿರುವಂತೆ ಒಬ್ಬರು ಕಾದುಕೊಂಡಿದ್ದು, ಉಳಿದವರು ಬಯಲಲ್ಲಿಯೇ ಬಟ್ಟೆ ಬದಲಿಸಿ ಮೇಕಪ್‍ ಮಾಡಿಕೊಳ್ಳುತ್ತಿದ್ದಾರೆ, ಇದೇ ಸಮಯಕ್ಕೆ ಕೆಲವು ಪೋಲಿ ಹುಡುಗರು ಜೋಗತಿಯರನ್ನು ಕಿಚಾಯಿಸಲು ಪ್ರಯತ್ನಿಸಿದ್ದಾರೆ. ಅಂದರೆ ಶಾಸ್ತ್ರೀಯ ಸಂಗೀತಗಾರರಿಗಾದರೆ, ಮೊದಲ ದರ್ಜೆ ಹೋಟೇಲುಗಳನ್ನು ಬುಕ್‍ ಮಾಡುವ ಸರಕಾರ ಜನಪದ ಕಲಾವಿದರಿಗೆ, ಡ್ರೆಸ್‍ ಚೇಂಜ್‍ ಮಾಡಿಕೊಳ್ಳಲಿಕ್ಕಾದರೂ, ಒಂದು ವ್ಯವಸ್ಥೆ ಮಾಡಬಾರದೇ? ಜನಪದ ಕಲಾವಿದರನ್ನೇನು ದನಗಳೆಂದು ಸರಕಾರ ಭಾವಿಸಿದೆಯೇ ಮುಂತಾಗಿ, ಅಲ್ಲಿದ್ದ ಕಾರ್ಯಕ್ರಮದ ಆಯೋಜಕರನ್ನು ಮಂಜಮ್ಮ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಆಯೋಜಕರು ಬಿರುಸಿನ ಪ್ರತಿಕ್ರಿಯೆ ನೀಡಿದುದರಿಂದಾಗಿ ಒಂದು ಸಣ್ಣ ಜಟಾಪಟಿಯೇ ನಡೆದಿದೆದೆ. ಇದನ್ನು ಮಾದ್ಯಮಗಳು ಚನ್ನಾಗಿಯೇ ಬಿಂಬಿಸಿದವು. ಆ ನಂತರ ಮಂಜಮ್ಮನ ಬಳಿ ಮಾತನಾಡಿದಾಗ ಹೇಳಿದ ಘಟನೆ ಇನ್ನೂ ಕುತೂಹಲಕಾರಿಯಾಗಿತ್ತು. ಕೆಲವರು ಟಿ.ವಿ ನೋಡಿ ‘ಏನ್‍ ಮಂಜಮ್ಮ ಮೊನ್ನೆ ತಾನೆ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದು ಸರಕಾರವನ್ನೇ ಬೈಯುತ್ತೀಯಲ್ಲ, ಅಂದರಂತೆ, ಅದಕ್ಕೆ ಮಂಜಮ್ಮ ಕೋಟ್ಟ ಉತ್ತರ ಮಾರ್ಮಿಕವಾಗಿದೆ. ಅದೇನೆಂದರೆ "ಸರ್ಕಾರ ನನ್ನ ಕಲೆಯನ್ನು ಗೌರವಿಸಿ ಪ್ರಶಸ್ತಿಯನ್ನು ಕೊಟ್ಟಿದೆ , ಹಾಗೆಂದು ಅದೇ ಕಲೆಯನ್ನು ಕೀಳಾಗಿ ನೋಡುವಾಗ ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕೆ? ಎಂದು ಉತ್ತರಿಸಿದ್ದಾರೆ. ಇಂತಹ ದೈರ್ಯ ಮತ್ತು ತಮ್ಮ ಕಲೆಯ ಬಗ್ಗೆ ತಾವೇ ಗೌರವ ತಾಳುವ ಮತ್ತು ಅದಕ್ಕೆ ಅಗೌರವವಾದಾಗ ಅದನ್ನು ಪ್ರತಿರೋಧಿಸುವ ಗುಣ ಜನಪದ ಕಲಾವಿದರಲ್ಲಿ ಬರಬೇಕಿದೆ. ಬಹುಪಾಲು ಜನಪದ ಕಲಾವಿದರು ಇಂತಹದುದರ ವಿರುದ್ಧ ದ್ವನಿ ಎತ್ತುವುದು ಕಡಿಮೆ. ಕಾರಣ ಮುಂದಿನ ಕಾರ್ಯಕ್ರಮಕ್ಕೆ ನಮಗೆ ಅವಕಾಶ ಕೊಡುವುದಿಲ್ಲ ಎನ್ನುವ ಭಯ ಅವರನ್ನು ಕಾಡುತ್ತಿರುತ್ತದೆ. ಇದನ್ನು ನೋಡಿದರೆ ಜನಪದ ಕಲೆಗಳು ಯಾವ ಸ್ಥಿತಿಯಲ್ಲಿವೆ ಎಂದು ಅರ್ಥವಾಗುತ್ತದೆ. ಈ ವಿಷಯದಲ್ಲಿ ಜನಪದ ಕಲಾವಿದರು ಮಾತ್ರವಲ್ಲ ಜನಪದ ಅಧ್ಯಯನಕಾರರೂ ದ್ವನಿ ಎತ್ತುವ ಅಗತ್ಯವಿದೆ. ಆದರೆ ಜನಪದ ಕಲಾವಿದರನ್ನು ಬೆಂಬಲಿಸಿ ಸರಕಾರದ ವಿರುದ್ಧ ದ್ವನಿ ಎತ್ತುವ ವಿದ್ವಾಂಸರ ಕೊರತೆ ಕನ್ನಡದಲ್ಲಿ ಹೆಚ್ಚಿದೆ ಹಂಪಿ ಉತ್ಸವವನ್ನು ಒಳಗೊಂಡಂತೆ ಯಾವುದೇ ಸರಕಾರಿ ಉತ್ಸವಗಳಲ್ಲಿ ಜನಪದ ಕಲಾವಿರನ್ನು ಕೀಳಾಗಿ ನೋಡಲಾಗುತ್ತದೆ. ಶಿಷ್ಟ ಕಲಾವಿದರನ್ನು ನೋಡುವ ಕ್ರಮಕ್ಕೂ , ಜನಪದ ಕಲಾವಿದರನ್ನು ಭಾವಿಸುವ ಕ್ರಮಕ್ಕೂ ತುಂಬಾ ವ್ಯಾತ್ಯಾಸವಿದೆ. ಅಂತೆಯೇ ಜನಪದ ಕಲಾವಿದರಿಗೆ ಕೊಡುವ ಸಂಭಾವನೆಯಲ್ಲಿಯೂ ವಿಪರೀತ ತಾರತಮ್ಯವಿದೆ. ಒಬ್ಬ ಶಾಸ್ತ್ರೀಯ ಸಂಗೀತಗಾರರಿಗೆ ಐವತ್ತು ಸಾವಿರ ಸಂಭಾವನೆ, ಮೊದಲ ದರ್ಜೆಯ ಹೋಟೇಲುಗಳ ಗೌರವವಿದ್ದರೆ, ಜನಪದ ಕಲಾವಿದರಿಗೆ ಹತ್ತು ಸಾವಿರ ಮತ್ತು ಬಯಲೇ ವಾಸ. ಇನ್ನಾದರೂ ಜನಪದ ಕಲಾವಿದರು ಈ ತಾರತಮ್ಯವನ್ನು ವಿರೋಧಿಸಿ ದ್ವನಿ ಎತ್ತುವುದನ್ನು ಕಲಿಯಬೇಕಿದೆ. ಜನಪದ ಅಧ್ಯಯನಕಾರರೂ ಜನಪದ ಕಲಾವಿದರ ಪರವಾಗಿ ಬಹಿರಂಗವಾಗಿ ಅವರಿಗಾಗುವ ಅನ್ಯಾಯವನ್ನು ವಿರೋಧಿಸುವ ಅಗತ್ಯವೂ ಇದೆ.

ಕಾಮೆಂಟ್‌ಗಳಿಲ್ಲ: