ಶುಕ್ರವಾರ, ಫೆಬ್ರವರಿ 18, 2011
ಜನಪದ ಕವಿ ನಿಡುಗುರ್ತಿ ಅಂಜಿನಪ್ಪ
-ಸ್ವರೂಪನಂದ ಎಂ ಕೊಟ್ಟೂರು
( ಜಾನಪದ ಕಲಾವಿದರಲ್ಲಿ, ಅಕ್ಷರವಂತರೂ ಇದ್ದಾರೆ. ಅವರ ಅಕ್ಷರ ಜ್ಞಾನ ಅವರ ಜಾನಪದ ಸಾಹಿತ್ಯದ ಮೇಲೆ ಪ್ರಭಾವ ಬೀರಿರುತ್ತದೆ. ಇದನ್ನು ಕೂಡ ನಾವಿಂದು ಜನಪದ ಅಂತಲೇ ಗುರುತಿಸಬೇಕಿದೆ. ಆದರೆ ಇದನ್ನು ವಿವರಿಸಿಕೊಳ್ಳುವಾಗ, ಬೇರೆಯದೇ ಕ್ರಮವನ್ನು ಅನುಸರಿಸುವ ಅಗತ್ಯವಿದೆ. ಈಗ ಕರ್ನಾಟಕದಲ್ಲಿ ಹುಟ್ಟುತ್ತಿರುವ ಜಾನಪದದಲ್ಲಿ ಈ ಆಯಾಮವಿರುವುದನ್ನು ಅಲ್ಲಗಳೆಯುವಂತಿಲ್ಲ. ಮೊಹರಂ ಗಾಯಕರು, ಡೊಳ್ಳಿನ ಹಾಡುಗಾರರು ಇಂತಹದೇ ನೆಲೆಯಲ್ಲಿ ಅಪಾರ ಸಾಹಿತ್ಯವನ್ನು ರಚಿಸಿದ್ದಾರೆ. ಈ ನಿಟ್ಟಿನಲ್ಲಿ ಜಾನಪದವನ್ನು ತೀರಾ ಭಿನ್ನವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಅಂತಹ ಒಬ್ಬ ಅಪರೂಪದ ಜಾನಪದ ಹಾಡುಗಾರ, ಕವಿಯಾದ ನಿಡುಗುರ್ತಿ ಅಂಜಿನಪ್ಪನ ಪರಿಚಯ ಇಲ್ಲಿದೆ. –ಅರುಣ್)
ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ನಿಡಗುರ್ತಿ ಎಂಬ ಗ್ರಾಮದ ಅಂಜಿನಪ್ಪ ಒಬ್ಬ ಅಪ್ಪಟ ಜನಪದ ಕವಿ. ೭೦ ವರ್ಷದ ಅಜ್ಜನಿಗೆ ಹಾಡುವುದು ದಣಿವಲ್ಲ, ಬದಲಾಗಿ ಜೀವನೋತ್ಸಾಹ. ನಿಡಿದಾದ ಎತ್ತರದ, ಗಟ್ಟಿಮುಟ್ಟಾದ ದೇಹ, ದೇಹಕ್ಕೆ ತಕ್ಕ ದ್ವನಿ ಎಲ್ಲವೂ ದೇಸಿ ಹಾಡುಗಾರನೊಬ್ಬನ ಲಕ್ಷಣದ ಜೀವವಂತಿಕೆ ಇರುವ ವ್ಯಕ್ತಿತ್ವ. ಜಾನಪದ ವಿದ್ವಾಂಸರು, ಜಾನಪದ ನಶಿಸುತ್ತಿದೆ ಎನ್ನುವ ಹಳಹಳಿಕೆಯಲ್ಲೇ ಇಂತಹ ಜನಪದ ಕಲಾವಿದರನ್ನು ಮರೆಯುತ್ತಾರೆನಿಸುತ್ತದೆ. ಹಾಗಾಗಿ ಅಂಜಿನಪ್ಪ ಇನ್ನು ಅಧ್ಯಯನಕಾರರ ಗಮನಕ್ಕೆ ಬಿದ್ದಂತಿಲ್ಲ.
ಏಳನೇ ತರಗತಿ ಕಲಿತಿರುವುವ ಅಂಜಿನಪ್ಪ, ಅಕ್ಷರ ಜ್ಞಾನವನ್ನು ತನ್ನ ಜನಪದ ಪ್ರತಿಭೆಗೆ ಬಳಸಿಕೊಂಡಿದ್ದಾರೆ. ಹಾಗಾಗಿಯೇ ಅಕ್ಷರ ರೂಪದ ಸಾಹಿತ್ಯನ್ನು ಜನಪದೀಕರಿಸಿದ ಹೆಚ್ಚುಗಾರಿಕೆ ಈ ಕಲಾವಿದನದು. ಈ ಇಳಿವಯಸ್ಸಿನಲ್ಲಿಯೂ ಅದ್ಭುತ ಹಾಡುಗಾರಿಕೆಯ ಮೂಲಕ ಜನರನ್ನು ಮಂತ್ರಮುಗ್ದರನ್ನಾಗಿಸುವ ಶಕ್ತಿ ಈ ಕಲಾವಿದನಿಗಿದೆ. ಮುಪ್ಪು ಆವರಿಸುತ್ತಿರುವುದು ತನ್ನ ದೇಹಕ್ಕೆ ವಿನಾಃ ನನ್ನ ಕಲಾ ಸೇವೆಗಲ್ಲಾ ಎಂಬ ಕಡಕ್ ಮಾತು ಈತನದು. ಈಗ್ಗೆ ೫೦ ವರ್ಷಗಳಿಂದ ಹಾಡುಗಾರಿಕೆಯನ್ನೇ ತನ್ನ ಬದುಕಾಗಿಸಿಕೊಂಡ ಈ ಹಿರಿ ಜೀವ ಜನಪದವನ್ನು ಬದುಕುತ್ತಿದ್ದಾರೆ. ಈ ತನಕ ಬಳ್ಳಾರಿ, ರಾಯಚೂರು, ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ತನ್ನ ಹಾಡುಗಾರಿಕೆಯ ಸವಿಯನ್ನು ಜನರಿಗೆ ಹಂಚಿದ್ದಾರೆ.
ಈ ಮೊದಲೇ ಹೇಳಿದೆ, ಅಕ್ಷರ ರೂಪದ ಸಾಹಿತ್ಯನ್ನು ಜನಪದೀಕರಿಸಿದ ಹೆಚ್ಚುಗಾರಿಕೆ ಈ ಕಲಾವಿದನದು ಎಂದು. ಇವರು ಪ್ರಾರಂಭದಲ್ಲಿ ಮೈಸೂರು ವಿವಿ, ನಂತರದಲ್ಲಿ ಕ.ಸಾ.ಪ ದಿಂದ ಪುಸ್ತಕಗಳನ್ನು ತಂದು ಓದಿದ್ದಾರೆ, ಈ ಬಗೆಯ ಅವರ ಓದು, ಅವರ ಹಾಡುಗಾರಿಕೆಯ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ. ಈ ಬಗೆಯ ಮೌಖಿಕತೆ ಶಿಷ್ಟದ ಮಿಲನ ಇವರಲ್ಲಿ ವಿಚಿತ್ರ ರೀತಿಯಲ್ಲಿ ಬೆರೆತಿದೆ. ಹಾಗಾಗಿ ಇವರು ಬಸವಣ್ಣನವರ ೩೬೫ ವಚನಗಳು, ಕನಕ ದಾಸರ ೧೫೦ ಪದಗಳು, ಪಾಂಡುರಂಗರ ೨೬೫ ಪದಗಳು, ಸಂಗ್ರಹ ಮೂಲದ ೬೮ ಹಾಡುಗಳು, ಶಿಶುನಾಳಜ್ಜರ ಮತ್ತು ನಾಗಲಿಂಗಜ್ಜರ ತಲಾ ೬೫ ಹಾಡುಗಳನ್ನು ಜನಪದ ಹಾಡಿನ ಲಯದಲ್ಲಿ ಹಾಡುತ್ತಾರೆ. ಜೊತೆಗೆ ಹಂಪಿ ಇತಿಹಾಸದ ಬಗ್ಗೆ, ಬಸವಣ್ಣ ಹಾಗೂ ಮುರುಘರಾಜೇಂದ್ರ ಸ್ವಾಮಿಗಳ ಮೇಲೆ ೬೦ ಗೀತೆಗಳನ್ನು ಸ್ವತಃ ರಚಿಸಿದ್ದಾರೆ. ಹಾಗಾಗಿ ಇವರು ನಿಜಾರ್ಥದಲ್ಲಿ ಜನಪದ ಕವಿಯೇ ಸರಿ.
ಅಂಜಿನಪ್ಪ ಅಚ್ಚರಿ ಮೂಡಿಸುವ ಕಲಾವಿದ. ಇವರು ಹಾಡುವುದಕ್ಕೆ ಸಾಥ್ ನೀಡುವುದು ಚರ್ಮದ ದಿಂಬಡಿ. ಸಂಗೀತದ ೨೮ ರಾಗಗಳನ್ನು ಬಲ್ಲವರಾಗಿರುವ ಇವರು ಸಂಗೀತದಲ್ಲಿ ಪ್ರವೀಣರು. ಇವರು ಹಾಡಲು ನಿಂತರೆ ಸಂಗಿತಾಸಕ್ತರ ದಂಡೇ ಇವರತ್ತ ದೌಡಾಯಿತ್ತದೆ. ಆಕರ್ಷಕ ಕಂಠ ಸಿರಿ, ಹಾಡುವಾಗ ಕಂಡುಬರುವ ಗತ್ತು-ಗಾಂಭೀರ್ಯ, ಸ್ವ-ರಚಿತ ಕವನಗಳಲ್ಲಿನ ಗ್ರಾಮೀಣ ಸೊಗಡು, ಅದರಲ್ಲಿ ಬಳಸಿದ ನಾಣ್ಣುಡಿಗಳು ಕೇಳುಗರನ್ನು ಆಕರ್ಶಿಸುತ್ತದೆ. ಇವರು ಕೇವಲ ಸಂಗೀತಗಾರನಾಗಿರದೇ ಆ ಹಾಡನ್ನು ಏಳೆ-ಏಳೆಯಾಗಿ ಬಿಡಿಸಿ ಮನೋಜ್ಞವಾಗಿ ಅರ್ಥೈಸುವ ಮಾದರಿಯೂ ಕುತೂಹಲಕರ. ಅನೇಕ ರಾತ್ರಿಗಳನ್ನು ವಿಶ್ರಮಿಸದೇ, ಎದರು ಹಾಡುಗಾರರು ಇದ್ದರೆ ಸಮಯದ ಪರಿವೇ ಇರದಂತೆ ಹಾಡುವ ಜ್ಞಾನ ಬಂಡಾರ ಇವರಲ್ಲಿದೆ. ಇದರಿಂದಾಗಿ ಇವರು ಈ ಭಾಗದಲ್ಲಿ “ಭಜನೆ ಅಂಜಿನಪ್ಪ” ಎಂದೇ ಚಿರಪರಿಚಿತ. ಜೊತೆಗೆ “ಆಡು ಮುಟ್ಟದ ಸೊಪ್ಪಿಲ್ಲ ಅಂಜಿನಪ್ಪ ಮಾತನಾಡದ ವಿಷಯಗಳಿಲ್ಲ್ಲ” ಎಂಬ ಮಾತು ಜನರ ಬಾಯಿಯಲ್ಲಿ ಹರಿದಾಡುತ್ತಿದೆ. ಬಂಡ್ರಿಯ ಅಗಸರ ಚೆನ್ನಪ್ಪ ಎನ್ನುವರು ನನಗೆ ಸ್ಪೂರ್ತಿಯಾದರೆ, ನಾಗಲಾಪುರದ ಜಂಬಯ್ಯ ಮೇಷ್ಟ್ರು ತನ್ನ ಸಾಧನೆಗೆ ಮೈಲುಗಲ್ಲಾದರೆಂದು ನೆನೆಯುತ್ತಾರೆ. ಗುರುಪುತ್ರರಾಗಿರುವ ಇವರು ತನ್ನ ಸುತ್ತಮುತ್ತಲಿನ ಸುಮಾರು ೫೦೦ ಜನರಿಗೆ ಗುರುಪುತ್ರ ದೀಕ್ಷೆ ಕೊಡಿಸಿದ್ದಾರೆ.
ಈಗಾಗಲೇ ಹಂಪಿ ಉತ್ಸವ ಸೇರಿದಂತೆ ಹಲವಾರು ಕಡೆ ಕಾರ್ಯಕ್ರಮ ಕೊಟ್ಟಿದ್ದಾರೆ. ಅಂಜಿನಪ್ಪ ಕಲೆಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಅನೇಕ ಕಡೆ ಇವರಿಗೆ ಸನ್ಮಾನಗಳಾಗಿವೆ. ತನ್ನ ಸ್ವ-ರಚಿತ ಕವನಗಳನ್ನು ಪುಸ್ತಕ ರೂಪದಲ್ಲಿ ಹೊರುವ ಆಸೆ ಇದೆ. ಹಣದ ಕೊರತೆ ಇವರ ಆಸೆಯನ್ನು ಆಗುಮಾಡಿಲ್ಲ. ಸರ್ಕಾರವೂ ಇವರ ಕಲೆಯನ್ನು ಹೆಚ್ಚಾಗಿ ಗುರುತಿಸಿಲ್ಲ. ಕಲಾವಿದರನ್ನು ಸರ್ಕಾರ ಕಡೆಗಣಿಸುತ್ತಿರುವುದಕ್ಕೆ ಇವರಲ್ಲಿ ಬೇಸರವಿದೆ. ಕೆಲ ತಿಂಗಳುಗಳಿಂದ ಕಲಾವಿದರ ಮಾಶಾಸನ ಪಡೆಯುತ್ತಿದ್ದು, ಈಗ ಅದುವೇ ಜೀವನಕ್ಕೆ ಊರುಗೋಲಾಗಿದೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
ಶಿಕ್ಷಣ! ಸಂಘಟನೆ!! ಹೋರಾಟ!!! ಎಂದು ಡಾ.ಅಂಬೇಡ್ಕರರು ಹೇಳಿದ್ದಾರೆಯೇ ??? -ಡಾ.ಶಿವಕುಮಾರ್ ಇಂದು ಬಹುತೇಕ ದಲಿತರು ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶಿಕ್ಷಣ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ