ಮಂಗಳವಾರ, ಫೆಬ್ರವರಿ 22, 2011

ಗೋ.ರು. ಚನ್ನಬಸಪ್ಪ ಅವರೊಂದಿಗೆ ಮಾತುಕತೆ



( ಗೋ.ರು. ಚನ್ನಬಸಪ್ಪ ಅವರು ಹಿರಿಯ ಜಾನಪದ ತಜ್ಞರು, ಸದ್ಯದ ಕರ್ನಾಟಕ ಜಾನಪದ ಅಕಾಡೆಮಿಯ ಕ್ರಿಯಾಶೀಲ ಅಧ್ಯಕ್ಷರು. ಅವರು ಕನ್ನಡ ಜಾನಪದ ಕ್ಷೇತ್ರಕ್ಕೆ ಗುರುತರವಾದ ಸೇವೆ ಸಲ್ಲಿಸಿದ್ದಾರೆ. ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಅವರ ಪಾತ್ರ ದೊಡ್ಡದು. ಮೈದುನ ರಾಮಣ್ಣ, ಗ್ರಾಮಗೀತೆಗಳು, ಬಾಗೂರು ನಾಗಮ್ಮ ಮತ್ತು ಇತರ ಹಾಡುಗಳು, ಮುಂತಾದ ಕೃತಿಗಳು ಅವರ ವಿದ್ವತ್ತಿಗೆ ಸಾಕ್ಷಿಯಾಗಿವೆ. 1977 ರಲ್ಲಿ ಅವರು ಸಂಪಾದಿಸಿದ `ಕರ್ನಾಟಕ ಜನಪದ ಕಲೆಗಳು’ ಇಂದಿಗೂ ಮಾದರಿ ಕೃತಿಯಾಗಿದೆ. ಅವರ ಇತ್ತೀಚಿನ ‘ಆಲೋಚನೆ’ ಎನ್ನುವ ಕೃತಿಯ ತನಕ ಅವರ ಜಾನಪದ ಅಧ್ಯಯನದ ಬೇರೆ ಬೇರೆ ನೆಲೆಯ ಆಲೋಚನ ವಿನ್ಯಾಸಗಳು ಜಾನಪದ ಅಧ್ಯಯನಕಾರರಿಗೆ ಉಪಯುಕ್ತವಾಗಿವೆ . ಗೋ.ರು.ಚ ಅವರ ಆಲೋಚನೆಯಲ್ಲಿ ಸಾಂಪ್ರದಾಯಿಕ ಜಾನಪದ ಅಧ್ಯಯನ ವಿದಾನಗಳು ಬದಲಾಗಿಲ್ಲವಾದರೂ, ಈಚೆಗೆ ಇದನ್ನು ಮೀರುವ ಪ್ರಯತ್ನದಲ್ಲಿದ್ದಂತೆ ಕಾಣುತ್ತದೆ. ಅವರು ಕನ್ನಡ ಜಾನಪದ ಬ್ಲಾಗಿಗಾಗಿ ಮಾತನಾಡಿದ ಮಾತುಕತೆ ಇಲ್ಲಿದೆ-ಅರುಣ್ )


ಅರುಣ್ : ಸಾರ್, ನೀವು ಜಾನಪದ ಅಕಾಡೆಮಿ ಅಧ್ಯಕ್ಷರಾದಂದಿನಿಂದ ಒಳ್ಳೆಯ ಕೆಲಸಗಳು ನಡೆಯುತ್ತಿವೆ, ಅಕಾಡೆಮಿ ಕ್ರಿಯಾಶೀಲವಾಗಿದೆ. ಸದ್ಯದ ಅಕಾಡೆಮಿಯ ಚಟುವಟಿಕೆಗಳಾವುವು?

ಗೋ.ರು.ಚ: ಅಕಾಡೆಮಿ ಜಾನಪದ ಕುರಿತಂತೆ ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡ್ತಿದೆ, ಇತ್ತೀಚಿಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾನಪದದ ಬಗ್ಗೆ ಆಸಕ್ತಿಯನ್ನು ಬೆಳೆಸಲು ಜಾನಪದ ಜಗುಲಿ ಎನ್ನುವ ಕಾರ್ಯಕ್ರಮವನ್ನು ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತಿದ್ದೇವೆ. ಮೊದಲು ಕಾಲೇಜುಗಳನ್ನು ಆಯ್ಕೆ ಮಾಡಿ, ಅವರನ್ನು ಸಂಪರ್ಕಿಸಿ ಒಂದು ಜಾನಪದ ಕಾರ್ಯಕ್ರಮವನ್ನು ಆಯೋಜಿಸುವುದು. ಅದರ ಸ್ವರೂಪ ಅಂದ್ರ, ಒಬ್ರು ಜಾನಪದ ವಿದ್ವಾಂಸರು ಮಾತಾಡ್ತಾರೆ, ಮಾತಿನ ಬಳಿಕ ವಿದ್ಯಾರ್ಥಿಗಳು ಚರ್ಚೆ ಸಂವಾದ ಮಾಡ್ತಾರೆ. ಮತ್ತೆ ಆ ಭಾಗದ ಸ್ಥಳೀಯ ಕಲಾವಿದರು, ಅಥವಾ ಕರ್ನಾಟಕದ ಬೇರೆ ಬೇರೆ ಕಡೆಗಳಿಂದ ಕರೆಯಿಸಿದ ಜಾನಪದ ಕಲಾವಿದರಿಂದ ಕಲಾಪ್ರದರ್ಶನ ನಡೆಯುತ್ತೆ.
ಇನ್ನು ಕಾಲೇಜು ಅಧ್ಯಾಪಕರನ್ನು ಜಾನಪದ ಸಂಗ್ರಹ ಮಾಡಲು ಬಳಸಿಕೊಳ್ಳಬಹುದು ಎಂದು ತಿಳಿದು, ಅಧ್ಯಾಪಕರಿಗೆ ಕ್ಷೇತ್ರಕಾರ್ಯದ ತರಬೇತಿಯನ್ನು ಜಾನಪದ ವಿದ್ವಾಂಸರಿಂದ ಕೊಡಿಸ್ತೀವಿ. ಇಲಾಖೆಯವರೇ ಕೆಲವು ಅಧ್ಯಾಪಕರನ್ನು ಇದಕ್ಕಾಗಿ ನಿಯೋಜನೆ ಮಾಡ್ತಿದಾರೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗ್ತಿದೆ. ಇದನ್ನು ಇನ್ನಷ್ಟು ಕ್ರಿಯಾಶೀಲವಾಗಿ ಮಾಡಬೇಕು.
ಮತ್ತೊಂದು ಜಾನಪದ ಡಿಕ್ಷನರಿ ಕೆಲಸ ನಡೀತಿದೆ. ಇದು ಒಟ್ಟು ಕನ್ನಡದ ಸಮಗ್ರ ಜಾನಪದ ನುಡಿಗಟ್ಟುಗಳ ಕೋಶ. ಇದೊಂದು ದೊಡ್ಡ ಪ್ರಯತ್ನ. ಕರ್ನಾಟಕದ ಎಲ್ಲಾ ಭಾಗದ ಜಾನಪದ ನುಡಿಗಟ್ಟುಗಳು ಸೇರಿಸುವಂತಹ ಪ್ರಯತ್ನ. ಎಲ್ಲಾ ಭಾಗದಿಂದಲೂ ಕ್ಷೇತ್ರ ಕಾರ್ಯಕರ್ತರನ್ನು ನೇಮಿಸಿ ಕೆಲಸ ಮಾಡಿಸ್ತಿದಿವಿ. ಸದ್ಯಕ್ಕೆ ಆ ಕೆಲಸ ನಡೀತಿದೆ.
ಬೀದರ್ನಲ್ಲಿ ಏಪ್ರಿಲ್ ೨೩, ೨೪, ೨೫ ರಂದು ಅಖಿಲ ಭಾರತ ಜಾನಪದ ಸಮ್ಮೇಳನ ಮಾಡ್ತಿದಿವಿ. ಇಂತಹ ಕಾರ್ಯಕ್ರಮ ಮೊದಲ ಪ್ರಯತ್ನ. ಭಾರತದ ಬೇರೆ ಬೇರೆ ರಾಜ್ಯಗಳಿಂದ ಜಾನಪದ ವಿದ್ವಾಂಸರು, ಜನಪದ ಕಲಾವಿದರೂ ಬರ್ತಿದಾರೆ, ಸೆಂಟ್ರಲ್ ಅಕಾಡೆಮಿ ಈಶಾನ್ಯ ಭಾರತದ ಜಾನಪದ ಕಲಾವಿದರನ್ನು ಸಮ್ಮೇಳನಕ್ಕಾಗಿ ಕಳಿಸಿಕೊಡ್ತಿದಾರೆ. ಇದರ ತಯಾರಿ, ಮುಂತಾದ ಕೆಲಸಗಳನ್ನು ಮಾಡ್ತಿದಿವಿ.

ಅರುಣ್: ಸಾರ್, ನೀವು ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸುವಲ್ಲಿ ಹಗಲಿರುಳು ಶ್ರಮಿಸಿದವರು. ನಿಮ್ಮ ಮುಂದಾಳತ್ವದ ಹೋರಾಟದ ಫಲವೇ ಇಂದಿನ ಜಾನಪದ ವಿಶ್ವವಿದ್ಯಾಲಯ. ಅದಕ್ಕಾಗಿ ವಯಕ್ತಿವಾಗಿ ನಿಮ್ಮನ್ನು ಅಭಿನಂದಿಸುವೆ. ಸಾರ್, ನಿಮ್ಮ ಕನಸಿನ ಜಾನಪದ ವಿವಿಯ ಮೊದಲ ಆದ್ಯತೆಯ ಕೆಲಸ ಯಾವುದಾಗಿರಬೇಕು ?

ಗೋ.ರು.ಚ: ಹೌದು ಕರ್ನಾಟಕದ ಸಂದರ್ಭದಲ್ಲಿ ಜಾನಪದ ವಿವಿ ಆಗಿದ್ದು ದೊಡ್ಡ ಘಟನೆ. ಸರಕಾರ ಒಪ್ಪಿಗೆ ಕೊಟ್ಟಿದೆ, ನಾವು ಸರಕಾರಕ್ಕೆ ವರದಿ ಸಲ್ಲಿಸಿದಿವಿ, ಇನ್ನು ಸ್ಥಳ ಆಯ್ಕೆಯಾಗಿ ಚಟುವಟಿಕೆ ಆರಂಭವಾಗಬೇಕು ಅಷ್ಟೆ. ಜಾನಪದ ವಿವಿಯಲ್ಲಿ ಜಾನಪದಕ್ಕೆ ಸಂಬಂದಿಸಿದ್ದೆಲ್ಲಾ ಸಿಗುವಂತಾಗಬೇಕು. ಇನ್ನೂ ಸಂಗ್ರಹಿಸದೇ ಇರುವ ಜಾನಪದ ಸಾಮಗ್ರಿಗಳನ್ನು ಅವುಗಳು ನಶಿಸುವ ಮುನ್ನ ಸಂಗ್ರಹಿಸುವ ಕೆಲಸ ಮೊದಲಾಗಬೇಕು. ಹೊಸ ತಲೆಮಾರಿನಲ್ಲಿ ಜಾನಪದದ ಬಗ್ಗೆ ಆಸಕ್ತಿ ಮೂಡಿಸುವಂತಹ ಯೋಜನೆಗಳನ್ನು ರೂಪಿಸಬೇಕು. ನಶಿಸುತ್ತಿರುವ ಜಾನಪದವನ್ನು ಉಳಿಸಲು ಅನುವಾಗುವಂತಹ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ಕೊಡಬೇಕು. ಜಾನಪದ ವಿವಿಯಲ್ಲಿ ಗ್ರಾಮ ಭಾರತವನ್ನು ಬಿಂಬಿಸುವಂತೆ, ಮಾದರಿ ಗ್ರಾಮೀಣ ಹಳ್ಳಿಯೊಂದನ್ನು ಸ್ಥಾಪಿಸಲಾಗುವುದು. ಇಲ್ಲಿ ಜಾನಪದ ಆಚರಣೆ, ಕಲೆ, ಹಬ್ಬ, ಮುಂತಾದವುಗಳು ವರ್ಷಪೂರ್ತಿ ನಡೆಯುವಂತೆ ಅದನ್ನು ರೂಪಿಸಲಾಗುವುದು. ಇಲ್ಲಿ ಜಾನಪದಕ್ಕೆ ಸಂಬಂದಿಸಿದ ಎಲ್ಲ ಬಗೆಯ ಪಾರಂಪರಿಕ ಕರಕುಶಲ ವಸ್ತು ಸಾಮಗ್ರಿಗಳು ಸಿಗುವಂತೆ ಮಾಡಲಾಗುವುದು. ಇಂತಹ ಕೆಲವು ಯೋಚನೆಗಳಿವೆ.

ಅರುಣ್: ಸಾರ್, ಇಂದು ತಂತ್ರಜ್ಞಾನ ತೀವ್ರವಾಗಿ ಬೆಳೆಯುತ್ತಿದೆ. ಎಲ್ಲವೂ ಅಂತರ್ಜಾಲದಲ್ಲಿ ಸಿಗಬೇಕು ಎನ್ನುವ ಭಾವನೆ ದಟ್ಟವಾಗುತ್ತಿದೆ, ಈ ಹೊತ್ತಲ್ಲಿ ಕನ್ನಡ ಜಾನಪದ ಎಂದು ಗೂಗಲ್ ಗೆ ಕೊಟ್ಟು ಹುಡುಕಿದರೆ ಬರುವ ಪಲಿತಾಂಶಗಳು ನಿರಾಸೆ ಹುಟ್ಟಿಸುತ್ತವೆ. ಈ ನಿಟ್ಟಿನಲ್ಲಿ ಅಕಾಡೆಮಿ ಯಾಕೆ ಯೋಚಿಸಬಾರದು?

ಗೋ.ರು.ಚ: ಈ ನಿಟ್ಟಿನಲ್ಲಿ ಯೋಚಿಸೋ ಅಗತ್ಯನೂ ಇದೆ. ಈಗಾಗಲೇ ನಮ್ಮ ಅಕಾಡೆಮಿಯ ಮಾಹಿತಿ, ಪೋಟೋ ಎಲ್ಲವುಗಳನ್ನು ಜ್ಞಾನ ಆಯೋಗಕ್ಕೆ ಕೊಟ್ಟಿದ್ದೇವೆ. ಅವರು ಆಯಾ ಮಾಹಿತಿಯನ್ನು ಅಂತರ್ಜಾಲದಲ್ಲಿ ಹಾಕಿ ಎಲ್ಲರಿಗೂ ಸಿಗುವಂತೆ ಮಾಡುತ್ತೇವೆ ಎಂದಿದ್ದಾರೆ. ಇನ್ನು ಜಾನಪದ ಡಿಕ್ಷನರಿಯನ್ನು ಸಿ.ಡಿ ರೂಪದಲ್ಲೂ ಒದಗುವಂತೆ ಮಾಡುವ ಯೋಚನೆ ಇದೆ. ನೀವು ಹೇಳುವಂತೆ ಕನ್ನಡ ಜಾನಪದದ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಸಿಗುವಂತಹ ಯೋಜನೆ ಹಮ್ಮಿಕೊಳ್ಳಬೇಕಿದೆ. ಅದಕ್ಕೆ ನಿಮ್ಮಂತ ಯುವಕರು ಮುಂದಾಗಬೇಕು.


ಅರುಣ್: ಸಾರ್ ಇತ್ತೀಚೆಗೆ ಜಾನಪದ ಫೆಲೋಶಿಪ್ ಕೊಟ್ಟು ಜಾನಪದದ ಬಗ್ಗೆ ಸಂಶೋಧನೆ ಉತ್ತೇಜಿವ ಕೆಲಸವನ್ನು ಅಕಾಡೆಮಿ ಮಾಡುತ್ತಿದೆ, ಇದರ ಉದ್ದೇಶ ಮತ್ತು ಆಯ್ಕೆ ಪ್ರಕ್ರಿಯೆ ಹೇಗೆ ?

ಗೋ.ರು.ಚ: ಈ ಯೋಜನೆ ಜಾನಪದ ಸಂಶೋಧನೆಗೆ ಯುವ ಜನಾಂಗವನ್ನು ತೊಡಗಿಸುವ ಗುರಿಯನ್ನು ಹೊಂದಿದೆ. ಮೊದಲು ಪತ್ರಿಕೆಗಳಲ್ಲಿ ಜಾಹೀರಾತು ಮಾಡಲಾಗುವುದು, ನಂತರ ಬಂದ ಅರ್ಜಿಗಳಲ್ಲಿ ಆಯ್ದ ಸಂಶೋಧಕರನ್ನು ಸಂದರ್ಶನಕ್ಕೆ ಕರೆಸಿ, ಜಾನಪದ ವಿದ್ವಾಂಸರ ಸಮಿತಿ ರಚಿಸಿ, ಆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು. ಈ ಆಯ್ಕೆಯಲ್ಲಿ ಪ್ರಾದೇಶಿಕತೆ, ಪರಿಶಿಷ್ಟ ಜಾತಿ, ಪಂಗಡ, ಮಹಿಳೆ ಮುಂತಾದ ಮೀಸಲಾತಿಯ ನ್ನು ಅನುಸರಿಸಲಾಗುವುದು. ಈ ವರ್ಷ ಐದು ಜನ ಆಯ್ಕೆಯಾಗಿದ್ದಾರೆ, ಅವರು ಆರು ತಿಂಗಳಿಗೊಮ್ಮೆ ವರದಿ ನೀಡುವುದು, ನಂತರ ಸಂಶೋಧನೆ ಮುಗಿದಾಗ ಅಕಾಡೆಮಿಗೆ ಸಲ್ಲಿಸುವುದು ಇಷ್ಟು ಇದರ ನಿಯಮ.
ಅರುಣ್: ಸಾರ್ ಇತ್ತೀಚೆಗೆ ಜಾನಪದದಲ್ಲಿ ಹಲವು ಬದಲಾವಣೆ ನಡೆಯುತ್ತಿದೆ, ಹೊಸ ಜಾನಪದ ಸೃಷ್ಟಿಯಾಗುತ್ತಿದೆ ಅದನ್ನು ನೀವು ಹೇಗೆ ಗ್ರಹಿಸುತ್ತೀರಿ?

ಗೋ.ರು.ಚ: ಬದಲಾವಣೆ ಜಗದ ನಿಯಮ, ಸಾಮಾಜಿಕ ವರ್ತನೆಗಳಲ್ಲಿ ಬದಲಾವಣೆಗಳು ನಡೆಯುತ್ತಿವೆ, ಜಾನಪದದಲ್ಲೂ ಬದಲಾವಣೆಗಳು ಆಗುತ್ತಿವೆ. ಅವುಗಳನ್ನು ಗುರುತಿಸುವ ಪ್ರಯತ್ನಗಳು ನಡೆಯಬೇಕು. ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಲು ಅಕಾಡೆಮಿಗೆ ವಿದ್ವಾಂಸರ ಸಲಹೆ ಸೂಚನೆಗಳು ಬಂದರೆ ಅದನ್ನು ಸ್ವೀಕರಿಸಿ, ಅದಕ್ಕೆ ಪೂರಕವಾದ ಕೆಲಸಗಳನ್ನು ಅಕಾಡೆಮಿ ಮಾಡುತ್ತದೆ.

ಅರುಣ್: ಕೆಲವು ಮಾತುಗಳನ್ನು ಕನ್ನಡ ಜಾನಪದ ಬ್ಲಾಗ್ ಗಾಗಿ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಸಾರ್, ಕನ್ನಡ ಜಾನಪದ ಬ್ಲಾಗ್ ನಿರಂತರ ನಿಮ್ಮ ಸಂಪರ್ಕದಲ್ಲಿರುತ್ತದೆ. ನಮಸ್ಕಾರಗಳು.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಗೋ.ರು. ಚನ್ನಬಸಪ್ಪ ಅವರೊಂದಿಗಿನ ಮಾತುಕತೆ ಚೆನ್ನಾಗಿದೆ. ಅವರು ಸಂಪಾದಿಸಿದ ಕರ್ನಾಟಕದ ಜನಪದ ಕಲೆಗಳ ಕೋಶವಂತೂ ಜಾನಪದದ ಮೊದಲ ಪ್ರಯತ್ನವಾಗಿ ದೊಡ್ಡ ಕೆಲಸವೇ ಸರಿ. ಗೋ.ರು.ಚ ಅವರನ್ನು ಇನ್ನಷ್ಟು ವಿಸ್ತಾರವಾಗಿ ಮಾತಿಗೆಳೆಯಬಹುದಿತ್ತು. ಮಾತುಕತೆ ಚುಟುಕಾಯಿತು. ಗೋ.ರು.ಚ ಅವರು ಕಾಲೇಜುಗಳಲ್ಲಿ ಜಾನಪದ ಜಗುಲಿ ಕಾರ್ಯಕ್ರಮ ಮಾಡುವುದಾಗಿ ಹೇಳಿದ್ದು ಇಷ್ಟವಾಯಿತು. ಅದು ಮುಂದುವರೆಯಲಿ. ಯುವಕರಲ್ಲಿ ಜಾನಪದದ ಬಗ್ಗೆ ಆಸಕ್ತಿ ಮೂಡಿಸುವ ಇನ್ನಷ್ಟು ಕೆಲಸಗಳನ್ನು ಗೋ.ರು.ಚ ಮಾಡುವಂತಾಗಲಿ.
-ನಿಂಗಣ್ಣ ಮೈಸೂರು